Sunday, 30 January 2022

ನನ್ನೊಳಗಿನ ದೇವತೆಯರು

 



ನನ್ನೊಳಗಿದ್ದಾರೆ ಹಲವು ದೇವತೆಯರು 

ತ್ಯಾಗಮಯಿ ನಿಸ್ವಾರ್ಥಿ ಪರಮಸಾಧ್ವಿಯರು   

ಹೊರಲಾಗದ ಕಿರೀಟ ಹೊತ್ತ

ಅಗೋಚರ ಹೆಗಲಾಳ್ತಿಯರು


ಮನೆಯೆಂಬುದು ಪಾರದರ್ಶಕ ಜೈಲು

ಕಣ್ಣಿಗೇ ಕಾಣಿಸವು ಗೋಡೆಗಳು ಗಾಜು

ಗುದ್ದಿ ಒಡೆಯದಂಥದಲ್ಲ, ಆದರೂ

ಗೋಡೆಯಿದೆಯೆಂದೇ ಮನಸು ನಂಬಲಾರದು 

ಇದ್ದಾಳಲ್ಲ, ನನ್ನೊಳಗಿನ ಸತಿ ಸಾವಿತ್ರಿ

ಅವಳಿರುವ ತನಕ ಗೋಡೆ ಕಾಣಲಾರದು

ಕಂಡರೂ ಒಡೆದು ದಾಟಲಾಗದು.


ಎರಡು ಉದ್ದ ಜಡೆ, ಎರಡೂ ಮುಂದೆ

ತೊನೆಯಬೇಕು ಆಚೀಚೆ ಗುಮ್ಮಟಗಳ ಮೇಲೆ

ಸಡಿಲ ಬ್ಲೌಸು, ಮುಂಬಾಗಿದ ನಡಿಗೆ

ಕಟ್ಟಿದ ಕೈ, ಪುಸ್ತಕ ಅವಚಿದ ಎದೆ

ಸೆರಗು ವಲ್ಲಿ ದುಪಟಿ ಹಿಜಬು

ಎಕ್ಸ್‌ಎಕ್ಸ್ ಕ್ರೋಮೋಸೋಮಿನ ಠಸ್ಸೆಗಳ 

ಹತ್ತಿಕ್ಕಬೇಕು, ಒತ್ತಾಯದಿ ಮುಚ್ಚಿಡಬೇಕು

ಸೋಕಿದರೆಂದು ನೋಡಿದರೆಂದು ಕಲ್ಲಾಗಬೇಕು 

ಅವಳಿದ್ದಾಳಲ್ಲ, ನನ್ನೊಳಗಿನ ಅಹಲ್ಯೆ 

ಅವಳಿರುವ ತನಕ ಕಣ್ಕಟ್ಟು ನಿಲುವುದಿಲ್ಲ.


ಬಯಲಲಿ ಅವ ಎಳೆದಿದ್ದಷ್ಟೇ ಅಲ್ಲ

ಕಣ್ಣಲೇ ಇದೆ ಅದೃಶ್ಯ ಲಕ್ಷ್ಮಣರೇಖೆ

ಕನಸಿನಲೂ ದಾಟಬಾರದ ರೇಖೆ

ಯೋಚನೆಯಲೂ ಮೀರಬಾರದ ರೇಖೆ

ಆಡುವಲ್ಲಿ ಹಾಡುವಲ್ಲಿ ಹಂಬಲಿಸುವಲ್ಲಿ

ಕೈಯಾರ ಎಳಕೊಂಡ ಸಾವಿರದ ರೇಖೆ 

ಅವಳಿದ್ದಾಳಲ್ಲ, ನನ್ನೊಳಗಿನ ಸೀತಾಮಾತೆ

ಅವಳಿರುವ ತನಕ ಈ ಗೆರೆಗೆ ಅಳಿವು ಇಲ್ಲ.


ಸಾವಿತ್ರಿ, ಸೀತೆ, ಅಹಲ್ಯೆ ..

ಸಂತೆಯಲಿದ್ದೂ ಒಂಟಿಯಾದಾಗ ಹುಟ್ಟಿದವರು

ನಗ್ನತೆಯಲೂ ಲಜ್ಜೆಯುದಿಸಿ ಬೆಳೆದು ನಿಂತರು


ಅನು, 

ದೈವತ್ವದ ದುಗುಡಕ್ಕೆ ಹೊಂದಿಕೊಳ್ಳುವ ಮೊದಲು

ನಿನ್ನೆದೆಯ ಗುಡಿಗಳ ಕೆಡವಿ ಹಾಕು 

ನಿನ್ನೊಳಗಿನ ದೇವತೆಯರ ಸುಲಿದು ಹಾಕು 

ಅವರ ಮನುಷ್ಯರಾಗಿಸು ನೀ ಮಾನವಿಯಾಗು

(Art: KrishNa GiLiyar)

2 comments:

  1. ಮನೆಯೆಂಬುದು ಪಾರದರ್ಶಕ ಜೈಲು ಎನ್ನುವುದು ಅದೆಷ್ಟು ನಿಜ! ಎಂಥ ರೂಪಕ! ಇದು ಎಲ್ಲರಿಗೂ ಅನಿಸಬಹುದು. ಬದುಕು ಎಷ್ಟು ವಿಚಿತ್ರ! ಅರ್ಥವಾಗುವದೇ ಇಲ್ಲ. ಬೆನ್ನಿಗಂಟಿದ ಇತಿಹಾಸವನು ಕಳಚುವುದೆಂದರೆ, ಚರ್ಮವನೇ ಕಿತ್ತುಕೊಂಡು ನೋವು ತಿನ್ನಬೇಕು...ಜೀವ ಹೋದರೂ ಹೋದೀತು!

    ReplyDelete
  2. Seete gere daatidalallave? Bahusha e pattiyalli seruvudilla...

    ReplyDelete