Thursday 28 January 2016

ಅನುರಾಧಾ ಗಾಂಧಿ: ಮುಳ್ಳುಹಾದಿಯಲಿ ಹೆಜ್ಜೆಯಿಟ್ಟ ದಿಟ್ಟೆ





‘ಒಂದಾನೊಂದು ಕಾಲದಲ್ಲಿ’ ನ್ಯಾಯದ ಗಂಟೆ ಬಾರಿಸಿದ ಕೂಡಲೇ ತನ್ನ ರಾಜ್ಯದಲ್ಲಿ ಏನೋ ಅನ್ಯಾಯವಾಗಿದೆ ಎಂದು ಸ್ವತಃ ರಾಜನೇ ಬಂದು ವಿಚಾರಿಸಿ ನ್ಯಾಯ ಪರಿಹರಿಸುತ್ತಿದ್ದನಂತೆ. ಆದರೆ ಅದು ಕತೆಗಳಲ್ಲಷ್ಟೆ. ಕೋಟ್ಯಂತರ ಮಹಿಳೆಯರು ಈ ಎಲ್ಲ ಶತಮಾನಗಳಲ್ಲಿ ಅನ್ಯಾಯವಾಗಿದೆ ಎಂದು ಗಂಟೆ ಬಾರಿಸುವುದಿರಲಿ, ಹೇಳುವ ಅವಕಾಶವೂ ಇಲ್ಲದೆ ಮೂಕವಾಗಿ ಬಾಳಿ ಹೋಗಿದ್ದಾರೆ. ಆದರೂ ಅನಾದಿಯಿಂದ ಮಹಿಳೆ ಪರ್ಯಾಯ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿರುವುದೂ ನಿಜವೇ. ಜಾನಪದದಲ್ಲಿ, ಪುರಾಣಗಳಲ್ಲಿ ಅಲ್ಲಲ್ಲಿ ಇದಕ್ಕೆ ದೃಷ್ಟಾಂತಗಳು ಸಿಗುತ್ತವೆ. ವ್ಯವಸ್ಥೆಯೊಂದರ ದಮನಿತರೆಲ್ಲ ನ್ಯಾಯಕ್ಕಾಗಿ ಪರ್ಯಾಯ ವ್ಯವಸ್ಥೆಯೊಂದನ್ನು ತಮಗರಿವಿಲ್ಲದಂತೆ ಸೃಷ್ಟಿಸಿಕೊಂಡಿರುತ್ತಾರೆ. ಅವರು ಹಿಡಿದ ದಾರಿಗಳು ಭಿನ್ನ; ಅವರು ನಂಬಿದ ತತ್ವಗಳು ಭಿನ್ನ; ಅವರ ಚಿಂತನೆಯ ಮೂಲ, ಸ್ವರೂಪವೂ ಭಿನ್ನ. ಈ ಎಲ್ಲ ಭಿನ್ನತೆಗಳ ಜೊತೆಗೇ ಅವರ ಗಟ್ಟಿತನ ಹಾಗೂ ಹೋರಾಟದ ಕೆಚ್ಚೂ ಉಳಿದವರಿಗಿಂತ ಭಿನ್ನ. ಅಲ್ಲಿಲ್ಲಿ ಮಿಂಚುಹುಳದ ಬೆಳಕಿನಂತೆ ಇಂಥ ಕೆಲವರ ಪ್ರಯತ್ನಗಳಿದ್ದರೂ ಕಾಲ ಪ್ರವಾಹದಲ್ಲಿ ಗುರುತುಳಿಯದಂತೆ ಅವು ಕೊಚ್ಚಿಹೋಗಿರುವುದೂ ನಿಜವಾಗಿದೆ. ಎಂದೇ ಪರ್ಯಾಯ ಮಾರ್ಗ ಕ್ರಮಿಸಿದವರನ್ನು, ಕ್ರಮಿಸುತ್ತಿರುವವರನ್ನು ಅದರೆಲ್ಲ ಏಳುಬೀಳುಗಳೊಡನೆ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ. 

ವ್ಯವಸ್ಥೆಯ ಭಾಗವಾಗಿಲ್ಲದೇ; ವ್ಯವಸ್ಥೆಯನ್ನು ನೆಚ್ಚಿಕೊಳ್ಳದೇ; ಪಾರಂಪರಿಕ ಲಿಂಗ ತಾರತಮ್ಯ, ಜಾತಿ ತಾರತಮ್ಯ, ವರ್ಗ ತಾರತಮ್ಯಗಳ ವಿರುದ್ಧ ಹೋರಾಡಿದ, ಸಂಘಟಿಸಿದ ಮಹಿಳೆಯರಲ್ಲಿ ಅನುರಾಧಾ ಒಬ್ಬರು. ನ್ಯಾಯದ, ಸಮಸಮಾಜದ ಕನಸು ಹೊತ್ತರೂ ಮಾವೋವಾದದ ಸಶಸ್ತ್ರ ಹೋರಾಟವನ್ನು ಬೆಂಬಲಿಸಿದ ಕಾರಣಕ್ಕೆ ಮಹಿಳಾ ಚಳುವಳಿಯ ಡಿಸ್ಕೋರ್ಸ್‌ಗಳಲ್ಲಾಗಲೀ, ಬರಹಗಾರ್ತಿ ಎಂದಾಗಲೀ, ರಾಜಕಾರಣಿಯೆಂದಾಗಲೀ ಉಳಿದ ಸಮಾಜದ ಗುರುತಿಸುವಿಕೆಯಿಂದ ದೂರವುಳಿದವರು ಅವರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದ ಸೆಂಟ್ರಲ್ ಕಮಿಟಿಯ ಏಕೈಕ ಮಹಿಳಾ ಸದಸ್ಯೆಯಾಗಿದ್ದ; ಕಾ. ನರ್ಮದಾ/ಅವಂತಿ/ರಮಾ/ಜಾನಕಿ/ವರ್ಷಾ ಹೀಗೆ ಹಲವು ಹೆಸರುಗಳನ್ನು ಪಡೆದು ಗೃಹ ಸಚಿವಾಲಯದ ‘ಮೋಸ್ಟ್ ವಾಂಟೆಡ್’ ಲಿಸ್ಟಿನಲ್ಲಿದ್ದ ಅನುರಾಧಾ ಶ್ಯಾನ್‌ಭಾಗ್ ಅಥವಾ ಅನುರಾಧಾ ಗಾಂಧಿ ಮಾವೋವಾದಿ ಪಕ್ಷದ ಒಳಗೆ ಹಾಗೂ ಆದಿವಾಸಿ ಸಮಾಜದೊಳಗೆ ಲಿಂಗ ಪ್ರಶ್ನೆಯನ್ನೆತ್ತಿದವರು. ಮಹಾರಾಷ್ಟ್ರದ ನಿಷೇಧಿತ ಸಿಪಿಐ(ಎಂಎಲ್) ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಪಕ್ಷದ ಪ್ರಣಾಳಿಕೆಯಲ್ಲಿ, ನೀತಿನಿಯಮ/ಕಾರ್ಯಯೋಜನೆಗಳನ್ನು ರೂಪಿಸುವ ಸಮಯದಲ್ಲಿ ಜಾತಿ ಪ್ರಶ್ನೆಯನ್ನು, ಸ್ತ್ರೀವಾದವನ್ನು ಸೇರಿಸಿದವರು. ದಂಡಕಾರಣ್ಯದ ಆದಿವಾಸಿ ಕೃಷಿಕ ಸಮುದಾಯಗಳಲ್ಲಿ ‘ಸಹಕಾರಿ ಸಂಸ್ಥೆ’ಗಳನ್ನು ರೂಪಿಸುವ ಅವಶ್ಯಕತೆಯನ್ನು ಸಹಸಂಗಾತಿಗಳಿಗೆ ಮನವರಿಕೆ ಮಾಡಿಕೊಟ್ಟವರು. ಬುದ್ಧಿಜೀವಿಗಳಿಂದ; ಆಳುವವರಿಂದ; ಆರಕ್ಷಕರಿಂದ; ಮಾಧ್ಯಮಗಳಿಂದ ‘ದುಷ್ಟ’ರಂತೆ ಬಿಂಬಿಸಲ್ಪಟ್ಟ ನಕ್ಸಲ್ ಹೋರಾಟದ ಮುಂಚೂಣಿಯಲ್ಲಿದ್ದು ತೀವ್ರ ಅನಾರೋಗ್ಯದ ನಡುವೆ ವರ್ಷಗಟ್ಟಲೆ ಭೂಗತರಾಗಿದ್ದವರು. ಕೊನೆಗೆ ದಂಡಕಾರಣ್ಯದ ದುರ್ಗಮ ಕಾಡುಗಳಲ್ಲಿ ಮಲೇರಿಯಾಗೆ ತುತ್ತಾಗುವವರೆಗೆ ತಮ್ಮ ಅಸ್ತಿತ್ವವನ್ನೇ ಮರೆತು ಬದುಕಿದವರು ಅನುರಾಧಾ. 

‘ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ನಕ್ಸಲ್ ಹಾವಳಿ’ ಎಂದು ಹೇಳುವ ರಾಜಕಾರಣಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶವನ್ನು ಒತ್ತೆಯಿಡುವಾಗ ನಕ್ಸಲ್ ಹಣೆಪಟ್ಟಿ ಹೊತ್ತ ಹೋರಾಟಗಾರರು ಸಂಘಟನೆಯಲ್ಲಿ ತೊಡಗಿದರು. ಜನರನ್ನು ದೋಚುವವರು ದೊಡ್ಡ ನಾಯಕರೆಂದು ಸಕಲ ಗೌರವಗಳಿಗೆ ಪಾತ್ರರಾದರೆ; ತನ್ನದೆನ್ನುವ ಎಲ್ಲವನ್ನು ತೊರೆದು, ಲೂಟಿಕೋರರ ಬುಡ ಅಲುಗಿಸುವ ಹೋರಾಟಗಾರರು ಅನುಮಾನ/ಎನ್‌ಕೌಂಟರ್‌ಗಳಿಗೆ ಬಲಿಯಾದರು. ಈಗ ಕೋಮುವಾದಿ ರಾಜಕಾರಣ ವಿಜೃಂಭಿಸುತ್ತ ಜನಪರ ಬದ್ಧತೆಯ ಸಿದ್ಧಾಂತಗಳು ಯುವಪೀಳಿಗೆಯನ್ನು ಆಕರ್ಷಿಸದೇ ಹೋಗಿವೆ. ಚುನಾವಣೆ ಫಲಿತಾಂಶಗಳು ನೈಜ ಜನಾದೇಶವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಲಹುತ್ತಿವೆಯೇ ಎಂಬ ಬಗ್ಗೆಯೇ ಅನುಮಾನಗಳಿವೆ.

ಇಂಥ ವಿಪರ್ಯಾಸಗಳ ಹೊತ್ತಿನಲ್ಲಿ ಅನುರಾಧಾ ಹಾಗೂ ಅವರ ಸಂಗಾತಿಗಳ ಬದುಕು-ಹೋರಾಟ-ಪ್ರತಿಪಾದನೆಯತ್ತ ಒಂದು ನೋಟ ಇಲ್ಲಿದೆ:

ಅನುರಾಧಾ ಶಾನಭಾಗ್ ಗಾಂಧಿ (೧೯೫೪-೨೦೦೮)

ಕೊಡಗಿನ ಗಣೇಶ್ ಶಾನ್‌ಭಾಗ್ ಎಳವೆಯಲ್ಲಿ ಮನೆಬಿಟ್ಟು ಸುಭಾಸ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿದರು. ನಂತರ ಲಾ ಓದಿ ಮುಂಬೈ ಹೈಕೋರ್ಟಿನ ವಕೀಲರಾದರು. ಕಮ್ಯುನಿಸ್ಟ್ ಪಕ್ಷ ಸೀಳುಗಳಾಗಿ ಒಡೆಯುವ ಮುನ್ನ ಅದರಲ್ಲಿದ್ದ ಗಣೇಶ್ ಸಿಪಿಐ ಪಕ್ಷದ ಕಚೇರಿಯಲ್ಲೇ ಕುಮುದ್ ಅವರನ್ನು ಮದುವೆಯಾದರು. ಆ ದಂಪತಿಗಳಿಗೆ ಅನುರಾಧಾ ೧೯೫೪ರಲ್ಲಿ ಹುಟ್ಟಿದರು.

೧೯೭೦ರ ದಶಕ ಕಮ್ಯುನಿಸಮ್ಮಿನ ಪ್ರಭಾವಳಿ ಎಲ್ಲೆಲ್ಲೂ ತೀವ್ರವಾಗಿದ್ದ ಕಾಲ. ಚೀನಾದಲ್ಲಿ ಮಾವೋ ತಂದ ಸಾಂಸ್ಕೃತಿಕ ಕ್ರಾಂತಿ; ಅಮೆರಿಕದಲ್ಲಿ ವಿಯೆಟ್ನಾಂ ಯುದ್ಧಕ್ಕೆ ಬಂದ ಪ್ರತಿಕ್ರಿಯೆ; ಭಾರತದ ನಕ್ಸಲ್‌ಬರಿ ಹೋರಾಟ ಇವೆಲ್ಲವೂ ಕೇವಲ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷಿಯಾದಲ್ಲೇ ಕಮ್ಯುನಿಸ್ಟ್ ಅಲೆಯನ್ನು ಹುಟ್ಟುಹಾಕಿದ್ದವು. ಆಗ ಎಲ್ಫಿನ್‌ಸ್ಟನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅನುರಾಧಾ ‘ಪ್ರೊಗ್ರೆಸಿವ್ ಯುತ್ ಮೂವ್‌ಮೆಂಟ್’ ಎಂಬ ತೀವ್ರಗಾಮಿ ವಿದ್ಯಾರ್ಥಿ ಚಳುವಳಿಯನ್ನು ಸೇರಿದರು. ತೀವ್ರ ಬರ ಎದುರಿಸುತ್ತಿದ್ದ ಮಹಾರಾಷ್ಟ್ರ ಮತ್ತು ಸುತ್ತಮುತ್ತಣ ಪ್ರದೇಶಕ್ಕೆ; ಬಾಂಗ್ಲಾ ನಿರಾಶ್ರಿತ ಶಿಬಿರಗಳಿಗೆ ಭೇಟಿ ಕೊಟ್ಟರು. ಬರ ಪರಿಸ್ಥಿತಿಯ ಕುರಿತು ಮುಂಬಯಿಯ ಚಿಂತಕರ, ಬರಹಗಾರರ ಚರ್ಚೆ ಏರ್ಪಡಿಸುತ್ತಿದ್ದರು. ಆಗ ಬಲಗೊಳ್ಳತೊಡಗಿದ್ದ ದಲಿತ್ ಪ್ಯಾಂಥರ್ಸ್ ಜೊತೆಯೂ ಸಂಬಂಧ ಹೊಂದಿದ್ದರು. ಮರಾಠಿ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜ ಮತ್ತು ರಂಗಭೂಮಿಯ ನಡುವಿನ ಸಂಬಂಧಗಳ ಕುರಿತು ಪ್ರಶ್ನೆ ಎತ್ತಿದರು. 

ಸಮಾಜಶಾಸ್ತ್ರ ಎಂಫಿಲ್ ಮಾಡಿದ ಅನುರಾಧಾಗೆ ವಿಲ್ಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆಯಿತು. ಅದೇವೇಳೆ ತುರ್ತು ಪರಿಸ್ಥಿತಿ ಜಾರಿಯಾಗಿ ಅನುರಾಧಾ ಮತ್ತು ಸಂಗಾತಿಗಳು ಚಿಂತಕ-ಬರಹಗಾರ-ಕಲಾವಿದರನ್ನು ಒಟ್ಟುಗೂಡಿಸಿ ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮೋಕ್ರೆಟಿಕ್ ರೈಟ್ಸ್’ ಎಂಬ ಮಾನವ ಹಕ್ಕು ಸಂಘಟನೆ ಆರಂಭಿಸಿದರು. ನಾಟಕಕಾರ ವಿಜಯ್ ತೆಂಡೂಲ್ಕರ್ ಅದರ ಅಧ್ಯಕ್ಷರಾದರೆ, ಅಸ್ಘರ್ ಅಲಿ ಎಂಜಿನಿಯರ್ ಉಪಾಧ್ಯಕ್ಷರಾಗಿದ್ದರು. ಪ್ರಭುತ್ವವು ಕಾನೂನಿನ ಪರಿಧಿಯಾಚೆಗೆ ಜನಜೀವನದಲ್ಲಿ ಹಸ್ತಕ್ಷೇಪ ಮಾಡುವುದನ್ನು ಈ ಸಂಘಟನೆ ವಿರೋಧಿಸಿತು. 



ಅದೇ ವೇಳೆ ಸಮಾನ ಮನಸ್ಕ ಸಂಗಾತಿಯಾಗಿ ಕೊಬಾಡ್ ಗಾಂಧಿ ಪರಿಚಯವಾಗಿ ಅನುರಾಧಾ ಮದುವೆಯಾದರು. ಮುಂಬಯಿ ವೊರ್ಲಿಯ ಶ್ರೀಮಂತ ಪಾರ್ಸಿ ಕುಟುಂಬದ ಕೊಬಾಡ್ ಡೂನ್ ಸ್ಕೂಲಿನಲ್ಲಿ ಓದಿದವರು. ಸಂಜಯ್ ಗಾಂಧಿಯ ಸಹಪಾಠಿ. ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್ನಿಗೆ ಚಾರ್ಟರ್ಡ್ ಅಕೌಂಟೆನ್ಸಿ ಮಾಡಲು ತೆರಳಿದಾಗ ಅಲ್ಲಿ ತೀವ್ರಗಾಮಿ ಗುಂಪುಗಳ ಸಂಪರ್ಕಕ್ಕೆ ಬಂದು ಭಾರತಕ್ಕೆ ವಾಪಸಾಗಿದ್ದರು. 

ಸಂಸದೀಯ ರಾಜಕಾರಣದಿಂದ, ರಾಜಕೀಯ ನಾಯಕರಿಂದ, ಜನ ಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಜನಪರವಾದ ಏನನ್ನೂ ಸಾಧಿಸುವುದು ಅಸಾಧ್ಯ; ಶೋಷಿತ ಎಚ್ಚೆತ್ತು ಕ್ರಾಂತಿಯಾಗಿ ಅವನ ಕೈಗೆ ಅಧಿಕಾರ ಮತ್ತು ಸಂಪನ್ಮೂಲ ದೊರೆತಾಗಲಷ್ಟೇ ನಿಜವಾದ ಸ್ವಾತಂತ್ರ್ಯ ದೊರೆತ ಹಾಗೆ ಎಂದು ಹೋರಾಟಗಾರರ ಒಂದು ಗುಂಪು ಭಾವಿಸಿತು. ಅದಕ್ಕಾಗಿ ಜನಹೋರಾಟವನ್ನು ಸಶಸ್ತ್ರ ಮಾರ್ಗದಲ್ಲಿ ಕೊಂಡೊಯ್ಯಬಯಸಿತು. ಹೀಗೆ ಅಸ್ತಿತ್ವಕ್ಕೆ ಬಂದದ್ದು ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಗುಂಪು. ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲ್ಯುಜಿ) ಕಟ್ಟುವುದರಲ್ಲಿ ಕೊಬಾಡ್ ಪ್ರಮುಖ ಪಾತ್ರ ವಹಿಸಿದರು. ತನ್ನ ಕಾರ್ಯಕ್ಷೇತ್ರವಾಗಿ ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘರ್ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ವ್ಯಾಪಿಸಿದ ದಂಡಕಾರಣ್ಯವನ್ನು ಪಿಡಬ್ಲ್ಯುಜಿ ಆಯ್ದುಕೊಂಡಾಗ ಕೊಬಾಡ್ ಅದರ ಜವಾಬ್ದಾರಿ ವಹಿಸಿಕೊಂಡರು. ಅನುರಾಧಾ ನೆಲೆಯೂ ಮುಂಬಯಿಯಿಂದ ಸ್ಥಳಾಂತರಗೊಂಡಿತು. ವಕೀಲರ ಮಗಳಾದ, ಸಮಾಜ ಶಾಸ್ತ್ರ ಎಂಫಿಲ್ ಪದವೀಧರೆಯಾಗಿ ಅಕ್ಯಾಡೆಮಿಕ್ ವಲಯದಲ್ಲಿ ಬುದ್ಧಿಜೀವಿಯಾಗಿ ಬೆಳೆಯತೊಡಗಿದ್ದ, ರಂಗ-ಸಂಗೀತಾಸಕ್ತಳಾದ ಅನುರಾಧಾ ದಂಡಕಾರಣ್ಯದ ಆದಿವಾಸಿಗಳನ್ನು ಸಂಘಟಿಸುವ ಕೆಲಸಕ್ಕೆ ಮುಂಬಯಿಯಿಂದ ಹೊರಟರು. 

ಇದುವರೆಗಿನ ಅವರ ಹೋರಾಟ-ಜಾಗೃತಿಯ ಸ್ವರೂಪ ಒಂದು ರೀತಿಂiiದಾಗಿದ್ದರೆ ನಂತರದ ಬದುಕು ಇನ್ನೊಂದು ಘಟ್ಟ ಪ್ರವೇಶಿಸಿತು. 

೧೯೮೨ರಲ್ಲಿ ನಾಗಪುರದ ಇಂದೋರ್ ಬಸ್ತಿಯಲ್ಲಿ ಬಾಡಿಗೆ ಮನೆ ಹಿಡಿದರು. ಹೋಗಿ ಬರುವವರಿಂದ ತುಂಬಿದ ಅವರ ಮನೆ ಛತ್ರದಂತಿತ್ತು ಎಂದು ಗೆಳೆಯರ ಬಳಗ ಈಗಲೂ ನೆನೆಯುತ್ತದೆ. ಅಲ್ಲಿ ಅನುರಾಧಾ ಅರೆಕಾಲಿಕ ಉಪನ್ಯಾಸಕ ವೃತ್ತಿಗೆ ಸೇರಿದರು. ಓಡಾಡಲು ಒಂದು ಬೈಸಿಕಲ್ ಕೊಂಡರು. ಆಗಷ್ಟೇ ಕೈಗಾರಿಕಾ ತಾಣವಾಗುತ್ತಿದ್ದ ನಾಗಪುರದ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿತ್ತು. ಬಹುತೇಕ ಕಾರ್ಮಿಕರು ಅಸಂಘಟಿತರು ಹಾಗೂ ದಲಿತ ಸಮುದಾಯದವರು. ಚಂದ್ರಾಪುರ, ಅಮರಾವತಿ, ಜಬಲ್‌ಪುರ, ಯಾವತ್ಮಲ್‌ಗಳಲ್ಲಿ ಕೂಲಿಕಾರ್ಮಿಕರನ್ನು, ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಸಂಘಟಿಸಿದರು. ಅವರು ವಾಸಿಸುತ್ತಿದ್ದ ಇಂದೋರಾ ಬಸ್ತಿ ಭಾರತದಲ್ಲೇ ಅತಿ ದೊಡ್ಡ ದಲಿತ ಆವಾಸವಾಗಿತ್ತು. ಅಲ್ಲಿ ಗೂಂಡಾ ಹಾವಳಿ ಹೆಚ್ಚು ಎಂದು ಜನ ಹಗಲು ಹೊತ್ತಿನಲ್ಲೂ ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದರು. ಅಂಥಲ್ಲಿ ಅನುರಾಧಾ ಏಕಾಂಗಿಯಾಗಿ ನಡುರಾತ್ರಿ ತಮ್ಮ ಬೈಸಿಕಲ್ ಮೇಲೆ ಮನೆಗೆ ಬರುತ್ತಿದ್ದರು. ಬಸ್ತಿಯ ಜನರ ಜೊತೆ ಸಂಪರ್ಕ ಬೆಳೆಸಿದರು. ಇವರ ಪ್ರೋತ್ಸಾಹದಿಂದ ಬಸ್ತಿಯ ಎಷ್ಟೋ ಹುಡುಗರು ಓದು ಮುಂದುವರೆಸಿದರು. ಹಾಡುಗಾರರ ತಂಡ ಕಟ್ಟಿದರು. ಬಿವಜಿ ಬಡ್ಕೆ ಎಂಬಾತ ಗಂಟಲ ಕ್ಯಾನ್ಸರ್‌ಗೆ ತುತ್ತಾದಾಗ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದರು. ಮನೆಗೆಲಸಕ್ಕೆ ಹೋಗುತ್ತಿದ್ದ ಬಸ್ತಿಯ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರೂ ಅದು ಆಕಸ್ಮಿಕ ವಿದ್ಯುತ್ ಶಾಕ್ ಎಂದು ಕೇಸು ಮುಚ್ಚಿಹೋಗುವುದರಲ್ಲಿತ್ತು. ಅದಕ್ಕೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿ ಅನುರಾಧಾ ಪ್ರತಿಭಟನೆ, ಪ್ರದರ್ಶನ ನಡೆಸಿದರು. ಈ ವೇಳೆಗೆ ಅವರು ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು. 


೧೯೯೦ರ ಹೊತ್ತಿಗೆ ಅನುರಾಧಾ ಆರೋಗ್ಯ ಹದಗೆಡುತ್ತಿದ್ದರೂ ಸಂಘಟನೆಗೆ ಅನುಭವಿ ಸಂಘಟಕರ ಜರೂರಿ ಇದೆಯೆಂದು ದಂಡಕಾರಣ್ಯಕ್ಕೆ ಹೋದರು. ಆ ವೇಳೆಗೆ ಆರ್ಥಿಕ ಉದಾರೀಕರಣ ನೀತಿ ಬಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರವೇ ಮಣೆ ಹಾಕಿತು. ಆದಿವಾಸಿಗಳನ್ನು ಅವರ ಪಾರಂಪರಿಕ ಅರಣ್ಯ ವಾಸಸ್ಥಳಗಳಿಂದ ಎತ್ತಂಗಡಿ ಮಾಡುತ್ತ ಪುನರ್ವಸತಿಯ ಅನಿವಾರ್ಯ ಕಷ್ಟಗಳಿಗೆ ಈಡುಮಾಡಿತು. ಹೀಗೆ ಸಿರಿವಂತರ ಬಂಡವಾಳ ಬೆಳೆಸಲು ತಮ್ಮ ನೆಲೆ, ನೆಲ, ಹಕ್ಕುಗಳನ್ನು ಕಳೆದುಕೊಂಡ ಆದಿವಾಸಿಗಳನ್ನು ಸಂಘಟಿಸುವತ್ತ ಮಾವೋವಾದಿ ಪಕ್ಷ ಗಮನ ಹರಿಸಿತು. ಸಹಜವಾಗಿಯೇ ಉದ್ಯಮಿಗಳ, ಅಧಿಕಾರಿಗಳ, ರಾಜಕಾರಣಿಗಳ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು.

ಬುಡಕಟ್ಟು ಜನರನ್ನು ಸಂಪರ್ಕಿಸಿ, ಅವರ ವಿಶ್ವಾಸ ಗಳಿಸಿ, ಸಂಘಟನೆ ಕಟ್ಟುವುದು ಸುಲಭದ ಕೆಲಸವಾಗಿರಲಿಲ್ಲ. ಅನುರಾಧಾ ಅವರ ಭಾಷೆ ಕಲಿತರು, ಜನಜೀವನ ಅಭ್ಯಸಿಸಿದರು. ಅವರೊಳಗೊಬ್ಬರಾಗಿ ಬೆರೆತರು. ‘ಉಳುವವನೇ ಒಡೆಯ, ಆದಿವಾಸಿಯದೇ ಅಡವಿ’, ಶೋಷಿತರ ಕೈಗೆ ಪ್ರಭುತ್ವ-ಅಧಿಕಾರ’, ‘ಮಹಿಳಾ ವಿಮೋಚನೆ’ ಇಂಥವು ಸ್ಲೋಗನ್ನುಗಳಾಗಿದ್ದವು. 

ಅಡವಿಯ ಬದುಕೂ ಸುಲಭವಾಗಿರಲಿಲ್ಲ. ಬಂಧನದ ಸಾಧ್ಯತೆ ಸದಾ ಇರುವುದರಿಂದ ಗುಟ್ಟಾಗಿ ಬದುಕಬೇಕು. ತಮ್ಮ ಭಾರ ತಾವೇ ಹೊತ್ತು ಸಾಗಬೇಕು. ಸದಾ ಚಲಿಸುತ್ತಿರಬೇಕು. ‘ಡಿಕ್ಲಾಸಿಂಗ್ ಒನ್‌ಸೆಲ್ಫ್’ ಎಂಬ ಮಾರ್ಕ್ಸಿಸ್ಟ್ ತತ್ವದಂತೆ ವರ್ಗ ಅಸ್ಮಿತೆ ಕಳೆದುಕೊಳ್ಳುವುದು ಹೋರಾಟದ ಬದುಕಿನಲ್ಲಿ ತುಂಬ ಮುಖ್ಯ. ಅನುರಾಧಾ ಅದನ್ನು ಅಕ್ಷರಶಃ ಪಾಲಿಸಿದರು. ತಲೆಯ ಮೇಲೆ ಅಪಾಯದ ಕತ್ತಿ ಸದಾ ತೂಗುತ್ತಿರುವಾಗ ಕಾಡುಮೇಡುಗಳನ್ನು ಸಂಗಾತಿಗಳೊಂದಿಗೆ ಸುತ್ತಿದರು. ೧೯೯೮-೯೯ರ ವೇಳೆಗೆ ತೀವ್ರ ಬರ ಆ ಪ್ರದೇಶವನ್ನು ಬಾಧಿಸಿತು. ಕುಡಿಯುವ ನೀರಿಗೆ, ಧಾನ್ಯಕ್ಕೆ ಹಾಹಾಕಾರ. ಸರ್ಕಾರ ನೀಡಿದ ಪಡಿತರ ಅಕ್ಕಿಯಲ್ಲಿ ಕಲ್ಲುಗಳೇ ತುಂಬಿರುತ್ತಿದ್ದವು. ಒಂದು ಅರಣ್ಯ ಪ್ರದೇಶದ ಹತ್ತು ಹಳ್ಳಿಗಳಿಗೆ ನೀರುಣಿಸುತ್ತಿದ್ದ ಕೆರೆಗೆ ಕಾಯಕಲ್ಪ ಅವಶ್ಯವಾಗಿತ್ತು. ಅದಕ್ಕಾಗಿ ಅಧಿಕಾರಿಗಳೊಡನೆ ಚರ್ಚೆ, ಪ್ರತಿಭಟನೆ, ಹಕ್ಕೊತ್ತಾಯ ಜಾಥಾ ನಡೆಸಿದರೂ ಉಪಯೋಗವಾಗದೇ ಹೋಯಿತು. ಆಗ ಸಂಘಟನೆಯ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಕೆರೆ ಕಾಮಗಾರಿ ಪೂರ್ಣಗೊಳಿಸಿದರು. ಕೇಂದ್ರ ಸರ್ಕಾರದ ‘ಉಗ್ರ’ರ ಪಟ್ಟಿಯಲ್ಲಿದ್ದವರು ಸುಮಾರು ೧೦೦ ಕೆರೆಗಳನ್ನು ಅನುರಾಧಾ ಮೇಲುಸ್ತುವಾರಿಯಲ್ಲಿ ಆದಿವಾಸಿಗಳ ಸಹಾಯದಿಂದ ನಿರ್ಮಿಸಿದರು. 

ಇದರ ಜೊತೆಗೆ ಅನುರಾಧಾ ‘ಕ್ರಾಂತಿಯಿಲ್ಲದೆ ಮಹಿಳೆ ಉಳಿಯುವುದಿಲ್ಲ, ಮಹಿಳೆಯಿಲ್ಲದೆ ಕ್ರಾಂತಿಯಾಗುವುದಿಲ್ಲ’ ಎಂಬ ನಂಬಿಕೆಯಿಂದ ಆದಿವಾಸಿ ಮಹಿಳೆಯರ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡರು. ಮಾವೋವಾದಿ ಸಂಘಟನೆ ಹಾಗೂ ಆದಿವಾಸಿ ಸಮಾಜದ ಒಳಗಿರುವ ಪುರುಷಪ್ರಾಧಾನ್ಯ ಹೋದ ಹೊರತು ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ; ಜಾತಿಪದ್ಧತಿ ಹಾಗೂ ಪುರುಷ ಪ್ರಾಧಾನ್ಯವನ್ನು ಇಂಚಿಂಚೇ ನಿರ್ಮೂಲನಗೊಳಿಸದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಈ ತಾತ್ವಿಕತೆಯೊಂದಿಗೆ ವಂಚಿತರಲ್ಲಿಯೇ ಅಂಚಿಗೆ ಸರಿಸಲ್ಪಟ್ಟ ಆದಿವಾಸಿ ಮಹಿಳೆಯರನ್ನು ಜಾಗೃತಿಗೊಳಿಸಿ ‘ಆದಿವಾಸಿ ಕ್ರಾಂತಿಕಾರಿ ಮಹಿಳಾ ಸಂಘಟನ್’ ಕಟ್ಟಿದರು. ೧೯೮೬ರಲ್ಲಿ ಶುರುವಾದ ಕೆಎಎಂಎಸ್‌ನಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯದ ಏಳು ಜಿಲ್ಲೆಗಳ ೪೦ ಲಕ್ಷ ಜನಸಂಖ್ಯೆಯ ೯೦ ಸಾವಿರ ಹೆಣ್ಣುಮಕ್ಕಳು ಸದಸ್ಯರಾಗಿದ್ದಾರೆ. ಆ ಪ್ರದೇಶದಲ್ಲಿ ವಾಸಿಸುವ ಮಾದಿಯಾ, ಮುರಿಯಾ, ದೊರ‍್ಲಾ, ಗೊಂಡ, ರಾಜಗೊಂಡ, ಹಳ್ಬ, ಬತಾರಾ ಇನ್ನಿತರ ಆದಿವಾಸಿ ಬುಡಕಟ್ಟುಗಳ ಮಹಿಳಾ ಸಂಘಟನೆ ಅದು. ಅನುರಾಧಾ ಆ ಹೆಣ್ಣುಮಕ್ಕಳಿಗೆ ತರಗತಿ ನಡೆಸಿ ಅಕ್ಷರಜ್ಞಾನ ನೀಡಿದರು. ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನ ಕುರಿತು ಅವರಿಗೆಲ್ಲ ತಿಳಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅವಶ್ಯಕತೆ ಕುರಿತು ಹಿರಿಯರಿಗೆ ಮನದಟ್ಟು ಮಾಡುತ್ತ ಕಾಡುಮೇಡು ಅಲೆದರು. ಸಂಘಟನೆಯ ಹೊಸ ಸದಸ್ಯರಿಗೆ ಹಾಗೂ ಆದಿವಾಸಿ ಸಮುದಾಯಗಳಿಗೆ ಬೋಧನಾ ಸಾಮಗ್ರಿಗಳನ್ನು ತಾವೇ ತಯಾರಿಸಿದರು. ಹಿಂದಿ-ಇಂಗ್ಲಿಷ್-ಮರಾಠಿಯಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳ ಜೊತೆಗೆ ದಿನಚರಿಯನ್ನೂ ಬರೆದಿಟ್ಟರು. 

ಹೀಗೆ ದಂಡಕಾರಣ್ಯದಲ್ಲಿ ಭಾರತದ ಅತಿದೊಡ್ಡ, ರಹಸ್ಯ ಮಹಿಳಾ ಸಂಘಟನೆ ‘ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನ್’ ಕಟ್ಟಿದವರಲ್ಲಿ ಅನುರಾಧಾ ಒಬ್ಬರು. 


ಆದಿವಾಸಿ ಸಮಾಜ ಮಹಿಳೆಯರ ಪಾಲಿಗೆ ಆದರ್ಶ ಸಮಾಜವೇನಲ್ಲ. ಅಲ್ಲಿ ಹೆಣ್ಣುಮಕ್ಕಳು ದಿನಕ್ಕೆ ೧೬ ತಾಸು ಕೂಲಿಗಳಾಗಿ, ಹೊಲದಲ್ಲಿ ಕೆಲಸಗಾರರಾಗಿ, ಅರಣ್ಯ ಉತ್ಪನ್ನಗಳ ಸಂಗ್ರಾಹಕರಾಗಿ ದುಡಿಯುವುದಲ್ಲದೇ ಮನೆಗೆ ಬಂದಮೇಲೆ ಸಂಸಾರದ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. ಆದರೆ ಇಷ್ಟೆಲ್ಲ ಶ್ರಮ ವಹಿಸಿ ದುಡಿದರೂ ಹಕ್ಕುಗಳಿಂದ ಅವರು ವಂಚಿತರು. ಹೆಣ್ಣುಮಕ್ಕಳಿಗೆ ಬಿತ್ತುವ ಅಧಿಕಾರವಿಲ್ಲ. ಬೆಳೆದದ್ದರಲ್ಲಿ ಪಾಲು ಕೇಳುವಂತಿಲ್ಲ. ಮುಟ್ಟಾದಾಗ ಊರಹೊರಗೆ ಒಬ್ಬರೇ ಇರಬೇಕು. ಅಪಹರಣ, ಬಲವಂತದ ಮದುವೆ, ಬಹುಪತ್ನಿತ್ವ ಸರ್ವೇಸಾಮಾನ್ಯ. ಅದೇವೇಳೆ ಶುರುವಾದ ಸರ್ಕಾರೀ ಪ್ರಾಯೋಜಿತ ‘ಸಲ್ವಾ ಜುದುಂ’ ಸಂಘಟನೆಯಿಂದ, ಅರಣ್ಯಾಧಿಕಾರಿಗಳು, ಕಾಂಟ್ರಾಕ್ಟರ್‌ಗಳು, ಪೊಲೀಸರು ಹಾಗೂ ಜಮೀನ್ದಾರರಿಂದ ಆದಿವಾಸಿ ಮಹಿಳೆಯರು ದೌರ್ಜನ್ಯ ಎದುರಿಸುತ್ತಿದ್ದರು. ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರು. ಹೀಗೆ ಸಮುದಾಯದೊಳಗಿನ ಹಾಗೂ ಹೊರಜಗತ್ತಿನ ಪುರುಷರಿಂದ ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದ ಮಹಿಳೆಯರನ್ನು ಕೆಎಎಂಎಸ್ ಸಂಘಟಿಸಿತು. 

ಅನುರಾಧಾ ಪ್ರತಿವರ್ಷ ಮಾರ್ಚಿ ೮ರಂದು ಆದಿವಾಸಿ ಮಹಿಳೆಯರನ್ನು ಒಟ್ಟುಗೂಡಿಸಿ ಜಾಥಾ, ಪ್ರತಿಭಟನೆ, ರಾಸ್ತಾ ರೋಕೋಗಳನ್ನು ಸಂಘಟಿಸುತ್ತಿದ್ದರು. ನಾರಾಯಣಪುರದಂತಹ ಸಣ್ಣ ಊರಿನ ಮಹಿಳೆಯರು ಸೌಂದರ್ಯ ಸ್ಪರ್ಧೆ ವಿರೋಧಿಸಿ ಪ್ರತಿಭಟಿಸಿದರು. ಮಕ್ಕಳ ಶಿಕ್ಷಣಕ್ಕೆ ತಕ್ಕ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕಾ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದರು. ಅತ್ಯಾಚಾರ ವಿರೋಧಿಸಿ, ಸಾರಾಯಿ ನಿಷೇಧಿಸುವಂತೆ ಆಗ್ರಹಿಸಿ ಊರೂರುಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದವು. ಆದಿವಾಸಿ ಸಮುದಾಯದ ಗಂಡಸರು ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳುವಂತೆ ಕೆಎಎಂಎಸ್ ಅವರೊಡನೆ ಸಂವಾದ ನಡೆಸಿ ಒಪ್ಪಿಸಿತು. ಸಮುದಾಯವೆಲ್ಲ ಒಂದುಗೂಡಿ ಗಣಿಗಾರಿಕೆ, ಸ್ಥಳಾಂತರದ ವಿರುದ್ಧ ದನಿಯೆತ್ತುವಂತೆ ಮಾಡಿತು.

ಸಂಘಟನೆಯ ಕೆಲಸಗಳ ನಡುವೆ ಅನುರಾಧಾ ಎಲ್ಲಾದರೊಮ್ಮೆ ಮುಂಬಯಿಗೆ ಹೋಗಿಬರುತ್ತಿದ್ದರು. ಪಕ್ಷದ ಕೆಲಸವಿರುತ್ತಿತ್ತು, ಜೊತೆಗೆ ಭೇಟಿಗಾಗಿ ಅತಿ ಸ್ವಲ್ಪ ಸಮಯವಿರುತ್ತಿತ್ತು. ಎಂದೇ ತಾಯ್ತಂದೆಯರನ್ನು ಭೇಟಿಮಾಡುತ್ತಿರಲಿಲ್ಲ. ತಮ್ಮ ಬದುಕಿನ ನೆರಳು ಅವರ ಮೇಲೆ ಬೀಳಬಾರದು ಹಾಗೂ ಪೊಲೀಸ್ ಕೆಂಗಣ್ಣಿಗೆ ಕುಟುಂಬ ಗುರಿಯಾಗಬಾರದೆಂದು ತಂದೆ ತೀರಿಕೊಂಡಾಗಲೂ ಹೋಗಲಿಲ್ಲ. ಈ ಕಾರಣಕ್ಕೆ ರಕ್ತಸಂಬಂಧಗಳನ್ನು ತೊರೆದೇಬಿಟ್ಟಿದ್ದರು. ಮಕ್ಕಳು ಬೇಡವೆಂಬ ನಿರ್ಧಾರಕ್ಕೂ ಬಂದಿದ್ದರು.

ಬರದ ದಿನಗಳಲ್ಲಿ ಹುಣಿಸೆ ನೀರಿನೊಂದಿಗೆ ಮುದ್ದೆಯಾದ ಅನ್ನ ಊಟ ಮಾಡುವಾಗ ಅನ್ನ ಗಂಟಲಲ್ಲಿಳಿಯದೆ ಊಟಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿತ್ತು. ಹೊತ್ತುಗೊತ್ತಿಲ್ಲದ ಆಹಾರನಿದ್ದೆಗಳಿಂದ ತೀವ್ರ ಅಸಿಡಿಟಿಯಾಗಿ ಜಠರದ ಹುಣ್ಣು (ಅಲ್ಸರ್) ಆಯಿತು. ಹಲವು ಬಾರಿ ಮಲೇರಿಯಾ ಜ್ವರ ಬಂತು. ಆ ವೇಳೆಗಾಗಲೇ ಪೊಲೀಸರ ವಾಂಟೆಡ್ ಲಿಸ್ಟ್ ಸೇರಿಹೋಗಿದ್ದರಿಂದ ಹೆಸರು ಬದಲಿಸಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು ಅನಿವಾರ್ಯವಾಗಿ ಚಿಕಿತ್ಸೆ ಪಡೆಯುವುದು ದುಸ್ತರವಾಯಿತು. ಮಲ್ಟಿಪಲ್ ಸ್ಕ್ಲಿರೋಸಿಸ್ ಎಂಬ ಸರ್ವಾಂಗವನ್ನೂ ಬಾಧಿಸುವ ಕಾಯಿಲೆ ಶುರುವಾಗಿ ಶ್ವಾಸಕೋಶ, ಕಿಡ್ನಿ, ಹೃದಯ, ಮೂಳೆ, ಕೀಲು ಎಲ್ಲದರ ಮೇಲೆ ತನ್ನ ಪರಿಣಾಮ ತೋರಿಸಿತು. ಭಾರ ಹೊರುವುದು ಕಷ್ಟವಾಗಿ, ಮೆಟ್ಟಿಲು ಹತ್ತಿಳಿಯುವುದು ಅಸಾಧ್ಯ ಎನ್ನುವಂತಾಗಿ ಅವರ ಹೆಗಲ ಮೇಲಿನ ಚೀಲದಿಂದ ಕಂಬಳಿಯೂ ಭಾರವೆಂದು ಹೊರಹೋಯಿತು. 

ಸಂಘಟನೆಯ ಹೆಣ್ಣುಮಕ್ಕಳಿಗೆ ನಾಯಕತ್ವದ ತರಬೇತಿ ಕೊಡುತ್ತಿರುವಾಗಲೇ ಮತ್ತೆ ಮಲೇರಿಯಾ ಜ್ವರ ಬಂತು. ಈ ಬಾರಿ ಫಾಲ್ಸಿಪಾರಂ ಮಲೇರಿಯಾ ಎಂಬ ಪ್ರಾಣಾಂತಿಕ ರೋಗಾಣುವಿನ ಎರಡೆರೆಡು ತಳಿಗಳು ಅವರ ದೇಹ ಪ್ರವೇಶಿಸಿದ್ದವು. ಅನಿಯಮಿತ ಆಹಾರ, ಕಾಯಿಲೆ, ವಿಶ್ರಾಂತಿ-ಆರೈಕೆಯಿಲ್ಲದೆ ಜರ್ಝರಿತವಾಗಿದ್ದ ದೇಹ ಮಲೇರಿಯಾ ದಾಳಿಗೆ ಸೊರಗಿಹೋಯಿತು. ತಜ್ಞವೈದ್ಯರ ಚಿಕಿತ್ಸೆ ಪಡೆಯುವುದು ಕಷ್ಟವಾಗಿದ್ದರಿಂದ ದಂಡಕಾರಣ್ಯದ ಛಲಗಾತಿಯ ಜರ್ಝರಿತ ದೇಹವನ್ನು ಸಾವು ಸೋಲಿಸುವುದು ತಡವಾಗಲಿಲ್ಲ. ಕೊನೆಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾದರೂ ತಮ್ಮ ೫೪ನೇ ವಯಸ್ಸಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಾಮ್ರೇಡ್ ಅನುರಾಧಾ ಕೊನೆಯುಸಿರೆಳೆದರು.



ಅನುರಾಧಾ ಅವರ ಬರವಣಿಗೆಗಳನ್ನು ಆನಂದ್ ತೇಲ್ತುಂಬ್ಡೆ ಹಾಗೂ ಶೋಮಾ ಸೇನ್ ‘ಸ್ಕ್ರಿಪ್ಟಿಂಗ್ ದಿ ಚೇಂಜ್’ ಎಂಬ ಪುಸ್ತಕವಾಗಿ ಸಂಪಾದಿಸಿದ್ದಾರೆ. ಇದುವರೆಗೆ ಆಪ್ತೇಷ್ಟ-ಸಂಗಾತಿಗಳ ವಲಯದಲ್ಲಷ್ಟೇ ಉಳಿದಿದ್ದ ಅನುರಾಧಾ ಬರಹ-ಚಿಂತನೆಗಳು ಸಂಪಾದಿತ ಕೃತಿಯಿಂದ ಎಲ್ಲರಿಗೂ ಲಭ್ಯವಾಗಿದೆ. ಅರುಂಧತಿ ರಾಯ್ ಅವರ ಪ್ರವೇಶಿಕೆಯಿರುವ ಪುಸ್ತಕವು ಜಾತಿ ಮತ್ತು ಲಿಂಗ ಎಂಬ ಎರಡು ವಿಭಾಗಗಳನ್ನೊಳಗೊಂಡಿದೆ. ಹಲವಾರು ಗಂಭೀರ ಹಾಗೂ ಸಮಕಾಲೀನ ಸಂಗತಿಗಳನ್ನು ಅವರ ಪ್ರಬಂಧಗಳು ಪ್ರೌಢವಾಗಿ ಚರ್ಚಿಸಿವೆ. ಅತ್ಯಾಚಾರ ಕಾನೂನು ಸಮಗ್ರವಾಗಿ ಬದಲಾಗಬೇಕಿದೆ ಎಂದು ಪ್ರತಿಪಾದಿಸುವ ಅವರು ಹೆಣ್ಣು, ಶೀಲ ಹಾಗೂ ಹೆಣ್ಣಿನ ದೇಹದ ಸಮಗ್ರತೆ ಕುರಿತ ಸಮಾಜದ ದೃಷ್ಟಿಕೋನಗಳನ್ನು ವಿಶ್ಲೇಷಿಸಿದ್ದಾರೆ. 

ಆ ಪುಸ್ತಕದಲ್ಲಿ ಅವರು ಸಂಗ್ರಹಿಸಿದ ಬಸ್ತಾರ್ ಹೆಣ್ಣುಮಕ್ಕಳ ಒಂದು ಹಾಡು ಇದು:

ಹುಡುಗನ್ ಹೆರ‍್ತಿ, ಹುಡುಗೀನ್ ಹೆರ‍್ತಿ, ಆದ್ರೆ ನಿನ್ನೆಸರು ಎಲ್ಲೂ ಇರಲ್ಲ ಅಕ್ಕಾ
ಹಗೇವ್ನ ತುಂಬ ಭತ್ತ ತುಂಬ್ಕಂಡೈತೆ, ಆದ್ರೆ ಹೆಂಗ್ಸಿಗದು ಸಿಗಲ್ಲ ಕಣಕ್ಕ
ಹುಡುಗಾಟಗತಿ ವಯಸ್ನಾಗೇ ತಾಳಿ ಬಿಗ್ದು ಕಳಿಸಿಬಿಡ್ತಾರ್ ಕಣಕ್ಕ,
ಹೋಗಲ್ಲಂತೇನಾರ ಅಂದ್ಯ, ಹೊಡ್ದು ಅಟ್ಟಿಬಿಡತಾರೆ ಅಕ್ಕ

ನೋಡ್ತಿರು, ಗಾಳೀಲೆಲ್ಲ ತುಂಬತೈತೆ ಒಂದ್ ಕೂಗು
ಬೂಮಿಆಕಾಸ ಸಮ, ಗಂಡ್ಸು ಹೆಂಗ್ಸು ಸi ಅಂಬೂದು
ಆ ಕೆಂಪ್ ಹೂಗಿಡ, ಜಗ್ಗಿ ಹೂ ಬಿಡ್ತ ಇದೆ ನೋಡಕ್ಕ,
ನಾವೂ ಆ ಹೂವಿನ್ ದಾರೀಲೆ ಹೋರಾಡಣ ಕಣಕ್ಕ
ಕೆಂಪು ಬೆಳಕಿನ ದಿಕ್ಕಲೆ ಹೋಗ್ತ ಇರ‍್ಬೇಕು ಅಂತ
ನಾನಂತೂ ಗಟ್ಟಿ ನಿಚ್ಚೈಸಿಬಿಟ್ಟಿದೀನಿ ಕಣಕ್ಕ..

ಅವರು ಕ್ರಮಿಸಿದ ಹಾದಿ ಕಡಿಮೆ ಜನ ಪಯಣಿಸಿರುವಂತದು. ಹೊರಗಿನ ಸಮಾಜಕ್ಕೆ ಅನುರಾಧಾ ಎಷ್ಟು ದಿನ ನೆನಪಿರುತ್ತಾರೋ, ಎಷ್ಟು ಜನ ಅವರ ಹೆಸರು ತಿಳಿದಿದ್ದಾರೋ ಗೊತ್ತಿಲ್ಲ. ಅವರ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗದೆಯೂ ಹೋಗಬಹುದು. ಆದರೆ ಸ್ವಾಯತ್ತತೆಯೆಡೆಗಿನ ದಂಡಕಾರಣ್ಯದ ಆದಿವಾಸಿಗಳ ನಡಿಗೆಯಲ್ಲಿ ಇವರ ಹೆಜ್ಜೆ ಗುರುತು ಅಳಿಸಲಾರದಂತೆ ಇದೆ ಎನ್ನುವುದು ವಾಸ್ತವವಾಗಿದೆ.



ಬಂದೂಕು ವರ್ಸಸ್ ಬಂದೂಕು ಬೇಕೆ?

ನಮ್ಮಲ್ಲಿ ಹಲವರಿಗೆ ಮಾವೋವಾದಿಗಳು ಯಾಕೆ, ಹೇಗೆ ಆ ದಾರಿಗೊಲಿಯುತ್ತಾರೆ? ಅವರೇಕೆ ಭೂಗತರಾಗಬೇಕು? ಅವರೇಕೆ ಶಸ್ತ್ರದ ದಾರಿ ಹಿಡಿಯುತ್ತಾರೆ? ಎಂಬ ಅಚ್ಚರಿ. ನಕ್ಸಲೈಟ್, ಮಾವೋವಾದಿ, ಗೆರಿಲ್ಲಾ ಹೋರಾಟ, ಸಶಸ್ತ್ರ ಹೋರಾಟ ಮುಂತಾದ ಪದ-ವಿಷಯಗಳು ಬಂದಕೂಡಲೇ ಬಹಳಷ್ಟು ಚಿಂತಕರು ತಮ್ಮ ಚಿಂತನೆಯನ್ನು ಅಲ್ಲಿಗೆ ನಿಲ್ಲಿಸಿಬಿಡುತ್ತಾರೆ. ಅಲ್ಲಿಂದಾಚೆಗೆ ಒಂದೋ ಅಹಿಂಸಾತ್ಮಕ ಮಾರ್ಗ ಬೆಂಬಲಿಸುವ ಕಟ್ಟಾ ನಕ್ಸಲ್ ವಿರೋಧಿಗಳಾಗಿಯೋ ಅಥವಾ ಅವರ ಕಠಿಣ ಜೀವನ-ಹೋರಾಟಕ್ಕೆ ಕರುಣೆ ತೋರಿಸುವ ಮೃದುಹೃದಯಿಗಳೋ ಆಗುತ್ತಾರೆ. ಆದರೆ ಆದಿವಾಸಿ ಸಮುದಾಯಗಳ ದೃಷ್ಟಿಯಿಂದ ಹೋರಾಟಗಾರರನ್ನು ನೋಡಿದರೆ ವಂಚಿಸುವವರು ಯಾರು? ಹಿಂಸೆಯನ್ನು ಉದ್ದೀಪಿಸುವವರು ಯಾರು? ಹಿಂಸೆ ಯಾವುದು? ಅಹಿಂಸೆ ಯಾವುದು? ಬೆಚ್ಚನೆಯ ಜಾಗಗಳಲ್ಲಿರುವ ನಮಗೆ ‘ಹಿಂಸಾತ್ಮಕ’ ಎನಿಸಿದ್ದು ಅಸಹಾಯಕರ ದೃಷ್ಟಿಯಲ್ಲಿ ಧೈರ್ಯದ ಹೆಜ್ಜೆಯೇ? ಎಂಬೆಲ್ಲ ಪ್ರಶ್ನೆಗಳೇಳುತ್ತವೆ. ಇಲ್ಲಿ ಅನುರಾಧಾ ನೆಪದಲ್ಲಿ ದಂಡಕಾರಣ್ಯದ ಮಾವೋವಾದಿ ಹೋರಾಟಗಾರರತ್ತ ಗಮನ ಹರಿಸಿದರೆ ಗುಲಾಬಿಗಿಂತ ಬಂದೂಕಿನ ದಾರಿ ಆಯ್ದುಕೊಂಡದ್ದೇಕೆ ಎಂದು ತಿಳಿದುಬರುತ್ತದೆ. 

ಮಾವೋವಾದಿಗಳು ಆದಿವಾಸಿಗಳೊಡನೆ ಶುರುಮಾಡಿದ ಹಕ್ಕು ಪ್ರತಿಪಾದನಾ ಚಳುವಳಿಯಿಂದ ಸಮೃದ್ಧ ಅದಿರು-ಗಣಿಯ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರಕ್ಕೆ ಕಷ್ಟವಾಯಿತು. ಆಗ ಚಳುವಳಿಯನ್ನು ಮಟ್ಟಹಾಕಲು, ಭೂಸ್ವಾಧೀನ ಸುರಳೀತಗೊಳಿಸಲು ಸರ್ಕಾರ ತನ್ನೆಲ್ಲ ರಕ್ಷಣಾಪಡೆಗಳನ್ನೂ ಬಳಸಿತು. ಅತಿ ಕಠಿಣ ಹಾಗೂ ಕ್ರೂರ ಕಾನೂನುಗಳು ಬಂದು ತಮಗೆ ಬೇಕಾದವರನ್ನು, ಅನುಮಾನ ಬಂದವರನ್ನು ಹಿಡಿದು ಬಂಧಿಸುವ; ವಿಚಾರಣೆಯ ನೆಪದಲ್ಲಿ ಶಿಕ್ಷಿಸುವ; ದೌರ್ಜನ್ಯ ಎಸಗುವ ಅಧಿಕಾರ ರಕ್ಷಣಾ ಪಡೆಗಳಿಗೆ ಸಿಕ್ಕಿತು. ಈ ‘ಜಂಗ್ಲಿ ಕಾನೂನು’ಗಳು ಹೋರಾಟಗಾರರು ಶಸ್ತ್ರಗಳನ್ನೇ ನೆಚ್ಚಿಕೊಳ್ಳಲು ಉತ್ತೇಜಿಸಿತು. ಮಾವೋವಾದಿಗಳು ಸೇತುವೆ ಉಡಾಯಿಸಿದರು, ಪೋಲೀಸರನ್ನು ಕೊಂದರು. ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಹೋರಾಟಗಾರರನ್ನು ಕೊಂದರು. ಆದಿವಾಸಿಗಳ ಒಂದು ಗುಂಪಿಗೆ ಶಸ್ತ್ರಾಸ್ತ್ರ ಕೊಟ್ಟು ಸಲ್ವಾ ಜುಡುಂ ಎಂದರು. ಹೀಗೆ ಬೃಹತ್ ವ್ಯವಸ್ಥೆಯನ್ನೂ, ಸರ್ಕಾರವನ್ನೂ, ಸಮಾಜವನ್ನೂ ಎದುರುಹಾಕಿಕೊಂಡು, ಬಂಧನದಿಂದ ತಪ್ಪಿಸಿಕೊಂಡು ಚಳುವಳಿಯನ್ನು ಮುಂದುವರೆಸಲು ಶಸ್ತ್ರಾಸ್ತ್ರಗಳು, ಕೆಎಎಂಸ್‌ನ ಹೆಣ್ಣುಮಕ್ಕಳು ಅನಿವಾರ್ಯವೆಂಬ ಭಾವನೆ ಮಾವೋವಾದಿ ಹೋರಾಟಗಾರರಲ್ಲಿ ಬಂತು. ದಶಕಗಳ ಕಾಲ ಬಂಧನಕ್ಕೊಳಗಾಗದಂತೆ ಬದುಕಬೇಕೆಂದರೆ ಭೂಗತವಾಗಬೇಕಾಗುತ್ತದೆ. ತಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಮರೆತು ಬದುಕಬೇಕಾಗುತ್ತದೆ. ಅಂತಹ ವ್ಯಕ್ತಿತ್ವಗಳಿಗೆ ರಾಜಿಗೊಳಗಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕಾನೂನಿನ ಚೌಕಟ್ಟಿನೊಳಗೆ ಲಿಬರಲ್ ಆಕ್ಟಿವಿಸ್ಟ್ ಆಗಿ ಯೋಚಿಸಲು, ಕೆಲಸ ಮಾಡಲೂ ಸಾಧ್ಯವಾಗುವುದಿಲ್ಲ. ಎಂದೇ ಸವಾಲು, ಕಷ್ಟಗಳನ್ನೆದುರಿಸಿದರೂ ತಮ್ಮ ತತ್ವಗಳಿಗನುಗುಣವಾಗಿ ಬದುಕುತ್ತಾ ಉಳಿದವರಿಗಿಂತ ಭಿನ್ನ ಮಾರ್ಗ ಹಿಡಿಯುತ್ತಾ ಸಮಾಜದಿಂದ ಪ್ರತ್ಯೇಕಿಸಲ್ಪಡುತ್ತಾರೆ. 

ಪ್ರಸ್ತುತ ವ್ಯವಸ್ಥೆಯಲ್ಲಿ ನಂಬಿಕೆಯಿಡದೆ ಚುನಾವಣೆ ಬಹಿಷ್ಕರಿಸುವ; ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ; ಸಮಾನಾಂತರ ಜನಾಡಳಿತ, ಜನರ ಸರ್ಕಾರ ನಡೆಸಬೇಕೆನ್ನುವ ಮಾವೋವಾದಿಗಳು ದೇಶದ ಸಮಗ್ರತೆಗೇ ದೊಡ್ಡ ಸವಾಲಾಗಿ ಕಾಣಿಸುತ್ತಾರೆ. ಎಂದೇ ೧೯೯೧ರಲ್ಲಿ ಮಹಾರಾಷ್ಟ್ರದಲ್ಲಿ ಕೆಎಎಂಎಸ್ ಅದರ ಮಾತೃ ಸಂಘಟನೆ ಪಿಡಬ್ಲ್ಯುಜಿಯಂತೆಯೇ ನಿಷೇಧಕ್ಕೊಳಗಾಯಿತು. ಅದರಲ್ಲಿದ್ದ, ಇಲ್ಲದ ಹಲವರನ್ನು ಟಾಡಾ ಅಡಿ ಬಂಧಿಸಲಾಯಿತು. ೨೦೦೨ರಲ್ಲಿ ಪೋಟಾ ಬಂತು. ನಂತರ ಎಂಸಿಒಸಿಎ, ಯುಎಪಿಎ - ಹೀಗೆ ನಾಲ್ಕಾರು ಭಯಾನಕ ಕಾಯ್ದೆಗಳು ಬಂದು ಸಣ್ಣ ಭಿನ್ನಮತ, ನಿಷೇಧಿತ ಸಂಘಟನೆ/ವ್ಯಕ್ತಿಗಳೊಡನೆ ಸಂಪರ್ಕಗಳು ನಕ್ಸಲರೆಂಬ ಹಣೆಪಟ್ಟಿ ಹಚ್ಚಿ ಅನುಮಾನದಿಂದ ನೋಡಲು ಸಾಕಾಯಿತು. 


ಹೀಗೆ, ಒಂದು ಉದಾತ್ತ ಅನುಕರಣೀಯ ಮಾದರಿಯಾಗಬೇಕಿದ್ದ ಅರಣ್ಯವಾಸಿಗಳ ಸಂಘಟನೆ ತನ್ನ ಸಶಸ್ತ್ರ ಸ್ವರೂಪದಿಂದಲೇ ಇತರ ಸಂಘಟನೆಗಳಿಂದ ಬೆಂಬಲ ಪಡೆಯಲು ವಿಫಲವಾಗಿದೆ. ಬಾಹ್ಯ ಜಗತ್ತಿನ ವರಸೆಗಳನ್ನು ಸ್ಪಷ್ಟವಾಗಿ ತಿಳಿಯದ ಆದಿವಾಸಿ ಸಮುದಾಯವನ್ನು ಜಾಗೃತಗೊಳಿಸುವುದು, ಸಂಘಟಿಸಿ ಹೋರಾಟ ಕಟ್ಟುವುದು ಆ ಸಮುದಾಯದ ದೃಷ್ಟಿಯಿಂದ ತೀರಾ ಅಗತ್ಯವೇ ಆಗಿದ್ದರೂ ಆದಿವಾಸಿಗಳಿಗೆ, ಅದರಲ್ಲೂ ಮಹಿಳೆಯರಿಗೆ ನೀಡಿದ ಶಸ್ತ್ರಾಸ್ತ್ರ ತರಬೇತಿಯನ್ನು ಅರಗಿಸಿಕೊಳ್ಳಲು ಉಳಿದವರಿಗೆ ಕಷ್ಟವಾಗಿದೆ. ಮಾವೋವಾದಿಗಳು ‘ಜನ ಸರ್ಕಾರ’ ಎಂದು ಅಶಿಕ್ಷಿತ, ಅರೆಶಿಕ್ಷಿತ, ಮುಗ್ಧ ಆದಿವಾಸಿಗಳ ಹೆಸರಿನಲ್ಲಿ ತಾವೇ ಸರ್ಕಾರ ನಡೆಸುವುದು; ಉತ್ತರದಾಯಿತ್ವ ಇಲ್ಲದಂತೆ ಇಡೀ ಸಮಾಜ, ಸರ್ಕಾರ, ಆಡಳಿತ, ಮಾಧ್ಯಮ, ಕಾನೂನುಗಳಿಂದ ದೂರ ಉಳಿದಿರುವುದು ಇವತ್ತಿಗೂ ಅವರನ್ನು ಬೆಂಬಲಿಸಲು ಉಳಿದವರಿಗಿರುವ ತೊಡರಾಗಿದೆ. ಚುನಾವಣೆ, ಪಂಚಾಯತ್‌ರಾಜ್‌ನಂತಹ ಡೆಮಾಕ್ರಸಿಯ ಒಪ್ಪಿತ ಹತಾರಗಳ ಬಗೆಗೆ ಉಳಿದ ಸಮಾಜಕ್ಕಿರುವ ನಂಬಿಕೆ ಮಾವೋವಾದಿಗಳಿಗಿಲ್ಲದಿರುವುದೂ ಈ ಬಿರುಕಿನ ಮತ್ತೊಂದು ಕಾರಣವಾಗಿದೆ. 

ಕೊನೆಗೂ ಆಳುವವರ ಉದ್ದೇಶ ಮತ್ತು ಹೋರಾಡುವವರ ಸಿದ್ಧಾಂತದ ನಡುವೆ ಹೊಂದಾಣಿಕೆಯೇ ಆಗದೆ, ಜನರ ಬಗೆಗೆ ಮಾತನಾಡುವ ಇಬ್ಬರೂ ಪರಸ್ಪರ ಶತ್ರುಗಳಾದರು. ಅದರ ಪರಿಣಾಮವೇನು? ಅನುರಾಧಾ, ಕೊಬಾಡ್, ಸಾಕೇತ್‌ರಂತಹ ಈ ಸಮಾಜಕ್ಕೆ ಅವಶ್ಯವಿದ್ದ ಎಷ್ಟೋ ಜೀವಗಳು ಭೂಗತರಾಗಿ ದೇಶವಿರೋಧಿಗಳೆನಿಸಿಕೊಂಡು ಬದುಕಿ ಕೊನೆಯಾಗಬೇಕಾಯಿತು. ಜನಸಾಮಾನ್ಯರ ಬದುಕು ಕಷ್ಟದಲ್ಲೇ ಮುಂದುವರೆದು, ಅದೇ ಬದುಕೆಂದು ಒಪ್ಪಿಕೊಳ್ಳುವಂತಾಯಿತು.  

ಹಿರಿಯ ಗೆಳತಿ ಮೊನ್ನೆ ನೆನಪಿಸಿದ ಒಂದು ಕತೆ ಸುಮ್ಮನೆ ನೆನಪಾಗುತ್ತಿದೆ: ಒಬ್ಬ ನಕ್ಸಲ್ ಹುಡುಗನಿಗೆ ಅಡವಿಯಲ್ಲಿರುವ ಅವನ ತಾಯಿ ದಿನಾ ರೊಟ್ಟಿ ಒಯ್ದು ಕೊಟ್ಟುಬರುತ್ತಿರುತ್ತಾಳೆ. ಅವನೆಲ್ಲಿದ್ದರೂ ಹುಡುಕಿ ಅವಳು ತರುವ ರೊಟ್ಟಿ ಅದು ಹೇಗೆ ಅಷ್ಟು ಬಿಸಿಯಿರುತ್ತದೆ ಎನ್ನುವುದು ಅವನ ಅಚ್ಚರಿ. ಒಂದು ದಿನ ಅವನ ಅವ್ವ ಪೊಲೀಸರ ಗುಂಡಿಗೆ ಬಲಿಯಾಗುತ್ತಾಳೆ. ಹುಡುಗ ಅವ್ವ ಬರಲಿಲ್ಲವೆಂದು ಹುಡುಕಿ ಹೋದಾಗ ಅವಳ ಶವ ಕಾಣುತ್ತದೆ. ಹತ್ತಿರ ಹೋದರೆ ಕಾಣಿಸುವುದು ಅವಳ ಹೊಟ್ಟೆಗವಚಿಕೊಂಡಿದ್ದ ರೊಟ್ಟಿಗಂಟು! ಅದ ಸರಿಸಿದರೆ ಕಾಣುವುದು ಸುಟ್ಟು ಕಪ್ಪಾಗಿದ್ದ ಹೊಕ್ಕುಳ ಪ್ರದೇಶ!! ಅಲ್ಲಿರುತ್ತದೆ ಬಿಸಿರೊಟ್ಟಿಯ ಗುಟ್ಟು.. 

ಆದರೆ..

ಸಹವಾಸಿ/ದೇಶವಾಸಿಗಳ ಬದುಕನ್ನು ಉತ್ತಮಪಡಿಸುವ ಉದಾತ್ತ ಧ್ಯೇಯದಿಂದ ತಮ್ಮ ‘ಉತ್ತಮ’ ಬದುಕನ್ನು ತ್ಯಾಗಮಾಡಿ, ಹಲವು ಬೇನಾಮಿ ಹೆಸರುಗಳಲ್ಲಿ ಎಲ್ಲೆಲ್ಲೋ ವಾಸಿಸಿ, ಅನಾರೋಗ್ಯ ಅಪಘಾತಕ್ಕೊಳಗಾಗಿ, ಜೀವನವನ್ನೇ ಬಲಿದಾನ ಮಾಡಿದ ಹೋರಾಟದಿಂದ ನಿರೀಕ್ಷಿತ ಪ್ರತಿಫಲ ಸಿಕ್ಕಿದೆಯೇ? ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿರುವುದು ನಿರ್ವಿವಾದವಾದರೂ ವ್ಯವಸ್ಥೆಯಿಂದ ಮತ್ತಷ್ಟು ಅವಗಣನೆಗೆ, ಪ್ರಹಾರಕ್ಕೆ, ತಾರತಮ್ಯಕ್ಕೆ ಆದಿವಾಸಿಗಳು ಒಳಗಾಗಲು ಶಸ್ತ್ರಾಸ್ತ್ರ ಸ್ನೇಹ ಕಾರಣವಾಗಿಲ್ಲವೇ? ಬೃಹತ್ ಪ್ರಭುತ್ವದೆದುರು, ಕಂಪನಿಗಳ ಅಂತರರಾಷ್ಟ್ರೀಯ ಹಿತಾಸಕ್ತಿಯೆದುರು ಸ್ಥಳೀಯ ಪ್ರತಿರೋಧ ಅರ್ಥಪೂರ್ಣವಾಗಿದೆಯೆ? ಆದಿವಾಸಿಗಳೇ ಅಭಿವೃದ್ಧಿಯ ಥಳುಕಿಗೆ ಕರಗಿ ಹೋಗುತ್ತಿರುವಾಗ ಅವರನ್ನು ಬೇರೆಯೇ ‘ಪ್ರಜೆ’ಗಳನ್ನಾಗಿಸಿ ಅರಣ್ಯವಾಸಿಗಳಾಗಿಯೇ ಇರಿ ಎನ್ನುವುದು ಸರಿಯೇ? ಮುಗಿಯದ ಅಸಹಾಯಕತೆ ಎದುರಿಸುವ ಆದಿವಾಸಿ ಜನರು ಕೊನೆಗೆ ಹಿಂಸೆಯನ್ನು ಒಪ್ಪಿಕೊಳ್ಳುವಂತಹ ಬದಲಾವಣೆಯಾಗುವುದಕ್ಕೆ ಕಾರಣವಾದರೂ ಯಾವುದು? 



ಮಹಿಳಾ ದೌರ್ಜನ್ಯ ನಾನಾ ಸ್ವರೂಪ-ಪ್ರಮಾಣಗಳಲ್ಲಿ ಹಿಂದೆಂದಿಗಿಂತ ಹೆಚ್ಚಿರುವಾಗ ಅನುರಾಧಾ ಅವರಂತಹ ವ್ಯವಸ್ಥೆಯಲ್ಲಿ ಕರಗಿಹೋಗದ ಹೋರಾಟಗಾರ್ತಿ ನಮ್ಮ ನಿಮ್ಮ ನಡುವೆಯೇ ಕ್ರಿಯಾಶೀಲವಾಗಿದ್ದರೆ; ಅಥವಾ ಆದಿವಾಸಿಗಳ ನಡುವೆಯೇ ಅಡಗುತಾಣಗಳ ಹಂಗಿಲ್ಲದೆ ತಿರುಗಾಡಬಲ್ಲ ವಾತಾವರಣದಲ್ಲಿದ್ದರೆ ಇನ್ನೂ ಹೆಚ್ಚು ಸಾಧಿಸಬಹುದಿತ್ತೆ ಎನಿಸದೇ ಇರುವುದಿಲ್ಲ. ನಕ್ಸಲರ ಜೊತೆ ಮಾತುಕತೆ, ಸಂವಾದ ನಡೆಯುತ್ತಿರುವ; ಆ ಚಳುವಳಿಯೊಳಗೇ ಭಿನ್ನಮತ ಹುಟ್ಟಿಕೊಂಡಿರುವ ಈ ಕಾಲದಲ್ಲಿ ಪರ್ಯಾಯ ನ್ಯಾಯದ ದಾರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ವಿಶ್ಲೇಷಿಸಿ ಸೂಕ್ತ ತಿದ್ದುಪಡಿಗಳೊಂದಿಗೆ ಹೆಣ್ಣುಮಕ್ಕಳು ಮುಂದುವರೆಯಬೇಕಿದೆ. ಕೋಮುವಾದಿ ರಾಜಕಾರಣದ ಢಾಂಭಿಕತೆಯ ಎದುರು ಸೈದ್ಧಾಂತಿಕ ಬದ್ಧತೆಯ ಹಾದಿ ಹಿನ್ನಡೆ ಅನುಭವಿಸುತ್ತಿರುವ ಕಾಲದಲ್ಲಿ ಮುಖ್ಯವಾಹಿನಿಯ ಸಮಾಜದೊಳಗೇ ಹೋರಾಟ ರೂಪಿಸುವುದು ಆಯ್ಕೆಯಾಗಿ ಆ ಚಳುವಳಿಯ ಮುಂದಿದೆ.




2 comments:

  1. ಲೇಖನ ಚೆನ್ನಾಗಿದೆ. ನಿಮ್ಮ ತಾತ್ವಿಕ ದೃಷ್ಟಿಕೋನದಲ್ಲಿ ಪರಿಹರಿಸಿಕೊಳ್ಳದೆ ಉಳಿದಿರುವ ಗೊಂದಲಗಳು ನಿಮ್ಮ ಪ್ರಶ್ನೆಗಳಲ್ಲಿ, ನಿರೀಕ್ಷೆಗಳಲ್ಲಿ ಕಾಣಿಸುತ್ತವೆ. ಸಮಾಜ, ದೇಶ, ಆಳುವ ವರ್ಗ, ಡೆಮಾಕ್ರಸಿ ಮುಂತಾದ ಶಬ್ದಗಳಿಗೆ ಇರುವ ಅರ್ಥಗಳು ಚಳುವಳಿ ಮಾಡುವವರ ಮನಸ್ಸಿನಲ್ಲಿ ಅಥವಾ ಕಲ್ಪನೆಯಲ್ಲಿ ಇರುವ ಅರ್ಥಗಳು ಎರಡೂ ಒಂದೇ ಅಲ್ಲ ಎಂಬುದು ನಿಮಗೆ ಸ್ಪಷ್ಟವಾಗುವವರೆಗೆ ನಿಮ್ಮ ಗೊಂದಲಗಳು ಅನಿವಾರ್ಯ. ಉದಾ. ಮಾವೋವಾದಿಗಳು 'ದೇಶದ ಸಮಗ್ರತೆಗೆ ದೊಡ್ಡ ಸವಾಲಾಗಿ' ಯಾರಿಗೆ ಕಾಣಿಸುತ್ತಾರೆ? ಮುಖ್ಯವಾಹಿನಿ ಎಂದರೆ ಯಾರು? ಅದರಲ್ಲಿ ಯಾರೆಲ್ಲಾ ಸೇರಿದ್ದಾರೆ? ನನ್ನ ನಿಮ್ಮಂಥವರು ಮಾವೋವಾದಿಗಳ ಸಶಸ್ತ್ರ ಹೋರಾಟವನ್ನು ಬೆಂಬಲಿಸದಿದ್ದಾಗಲೂ 'ಮುಖ್ಯವಾಹಿನಿ'ಯಲ್ಲಿದ್ದೇವೆಯೆ? ಲೇಖನದ ಕೊನೆಯ ಭಾಗದಲ್ಲಿ ನೀವೆತ್ತುವ ಪ್ರಶ್ನೆಗಳನ್ನು ಯಾವುದೇ ಸಿದ್ಧಾಂತ-ಹೋರಾಟಗಳಿಗೆ, ಅವುಗಳ ಸಾರ್ಥಕತೆ, ವೈಫಲ್ಯಗಳಿಗೆ ಸಂಬಂಧಿಸಿದಂತೆ, ಎತ್ತಬಹುದಲ್ಲವೆ?.

    ReplyDelete
  2. ನನ್ನಂತಹ ಅನೇಕರ ಮನಸಿನ ಭಾವನೆಗಳಿಗೆ ಹೊಯ್ದಾಟಗಳಿಗೆ ಮಾತಿನ ರೂಪ ನೀಡಿದ ಬರೆಹ. ಥ್ಯಾಂಕ್ಯೂ ಅನುಪಮಾ ಮೇಡಂ.
    ಡಿ.ಉಮಾಪತಿ

    ReplyDelete