Thursday 14 March 2024

ರಹಮತ್ ತರೀಕೆರೆಯವರ ‘ಕುಲುಮೆ’

 

ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆ

ಸಾಹಿತಿ, ಕಲಾಕಾರರು, ಆಟಗಾರರು, ಜನಪ್ರತಿನಿಧಿಗಳೇ ಮೊದಲಾಗಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಮಾಹಿತಿ ಕಾಲಕಾಲಕ್ಕೆ ಸುದ್ದಿಯಾಗಿ ತಿಳಿಯುವುದರಿಂದ ಅವರ ಬಗೆಗೆ ನಮಗೆಲ್ಲ ಗೊತ್ತು ಎಂದೇ ಸಮಾಜ ಭಾವಿಸುತ್ತದೆ. ಆದರೆ ಆ ವ್ಯಕ್ತಿತ್ವ ರೂಪುಗೊಂಡ ಪರಿ ಅದೃಶ್ಯವಾಗುಳಿದು ಕುತೂಹಲ ಮೂಡಿಸಿರುತ್ತದೆ. ಬರಹಗಾರ, ಚಳವಳಿಯ ಸಂಗಾತಿ, ವಿಚಾರವಾದಿ, ಸಂಸ್ಕೃತಿ ಚಿಂತಕ, ವಿಶ್ವವಿದ್ಯಾಲಯದ ಜನಪ್ರಿಯ ಮೇಷ್ಟ್ರು ಆದ ರಹಮತ್ ತರೀಕೆರೆಯವರು ‘ಇವರು ಹೇಗೆ ಈ ಪರಿ ತಯಾರಾದರು’ ಎಂದು ತಮ್ಮ ಶಿಷ್ಯಕೋಟಿ ಮತ್ತು ಓದುಬಳಗದಲ್ಲಿ ಕುತೂಹಲ ಮೂಡಿಸಿದ್ದರು. ಈಗದಕ್ಕೆ ಉತ್ತರವೋ ಎಂಬಂತೆ ತಮ್ಮನ್ನು ಬೆಳೆಸಿದ, ಬೆರಗಾಗಿಸಿದ ಸಾಕಷ್ಟು ಅಗೋಚರ ಸಂಗತಿಗಳನ್ನು ಆತ್ಮಚರಿತ್ರೆಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲದ ಕುಲುಮೆಯಲ್ಲಿ ಬಾಳು ರೂಪುಗೊಂಡ ಬಗೆಯನ್ನು ‘ಕುಲುಮೆ’ ಎಂಬ ಸೃಜನಶೀಲ ಹೊತ್ತಗೆಯಾಗಿಸಿದ್ದಾರೆ. 

ಇದೊಂದು ಜ್ಞಾಪಕ ಚಿತ್ರಶಾಲೆ. ನಿರೂಪಣೆಯುದ್ದಕ್ಕೂ ಬಾಲ್ಯ, ಯೌವನಗಳ ನಡುವೆ ಉಯ್ಯಾಲೆಯಂತಹ ಚಲನೆಯಿದೆ. ಲೇಖಕರೇ ಹೇಳಿರುವಂತೆ ಎಲ್ಲಿಂದಾದರೂ ಶುರುಮಾಡಿ ಎಲ್ಲಿಯಾದರೂ ಮುಗಿಸಬಹುದು. ಅಮ್ಮ ಮತ್ತು ಮನೆಯ ಹಿರಿಯರು ತಮ್ಮ ಬಗೆಗೆ ಹೇಳುವ ಬಾಲ್ಯದ ಪ್ರಸಂಗಗಳಿಂದ ಶುರುವಾಗವ ಜೀವನಕಥನವು ಎಳತರಲ್ಲೇ ತನ್ನಮ್ಮ ಧನುರ್ವಾಯುವಿನಿಂದ ತೀರಿಕೊಂಡ ದುಃಖವನ್ನು ತೋಡಿಕೊಳ್ಳುತ್ತ ಕೊನೆಯಾಗುತ್ತದೆ. ಮಗುವಿದ್ದಾಗ ಬಂದ ‘ಅಮ್ಮ’ನ (ಸಿಡುಬು) ಕಾರಣವಾಗಿ ಸಾವಿನ ಮನೆಗೆ ಹೋಗಿಬಂದ ಹುಡುಗ ದೈಹಿಕವಾಗಿ ಅಶಕ್ತನಾಗಿ ಭಾರೀ ಕೆಲಸಕ್ಕೆ ನಾಲಾಯಕ್ಕೆಂದು ಪರಿಗಣಿಸಲ್ಪಟ್ಟು ಓದಿನ ಅವಕಾಶ ಪಡೆಯುತ್ತಾನೆ. ಶಾಲೆಗೆ ಹೋಗುತ್ತ ಕುಲುಮೆ, ಕೃಷಿ, ಮನೆವಾರ್ತೆ, ಗಾರೆ ಕೆಲಸ, ಬೆರಣಿ ತಯಾರಿ, ವ್ಯಾಪಾರವೇ ಮೊದಲಾಗಿ ಸಂಸಾರದ ಬಂಡಿಗೆ ಹೆಗಲು ಕೊಡುವ ಉದ್ಯೋಗ ಮಾಡುತ್ತಲೇ ಶಿಕ್ಷಣ ಮುಂದುವರೆಸಿ ‘ಲಚ್ಚರ್’ ಆಗುವ ಮಹಾಪಯಣ ವಿಸ್ಮಯ ಹುಟ್ಟಿಸುವಂತಿದೆ. 

ಬಹುತೇಕ ಆತ್ಮಕತೆಗಳಲ್ಲಿ ಬಾಲ್ಯ, ಹದಿಹರೆಯಗಳ ಭಾಗ ಚೇತೋಹಾರಿಯಾಗಿರುತ್ತವೆ. ನಡುಹರೆಯ ದಾಟಿದ ನಂತರ ಆತ್ಮಪ್ರಶಂಸೆ, ಸಮಜಾಯಿಷಿ, ಆರೋಪ, ಹಳಹಳಿಕೆಗಳ ವಜ್ಜೆ ಓದುವವರ ಹೆಗಲೇರುತ್ತದೆ. ‘ನಾನು’ ರೂಪುಗೊಳ್ಳುವ ಮೊದಲು ತಿಳಿನೀರಿನಂತಿದ್ದ ಬದುಕು ನಂತರ ಪಾನಕವಾಗುತ್ತದೆ. ಬರೆವವರು ತಂತಮ್ಮ ಶಕ್ತ್ಯಾನುಸಾರ ಬೇಕಾದ್ದನ್ನೆಲ್ಲ ಸೇರಿಸಿ ದಾಹಿ ಓದುವರ್ಗಕ್ಕೆ ಕುಡಿಸುತ್ತಾರೆ. ಈ ದೃಷ್ಟಿಯಿಂದ ‘ಕುಲುಮೆ’ ವಿಭಿನ್ನವಾಗಿದೆ. ‘ಸದರಿ ಕಥನವು ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸೆಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನ ತತ್ವದ ಹುಡುಕಾಟ ಆಗಬೇಕು’ ಎಂದು ಲೇಖಕರು ಪ್ರಜ್ಞಾಪೂರ್ವಕ ನಿಲುವು ತಳೆದ ಕಾರಣವಾಗಿ ಕೊನೆಯತನಕ ಸುಲಲಿತ ಪ್ರಬಂಧದ ತರಹ ಓಡಿಸಿಕೊಂಡು ಓದಿಸಿಕೊಳ್ಳುತ್ತದೆ. 

ಯಾರದೇ ಬಾಳ್ಕಥನವು ಅವರೊಬ್ಬರದೇ ಆಗಲು, ಅವರು ಹುಟ್ಟಿ ಬದುಕಿದ ಕಾಲ ಮಾತ್ರದ್ದಷ್ಟೇ ಆಗಲು ಸಾಧ್ಯವಿಲ್ಲ. ಸಾಧ್ಯದ ತುಂದಿಬಿಂದುಗಳನ್ನು ಹಿಗ್ಗಲಿಸಿ ಹಲವಾರು ವ್ಯಕ್ತಿಚಿತ್ರ, ಸಂದರ್ಭಗಳನ್ನು ಜೊತೆಗೇ ಕಟ್ಟಬೇಕಾಗುತ್ತದೆ. ತಮ್ಮ ಸುತ್ತಮುತ್ತಲ ವ್ಯಕ್ತಿಗಳು, ಪರಿಸರ, ಗ್ರಾಮೀಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹಾಸ್ಯಪ್ರಜ್ಞೆ ಮತ್ತು ಹಳ್ಳಿಗಾಡಿನ ಶ್ರಮಸಮಾಜದ ವರ್ಣನೆ ಗಮನ ಸೆಳೆಯುವಂತಿವೆ. ಚರಾಚರಗಳು ಬದುಕಲೆಂದು ನಡೆಸುವ ಸಕಲ ಕರಾಮತ್ತುಗಳನ್ನೂ ನವಿರು ಹಾಸ್ಯದಲ್ಲಿ ವಿವರಿಸಿ ಜೀವಂತಿಕೆ ತುಂಬಿದ್ದಾರೆ. ಮಂಥನ, ಆತ್ಮಾವಲೋಕನೆ, ನಿವೇದನೆ, ತಪ್ಪೊಪ್ಪಿಗೆ ಎಲ್ಲವೂ ಇವೆ. ತಮ್ಮನ್ನು ತಾವೇ ಪರಿಹಾಸ್ಯ ಮಾಡಿಕೊಳ್ಳುವ ಗುಣವು ನಿರೀಕ್ಷಣಾ ಜಾಮೀನಿನಂತೆಯೂ, ಗುರಾಣಿಯಾಗಿಯೂ, ನೀರಗಂಟಿಯಾಗಿಯೂ ಒದಗಿಬಂದಿದೆ. ಹಾಸ್ಯದ ಚಾಟಿಯೇಟಿಗೆ ಹೆಚ್ಚು ಒಳಗಾಗಿರುವವರು ತಂದೆ ಮತ್ತು ಬಾಳಸಂಗಾತಿ. ಅವರಿಬ್ಬರೂ ರಹಮತರ ಬದುಕು, ಪ್ರಜ್ಞೆಗಳನ್ನಾವರಿಸಿ, ವಿಶಿಷ್ಟ ಲೋಕದೃಷ್ಟಿ ರೂಪಿಸಿದ್ದಾರೆ. 


ಈ ಕೃತಿಯು ಹಳ್ಳಿಗಾಡಿನ ಮುಸ್ಲಿಮರ ಲೋಕದೊಳಗೆ ಕನ್ನಡ ಓದುಗರಿಗೆ ಪ್ರವೇಶ ಒದಗಿಸಿದೆ. ಅಲ್ಲಿನ ಉರ್ದು-ಅರಬಿ-ಕನ್ನಡ ಮಿಶ್ರಿತ ಮಾತು, ನಾಣ್ಣುಡಿ, ಬೈಗುಳ, ಆಚರಣೆ, ಸಂಸ್ಕೃತಿ ಸಂಪ್ರದಾಯಗಳ ಬಗೆಗೆ ಅಮೂಲ್ಯ ವಿವರಗಳಿವೆ. ಬದಲಾದ ಸಾಮಾಜಿಕ ನೇಯ್ಗೆಯು ಮುಸ್ಲಿಂ ಸಮುದಾಯದ ಮೇಲೆ ಹೊರಿಸಿರುವ ಭಯಾತಂಕ, ಒತ್ತಡಗಳು ಹಲವೆಡೆ ಸೂಕ್ಷ್ಮವಾಗಿ ದಾಖಲಾಗಿವೆ. ‘ಪ್ರತಿ ಬಾರಿ ಗಣೇಶನ ಹಬ್ಬ ಬಂದಾಗಲೂ ಬಾಯಿಗೆ ಅಕ್ಕಿಕಾಳು ಹಾಕಿಕೊಂಡು ಎಚ್ಚರವಿದ್ದು ಕೊನೆಗೆ ಏನೂ ಗಲಭೆಯಿಲ್ಲದೆ ಹಬ್ಬ ಮುಗಿದಾಗ ನಿಟ್ಟುಸಿರೊಂದು ಹೊರಹೊಮ್ಮುವಂತಾಗುತ್ತಿತ್ತು’ ಎನ್ನುವ ಮಾತು ಓದುವವರಲ್ಲಿ ವಿಷಾದ, ದಿಗ್ಭ್ರಮೆಗಳನ್ನು ಹುಟ್ಟಿಸುತ್ತವೆ. 

ಯೋಚಿಸಿ, ಚರ್ಚಿಸಿ, ವೈಚಾರಿಕತೆಯನ್ನು ಅಳವಡಿಸಿಕೊಂಡವರಿಗೂ ಬದುಕಿನಲ್ಲಿ ಕೆಲವೊಮ್ಮೆ ಸಂದಿಗ್ಧಗಳೆದುರಾಗುತ್ತವೆ. ಎಳೆತನದಲ್ಲಿ ಧಾರ್ಮಿಕ ಪ್ರವೃತ್ತಿಯವರಾಗಿದ್ದು, ಓದು, ವೈಚಾರಿಕತೆಗೆ ತೆತ್ತುಕೊಂಡ ಬಳಿಕ ವಿಚಾರವಾದಿಯಾಗಿ ಬೆಳೆದರೂ ಬಾಳಲ್ಲಿ ಎದುರಿಸಿದ ದ್ವಂದ್ವಗಳನ್ನು ಪ್ರಾಮಾಣಿಕವಾಗಿ ಇಲ್ಲಿ ಮಂಡಿಸಲಾಗಿದೆ. ‘ಧಾರ್ಮಿಕತೆ-ವೈಚಾರಿಕತೆಗಳ ನಡುವೆ ಚಲಿಸಿದ ಬಾಳನಾವೆ ಕೊನೆಗೆ ಸೂಫಿ ಕಿನಾರೆಯಲ್ಲಿ ಲಂಗರು ಹಾಕಿತು’ ಎಂದು ಈಗ ನೆಲೆ ನಿಂತ ತಾವನ್ನು ಬಣ್ಣಿಸಿದ್ದಾರೆ.

ಕನ್ನಡಕ್ಕೆ ವಿಶಿಷ್ಟ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಟ್ಟಿರುವ ರಹಮತ್ ತರೀಕೆರೆ, ತಾನು ಬರಿಯ ಸಂಗ್ರಹಕಾರ; ಹೆಕ್ಕಿರುವುದನ್ನು ಪ್ರಸ್ತುತ ಪಡಿಸಿದೆನಷ್ಟೇ ಎಂದು ಹೇಳಿಕೊಂಡಿದ್ದಾರೆ. ಲೋಕಸಂಚಾರಿಯಾಗಿ ಹೆಕ್ಕಿ ಪ್ರಸ್ತುತಪಡಿಸಿದ ಸಂಗತಿಗಳು ಮಹತ್ವದ ಸಾಂಸ್ಕೃತಿಕ ಸಂಶೋಧನೆಗಳಾಗಿದ್ದರೂ ಅದರ ಅನುಭವ, ಹೆಗ್ಗಳಿಕೆಗಳ ಬಗೆಗೆ; ಅದಕ್ಕಾಗಿ ತಾನು ಪಡೆದ ಮನ್ನಣೆ, ಪ್ರಶಂಸೆಗಳ ಬಗೆಗೆ ಬರೆದುಕೊಳ್ಳದೇ ಅಕ್ಷರ ವ್ಯವಸಾಯಿಗಳಿಗಿರಬೇಕಾದ ಸಂಯಮವನ್ನು ಎತ್ತಿ ಹಿಡಿದಿದ್ದಾರೆ. ‘ಏನೇ ಬರೆಯಲಿ, ಉದಯೋನ್ಮುಖ ಅವಸ್ಥೆಯ ಅಳುಕು, ಅಭದ್ರತೆಗಳಿಂದ ಬಿಡುಗಡೆ ಸಿಕ್ಕಿಲ್ಲ’ ಎನ್ನುವಲ್ಲಿ ಬೆಳವಣಿಗೆಯ ತುದಿಗಳನ್ನು ಚಿವುಟುತ್ತ, ಚಿಗುರೊಡೆಯಲು ಇರುವ ಸಾಧ್ಯತೆಗಳನ್ನು ಸಜೀವವಾಗಿಟ್ಟಿರುವುದು ತಿಳಿದುಬರುತ್ತದೆ. ಬೇಹೊಣೆ, ದೌಡುವರು, ಸಮಜಾಯಿಶಿಸಿದೆ, ಉತ್ಪತ್ತಿಸುತ್ತಿದೆ, ಗರ್ವಿಸದಿರು, ತಲಾಶಿಸು, ಶೇವಿಸಿದ ಕೆನ್ನೆ, ಪ್ರದಕ್ಷಿಣಿಸಿರುವೆನೋ, ಮಾತುಕತಿಸುತ್ತಿದ್ದರು, ಕುದುರೆ ಸವಾರಿಸಿದ, ಅಪ್ಪಣಿಸಲು, ಸಿಟ್ಟಾಸ್ತ್ರ, ಹಿತವಚಿಸಿದರು.. ಮುಂತಾದ ಸಾಕಷ್ಟು ಹೊಸ ಪದ-ಪ್ರಯೋಗಗಳನ್ನು ಹೊಸ ಸಂಧಿ, ಸಮಾಸಗಳ ಮೂಲಕ ಸೃಷ್ಟಿಸಿದ್ದಾರೆ.  

ತನ್ನನ್ನು, ರಕ್ತಸಂಬಂಧಿಗಳಾದ ಅಕ್ಕ, ಅಣ್ಣ, ತಮ್ಮ, ಅಮ್ಮ, ಅಪ್ಪ, ಬಾಳಸಂಗಾತಿ, ಮಕ್ಕಳು, ಬಂಧುಮಿತ್ರರನ್ನು ಲೋಕ ಏನಂದುಕೊಂಡೀತೋ ಎಂದು ಯೋಚಿಸದೆ ತಮಗೆ ಕಂಡಹಾಗೆಯೇ ಅಚ್ಚು ಹಾಕಿರುವುದು ‘ಕುಲುಮೆ’ ಯ ವೈಶಿಷ್ಟ್ಯ. ಇದಕ್ಕೆ ಕೌಶಲ್ಯ, ಎದೆಗಾರಿಕೆ ಎರಡೂ ಬೇಕು. ತಮ್ಮ ತಕರಾರು, ಆತಂಕ, ಮೆಚ್ಚಿಗೆಗಳನ್ನು ಕೌಶಲ್ಯದಿಂದ ಕಡೆದು ಮಂಡಿಸುವ ಪರಿಯಲ್ಲೇ ಗುಲ್ಲಾಗಬಹುದಾದ ಸಂಗತಿಗಳು ಮಾನವ ಸಹಜವೆನಿಸಿಬಿಡುವಂತೆ ಮಾಡಿದ್ದಾರೆ. 

ಒಮ್ಮೆ ಜನಪದೆ-ಜ್ಞಾನಸುಧೆ ‘ಬಾನು-ನಾನು’ ಜೋಡಿ ನಮ್ಮನೆಗೆ ಬಂದಿತ್ತು. ಮೇಷ್ಟ್ರು ತಮ್ಮ ಜೀವನ ಚರಿತ್ರೆ ಬರೆಯುತ್ತಿರುವ ಸುಳಿವು ನೀಡಿದರು. ಜೊತೆ ಬಂದಿದ್ದ ಅವರ ಗೆಳೆಯರೊಬ್ಬರು, ‘ನಂ ವಿಷ್ಯ ಎಲ್ಲ ಬರೆದಾಯ್ತಾ?’ ಎನ್ನಲು ಬಾನು ಅಕ್ಕ, ‘ಎರಡ್ ವರ್ಷದಿಂದ ಬರಿತನೇ ಇದಾರೆ, ಬರೀತನೇ ಇದಾರೆ, ಇನ್ನೂ ನಾನೇ ಬಂದಿಲ್ಲ, ನೀವು ಬರೋದು ಡೌಟು’ ಎಂದು ಚಟಾಕಿ ಹಾರಿಸಿದ್ದರು. ನಿಜವೇ. ಇದರಲ್ಲಿ ಬಾರದ ತುಂಬ ವಿಷಯಗಳಿವೆ. 

ಯಾವುದನ್ನು ಬರೆಯಬೇಕು, ಯಾವುದನ್ನಲ್ಲ ಎನ್ನುವುದು ಸಂಪೂರ್ಣವಾಗಿ ಬರೆಯುವವರಿಗೇ ಬಿಟ್ಟಿದ್ದು, ನಿಜ. ಆದರೆ ರಹಮತರಂತಹ ಸೂಕ್ಷ್ಮಗ್ರಾಹಿಯ ಬಾಳ್ಕಥನದಲ್ಲಿ ನಾವು ನಿರೀಕ್ಷಿಸಿದ ಕೆಲವಂಶಗಳು ಇಲ್ಲದಿರುವಿಕೆಯಿಂದಲೇ ಎದ್ದು ಕಾಣುವಂತಿವೆ. ನಾಡೆಲ್ಲ ಸುತ್ತಿ ಬೇಕಿರುವುದನ್ನೆಲ್ಲ ಹೆಕ್ಕಿ ಸಾಂಸ್ಕೃತಿಕ ವಿಸ್ಮೃತಿಗೆ ಮದ್ದರೆದ ರಹಮತ್, ತಿರುಗಾಟದ ಅನುಭವ, ಸಾಕ್ಷಾತ್ಕಾರಗಳನ್ನು ಇಲ್ಲಿ ಕಾಣಿಸಿಲ್ಲ. ಅಧ್ಯಾಪನ, ಸಂಶೋಧನೆ, ಬರವಣಿಗೆ, ಕ್ಷೇತ್ರಕಾರ್ಯ, ಮೇಷ್ಟ್ರುಗಿರಿಯ ವಿವರಗಳು ವಿರಳವಾಗಿವೆ. ವಿಶ್ವವಿದ್ಯಾಲಯಗಳ ಬಗೆಗೆ, ಅಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ನೇತ್ಯಾತ್ಮಕ ಸುದ್ದಿಗಳೇ ಹೆಚ್ಚು ಕಿವಿಗೆ ಬೀಳುತ್ತವೆ. ಅದರ ನಡುವೆ ಗುರುಶಿಷ್ಯರ ನಡುವೆ, ಸಹೋದ್ಯೋಗಿಗಳ ನಡುವೆ ನಡೆಯುವ ಕೊಡುಕೊಳ್ಳುವಿಕೆಗೆ ಹಲವು ಮುಖಗಳೂ ಇರುತ್ತವೆ. ನಿವೃತ್ತಿಯಾಗುವವರೆಗೆ ತಮ್ಮ ಜೊತೆಯಾದ ವಿಶ್ವವಿದ್ಯಾಲಯ ಪರಿಸರ ಕುರಿತ ಒಂದೆರೆಡು ಪುಟ ಬಂದಿದೆಯಾದರೂ ಹೊಸತಲೆಮಾರನ್ನು ಬೆಳೆಸುವ, ಅವರೊಂದಿಗೆ ತಾವೂ ಹೊಸದಾಗಿ ಬೆಳೆಯಲು ಅವಕಾಶ ನೀಡುವ ಅಧ್ಯಾಪನದ ವಿವರಗಳು ಕಡಿಮೆ ಇವೆ.

ವಿಶ್ವಾದ್ಯಂತ ಮುಸ್ಲಿಮರ ಬಗೆಗೆ ಹಗೆತನ, ವೈರ ಹೆಚ್ಚಿಸುವಂತಹ ವಿದ್ಯಮಾನ ವ್ಯವಸ್ಥಿತವಾಗಿ ಸಂಭವಿಸುತ್ತಿದೆ. ಮುಸ್ಲಿಮೇತರರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವುದೇ ರಾಜಕಾರಣದ ದಾಳವಾಗಿರುವುದನ್ನು ಕಾಣುತ್ತಿದ್ದೇವೆ. ಬದಲಾವಣೆಗೆ ಸ್ವಲ್ಪವೂ ಒಡ್ಡಿಕೊಳ್ಳದ ಸ್ಥಗಿತ ಸಮಾಜ ಎಂಬಂತೆ ಮುಸ್ಲಿಂ ಸಮುದಾಯವನ್ನು ಬಿಂಬಿಸಲಾಗುತ್ತಿದೆ. ಹಾಗಿರಲು ಸಾಧ್ಯವಿಲ್ಲ. ಬದಲಾವಣೆ ಜಗದ ನಿಯಮ. ಆದರೆ ಮುಸ್ಲಿಂ ಸಮುದಾಯದೊಳಗೆ ಆಗುತ್ತಿರುವ ಕೋಮುವಾದಿ ಬೆಳವಣಿಗೆಗಳು, ಅದಕ್ಕೆ ಬಂದಿರುವ ಒಳಗಣ ಪ್ರತಿರೋಧ, ಆಂತರಿಕ ಮತ್ತು ಧಾರ್ಮಿಕ ಸಂಘರ್ಷಗಳ ವಿವರ ಹೊರಜಗತ್ತಿಗೆ ಕಾಣದಂತೆ ಪರದೆ ಕಟ್ಟಲಾಗಿದೆ. ಪರದೆಯೊಳಗಣ ತುಮುಲ, ಸಂಘರ್ಷಗಳ ಚಿತ್ರಣವನ್ನು ರಹಮತರಂಥವರು ಮಾತ್ರವೇ ಕಟ್ಟಿಕೊಡಲು ಸಾಧ್ಯವಿದೆ. ಈ ಹೊತ್ತಗೆಯಲ್ಲಿ ಅಂತಹ ವಿಷಯಗಳು ಗೈರಾಗಿವೆ. ಕೊನೆಗೆ ತಾವು ಕಂಡುಕೊಂಡ ಸೂಫಿ ನೆಲೆಯೂ ಸಹ ಸಾಂಸ್ಥಿಕಗೊಂಡು, ಪಟ್ಟಭದ್ರ ಹಂತ ತಲುಪಿರುವುದು, ಅದರೊಳಗೂ ನುಸುಳಿರುವ ಮೂಲಭೂತವಾದದ ಅವಲೋಕನ ಅದೃಶ್ಯವೆನ್ನುವಷ್ಟು ಸೂಕ್ಷ್ಮ ಎಳೆಯಾಗಿ ಚಿತ್ರಣಗೊಂಡಿದೆ. 

ಇಸ್ಲಾಮಿನ ಒಳಗಣ ಸಂಘರ್ಷದ ವಿವರಗಳು ಹಿಂದೂ ಬಲಪಂಥೀಯರ ದ್ವೇಷದ ಬೆಂಕಿಗೆ ತುಪ್ಪ ಸುರಿದು ಇಂಬಾದೀತೆಂಬ ಅಳುಕು ನಿರಾಧಾರ. ಏಕೆಂದರೆ ದ್ವೇಷದ ಬೆಂಕಿ ಹಚ್ಚುವವರು ಸತ್ಯಸಂಗತಿಗಳಿಗಿಂತ ಇಲ್ಲದ ಸುಳ್ಳು ಸುದ್ದಿಗಳನ್ನೇ ಅವಲಂಬಿಸುತ್ತಾರೆ. ಒಂದು ಧರ್ಮದ ಬಲಪಂಥೀಯತೆಯು ಮತ್ತೊಂದು ಧರ್ಮದ ಬಲಪಂಥೀಯತೆಯ ಕಾರಣವೂ, ಪರಿಣಾಮವೂ ಆಗಿರುವಾಗ ಹಿಂದೂ ಕೋಮುವಾದದ ಕಾರಣವಾಗಿ ಮುಸ್ಲಿಂ ಸಮುದಾಯದಲ್ಲಿ ಆಗಿರಬಹುದಾದ ಪಲ್ಲಟಗಳನ್ನು ಕಾಣಿಸಬಹುದಿತ್ತು. ಸಮುದಾಯದೊಡನಿದ್ದೂ ಇಲ್ಲದಂತಿರಬೇಕಾದ ತಳಮಳ, ಅದನ್ನೆದುರಿಸಿದ ಬಗೆಗಳನ್ನು ಮಂಡಿಸಿದ್ದರೆ ವೈಚಾರಿಕತೆ, ಹೊಸತನಕ್ಕೆ ತೆರೆದುಕೊಳ್ಳಬಯಸುವ ಭಾರತದ ಮುಸ್ಲಿಂ ಯುವ ಸಮುದಾಯಕ್ಕೆ ಇಂಬಾಗುತ್ತಿತ್ತು. ವಿಫಲ ಪ್ರೇಮ ಪ್ರಕರಣಗಳು, ಕೌಟುಂಬಿಕ ಸಂಬಂಧಗಳಲ್ಲಿ ತಲೆದೋರಿದ ಬಿಕ್ಕಟ್ಟುಗಳು, ದಾಂಪತ್ಯದ ಬಗೆಗೆ ಬಿಚ್ಚುನುಡಿಯಲ್ಲಿ ಬರೆದ ರಹಮತರು, ಧರ್ಮ-ದೇವರುಗಳನ್ನು ಅದಕ್ಕಿಂತ ಖಾಸಗಿ ವಿಷಯವಾಗಿಸಿ ‘ಮೌನ’ ವಹಿಸಿರುವುದು ಅಚ್ಚರಿದಾಯಕವಾಗಿದೆ. ಇದು ಕೆಲವು ವರ್ತಮಾನದ ಬಿಕ್ಕಟ್ಟಿನ ಸಮಯಗಳಲ್ಲಿ ಅವರ ಗೆಳೆಯರ ಬಳಗ ಆರೋಪಿಸುವುದೆಂದು ಅವರೇ ಬರೆದುಕೊಂಡ ‘ಸುಮ್ಮನಿದ್ದು ಅತ್ತ ಸರಿದುಬಿಡುವ’ ಸ್ವಭಾವದ ಹೊರಚಾಚೂ ಆಗಿರಬಹುದು. ಪ್ರಸಕ್ತ ಬಿಕ್ಕಟ್ಟಿನ ಕಾಲದಲ್ಲಿ ಅವರದನ್ನು ಉಳಿವಿನ ದಾರಿಯಾಗಿಯೂ ಕಂಡುಕೊಂಡಿರಬಹುದು. 

ಯಾಕೋ ಸಾರಾ, ಬಾನು, ನಜ್ಮಾ ಬಾಂಗಿ ನೆನಪಾಗುತ್ತಿದ್ದಾರೆ. ಅಪ್ರಿಯ ಸತ್ಯಗಳನ್ನು ಹೇಳಲು, ಕಟುವಾಸ್ತವ ವಿವರಿಸುವ ಪ್ರಶ್ನೆಗಳನ್ನೆತ್ತಲು ಹೆಣ್ಣುಜೀವಗಳೇ ಆಗಬೇಕೇನೋ!?   

ಅದೇನೇ ಇರಲಿ, ಕನ್ನಡದ ಮಹತ್ವದ ಲೇಖಕರಾಗಿರುವ ರಹಮತ್ ಅವರ ಶಿಷ್ಯೆಯಾಗಿದ್ದೆನೆನ್ನುವುದು ನನಗಂತೂ ಜಂಬ ತರುವ ಸಂಗತಿಯಾಗಿದೆ. ನಾನು ಪಿಯುಸಿ ಓದಿದ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ‘ಲಂಬೂ’ ತರೀಕೆರೆ ಮೇಷ್ಟ್ರು ಕನ್ನಡ ನಾನ್‌ಡಿಟೇಲ್ ಟೆಕ್ಸ್ಟ್ ಪಾಠ ಮಾಡುತ್ತಿದ್ದರು. ಅವರು ಏನು ಪಾಠ ಮಾಡಿದ್ದರೋ ನೆನಪಿಲ್ಲ. ಆದರೆ ‘ಗೋಲ್ಡ್ ಮೆಡಲಿಸ್ಟ್’ ಕನ್ನಡ ಮೇಷ್ಟ್ರು ಹೇಗೆ ಪಾಠ ಮಾಡಿದ್ದರೆನ್ನುವುದು ಮತ್ತು ಅವರ ಅತಿಸುಂದರ ಬರವಣಿಗೆ ಚೆನ್ನಾಗಿ ನೆನಪಿದೆ. ‘ಪ್ರಶ್ನೆ ಮತ್ತು ಹುಡುಕಾಟ ಉಳ್ಳವರಿಗೆ ನಿಲುಗಡೆಯ ಮುಕ್ತಿ ಇದ್ದಂತಿಲ್ಲ’ ಎನ್ನುವ ಗುರುಗಳೇ, ನಿಮಗೂ, ನಿಮ್ಮನ್ನು ಜೀವಂತಿಕೆಯಿಂದಿಟ್ಟಿರುವ ಬಾನು ಅಕ್ಕನೇ ಮೊದಲಾದ ಸಕಲ ಚರಾಚರಗಳಿಗೂ ಸಪ್ರೇಮ ವಂದನೆ.

ಡಾ. ಎಚ್. ಎಸ್. ಅನುಪಮಾ

No comments:

Post a Comment