Monday 13 October 2014

ಮಂಗಳ ಯಾನ




ಸೆ. ೨೪, ೨೦೧೪. ಭಾರತದ ೧೩೫೦ ಕೆಜಿ ಭಾರದ ‘ಮಾರ್ಸ್ ಆರ್ಬಿಟರ್ ಮಿಷನ್’ ನೌಕೆ ಮಂಗಳನ ಗುರುತ್ವ ವಲಯ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ೨೦೧೩, ನವೆಂಬರ್ ೫ರಂದು ಶ್ರೀಹರಿ ಕೋಟಾ ಉಡ್ಡಯನ ಕೇಂದ್ರದಿಂದ ಹಾರಿದ ಮೇಲೆ ಭೂಮಿ ಸುತ್ತ ಚಂದ್ರನಂತೆ ತಿರುಗಲು ಆರಂಭಿಸಿ, ಸುತ್ತುವ ಪಥವನ್ನು ಆರು ಬಾರಿ ಬದಲಾಯಿಸಿ, ಕೊನೆಗೆ ಭೂ ಗುರುತ್ವ ತಪ್ಪಿಸಿಕೊಂಡು ಅದರಾಚೆ ನಭಕ್ಕೆ ಜಿಗಿದಿದ್ದ ನೌಕೆ ಸೂರ್ಯನ ಸುತ್ತ ಸುತ್ತುತ್ತ ಹೊಂಚುಹಾಕುತ್ತಿತ್ತು. ಭೂಮಿಯಿಂದ ೨೨.೪ ಕೋಟಿ ಕಿಮೀ ದೂರದಲ್ಲಿದ್ದರೂ ಬೆಂಗಳೂರಿನ ನಿಯಂತ್ರಣ ಕೇಂದ್ರದ ರೇಡಿಯೋ ಸಿಗ್ನಲ್ ಸಂಕೇತ ಸ್ವೀಕರಿಸಿ ಮಂಗಳ ಗ್ರಹ ಸಮೀಪ ಬಂದದ್ದೇ ಅದರ ವಲಯ ಪ್ರವೇಶಿಸಿ ಯಶಸ್ವಿಯಾಗಿ ತಿರುಗತೊಡಗಿತು.

ಅಮೆರಿಕ, ರಷ್ಯಾ ಮತ್ತು ಯೂರೋಪಿನ ಸ್ಪೇಸ್ ಏಜೆನ್ಸಿಯ ನಂತರ ವಿಶ್ವದಲ್ಲಿ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ನೌಕೆ ಕಳಿಸಿದ ನಾಲ್ಕನೇ ದೇಶ ಭಾರತವಾಗಿದೆ. ಜಪಾನ್, ಚೀನಾಗಳ ಪ್ರಯತ್ನ ವಿಫಲವಾಗಿದ್ದ ಕಾರಣ ಮಂಗಳ ನೌಕೆಯನ್ನು ಕಳಿಸಿದ ಏಷ್ಯಾದ ಪ್ರಥಮ ದೇಶ ಎಂಬ ಹೆಗ್ಗಳಿಕೆಯೂ ಭಾರತಕ್ಕೆ ಸಿಕ್ಕಿದೆ. ೨೦೦೮ರ ಚಂದ್ರಯಾನ ಹಾಗೂ ಈ ಮಂಗಳ ಯಾನ ಯಶಸ್ವಿಯಾಗುವುದರೊಂದಿಗೆ ಭಾರತ ಬಾಹ್ಯಾಕಾಶ ವಿಜ್ಞಾನ ಹಾಗೂ ಅಂತರಿಕ್ಷ ಸಂಶೋಧನೆ ವಿಷಯದಲ್ಲಿ ವಿಶ್ವದ ಪ್ರಮುಖ ದೇಶಗಳ ಜೊತೆ ಮುಂಚೂಣಿಯಲ್ಲಿ ನಿಂತಿದೆ.

ನಮ್ಮ ಉಪಗ್ರಹ ಉಡಾವಣಾ ವ್ಯವಸ್ಥೆ ಎಷ್ಟು ಕರಾರುವಾಕ್ ಹಾಗೂ ಕಡಿಮೆ ಬೆಲೆಗೆ ಆಗುವಂಥದೆಂದರೆ ಹಲವು ದೇಶಗಳು ನಮ್ಮ ದೇಶ ತಯಾರಿಸಿದ ರಾಕೆಟ್‌ನಿಂದ ತಮ್ಮ ಉಪಗ್ರಹಗಳನ್ನು ಇಲ್ಲಿಂದಲೇ ಹಾರಿಬಿಡುತ್ತಿವೆ. ಅಂತರಿಕ್ಷ ವಿಜ್ಞಾನ ಮತ್ತು ಗಣಿತದಲ್ಲಿ ಭಾರತ ಮೊದಲಿನಿಂದಲೂ ಇತರ ದೇಶ, ನಾಗರಿಕತೆಗಳಿಗಿಂತ ಹೆಚ್ಚಿನ ತಿಳಿವನ್ನು ಪಡೆದಿತ್ತು. ಆದರೆ ಮೊದಲ ಸಹಸ್ರಮಾನದ ನಂತರ ವಿಜ್ಞಾನ ತಿಳುವಳಿಕೆಗೆ ಒಂದು ಮಂಕು ಆವರಿಸಿತು. ನಂತರ ವಿದೇಶೀ ಆಳ್ವಿಕೆ, ಬಡತನ, ಆಂತರಿಕ ಬಿಕ್ಕಟ್ಟು, ರಾಜಕೀಯ ಹೋರಾಟ, ಜಾತಿಧರ್ಮಗಳ ಮೇಲಾಟದ ನಡುವೆ ಕಲೆ, ಸಂಗೀತ, ಸಾಹಿತ್ಯಗಳು ಏಳ್ಗೆ ಹೊಂದಿದರೂ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಸ್ಥಗಿತತೆ ಬಂದುಬಿಟ್ಟಿತು.

ಈ ೧೫೦ ವರ್ಷಗಳಲ್ಲಿ ಆಂತರಿಕ ಸಮಸ್ಯೆಗಳ ನಡುವೆಯೂ ನಮ್ಮ ನೆಲದಲ್ಲಿ ಹಲವಾರು ವಿಜ್ಞಾನಿಗಳು ರೂಪುಗೊಂಡರು. ಈಗ ಅಂಥದೊಂದು ವಿಜ್ಞಾನಿಗಳ ತಂಡದೊಂದಿಗೆ ತಂತ್ರಜ್ಞ, ಸಹಾಯಕ, ಕೆಲಸಗಾರರು ಅವಿರತ ಶ್ರಮ ವಹಿಸಿ ದುಡಿದು ಮಂಗಳ ಯಾನ ಯಶಸ್ವಿಯಾಗಿಸಿದ್ದಾರೆ,

ಅವರೆಲ್ಲರಿಗೂ ಅಭಿನಂದನೆಗಳು.


ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವೆ?

ಇದೇ ವೇಳೆ ಸಾಮಾಜಿಕ ಕಾಳಜಿಯುಳ್ಳ ಕೆಲವು ಸೂಕ್ಷ್ಮಮನದ ವ್ಯಕ್ತಿಗಳು ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಇದಕ್ಕೆ ಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ೪೫೦ ಕೋಟಿ ರೂ. ವೆಚ್ಚದಲ್ಲಿ ಭಾರತದಂತಹ ಬಡದೇಶ ಅಂತರಿಕ್ಷಕ್ಕೆ ರಾಕೆಟ್ ಹಾರಿಸಿ ಮಂಗಳನತ್ತ ನಡೆದಿರುವುದು ಯಾವ ಮಹಾ ಸಾಧನೆ? ಇದರಿಂದ ಜನ ಸಾಮಾನ್ಯನಿಗೇನು ಉಪಯೋಗ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ನಿಜ. ಮಂಗಳನ ಮೇಲೆ ಆರ್ಬಿಟರ್ ಇಳಿದ ತಕ್ಷಣ ಈ ದೇಶದ ಮಲದ ಗುಂಡಿಗಳನ್ನು ಇಳಿದು ಸ್ವಚ್ಛಗೊಳಿಸುವವರಿಗೆ, ರಸ್ತೆ ಬದಿ ಕಲ್ಲಂಗಡಿ ಮಾರುವವರಿಗೆ, ರೈಲ್ವೇ ಚಾಯ್‌ವಾಲಾಗಳಿಗೆ, ಹೊಟ್ಟೆಗಾಗಿ ದೇಹ ಮಾರಿಕೊಳ್ಳುವ ಸೆಕ್ಸ್ ವರ್ಕರ್‌ಗೆ ಏನೂ ಉಪಯೋಗವಾಗುವುದಿಲ್ಲ. ಈಗಲೂ ಭಾರತದಲ್ಲಿ ಬಡತನ ರೇಖೆಯ ಕೆಳಗೆ ಕಾಲುಭಾಗಕ್ಕಿಂತ ಹೆಚ್ಚು ಜನ ಬದುಕುತ್ತಿದ್ದಾರೆ. ೧೧ ಕೋಟಿ ಅಲೆಮಾರಿಗಳು ಅತಿ ವಂಚಿತ ಸ್ಥಿತಿಯಲ್ಲಿದ್ದಾರೆ. ೨೦ ನಿಮಿಷಕ್ಕೊಂದು ಅತ್ಯಾಚಾರ ಸಂಭವಿಸುತ್ತಿದೆ. ದಲಿತ ದೌರ್ಜನ್ಯ, ಕೊಲೆ, ಸುಲಿಗೆ ಸಂಭವಿಸುತ್ತಿದೆ. ಇವರೆಲ್ಲರ ಬದುಕಿನ ಸಮಸ್ಯೆಗಳು ಮಂಗಳ ಯಾನದ ಬಳಿಕವೂ ಹಾಗೆಯೇ ಇವೆ.

೧೯೬೩ರಲ್ಲಿ ಮೊದಲ ರಾಕೆಟ್ ಉಡಾವಣೆಯಾದಾಗ, ೧೯೬೯ರಲ್ಲಿ ಇಸ್ರೋ ಸ್ಥಾಪನೆಯಾದಾಗ, ೧೯೭೫ರಲ್ಲಿ ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾದಾಗ ಇಂಥವೇ ಮಾತುಗಳು ಕೇಳಿಬಂದಿದ್ದವು. ಬಡದೇಶ ಭಾರತ ಅಂತರಿಕ್ಷಕ್ಕೆ ಉಪಗ್ರಹ ಹಾರಿಬಿಡುವ ದೊಡ್ಡಸ್ತಿಕೆ ತೋರಿಸುವುದಕ್ಕಿಂತ ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂಬ ಟೀಕೆಯೂ ಕೇಳಿಬಂದಿತ್ತು. ಆದರೆ ಅವತ್ತು ಹಾರಿಸಿದ ರಾಕೆಟ್ ಹಾಗೂ ರಾಕೆಟ್ ಹೊತ್ತೊಯ್ದ ಉಪಗ್ರಹಗಳಿಂದ ಇವತ್ತು ಏನೇನು ಉಪಯೋಗವಾಗುತ್ತಿದೆ ಎನ್ನುವುದನ್ನು ನಿತ್ಯ ಜೀವನವೇ ಹೇಳುತ್ತಿದೆ. ಮನೆಮನೆಯ ಟಿವಿ, ಫೋನು, ಮೊಬೈಲು, ಅಂತರ್ಜಾಲ ಸಂಪರ್ಕ ಸಾಧ್ಯವಾಗಿರುವುದು; ಹವಾಮಾನ ಸೂಚನೆ, ದೂರ ಸಂಪರ್ಕ, ದೂರ ಶಿಕ್ಷಣಗಳೆಲ್ಲ ಸುಲಭವಾಗಿರುವುದು ಭೂಮಿಯ ಕೃತಕ ಉಪಗ್ರಹಗಳಿಂದಲೇ. ಹೀಗಿರುತ್ತ ಮಂಗಳನ ಮೇಲಿಳಿದ ಪ್ರಯತ್ನ ಮುಂದೆ ಎಂಥ ದೂರಗಾಮಿ ಮತ್ತು ಸಮಾನಾಂತರ ಪರಿಣಾಮಗಳನ್ನು ಹೊಂದಿರಬಹುದು? ಶ್ರಮಿಕನ ಕೆಲಸವನ್ನು ಘನತೆಯಿಂದ ಮಾಡಲಿಕ್ಕೆ, ಬದುಕು ಸುಧಾರಿಸಲಿಕ್ಕೆ ಮುಂದಾನೊಂದು ಕಾಲದಲ್ಲಿ ಇದು ಯಾವ ರೂಪದಲ್ಲಿ ಸಹಾಯ ಮಾಡಬಹುದು? ಎನ್ನುವುದು ಇವತ್ತು ನಮ್ಮ ಊಹೆಗೆ ನಿಲುಕದಿರುವ ಸಾಧ್ಯತೆಯೂ ಇದೆ.


ಗಣಿತದ ಸಮೀಕರಣ, ಟ್ರಿಗೊನೊಮೆಟ್ರಿ ಜ್ಞಾನ ಬಳಸಿ ಕಟ್ಟಲಾದ ಸೇತುವೆ, ಅಣೆಕಟ್ಟುಗಳು ಎಲ್ಲರ ಉಪಯೋಗಕ್ಕೂ ಬರುತ್ತವೆ. ದಿನಬಳಕೆಯ ಶ್ರಮವನ್ನು ಹಗುರಗೊಳಿಸುವ ಎಷ್ಟೋ ಉಪಕರಣಗಳು ವೈಜ್ಞಾನಿಕ ಆವಿಷ್ಕಾರಗಳಾಗಿವೆ. ವಿಜ್ಞಾನ, ತಂತ್ರಜ್ಞಾನಗಳು ಶ್ರಮಿಕನ, ರೈತನ, ಮಹಿಳೆಯ ಘನತೆ ಹೆಚ್ಚಿಸುವ ಹಾಗೂ ಶ್ರಮ ಕಡಿಮೆ ಮಾಡುವ ಎಷ್ಟೋ ವಸ್ತುಗಳನ್ನು ಆವಿಷ್ಕರಿಸಿವೆ. ಮುಲ್ಕ್ ರಾಜ್ ಆನಂದ್ ತಲೆ ಮೇಲೆ ಮಲ ಹೊರುವುದನ್ನು ತಡೆಯಬಲ್ಲ ಮಾರ್ಗವೆಂದರೆ ಎಲ್ಲರೂ ಫ್ಲಷ್ ಕಕ್ಕಸುಗಳನ್ನು ಬಳಸುವುದು ಎಂದು ತಮ್ಮ ‘ಅಸ್ಪೃಶ್ಯ’ ಕಾದಂಬರಿಯಲ್ಲಿ ಸೂಚ್ಯವಾಗಿ ಹೇಳಿದ್ದರು. ಜೈವಿಕ ತಂತ್ರಜ್ಞಾನ ಕ್ಷೇತ್ರದ ಮುಖ್ಯ ಫಲಾನುಭವಿ ರೈತ ಹಾಗೂ ರೋಗಿಗಳು. ಒಳ್ಳೆಯದಕ್ಕೋ ಕೆಟ್ಟದಕ್ಕೋ ಅಲೆಮಾರಿಯಿಂದ ಹಿಡಿದು ರಾಷ್ಟ್ರಾಧ್ಯಕ್ಷರ ತನಕ ಎಲ್ಲರ ಕೈಲಿರುವ ಮೊಬೈಲು ಅವರ ಜೀವನದ ಗತಿಯನ್ನೇ ಬದಲಿಸಿದೆ. ಒಂದು ಕಾಲದಲ್ಲಿ ಜ್ಞಾನಕ್ಕೆ ರಹದಾರಿಯೇ ಇಲ್ಲದ ಎಷ್ಟೋ ಸಮುದಾಯಗಳಿದ್ದವು. ಈಗ ಯಾವ ವಿಷಯದ ಕುರಿತು, ಎಷ್ಟೊತ್ತಿಗೆ ಬೇಕಾದರೂ, ತಾರತಮ್ಯವಿಲ್ಲದೇ ಎಲ್ಲರಿಗೂ ಮಾಹಿತಿ ಭಂಡಾರವನ್ನೇ ತೆರೆದಿಡುವ ದೃಶ್ಯ ಮಾಧ್ಯಮ ಹಾಗೂ ಅಂತರ್ಜಾಲ ಬಂದಿರುವುದು ಸೋಜಿಗವೇ. ವಿಜ್ಞಾನದ ಆನ್ವಯಿಕ ಉಪಯೋಗಗಳು ಜನರನ್ನು ನೇರವಾಗಿ ತಲುಪಲು ಸಾಧ್ಯವಿರುವಾಗ ಸಾಕ್ಷರತೆ-ಅನಕ್ಷರಸ್ಥ ಪದಗಳಿಗೆ ಅರ್ಥ ಬೇರೆಯಾಗುತ್ತಿದೆ. ಹೀಗಿರುವಾಗ ವೈಜ್ಞಾನಿಕ ತಿಳುವಳಿಕೆ ಹೊಂದಿರಬೇಕಾದದ್ದು ಕಾಲದ ಅಗತ್ಯವಾಗಿದೆ. ‘ಅದು ನನಗಲ್ಲ’ ಎಂದುಕೊಳ್ಳುವುದು ನಮ್ಮನ್ನೇ ಮಿತಿಗೊಳಿಸಿಕೊಳ್ಳುವ ಧೋರಣೆಯಾಗಿದೆ.

ವಿಜ್ಞಾನ ಅಣುಬಾಂಬನ್ನು ತಯಾರಿಸಿತು, ಅಣುವಿದ್ಯುತ್ ಅನ್ನೂ ಉತ್ಪಾದಿಸಿತು; ಬುಲೆಟ್ ಟ್ರೇನನ್ನು ತಯಾರಿಸಿತು, ಎಕೆ ೪೭ ಅನ್ನೂ ಉತ್ತಮಪಡಿಸಿತು. ಜಗತ್ತನ್ನು ಪೊಲಿಯೋ ಮುಕ್ತ, ಸಿಡುಬು ಮುಕ್ತ, ಪ್ಲೇಗ್ ಮುಕ್ತಗೊಳಿಸಿತು, ಎಬೊಲಾ, ಎಚ್ಚೈವಿ, ಸಾರ‍್ಸ್ ದಾಳಿಗೆ ಕಂಗಾಲೂ ಆಯಿತು. ವಿಜ್ಞಾನವೆಂಬ ಜ್ಞಾನದ ಕತ್ತಿಯನ್ನು ಯಾವಾಗ ಯಾವುದಕ್ಕೆ ಬಳಸುತ್ತೀ? ಯಾವಾಗ ಒರೆಗೆ ಸೇರಿಸುತ್ತೀ ಎನ್ನುವುದನ್ನು ಮನುಷ್ಯ ವಿವೇಚನೆ ನಿರ್ಧರಿಸಬೇಕು. ಯುದ್ಧದಂತಹ ಜೀವವಿರೋಧಿ ಉದ್ದೇಶಗಳಿಗೆ ತಂತ್ರಜ್ಞಾನ ಬಳಕೆಯಾಗದೇ ಜ್ಞಾನ ಸದ್ವಿನಿಯೋಗವಾಗುವಂತೆ ನಾಗರಿಕ ಸಮಾಜ ನೋಡಿಕೊಳ್ಳಬೇಕು.

ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದಂತೆ ತಂತ್ರಜ್ಞಾನವನ್ನು ಜನಸಾಮಾನ್ಯರ ಉಪಯೋಗಕ್ಕೆ ನಿಲುಕುವಂತೆ ಉಪಯೋಗಿಯಾಗಿ ಮಾಡಲೂ ಪ್ರಯತ್ನಿಸಬೇಕಿದೆ. ಒಂದು ಸಣ್ಣ ಉದಾ: ಅವರವರ ಮನೆಯ ಕಸ, ಮಲ ಮುಂತಾದ ವಿಸರ್ಜಿತ ವಸ್ತುಗಳಿಂದ ಅವgವರ ಮನೆಗೆ ಸಾಕಾಗುವ ಬಯೋಗ್ಯಾಸ್ ತಯಾರಿಸಬಹುದಾಗಿದೆ. ಈ ದಿಕ್ಕಿನತ್ತ ಸಂಶೋಧನೆ ನಡೆದು ಯಶಸ್ವಿಯಾದರೆ ಆಗ ಮ್ಯಾನ್‌ಹೋಲಿನೊಳಗೆ ಮನುಷ್ಯ ಇಳಿವ ಅವಶ್ಯಕತೆಯೇ ಬರುವುದಿಲ್ಲ. ಜೊತೆಗೆ ಪೆಟ್ರೋ ಉತ್ಪಾದನೆಗಳ ಅವಲಂಬನೆ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆ ಗಮನಾರ್ಹವಾಗಿ ಇಳಿಯಬಹುದು. ಇಂಥ ಜನಸ್ನೇಹಿ ಸಂಶೋಧನೆಗಳತ್ತ ವಿಜ್ಞಾನಿ ಸಮೂಹ ಮನಸ್ಸು ಕೊಡುವಂತೆ ನಿರ್ದೇಶಿಸುವ ಹೊಣೆ ಸರ್ಕಾರ ಹಾಗೂ ಸಾರ್ವಜನಿಕರದ್ದಾಗಿದೆ.

***

ಇಂಥವೆಲ್ಲ ದೇಶವೊಂದಕ್ಕೆ ಏಕೆ ಬೇಕು? ಅಥವಾ ಮನುಷ್ಯನಿಗೆ ಇಂಥ ‘ಸಾಧನೆ’ಗಳೆಲ್ಲ ಏಕೆ ಬೇಕು?

ಬರೀ ಹೊಟ್ಟೆ ತುಂಬ ಉಂಡು, ಬಟ್ಟೆ ತೊಟ್ಟು ನಲಿಯುವುದರಿಂದಷ್ಟೇ ಮನುಷ್ಯನೆಂಬ ಅಸಾಧ್ಯ ಪ್ರಾಣಿ ತೃಪ್ತಿ ಹೊಂದುವುದಾಗಿದ್ದರೆ ಯಾವ ಕಲಾವಿದನೂ, ಚಿತ್ರಕಾರನೂ, ಸಂಗೀತಗಾರ-ಕವಿ-ಚಿತ್ರ ನಿರ್ದೇಶಕ-ಕ್ರೀಡಾಪಟುವೂ ಭೂಮಿ ಮೇಲೆ ಹುಟ್ಟುತ್ತಿರಲಿಲ್ಲ. ಹೊಟ್ಟೆಬಟ್ಟೆ ತುಂಬಿದ ಮೇಲೂ ಮನುಷ್ಯ ಏನೋ ಒಂದನ್ನು ಸಾಧಿಸಲು ಹಾತೊರೆಯುತ್ತಾನೆ. ಅದನ್ನು ಮಹತ್ವಾಕಾಂಕ್ಷೆಯೆಂದು ಅತ್ತ ಸರಿಸಲಾಗುವುದಿಲ್ಲ. ಬಹುಶಃ ತನಗೆ ಸಾಧ್ಯವಿರುವುದನ್ನು ಅದರ ಪರಿಪೂರ್ಣತೆಯಲ್ಲಿ ಮಾಡಲು; ಸಾಮರ್ಥ್ಯವನ್ನು ಅದರ ಉತ್ತುಂಗಕ್ಕೆ ಒಯ್ಯಲು; ಆ ಮೂಲಕ ಅಮರನಾಗಲು ಮಾನವನ ಅವಿರತ ಪ್ರಯತ್ನವೇ ಪಿರಮಿಡ್, ತಾಜಮಹಲು, ರಾಕೆಟ್ ನಿರ್ಮಾಣದಂಥ ಹಂಬಲಗಳ ಹಿಂದಿದೆ. ಬದುಕುವ ಹಂಬಲದ ಮೂಲ ಸೆಲೆಯೂ, ಸ್ಫೂರ್ತಿಯೂ ಅದೇ ಆಗಿದೆ.

ಎಂದೇ ೪೫೦ ಕೋಟಿ ವೆಚ್ಚದ ಮಂಗಲಯಾನ ಏಕೆ ಬೇಕಿತ್ತು ಎನ್ನುವಷ್ಟು ಸಿನಿಕರಾಗದಿರೋಣ. ಬರೀ ದೆಹಲಿ-ಆಗ್ರಾ ನಡುವಿನ ೧೬೫ ಕಿಮೀ ಉದ್ದದ ಒಂದು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ತಗುಲಿದ್ದು ೧೨, ೮೪೦ ಕೋಟಿ ರೂಪಾಯಿ. ಐದು ವರ್ಷಗಳಲ್ಲಿ ನಿರ್ಮಾಣಗೊಳ್ಳಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ತಗಲುವ ವೆಚ್ಚ ೨೫೦೦ ಕೋಟಿ ರೂಪಾಯಿ. ಗ್ರೇಟರ್ ನೋಯ್ಡಾದ ‘ದಲಿತ ಪ್ರೇರಣಾ ಸ್ಥಳ್’ ಎಂಬ ಪ್ರತಿಮೆಗಳ ಪಾರ್ಕಿಗೆ ಖರ್ಚಾದದ್ದು ೬೮೫ ಕೋಟಿ. ಇವು ಕೆಲವು ಉದಾಹರಣೆಗಳಷ್ಟೇ. ಹೀಗೆ ಪಾರ್ಕು, ಪ್ರತಿಮೆ, ಡ್ಯಾಂ, ರಸ್ತೆ ಎಂದು ಎಷ್ಟೆಷ್ಟೊ ಸಾವಿರ ಕೋಟಿಗಳನ್ನು ಹಲವಾರು ಯೋಜನೆಗಳಿಗೆ ಖರ್ಚು ಮಾಡುವ ಭಾರತವೆಂಬ ‘ಬಡ ದೇಶ’ದಲ್ಲಿ ಭ್ರಷ್ಟತೆಯೇ ಲಕ್ಷ ಕೋಟಿಗಳನ್ನು ಗುಳುಂ ಮಾಡುತ್ತದೆ. ನಾವು ದಿನನಿತ್ಯ ಉಂಡು ಚೆಲ್ಲಿ ಹಳಸುವ ಆಹಾರದ ಬೆಲೆಯೂ, ಹೊಸದು ಬಂದಿತೆಂದು ಬಿಸಾಡಿದ ಮೊಬೈಲು-ಕಂಪ್ಯೂಟರು-ಕಾರು ಮತ್ತಿತರ ಗ್ಯಾಡ್ಗೆಟ್ಟುಗಳ ಬೆಲೆಯೂ ಲಕ್ಷಾಂತರ ಕೋಟಿಯಾಗುತ್ತದೆ. ಅದಕ್ಕೆ ಹೋಲಿಸಿದಲ್ಲಿ ೪೫೦ ಕೋಟಿ ದೊಡ್ಡ ಮೊತ್ತವಲ್ಲ. ಎಲ್ಲಿ ಅವಶ್ಯವಿದೆಯೋ ಅಲ್ಲಷ್ಟೇ ಖರ್ಚು ಮಾಡುವಂತೆ ಖಜಾನೆಯ ಕೀಲಿಕೈ ಇಟ್ಟುಕೊಂಡವರ ಮೇಲೆ ಒತ್ತಡ ತರುವುದು, ಅದರ ಜೊತೆಗೆ ಕನಿಷ್ಠ ವೈಜ್ಞಾನಿಕ ತಿಳುವಳಿಕೆ ಮತ್ತು ದೃಷ್ಟಿಕೋನ ಹೊಂದುವುದು ಇವತ್ತಿನ ಸಮಾಜಕ್ಕೆ ಅವಶ್ಯವಾಗಿದೆ.

ಪೋಖ್ರಾನಿನಲ್ಲಿ ಬುದ್ಧ ನಕ್ಕದ್ದನ್ನು ಸಾಧನೆಯೆಂದು ಕರೆದುಕೊಳ್ಳಲು ಸಾಧ್ಯವೇ ಇಲ್ಲ. ಪರಮಾಣು ಸ್ಫೋಟದ ಏಕೈಕ ಉದ್ದೇಶ ಸಮೂಹ ನಾಶ. ಅದು ಜೀವವಿರೋಧಿಯೇ. ಆದರೆ ಮಂಗಳನ ಬಳಿ ಸಾರಿದ ಪ್ರಯತ್ನ ಸಮೂಹನಾಶಕ ಉದ್ದೇಶಗಳನ್ನು ಹೊತ್ತಿರುವ ಸೂಚನೆಗಳು ಸದ್ಯಕ್ಕೆ ಕಾಣುತ್ತಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಾದ ಹಾಗೂ ವಿಜ್ಞಾನಿಗಳು ಜನಸ್ನೇಹಿ ಸಂಶೋಧನೆಯಲ್ಲಿ ತೊಡಗುವಂತೆ ಉತ್ತೇಜಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಹೀಗೊಂದು ಗಾಂಧಿ ಸ್ಮೃತಿ


ಎಲ್ಲ ಜ್ಞಾನವೂ ಕಲಿತವನ ಅಹಂಕಾರ ನಾಶಮಾಡುವಂತಿರಬೇಕು. ಇಲ್ಲದಿದ್ದಲ್ಲಿ ಅದರಿಂದ ಅವನಿಗೂ, ಸಮಾಜಕ್ಕೂ ಉಪಯೋಗವಿಲ್ಲ. ಇಲ್ಲಿ ೧೯೨೭ರಲ್ಲಿ ಬೆಂಗಳೂರಿನ ಸೈನ್ಸ್ ಇನ್ಸ್‌ಟಿಟ್ಯೂಟ್‌ಗೆ ಬಂದಿದ್ದ ಗಾಂಧಿ ಹೇಳಿದ ಕೆಲ ಮಾತುಗಳನ್ನು ನೆನೆಯುವುದು ಸೂಕ್ತ.

ಇನ್‌ಸ್ಟಿಟ್ಯೂಟ್‌ನ ವಿಭಾಗಗಳ ಪರಿಚಯ ಮಾಡಿಕೊಂಡ ಗಾಂಧೀಜಿ ವಿದ್ಯಾರ್ಥಿ, ವಿಜ್ಞಾನಿಗಳನ್ನುದ್ದೇಶಿಸಿ ಆಡಿದ ಮಾತುಗಳಿವು:

‘ನಾನೆಲ್ಲಿಗೆ ಬಂದಿದ್ದೇನೆಂದು ಅಚ್ಚರಿಯಾಗುತ್ತಿದೆ. ನನ್ನಂತಹ ಹಳ್ಳಿಗನಿಗೆ ಇದು ಸರಿಯಾದ ಸ್ಥಳವಲ್ಲ. ನಾನು ಮಾತಿಲ್ಲದ ಬೆರಗಿನಿಂದ ನಿಲ್ಲಬಲ್ಲೆನಷ್ಟೇ. ನಾನು ಹೇಳಬೇಕೆಂದಿರುವುದಿಷ್ಟೇ; ನೀವಿಲ್ಲಿ ನೋಡುತ್ತಿರುವ ಬೃಹತ್ ಪ್ರಯೋಗಾಲಯಗಳು ಮತ್ತು ಅವುಗಳ ಉಪಕರಣಗಳು ಮಿಲಿಯಗಟ್ಟಲೆ ಜನರ ಶ್ರಮದ ಹಣದ ಫಲ. ಟಾಟಾರ ಮೂವತ್ತು ಲಕ್ಷ ರೂಪಾಯಿಗಳಾಗಲೀ ಅಥವಾ ಮೈಸೂರು ಸರ್ಕಾರದ ಧನವಾಗಲೀ ಎಲ್ಲಿಂದಲೋ ಬಂದದ್ದಲ್ಲ. ಈ ದರಿದ್ರ ನಾಡಿನ ಜನರ ಶ್ರಮದಿಂದಲೇ ಬಂದದ್ದು.

ಹಳ್ಳಿಯ ಮಂದಿಯನ್ನು ನಾವೇನಾದರೂ ಭೇಟಿಯಾಗಿ ನೀವು ಬೆವರು ಹರಿಸಿ ದುಡಿದು ಕೊಟ್ಟ ಹಣವನ್ನು ಕಟ್ಟಡ ಮತ್ತು ಪ್ರಯೋಗಾಲಯಗಳ ನಿರ್ಮಾಣಕ್ಕಾಗಿ ಉಪಯೋಗಿಸುತ್ತೇವೆ, ಅವುಗಳಿಂದ ನಿಮ್ಮ ಮುಂದಿನ ತಲೆಮಾರಿಗೆ ಉಪಯೋಗವಾಗುತ್ತದೆ ಎಂದೆಲ್ಲ ಹೇಳಿದರೆ ಅವರಿಗೆ ಹೇಗೆ ತಾನೇ ಅರ್ಥವಾದೀತು? ಅವರು ನಮಗೆ ಬೆನ್ನು ಮಾಡಿ ಹೊರಟುಹೋಗುತ್ತಾರೆ ಅಷ್ಟೇ. ನಾವೆಂದೂ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ.

...ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳನ್ನು ಪರಿಶೋಧಿಸಲು ವರ್ಷಾನುಗಟ್ಟಲೆ ಬೇಕೆಂದು ನಿಮ್ಮ ಪ್ರೊಫೆಸರರರು ನನಗೆ ಹೇಳಿದರು. ಆದರೆ ಈ ಹಳ್ಳಿಗಳನ್ನು ಪರಿಶೋಧಿಸುವವರು ಯಾರು? ನಿಮ್ಮ ಪ್ರಯೋಗಾಲಯಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳಾದರೂ ಸಂಶೋಧನೆ ನಿರಂತರವಾಗಿ ನಡೆಯುತ್ತಿರುವಂತೆ ನಿಮ್ಮ ಹೃದಯದ ಒಂದು ಮೂಲೆಯಲ್ಲಿ ಮಿಲಿಯಗಟ್ಟಲೇ ಬಡಜನರ ಅಭಿವೃದ್ಧಿಯ ಸಂಗತಿ ಬಿಸಿಯಾಗಿರಲಿ.

‘ನಮ್ಮ ಕೈಯಲ್ಲಾದುದನ್ನು ಮಾಡಿದ್ದೇವೆ, ಬನ್ನಿ ಇನ್ನು ಬಿಲಿಯರ್ಡ್ಸ್ ಮತ್ತು ಟೆನ್ನಿಸ್ ಆಡೋಣ’ ಎನ್ನುವ ಧೋರಣೆ ಬೇಡ. ಕ್ರೀಡಾಂಗಣದಲ್ಲಿ ಕೂಡ ನಿಮ್ಮನ್ನು ಋಣದ ಭಾರ ಕಾಡುತ್ತಿರಬೇಕು.

ನಿಮ್ಮೆಲ್ಲರ ಸಂಶೋಧನೆಗಳ ಅಂತಿಮ ಗುರಿ ಬಡವರ ಉದ್ಧಾರವಾಗಿರಬೇಕು. ಇಲ್ಲದಿದ್ದರೆ ನಿಮ್ಮ ಪ್ರಯೋಗಾಲಯಗಳಿಗೂ ಸೈತಾನನ ಕಾರ್ಯಾಗಾರಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.’



No comments:

Post a Comment