Saturday 24 February 2024

ಸಬಾ ನಖ್ವಿ - ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

 



ಭಾರತೀಯ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಮೂರು ದಶಕಗಳಿಂದ ಸುದ್ದಿಮೂಲ ಕ್ಷೇತ್ರಕಾರ್ಯ, ಡೆಸ್ಕ್, ಮುಖ್ಯ ಚರ್ಚೆ, ಸಂವಾದಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಹೆಸರು ಸಬಾ ನಖ್ವಿ ಅವರದು. ಇದುವರೆಗೆ 4 ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕಿಯೂ ಹೌದು. ಹಿರಿಯ ಪತ್ರಕರ್ತ, ಬರಹಗಾರ ಸಯೀದ್ ನಖ್ವಿ ಮತ್ತು ಅರುಣಾ ಅವರ ಮಗಳಾದ ಸಬಾ, ದೆಹಲಿಯ ಸಂತ ಸ್ಟೀಫನ್ ಕಾಲೇಜು ಮತ್ತು ನ್ಯೂಜೆರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಬಳಿಕ ಪತ್ರಕರ್ತೆಯಾಗಿ ಕೆಲಸ ಆರಂಭಿಸಿ ಔಟ್‌ಲುಕ್ ನಿಯತಕಾಲಿಕದಲ್ಲಿ ಪೊಲಿಟಿಕಲ್ ಎಡಿಟರ್ ಆಗಿ 2015ರವರೆಗೆ ಕೆಲಸ ಮಾಡಿದರು. ಈಗ ಫ್ರಂಟ್‌ಲೈನ್, ದ ಹಿಂದೂ, ಟ್ರಿಬ್ಯೂನ್, ಸ್ಕ್ರೋಲ್.ಇನ್, ಟೆಲಿಗ್ರಾಫ್ ಮತ್ತಿತರ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿದ್ದಾರೆ. 

ಸಬಾ ಸೂಕ್ಷ್ಮ ಸಂವೇದನೆಯ ಬರಹಗಾರ್ತಿಯಾಗಿದ್ದಾರೆ. ಇನ್ ಗುಡ್ ಫೆಯ್ತ್ (2012), ಕ್ಯಾಪಿಟಲ್ ಕಾಂಕ್ವೆಸ್ಟ್ (2015), ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ (2018), ಪಾಲಿಟಿಕ್ಸ್ ಆಫ್ ಜುಗಾಡ್: ಸ್ಯಾಫ್ರನ್ ಸ್ಟಾರ್ಮ್ (2019) ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಇನ್ ಗುಡ್ ಫೆಯ್ತ್’ ಒಬ್ಬ ಪತ್ರಕರ್ತೆಯಾಗಿ ಅವರು ಕಂಡುಕೊಂಡ ಭಾರತವಾಗಿದೆ. ಸಣ್ಣಪುಟ್ಟ ಊರುಗಳಲ್ಲಿ, ಜನಸಾಮಾನ್ಯರ ಉತ್ಸಾಹದಲ್ಲಿ, ಊರೆಲ್ಲ ಒಂದು ದೈವದ ಮೇಲಿಡುವ ವಿಶ್ವಾಸದಲ್ಲಿ ಸಹಬಾಳ್ವೆಯ, ಬಹುತ್ವದ ಭಾರತ ಇನ್ನೂ ಉಸಿರಾಡುತ್ತಿದೆ ಎಂದವರು ದಾಖಲಿಸಿದ್ದಾರೆ. ಬಂಗಾಳಿ ಮುಸ್ಲಿಮರ ಬನದೇವತೆ, ದೈವತ್ವಕ್ಕೇರಿಸಲ್ಪಟ್ಟ ಮಹಾರಾಷ್ಟ್ರದ ಶಿವಾಜಿ, ಶಿರಡಿ ಸಾಯಿಬಾಬಾರ ಮೂಲ, ಗುಡಿ-ದರ್ಗಾ ಎರಡೂ ಆಗಿರುವ ಅಸಂಖ್ಯ ತಾಣಗಳ ಒಳಹೊಕ್ಕು ಶೋಧಿಸಿರುವ ಸಬಾ, ಧಾರ್ಮಿಕ ಮೂಲಭೂತವಾದಕ್ಕೆ ಇಂತಹ ಯಾವುದೋ ಮೂಲೆಯಲ್ಲಿರುವ ಸಣ್ಣಪುಟ್ಟ ಶ್ರದ್ಧಾ ಕೇಂದ್ರಗಳೇ ಮದ್ದು ಎಂದು ನಂಬುತ್ತಾರೆ. ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಧರ್ಮಗಳು ಒಡೆಯುವುದನ್ನು ಇಂತಹ ತಾಣಗಳು ತಣ್ಣಗೆ ಹೇಗೆ ನಿರಾಕರಿಸಿ ಒಂದುಗೂಡಿಸುತ್ತವೆಂದು ತೋರಿಸುತ್ತಾರೆ. 

‘ಶೇಡ್ಸ್ ಆಫ್ ಸ್ಯಾಫ್ರನ್: ಫ್ರಂ ವಾಜಪೇಯಿ ಟು ಮೋದಿ’ ಪುಸ್ತಕದಲ್ಲಿ ಎರಡು ದಶಕಗಳ ಕಾಲ ಪತ್ರಕರ್ತೆಯಾಗಿ ಬಿಜೆಪಿ ಎಂಬ ಪಕ್ಷವನ್ನು ತಾವು ಗಮನಿಸಿ, ಹಿಂಬಾಲಿಸಿ, ಕಂಡುಕೊಂಡದ್ದನ್ನು ಸಬಾ ದಾಖಲಿಸಿದ್ದಾರೆ. ಸಮರ್ಥ ಮಹಿಳೆಯರನ್ನು ಅವರು ಮುನ್ನೆಲೆಗೆ ತಂದದ್ದನ್ನು ಗುರುತಿಸುತ್ತಾರೆ. ಹೊಂದಾಣಿಕೆ ಸರ್ಕಾರ ರಚಿಸಿದ ಸ್ಥಿತಿಯಿಂದ ಇವತ್ತು ಬಿಜೆಪಿಯು ಅಖಂಡ ಬಹುಮತ ಪಡೆದು ಯಜಮಾನಿಕೆ ಸ್ಥಾಪಿಸಿರುವವರೆಗಿನ ಬೆಳವಣಿಗೆಯನ್ನು ‘ವಸ್ತುನಿಷ್ಠ’ವಾಗಿ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅದು ಈ ಎರಡು ದಶಕಗಳಲ್ಲಿ ಭಾರತದಲ್ಲಾದ ಏಳುಬೀಳುಗಳ ಮೂಲವನ್ನು ಸ್ವತಃ ಕಂಡು ದಾಖಲಿಸಿರುವ ಕಥನವಾಗಿದೆ. ಇದುವರೆಗೆ ಹೊರಜಗತ್ತಿಗೆ ತಿಳಿದಿರದ ಹಲವು ವಿಷಯಗಳ ಬಗೆಗೆ ಹಾಸ್ಯದ ಲೇಪನದೊಂದಿಗೆ ಆಳವಾಗಿ, ವಿಷದವಾಗಿ ಬೆಳಕು ಚೆಲ್ಲಿದೆ. ವರದಿಗಾರಿಕೆಯ ಫಲವಾಗಿ ಲಭಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಬಿಜೆಪಿಯ ನಾಯಕರ ಜೊತೆಗಿನ ನಿರಂತರ ಸಂಪರ್ಕವನ್ನು ಬಳಸಿಕೊಂಡಿರುವ ಸಬಾ, ವಾಜಪೇಯಿ-ಅಡ್ವಾನಿಯ ಬಿಜೆಪಿಗೂ, ಮೋದಿ-ಶಾ ಕೇಸರಿ ಪಕ್ಷಕ್ಕೂ ಇರುವ ವ್ಯತ್ಯಾಸಗಳನ್ನು ಸ್ಫುಟವಾಗಿ ಗುರುತಿಸಿದ್ದಾರೆ. ಬಿಜೆಪಿ ಪಕ್ಷದ ಒಳಹೊರಗನ್ನು ‘ತಟಸ್ಥ’ವಾಗಿ ಸುದೂರದಿಂದ ಮಂಡಿಸಿದ್ದಾರೆ. ‘ಸಮಕಾಲೀನ ಚರಿತ್ರೆಯೊಳಗಿನ ಡೀಪ್ ಡೈವ್’ ಎಂದೇ ಈ ಹೊತ್ತಗೆಯನ್ನು ವಿಶ್ಲೇಷಿಸಲಾಗಿದೆ. ಆಬ್ಜೆಕ್ಟಿವ್ ಜರ್ನಲಿಸಂ (ವಸ್ತುನಿಷ್ಟ ಪತ್ರಿಕೋದ್ಯಮ) ತಮ್ಮ ನಿಲುವು ಎನ್ನುವ ಅವರು ತಮ್ಮ ಸಹವರ್ತಿಗಳಿಂದ ಇದೇ ಕಾರಣಕ್ಕೆ ಟೀಕೆಗೂ ಒಳಗಾಗಿದ್ದಾರೆ. 

ಎಲ್ಲ ಮತಧರ್ಮಗಳ ಮದುವೆಯ ಖಾಸಗಿ ಕಾನೂನುಗಳು ಹೆಣ್ಣನ್ನು ಕ್ಷುದ್ರಗೊಳಿಸುತ್ತವೆಂದು ನಾಗರಿಕ ವಿವಾಹವನ್ನು ಬೆಂಬಲಿಸುವ ಸಬಾ ತನ್ನ ಇಷ್ಟಾನಿಷ್ಟ ಅರಿಯುವ ಗೆಳೆಯನನ್ನು ಹುಡುಕಿಕೊಂಡಿದ್ದಾರೆ. ಬಂಗಾಳದ ಸಂಜಯ್ ಭೌಮಿಕ್ ಅವರ ಬಾಳಸಂಗಾತಿ. ಮಗಳು ಸಾರಾ ಭೌಮಿಕ್. ದೇಶದಲ್ಲಿ ಸಾವಿರಾರು ಜನ ಜಾತಿ, ಮತ, ಲಿಂಗತ್ವ ಪೂರ್ವಗ್ರಹದಿಂದ ಬಳಲುತ್ತಿರುವಾಗ ಅದನ್ನೆಲ್ಲ ತಿಳಿಸಲು ಪತ್ರಕರ್ತೆಯಾಗಿ ತನಗೆ ಅವಕಾಶ ಮತ್ತು ಧ್ವನಿ ಸಿಕ್ಕಿದೆ; ಎಂದೇ ತಾನು ತನ್ನ ಕತೆ ಹೇಳುವುದಕ್ಕಿಂತ ಜನರ ಕತೆಗಳನ್ನು ಹೇಳಲೆಂದು ಇರುವುದಾಗಿ ಸಬಾ ಭಾವಿಸಿದ್ದಾರೆ. ತಮ್ಮ ನೇರನುಡಿಯ ಕಾರಣಕ್ಕೆ ದಿನನಿತ್ಯ ವೈಯಕ್ತಿಕವಾದ ಸವಾಲುಗಳನ್ನೆದುರಿಸುತ್ತ ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದೆಗೊಳಗಾಗಿದ್ದಾರೆ. ಆದರೂ ತಾನು ಭಾರತೀಯ ಮುಸ್ಲಿಂ ಎನ್ನುವುದು ಕೆಲಸಕ್ಕೆ ಅಡ್ಡಿ ಬಂದಿಲ್ಲ; ತಾನು ಬಲಿಪಶು ಅಲ್ಲ ಎಂದುಕೊಳ್ಳುವ ದಿಟ್ಟೆ ಆಕೆ.

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಬಾ ನಖ್ವಿ ದೆಹಲಿಯಿಂದ ಬರಲಿದ್ದಾರೆ. ಬನ್ನಿ, ಅವರೊಂದಿಗೆ ನಾವೂ ದನಿಗೂಡಿಸೋಣ. ಜೊತೆಜೊತೆಗೆ ಹೆಜ್ಜೆ ಹಾಕೋಣ.    


No comments:

Post a Comment