Thursday 4 August 2016

ರಿಯೋನತ್ತ ಎಲ್ಲರ ಚಿತ್ತ ..





೨೦೧೬ರ ಒಲಿಂಪಿಕ್ಸ್ ಎಂಬ ಆಟದ ಹಬ್ಬಕ್ಕೆ ಬ್ರೆಜಿಲಿನ ರಿಯೊ ಡಿ ಜನೈರೊ ಗುಡಿಸಿ ಸಾರಿಸಿ ಸುಣ್ಣಬಣ್ಣವಾಗುತ್ತ ರಂಗವಲ್ಲಿ ಇಟ್ಟುಕೊಂಡು ತಯಾರಾಗುತ್ತಿದೆ. ಆದರೆ ಬ್ರೆಜಿಲ್ ಎಂಬ ಭಾರತಕ್ಕಿಂತ ದೊಡ್ಡ ಸಂಪದ್ಭರಿತ ರಾಷ್ಟ್ರಕ್ಕೆ ಕೆಲವರು ಶತ್ರುಗಳು, ಹಲವರು ಹಿತಶತ್ರುಗಳು. ಎಲ್ಲರ ಕಣ್ಣಿರುವುದು ಅಲ್ಲಿನ ಸಂಪತ್ತಿನ ಮೇಲೆ. ಕೆಂಗಣ್ಣು ಅದನ್ನು ಬಾಚಿಕೊಳ್ಳಲು ಸುಲಭ ಮಾಡದ ಸರ್ಕಾರದ ಮೇಲೆ. ಹೀಗಿರುತ್ತ ‘ಜೀಕಾ ವೈರಸ್ ದಾಳಿ’ ಎಂಬ ಗುಲ್ಲು ಸೃಷ್ಟಿಸಿ ಒಲಿಂಪಿಕ್ಸ್‌ಗೆ ಮೊದಲ ಆತಂಕ ಒಡ್ಡಲಾಯಿತು. ‘ರಿಯೊ ಒಲಿಂಪಿಕ್ಸ್ ದಯನೀಯವಾಗಿ ವಿಫಲವಾಗಲು ಎಂಟು ಕಾರಣಗಳು’, ‘ಏಕೆ ಅಲ್ಲಿ ಒಲಿಂಪಿಕ್ಸ್ ನಡೆಯಬಾರದಿತ್ತು?’, ‘ವಿಫಲತೆಗೆ ಏಕೈಕ ಕಾರಣ’ ಎಂದೆಲ್ಲ ಪಟ್ಟಿ ಮಾಡಿ ಬ್ರೆಜಿಲಿನ ಉದ್ದಗಲಆಳ ಅಳೆದು ತೀರ್ಪು ಕೊಡಲಾಯಿತು. ಬ್ರೆಜಿಲಿನ ದಿಲ್ಮಾ ರೌಸೆಫ್ ಅವರ ಎಡಪಂಥೀಯ ಸರ್ಕಾರ ಸಂಪೂರ್ಣ ಭ್ರಷ್ಟವಾಗಿ, ದಿವಾಳಿಯಾಗಿ ಆಗಲೇ ಉರುಳಿ ಬಿದ್ದಿದೆ; ರಿಯೊದಲ್ಲಿ ನಗರಾಡಳಿತವೇ ಇಲ್ಲವೆಂಬಷ್ಟು ಕಾನೂನು ಹದಗೆಟ್ಟಿದೆ ಇತ್ಯಾದಿಯಾಗಿ ಪಶ್ಚಿಮದ ರಾಜಕಾರಣ ವಿಶ್ಲೇಷಕರು ಬರೆದಾಯಿತು.

ಅದೇನೇ ಇರಲಿ, ರಿಯೊ ಒಲಿಂಪಿಕ್ಸ್ ವಿಫಲವಾಗುತ್ತದೆ ಎಂದು ಆರು ತಿಂಗಳಿನಿಂದ ಕಣಿ ನುಡಿಯುತ್ತಿರುವವರ ಮಾತು ಸುಳ್ಳಾಗಲೆಂದು ಹಲವರು ಶ್ರಮಿಸುತ್ತಿದ್ದಾರೆ. ಕ್ರೀಡಾಳುಗಳು ಕೈಕಾಲು ಹುರಿ ಮಾಡಿಕೊಳ್ಳುತ್ತಿದ್ದಾರೆ. ಸಕಲೆಂಟು ವೃತ್ತಿ, ಹವ್ಯಾಸ, ವರ್ಗ, ಹಿತಾಸಕ್ತಿಯ ಜನರೂ ತಂತಮ್ಮ ಉದ್ದೇಶ ಸಾಧನೆಗೆ ರಿಯೊಗೆ ಹೊರಟು ನಿಂತಿದ್ದಾರೆ.

ಒಟ್ಟಾರೆ ಈಗ ಎಲ್ಲರ ಚಿತ್ತ, ರಿಯೋನತ್ತ.

ನಾವೂ ರಿಯೋಗೆ ಹೋಗಿಬಂದೆವು. ಸೊಳ್ಳೆಗಳಿಂದ ಹರಡುವ ಜೀಕಾ ವೈರಸ್ ಕಾಯಿಲೆ ಇನ್ನೇನು ಬ್ರೆಜಿಲಿನಿಂದಾಚೆ ದ. ಅಮೆರಿಕಾ ತುಂಬ ಪಸರಿಸಿ, ವಿಶ್ವದೆಲ್ಲೆಡೆ ವ್ಯಾಪಿಸಿ, ಸೊಳ್ಳೆಗಳಂತೆಯೇ ಮನುಷ್ಯರು ಪುತಪುತನೆ ಸತ್ತು ನಾಶಗೊಳುವರೆಂದು ಜಗತ್ತು ಬೆಚ್ಚುವ ಹೊತ್ತಿಗೆ ನಾವು ಬ್ರೆಜಿಲಿಗೆ ಹೊರಟುಬಿಟ್ಟಿದ್ದೆವು. ತುಟ್ಟಿಯ ಕಾರ್ನಿವಾಲ್ ಸೀಸನ್ ತಪ್ಪಿಸಿ ಜೀಕಾ ಸೀಸನ್ನಿನಲ್ಲಿ ರಿಯೊ ಡಿ ಜನೈರೊ ತಲುಪಿದೆವು. ಜೀಕಾ ಭೀತಿ ಆಧಾರರಹಿತ ಹಾಗೂ ವ್ಯಾಕ್ಸೀನು ಕಂಪನಿಗಳು ಹುಟ್ಟಿಸಿರಬಹುದಾದ ಸುಳ್ಳುಭಯ ಎಂದು ನಂತರ ತಿಳಿದರೂ ಹೊರಟಾಗ ನಮಗಷ್ಟೇನೂ ತಲೆಬಿಸಿಯಾಗಿರಲಿಲ್ಲ. ಎಷ್ಟೆಂದರೂ ಸೊಳ್ಳೆಗಳ, ರೋಗಗಳ, ರೋಗಿಗಳ ನಡುವೆ ಇರುವವರಲ್ಲವೆ? ಸೊಳ್ಳೆ ಕಚ್ಚದಂತೆ ಮುಖಕೈಮೈ ಮುಚ್ಚಿಕೊಂಡು, ಎಲ್ಲೆಡೆ ರಿಪೆಲೆಂಟ್ ಬಳಿದುಕೊಳ್ಳುತ್ತ ಗಗನಯಾನಿಗಳಂತೆ ತೋರುತ್ತಿದ್ದ ಸಹ ಪ್ರವಾಸಿಗರನ್ನು ನೋಡಿ ನಗುತ್ತಿದ್ದೆವು.

ರಿಯೊ ಎಂಬ ಸುಂದರ ನಗರವನ್ನು ವಿಮಾನ ಸುತ್ತುಹಾಕಿ ಇಳಿಯತೊಡಗಿದ ಕೂಡಲೇ ಬಹುಶಃ ಎಲ್ಲರಿಗು ಜೀಕಾ ಮರೆತುಹೋಗಿರಬೇಕು. ಅಷ್ಟು ಚೆಲುವಾದ, ಕಡಲ ಸೆರಗಿನಲ್ಲಿ ಟಿಜುಕ ಕಾಡಿನಿಂದಾವೃತವಾದ ಆಧುನಿಕ ಹಸಿರು ನಗರ ರಿಯೊ. ನಮ್ಮ ನಿರೀಕ್ಷೆಗಿಂತಲೂ ಚೆಲುವಾಗಿ, ವಿಶಿಷ್ಟವಾಗಿ ಕಂಡ ನಗರ ಅದು.

ನದಿಯಲ್ಲದ ಜನವರಿಯ ನದಿ


‘ರಿಯೊ ಡಿ ಜನೈರೊ’ ಪದಗುಚ್ಛದ ಅರ್ಥ ರಿವರ್ ಆಫ್ ಜನವರಿ ಅಥವಾ ಜನವರಿಯ ನದಿ. ಕ್ರಿ. ಶ. ೧೫೦೨ರ ಜನವರಿ ಒಂದನೇ ತಾರೀಖು ಪೋರ್ಚುಗೀಸ್ ನೌಕಾ ಸಾಹಸಿಗಳ ಗುಂಪು ತುಪಿ, ಪುರಿ, ಬೊತೊಕುಡೊ ಜನರಿದ್ದ ಭೂಪ್ರದೇಶವನ್ನು ತಲುಪಿತು. ಸುತ್ತಮುತ್ತ ನೀರಿನಿಂದಾವೃತವಾಗಿದ್ದ ಭೂ ಪ್ರದೇಶ ಯಾವುದೊ ನದಿಯ ಅಳಿವೆಯಂತೆ ಅವರಿಗೆ ಕಾಣಿಸಿತು. ಜನವರಿ ಒಂದನೆ ತಾರೀಖು ಕಂಡದ್ದರಿಂದ ಅದಕ್ಕೆ ಜನವರಿಯ ನದಿ - ರಿಯೊ ಡಿ ಜನೈರೊ ಎಂದು ಪೋರ್ಚುಗೀಸ್ ಭಾಷೆಯಲ್ಲಿ ಕರೆದರು. ಹಾಗೆ ನೋಡಿದರೆ ಅದು ನದಿಯಲ್ಲ, ಕೊಲ್ಲಿ, ‘ಬೇ’. ಅತ್ತ ದಕ್ಷಿಣ ಅಮೆರಿಕದ ಪೆಸಿಫಿಕ್ ದಂಡೆಯ ಪೆರುವಿನಲ್ಲಿ ಸ್ಪೇನಿಗರು ಲೀಮಾ ನಗರ ಕಟ್ಟಿದರೆ ಇತ್ತ ಪೂರ್ವ ದಂಡೆಯಲ್ಲಿ ಪೋರ್ಚುಗೀಸರು ೧೫೬೫ರಲ್ಲಿ ‘ಸೆಂಟ್ ಸೆಬಾಸ್ಟಿಯನ್ ರಿಯೊ ಡಿ ಜನೈರೊ’ ನಗರ ಕಟ್ಟಿದರು.

ಪೋರ್ಚುಗಲ್ಲಿನ ರಾಣಿ ನೆಪೋಲಿಯನ್ನನ ಯುದ್ಧವಿಜಯಗಳಿಗೆ ಹೆದರಿ ತನ್ನ ರಾಜಧಾನಿಯನ್ನು ಲಿಸ್ಬನ್ನಿನಿಂದ ರಿಯೊಗೆ ಸ್ಥಳಾಂತರಿಸಿದ ಕಾಲದಲ್ಲಿ ‘ಯುನೈಟೆಡ್ ಕಿಂಗ್‌ಡಂ ಆಫ್ ಪೋರ್ಚುಗಲ್’ನ ರಾಜಧಾನಿಯಾಗಿ ರಿಯೊ ಮೆರೆಯಿತು. ಯೂರೋಪಿನ ಹೊರಗಿರುವ ಯೂರೋಪ್ ರಾಜವಂಶದ ರಾಜಧಾನಿ ಎಂಬ ಹೆಗ್ಗಳಿಕೆ ರಿಯೊಗೆ ದೊರೆಯಿತು. ನಗರಕ್ಕೆ ಲಿಸ್ಬನ್ನಿನ ರಾಜಪರಿವಾರ ಗಣ್ಯರೊಡನೆ ಬಂದಿಳಿಯಿತು. ಮೊದಲು ಪೋರ್ಚುಗೀಸ್ ಆಳ್ವಿಕರ ಮುಖ್ಯಸ್ಥಾನವಾಗಿದ್ದದ್ದು ೧೭೬೩ರ ನಂತರ ಬ್ರೆಜಿಲಿನ ರಾಜಧಾನಿಯಾಯಿತು. ೧೯೬೦ರಲ್ಲಿ ಬ್ರಸಿಲಿಯಾಗೆ ರಾಜಧಾನಿ ಸ್ಥಳಾಂತರವಾದರೂ ರಿಯೊ ಬ್ರೆಜಿಲಿನ ವಾಣಿಜ್ಯ ರಾಜಧಾನಿಯಾಗಿ ಮುಂದುವರೆದಿದೆ.

ಪೋರ್ಚುಗಲ್ಲಿನ ಹೊರಗಿರುವ ಅತಿ ದೊಡ್ಡ ಪೋರ್ಚುಗೀಸ್ ನಗರ ರಿಯೊ ೬೫ ಲಕ್ಷ ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲ ಪ್ರದೇಶವೂ ಸೇರಿದರೆ ೧.೩ ಕೋಟಿ ಜನ ಇಲ್ಲಿದ್ದಾರೆ. ಅವರಲ್ಲಿ ೫೧% ಬಿಳಿಯರು, ೧೧% ಕರಿಯರು ಹಾಗೂ ಉಳಿದವರು ಅನೇಕ ಕುಲ, ತಳಿ, ಜನಾಂಗಗಳಿಗೆ ಸೇರಿದವರು. ಮಿಶ್ರತಳಿಯ ಮೆಸ್ಟಿಜೊಗಳೂ ಬಹಳಸಂಖ್ಯೆಯಲ್ಲಿದ್ದಾರೆ. ಇಲ್ಲಿ ಹೆಂಗಸರ ಸಂಖ್ಯೆಯೇ ಹೆಚ್ಚು - ೫೩% ಇದೆ! ಪೋರ್ಚುಗೀಸರು ಬರುವ ಮುನ್ನ ರಿಯೊನಲ್ಲಿ ೨೦ ವಿವಿಧ ಭಾಷೆಗಳನಾಡುವ ೭ ಸ್ಥಳೀಯ ಕುಲಗಳಿದ್ದವು. ನಂತರ ಅಪಾರ ಸಂಖ್ಯೆಯ ವಿದೇಶೀಯರು ವಲಸೆ ಬಂದರು. ಹಾಗೆ ಯೂರೋಪಿನಿಂದ ಬಂದವರಲ್ಲಿ ಬಹುಪಾಲು ಜನ ಕೃಷಿ ಕೆಲಸ ಮಾಡುವವರೇ ಇದ್ದು ಹೊಸ ಅವಕಾಶ ಅರಸಿ ಬಂದಿದ್ದರು. ಅಂಗೋಲಾ, ಮೊಜಾಂಬಿಕ್ ಮತ್ತಿತರ ಪ. ಆಫ್ರಿಕಾ ನೆಲಗಳಿಂದ ಕರಿಯರು ಬಂದರು. ಆಫ್ರಿಕಾದ ಕರಿಯರ ಸಂಸ್ಕೃತಿಯಿಂದಲೇ ಸಾಂಬಾ ನೃತ್ಯ ಮತ್ತು ಸಾಂಬಾ ಉತ್ಸವ ‘ಕಾರ್ನಿವಾಲ್’ ರೂಪ ತಳೆದವು.

ಇವತ್ತು ರಿಯೊ ಡಿ ಜನೈರೊ ಎಲ್ಲ ತೆರನ ಪ್ರವಾಸಿ ಆಸಕ್ತಿಗಳಿಗೆ ನೀರೆರೆಯುವ ನಗರ. ಅದು ವ್ಯಾಪಾರಿ ಕೇಂದ್ರ. ಪ್ರವಾಸಿ ಕೇಂದ್ರ, ಆರೋಗ್ಯ ಪ್ರವಾಸಿ ಕೇಂದ್ರ, ಚಾರಣಿಗರ ನಗರ, ಬೆಚ್ಚನೆಯ ಬೀಚುಗಳ ನಗರ, ಫುಟ್ಬಾಲ್ ಪ್ರೇಮಿಗಳ ಕಣ್ಮಣಿ ಎಲ್ಲ ಆಗಿದೆ. ಅದು ಎಲ್‌ಜಿಬಿಟಿ ನಗರವೂ ಹೌದು. ಅತಿ ಹೆಚ್ಚು ಸಲಿಂಗಿ ಸಮುದಾಯದವರು ಇರುವ, ಬರುವ ನಗರ ಇದು. ಒಂದು ಪ್ರದೇಶವಿಡೀ ಅವರಿಗೆಂದೇ ಮೀಸಲಾಗಿದೆ. ರಿಯೊನಲ್ಲಿ ಹಣ್ಣಿದೆ ಹಾಲಿದೆ; ಕಾಫಿಯಿದೆ ವೈನಿದೆ; ಮೀನಿದೆ, ತರಕಾರಿ ಇದೆ; ಸಿಹಿತಿಂಡಿಯಿದೆ, ಬಾರ್ಬಿಕ್ಯೂ ಇದೆ; ಆಟವಿದೆ, ನರ್ತನವಿದೆ; ಹೋರಾಟವಿದೆ, ಸೋಲಿದೆ; ಕೊಳೆತು ಹೋಗುವಷ್ಟು ಸಂಪನ್ಮೂಲವಿದೆ, ಅನ್ನವಿಲ್ಲದೆ ಸಾಯುವಷ್ಟು ಬಡತನವೂ ಇದೆ.

ಎದ್ದು ಕಾಣುವಂತೆ ಅಲ್ಲಿಲ್ಲದೆ ಇದ್ದದ್ದು ಇಂಗ್ಲಿಷ್ ಮಾತ್ರ. ಎಂದೇ ಇಡಿಯ ರಿಯೊವನ್ನು ನಾವು ಕನ್ನಡದಲ್ಲೆ ಮಾತನಾಡಿಸಿ ಬಂದೆವು!

ಅರಣ್ಯ ನಗರಿ - ಬೆಚ್ಚನೆಯ ಬೀಚುಗಳು


ಗ್ವನಬಾರಾ ಬೇಯ ನೆಲಮುಗಿಲುಗಳ ನಡುವೆ ಹರಡಿಕೊಂಡಿರುವ ಬೆಟ್ಟ-ಅರಣ್ಯ ಪ್ರದೇಶದಲ್ಲಿ ರಿಯೊ ನಗರ ಅರಳಿದೆ. ಅದರ ಚೆಲುವಿನಲ್ಲಿ ಎದ್ದು ಕಾಣುವ ಅಂಶವೆಂದರೆ ನಗರ ಹೊಂದಿರುವ ಕಾಡು. ನಮ್ಮೂರುಗಳಲ್ಲಿ ಹೈವೇ ಅಗಲೀಕರಣ ಮತ್ತು ರಸ್ತೆ ನಿರ್ಮಾಣಕ್ಕೆಂದು ಕುಸಿದು ಬಿದ್ದ ಗುಡ್ಡಗಳು ಹಾಗೂ ಮರಗಳ ಮಾರಣಹೋಮ ನೋಡಿ ದುಃಖಿಸುತ್ತಿದ್ದವರಿಗೆ ರಿಯೊ ನಗರ ಈ ಪರಿ ಅರಣ್ಯ ಉಳಿಸಿಕೊಂಡದ್ದು ಖುಷಿ ನೀಡಿತು. ರಿಯೊನಲ್ಲಿರುವುದು ವಿಶ್ವದ ಅತಿ ದೊಡ್ಡ ‘ನಗರ ಅರಣ್ಯ’. ಬೃಹತ್ ಜನಸಂಖ್ಯೆಯ ಹೊರತಾಗಿಯೂ ಕಾಡನ್ನು ಹಾಗೇ ಉಳಿಸಿಕೊಂಡು ಬರಲು ಯತ್ನಿಸಲಾಗಿದೆ. ಕೋಪಕಬಾನಾ ಎಂಬ ಸಮುದ್ರ ದಂಡೆಯಲ್ಲಿದ್ದ ಅರಮನೆ ಮತ್ತು ಮುಖ್ಯ ನಗರದ ನಡುವೆ ಸಂಪರ್ಕ ಕಲ್ಪಿಸಲು ನಗರದ ಮೊದಲ ಸುರಂಗಮಾರ್ಗ ಕೊರೆಯಲಾಯ್ತು. ಈಗ ರಿಯೊ ನಗರದಲ್ಲಿ ೨೬ ಸುರಂಗಗಳಿವೆ. ಬೆಟ್ಟಸಾಲುಗಳ ಕೊರೆದು ಮಾಡಿದ ಸುರಂಗಗಳು ನಗರದ ಹಲವು ಭಾಗಗಳನ್ನು ಬೆಸೆಯುತ್ತವೆ. ೬೫ ಲಕ್ಷ ಜನರಿರುವ ನಗರದಲ್ಲಿ ರಸ್ತೆಗಳು ಕಿಕ್ಕಿರಿದ ಹಾಗೆನಿಸಲಿಲ್ಲ. ಟ್ರಾಫಿಕ್ ಒತ್ತಡ ಕೈಕೊಡಲಿಲ್ಲ. ರಸ್ತೆಗಳ ಪಕ್ಕ ಸೈಕಲಿನವರಿಗೂ, ನಡೆಯುವವರಿಗೂ ಪ್ರತ್ಯೇಕ ಜಾಗ ಕಲ್ಪಿಸಲಾಗಿದೆ.

ಅಂಟಾರ್ಕ್ಟಿಕಾ ಕಡೆಯಿಂದ ಶೀತಜಲ ಹರಿವು ಇದ್ದರೂ ಬೆಚ್ಚನೆಯ ನೀರಿನ ಬೀಚುಗಳು ಅಲ್ಲಿವೆ. ಇಪಾನೆಮಾ ಮತ್ತು ಕೋಪಕಬಾನಾ ಪ್ರಮುಖ ದಂಡೆಗಳು. ‘ದ ಗರ್ಲ್ ಫ್ರಂ ಇಪಾನೆಮಾ’ ಎಂಬ ಒಂದು ಪ್ರಖ್ಯಾತ ಬ್ರೆಜಿಲ್ ಜಾಜ್ ಹಾಡು ೧೯೬೨ರಲ್ಲಿ ಬಂದಿದೆ. ಇಪಾನೆಮಾದಲ್ಲಿಳಿದ ಕೂಡಲೇ ಬಸ್ಸಿನಲ್ಲಿದ್ದ ಸಹ ಪ್ರವಾಸಿಗರು ಆ ಹಾಡು ಹಾಡತೊಡಗಿದರು. ಪ್ರವಾಸಿಗರಿಂದ, ಅವರ ನಾನಾ ಚಟುವಟಿಕೆಗಳಿಗೆ ಇಂಬು ಕೊಡುವ ಕಾಯಕದವರಿಂದ ಆ ಬೀಚುಗಳು ತತ್ತರಿಸುತ್ತಿದ್ದವು. ಮೈಲುಗಟ್ಟಲೆ ಉದ್ದದ ಬೀಚಿನಲ್ಲಿ ಸಾವಿರಗಟ್ಟಲೆ ಪ್ರವಾಸಿಗರು. ಬಿಸಿಲು ಕಾಯಿಸುತ್ತ, ಸಮುದ್ರ ಸ್ನಾನ ಮಾಡುತ್ತ, ದೋಣಿ ವಿಹಾರ ಮಾಡುತ್ತ, ಈಜುತ್ತ, ಬೀಚ್ ಆಟಗಳನಾಡುತ್ತ ಕುಣಿವ ಪ್ರವಾಸಿಗರಿಂದ ಮರಳ ದಂಡೆಗಳು ತುಂಬಿ ತುಳುಕುತ್ತಿದ್ದವು. ಬೀಚಿನುದ್ದಕ್ಕೂ ದಣಿದವರಿಗಾಗಿ ಎಳನೀರು ಮತ್ತಿತರ ತಿನಿಸು ಮಾರುವ, ಬಟ್ಟೆ ಮಾರುವ ಸಂಖ್ಯಾನಾಮದ ಅಂಗಡಿಗಳಿದ್ದವು.

ಪ್ರವಾಸ ಬಂದಲ್ಲೂ ಫಿಟ್ನೆಸ್ ಗಮನ ಬಿಡದವರಿಗಾಗಿ ಬೀಚ್ ಮತ್ತು ಲಗೂನ್ ಬಳಸಿ ಸಾಗುವ ೮ ಕಿಮೀ ಉದ್ದದ ದಂಡೆಯನ್ನು ಮಿನಿ ವ್ಯಾಯಾಮಶಾಲೆಯನ್ನಾಗಿ ಮಾಡಿದ್ದಾರೆ. ಸೈಕಲ್ ತುಳಿಯುವವರು, ಓಡುವವರು, ಸ್ಕೇಟಿಂಗ್ ಮಾಡುವವರು, ಕಸರತ್ತು ಮಾಡುವವರು ಆ ರಸ್ತೆಯಲ್ಲಿ ತುಂಬಿದ್ದರು. ಬೀಚ್ ರಸ್ತೆಯ ಮತ್ತೊಂದು ಬದಿ ಸಂಜೆ ಆರರ ನಂತರ ಎಲ್ಲ ತರಹದ ಅಂಗಡಿಗಳು ತಲೆಯೆತ್ತುತ್ತವೆ. ಕಲಾಕೃತಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬಾರ್, ಆರ್ಕೆಸ್ಟ್ರಾ, ಮ್ಯೂಸಿಕ್-ಸಾಂಬಾ ಷೋ ತನಕ ಎಲ್ಲದೂ ಅಲ್ಲಿ ಕಾಣುತ್ತದೆ.

ನಾವು ಸುಮ್ಮನೆ ಕಾಲೆಳೆಯುತ್ತ ತಿರುಗಿದೆವು. ಬೀಚುಗಳು ನಮಗೆ ಹೊಸದಲ್ಲ. ನಿರ್ಜನ ಕಡಲ ದಂಡೆಯಲ್ಲಿ ಅಲೆಗಳು ಉರುಳುವುದನ್ನು ನೋಡುತ್ತ ಗಂಟೆಗಟ್ಟಲೆ ಕಳೆದಿದ್ದೆವು. ಮಳೆಗಾಲದ ಕಡಲ ರೌದ್ರವನ್ನೂ, ಹುಣ್ಣಿಮೆ ಬೆಳಕಲ್ಲಿ ಬೆಳ್ಳಿಯಲೆಗಳ ಉರುಳುವಿಕೆಯನ್ನೂ ವಿರಳ ಜನ ದಂಡೆಗಳಲ್ಲಿ ಕಂಡಿದ್ದೆವು. ಆದರೆ ಕಿಕ್ಕಿರಿದ ಈ ಸಮುದ್ರ ದಂಡೆಗಳು ಮನದಲ್ಲಿ ಯಾವ ಅಲೆಯನ್ನೂ ಏಳಿಸಲಾರದೆ ಹೋದವು.


ಶುಗರ್ ಲೋಫ್



ನಗರ ಪ್ರವೇಶಿಸುವಲ್ಲಿ ಶುಗರ್ ಲೋಫ್ ಬೆಟ್ಟವಿದೆ. ಸಕ್ಕರೆಯ ಕ್ಯೂಬುಗಳನ್ನು ಸಮುದ್ರ ದಂಡೆಯಲ್ಲಿ ಕವುಚಿ ಹಾಕಿದಂತೆ ಕಾಣುವ ನುಣ್ಣನೆಯ ಬೆಟ್ಟಕ್ಕೆ ಆ ಹೆಸರು ಬಂದಿದೆ. ಏಕಶಿಲಾ ಬೆಟ್ಟ ಅದು. ಇಡೀ ನಗರದ ಪಕ್ಷಿನೋಟ ನೀಡುವ ಶುಗರ್ ಲೋಫ್ ಬೆಟ್ಟದ ಚಾರಣ ರಿಯೊ ಪ್ರವಾಸೋದ್ಯಮಕ್ಕೆ ಗರಿಯಂತಿದೆ. ದೂರದಲ್ಲಿ ಒಂದೆಡೆ ಶಾಂತ ನೀಲ ಅಟ್ಲಾಂಟಿಕ್ ಕಡಲು, ಇಪಾನೆಮ, ಕೋಪಕಬಾನ ಬೀಚುಗಳು, ಸೂರ್ಯ ಸ್ನಾನ ಮಾಡುವ ಸಾವಿರಾರು ಜನ, ತೇಲುವ ಹಾಯಿಗಳು; ಇನ್ನೊಂದೆಡೆ ಹಸಿರು ಮುಕ್ಕಳಿಸುವ ಬೆಟ್ಟ ಬಯಲ ಪ್ರದೇಶ, ಕೊಲ್ಲಿ ನೀರಿನ ನಡುವೆ ಅರಳಿದ ಪುಟ್ಟಪುಟ್ಟ ದ್ವೀಪಗಳು, ವಿಶಾಲ ರಿಯೊ ನಗರ. ಪ್ರಕೃತಿಯ ಚೆಲುವೆಲ್ಲ ಗ್ವನಬಾರಾ ಬೇ ಆಗಿ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ನನ್ನದು ಕಣ್ ಸಫಾರಿ, ಉಳಿದವರದು ಕ್ಯಾಮೆರಾ ಷಟರ್ ಸಫಾರಿ. ಫೋಟೋ ತೆಗೆದಷ್ಟೂ ಸಾಕೆನಿಸುತ್ತಿಲ್ಲ, ಗೈಡ್ ಕೊಟ್ಟ ಸಮಯವೂ ಸಾಕೆನಿಸುತ್ತಿಲ್ಲ. ಆಯಿಲ್ ಪೇಂಟಿಂಗ್ ನೋಡುತ್ತಿರುವ ಭಾಸ ಹುಟ್ಟಿಸುವಷ್ಟು ಸುಂದರ ಭೂದೃಶ್ಯಗಳು.

ಕೇಬಲ್ ಕಾರಿನಲ್ಲಿ ಕುಳಿತು ಎರಡು ಹಂತಗಳಲ್ಲಿ ಬೆಟ್ಟ ಹತ್ತಿಳಿಯುವ ವೇಳೆಗೆ ಫೆಬ್ರುವರಿಯ ಬಿಸಿಲಿಗೆ ನಮ್ಮ ಚರ್ಮ ಸುಟ್ಟು ಕಪ್ಪಾಯಿತು. ಆದರೂ ಹೊಸ ಅನುಭವ ಲೋಕ ತೆರೆದುಕೊಂಡಿತು. ನಮ್ಮ ಸುತ್ತಮುತ್ತ ನಾವರಿಯದ ಭಾಷೆಯಲ್ಲಿ ನೂರಾರು ದನಿಗಳು ಉಲಿಯುತ್ತಿದ್ದವು. ಚೇಡಿಸುತ್ತ, ನಗುತ್ತ, ಹರಟುತ್ತ, ಸಂತಸ ಪಡುತ್ತಿದ್ದವು. ಚಿಟ್ಟೆ, ಪುಟ್ಟ ಹಕ್ಕಿ, ಹದ್ದುಗಳೆಲ್ಲ ಕೈಮೈ ಸವರುತ್ತ ಹೋದವು.


ಆಗ,

ನಿರಂತರ ದಣಿವಿಗೋ, ಅಪರಿಚಿತ ವಾತಾವರಣದಲ್ಲಿ ಸುಡುವ ಬಿಸಿಲಿಗೋ, ನಿದ್ರೆಯಿರದ ರಾತ್ರಿಯನ್ನು ನುಂಗಿ ಬಂದ ಹಗಲಿನ ಅಮಲಿಗೋ ಅಂತೂ ಕಿರಿಯವಳು ಕೆಲ ನಿಮಿಷಗಳ ವಿಸ್ಮೃತಿಯ ಲೋಕಕ್ಕೆ ಜಾರಿಬಿಟ್ಟಳು. ಕಣ್ಣು ಕತ್ತಲಿಟ್ಟು ಎಚ್ಚರ ತಪ್ಪಿದವಳ ಕಂಡು ನಮಗಿಂತ ಉಳಿದವರು ಗಾಬರಿಯಾದರು. ಅನಾಮತ್ ಎತ್ತಿ ಕೊಂಡೊಯ್ದು ಮಲಗಿಸಿ ಉಪಚರಿಸಿದ ಸೆಕ್ಯುರಿಟಿ ತರುಣ ಯಾರ‍್ಯಾರನೋ ಕರೆಸುವ ತಯಾರಿ ನಡೆಸಿದ. ನಾವು ಬೇಡ, ಬೇಡವೆನ್ನುತ್ತಿರುವಷ್ಟರಲ್ಲಿ ತನ್ನ ಸ್ವಪ್ನಲೋಕದಲ್ಲಿ ಏನೇನು ಕಂಡಳೋ, ಅವಳೇ ಎದ್ದು ಕೂತಳು. ನಾವಲ್ಲಿಂದ ಹೊರಬೀಳುವವರೆಗೂ ಆ ತರುಣ ನಮ್ಮ ಹಿಂದೇ ಅಷ್ಟು ದೂರದಲ್ಲಿ ಕಾವಲಿನಂತೆ ಸುಳಿದಾಡಿದ. ಅವನಿಗೆ ಇಂಗ್ಲಿಷ್ ಬಾರದು. ನಮಗೆ ಪೋರ್ಚುಗೀಸ್ ಬಾರದು. ಆದರೂ ಹೊರಡುವಾಗ ನಮಗೆ ಗೊತ್ತಿದ್ದ ಒಂದೇ ಒಂದು ಪೋರ್ಚುಗೀಸ್ ಪದ ‘ಒಬ್ರಗಾಡೊ’ (ಧನ್ಯವಾದ) ಹೇಳಿದೆವು.

ಈ ಭೂಮಿಯ ಯಾವುದೋ ಒಂದು ಅಪರಿಚಿತ ಮೂಲೆಯಲ್ಲೂ ನಿಮಗಾಗಿ ಮಿಡಿಯುವ ಒಂದು ಜೀವ ಸಿಕ್ಕಿಬಿಡುತ್ತದೆ! ಬಾಂಧವ್ಯದ ಒಂದು ಎಳೆ ದಕ್ಕಿಬಿಡುತ್ತದೆ!! ಅದಕ್ಕೇ ಅಲ್ಲವೆ ಈ ಭೂಮಿ ಇಷ್ಟು ಸುಂದರವಾಗಿದೆ?

ಕಾರ್ನಿವಾಲ್

ರಿಯೊನ ಸಾಂಬಾ ಕಾರ್ನಿವಾಲ್ ಬಹು ಪ್ರಖ್ಯಾತ. ಸಾಂಬಾ ನರ್ತನಕ್ಕೆಂದೇ ಸಾಂಬೊಡ್ರೊಮ್ ಎಂಬ ದೊಡ್ಡ ಓಪನ್ ಥಿಯೇಟರ್ ಇದೆ. ಈಸ್ಟರಿನ ೪೦ ‘ಪಥ್ಯ’ದ ದಿನಗಳ ಮೊದಲು ರೆಡ್ ಮೀಟ್ ಸೇವಿಸುವ ಸಂಭ್ರಮಾಚರಣೆಯ ಸಲುವಾಗಿ ಕಾರ್ನಿವಾಲ್ ಶುರುವಾಗಿರಬಹುದು. ಮೊದಮೊದಲು ಅದು ಬಿಳಿಯ ಯೂರೋಪಿಯನ್ನರೆ ಹೆಚ್ಚು ಭಾಗವಹಿಸುವ ಆಚರಣೆಯಾದದ್ದು ಬರಬರುತ್ತ ಎಲ್ಲ ಜನಸಮುದಾಯಗಳೂ ತಮ್ಮದೇ ರೀತಿಯಲ್ಲಿ ಪಾಲ್ಗೊಳುವ ಮಿಶ್ರ ಬ್ರೆಜಿಲ್ ಸಂಸ್ಕೃತಿಯ ಕುರುಹಾಗಿ ಬೆಳೆಯತೊಡಗಿತು. ಈಗ ಬ್ರೆಜಿಲ್ ಮತ್ತದರ ಪ್ರವಾಸೋದ್ಯಮಕ್ಕೆ ವರ್ಣಮಯ, ಸಂಭ್ರಮದ ಉತ್ಸವ ಕಾರ್ನಿವಾಲ್ ಕೊಡುಗೆ ಬಹಳವಿದೆ. ಕಾರ್ನಿವಾಲ್ ನಡೆವ ಒಂದು ವಾರ ಮುಂಚೆ ಮತ್ತು ನಂತರ ಅಲ್ಲಿಗೆ, ಅಷ್ಟೇ ಅಲ್ಲ ಇಡಿಯ ದಕ್ಷಿಣ ಅಮೆರಿಕಕ್ಕೆ ಹೋಗಿ ಬರಲು ಉಳಿದ ಸಮಯಕ್ಕಿಂತ ಎರಡು ಪಟ್ಟು ಬೆಲೆ ತೆರಬೇಕಾಗುತ್ತದೆ.

ಸಾಮೂಹಿಕ ಉತ್ಸವ, ಸಾಮೂಹಿಕ ನರ್ತನ, ಸಾಮೂಹಿಕ ಊಟ ಎಲ್ಲಕ್ಕು ರಿಯೊ ಹೆಸರುವಾಸಿ. ಬೀದಿಗಳನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲೂ ಬಫೆ ಊಟಕ್ಕೆ ಅದು ಹೆಸರುವಾಸಿ. ಜಿಡ್ಡು ಬಸಿಯುತ್ತ ಹಬೆಯಾಡುವ ನಾನಾ ತರಹದ ಬಾರ್ಬಿಕ್ಯೂಗಳನ್ನು ಮೂರ್ನಾಲ್ಕು ಅಡಿ ಎತ್ತರದ ಖಡ್ಗದಲ್ಲಿ ಚುಚ್ಚಿ ತಂದು ಟೇಬಲ್ಲಿನ ಮೇಲೆಯೇ ಕರಕರ ಹೆಚ್ಚಿ ಅತಿಥಿಗಳು ಕೇಳಿದ ಭಾಗ ಹಾಕುತ್ತಾರೆ. ನಾವೂ ಮಧ್ಯಾಹ್ನ ಮತ್ತು ರಾತ್ರಿ ಬಫೆ ಊಟಕ್ಕೆ ಹೋದೆವು. ಹಸಿದು ಕೂತ ನಮ್ಮೆದುರು ಏನಿತ್ತು ಏನಿಲ್ಲ?! ಮಧ್ಯಾಹ್ನದ ರೆಸ್ಟುರಾದಲ್ಲಿ ಕನಿಷ್ಟ ೧೦೦ ಬಗೆಯ ಖಾದ್ಯಗಳು ಇದ್ದವು. ಆದರೆ ಅವುಗಳ ರುಚಿ, ಪರಿಮಳಗಳು ನಮ್ಮ ನಾಸಿಕ-ಜಿಹ್ವೇಂದ್ರಿಯಗಳ ಕೆರಳಿಸಲು ವಿಫಲವಾದ್ದರಿಂದ ಅವು ಖಾದ್ಯಗಳ ಬದಲಾಗಿ ವಸ್ತುಗಳಂತೆ ತೋರತೊಡಗಿದವು. ಮಕ್ಕಳು ಮತ್ತು ಮಕ್ಕಳ ಮಗುವಾದ ಅವರಪ್ಪ ಅತ್ಯುತ್ಸಾಹದಿಂದ ಏನೇನನ್ನೋ ತಿನ್ನಲು ಯತ್ನಿಸಿದರು. ಆದರೆ ಯಾವುದು ಎಷ್ಟು ರುಚಿಸಿತು, ಎಷ್ಟು ತಿಂದರು ಎನ್ನುವುದನ್ನು ಅವರವರ ತಟ್ಟೆಗಳೇ ಹೇಳಿದವು. ಹೊಟ್ಟೆ ತುಂಬ ನೀರು ಕುಡಿದಾದರೂ ಎದ್ದು ಬರುವ ಅಂದರೆ ನೀರು ಉಚಿತವಲ್ಲ. ರೆಸ್ಟುರಾಗೆ ಹೋದ ‘ಗೆಸ್ಟು’ಗಳು ನೀರನ್ನು ದುಪ್ಪಟ್ಟು, ಮೂರು ಪಟ್ಟು ಬೆಲೆ ತೆತ್ತು ಕುಡಿಯಬೇಕು.

ಬೆಂದ ಕಾಳು, ಅರೆಬೆಂದ ಅನ್ನ, ನೆನೆಸಿದ ರವೆ, ಸೊಪ್ಪು, ತರಕಾರಿ ಮಿಶ್ರಣ ಹೀಗೆ ತಟ್ಟೆಗೆ ಏನೇನನ್ನೋ ಹಾಕಿ ತಂದು ರುಚಿ ನೋಡಿ ರಿಯೊ ಸ್ಪೆಷಲ್ ಬಫೆ ಲಂಚ್ ಮುಗಿಯಿತು! ರಾತ್ರಿ ಡಿನ್ನರ್ ಬಫೆಯೂ ಇದಕ್ಕಿಂತ ಭಿನ್ನವಾಗಿರದೆ ಅದರಂತೇ ಇತ್ತು. ಡಿನ್ನರ್ ಬಳಿಕ ಸಾಂಬಾ ಷೋ. ನಮ್ಮೊಡನೆ ಇದ್ದ ಹಳೆಯ, ಹೊಸ ಜೋಡಿಗಳು ಅದಕ್ಕೆಂದೇ ಕೊಂಡ ಬಣ್ಣಬಣ್ಣದ ವಿಚಿತ್ರ ದಿರಿಸಿನಲ್ಲಿ ಅಲಂಕೃತರಾಗಿ, ಸಿದ್ಧರಾಗಿ ಬಂದಿದ್ದರು. ಆದರೆ ದೀರ್ಘ ವಿಮಾನ ಪಯಣ, ಇಡಿಯ ದಿನದ ತಿರುಗಾಟ, ಜೆಟ್ ಲ್ಯಾಗ್ ಎಲ್ಲ ಸೇರಿ ನಾವೆಷ್ಟು ದಣಿದು ಸೋತಿದ್ದೆವೆಂದರೆ ನಮ್ಮ ಎಲ್ಲ ಉತ್ಸಾಹ ಒಗ್ಗೂಡಿಸಿಕೊಂಡರೂ ಸಾಂಬಾ ನರ್ತನವನ್ನು ನೋಡಿ ಆನಂದಿಸಲು ಸಾಧ್ಯವಾಗಲಿಲ್ಲ. ಹೊಟ್ಟೆ ತುಂಬದ ಊಟವೂ ಅದಕ್ಕೊಂದು ಕಾರಣವಿರಬಹುದು.

ಫವೇಲಾ



ನಗರದ ಎಲ್ಲೆಡೆ ಇಟ್ಟ ಕಸದ ಡಬ್ಬಿಗಳಿಂದ ತಮಗೆ ಬೇಕಾದ ವಸ್ತುಗಳನ್ನು ಹೆಕ್ಕಿ ತುಂಬಿಸಿಕೊಳ್ಳುತ್ತಿದ್ದ ಹಲವರು ಕಣ್ಣಿಗೆ ಬಿದ್ದಿದ್ದರು. ಕೋಪಕಬಾನ ಬೀಚನ್ನು ಸ್ವಚ್ಛಗೊಳಿಸುವ ಹುಡುಗರು; ವಯಸ್ಸಾದರೂ ಟ್ಯಾಕ್ಸಿ ಓಡಿಸುವ, ಸೈಕಲ್ ರಿಕ್ಷಾ ತುಳಿಯುವ ಮುದುಕರು; ಏರ್‌ಪೋರ್ಟಿನಲ್ಲಿ, ಹೋಟೆಲಿನಲ್ಲಿ ನೆಲ ವರೆಸುವ ಧಡೂತಿ ಮೈಯ ಹೆಂಗಸರು - ಇವರನ್ನೆಲ್ಲ ನೋಡುವಾಗ ಈ ಸಿರಿವಂತ, ಆಧುನಿಕ ನಗರದಲ್ಲಿ ಬಡತನವೂ ಇರಲೇಬೇಕು ಎನಿಸಿತ್ತು. ಅದಕ್ಕೆ ಸರಿಯಾಗಿ ಬಂಗು, ಲೆಬ್ಲಾನ್‌ನಂತಹ ಕೆಲ ವಸತಿ ಪ್ರದೇಶಗಳನ್ನು ತೋರಿಸುತ್ತ ಗೈಡ್ ಇವು ವಿಶ್ವದಲ್ಲೆ ಅತಿ ದುಬಾರಿ ವಾಸದ ಪ್ರದೇಶ/ಮನೆಗಳೆಂದು ಹೇಳಿದರು. ‘ನೀವು ಮುಂದಿನ ಬಾರಿ ಬ್ರೆಜಿಲಿಗೆ ಬಂದಾಗ ಬಹುಶಃ ನಾನು ಅಲ್ಲಿರಬಹುದು’ ಎಂದು ಹುಬ್ಬು ಹಾರಿಸಿದರು. ‘ಹಾಗಾದರೆ ನೀವೀಗ ಎಲ್ಲಿರುವಿರಿ?’ ಎಂದೆವು. ತನ್ನಂತಹವರೆಲ್ಲ ನಗರ ಪ್ರದೇಶದಿಂದ ಬಹುದೂರದ ಫವೇಲಾಗಳಲ್ಲಿದ್ದು ಅಲ್ಲಿಂದ ನಗರಕ್ಕೆ ಬರುತ್ತೇವೆ ಎಂದು ಹೇಳಿದರು.

ಹೆಸರು ಕುತೂಹಲ ಹುಟ್ಟಿಸಿತು. ಏನಿದು ಫವೇಲಾ?

ಅಟ್ಲಾಂಟಿಕ್ ಸಮುದ್ರವನ್ನೂ, ಇಡಿಕಿರಿದ ಇಪಾನೆಮಾ ದಂಡೆಯನ್ನೂ ನೋಡುತ್ತ ನಿಂತಾಗ ದೂರದಲ್ಲಿ ಸಮುದ್ರಕ್ಕೆ ಚಾಚಿದ ಪುಟ್ಟ ಗುಡ್ಡಗಳ ಇಳಿಜಾರಿನಲ್ಲಿ ಕಿಕ್ಕಿರಿದ ಮನೆಗಳು ತುಂಬಿರುವುದು ಕಾಣುತ್ತಿತ್ತು. ವಿಮಾನ ಲ್ಯಾಂಡ್ ಆಗುವಾಗಲೂ ಹೆಂಚಿನ ಮನೆಗಳು, ಸುಣ್ಣಬಣ್ಣವಿಲ್ಲದ ಇಟ್ಟಿಗೆಯ ಮನೆಗಳು ಕಂಡಿದ್ದವು. ಗೈಡ್ ನಮ್ಮ ಬಳಿ ಬಂದು ಅಗೋ ಅಲ್ಲಿ ಕಾಣುತ್ತಿವೆಯಲ್ಲ, ಅವೇ ಫವೇಲಾಗಳು ಎಂದು ತೋರಿಸಿದ.

ಓಹೋ, ನಮ್ಮ ಸ್ಲಂಗಳ ಹಾಗೆ ನಗರದ ಬಡವರನ್ನು ತುಂಬಿಕೊಂಡು ಫವೇಲಾಗಳಿವೆ! ಅವನು ನೀಡಿದ ಮಾಹಿತಿಗಳು ಬೆಚ್ಚಿಬೀಳಿಸುವಂತಿದ್ದವು.

ಫವೇಲಾಗಳು ೧೯ನೇ ಶತಮಾನದಲ್ಲಿ ಸೃಷ್ಟಿಯಾದವು. ಬಹಿಯಾ ಯುದ್ಧದ ಸೋಲಿನ ನಂತರ ೨೦,೦೦೦ ಮಾಜಿ ಸೈನಿಕರನ್ನು ರಿಯೊಗೆ ತಂದು ಬಿಟ್ಟಾಗ ನೆಲೆಯಿಲ್ಲದ ಸೈನಿಕರಿಂದ ಅವು ಕಟ್ಟಲ್ಪಟ್ಟವು. ನಂತರ ಅವಕಾಶ, ನೆಲೆ ಸಿಗದ ಆಫ್ರಿಕನ್ ಗುಲಾಮರು ಅಲ್ಲಿ ವಾಸಿಸಲು ಬಂದರು. ಬಳಿಕ ಮಾಜಿ ಗುಲಾಮರಿಂದ ಫವೇಲಾಗಳು ತುಂಬಿದವು. ಈಗಲ್ಲಿ ೬೮% ಜನ ಕರಿಯರಿದ್ದಾರೆ. ಆಧುನಿಕ ನಗರದೊಳಗೆ ಇರಲು ಶಕ್ತರಲ್ಲದವರು ಹೊರವಲಯದ ಗುಡ್ಡಗಳ ಇಳಿಜಾರಿನ ಫವೇಲಾಗಳಿಗೆ ದೂಡಲ್ಪಟ್ಟಿದ್ದಾರೆ. ಇತ್ತೀಚೆಗೆ ಗ್ರಾಮೀಣ ಭಾಗದಿಂದ ನಗರಕ್ಕೆ ಕೆಲಸ ಅರಸಿಕೊಂಡು ಬರುವ ವಲಸಿಗರೂ ಫವೇಲಾಗಳನ್ನು ಕಟ್ಟಿಕೊಂಡಿದ್ದಾರೆ. ರಿಯೊ ಒಂದರಲ್ಲೆ ೧೯೭೦ರಲ್ಲಿ ೩೦೦ ಫವೇಲಾಗಳಿದ್ದರೆ ಈಗ ೧೦೦೦ಕ್ಕೂ ಮಿಕ್ಕಿ ಇವೆ. ಕಡಲು, ಬೆಟ್ಟಗಳ ನಡುವಿನ ಸಪಾಟು ಜಾಗಗಳೆಲ್ಲ ಅಂಗಡಿ, ಆಫೀಸು, ಸಿರಿವಂತರ ಮಹಲು-ಮೈದಾನಗಳಾಗಿ ಸಿಂಗರಗೊಂಡಿದ್ದರೆ, ಆಸುಪಾಸಿನ ಬೆಟ್ಟಗಳ ಇಳಿಜಾರುಗಳು ಫವೇಲಾಗಳಾಗಿವೆ. ಇದ್ದಕ್ಕಿದ್ದಂತೆ ಉದ್ಯೋಗ ಅರಸಿ ಪ್ರವಾಹದೋಪಾದಿಯಲ್ಲಿ ಬರುವ ಜನಕ್ಕೆ ವಸತಿ ಸೌಕರ್ಯ ಸಿಗದಿದ್ದಾಗ ಫವೇಲಾಗಳು, ಸ್ಲಮ್ಮುಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬೆಳವಣಿಗೆ ದರ ನಗರ ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ. ಅಲ್ಲಿ ೯೦% ಬಡವರಿದ್ದಾರೆ. ಬೆವರು ಸುರಿಸಿ ದುಡಿದರೂ ಬಡವರಾಗೇ ಇರುವವರು ಅವರು.

ಸಹಜವಾಗಿ ಎಲ್ಲ ‘ಅಕ್ರಮ’, ‘ಅಪರಾಧ’ಗಳಿಗೂ ಇವು ನೆಲೆಯಾಗಿವೆ. ಶಸ್ತ್ರಾಸ್ತ್ರ ವ್ಯಾಪಾರಕ್ಕೂ, ಯೂರೋಪಿಗೆ ಕೊಕೇನ್ ಹೋಗುವ ಮಾರ್ಗಮಧ್ಯವಾಗಿಯೂ ಒದಗಿಬರುತ್ತವೆ. ಡ್ರಗ್ ಪಾರ್ಟಿಗಳು ನಡೆಯುತ್ತಲೆ ಇರುತ್ತವೆ. ತಿಂಗಳಿಗೆ ೩೦೦ ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಡ್ರಗ್ ವಹಿವಾಟು ನಡೆಯುತ್ತದೆ. ಕೆಲ ಫವೇಲಾಗಳು ಸಂಪೂರ್ಣವಾಗಿ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ಮಾಫಿಯಾ ಹಿಡಿತದಲ್ಲಿವೆ. ಸಂಕೀರ್ಣ ರಾಜಕೀಯ-ಆರ್ಥಿಕ ವ್ಯವಸ್ಥೆ ಸೃಷ್ಟಿಸಿರುವ ಡ್ರಗ್ ಡಾನ್‌ಗಳು ಫವೇಲಾಗಳ ಹಿಡಿತ ಪಡೆದಿದ್ದಾರೆ. ಕೊಲೆ, ಜಗಳ, ರಕ್ತಪಾತದ ಮೂಲಕ ‘ವ್ಯವಸ್ಥೆ’ ಕಾದುಕೊಂಡಿದ್ದಾರೆ. ಅಲ್ಲಿ ತೆರಿಗೆಯೂ ಇಲ್ಲ, ಲೈಸೆನ್ಸೂ ಇಲ್ಲ, ಸಬ್ಸಿಡಿಯೂ ಇಲ್ಲ, ಸೌಕರ್ಯವೂ ಇಲ್ಲ.

ಕೆಲವು ಫವೇಲಾಗಳು ಸರ್ಕಾರದ ‘ಪ್ಯಾಸಿಫೈಯಿಂಗ್ ಪೊಲೀಸ್ ಯುನಿಟ್’ನ ಸುಪರ್ದಿಯಲ್ಲಿವೆ. ಇಲ್ಲಿ ನಿಯೋಜಿಸಲ್ಪಡುವ ಪೊಲೀಸರು ವಿಶೇಷ ತರಬೇತಿ ಪಡೆದವರು. ಅಲ್ಲಿ ಕೆಲಸ ಮಾಡಿದ್ದಕ್ಕೆ ಅವರಿಗೆ ಬೋನಸ್ ಆಗಿ ತಿಂಗಳಿಗೆ ೧೫೦ ಅಮೆರಿಕನ್ ಡಾಲರ್ ಹೆಚ್ಚುವರಿ ಸಂಬಳ ಕೊಡಲಾಗುತ್ತದೆ! ಅಲ್ಲಿ ಪೊಲೀಸರ ಮುಖ್ಯ ಕೆಲಸ ಡ್ರಗ್ ಟ್ರಾಫಿಕಿಂಗ್ ತಡೆಯುವುದಲ್ಲ; ಬೀದಿಗಳನ್ನು ಶಸ್ತ್ರಸಜ್ಜಿತ ಗ್ಯಾಂಗುಗಳು ಆಳುವುದನ್ನು ತಡೆದು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವುದು!

ಅವು ವಿದ್ಯುತ್, ಶೌಚ ಮತ್ತಿತರ ನಗರ ವ್ಯವಸ್ಥೆಗಳಿರದ ಸ್ಥಳಗಳು. ಕಿರಿದಾದ ಬೀದಿಗಳು, ಒಂದರ ಮೇಲೊಂದು ಬೆಂಕಿಪೆಟ್ಟಿಗೆಯಂತೆ ಕಟ್ಟಿದ ಮನೆಗಳು. ಸುಣ್ಣಬಣ್ಣವಿಲ್ಲದ ಸುಟ್ಟ ಇಟ್ಟಿಗೆಯ ಗೋಡೆಗಳು. ನಾಕು ಇಟ್ಟಿಗೆಯಿಟ್ಟು ಸಿಮೆಂಟು ಮೆತ್ತಲು ಬಂದವರೆಲ್ಲ, ಜಾಗ ಕಂಡಲ್ಲೆಲ್ಲ ಕಟ್ಟಿ ಬಿಸಾಡಿದಂತಿರುವ ರಚನೆಗಳು. ಮನೆಗಳ ನಡುವೆ ಬೈಕಿರಲಿ, ಮನುಷ್ಯರು ಹೋಗಲೂ ಕಷ್ಟಪಡಬೇಕು, ಅಂಥ ಕಿಷ್ಕಿಂಧೆ. ಗೋಡೆಗಳಿಗೆಲ್ಲ ನೇತುಬಿದ್ದ ಕೇಬಲ್ಲು, ವೈರುಗಳು. ಆ ಅಸ್ತವ್ಯಸ್ತದಲ್ಲೆ ಬದುಕು ಕಟ್ಟಿಕೊಳ್ಳುವ, ಮನರಂಜನೆ ಪಡೆವ ಜನ! ಭೂಕುಸಿತ, ನೆರೆ, ಸಾಂಕ್ರಾಮಿಕ ರೋಗಗಳಂತಹ ಸಮಸ್ಯೆಗಳು ಹೆಚ್ಚಿರುವ ಫವೇಲಾಗಳ ಜೀವನಮಟ್ಟ ಸುಧಾರಿಸಲು ಸ್ಥಳೀಯ ಗುಂಪುಗಳು ರಚನೆಗೊಂಡು ಹೋರಾಡುತ್ತಲೆ ಇವೆ. ನೆಲದ ಒಡೆತನ, ಕುಡಿಯುವ ನೀರು, ವಿದ್ಯುತ್ ಪಡೆಯಲು ಪ್ರಯತ್ನಿಸಿ ಭಾಗಶಃ ಸಫಲವಾಗಿವೆ. ಶಾಲೆ, ಆಸ್ಪತ್ರೆಗಳು ತೆರೆಯಲ್ಪಟ್ಟಿವೆ.

ರಿಯೊ ಎಂಬ ಭವ್ಯ ನಗರಕ್ಕೆ ಫವೇಲಾಗಳು ಕಪ್ಪುಚುಕ್ಕೆಯೆಂದು ಆಳುವವರ ಭಾವನೆ. ಕೆಲವೆಡೆ ಅವು ಮತ್ತೆ ಬೆಳೆಯದಂತೆ ತಡೆಯಲು ನಗರಾಡಳಿತ ಸುತ್ತ ಎತ್ತರದ ಗೋಡೆ ಕಟ್ಟಿದೆ. ೭೦ರ ದಶಕದ ಮಿಲಿಟರಿ ಆಡಳಿತವು ಫವೇಲಾ ನಿರ್ಮೂಲನಾ ಕಾರ್ಯಕ್ರಮ ಹಾಕಿಕೊಂಡು ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿ ಬೇರೆ ಕಡೆ ಮನೆ ಕಟ್ಟಿಕೊಟ್ಟಿತು. ೨೦೧೪ರಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ ನಡೆಯಿತು. ೨೦೧೬ರಲ್ಲಿ ಒಲಿಂಪಿಕ್ಸ್. ವಿಶ್ವದ ಗಮನ ಸೆಳೆವ ಅಂಥ ಸಂದರ್ಭಗಳಲ್ಲಿ ಸುರಕ್ಷತೆ, ಸ್ವಚ್ಛತೆ, ಶಿಸ್ತಿಗೆ ಪ್ರಾಮುಖ್ಯತೆ ಹೆಚ್ಚಿರುತ್ತದೆ. ಎಂದೇ ಫವೇಲಾಗಳನ್ನು ನಗರದ ಭಾಗವಾಗಿ ಪರಿಗಣಿಸಿ ಸುರಕ್ಷೆಗೆ ಪೊಲೀಸ್ ವ್ಯವಸ್ಥೆ, ಮತದಾನ, ಸೌಲಭ್ಯ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಫವೇಲಾಗಳ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡಿ ಜೀವನ ಪರಿಸ್ಥಿತಿ ಸುಧಾರಿಸುವಂತಹ ಕ್ರಮಗಳನ್ನು ನಗರ ಆಡಳಿತವು ಕೈಗೊಳ್ಳುತ್ತ ಬಂದಿದೆ. ಬಿಷಪ್, ಚರ್ಚು, ಮಿಲಿಟರಿ, ನಗರಾಡಳಿತ ಎಲ್ಲರೂ ಸೇರಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಯೋಜನೆಯನ್ನು ನಿಭಾಯಿಸುವಲ್ಲಿನ ಅಸಮರ್ಪಕತೆಯಿಂದ ಫವೇಲಿಗರ ಪುನರ್ವಸತಿಗೆಂದು ಸೃಷ್ಟಿಯಾದ ‘ದೇವರ ನಗರ’ - ಸಿದಾದೆ ಜಿ ಜ್ಯೂಸ್ (ಹರಿಜನ ಕಾಲನಿ?) ಗಳು ಹೊಸ ಫವೇಲಾಗಳಾಗಿ ರೂಪುಗೊಂಡವು. ತೆರವು, ಪುನರ್ವಸತಿ ಕಾರ್ಯಾಚರಣೆಗಳು ಹಿಂಸೆಯನ್ನು ಪ್ರಚೋದಿಸಿ ಹೊಸಹೊಸ ಗ್ಯಾಂಗ್‌ಗಳು ಹುಟ್ಟಿಕೊಂಡವು.

ವರ್ಷಕ್ಕೆ ೨೮ ಲಕ್ಷ ಪ್ರವಾಸಿಗಳು ಬರುವ ನಗರಕ್ಕೆ ನಗರವಾಸಿಗಿಂತ ಪ್ರವಾಸಿ ಮುಖ್ಯ! ವರ್ಷಕ್ಕೆ ೬,೦೦೦ ಕೊಲೆಗಳಾಗುವ ಈ ನಗರ ಸುರಕ್ಷಿತವಲ್ಲವೆಂದು ಪ್ರವಾಸಿಗೆ ಅನಿಸಿದರೆ ರಿಯೊಗೆ ಬಹು ದೊಡ್ಡ ನಷ್ಟ. ಅದಕ್ಕೇ ಫವೇಲಾಗಳನ್ನು ಅಂತರ್ಗತಗೊಳಿಸಿ, ನಗರದ ಭಾಗವಾಗಿಸುವ, ಅದನ್ನು ಸುಸ್ಥಿತಿಯಲ್ಲಿಡುವ ನಾನಾ ಯತ್ನ, ಯೋಜನೆಗಳು ನಡೆಯುತ್ತಲೇ ಇವೆ.

ರಿಯೊ ಟೂರಿಸಂನಲ್ಲಿ ಸ್ಲಂ ಟೂರಿಸಂ ಕೂಡ ಒಂದು ಭಾಗವಾಗಿದೆ!

ಕ್ರೈಸ್ಟ್ ದ ರೆಡೀಮರ್ (ಕ್ರಿಸ್ತು ರಿದ್ಯೆಂತೊರ್) 



ರಿಯೊ ಈಗ ಪ್ರಸಿದ್ಧವಾಗಿರುವುದು ೨೩೦೦ ಅಡಿ ಎತ್ತರದ ಕೊರ್ಕೊವಾದೊ ಬೆಟ್ಟದ ತುತ್ತತುದಿಯ ಮೇಲಿರುವ ಕ್ರಿಸ್ತನ ಬೃಹತ್ ಪ್ರತಿಮೆ ‘ಕ್ರೈಸ್ಟ್ ದ ರೆಡೀಮರ್’ ನಿಂದ. ವಿಶ್ವದ ಆಧುನಿಕ ಏಳು ಅದ್ಭುತಗಳಲ್ಲಿ ಒಂದು ಎಂದು ಇದನ್ನು ಹೆಸರಿಸಲಾಗಿದೆ. ಟಿಜುಕಾ ಅರಣ್ಯದಿಂದ ಆವೃತವಾದ ಬೆಟ್ಟದ ತುದಿಯಲ್ಲಿ ತನ್ನೆರಡೂ ಕೈಗಳನ್ನು ತೆರೆದು ಕ್ರಿಸ್ತ ಕೊಂಚ ಕೆಳ ನೋಡುತ್ತ ರಿಯೊ ನಗರವನ್ನು ಹರಸುತ್ತಿರುವಂತೆ ಕಾಣುತ್ತದೆ. ವಿಶ್ವಾದ್ಯಂತ ಹರಡಿಕೊಂಡ ಕ್ರೈಸ್ತಮತದ ಕುರುಹಾಗಿ ‘ಜಗದೋದ್ಧಾರಕ ಕ್ರಿಸ್ತ’ ಎಂಬರ್ಥದ ಹೆಸರಿನ ಈ ಪ್ರತಿಮೆಯನ್ನು ೧೦೦ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.

೧೯೨೨-೧೯೩೧ರ ನಡುವೆ ಫ್ರೆಂಚ್ ಶಿಲ್ಪಿಯಿಂದ ನಿರ್ಮಾಣಗೊಂಡ ೩೦ ಮೀಟರ್ ಎತ್ತರದ ಈ ಪ್ರತಿಮೆ ಆಧುನಿಕ ತಂತ್ರಜ್ಞಾನ, ಪಾರಂಪರಿಕ ಕಲೆ ಎರಡನ್ನೂ ಢಾಳಾಗಿ ಮಿಶ್ರ ಮಾಡುವ ಆರ್ಟ್ ಡೆಕೊ ಪ್ರಕಾರದಲ್ಲಿ ರಚಿತವಾದದ್ದು. ಇದು ಶಿಲಾ ವಿಗ್ರಹವಲ್ಲ. ಸಿಮೆಂಟ್ ಕಾಂಕ್ರೀಟ್ ಹಾಗೂ ಅಭ್ರಕ (ಕಾಗೆಬಂಗಾರ ಅಥವಾ ಸೋಪ್‌ಸ್ಟೋನ್)ದಿಂದ ತಯಾರಾಗಿದ್ದು. ಕ್ರಿಸ್ತನ ಮುಖವನ್ನು ಪಾಲ್ ಲಿಂಡೋವ್ಸ್ಕಿ ಎಂಬ ಶಿಲ್ಪಿ ಪ್ರತ್ಯೇಕವಾಗಿ ರೂಪಿಸಿದ. ಅದರ ಭಾಗಗಳನ್ನು ಬೇರೆಬೇರೆಯಾಗಿ ನಿರ್ಮಿಸಿ ಬ್ರೆಜಿಲಿಗೆ ತಂದು ಸೇರಿಸಲಾಯಿತು. ೩೦ ಮೀ. ಎತ್ತರದ ಮೂರ್ತಿ ೮ ಮೀಟರ್ ಕಟ್ಟೆಯ ಮೇಲೆ ನಿಂತಿದೆ.

ಬ್ರೆಜಿಲಿನ ಕ್ರೈಸ್ತ ಧರ್ಮಗುರುಗಳಿಗೆ ೧೮೫೦ರ ಸುಮಾರಿಗೆ ಪೋರ್ಚುಗಲ್ಲಿನ ರಾಜಕುಮಾರಿ ಇಸಬೆಲ್ಲಾಳ ಗೌರವಾರ್ಥ ರಿಯೊ ನಗರದ ಕೊರ್ಕೊವಾದೊ ಬೆಟ್ಟದ ಮೇಲೆ ಕ್ರೈಸ್ತ ಸ್ಮಾರಕವೊಂದನ್ನು ನಿಲಿಸುವ ಹಂಬಲವಾಯಿತು. ಆ ಕುರಿತು ಆಳುವವರಿಗೆ ಪ್ರಸ್ತಾಪ ಸಲ್ಲಿಸಿದ್ದರೂ ಅದು ಊರ್ಜಿತವಾಗಲಿಲ್ಲ. ಕೊನೆಗೆ ೧೯೨೦ರ ಹೊತ್ತಿಗೆ ‘ಬ್ರೆಜಿಲ್ ಸಮಾಜದಲ್ಲಿ ದೇವನಿಲ್ಲದ ಸ್ಥಿತಿ ನಿರ್ಮಾಣವಾಗತೊಡಗಿದೆ’ ಎಂದು ಭಯಗೊಂಡ ರಿಯೊ ಕ್ಯಾಥೊಲಿಕ್ ಸರ್ಕಲ್ ಸಹಿ ಮತ್ತು ಹಣ ಸಂಗ್ರಹ ಅಭಿಯಾನ ಕೈಗೊಂಡು ಸ್ಮಾರಕ ನಿರ್ಮಿಸುವ ಒತ್ತಾಯ ತಂದಿತು. ವಿಶ್ವದ ಸಂಕೇತವಾಗಿ ಕಟ್ಟೆ, ವಿಶ್ವಶಾಂತಿಯ ಮತ್ತು ಶಿಲುಬೆಯ ಕುರುಹಾಗಿ ತೆರೆದ ಬಾಹುಗಳ ಕ್ರಿಸ್ತನನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇವತ್ತಿನ ಲೆಕ್ಕದಲ್ಲಿ ೩೩ ಲಕ್ಷ ಅಮೆರಿಕನ್ ಡಾಲರುಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರತಿಮೆಯ ಹೊರಕವಚವನ್ನು ಅಭ್ರಕದಿಂದ ಮಾಡಲಾಗಿದೆ. ೨೦೦೬ರಲ್ಲಿ ಬ್ರೆಜಿಲಿನ ಸಂತಳಾದ ಅವರ್ ಲೇಡಿ ಆಫ್ ಅಪಾರಿಷನ್ ಚರ್ಚ್ ಅನ್ನು ಪ್ರತಿಮೆಯ ಕೆಳಗೆ ನಿರ್ಮಿಸಿದ್ದು ಈಗಲ್ಲಿ ವಿವಾಹ ಮತ್ತಿತರ ಕ್ರೈಸ್ತವಿಧಿಗಳು ನೆರವೇರುತ್ತವೆ.

ಗಾಳಿಮಳೆ, ಸಮುದ್ರ ವಾತಾವರಣಕ್ಕೆ ನಿರಂತರ ಮುಖವೊಡ್ಡಿ ನಿಂತ ಪ್ರತಿಮೆಯನ್ನು ಕಾಲಕಾಲಕ್ಕೆ ಸರಿಪಡಿಸುತ್ತ ಇರಬೇಕಾಗುತ್ತದೆ. ಈ ೧೦೦ ವರ್ಷಗಳಲ್ಲಿ ರಿಪೇರಿಗೊಳ್ಳುತ್ತ ಹೋದಂತೆ ಮೊದಲಿನ ತಿಳಿಬಿಳಿಯ ಶುದ್ಧ ಅಭ್ರಕ ಸಿಗದ ಕಾರಣ ಅದರ ಬಣ್ಣ ದಟ್ಟೈಸುತ್ತ ಹೋಗಿದೆ. ೨೦೦೮ರಲ್ಲಿ ಗುಡುಗು ಸಿಡಿಲಿನ ಮಳೆಗೆ ಮೂರ್ತಿಯ ಹುಬ್ಬು, ತಲೆ ಮತ್ತು ಬೆರಳು ಹಾನಿಗೊಂಡವು. ಅದನ್ನು ೨೦೧೦ರಲ್ಲಿ ವಿಸ್ತೃತವಾಗಿ ರಿಪೇರಿ ಮಾಡಿದರು. ಕಾಂಕ್ರೀಟು, ಅಭ್ರಕ ಲೇಪ, ಒಳಗಿನ ಕಬ್ಬಿಣವೂ ಸೇರಿದಂತೆ ಎಲ್ಲವನ್ನು ನವೀಕರಣಗೊಳಿಸಲಾಯ್ತು. ಶಿಲೀಂಧ್ರ ಬೆಳೆಯದಂತೆ ವಾಟರ್ ಪ್ರೂಫ್ ಮಾಡಲಾಯಿತು. ಆ ವೇಳೆ ಯಾರೋ ಅದರ ಕೈಮೇಲೆ ಬಣ್ಣ ಎರಚಿ ವಿರೂಪಗೊಳಿಸಲು ನೋಡಿದರು. ೨೦೧೪ರಲ್ಲಿ ಸಿಡಿಲು ಬಡಿದು ಬಲಗೈಯ ಬೆರಳು ಬಿದ್ದು ಹೋಯಿತು. ಮೂರ್ತಿಯ ತಲೆ ಹಾಗೂ ಹಸ್ತಗಳ ಮೇಲೆ ಸಿಡಿಲು ನಿರೋಧಕ ಸರಳುಗಳನ್ನಿಟ್ಟು ಸರಿಪಡಿಸಲಾಯಿತು.

ವಿಶ್ವಶಾಂತಿ ಬೋಧಿಸಿದ ಏಸುವಿಗೂ ಬಡಿವ ಸಿಡಿಲು! ಕಾಲದ ಮಹಿಮೆ, ನೆಲದ ಮಹಿಮೆ ಇದೇ ಏನು?!

‘ಅಲ್ಲಿದ್ದಾನೆ, ನಮಗಾಗಿ..’



ಕೊರ್ಕೊವಾದೊ ಬೆಟ್ಟದ ಮೇಲೆ ಹೋಗಲು ರಸ್ತೆಯಿಲ್ಲ. ಒಂದು ಜೋಡಿ ರೈಲು ಹಳಿಯಿರುವ ಕಿರಿದಾದ ರೈಲು ಮಾರ್ಗದಲ್ಲೆ ಪ್ರಯಾಣಿಸಬೇಕು. ಆಚೀಚಿನ ದಟ್ಟ ಕಾಡುಗಳ ನಡುವೆ ಪುಟ್ಟ ರೈಲು ಬೆಟ್ಟ ಹತ್ತುತ್ತದೆ. ಮೇಲಕ್ಕೇ ಕಣ್ಣು ಕೀಲಿಸಿದ್ದರೂ ಎಲ್ಲೂ ಕ್ರಿಸ್ತ ಕಾಣಲಿಲ್ಲ. ರೈಲಿಳಿದರೆ ಮತ್ತೂ ದಟ್ಟ ಕಾಡು. ಕೊನೆಗೆ ಒಂದು ಲಿಫ್ಟಿನೆದುರು ನಮ್ಮನ್ನು ಸಾಲಾಗಿ ನಿಲಿಸಿದರು. ಅಷ್ಟಷ್ಟೆ ಜನರ ಮೇಲೇರಿಸಿದರು. ಲಿಫ್ಟಿನಿಂದ ಹೊರಬಂದು ನೋಡಿದರೆ,

ಅರೆಅರೆಅರೆ, ಎಂಥ ಸುಂದರ ದೃಶ್ಯ! ತಲೆ ಮೇಲೆತ್ತಿದರೆ ಕಾಣುತ್ತಿದ್ದಾನೆ ತಲೆಬಾಗಿ ನಿಂತಿರುವ ಕ್ರಿಸ್ತ.

ಮೆಟ್ಟಿಲೇರಿ ಮೂರ್ತಿಯೆದುರು ನಿಂತು ಪೂರ ಕುತ್ತಿಗೆ ಹಿಂಬಾಗಿಸಿ ಕತ್ತು ಮೇಲೆತ್ತಿದರೆ ಆಗಸದಲ್ಲಿ ಹೊಳೆವ ಸೂರ್ಯನೊಟ್ಟಿಗೆ ಕ್ರಿಸ್ತನ ಮುಖ ಕಾಣಿಸಿತು. ನಮ್ಮ ಗೊಮಟೇಶ್ವರನಿಗಿಂತ ಎರಡು ಪಟ್ಟು ಎತ್ತರ ಇರುವ ಮೂರ್ತಿ. ತನ್ನ ಪಾದದ ಬುಡದಲ್ಲಿ ಗಿಜಿಗಿಜಿ ಇರುವೆಯಂತೆ ಹರಿವ ಜನ ಎಲ್ಲಿ ಕಾಲಡಿ ನೊಂದಾರೊ ಎಂದು ಪೊರೆವಂತೆ ಕೈಚಾಚಿ ನಿಂತ ಶಾಂತ ಮುಖಮುದ್ರೆಯ ಮೂರ್ತಿ.

ಪರಮ ಕರುಣಾಳು ಕ್ರಿಸ್ತ. ಬಡವರಲ್ಲಿ ಬಡವನಾಗಿ, ನೋವಿರುವವರಲ್ಲಿ ನೋವುಣ್ಣುವವನಾಗಿ, ಈ ಜಗದ ಕಟ್ಟಕಡೆಯವರ‍್ಯಾರೋ ಅವರೊಡನೆ ಅವರಿಗಾಗಿಯೇ ಬದುಕಿದ ಕ್ರಿಸ್ತ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಹಾಡು ಎದೆಯೊಳಗಿನಿಂದೆದ್ದು ಬಂತು.

‘ನನ್ನ ಎಲುಬಿನ ಹಂದರದೊಳಗೊಂದು ಇಗರ್ಜಿಯಿದೆ.
ಅಲ್ಲಿದೆ ಕಶೇರು, ಹೆಗಲ ಮೂಳೆಗಳಿಂದಾದ ಶಿಲುಬೆ.
ಅಲ್ಲಿದ್ದಾನೆ ನಮಗಾಗಿ ಮೊಳೆಯ ಜಡಿಸಿಕೊಂಡು 
ನಿತ್ಯ ಮರುಗುವ ಏಸು ಕ್ರಿಸ್ತ..’

ಧರ್ಮ, ಅನುಯಾಯಿತ್ವ, ಆಸ್ತಿಕತೆ-ನಾಸ್ತಿಕತೆಗಳ ಹೊರತಾಗಿ ಆ ಎತ್ತರದಲ್ಲಿ ಕತ್ತೆತ್ತಿ ದಿಟ್ಟಿಸಿದಾಗ ಏನೋ ಒಂದು ಒಳಗೆಲ್ಲ ತುಂಬಿಕೊಂಡಂತಾಯಿತು. ಅದು ಭಕ್ತಿ-ನೆಮ್ಮದಿ-ಶಾಂತಿ ಎಲ್ಲವನ್ನೂ ಒಳಗೊಂಡಂತಿದ್ದ ಕಳವಳವಿಲ್ಲದ ನಿರ್ಲಿಪ್ತಿ. ಚಣಹೊತ್ತು ಮೈಮರೆಯುವಂತೆ ಮಾಡುವ ಪರವಶತೆ.

ಅದೋ ಅಲ್ಲಿ ನೀರ ನಡುವೆ ಲಂಗೋಟಿಯಂತಹ ಏರ್‌ಸ್ಟ್ರಿಪ್‌ನಿಂದ ವಿಮಾನ ಮೇಲೇರುತ್ತಿದೆ. ಇದೋ ಇಲ್ಲಿ ಸಾಲುಸಾಲು ಕಡಲ ಹಕ್ಕಿಗಳು ಕ್ರಿಸ್ತನ ಪ್ರತಿಮೆಗಿಂತ ಮೇಲೆ ಹಾರುತ್ತಿವೆ. ಈಗಷ್ಟೆ ನೆತ್ತಿ ಸುಟ್ಟಿದ್ದ ಸೂರ್ಯ ಅಂಟಾರ್ಕ್ಟಿಕಾ ಕಡೆಯಿಂದ ಬೀಸತೊಡಗಿದ ಶೀತಗಾಳಿಯ ಸೆಳವಿಗೆ ಸಿಕ್ಕನೊ ಎಂಬಂತೆ ಮೋಡದ ಹಿಂದೆ ಮರೆಯಾಗತೊಡಗಿದ್ದಾನೆ. ಈ ಎರಡು ಸಾವಿರ ವರುಷಗಳಲ್ಲಿ ಎಷ್ಟು ಕೋಟಿ ಜೀವಗಳು ಈ ಇವನ ಕರುಣೆಯ ದಿಟ್ಟಿಯಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡಿವೆ? ಎಷ್ಟು ಕೋಟಿ ಸೋತ ಜೀವಗಳು ಅವನ ನುಡಿಯಲಿ ಬದುಕಿನ ಬೆಳಕು ಹುಡುಕಿಕೊಂಡಿವೆ?

ಕಡಲೇ, ಹಕ್ಕಿಯೇ, ಶೀತಗಾಳಿಯೇ, ಪರವಶಕೆ ನನ್ನನೊಡ್ಡಿದ ದಿವ್ಯವೇ, 
ಬಿಟ್ಟುಹೋದೇವೇ ಈ ನೆಲವ ನಾವನುಭವಿಸಿದ ನೆಮ್ಮದಿ, ಚೆಲುವಿನೊಂದಿಗೆ? 
ನಮಗಾಗಿ ಮೊಳೆಯ ಜಡಿಸಿಕೊಂಡು ನಿತ್ಯ ಮರುಗುವ ಏಸು ಕ್ರಿಸ್ತನೇ, 
ಕರುಣವಾಗಿ ನೆಲೆಗೊಳಲಾರೆಯಾ ಮನುಜರ ಎಲುಬಿನ ಹಂದರದೊಳಗೆ? 








No comments:

Post a Comment