Monday, 11 July 2016

ಪ್ಯಾಬ್ಲೊ ನೆರೂಡ: ನೆಲದ ಮೇಲಿನ ನಾವಿಕಕವಿಯ ಮನೆಗೆ ಹೋದೆವು!ಈಗ್ಗೆ ನಾಲ್ಕು ತಿಂಗಳ ಹಿಂದೆ ಚಿಲಿಯ ರಾಜಧಾನಿಯಿಂದ ೧೧೧ ಕಿಮೀ ದೂರದಲ್ಲಿರುವ ವಾಲ್ಪರೈಸೊ ಪಟ್ಟಣದ ‘ಲಾ ಸೆಬಾಸ್ಟಿಯಾನಾ’ಗೆ ಹೋಗಿಬಂದೆವು. ಅದು ‘ಒಂದು ದೇಶದ ನದಿಗಳು ಎಂದರೆ ಅಲ್ಲಿನ ಕವಿಗಳು’ ಎಂದ ಕವಿಯ ಮನೆ. ಆ ಆಪ್ತಕವಿಮಿತ್ರ ನೆಫ್ತಾಲಿ ರಿಕಾರ್ದೊ ಎಲಿಯೆಸರ್ ರೆಯೆಸ್ ಬಸುವಾಲ್ತೊನ ಮನೆಯ ಮೂಲೆಮೂಲೆ ನೋಡಿ, ಕೆಫೆಯಲ್ಲಿ ಕಾಫಿಯನ್ನೂ ಕುಡಿದುಬಂದೆವು.

ಹೀಗೆಂದರೆ ಹೇಳುತ್ತಿರುವುದೇನೆಂದೇ ಹಲವರಿಗೆ ತಿಳಿಯದೆ ಹೋಗಬಹುದು. ಆದರೆ ಚಿಲಿಯ ಕವಿ ಪ್ಯಾಬ್ಲೊ ನೆರೂಡನ ಮನೆಗೆ ಹೋಗಿಬಂದೆವು ಎಂದರೆ ಎಲ್ಲ ಅತ್ಯಾಸಕ್ತಿಯಿಂದ ಪ್ರಶ್ನೆಗಳ ಕೇಳಿಯಾರು. ಹೌದು, ಹತ್ತನೇ ವಯಸ್ಸಿಗೆ ಕಾವ್ಯ ಬರೆಯಲು ಮೊದಲುಮಾಡಿದ ರೆಯೆಸ್-ಬಸುವಾಲ್ತೊ ದಂಪತಿಗಳ ಮಗ ನೆಫ್ತಾಲಿ ರಿಕಾರ್ದೊ ಎಲಿಯೆಸರನೇ ಕನ್ನಡಪ್ರಜ್ಞೆಗೆ ತುಂಬ ಹತ್ತಿರದವನಾಗಿರುವ ಪ್ಯಾಬ್ಲೊ ನೆರೂಡ. ಓಎಲ್ಲೆನ್ ಅನುವಾದಿಸಿರುವ ನೆರೂಡನ ಆತ್ಮಕತೆ ಹಾಗೂ ತೇಜಶ್ರೀ ಅನುವಾದಿಸಿರುವ ಅವನ ಕವಿತೆಗಳ ಓದುತ್ತ ಕವಿಯ ಕರ್ಮಭೂಮಿಗೆ ಹೋಗಿಬಂದದ್ದು ಅವಿಸ್ಮರಣೀಯ ಅನುಭವ ಎನಿಸಿತು.

ನೆರೂಡ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಚಿಲಿಯ ಕವಿ. ಮೊದಲ ಕವಿತೆಗಳು ಪ್ರಕಟಗೊಂಡಾಗ ಕವಿ ತಾನೇ ಎನ್ನುವುದು ಅಪ್ಪನಿಗೆ ಗೊತ್ತಾಗದಿರಲೆಂದು ಜಾನ್ ನೆರೂಡ ಎಂಬ ಝೆಕೊಸ್ಲವಾಕಿಯನ್ ಕವಿಯ ಹೆಸರನ್ನು ತನ್ನ ಕಾವ್ಯನಾಮವಾಗಿಸಿಕೊಂಡ. ಹಲವು ವಸ್ತುವಿಷಯಗಳನ್ನೊಳಗೊಂಡ, ಹಲವು ಶೈಲಿಯ ಕವಿತೆಗಳನ್ನು ಬದುಕಿನುದ್ದಕ್ಕೂ ಬರೆದ, ಕೇವಲ ಕವಿತೆಗಳನ್ನೆ ಬರೆದ. ಗಣಿಕಾರ್ಮಿಕರು, ವೇಗಾ ಮಾರ್ಕೆಟ್ಟಿನ ಹಮಾಲಿಗಳು, ಭೂಗತ ರೌಡಿ, ಕುರಿಕಾಯುವ ಹುಡುಗರಿಂದ ಹಿಡಿದು ಚೆಗೆವಾರ, ಪಿಕಾಸೊ, ಸ್ಟಾಲಿನ್ ಮೊದಲಾದ ಮಹಾನ್ ಚೇತನಗಳೂ ಅವನ ಕಾವ್ಯಾಭಿಮಾನಿಗಳಾಗಿದ್ದರು.

ಅವ ಕವಿಯಷ್ಟೆ ಅಲ್ಲ, ಚಿಲಿಯನ್ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮತ್ತು ರಾಜಕಾರಣಿ. ಹಲವು ರಾಜತಾಂತ್ರಿಕ ಹುದ್ದೆ ನಿರ್ವಹಿಸಿದ ವಿಶ್ವ ಸಂಚಾರಿ. ಕಮ್ಯುನಿಸಂ ಅನ್ನು ಪ್ರೀತಿಸಿದ. ಕಾರ್ಯಕರ್ತರ ಸಶಸ್ತ್ರೀಕರಣ ವಿರೋಧಿಸಿದ. ಬಂಧನದ ಭೀತಿ ಎದುರಿಸಿದ. ಅನಿವಾರ್ಯವಾಗಿ ಭೂಗತನಾದ. ಇದರ ನಡುವೆಯೂ ಒಬ್ಬರಾದ ಮೇಲೊಬ್ಬ ಹೆಣ್ಣುಗಳನ್ನು ಪ್ರೇಮಿಸಿದ, ಕಾಮಿಸಿದ, ಮದುವೆಯಾದ, ಕವಿತೆಗಳ ಹೆರುತ್ತ ಹೋದ. ನೆರೂಡನನ್ನು ಅವನ ಎಡಪಂಥೀಯ ಒಲವಿಗಾಗಿ, ರೊಮ್ಯಾಂಟಿಕ್ ಪ್ರೇಮಕವಿತೆಗಳಿಗಾಗಿ, ರಾಜಕಾರಣದ ಸ್ಪಷ್ಟತೆಗಾಗಿ, ಪ್ರಕೃತಿ ಪ್ರೇಮಕ್ಕಾಗಿ ಹೀಗೆ ನಾನಾ ಕಾರಣಗಳಿಗಾಗಿ ಆರಾಧಿಸುವವರಿದ್ದಾರೆ. ಆದರೆ ಕವಿತೆ, ಸಿದ್ಧಾಂತ, ವಿಚಾರಗಳಾಚೆಗೂ ಬೆಳೆದುನಿಂತ ಅನನ್ಯ ಸೃಜನಶೀಲ ವ್ಯಕ್ತಿತ್ವ ಅದು. ಆಸೆ ಮತ್ತು ಭರವಸೆಯ ಕುರುಹು ಎಂದು ಹಸಿರು ಬಣ್ಣದ ಶಾಯಿಯಲ್ಲೆ ಬರೆಯುತ್ತಿದ್ದ ಕನಸುಗಾರ ಅವನು. ಒಣನೆಲದಲ್ಲಿಯೂ ಹಾಯಿ ನಡೆಸುವ ನಾವಿಕ - ‘ನೇವಿಗೇಟರ್ ಆಫ್ ದಿ ಡ್ರೈ ಲ್ಯಾಂಡ್’.

ಕಡುವ್ಯಾಮೋಹಿ ಕವಿ 

ನೆರೂಡನಿಗೆ ಕಡಲು ಇಷ್ಟ. ಹಡಗು ಇಷ್ಟ. ನಾವಿಕರು ಇಷ್ಟ. ಅವರ ಸಾಹಸಯಾನದ ಕತೆ ಕೇಳಲು ಇನ್ನೂ ಇಷ್ಟ. ಎಂದೇ ಕಡಲ ತೀರದಲ್ಲಿ ಮನೆ ನಿರ್ಮಿಸಿಕೊಂಡ. ನಾವೆಯಂತೆ ಕಾಣುವ ಮನೆಗಳ ಕಟ್ಟಿ, ಬಿಳಿಯ ಮೀನಿನ ಚಿತ್ರವಿರುವ ನೀಲಿ ಬಾವುಟವನ್ನು ಮೇಲೆ ಹಾರಿಸಿದ.

‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎಂದು ಕುವೆಂಪು ಹೇಳಿದ್ದು ಕವಿಯ ಜೀವಚೈತನ್ಯ ಕುರಿತು. ತನಗಿಷ್ಟ ಬಂದಲ್ಲಿ ತನ್ನಿಷ್ಟದಂತೆ ಮನೆ ಕಟ್ಟಿ, ಅಮೂಲ್ಯವೆನಿಸುವುದನ್ನೆಲ್ಲ ಒಪ್ಪಗೊಳಿಸಿ, ಅದರೊಡನೆ ಬದುಕುತ್ತ ನೆಮ್ಮದಿ ಕಂಡುಕೊಳ್ಳುವುದು ಮನುಷ್ಯ ಗುಣ. ಇದರಿಂದ ನೆರೂಡ ಹೊರತಾಗಿರಲಿಲ್ಲ. ಹಾಗೆ ನೋಡಿದರೆ ಬೊಂಬೆ, ಮಣಿ, ಕಪ್ಪೆಚಿಪ್ಪು, ಬಣ್ಣದ ಗಾಜುಗಳಿಂದ ಹಿಡಿದು ಪುಸ್ತಕ, ನಕಾಶೆ, ಕಡಲ ನಾವಿಕನ ದಿಕ್ಸೂಚಿಯವರೆಗೆ ಎಲ್ಲವನ್ನೂ ಸಂಗ್ರಹಿಸುತ್ತಿದ್ದ ನೆರೂಡ ಕಡುವ್ಯಾಮೋಹಿ.

ಎಷ್ಟೋ ಕವಿಗಳ ಮನೆ ನೋಡಿದ್ದರೂ, ನೆರೂಡನ ಮನೆ ನೋಡಿದ ಮೇಲೆ ಅವನಷ್ಟು ವಸ್ತು ಮೋಹ ಇರುವವರು ತುಂಬ ಕಡಿಮೆ ಜನ ಎನಿಸಿತು. ನೆರೂಡ ತನಗೆ ಬೇಕೆನಿಸಿದ ವಸ್ತುಗಳನ್ನು ಹೇಗಾದರೂ ಪಡೆಯುತ್ತಿದ್ದ. ‘ನೀವು ಯಾವುದೆಂದರೆ ಯಾವುದೇ ವಸ್ತುವನ್ನಾದರೂ ಪಡೆಯಬಹುದು. ಅದಕ್ಕೆ ಬೇಕಾದದ್ದು ನಿಮಗದು ಬೇಕೇಬೇಕೆಂಬ ತೀವ್ರ ಹಂಬಲ. ಅಷ್ಟಿದ್ದರೆ ಅದು ತಂತಾನೇ ಬಂದು ನಿಮ್ಮ ಕೈಸೇರುತ್ತದೆ’ ಎನ್ನುತ್ತಿದ್ದ. ಕವಿಯೇ ಹೇಳಿಕೊಂಡಿರುವಂತೆ:

’ನನ್ನ ಮನೆ ನೋಡಿ ಕೆಲವರು ಎಂಥಾ ಹುಚ್ಚ! ಎಂತೆಂಥ ವಸ್ತುಗಳನ್ನು ಸಂಗ್ರಹಿಸಿದ್ದಾನೆ ಅನ್ನುತ್ತಾರೆ. ಮೆಕ್ಸಿಕೋದ ಸ್ವಚ್ಛ ಬೀಚುಗಳಲ್ಲಿ ಅಲೆದಾಡುತ್ತ ಅದ್ಭುತವಾದ ಕಡಲ ಚಿಪ್ಪುಗಳನ್ನು ಸಂಗ್ರಹಿಸಿದ್ದೆ. ಅನಂತರ ಕ್ಯೂಬಾ ಮತ್ತಿತರ ಕಡೆಗಳಲ್ಲಿ ನನ್ನ ಬಳಿ ಇದ್ದ ಚಿಪ್ಪುಗಳನ್ನು ವಿನಿಮಯ ಮಾಡಿ, ಕೆಲವನ್ನು ಖರೀದಿಸಿ, ಕೆಲವೊಮ್ಮೆ ಉಡುಗೊರೆ ಪಡೆದು, ಮತ್ತೆ ಅಪರೂಪಕ್ಕೆ ಬೇರೆಯವರ ಸಂಗ್ರಹದಿಂದ ಕದ್ದು (ಯಾವುದೇ ವಸ್ತುಗಳ ಪ್ರಾಮಾಣಿಕ ಸಂಗ್ರಾಹಕರು ಇಲ್ಲ) ನನ್ನ ಸಂಗ್ರಹ ಬೆಳೆಸಿದೆ. ಚೀನಾ ಸಮುದ್ರದ ಅಪೂರ್ವ ಮಾದರಿಗಳು, ಫಿಲಿಪೈನ್ಸ್, ಜಪಾನ್ ಮತ್ತು ಬಾಲ್ಟಿಕ್‌ನಿಂದ ಸಂಗ್ರಹಿಸಿದ ಚಿಪ್ಪುಗಳಿದ್ದವು. ಅಂಟಾರ್ಕಟಿಕದ ಶಂಕುಗಳು, ಕ್ಯೂಬಾದ ಕಪ್ಪೆಚಿಪ್ಪುಗಳು, ಕೆರೀಬಿಯದ ನರ್ತಕಿಯರಿಂದ ಸಂಗ್ರಹಿಸಿದ ಕೆಂಪು, ಕೇಸರಿ ಬಣ್ಣದ, ನೀಲಿ, ಊದಾ ಬಣ್ಣಗಳ ಚಿಪ್ಪುಗಳೂ ಇದ್ದವು. ಕೊನೆಗೆ ನನ್ನ ಸಾಗರ ಸಂಪತ್ತು ಒಂದಿಡೀ ಕೋಣೆ ತುಂಬುವಷ್ಟಾಯಿತು. ನನಗಾಗಿ ಶಂಕು, ಕಪ್ಪೆಚಿಪ್ಪು ಸಂಗ್ರಹಿಸಿ ತಂದು ಗೆಳೆಯರಿಗೂ ಚಿಪ್ಪಿನ ಹುಚ್ಚು ಹಿಡಿಯಿತು. ನನ್ನಲ್ಲಿ ಹದಿನೈದು ಸಾವಿರ ಚಿಪ್ಪುಗಳ ಸಂಗ್ರಹವಿತ್ತು. ಅವು ಮನೆಯ ಬೀರು-ಶೆಲ್ಫುಗಳ ತುಂಬಿ ಟೇಬಲ್ಲು, ಕುರ್ಚಿಗಳ ಮೇಲೆಲ್ಲ ಜಾಗ ಮಾಡಿಕೊಂಡವು. ಕಾಂಚಾಲಜಿ, ಮಲಕಾಲಜಿ, ಚಿಪ್ಪಿನಶಾಸ್ತ್ರ ಎಂದು ಏನು ಬೇಕಾದರೂ ಕರೆಯಿರಿ, ಅದಕ್ಕೆ ಸಂಬಂಧಪಟ್ಟ ಪುಸ್ತಕಗಳು ನನ್ನ ಗ್ರಂಥಾಲಯದಲ್ಲಿ ತುಂಬಿಕೊಂಡವು..’

ಕಪ್ಪೆಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಇದ್ದವು. ಕವಿಗೇಕೆ ಬೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ‘ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ’.

ಇಂಥ ಮಗುತನವನ್ನು ಉಳಿಸಿಕೊಳ್ಳಲೆಂದೇ ನೆರೂಡ ತನ್ನ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಮೂರು ಮನೆಗಳನ್ನು ಸೆಂಟಿಯಾಗೊ, ವಾಲ್ಪರೈಸೊ ಮತ್ತು ಇಸ್ಲಾ ನೆಗ್ರಾದಲ್ಲಿ ನಿರ್ಮಿಸಬೇಕಾಯಿತು. ವಿಶ್ವದ ಎಲ್ಲ ಭಾಗಗಳಿಂದ ಚೂರುಗಳ ಹೆಕ್ಕಿತಂದು, ಸೇರಿಸಿ ಕಟ್ಟಿದ ಅವು ಅದ್ಭುತ ಮ್ಯೂಸಿಯಂಗಳೆನ್ನಲು ತಕ್ಕುದಾಗಿವೆ.

ಲಾ ಸೆಬಾಸ್ಟಿಯಾನಾ


‘ಸೆಂಟಿಯಾಗೊದ ದಣಿವು ನನ್ನರಿವಿಗೆ ಬರುತ್ತಿದೆ. ಶಾಂತಯುತವಾಗಿ ಕೂತು ಬರೆಯುವ ಜಾಗ ವಾಲ್ಪರೈಸೊದಲ್ಲಿ ಬೇಕಾಗಿದೆ.  ಅದು ಅತಿ ಎತ್ತರದ ಸ್ಥಳದಲ್ಲಿಯೂ ಇರಬಾರದು, ಹಾಗೆಂದು ತುಂಬ ತಗ್ಗಿನಲ್ಲೂ ಇರಬಾರದು. ಪ್ರತ್ಯೇಕವಾಗಿರಬೇಕು, ಆದರೆ ತೀರ ಒಂಟಿಮನೆಯಾಗಿರಬಾರದು. ಅಕ್ಕಪಕ್ಕದವರು ಕಾಣದಂತಿದ್ದರೆ, ಕೇಳಿಸದಂತಿದ್ದರೆ ಬಹಳ ಒಳ್ಳೆಯದು. ಸರಳ ಆದರೆ ಸುಖದಾಯಕವಾಗಿರುವ ಮನೆ. ತುಂಬ ದೊಡ್ಡದೂ ಅಲ್ಲದ, ತುಂಬ ಸಣ್ಣದೂ ಅಲ್ಲದ, ಗಟ್ಟಿಮುಟ್ಟಾಗಿರುವ ಮನೆ; ಎಲ್ಲದರಿಂದ ದೂರವಿರುವ ಆದರೆ ಸಾರ್ವಜನಿಕ ವಾಹನ ಸೌಲಭ್ಯ ಹತ್ತಿರದಲ್ಲೇ ಇರುವ; ಸ್ವತಂತ್ರವಾದ ಆದರೆ ಅಂಗಡಿಮುಂಗಟ್ಟುಗಳಿಗೆ ಹತ್ತಿರವಿರುವ ತುಂಬ ಕಡಿಮೆ ಬೆಲೆಯ ಮನೆ ನನಗೆ ಬೇಕು. ಅಂಥ ಒಂದು ಮನೆ ವಾಲ್ಪರೈಸೊದಲ್ಲಿ ಸಿಕ್ಕೀತೇನು?’

ರಾಜಧಾನಿ ಸೆಂಟಿಯಾಗೊದ ಗದ್ದಲದಿಂದ ದೂರವಿರಲು ಒಂದು ಮನೆ ನೋಡಬೇಕೆಂದು ನೆರೂಡ ೧೯೫೯ರಲ್ಲಿ ತನ್ನ ಆಪ್ತರಾದ ಸಾರಾ ಮತ್ತು ಮೇರಿ ಅವರಿಗೆ ಬರೆದ ಪತ್ರ ಇದು. ಅದರಂತೆ ಫ್ಲೋರಿಡಾ ಹಿಲ್‌ನಲ್ಲಿ ಅರೆಬರೆ ಕಟ್ಟಲ್ಪಟ್ಟಿದ್ದ ಒಂದು ಮನೆಯನ್ನು ನೋಡಲಾಯಿತು. ಸೆಬಾಸ್ಟಿಯನ್ ಕೊಲಾಡಾ ಎಂಬ ಸ್ಪ್ಯಾನಿಶ್ ವಾಸ್ತುವಿನ್ಯಾಸಕಾರ, ಹಡಗಿನ ಕ್ಯಾಪ್ಟನ್ನನ ಮನೆಯದು. ಕಟ್ಟಿ ಪೂರೈಸುವ ಮುನ್ನ ೧೯೪೯ರಲ್ಲಿಯೇ ಆತ ತೀರಿಕೊಂಡಿದ್ದ. ನೆರೂಡ ಅದನ್ನು ನೋಡಹೋದಾಗ ಬೆಕ್ಕು, ಪಾರಿವಾಳಗಳ ನೆಲೆಯಾಗಿ ದುರ್ವಾಸನೆ ಬೀರುತ್ತ ಧೂಳುಮಯವಾಗಿತ್ತು. ಆದರೆ ದೂರದ ಬಂದರು, ಗುಡ್ಡದ ಇಳಿಜಾರು, ಮನೆಗಳು, ಮೆಟ್ಟಿಲುಗಳು, ಕಡಲು ಎಲ್ಲ ಅದರ ಕಿಟಕಿಗಳಿಂದ ಕಾಣುವಂತಿತ್ತು. ಹಡಗಿನ ಕ್ಯಾಬಿನ್ನಿನಂತಹ ಅದರ ವಿನ್ಯಾಸ ಹಾಗೂ ಆಯಕಟ್ಟಿನ ಸ್ಥಳ ಕವಿಗೆ ಇಷ್ಟವಾಯಿತು. ತಮಗದು ದೊಡ್ಡದಾಯಿತೆನಿಸಿ ಕೊನೆಗೆ ಕೆಳಭಾಗವನ್ನು ಗೆಳೆಯ ಡಾ. ಫ್ರಾನ್ಸಿಸ್ಕೊ ವೆಲಾಸ್ಕೊನೊಂದಿಗೆ ಹಂಚಿಕೊಂಡರು. ೧೯೬೧ರಲ್ಲಿ ಆಪ್ತೇಷ್ಟರಿಗೆ ಸತ್ಕಾರಕೂಟ ಏರ್ಪಡಿಸಿ ನೆರೂಡ ಮತ್ತವನ ಪತ್ನಿ ಮಟಿಲ್ಡಾ ಉರುಷಿಯ ಆ ಮನೆ ತುಂಬಿದರು. ಹಳೆಯ ಮಾಲೀಕನ ನೆನಪಿಗೆ ‘ಲಾ ಸೆಬಾಸ್ಟಿಯಾನಾ’ ಎಂದು ಕರೆದರು. ಕವಿ ಆ ನೆನಪಿಗೆ ‘ಲಾ ಸೆಬಾಸ್ಟಿಯಾನಾ’ ಕವಿತೆ ಬರೆದ.


ಅದೀಗ ವಾಲ್ಪರೈಸೊದ ಪ್ರವಾಸಿ ಕೇಂದ್ರಗಳಲ್ಲೊಂದು. ದಾರಿ ತಿರುವಿನಲ್ಲೆ ನೆರೂಡನ ಬೃಹತ್ ಪೇಂಟಿಂಗ್ ಸ್ವಾಗತಿಸುತ್ತದೆ. ನೆರೂಡ ಫೌಂಡೇಷನ್ ಮನೆಯ ಉಸ್ತುವಾರಿ ವಹಿಸಿಕೊಂಡಿದೆ. ನಿಯಮಿತ ಜನರನ್ನು ತಂಡಗಳಲ್ಲಿ ಒಳಬಿಡುತ್ತಾರೆ. ಏನನ್ನೂ ಮುಟ್ಟಬಾರದು, ಫೋಟೋ ತೆಗೆಯಬಾರದು! ಕೈಲಿ ಆಡಿಯೋ ಹಿಡಿದು, ನೆರೂಡನ ದನಿಯಲ್ಲಿ ಸ್ಪ್ಯಾನಿಶ್ ಮಾತು/ಕವಿತೆಗಳನ್ನು, ಅದರ ಇಂಗ್ಲಿಷ್ ಅನುವಾದವನ್ನು ಕೇಳುತ್ತ ಮನೆ ಮೆಟ್ಟಿಲು ಹತ್ತಬೇಕು.ಲಾ ಸೆಬಾಸ್ಟಿಯಾನಾ ಐದು ಅಂತಸ್ತುಗಳ, ಸಾಕಷ್ಟು ಗಾಳಿ-ಬೆಳಕುಗಳಿರುವ ಬಹುವರ್ಣ ಕಲಾಕೃತಿಯಂತಹ ಮನೆ. ಅದರ ಕಿಟಕಿಗಳು ಇಡಿಯ ನಗರದರ್ಶನ ಮಾಡಿಸುವಷ್ಟು, ಕಡಲು-ಆಗಸ ಕಾಣಿಸುವಷ್ಟು ದೊಡ್ಡದಾಗಿವೆ. ಮೆಟ್ಟಿಲ ಹತ್ತುವಾಗ ಆಚೀಚೆ ನಗರ-ದೇಶಗಳ ನಕಾಶೆಗಳು; ದೀಪಕಂಬಗಳು, ಅಪರೂಪದ ತೈಲವರ್ಣ ಚಿತ್ರಗಳು, ಲೋಹ ಪಾತ್ರೆಗಳು, ಹೂಜಿಗಳು, ಬಣ್ಣದ ಗಾಜು ಮತ್ತಿತರ ವಸ್ತುಗಳು ಕಾಣಿಸುತ್ತವೆ.

ಮೊದಲ ಮಹಡಿಯಲ್ಲಿ ದೊಡ್ಡ ಹಜಾರ ಮತ್ತು ಪ್ರವೇಶ ಕೋಣೆಗಳಿವೆ. ಹಲಬಗೆಯ, ಹಲವರ್ಣದ ಕಪ್ಪೆಚಿಪ್ಪುಗಳನ್ನು ಗೋಡೆಗೆ ಹೊದಿಕೆಯಂತೆ ಅಂಟಿಸಲಾಗಿದೆ. ಎರಡನೆಯ ಮಹಡಿ ನೆರೂಡ ಇದ್ದಾಗ ಅತಿಥಿಗಳನ್ನು ಬರಮಾಡಿಕೊಳ್ಳುವ ಜಾಗವಾಗಿತ್ತು. ಮೂರನೆ ಮಹಡಿಯಲ್ಲಿ ಲಿವಿಂಗ್ ರೂಂ, ಡೈನಿಂಗ್ ರೂಂ, ಬಾರ್ ಇವೆ. ಕೋಣೆಯ ನಡುವಲ್ಲಿ ನೆರೂಡ ಸ್ವತಃ ವಿನ್ಯಾಸ ಮಾಡಿದ ಲಾಟೀನು ಬುರುಡೆ ಆಕಾರದ ಬೃಹತ್ ಫೈರ್‌ಪ್ಲೇಸ್ ಇದೆ. ನೂರಾರು ತರಹದ ಗಾಜಿನ ಲೋಟ, ಮಗ್, ಆಕರ್ಷಕ ಬಾಟಲಿಗಳು ಬಾರ್‌ನಲ್ಲಿವೆ. ನೆರೂಡ ಎಲ್ಲೇ ಹೋಗಲಿ, ಚಿಲಿಯ ವೈನ್ ಅವನ ಜೊತೆಯಿರುತ್ತಿತ್ತು. ಹಲವು ತೆರನ ವೈನ್‌ಗಳು ಮನೆಯ ಬಾರಿನಲ್ಲಿರುತ್ತಿದ್ದವು. ಚಿಲಿ ವೈನ್‌ಗಾಗಿ ಪ್ರಖ್ಯಾತ. ವೈನ್, ಮೊಟ್ಟೆಯ ಬಿಳಿ, ನಿಂಬೆಹಣ್ಣು ಹಾಗೂ ಸಕ್ಕರೆ ಸೇರಿಸಿ ಮಾಡಿದ ಚಿಲಿಯನ್ ಕಾಕ್‌ಟೇಲ್ ಅದ್ಭುತ ರುಚಿಯದಂತೆ. ಗೆಳೆಯರು ಬಂದಾಗ ಅವರೊಡನೆ ಗಂಟೆಗಟ್ಟಲೆ ಹರಟುತ್ತ ವೈನ್ ಕುಡಿಯುವುದು ಕವಿಗೆ ಬಲುಪ್ರಿಯವಾಗಿತ್ತು.

ನಾಲ್ಕನೆಯ ಮಹಡಿಯಲ್ಲಿ ಮಲಗುವ ಹಾಗೂ ಸ್ನಾನದ ಕೋಣೆ ಇವೆ. ಮಟಿಲ್ಡಾಳ ವಾರ್ಡ್‌ರೋಬಿನ ಬಾಗಿಲಲ್ಲಿ ಚೀನಾ ಸುಂದರಿಯರ ವರ್ಣಚಿತ್ರಗಳಿವೆ. ಎಲ್ಲ ಕೋಣೆ, ಹಜಾರಗಳಂತೆ ಇಲ್ಲೂ ಇಂಚಿಂಚಿಗೂ ಒಂದು ಆಸಕ್ತಿದಾಯಕ ವಸ್ತುವಿದೆ. ಮೇಲಿನ ಐದನೆಯ ಮಹಡಿ ನೆರೂಡನ ಓದಿ ಬರೆಯುವ, ಲೈಬ್ರರಿಯಿರುವ ಕೋಣೆ. ಅಲ್ಲಿ ಗ್ರಾಮೋಫೋನು, ಅದರ ಡಿಸ್ಕುಗಳು, ಎಲ್ಲಿಯದೊ ಹಳೆಯ ಸಂದೂಕ, ದಿಕ್ಸೂಚಿ, ಕೈಬರಹದ ಡೈರಿಗಳಿವೆ. ಅವನ ೫,೦೦೦ ಅಮೂಲ್ಯ ಪುಸ್ತಕಗಳು ಕಪ್ಪೆಚಿಪ್ಪುಗಳ ಬೃಹತ್ ಸಂಗ್ರಹದೊಂದಿಗೆ ಸೆಂಟಿಯಾಗೋ ವಿಶ್ವವಿದ್ಯಾಲಯ ಸೇರಿದ್ದರೂ ಕೆಲವು ಈ ಮನೆಯ ಲೈಬ್ರರಿಯಲ್ಲಿವೆ. ಅಲ್ಲಿಯೇ ನೆರೂಡನನ್ನು ಬಹುವಾಗಿ ಪ್ರಭಾವಿಸಿದ ಕವಿ ವಾಲ್ಟ್ ವಿಟ್ಮನ್‌ನ ಆಳೆತ್ತರದ ಫೋಟೋ ಇದೆ. ಈ ಫೋಟೋ ತಂದಾಗ ಮನೆಯ ಕೆಲಸದಾತ ‘ಅದು ನಿಮ್ಮ ತಂದೆಯದೆ?’ ಎಂದು ಕೇಳಿದನಂತೆ. ನೆರೂಡ ‘ಹೌದು, ನನ್ನ ಕಾವ್ಯದ ತಂದೆ’ ಎಂದನಂತೆ! ನೆರೂಡನ ಕುರ್ಚಿಯ ಆಚೀಚೆ ಹಡಗಿನ ನಾವಿಕನ ಕೋಣೆಯಲ್ಲಿರುವಂಥ ವಸ್ತುಗಳೇ ಇವೆ. ಅಲ್ಲಿ ಕುಳಿತರೆ ಗಾಜಿನ ಆಳೆತ್ತರದ ಕಿಟಿಕಿಯಿಂದ ಬಂದರು, ಕಡಲತೀರ ಪಕ್ಕದಲ್ಲೇ ಇರುವ ಹಾಗೆ ಕಾಣುತ್ತದೆ. ನೇವಿಗೇಷನ್ ರೂಮಿನಲ್ಲಿರುವ ಅನುಭವವಾಗುತ್ತದೆ.

ಒಟ್ಟಾರೆ ತುಂಬ ಕಕ್ಕುಲಾತಿಯಿಂದ ಮನೆಗಳ ರೂಪಿಸಿದ ಹೆಣ್ಣು ಮನಸ್ಸು ನೆರೂಡನದು. ತಾನು ಮರಣದ ಬಳಿಕ ಹದ್ದಾಗಿ ಮನೆಯೊಳ ಬರುತ್ತೇನೆ ಎಂದು ಕವಿ ಹೇಳುತ್ತಿದ್ದನಂತೆ. ಒಮ್ಮೆ ಕಿಟಕಿಯೆಲ್ಲ ಮುಚ್ಚಿದ್ದರೂ ಹೇಗೋ ಒಂದು ಹದ್ದು ಮನೆಯೊಳಬಂದಾಗ ನೆರೂಡನ ಗೆಳೆಯ ಡಾ. ವೆಲಾಸ್ಕೊ ಅಚ್ಚರಿಯಿಂದ ಕವಿಮಾತು ನೆನಪಿಸಿಕೊಂಡಿದ್ದ. ವಾಲ್ಪರೈಸೊದ ವಸಂತದೊಂದಿಗೆ ಬಣ್ಣಬಣ್ಣದ ಲಾ ಸೆಬಾಸ್ಟಿಯಾನಾ ತಾನೂ ಅರಳಿದೆ. ಆ ಮನೆ ನೋಡಿ ಬರುವಾಗ ಕವಿಚೇತನವು ಹಕ್ಕಿಯಾಗಿ, ಹಾಡಾಗಿ ಅಲ್ಲೆಲ್ಲ ಆವರಿಸಿರುವುದು ನಮ್ಮರಿವಿಗೆ ಬರುತ್ತದೆ.‘ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’

ವಾಲ್ಪರೈಸೊ ನಗರ ತನ್ನ ಕಳೆದ ಶತಮಾನದ ಗತವೈಭವವನ್ನು ನೆನಪಿಸಿಕೊಂಡು ಬಿಕ್ಕುತ್ತಿದ್ದ ದಿನಗಳಲ್ಲಿ ಅಲ್ಲಿಗೆ ಬಂದು ನೆಲೆಸಿದ ನೆರೂಡ ನಗರದ ಪ್ರಸಿದ್ಧಿಯನ್ನು ಜೀವಂತವಾಗಿಟ್ಟವರಲ್ಲಿ ಒಬ್ಬನಾಗಿದ್ದ. ಇಡಿಯ ದಕ್ಷಿಣ ಅಮೆರಿಕ ಹಾಗೂ ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ನೆರೂಡ ಸಾಕ್ಷಿಯಾಗಿದ್ದ. ಚಿಲಿ ದೇಶವನ್ನು ಸರ್ವಾಧಿಕಾರಿ ಪಿನೊಶೆ ಆಳತೊಡಗಿದ ಮೇಲೆ ಮಾರ್ಕ್ಸಿಸ್ಟ್ ಚಿಲಿಯ ಅವನ ಕನಸು ಭಗ್ನವಾಗಿತ್ತು. ಅವನ ಮನೆಗಳು ಪೊಲೀಸರಿಂದ ದಾಳಿಗೊಳಗಾದವು. ಅವನು ವಿಶ್ವವಿದ್ಯಾಲಯಕ್ಕೆ ನೀಡಿದ ಪುಸ್ತಕ-ವಸ್ತುಗಳನ್ನು ಪಡೆಯದಿರುವಂತೆ ಉನ್ನತಮಟ್ಟದ ಒತ್ತಡಗಳು ಬಂದವು. ಅವು ಕೊನೆಗೆ ಏನಾದವೋ ಇವತ್ತಿಗೂ ಗೊತ್ತಿಲ್ಲ. ನೆರೂಡನೇ ‘ಅವು ಕಡಲಾಳ ಸೇರಿರಬಹುದು ಅಥವಾ ಕಾಳಸಂತೆಯ ದಾರಿ ಹಿಡಿದಿರಬಹುದು’ ಎಂದು ನೊಂದುಕೊಂಡಿದ್ದ. ಇಸ್ಲಾ ನೆಗ್ರಾದ ಮನೆ ತಪಾಸಣೆಗೊಳಗಾದಾಗ, ‘ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿ ಇಲ್ಲ..’ ಎಂದು ಹೇಳಿದ್ದ. ಅವನು ತನ್ನ ದೇಶದಲ್ಲಿ ಅತಿ ಪ್ರಖ್ಯಾತನಾಗಿದ್ದ, ಅತಿ ದ್ವೇಷದ ಬೆಂಕಿಗೆ ಸುಟ್ಟುಕೊಂಡವನೂ ಆಗಿದ್ದ. ಜಗತ್ತಿನಲ್ಲೆ ಅವನು ಪ್ರಸಿದ್ಧ ಕವಿಯಾಗಿದ್ದ. ಆದರೆ ಅತ್ಯಂತ ಕಡಿಮೆ ಓದಲ್ಪಟ್ಟ ಕವಿಯೂ ಆದ. ಯುದ್ಧ, ಸಂಸ್ಕೃತಿ, ಪ್ರೇಮ, ಸಂಬಂಧ, ಇತಿಹಾಸ, ಜನ, ನೆಲ, ಸ್ಮರಣಗೀತೆ - ನಮ್ಮ ನೆರೂಡ ಏನು ಬರೆದ, ಏನು ಬರೆಯಲಿಲ್ಲ! ಆದರೆ ಅವನನ್ನು ಸಮಗ್ರವಾಗಿ ಓದಿದವರು, ಬರಹ-ಬದುಕು-ಆಶಯಗಳ ಒಟ್ಟಿಗೆ ಅರ್ಥ ಮಾಡಿಕೊಂಡವರು ಹೆಚ್ಚಿನವರಿಲ್ಲ.

ಗೆಳೆಯ ಅಲ್ಲಂಡೆಯ ಸಾವಿನಿಂದ ಜರ್ಝರಿತನಾಗಿದ್ದ ನೆರೂಡನಿಗೆ ಪಿನೊಶೆ ಆಳ್ವಿಕೆಯಲ್ಲಿ ಬದುಕುವ ಇಚ್ಛೆಯಿರಲಿಕ್ಕಿಲ್ಲ. ಸರ್ವಾಧಿಕಾರಿಯು ಆಡಳಿತ ಹಿಡಿದು ಕೇವಲ ೧೨ ದಿನಗಳಲ್ಲಿ ತೀರಿಕೊಂಡ. ಕ್ಯಾನ್ಸರ್ ಉಲ್ಬಣಿಸಿ ಮರಣ ಸಂಭವಿಸಿತು ಎನ್ನಲಾದರೂ ಸಹ, ಕೊನೆ ಗಳಿಗೆ ಒಬ್ಬ ವೈದ್ಯ ಬಂದು ಹೊಟ್ಟೆಗೆ ಇಂಜೆಕ್ಷನ್ ಚುಚ್ಚಿ ಹೋದ ಆರೇ ತಾಸುಗಳಲ್ಲಿ ಅವನು ಕೊನೆಯುಸಿರೆಳೆದ. ಎಂದೇ ಅವನದು ಕೊಲೆ ಎಂಬ ಆರೋಪ ಕೇಳಿಬಂತು. ಮರಣೋತ್ತರ ಶವಪರೀಕ್ಷೆ ಆಯಿತು, ವರದಿ ಬಂತು. ಏನೋ ಕೈವಾಡ ಇದೆ ಎಂದರು; ಇಲ್ಲ ಎಂದು ಪರಿಣಿತರೆಂದರು. ಕೊನೆಗೆ ಕವಿಯ ಅಂತ್ಯಸಂಸ್ಕಾರ ಸಾರ್ವಜನಿಕ ಸಮಾರಂಭವಾಗಲು ಪಿನೊಶೆ ಅನುಮತಿ ಕೊಡಲಿಲ್ಲ. ಆದರೂ ಸಾವಿರಾರು ಜನ ತಮ್ಮ ನೆಚ್ಚಿನ ಕವಿಯ ದರ್ಶನ ಪಡೆದರು. ನೆರೂಡನ ಹೆಸರನ್ನು ಎದೆಯೊಳಗಿಟ್ಟುಕೊಂಡೇ ಬದುಕಿದರು.

‘ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಯ ಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು’ ಎಂದು ಹೇಳಿದ ನೆರೂಡ ಬಹುಜನರಿಗಾಗಿ ಬರೆದ, ಬಾಳಿದ ಕವಿ. ಎಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾದವು. ‘ಎಲ್ಲ ವಸ್ತುಗಳಿಗೂ ಕೊನೆಗೇನಾಗುವುದು? ಸಾವು ಮತ್ತು ಮರೆವು ಎರಗುವುದು’ ಎನ್ನುತ್ತಾನೆ ನೆರೂಡ. ಆದರೆ ಅವನ ಕವಿತೆಗಾಗಲೀ, ಮನೆಗಾಗಲೀ, ನೆನಪುಗಳಿಗಾಗಲೀ ಇನ್ನೂ ಆ ಎರಡೂ ಬಂದೆರಗಿಲ್ಲ. ಚಿಲಿ ಎಂಬ ಪುಟ್ಟ ದೇಶದ ಲಾ ಸೆಬಾಸ್ಟಿಯಾನಾಗೆ ಪ್ರತಿನಿತ್ಯ ಬಂದುಹೋಗುವ ಕಾವ್ಯಾಭಿಮಾನಿಗಳು, ಜಗತ್ತಿನ ಹಲವೆಂಟು ಭಾಷೆಗಳಿಗೆ ಇವತ್ತಿಗೂ ಮತ್ತೆಮತ್ತೆ ಅನುವಾದಗೊಳ್ಳುತ್ತಲೇ ಇರುವ ಅವನ ಕವಿತೆಗಳೇ ಇದಕ್ಕೆ ಸಾಕ್ಷಿಯಾಗಿವೆ.
1 comment:

  1. ಕನ್ನಡದ್ದೇ ಒಳದನಿಯೊಂದು ಪಿಸುಗುಟ್ಟಿ ಮಗದೊಂದಾಗುವ ಪರಿ, ಬೆರಗನ್ನು ಹೊದಿಸುತ್ತದೆ ಬೆಂದ ಮನದ ಗಾಯ ವಾಸಿಯಾಗಲೆಂದು! ನುಡಿಯ ಕಾಣ್ಕೆ ಇದುವೇ ಇರಬಹುದು! ನಿಜದಿಂ ಇದೊಂದು ಗ್ರೇಟ್ ಪೀಸ್‌...!

    ReplyDelete