(ಜನವರಿ ಒಂಬತ್ತು ಫಾತಿಮಾ ಶೇಕರನ್ನು ನೆನಪಿಸಿಕೊಳ್ಳಬೇಕಾದ ದಿನ. ಮಹಾರಾಷ್ಟ್ರದ ಕ್ರಾಂತಿಕಾರಿ ಸಮಾಜಸುಧಾರಕರು, ದೀನದಲಿತಪರ ಹೋರಾಟಗಾರರು, ಬರಹಗಾರರೂ ಆದ ಜೋಡಿ ಜೋತಿಬಾ-ಸಾವಿತ್ರಿಬಾಯಿ ಫುಲೆಯವರದು. ಜೋತಿಬಾರ ಗೆಳೆಯ ಉಸ್ಮಾನ್ ಶೇಕ್ ಅವರ ಎಲ್ಲ ಕಾರ್ಯಗಳಲ್ಲಿ ಕೈಜೋಡಿಸಿದ್ದವರು. ಉಸ್ಮಾನರ ಸೋದರಿ ಫಾತಿಮಾ ಶೇಕ್, ಸಾವಿತ್ರಿಬಾಯಿಯ ಆಪ್ತ ಗೆಳತಿ. ಇಬ್ಬರೂ ಒಟ್ಟಿಗೇ ಶಿಕ್ಷಣ ಪಡೆದು ಶಿಕ್ಷಕಿಯರಾದವರು. ಭಾರತದ ಮೊದಲ ಶಿಕ್ಷಕಿ ಎಂಬ ಗೌರವ ಸಾವಿತ್ರಿಬಾಯಿ ಫುಲೆಯವರಿಗೆ ದೊರಕಿದ್ದರೆ, ಫಾತಿಮಾ ಶೇಕರನ್ನು ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಎಂದು ಗುರುತಿಸಲಾಗಿದೆ. ಪ್ರಸ್ತುತ ಹಿಜಾಬ್ ಸುತ್ತಮುತ್ತ ಎದ್ದಿರುವ ಚರ್ಚೆಗಳ ಹೊತ್ತಿನಲ್ಲಿ ಫಾತಿಮಾ ಶೇಕ್, ಸಾವಿತ್ರಿಬಾಯಿಯವರ ನಡುವಿನ ಕಾಲ್ಪನಿಕ ಪತ್ರ ಸಂವಾದ ಇದಾಗಿದೆ.
ನಾನು ಮತ್ತೆ ಹೇಳಲಿಚ್ಛಿಸುವೆ: ಈ ಪತ್ರದಲ್ಲಿ ಚರ್ಚಿಸಲ್ಪಟ್ಟ ಕೆಲವು ಸಂಗತಿಗಳು ಆಧಾರಸಹಿತವಾಗಿವೆ. ಆದರೆ ಈ ಪತ್ರವು ಸಂಪೂರ್ಣ ಡಾ. ಎಚ್. ಎಸ್. ಅನುಪಮಾ ಆದ ನಾನು ಕಲ್ಪಿಸಿಕೊಂಡದ್ದು. ಕಟ್ಟುಕತೆ, ಪುರಾಣಗಳೂ ಇತಿಹಾಸವಾಗಿಬಿಡುವ ಕಾಲದಲ್ಲಿ ಇದನ್ನು ಮತ್ತೆಮತ್ತೆ ಹೇಳುತ್ತಿರುವುದಕ್ಕೆ ಮನ್ನಿಸಿ..)
೧
ಜೀಂವದ ಗೆಳತಿ ಸಾವಿತ್ರಿ ಮತ್ತು ಜೋತಿ ಬಾವ,
ಅಸ್ಸಲಾಂ ಅಲೈಕುಂ. ಇಂಕಿಲಾಬಾದದಿಂದ ಫಾತಿಮಾಳ ಪ್ರೀತಿಯ ನೆನಪುಗಳು. ಹ್ಯಂಗದಿ ಸಾವಿತ್ರಿ? ಹ್ಯಂಗದಾರ ‘ಸತ್ಯದ ಸಾಕ್ಷಾತ್ ರೂಪವೇ ಆದ ನಿನ್ನ ಪ್ರಾಣ ಜೋತಿಬಾ’ ಬಾವ?
ಏ ಸಾವಿತ್ರಿ, ಏನಾತು ಗೊತ್ತ? ಎಲ್ಲ ಕಡೆ ಹಂಗ ಇಲ್ಲೂ ವಿವಾದ ನಡದದ. ಈ ಊರಿನ ಎಲ್ಲ ಶಾಲೆಕಾಲೇಜಿನ ಪ್ರಿನ್ಸಿಪಾಲರಿಗೆ, ಟೀಚರ್ ಮಂದೀಗೆ ನಿನ್ನ ಪತ್ರ ಬಂದದಂತ ಸುದ್ದಿ ಆಗ್ಯದ. ನೀ ಬಿಡವ, ನಿದ್ದೀ ಒಳಗೂ ಜಾಗ್ರತಾ ಆಗಿ ಇರಕಿ, ಭಲೆಭಲೆ ಅಂತಂದುಕೊಂಡು ಮಲಗಿದರ ಕನಸಿನ್ಯಾಗೂ ನೀನ ಬರಬೇಕ! ಆ ಕನಸಿನಲ್ಲಿ ನಮ್ಮನಿ ಮುಂದ ಜಗ್ಗಿ ಮಂದಿ ಸೇರ‍್ಯಾರ, ಗಲಾಟೆ ಮಾಡ್ಲಿಕ್ ಹತ್ಯಾರ. ಕೆಲವ್ರು ನನಗ ಪರದಾ ತಂದಾರ. ಕೆಲವ್ರು ನನ್ನ ಹಳೇ ಫೊಟಾ ಇಳಸಿ ಅದಕ ಹಿಜಾಬ್ ಬರೀಲಿಕ್ ಹತ್ಯಾರ. ಮತ್ತೆ ಕೆಲವ್ರು ಕಲ್ಲು ಒಗಿಯಾಕ್ ತಯಾರಾಗ್ಯಾರ. ಅಷ್ಟೊತ್ತಿಗಿ ನೀನೂ ಜೋತಿ ಬಾವನೂ ಬಂದ್ರಿ. ನೀವಿಬ್ರು ಕಂಡಿದ್ದೇ ಎಲ್ಲಾ ಗಪ್ಪಾದ್ರು ಅನ್ನತ್ತಿಗೆ ನನಗ ಎಚ್ಚರಾತು.
ಸಾತಿ, ಈ ಪತ್ರಾ ನೋಡಿ ನಿನಗ ಸಿಟ್ಟು ಬರತದ ಗೊತ್ತು. ಆದರ ನೀ ಸಿಟ್ಟು ಸೆಡ ಹಿಡಕೊಂಡ್ ಕೂಡಂಥ ಸಣ್ಣ ಮನಸಿನಾಕಿ ಅಲ್ಲಂತ ಮನಸು ತಡೀಲಾಗ್ದ ಬರದೇನಿ. ಎಲ್ಲಿಂದ ಸುರು ಮಾಡಲೆ? ಬರಬರತ ಸುದ್ದೀ ಓದೂದು, ಕೇಳೂದು ತಳಮಳಾ ಹುಟ್ಟಸತಾ ನೀವ್ ಬಾಳಾ ನೆನಪಾಗತಾ ಇದೀರಿ. ಮಕ್ಕಳು ಸಾಲೀ ಕಲೀಬೇಕ, ಓದಿ ಬರೆಯೂದು ತಿಳೀಬೇಕ; ಆಗ ಎಲ್ಲಾ ಮೌಢ್ಯ, ಅನ್ಯಾಯ ತೊಲಗತಾವ ಅನಕೊಂಡಿದ್ದುವಿ ನಾವು. ಈಗ ನೋಡಿದರ ಸಾಲಿ ಕಲತೋರೇ ಉಲ್ಟಾ ಹೊಡದಾರ. ಒಬ್ರು ಹಿಜಾಬ್ ಹಾಕೂದು ನಂ ಹಕ್ಕು ಅನತಾರಂತ, ಮತ್ತೊಬ್ರು ನಾವೇನ್ ಕಡಿಮಿ ಅಂದು ಶಾಲು ಪೇಟ ಅರಿಬಿ ಸುತಕೊಂಡ್ ಬರ್ಲಿಕ್ ಹತ್ಯಾರಂತ. ಹಿಜಾಬ್ ಹಾಕೋಬಾರದಂತ ಕಾನೂನು ಮಾಡ್ಯಾರಂತ. ಅಲ್ಲಾ ಸಾತಿ, ಅರಬೀ ಹಾಕೋಬಾಡದಂತನೂ ಕಾನೂನ ಮಾಡತಾರ?! ಅದೆಂತ ಕಾನೂನೆವ್ವ? ಹಿಂಗಿರತ ಹಿಜಾಬ್ ಹಾಕ್ಕೋಬ್ಯಾಡರಿ ಅಂತ ಅವರಂದರ, ಹಾಕ್ಕೊಳದಿದ್ರ ನೀವು ಮುಸಲಮಾನರೇ ಅಲ್ಲಂತ ಮುಲ್ಲಾಗುಳು ಫರ್ಮಾನು ಹೊರಡಿಸ್ಯಾರಂತ. ಅದನ ಕೇಳಿಕೊಂಡು ಮುಸಲಮಾನ ಹುಡುಗೇರು ನಾವು ಸಾಲೀ ಬೇಕರೆ ಬಿಡತೀವಿ, ನಮಗ ಸಾಲೀಕ್ಕಿಂತ ಧರ್ಮಾ ದೊಡದು ಅನಲಿಕ್ಕತ್ತಾರಂತ! ಹಗ್ಗ ಕೊಟ್ಟು ಕೈಕಾಲ ಕಟ್ಟಿ ಹಾಕಿಸಿಗೋತಾರಲ, ಆಟೂ ತಿಳೀವಲ್ದಲ, ಏನನಬೇಕು ಇವ್ಕೆ!
ಸಾತೀ, ನಾನೂ ನೀನೂ ಕೇರಿಕೇರಿ ಅಲೆದು, ಅಪ್ಪಅವ್ವಾರ ಕುಟೆ ಮಾತಾಡಿ, ಹುಡ್ರನ್ನ ಸಾಲೀಗ್ ಹಚ್ರಿ ಸಾಲೀಗ್ ಹಚ್ರಿ ಅಂತ ಬೇಡಕೋತ ತಿರಗ್ಯಾಡಿದಿವಿ, ಹೌದಿಲ್ಲ? ಜಾತ್ರೀ, ಸಂತೀ, ಪ್ಯಾಟೇಗ್ ಹೋಗಿ ಸಾಲೀಗ್ ಬರ್ರ್ ಬರ್ರಿ ಅಂತ ಕರ‍್ಕಂಡ್ ಬಂದಿವಿ. ಹ್ಯಂಗ್ ಹೇಳಿದ್ರೆ ಪಾಠ ಅರ್ಥ ಆಕ್ಕತಿ ಅಂತ ರಾತ್ರಿ ಹಗಲಾ ಯೋಚ್ನೆ ಮಾಡಿದಿವಿ. ಸಾಲಿ ನಡಸಾಕ ಅವ್ರಿವ್ರ ಬಲ್ಲಿ ರೊಕ್ಕಾ ಎತ್ತಿದಿವಿ. ಕಾಸಿಲ್ಲ ದಮ್ಡಿ ಇಲ್ದಂಗ ಕೆಲ್ಸಾ ಮಾಡಿದಿವಿ. ಈಗ ಇವ್ರಿಗೇನ್ ಮಲರೋಗ ಬಂದೈತಂತ ಅರ್ತ ಆಗವಲ್ದು. ಮಾಸ್ತರ ಮಂದೀನ ನಿಂತು ಹುಡುಗೇರ‍್ನ ಸಾಲೀ ಹೊರಗ ಹಾಕ್ಯಾರಂತಲ್ಲ?! ಅವ್ರಿಗಿ ಏಕಿ ಮಾಡಾಕೂ ಒಳಗ ಬಿಡಲಿಲ್ಲಂತ! ದಾವ ಆಗ್ಯತೆನು, ನೀರು ಕೊಡಲ್ಯಾ ಅಂತನೂ ಯಾರೂ ಕೇಳ್ಳಿಲ್ಲಂತ!
ಜೋತಿಬಾವ ಹೇಳ್ತಿದ್ದಂಗ ಇದೆಲ್ಲ ಬಟ್ಜಿ, ಸೇಟ್ಜಿಗಳ ಕರಾಮತ್ತು. ಮಾಸ್ತರ ಮಂದೀನೂ ಅವುರಿಗೆ ಕೈ ಜೋಡಿಸ್ಯಾರ.
ಅದೆಲ್ಲ ಇರ್ಲಿ, ನೀನೂ ಬಾವನೂ ಹ್ಯಾಂಗದಿರಿ? ಅವತ್ ನಿಂ ಮನೇಮಂದಿ ಹೊರಗಾಕಿದಾಗ ನೀನೂ ಬಾವನೂ ನಮ್ಮನೀಗ್ ಬಂದ ದಿವ್ಸ ಇನ್ನೂ ನೆನಪಿದೆನೆ ನನಗ. ನಮ್ಮಣ್ಣ ಯವ್ವಾಗೂ ಜೋತಿಬಾ ಜೋತಿಬಾ ಅನ್ನತಿದ್ದ. ಸಾಲಿ ಕಲತ್ರ, ಮನೀ ಹೊರಗ್ ಕಳಿಸಿದ್ರ ಹುಡುಗೇರು ಹಾಳಾಕ್ಕಾರ, ಧರ್ಮಾ ಮರೀತಾರ, ಹುಡುಗೀರಿಗೆ ಮನೀ ಕೆಲ್ಸಾ ಬಂದ್ರ ಸಾಕು, ಸಾಲೀ ಬ್ಯಾಡಂತ ನಮ್ಮನೇಲಿ ಹೇಳೋರು. ಕೆಲವ್ರು ಉಸ್ತಾದರು ಮನೀಗೇ ಬಂದು ಪರದಾ ಹಿಂದೆ ಹುಡುಗೀರಿಗೆ ಅದು ಇದು ಕಲಿಸಿ ಹೋಗೋರು. ಆದ್ರ ಜೋತಿಬಾ ಮಾತು ಕೇಳಿ ನಮ್ಮಣ್ಣ ಮದರಸಾಕ್ಕ ನನ್ನ ಹಚ್ಚಿದ. ಬ್ಯಾಡಂತ ಅಮ್ಮಿ ಹಠಾ ಹಿಡಿದುರೂ ಸೈತ ಪ್ರವಾದಿಯವರ ಮಾತು ಹೇಳಿ, ಮದರಸಾದಾಗ ಪರದಾ ಇರತದ ಅಂದು ಅವರ‍್ನ ಸುಮ್ ಮಾಡಿದ. ಅಂತಾ ತನ್ನ ಗೆಳ್ಯಾ ಜೋತಿಬಾನೂ, ಅವುನ್ ಬೀಬೀ ಸಾವಿತ್ರಿಬಾಯಮ್ಮನೂ ನಮ್ಮನಿಗೇ ಇರಾಕ್ ಬರ‍್ತಾರಂತ ಉಸ್ಮಾನಣ್ಣ ಅಂದಾಗ ನನಗ ನಂಬಾಕ ಆಗಿರ್ಲಿಲ್ಲ. ನೀನಂತ್ರೂ ಅಂಜಿದ ಚಿಗರಿ ಹಂಗ ಇದ್ದೀ. ಬಾವ ಸಿಟ್ಟು, ಬ್ಯಾಸ್ರ ಬಂದು ಮಕಾ ಕಪ್ಪ ಮಾಡಿಕೊಂಡಿದ್ದ. ನೀವೆಲ್ಲ ಬಂದ ಮ್ಯಾಲ ನನಗ ಮರಾಟಿ, ಇಂಗ್ಲೀಷ ಪಾಠನೂ ಸುರು ಆದ್ವು.
ಉಸ್ಮಾನಣ್ಣ ನಿಮಗ ಇರಾಕ ಜಾಗ ಕೊಟ್ಟ; ಭಾಂಡೇ ಸಾಮಾನ, ಅನಾಜ, ಹಣ್ಣಾಹಂಪಲ ಕೊಟ್ಟ; ಸಾಲಿಗೂ ಜಾಗಾ ಕೊಟ್ಟ ಅಂತ ನಮ್ಯಾಲ ಬಾಳಮಂದಿ ಸಿಟ್ಟಿಗೆದ್ರು. ಆ ಕಾಫೀರ್ ಸಂಗ್ತೀ ಏನ ಮಾಡಲತೀರಿ? ಅವಕ ದೇವ್ರಿಲ್ಲಾ, ದಿಂಡ್ರಿಲ್ಲಾ. ಇದ್ರೂ ಸೈತ ಕಲ್ಲುಮಣ್ಣುಹಾವುಹಲ್ಲೀ ಪೂಜತಾರಂತ ಜಮಾತ್ ಕಡೀಲಿಂದ ವಿರೋಧ ಬಂತು. ಆಕೀಗ್ ಮದವಿ ಮಾಡಂಗಿಲ್ಲೆನು, ಹಾಳಾಗಿ ಹೋಕಾಳ ಅಂತ ಒಷ್ಟ್ ಮಂದಿ ಕೇಳಿದ್ರು. ಆದ್ರ ಅಣ್ಣ ಜಗ್ಗಲಿಲ್ಲ. ಜೋತಿಬಾವನ ಮಾತಿಗೆ ಒಪ್ಪಿ ನಿನ್ನೂ ನನ್ನೂ ಜೋಡಿ ಮಾಡಿ ಪುಣಾದಿಂದ ಅಮ್ಮದ್ ನಗರಕ್ಕ ಓದಾಕ ಕಳಸೇ ಬಿಟ್ರು.
ನಾ ಸಾಲೀಗ್ ಹೋಗೂ ಮುಂದ ತೆಲಿಮ್ಯಾಲ ವಲ್ಲಿ, ದುಪ್ಟ, ಸೆರಗು ಹಾಕತಿದ್ದೆನೇ ಹೊರ‍್ತು ಹಿಜಾಬ್ ಹಾಕತಿದ್ದಿಲ್ಲ. ಹೌದಿಲ್ಲ? ನೀನೂ ಅಷ್ಟ, ಹೌದಿಲ್ಲ? ಸಣ್ಣಾಕಿದ್ದೆ ಅಂತ ಬಿಟ್ಟಿದ್ದುರೋ ಏನ. ಅಮ್ಮದ್ ನಗರಕ್ಕ ಕಾಲೇಜಿಗೆ ಹೋಗೂ ಮುಂದ ಬುರಖಾ ಹಾಕಲಿಲ್ಲ ಅನ್ನೂ ವಿಷ್ಯ ಬೆಳದು ಬೆಳದು ನನ್ನ ಶಾದೀ ತನ ಬಂದು ನಿಂತತು ಅಂತ ಆಮ್ಯಾಲ ತಿಳಿತು. ಊರು ಉಪಕಾರ ಅರೀದು, ಹೆಣಾ ಸಿಂಗಾರ ಅರೀದು ಅಂದಂಗ ಎಷ್ಟ್ ಜನ್ರಿಗೆ ಒಳ್ಳೇದ್ ಮಾಡಿದ್ದ ನಮ್ಮಣ್ಣ? ಅಂತವನಿಗೇ ಜೀವ ಬೆದರಿಕೆ ಬಂತು. ನಿನ್ನೂ, ನಿನ್ ಗೆಳೆಯರ ಠೋಳಿನೂ ಬಿಸ್ಮಿಲ್ಲಾ ಮಾಡಿ ಮುಗಸತೇವಿ ಅಂದ್ರಂತ. ಆದ್ರ ಯಾರೂ ನಮ್ಮ ಕುತಿಗಿ ಕುಯ್ಯಲಿಲ್ಲ. ಈಗ ಪುಣೇದಾಗ ಖೂನಿನೇ ಆಗತಾವಂತ. ಆ ಊರ‍್ಗೆ ಎಂತೆಂಥಾ ಜನಾ ಬಂದುಹೋದುರು, ಎಷ್ಟ್ ಸೇವಾ ಮಾಡಿದುರು! ಆದ್ರ ಎಂತೆಂಥರ ಹೆಣಾ ಬಿದ್ದುವು! ಅವತ್ಗಿಂತ ಹೆಚ್ಚೇ ಕೇಡಿಗರು ತುಂಬ್ಯಾರ ಈಗ. ನೆನಸಿಗೊಂಡ್ರ ಬ್ಯಾಸರಾಗತದ.
ಕೇಡು ಎದುರ‍್ಸದು ಅಷ್ಟು ಸುಲಬಿಲ್ಲ. ಅದೂ ನಮ್ಮೋರೇ, ನಮ್ಮನಿಯೋರೇ ನಮಗ ವಿರುದ್ಧ ಆದರ ಬಾರೀ ಕಷ್ಟ. ಜೋತಿ ಬಾವನ ಸಂಗಾಟ ಇದ್ದಾಗ ಉಸ್ಮಾನಣ್ಣ ಗಟ್ಟಿ ಇರತಿದ್ದ. ಮನೀಗ್ ಬಂದ್ರ ಅಂವನ್ನ ಹೆದರಿಸೋರು. ಬಟ್ಜಿ, ಸೇಟ್ಜಿಗಳು ನಮ್ ಮ್ಯಾಲೆ ಕತ್ತೀ ಮಸೀತಾ ಇದ್ರು. ನಮ್ಮ ಮಂತಾನದ ವ್ಯಾಪಾರ, ವ್ಯವಹಾರಕ್ಕ ಕಲ್ಲ ಹಾಕತಿದ್ರು. ಅವರದಂತೂ ಆತೇ ಆತು, ಅವರ ಜೋಡಿ ಭಾಯಿಚಾರ್ ಲೋಗ್ ಸಹಾ ವಿರುದ್ಧ ಆದಾಗ ಮನೆಯರಿಗೆ ಚಿಂತೀ ಆಗತಿತ್ತು. ಯಾವಾಗೂ ಇದೇ ಮಾತು. ದಾವತ್ ಇರಲಿ, ದುವಾ ಕೇಳಲಿ, ಇಫ್ತಾರ್ ಆಗಲಿ, ಇಸ್ತಮಾಗ ಹೋಗಲಿ, ಮುಲ್ಲಾಗಳ ಕೈಗೆ, ಜನ್ರ ಬಾಯಿಗೆ ಬೀಳದಂಗ ಏನು ಮಾಡಬೇಕು ಅಂತನೇ ಚರ್ಚೆ, ವಾದ.
ಹೆದ್ರಿದವರಿಗೆ ಹೇಲೂ ಹಾವಿನಂಗ ಕಾಣತದ. ನಮಗೂ ಹಂಗ ಆತು. ಜನಕ್ಕ ಅಂಜಿದ್ವಿ. ನಮಗೇನಾಗತತೋ ಅಂತ ಅಂಜಿದ್ವಿ. ಅಣ್ಣಗ ಹೆಣ್ಣ ಕೊಡಾಕ ಸುತ ಯಾರೂ ಒಪ್ಪಲಿಲ್ಲಾ. ಇದು ಹೀಂಗ ಆದರ ಕಷ್ಟ ಆಕ್ಕೇತಿ ಅಂತ ಅಬ್ಬಾಜಾನ್, ಅಮ್ಮಿ ಒಂದೇಸಮ ವರಾತ ಸುರು ಹಚ್ಚಿದುರು. ಚೊಲೋ ನಂಟಸ್ತಿಕೆ ಅಂತ ನನಗ ಶಾದೀ ಮಾಡಿದುರು. ಗಟ್ಟಿ ಯಾಪಾರಸ್ಥ ವರಾ. ಲೆಕ್ಕಾಪಕ್ಕಾ ಕಲ್ತ ಬೀಬೀ ಇದ್ರ ಚೊಲೋದಾತು ಅಂತ ನಗಾಡಿ ಹ್ಞೂಂ ಅಂದ. ವರನ ನಗೆ ನೋಡಿ ನಮ್ಮಣ್ಣ ನಂಬಿದ. ಆದ್ರ ಮಳಗಾಲದ ಬಿಸ್ಲು, ಮನೆಗಂಡನ ನಗೆ ಎರಡ್ನೂ ನಂಬಬಾರ‍್ದಂತ ಆಮ್ಯಾಗ ನನಗ ಗೊತ್ತಾತು. ಶಾದೀ ಆಗೂಮಟ ಎಲ್ಲದ್ಕೂ ಹೂಹೂ ಅಂದು ಆಮ್ಯಾಲ ಎಲ್ಲ ಗಣಸುಮಕ್ಳ ಹಂಗನೇ ಇವ್ರೂ ಆದರು. ಮದವಿ ಆತಂದ್ರ ಮುಗೀತು, ಹೆಣಮಕ್ಳ ಎಲ್ಲಾ ದರವಾಜ ಬಂದ್ ಆಕ್ಕಾವು. ಜೆನಾನಾದ ಒಳಗೇ ಮಕ್ಳುಮರಿ, ಜನ್ನತ್, ಜಹನ್ನುಮ್ ಎಲ್ಲಾ. ಬ್ಯಾಸರ ಆದ್ರೂ ನುಂಗಿ ಸುಮ್ಮಾದೆ. ಯಾರ‍್ಗೆ ಹೇಳದು?
ಎಲ್ಲಾ ಗಂಡರೂ ನಂ ಜೋತಿ ಬಾವನಂಗ ಇರಂಗಿಲ್ಲ ಸಾತಿ. ಯಾವ ಗಂಡನೂ ಅವುರಂಗ ಇರಂಗಿಲ್ಲಾ. ಗಣಸುಮಕ್ಳ ಮರ್ದಾನಾ ಬುದ್ಧಿ ಸುಲಬಕ್ಕ ಬದಲಾಗಲ್ಲ. ಅದ್ಕೇ ಹುಡುಗೇರ ಪರಿಸ್ಥಿತಿ ಇವತ್ಗೂ ಬದಲಾಗಿಲ್ಲ. ಅತವ ನಮಗಿಂತನೂ ಈ ಕಾಲ ಕೆಟ್ ಅದ. ಆಗ ಏನೂ ಕಲೀದಿದ್ದವ್ರು ನಾವು ಅಂತ ತಿಳಕೊಂಡು ಮಾತಾಡದಂಗ ಇದ್ದುವಿ. ಈಗ ಎಲ್ಲಾ ಕಲತೂ ಮಾತು ಸತ್ತಂಗ ಅದಾರ.
ನಿನಗೊಂದ್ ಗುಟ್ಟು ಹೇಳತೀನಿ ಕೇಳು. ಒಂದ್ ಹುಡುಗೀ ಕಾಲೇಜಿಗೆ ಹೋಗತಾ ‘ಬುರಕಾ ನನ್ನ ಹಕ್ಕು’ ಅಂತಂದು ಅಲ್ಲಾಹು ಅಕ್ಬರ್ ಅಂದುಳಂತ ಸುದ್ದೀ ಮಾಡ್ಯಾರಲ, ಅಕಿ ನನಗ ಮರಿಮಗಳ ಮೊಮ್ಮಗಳಾಕ್ಕಾಳ. ಏನ ತಗಳಪ್ಪ ಆಕೀಗೆ ರೊಕ್ಕಾ ಆಯಾರ ಮಾಡಿದ್ದೇ ಮಾಡಿದ್ದು. ಹಾರ, ತುರಾಯಿ, ಸನ್ಮಾನ ಮಾಡಿದ್ದೇ ಮಾಡಿದ್ದು. ಎಲ್ಲಾ ಗಣಸುಮಕ್ಳ ಚಿತಾವಣೆ. ತಮ್ಮ ಪುಂಗೀಗೆ ತೆಲೀ ಆಡ್ಸೂ ಹೆಣಮಕ್ಳನ್ನ ತೆಲೀ ಮ್ಯಾಲೆ ಕೂರಿಸಿಕೋತಾರ ಅಷ್ಟ. ಮುಸಲಮಾನ ಹುಡಗಿ ಆಗಿ ಚೊಲೋ ಆಟ ಆಡಿ ಸಾಧನಾ ಮಾಡಿದೆವ್ವ ಅಂತ ಸಾನಿಯಾ ಮಿರ್ಜಾಗ, ಗಂಡಗ ಚೊಲೋ ಬುದ್ದೀ ಕಲಿಸಿದಿ ಅಂತ ಶಾಬಾನುಗ, ನಿನ್ನ ಕಾಲ ಮ್ಯಾಲ ಅಂಜದಂಗ ನಿಂತೀ ಅಂದು ಮುಕ್ತರ ಮಾಯೀಗ ಅವರ‍್ಯಾರರೆ ಸನ್ಮಾನ ಮಾಡಿದ್ರೇನು? ಆಯಾರ್ ಕೊಟ್ರೇನು? ಇಲ್ಲಾ. ನನಗ ತಿಳಿದದ ಇದು, ಈ ಕಲ್ತ ಹುಡುಗೇರಿಗೆ ತಿಳೆಂಗಿಲ್ಲಲ! ಕಲತೇನು ಫಲಾ? ಕತ್ತೀ ಮೇಲೆ ಕುಂಬಳಕಾಯಿ ಬಿದ್ರೂ ಒಂದೇ, ಕುಂಬಳ ಕಾಯಿ ಮೇಲೆ ಕತ್ತಿ ಬಿದ್ರೂ ಒಂದೇ. ಇದನ ನಂ ಮಂದೀ ತಿಳೀವಲ್ರಲ?
ಯಾ ಅಲ್ಲಾ, ಪರ್ವರ್ದೀಗಾರ್, ದುವಾ ಕರೋ.
ಯಾಕೋ ಬರಿಬರೀ ಇಂತಾ ಮಾತಾ ಬರಲಿಕತಾವ ಸಾತಿ. ನೀವು ಹುಶಾರಿ ಮತ್ತ. ಪುಣೆ ಊರಿನಾಗ ಅದ ವಾಡೇ ವಳಗ ಅದೀರಿ ಅಂತ ಗೊತ್ತಾತು. ಪುಣಾ ಊರು ಮ್ಯಾಲಮ್ಯಾಲ ಬಾರೀ ಬದಲಾಗೇತಂತ. ಆದ್ರ ಆಳದಾಗ ಅವತ್ ಹ್ಯಾಂಗಿತ್ತ ಹಂಗ ಇರೂ ತರ ಅದ. ಬಟ್ಜಿ, ಸೇಟ್ಜಿ ಪಕ್ಷಾ ಕಟ್ಯಾರಂತ. ಸದ್ದಿರದಂಗ ಏನ್ ಬೇಕರೆ ಮಾಡತಾರಂತ. ಜೋತಿಬಾವಗ ಒಂಟಿ ಆಗಿ ಅಕ್ಕಡಿ ಇಕ್ಕಡಿ ಹೋಗಬ್ಯಾಡ ಅನ್ನು, ಎಲ್ಲಾನು ಮೈಮ್ಯಾಲ ಎಳಕೋಬ್ಯಾಡನ್ನು. ಹ್ಞಾಂ?
ಇನ್ ಶಾ ಅಲ್ಲಾ, ಒಂದುಸಲ ಬೆಟ್ಟಿ ಆಗೂಣು ಸಾತಿ, ಯಾವಾಗ ಪುರ್ಸತ್ತು ಆಗತದೋ ಗೊತ್ತಿಲ್ಲ. ಜೋತಿ ಬಾವನಿಗೂ ಅದಾಬ್ ತಿಳಸು. ನಿನ್ನ ಪತ್ರ ಎದುರು ನೋಡತಿದೀನಿ.
ಜೋ ಅಪ್ನೇ ಲಿಯೆ ನಹೀಂ, ಔರೋಂ ಕೆ ಲಿಯೆ ದುವಾ ಕರ‍್ತೆ ಹೈ; ಉನ್ಕೆ ಹಕ್ ಮೆ ಫರಿಷ್ತಾ ದುವಾ ಕರ‍್ತೆ ಹೈ. ಖುದಾ ಹಾಫೀಜ್.
ನಿನ್ನ,
ಫಾತಿಮಾ
೨
ಪ್ರೀತಿಯ ಫಾತಿ,
ಅರೆರೆ, ಅದೆಲ್ಲಿ ಇದ್ದೆ ಮಹರಾಯತಿ ಇಷ್ಟು ದಿನ. ನಿನ್ನಿಂದ ಯಾವ ಸುದ್ದಿ ಇಲ್ಲ, ಭೇಟಿ ಇಲ್ಲ ಅಂತ ಎಷ್ಟೋ ಸಲ ನೆನಪು ಮಾಡಿಕೊಂಡಿದ್ದೆ. ಇರಲಿ, ಈಗಲಾದರೂ ನೆನಪಾದ್ವಲ!
ನಿನ್ನ ಪತ್ರದ ತುಂಬ ಕಾಲದ ಕಷ್ಟವನ್ನೇ ತೋರಿಸಿದೀಯಲ್ಲೆ? ಬಾವನಿಗೆ ತಕ್ಕ ನಾದಿನಿ ನೀನು. ಕಷ್ಟ ಎಲ್ಲಾ ಕಾಲದಲ್ಲೂ ಬರ‍್ತಾವೆ ಪಾತಿ. ನಮ್ಮ ನೋಟ ಅಲ್ಲಿಗೆ ನಿಲ್ಲಬಾರ್ದು. ಕಷ್ಟ ಗೆಲ್ಲುವ ದಾರಿಗಳೂ ಕಣ್ಣೆದುರು ಬರ್ತವೆ. ಅದನ್ನು ಕಾಣೋವರೆಗೂ ತಾಳ್ಮೆ, ಭರವಸೆ ಇಟ್ಟುಕೋಬೇಕು. ಹಿಜಾಬು ಹಾಕಿದ, ಹಾಕದಿದ್ದ ಹುಡುಗೀರ ಮಧ್ಯ ಪರದೆ ಬಿಟ್ಟಿದಾರೆ ನಿಜ. ಆದ್ರೆ ಅದು ಎಷ್ಟು ದಿನ ಇರಕ್ಕೆ ಸಾಧ್ಯನೇ? ನೋಡು ಒಬ್ಳು ಕೇಸರಿ ಹುಡುಗಿ, ‘ಹಿಜಾಬ್ ಹಾಕಂಡ್ರೆ ಏನ್ ತಪ್ಪು?’ ಅಂದಳಂತೆ. ಇವತ್ತೆಲ್ಲೋ ಫೋಟೋ ನೋಡಿದೆನವ್ವ, ಒಬ್ಬ ಹಿಜಾಬ್ ಹುಡಗೀರನ್ನ ಉಳಿದೋರು ಕೈಕೈ ಹಿಡಿದು ಶಾಲೆ ಒಳಗೆ ಕರಕೊಂಡು ಹೋಗತಿದಾರೆ. ಆ ಫೊಟೋ ನೋಡಿ ಪರಮಾನಂದ ಆಗೋಯ್ತು ನನಗೆ. ಅವತ್ತು ನೆನಪಿದೆಯಾ? ಒಬ್ಬ ಹುಡುಗನ ತಂದೆ ನಾನು ಪಾಠ ಮಾಡುವ ಕೊಠಡಿಯೊಳಗೆ ಸೀದಾ ನುಗ್ಗಿ ಮೊಹಮದ್ ಅನ್ನೋ ಒಬ್ಬ ವಿದ್ಯಾರ್ಥಿ ತನ್ನ ಮಗನ್ನ ಹೊಡೀತಾನೆ ಅಂತನೂ, ತಾನು ಅವನನ್ನ ಹೊಡೀತೀನಿ ಅಂತನೂ ಏರಿಹೋದ. ಆಗ ನಾವೇನು ಮಾಡಿದ್ವಿ? ಮೊಹಮದನಿಗೆ ಬುದ್ದಿ ಹೇಳಿ ಸರಿಪಡಿಸ್ತಿವಿ ಅಂತ ಆ ತಂದೇನ ತಿರುಗಿ ಕಳಿಸಿದ್ವಿ, ಹೌದಾ? ಮೊಹಮದನನ್ನ ಕರೆದ್ವಿ, ಮಾತನಾಡಿದ್ವಿ. ಅವ ಆಮೇಲೆ ಎಷ್ಟು ಸುಬುದ್ಧಿಯ ವಿದ್ಯಾರ್ಥಿಯಾಗಿ ಮಾರ್ಪಟ್ಟ! ತನ್ನ ತರಗತಿಯ ಹಿರೇಮಣಿ ಆದ. ತನ್ನ ಮೊಹಲ್ಲಾದ, ತನ್ನ ಹಳ್ಳಿಯ ಎಷ್ಟೋ ಹುಡುಗ, ಹುಡುಗೀರನ್ನ ಶಾಲೆಗೆ ಕರಕೊಂಡು ಬಂದ.
ಹಾಗೆ ಹುಡುಗ ಹುಡುಗೀರನ್ನ ಒಳ್ಳೇದರ ಕಡೆಗೆ ಎಳೆಯೋರು ಬೇಕಾಗಿದಾರೆ ಕಣೇ. ಕೇಸರಿ ಶಾಲು ಹೊದ್ದೋರಿರಲಿ, ಹಿಜಾಬ್ ಹಾಕಿದೋರಿರಲಿ, ಹಿಜಾಬ್ ಗೆಳತಿಯರ ಕಂಡೂ ಕಾಣದಂಗೆ ನಿಂತ ಹುಡುಗೀರಿರಲಿ, ಎಲ್ಲಾ ಜೀವರೊಳಗೂ ಒಳ್ಳೇತನ ಇದ್ದೇ ಇರುತ್ತೆ. ಅದನ್ನ ಉದ್ದೀಪನೆ ಮಾಡಿ ಹೊರಗೆಳೀಬೇಕಾಗಿದೆ ಅಷ್ಟೆ. ಬಿಸಿ ರಕ್ತದ ಜೀವಗಳ ಹೆಗಲ ಮೇಲೆ ಕೈಹಾಕಿ ಯಾಕೋ ತಮ್ಮ, ತಂಗೀ ಅಂತ ಮಡಿಲಿಗೆ ಹಾಕ್ಕೋಬೇಕಾಗಿದೆ. ಉಳಿದೋರು ಮನಸ್ಸು ಒಡೀತಾ ಇದ್ದರೆ ಅದನ್ನು ಕೂಡಿಸೋ ಕೆಲಸ ಮಾಡಬೇಕು. ಗೋಡೆ ಎಬ್ಬಿಸ್ತಾ ಇದಾರೆ ಅಂದ್ರೆ ಅದನ್ನ ಒಡೀಬೇಕು. ಒಂದು ಬತ್ತಿ ಎಷ್ಟು ಹಣತೆನಾದ್ರೂ ಹೊತ್ತಿಸಲ್ವ, ಹಾಗೆ. ಪ್ರತಿ ಶಾಲೇಲೂ ಅಂತಹ ಒಂದು ಪ್ರೀತಿಯ ಹಣತೆ ಇದ್ರೆ ಸಾಕು ಕಣೇ.
ಅದಕ್ಕೇ ಕಾಗದ ರಾಶಿ ಹಾಕೊಂಡು ಕೂತಿದೀನಿ. ಎಲ್ಲ ಶಾಲೆಗಳ ಮಾಸ್ತರ ಮಂದಿಗೆ ಪತ್ರ ಬರೀತಿದೀನಿ.
ನಾವು ಕಂಡ ಕ್ಷಾಮ ಏನೂ ಅಲ್ಲ, ಅದಕ್ಕಿಂತ ಭೀಕರ ಪ್ರೀತಿವಿಶ್ವಾಸದ ಕ್ಷಾಮ ಈಗ ಹೊಗೆ ತರಹ ಸುತ್ತಿಕೊಂಡಿದೆ. ಆದರೆ ಬಾವನ ಮಾತು ಕೇಳಿ ಆತಂಕ ಮಾಡ್ಕಬೇಡ. ಅವರದು ರಾಜಕಾರಣದ ದಾರಿ. ನಮ್ಮದು ಪ್ರೀತಿಯ ದಾರಿ ಎಎ. ನಾ ಹೀಗೆ ಬರೀತಿರುವಾಗ ಜೋತಿ ಇಲ್ಲೇ ಕೂತು ಹುಬ್ಬು ಹಾರಿಸುತ್ತಾ ಮೀಸೆ ತುದಿಯಲ್ಲಿ ಕಂಡೂ ಕಾಣದಂತೆ ನಗತಾ ಇದ್ದಾರೆ! ನನಗಂತೂ ಧೃಢ ಇದೆ, ಹಗೆಯ ಹೊಗೆ ಕರಗಿಸಕ್ಕೆ ಹಟ್ಟಿ ಮೊಹಲ್ಲಾಗಳ ನಡುವೆ ಪ್ರೀತಿಯ ಗಾಳಿ ಬೀಸೇ ಬೀಸುತ್ತೆ. ಗಡಿಗಳ ಮೀರಿದ ಸಂಬಂಧ ಬೆಳೆದೇ ಬೆಳೆಯುತ್ತೆ. ನನಗೆ ಭರವಸೆಯಿದೆ, ಅಂತಹ ದಿನ ಬಂದೇ ಬರುತ್ತೆ. ಒಂದಲ್ಲ ಒಂದು ದಿನ ಭೂಮಿ ಮೇಲಿನ ಮನುಷ್ಯರಿಗೆ ಜಾತಿ, ಮತ, ಧರ್ಮ, ದೇಶ, ಬಾವುಟಗಳ ಅಹಮನ್ನು ಉಂಡುಉಂಡು ಹೇವರಿಕೆ ಬಂದು ಇದ್ಯಾವುದರಿಂದಲೂ ಬದುಕಕ್ಕಾಗಲ್ಲ ಅಂತ ಅರಿವಾಗಿ ಮನುಷ್ಯರು ಮನುಷ್ಯರಾಗಿ ಒಂದಾಗೋ ಕಾಲ ಬಂದೇ ಬರುತ್ತೆ. ಅದನ್ನ ನಮ್ಮ ಜೀವಿತ ಕಾಲ್ದಲ್ಲಿ ನೋಡಲಿಕ್ಕಾಗದೇ ಇರಬೋದು, ಆದರೆ ಅಲ್ಲೀತಂಕ ನಮ್ಮನ್ನ ನಾವು ಜೀವಂತವಾಗಿ, ಮೈತ್ರಿ ಮನಸಿನವರಾಗಿ ಇಟ್ಟುಕೊಬೇಕು. ಅಲ್ವಾ ಫಾತಿ?
ಜೋತಿಬಾವ ಆಶೀರ್ವಾದ ತಿಳಿಸಿದಾರೆ. ನಂತರ ನಿಂಗೆ ವಿವರವಾದ ಪತ್ರ ಬರಿತಾರಂತೆ. ಈಗ ತುರ್ತದ ಕೆಲಸ ತುಂಬ ಬಂದಿದೆ. ಇದು ಮುಗಿದ ಬಳಿಕ ಒಮ್ಮೆ ಭೆಟ್ಟಿಯಾಗಣ. ಆಯ್ತಾ?
ಪ್ರೀತಿಯ ಅಪ್ಪುಗೆ ಕಣೇ ಫಾತೀ.
ನಿನ್ನವಳೇ
ಸಾವಿತ್ರಿ.
(ಈ ಪತ್ರದಲ್ಲಿ ಚರ್ಚಿಸಲ್ಪಟ್ಟ ಕೆಲವು ಸಂಗತಿಗಳು ಆಧಾರಸಹಿತವಾಗಿವೆ. ಆದರೆ ಈ ಪತ್ರವು ಸಂಪೂರ್ಣ ಕಾಲ್ಪನಿಕ. )
ಡಾ. ಎಚ್. ಎಸ್. ಅನುಪಮಾ
ಕಾಲ್ಪನಿಕ ಎಂದು ಹೇಳಿದರೂ ವಾಸ್ತವ ಚಿತ್ರಣ ಇದಾಗಿದೆ. ಅಭಿನಂದನೆಗಳು ಮೇಡಮ್.
ReplyDeleteಕಾಲ್ಪನಿಕ ಅನ್ನುವಂತಿಲ್ಲ.ಅವರಿಬ್ಬರ ಮಾತನ್ನು ನಾವು ಆಲಿಸಿದಂತಿದೆ.
ReplyDeleteಎಷ್ಟೊಂದು ವಾಸ್ತವದಲ್ಲಿ ನಡೆಯುತ್ತಿರುವ ಘಟನೆಗಳನ್ನು ಪಾತಿ-ಸಾತಿ ಅವರ ಬಾಂಧವ್ಯದ ಮೂಲಕ ಹೇಳಿದ್ದೀರ. ಪಾತಿಯು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಹೊರಹಾಕಿದರೆ ಸಾತಿ ಪ್ರೀತಿಯಿಂದಲೇ ಗೆಲ್ಲುವ ಎಂದು ಹೇಳುವುದು, ಮುಂದೆ ಸರಿಹೋಗುವುದೆಂಬ ವಿಶ್ವಾಸ ಹೊಂದಿರುವುದು ಕಲ್ಪನೆಗೂ ಮಿಗಿಲಾದ ವೈಶಾಲ್ಯತೆ ಹೊಂದಿದೆ.
ReplyDeleteವಿವಾದವಲ್ಲದ ವಿವಾದಕ್ಕೆ ಯುವಕ-ಯುವತಿಯರು ದಾಳವಾಗಿದ್ದಾರೆ. ಬಟ್ಟೆ ಆಯ್ಕೆಯಾಗದೆ ಹೇರಿಕೆಯಾಗಿದೆ. ಇದು ಕುರುಡು ಆಚರಣೆಗಳಿಗೆ ಪುಷ್ಠಿ ನೀಡಿದೆ. ಬಲವಂತದ ಹೇರಿಕೆ ಮತ್ತಷ್ಟು ಮೌಢ್ಯಗಳನ್ನು ಹೆಚ್ಚು ಮಾಡುತ್ತದೆ, ಮನಸ್ಸನ್ನು ಕತ್ತಲಾಗಿಸುತ್ತದೆ. ಶಿಕ್ಷಣ ವಂಚಿತರು ಇಂದು ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವುದೇ ಚುಕ್ಕಾಣಿ ಹಿಡಿದವರಿಗೆ ತಲೆಬಿಸಿ ಉಂಟು ಮಾಡಿದೆ. ಇಬ್ಬರು ಕ್ರಾಂತಿಕಾರಿ ಪಾತಿ-ಸಾತಿಯರು, ಸೋದರ ಉಸ್ಮಾನ್, ಜ್ಯೋತಿ ಬಾ ಅವರ ಮೂಲಕ ಕುರುಡು ದಾರಿಯನ್ನು ತೋರಿಸಿ, ಮಕ್ಕಳ ಭವಿಷ್ಯದೊಟ್ಟಿಗೆ ಆಟವಾಡಿ, ತಮ್ಮ ಬೇಳೆ ಬೇಯಿಕೊಳ್ಳುತ್ತಿರುವವರ ಬಗ್ಗೆ ಚೆನ್ನಾಗಿ ತಿಳಿಸಿದ್ದೀರ ಅಕ್ಕ.
ಪ್ರೀತಿಯ ದಾರಿಯಲ್ಲಿ ಸಾಗಬೇಕಾದ ಮಕ್ಕಳಿಗೆ ಪ್ರೀತಿಯ ಚಿಕಿತ್ಸೆ ಬೇಕು. ಅದು ಹೆಣ್ಣು-ಗಂಡು ಇಬ್ಬರಿಗೂ......
ಶಿಕ್ಷಣ ಮಾತ್ರ ಬದಲಾವಣೆ ತರಲು ಸಾಧ್ಯ.ಅದನ್ನು ಸಾಧಿಸಿ ತೋರಿಸಿದ ಫಾತಿಮಾ ಶೇಕ್ ಮತ್ತು ಸಾವಿತ್ರಿ ಭಾಯಿ ಪುಲೆ ಅವರಿಗೆ ಶರಣು.
This comment has been removed by the author.
ReplyDeleteಮೇಡಂ ನಿಮ್ಮ ಲೇಖನ ಓದಿದೆ. ಆದರೆ ನಿಮ್ಮ ಈ ಸಾಲಿಗೆ ನನ್ನ ಭಿನ್ನಾಭಿಪ್ರಾಯ ಇದೆ...
ReplyDelete"ಹಿಜಾಬ ಹಾಕೋಬ್ಯಾಡರಿ ಅಂತ ಕಾನೂನು ಅಂದರೆ ... "
ಇದಕ್ಕೆ ನನ್ನ ಪ್ರತಿಕ್ರಿಯೆ
"ಹಿಜಾಬ್ ಹಾಕಿದ್ರೆ ಹೆಣ್ಣು ಮಕ್ಕಳಿಗೆ ವಿದ್ಯೆ ನಿರಾಕರಿಸೋದು ಯಾವ ಕಾನೂನು ? ಎಂತ ಕಾನೂನು ? " ಎಂದು ಸಾವಿತ್ರಿ ಬಾಫುಲೆ ಮತ್ತು ಫಾತಿಮಾ ಶೇಕ್ ಜೊತೆಯಾಗಿ ಕೇಳುತ್ತಿದ್ರು. ಹೆಣ್ಣು ಮಕ್ಕಳು ಶಿಕ್ಷಣ ಕಲಿಯಬೇಕಾದರೆ ಏನೇನು ಸವಾಲುಗಳನ್ನು ಎದುರಿಸಬೇಕು ಎನ್ನುವುದು ಖಂಡಿತಾ ಫಾತಿಮಾ ಶೇಖ ಗ ಗೊತ್ತದ . ಹಿಜಾಬ್ ಎಂದರೆ ಹೆಗಲಲ್ಲಿದ್ದ ಶಾಲನ್ನು ತಲೆಗೆ ಧರಿಸುವುದು. ಅಷ್ಟೇ.
ಈ ಸಾತು-ಪಾತು 'Woಮನ್ ಕೀ ಬಾತು' ಕೇಳಿ, “ಬಟ್G-ಸೇಠ್G-Hateಜೀ“ಗಳ “3G” ಗುಂಪು, “ಬಿಸ್ಮಿಲ್ಲಾ ಬೇಳೆ ಭಾತು” ತಿಂದ ಬಾತಿನಂತೆ ಮುಸುಮುಸುಗುಟ್ಟುತ್ತಿದೆ. ಇದರಿಂದ ಹಿಗ್ಗಿದ Muskan, maskಉ-ಮುಸುಕು ಒಳಗಿಂದಲೇ ಮುಸಿಮುಸಿ ನಗುತ್ತ, “ಈ ಮುಸುಕಿನ ಗುದ್ದು ಜ಼ಬರ್‌ದಸ್ತ್ ಇದೆ, ಮುಸ್ಕುರಾತೇ ರಹೋ!” ಎನ್ನುತ್ತಿದ್ದಾಳೆ. ಅಷ್ಟರಲ್ಲೇ ಕಾಫ಼ೀ ಬಾರ್ ಸೋಫ಼ಾದಿಂದ ಎದ್ದು ಬಂದ ಸೂಫ಼ಿ ಸುಕವಿ Sophia, “ಬನ್ನಿ, ಎಲ್ಲ ಮಾಫ಼ಿ ಮಾಡಿ, ‘ಪ್ರೇಮ್ ಕೀ ಟಾಫ಼ಿ’ ತಿನ್ನೋಣ” ಎಂದು ಕರೆನೀಡುತ್ತಿದ್ದಾಳೆ. ಬದಿಗೇ ಇರುವ “ಶಾಲು” (ಶಾಲಿನಿ) “ಕೇಸರಿ ಶಾಲುಗಳೇ ಓಡಿ ಬನ್ನಿ, ಕೇಸರಿ ಹಾಲು-‘ಫಾತಿಮಾshake’ ಬೆರೆಸಿ cocktail ಹೊಡೆಯೋಣ, ‘ಮುಸುಕಿನ ಜೋಳ’ ಜಗಿಯೋಣ” ಎಂದು ಆವಾಜ಼್ ಎತ್ತುತ್ತಿದ್ದಾಳೆ. ಮೂಲೆಯೊಂದರಲ್ಲಿ “ಸಾವಿ3 Boy” ಎಂಬ ಮರ್ದಾನಿ (ಇವಳ ಬಾಯಿ “ಬೊಂಬಾಯಿ” ಎಂದಿದ್ದರು, “ಬಸವರಾಜ” ಕವಿ), “ಈ ಹಿಜಾಬ್ ಹಿಸಾಬ್ ಬಿಟ್ಟು, ಮೊದಲು "job" ಕೇಳಿ, "jab" (ಲಸಿಕೆ) ಕೇಳಿ, ನಾಯಕರಿಂದ "ಜವಾಬ್" ಕೇಳಿ, ಸ್ಕೂಲಲ್ಲಿ ಕುಂಬಳಕಾಯಿ ತೊಗೊಂಡು ನಾಳೆ ಕತ್ತಿ ಮೇಲೆ ಬೀಳ್ತೀರೇನು?” ಎಂಬ “ಲಾಜವಾಬ್-ಬೇಹಿಜಾಬ್” ಸಲಹಾ ಕೊಡುತ್ತಿದ್ದಾಳೆ. ಈ ನಡುವೆ ತಮ್ಮ ಟೀ-ಶರ್ಟ್‌ನಿಂದ “ಜ್ಯೋತ್ರಿಮಾ= ಜ್ಯೋತಿ ಬಾ + ಸಾವಿತ್ರೀ ಬಾಯಿ+ ಫ಼ಾತಿಮಾ ಶೇಖ್” ಎಂದು ಕೂಗಿಸುತ್ತಿರುವ ಉಸ್ಮಾನ್ ಕಾಕಾ, “ಎಲ್ಲಾ ಕಲತೂ, ಮಾತು ಸತ್ತಂಗ ಮಾತ್ರ ಇರಬ್ಯಾಡ್ರಿಯಪ್ಪ” ಎಂದು ಮೊರೆಯಿಡುತ್ತಿದ್ದಾರೆ. ಇನ್ನೊಂದು ಮೂಲೆಯಲ್ಲಿ, “ಮನ್ಸ ದಾಡೀಗೆ ಯಾಕೆ “shejab” ಮುಚ್ಚಬಾರದು?” ಎಂದು 'ಫ಼ಾತಿಮಾ ಶೇಖರ್' ಮಗಳು ಪ್ರತಿಮಾ ಮತ್ತು ಆಶಾದೇವಿ ಮಗಳು Ayesha ಜೋರಾಗಿ-ಜೊತೆಯಾಗಿ 'ಸ್ತ್ರೀ ಸವಾಲ್' ಹಾಕುತ್ತಿದ್ದಾರೆ. ಈ ಹಲ್‌ಚಲ್ ಹಿನ್ನೆಲೆಯಲ್ಲಿ, “ಸಾವಿತ್ರಿ ಬಾ ಜೈ, ಕಸ್ತೂರ್ ಬಾ ಜೈ, ಜ್ಯೋತಿ ಬಾ ಜೈ, ಫಾತಿಮಾ ಮಾಮಿ-ಉಸ್ಮಾನ್ ಮಾಮ ಜೈ-ಜೈ” ಎಂದು ಬೊಬ್ಬೆಯೇರುತ್ತಿದೆ.
ReplyDeleteಹೀಗೆ ಹುಡುಗಿ-ಹುಡುಗರ ಓದು-ಬಾಳು ಹಾಳಾಗುತ್ತಿದೆಯೆಂದು ನಗೆಯಾಡುನುಡಿಯಲ್ಲೇ 'ಶಾಕ' ('shock') ತಟ್ಟಿಸಿದ್ದಕ್ಕಾಗಿ ನಿಮಗೆ “ಸಲಾಮ್-ಸಲಾಮ್-ಸಲಾಮ್”! -- ಥಾಮಸಮ್ಮ ಜ್ಯೋತಿರ್ಗಮಯ್ಯ, ಮುಖ್ಯ sheಕ್ಷಕಿ (ಮತ್ತು “ಪರದೆ ಸ್ಪರ್ಧೆ” ಆಯೋಜಕಿ), ಹಿಜಾಬಿಣಿ ಕನ್ಯಾಶಾಲೆ, ಫ಼ಾತಿಮ್ಮಾಜಮ್ಮ ಪಾಳ್ಯ, ಕೋಮುwar ಪೇಟೆ.
ಹಿಜಾಬ್ ಅವರು ಧರಸಿದರೆ ಇವರಿಗೇನು?
ReplyDeleteವಿಚಿತ್ರ