Friday 28 August 2015

ಖುರೇಶಿಗಳು: ವ್ಯಾಘ್ರ ಸೇನೆಯ ಗೋ ಭಕ್ತಿಗೆ ನಲುಗಿದವರು..






ಎಲ್ಲೋ ಹಿಂಡಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಒತ್ತಿದರೆ ಇನ್ನೆಲ್ಲೋ ತೆರೆಯುತ್ತದೆ. ಬಹುಸಮುದಾಯಗಳ ವೈವಿಧ್ಯಮಯ ಭಾರತದಲ್ಲಿ ಕೈಗೊಳ್ಳುವ ಯಾವುದೇ ಕ್ರಿಯೆಯೂ ಹೀಗೇ ಕೊನೆಯಾಗುವಾಗ ಒಂದು ಸಮುದಾಯವನ್ನೇ ಗುರಿಯಾಗಿಸಿ ತೆಗೆದುಕೊಳ್ಳುವ ಕ್ರಮಗಳು ಹಲವು ದುಸ್ಸಾಧ್ಯತೆಗಳನ್ನು ಸಹಜವಾಗೇ ಹೊಂದಿರುತ್ತವೆ. ಅದರಲ್ಲೂ ಆಹಾರ, ವರ್ತನೆ, ಉಡುಪುಗಳಂತಹ ದೈನಂದಿನ ಆಗುಹೋಗುಗಳು ಕಾಯ್ದೆಕಾನೂನಿಗೊಳಪಟ್ಟರೆ ಹೆಸರಿಡಲಾಗದ ಹಲವು ಸಂಕಟಗಳು ಭುಗಿಲೇಳುತ್ತವೆ.

ನಮ್ಮಲ್ಲಿ ಆಹಾರ ಕುರಿತ ಚರ್ಚೆ, ವಿವಾದ ಆಗೀಗ ಶುರುವಾಗುತ್ತ ಇರುತ್ತದೆ. ಒಂದೆಡೆ ಕೋಟ್ಯಂತರ ಮಕ್ಕಳು, ಜನರು ಹಸಿವು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಇನ್ನೊಂದೆಡೆ ಹೊಟ್ಟೆತುಂಬಿದವರ ಖಯಾಲಿಗೆ ಸಿಕ್ಕ ಪಶುಪಕ್ಷಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಜೊತೆಗೆ ತಿನ್ನುವುದು ಹೇಗಿರಬೇಕು? ಯಾವುದಿರಬೇಕು? ಎಂಬ ಪ್ರಶ್ನೆಗಳು ಧಾರ್ಮಿಕ ಆಯಾಮ ಪಡೆದು ಜೀವನ್ಮರಣದ ಪ್ರಶ್ನೆಗಳೋ ಎಂಬಂತೆ ಭಾವಿಸಲ್ಪಡುತ್ತಿವೆ. ಅದರಲ್ಲೂ ಗೋವು, ಗೋಮಾಂಸ ಕುರಿತಂತೆ ಕೊನೆ ಮೊದಲಿಲ್ಲದ ಚರ್ಚೆ ನಡೆದಿದೆ. ಒಂದು ವರ್ಗ ಗೋಹತ್ಯೆ ಮಾಡಬೇಡಿ, ಮುದಿ ಎತ್ತುದನಗಳ ಮಾರಲೂಬೇಡಿ, ಅದರ ಬದಲು ಗೋಮೂತ್ರ, ಸಗಣಿ ಸಂಗ್ರಹಿಸಿ ಶುದ್ಧೀಕರಿಸಿ ಮಾರಾಟ ಮಾಡಿ; ಅದು ಹಲವು ಕಾಯಿಲೆಗಳಿಗೆ ದಿವ್ಯೌಷಧ ಎನ್ನುತ್ತಿದೆ. ಅವರ ಅಬ್ಬರದಲ್ಲಿ ‘ಗೋಮಾತೆಯೆಂಬ ಕಲ್ಪನೆಯೇನೋ ಸುಂದರವಾಗಿದೆ; ಆದರೆ ಅದು ವ್ಯಾವಹಾರಿಕವಲ್ಲ’ ಎಂಬ ಕಹಿಸತ್ಯ ಹೇಳುವುದೂ ಧರ್ಮದ್ರೋಹ ಎನಿಸಿಕೊಂಡಿದೆ.

ಬಹುಸಂಖ್ಯಾತರ ಧಾರ್ಮಿಕತೆಯ ಭಾಗವೆಂದು ಗೋಹತ್ಯಾ ನಿಷೇಧ ಕಾಯ್ದೆ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಆದರೆ ಅದರಿಂದ ಮಹಾರಾಷ್ಟ್ರದಾದ್ಯಂತ ಎಲ್ಲ ಧರ್ಮಗಳಿಗೆ ಸೇರಿದ ಸುಮಾರು ಹತ್ತು ಲಕ್ಷ ಜನರ ಉದ್ಯೋಗ, ವ್ಯಾಪಾರಕ್ಕೆ ಸಂಚಕಾರ ಒದಗಿದೆ. ಪ್ರಖ್ಯಾತ ಕೊಲ್ಲಾಪುರ ಚಪ್ಪಲಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಹಳೆ ಎತ್ತುಗಳ ಮಾರಲಾರದೆ ಹೊಸ ಜೋಡಿ ಕೊಳ್ಳಲು ಸಾಧ್ಯವಾಗದೇ ಸಣ್ಣ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಒಂದಿಡೀ ಸಮುದಾಯ ತನ್ನ ಜೀವನಾಧಾರವಾದ ವೃತ್ತಿಗೆ ಒದಗಿದ ಕಂಟಕದಿಂದ ಹಿನ್ನಡೆ ಅನುಭವಿಸುತ್ತಿದೆ.

ಆ ಸಮುದಾಯವೇ ಮಹಾರಾಷ್ಟ್ರದ ಖುರೇಶಿಗಳು.

ನಿಸರ್ಗದ ಅಪಾಯದಂಚಿನಲ್ಲಿರುವ ತಳಿಯ ಪಶುಪಕ್ಷಿಗಳನ್ನು ಬೇಟೆಯಾಡಿ ಹಸಿವೆ ತಣಿಸಿಕೊಳ್ಳುವುದು ಅಪರಾಧ. ಅವುಗಳ ಉಳಿವಿಗೆ ಕಾಯ್ದೆಯ ಬೆಂಬಲ ಅಗತ್ಯ. ಆದರೆ ಸಾವಿರಾರು ವರ್ಷಗಳಿಂದಲೂ ಮಾಂಸ, ಹಾಲುಹೈನಕ್ಕೆಂದೇ ಸಾಕಲ್ಪಟ್ಟ; ವಿಶ್ವಾದ್ಯಂತ ಅರ್ಧ ಜನರ ಆಹಾರವಾಗಿರುವ ಗೋವಿಗೆ ಕಾಯ್ದೆಯ ರಕ್ಷಣೆ ಅವಶ್ಯವಿದೆಯೆ? ಗೋವಿನ ರಕ್ಷಣೆಗೆ ಕಾಯ್ದೆ ಖಂಡಿತಾ ಬೇಕಿರಲಿಲ್ಲ, ಅದು ಬೇಕಾದದ್ದು ಜನರ ಮತಗಳ ಮೇಲೆ ಕಣ್ಣಿಟ್ಟ ವ್ಯಾಘ್ರಸೇನೆಯ ಪಟ್ಟಭದ್ರತೆಗೆ. ದೇಶಾದ್ಯಂತ ಹಿಂದೂತ್ವ ಪ್ರತಿಪಾದಿಸುವ ಗೋಸುತರು ಅಧಿಕಾರಕ್ಕೆ ಬಂದು, ಮಹಾರಾಷ್ಟ್ರದಲ್ಲೂ ಕಳೆದ ಚುನಾವಣೆಯ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದಾಗ ಇದುವರೆಗೆ ನಾನಾ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ‘ಮಹಾರಾಷ್ಟ್ರ ಅನಿಮಲ್ ಪ್ರಿಸರ್ವೇಷನ್ ಅಮೆಂಡ್‌ಮೆಂಟ್ ಆಕ್ಟ್’ ಜಾರಿಗೆ ಬಂತು. ಈ ಕಾಯ್ದೆಯ ವಿರುದ್ಧ ಕೆಲವರು ಹೈಕೋರ್ಟಿಗೆ ಹೋದಾಗ ಮುಂಬೈ ಹೈಕೋರ್ಟು ಗೋಹತ್ಯಾ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯಿತು. ದನಕರು ಕಡಿಯುವುದಷ್ಟೆ ಅಲ್ಲ, ಅದರ ವ್ಯಾಪಾರ ಹಾಗೂ ದನದ ಮಾಂಸ ಹೊಂದಿರುವುದೂ ಅಪರಾಧವಾಗಿ ಐದು ವರ್ಷ ಜೈಲುವಾಸದವರೆಗೆ ಶಿಕ್ಷೆ ನಿಗದಿಯಾಯಿತು.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲೇ ಅತಿ ಕಡಿಮೆ ಮಾಂಸ ಸೇವಿಸುವ; ಮೂರನೇ ಒಂದು ಭಾಗ ಜನ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವ ದೇಶ ಭಾರತ. ೮೦% ಹಿಂದೂಗಳು ದನದ ಮಾಂಸ ತಿನ್ನುವುದಿಲ್ಲವೆಂದೇ ಲೆಕ್ಕ. ಆದರೆ ಇದು ವಿಶ್ವದಲ್ಲೇ ಅತಿ ದೊಡ್ಡ ಜಾನುವಾರು ಮಾಂಸದ ಉತ್ಪಾದಕ ದೇಶ. ಭಾರತದ ಖ್ಯಾತ ರಫ್ತು ಬಾಸ್ಮತಿ ಅಕ್ಕಿಯಲ್ಲ, ಎಮ್ಮೆ ಮಾಂಸ! ಅರಬ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಭಾರತದ ಎಮ್ಮೆ ಮಾಂಸ ಬಹು ಜನಪ್ರಿಯವಾಗಿದೆ. ಕಳೆದ ವರ್ಷ ೪.೩ ಬಿಲಿಯನ್ ಡಾಲರ್ ಮೌಲ್ಯದ ಎಮ್ಮೆ ಮಾಂಸ ರಫ್ತಾಗಿದೆ. ಎಮ್ಮೆ ಪೂಜೆ ಮಾಡದ ಗೋಸುತರ ಕಾಲದಲ್ಲಿ ಎಮ್ಮೆ ಮಾಂಸ ರಫ್ತು ಕಳೆದ ವರ್ಷಕ್ಕಿಂತ ೧೬% ಹೆಚ್ಚಾಗಿದೆ! ಗೋಹತ್ಯೆ ನಿಷೇಧದ ಬಳಿಕ ಎಮ್ಮೆ ಮಾಂಸ ವ್ಯಾಪಾರ ಸ್ಥಳೀಯವಾಗಿಯೂ ಹೆಚ್ಚಾಗಿದ್ದು ಮುಂಬಯಿಯ ದೇವನಾರ್‌ನಲ್ಲೆ ಮೊದಲು ದಿನಕ್ಕೆ ೯೦ ಎಮ್ಮೆ ಕಡಿಯುತ್ತಿದ್ದರೆ ಈಗ ೩೦೦ ಎಮ್ಮೆ ಕಡಿಯಲಾಗುತ್ತಿದೆ.

ಮಹಾರಾಷ್ಟ್ರದ ಖುರೇಶಿಗಳು ಭಾರತದ ಜಾತಿವ್ಯವಸ್ಥೆಯ ಉದ್ಯೋಗ-ಜಾತಿ ಸಂಬಂಧದ ಸಿಕ್ಕುಗಳಲ್ಲಿ ಮಾಂಸ ಮಾರಾಟ, ಚರ್ಮ ಮಾರಾಟ, ಪ್ರಾಣಿಗಳ ಕೊಳ್ಳುವ ವ್ಯವಹಾರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡ ಸಮುದಾಯವಾಗಿದ್ದಾರೆ. ದನದ ಮಾಂಸ ತಿನ್ನುವವರೇನೋ ತಮ್ಮ ಆಯ್ಕೆಯಲ್ಲಿ ನಾಲಿಗೆ ರುಚಿಯಲ್ಲಿ ಕೊಂಚ ಹೆಚ್ಚು ಕಡಿಮೆ ಮಾಡಿಕೊಂಡಾರು. ಆದರೆ ಮಾಂಸ ವ್ಯಾಪಾರವನ್ನೇ ಉದ್ಯೋಗವಾಗಿ ನಂಬಿದ ಈ ಸಮುದಾಯದ ಎದುರಿನ ಆಯ್ಕೆಗಳು ಅಷ್ಟು ಸುಲಭವಾಗಿ ಬದಲಾಗಲಾರವು. ಈಗ ಖುರೇಶಿಗಳು ಎಮ್ಮೆ ಮಾಂಸದ ವ್ಯಾಪಾರದಲ್ಲಿ ತೊಡಗಿದ್ದರೂ ಭಾರತದ ಎಮ್ಮೆಗಳ ಸಂಖ್ಯೆ (೧೩ ಕೋಟಿ) ದನಕ್ಕೆ ಹೋಲಿಸಿದರೆ (೨೮.೩ ಕೋಟಿ) ಕಡಿಮೆಯಿರುವುದರಿಂದ ವಹಿವಾಟು ಕಡಿಮೆಯಾಗಿದೆ.


ಯಾರೀ ಖುರೇಶಿಗಳು?


ಮಾಂಸ ವ್ಯಾಪಾರದ ಒಳಹೊರಗು ಅರಿತ ಸುನ್ನಿ ಮುಸ್ಲಿಮರ ಸಮುದಾಯ ಖುರೇಶಿಗಳದು. ಅವರಿಗೆ ಅವರದೇ ಜಾತಿಯ ಜಮಾತೆಯಿದ್ದು ಇದು ಭಾರತದ ಅತಿ ಹಳೆಯ ಜಮಾತೆಗಳಲ್ಲಿ ಒಂದಾಗಿದೆ. ಕಸಾಯ್ ಎಂದರೆ ಉರ್ದುವಿನಲ್ಲಿ ಕಡಿಯುವವ. (ಗಸಾಬ್ (ಅರೆಬಿಕ್) - ಕಟುಕ, ಸೀಳುವವ) ಮಾಂಸ ಕಡಿಯುವ ಕೆಲಸ ಮಾಡುವವರದು ಕಸ್ಸಾಬ್ ಪಂಗಡ. ಅವರ ಸಾಮಾನ್ಯ ಸರ್‌ನೇಮ್ ಖುರೇಶಿ. ಆದರೆ ಎಲ್ಲ ಖುರೇಶಿಗಳೂ ಕಸ್ಸಾಬ್‌ಗಳಲ್ಲ. ಅದೊಂದು ಅರಬ್ ಬುಡಕಟ್ಟು. ಪ್ರವಾದಿ ಮಹಮದರ ಅಜ್ಜ ಈ ಬುಡಕಟ್ಟು ಗುಂಪಿನ ಮುಖ್ಯಸ್ಥರೇ ಆಗಿದ್ದರು. ಭಾರತದ ಖುರೇಶಿಗಳು ದೆಹಲಿ ಸುಲ್ತಾನರ ಕಾಲದಲ್ಲಿ ವಲಸೆ ಬಂದು ಇಲ್ಲಿ ನೆಲೆಯಾದವರು. ಈಗ ಹಲವು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಅವರಲ್ಲಿ ಕೆಲ ಮತಾಂತರಗೊಂಡ ಸಮುದಾಯಗಳೂ ಇವೆ. ಅವರು ಉರ್ದು ಜೊತೆಗೆ ಸ್ಥಳೀಯ ಭಾಷೆ ಮಾತನಾಡುತ್ತಾರೆ. ಅವರಲ್ಲಿ ಕೋಳಿಕುರಿ ಕಡಿಯುವ ಚಿಕ್ವಾಗಳು (ಉತ್ತರ ಪ್ರದೇಶ), ಎಮ್ಮೆದನ ಕಡಿವ ಕಸ್ಸಾಬ್‌ಗಳು ಹಾಗೂ ವೃತ್ತಿಪರ ಅಡುಗೆಯವರಾಗಿರುವ ಬಾವರ್ಚಿ (ಲಕ್ನೊ, ಗುಜರಾತ್) ಗಳೆಂಬ ಮೂರು ಪಂಗಡಗಳಿವೆ. ಅವಧಿ ಅಡಿಗೆಯ ದಮ್ ಬಿರಿಯಾನಿ, ರುಮಾಲೆ ರೋಟಿಗಳ ಗರಿಮೆಯಲ್ಲಿ ಬಾವರ್ಚಿಗಳ ಶ್ರಮವಿದೆ. ಭಾರತದ ಖುರೇಶಿಗಳ ಒಟ್ಟೂ ಜನಸಂಖ್ಯೆ ೯.೩ ಲಕ್ಷ. ಪಾಕಿಸ್ತಾನದಲ್ಲೂ ಕಸ್ಸಾಬ್‌ಗಳಿದ್ದು ಅವರ ಮೂಲ ರಾಜಸ್ಥಾನದ ರಜಪೂತ ಬುಡಕಟ್ಟುಗಳಾಗಿವೆ. ಅವರು ಮುಖ್ಯವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದ್ದಾರೆ. ಅವರಲ್ಲೇ ಒಂದು ಉಪಸಮುದಾಯವಾದ ‘ಪೆಂಜಾ’ ಹತ್ತಿ ಬಿಡಿಸುವ, ಮಾರುವ ವ್ಯವಹಾರದಲ್ಲೂ ತೊಡಗಿಕೊಂಡಿದೆ. ಜಮ್ಮುಕಾಶ್ಮೀರದಲ್ಲಿ ಅವರದು ಮೇಲ್ಜಾತಿ ಮುಸ್ಲಿಂ ಸಮುದಾಯ. ಮಸೂದಿ, ಬುಖಾರಿ, ಖುರೇಶಿ ಎಂಬ ಮೂರು ಸರ್‌ನೇಮ್‌ಗಳಿವೆ.

ಮಹಾರಾಷ್ಟ್ರದ ಖುರೇಶಿಗಳು ಹೈದರಾಬಾದಿನ ನಿಜಾಂ ಸೈನ್ಯದಲ್ಲಿದ್ದವರು ಅಮರಾವತಿಗೆ ಬಂದು ಮಹಾರಾಷ್ಟ್ರದಲ್ಲಿ ನೆಲೆಯಾದವರು. ಉಳಿದೆಲ್ಲ ಕಡೆಗಳಲ್ಲಿ ಹೇಗೋ ಹಾಗೆ ಇಲ್ಲಿಯೂ ಗಾಯ್ ಕಸಾಯ್ (ದನ ಕಡಿಯುವವರು) ಹಾಗೂ ಛೋಟಾ ಕಸಾಯ್ (ಕುರಿಮೇಕೆಕೋಳಿ ಕಡಿಯುವವರು) ಎಂದು ಎರಡು ಪಂಗಡಗಳಿವೆ. ಚೌಧರಿ, ಸೌದಾಗರ್, ಸಿಕ್ಕು ಎಂಬ ಸರ್‌ನೇಮ್‌ಗಳಿವೆ.

ಗೋಮಾಂಸ ಸೇವನೆ ಮತ್ತು ಭಾರತೀಯತೆ 

ಗೋಮಾಂಸ ಸೇವನೆ, ಗೋವಧೆ ಮುಸ್ಲಿಂ ದಾಳಿಕಾರರು ಭಾರತವನ್ನು ಆಕ್ರಮಿಸಿದ ಮೇಲೆ ಶುರುವಾಯಿತೆಂಬ ಜನಪ್ರಿಯ ಕಟ್ಟುಕತೆ ಚಾಲ್ತಿಯಲ್ಲಿದೆ. ಆದರೆ ಅರಬ್ಬರಿಗೆ ಗೋಮಾಂಸ ಗೊತ್ತೇ ಇರಲಿಲ್ಲ. ಅವರದು ಕುರಿ, ಆಡು ಅಥವಾ ಒಂಟೆ ಮಾಂಸದ ಆಹಾರ. ಭಾರತಕ್ಕೆ ಬಂದ ಮೇಲೆಯೇ ಅರಬ್ಬರು ಗೋಮಾಂಸ ರೂಢಿಸಿಕೊಂಡದ್ದು. ಮೊಘಲ್ ದೊರೆಗಳೂ ಗೋವಧೆ ನಿಷೇಧಿಸಿದ್ದರು. ಬಾಬರ್ ತನ್ನ ಮಗನಿಗೆ ಬರೆದಿಟ್ಟ ಸಲಹಾರೂಪದ ಉಯಿಲಿನಲ್ಲಿ ಹಿಂದೂಸ್ತಾನದ ಜನರ ಮನಸ್ಸನ್ನು ಅವರವರ ರೂಢಿ, ಧರ್ಮಗಳ ಆಚರಣೆ ಗೌರವಿಸುವ ಮೂಲಕ ಗೆಲ್ಲಬೇಕೆಂದೂ; ವಿಶೇಷವಾಗಿ ಗೋಹತ್ಯೆ ನಿಷೇಧ ಮಾಡಬೇಕೆಂದೂ ಸೂಚಿಸಿದ್ದ. ಮೈಸೂರಿನ ಹೈದರ್ ಅಲಿ ಗೋವಧೆ ಮಾಡಿದವರ ಕೈಕಡಿಯುವ ಶಿಕ್ಷೆ ನೀಡುತ್ತಿದ್ದ. ಅಕ್ಬರ್, ಜಹಾಂಗೀರ್, ಅಹ್ಮದ್ ಷಾ ಕೂಡಾ ಕೆಲಮಟ್ಟಿಗೆ ಗೋಹತ್ಯೆ ನಿಷೇಧ ಚಾಲ್ತಿಯಲ್ಲಿಟ್ಟಿದ್ದರು.  

ಪಶುಸಂಗೋಪನೆ ಮತ್ತು ಕೃಷಿಯನ್ನು ಜೀವನಾಧಾರ ಕಸುಬಾಗಿ ಹೊಂದಿದ ಭಾರತ ಉಪಖಂಡದ ನಾಗರಿಕತೆ ಮೊದಲಿನಿಂದ ಗೋಮಾಂಸ ಬಳಸಿದೆ. ಪಶುಸಂಗೋಪನೆಯೇ ಮುಖ್ಯ ಕಸುಬಾಗಿದ್ದ ಆರ್ಯಕುಲಗಳು ಗೋವಧೆಗೆ ಖ್ಯಾತವಾಗಿದ್ದವು. ದೇವರಿಗೆ ಯಜ್ಞಯಾಗಗಳ ಬಲಿಯಾಗಿ ಗೋವು ಮತ್ತು ಕುದುರೆಗಳನ್ನು ವಧಿಸಿ ಅರ್ಪಿಸಲಾಗುತ್ತಿತ್ತು. ಯಾಗದ ನಂತರ ಪುರೋಹಿತರೂ ಸೇರಿದಂತೆ ಯಾರ‍್ಯಾರು ಮಾಂಸದ ಯಾವ್ಯಾವ ಭಾಗ ಹಂಚಿಕೊಳ್ಳಬೇಕೆಂದು ಶಾಸ್ತ್ರಗ್ರಂಥಗಳಲ್ಲಿ ವಿವರಿಸಲಾಗಿತ್ತು. ಗೋಮಾಂಸ ತಳಸಮುದಾಯಗಳಿಗೆ ದುರ್ಲಭವಾಗಿದ್ದರೂ ಪುರೋಹಿತ ವರ್ಗಕ್ಕೆ ಮಾತ್ರ ಒಂದಲ್ಲ ಒಂದು ಪೂಜೆ, ಯಜ್ಞದ ನೆಪದಲ್ಲಿ ಸಿಗುತ್ತಿತ್ತು. ಕ್ರಿಸ್ತಪೂರ್ವ ಕಾಲದ ಭಾರತದಲ್ಲಿ ಗೋವಧೆ ಯಾವ ಮಟ್ಟಿಗಿತ್ತು ಎಂದರೆ ಅತಿಥಿ ಬಂದರೆ ಒಂದು ಗೋವು ಕಡಿಯುವುದೇ. ಅದಕ್ಕೇ ಅತಿಥಿಯನ್ನು ‘ಗೋಘ್ನ’ನೆಂದು ಕರೆಯುತ್ತಿದ್ದರು.

ಆಗ ಯಜ್ಞಯಾಗಾದಿಗಳ ನೆಪದಲ್ಲಿ ಅಮಾಯಕ ಗೋ ಹತ್ಯೆ ನಡೆಯುವುದು ಕಂಡು ಕೆಲ ಜೀವಗಳು ಸಂಕಟಪಟ್ಟವು. ಅಮಾನವೀಯ ವಧೆಯನ್ನು ನಿಲ್ಲಿಸಬೇಕೆಂದು ಜನರ ಮನವೊಲಿಸಿದರು. ಅವರೇ ಬುದ್ಧ, ಜಿನರಾದರು. ಪೂಜೆ, ಯಾಗಗಳಿಂದ ಬೇಸತ್ತ ಜನ ಅಹಿಂಸೆ ಬೋಧಿಸುವ, ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಬೌದ್ಧ, ಜೈನ ತತ್ವಗಳೆಡೆ ಆಕರ್ಷಿತರಾದರು. ಆಗ ಎಚ್ಚೆತ್ತ ಪುರೋಹಿತವರ್ಗ ಗೋಸುತರಾಗಿ, ಸಸ್ಯಾಹಾರಿಯಾಗಿ, ಅದೇ ತನ್ನ ಶ್ರೇಷ್ಠತೆಯೆಂದು ಸಾರತೊಡಗಿತು. ಅಂದು ಗೋಮಾಂಸ ತಿನ್ನುವುದಷ್ಟೇ ಅಲ್ಲ, ಎಲ್ಲ ರೀತಿಯ ಮಾಂಸಾಹಾರ ತ್ಯಜಿಸಿದವರೇ ಇಂದು ಗೋವು ಮಾತೆ, ಅದರ ರೋಮರೋಮಗಳಲ್ಲೂ ದೇವರಿದ್ದಾನೆ, ಭಾರತವೆಂಬ ಹಿಂದೂ ಮೆಜಾರಿಟಿ ದೇಶದಲ್ಲಿ ಜನ ಗೋಮೂತ್ರ ಕುಡಿಯಬೇಕೇ ಹೊರತು ಗೋಮಾಂಸ ತಿನ್ನಬಾರದು ಎಂಬ ಒತ್ತಾಯ ಹೇರುತ್ತಿದ್ದಾರೆ.

ದನ ಸಾಕುವಿಕೆ ಒಂದು ವ್ಯವಹಾರ. ಸಾಕಿದ ದನವನ್ನು ಪ್ರೀತಿಸಬಹುದೇ ಹೊರತು ಗೋಮಾತೆ ಎಂಬ ಭಕ್ತಿಯಿಂದ ಯಾರೂ ದನ ಸಾಕಲಾರರು. ಹಿಂಡಿ, ಬೂಸಾ, ಗೊಬ್ಬರ, ಸಗಣಿಗಳ ಲಾಭ ನಷ್ಟ ಲೆಕ್ಕಾಚಾರಗಳು ವ್ಯವಹಾರಸ್ಥ ರೈತರಿಗೆ ಗೊತ್ತಿದೆ. ಅದರಲ್ಲೂ ಬರನೆರೆಗಳಿಂದ ಕಂಗೆಟ್ಟು ತನ್ನ ಕೂಳು ತಾನು ಬೆಳೆದುಕೊಳ್ಳಲಾಗದ ರೈತನಿಗೆ ರಾಸುಗಳಿಗೆ ಮೇವೊದಗಿಸುವ, ನೀರುಣಿಸಿ ಕಾಳಜಿ ಮಾಡುವ ಕಷ್ಟ ಗೊತ್ತಿದೆ. ಹಿಂದೂಮುಸ್ಲಿಮರೆನ್ನದೆ ವಯಸ್ಸಾದ ಎತ್ತು-ದನ-ಗೊಡ್ಡು ದನಗಳನ್ನು ಮಧ್ಯವರ್ತಿಗಳಿಗೆ ಮಾರಿ ಹೊಸ ದನ, ಎತ್ತು ಕೊಳ್ಳುವುದು ಎಂದಿನಿಂದ ನಡೆದುಬಂದ ರೂಢಿಯಾಗಿದೆ. ಗೋಮಾತೆಯನ್ನು ಪೂಜಿಸುವ ಹಿಂದೂಗಳೇ ಮುದಿಯಾದ, ಗೊಡ್ಡಾದ, ಕೈಕಾಲು ಮುರಿದು ಉಪಯೋಗಕ್ಕೆ ಬಾರದ ರಾಸುಗಳನ್ನು ಸಾಕಲು ಸಾಧ್ಯವಿಲ್ಲವೆಂದು ಮಾರಿದ್ದಾರೆ. ಮಾರಿದ ದನ ಎಲ್ಲಿಹೋಗಿ ಏನಾಗುವುದೆನ್ನುವುದು ಓಪನ್ ಸೀಕ್ರೆಟ್. ಆದರೆ ಗೋವು ಸಾಕಿ ಗೊತ್ತಿಲ್ಲದ ಅತಿಭಾವುಕ ಗೋಪೂಜಕರ ತಲೆಬುಡವಿಲ್ಲದ ಗೋ ಭಕ್ತಿಗೆ ಮುದಿ ಜಾನುವಾರು ವಿಲೇವಾರಿ ಮಾಡಲಾಗದೆ; ಹೊಸ ಎತ್ತಿನ ಜೋಡಿ ಕೊಳ್ಳಲಾಗದೆ ರೈತರು ಕಂಗಾಲಾಗುತ್ತಿದ್ದಾರೆ..

ಹೊಸದಲ್ಲ

ಗೋಹತ್ಯಾ ನಿಷೇಧ ಹಿಂದುತ್ವ ಪ್ರತಿಪಾದಿಸುವವರ ಇವತ್ತಿನ ಹುನ್ನಾರವಷ್ಟೆ ಅಲ್ಲ. ಈ ನಿಷೇಧ ತರುವಲ್ಲಿ ಮಹಾರಾಷ್ಟ್ರ ಮೊದಲಿನದೂ ಅಲ್ಲ. ಸಂಪೂರ್ಣ ನಿಷೇಧ ತಂದ ಹನ್ನೊಂದನೆಯ ರಾಜ್ಯ ಅದು. ಹರ‍್ಯಾಣ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ೧೯೪೭ರಿಂದಲೂ ಈ ಕಾಯ್ದೆ ಚಾಲ್ತಿಯಲ್ಲಿದೆ. ಕೇರಳ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಒಟ್ಟು ೨೪ ರಾಜ್ಯಗಳು ಬೇರೆಬೇರೆ ರೀತಿಯ ಗೋಹತ್ಯಾ ನಿಷೇಧ ಕಾನೂನನ್ನು ಹೊಂದಿವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ವರ್ಷದವರೆಗೆ ವಿವಿಧ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಹೋರಾಟಗಾರರು ಈ ಕಾಯ್ದೆಯನ್ನು ಬುಗುರಿಯಂತೆ ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ತಿರುಗಿಸಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಿನೋಬಾ ಭಾವೆ ಯಾರೂ ಹೊರತಲ್ಲ. ೧೯೬೬ರಲ್ಲಿ ವಿಶ್ವಹಿಂದೂ ಪರಿಷದ್ ಗೋಹತ್ಯಾ ನಿಷೇಧ ಕಾಯ್ದೆ ತರಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಎಲ್ಲ ಒತ್ತಡಗಳ ನಡುವೆ ಇಂದಿರಾ ಕಾಯ್ದೆ ತರಲು ಸಾಧ್ಯವಿಲ್ಲವೆಂದರು. ಹತ್ತು ಸಾವಿರ ಜನ ಕಾಯ್ದೆ ಪರವಿದ್ದ ವಕೀಲರು ಸಂಸತ್ ಭವನವನ್ನು ಸುತ್ತುವರೆಯಲು ಯತ್ನಿಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಗೃಹಮಂತ್ರಿ ಗುಲ್ಜಾರಿಲಾಲ್ ನಂದಾ ರಾಜೀನಾಮೆಯಿತ್ತರು. ಆಂತರಿಕ ಮತ್ತು ಬಾಹ್ಯ ಒತ್ತಡಗಳ ಕಾರಣವಾಗಿ ಹಲವು ರಾಜ್ಯಗಳು ನಿಷೇಧ ಕಾನೂನನ್ನು ಜಾರಿಮಾಡಿದವು.

ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಜಾನುವಾರು ಹತ್ಯೆ ನಿಷೇಧಿಸಿ, ತಳಿಯನ್ನು ರಕ್ಷಿಸಲು ರಾಜ್ಯಗಳಿಗೆ ಕಾಯ್ದೆ ರೂಪಿಸುವ ಅಧಿಕಾರ ನೀಡಲಾಗಿದೆ. ಅದು ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ’ಯಲ್ಲಿ ಸೇರಿದೆ. ಕೃಷಿ ಮತ್ತು ಪಶುಸಂಗೋಪನೆಯನ್ನು ಅಭಿವೃದ್ಧಿಗೊಳಿಸಿ ಜಾನುವಾರು ತಳಿ ರಕ್ಷಿಸಲು ರಾಜ್ಯಗಳಿಗಿರುವ ನಿರಪೇಕ್ಷ ಅಧಿಕಾರವನ್ನೇ ದಾಳವಾಗಿಟ್ಟುಕೊಂಡು ಹಿಂದುತ್ವ ಸಂಘಟನೆ-ಪಕ್ಷಗಳು ಚದುರಂಗ ಆಡುತ್ತಿವೆ. ಅವರ ತಾಳಕ್ಕೆ ತಕ್ಕಂತೆ ಗೋಹತ್ಯಾ ನಿಷೇಧ ಕಾಯ್ದೆಗಳು ಸಾಂವಿಧಾನಿಕವಾಗಿ ಸಿಂಧು ಎಂದು ೨೦೦೫ರಲ್ಲಿ ಸುಪ್ರೀಂಕೋರ್ಟೂ ಹೇಳಿದೆ. ಕೆಲ ರಾಜ್ಯಗಳು ‘ಹತ್ಯೆ ಮಾಡಲ್ಪಡಬಹುದಾದ’ ಗೋವು (ವಯಸ್ಸಾದ, ದುಡಿಯದ) ಎಂದು ಪ್ರಮಾಣಪತ್ರ ಪಡೆದ ಗೋವುಗಳನ್ನು ಕಡಿಯಲು ಅನುಮತಿ ನೀಡಿದರೆ ಮತ್ತೆ ಕೆಲವು ಸಂಪೂರ್ಣ ನಿಷೇಧಗೊಳಿಸಿವೆ.

ಸಂಪೂರ್ಣ ಗೋಹತ್ಯೆ ನಿಷೇಧದಿಂದ ಇದುವರೆಗೆ ಸಾಧಿಸಿರುವುದಾದರೂ ಏನು? ರಾಜಕೀಯ ಪಕ್ಷವೊಂದರ ಹಿಂದುತ್ವ ಟ್ರಂಪ್ ಕಾರ್ಡನ್ನು ಆಗಾಗ ಚಲಾವಣೆ ಮಾಡಲು; ಅಲ್ಪಸಂಖ್ಯಾತರನ್ನು ಹೆದರಿಸಿ ‘ಹದ್ದುಬಸ್ತಿನಲ್ಲಿಡಲು’ ಅಗತ್ಯ ಹತಾರವೊಂದು ಈ ಕಾಯ್ದೆಯ ರೂಪದಲ್ಲಿ ಒದಗಿದಂತಾಗಿದೆ. ಜೊತೆಗೆ ಹಿಂದೂ, ಹಿಂದೂಯೇತರರ ಗೋಮಾಂಸ ತಿನ್ನುವ ‘ಆಹಾರ ಅಲ್ಪಸಂಖ್ಯಾತ’ ಸಮುದಾಯ ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವಂತಾಗಿದೆ. ಹಲವು ಕಡೆ ಗೋವನ್ನು ಕದ್ದು ಸಾಗಿಸಿ ಕಡಿಯಲಾಗುತ್ತಿದೆ. ಅನುಮತಿಯಿಲ್ಲದ ಕಾನೂನು ಬಾಹಿರ ಕಸಾಯಿಖಾನೆಗಳೂ, ಗೋಶಾಲೆಗಳೂ ಹೆಚ್ಚಾಗಿವೆ.


ಯಾವುದೇ ಮಾಂಸವನ್ನೂ ತಿನ್ನಲಾರೆ ಎಂಬ ಸಸ್ಯಾಹಾರಿಗಳ ಅತಿ ಅಹಿಂಸೆಯನ್ನಾದರೂ ರುಚಿಮೀಮಾಂಸೆಯೆಂದು ಅರ್ಥಮಾಡಿಕೊಳ್ಳಬಹುದು. ಆದರೆ ದನ ತಿನ್ನಬೇಡಿ, ಹಂದಿ ತಿನ್ನಬೇಡಿ, ನಾಯಿ ತಿನ್ನಬೇಡಿ ಎಂಬಂತಹ ರುಚಿ ಮತ್ತು ಭಕ್ತಿಯ ಧಾರ್ಮಿಕ ಹೇರಿಕೆಗಳನ್ನು ಈ ಕಾಲದಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು? ಮಸೀದಿಮಿನಾರುಗಳು, ಬುದ್ಧಮೂರ್ತಿಗಳು, ಪ್ರಾಚ್ಯ ದೇಗುಲಗಳು ಯಾವ ನಂಬಿಕೆಯ ಹೆಸರಿನಲ್ಲಿ ವಿಶ್ವಾದ್ಯಂತ ಉದುರಿಬೀಳುತ್ತಿವೆಯೋ ಅದೇ ನಂಬಿಕೆಯ ಅತಿಯೇ ಆಹಾರ ಆಯ್ಕೆ ವಿಷಯದಲ್ಲೂ ನಿರ್ಬಂಧ ಹೇರುತ್ತಿವೆ. ಹೀಗಿರುತ್ತ ಯಾವುದನ್ನು ಬೆಂಬಲಿಸುವುದು? ದುಷ್ಟ ಮಾನವರ ದುಷ್ಟತನಗಳಿಗೊಂದು ಸಮರ್ಥನೆಯಾಗಿ ಒದಗತೊಡಗಿರುವ ಧರ್ಮಗಳನ್ನು, ಧರ್ಮಾಚರಣೆಗಳನ್ನೂ ಯಾವ ಮಾಪನದಲ್ಲಿ ಅಳೆಯುವುದು?

ಗೊತ್ತಿಲ್ಲ. ಆದರೆ ಸ್ವರ್ಗವೋ, ಜನ್ನತೋ, ಪ್ಯಾರಡೈಸೋ ಎಂಬುದೊಂದು ನಿಜವಾಗಿ ಇದ್ದರೆ ಖಂಡಿತವಾಗಿ ನಾವು ದೇವರಿಗಲ್ಲ, ಶ್ರೇಷ್ಠಕನಿಷ್ಠವರ್ಜ್ಯವೆಂದು ವಿಂಗಡಿಸಲ್ಪಟ್ಟ ಪ್ರಾಣಿಗಳಿಗೆ ಉತ್ತರಿಸಬೇಕಾಗುತ್ತದೆ. ಈ ಭೂಮಿಯಿಡೀ, ಅದರ ಮೇಲಿನ ಜೀವಸಂಕುಲವಿಡೀ ನನ್ನ ಹೊಟ್ಟೆಗೇ ಎಂದು ಭಾವಿಸಿದ ಮಾನವ ನಾಲಿಗೆಯ ಹಪಾಹಪಿಗೆ ಕಾರಣ ಕೊಡಬೇಕಾಗುತ್ತದೆ..

ತಿನ್ನುವವರ, ತಿನ್ನದವರ ಮಧ್ಯೆ ಗೋಡೆಯೊಂದು ಗೋವಿನ ರೂಪದಲ್ಲಿ ಬೆಳೆಯುತ್ತಿರುವಾಗ ಆರೋಗ್ಯಕರ ನಿಲುವು ಯಾವುದು ಎಂದು ಮನಸು ಯೋಚಿಸುತ್ತಿದೆ. ರೂಸೋ ಮಾತುಗಳನ್ನು ಅನುಸರಿಸಿ ಹೇಳುವುದಾದರೆ, ‘ನಿನ್ನ ಆಹಾರ ಆಯ್ಕೆ ನನ್ನದೂ ಆಗಿರಬೇಕಿಲ್ಲ. ಆದರೆ ನಿನ್ನ ಆಹಾರ ಆಯ್ಕೆ ನಿನ್ನ ಹಕ್ಕು ಎನ್ನುವುದನ್ನು ನಾನು ಕೊನೆತನಕ ಎತ್ತಿಹಿಡಿಯುತ್ತೇನೆ. ಎಲ್ಲ ತೆರನ ಹೇರಿಕೆಯನ್ನು ವಿರೋಧಿಸುತ್ತೇನೆ..’ ಎನ್ನುವುದು ಸೌಹಾರ್ದದ ಸಹಬಾಳ್ವೆಯ ಬೀಜಮಂತ್ರ ಎನಿಸುತ್ತಿದೆ..
















No comments:

Post a Comment