Tuesday 14 November 2023

ಮನ್ನಿಸಿ ಮಕ್ಕಳೇ - Ondu Kavite. A Poem




(Images from Internet)


ಮನ್ನಿಸಿ ಮಕ್ಕಳೇ..


ಓ ಅಲ್ಲಿ,

ಎಲ್ಲಿ

ಲೋಕದ ಎಲ್ಲ ಪ್ರವಾದಿಗಳು, 

ದೇವಸುತರು, 

ದೈವಸಂದೇಶವಾಹಕರು

ಹುಟ್ಟಿದರೋ ಅಲ್ಲಿ,

ಇರುಳಾಗಸದ ಹೊಳೆಹೊಳೆವ

ಚಿಕ್ಕೆಗಳಿಗೆಲ್ಲ ಒಂದೊಂದು 

ಹೆಸರಿಟ್ಟ ಅರಬರ ನೆಲದಲ್ಲಿ 

ಇಂದು

ನಮ್ಮದೇ ಒಡಲ ಕೂಸುಗಳು

ಕುಳಿತುಬಿಟ್ಟಿವೆ ಮ್ಲಾನ ಚಿಕ್ಕೆಗಳಾಗಿ 


ನಲ್ಮೆಯ ಕಂದಮ್ಮಗಳೇ, 

ನಾವೇ ಕೈಯಾರ 

ಇಟ್ಟಿಗೆ ಮೇಲೆ ಇಟ್ಟಿಗೆಯಿಟ್ಟು

ಮನೆಯೆಂದು ಕರೆದು 

ನಿಮ್ಮ ಕರೆ ತಂದೆವು 

ಬಾಲ್ಯದ ಬೆಚ್ಚಗಿನ ಗೂಡು 

ಬಾಂಬಿನಬ್ಬರಕೆ ಭಡಭಡನುದುರಿಬಿದ್ದು 

ಧೂಳು ಕಬ್ಬಿಣದ ರಾಶಿಯಾದೀತೆಂದು

ಊಹಿಸದೇ ಹೋದೆವು 


ತೋರಿಸಬೇಕಿತ್ತು ನಿಮಗೆ

ಹುಳ ಚಿಟ್ಟೆಯಾಗುವ

ಮೊಟ್ಟೆ ಮರಿಯಾಗುವ

ಮೊಗ್ಗರಳಿ ಹೂ ಬಿರಿವ 

ನಿಸರ್ಗವೆಂಬ ವಿಸ್ಮಯವ 


ಉಣಿಸಬೇಕಿತ್ತು ನಿಮಗೆ

ಕರುಳು ತುಂಬುವಷ್ಟು

ಪ್ರೇಮದ ಬೋನ

ಕರುಣೆಯ ಹಾಲು

ಮುದ್ದಿನ ತಿನಿಸು 

ಹುಳಿಸಿಹಿ ಅರಿವಿನ ಹಣ್ಣುಗಳ..


ತೋರಿಸಬೇಕಿತ್ತು ನಿಮಗೆ

ಚಂದ್ರ ಚಿಕ್ಕೆ ಗುಡುಗು ಸಿಡಿಲಬ್ಬರ

ಮಳೆ ಇಬ್ಬನಿ ನದಿ ಬೆಟ್ಟ 

ಕಾಡು ಕಣಿವೆ ಕಡಲುಗಳ


ಮನ್ನಿಸಿ 

ಕಾಣಲೇ ಇಲ್ಲ ನಮಗೆ ಕಣ್ಣೆದುರ ಲೋಕ

ಮರೆತುಬಿಟ್ಟೆವು ಉಂಡ ರುಚಿಯ 

ಕಳಿಸಿದೆವು ಹೇಳದೇ 

ನಾವು ಕೇಳಿದ ಚಂದಮಾಮದ ಕತೆಗಳ


ಮನ್ನಿಸಿ ಮಕ್ಕಳೇ

ತೋರಿಸುತಿದ್ದೇವೆ

ಪ್ರೇಮವಿರದ ಕರುಣೆಯಿರದ

ಮನುಜರೆದೆಯ ಬೆಂಗಾಡುಗಳ

ರಕ್ತ ಕಲೆ ಹೊತ್ತ ಮುರಿದ ಗೋಡೆಗಳ

ನುಜ್ಜುಗುಜ್ಜಾದ ನಿಮ್ಮ ಪ್ರಿಯ ಬಾರ್ಬಿಗಳ

ಧೂಳು ಹೊಗೆ ಕವಿದು ಮಬ್ಬಾದ ಆಗಸವ


ಮನ್ನಿಸಿ ಮಕ್ಕಳೇ

ಮುತ್ತಿಡದೆ ವಿದಾಯ ಹೇಳುವ

ಬಾಯೊಣಗಿದರೂ ನೀರು ಹನಿಕಿಸದ

ಕೃತಕ ಬುದ್ಧಿಮತ್ತೆಯಲೂ 

ಯುದ್ಧಬುದ್ಧಿಯ ತುಂಬಿದ 

ಪಟಾಕಿ ಹೊಡೆವ ಎಳಸು ಕೈಗಳಿಗೆ

ತುಪಾಕಿ ಕೊಡುವ ಪಿಪಾಸು ಜಗಕೆ 

ಕೇಳದೇ ನಿಮ್ಮ ಕರೆತಂದದ್ದಕ್ಕೆ..


ಮನ್ನಿಸಿ ಮಕ್ಕಳೇ

ಇಟ್ಟ ಹೆಜ್ಜೆ ಗಟ್ಟಿ ನಿಲಿಸಲೊಂದು 

ಪುಟ್ಟ ಇಟ್ಟಿಗೆಯ ಸುಟ್ಟು ಕೊಡದಿದ್ದಕ್ಕೆ

ನಿಮ್ಮ ನಾಳೆಗಳ ಹೊಸಕಿ ಹಾಕಿದ್ದಕ್ಕೆ

ಗಾಯ ಹೊತ್ತು ಬಾಳಬೇಕಿರುವುದಕ್ಕೆ

ಬಂದೂಕಿನ ಸಿಡಿ ಬಾಯಿಗೆ

ಜನಮತದ ಬೀಗ ಹಾಕದೇ ಹೋದದ್ದಕ್ಕೆ..


ನೀವು ಮನ್ನಿಸಿದರೂ ನಮ್ಮ ನಾವು

ಮನ್ನಿಸಿಕೊಳ್ಳಲಾರೆವು ಮಕ್ಕಳೇ,

ಸಾಧ್ಯವಾದರೆ ಮನ್ನಿಸಿ

ಗರುಕೆಯ ನಿರ್ಭೀತ ಬದುಕನೂ

ಕಟ್ಟಿಕೊಡದ ನಮ್ಮ ಅಸಹಾಯಕತೆಯನ್ನು,

ಕ್ಷಮೆಯೆಂದರೇನೆಂದೇ ಅರಿಯದ ನಿಮ್ಮಲ್ಲಿ

ಮನ್ನಿಸಿ ಎಂದು ಕೇಳುತ್ತ

ತಪ್ಪು ಬಚ್ಚಿಡಲೆತ್ನಿಸಿರುವುದನ್ನು..


ಡಾ. ಎಚ್. ಎಸ್. ಅನುಪಮಾ

(ವರ್ಷವಿಡೀ ನಡೆದ ಯುದ್ಧ, ಸ್ಫೋಟ, ಹತ್ಯೆ, ಅಪಹರಣ, ಬಾಂಬ್ ದಾಳಿಯಿಂದ ಕುಸಿದ ಅವಶೇಷಗಳಡಿ ಅನ್ಯಾಯವಾಗಿ ಕೊನೆಯುಸಿರೆಳೆದ, ಅಂಗಾಂಗ ಛೇದನಕ್ಕೊಳಗಾದ, ಅನಾಥರಾದ ಸಾವಿರಾರು ಇಸ್ರೇಲ್, ಫೆಲೆಸ್ತೀನ್, ಉಕ್ರೇನ್, ರಷಿಯಾದ ಮಕ್ಕಳಿಗೆ.) 



5 comments:

  1. ಮನ್ನಿಸಿ ಮಕ್ಕಳೇ
    ಕನಸುವುದಕ್ಕೂ ಜಾಗ ಉಳಿಸದ್ದಕ್ಕೆ
    ಬದುಕುವುದೂ ದುಸ್ತರವಾಗುವಂಥ
    ಪರಿಸರವ ಬಿಟ್ಟುಹೋಗುತಿರುವುದಕ್ಕೆ

    ReplyDelete
  2. ಎದೆ ನಡುಗಿಸುವ ದಾರುಣತೆಗೆ ಕನ್ನಡಿ ಹಿಡಿದ ಕವಿತೆ

    ReplyDelete
  3. ಕವಿತೆ ವರ್ತಮಾನವನ್ನು ಸಂಕಲಿಸುತ್ತಿದ್ದರೂ, ಭೂತ ಭವಿಷ್ಯಗಳಲ್ಲಿ ಕಣ್ತೆರೆಯುವ ಕ್ರಮಕ್ಕೆ ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.

    ನಾವು ನಿರ್ಜೀವರಾಗುವ ಹೊತ್ತಿನಲ್ಲಿ ನಮ್ಮ ಹೆಜ್ಜೆಗಳ ಭೀಕರತೆಯನ್ನು ಅರಿಯದಾಗಿದ್ದೇವೆ.

    ಮುತ್ತಿಡದೆ ವಿದಾಯ ಹೇಳುವ

    ಬಾಯೊಣಗಿದರೂ ನೀರು ಹನಿಕಿಸದ

    ಈ ಕ್ರೂರ ಜಗಕೆ

    ಕೇಳದೇ ನಿಮ್ಮ ಕರೆತಂದದ್ದಕ್ಕೆ..

    ಕಲ್ಲಾದ ದೇವರ ಜೀವಗೊಳಿಸಲಾಗದ್ದಕ್ಕೆ..

    ಬಂದೂಕಿನ ಸಿಡಿ ಬಾಯಿಗೆ

    ಜನಮತದ ಬೀಗ ಹಾಕದೇ ಹೋದದ್ದಕ್ಕೆ..

    ಈ ಸಾಲುಗಳಂತೂ ವಿಶ್ವಕ್ಕೆ ನೀಡಿದ ಭೀಕರ ವಿನಯದಂತಿವೆ.

    ಧನ್ಯವಾದಗಳು ಮೇಡಂ
    ಡಾ. ರವಿಶಂಕರ್

    ReplyDelete
  4. 😭 ಕಣ್ಣೀರು, ವಿಷಾದದ ಛಾಯೆ... ಆವರಿಸುವುದರ ಜೊತೆಗೇ ನಮ್ಮ ಜವಾಬ್ದಾರಿಯತ್ತ ಬೆರಳಾಗಿಸುವ ಕವಿತೆ ಇದು ಮೇಡಂ.. ತೊಟ್ಟಿಕ್ಕುವ ಕಂಬನಿಯವ ಒರೆಸುತ್ತಲೇ... ಓದಬೇಕು. ಬರೆಯಬೇಕು. ಎಲ್ಲ ಬಗೆಯಲ್ಲೂ ಸಂಘಟಿತರಾಗಬೇಕು... ಗಟ್ಟಿ-ದಿಟ್ಟ ಧ್ವನಿ ಹೊರಡಿಸಬೇಕು.

    ReplyDelete