ಗೆಳತಿ,
ಪ್ರಶ್ನೆ ತುಂಡರಿವೆಯದಲ್ಲ,
ಹೊಟ್ಟೆಯಲೂ ಹೆಣ್ಣನೊಲ್ಲದು
ಗಂಡು ಗರುವದ ಲೋಕ
ಹೆಣ್ಣವಳು ಅಹುದಹುದು ಎನಬೇಕು
ತಲೆತಗ್ಗಿಸಿ ನೆಲ ನೋಡಿ ನಡೆಯಬೇಕು
ಒತ್ತಿದರೆ ಕುಗ್ಗಿ, ಸಂದಿಯಲಷ್ಟು ನುಸುಳಿ
ಇಟ್ಟಲ್ಲಿ ಇಟ್ಟಂತೆ ಸುಮ್ಮಗಿರಬೇಕು
ಒಲ್ಲೆ, ಬಲ್ಲೆ ಎನುವುದೇ ಅಪರಾಧ
ಏಕೆಂದಿರೋ, ಮುಗಿಯಿತು ಮಾನಸನ್ಮಾನ
ಲೋಕ ಕಾದಿದೆ ಎಳೆಯಲು ಸರಹದ್ದು
ಏನಚ್ಚರಿ, ತುಂಡರಿವೆಯ ನೆಪ ಹಿಡಿದು
ರಪ್ಪೆಂದು ದರವಾಜ ಮುಚ್ಚಿಕೊಳುವುದು?
ಎಲ್ಲೆಂದರಲಿ ಎದ್ದು ನಿಂತಿವೆ ಬೇಲಿ
ಮತವೆಂಬ ಬೇಲಿ ಪಂಥವೆಂಬ ಬೇಲಿ
ಕುಟುಂಬಮರ್ಯಾದೆಯೆಂಬ ಎತ್ತರದ ಬೇಲಿ
ಹೆಣ್ಣ ಪಳಗಿಸಲು ಏಸೊಂದು ಚಾಟಿ!?
ಬೇಲಿಯೊಳ ಹಿಸುಕಲು ನೂರು ದಾರಿ
ಗೆಳತಿ,
ಬಳ್ಳಿ ಹಬ್ಬದಿರದು ಬೇಲಿ ಕಟ್ಟಿದರೆಂದು
ಬಣ್ಣಬಾವುಟಗಳು ನಮಗಲ್ಲ, ಬಿಸುಡು
ಇಂದವರು ತಂದು ಹೊದಿಸಿದ ಕುರುಹು
ಪ್ರೀತಿಯದಲ್ಲ, ಕೈಕೋಳ ಉರುಳು, ಹುಶಾರು!
ಶಾಲು, ಮುಸುಕು, ಪರದೆ ಸರಿಸಿ
ಬೆಳಕ ನೋಡಬನ್ನಿ ಗೆಳತಿಯರೇ,
ಕುರುಹಿನ ಅರಿವೆಗಳ ಒಲ್ಲೆ ಎನ್ನಿ
ಶಾಲು ಪರದೆ ಪಟ್ಟಿಗಳ ಕಿತ್ತೆಸೆದು ಬನ್ನಿ
ರಬಿಯಾ ಲಲ್ಲಾ ಅಕ್ಕ ಬೆಳಕೆನ್ನುವ ಬನ್ನಿ
ಬನ್ನಿರೇ ದಾಟೋಣ ಬಣ್ಣಗಳ ಬೇಲಿ
ಬನ್ನಿರೇ ಮೀರೋಣ ಮತಪಂಥದ ಗಡಿ
ಬನ್ನಿರೇ ಕೈ ಹಿಡಿದು ನಿಲುವ ಸರಹದ್ದಿನಲಿ
ಕಾದಿವೆ ಬಯಲಲಿ ಸಾವಿರದ ಕೈಯಿ
ಹಂಬಲದ ತೋಳಗಲಿಸಿ ಅದೋ ಅಲ್ಲಿ
ಬನ್ನಿರೇ, ಮೈತ್ರಿಹೂ ಅರಳಲಿ ನಮ್ಮೊಳಗೆ
ಬಟ್ಟೆಯೊಡಲೊಳಗೇ ನೇಯ್ದ ಚಿತ್ರದಂತೆ
ಅಳಿದರೂ ಉಳಿದರೂ ಒಡನೆಯೇ ಎನುವಂತೆ
ಎಚ್. ಎಸ್. ಅನುಪಮಾ
ಕಲೆ: ಡಾ. ಕೃಷ್ಣ ಗಿಳಿಯಾರ್
ಅರ್ಥಪೂರ್ಣ ಕವಿತೆ, ವಾಸ್ತವಕ್ಕೆ ಕನ್ನಡಿ ಹಿಡಿದಂತ ಕವಿತೆ
ReplyDeleteಚೆನ್ನಾಗಿದೆ.ಹೆಣ್ಣು ಮಕ್ಕಳಿಗೆ
ReplyDeleteಪ್ರಸ್ತುತದ ಸಂದರ್ಭಕ್ಕೆ ಯೋಗ್ಯ ಕರೆ.
ಮತ ಪಂಥವೆಂಬ ಬೇಲಿಯ ಮುರಿಯಬೇಕಿದೆ ಹೆಣ್ಣು ಜೀವಗಳು. ಹೊದಿಸಿರುವ ಸಂಕೋಲೆಯ ಕುರುಹು ಒದ್ದಿ ಹೊರಬೇಕಿದೆ.
ReplyDeleteಆಪ್ತ ಬರಹ.💞💐🙏
ಸಶಕ್ತ ಅರ್ಥಪೂರ್ಣ ರಚನೆ, ಅಭಿನಂದನೆ
ReplyDeleteಮತಪಂಥದ ಬೇಲಿಯಲಿ ಬಂಧಿತಳು ಹೆಣ್ಣು
ReplyDeleteಬಟ್ಟೆಯಲಿ ಬಂಧಿಸಿ ಉಸಿರು ಕಟ್ಟಿಸಿದರು
ಹೆಣ್ಣು ನೀನೆಂದು ಹೆಣವಾಗಿರು ಎಂದು
ಬಟ್ಟೆ ಬೇಲಿಯಾಗಿ ಕೊರಳಕುಣಿಕೆಯಾಗಿ
ಬೀದಿಗೆ ಬಂದರೂ ಬಟ್ಟೆಪಂಜರದಿ ಬಂಧತಳಾಗಿ..
ಬದಲಾವಣಿ ಜಗದ ನಿಯಮ ಆದರದು ನಿಧಾನವಾಗಿ ನಡೆಯುವ ಕಾಲನ ಪ್ರಕ್ರಿಯೆ. ಕಾವ್ಯದ ಆಶಯ ಇಂದಿನ ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಅನಿವಾರ್ಯ, ಬದಲಾವಣಿಯ ಮುನ್ನೋಟ. ಕಾವ್ಯ ಅರ್ಥಪೂರ್ಣವಾಗಿದೆ.
Deleteತುಂಬಾ ಅರ್ಥಪೂರ್ಣವಾದ ಕವಿತೆ 👌👌🤝🤝
ReplyDeleteತುಂಬಾ ಚೆನ್ನಾಗಿದೆ ಮೇಡಂ ಹೆಣ್ಣೊಡಲ ಮಾತು.
ReplyDeleteಬೆಳಕಿನತ್ತ ಒಂದಾಗಿ ಸಾಗಲು ಅರ್ಥಪೂರ್ಣ ಕರೆ ಅದಕೊಪ್ಪುವ ಸುಂದರ ಚಿತ್ರಗಳು.ಅಭಿನಂದನೆಗಳು. ಕುಟುಂಬ ಸಮಾಜ ಸಂಸ್ಕ್ರುತಿ ಧರ್ಮಗಳ ಬೇಲಿಗಳ ಜೊತೆಗೆ ದುಷ್ಟರಾಜಕಾರಣದ ಮುಳ್ಳಿನಬೇಲಿಯಮೇಲೆ ನಲಗುವ ಬಳ್ಳಿಯ ಮೇಲೆ ಹೂವೆಂದರಳುವುದೋ!
ReplyDeleteಸಿಲುಕದಿರಿ ಮತವೆಂಬ ಮೋಹದ ಅಜ್ಞಾನಕ್ಕೆ,ಆ ಮತದ ಈ ಮತದ,ಹಳೆ ಮತದ ಸಹವಾಸ ಸಾಕಿನ್ನು ಸೇರೀರೈ ಮನುಜ ಮತಕ್ಕೆ ವಿಶ್ವಪಥಕ್ಕೆ ಎನ್ನುವ ನಿಮ್ಮ ಕವಿತೆ ಅರ್ಥಪೂರ್ಣವಾಗಿದೆ ಮೇಡಂ..
ReplyDeleteದೇಶವೆಂದರೆ -
ಮತವಲ್ಲ- ಮಾನವೀಯತೆ
ಸಮರವಲ್ಲ - ಸಾಮರಸ್ಯ
ಗಡಿ ಬಟ್ಟೆ ಬಾವುಟವಲ್ಲ- ಸೋದರತೆ,ಭಾವೈಕ್ಯತೆ ಮತ್ತೆ
ದೇಶವೆಂದರೆ ದ್ವೇಷವಲ್ಲ - ಪ್ರೀತಿ...
ಇದನ್ನು ನಾವು ಯುವಜನರು ಅರಿತುಕೊಳ್ಳಬೇಕು..
ಪ್ರಸ್ತುತ ಸಂದರ್ಭದಲ್ಲಿ ವಾಸ್ತವಕ್ಕೆ ಕನ್ನಡಿಯನ್ನು ಹಿಡಿದು ಇರುವಂತಹ ಮಿಥ್ಯೆಯನ್ನು ಮುರಿಯಬೇಕಿದೆ ಎನ್ನುವುದನ್ನ ಸಾರುತ್ತಿವೆ ಈ ಸಾಲುಗಳು
ReplyDeleteಹೌದು ಸತ್ಯವನು ತೆರೆದಿಡುವ ಕವನ,ಬೇಲಿಗಳ ದಾಟಲು ನಾವು ಒಗ್ಗೂಡಬೇಕಿದೆ
ReplyDeleteಈ ಸಂದರ್ಭಕ್ಕೆ ಅಗತ್ಯವಾದ ಪದ್ಯ
ReplyDeleteಆಹಾ! ಮಾರ್ಮಿಕವಾಗಿದೆ. ' ಬೇಲಿ ಕಟ್ಟಿದರೆಂದು ಬಳ್ಳಿ ಹಬ್ಬದಿರಬಹುದೇ? ' ಗೆರೆಗಳು ಬಹಳ ಇಷ್ಟವಾಯಿತು. ಇಡೀ ಹೆಣ್ಣುಕುಲದ ಶಕ್ತಿಯನ್ನು ಹೇಳುತಿದೆ. ಚಿತ್ರವೂ ಕವನಕ್ಕೆ ಪೂರಕವಾಗಿದೆ.
ReplyDeleteಮಾರ್ಮಿಕ ಕವಿತೆ
ReplyDeleteಕವನ ಸೊಗಸಾಗಿದೆ.ತಣ್ಣನೆಯ ತೀಕ್ಷ್ಣ ಅಭಿವ್ಯಕ್ತಿ.
ReplyDeleteಏನೂ ಅರ್ಥ ಆಗಲ್ಲ. ಕೆಳಗೆ ಸಾರಾಂಶ ಬರೆಯಿರಿ. ಹೇಳಬೇಕಾದ್ದನ್ನು ನೇರವಾಗಿ ಎರಡು ಮೂರು ಸರಳ ವಾಕ್ಯಗಳಲ್ಲಿ ಹೇಳಿ. ಗೋಜಲು ಮಾಡುವುದು ಬೇಡ.
ReplyDeleteಸಶಕ್ತ ಅರ್ಥಪೂರ್ಣ ಕವಿತೆ. ಚಿತ್ರವೂ ಪೂರಕವಾಗಿದ್ದು ಚೆನ್ನಾಗಿದೆ.
ReplyDeleteರಾಮಚಂದ್ರ ಉ ಮಹಾಲೆ
ಅರ್ಥಪೂರ್ಣ ಸಾಲುಗಳು... ವಾಸ್ತವದ ಪರಿಸ್ಥಿತಿಯ ಚಿತ್ರಣ ಈ ಕವಿತೆಯಲ್ಲಿದೆ.ತುಂಬಾ ಚೆನ್ನಾಗಿದೆ.
ReplyDeleteನಿಜ ಮೇಡಂ, ಕವಿತೆ ಹೇಳಬೇಕಾದ್ದನ್ನು, ಹೇಳಲೇಬೇಕಾದ್ದನ್ನು ಮುಷ್ಟಿಗ್ರಾಹ್ಯವಾಗಿಸಿದೆ. ಧನ್ಯವಾದಗಳು.
ReplyDeleteಕುವೆಂಪು ಇಂದಿಗೆ ಬಹಳ ಅನಿವಾರ್ಯವಾಗಿ, ಅಗತ್ಯವಾಗಿ ಮತ್ತು ಆಪ್ಯಾಯಮಾನರಾಗಿ ಮತ್ತೆ ಮತ್ತೆ ಎದುರಾಗುತ್ತಾರೆ.
ಗುಡಿ ಚರ್ಚು ಮಸೀದಿಗಳ ತ್ಯಜಿಸುವಂತೆ ಅವರು ನೀಡಿದ ಕರೆಯನ್ನು ಸ್ವೀಕರಿಸಿದೆ ಬೇರೆ ಗತಿಯಿಲ್ಲವೆಂದು ಎಲ್ಲರೂ ಅರಿಯಬೇಕಾದ ತುರ್ತು ಇದೆ.
ಹೆಣ್ಣೊಡಲ ಮಿಡಿತದ ಅದ್ಭುತ ಕವಿತೆ!!👌...
ReplyDeleteಮಹಿಳೆಯರಲ್ಲಿ ಸ್ವಾತಂತ್ರ್ಯ ಮತ್ತು ಸಂಕೋಲೆ ಇವುಗಳ ಅರ್ಧ ವಿರುದ್ಧವಾಗಿ ಬಳಕೆಯಾದುದರ ದುರಂತ ಶಾಲು ಮತ್ತು ಪರದೆ ಗಳ ಪರದಾಟ!
ಹೃದ್ಯ ಕವಿತೆ..
ReplyDeleteVery nice and apt for today's world..
ReplyDeleteಮಹಿಳೆಯಂಬ ಗಿಡದ ಬೆರಿನ ಒಳ ಚಿಗುರು, ಹೊರ ಬರಲು ತುದಿಗಾಲಲ್ಲಿ ನಿಂತಿರುವ ಸಂದೇಶ. (ಚನ್ನಾಗಿದೆ ಮೇಡಂ)
ReplyDeleteಅರ್ಥಪೂರ್ಣ ಕವಿತೆ. ತಾಯ್ತನದ ದನಿ. ನಾಳಿನ ಬೆಳಗಿಗೆ ತೆರೆವ ಆಶಾವಾದದ ಬಾಗಿಲು. ಪದ್ಯವೆಂದರೆ ಹೀಗೆ... ಹಲವು ಸಾಧ್ಯತೆಗಳನ್ನು ಎದುರಿಡುವ ಬಗೆ.
ReplyDeleteSOOPER
ReplyDeleteನಮ್ಮ ನಮ್ಮಂಥವರದೇ ತಳಮಳದ ಲೋಕವಿದೆ ಕವಿತೆಯಲ್ಲಿ, ವ್ಯವಸ್ಥೆಯ ಕೊರಳಪಟ್ಟಿ ಹಿಡಿದು ಕೇಳಬೇಕಾದ ಪ್ರಶ್ನೆಗಳು ಅನೇಕ.. ಒಳ್ಳೆಯ ಅನುಭೂತಿ ನೀಡುವ ಪದ್ಯ ಅನುಪಮಾ.
ReplyDelete-ಸುನಂದಾ ಕಡಮೆ