ಮುಂಜಾನೆ ಮುಸ್ಸಂಜೆ
ಅಮ್ಮನ ಅನುದಿನದ ಸಲಹೆ
‘ದೇವ್ರಿಗೊಂದ್ ದೀಪನಾರು ಹಚ್ಚೆ’
ಎನ್ನುವುದು.
ಸೋತೆನೆಂದುಕೊಳ್ಳದಿರಲಿ ಹೆತ್ತೊಡಲು ಎಂದು
ತುಪ್ಪದ ದೀಪ ಹಚ್ಚಿಟ್ಟು ಬಂದೆ ಅಂದು.
ಹಾಸಿಗೆ ಹಿಡಿದರೂ ಸೀತಮ್ಮನ ಮಗಳು
ಬಲೇ ಸೂಕ್ಷ್ಮದ ಮೂಗಿನವಳು
ಎಂದೋ ಕಾಸಿಟ್ಟ ತುಪ್ಪದ ಜಂಬು
ಗುಂ ಎಂದು ಮನೆಯೆಲ್ಲ ಪಸರಿಸಲು
ಮೆಲುವಾಗಿ ಕರೆದಳು:
‘ಇದೆಂತ ತುಪ್ಪನೇ ಇದು? ಯಾವಾಗಿಂದು?
ಪಾಪ, ಅದು ಆ ದೇವರೆಂಬೋದು
ಗೂಡೊಳಗಿಟ್ಟ ಮೂರ್ತಿಯಾದರೇನು
ಕೂತಿರುತ್ತೆ ಕಣೆ ನೆಲದ ಪರಿಮಳಕೆ ಕಾದು.
ಮಕ್ಕಳಿಗೆ ಕಮಟು ತುಪ್ಪ ಬಡಿಸ್ತೀಯಾ?
ಜಂಬು ತುಪ್ಪದ ದೀಪ ಯಾಕೆ ಹಚ್ತೀಯ?
ದೀಪ ಹಚ್ಚಿ ಕಮಟು ನಾತ ಹರಡಕ್ಕಿಂತ
ಬೆಳಕೇ ಇಲ್ದ ಶುದ್ಧ ಕತ್ತಲೆನೇ ಇರಲಿ ತಗ
ಮರೆತೇ ಬಿಟ್ಯಾ ತುಪ್ಪ ಕಾಸೋ ಹದ?’
ಕಲಿತ ಹದ ಹೇಗೆ ಮರೆಯಲಿ ಅಮ್ಮಾ?
ಹದಿ ಬರುವಂತೆ ಹಾಲು ಕಾಸಿ
ಉಗುರು ಬೆಚ್ಚಗಿರುವಾಗ ಹೆಪ್ಪು ಹಾಕಿ
ಮೊಸರು ಸಿಹಿಯಿರುವಾಗಲೇ ಕಡೆದು
ಹೆಚ್ಚಿಲ್ಲ ಕಮ್ಮಿಯಿಲ್ಲ
ಕಡೆಗೋಲ ಅಂಡೆಗೆ ಹೆಪ್ಪಳಿಕೆ ಬೆಣ್ಣೆ
ತಾಗಬೇಕು, ತಾಗಿಯೂ ಅಂಟದಂತಿರಬೇಕು
ಅಕಾ ಆಗ ತೇಲುವ ನವನೀತವ
ನೀರಲದ್ದಿ ತಂಪಾಗಿಸಿಕೊಂಡ
ಒದ್ದೆ ಕೈಗಳಲ್ಲಿ ಉಂಡೆ ಕಟ್ಟಿ ಹಿಂಡಿ
ಒಳಗಣ ಮಜ್ಜಿಗೆ ಹನಿಗಳ ದಬ್ಬಿ
ನೀರಲಿ ಮುಳುಗಿಸಿಡಬೇಕು
ದಿನಕ್ಕೊಮ್ಮೆ ನೀರು ಬದಲಿಸುತ್ತಾ
ದಿನದಿನದ ಬೆಣ್ಣೆ ಸೇರಿಸುತ್ತಾ
ವಾರಕೊಮ್ಮೆ ಕುದಿಸಿ, ಕಾಯಿಸಬೇಕು.
ಬಂಗಾರ ಬಣ್ಣ ಕೊತಗುಟ್ಟಿ
ಚೊರಚೊರ ಸದ್ದು ನಿಂತು
ಘಮ್ಮೆನುವ ಪರಿಮಳ ಮನೆ ತುಂಬಿದಾಗ
ಚಣ ತಡೆದು ಚರಟವುಳಿಸಿ ಸೋಸಬೇಕು
ಮರೆತಿಲ್ಲ ಮಹರಾಯ್ತಿ ಹದದ ಪಾಠ
ಸವುಡಿಲ್ಲ ಅಷ್ಟೇ ಯಾವುದಕ್ಕೂ ಈಗ
‘ಶ್, ಇಲ್ಬಾ..’
ಮಗಳು ಕರೆಯುತ್ತಿದ್ದಾಳೆ
‘ಮಾಮ್, ನೀನಿದ್ದರೂ ನಿನ್ನ ಭಕ್ತಿ ಬದಲಾದ ಹಾಗೆ
ಬೆಳಕು ಇದೆ, ಈಗ ದೀಪ ಬದಲಾಗಿದೆ.
ಅಪ್‌ಡೇಟಾಗು, ಕಾಲ ಓಡುತ್ತಲಿದೆ
ಬಿಟ್ಟಾಕು ಅಜ್ಜಿಯ ಇಂಪ್ರಾಕ್ಟಿಕಲ್ ಮೀಮಾಂಸೆ
ಹಚ್ಚು, ಪರಿಮಳ ಜಂಬಿರದ ಮೇಣದ ಹಣತೆ
ಇಲೆಕ್ಟ್ರಿಕ್ ಲೈಟು ಬೇಕೆಂದಷ್ಟು ಬೇಕೆಂದಲ್ಲಿ ಉರಿಯುತ್ತೆ
‘ನಾನೇ ಕಾಸಿದ ಘಮ್ಮನೆ ತುಪ್ಪದ ದೀಪ’ ಎಂದೇಕೆ
ದೇವರೆದುರು ತೋರುವಿರಿ ಅಹಮು?
ಕಡೆದು ಕಾಸಿ ಸೋಸಿ ಹದವೆಂದೇಕೆ ವೇಸ್ಟು ಟೈಮು?
ಈಸಿ, ಇಕೋ ಫ್ರೆಂಡ್ಲಿ ಆಗಿರಬೇಕಾದ ಜಮಾನ ಇದು’
ಅತ್ತ ಅಮ್ಮ ಹೇಳುತ್ತಲೇ ಇದ್ದಳು,
‘ದೀಪವೆಂದರೆ ಏನೆಂದುಕೊಂಡೆಯೆ?
ಬತ್ತಿ ಸುಡಬೇಕು ತುಪ್ಪ ಆವಿಯಾಗಬೇಕು
ಬೆಂಕಿಯುರಿದರಷ್ಟೇ ಬೆಳಕು
ಇಂಗಿ ಆವಿಯಾದರಷ್ಟೇ ಘಮಲು
ಲಯವಾದರಷ್ಟೇ ಹುಟ್ಟೀತು ಹೊಸತು’
ಮುಸ್ಸಂಜೆಯ ಮನೆ
ಒಳಕೋಣೆಯಲಿ ಅಮ್ಮ
ಪಡಸಾಲೆಯಲಿ ಮಗಳು
ಹೊಸಿಲು ದಾಟಿದ ಮಿಂಚುಹುಳು
ಮಿನುಮಿನುಗಿ ಸುಳಿಸುಳಿದು
ನಡುಮನೆಯ ಬುದ್ಧನ
ಹೆಗಲ ಮೇಲೆ ಕುಳಿತುಕೊಂಡಿತು.
ಕೋಟ್ಯಂತರ ಕವಲುಗಳ ಮನುಕುಲದ ದಾರಿ ಒಂದೇ ಇರಲು ಸಾಧ್ಯವೇ? ಹಿಂದು ಮುಂದಿನ ನಡುವೆ ಇಂದಿನದೊಂದು ನಡುದಾರಿಯ ಕವಲು, ಕಡಿದುಹೋಗದಂತೆ ಮೈತ್ರಿಯಲಿ ಕವಲುಗಳ ಬೆಸೆದು, ಬೇರೆಯೇ ಆದ ನಡುದಾರಿಯಲಿ ನಡೆದು ಮನುಕುಲವು ಹರಡಿ ಬೆಳೆವುದು ಬಹುಶಃ ಎಲ್ಲ ಬುದ್ಧರ ದಾರಿ ಅಲ್ವಾ?
ReplyDeleteNimma kavi hrudaya mattu kaavya kaushalavannu anandiside.
ReplyDeleteಸೂಪರ್ ಅರ್ಥಪೂರ್ಣ ಕವನ.
ReplyDeleteಅಮ್ಮನ ಮಾತು ಮಗಳಿಗೆ ಹಿತ.
ಮಗಳಿಗೆ ಅವಳ ಮಗಳ ಅಪ್‌ಡೇಟ್ ಆಗೋ ಸಲಹೆಯೂ ಸರಿಯೇ.
ಕಾಲಾಯ ತಸ್ಮೈ ನಮಃ.