Saturday 24 February 2024

Dr G V Vennela ಡಾ. ಜಿ. ವಿ. ವೆನ್ನೆಲ

 



ಸಿಕಂದರಾಬಾದಿನಲ್ಲಿ ವಾಸಿಸುತ್ತಿರುವ ಡಾ. ಜಿ. ವಿ. ವೆನ್ನೆಲ (ಗುಮ್ಮಾಡಿ ವಿಠ್ಠಲರಾವ್ ವೆನ್ನೆಲ) ಉದಯೋನ್ಮುಖ ರಾಜಕಾರಣಿಯಾಗಿದ್ದಾರೆ. ಹೋರಾಟಗಾರರ, ಜನಸಮುದಾಯಗಳ ಮನದಲ್ಲಿ ‘ಗದ್ದರ್’ ಎಂದು ಜನಪ್ರಿಯರಾಗಿರುವ ಜನಕವಿ, ಕ್ರಾಂತಿಕಾರಿ ಹಾಡುಗಾರ ಗದ್ದರ್ ಮತ್ತು ವಿಮಲಾ ಅವರ ಮಗಳು ವೆನ್ನೆಲ. ಕ್ರಾಂತಿಯ ಕನಸಿನ ತಂದೆ ಆಳುವವರ ಕೆಂಗಣ್ಣಿಗೆ ಗುರಿಯಾಗಿ, ಭೂಗತರಾಗಿ, ಕುಟುಂಬದವರಿಗೂ ಎಲ್ಲಿರುವರೆಂಬ ಸುಳಿವು ಸಿಗದಂತೆ ಬದುಕಬೇಕಿದ್ದ ದಿನಗಳಲ್ಲಿ ತಾಯಿ ವಿಮಲಾ ತಮ್ಮ ಮಕ್ಕಳನ್ನು ಅತ್ಯಂತ ಕಷ್ಟದಿಂದ, ಜತನದಿಂದ ಬೆಳೆಸಿದರು. ಪದೇಪದೇ ಮನೆ, ವಿಳಾಸ, ಉದ್ಯೋಗ ಬದಲಿಸುತ್ತ ತಮ್ಮ ಮತ್ತು ಮಕ್ಕಳ ಪತ್ತೆ ಸಿಗದಂತೆ ಸುರಕ್ಷಿತವಾಗಿರುವಂತೆ ನೋಡಿಕೊಂಡರು. ಪ್ರತಿದಿನವೂ ನೋಡಲು, ಮಾತನಾಡಲು ತಂದೆ ಸಿಗದಿದ್ದರೂ  ಅವರ ಪ್ರಭಾವದಲ್ಲಿ ವೆನ್ನೆಲ ಮತ್ತು ಸೋದರರು ಬೆಳೆದರು. 

ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಅಭದ್ರ ಪರಿಸ್ಥಿತಿ ಎದುರಿಸುತ್ತ ಬೆಳೆದರೂ ವೆನ್ನೆಲ ಓದಿನಲ್ಲಿ ಸದಾ ಮುಂದಿದ್ದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನೂ, ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಪಿಎಚ್‌ಡಿಯನ್ನೂ, ಸ್ಕೂಲ್ ಮ್ಯಾನೇಜ್‌ಮೆಂಟಿನಲ್ಲಿ ಪಿಜಿ ಡಿಪ್ಲೊಮಾವನ್ನೂ ಪಡೆದರು. ಸಮಸಮಾಜದ ಸಾಕಾರಕ್ಕಾಗಿ ತಂದೆ ಗದ್ದರ್ ಸಿಕಂದರಾಬಾದಿನ ಅಲವಾಳದಲ್ಲಿ ಬಡಮಕ್ಕಳಿಗೆ ಉಚಿತ, ಉತ್ತಮ ಶಿಕ್ಷಣ ನೀಡುವ ಕನಸಿನಿಂದ ಆರಂಭಿಸಿದ ಮಹಾಬೋಧಿ ವಿದ್ಯಾಲಯದಲ್ಲಿ ೧೮ ವರ್ಷಗಳ ಹಿಂದಿನಿಂದ ಬೋಧಿಸುತ್ತಿದ್ದಾರೆ. 10 ವರ್ಷಗಳಿಂದ ಶಾಲೆಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ತಮ್ಮ ತಂದೆಯ ಮರಣಾನಂತರ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ವೆನ್ನೆಲ, ಸಿಕಂದರಾಬಾದಿನ ಕಂಟೋನ್ಮೆಂಟ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅವರ ಎದುರು ಐದು ಬಾರಿ ಎಂಎಲ್‌ಎ ಆಗಿದ್ದ ಸಾಯಣ್ಣ ಅವರ ಮಗಳು ಲಾಸ್ಯ ನಂದಿತಾ ಎಂಬ ಇಂಜಿನಿಯರ್ ಬಿಆರೆಸ್‌ನಿಂದ ಸ್ಪರ್ಧಿಸಿದರು. ಸಿಕಂದರಾಬಾದ್ ಎಂಬ ಮಹಾನಗರದಲ್ಲಿದ್ದರೇನು, ಕಂಟೋನ್ಮೆಂಟ್ ಪ್ರದೇಶದಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎಂದರಿತ ವೆನ್ನೆಲ, ‘ಶಿಕ್ಷಣ, ಆರೋಗ್ಯ, ಉದ್ಯೋಗ’ ಎಂಬ ಮೂರಂಶಗಳನ್ನಿಟ್ಟುಕೊಂಡು ಚುನಾವಣೆಗಿಳಿದರು. ಕ್ಷೇತ್ರದ ತುಂಬ ಪಾದಯಾತ್ರೆ ಮಾಡಿ ಜನರ ನಾಡಿ ಮಿಡಿತ ಅರಿಯಲೆತ್ನಿಸಿದರು. ಆದರೂ 17 ಸಾವಿರಕ್ಕೂ ಮಿಕ್ಕಿ ಮತಗಳ ಅಂತರದಿಂದ ಲಾಸ್ಯ ಗೆದ್ದರು. (ಆದರೆ ಅವರು ಭೀಕರ ರಸ್ತೆ ಅಪಘಾತದಲ್ಲಿ ಇದೇ ಫೆಬ್ರುವರಿ 23ರಂದು ತೀರಿಕೊಂಡರು.) 43 ವರ್ಷದ ಎರಡು ಮಕ್ಕಳ ತಾಯಿ ವೆನ್ನೆಲ ತನ್ನ ತಂದೆಯ ಕನಸುಗಳನ್ನು ಸಾಕಾರಗೊಳಿಸಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವುದು ತನ್ನ ಗುರಿ ಎನ್ನುತ್ತಾರೆ. ಭ್ರಷ್ಟ, ಮೇಲ್ಜಾತಿಗಳ ಯಜಮಾನಿಕೆಗೆ ತುತ್ತಾಗಿರುವ, ಅಪರಾಧಿಗಳಿಂದ ತುಂಬಿ ಹೋಗಿರುವ ರಾಜಕೀಯ ರಂಗವನ್ನು ಸ್ವಚ್ಛಗೊಳಿಸಿ, ಬದಲಿಸುವುದೇ ತನ್ನ ಆಶಯ ಎನ್ನುತ್ತಾರೆ. ಅವರಿಗಿರುವ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ, ಶಿಕ್ಷಣಗಳ ಜೊತೆಗೆ ಜನಬೆಂಬಲವೂ ಒದಗಿ ಬಂದರೆ ಭವಿಷ್ಯದ ಉಜ್ವಲ ಜನ ನಾಯಕಿಯಾಗುವ, ಹೋರಾಟಗಾರ್ತಿಯಾಗವ ಸಾಧ್ಯತೆಗಳು ದಟ್ಟವಾಗಿವೆ. 

ಡಾ. ಜಿ. ವಿ. ವೆನ್ನೆಲ ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ಮಹಿಳಾ ಚೈತನ್ಯ ದಿನ’ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಸಿಕಂದರಾಬಾದಿನಿಂದ ಬರಲಿದ್ದಾರೆ. 

ಬನ್ನಿ, ಅವರೊಂದಿಗೆ ನಾವೂ ಕೈ ಜೋಡಿಸೋಣ.


No comments:

Post a Comment