Thursday, 3 February 2022

ಖಲೀಲ್ ಗಿಬ್ರಾನ್ ಕವಿತೆಗಳು



ಗಿಬ್ರಾನ್ ಖಲೀಲ್ ಗಿಬ್ರಾನ್ (1883-1931) ಉತ್ತರ ಲೆಬನಾನಿನಲ್ಲಿ ಹುಟ್ಟಿದವ. ನಂತರ ತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿಯೇ ಕೊನೆಯುಸಿರೆಳೆದ ತತ್ವಜ್ಞಾನಿ, ದಾರ್ಶನಿಕ ಕವಿ. ಉತ್ತರ ಲೆಬನಾನಿನ ಸುಂದರ ಬೆಟ್ಟ ಪರ್ವತ ಕಣಿವೆಗಳ ನಡುವೆ ಬೆಳೆದ ಗಿಬ್ರಾನ್ ತನ್ನ ನೆಲದ ಆಂತರಿಕ ಬಿಕ್ಕಟ್ಟುಗಳ ಕಾರಣದಿಂದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು ಕಡಿಮೆ. ಧಾರ್ಮಿಕ ಪಠ್ಯ ಅಧ್ಯಯನ ನಡೆಸಿದನಾದರೂ ತನ್ನ ಸುತ್ತಮುತ್ತಲ ಪರಿಸರ ಹಾಗೂ ಜನರಿಂದ ಪ್ರಭಾವಿತನಾದದ್ದೇ ಹೆಚ್ಚು. ಆತನೊಬ್ಬ ಅನನ್ಯ ಕಲಾವಿದನೂ ಹೌದು. 1923ರಲ್ಲಿ ಪ್ರಕಟವಾದ ‘ದಿ ಪ್ರಾಫೆಟ್’ನಿಂದ ಇಂಗಿಷ್ ಸಾಹಿತ್ಯಿಕ ವಲಯದಲ್ಲಿ ಅಪಾರ ಮನ್ನಣೆ ಪಡೆದ ಗಿಬ್ರಾನ್, ಶೇಕ್ಸ್‌ಪಿಯರ್ ಮತ್ತು ಲಾವೋತ್ಸೆ ನಂತರ ಅತಿ ಹೆಚ್ಚು ಓದಲ್ಪಟ್ಟ ಕವಿಯಾಗಿದ್ದಾನೆ. ಕಾವ್ಯ ಮತ್ತು ಕಥನಗಳನ್ನು ಮಿಶ್ರಣ ಮಾಡಿ ಪ್ರಬಂಧಗಳಂತೆ ಬರೆದ ಅವನ ಬರಹಗಳು ಯಾವ ಪ್ರಕಾರವೆಂದು ನಿಶ್ಚಿತವಾಗಿ ಹೇಳಲು ಕಷ್ಟವಾದರೂ ಜಗತ್ತಿನ ಅತಿ ಹೆಚ್ಚು ಅನುವಾದಗೊಂಡ ಕವಿಗಳಲ್ಲೊಬ್ಬ ಗಿಬ್ರಾನ್.  ಅವನ 2 ಕವಿತೆಗಳು ಇಲ್ಲಿವೆ: 


ಪ್ರೇಮಿಸಿ, ಹೀಗೆ

 


ಒಬ್ಬರನ್ನೊಬ್ಬರು ಪ್ರೇಮಿಸಿ ಆದರೆ ಪ್ರೇಮ ಬಂಧನವಾಗದಿರಲಿ

ಪ್ರೇಮ ನಿಮ್ಮ ಆತ್ಮಗಳ ತೀರದ ನಡುವೆ ಚಲಿಸುವ ಕಡಲಾಗಲಿ
ಒಬ್ಬರು ಮತ್ತೊಬ್ಬರ ಬಟ್ಟಲನು ತುಂಬಿ, ಆದರೆ ಒಂದೇ ಬಟ್ಟಲಿನಿಂದ ಕುಡಿಯದಿರಿ
ನಿಮ್ಮ ರೊಟ್ಟಿಯನ್ನು ಪರಸ್ಪರ ಕೊಟ್ಟುಕೊಳ್ಳಿ ಆದರೆ ಒಂದೇ ತುಂಡಿಗೆ ಕೈಹಾಕದಿರಿ

ಒಟ್ಟಿಗೇ ಹಾಡಿ, ನರ್ತಿಸಿ, ಖುಷಿಯಿಂದಿರಿ, ಆದರೆ ಇಬ್ಬರೂ ಒಂಟಿಯಾಗಿರಲು ಬಿಡಿ
ಒಂದೇ ಹಾಡಿಗೆ ಏಕಕಾಲಕ್ಕೆ ಮಿಡಿದರೂ ಒಂಟಿಯಾಗಿರುವಂತೆ ವೀಣೆಯ ತಂತಿ

ಹೃದಯಗಳ ಪರಸ್ಪರ ಕೊಟ್ಟುಕೊಳ್ಳಿ, ಆದರೆ ಕೊಟ್ಟವರ ಆರೈಕೆಯಲ್ಲಿ ಬದುಕದಿರಿ
ಏಕೆಂದರೆ ಬದುಕಿನ ಹಸ್ತ ಮಾತ್ರ ನಿಮ್ಮ ಹೃದಯವನ್ನು ಒಳಗೊಳ್ಳಬಲ್ಲದು

ಒಟ್ಟಿಗೇ ನಿಂತುಕೊಳ್ಳಿ, ಆದರೆ ನಿಲ್ಲದಿರಿ ತೀರಾ ಹತ್ತಿರ ಒಟ್ಟೊಟ್ಟಿಗೆ
ಏಕೆಂದರೆ ದೇವಾಲಯದ ಕಂಬಗಳು ದೂರದೂರವೇ ನಿಂತಿರುತ್ತವೆ
ಓಕ್ ಮತ್ತು ಸೈಪ್ರಸ್ ವೃಕ್ಷಗಳು ಬೆಳೆಯಲಾರವು ಪರಸ್ಪರರ ನೆರಳಿನೊಳಗೆ


ನಿನ್ನ ನೋವು




ನಿನ್ನ ನೋವು ನಿನ್ನರಿವ ಆವರಿಸಿದ ಚಿಪ್ಪು
ಒಡೆಯುವುದೇ ಆಗಿದೆ

ಕರಟ ಒಡೆದ ಹಣ್ಣಿನ ತಿರುಳು ಬಿಸಿಲಲ್ಲಿ ಒಣಗಬೇಕಿರುವಂತೆ
ನಿನ್ನ ನೋವನ್ನೂ ನೀನು ತಿಳಿಯಲೇಬೇಕಿದೆ

ದಿನನಿತ್ಯದ ಪವಾಡಗಳು ನಿನ್ನಲ್ಲಿ 
ಅಚ್ಚರಿ ಹುಟ್ಟಿಸಬಲ್ಲವಾದರೆ
ನಿನ್ನ ನೋವು ಖುಷಿಗಿಂತ ಕಡಿಮೆ ಪವಾಡವಾಗಿರಲಾರದು

ಈ ನೆಲದ ಋತುಗಳು ಬದಲಾಗುವಂತೆಯೇ
ನಿನ್ನೆದೆಯ ಋತುಗಳು ಬದಲಾಗುವುದನ್ನೂ ನೀನು ಒಪ್ಪಬೇಕು

ನಿನ್ನ ನೋವಿನ ಮಾಗಿ ಕಾಲವನ್ನು
ನಿರುದ್ವಿಗ್ನವಾಗಿ ನೋಡಬೇಕು

ನಿನ್ನ ನೋವು ನಿನ್ನ ಆಯ್ಕೆಯೇ ಆಗಿದೆ
ಅಸ್ವಸ್ಥ ಆತ್ಮವನ್ನು ಗುಣಪಡಿಸಲು ನಿನ್ನೊಳಗಿನ ವೈದ್ಯ
ಕುಡಿಸುವ ಕಹಿ ಕಷಾಯವೇ ಆಗಿದೆ

ಎಂದೇ, ವೈದ್ಯರಲ್ಲಿ ವಿಶ್ವಾಸವಿಡು
ಮೌನವಾಗಿ, ಶಾಂತವಾಗಿ ಔಷಧಿಯನ್ನು ಸೇವಿಸು
ಆ ಕೈಗಳು ಗಡುಸಾಗಿ ಭಾರವಾಗಿದ್ದರೂ
ಅದೃಶ್ಯ ಮೃದು ಹಸ್ತಗಳಿಂದ ನಿರ್ದೇಶಿಸಲ್ಪಟ್ಟಿವೆ
ವೈದ್ಯ ತರುವ ಬಟ್ಟಲು ನಿನ್ನ ತುಟಿಗಳ ಸುಟ್ಟರೂ
ಕುಂಬಾರನ ಪವಿತ್ರ ಕಣ್ಣೀರಿನಿಂದ ತೊಯ್ದ
ಮಣ್ಣಿನಿಂದ ಮಾಡಲ್ಪಟ್ಟಿವೆ



ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ
ಕಲೆ: ಡಾ. ಕೃಷ್ಣ ಗಿಳಿಯಾರ್

4 comments:

  1. ಗೆಳೆಯ ಗಿಬ್ರಾನ್ ಅವರಿಗೂ ಪ್ರೀತಿಯ ಧನ್ಯವಾದಗಳು,
    ಗೆಳತಿ ಅನುಪಮಾ ಅವರಿಗೂ ಪ್ರೀತಿಯ ಧನ್ಯವಾದಗಳು,
    ಗೆಳೆಯ ಗಿಳಿಯಾರ್ ಅವರಿಗೂ ಪ್ರೀತಿಯ ಧನ್ಯವಾದಗಳು
    ತುಂಬಾ ಚಂದ ಇದೆ...
    (ಸ್ವಾರಿ, ಸರ್ & ಮೇಡಂ ಗೆಳಯ ಗೆಳತಿ ಅಂತ ಹೇಳಿರುವೆ) ಖುಷಿ ಆಯ್ತು ಕವಿತೆ ಓದಿ.

    ReplyDelete
  2. ಚೆನ್ನಾಗಿದೆ

    ReplyDelete
  3. translation savitri sirsi
    posted by P.a kumar on Whats app
    [11:56 am, 03/02/2022] PA Kumar: ಭಯ.
    ++++

    ಕಡಲಲ್ಲಿ ಐಕ್ಯವಾಗುವ ಮುನ್ನ, ನದಿ, ಭಯದಿಂದ
    ನಡುಗುವುದಂತೆ.

    ನದಿ, ಹಿಂದಿರುಗಿ ನೋಡುತ್ತದೆ. ಪರ್ವತ ಶಿಖರ, ವಿಶಾಲ ಹಾದಿ, ಕಾಡು, ಹಳ್ಳಿ ಇತ್ಯಾದಿಗಳನ್ನು ದಾಟಿಬಂದ ತನ್ನ ಪಯಣ ನೆನೆಯುತ್ತದೆ.

    ಮುಂದಿರುವ, ಅಗಾಧ ಕಡಲು. ಅದರಲ್ಲಿ ಐಕ್ಯ ವಾಗುವುದೆಂದರೆ! ಎಂದೆಂದಿಗೂ, ಮಾಯವಾದಂತೆಯೆ.

    ಆದರೆ, ಬೇರೆ ದಾರಿಯಿಲ್ಲ.
    ನದಿಗೆ ಹಿಂದಿರುಗಿ ಹೋಗುವ ಆಯ್ಕೆಯೇ ಇಲ್ಲ. ಅಸ್ತಿತ್ವದಂತೆ, ಹಿಂದಿರುಗುವುದು ಅಸಾಧ್ಯ.

    ಗತ್ಯಂತರವೇ ಇಲ್ಲ. ನದಿ, ಸಮುದ್ರ ಸೇರಲೇಬೇಕು.
    ಭಯವನ್ನು ಮೆಟ್ಟಿನಿಲ್ಲಲೇಬೇಕು.
    ಅದೇ... ಜ್ಞಾನೋದಯವಾಗುವ ಕ್ಷಣ..
    ಶರಧಿಯಲ್ಲಿ ಕರಗಿಹೋಗುವುದಲ್ಲ
    ತಾನೇ... ಕಡಲಾಗುವುದು.

    ✍🏽 ಸಾವಿತ್ರಿ ಸಿರ್ಸಿ.

    ‌ ‌‌‌‌‌ -------
    [11:56 am, 03/02/2022] PA Kumar: ಅದೇ...
    ಜ್ಞಾನೋದಯವಾಗುವ ಕ್ಷಣ..
    ಶರಧಿಯಲ್ಲಿ
    ಕರಗಗಿಹೋಗುವುದಲ್ಲ
    ತಾನೇ.. ಕಡಲಾಗುವುದು.

    ReplyDelete
    Replies
    1. ವಾಹ್!
      ಗಿಬ್ರಾನ್ ಅಂದರೆ ಹೀಗೆ..

      Delete