Sunday 16 November 2014

ದಾನ ಮತ್ತು ಹಸಿವೆ: ಒರೆಯಲಿರುವ ಇಬ್ಬಾಯ ಖಡ್ಗಗಳು..




ಜೂನ್ ತಿಂಗಳ ಅಷ್ಟೇನೂ ಪ್ರವಾಸಿಗಳಿಲ್ಲದ ಆಫ್ ಸೀಸನ್. ಆಗ್ರಾದಿಂದ ೨೭ ಮೈಲುಗಳಾಚೆ ಇರುವ ಫತೇಪುರ ಸಿಕ್ರಿಯ ಸುಡು ನೆಲದಲ್ಲಿ ನಡೆದಾಡುತ್ತಿದ್ದೆವು. ಅಕ್ಬರನಿಂದ ಒಂದು ಕಾಲಕ್ಕೆ ವೈಭವೋಪೇತವಾಗಿ ಕಟ್ಟಲ್ಪಟ್ಟ, ದೀನ್ ಇಲಾಹಿ ಕನಸು ಹುಟ್ಟಿದ, ಜೋಧಾಬಾಯಿ-ಬೀರಬಲ್ ನಡೆದಾಡಿದ, ಹದಿನೈದೇ ವರ್ಷಗಳಲ್ಲಿ ತ್ಯಜಿಸಲ್ಪಟ್ಟ ಊರು ಫತೇಪುರ್. ‘ಡೆಸರ್ಟೆಡ್ ಸಿಟಿ’ ಎಂದು ಕರೆಸಿಕೊಂಡರೂ ಸಾಕಷ್ಟು ಜನಭರಿತ.

ಬೆಳಿಗ್ಗೆ ೧೧ಕ್ಕೆ ಬಿಸಿಲು ರಣರಣ ಎನ್ನುತ್ತಿತ್ತು. ಎಲ್ಲ ಐತಿಹಾಸಿಕ ಸ್ಮಾರಕಗಳಿರುವ ಊರುಗಳಲ್ಲಿ ಹೇಗೋ ಹಾಗೆ ಕೆಳಗಿಳಿದ ಕೂಡಲೇ ನಾನು ತಾನೆಂದು ಆಟೋಗಳೂ, ಗೈಡ್‌ಗಳೂ, ಕೆಲ ಹುಡುಗರೂ ನುಗ್ಗಿ ಬಂದರು. ಇಬ್ಬರು ಪುಟ್ಟ ಹುಡುಗರು ನಮ್ಮ ಮಕ್ಕಳ ಹಿಂದೆ ಸುತ್ತುತ್ತಿದ್ದರು. ಅವರು ಕವಿತೆ ಹೇಳುವವರಂತೆ. ಕನ್ನಡದಲ್ಲಿ ಕವಿಗಳನ್ನು ಕೇಳುವವರೇ ಇಲ್ಲ ಎಂದು ಕೊರಗುವಾಗ ಈ ಪುಟ್ಟ ಪೋರರು ಕವಿತೆ ಹೇಳುತ್ತೇವೆ ಎನ್ನುತ್ತಿದ್ದಾರೆ, ಎಲ ಎಲಾ!! ಕೇಳೇಬಿಡುವ ಎಂದು ಕೈಕಟ್ಟಿ ನಿಂತೆವು. ಮುಂದಿನ ಹದಿನೈದು ನಿಮಿಷ ತಾವು ಉರುಹೊಡೆದ ಕವಿತೆಗಳನ್ನೂ, ಶಾಯರಿಗಳನ್ನೂ ಇಬ್ಬರೂ ಒಬ್ಬರಾದ ಮೇಲೊಬ್ಬರು ಹೇಳಿದರು. ಒಬ್ಬ ಪೋರ ನಮ್ಮ ಹೆಣ್ಮಕ್ಕಳ ಹೆಸರು ಸೇರಿಸಿ ತಾನೇ ನಾಲ್ಕು ಸಾಲು ರಚಿಸಿ ಒಡಪು ಹೇಳಿದ. ಉರು ಹೊಡೆದಿದ್ದರೂ ಪರವಾಗಿಲ್ಲ, ಮಕ್ಕಳ ಬಾಯಲ್ಲಿ ಅಷ್ಟು ಕವಿತ್ವ ತುಂಬಿಕೊಂಡಿರುವುದಕ್ಕೆ ಬಿಸಿಲಿನಲ್ಲೂ ಒಳಗೊಂದು ತಂಪು ಹುಟ್ಟಿತು. ‘ನಿಮ್ಮ ಶಾಲೆ?’ ಎಂದು ನಾನು ಬಾಯ್ತೆರೆಯುವುದರಲ್ಲಿ ಮತ್ತೊಂದು ಪ್ರವಾಸೀ ಜೋಡಿಯ ಬಳಿ ಬಾಲಕವಿಗಳು ಹಾರಿಹೋದರು.

ಒಣಗಿಹೋದ ಬಾಯಲ್ಲಿ ರಸ ಒಡೆದೀತೆಂದು ನೇರಿಳೆಹಣ್ಣು ಕೊಂಡು ಬಾಯಿಗೆ ಹಾಕಿದರೆ ಅದೂ ಸುಡುತ್ತಿತ್ತು. ಬಳ್ಳಾರಿ, ಬಿಜಾಪುರಗಳ ಧಗೆಯನ್ನು ಸಿಕ್ರಿಯ ಮುಂದೆ ನಿವಾಳಿಸಬೇಕು, ಅಷ್ಟು ಸೆಕೆ. ಈ ಸೆಕೆಗೆ ಹೆದರಿಯೇ ಕಟ್ಟಿದ ಹದಿನೈದೇ ವರ್ಷಕ್ಕೆ ಅಕ್ಬರ್ ರಾಜಧಾನಿ ಬದಲಿಸಿರಬೇಕು. ಜಾಮಾ ಮಸೀದಿ ಹಾಗೂ ಸಲೀಂ ಚಿಸ್ತಿ ದರ್ಗಾಗಳಿರುವ ಸಂಕೀರ್ಣವನ್ನು ಪ್ರವೇಶಿಸುವಲ್ಲಿ ಒಂದು ಮಹಾದ್ವಾರ ಎದುರಾಯಿತು. ದಕ್ಷಿಣ ಭಾರತವನ್ನು ಗೆದ್ದ ನೆನಪಿಗೆ ಅಕ್ಬರ್ ಕಟ್ಟಿಸಿದ, ೧೭೬ ಅಡಿ ಎತ್ತರದ ಬುಲಂದ್ ದರವಾಜಾ. ಭಾರತದ, ಅಷ್ಟೇ ಏಕೆ ಪ್ರಪಂಚದಲ್ಲೇ ಅತಿ ಎತ್ತರ ಮತ್ತು ಭಾರೀ ಆದ ಮಹಾದ್ವಾರಗಳಲ್ಲಿ ಇದೂ ಒಂದು. ಅದರ ಎತ್ತರವನ್ನು ಉತ್ಪ್ರೇಕ್ಷೆಗೊಳಿಸಲೋ ಎನ್ನುವಂತೆ ನೆಲದಿಂದ ಮೇಲೆದ್ದ ಮೆಟ್ಟಿಲುಗಳು.

ಆಕಾಶಕ್ಕೆ ತಲೆಚಾಚಿ ನಿಂತ ಮಹಾದ್ವಾರದ ಒಳಹೊಕ್ಕರೆ ವಿಶಾಲವಾದ ಪ್ರಾಂಗಣ. ಒಳಾವರಣದ ನಾಲ್ಕೂ ಸುತ್ತು ಬೀದಿಯಷ್ಟು ದೊಡ್ಡ ಪರಿಕ್ರಮ. ಅಲ್ಲಿ ವ್ಯಾಪಾರ ಭರಾಟೆಯಿಂದ ನಡೆಯುತ್ತಿತ್ತು. ಭಾರತ ದೇಶ ಅನಾಥರು, ಭಿಕ್ಷುಕರು, ವಿಕಲ ಚೇತನರಿಂದಲೇ ತುಂಬಿದೆಯೇ ಅನಿಸುವಷ್ಟು ವಿಕಲಾಂಗರು, ಅತಿ ಮುದುಕರು, ಮಕ್ಕಳು, ಅನಾಥರಂತೆ ತೋರುವವರು ಕಣಿ ಹೇಳುತ್ತ, ಬೀಡಿ ಎಳೆಯುತ್ತ, ತೂಕಡಿಸುತ್ತ, ಬೇಡುತ್ತ ಕೂತಿದ್ದರು. ಅವರ ಎದುರಿನ ಬಟ್ಟೆಯಲ್ಲಿ ಬಿದ್ದ ರೂಪಾಯಿ ಕಾಸುಗಳು ಮೌನವಾಗಿದ್ದವು. ಒಬ್ಬಳೇಒಬ್ಬ ಭಿಕ್ಷುಕಿಯೂ ಕಾಣದೇ ಆಶ್ಚರ್ಯ, ಸಮಾಧಾನ ಒಟ್ಟಿಗೇ ಹುಟ್ಟಿತು.

ಅಕ್ಬರನಿಗೆ ೩೦೦ ಹೆಂಡತಿಯರಿದ್ದರೂ ಗಂಡು ಮಕ್ಕಳಿರಲಿಲ್ಲ. ಸೂಫಿ ಸಂತ ಸಲೀಂ ಚಿಸ್ತಿಯ ಅನುಗ್ರಹದಿಂದ ಸಲೀಂ (ಜಹಾಂಗೀರ್) ಎಂಬ ಮಗ ಹುಟ್ಟಿದ. ಮಸೀದಿಯ ಅಂಗಳದ ಒಂದುಕಡೆ ಈ ಸಂತನ ಚಚ್ಚೌಕಾಕಾರದ ಅಮೃತಶಿಲೆಯ ದರ್ಗಾವಿದೆ. ಭಕ್ತಿ, ಆರ್ತತೆಯೇ ಮೈವೆತ್ತು ಬಂದಂತೆ ಕಣ್ಮುಚ್ಚಿ ಪ್ರಾರ್ಥಿಸುವವರು ದರ್ಗಾದ ಬಳಿ ಕಂಡುಬಂದರು.



ಇದ್ದಕ್ಕಿದ್ದಂತೆ ಅಸಂಖ್ಯ ಮಕ್ಕಳು ಚಿಲಿಪಿಲಿ ಚಿಲಿಪಿಲಿ ಎನ್ನುತ್ತಿದ್ದ ಒಳಾವರಣದಲ್ಲೊಂದು ಸಂಚಲನೆ ಮೂಡಿತು. ಮಕ್ಕಳು ಎದ್ದೆನೋ ಬಿದ್ದೆನೋ ಎನ್ನುವಂತೆ ಓಡತೊಡಗಿದರು. ಓಡುವ ಭರದಲ್ಲಿ ಒಂದಿಬ್ಬರು ನನಗೂ ಢಿಕ್ಕಿ ಹೊಡೆದರು. ಏನಾಯಿತು? ಎಲ್ಲಿ ಓಡುತ್ತೀರಿ? ಶಾಲೆಯ ಗಂಟೆ ಹೊಡೆಯಿತೇ? ಯಾರಿಗೂ ಉತ್ತರಿಸುವ ಪುರುಸೊತ್ತೇ ಇಲ್ಲ.

ಪಕ್ಕದ ಬಾಗಿಲಿನಿಂದ ನಾವೂ ಹೊರಬಂದು ನೋಡಿದರೆ ಅಗೋ ಅಲ್ಲಿ ದೂರದಲ್ಲಿ ನಿಂತ ವಾಹನದ ಬಳಿಗೆ ಎಲ್ಲ ಓಡುತ್ತಿದ್ದಾರೆ. ಹತ್ತೇ ನಿಮಿಷ. ಏದುಸಿರು ಬಿಡುತ್ತ, ಮೆಟ್ಟಿಲು ಹತ್ತುತ್ತ, ಎರಡೂ ಕೈಗಳಲ್ಲಿ ಒಂದೊಂದು ಪೇಪರ್ ಪ್ಲೇಟ್ ಹಿಡಿದು ಬ್ಯಾಲೆನ್ಸ್ ಮಾಡುತ್ತ ಮಕ್ಕಳು ವಾಪಸಾಗತೊಡಗಿದವು. ಹಬೆಯಾಡುವ ಪಲಾವ್, ಪಕ್ಕಕ್ಕೆ ಚಟ್ನಿಯಂತಹ ಏನೋ ಒಂದು. ಅದರ ಪರಿಮಳವನ್ನ ನಮ್ಮ ಹೊಟ್ಟೆಯೂ ಗ್ರಹಿಸಿ ಗುಡುಗುಡು ಸದ್ದು ಮಾಡಿತು. ಮಕ್ಕಳು ತರುವ ತಟ್ಟೆಗಾಗಿ ಕಾಯುತ್ತ ಕೂತವರು ಊಟ ಬಂದದ್ದೇ ಗುಂಪಾಗಿ ಕುಳಿತು ಸರಸರ ಉಣ್ಣತೊಡಗಿದರು.

ಮೆಟ್ಟಿಲಿಳಿದು ವಾಹನದ ಬಳಿ ನಡೆದೆ. ಪುಟ್ಟ ಲಾರಿಯಲ್ಲಿ ಅರ್ಧಾಳೆತ್ತರದ ಸ್ಟೀಲ್ ಡ್ರಮ್ಮುಗಳ ಪಕ್ಕ ಸ್ವಯಂಸೇವಕರು ತಟ್ಟೆಗಳಿಗೆ ಊಟ ತುಂಬಿ ಚಾಚಿದ ಕೈಗಳಿಗೆ ವರ್ಗಾಯಿಸುತ್ತಿದ್ದರು. ಕಾಲೆತ್ತಿ, ಸಾಧ್ಯವಿರುವಷ್ಟು ದೂರದವರೆಗೂ ಕೈಚಾಚಿ, ಬೇಗ ತಟ್ಟೆ ಹಿಡಿಯುವ ಅವಸರದ ಕೈಗಳು. ಬೊಗಸೆ ವಜ್ಜೆಯಾದದ್ದೇ ಓಡಿಹೋಗುವ ಹುರುಪು, ಕೆಂಚಾಗಿ ಮಾಸಿದ ಕೆದರು ಕೂದಲ ಮುಖದಲ್ಲಿ ಹೊಳೆಹೊಳೆವ ಕಣ್ಣುಗಳು..

ತಮಗೆ ದೊರೆಯದ ನ್ಯಾಯಕ್ಕೆ ಪರ್ಯಾಯವಾಗಿ ಈ ದಾನ ಸಿಕ್ಕಿದೆಯೆಂದು ಅವರು ಭಾವಿಸಿರುವುದನ್ನು ತಾತ್ಕಾಲಿಕ ತೃಪ್ತಿ, ಹಪಾಹಪಿಗಳೇ ಹೇಳುತ್ತಿದ್ದವು. ಬಡವನಿಗಿರುತ್ತದೆ ಎನ್ನಲಾದ ಸಿಟ್ಟು, ದಂಗೆ ಎಲ್ಲವೂ ಹೊಟ್ಟೆಯ ಜೊತೆ ತಣಿದುಹೋಗಬಹುದೇ ಎನಿಸಿ ಕಂಗಾಲಾಯಿತು. ಚಾಚುವ ಕೈಗಳ ಚಿತ್ರದೆದುರು ವಿಶಾಲ ಸಂಪದ್ಭರಿತ ಮೊಘಲ್ ಸಾಮ್ರಾಜ್ಯ, ಅಕ್ಬರ್, ದೀನ್ ಇಲಾಹಿ, ಆಸ್ಥಾನದ ನವರತ್ನಗಳು ಇತ್ಯಾದಿ ಎಲ್ಲ ಚಿತ್ರಗಳೂ ಕಲಸಿಹೋದವು.

ತಟ್ಟೆಗೆ ಕೈನೀಡದೇ ಆಚೆ ನಿಂತ ನನ್ನೊಡನೆ ಸ್ವಯಂಸೇವಕನೊಬ್ಬ ಮಾತನಾಡಿದ. ಅವನ ಪ್ರಕಾರ: ಆ ವಾಹನ ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಬರುತ್ತದೆ. ಒಂದು ಬಿಲಿಯನ್ ಡಾಲರು ವಹಿವಾಟಿನ ಭಾರತದ ಪ್ರಸಿದ್ಧ ಕೋಳಿಸಾಕಣೆ ಕಂಪನಿಯು ಪ್ರತಿದಿನ ಅಜ್ಮೇರ್, ಸಿಕ್ರಿ, ಹಜ್ರತ್ ನಿಜಾಮುದ್ದೀನ್, ಮುಂಬಯಿ ಇತ್ಯಾದಿ ಐದು ದರ್ಗಾಗಳ ಬಳಿ ಊಟ ಪೂರೈಸುತ್ತದೆ. ಎಷ್ಟೇ ಜನ ಬರಲಿ, ಊಟ ಗ್ಯಾರಂಟಿ. ಕಡಿಮೆ ಬಿದ್ದಿದ್ದೇ ಇಲ್ಲ. ಇಲ್ಲಿ ಉಳಿದರೆ ಬೇರೆಕಡೆ ಕೊಟ್ಟು ಹೋಗುತ್ತಾರೆ. ನನ್ನ ಹರಕು ಹಿಂದಿ ಕೇಳಿ ಎಲ್ಲಿಯವಳು ಎಂದು ಕೇಳಿದರು. ಕರ್ನಾಟಕ ಎಂದಕೂಡಲೇ ಬಿಜಾಪುರ ಕಡೆಯ ಒಬ್ಬ ಕನ್ನಡದಲ್ಲಿ ಮಾತನಾಡತೊಡಗಿದ.

ಅವ ಐದಾರು ವರ್ಷದಿಂದ ಅದರಲ್ಲಿದ್ದಾನೆ. ಊಟ ತುಂಬ ಚೆನ್ನಾಗಿರುತ್ತೆ, ಬೇಕಾದ್ರೆ ನೋಡಿ ಎಂದ. ‘ಬೇಡ, ಬೆಳಿಗ್ಗೆ ತಿಂದಿದ್ದು ಇನ್ನೂ ಕರಗಿಲ್ಲ’ ಎಂದೆ. ದಿನದಿನಾ ಒಂದೊಂದು ಬೇರೆಬೇರೆ ಐಟಂ ಇರುತ್ತದೆ ಅಂದ. ಆದರೆ ಇಷ್ಟೊಂದು ಜನರಿಗೆ, ಅಮಿತ ಪ್ರಮಾಣದಲ್ಲಿ ಊಟ ಪೂರೈಸುವುದು ಕಷ್ಟವಲ್ಲವೆ? ಬಿಜಾಪುರಿಯ ಉತ್ತರ ಸರಳವಾಗಿತ್ತು: ಇಡೀ ಊರೇ ಕೈಲಿ ತಟ್ಟೆ ಹಿಡಿದು ಬಂದರೂ ಎರಡು ಹೊತ್ತಿನ ಊಟವನ್ನಷ್ಟೇ ಒಯ್ಯಬಲ್ಲರು. ಕಾಳು ಕೊಡುವುದು ಕಷ್ಟ, ಬೇಯಿಸಿದ್ದು ಕೊಡುವುದು ಸುಲಭ..

ಯಾರೋ ಮಾಡಿಕೊಟ್ಟದ್ದನ್ನು ಯಾರಿಗೋ ದಿನನಿತ್ಯ ಬಡಿಸುವ ಸ್ವಯಂಸೇವಕರು ಧನ್ಯತಾ ಭಾವದಲ್ಲಿ ಕೊಚ್ಚಿಹೋದಂತಿದ್ದರು. ಹಸಿದವರಷ್ಟೇ ರೊಟ್ಟಿಯಿರುವವನ ಮಾತು ಕೇಳಬಲ್ಲರು ಎಂದು ಅವರಿಗೂ ಗೊತ್ತಾದಂತಿತ್ತು. ದಾನ, ಸಹಾನುಭೂತಿಗಳು ದೀನರ ಆತ್ಮಗೌರವ ಕಳೆಯುವುದಿಲ್ಲವೆ ಎಂಬ ಅಳುಕಿನ ಸುಳಿವೂ ಕಾಣಲಿಲ್ಲ..

ನೆನಪು ೨೪ ವರ್ಷ ಹಿಂದೆ ಓಡಿತು. ಇಂದು ಕೇವಲ ನೆನಪಾಗಿರುವ ಅವಳೊಡನೆ ಇಲ್ಲೆಲ್ಲ ಓಡಾಡಿದ್ದೆ. ಆದರೆ ಅಂದು ಇಂಥ ಕಸಿವಿಸಿಯೇ ಹುಟ್ಟಿರಲಿಲ್ಲ!


೧೯೯೦. ಎರಡನೇ ಎಂಬಿಬಿಎಸ್ ಓದುವಾಗ ನ್ಯಾಷನಲ್ ಯುತ್ ಅಸೋಸಿಯೇಷನ್ ವತಿಯಿಂದ ಜಮ್ಮುವಿನಲ್ಲಿ ೧೫ ದಿನದ ಕ್ಯಾಂಪ್ ಇತ್ತು. ಭಾರತದ ಎಲ್ಲ ರಾಜ್ಯಗಳಿಂದ ಬಂದ ಸರಿ ಸುಮಾರು ೨೦೦ ವಿದ್ಯಾರ್ಥಿಗಳು ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ಉಳಿದು, ನಂನಮ್ಮ ಹಾಡುಹಸೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಒಂದು ದಿನ ವೈಷ್ಣೋದೇವಿಗೆ ಕರೆದೊಯ್ದರು. ನಾನೂ, ನನ್ನ ಸಹಪಾಠಿ ಮುಮ್ತಾಜ್ ಒಟ್ಟಿಗೆ ಹೊರಟೆವು. ಕ್ಯಾಂಪಿನಿಂದ ಹೊರಟ ಐದಾರು ಬಸ್ಸುಗಳು ದೊಡ್ಡ ಪರ್ವತಶ್ರೇಣಿಯ ಬುಡದಲ್ಲಿ ನಿಂತವು. ಮಧ್ಯಾಹ್ನ ಊಟ ಹಾಕಿರಲಿಲ್ಲ. ಸಂಜೆ ಐದೂವರೆಗೆ ಆ ದೊಡ್ಡ ಹಜಾರದೆದುರು ನಿಲಿಸಿ ‘ಊಟ ಮಾಡಿ’ ಎಂದರು. ಸ್ವಯಂಸೇವಕರು ಒಂದೇ ಸಮ ರೋಟಿ, ಚನಾ, ಅನ್ನ ಬಡಿಸಿಕೊಡುತ್ತಿದ್ದರು. ಅದು ಟಿ ಸೀರೀಸ್ ಕೆಸೆಟ್ ಕಂಪನಿಯವರದೆಂದರು. ಉಂಡು ಹತ್ತಲು ಶುರು ಮಾಡಿದವರು ಸರಿ ರಾತ್ರಿ ಒಂದೂವರೆಗೆ ತುದಿ ಮುಟ್ಟಿದೆವು. ಗದಗದ ನಡುಗಿಸುವ ಚಳಿಗೆ ದರ್ಶನ, ಸ್ನಾನ ಎಲ್ಲ ಮರೆತುಹೋಗಿತ್ತು. ನಿದ್ದೆಯಿಲ್ಲದೆ, ಹತ್ತಿಹತ್ತಿ ದಣಿದ ನಾನು ಮತ್ತು ಮುಮ್ತಾಜ್ ವೈಷ್ಣೋದೇವಿ ಹೇಗಿದ್ದಾಳೆ ಎಂದಷ್ಟೇ ಒಳಹೊಕ್ಕು ನೋಡಿ ಚಣಹೊತ್ತು ಕೂತು ಸುಧಾರಿಸಿಕೊಂಡು ವಾಪಸು ಹೊರಟೆವು. ಇಳಿಯತೊಡಗಿ ಮರುಬೆಳಿಗ್ಗೆ ೭ರ ಸುಮಾರು ತಳ ಮುಟ್ಟಿದೆವು. ಕೆಳಗಿಳಿದ ಮೇಲೇ ಮತ್ತೆ ತಿಂದದ್ದು. ದಿನದ ೨೪ ಗಂಟೆಯೂ ಜನ ಹತ್ತಿಳಿಯುತ್ತಾರೆ. ೨೪ ಗಂಟೆಯೂ ಊಟದ ವ್ಯವಸ್ಥೆಯಿದೆ.

ಈಗಲ್ಲಿ ಹೇಗಿದೆಯೋ ಗೊತ್ತಿಲ್ಲ. ಮುಮ್ತಾಜ್ ಗತಿಸಿ ೨೦ ವರ್ಷ ಕಳೆದಿವೆ. ಅವಳ ದನಿ, ಸ್ಪರ್ಶ ನೆನಪಿನಿಂದ ಮಾಸತೊಡಗಿದೆ. ಆದರೆ ಸಿಕ್ಕಾಪಟ್ಟೆ ಹಸಿದಾಗ ಉಂಡ ಹಬೆಯಾಡುವ ಊಟದ ರುಚಿ ನೆನಪಿನಕೋಶಗಳಲ್ಲಿ ಭದ್ರವಾಗಿದೆ.

ಹಾಗೆಯೇ, ಹೊಟ್ಟೆಹಸಿವೆಂಬ ಒಡಲೊಳಗಿನ ಇಬ್ಬಾಯ ಖಡ್ಗದ ಕುರಿತ ಅಚ್ಚರಿಯೂ..

ಹೀಗೊಂದು ದಾನ ಚಿಂತನೆ


ದಾನ ಕೊಡುವಾಗ ಕೇವಲ ಚಾಚಿದ ಬೊಗಸೆ ನೋಡಬೇಕು, ಪಡೆವಾಗ ಕೊಡುವವನ ಮುಖ ನೋಡಬೇಕೆಂದು ಹಿರಿಯರು ಹೇಳುತ್ತಿದ್ದರು. ಹಸಿದವನಿಗೆ ತುತ್ತು ಅನ್ನ ನೀಡುವುದು ಪುಣ್ಯ ಎಂದು ಎಲ್ಲ ಧರ್ಮಗಳೂ ಹೇಳಿವೆ. ಆದರೆ ದಾನ ಎಂಬ ಕಾನ್ಸೆಪ್ಟ್ ಏಕೆ, ಹೇಗೆ ಹುಟ್ಟಿದೆ?

ಬಹುಶಃ ಆಸ್ತಿ ಕಲ್ಪನೆ ಮೂಡಿದಮೇಲೆ ಅವಶ್ಯಕತೆಗಿಂತ ಹೆಚ್ಚು ಸಂಗ್ರಹಿಸುವುದು ಪಾಪ ಎಂದು ಮೊದಮೊದಲು ಮನುಷ್ಯನಿಗೆ ಅನಿಸಿದೆ. ಹಂಚಿಕೆಯ ಅಸಮಾನತೆಯನ್ನು ಸಮರ್ಥಿಸಿಕೊಳ್ಳಲು ಕರ್ಮಸಿದ್ಧಾಂತ ಹುಟ್ಟಿದ ಮೇಲೂ ಇಲ್ಲದವನ ಸಿಟ್ಟಿನ ಬಗೆಗೆ ಧರ್ಮಕ್ಕೂ, ಅದನ್ನು ಪೋಷಿಸಿಕೊಂಡು ಬಂದ ಅನುಕೂಲಸ್ಥರಿಗೂ ಭಯವಾಗಿದೆ. ಆದರೆ ಹೆಚ್ಚು ಸಂಗ್ರಹಿಸಬೇಡ ಎಂದು ಲೌಕಿಕನಾದ ಭಕ್ತನಿಗೆ ಲೌಕಿಕವಾದ ಧರ್ಮವು ಹೇಳುವುದಾದರೂ ಹೇಗೆ? ಎಂದೇ ಹೆಚ್ಚು ಸಂಗ್ರಹವಾದದ್ದನ್ನು ಪವಿತ್ರೀಕರಣಗೊಳಿಸುವ ಸಲುವಾಗಿ, ಸಂಗ್ರಹಕ್ಕೆ ಪ್ರಾಯಶ್ಚಿತ್ತವಾಗಿ ದಾನದ ಕಲ್ಪನೆ ಹುಟ್ಟಿಕೊಂಡಿದೆ.

ಅಮೆರಿಕದ ಬರಹಗಾರ ಪಾದ್ರಿ ಬಕ್‌ವೈಟ್ ಹೇಳುವಂತೆ, ‘ಸಂಪತ್ತನ್ನು ದಾನದ ಕೆಲಸಗಳಲ್ಲಿ ತೊಡಗಿಸುವುದು ಎಲ್ಲ ಕಾಲದಲ್ಲೂ ಸುಲಭದ ಸೇವಾಕಾರ್ಯವೆಂದು ನಂಬಿಕೊಂಡು ಬರಲಾಗಿದೆ. ದಾನಿ ಸಿರಿವಂತ ತನ್ನ ಸುತ್ತಮುತ್ತಲಿರುವವರಿಗೆ ಮಹಾಪೋಷಕನಾಗಿರುತ್ತಾನೆ. ಅವರ ಕೃತಜ್ಞತಾ ಭಾವವನ್ನು ಅವನು ಅನುಭವಿಸುವಂತೆ ಮಾಡಲಾಗುತ್ತದೆ. ಅವನಿಗೆ ಎಲ್ಲ ಬಾಗಿಲುಗಳೂ ತೆರೆದುಕೊಳ್ಳುತ್ತವೆ. ಆದರೆ ದಾನ ಎನ್ನುವುದು ಇಬ್ಬಗೆಯ ಶಾಪ. ಅದು ಕೊಡುವವನನ್ನು ಕಠೋರನನ್ನಾಗಿಯೂ, ಪಡೆದುಕೊಳ್ಳುವವನನ್ನು ಮೃದುವಾಗಿಯೂ ಪರಿವರ್ತಿಸುತ್ತದೆ. ಬಡವನಿಗೆ ಶೋಷಣೆಗಿಂತ ದಾನವೇ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಅವನನ್ನು ಶೋಷಿತನಾಗಲು ಸಿದ್ಧಗೊಳಿಸುತ್ತದೆ. ದಾನ ಬೆಳೆಸುವ ಗುಲಾಮತನ ನೈತಿಕ ಆತ್ಮಹತ್ಯೆಯಲ್ಲದೆ ಬೇರೇನಲ್ಲ.’

ದಾನ ಎಂದೂ ಪ್ರಶ್ನಿಸದಂತೆ, ಮೌನವಾಗಿರುವಂತೆ ಮಾಡುವುದಷ್ಟೇ ಅಲ್ಲ; ಸಮಾಜದ ಆಳವಾದ, ಮಾಯದ ಗಾಯವನ್ನು ಗುಣಪಡಿಸಲು ಭಿಕ್ಷೆ ನೀಡುವುದು ಒಂದು ವಿಧಾನವಲ್ಲ ಎಂದು ಹೇಳುವ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈಗಾಗುತ್ತಿರುವುದು ಅದೇ: ಜನತಂತ್ರ ವ್ಯವಸ್ಥೆಯ ಸಂಸ್ಥೆಗಳೂ ಸೇರಿದಂತೆ ದಾನ-ಸವಲತ್ತು ನೀಡುವವರ ಯಾದಿ ಬೆಳೆಯುತ್ತಿದೆ. ಬಿಲಿಯನ್ನುಗಟ್ಟಲೆ ಗಳಿಸುವವರು ಮಿಲಿಯನ್ನುಗಟ್ಟಲೆ ಆಸ್ತಿಯನ್ನು ದಾನಸೇವೆಗಾಗಿ ವಿನಿಯೋಗಿಸುವುದು ನಡೆದೇ ಇದೆ.

ಆದರೆ ಬೇಕಿರುವುದಕ್ಕಿಂತ ಹೆಚ್ಚೇ ನನಗಿಟ್ಟುಕೊಂಡು ಮಿಗುವುದನ್ನು ಹಂಚಿದರೆ ಅದು ದಾನವೇ? ಹುಲಿಸಿಂಹಗಳು ಹೊಟ್ಟೆ ತುಂಬಿತೆಂದು ಬಿಟ್ಟುಹೋದ ಮಾಂಸವನ್ನು ತೋಳಕಿರುಬಗಳು ತಿಂದರೆ ಅದನ್ನು ದಾನವೆನಲು ಬರುವುದೆ?

ಅರ್ಥ ಮೀಮಾಂಸೆ ಸುಲಭವಿಲ್ಲ. ಅದೂ ನನ್ನ ಥೈಲಿ ತುಂಬಿರುವಾಗ, ಮತ್ತೆಮತ್ತೆ ತುಂಬಿಸಲು ಸಫಲಮಾರ್ಗವೊಂದು ಕಣ್ಣೆದುರು ತೆರೆದಿರುವಾಗ, ಮುಂದಿನ ಹೊತ್ತಿನ ಕೂಳು ಕಾಯುತ್ತಲಿರುವಾಗ, ಸಮರ್ಥನೆಗೆ ಧರ್ಮ-ಸಿದ್ಧಾಂತಗಳ ಹಲವು ನೆಪ ಬೆಂಬಲಕ್ಕಿರುವಾಗ..

ಅರ್ಥ ಮೀಮಾಂಸೆ, ದಾನ ಚಿಂತನೆ ಸರಳವಿಲ್ಲ.




No comments:

Post a Comment