Tuesday 12 March 2024

ತನ್ನ ಹೆಸರ ತಾ ಮರೆತವಳು..



(Image Source Internet)

ಒಬ್ಬಳು ಹುಡುಗಿ. ಮನೆಯ ಮುದ್ದಿನ ಮಗಳು. ಅವಳ ಚಟಪಟ ಮಾತು, ನಗು, ನಡವಳಿಕೆ ಎಲ್ಲರಿಗೂ ಮುದ್ದೋಮುದ್ದು. ಶಾಲೆಯಲ್ಲೂ ಚುರುಕು. ಆಟೋಟಕ್ಕೂ ಸೈ. ಅಡುಗೆ, ಮನೆಗೆಲಸಕ್ಕೆ ಎತ್ತಿದ ಕೈ. ಅಮ್ಮನಿಗೆ ಅಚ್ಚುಮೆಚ್ಚು. ಅಪ್ಪನಿಗೆ ಪೆಟ್. ಹಾರುತ್ತ, ಒಲಿಸುತ್ತ, ಒಲಿಯುತ್ತ, ಮುನಿಯುತ್ತ, ಮಣಿಯುತ್ತ ಹಕ್ಕಿಯಂತೆ ಹಾರುತ್ತಿದ್ದಳು, ಮೀನಂತೆ ಈಜುತ್ತಿದ್ದಳು. ಸುಖದ ದಿನಗಳು.

ಎಲ್ಲವೂ ಒಂದಲ್ಲ ಒಂದು ದಿನ ಕೊನೆಯಾಗಲೇಬೇಕಲ್ಲ. ಅವಳ ಸುಖದ ದಿನ ಕೊನೆಯಾಗುವ ಕಾಲ ಬಂದೇ ಬಂದಿತು.

ಅವಳಿಗೆ ಮದುವೆಯಾಯಿತು.

ಅವಳ ಹೆಸರು ಬದಲಾಯಿತು. ಪಾತ್ರ ಬದಲಾಯಿತು. ನೋಡುವ ಕಣ್ಣುಗಳು ಬದಲಾದವು. ನಿರೀಕ್ಷೆಗಳು ಬದಲಾದವು. ಕೂರುವ, ಏಳುವ, ನಿದ್ರಿಸುವ, ಉಣ್ಣುವ, ಕೋಪಿಸಿಕೊಳ್ಳುವ, ನಗುವ ಸಮಯ ಸಂದರ್ಭ, ಭಾವಭಂಗಿಗಳು ಇದ್ದಕ್ಕಿದ್ದಂತೆ ಸಂಪೂರ್ಣ ಬದಲಾಗಿಬಿಟ್ಟವು. ಅವಳೂ ಬದಲಾದಳು. ಎಷ್ಟರಮಟ್ಟಿಗೆಂದರೆ ತಾನೆಲ್ಲಿರುವೆ, ಏನು ಮಾಡುತ್ತಿರುವೆ, ಇದುವರೆಗೂ ಏನಾಗಿದ್ದೆ, ಏನಾಗುತ್ತಿದೆ ಎನ್ನುವುದೆಲ್ಲ ಮರೆತೇಹೋಯಿತು. ದಿನದಿನವೂ ಬದಲಾಗುವುದೇ ಬದುಕಾಯಿತು. ಸೊಸೆಯಾದಳು, ಸತಿಯಾದಳು, ಅತ್ತಿಗೆಯಾದಳು, ವಾರಗಿತ್ತಿಯಾದಳು, ನಾದಿನಿಯಾದಳು, ಚಿಕ್ಕಮ್ಮ ದೊಡ್ಡಮ್ಮನಾದಳು, ಅಮ್ಮನಾದಳು. 


(Image Source Internet)

ಈಗ ಮನೆಯಲ್ಲಿ ಎಲ್ಲರಿಗೂ ಅವಳು ಬೇಕು. ಅವಳೇ ಬೇಕು. ಅತ್ತೆಮಾವರಿಗೆ ಅವಳಿಲ್ಲದಿದ್ದರೆ ದಿನ ಸರಿಯುವುದೇ ಇಲ್ಲ. ಮಕ್ಕಳಿಗೆ ಅಮ್ಮನಿಲ್ಲದಿದ್ದರೆ ಬೆಳಗಾಗುವುದಿಲ್ಲ. ಅವಳಿಲ್ಲದಿದ್ದರೆ ಗಂಡ ಏನು ಮಾಡಿಯಾನು ಪಾಪ? ಅವನಮ್ಮ ಅಪ್ಪ ಮಗರಾಯನಿಗೆ ಯಾವ ಕೆಲಸವನ್ನೂ ಕಲಿಸಿರಲಿಲ್ಲ. ಅವಳಿಲ್ಲದಿದ್ದರೆ ಹಿತ್ತಿಲು, ಅಂಗಳ ನಳನಳಿಸುವುದಿಲ್ಲ. ಬೆಕ್ಕು, ನಾಯಿ, ದನ ಬಾಯಿ ಮುಚ್ಚುವುದಿಲ್ಲ. ಎಲ್ಲರಿಗೂ ಅವಳು ಬೇಕು. ಅವಳೇ ಬೇಕೇಬೇಕು ಎಂದಾಗಿರುವಾಗ, 

ಒಂದು ದಿನ..

ಒಂದು ದಿನ, ಇದ್ದಕ್ಕಿದ್ದಂತೆ ಅವಳಿಗೆ ತನ್ನ ಹೆಸರು ಮರೆತೇ ಹೋಯಿತು! ನಂಬಿ, ಏನು ಮಾಡಿದರೂ ನೆನಪಾಗುತ್ತಿಲ್ಲ. ತಲೆ ಕೆರೆದುಕೊಂಡಳು. ಯೋಚಿಸಿದಳು. ಕಣ್ಮುಚ್ಚಿ ತೆರೆದಳು. ಕೂತಳು, ನಿಂತಳು, ಮಲಗಿ ಕನಸಿನಲ್ಲಿ ತಿಳಿಯಬಹುದೇ ನೋಡಿದಳು. ಊಂಹ್ಞೂಂ, ಅವಳಿಗೆ ತನ್ನ ಹೆಸರು ನೆನಪಿಗೇ ಬರುತ್ತಿಲ್ಲ.

ಅಯ್ಯೋ, ಇದೇನಿದು! ಅವಳಿಗೆ ಸಿಕ್ಕಾಪಟ್ಟೆ ಆತಂಕವಾಯಿತು. ತನ್ನ ಹೆಸರೇ ನೆನಪಿಗೆ ಬರ‍್ತಿಲ್ಲವಲ್ಲ, ಮುಂದೇನು? ಯಾರನ್ನಾದರೂ ಕೇಳಲೇ? ನಗಾಡುವುದಿಲ್ಲವೆ ಕೇಳಿದವರು? 

‘ಮಾವ, ಮಾವ, ನನ್ ಹೆಸರೇ ಮರೆತೋಗಿದೆ, ಹೇಳ್ತೀರಾ?’

‘ಆಂ.. ನೀ ಯಾರೇ?’

ಥೋ, ಮರೆವು ಹತ್ತಿದವರ ಬಳಿ ಮರೆತ ನನ್ನ ಹೆಸರು ಕೇಳ್ತಿದೀನಲ, ‘ಅತ್ತೆ ಅತ್ತೆ, ಏನಂದ್ಕತಿರ ಏನ, ನನ್ ಹೆಸರೇ ಮರ‍್ತು ಹೋಗಿ ಏನ್ ಹೇಳ್ಲೀ ಗೊತ್ತಾಗ್ತಿಲ್ಲ..’ ಎಂದಳು.

‘ಗಂಡಸ್ರ ಮರೆವಿನ ಕಾಯ್ಲೆ ಈಗ್ಲೇ ಸುರುವಾಯ್ತಾ ನಿಂಗೆ. ಹೋಗ್ಲಿ ತಗ, ಹೆಸರಿದ್ಕಂಡ್ ಏನುಪಯೋಗ ನಮಿಗೆ? ಮರೆಯುದೇ ಒಳ್ಳೇದು’ ಎಂದರು.

ಅಯ್ಯೋ, ಇವರಿಗೇಕೆ ಅರ್ಥನೇ ಆಗ್ತಿಲ್ಲ? ತಲೆಚಚ್ಚಿಕೊಂಡಳು. ‘ಮಕ್ಳೇ ನನ್ ಹೆಸರೇನು ಹೇಳಿ ನೋಡುವಾ?’

‘ನೀನಾ? ನಮ್ಮಮ್ಮ’ ಚಪ್ಪಾಳೆ ತಟ್ಟಿ ನಕ್ಕವು.

ಅಮ್ಮ ಅಂತನಾ ನನ್ ಹೆಸರು? ಇಲ್ಲಿಲ್ಲ. ‘ಇವರ’ ಹತ್ರ ಕೇಳ್ತಿನಿ ಅಂದುಕೊಂಡಳು.

‘ಏನೇ, ಕೇಳ್ತಾ, ನನ್ ಶೂ ಎಲ್ಲಿ ಹಾಳಾಗೋಯ್ತು, ಹುಡುಕ್ಕೊಡು ಸಿಗ್ತಿಲ್ಲ..’

‘ಅಲ್ಲೇ ಇದೆಯಲ, ನಿಮಗಂತೂ ಎದುರಿದ್ರೂ ಕಾಣದೇ ಇಲ್ಲ. ರೀರೀ, ನಂಬ್ತಿರೊ ಬಿಡ್ತಿರೊ, ನಂಗ್ ನನ್ನ ಹೆಸರೇ ನೆನಪಾಗ್ತಿಲ್ಲ ಕಣ್ರಿ’

‘ಹೆಸರ‍್ಯಾಕೆ ಬೇಕು ಚಿನ್ನ?’

‘ಚಿನ್ನ! ಅದು ನನ್ನ ಹೆಸರಾ?’

‘ಅದೇ ಇಟ್ಕ ಏನೀಗ. ನಿಂಗ್ಯಾರ ಹೆಸರು ಬೇಕೋ ಅದನ್ನಿಟ್ಕ, ಫೇಮಸ್ ಸಿನಿಮಾ ಹೀರೋಯಿನ್‌ದು ಬೇಕಾ? ರಾಷ್ಟ್ರಪತಿದು ಬೇಕಾ? ಬೇಕಾದ್ದು ಇಡುಸ್ತಿನಿ. ಏನೇ, ಕೇಳ್ತಾ? ರಾತ್ರಿ ಬರದು ಲೇಟಾಗುತ್ತೆ, ಹ್ಞಂ..’

ಯಾರದೋ ಹೆಸರಿಟ್ಕಂಡರೆ ಅದು ನನ್ ಹೆಸರು ಹೇಗಾಗುತ್ತೆ? 

‘ನಿಂಗಮ್ಮ, ನಿಂಗಮ್ಮ, ಒನ್ನಿಮಿಷ ನಿಲ್ಲು, ನಾ ಯಾರಂತ ಗೊತ್ತ ನಿಂಗೆ?’

‘ಇದೇನಿಂಗ್ಕೇಳೀರಿ. ಬುಡಿ, ನೀವ್ಗೊತ್ತಿಲ್ವ, ಸವ್ಕಾರ್ರ ಎಂಡ್ರು..’

ಅಯ್ಯೋ, ಅದಾಯ್ತು, ಆದ್ರೆ ನಾ ಯಾರು? ನನ್ನ ಹೆಸರು?

ಹೆಸರು ಮರೆಸಲ್ಪಟ್ಟವಳ ದಿನರಾತ್ರಿಗಳು ಇದೇ ತಲ್ಲಣದಲ್ಲೇ ಉರುಳುತ್ತಿರಲು .. ..

ಈಗ ಹೇಳಿ, ಅವಳಿಗೆ ಸಿಕ್ಕಿದ್ದು ಏನು? ಕಳಕೊಂಡಿದ್ದು ಏನು? ತಿಳಿಯಿತೇ ನಿಮಗೇನಾದರೂ? 

(Image Source Internet)

ಗೆಳತಿ ವಾಣಿ ಪೆರಿಯೋಡಿಯಿಂದ ಕೇಳಿದ ಮೇಲಿನ ಕತೆ (ತೆಲುಗು ಲೇಖಕಿ ಪಿ. ಸತ್ಯವತಿ ಅವರ `ದಮಯಂತಿಯ ಮಗಳು’ ಸಂಕಲನದ ಕತೆ) ನಾನಾ ಅರ್ಥ ಹೊರಡಿಸುವಂತಿದೆ. 

ಹೆಣ್ಣು ಎಲ್ಲೆಡೆಯಿಂದ ಕಳೆದುಹೋಗಿರುವಳು, ಕಾಣೆಯಾಗಿರುವಳು, ಕಾಣದಂತಾಗಿರುವವಳು. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರೇ ಇದ್ದರೂ, ಎದುರಿದ್ದರೂ ಅದೃಶ್ಯವಾಗಿರುವವರು. ಸುತ್ತಮುತ್ತ ಮಹಿಳೆಯರೇ ತುಂಬಿದ್ದರೂ ‘ಅಯ್ಯೋ, ಸಮರ್ಥ ನಾಯಕಿಯರೇ ಸಿಗ್ತಿಲ್ಲ, ಭಾಷಣಕಾರ್ತಿಯರೇ ಇಲ್ಲ, ಬರಹಗಾರ್ತಿಯರೇ ಇಲ್ಲ, ಸಾಧಕಿಯರೇ ಕಾಣ್ತಿಲ್ಲ, ಒಳ್ಳೇ ಹೆಣ್ಣೇ ಇಲ್ಲ’ ಎನ್ನುತ್ತಾರೆ! ಹೊರಗೆ ಸಮಾಜದಲ್ಲಂತೂ ಆಯಿತು, ಮನೆಯಲ್ಲಾದರೂ ಹೆಣ್ಣು ಕಾಣಿಸುವಳೇ? ‘ಕಂಡೋರ ಮನೆಯ ಸೇರಲಿರುವ ಗುಂಡು’ ಎಂದೇ ಬೆಳೆಯುತ್ತಾಳೆ. ಮದುವೆಯೇ ಹೆಣ್ಣು ಬದುಕಿನ ಆತ್ಯಂತಿಕ ಗುರಿ ಎಂದು ಒಪ್ಪಿಸಲ್ಪಟ್ಟಿದ್ದಾಳೆ. ಬಳಿಕ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’. ಮದುವೆಯಾದದ್ದೇ ಅವಳ ಹೆಸರು ತವರಿನ ಪಡಿತರ ಚೀಟಿಯಿಂದ ರದ್ದಾಗಿ ‘ಕೊಟ್ಟ’ ಮನೆಯ ಕಾರ್ಡಿಗೆ ವರ್ಗಾವಣೆಯಾಗುತ್ತದೆ. ಇಂಥವರ ಮಗಳು ಎನ್ನುವುದು ಇಂಥವರ ಹೆಂಡತಿ ಎಂದು ಬದಲಾಗುತ್ತದೆ. ತವರಿನಲ್ಲಿಟ್ಟ ಹೆಸರನ್ನೂ ಬದಲಿಸುವ ರೂಢಿ ವ್ಯಾಪಕವಾಗಿದೆ. ಅವಳ ಖಾಸಗಿ ಸ್ಥಳ, ಬದುಕು, ಆಪ್ತವಲಯ, ಕೆಳೆತನದ ವಲಯಗಳು ಸಂಪೂರ್ಣ ಬದಲಾಗುತ್ತವೆ. ಬದುಕಿನ ಹಲವು ತಿರುವುಗಳಲ್ಲಿ ಹೆಣ್ಣಿಗೆ ಆಯ್ಕೆಯ ಅವಕಾಶ ಇಲ್ಲ. ಇದ್ದರೂ ಅದು ಪೂರ್ವ ನಿರ್ಧರಿತ. ಎಲ್ಲರ ಹಕ್ಕು, ಸುಖಗಳನ್ನೆತ್ತಿ ಹಿಡಿದು ಪತ್ನಿಯೆಂಬ, ತಾಯ್ತನವೆಂಬ ಹಕ್ಕುನಷ್ಟದ ಸ್ಥಿತಿಯನ್ನೇ ಪರಮ ಪಾವನವೆಂದು ಪರಿಗಣಿಸಿ ತ್ಯಾಗಮಯಿಯಾಗಬೇಕು. ‘ಇದ್ರೆ ಅವರ ಅಮ್ಮನ ತರಹ ಇರಬೇಕು’, ‘ಜೋಡಿ ಅಂದ್ರೆ ಅವುರ‍್ದು..’ ಎಂಬ ಹೊಗಳಿಕೆ ಗಳಿಸಿಕೊಳ್ಳಲು ಮೈಸುಟ್ಟುಕೊಂಡು ಪೂರಿಯಂತೆ ಉಬ್ಬಬೇಕು. 

ಅಮ್ಮನಾಗುವುದೊಂದು ಖಟ್ಟಾಮಿಠ್ಠಾ ಅನುಭವ. ಎಷ್ಟು ಸಂಭ್ರಮವೋ ಅಷ್ಟೇ ಆತಂಕ. ಎಷ್ಟು ಹೆಮ್ಮೆಯೋ ಅಷ್ಟೇ ದಮನಿತ ಅನುಭವ. ಅದರಲ್ಲೂ ಬಸುರು, ಬಾಣಂತನ, ಹೆರಿಗೆ, ತಾಯ್ತನಗಳನ್ನು ಸಾವಧಾನವಾಗಿ ಅನುಭವಿಸುವಷ್ಟೂ ಸಮಯ ಮಾಡಿಕೊಳ್ಳಲಾಗದ ಈ ಕಾಲದ ತಾಯಿಯರ ಅನುಭವ ತುಂಬ ಭಿನ್ನವಾಗಿದೆ. ಆದರೆ ತಾಯ್ತನದ ನಿಜ ಅನುಭವವನ್ನು, ಸಂಕಟವನ್ನು ಹೇಳುವ ಅವಕಾಶವೇ ಇಲ್ಲ. ಬರಿಯ ಸಂಭ್ರಮಿಸಬೇಕು. ಮಕ್ಕಳ ಅನುದಿನದ ಬೇಕುಬೇಡಗಳ ಪೂರೈಸುತ್ತ, ಹಲವು ಒತ್ತಡಗಳ ಸಹಿಸುತ್ತ ಬದುಕಬೇಕು. ತಾಯಿಗೊಂದು ಅಲಂಕಾರಿಕ ದಿನ, ಸ್ಥಾನ ಕೊಟ್ಟುದಕ್ಕೆ ಧನ್ಯಳಾಗಬೇಕು. ಇಷ್ಟಾದರೂ ಯಾವ ಮಕ್ಕಳ ಹೆಸರಿನಲ್ಲಾದರೂ ಅವರ ಅಮ್ಮನ ಹೆಸರಿರುವುದೇ? ಅಮ್ಮನ ಹೆಸರಿನಲ್ಲಿ ಅಜ್ಜಿಯ ಹೆಸರಿಲ್ಲ. ಅಜ್ಜಿಯ ಹೆಸರಲ್ಲಿ ಅವಳಮ್ಮನ ಹೆಸರಿಲ್ಲ. ಹೀಗೇ ಸಾವಿರಾರು ವರ್ಷಗಳಿಂದ ಹೆತ್ತರೂ, ಹೊತ್ತರೂ, ಹೆತ್ತುಹೆತ್ತು ಸತ್ತರೂ ತನ್ನ ಹೆಸರ ಗುರುತೇ ಇಲ್ಲದಂತೆ ಬಾಳಿ ಹೋದವರು ಮಹಿಳೆಯರು. ಅವಳ ಕುರುಹಿಲ್ಲವೆನ್ನುವುದು ಕೊರತೆಯೆಂದು ಯಾರಿಗೂ ಅನ್ನಿಸುವುದಿಲ್ಲ. ಸ್ವತಃ ತನ್ನ ತಾನೇ ಮರೆತ ಹೆಣ್ಣಿಗೂ.

ಸಮಾಜ ಹೀಗಿರುವಾಗ ಮಹಿಳೆ ತಾನು ಕಾಣೆಯಾಗದಿರಲು ಕುಟುಂಬವೆಂಬ ಗಾಣಕ್ಕೆ ಕಟ್ಟಿದ ಹಸುವಾಗದೇ ಹೊಸಿಲು ದಾಟಿ ಎಲ್ಲರಿಗೂ ಘನತೆಯ ಬದುಕು ದೊರೆಯಲೆಂದು ಕೈಜೋಡಿಸಬೇಕು. ಎಲ್ಲ ಸಂಬಂಧಗಳಿಗಿಂತ ಗಾಢವಾದದ್ದು ಸೋದರಿತ್ವ; ಅದುವೇ ಜಗದ ಎಲ್ಲ ಹೆಣ್ಣುಗಳ, ಮನುಷ್ಯರ ಒಗ್ಗೂಡಿಸಬಲ್ಲ ಶಕ್ತಿ; ಮೂರು ಜುಟ್ಟು ಸೇರದಿದ್ದ ಕಡೆಯೂ ಸಾವಿರ ಜಡೆಗಳು ಸೇರಬಲ್ಲವು ಎಂದು ಸಾಧಿಸಿ ತೋರಿಸಬೇಕು. ಲೋಕ ಶಾಂತಿಯಿಂದಿರಲು ಇದೊಂದೇ ದಾರಿ ಎಂದು ತಿಳಿಯಬೇಕು.

                                                                                                   ಡಾ. ಎಚ್. ಎಸ್. ಅನುಪಮಾ

(Published in Varthabharathi Daily on March 8th, 2024)

2 comments:

  1. Tumba chennaagi Barediddiri. Namma gandasru odidare chennaagirutte

    ReplyDelete