Saturday, 24 February 2024

ಎ. ಅರುಳ್ ಮೌಳಿ, ಚೆನ್ನೈ

 



ಮದರಾಸು ಉಚ್ಚ ನ್ಯಾಯಾಲಯದಲ್ಲಿ 1988ರಿಂದ ನ್ಯಾಯವಾದಿಯಾಗಿರುವ ಎ. ಅರುಳ್ ಮೌಳಿ ಖ್ಯಾತ ವಕೀಲೆ, ಮಾನವಹಕ್ಕು ಹೋರಾಟಗಾರ್ತಿ, ಬರಹಗಾರ್ತಿ ಮತ್ತು ವಾಗ್ಮಿ. ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ಹುಟ್ಟಿ ಬೆಳೆದ ಅರುಳ್, ಸಾಮಾಜಿಕ ಚಿಂತನೆಗಳ ಕೌಟುಂಬಿಕ ಹಿನ್ನೆಲೆಯವರು. ಅವರ ತಂದೆ ತಮಿಳು ಭಾಷಾ ಪಂಡಿತರು. ತಾಯಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರಿಬ್ಬರೂ ಪೆರಿಯಾರ್ ಅವರ ಕಟ್ಟಾ ಅನುಯಾಯಿಗಳು. ತಮಿಳ್ ನಾಡನ್ ಎನ್ನುವವರು ತಮಿಳಿಗೆ ಅನುವಾದಿಸಿದ್ದ ಮನುಸ್ಮೃತಿಯನ್ನು ಪ್ರಕಟಿಸಿದ್ದರು. 

1968ರಲ್ಲಿ ನಾಲ್ಕು ವರ್ಷವಾಗಿದ್ದಾಗಲೇ ಸೇಲಂನಲ್ಲಿ ನಡೆದ ದ್ರಾವಿಡ ಕಳಗಂ ಸಭೆಯಲ್ಲಿ ಪೆರಿಯಾರರ ಎದುರು ಬಾಲೆ ಅರುಳ್ ಭಾಷಣ ಮಾಡಿದ್ದರು. 1978ರ ನಂತರ, 14 ವರ್ಷ ತುಂಬಿದ ಹುಡುಗಿಯಿರುವಾಗಲಿಂದ ದ್ರಾವಿಡ ಕಳಗಂ ಸಭೆಗಳಲ್ಲಿ ಅವರು ಮಾತನಾಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲ, ಸಮಾನ ಮನಸ್ಕರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಚರ್ಚೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರಸ್ತುತ ದ್ರಾವಿಡ ಕಳಗಂ ವಕ್ತಾರರಾಗಿ ಮಾಧ್ಯಮದ ಡಿಬೇಟುಗಳಲ್ಲೂ ಪಾಲ್ಗೊಳ್ಳುವ ಅರುಳ್, ಲಿಂಗಸೂಕ್ಷ್ಮತೆ, ಸ್ತ್ರೀವಾದಿ ಚಿಂತನೆ, ದ್ರಾವಿಡ ಚಿಂತನೆಗಳ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಈಗ ದ್ರಾವಿಡ ಕಳಗಂನ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯ ಕುರಿತು ನಡೆಯುವ ಹಲವಾರು ಸಭೆ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರಗಳಿಗೂ ಇದೇ ಉದ್ದೇಶಗಳಿಗೆ ಭೇಟಿ ನೀಡಿದ್ದಾರೆ. 

ಉಚ್ಚ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ತಮಿಳಿನಲ್ಲೇ ವಾದಿಸಬಯಸುವ ಅರುಳ್, ರಿಟ್, ಸೇವಾ ವಿಷಯಗಳು, ಸಿವಿಲ್ ಮತ್ತು ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಯಾವುದೇ ಪ್ರಕರಣವು ಸಾಮಾಜಿಕವಾಗಿ ಪ್ರಮುಖವೆನಿಸಿದರೆ ಅದನ್ನು ತೆಗೆದುಕೊಂಡು ವಾದಿಸುತ್ತಾರೆ. 

ಸಮಾಜದಲ್ಲಿ ಎಲ್ಲ ತರಹದ ಅಸಮಾನತೆ ಅಳಿಯಲು, ಲಿಂಗ ಸಮಾನತೆ ನೆಲೆಯಾಗಲು, ಕಂಪ್ಯೂಟರ್ ಬಂದರೂ ಅದರಲ್ಲೂ ಜಾತಕ ನೋಡುವ ಮೌಢ್ಯ ಅಳಿಯಲು ಪೆರಿಯಾರ್ ಚಿಂತನೆಗಳು ಅತ್ಯಗತ್ಯ; ಬದುಕಿಗೆ ಬೇಕಿರುವುದು ಶಿಸ್ತೇ ಹೊರತು ಭಕ್ತಿಯಲ್ಲ ಎಂದು ನಂಬಿರುವ ಅರುಳ್ ಮೌಳಿ, ಇದೇ ಮಾರ್ಚ್ 8ರಂದು ಉಡುಪಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ‘ಮಹಿಳಾ ಚೈತನ್ಯ ದಿನ’ದ ಭಾಗವಾಗಿ ನಡೆಯಲಿರುವ ‘ಮಹಿಳಾ ಪ್ರಾತಿನಿಧ್ಯ: ಆಶಯ, ವಾಸ್ತವ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲು ಚೆನ್ನೈನಿಂದ ಬರಲಿದ್ದಾರೆ. 

ಬನ್ನಿ, ಅವರ ದನಿಗೆ ದನಿಗೂಡಿಸೋಣ.


ಸಬಾ ನಖ್ವಿ - ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

 



ಭಾರತೀಯ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಮೂರು ದಶಕಗಳಿಂದ ಸುದ್ದಿಮೂಲ ಕ್ಷೇತ್ರಕಾರ್ಯ, ಡೆಸ್ಕ್, ಮುಖ್ಯ ಚರ್ಚೆ, ಸಂವಾದಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಸಬಾ ನಖ್ವಿ ಅವರದು. ಇದುವರೆಗೆ 4 ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕಿಯೂ ಹೌದು. ಹಿರಿಯ ಪತ್ರಕರ್ತ, ಬರಹಗಾರ ಸಯೀದ್ ನಖ್ವಿ ಮತ್ತು ಅರುಣಾ ಅವರ ಮಗಳಾದ ಸಬಾ, ದೆಹಲಿಯ ಸಂತ ಸ್ಟೀಫನ್ ಕಾಲೇಜು ಮತ್ತು ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಬಳಿಕ ಪತ್ರಕರ್ತೆಯಾಗಿ ಕೆಲಸ ಆರಂಭಿಸಿ ಔಟ್‌ಲುಕ್ ನಿಯತಕಾಲಿಕದಲ್ಲಿ ಪೊಲಿಟಿಕಲ್ ಎಡಿಟರ್ ಆಗಿ 2015ರವರೆಗೆ ಕೆಲಸ ಮಾಡಿದರು. ಈಗ ಫ್ರಂಟ್‌ಲೈನ್, ದ ಹಿಂದೂ, ಟ್ರಿಬ್ಯೂನ್, ಸ್ಕ್ರೋಲ್.ಇನ್, ಟೆಲಿಗ್ರಾಫ್ ಮತ್ತಿತರ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿದ್ದಾರೆ. 

ಸಬಾ ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯಾಗಿದ್ದಾರೆ. ಇನ್ ಗುಡ್ ಫೆಯ್ತ್ (2012), ಕ್ಯಾಪಿಟಲ್ ಕಾಂಕ್ವೆಸ್ಟ್ (2015), ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ (2018), ಪಾಲಿಟಿಕ್ಸ್ ಆಫ್ ಜುಗಾಡ್: ಸ್ಯಾಫ್ರನ್ ಸ್ಟಾರ್ಮ್ (2019) ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಇನ್ ಗುಡ್ ಫೆಯ್ತ್’ ಒಬ್ಬ ಪತ್ರಕರ್ತೆಯಾಗಿ ಅವರು ಕಂಡುಕೊಂಡ ಭಾರತವಾಗಿದೆ. ಸಣ್ಣಪುಟ್ಟ ಊರುಗಳಲ್ಲಿ, ಜನಸಾಮಾನ್ಯರ ಉತ್ಸಾಹದಲ್ಲಿ, ಊರೆಲ್ಲ ಒಂದು ದೈವದ ಮೇಲಿಡುವ ವಿಶ್ವಾಸದಲ್ಲಿ ಸಹಬಾಳ್ವೆಯ, ಬಹುತ್ವದ ಭಾರತ ಇನ್ನೂ ಉಸಿರಾಡುತ್ತಿದೆ ಎಂದವರು ದಾಖಲಿಸಿದ್ದಾರೆ. ಬಂಗಾಳಿ ಮುಸ್ಲಿಮರ ಬನದೇವತೆ, ದೈವತ್ವಕ್ಕೇರಿಸಲ್ಪಟ್ಟ ಮಹಾರಾಷ್ಟ್ರದ ಶಿವಾಜಿ, ಶಿರಡಿ ಸಾಯಿಬಾಬಾರ ಮೂಲ, ಗುಡಿ-ದರ್ಗಾ ಎರಡೂ ಆಗಿರುವ ಅಸಂಖ್ಯ ತಾಣಗಳ ಒಳಹೊಕ್ಕು ಶೋಧಿಸಿರುವ ಸಬಾ, ಧಾರ್ಮಿಕ ಮೂಲಭೂತವಾದಕ್ಕೆ ಇಂತಹ ಯಾವುದೋ ಮೂಲೆಯಲ್ಲಿರುವ ಸಣ್ಣಪುಟ್ಟ ಶ್ರದ್ಧಾ ಕೇಂದ್ರಗಳೇ ಮದ್ದು ಎಂದು ನಂಬುತ್ತಾರೆ. ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಧರ್ಮಗಳು ಒಡೆಯುವುದನ್ನು ಇಂತಹ ತಾಣಗಳು ತಣ್ಣಗೆ ಹೇಗೆ ನಿರಾಕರಿಸಿ ಒಂದುಗೂಡಿಸುತ್ತವೆಂದು ತೋರಿಸುತ್ತಾರೆ. 

‘ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ’ ಪುಸ್ತಕದಲ್ಲಿ ಎರಡು ದಶಕಗಳ ಕಾಲ ಪತ್ರಕರ್ತೆಯಾಗಿ ಬಿಜೆಪಿ ಎಂಬ ಪಕ್ಷವನ್ನು ತಾವು ಗಮನಿಸಿ, ಹಿಂಬಾಲಿಸಿ, ಕಂಡುಕೊಂಡದ್ದನ್ನು ಸಬಾ ದಾಖಲಿಸಿದ್ದಾರೆ. ಸಮರ್ಥ ಮಹಿಳೆಯರನ್ನು ಅವರು ಮುನ್ನೆಲೆಗೆ ತಂದದ್ದನ್ನು ಗುರುತಿಸುತ್ತಾರೆ. ಹೊಂದಾಣಿಕೆ ಸರ್ಕಾರ ರಚಿಸಿದ ಸ್ಥಿತಿಯಿಂದ ಇವತ್ತು ಬಿಜೆಪಿಯು ಅಖಂಡ ಬಹುಮತ ಪಡೆದು ಯಜಮಾನಿಕೆ ಸ್ಥಾಪಿಸಿರುವವರೆಗಿನ ಬೆಳವಣಿಗೆಯನ್ನು ‘ವಸ್ತುನಿಷ್ಠ’ವಾಗಿ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅದು ಈ ಎರಡು ದಶಕಗಳಲ್ಲಿ ಭಾರತದಲ್ಲಾದ ಏಳುಬೀಳುಗಳ ಮೂಲವನ್ನು ಸ್ವತಃ ಕಂಡು ದಾಖಲಿಸಿರುವ ಕಥನವಾಗಿದೆ. ಇದುವರೆಗೆ ಹೊರಜಗತ್ತಿಗೆ ತಿಳಿದಿರದ ಹಲವು ವಿಷಯಗಳ ಬಗೆಗೆ ಹಾಸ್ಯದ ಲೇಪನದೊಂದಿಗೆ ಆಳವಾಗಿ, ವಿಷದವಾಗಿ ಬೆಳಕು ಚೆಲ್ಲಿದೆ. ವರದಿಗಾರಿಕೆಯ ಫಲವಾಗಿ ಲಭಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಬಿಜೆಪಿಯ ನಾಯಕರ ಜೊತೆಗಿನ ನಿರಂತರ ಸಂಪರ್ಕವನ್ನು ಬಳಸಿಕೊಂಡಿರುವ ಸಬಾ, ವಾಜಪೇಯಿ-ಅಡ್ವಾನಿಯ ಬಿಜೆಪಿಗೂ, ಮೋದಿ-ಶಾ ಕೇಸರಿ ಪಕ್ಷಕ್ಕೂ ಇರುವ ವ್ಯತ್ಯಾಸಗಳನ್ನು ಸ್ಫುಟವಾಗಿ ಗುರುತಿಸಿದ್ದಾರೆ. ಬಿಜೆಪಿ ಪಕ್ಷದ ಒಳಹೊರಗನ್ನು ‘ತಟಸ್ಥ’ವಾಗಿ ಸುದೂರದಿಂದ ಮಂಡಿಸಿದ್ದಾರೆ. ‘ಸಮಕಾಲೀನ ಚರಿತ್ರೆಯೊಳಗಿನ ಡೀಪ್ ಡೈವ್’ ಎಂದೇ ಈ ಹೊತ್ತಗೆಯನ್ನು ವಿಶ್ಲೇಷಿಸಲಾಗಿದೆ. ಆಬ್ಜೆಕ್ಟಿವ್ ಜರ್ನಲಿಸಂ (ವಸ್ತುನಿಷ್ಟ ಪತ್ರಿಕೋದ್ಯಮ) ತಮ್ಮ ನಿಲುವು ಎನ್ನುವ ಅವರು ತಮ್ಮ ಸಹವರ್ತಿಗಳಿಂದ ಇದೇ ಕಾರಣಕ್ಕೆ ಟೀಕೆಗೂ ಒಳಗಾಗಿದ್ದಾರೆ. 

ಎಲ್ಲ ಮತಧರ್ಮಗಳ ಮದುವೆಯ ಖಾಸಗಿ ಕಾನೂನುಗಳು ಹೆಣ್ಣನ್ನು ಕ್ಷುದ್ರಗೊಳಿಸುತ್ತವೆಂದು ನಾಗರಿಕ ವಿವಾಹವನ್ನು ಬೆಂಬಲಿಸುವ ಸಬಾ ತನ್ನ ಇಷ್ಟಾನಿಷ್ಟ ಅರಿಯುವ ಗೆಳೆಯನನ್ನು ಹುಡುಕಿಕೊಂಡಿದ್ದಾರೆ. ಬಂಗಾಳದ ಸಂಜಯ್ ಭೌಮಿಕ್ ಅವರ ಬಾಳಸಂಗಾತಿ. ಮಗಳು ಸಾರಾ ಭೌಮಿಕ್. ದೇಶದಲ್ಲಿ ಸಾವಿರಾರು ಜನ ಜಾತಿ, ಮತ, ಲಿಂಗತ್ವ ಪೂರ್ವಗ್ರಹದಿಂದ ಬಳಲುತ್ತಿರುವಾಗ ಅದನ್ನೆಲ್ಲ ತಿಳಿಸಲು ಪತ್ರಕರ್ತೆಯಾಗಿ ತನಗೆ ಅವಕಾಶ ಮತ್ತು ಧ್ವನಿ ಸಿಕ್ಕಿದೆ; ಎಂದೇ ತಾನು ತನ್ನ ಕತೆ ಹೇಳುವುದಕ್ಕಿಂತ ಜನರ ಕತೆಗಳನ್ನು ಹೇಳಲೆಂದು ಇರುವುದಾಗಿ ಸಬಾ ಭಾವಿಸಿದ್ದಾರೆ. ತಮ್ಮ ನೇರನುಡಿಯ ಕಾರಣಕ್ಕೆ ದಿನನಿತ್ಯ ವೈಯಕ್ತಿಕವಾದ ಸವಾಲುಗಳನ್ನೆದುರಿಸುತ್ತ ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದೆಗೊಳಗಾಗಿದ್ದಾರೆ. ಆದರೂ ತಾನು ಭಾರತೀಯ ಮುಸ್ಲಿಂ ಎನ್ನುವುದು ಕೆಲಸಕ್ಕೆ ಅಡ್ಡಿ ಬಂದಿಲ್ಲ; ತಾನು ಬಲಿಪಶು ಅಲ್ಲ ಎಂದುಕೊಳ್ಳುವ ದಿಟ್ಟೆ ಆಕೆ.

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಬಾ ನಖ್ವಿ ದೆಹಲಿಯಿಂದ ಬರಲಿದ್ದಾರೆ. ಬನ್ನಿ, ಅವರೊಂದಿಗೆ ನಾವೂ ದನಿಗೂಡಿಸೋಣ. ಜೊತೆಜೊತೆಗೆ ಹೆಜ್ಜೆ ಹಾಕೋಣ.    


Dr G V Vennela ಡಾ. ಜಿ. ವಿ. ವೆನ್ನೆಲ

 



ಸಿಕಂದರಾಬಾದಿನಲ್ಲಿ ವಾಸಿಸುತ್ತಿರುವ ಡಾ. ಜಿ. ವಿ. ವೆನ್ನೆಲ (ಗುಮ್ಮಾಡಿ ವಿಠ್ಠಲರಾವ್ ವೆನ್ನೆಲ) ಉದಯೋನ್ಮುಖ ರಾಜಕಾರಣಿಯಾಗಿದ್ದಾರೆ. ಹೋರಾಟಗಾರರ, ಜನಸಮುದಾಯಗಳ ಮನದಲ್ಲಿ ‘ಗದ್ದರ್’ ಎಂದು ಜನಪ್ರಿಯರಾಗಿರುವ ಜನಕವಿ, ಕ್ರಾಂತಿಕಾರಿ ಹಾಡುಗಾರ ಗದ್ದರ್ ಮತ್ತು ವಿಮಲಾ ಅವರ ಮಗಳು ವೆನ್ನೆಲ. ಕ್ರಾಂತಿಯ ಕನಸಿನ ತಂದೆ ಆಳುವವರ ಕೆಂಗಣ್ಣಿಗೆ ಗುರಿಯಾಗಿ, ಭೂಗತರಾಗಿ, ಕುಟುಂಬದವರಿಗೂ ಎಲ್ಲಿರುವರೆಂಬ ಸುಳಿವು ಸಿಗದಂತೆ ಬದುಕಬೇಕಿದ್ದ ದಿನಗಳಲ್ಲಿ ತಾಯಿ ವಿಮಲಾ ತಮ್ಮ ಮಕ್ಕಳನ್ನು ಅತ್ಯಂತ ಕಷ್ಟದಿಂದ, ಜತನದಿಂದ ಬೆಳೆಸಿದರು. ಪದೇಪದೇ ಮನೆ, ವಿಳಾಸ, ಉದ್ಯೋಗ ಬದಲಿಸುತ್ತ ತಮ್ಮ ಮತ್ತು ಮಕ್ಕಳ ಪತ್ತೆ ಸಿಗದಂತೆ ಸುರಕ್ಷಿತವಾಗಿರುವಂತೆ ನೋಡಿಕೊಂಡರು. ಪ್ರತಿದಿನವೂ ನೋಡಲು, ಮಾತನಾಡಲು ತಂದೆ ಸಿಗದಿದ್ದರೂ  ಅವರ ಪ್ರಭಾವದಲ್ಲಿ ವೆನ್ನೆಲ ಮತ್ತು ಸೋದರರು ಬೆಳೆದರು. 

ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಅಭದ್ರ ಪರಿಸ್ಥಿತಿ ಎದುರಿಸುತ್ತ ಬೆಳೆದರೂ ವೆನ್ನೆಲ ಓದಿನಲ್ಲಿ ಸದಾ ಮುಂದಿದ್ದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನೂ, ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಪಿಎಚ್‌ಡಿಯನ್ನೂ, ಸ್ಕೂಲ್ ಮ್ಯಾನೇಜ್‌ಮೆಂಟಿನಲ್ಲಿ ಪಿಜಿ ಡಿಪ್ಲೊಮಾವನ್ನೂ ಪಡೆದರು. ಸಮಸಮಾಜದ ಸಾಕಾರಕ್ಕಾಗಿ ತಂದೆ ಗದ್ದರ್ ಸಿಕಂದರಾಬಾದಿನ ಅಲವಾಳದಲ್ಲಿ ಬಡಮಕ್ಕಳಿಗೆ ಉಚಿತ, ಉತ್ತಮ ಶಿಕ್ಷಣ ನೀಡುವ ಕನಸಿನಿಂದ ಆರಂಭಿಸಿದ ಮಹಾಬೋಧಿ ವಿದ್ಯಾಲಯದಲ್ಲಿ ೧೮ ವರ್ಷಗಳ ಹಿಂದಿನಿಂದ ಬೋಧಿಸುತ್ತಿದ್ದಾರೆ. 10 ವರ್ಷಗಳಿಂದ ಶಾಲೆಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ತಮ್ಮ ತಂದೆಯ ಮರಣಾನಂತರ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ವೆನ್ನೆಲ, ಸಿಕಂದರಾಬಾದಿನ ಕಂಟೋನ್ಮೆಂಟ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರ ಎದುರು ಐದು ಬಾರಿ ಎಂಎಲ್‌ಎ ಆಗಿದ್ದ ಸಾಯಣ್ಣ ಅವರ ಮಗಳು ಲಾಸ್ಯ ನಂದಿತಾ ಎಂಬ ಇಂಜಿನಿಯರ್ ಬಿಆರೆಸ್‌ನಿಂದ ಸ್ಪರ್ಧಿಸಿದರು. ಸಿಕಂದರಾಬಾದ್ ಎಂಬ ಮಹಾನಗರದಲ್ಲಿದ್ದರೇನು, ಕಂಟೋನ್ಮೆಂಟ್ ಪ್ರದೇಶದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎಂದರಿತ ವೆನ್ನೆಲ, ‘ಶಿಕ್ಷಣ, ಆರೋಗ್ಯ, ಉದ್ಯೋಗ’ ಎಂಬ ಮೂರಂಶಗಳನ್ನಿಟ್ಟುಕೊಂಡು ಚುನಾವಣೆಗಿಳಿದರು. ಕ್ಷೇತ್ರದ ತುಂಬ ಪಾದಯಾತ್ರೆ ಮಾಡಿ ಜನರ ನಾಡಿ ಮಿಡಿತ ಅರಿಯಲೆತ್ನಿಸಿದರು. ಆದರೂ 17 ಸಾವಿರಕ್ಕೂ ಮಿಕ್ಕಿ ಮತಗಳ ಅಂತರದಿಂದ ಲಾಸ್ಯ ಗೆದ್ದರು. (ಆದರೆ ಅವರು ಭೀಕರ ರಸ್ತೆ ಅಪಘಾತದಲ್ಲಿ ಇದೇ ಫೆಬ್ರುವರಿ 23ರಂದು ತೀರಿಕೊಂಡರು.) 43 ವರ್ಷದ ಎರಡು ಮಕ್ಕಳ ತಾಯಿ ವೆನ್ನೆಲ ತನ್ನ ತಂದೆಯ ಕನಸುಗಳನ್ನು ಸಾಕಾರಗೊಳಿಸಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ತನ್ನ ಗುರಿ ಎನ್ನುತ್ತಾರೆ. ಭ್ರಷ್ಟ, ಮೇಲ್ಜಾತಿಗಳ ಯಜಮಾನಿಕೆಗೆ ತುತ್ತಾಗಿರುವ, ಅಪರಾಧಿಗಳಿಂದ ತುಂಬಿ ಹೋಗಿರುವ ರಾಜಕೀಯ ರಂಗವನ್ನು ಸ್ವಚ್ಛಗೊಳಿಸಿ, ಬದಲಿಸುವುದೇ ತನ್ನ ಆಶಯ ಎನ್ನುತ್ತಾರೆ. ಅವರಿಗಿರುವ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ, ಶಿಕ್ಷಣಗಳ ಜೊತೆಗೆ ಜನಬೆಂಬಲವೂ ಒದಗಿ ಬಂದರೆ ಭವಿಷ್ಯದ ಉಜ್ವಲ ಜನ ನಾಯಕಿಯಾಗುವ, ಹೋರಾಟಗಾರ್ತಿಯಾಗವ ಸಾಧ್ಯತೆಗಳು ದಟ್ಟವಾಗಿವೆ. 

ಡಾ. ಜಿ. ವಿ. ವೆನ್ನೆಲ ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ಮಹಿಳಾ ಚೈತನ್ಯ ದಿನ’ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಿಕಂದರಾಬಾದಿನಿಂದ ಬರಲಿದ್ದಾರೆ. 

ಬನ್ನಿ, ಅವರೊಂದಿಗೆ ನಾವೂ ಕೈ ಜೋಡಿಸೋಣ.


Tuesday, 20 February 2024

ಕಿತ್ತೂರ ಚೆನ್ನಮ್ಮನ ತವರು ಕಾಕತಿ



 

ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ನೋಡಬಾರದು ಅಂತ ಏಕೆ ಹೇಳಿದರು? ನನ್ನದು ಅನ್ನುವ ಏನನ್ನೂ  ಗುರುತಿಸಿಕೊಳ್ಳಲಾಗದ, ಇಟ್ಟುಕೊಳ್ಳಲಾಗದ, ಇರಲಾಗದ ತಾವನ್ನು ಮತ್ತೆಮತ್ತೆ ಲೋಕ ಕೆದಕದೆ ಇರಲಿ ಎಂದೇ? ನಂತರ ತಲುಪಿದ ಸ್ಥಿತಿಗೂ, ಅದರ ಮೂಲಕ್ಕೂ ಇರುವ ವ್ಯತ್ಯಾಸವನ್ನು ಗಮನಿಸದಿರಲೆಂದೇ? ಇಂಥ ವಿನೀತ ಆರಂಭದಿಂದ ಎಲ್ಲವೂ ಹೊರಡುವುದು ಎಂಬ ವಾಸ್ತವ ಸತ್ಯವನ್ನು ನಿರಾಕರಿಸಲೆಂದೇ!? 

ಕಿತ್ತೂರಿನ ರಾಣಿಯಾದ ಕಾಕತಿಯ ಚೆನ್ನಮ್ಮ ಹುಟ್ಟಿದ ಊರನ್ನೂ, ಮದುವೆಯಾಗಿ ಮಹಾವಲಸೆ ಹೋಗಿ ನೆಲೆಗೊಂಡ ಕಿತ್ತೂರನ್ನೂ ನಾವು ಇಟ್ಟಿರುವ ಸ್ಥಿತಿ ನೋಡಿದಾಗ ಈ ವಿಷಯ ಕೊರೆಯುತ್ತದೆ. ಕಿತ್ತೂರಿನ ಕೋಟೆ, ಅರಮನೆ, ಗುರುಮನೆ, ಅವಳ ಗಂಡನ ತಲೆಮಾರಿನ ಹಿರೀಕರ ಸಮಾಧಿ, ಮಠ, ಅವಳ ಸಮಾಧಿಯಿರುವ ತಾಣ, ಅವಳಿಂದ ಸೋಲನುಭವಿಸಿದ ಬ್ರಿಟಿಷ್ ಅಧಿಕಾರಿಗಳ ಮರಣ ಸ್ಮಾರಕಗಳು, ಲಾವಣಿ ಪದಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಅವು ‘ಅಭಿವೃದ್ಧಿ’ಗೊಂಡು ಅಷ್ಟಿಷ್ಟಾದರೂ ಸಂರಕ್ಷಿಸಲ್ಪಟ್ಟಿವೆ. ಆದರೆ ಚೆನ್ನಮ್ಮ ಎಂಬ ಹುಡುಗಿಯು ದಿಟ್ಟ, ಸ್ವಾತಂತ್ರ್ಯ ಪ್ರೇಮಿ ಸ್ವಾಭಿಮಾನದ ಹೆಣ್ಣಾಗಿ ಹೇಗೆ ಬೆಳೆದಳು ಎಂದು ಅವಳ ತವರನ್ನು ಶೋಧಿಸುವ, ತಿಳಿಯುವ ಆಸಕ್ತಿ ಸಮಾಜಕ್ಕಿಲ್ಲ ಎನ್ನುವುದು ಅವಳ ತವರು ಕಾಕತಿಯನ್ನು ನೋಡಿದರೆ ತಿಳಿಯುತ್ತದೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಗಂಡರಿಮೆಯ ಸಮಾಜ ನಮ್ಮದಾಗಿರುವುದರಿಂದ ಅವಳ ತವರು ಕಾಕತಿ ನಮಗೆ ನಗಣ್ಯ. (ಕನ್ನಡದ ಯಾವುದೇ ಹಿರಿಯ ಲೇಖಕಿಯ ಮನೆ/ಊರು/ತಾವು ಸ್ಮಾರಕವಾಗಿಲ್ಲದಿರುವುದು ಇದೇ ಕಾರಣದಿಂದ ಇರಬಹುದು.)

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೆಳಗಾವಿ ಕಳೆದು ಆರು ಕಿಲೋಮೀಟರ್ ಕ್ರಮಿಸಿ ನಂತರ ಸಿಗುವ ಕಾಕತಿಯಲ್ಲಿಳಿದರೆ ಸುಡುಬಿಸಿಲಿನ ಜೊತೆಗೆ ಇಂಥ ಹೆಣ್ಣು ವಾಸ್ತವಗಳೂ ಸುಡುತ್ತವೆ. 


ದೇಸಾಯರ ವಾಡೆಯಲ್ಲಿ ಹಾಕಿರುವ ಫಲಕ, ಕಾಕತಿ


ದೇಸಾಯರ ವಾಡೆ, ಕಾಕತಿ


ನಾಡ ಹೆಂಚಿನ ಮನೆ



ಮನೆಮನೆಯ ಗೋಡೆಗಳ ಮೇಲೂ ಶಿವಾಜಿ, ಚೆನ್ನಮ್ಮನಿಲ್ಲ.. 



ಕಾಕತಿ ಊರನ್ನು ಹೆದ್ದಾರಿಯು ಇಬ್ಭಾಗಿಸಿದೆ. ಪುಣೆಗೆ ಹೋಗುವ ದಿಸೆಯಲ್ಲಿ ಹೆದ್ದಾರಿಯಿಂದ ಎಡಬದಿಗೆ ನೆಲಕ್ಕಿಳಿದು ಹೋದರೆ ಮೊದಲಿಗೇ ‘ದೇಸಾಯರ ಗಲ್ಲಿ’ ಕಾಣುತ್ತದೆ. ಅಲ್ಲಿಂದ ಎಡಭಾಗದಲ್ಲಿ ಹೆಚ್ಚುಕಡಿಮೆ ಒಂದು ಕಿಲೋಮೀಟರ್ ಕ್ರಮಿಸಿದರೆ ಚೆನ್ನಮ್ಮ ಹುಟ್ಟಿದ ವಾಡೆಯಿದ್ದ ಸ್ಥಳವಿದೆ. ಬಲಬದಿಗೆ ಒಂದೆರೆಡು ಕಿಲೋಮೀಟರು ಕ್ರಮಿಸಿದರೆ ಪುಟ್ಟ ದಿಬ್ಬ. ಅದರ ಮೇಲೆ ಚೆನ್ನಮ್ಮ ಆಡಿ, ಕಲಿತು, ಬೆಳೆದ ಕೋಟೆಯಿದೆ. ಅದಷ್ಟೂ ಜಾಗ ‘ದೇಸಾಯರ ವಾಡೆ’ಯಾಗಿ ಅವರಿಗೇ ಸೇರಿತ್ತು. ಬರಬರುತ್ತ ಜನವಸತಿ ತಲೆಯೆತ್ತಿ ಈಗ ನೂರಾರು ಮನೆಗಳು ಕಿಕ್ಕಿರಿದಿವೆ. ಆ ಕಾಲದ ತುಣುಕೊಂದು ಇಲ್ಲಿ ಬಂದು ಬಿದ್ದಿದೆಯೋ ಎನ್ನುವಂತೆ ನಮ್ಮ ಕಡೆ ಕಾಣುವುದೇ ಅಪರೂಪವಾಗಿರುವ ಕಪ್ಪು ನಾಡಹೆಂಚಿನ ಮನೆಗಳು, ಮಣ್ಣುಗೋಡೆಗಳು, ಹಳೆಯ ವಾಸ್ತುಶೈಲಿಯ ಉಪ್ಪರಿಗೆ ಮನೆಗಳು ಕಾಣಸಿಗುತ್ತವೆ. ಬಹುತೇಕ ಮನೆಗಳ ಗೋಡೆಯ ಮೇಲೆ ಶಿವಾಜಿಯ ಚಿತ್ರ, ಶಿಲ್ಪವಿದೆ. 

ನಾವು ಹೋದ ಉರಿಬಿಸಿಲಿನ ಮಧ್ಯಾಹ್ನ ಮಹಿಳೆಯರು ಇನ್ನೇನು ತಾಟಿನ ಮುಂದೆ ಬಂದು ಕೂರಲಿರುವವರಿಗಾಗಿ ಅಟ್ಟುವ ತಯಾರಿಯಲ್ಲಿ ಸರಬರ ಓಡಾಡತೊಡಗಿದ್ದರು. ಮನೆಗಳಿಂದ ಹೊರಸೂಸುವ ಗಮಲುಗಳೇ ಅದನ್ನು ತಿಳಿಸುತ್ತಿದ್ದವು. ಮನೆಗಳ ಕಾಡಿನಲ್ಲಿ ಚೆನ್ನಮ್ಮ ಹುಟ್ಟಿದ ಜಾಗ ಯಾವುದು ಎಂಬ ಮಾರ್ಗಸೂಚಿ, ಫಲಕ ಯಾವುದೂ ಕಾಣದೇ ಹೋಯಿತು. ಮಗುವನ್ನು ಚಚ್ಚಿಕೊಂಡು ವಾಟೆ ಹಿಡಿದು ಸರಸರ ಬರುತ್ತಿದ್ದ ಒಬ್ಬಾಕೆಯನ್ನು ಕೇಳಿದರೆ ಕೈಯಾಡಿಸುತ್ತ ಹೋದಳು. ಮತ್ತೊಂದಿಬ್ಬರೂ ಅವಳಂತೆಯೇ ಗೊಣಗಿದರು. ಓಹೋ, ಹೆಂಗಸರಿಗೆ ಕೆಲಸದ ಗಡಿಬಿಡಿ. ಖಾಲಿ ನಿಂತಿದಾನಲ್ಲ ಇವನನ್ನ ಕೇಳುವಾ ಎಂದು ಬೈಕ್ ಒರಗಿ ನಿಂತ ಪೋರನ ಬಳಿ ಕೇಳಿದೆ. ಊರಿನಲ್ಲಿ ಬಹುತೇಕರು ಮರಾಠಿ ಮಾತನಾಡುವವರು, ಅದಕ್ಕೇ ನೀವು ಕೇಳಿದ್ದು ಅವರಿಗೆ ಅರ್ಥ ಆಗಿಲ್ಲವೆಂದು ದೂರದಿಂದಲೇ ನನ್ನ ಗಮನಿಸಿದ್ದ ಅವನು ತಿಳಿಸಿದ. 

ಅವನೆಂದಂತೆ, ‘ಅಲ್ಲಿಂದ ಇಲ್ಲೀಮಟ ಜಾಗಾ ಚನ್ನಮ್ಮ ರಾಣೇರ ಅಪ್ಪಾರು ದೇಸಾಯರದಾ ಆಗಿತ್ತಂತರಿ. ಅವರ‍್ಯಾರೂ ಬರವಲ್ಲಾಗ್ಯಾರ ಈಗ. ಅವ್ರ ವಾಡೇ ಸನೇಕ ಮಂದೀ ಕುರಿ ಮೇಸಾಕ್, ಕುಳ್ಳು ಒಣಗಿಸಾಕ್ ಹತ್ತಿದುರ್ರಿ. ಬರಬರತ ಬೇಲಿ ಹಾಕೊಂದು, ಮನಿ ಕಟಗೊಂದು ನಮದೆ ಅನಲಿಕ್ ಹತ್ತಿದುರ್ರಿ. ಅದಕ ದೇಸಾಯರ ಮಂತಾನದೋರು ಬಂದು ಕಂಪೌಂಡ್ ಬೇಲಿ ಹಾಕಿಶಿ, ಗೇಟ ಕೂಡಿಶಿ, ಬೀಗ ಹಾಕಿ ಹೋಗ್ಯಾರರಿ. ಯಾವಾಗರೆ ಒಮ್ ಬಂದು ಯಾರರೆ ಕಿತ್ತು ಒಗದಾರ ಹ್ಯಂಗಂತ ನೋಡಿ ಹೋಗತಾರ್ರಿ, ಆಟಾ. ಈಗಲ್ಲೆ ನೆಲ ಸಪಾಟೈತಿ, ಏನಿಲ್ಲ’. 

ಅವ ಏನಿಲ್ಲ, ಏನಿಲ್ಲ ಅಂದರೂ ದೇಸಾಯರ ವಾಡೆಯಿರುವ ತಾವಿನ ಗುರುತು ಪಡೆದು ಮುಂದೆ ಬಂದೆವು. ಅಲ್ಲಿ ಕುಸಿದ ಬಿದ್ದ ಕಲ್ಲುಮಣ್ಣುಗಳ ಪುಟ್ಟ ದಿಬ್ಬ ಕಂಡಿತು. ಅದೇ ಧೂಳಪ್ಪ ಗೌಡ ದೇಸಾಯರ ಮಗಳಾಗಿ (ಅವಳಮ್ಮನ ಹೆಸರೇನೋ!?) ಚೆನ್ನಮ್ಮ ಹುಟ್ಟಿ ಬೆಳೆದ ಜಾಗ. ರಾಣಿ ಚೆನ್ನಮ್ಮನೇನೂ ತೀರಾ ಹಿಂದಿನವಳಲ್ಲ. ೨೫೦ ವರ್ಷಗಳ ಹಿಂದೆ ಕಟ್ಟಿದ ಕಲ್ಲುಮಣ್ಣಿನ ಮನೆಗೆ ಒಳಗಿದ್ದು ರಕ್ಷಿಸುವವರ ಕಾಳಜಿಯೂ ಸಿಗದೇ; ಎದುರಾಳಿ ಮನುಷ್ಯರು-ಪ್ರಾಣಿಕ್ರಿಮಿಕೀಟಗಳು-ಗಿಡಗಂಟಿಗಳ ದಾಳಿ ಎದುರಿಸಲೂ ಸಾಧ್ಯವಾಗದೇ ಕುಸಿದು ಮಣ್ಣುಗುಪ್ಪೆಯಾಗಿ ಹೋಗಿದೆ.

ಚೆನ್ನಮ್ಮನು ಅಕ್ಷರಾಭ್ಯಾಸ, ಕುದುರೆ ಸವಾರಿ, ಯುದ್ಧ ವಿದ್ಯೆಗಳ ಕಲಿತದ್ದು ಅಲ್ಲಿಂದ ಸೀದಾ ನೇರ ಮತ್ತೊಂದು ದಿಕ್ಕಿಗೆ ಹೋದರೆ ಕಾಣುವ ‘ಕಿಲ್ಲಾದಾಗ’. ‘ಹೀಂಗ ಸೀದಾ ಹೋಗರಿ. ಡೆಡ್ ಎಂಡಿನ್ಯಾಗ ಕಿಲ್ಲಾದ ಮೆಟ್ಟಿಲು ಸಿಗತಾವ’ ಅಂದರು. ಕಿರಿದಾದ ರಸ್ತೆಯ ಎರಡೂ ಬದಿ ಇರುವ ಮನೆಗಳ ಹಾದು ಸಣ್ಣ ಗುಡ್ಡದ ಬುಡ ತಲುಪಿದೆವು. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳು. ಎಲ್ಲೆಂದರಲ್ಲಿ ಗುಪ್ಪೆ ಬಿದ್ದ ಕಸದ ರಾಶಿ. 

‘ಅಲ್ಲಿ ಮೇಲೆ ಏನೂ ಇಲ್ಲ, ಒಂದು ಕಡೆ ಸ್ವಲ್ಪ ಕಿಲ್ಲಾದ ಗೋಡೆ ಅದಾವ, ಒಂದು ಗುಹೆ ತರಾ ಐತಿ. ಕಲ್ಲು, ಗ್ವಾಡೆ ಬೀಳಂಗಾಗ್ಯಾವ. ಹುಶಾರಿ ಮತ್ತ’ ಅಂದರೊಬ್ಬರು. ನಾನೆಂದೂ ನೋಡಿರದ ಕಪ್ಪು, ಕಡುಗೆಂಪಿನ ಹಕ್ಕಿಯೊಂದು ಪಟಪಟನೆ ಬಂದು ಜಾಲಿ ಗಿಡದ ಮೇಲೆ ಕೂತು ಏನೋ ಕಿಲಕಿಲಕಿಲನುಲಿದು ಪಟ್ಟನೆ ಹಾರಿಯೇ ಹೋಯಿತು. ಚೆನ್ನಮ್ಮ ಹಕ್ಕಿ ರೂಪಿಯಾಗಿ ಬಂದು ಉಲಿದು ಹೋದಳು. ‘ಇರುವುದೆಲ್ಲ ಬಿದ್ದು ಹೋಗಿರುವಾಗ ಏನೂ ಇಲ್ಲದ ಹಾಗೆಯೇ ಕಾಣುತ್ತದೆ. ಆದರೆ ಇಲ್ಲದ ಕಡೆಯೂ ಏನೆಲ್ಲ, ಎಷ್ಟೆಲ್ಲ ಇರುತ್ತದೆ!’ ಎಂದ ಪಿಸುನುಡಿಯ ದನಿ ಕೇಳಿದಂತಾಯಿತು.

ಅಲ್ಲಿ ದಿಬ್ಬದ ಮೇಲೆ ಎರಡು ಸುತ್ತಿನ ಗೋಡೆಗಳು ಚಿಕ್ಕ ಆವಾರ ಸೃಷ್ಟಿಸಿವೆ. ಆವರಣದೊಳಗೊಂದು ಸಣ್ಣ ನೀರಿನ ಮೂಲವಿದೆ. ದೂರದೂರದವರೆಗೆ ಬಯಲು, ಗುಡ್ಡ, ಜೀವಾದಿಗಳ ಚಲನವಲನ ಕಾಣಬಹುದಾದಂತಹ ಐನಾತಿ ಜಾಗವೊಂದು ಪಶ್ಚಿಮ ದಿಕ್ಕಿನಲ್ಲಿದೆ. ಅದರ ತುದಿಗೆ ಬುರುಜು ಇದೆ. ಆ ಸ್ಥಳದಲ್ಲಿ ಎಲ್ಲ ವಿದ್ಯೆಗಳನ್ನು ಚೆನ್ನೆ ಕಲಿತಳು. 

ಅಲ್ಲಿನ ಇತಿಹಾಸದ ಬಗೆಗೆ ತಿಳಿಸುವ ಫಲಕ ನಿಲ್ಲಿಸುವುದಕ್ಕಾಗಲೀ, ಸ್ಮಾರಕವೆಂದು ಸಂರಕ್ಷಿಸುವ ಮನಸ್ಸಾಗಲೀ ಯಾರಿಗೂ ಇದ್ದಂತಿಲ್ಲ. ಕಿತ್ತೂರು ಚೆನ್ನಮ್ಮ ಅಂದದ್ದೇ ಕುದುರೆಯ ಮೇಲೆ ಕತ್ತಿ ಹಿರಿದು ಕೂತ ರಾಣಿ ನೆನಪಾಗುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದ ಹಾಡು ಗುಂಯ್ಞ್‌ಗುಡುತ್ತದೆ. ಅವಳು ಹುಟ್ಟಿದ ಊರಿನಲ್ಲಿ ಅವಳದೊಂದು ಮೂರ್ತಿ ನಿಲ್ಲಿಸಿ, ಕಟ್ಟೆ ಕಟ್ಟಿ, ತನ್ನ ಹೊಣೆ ಮುಗಿಯಿತು ಎಂದು ಆಳುವವರ್ಗ ಅಂದುಕೊಂಡಿದೆ. ವರ್ಷದ ಸೂಚಿತ ದಿನಗಳಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವಳನ್ನೊಂದು ಜಾತಿಗೆ ಕಟ್ಟಿ ಹಾಕಿ..

ಚಿನ್ನ ಅಮೂಲ್ಯ. ಎಲ್ಲರಿಗೂ ಗೊತ್ತಿದೆ. ಆದರೆ ಮಣ್ಣು ಅದಿರಿನಿಂದ ಹೊನ್ನು ಹೇಗೆ ಬಂತು ಎನ್ನುವುದರ ಬಗೆಗೆ ಅಸೀಮ ಅಜ್ಞಾನ, ಅಸಡ್ಡೆಯಿದೆ.

                                                                                                      ಡಾ. ಎಚ್. ಎಸ್. ಅನುಪಮಾ