Saturday 3 January 2015

ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ








ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿರುವುದು ಕೇವಲ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎನಿಸಿಕೊಳ್ಳುತ್ತಿದೆ. ಆಧುನಿಕ ಶಿಕ್ಷಣವು ವೈಚಾರಿಕ ಜಾಗೃತಿ ಮೂಡಿಸುವ ಬದಲು ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ. 

ಇದರ ನಡುವೆ ಅಸಹಿಷ್ಣುತೆ ಮತ್ತು ಕದಡುತ್ತಿರುವ ಜಾತಿ-ಧರ್ಮಗಳ ನಡುವಿನ ಸೌಹಾರ್ದ ಭಾರತದ ಇವತ್ತಿನ ದೊಡ್ಡ ಪರಿತಾಪವಾಗಿದೆ. ಪ್ರತಿ ಮನುಷ್ಯನ ಸುತ್ತಲೂ ಭಾಷೆ-ರಾಜ್ಯ-ಧರ್ಮ-ಜಾತಿ-ಉಪಜಾತಿಗಳೆಂಬ ಗುರುತುಗಳು ಹಲವು ಸ್ತರಗಳ ಬೇಲಿ ನಿರ್ಮಿಸಿ ಮನುಷ್ಯನನ್ನು ಕೇವಲ ಮನುಷ್ಯನೆಂದು ನೋಡುವ ಪರಿಪಾಠವೇ ಕಾಣೆಯಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ. ಬಹಳ ಜನರಿಗೆ ಈ ದೇಶದ ಸಾಮಾಜಿಕ ಪರಿಸ್ಥಿತಿ, ಶೈಕ್ಷಣಿಕ ಪರಿಸ್ಥಿತಿ, ಜಾತಿವ್ಯವಸ್ಥೆ, ಅವುಗಳ ಸಮಸ್ಯೆಗಳೆಲ್ಲ ಅರ್ಥವಾಗಿದೆ. ಆದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಕಡಿಮೆಯಾಗಿದ್ದಾರೆ. ಹೀಗಿರುತ್ತ ಮಾನವನನ್ನು ಮಾನವನನ್ನಾಗಿ ಮಾತ್ರ ನೋಡುವ; ಪ್ರಶ್ನಿಸಿಯೇ ಒಪ್ಪಿಕೊಳ್ಳುವ; ತನ್ನಷ್ಟೆ ಪರರಿಗಾಗಿಯೂ ಬದುಕು ಎಂದು ಕಲಿಸುವ ಶಿಕ್ಷಣ ಪ್ರತಿ ಮಗುವಿಗೂ ದೊರೆತರೆ ಮಾತ್ರ ಭವಿಷ್ಯದ ಜಗತ್ತು ಸುಂದರವಾಗಲಿದೆ. 

ಎಂದೇ ಮಕ್ಕಳೆಂಬ ಬಿಳಿಹಾಳೆಯ ಜೊತೆಗೆ, ಬಹುಪಾಲು ಮುಗ್ಧ ಬಾಲ್ಯದ ಜೊತೆಗೆ ಬೆಸೆತುಕೊಂಡಿರುವ ಶಿಕ್ಷಕ ವೃತಿ ಇವತ್ತು ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ. 

ಈಗ ಕಲಿಸುವ ಶಾಲೆಗಳಿಗೆ ಕೊರತೆಯಿಲ್ಲ. ತರಬೇತಿ ಪಡೆದ ಶಿಕ್ಷಕರಿಗೆ ಕೊರತೆಯಿಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದಾದ ಮೇಲೆ ಊರೂರುಗಳಲ್ಲಿ ಶಾಲೆ ತೆರೆಯಲೂ ಯಾವ ಅಡ್ಡಿಯಿಲ್ಲ. ನಗರ ಪ್ರದೇಶಗಳಲ್ಲಂತೂ ಶಿಕ್ಷಣ ಸಂಸ್ಥೆ ತೆರೆಯುವುದೂ ಉದ್ಯಮ ಎನಿಸಿಕೊಂಡಿದೆ. ಮಕ್ಕಳು ಪರೀಕ್ಷೆಯಲ್ಲಿ ‘ಉತ್ತಮ ಸಾಧನೆ’ ತೋರಿಸುವಂತೆ ಪ್ರೇರೇಪಿಸಲಾಗುತ್ತಿದೆ. ‘ಸಾಧಕ’ರ ಫೋಟೋ ಹೊತ್ತ ಶಾಲೆಗಳ ಜಾಹೀರಾತು ಸರ್ವೇಸಾಮಾನ್ಯವಾಗಿದೆ. ಇವತ್ತು ಪ್ರಾಥಮಿಕ ಶಾಲೆಗಳಲ್ಲಿ ೮೦% ಹಾಗೂ ಹೈಸ್ಕೂಲು-ಕಾಲೇಜುಗಳಲ್ಲಿ ೬೫-೭೦% ಬೋಧಕ ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ. 

ಆದರೆ ತಾವೇ ಉದಾಹರಣೆಯಾಗಿ, ಸ್ಫೂರ್ತಿ ನೀಡುವ ಮಾದರಿಯಾಗಿ ಮಕ್ಕಳನ್ನು ಪ್ರಭಾವಿಸಬಲ್ಲ ಬೋಧಕ ವರ್ಗ ಎಷ್ಟು ಸಂಖ್ಯೆಯಲ್ಲಿದೆ? ಸಮಾಜವನ್ನೆದುರಿಸಿ ನಿಂತು ಅವಕಾಶ ವಂಚಿತರಿಗೆ ಕಲಿಸಹೊರಡುವ ಹುಮ್ಮಸ ಎಷ್ಟು ಶಿಕ್ಷಿತರಲ್ಲಿದೆ? ಎಂದೇ ಭಾರತೀಯ ಸಮಾಜದ ಕೆಡುಕುಗಳನ್ನೂ, ಅದರ ಮೂಲವನ್ನೂ ಆಮೂಲಾಗ್ರ ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮಗೆ ಮುಖ್ಯರಾಗುತ್ತಾರೆ. ಅದುವರೆಗೂ ಬೋಧನೆಯಲ್ಲಿ ತೊಡಗಿಕೊಂಡ ಹಲವು ಶಿಕ್ಷಕಿಯರಿದ್ದರೂ ಅವರು ಬಹುತೇಕ ಕ್ರೈಸ್ತ ಮಿಷನರಿಗಳು ಹಾಗೂ ಧರ್ಮಬೋಧಕರು. ಆದರೆ ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರ ಧಿಕ್ಕರಿಸಿ ನಿಂತು ಅಕ್ಷರ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೇ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ. 

ಅಂಥ ತಾಯ್ತನದ ಚೇತನ ಇವತ್ತಿನ ತುರ್ತು ಅವಶ್ಯಕತೆಯಾಗಿದೆ. 


ಜನಜಾಗೃತಿಗಾಗಿ ಶಿಕ್ಷಣ

ಈಗ್ಗೆ ಒಂದೂವರೆ ಶತಮಾನದ ಹಿಂದೆ..

ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಂಥ ಕಾಲ. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. ಬಾಲ್ಯವಿವಾಹ ಹಾಗೂ ಸತಿ ಪದ್ಧತಿ ರದ್ಧತಿ ಕುರಿತು ಮಾತು ಕೇಳಿಬರತೊಡಗಿದ್ದವು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದುಕೊಂಡ ಜಾತಿಗಳ ಹೊರತು ಮತ್ತಾರಿಗೂ ಕಲಿಕೆಗೆ ಅವಕಾಶವಿರಲಿಲ್ಲ. ಆ ಕಾಲದ ಮಹಿಳೆಯರ ಶಿಕ್ಷಣ ಕುರಿತು ಹೇಳುವಂತೇ ಇಲ್ಲ. ‘ಹೆಣ್ಣು ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯತೊಡಗುತ್ತಾಳೆ. ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಕಾಯಿಲೆ ಹಿಡಿದು ಬೇಗ ತೀರಿಕೊಳ್ಳುತ್ತಾನೆ’ ಎಂದು ಹೇಳಲಾಗುತ್ತಿತ್ತು. ಹೆಣ್ಣುಮಗು ತನ್ನ ಬಾಲ್ಯದ ಮುಗ್ಧತೆಯಲ್ಲಿ ಈ ಜಗತ್ತಿಗೆ ಕಣ್ಬಿಡುವ ಹೊತ್ತಿಗೆ ಅವಳ ಮದುವೆಯಾಗಿ, ಯಾರದೋ ಹೆಂಡತಿಯಾಗಿ, ಸೊಸೆಯಾಗಿ ಕೊನೆಗೆ ಅಮ್ಮನಾಗಿ ಬಿಟ್ಟಿರುತ್ತಿದ್ದಳು. ಕುಟುಂಬ ನಿರ್ವಹಣೆಗಾಗಿ, ಕುಟುಂಬ ನಿರ್ವಹಣೆಯಿಂದಲೇ ಅವಳ ವ್ಯಕ್ತಿತ್ವ ರೂಪುಗೊಂಡು ಅಲ್ಲೇ ಕಳೆದುಹೋಗುತ್ತಿತ್ತು. ಹೆಣ್ಮಕ್ಕಳು ಯಾವತ್ತೂ ಪ್ರಶ್ನಿಸಬಾರದಂತೆ ಹೊರುವ, ಹೆರುವ, ಪೊರೆಯುವ ಕೊನೆಮೊದಲಿಲ್ಲದ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿತ್ತು. 

ಒಟ್ಟಾರೆ ಹೇಳುವುದಾದರೆ ದಲಿತ-ಶೂದ್ರ-ಮಹಿಳೆಯರಿಗೆ ಶಾಲೆ ಎನ್ನುವುದು ಕನಸಿನಲ್ಲೂ ಮೂಡಲಾಗದ ಅಸ್ಪಷ್ಟ ಕಲ್ಪನೆಯಾಗಿಯೇ ಉಳಿದಿತ್ತು. 

ಆ ಕಾಲದಲ್ಲಿ, ೧೮೩೧ರಲ್ಲಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದ ಸಾವಿತ್ರಿ ಬಾಯಿಗೆ ೯ ವರ್ಷವಾದಾಗ ಮದುವೆಯಾಯಿತು. ಅವಳನ್ನು ಮದುವೆಯಾದ ಹುಡುಗ ಸಾಮಾನ್ಯ ವರನಾಗಿರಲಿಲ್ಲ. ಅವ ಇಂಗ್ಲಿಷ್ ಕಲಿತು ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಜೋತಿಬಾ. ಶಾಲೆ ಕಲಿಯದ ಹೆಂಡತಿ ಸಾವಿತ್ರಿಗೆ ಗಂಡನೇ ಮೊದಲ ಶಿಕ್ಷಕನಾಗಿ ಅಕ್ಷರ ಕಲಿಸಿದ. ನಂತರ ಜೋತಿಬಾ ಅಸ್ಪೃಶ್ಯ ಹಾಗೂ ತಳಸಮುದಾಯದ ಮಕ್ಕಳಿಗೆಂದು ಶಾಲೆ ತೆರೆದಾಗ ಗಂಡುಮಕ್ಕಳಂತೇ ಹೆಣ್ಣುಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂದು ಅರಿತರು. ಹೆಣ್ಣುಮಕ್ಕಳ ಶಾಲೆ ತೆರೆಯಲು ಶಿಕ್ಷಕಿಯರ ಕೊರತೆಯಿತ್ತು. ಆಗ ಜೋತಿಬಾ ಶಿಕ್ಷಕ ತರಬೇತಿ ಪಡೆಯಲೆಂದು ಸಾವಿತ್ರಿಬಾಯಿಯನ್ನು ಅಹ್ಮದ್ ನಗರದ ಫಾರ್ಮಲ್ ಸ್ಕೂಲಿಗೆ ಕಳಿಸಿದರು. ಸಾವಿತ್ರಿಬಾಯಿ ಜೊತೆಗೆ ಫಾತಿಮಾ ಶೇಕ್ ಎನ್ನುವ ಮಹಿಳೆಯೂ ತರಬೇತಿ ಪಡೆದು ನಂತರ ಜೋತಿಬಾರ ಶಾಲೆಗಳಲ್ಲಿ ಕೆಲಸ ಮಾಡಿದರು. 

ತರಬೇತಿ ಮುಗಿಸಿ ಸಾವಿತ್ರಿಬಾಯಿ ಬಂದ ಮೇಲೆ ೯ ವಿದ್ಯಾರ್ಥಿಗಳೊಂದಿಗೆ ಪುಣೆಯಲ್ಲಿ ೧೮೪೯ರಲ್ಲಿ ಮೊದಲ ಶಾಲೆ ಶುರುವಾಯಿತು. ಅಹ್ಮದ್ ನಗರದ ಸದಾಶಿವ ಗೋವಂದೆ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸು ಬದಲಾಯಿಸುತ್ತ ಇದ್ದದ್ದರಿಂದ ಶಾಲೆಯೂ ನಿರಂತರ ಸ್ಥಳ ಬದಲಾಯಿಸುತ್ತ, ಮುಚ್ಚುತ್ತ-ತೆರೆಯುತ್ತ ಹೋಯಿತು. ೧೮೫೧ರಲ್ಲಿ ಎರಡನೇ ಶಾಲೆ ಶುರುವಾಯಿತು. ೧೮೫೨ರಲ್ಲಿ ಮಹಿಳಾ ಸೇವಾ ಮಂಡಲ ಶುರುವಾಯಿತು. ಧಾರ್ಮಿಕ-ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿಬಾಯಿ ತಾನು ಮಾಡುತ್ತಿರುವ ಕೆಲಸದ ಬಗೆಗೆ ಅಚಲ ಶ್ರದ್ಧೆಯನ್ನಿಟ್ಟುಕೊಂಡಿದ್ದರು. ಶಾಲೆಗೆ ಹೋಗುವಾಗ ದಾರಿಮೇಲೆ ತೂರಿ ಬರುವ ಕಲ್ಲು, ಮಣ್ಣು, ಸಗಣಿಗಳ ದಾಳಿಗೆ ಎದೆಗುಂದದೇ ಪಾಠ ಹೇಳಿದರು. 



ಫುಲೆ ದಂಪತಿಗಳು ಒಂದಾದಮೇಲೊಂದು ಶಾಲೆ ತೆರೆಯತೊಡಗಿದಾಗ ಅಕ್ಷರ ಕಲಿಯಬಾರದವರಿಗೆ ಕಲಿಸುತ್ತ ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆಗಳು ಬಂದವು. ಬೆದರಿಕೆಗಳೂ ಬಂದವು. ಅದೆಲ್ಲದರಿಂದ ಒತ್ತಡಕ್ಕೊಳಗಾದ ಜೋತಿಬಾ ತಂದೆ ಮಗಸೊಸೆಯನ್ನು ಮನೆಯಿಂದ ಹೊರಕಳಿಸಿದರು. ಯುವದಂಪತಿ ಅಂಜದೆ ಬೇರೆ ಮನೆ ಮಾಡಿಕೊಂಡರು. ಸಾವಿತ್ರಿ ಬಾಯಿಯವರ ಅಣ್ಣ ಕೂಡಾ ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀ ಎಂದು ಅವರ ಬಳಿ ವಾದಿಸಿದ್ದರು. ಬಂಧುಬಳಗಕ್ಕೂ, ಹಿತೈಷಿಗಳಿಗೂ ಉತ್ತರಿಸುತ್ತ, ಮನವೊಲಿಸುತ್ತ ಫುಲೆ ದಂಪತಿಗಳು ತಮ್ಮ ಕೆಲಸ ಮುಂದುವರೆಸಿದರು. 

ಬೋಧಿಸುವವರು ಎಷ್ಟು ಯಶಸ್ವಿ ಎಂದು ತಿಳಿಯಬೇಕಾದರೆ ಅವರ ಶಿಷ್ಯಗಣವನ್ನು ನೋಡಬೇಕಲ್ಲವೆ? ಫುಲೆ ಶಾಲೆಯಲ್ಲಿ ಕಲಿತ ಹೆಣ್ಣುಮಕ್ಕಳು ವೈಚಾರಿಕ ಜಾಗೃತಿ ಪಡೆದು ಕೆಲವರು ಬರಹಗಾರರಾದರು. ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಇವರ ಶಿಷ್ಯೆ. ಆಕೆ ಬರೆದ ‘ಸ್ತ್ರೀಪುರುಷ ತುಲನ’ ಎಂಬ ಪುಟ್ಟ ಹೊತ್ತಗೆ ಇವತ್ತಿಗೂ ದಿಟ್ಟವಾಗಿ ಯುವತಿಯೊಬ್ಬಳು ಬರೆದ ಮೊದಲ ಭಾರತೀಯ ಸ್ತ್ರೀವಾದಿ ಬರಹವಾಗಿದೆ. ಮತ್ತೊಬ್ಬ ದಲಿತ ವಿದ್ಯಾರ್ಥಿನಿ ಮುಕ್ತಾಬಾಯಿಯ ಪ್ರಬಂಧಗಳೂ ಹುಡುಗಿಯರು ಪಡೆಯುತ್ತಿದ್ದ ಅರಿವಿನ ಶಿಕ್ಷಣದ ಗುಣಮಟ್ಟ ತಿಳಿಸುತ್ತವೆ.

ಸತ್ಯಶೋಧಕ
Add caption


ತಾರತಮ್ಯ ಪ್ರತಿಪಾದಿಸುವ ಜಾತಿ ವ್ಯವಸ್ಥೆಯೇ ಸಮಾಜದ ಎಲ್ಲ ಕೆಡುಕುಗಳ ಮೂಲ ಎಂದು ಫುಲೆ ದಂಪತಿಗಳು ಅರಿತಿದ್ದರು. ಜಾತಿ ವಿನಾಶಕ್ಕೆ ಇಂಗ್ಲಿಷ್ ಕಲಿಯಿರಿ ಎನ್ನುವುದು ಅವರ ಬೋಧನೆಯಾಗಿತ್ತು. ಜಾತಿನಾಶದ ಮಾತು ಆಡಿದ ಕೂಡಲೇ ಅದು ಬ್ರಾಹ್ಮಣ ವಿರೋಧದ ಹಾಗೆಯೇ ಕೇಳಿಸುತ್ತದೆ. ಇವತ್ತಿಗೂ ಸಹಾ. ಆದರೆ ಮನುಷ್ಯನನ್ನು ಮನುಷ್ಯನನ್ನಾಗಷ್ಟೇ ನೋಡಲು ಪ್ರತಿಯೊಬ್ಬರೂ ತಮ್ಮೊಳಗಿರುವ ಜಾತಿಪ್ರಜ್ಞೆಯನ್ನು, ಬಿಟ್ಟೂ ಬಿಡದೆ ಒಳನುಸುಳುವ ಬ್ರಾಹ್ಮಣ್ಯವನ್ನು ಮುರಿದು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಿದೆ. ವ್ಯಕ್ತಿಗತ ಶ್ರೇಷ್ಠತೆ ಹಾಗೂ ಕುಲದ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು ಉಳಿದವರನ್ನು ಕೀಳಾಗಿ ಕಾಣುವುದೇ ಬ್ರಾಹ್ಮಣ್ಯ. ನಮ್ಮ ಸಮಾಜ ವ್ಯವಸ್ಥೆ ಹೇಗಿದೆಯೆಂದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವವರಲ್ಲಿ ತರತಮ ಪ್ರಜ್ಞೆ ತಾನೇತಾನಾಗಿ ತುಂಬಿಕೊಳ್ಳುವ ಸಾಧ್ಯತೆಯಿದ್ದರೆ ಉಳಿದ ಜಾತಿಗಳಿಗೂ ಈ ಜಾಡ್ಯ ಅಷ್ಟಿಷ್ಟು ಅಂಟಿಕೊಂಡಿದೆ. 

ಹೀಗಿರುತ್ತ ಭಾರತೀಯರ ಜಾತಿಪ್ರಜ್ಞೆ ನಾಶ ಮಾಡುವುದು ಎಂದರೆ ಎಲ್ಲ ಜಾತಿಯವರೂ ಸಮಾನರು ಎಂದು ಭಾವಿಸುವುದಷ್ಟೇ ಅಲ್ಲ, ಗಂಡು ಹೆಣ್ಣೂ ಸಮಾನರು ಎಂದು ತಿಳಿಯಬೇಕು. ಎಂದರೆ ಜಾತಿ ವಿನಾಶವೂ, ಮಹಿಳಾ ಹೋರಾಟವೂ ಒಟ್ಟೊಟ್ಟು ಸಾಗಬೇಕು. 

ಈ ಸೂಕ್ಷ್ಮವನ್ನು ಫುಲೆ ದಂಪತಿ ಅರಿತಿದ್ದರು. ಅವರ ಸಮಾಜ ಸುಧಾರಣಾ ಕಾರ್ಯಕ್ರಮಗಳು ತಳಸಮುದಾಯಗಳಿಗೆ ಶಿಕ್ಷಣ-ಜಾಗೃತಿ ನೀಡುವುದರ ಜೊತೆಗೇ ಎಲ್ಲ ಸಮುದಾಯಗಳ ಮಹಿಳಾ ಸಮಸ್ಯೆಗಳ ಕುರಿತಾಗಿದ್ದವು. ಬ್ರಾಹ್ಮಣ ವಿಧವೆಯರ ಕಷ್ಟಗಳ ಬಗೆಗೆ ಅವರು ಗಮನ ಹರಿಸಿದರು. ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದಲ್ಲಿ ಬ್ರಾಹ್ಮಣ ವಿಧವೆಯರಿಗೆ ವಿಧವಾಪದ್ಧತಿ ಕಟ್ಟುನಿಟ್ಟಾಗಿ ಜಾರಿಯಾಯಿತು. ಕಟ್ಟಳೆಗಳನ್ನು ಲಿಖಿತ ಕಾನೂನಾಗಿ ಜಾರಿಗೆ ತರಲಾಯಿತು. ಗಂಡನನ್ನು ಕಳೆದುಕೊಂಡ ಹೆಂಡತಿಯನ್ನು ವಿರೂಪಗೊಳಿಸಲಾಗುತ್ತಿತ್ತು. ಅಪವಿತ್ರರೆನಿಸಿಕೊಂಡು ಇಡೀ ಜೀವಮಾನವನ್ನು ಬದುಕಿದ ಶವದಂತೆ ಸವೆಸಬೇಕಿದ್ದ ವಿಧವೆಯರು ಪುರುಷರ ದುರಾಸೆಗೆ ಬಲಿಯಾಗುತ್ತಿದ್ದರು. ಕೆಲವರು ವಿವಾಹೇತರ ಸಂಬಂಧದಿಂದ ಗರ್ಭ ಧರಿಸಿ ಅಕ್ರಮ ಸಂತಾನ ಹೆರುತ್ತಿದ್ದರು. ಸಮಾಜದ ಅವಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಅಮಾನುಷವಾದ ಈ ವಿಧವಾ ಪದ್ಧತಿ ನಿಲಿಸುವ ಸಲುವಾಗಿ ಸಾವಿತ್ರಿಬಾಯಿ ಒಂದು ವಿನೂತನ ಪ್ರಯತ್ನ ಮಾಡಿದರು. ೧೮೬೦ರಲ್ಲಿ ಕ್ಷೌರಿಕರನ್ನು ಸಂಘಟಿಸಿ ತಾವ್ಯಾರೂ ಇನ್ನುಮುಂದೆ ವಿಧವೆಯರ ಕೇಶಮುಂಡನ ಮಾಡುವುದಿಲ್ಲ ಎಂದು ಅವರ ಬಳಿ ಪ್ರತಿಜ್ಞೆ ಮಾಡಿಸಿದರು. ೧೯೬೩ರಲ್ಲಿ ವಿಧವೆಯರು ಮತ್ತವರ ಮಕ್ಕಳಿಗೆಂದೇ ಒಂದು ಆಶ್ರಮ ಸ್ಥಾಪಿಸಿದರು. ಪ್ರಸೂತಿಗೃಹ ತೆರೆದರು.



ಅದುವರೆಗೂ ಅಸ್ಪೃಶ್ಯ ಸಮುದಾಯದ ಜನ ಬಾಯಾರಿದರೂ ಹನಿ ನೀರನ್ನು ತಂತಾವೇ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು ೧೮೬೮ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು. ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸಬೇಕೆಂದರೆ ಚಿಂತನಶೀಲತೆಯನ್ನು, ಸತ್ಯ ತಿಳಿಯಬೇಕೆಂಬ ಹಂಬಲವನ್ನು ಜನರಲ್ಲಿ ಬಿತ್ತಬೇಕು ಹಾಗೂ ದೇವರ ದಲ್ಲಾಳಿಗಳೆಂದು ಭಾವಿಸುವ ಪುರೋಹಿತವರ್ಗದ ಹಿಡಿತದಿಂದ ಜನರನ್ನು ಪಾರು ಮಾಡಬೇಕೆಂದು ೧೮೭೩ರಲ್ಲಿ ಸತ್ಯಶೋಧಕ ಸಮಾಜ ಕಟ್ಟಿದರು. ಅದರ ಮೂಲತತ್ವ ‘ನಾವೆಲ್ಲರೂ ದೇವರ ಮಕ್ಕಳು; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ’ ಎನ್ನುವುದು. ಅದೇ ವರ್ಷ ಪುರೋಹಿತರಿಲ್ಲದೆ ಮೊದಲ ಮದುವೆ ಮಾಡಿಸಿದರು. ೧೮೭೪ರಲ್ಲಿ ಬ್ರಾಹ್ಮಣ ವಿಧವೆ ಕಾಶೀಬಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಸಾಕಿದರು. ಮುಂದೆ ಆತ ಓದಿ ವೈದ್ಯನಾದ.

ಇಂತಹ ಕ್ರಾಂತಿಕಾರಿ ಕ್ರಮಗಳಿಂದ ಸಮಾಜದ ಬಲಶಾಲಿ ಜಾತಿಗಳನ್ನು ಎದುರು ಹಾಕಿಕೊಂಡರೂ ಅಂಜದೇ, ಅಳುಕದೇ ಕೆಲಸ ಮಾಡಿದರು. ಭೀಕರ ಕ್ಷಾಮ ತಲೆದೋರಿದಾಗ ಪರಿಹಾರ ಕಾರ್ಯಗಳಲ್ಲಿ ತೊಡಗಿ ಕ್ಯಾಂಪುಗಳಲ್ಲಿ ಶಾಲೆ ತೆರೆದರು. ೧೮೯೦ರಲ್ಲಿ ಜೋತಿಬಾ ಫುಲೆಯವರು ತೀರಿಕೊಂಡಾಗ ಅವರ ಚಿತೆಗೆ ಸಾವಿತ್ರಿ ಬಾಯಿ ಅವರೇ ಅಗ್ನಿಸ್ಪರ್ಶ ಮಾಡಿದರು. ನಂತರ ಸತ್ಯಶೋಧಕ ಸಮಾಜದ ಅಧ್ಯಕ್ಷರಾಗಿ ಸಾವಿತ್ರಿಬಾಯಿ ಜನಜಾಗೃತಿ ಮುಂದುವರೆಸಿದರು. ೧೮೯೭ರಲ್ಲಿ ಪ್ಲೇಗ್ ಬಂದೆರಗಿದಾಗ ಸಾವಿತ್ರಿಬಾಯಿ ದಣಿವರಿಯದೆ ರೋಗಿಗಳ ಶುಶ್ರೂಷೆ ಮಾಡುತ್ತ ಕೊನೆಗೆ ತಾವೂ ಪ್ಲೇಗ್ ತಗುಲಿ ಕಾಲವಾದರು.

ಸಾವಿತ್ರಿಬಾಯಿಗೆ ಮದುವೆ ಒಂದು ಬಂಧನವಾಗಲಿಲ್ಲ, ಮಿತಿಯಾಗಲಿಲ್ಲ. ಫುಲೆ ದಂಪತಿಗಳು ಪರಸ್ಪರರಿಗೆ ಎಷ್ಟು ಪೂರಕವಾಗಿ ಬದುಕಿ, ಕೆಲಸ ಮಾಡಿದರೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಜೀವನ-ಸಾಧನೆ ವಿವರಿಸಲಾಗುವುದಿಲ್ಲ. ಆ ಅರ್ಥದಲ್ಲಿ ಫುಲೆ ಜೋಡಿಯ ಸಾಂಗತ್ಯ ಆದರ್ಶಪ್ರಾಯ ಎಂದು ಹೇಳಬಹುದು.


ದಿಕ್ಸೂಚಿ..

ನಮ್ಮ ದೇಶದ ಜನಸಂಖ್ಯೆಯ ಕಾಲುಭಾಗಕ್ಕಿಂತ ಹೆಚ್ಚು ಜನರಿಗೆ ಇನ್ನೂ ಅಕ್ಷರದ ಬೆಳಕು ಸಿಕ್ಕಿಲ್ಲ. ಸಿಕ್ಕಿದ ಎಲ್ಲರಿಗೂ ಅದು ಅನ್ನ ನೀಡುವ ಮಾರ್ಗ ತೋರಿಸಿಲ್ಲ. ಶಾಲೆಯೇ ಜಾತೀಯತೆಯ ಒಳಸುಳಿಗಳನ್ನು ಮಕ್ಕಳಿಗೆ ಪರಿಚಯಿಸುವ ತಾಣವಾಗುತ್ತಿದೆ. ಶಾಲಾ ಪಠ್ಯ ಮತ್ತು ಎಳೆಯರಿಗೆ ಬೋಧಿಸುವ ಇತಿಹಾಸವೇ ರಾಜಕೀಕರಣಗೊಳ್ಳುತ್ತಿದೆ. ಇಂಗ್ಲಿಷ್ ಎಂಬ ಜಾಗತಿಕ ಸರ್ವಾಧಿಕಾರಿ ಭಾಷೆಯೆದುರು ಸಣ್ಣಪುಟ್ಟ ಭಾಷೆಗಳು ಸೊರಗಿ ಕಣ್ಮುಚ್ಚುತ್ತಿವೆ. ಇಂಗ್ಲಿಷ್ ಬರದ ದೇಶೀ ಭಾಷೆಯ ಜ್ಞಾನಿ ಅನಕ್ಷರಸ್ಥ ಎನಿಸಿಕೊಳ್ಳುತ್ತಿದ್ದಾನೆ. ಮಾರುಕಟ್ಟೆಯೇ ಧರ್ಮವಾಗಿರುವ ಕಾಲದಲ್ಲಿ ಹಣ ಮೌಲ್ಯವಾಗಿದೆ. ಯಂತ್ರಗಳೊಡನೆ ಬದುಕು ನಿಕಟವಾಗುತ್ತ ಹೋದಂತೆ ಮಾನವ ವೇದನೆಗಳು ಸಿಟ್ಟು, ಹೋರಾಟ ಹುಟ್ಟಿಸಲು ವಿಫಲವಾಗುತ್ತಿವೆ.

ಇಂಥ ಸಂಕಟಕಾಲದಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ, ಜಾತ್ಯತೀತ ಮೌಲ್ಯ ತುಂಬುವ ಅವಶ್ಯಕತೆಯಿದೆ. ನೆಲದಾಳದಲ್ಲಿ ಇಂದಿಗೂ ಅಲ್ಲೆಲ್ಲೋ ಇರುವ ಶುದ್ಧಜಲವನ್ನು, ಜಲದ ಕಣ್ಣನ್ನು ಅರಸಬೇಕಿದೆ. ಜಲಸೂಚಿಯ ಕೆಲಸವನ್ನು ಶಿಕ್ಷಕ ಬಂಧುಗಳು ನಿಭಾಯಿಸಬೇಕಾಗಿದೆ. ದಿಕ್ಸೂಚಿಯಾಗಬಲ್ಲ, ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ ಅತಿ ಮಹತ್ತರ ಜವಾಬ್ದಾರಿ ಅವರ ಮೇಲಿದೆ. 

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ ಮತ್ತಿತರ ವಿಷಯಗಳ ಕುರಿತು ಇರುವ ಮೌಢ್ಯವನ್ನು ಕಾಯ್ದೆ ಬರಲಿ ಎಂದು ಕಾಯದೆ ತೊಲಗಿಸಬೇಕು. ಮೊದಲು ‘ನಾವೊಬ್ರು ಪ್ರಯತ್ನ ಮಾಡಿದರೆ ಏನಾದೀತು?’ ಎಂಬ ಸಿನಿಕತನವನ್ನು ಶಿಕ್ಷಕವರ್ಗವೂ ಸೇರಿದಂತೆ ಎಲ್ಲರೂ ಬಿಡಬೇಕು. ನಮ್ಮ ಆತ್ಮಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾವಿತ್ರಿಬಾಯಿಯಂತಹ ಶಿಕ್ಷಕಿ, ಜೋತಿಬಾರಂತಹ ಹೋರಾಟಗಾರರನ್ನು ನಮ್ಮ ಕಣ್ಣಗೊಂಬೆಯಲ್ಲಿಟ್ಟುಕೊಂಡು ಪ್ರತಿ ಮಗುವಿಗೂ ಅರ್ಹ ಶಿಕ್ಷಣ, ಸಮಾನ ಶಿಕ್ಷಣ ನೀಡಬೇಕೆಂಬ ಪ್ರತಿಜ್ಞೆ ಮಾಡಬೇಕು.. 

No comments:

Post a Comment