Tuesday 26 April 2016

ಕಾನ್ವೆಂಟೊ ಡಿ ಸ್ಯಾನ್ ಫ್ರಾನ್ಸಿಸ್ಕೊ - ಮಠ-ದೇವಸ್ಥಾನ-ಸ್ಮಶಾನ ಎಲ್ಲ




ಅನಾದಿ ಕಾಲದ ತುಣುಕೊಂದರಲ್ಲಿ ನೀವು ಹೆಜ್ಜೆಯಿಡುತ್ತಿರುವ ಭಾಸ ಹುಟ್ಟಿಸಬಲ್ಲ ದೇಶ ಪೆರು. ಹಾಗೆಯೇ ತನ್ನ ಇಂಚಿಂಚು ನೆಲದಲ್ಲೂ ವೈರುಧ್ಯ-ವಿಸ್ಮಯಗಳ ಚರಿತ್ರೆಯನ್ನು ಕಣ್ಣೆದುರು ಹರಡಬಲ್ಲ ದೇಶವೂ ಹೌದು. ಪೆರು ರಾಜಧಾನಿ ಲೀಮಾದ ಸೇಂಟ್ ಫ್ರಾನ್ಸಿಸ್ ಚರ್ಚ್ ಅಂತೂ ವಿದ್ಯುಲ್ಲತೆಯನ್ನೂ, ಆದಿಮ ಕತ್ತಲನ್ನೂ ಒಟ್ಟೊಟ್ಟಿಗೆ ಒಡಲೊಳಗಿಟ್ಟುಕೊಂಡಿರುವ ಕಟ್ಟಡ. ಬೃಹತ್ತಿನೆದುರು ಆವರಿಸುವ ಬಿಗು ಮೌನದಲ್ಲೂ, ಗೋಡೆಯನಾವರಿಸಿರುವ ವರ್ಣಚಿತ್ರಗಳಲ್ಲೂ, ಊ..ದ್ದನೆಯ ಹಜಾರದ ಆಸುಪಾಸಿನ ಅಸಂಖ್ಯ ಮೂಲೆಗಳಲ್ಲೂ ಪ್ರಾಚೀನತೆಯನ್ನೇ ಹೊರಸೂಸುವ ಆ ವೈಭವೋಪೇತ ಚರ್ಚ್, ಅಲ್ಲಲ್ಲ ಮೊನಾಸ್ಟರಿ, ಅರೆ ಅಲ್ಲ ಲೈಬ್ರರಿ, ಅಯ್ಯೋ ಅದೂ ಅಲ್ಲ ಸ್ಮಶಾನ - ಧಿಗ್ಗನೆ ವಿಸ್ಮಯಾಘಾತವನ್ನು ಮೂಡಿಸಿಬಿಡುತ್ತದೆ. ಕಟ್ಟಡದ ಹೊರಗೆ ಪ್ರವಾಸಿಗರು ಹಾಕುವ ಕಾಳು ತಿಂದು ಪುಷ್ಟಿಗೊಂಡ ಅಸಂಖ್ಯ ಪಾರಿವಾಳಗಳು ಜೀವಂತಿಕೆ ಸೂಸುವಾಗಲೇ, ಹುಲುಮಾನವರೆಲ್ಲ ಒಂದಲ್ಲ ಒಮ್ಮೆ ಕಾಲದ ಪಳೆಯುಳಿಕೆಯಾಗಲಿರುವವರು ಎಂಬ ಕಟುಸತ್ಯವನ್ನು ನೆಲಮಾಳಿಗೆಯ ಸ್ಮಶಾನ ಹೇಳಿಬಿಡುತ್ತದೆ.

ಕೆಜಿಗಟ್ಟಲೆ ಬಂಗಾರಬೆಳ್ಳಿ, ಎಕರೆಗಟ್ಟಲೆ ವಿಸ್ತಾರ, ಸರಿಸುಮಾರು ೨೫,೦೦೦ ಜನರ ಎಲುಬು ರಾಶಿ - ಇದ್ಯಾವುದರ ಫೋಟೋವನ್ನೂ ತೆಗೆಯುವಂತಿಲ್ಲ. ನೋಡಿ, ಕೇಳಿ, ಆಘ್ರಾಣಿಸಿ, ಮೈಗೆಲ್ಲ ಪೂಸಿ ಅನುಭವಿಸಬಹುದು. ಅದು ಹೀಗಿದೆ:

ಸ್ಪ್ಯಾನಿಶ್ ಬರ್ರಾಕ್ ಶೈಲಿಯ ಕಟ್ಟಡಗಳು ವಿನ್ಯಾಸ, ಮರಗೆಲಸ, ವರ್ಣಚಿತ್ರ, ಗಂಟೆ-ಗೋಪುರ ನಿರ್ಮಾಣ, ದುಬಾರಿ ವಸ್ತು ಬಳಕೆ ಎಲ್ಲದರಲ್ಲೂ ಭವ್ಯವಾಗಿ, ಸಣ್ಣ ವಿವರಗಳಿಗೂ ಗಮನ ನೀಡಿ ಕೌಶಲ್ಯಪೂರ್ಣವಾಗಿ ಇರುತ್ತವೆ. ಅದೇ ಶೈಲಿಯ ಸಂತ ಫ್ರಾನ್ಸಿಸ್ ಚರ್ಚಿನಲ್ಲಿ ದಂಗುಬಡಿಸುವಷ್ಟು ಬೆಳ್ಳಿ, ಬಂಗಾರ, ಮರಮುಟ್ಟು ಬಳಸಿ ಕುಸುರಿ ಕೆತ್ತನೆ ಕೆಲಸ ಮಾಡಲಾಗಿದೆ. ಹಲವು ಯುದ್ಧಗಳನ್ನು, ಭೂಕಂಪಗಳನ್ನು ತಾಳಿಕೊಂಡಿರುವ ಕಟ್ಟಡ ಎಂದು ಪ್ರತಿಗೋಡೆಯೂ ಸಾಕ್ಷಿ ಹೇಳುತ್ತದೆ. ನಿರ್ಮಾಣಕಾರ್ಯ ೧೬೭೩ರಲ್ಲಿ ಶುರುವಾದರೂ ೧೬೮೭, ೧೭೪೬ರ ಎರಡು ಭೂಕಂಪಗಳಲ್ಲಿ ಕಟ್ಟಡಕ್ಕೆ ಹಾನಿಯಾಗಿ ಮತ್ತೆ ದುರಸ್ತಿಯಾಗಿ ಬರೋಬ್ಬರಿ ಒಂದು ನೂರು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಂಡಿದೆ.


ಒಳಹೊಕ್ಕದ್ದೇ ಬೃಹತ್ ರಥದಂತಹ ಚಿನ್ನದ ಪೂಜಾವೇದಿಕೆ, ಸಾವಿರಾರು ಜನ ಕೂರಬಹುದಾದ ಹಜಾರ ಎದುರಾಗುತ್ತದೆ. ಇಂತಹ ಮೂರು ಹಜಾರಗಳಿದ್ದು ಅವುಗಳ ಆವರಣದಲ್ಲಿ ಸಂತರ ಚಿನ್ನ-ಬೆಳ್ಳಿ ಮೂರ್ತಿಗಳೂ; ಕುಸುರಿಯಲ್ಲಿ ಮಾಡಿದ ಒಡವೆಗಳೂ, ಪ್ರಭಾವಳಿಗಳೂ ಇವೆ. ಏಷಿಯದ ದೇವರುಗಳಿಗಷ್ಟೆ ಚಿನ್ನದ ಅತಿವ್ಯಾಮೋಹ ಎಂಬ ನಮ್ಮ ಅಭಿಪ್ರಾಯ ಅಲ್ಲಿ ಬಿದ್ದುಹೋಯಿತು. ಭಾರತದ ಚಿನ್ನ ದೇವಳದಲ್ಲೆಷ್ಟೋ ಅಷ್ಟೇ ಜನರ ಮೈಮೇಲೂ ಆಭರಣವಾಗಿದ್ದರೆ, ಪೆರುವಿನ ಚಿನ್ನವೆಲ್ಲ ಹೀಗಿಲ್ಲಿ ರಾಶಿಬಿದ್ದಿದೆಯೆ ಎನಿಸಿತು.

ಚರ್ಚಿಗೆ ಹೊಂದಿಕೊಂಡಿರುವ ಮೊನಾಸ್ಟರಿಯ ಗ್ರಂಥಾಲಯದಲ್ಲಿ ೨೫,೦೦೦ಕ್ಕೂ ಹೆಚ್ಚು ಧರ್ಮ, ತತ್ವಶಾಸ್ತ್ರ, ತರ್ಕ, ಇತಿಹಾಸ, ಸಾಹಿತ್ಯ ಮುಂತಾದ ಹಲವು ಅಧ್ಯಯನಶಿಸ್ತುಗಳಿಗೆ ಸಂಬಂಧಿಸಿದ ಅತ್ಯಮೂಲ್ಯ ಪುಸ್ತಕಗಳಿವೆ. ಓಲೆಗರಿ, ಹಸ್ತಪ್ರತಿಗಳಿಂದ ಹಿಡಿದು ೧೫೭೧-೭೨ರಲ್ಲಿ ಮುದ್ರಣಗೊಂಡ ಆಂಟ್ವರ್ಪ್ ಎಡಿಷನ್ ಬೈಬಲ್ ತನಕ ಎಲ್ಲವೂ ಇಲ್ಲಿವೆ. ಅವುಗಳನ್ನು ತೆರೆದ ಕಪಾಟುಗಳಲ್ಲಿಡಲಾಗಿದೆ. ಧೂಳು ಹಿಡಿಯುವುದೆಂದು ಮುಚ್ಚಿಡದೆ, ಸಿಲ್ವರ್ ಫಿಶ್ ಅಥವಾ ಫಂಗಸ್‌ಗಳಿಗೆ ಪುಸ್ತಕ-ಅಕ್ಷರಗಳು ಹಾಳಾಗಬಾರದೆಂದು ಗಾಳಿಗೆ ತೆರೆದಿಡುವ ಹೊಸ ವಿಧಾನವನ್ನು ಪುರಾತತ್ವಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ.


ಎರಡನೆಯ ಮಹಡಿಯಲ್ಲಿ ನೂರಾರು ಸಂಗೀತಗಾರರು ಒಮ್ಮೆಲೆ ಕೂತು ವಾದನ, ಗಾಯನ ಮಾಡಬಹುದಾದ ಬೃಹತ್ ಸಂಗೀತ ಹಜಾರ; ಮೊನಾಸ್ಟರಿಯ ಎಲ್ಲರು ಒಟ್ಟಿಗೆ ಕೂತು ಉಣ್ಣಬಹುದಾದ ದೊಡ್ಡ ಭೋಜನಾಲಯ ಇವೆ. ಮೇಜು, ಕುರ್ಚಿ, ಮೇಣದಬತ್ತಿ-ವಾದ್ಯದ ಸ್ಟ್ಯಾಂಡ್‌ಗಳೆಲ್ಲ ಹಳೆಯ ಸಿಡಾರ್ ಮರದವು. ಸ್ಥಳೀಯ ಬಡಗಿಗಳಿಂದ ಅತ್ಯಂತ ಕೌಶಲಪೂರ್ಣವಾಗಿ ತಯಾರಿಸಲ್ಪಟ್ಟವು. ವಿಭಿನ್ನ ಡಿಸೈನುಗಳ ಮಹೋಗನಿ ಮರದ ಮುಚ್ಚಿಗೆಯ ಸೂರು ಗಮನ ಸೆಳೆಯುತ್ತದೆ.

ಹಜಾರ, ಕಾರಿಡಾರು, ಗಾಜಿನ ಸೂರುಗಳಲ್ಲಿ ಬೈಬಲಿನಲ್ಲಿರುವ ಕತೆಗಳೆಲ್ಲ ಬೃಹತ್ ತೈಲಚಿತ್ರಗಳಾಗಿ ಮೈದಳೆದಿವೆ. ಸಂತ ಫ್ರಾನ್ಸಿಸ್ ಬದುಕಿನ ವಿವರಗಳು, ಪವಾಡಗಳು, ಫ್ರಾನ್ಸಿಸ್ಕನ್ ಸನ್ಯಾಸಿಗಳ ಹತ್ಯೆ, ಜೀಸಸ್‌ನ ಲಾಸ್ಟ್ ಸಪರ್ ಮೊದಲಾದ ನೂರಾರು ಚಿತ್ರಗಳಿವೆ. ಕೆಲವು ಒರಿಜಿನಲ್, ಮತ್ತೆ ಕೆಲವು ಪ್ರಸಿದ್ಧ ಚಿತ್ರಗಳ ಅನುಕರಣೆಗಳು. ಮೂಲ ಚಿತ್ರದಲ್ಲಿ ಒಂಟೆಯಿರುವಲ್ಲೆಲ್ಲ ಪೆರು ಕಲಾವಿದ ಲಾಮಾ, ಕತ್ತೆಗಳನ್ನು ಬಿಡಿಸಿದ್ದಾನೆ. ಸ್ಥಳೀಯ ವರ್ಣಚಿತ್ರಕಾರ ಡಿಯೆಗೊ ಡಿ ಲಾ ಪೆಂಟೆ ಬರೆದ ಲಾಸ್ಟ್ ಸಪರ್ ಚಿತ್ರದ ಕಡೆ ಗೈಡ್ ಗಮನ ಸೆಳೆದಳು. ಅದರಲ್ಲಿ ಜೀಸಸ್ ಎದುರಿನ ಭೋಜನ ಡವಿನ್ಸಿ ಚಿತ್ರಿಸಿರುವುದಕ್ಕಿಂತ ಭಿನ್ನವಾಗಿದೆ. ಪೆರುವಿನ ಸಾಮಾನ್ಯ ಆಹಾರಗಳಾದ ಸುಟ್ಟ ಗಿನಿ ಪಿಗ್, ಆಲೂಗೆಡ್ಡೆ, ಮೆಣಸಿನಕಾಯಿ ಮೇಜಿನ ಮೇಲಿವೆ! ಅಷ್ಟೆ ಅಲ್ಲ, ಜುದಾಸನನ್ನು ಚಿತ್ರಿಸಿರುವುದರಲ್ಲಿ ಮತ್ತೂ ಒಂದು ಕುತೂಹಲಕರ ಬದಲಾವಣೆಯಿದೆ. ಕಂಡೂಕಾಣದ ಕುಹಕ ನಗೆ, ವಿಚಿತ್ರ ತೃಪ್ತಿ ಸೂಸುವ ಕುತ್ಸಿತ ಕಣ್ಣು, ತಲೆಯ ಹಿಂದೆ ತೆಳುವಾಗಿ ಚಿತ್ರಿಸಲ್ಪಟ್ಟ ಪಿಶಾಚಿ ಮುಖವಷ್ಟೇ ಅಲ್ಲ, ಜುದಾಸನ ಚಿತ್ರ ಫ್ರಾನ್ಸಿಸ್ಕೊ ಪಿಜಾರೊನನ್ನೇ ಹೋಲುತ್ತದೆ! ಪಿಜಾರೊ ಸ್ಪ್ಯಾನಿಶ್ ಆಕ್ರಮಣಕಾರ. ಇಂಕಾಗಳ ಕೊನೆಯ ರಾಜ ಅಟಾಹ್ವಾಲ್ಪಾನನ್ನು ಮೋಸದಿಂದ ಕೊಂದು ಅವನ ರಾಜ್ಯವನ್ನು ಸ್ಪೇನಿಗೆ ಗೆದ್ದುಕೊಟ್ಟವ. ಲೀಮಾ ನಗರದ ಸ್ಥಾಪಕ. ಆದರೆ ವಿಜಯಿಯ ಕಣ್ಣಿಗೆ ಹೀರೋ ಆದವನು ಆಕ್ರಮಿಸಲ್ಪಟ್ಟವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದಾನೆ! ಸ್ಥಳೀಯರು ಕ್ರಿಸ್ತನನ್ನು ಸೂರ್ಯ ದೇವತೆ ಇಂತಿರ‍್ಯಾಮಿಗೆ ಸಮ ಎಂದುಕೊಂಡರು. ಆದರೆ ಪಿಜಾರೊ ಮಾತ್ರ ಜುದಾಸನಿಗೆ ಸಮನಾದ! ಕಲಾವಿದ ಹೀಗೆ ತನ್ನ ಜನಾಂಗಕ್ಕೆ ಆದ ಕೇಡಿಗೆ ಸೇಡು ತೀರಿಸಿಕೊಂಡಿದ್ದಾನೆ.

ಎಲ್ಲವನ್ನು ನೋಡುತ್ತ ನಮಗರಿವಿಲ್ಲದಂತೆ ಬಾಯಿ ಕಳೆಯುತ್ತದೆ, ಕಣ್ಣು ಅಗಲಗೊಳ್ಳುತ್ತ ಹೋಗುತ್ತದೆ.

ನಾವು ಭೇಟಿಕೊಟ್ಟ ದಿನ ಅಲ್ಲೊಂದು ಮದುವೆ ನಡೆಯುತ್ತಿತ್ತು. ವಧುವರರಲ್ಲದೆ ಬೆರಳೆಣಿಕೆಯಷ್ಟಿದ್ದ ದಿಬ್ಬಣ ನೋಡಿ ಭಾರತದ ಜನಭರಿತ ಮದುವೆ ದೃಶ್ಯ ನೆನಪಾಗುತ್ತಿರುವಾಗ ನಮ್ಮ ಗೈಡ್, ‘ಇಲ್ಲಿ ಮದುವೆ ಬಹುತುಟ್ಟಿ. ಬಹುಶಃ ಸಾವಿರ ಯುಎಸ್ ಡಾಲರ್ ಕೊಡಬೇಕಾಗುತ್ತದೆ. ಅಲ್ಲದೆ ಚರ್ಚಿನ ಮದುವೆಗೆ ಕಮ್ಮಿ ಜನ ಬರುತ್ತಾರೆ. ಮರುದಿನದ ಪಾರ್ಟಿಗಳಲ್ಲಿ ತುಂಬಿತುಳುಕುವಷ್ಟು ಜನ ಪಾಲ್ಗೊಳ್ಳುತ್ತಾರೆ. ಧರ್ಮ ಈಗ ಯಾರಿಗೂ ಬೇಡ; ಒತ್ತಾಯಕ್ಕಷ್ಟೆ ಬರುವುದು’ ಎಂದಳು. ಅವಳ ದನಿಯಲ್ಲಿ ವಿಷಾದದ ಛಾಯೆಯಿತ್ತು.

ನಿಜ. ಧರ್ಮವು ಅಂತರಂಗದ ಶಾಂತಿಯ ಹಾದಿಯಾಗಿ ಮನುಷ್ಯರೆದೆಯಲ್ಲಿ ಅರಳದೆ ಆಚರಣೆಯ ಒತ್ತಾಯಗಳಾಗಿ ಮಾರ್ಪಟ್ಟಿರುವುದು ಅದಕ್ಕೆ ಕಾರಣವಲ್ಲವೆ?

ಕೆಟಕೋಂಬ್

ಗೆದ್ದವರ ದೈವಸ್ಥಾನ ಹೇಗಿರಬೇಕೋ ಹಾಗಿರುವ ವೈಭವಗಳ ದಾಟುತ್ತ, ಯಾವ ದಿಕ್ಕಿನಿಂದ ಬಂದೆವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಅರಿವಿಲ್ಲದೆ ದಿಕ್ಕೇಡಿಗಳಾದಂತೆನಿಸುವ ಹೊತ್ತಿಗೆ ಗೈಡ್ ತಲೆಬಾಗಿ ಬನ್ನಿ ಎಂದು ಸನ್ನೆ ಮಾಡಿ ಮುಂದೆಹೋದಳು. ಇದಕ್ಕಿಂತ ಇನ್ನೇನು ಅದ್ಭುತ ತೋರಿಸುವಳೋ ಎಂಬ ಕುತೂಹಲದಿಂದ ಹಿಂಬಾಲಿಸಿದೆವು. ಆದರೆ ಇದುವರೆಗಿನ ವೈಭವ, ಬೃಹತ್ತಿಗೆ ವಿರುದ್ಧವಾಗಿ ಮಂಕು ಬೆಳಕಿನಲ್ಲಿ, ಕಿಷ್ಕಿಂಧೆಯಂತಹ ಸುರಂಗದಲ್ಲಿ ಕೆಳಗಿಳಿಯತೊಡಗಿದಳು. ಇಟ್ಟಿಗೆ ಗಾರೆಯ ಕಮಾನು, ಪುಟ್ಟಕೋಣೆ, ಸುರಂಗ ಹಾದು ಗಿಡ್ಡ ಬಾಗಿಲು ದಾಟಿ ಮಣ್ಣುನೆಲದಲ್ಲಿ ಕಾಲಿಟ್ಟೆವು.

ಅದೃಶ್ಯ ಘಾಟು ಮೂಗಿಗಡರಿತು.
ನಿಧಾನ ಒಳಸರಿದರೆ ಲೀಮಾದ ಮೊದಲ ಸ್ಮಶಾನ ಅಲ್ಲಿತ್ತು!
ಹೌದು, ಭವ್ಯ ಕಟ್ಟಡದ ಅಡಿಪಾಯದಲ್ಲಿ ತೆರೆದ ಗೋರಿಗಳ ಸ್ಮಶಾನ.
ಎಲುಬುಗಳನ್ನು ಕಟ್ಟಿಗೆ ರಾಶಿಯೇನೋ ಎಂಬಂತೆ ಪೇರಿಸಲ್ಪಟ್ಟ ಸ್ಮಶಾನ.




ಮಾನವ ಎಲುಬುಗಳನ್ನು ಕೈಲಿ ಹಿಡಿದು, ಶವಕೊಯ್ದು, ಮಾನವ ಶರೀರರಚನಾಶಾಸ್ತ್ರ ಅಭ್ಯಾಸ ಮಾಡುವ ವೈದ್ಯರನ್ನು ಶವ, ಮಾನವ ದೇಹ, ಗಾಯ, ಎಲುಬು, ರಕ್ತಗಳೆಲ್ಲ ಬೆಚ್ಚಿಬೀಳಿಸಲಾರವು ಎಂದೇ ನಾವು ತಿಳಿದಿದ್ದೆವು. ಆದರೆ ಯಾವ ಚರಿತ್ರೆಯನ್ನು ನೀವು ಅಭ್ಯಸಿಸುತ್ತಿರುವಿರೋ, ಅದೇ ಚರಿತ್ರೆಯ ಭಾಗವಾಗಿ ಬದುಕಿದ ಜನರೆಲ್ಲ ಎಲುಬು ರಾಶಿಗಳಾಗಿ ನಿಮ್ಮೆದುರು ಧುತ್ತನೆ ಪ್ರತ್ಯಕ್ಷವಾದಾಗ ದಿಗ್ಭ್ರಮೆಗೊಳ್ಳದಿರಲು ಸಾಧ್ಯವೇ ಇಲ್ಲ. ಅದು ಕೆಟಕೋಂಬ್ - ಮರಣೋತ್ತರ ಕ್ರಿಯೆ, ಅವಶೇಷ ಸಂಗ್ರಹಣೆಗಾಗಿ ರೂಪಿಸಲ್ಪಟ್ಟ, ತೆರೆದ ಗೋರಿಗಳ ನೆಲಮಾಳಿಗೆ. ಚರ್ಚಿನ ಪುರೋಹಿತ ವರ್ಗ, ಸಿರಿವಂತರು ಮತ್ತು ಸಮಾಜದ ಗಣ್ಯರೆಲ್ಲ ತಮ್ಮ ಕೊನೆಯ ವಿಶ್ರಾಂತಿ ಸ್ಥಳವಾಗಿ ಆಯ್ದುಕೊಂಡ ಜಾಗ.

ಲೀಮಾದಂತೆ ಬೇರೆಡೆಗಳಲ್ಲೂ ಕೆಟಕೋಂಬ್ ಇದೆ. ಮೊದಲನೆಯ ಕೆಟಕೋಂಬ್ ರೋಂನ ಪೀಟರ್ ಮತ್ತು ಪಾಲ್ ಅವರ ಗೋರಿಗಳಿರುವ ನೆಲಮಾಳಿಗೆ. ಮೊದಲು ರೋಂಗಷ್ಟೆ ಸೀಮಿತವಾಗಿದ್ದದ್ದು ಬರಬರುತ್ತ ಕ್ರೈಸ್ತ ಧರ್ಮ ಹರಡಿದ ಪ್ರದೇಶಗಳಿಗೂ ಈ ರಚನೆ ವ್ಯಾಪಿಸಿತು. ಬಳಕೆಯಲ್ಲಿಲ್ಲದ ಗಣಿ, ಗುಹೆ, ಕಾಲುವೆ, ಸುರಂಗಗಳೂ ಕೆಟಕೋಂಬ್ ಆಗಿ ಪರಿವರ್ತಿತವಾದವು. ಆಸ್ಟ್ರೇಲಿಯಾದ ಮೆಲ್ಬರ್ನ್, ವಿಯೆನ್ನಾ, ಈಜಿಪ್ಟಿನ ಅಲೆಕ್ಸಾಂಡ್ರಿಯಾ, ಬೋಸ್ನಿಯಾ ಹರ್ಜಿಗೊವೆನಿಯಾ, ಇಂಗ್ಲೆಂಡ್, ಫಿನ್ಲೆಂಡ್, ಫ್ರಾನ್ಸ್, ಇಟಲಿ, ಉಕ್ರೇನ್, ಮಾಲ್ಟಾ, ಪೆರು, ಸ್ಪೇನ್ ಮತ್ತಿತರ ಕಡೆಗಳಲ್ಲೂ ಇವು ರೂಪುಗೊಂಡವು.

ಲೀಮಾದ ಕೆಟಕೋಂಬ್‌ನಲ್ಲಿ ಹತ್ತಡಿ ಮೂರಡಿ, ಹತ್ತಡಿ ಐದಡಿ ಹೀಗೆ ನಾನಾ ಅಳತೆಗಳ ತೋಡುಗುಂಡಿಗಳಿವೆ. ಅವುಗಳ ಆಳ ಐದು ಮಹಡಿ ಕಟ್ಟಡದಷ್ಟಿದೆ! ಒಂದು ಶವ ಹೂತು ಅದು ಕೊಳೆತದ್ದೇ ಹೊರತೆಗೆದು ಮತ್ತೊಬ್ಬರ ಸಮಾಧಿಗೆ ಗೋರಿ ಸಿದ್ಧಪಡಿಸಲಾಗುತ್ತಿತ್ತು. ದೇಹವು ಬೇಗ ಕೊಳೆತು ಮೂಳೆ ಬಿಡಲಿ ಎಂದು ವಿನೆಗರ್ ಮತ್ತು ಕಾಯಿಸಿದ ಮರಳನ್ನು ಹಾಕಲಾಗುತ್ತಿತ್ತು! ವಾಸನೆ ಕಡಿಮೆ ಮಾಡಲು ಶವಕ್ಕೆ ನಿಂಬೆರಸ ಸವರುತ್ತಿದ್ದರು. ಎಷ್ಟೋ ಸಲ ಒಂದು ಗೋರಿಯಲ್ಲಿ ಶವ ಹೂತು ಮೂರು ತಿಂಗಳಾಗುವುದರಲ್ಲಿ ತೋಡಿ ಅದನ್ನು ತೆಗೆದುಬಿಟ್ಟದ್ದೂ ಇದೆ. ಒಂದು ಕುಟುಂಬದ ಎಲ್ಲರ ಅವಶೇಷ ಒಂದೇ ಕಡೆ, ಒಟ್ಟಿಗೆ ಇರಬೇಕೆಂದು ಚರ್ಚಿಗೆ ಅಪಾರ ಧನಸಂದಾಯ ಮಾಡಿದವರ ಅವಶೇಷಗಳು ವಿಶೇಷ ತೋಡುಗುಂಡಿಗಳಲ್ಲಿವೆ.

ಒಂದಾದಮೇಲೊಂದು ಶವ ಹೂತು, ಅದರ ಮೂಳೆ ತೆಗೆದು, ಮತ್ತೊಂದನ್ನು ಹೂತು, ಅದರ ಮೂಳೆಗಳನ್ನೂ ತೆಗೆದು.. ಹೀಗೆ ತೆಗೆತೆಗೆದು ಪೇರಿಸಿದ ಮೂಳೆಗಳನ್ನೇನು ಮಾಡುವುದು? ಕೊನೆಗವನ್ನು ಗುಂಡಿಗಳಲ್ಲಿ ತುಂಬಲಾಯಿತು. ಒಂದರ ಮೇಲೊಂದು ಪೇರಿಸಿಡಲಾಯಿತು. ದೊಡ್ಡ ಬಾವಿ ತೋಡಿ ನೀಟಾಗಿ ಜೋಡಿಸಿಡಲಾಯಿತು. ಇಲ್ಲಿ ಎರಡು ಬಾವಿಗಳಿವೆ. ನೀರು ಬರದಂತೆ ಕಟ್ಟೆಕಟ್ಟಿ ತಲೆಬುರುಡೆ, ಫೀಮರ್, ಟಿಬಿಯ, ಪೆಲ್ವಿಸ್, ಪಕ್ಕೆಲುವು ಮೊದಲಾದ ಮೂಳೆಗಳನ್ನು ವೃತ್ತಾಕಾರದಲ್ಲಿ ಪೇರಿಸಲಾಗಿದೆ. ನೆಲಮಾಳಿಗೆಯ ಗಾಳಿ ಹಾಗೂ ಬಾವಿಗಳು ಭೂಕಂಪ ನಿರೋಧಕ ತಂತ್ರಜ್ಞಾನವೂ ಹೌದು ಎನ್ನುವುದು ತಜ್ಞರ ಅಭಿಮತವಾಗಿದೆ.



ಇಲ್ಲಿ ಗುಪ್ತ ಸುರಂಗಗಳೂ ಇವೆ. ಮೇಲಿನ ಬೃಹತ್ ಹಜಾರಗಳ ಕೆಲವು ಬಾಗಿಲು, ಮೇಜು ಸರಿಸಿದರೆ; ಪಾದ್ರಿಗಳ ಬಟ್ಟೆಯಿಡುವ ಬೃಹತ್ ಅಲಮೇರಾಗಳ ಬಾಗಿಲು ತೆರೆದರೆ ಅವು ಈ ನೆಲಮಾಳಿಗೆಗೆ ತೆರೆದುಕೊಳ್ಳುತ್ತವೆ. ೧೮೨೧ರಲ್ಲಿ ಪೆರುವಿಗೆ ಸ್ವಾತಂತ್ರ್ಯ ಬಂದು ಚರ್ಚಿನಲ್ಲಿ ಹೂಳುವುದನ್ನು ಜೋಸ್ ಡಿ ಸ್ಯಾನ್ ಮಾರ್ಟಿನ್ ನಿಷೇಧಿಸುವತನಕ ಇದು ಸ್ಮಶಾನವಾಗಿಯೇ ಇತ್ತು. ನಂತರ ಊರ ಹೊರಗೆ ಸ್ಮಶಾನ ಸ್ಥಳಾಂತರಗೊಂಡಿತು. ಶತ್ರುವಿನ ದಾಳಿಗೆ ಸಿಕ್ಕರೂ ಸತ್ತವರ ಅವಶೇಷಗಳು ನಾಶವಾಗಬಾರದೆಂದು ಇದು ಗುಟ್ಟಾಗಿತ್ತು. ೧೯೪೦ರಲ್ಲಿ ಕೆಟಕೋಂಬ್ ಇರುವ ವಿಚಾರ ಬಹಿರಂಗಪಡಿಸಲಾಯಿತು. ಈಗ ಕೆಟಕೋಂಬ್ ಸ್ಮಾರಕವಾಗಿದೆ. ಭವ್ಯ ಚರ್ಚಿಗೆ ನಿಗೂಢತೆಯನ್ನೂ ತಂದುಕೊಟ್ಟಿದೆ.

ಅಕಸ್ಮಾತ್ ಭಾರತೀಯರೇನಾದರೂ ಈ ನಂಬಿಕೆ ಹೊಂದಿದ್ದರೆ? ಛೇ, ಭೂತಪ್ರೇತಪಿಶಾಚಿಗಳ ಹೆದರಿಕೆಯ ಭಾರತೀಯರು ಹೆಣದ ಎಲುಬುಗಳ ಎಂದೂ ಹೀಗೆ ಜೋಡಿಸಲಾರರು. ಆದರೂ ಅಕಸ್ಮಾತ್ ದೆವ್ವದ ಭಯ ತೊಲಗಿ ಈ ನಂಬಿಕೆ ಬೆಳೆದುಬಿಟ್ಟರೆ..

ರೆ..?!

ಅಯ್ಯೋ, ಉಳಿದದ್ದು ಸಿಕ್ಕೀತೇ ನಮ್ಮ ಊಹೆಗೆ?

***

ಅನಾದಿಯಿಂದ ಸಾವಿನ ನಂತರ ಮನುಷ್ಯ ದೇಹ, ಚೇತನ ಏನಾಗುತ್ತದೆ ಎಂಬ ಜಿಜ್ಞಾಸೆ ಎಲ್ಲ ಜನಾಂಗಗಳಲ್ಲೂ ನಡೆದಿದೆ. ಅನೂಹ್ಯ ಸಾವಿನ ಕುರಿತ ಭಯವೇ ಸತ್ತನಂತರದ ಬದುಕಿಗಾಗಿ, ಅಮರತ್ವಕ್ಕಾಗಿ ಕಾಳಜಿ ವಹಿಸುವಂತೆ ಮಾಡಿದೆ. ಸ್ವರ್ಗವಾಸ ಪಾರಿತೋಷಕವಾದರೆ, ನರಕವಾಸ ಶಿಕ್ಷೆಯೆಂದುಕೊಳ್ಳಲಾಗಿದೆ. ಏನು ಮಾಡಿದರೆ ಸ್ವರ್ಗ-ನರಕ ಪ್ರಾಪ್ತಿ ಎಂಬ ಜಿಜ್ಞಾಸೆಯೇ ಹಲವಾರು ಧರ್ಮಗ್ರಂಥಗಳ ತಿರುಳಾಗಿದೆ. ಮನುಷ್ಯನ ಹಿಂಸಾರತಿ, ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡಲು ಧರ್ಮಗಳು ಈ ಊಹೆಗಳನ್ನು ಹೇರಿದವೆಂದುಕೊಂಡರೂ, ಸ್ವರ್ಗದ ಆಸೆ ಹರಿಬಿಟ್ಟು ಜನಸಾಮಾನ್ಯರನ್ನು ಮೋಸಗೊಳಿಸುವ, ಪುರೋಹಿತ ವರ್ಗ ಹಣಗಳಿಸುವ ಹುನ್ನಾರವಾಗಿಯೂ ಈ ಕಲ್ಪನೆ ಬಳಕೆಯಾಯಿತು. ಪುರೋಹಿತರು ನಂಬಿಸಿದ್ದು ಸುಳ್ಳು ಎಂದು ಸತ್ಯ ಹೇಳಲು ಸತ್ತುಹೋದ ಯಾರೂ ಬರದಿರುವುದರಿಂದ ಸ್ವರ್ಗನರಕ ನಂಬಿಕೆಗಳು ಕ್ರಾಸ್‌ಚೆಕ್ ಇಲ್ಲದೆ ಮನುಷ್ಯ ಮನಸ್ಸನ್ನು ಭಯಗ್ರಸ್ತಗೊಳಿಸುವ ಹತಾರಗಳಾದದ್ದೂ ಹೌದು.

ಅರೇಬಿಯಾದ ಸುಗಂಧದ್ರವ್ಯವನ್ನೆಲ್ಲ ಪೂಸಿದರೂ ಕೊಲೆಗೈಯ ರಕ್ತವಾಸನೆ ಹೋಗುವುದಿಲ್ಲ.
ಕರ್ಮಸ್ವರ್ಗಪುನರ್ಜನ್ಮಅಂತಿಮತೀರ್ಪು ಎಂದು ಏನೆಲ್ಲ ಕತೆಹೆಣೆದರೂ ಸುಳ್ಳಿಗೆ ಧರ್ಮದ ಕವಚ ತೊಡಿಸಲಾಗುವುದಿಲ್ಲ. ಕೆಟಕೋಂಬಿನಿಂದ ಹೊರಬಂದು ಅಷ್ಟೊತ್ತಾದರೂ ನಮ್ಮ ಮೈ ಒಣಎಲುಬಿನ ವಾಸನೆ ಸೂಸುವುದು ನಿಲಿಸಲಿಲ್ಲ!

ಅದೇನೇ ಇರಲಿ, ನೆಲದಾಳದ ಶಾಂತ ತಾವುಗಳ ಹುಡುಕಿಕೊಂಡ ಪೂರ್ವಜರೇ, ಪ್ರಾಣಿಗಳೂ ಮನುಷ್ಯರೂ ಸತ್ತ ಮೇಲೆ ಕೊನೆಗುಳಿವುದು ಧೂಳು ಅಷ್ಟೆ; ಅಮರವಾಗುಳಿಯುವುದು ಅವರ ಕಾರ್ಯಗಳ ನೆನಪುಗಳಷ್ಟೆ ಎಂಬ ಸತ್ಯವನ್ನು ಮರ್ತ್ಯರಿಗೆ ದಯವಿಟ್ಟು ನೆನಪಿಸುತ್ತಿರಿ.

ಆಮೆನ್..




No comments:

Post a Comment