Tuesday 11 October 2016

ಆನಂದ್ ತೇಲ್ತುಂಬ್ಡೆ ಸಂದರ್ಶನ:


‘ಯಾವುದೇ ಕ್ರಾಂತಿಕಾರಕ ಚಳುವಳಿ ಜಾತಿ ಆಧರಿತವಾಗಿ ನಡೆಯಲು ಸಾಧ್ಯವಿಲ್ಲ..’

ಸಂದರ್ಶಕರು: ಎಸ್. ಆನಂದ್
ಅನು: ಡಾ. ಎಚ್. ಎಸ್. ಅನುಪಮಾ



೨೦೦೮ರಲ್ಲಿ ಚಿಂತಕ, ಮಾನವ ಹಕ್ಕು ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ ಖೈರ್ಲಾಂಜಿ ದೌರ್ಜನ್ಯ ಮತ್ತದರ ನಂತರದ ಆಗುಹೋಗುಗಳನ್ನು, ನವಯಾನ ಪ್ರಕಾಶನ ಪ್ರಕಟಿಸಿದ ತಮ್ಮ ಪುಸ್ತಕ, ‘ಪರ್ಸಿಸ್ಟೆನ್ಸ್ ಆಫ್ ಕ್ಯಾಸ್ಟ್: ದ ಖೈರ್ಲಾಂಜಿ ಮರ್ಡರ‍್ಸ್ ಅಂಡ್ ಇಂಡಿಯಾಸ್ ಹಿಡನ್ ಅಪಾರ್ಥೀಡ್’ನಲ್ಲಿ ವಿಶ್ಲೇಷಿಸಿದ್ದಾರೆ. ಅವರ ಪುಸ್ತಕದ ಪ್ರಕಾಶಕರಾದ ಎಸ್. ಆನಂದ್ ಖೈರ್ಲಾಂಜಿ ಸಂಭವಿಸಿದ ೧೦ ವರ್ಷಗಳ ಹೊತ್ತಿಗೆ ತೇಲ್ತುಂಬ್ಡೆ ಅವರೊಂದಿಗೆ ವಿಸ್ತೃತ ಇ-ಮೇಲ್ ಸಂದರ್ಶನ, ಚರ್ಚೆ, ಮಾತುಕತೆಯನ್ನು ಓದುಗರ ವೇದಿಕೆಗಳೊಂದಿಗೆ ನಡೆಸಿದರು. ದಲಿತರ ಮೇಲೆ ಮುಂದುವರೆಯುತ್ತಿರುವ ದೌರ್ಜನ್ಯ, ಊನಾ ನಂತರದ ಪರಿಸ್ಥಿತಿ, ಭಾರತದ ಸಾರ್ವಜನಿಕ ವಲಯದಲ್ಲಿ ಒಳಗೊಳ್ಳುವಿಕೆ ಮತ್ತು ಜನ ವೈವಿಧ್ಯ ಕಣ್ಮರೆಯಾಗುತ್ತಿರುವುದು, ಮೀಸಲಾತಿಯ ಮಿತಿಗಳು, ಹಿಂದುತ್ವ ಮತ್ತು ನವ ಉದಾರವಾದದ ದಿನಗಳಲ್ಲಿ ದಲಿತ ಸಮುದಾಯದ ಭವಿಷ್ಯ - ಈ ಎಲ್ಲದರ ಕುರಿತು ಅವರು ಮಾತನಾಡಿದರು. ಅಷ್ಟೇ ಅಲ್ಲ, ಸಂಸದೀಯ ಹತಾರಗಳು ದಲಿತರನ್ನು ನಿರಂತರ ಕೈಬಿಟ್ಟು ಸೋಲಿಗೀಡುಮಾಡಿರುವಾಗ ಆ ಸಮುದಾಯ ಅಂಬೇಡ್ಕರ್ ಪ್ರಣೀತ ಸಂಸದೀಯ ಹೋರಾಟ, ಪ್ರಜಾತಾಂತ್ರಿಕ ಚಳುವಳಿಗಳ ಮಾರ್ಗಗಳನ್ನು ನೆಚ್ಚಿಕೊಳ್ಳುವ ಕುರಿತು, ಅದರ ಮಿತಿಗಳ ಕುರಿತೂ ಮುಕ್ತವಾಗಿ ಮಾತನಾಡಿದರು.

ಖೈರ್ಲಾಂಜಿ ಹತ್ಯಾಕಾಂಡ ಸಂಭವಿಸಿ ಹತ್ತು ವರ್ಷಗಳಾದವು. ನೀವೊಂದು ಪುಸ್ತಕವನ್ನೂ ಬರೆದಿರಿ. ಆದರೆ ದೌರ್ಜನ್ಯ ಮತ್ತು ಹತ್ಯಾಕಾಂಡಗಳು ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿ ನ್ಯಾಯಾಲಯದಿಂದಲೂ ನ್ಯಾಯ ಎನ್ನುವುದು ಎಂದೋ ಪಲಾಯನ ಮಾಡಿದೆ. ಏಕೆ?



ಹೇಗೆ ನೋಡಿದರೂ ಖೈರ್ಲಾಂಜಿ ಎನ್ನುವುದು ದಿಗ್ಭ್ರಮೆಗೊಳಿಸುವ ಒಂದು ಘಟನೆ. ಆದರೆ ದಲಿತರ ಮೇಲಿನ ದೌರ್ಜನ್ಯಗಳ ದೃಷ್ಟಿಯಲ್ಲಿ ನೋಡಿದರೆ ನಾನು ಆ ಪುಸ್ತಕದಲ್ಲಿ ಚರ್ಚಿಸಿರುವಂತೆ, ಅದರಲ್ಲಿ ವಿಶೇಷವಾದದ್ದು ಏನೂ ಇಲ್ಲ. ಖೈರ್ಲಾಂಜಿಗಿಂತ ಮುಂಚೆ ನಡೆದ ಕೆಲವು ಕುಖ್ಯಾತ ಘಟನೆಗಳನ್ನು ನೆನಪು ಮಾಡಿಕೊಳ್ಳುವುದಾದರೆ - ೧೯೬೮ರ ಕಿಲವೇನ್ಮಣಿಯಿಂದ ೧೯೮೫ರ ಕರಂಚೇಡುವಿನ ತನಕ, ೧೯೯೧ರ ಸುಂಡೂರಿನಿಂದ ೨೦೦೬ರ ಝಝರ್ ತನಕ - ಸಾವಿರಾರು ಭೀಕರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಪ್ರತಿಯೊಂದೂ ಹಿಂಸಾನಂದ ಪಡೆವ ವಿಕೃತ ಕ್ರೌರ್ಯ ಮತ್ತು ಪಶುತ್ವಗಳ ಮಿಶ್ರಣದಿಂದ ಸಂಭವಿಸಿವೆ.

ದಲಿತ ಸಮುದಾಯಕ್ಕೆ ‘ಬುದ್ಧಿ ಕಲಿಸಲು’ ಕೆಲವೇ ಕೆಲವು ದಲಿತರ ಮೇಲೆ ಸವರ್ಣೀಯ ಹಿಂದೂಗಳು ನಡೆಸುವ ಮೇಲೆ ಉಲ್ಲೇಖಿಸಿದಂತಹ ದೌರ್ಜನ್ಯಗಳು ಸಾಮಾನ್ಯ ತಿಳುವಳಿಕೆಗೆ ವಿರುದ್ಧವಾಗಿ ಸ್ವಾತಂತ್ರ್ಯೋತ್ತರ ಭಾರತದ ವಿಶೇಷವಾಗಿವೆ. ಆಳುವ ವರ್ಗ ರೂಪಿಸಿದ ನಿರ್ದಿಷ್ಟ ರಾಜಕೀಯ ಆರ್ಥಿಕತೆಯ ಪರಿಣಾಮ ಅವು ಸಂಭವಿಸಿವೆ. ಜಾತಿ ವಿರುದ್ಧ ಮಾತನಾಡುವ ಬಹುಪಾಲು ಜನರು ದೌರ್ಜನ್ಯಗಳನ್ನು ಈ ವಿಶ್ಲೇಷಣೆಯ ಹಿನ್ನೆಲೆಯಿಂದ ನೋಡುವುದಿಲ್ಲ. ನಿರರ್ಗಳವಾಗಿ ಹಳೆಯ ಮತ್ತು ಅಮೂರ್ತವಾದ ಮನು, ಮನುಧರ್ಮದ ವಿರುದ್ಧ ಸುಲಭದ ಭಾಷಣಗಳನ್ನು, ಘೋಷಣೆಗಳನ್ನು ಹರಿಯಬಿಡುತ್ತಾರೆ.

ಖೈರ್ಲಾಂಜಿ ಕುರಿತು ಪುಸ್ತಕ ಬರೆಯಲು ನನ್ನ ಪ್ರೇರೇಪಿಸಿದ್ದು ಆ ಹತ್ಯಾಕಾಂಡ ನಡೆಯಲು ಕಾರಣವಾದ ವಿಶಿಷ್ಟ ಸಂಗತಿಗಳ ಮಿಶ್ರಣ. ಜಾತೀಯತೆಯ ಘನೀಕೃತ ಸ್ವರೂಪವಾದ ಒಂದು ದೌರ್ಜನ್ಯ ಹೇಗೆ ಸಂಭವಿಸುತ್ತದೆ ಎನ್ನುವುದನ್ನು ನಾನು ವಿಶ್ಲೇಷಿಸಲು ಅದು ಒಂದು ಚೌಕಟ್ಟನ್ನು ಒದಗಿಸಿತು. ಇದು ಸಮಕಾಲೀನ ಜಾತಿ ವಾಸ್ತವವನ್ನು ನಾವು ಅರಿಯಲು ಹಾಗೂ ದಲಿತ ಅಸ್ತಿತ್ವಕ್ಕೆ ಅದು ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಲು ಸಹಾಯ ಮಾಡುತ್ತದೆ.

ಖೈರ್ಲಾಂಜಿಯ ಸುದ್ದಿ ಹರಡಲು ಹತ್ತಿರ ಹತ್ತಿರ ಒಂದು ತಿಂಗಳು ತೆಗೆದುಕೊಂಡರೂ, ಕೂಡಲೇ ಅದು ಹಿಂದೆಂದೂ ಇರದಷ್ಟು ಬೃಹತ್ ಪ್ರಮಾಣದಲ್ಲಿ ದಲಿತ ಸಮುದಾಯದ ಪ್ರತಿಭಟನೆ ನಡೆಯಲು ಕಾರಣವಾಯಿತು. ಸರ್ಕಾರ ಮತ್ತು ನಾಗರಿಕ ಸಮಾಜಕ್ಕೆ ತಕ್ಕುದಾದ ಕಳಂಕವನ್ನು ಅವರ ಮೇಲೆ ಹೇರಿಸಿತು. ಆದರೆ ಪಶ್ಚಾತ್ತಾಪವಿಲ್ಲದ ಸರ್ಕಾರ ಮತ್ತು ಜಾತಿಭ್ರಷ್ಟ ನಾಗರಿಕ ಸಮಾಜಗಳು ಇಷ್ಟರಿಂದ ಬುದ್ಧಿ ಕಲಿಯುತ್ತವೆ ಎಂದು ನಿರೀಕ್ಷಿಸುವುದು ಭೋಳೇತನವಾಗುತ್ತದೆ. ಅದಕ್ಕೆ ವಿರುದ್ಧವಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಸಾಕ್ಷ್ಯಾಧಾರಗಳು, ಅಂಕಿಅಂಶಗಳು ತೋರಿಸುವಂತೆ ಮಹಾರಾಷ್ಟ್ರ ಮತ್ತು ಭಾರತದಾದ್ಯಂತ ಖೈರ್ಲಾಂಜಿ ನಂತರ ದೌರ್ಜನ್ಯಗಳು ಹೆಚ್ಚುತ್ತ ಹೋಗಿವೆ.

೨೦೦೬ರಲ್ಲಿ ೨೭,೦೭೦ ದೌರ್ಜನ್ಯಗಳು ಸಂಭವಿಸಿದ್ದರೆ, ೨೦೧೪ರಲ್ಲಿ ೪೭,೦೬೪ ದೌರ್ಜನ್ಯಗಳು ಸಂಭವಿಸಿ ೭೪% ಹೆಚ್ಚಳ ಕಂಡಿದೆ. ಇವು ದಾಖಲಾದ ಪ್ರಕರಣಗಳು ಮಾತ್ರ. ಮಹಾರಾಷ್ಟ್ರದಲ್ಲಿ ಈ ಏರಿಕೆ ಇನ್ನೂ ಹೆಚ್ಚು - ೮೬%. ಘನ ಅಪರಾಧಗಳಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಏರಿಕೆ ಇನ್ನೂ ಹೆಚ್ಚು - ೧೦೫%. ಈ ಸಂಖ್ಯೆಗಳು ಆಗಿರುವ ದೌರ್ಜನ್ಯಕ್ಕಿಂತ ಗಮನಾರ್ಹವಾಗಿ ಸಣ್ಣವು. ಏಕೆಂದರೆ ದೌರ್ಜನ್ಯಕ್ಕೊಳಗಾದ ದಲಿತನಿಗೆ ಪೊಲೀಸ್ ಸ್ಟೇಷನ್ ತಲುಪುವುದು ಹಾಗೂ ಎಫ್‌ಐಆರ್ ದಾಖಲಿಸುವುದು ಎಂದರೆ ಎಂತ ಸಾಹಸ ಎಂದು ಯಾರಾದರೂ ಊಹಿಸಬಹುದು.

ಖೈರ್ಲಾಂಜಿ ನಂತರ ಪಾಟ್ನಾ ಉಚ್ಛ ನ್ಯಾಯಾಲಯದಿಂದ ಸರಣಿ ತೀರ್ಪುಗಳು ಬಂದವು. ಬಿಹಾರದಲ್ಲಿ ೧೯೯೦ರಲ್ಲಿ ಡಜನುಗಟ್ಟಲೆ ದಲಿತ ದೌರ್ಜನ್ಯ, ಕೊಲೆ ಎಸಗಿದ ಕುಖ್ಯಾತ ರಣವೀರ ಸೇನೆಯ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಲಾಯಿತು. ಅದೇರೀತಿ ಜುಲೈ ೧೭, ೧೯೮೭ರಲ್ಲಿ ಆಂಧ್ರದ ಕರಂಚೇಡುವಿನಲ್ಲಿ ನಡೆದ ಆರು ದಲಿತರ ಹತ್ಯೆಯ ೧೫೯ ಆರೋಪಿಗಳಿಗೆ ಒಂಗೋಲ್ ಟ್ರಯಲ್ ಕೋರ್ಟು ನೀಡಿದ ಶಿಕ್ಷೆಯನ್ನು ಆಂಧ್ರ ಹೈಕೋರ್ಟು ಜೀವಾವಧಿ ಶಿಕ್ಷೆಗೆ ಇಳಿಸಿತು. ಖೈರ್ಲಾಂಜಿಯ ನಂತರ ಅಪರಾಧ ಸಾಬೀತುಗೊಂಡಿರುವ ಪ್ರಮಾಣ ಖಂಡಿತ ಹೆಚ್ಚಾಗಿದೆ. ಆದರೆ ಇದು ದಾರಿ ತಪ್ಪಿಸುವಂತಿದೆ. ಅಪರಾಧ ಸಾಬೀತು ಪ್ರಮಾಣ ಐಪಿಸಿಯ ಇತರೆ ಸೆಕ್ಷನ್ನುಗಳಡಿ ಆಗುವ ಅಪರಾಧ ಸಾಬೀತು ಪ್ರಮಾಣಕ್ಕಿಂತ ಬಹಳ ಕಡಿಮೆಯಿದೆ. ಮತ್ತು ಈ ಮೊತ್ತದಲ್ಲಿ ಘನ ಅಪರಾಧಗಳಾದ ಕೊಲೆ ಮತ್ತು ಅತ್ಯಾಚಾರದ ಅಪರಾಧ ಸಾಬೀತು ಆಗಿರುವುದೂ ಸೇರಿಕೊಂಡಿದೆ.

ಇದನ್ನು ಹೇಗೆ ವಿವರಿಸುವಿರಿ?

ಮೊದಲಿಗೆ, ನವ ಉದಾರವಾದ ದೃಷ್ಟಿಕೋನವು ಗ್ರಾಮೀಣ ಆಗುಹೋಗುಗಳನ್ನು ದಲಿತ ಹಿತಾಸಕ್ತಿಗೆ ವಿರುದ್ಧವಾಗಿ ಬದಲಾಯಿಸಿದೆ. ಈ ಬದಲಾವಣೆಯನ್ನು ಕೃಷಿ ಬಿಕ್ಕಟ್ಟು, ತಳಸಮುದಾಯದ ಜನರ ವಂಚಿತ ಸ್ಥಿತಿ, ಉದ್ಯೋಗ ಸೃಷ್ಟಿಸದ ಬೆಳವಣಿಗೆ, ಸಮಾಜ ಕಲ್ಯಾಣ ಸೇವೆಗಳ ಜವಾಬ್ದಾರಿಯಿಂದ ಕ್ರಮೇಣ ಸರ್ಕಾರ ಹಿಂತೆಗೆದುಕೊಳ್ಳುತ್ತಿರುವುದರಲ್ಲಿ ಕಾಣಬಹುದು. ಆದರೆ ಕಳೆದ ೨೫ ವರ್ಷಗಳಿಂದ ಸಂಭವಿಸುತ್ತಿರುವ ಈ ಬದಲಾವಣೆಗಳು ಸಮಾಜದ ಎಲ್ಲ ಸ್ತರಗಳಲ್ಲಿ ಒಂದೇ ಸಮನಾಗಿಲ್ಲ; ಬಡವರು, ಅದರಲ್ಲಿ ಬಹುಪಾಲು ಇರುವ ದಲಿತರು ತೀವ್ರವಾಗಿ ಬಾಧಿತರು. ಹೀಗೆ ಸೃಷ್ಟಿಯಾಗುವ ಬಿಕ್ಕಟ್ಟು ಜನರನ್ನು ಅನೂಹ್ಯವಾದದ್ದನ್ನು ನಂಬುವಂತೆ ಮಾಡುತ್ತಿದೆ ಮತ್ತು ಇದು ವಿಶ್ವಾದ್ಯಂತ ಎಲ್ಲೆಡೆ ಆಗುತ್ತಲಿದೆ.

ಅನುಭವದಿಂದ ಹೇಳುವುದಾದರೆ, ನವ ಉದಾರವಾದದ ಉದಯ ಮತ್ತು ಹರಡುವಿಕೆಯು ಧಾರ್ಮಿಕ ಮೂಲಭೂತವಾದಕ್ಕೆ ಮತ್ತು ವಿಶ್ವಯುದ್ಧಾನಂತರದ ದಶಕಗಳಲ್ಲಿ ಹಿನ್ನೆಲೆಗೆ ಸರಿದಿದ್ದ ಪ್ರತಿಗಾಮಿ ಚಿಂತನೆಗಳಿಗೆ ಮತ್ತೆ ದಾರಿ ಮಾಡಿಕೊಡುತ್ತಿದೆ. ಭಾರತಕ್ಕೂ ಇದು ಅನ್ವಯಿಸುವುದಾದರೂ ಇಲ್ಲಿ ವಿಷಯವನ್ನು ಸಂಕೀರ್ಣಗೊಳಿಸುವ ಮತ್ತಷ್ಟು ಸಂಗತಿಗಳಿವೆ. ಐಟಿ ಕ್ಷೇತ್ರದ ಕಾರಣವಾಗಿ ಅಮೆರಿಕನ್ನರ ದೃಷ್ಟಿಯಲ್ಲಿ ೨೦೦೦ನೇ ಇಸವಿ ಹೊತ್ತಿಗೆ ಭಾರತದ ಗೌರವ ಹೆಚ್ಚತೊಡಗಿದಂತೆ ಭಾರತವು ತನ್ನ ಗತದ ಬಗೆಗೆ ಅವಮಾನಪಟ್ಟುಕೊಳ್ಳುವಂಥದು ಏನಿಲ್ಲ ಎಂದು ಭಾವಿಸತೊಡಗಿತು. ಜನರು ಜಾತಿ ಮತ್ತು ಜಾತಿ ಸಂಬಂಧಿ ಆಚರಣೆಗಳ ಕುರಿತು ಸಾರ್ವಜನಿಕವಾಗಿ ಮಾತನಾಡತೊಡಗಿದರು. ಹಿಂದೂ ದೇವಾಲಯಗಳು ಕಟ್ಟಲ್ಪಟ್ಟವು, ಪುನರುಜ್ಜೀವನಗೊಂಡವು. ಪಶ್ಚಿಮದಲ್ಲಿ ಮತ್ತು ಭಾರತದಲ್ಲಿ ಎಲ್ಲ ತೆರನ ಹಬ್ಬ, ಆಚರಣೆಗಳು ಹೆಚ್ಚಿದವು. ಅದೇ ವೇಳೆ ಹೊಸ ತಲೆಮಾರಿನ ದಲಿತ ತರುಣ ಪೀಳಿಗೆಯ ಸಾಂಸ್ಕೃತಿಕ ಮತ್ತು ರಾಜಕೀಯ ಕುರಿತ ಖಚಿತ ನಿಲುವುಗಳು ದೌರ್ಜನ್ಯದ ಬೆಂಕಿ ಹೊತ್ತಿಸುವ ಕಿಡಿಯಾಗಿ ಪರಿಣಮಿಸಿದವು.

ಬಲವಿದ್ದವ ಉಳಿದಾನು ಎನ್ನುವ ಸಾಮಾಜಿಕ ವಿಕಾಸವಾದದ ಸಿದ್ಧಾಂತವು ಯಾವಾಗಲೂ ಸಮಾಜದ ಕೆಳವರ್ಗಗಳಿಗೆ ಕಂಟಕಪ್ರಾಯವಾಗಿರುತ್ತದೆ. ಭಾರತದಲ್ಲಿ ಇದು ಹಿಂದೂತ್ವದ ಜೊತೆಜೊತೆ ಕೆಲಸ ಮಾಡುತ್ತದೆ. ಈ ಎರಡು ದುಷ್ಟ ನೆಲೆಗಳ ನಡುವೆ ಹೋಲಿಕೆ ಮತ್ತು ಬಾಂಧವ್ಯ ಎರಡೂ ಇದೆ. ತನ್ನ ಪಂಜಾಗಳನ್ನು ಹಿಂದೂತ್ವವು ಎಷ್ಟೇ ಮುಚ್ಚಿಟ್ಟುಕೊಂಡರೂ ಅದು ಮೂಲತಃ ದಲಿತ ವಿರೋಧಿಯೇ ಆಗಿದೆ. ಅದರ ರಾಜಕೀಯ ಘಟಕವು ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಸಂಕೇತದ ಮೂಲಕ ತನ್ನ ದಲಿತರ ಮೇಲಿನ ಪ್ರೀತಿ, ಕಾಳಜಿಯನ್ನು ಪ್ರದರ್ಶಿಸಹೊರಟರೂ ತನ್ನ ಬೆಂಬಲಿಗರಿಗೆ ದಲಿತರು ತಲೆಯೆತ್ತಿ ನಿಲ್ಲುವ ಯತ್ನ ಮಾಡಿದಾಗಲೆಲ್ಲ ಅದನ್ನು ತುಳಿಯುವಂತೆ ತಾಕೀತು ಮಾಡುತ್ತದೆ. ಇವತ್ತು ಬಿಜೆಪಿಯು ಲೋಕಸಭೆಯಲ್ಲಿ ಸ್ಪಷ್ಟ ಬಹುಮತದಿಂದ ಆಳುತ್ತಿರುವಾಗ, (ಬರೀ ೩೧% ವೋಟು ಬಿದ್ದಿದ್ದರೂ ಸಹಾ), ಮತ್ಯಾವ ವಿವರಣೆಯೂ ಬೇಕಿಲ್ಲವೆನಿಸುತ್ತದೆ. ಅದರ ಕಾಲಾಳುಗಳು ದಲಿತರ ಮೇಲೆ, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಮುಗಿಬಿದ್ದಿದ್ದಾರೆ.

ಈ ದಿನಗಳಲ್ಲಿ ಊನಾ ತರಹದ ಘಟನೆಗಳು ಅಪರಾಧ ನಡೆಸುವವರಿಂದಲೇ ಫೋನ್ ವೀಡಿಯೋನಲ್ಲಿ ಚಿತ್ರೀಕರಿಸಲ್ಪಟ್ಟು ಸಾಮಾಜಿಕ ತಾಣಗಳಲ್ಲಿ ವಿಜಯೋತ್ಸವವೋ ಎಂಬಂತೆ ಹಂಚಿಕೊಳ್ಳಲ್ಪಡುತ್ತಿವೆ. ಹಿಂದೂಸ್ತಾನದ ರೋಗಗ್ರಸ್ತ ಸ್ತ್ರೀಪುರುಷರು ಎಂದು ಅಂಬೇಡ್ಕರ್ ಕರೆದ ಸವರ್ಣೀಯ ಹಿಂದೂಗಳ ಮನಸ್ಸಿನ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ?




ಹಿಂದೂತ್ವದ ಮತಾಂಧರು ತಮ್ಮ ಕಾಯಿಲೆಯ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಊನಾ ಘಟನೆಯನ್ನೇ ನೋಡುವುದಾದರೆ ಗೋರಕ್ಷಕರಿಂದ ಹಲ್ಲೆಗೊಳಗಾದ ದಲಿತ ಯುವಕರ ವೀಡಿಯೋವನ್ನು ತಾವೇ ತೆಗೆದು ವಿಜಯವೆಂಬಂತೆ ಹಂಚಿಕೊಂಡದ್ದು ನೋಡಿದರೆ, ಅವರ ವಿಶ್ವಾಸ ಮತ್ತು ನಿರ್ಭಯ ಸಾಬೀತಾಗುತ್ತದೆ. ತಾವು ಎಂದಿಗೂ ಶಿಕ್ಷೆಗೊಳಪಡುವುದಿಲ್ಲ ಎಂದು ಅವರಿಗೆ ಖಚಿತವಾಗಿ ಗೊತ್ತು.

ಹಾಗೆ ನೋಡಿದರೆ ಯಾವುದೇ ದೌರ್ಜನ್ಯ ಕುರಿತು ಹೇಳಿದರೂ ಈ ಮಾತು ಸತ್ಯ. ದಲಿತರ ಮೇಲೆ ಅಮಾನವೀಯ ಮತ್ತು ಭೀಕರ ಹಿಂಸೆ ಎಸಗುವವರು ತಮಗೆ ಖಂಡಿತವಾಗಿ ಯಾವ ಶಿಕ್ಷೆಯೂ ಆಗುವುದಿಲ್ಲವೆಂದೇ ನಂಬಿರುತ್ತಾರೆ. ಖೈರ್ಲಾಂಜಿ ಅಥವಾ ಊನಾಗೆ ಸಿಕ್ಕ ಪ್ರಚಾರ ಎಲ್ಲ ದೌರ್ಜನ್ಯಗಳಿಗೂ ಸಿಗುವುದು ಅಪರೂಪ. ಹೆಚ್ಚಿನವು ವರದಿಯಾಗದೇ, ಯಾರಿಗೂ ತಿಳಿಯದೇ ಹೋಗುತ್ತವೆ.

ಉದಾಹರಣೆಗೆ ೨೦೧೪ರಲ್ಲಿ ೪೭,೦೬೪ ದೌರ್ಜನ್ಯ ನಡೆದವು. ಅದರಲ್ಲಿ ೭೯೪ ಕೊಲೆ, ೨೩೩೮ ಅತ್ಯಾಚಾರಗಳು. ಅದರಲ್ಲಿ ಎಷ್ಟು ಕೊನೆಪಕ್ಷ ವೃತ್ತ ಪತ್ರಿಕೆಗಳ ಒಳಪುಟಗಳಲ್ಲಾದರೂ ವರದಿಯಾದವು? ಪ್ಯಾನೆಲ್ ಡಿಸ್ಕಷನ್‌ಗಳಲ್ಲಿ ಹೋಗಲಿ, ಹಾಗೆಯೇ ಎಷ್ಟು ಸುದ್ದಿ ಚಾನೆಲ್ಲುಗಳಲ್ಲಿ ಬಂದವು? ಪ್ರತಿ ದಿನ ಸರಾಸರಿ ಇಬ್ಬರು ದಲಿತರ ಕೊಲೆ, ಐವರು ದಲಿತ ಮಹಿಳೆಯರ ಅತ್ಯಾಚಾರ ನಡೆಯುತ್ತಿರುವಾಗ ಈ ಕಾಯಿಲೆಯ ಆಳ ಎಂಥದೆಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಆದರೂ ಬದಲಾವಣೆಯಾಗಿದೆ. ಮೊದಲು ದೌರ್ಜನ್ಯ ಮತ್ತು ಹತ್ಯಾಕಾಂಡಗಳು ಸುದ್ದಿಯಾದದ್ದೇ ಕಡಿಮೆ. ಈಗ ಮಾಧ್ಯಮ ಕ್ಷೇತ್ರ ವಿಸ್ತಾರಗೊಂಡ ಹಾಗೆ, ಅದರಲ್ಲೂ ದಲಿತ ತರುಣರು ಕ್ರಿಯಾಶೀಲರಾಗಿರುವ ಸಾಮಾಜಿಕ ಜಾಲತಾಣಗಳು ಹೆಚ್ಚಿದ ಮೇಲೆ, ನಿರ್ಲಕ್ಷಿಸುವುದು ಕಷ್ಟವಾಗಿದೆ. ಕೆಲವೊಮ್ಮೆ ಹೊಸ ತಂತ್ರಜ್ಞಾನದಿಂದ ಬೆಂಬಲ ಪಡೆದು ಇಂಥ ದೌರ್ಜನ್ಯ-ಹಿಂಸೆಗಳು ಕಚ್ಚಾ ಸರಕೂ ಆಗಬಲ್ಲವು.

ಹೌದು, ತಂತ್ರಜ್ಞಾನ ಜನರ ಬದುಕನ್ನು ಬದಲಾಯಿಸುತ್ತದೆ. ಅದೇ ತರ್ಕ ಹಿಡಿದು ಹೊರಟರೆ ಜಾತಿಯನ್ನೂ ಸಹಾ. ಈ ಮೊದಲು ಮಾಧ್ಯಮದವರು ದಲಿತರನ್ನು ಗಮನಿಸುವುದೇ ಅಪರೂಪವಾಗಿತ್ತು ಎನ್ನುವುದು ನಿಜವೇ. ಇವತ್ತು ಗಮನಿಸುತ್ತಾರೆ, ಆದರೆ ಅದು ನೈತಿಕ ಹೊಣೆಯಿಂದಲ್ಲದೆ ಕೇವಲ ಲಾಭನಷ್ಟದ ತರ್ಕವಷ್ಟೆ ಹಿಂದಿರುತ್ತದೆ. ಜನಪರವಾದ ವಾಚ್ ಡಾಗ್ ತಾನು ಎಂಬ ಪಾತ್ರವನ್ನು ಇವತ್ತು ಮಾಧ್ಯಮ ಬಿಟ್ಟುಕೊಟ್ಟು ಸಂಪೂರ್ಣ ವ್ಯಾಪಾರಿ ಬಂಡವಾಳವೇ ಆಗಿದ್ದರೆ, ದೊಡ್ಡ ಸಂಖ್ಯೆಯ ದಲಿತ ಸಮುದಾಯವು ಸ್ಪರ್ಧಾತ್ಮಕಗೊಳ್ಳುತ್ತ ಹೋಗುತ್ತಿರುವ ಜಗತ್ತಿನಲ್ಲಿ ದೊಡ್ಡ ಗ್ರಾಹಕರಾಗಿ ಹೊಮ್ಮಿದೆ.

ಈ ಮೊದಲು ಮಾಧ್ಯಮವು ಲಾಭನಷ್ಟ ಲೆಕ್ಕಾಚಾರವೇ ಇಲ್ಲದ ಬಂಡವಾಳಶಾಹಿಗಳ ಕೈಯಲ್ಲಿ ಇರಲಿಲ್ಲವೆಂದಲ್ಲ. ಮೊದಲು ಅವರು ಬಂಡವಾಳ ಹೂಡಿಕೆಗೆ ದೀರ್ಘಾವಧಿ ಪ್ರತಿಫಲ ಬಯಸುತ್ತಿದ್ದರು. ತಮ್ಮದೇ ಆದ ಬ್ರ್ಯಾಂಡ್ ಸ್ಥಾಪಿಸಿ ಆ ಮೂಲಕ ಜನರ ವಿಶ್ವಾಸ, ನಂಬಿಕೆ ಪಡೆದುಕೊಳ್ಳುವ ಯತ್ನ ಮಾಡುತ್ತಿದ್ದರು. ಇವತ್ತು ನವ ಉದಾರವಾದವು ಕಾಲದ ಚೌಕಟ್ಟೂ ಸೇರಿದಂತೆ ಎಲ್ಲವನ್ನೂ ಧೂಳೀಪಟಮಾಡಿದೆ, ಎಲ್ಲವನ್ನೂ ಭಿನ್ನವಾಗಿಸಿದೆ. ಈಗ ‘ದೀರ್ಘಕಾಲೀನ’ ಎಂಬ ಯಾವುದೂ ಇಲ್ಲ. ಬಂಡವಾಳ ಹಾಕಿದ್ದನ್ನು ಈಗಲೇ, ಇಲ್ಲೇ ಮರಳಿ ತೆಗೆಯುವ ಹುಮ್ಮಸದಲ್ಲೆ ಎಲ್ಲರೂ ಇದ್ದಾರೆ.

ಸಾಮಾಜಿಕ ಜಾಲತಾಣಗಳಾಗಿ ಅಷ್ಟೇ ಅಲ್ಲ, ಕಡಿಮೆ ಬೆಲೆಗೆ ವಿಪುಲ ಕಂಪ್ಯೂಟಿಂಗ್ ಅವಕಾಶ, ಮಾಹಿತಿ ಸಂಗ್ರಹಕ್ಕೆ ಅವಕಾಶ ಕಲ್ಪಿಸಿರುವ ತಂತ್ರಜ್ಞಾನವು ವಿಶ್ಲೇಷಣೆ-ವಿಮರ್ಶೆಗೆ ಹೊಸ ದೃಷ್ಟಿಕೋನವನ್ನು ಒದಗಿಸಿದೆ. ಅದು ದಲಿತರನ್ನು ತನ್ನ ವಸ್ತು ಮತ್ತು ಸೇವೆಗಳ ಗ್ರಾಹಕರಾಗಿ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಆದ್ದರಿಂದ ಮಾಧ್ಯಮ ರಂಗವು ಹೆಚ್ಚುಕಡಿಮೆ ದಲಿತ ರಹಿತವಾಗಿದ್ದರೂ, ದಲಿತರ ಕುರಿತು ಬರೆಯುವಾಗ ಪೂರ್ವಗ್ರಹ ಮತ್ತು ಅಜ್ಞಾನ ಹೊಂದಿದ್ದರೂ ಅದು ಈಗ ದಲಿತರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೆಲ್ ಫೋನುಗಳು ಹಾಗೂ ಹಗುರವಾಗಿ ಅವು ಸ್ಮಾರ್ಟ್ ಫೋನುಗಳಾಗಿ ಪರಿವರ್ತನೆಯಾಗಿರುವುದು ಸಾಮಾಜಿಕ ಜಾಲತಾಣಗಳ ಉಪಯುಕ್ತತೆಯನ್ನು ಮುನ್ನೆಲೆಗೆ ತಂದಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತಮ್ಮ ಸುದ್ದಿಗಾಗಿ, ಅಭಿವ್ಯಕ್ತಿಗಾಗಿ ಅವಕಾಶ ಪಡೆಯಲು ಸಾಧ್ಯವಾಗದ ತಳಸಮುದಾಯಗಳ ಜನರು ಪ್ರಜ್ಞಾಪೂರ್ವಕವಾಗಿ ಸೋಶಿಯಲ್ ಮೀಡಿಯಾ ಮೊರೆಹೋಗಿದ್ದಾರೆ. ಗೋರಕ್ಷಕರು ದನದ ಚರ್ಮ ಸುಲಿಯುತ್ತಿದ್ದವರನ್ನು ಹೊಡೆದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡಿದರೆ, ಅದೇ ವೀಡಿಯೋವನ್ನು ದಲಿತ ತರುಣ ಜನತೆ ಜನರನ್ನು ಪ್ರತಿಭಟನೆಗೆ ಒಗ್ಗೂಡಿಸಲು ಬಳಸಿಕೊಂಡಿತು.



೨೦೦೬ರಲ್ಲಿ ಖೈರ್ಲಾಂಜಿ ಹತ್ಯಾಕಾಂಡ ಸಂಭವಿಸಿದಾಗ ಸ್ಮಾರ್ಟ್ ಫೋನುಗಳಿನ್ನೂ ದಲಿತರನ್ನು ತಲುಪಿರಲಿಲ್ಲ. ಆದರೆ ಇವತ್ತು ಸೋಶಿಯಲ್ ಮೀಡಿಯಾ ಮತ್ತು ಅಂತರ್ಜಾಲ ಬಳಸಿಕೊಳ್ಳುವ ನಿಶ್ಚಿತ ಉದ್ದೇಶದ ‘ದಲಿತ್ ಕ್ಯಾಮೆರಾ’ ಮತ್ತು ಅದರಂತಹ ಹತ್ತುಹಲವು ವೆಬ್‌ಸೈಟುಗಳು, ವಾಟ್ಸಪ್ ಗುಂಪುಗಳು ಸೃಷ್ಟಿಯಾಗಿವೆ. ತಮ್ಮ ಸಂದೇಶವನ್ನು ಹೆಚ್ಚು ವಿಸ್ತೃತವಾಗಿ ಹರಡಲು ಇದು ಸಹಾಯ ಮಾಡಿದೆಯಾದರೂ, ಮಿತಿಮೀರಿದ ಹಾಗೂ ಆಳ ವಿಶ್ಲೇಷಣೆಯಿಲ್ಲದ ಮೇಲುಮೇಲಿನ ಸುದ್ದಿಗಳ ಕಾರಣವಾಗಿ ಸೋಶಿಯಲ್ ಮೀಡಿಯಾವು ಚಿಂತೆಗೆ ಕಾರಣವಾಗಿದೆ.

ಜೊತೆಗೆ ಸೋಶಿಯಲ್ ಮೀಡಿಯಾ ಆಕ್ಟಿವಿಸ್ಟರ ಒಂದು ವರ್ಗ ಸೃಷ್ಟಿಯಾಗಿದೆ. ಅವರಿಗೆ ದಲಿತ ಚಳುವಳಿಯ ಎಲ್ಲವೂ, ಆರಂಭವೂ ಅಂತ್ಯವೂ ಅದೇ ಆಗಿದೆ. ಅವರ ಎಲ್ಲ ಆಕ್ರೋಶ ಮತ್ತು ಆಕ್ಟಿವಿಸಂ ೩ ಇಂಟು ೪ ಇಂಚಿನ ಸೆಲ್ ಫೋನಿನ ಸ್ಕ್ರೀನಿಗೆ ಸೀಮಿತವಾಗಿದೆ. ಅವರೆಂದೂ ಬೀದಿಗೆ ಬರಲಾರರು. ಅದೊಂದು ಸುಲಭದ ಹೊರದಾರಿಯಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಆಧರಿತ ದಲಿತ ಚಳುವಳಿಯ ಮತ್ತೊಂದು ಮಿತಿಯೆಂದರೆ ಒಂದು ಆವರಣದೊಳಗೇ ಮಿತಿಗೊಳ್ಳುವ ಕಾರಣದಿಂದ ತಮ್ಮ ರಾಜಕಾರಣದ ದೃಷ್ಟಿಕೋನವನ್ನು ಬಲಪಡಿಸುವ ಉದ್ದೇಶಗಳಿಗಾಗಿ ಅಂಥವರು ಐಡೆಂಟಿಟೇರಿಯನ್ ಅಭಿವ್ಯಕ್ತಿಗೇ ಹೆಚ್ಚು ಒತ್ತು ಕೊಟ್ಟುಬಿಡುವ ಅಪಾಯವಿರುವುದು.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಕ್ಯಾಂಪೇನಿನಿಂದ ಸ್ಫೂರ್ತಿ ಪಡೆದು ನಾವು ‘ದಲಿತ್ ಲೈವ್ಸ್ ಮ್ಯಾಟರ್’ ಅಭಿಯಾನ ನಡೆಸಿದೆವು. ಭಾರತದ ಗುಟ್ಟಾದ ಈ ಜನಾಂಗಭೇದಕ್ಕೆ ವಿಶ್ವವು ಏಕೆ ಕುರುಡಾಗಿದೆ ಎಂದು ನಿಮಗನಿಸುವುದು?




ನೀವು ಆಫ್ರಿಕನ್-ಅಮೆರಿಕನ್ ಅಭಿಯಾನದಿಂದ ಸ್ಫೂರ್ತಿ ಪಡೆದು ಆಲ್ ಇಂಡಿಯಾ ದಲಿತ್ ವಿಮೆನ್ಸ್ ರೈಟ್ಸ್ ಫೋರಂ ನಡೆಸಿದ ಅಭಿಯಾನದ ಬಗೆಗೆ ಮಾತನಾಡುತ್ತಿರಬಹುದು. ದಲಿತರು ಅಲ್ಲಿನ ಕರಿಯರೊಂದಿಗೆ ತಮ್ಮನ್ನು ಗುರುತಿಸಿಕೊಳದೆ ಕೇವಲ ಅವರ ಅಭಿಯಾನವನ್ನು ನಕಲು ಮಾಡಲು ಯತ್ನಿಸಿದ್ದು ಹಾಸ್ಯಾಸ್ಪದ. ಆಫ್ರಿಕನ್ ಅಮೆರಿಕನ್ನರಿಗಿಂತ ದಲಿತರದು ಬಹುದೊಡ್ಡ ಸಂಖ್ಯೆಯ ಸಮುದಾಯ. ಆದರೂ ಅವರಿಗೆ ತಮ್ಮ ಹೋರಾಟವನ್ನು ತಿಳಿಯಪಡಿಸಲು ತಮ್ಮದೇ ಆದ ನುಡಿಗಟ್ಟು, ಭಾಷೆ, ಚಿಂತನೆ ಸಿಗಲಿಲ್ಲ. ಏನಾದರೂ ಇರಲಿ, ಜಗತ್ತನ್ನು ಅವರಿಗೆ ಅಭಿಯಾನವು ಪರಿಚಯಿಸುವುದಾದರೆ ಅಷ್ಟರಮಟ್ಟಿಗೆ ಅದು ಸಾರ್ಥಕವೆನ್ನಬಹುದು.

ಸಮಾಜವು ಜಾತಿಪದ್ಧತಿಯೆಂಬ ಕುರೂಪಕ್ಕೆ ಕುರುಡಾಗಿದೆಯೆಂದು ಅಷ್ಟು ಖಂಡಿತವಾಗಿ ಹೇಳಲಾಗದು. ಜನಾಂಗ ಭೇದ ಮತ್ತು ವರ್ಣಭೇದಗಳು ಖಚಿತ ಇತಿಹಾಸ ಹೊಂದಿದ್ದು ಅಭಿವೃದ್ಧಿ ಹೊಂದಿದ ಜಗತ್ತನ್ನು ಒಂದು ಹಂತದಲ್ಲಿ ಸಂಧಿಸುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ ಜಾತಿ ಸಮಸ್ಯೆಯು ಭಾರತಕ್ಕಷ್ಟೇ ಸೀಮಿತವಾದುದು ಮತ್ತು ಅಸ್ಪಷ್ಟವಾದುದು. ವರ್ಣಭೇದದಲ್ಲಿ ಚರ್ಮದ ಬಣ್ಣವು ತಾರತಮ್ಯಕ್ಕೆ ಕಾರಣವಾದಂತೆ, ಜಾತಿ ಆಧಾರದ ಮೇಲಿನ ತಾರತಮ್ಯವು ವಿವರಿಸಲು ಕಷ್ಟವಾದುದು, ಅನುಭವ ಗ್ರಾಹ್ಯವಾದುದು ಹಾಗೂ ಅದನ್ನು ತಿಳಿಯಲು ವಿವರಣೆ ಬಯಸುವಂಥದು.

ಅಲ್ಲದೆ ಗುಲಾಮಗಿರಿಯನ್ನೊಳಗೊಂಡ, ಪೂರಾ ಯೂರೋಪೇ ಆಚರಿಸಿದ ವರ್ಣಭೇಧ ನೀತಿಯು ಹಲವು ದೇಶಗಳ ಜನರನ್ನು ಬಾಧಿಸುತ್ತಿದೆ, ಎಂದೇ ಅದು ಜಾಗತಿಕ ಸಮಸ್ಯೆಯಾಗಿ ಚರ್ಚೆಗೆ ಬರುತ್ತದೆ. ಆದರೆ ಜಾತಿ ಎನ್ನುವುದು ಬಹುಪಾಲು ಈ ಉಪಖಂಡಕ್ಕಷ್ಟೇ ಸೀಮಿತವಾದ ವಿಷಯವಾದ್ದರಿಂದ ಉಳಿದ ವಿಶ್ವವು ಅದರಲ್ಲಿ ತಮ್ಮ ಮಧ್ಯಪ್ರವೇಶ ಅವಶ್ಯವೆಂದು ಭಾವಿಸಲಿಲ್ಲ. ಜೊತೆಗೆ ಇಲ್ಲಿ ಎಲ್ಲಕ್ಕು ತಣ್ಣೀರೆರಚುವ ಬೃಹತ್ ಶಕ್ತಿಯಾಗಿ ಬ್ರಾಹ್ಮಣಶಾಹಿ ಭಾರತೀಯ ಪ್ರಭುತ್ವವಿದೆ. ಅದು ಎಂದಿಗೂ ಜಾತಿಪದ್ಧತಿ ಒಂದು ಸಮಸ್ಯೆ ಎನ್ನುವುದನ್ನು ನಿರಾಕರಿಸುತ್ತಲೇ ಬಂದಿದೆ.

೨೦೦೧ರ ಆಗಸ್ಟ್-ಸೆಪ್ಟೆಂಬರಿನಲ್ಲಿ ಕೆಲವು ಎನ್‌ಜಿಒಗಳು ಮತ್ತು ಸಂಘಸಂಸ್ಥೆಗಳು ಡರ್ಬಾನಿನಲ್ಲಿ ನಡೆದ ವರ್ಣಭೇದ-ಜನಾಂಗಭೇದ ಮುಂತಾದ ಅಸಹಿಷ್ಣುತೆ ವಿರೋಧಿ ಸಮ್ಮೇಳನದಲ್ಲಿ ಜಾತಿ ವಿಷಯ ಮಾತನಾಡಿದಾಗಲೇ ಅದು ಮುನ್ನೆಲೆಗೆ ಬಂದಿದ್ದು. ಆದರೆ ಭಾರತ ಸರ್ಕಾರದ ತೀವ್ರ ವಿರೋಧದ ನಡುವೆ ಅದು ಮುಂದುವರೆಯಲಾಗಲಿಲ್ಲ. ಎಂದೇ ಅಂತಾರಾಷ್ಟ್ರೀಯ ಸಮಾಜದ ಬೆಂಬಲ ಪಡೆಯಲೂ ಆಗಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದು ದಲಿತರ ಐಡೆಂಟಿಟಿ ಗುಂಗು ಮತ್ತು ಪ್ರಾಂತೀಯ/ಪಂಥೀಯ ಮನೋಭಾವವೂ ಒಂದು ಕಾರಣವೆನ್ನಬಹುದು. ದಲಿತರು ತಮ್ಮ ಜಾತಿ ಕವಚದಿಂದ ಹೊರಬಂದು ವಿಶ್ವದ ದಮನಿತರೆಲ್ಲರ ಜೊತೆಗೆ ಒಂದಾಗಿ ತಮ್ಮನ್ನೆಂದೂ ಭಾವಿಸಿಕೊಳ್ಳಲೇ ಇಲ್ಲ. ಮತ್ತೊಂದು ಕಾರಣ ಅವರ ಹೋರಾಟದ ದಾರಿ ಮತ್ತು ತೀವ್ರತೆ.

ಆಫ್ರಿಕನ್ ಅಮೆರಿಕನ್ನರು ದೀರ್ಘಕಾಲ ಮಿಲಿಟೆಂಟ್ ಹೋರಾಟ ನಡೆಸಿದರೆ, ಭಾರತದ ದಲಿತರು ತಮ್ಮ ವಂಚಿತ ಸ್ಥಿತಿಯೇ ಬಂಡವಾಳವಾಗಿರುವ ನಾಯಕ ಕೇಂದ್ರಿತ, ಮಾತುಕತೆ ಆಧಾರಿತ ದಾರಿಯನ್ನು ನೆಚ್ಚಿಕೊಂಡಿದ್ದಾರೆ. ಹೊರಗಣ ಪ್ರಪಂಚ ನ್ಯಾಯಕ್ಕಾಗಿ ಹೋರಾಡುವ ಜನ ಚಳುವಳಿಯು ನೀಡುವ ಶಾಕ್ ಟ್ರೀಟ್‌ಮೆಂಟಿಗೆ ಮಾತ್ರ ಬೆಚ್ಚಿ ಏಳುತ್ತದೆ. ವರ್ಣಭೇದ ನೀತಿಯ ವಿರುದ್ಧದ ಹೋರಾಟ ಜಗತ್ತಿನ ಅಂತರಾಳವನ್ನೇ ಅಲುಗಾಡಿಸಿದರೆ, ದಲಿತರು ಅದನ್ನು ಮಾಡಲಾಗದೇ ಹೋದರು. ದಲಿತ ಚಳುವಳಿಯು ಮತ್ತೆಮತ್ತೆ ಮೀಸಲಾತಿ ಎಂಬ ಏಕೈಕ ವಿಷಯದ ಸುತ್ತ ಗಿರಕಿ ಹೊಡೆಯುತ್ತ ಹೋರಾಟ ಕಟ್ಟಿದರೆ, ಉಳಿದ ಜಗತ್ತು ದಲಿತರು ಸರ್ಕಾರದಿಂದ ಸವಲತ್ತಾಗಿ ಪಡೆದದ್ದು ತಮ್ಮ ಪಾಲಿಗಿಂತ ಹೆಚ್ಚೇ ಇರಬೇಕೆಂದು ಭಾವಿಸಿತು.

ಕೊನೆಯದಾಗಿ ವಿಶಾಲ ವಿಶ್ವದ ಜೊತೆ ಸಂಪರ್ಕ ಕಲ್ಪಿಸಿಕೊಳ್ಳುವುದರಲ್ಲಿಯೂ ನಾವು ವಿಫಲವಾಗಿದ್ದೇವೆ. ವಿದೇಶಗಳಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ತಾರತಮ್ಯದ ಅರಿವು ಉಂಟಾಗುತ್ತಿದ್ದರೆ ಅದಕ್ಕೆ ಕಾರಣ ಅಲ್ಲೆಲ್ಲ ಹರಡಿಕೊಂಡ ಭಾರತೀಯ ದಲಿತರೇ. ಉದಾಹರಣೆಗೆ ಬ್ರಿಟನ್ನಿನ ಈಕ್ವಾಲಿಟಿ ಆಕ್ಟ್. ಅದು ೨೦೧೦ರಲ್ಲಿ ಜಾರಿಯಾಗಿ ಹಿಂದೂ ಮನೆಯೊಂದರಲ್ಲಿ ಬಲವಂತವಾಗಿ ಗುಲಾಮಳಾಗಿ ಬದುಕಿದ್ದ ಬಿಹಾರದ ಆದಿವಾಸಿ ಮಹಿಳೆಗೆ ೧.೮೪ ಲಕ್ಷ ಪೌಂಡುಗಳಷ್ಟು ಬೃಹತ್ ಮೊತ್ತದ ಹಣ ಪರಿಹಾರವಾಗಿ ಬರಲು ಕಾರಣವಾಯಿತು. ಅದು ಬ್ರಿಟನ್ನಿನ ಮೊದಲ ಜಾತಿ ತಾರತಮ್ಯದ ಪ್ರಕರಣವಾಗಿತ್ತು.

೨೫ ವರ್ಷಗಳಿಂದ ಅಮೆರಿಕ ಶೈಲಿಯ ಬಂಡವಾಳವಾದ ಮತ್ತು ಮಾರುಕಟ್ಟೆವಾದವನ್ನು ಭಾರತ ಅನುಸರಿಸುತ್ತಿದೆ. ಆದರೆ ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ನರಿಗೆ ಹೆಚ್ಚೆಚ್ಚು ಅವಕಾಶ ದೊರೆತಂತೆ ಇಲ್ಲಿ ದಲಿತರಿಗೆ ಹೆಚ್ಚು ಅವಕಾಶ ದೊರೆತು ಸಾಮಾಜಿಕ ವೈವಿಧ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಫಲನವಾಗುತ್ತಿರುವಂತೆ ಕಾಣುತ್ತಿಲ್ಲ, ಏಕೆ?

ಅಮೆರಿಕದ ಬಂಡವಾಳಶಾಹಿಯು ಒಂದು ಕಲಸುಮೇಲೋಗರದ ಐಡಿಯಾಲಜಿಯನ್ನು ಅರಗಿಸಿಕೊಂಡು ನವ ಉದಾರವಾದದ ರೂಪ ತಳೆದಿದೆ. ಅದು ಉದಾರವಾದದ ತೀವ್ರತರ ರೂಪ. ಅದು ಉದಾರವಾದದ ಋಣಾತ್ಮಕ ಅಂಶಗಳನ್ನೇ ಮೂಲಾಧಾರ ಮಾಡಿಕೊಂಡಿದೆ. ಉದಾಹರಣೆಗೆ ವ್ಯಕ್ತಿಯ ಸ್ವಾತಂತ್ರ್ಯವನ್ನು ಮಾರುಕಟ್ಟೆ ಎಂಬ ದೇವರನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ಈ ತರ್ಕವನ್ನೇ ಮುಂದುವರೆಸಿ ಕೊನೆಗೆ ಸರ್ಕಾರವು ಸಾರ್ವಜನಿಕ ಸೇವೆಯಿಂದ ಹಿಂತೆಗೆದುಕೊಳ್ಳುತ್ತದೆ. ಅವನ್ನೆಲ್ಲ ಖಾಸಗಿ ಬಂಡವಾಳದಾರರಿಗೆ ಕೈಯೆತ್ತಿ ಒಪ್ಪಿಸುತ್ತದೆ.

ಅದರ ಐಡಿಯಲಾಜಿಕಲ್ ವಿಸ್ತರಣೆ ಸಾಮಾಜಿಕ ವಿಕಾಸವಾದ - ಬಲಶಾಲಿಯಷ್ಟೆ ಬದುಕುವನು ಎಂಬ ವಾದ. ಅದು ವಿಶ್ವಯುದ್ಧದ ಬಳಿಕ ಜನಪ್ರಿಯವಾದ ಸಾಮಾಜಿಕ ನ್ಯಾಯ ಎಂಬ ವಿಷಯಕ್ಕೆ ಯಾವ ಅವಕಾಶವನ್ನೂ ಕೊಡುವುದಿಲ್ಲ. ಸಾಮಾಜಿಕ ನ್ಯಾಯದ ಹೆಸರಲ್ಲಿ ನಡೆಯುವುದು ಸಿಎಸ್ಸಾರ್ - ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ. ಅದು ಇರುವುದನ್ನು ಇರುವ ಹಾಗೆ ಮುಂದುವರೆಸಿಕೊಂಡ ಹೋಗಲಿಚ್ಛಿಸುತ್ತದೆ. ಹೀಗಿರುತ್ತ ಅಮೆರಿಕದಲ್ಲಿ ಕೂಡಾ ಬಂಡವಾಳವು ದಮನಿತರ ಪೋಷಣೆ ಮಾಡುವುದೆಂದು ಹೇಳಲಾಗದು. ವೈವಿಧ್ಯದ ಎಲ್ಲ ಚರ್ಚೆಗಳೂ ‘ಮ್ಯಾನೇಜ್‌ಮೆಂಟ್’ ತರ್ಕದ ಫಲವೇ ಆಗಿರುತ್ತವೆ. ಅಲ್ಲದೆ ಇವೆಲ್ಲ ಚರ್ಚೆಯನ್ನು ನಿರ್ದೇಶಿಸುವ ಸಾಮಾಜಿಕ ವಿಕಾಸವಾದ ಎಂಬ ತತ್ವಕ್ಕೆ ಅನುಸಾರವಾಗಿ ವೈವಿಧ್ಯದ ಹೆಸರಿನಲ್ಲಿ ಸಿಗುವ ಅವಕಾಶವು ಮೇಲ್‌ಸ್ತರದ ಅಲ್ಪಸಂಖ್ಯಾತರಿಗೆ, ದಲಿತ ದಮನಿತರಿಗೆ ಸಿಗುತ್ತದೆ. ತಳಸ್ತರದ ಜನಸಮುದಾಯವು ವ್ಯವಸ್ಥಿತವಾಗಿ ಇವೆಲ್ಲದರಿಂದ ಹೊರಗುಳಿಯುತ್ತದೆ.

ಇದು ಭಾರತದಲ್ಲೂ ಆಗುತ್ತಿದೆ. ದಲಿತರ ಮೇಲ್‌ಸ್ತರದವರು, ತಮ್ಮ ಮುಂಚೂಣಿಯ ದಲಿತ ವಾಣಿಜ್ಯೋದ್ಯಮಿಗಳ ಒಕ್ಕೂಟದ ಮೂಲಕ ಈ ತತ್ವದ ಉಪಯೋಗ ಪಡೆಯುತ್ತಾರೆ. ಅವರು ನೇರವಾಗಿ, ಹೊರಗಿಂದ ಹೊರಗೆ ನವ ಉದಾರವಾದಿ ಪ್ರಭುತ್ವದ ಹಾಗೂ ಅದರ ಏಕಮಾತ್ರ ಫಲಾನುಭವಿಗಳಾದ ಬೃಹತ್ ಬಂಡವಾಳಶಾಹಿಗಳಿಂದ ಬೆಂಬಲ ಪಡೆಯುತ್ತಾರೆ. ಬಡವರು ಅಭಿವೃದ್ಧಿ ಹೆಸರಿನ ಕಿಲುಬು ಕಾಸಿಗೆ ಅಥವಾ ಚುನಾವಣಾ ಪೂರ್ವದಲ್ಲಿ ಭರದಿಂದ ಹರಿಯುವ ಭರವಸೆಗಳ ಮಹಾಪೂರಕ್ಕೆ ತೃಪ್ತಿ ಪಡಬೇಕಾಗಿದೆ.

ಇದು ಅಮೆರಿಕದ ಮಟ್ಟಿಗೂ ನಿಜ. ಮೇಲ್ನೋಟಕ್ಕೆ ತುಂಬ ನ್ಯಾಯಯುತ ವ್ಯವಸ್ಥೆಯಾಗಿ, ವೈವಿಧ್ಯತೆಯನ್ನು ಪೋಷಿಸುವ ದೇಶವಾಗಿ ಅದು ಕಾಣಬಹುದು. ಇವತ್ತು ಅಮೆರಿಕದ ಆಫ್ರೋ ಅಮೆರಿಕನ್ನರ ಪರಿಸ್ಥಿತಿ ಸುಧಾರಿಸಿರುವಂತೆ ಕಾಣುತ್ತಿದ್ದರೆ ಅದಕ್ಕೆ ಕಾರಣ ನವ ಉದಾರವಾದವನ್ನು ಅಪ್ಪಿಕೊಳ್ಳುವ ಪೂರ್ವದಲ್ಲಿ ಹಲವೆಂಟು ಅಡೆತಡೆಗಳ ಎದುರಿಸಿ ಅಲ್ಲಿ ಕರಿಯರು ತೊಡಗಿಕೊಂಡ ದೀರ್ಘ ಮತ್ತು ತೀವ್ರ ಹೋರಾಟ. ಜೊತೆಗೆ ಆ ಸಮಾಜದಲ್ಲಿ ಇಂಥ ಪ್ರಯತ್ನಗಳ ಹಿಮ್ಮೆಟ್ಟಿಸುವ ಬ್ರಾಹ್ಮಣವಾದದ ಅಡೆತಡೆಯೂ ಇಲ್ಲ.

ಹೀಗೆ ಅಮೆರಿಕವು ಜೀವಂತ ಬಂಡವಾಳಶಾಹಿಯ ಪಕ್ಕಾ ಉದಾಹರಣೆಯಾಗಿ ರೂಪುಗೊಂಡಿತು. ಎಂದೇ ಅದರ ತರ್ಕವು ಆಫ್ರೋ ಅಮೆರಿಕನ್ ತತ್ವಗಳನ್ನು ಒಪ್ಪಿಕೊಳ್ಳುತ್ತದೆ. ಅವರನ್ನು ತನ್ನ ಸಹಪಯಣಿಗರನ್ನಾಗಿ ಸ್ವೀಕರಿಸುತ್ತದೆ. ಆದರೆ ನೆನಪಿಡಿ: ಹೆಚ್ಚೆಚ್ಚು ಕರಿಯ ಮಿಲಿಯನೇರುಗಳು, ಬಿಲಿಯನೇರುಗಳು ಕಾಣಿಸಿಕೊಂಡಹಾಗೆ ಹೆಚ್ಚೆಚ್ಚು ಕರಿಯರನ್ನು ಜೈಲುಗಳಲ್ಲೂ ಕಾಣಬೇಕಾಗುತ್ತದೆ. ಒಬಾಮಾ ನಂತರದ ಅಮೆರಿಕದಲ್ಲೂ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಕ್ಯಾಂಪೇನ್ ನಡೆಸಬೇಕಾದ ಅವಶ್ಯಕತೆಯಿದೆಯೆಂದರೆ ಅಮೆರಿಕದ ಸಮಾಜ ಎಂಥದೆಂದು ತಿಳಿಯಬಹುದು. ಎಂದೇ ಕುರೂಪಿ ವಾಸ್ತವವನ್ನು ಮರೆಮಾಚುವ ಥಳುಕಿಗೆಂದೂ ಅವಕಾಶ ಕೊಡಬಾರದು.

ಈಗಲೂ ಕಡ್ಡಾಯ ಮೀಸಲಾತಿ ಇರುವ ಕಡೆಗಳಿಂದ ಹೊರತುಪಡಿಸಿ ದಲಿತರು ಉಳಿದ ಕಡೆಗಳಲ್ಲೆಲ್ಲ ಇಲ್ಲದಿರುವುದನ್ನು ಗಮನಿಸಬಹುದು. ಖಾಸಗಿ ಉದ್ದಿಮೆ, ಮಾಧ್ಯಮ, ಪ್ರಕಾಶನ, ಸಿನಿಮಾಗಳಲ್ಲಿ ಅವರು ಇಲ್ಲವೇ ಇಲ್ಲ ಎನ್ನಬಹುದು. ಇವೂ ಅಪರಾಧಗಳೇ ಎನ್ನುವಿರಾ? ಪ್ರಜಾತಾಂತ್ರಿಕಗೊಳ್ಳದ ಸಮಾಜವು ಕೊನೆಗೆ ದೌರ್ಜನ್ಯ, ಹತ್ಯಾಕಾಂಡಗಳು ನಡೆಯಲು ಕಾರಣವಾಗುವುದಿಲ್ಲವೆ?

ನಿಜ. ಯಾವುದೇ ತಾರತಮ್ಯವನ್ನು ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದಿರುವುದರ ಪರಿಣಾಮವೆಂದೇ ಭಾವಿಸಬೇಕು. ಅದು ಭೀಕರ ಹತ್ಯಾಕಾಂಡಗಳಿಗಿಂತ ಕಡಿಮೆ ಅಪರಾಧವಲ್ಲ. ದಲಿತರ ಮೇಲಿನ ತಾರತಮ್ಯ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತದೆ. ಇಂಥ ಮಾತುಗಳೆಲ್ಲ ಕ್ಲೀಷೆಯಂತೆ, ಸವಕಲು ಘೋಷಣೆಯಂತೆ ಕೇಳಬಹುದಾದ್ದರಿಂದ ಎಚ್ಚರದಿಂದಿರುವ ಅವಶ್ಯಕತೆಯಿದೆ. ಜಾತಿ ಸಮೀಕರಣ ತುಂಬ ಸಂಕೀರ್ಣ ಮಾರ್ಗಗಳಲ್ಲಿ ಕೆಲಸ ಮಾಡುತ್ತದೆ. ತಾರತಮ್ಯವೂ ಸರಳವಾದದ್ದಲ್ಲ.

ಉದಾಹರಣೆಗೆ ಕಾಂಗ್ರೆಸ್ ಬಿಜೆಪಿಗಳೆರಡೂ ದಲಿತ ವಾಣಿಜ್ಯೋದ್ಯಮಿಗಳನ್ನು ಎತ್ತಿ ಹಿಡಿಯುತ್ತಾರೆ. ಅದೇವೇಳೆಗೆ ಲಕ್ಷಾಂತರ ರೋಹಿತ್ ವೇಮುಲರನ್ನು ತುಳಿಯುತ್ತಾರೆ. ದಲಿತ ರಾಜಕಾರಣಿಗಳ ಓಲೈಸಲಾಗುತ್ತದೆ, ಸಾಮಾನ್ಯ ದಲಿತನೊಬ್ಬ ಎಫ್‌ಐಆರ್ ದಾಖಲಿಸುವುದೂ ದುಸ್ತರವಾಗಿದೆ. ಅದಕ್ಷ ದಲಿತ ನೌಕರನನ್ನು ಶೋಪೀಸ್‌ನಂತೆ ಎತ್ತಿ ಹಿಡಿಯುತ್ತ ಉದಾರವಾಗಿ ಅನರ್ಹ ಬಡ್ತಿ ನೀಡಲಾಗುತ್ತದೆ. ಸಮರ್ಥ ದಲಿತನನ್ನು ತುಳಿದು ಮುಗಿಸಿಬಿಡಲಾಗುತ್ತದೆ. ಜನರಿಗೆ ಜಾತಿ ಹೇಗೆ ಹೇಗೆ ಕೆಲಸ ಮಾಡುತ್ತದೆಂಬ ಬಗೆಗೆ ಸೂಕ್ಷ್ಮ ಹಾಗೂ ಪೂರ್ಣ ವಿವರಗಳು ಗೊತ್ತಿಲ್ಲ. ಆದ್ದರಿಂದ ನೀವು ಬಹು ಸರಳವಾಗಿ ತಾರತಮ್ಯ ಕುರಿತು ಮಾತನಾಡಿದರೆ ವಿರುದ್ಧ ಪರಿಣಾಮ ಬೀರುತ್ತದೆ.

ಮೀಸಲಾತಿಯಿಲ್ಲದ ಕ್ಷೇತ್ರಗಳಲ್ಲಿ ದಲಿತರು ಕಾಣಿಸುತ್ತಿಲ್ಲವೆಂದರೆ ಅದರರ್ಥ ದಲಿತರು ರಿಸ್ಕ್ ತೆಗೆದುಕೊಳ್ಳಲು ಏನೂ ತಯಾರಿಲ್ಲ ಎಂದು. ಭಾರತೀಯರು ಈಗಲೂ ವಂಶದ, ಕೌಟುಂಬಿಕ ಸಂಬಂಧಗಳ ಆಧಾರದಲ್ಲೇ ವ್ಯವಹರಿಸುತ್ತಾರೆ. ಅದನ್ನೇ ನಯವಾಗಿ ಸಾಮಾಜಿಕ ಬಂಡವಾಳ (ಸೋಶಿಯಲ್ ಕ್ಯಾಪಿಟಲ್) ಎಂದು ಕರೆಯುತ್ತಾರೆ. ಇದು ಸಹಜ. ಯಾಕೆಂದರೆ ವ್ಯಾವಹಾರಿಕವಾಗಿ ನೋಡಿದರೆ ಇದು ವಹಿವಾಟಿನ ಖರ್ಚನ್ನು ಕಡಿಮೆ ಮಾಡುತ್ತದೆ. ಆದರೆ ಆರ್ಥಿಕ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ದಲಿತರಿಗೆ ಈ ಸಾಮಾಜಿಕ ಬಂಡವಾಳ ಇಲ್ಲ. ಅಕ್ಯಾಡೆಮಿಕ್ ಭಾಷೆಯಲ್ಲಿ ಹೇಳುವಂತೆ ಅವರೆಷ್ಟೇ ಸಮರ್ಥರಿರಲಿ, ಹೆಚ್ಚು ಸಂಬಳ ಕೊಡುತ್ತೇವೆಂದು ಖಾಸಗಿ ಕ್ಷೇತ್ರವು ಹೇಳಿದರೂ ಕೂಡ ಅವರು ಸರ್ಕಾರಿ ನೌಕರಿಯನ್ನೇ ಆಯ್ಕೆ ಮಾಡುತ್ತಾರೆ. ಈ ನಿರ್ಧಾರದ ಹಿಂದೆ ಸಾರ್ವಜನಿಕ ವಲಯದ ಉದ್ಯೋಗ ನೀಡುವ ಸುರಕ್ಷತಾ ಭಾವವೂ ಕೆಲಸ ಮಾಡುತ್ತದೆ.

ಹೆಚ್ಚುಕಡಿಮೆ ೧೯೯೦ರ ತನಕ ಇದು ಸಾಮಾನ್ಯವಾಗಿತ್ತು. ಆ ವೇಳೆಗೆ ಹಣ ಗಳಿಸುವ ದಲಿತ ಪಾಲಕರ ಎರಡನೆ, ಮೂರನೇ ತಲೆಮಾರಿನ ದಲಿತ ಹುಡುಗ ಹುಡುಗಿಯರು ನಗರಕೇಂದ್ರಗಳಲ್ಲಿ ನೆಲೆಸಿ ಉತ್ತಮ ಶಾಲಾಕಾಲೇಜುಗಳಲ್ಲಿ ಕಲಿತು, ತಮ್ಮ ಜಾತಿ ಕುರಿತು ಅತಿ ಕಡಿಮೆ ಜ್ಞಾನ ಹೊಂದಿದವರಾಗಿ ಉದ್ಯೋಗ ಮಾರುಕಟ್ಟೆ ಪ್ರವೇಶಿಸಿದರು. ಅವರು ಹೆಚ್ಚು ವೇತನ ತರುವ ಖಾಸಗಿ ಕ್ಷೇತ್ರವನ್ನೆ ಬಯಸಿದರು. ಇದು ಒಂದು ಟ್ರೆಂಡ್ ಆಗಿದ್ದರೂ ತಾರತಮ್ಯ ಈಗಲೂ ನಿಂತಿಲ್ಲ.

ಹಾಗಾಗಿ ಅಧಿಕೃತ ಮೀಸಲಾತಿಯಿಲ್ಲದ ಕಡೆ ನೀವು ದಲಿತರನ್ನು ಕಾಣುವಿರೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಅವರ ಹೊಸ ಕ್ಷೇತ್ರದಲ್ಲೂ ಜಾತಿ ಅವರನ್ನು ಹಿಂಬಾಲಿಸುತ್ತಿದೆಯೋ ಇಲ್ಲವೋ ಎನ್ನುವುದು ಪ್ರಶ್ನೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಹೊರಬರುವ ದಲಿತ ವಿದ್ಯಾರ್ಥಿಗಳು ಖಾಸಗಿ ವಲಯದ ಉದ್ಯೋಗಗಳತ್ತ ಮುಖ ಮಾಡುತ್ತಿರುವುದೇನೋ ಹೌದು. ಆದರೆ ಅಹ್ಮದಾಬಾದಿನ ಐಐಎಂ ನಡೆಸಿದ ಅಧ್ಯಯನದ ಪ್ರಕಾರ ಅವರ ನೇಮಕವು ಒಟ್ಟಾರೆ ೧೬%ಗಿಂತ ಹೆಚ್ಚು ದಾಟಿರುವುದಿಲ್ಲ.

ಇದು ಉದ್ಯೋಗ ಮಾರುಕಟ್ಟೆಯ ವಿಷಯವಾಯಿತು. ಇನ್ನು ಮಾಧ್ಯಮ, ಸಿನಿಮಾದಂತಹ ಕ್ಷೇತ್ರಗಳಿಗೆ ಬಂದರೆ ಸಾಮಾಜಿಕ ಬಂಡವಾಳ ಇಲ್ಲದಿದ್ದರೂ ಬೃಹತ್ ಸಂಖ್ಯೆಯ ದಲಿತರು ಅಲ್ಲೆಲ್ಲ ಪ್ರವೇಶ ಪಡೆಯುತ್ತಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಯಾದ್ದರಿಂದ ಅವರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ಇಲ್ಲದಿರಬಹುದು. ಆದರೆ ಖಂಡಿತವಾಗಿಯೂ ಹೆಚ್ಚಾಗುತ್ತಿದೆ. ಮಾಧ್ಯಮವು ದಲಿತರನ್ನು ತಮ್ಮ ವಸ್ತು ಮತ್ತು ಸೇವೆಗಳ ಗ್ರಾಹಕರನ್ನಾಗಿ ಪರಿಗಣಿಸುವುದೇ ಹೌದಾದಲ್ಲಿ ದಲಿತ ಸಮುದಾಯದ ಸಮಸ್ಯೆ ಮತ್ತದರ ಒಳಹೊರಗುಗಳನ್ನು ಅರಿಯಲು ಅವರು ದಲಿತ ಸಮುದಾಯದವರನ್ನೇ ಪತ್ರಕರ್ತರನ್ನಾಗಿ ನೇಮಿಸಿಕೊಳ್ಳಲು ಹಿಂಜರಿಯಲಾರರು.

ಸಿನಿಮಾಗೆ ಬಂದರೆ, ಸೈರಾಟ್ ಸಿನಿಮಾ ಹೇಳುವಂತೆ, ವೈವಿಧ್ಯಮಯತೆ ಒಳ್ಳೇ ಮಾರಾಟದ ವಸ್ತು ಎಂದು ಎಲ್ಲರಿಗೂ ಅರಿವಾಗುತ್ತಿದೆ. ಎಂದೇ ದಲಿತ ನಿರ್ದೇಶಕರು, ನಟರನ್ನು ನಾವಿಂದು ನೋಡುತ್ತಿದ್ದೇವೆ. ಇಷ್ಟೆಲ್ಲ ಹೇಳಿದ ಮೇಲೂ, ಎಲ್ಲಿಯವರೆಗೆ ಜಾತಿ ಇರುತ್ತದೋ, ಒಂದಲ್ಲ ಒಂದು ರೂಪದಲ್ಲಿ ತಾರತಮ್ಯವೂ ಇದ್ದೇ ಇರುತ್ತದೆ. ಏಕೆಂದರೆ ಜಾತಿ ಎನ್ನುವುದೇ ಮೂಲಭೂತವಾಗಿ ನಿಂತಿರುವುದು ಅಸಮಾನತೆಯ ಮೇಲೆ. ಇದರಿಂದಲೇ ಜಾತಿವಿನಾಶ ಎಂಬ ನಮ್ಮ ಗುರಿಯ ಪ್ರಾಮುಖ್ಯತೆ ಗೊತ್ತಾಗುತ್ತದೆ.

ಸಾರ್ವಜನಿಕವಾಗಿ ಅಥವಾ ಸಾರ್ವಜನಿಕ ದೃಷ್ಟಿಗೆ ಬೀಳುವಂತೆ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವ್ಯಕ್ತಿಯನ್ನು ಕೀಳುಗರೆಯಲೆಂದೇ ಅವಮಾನಿಸುವುದು/ಬೆದರಿಕೆ ಹಾಕುವುದು ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ ೩.೧ (ಎಕ್ಸ್) ಅಡಿಯಲ್ಲಿ ದೌರ್ಜನ್ಯ ಪ್ರಕರಣವೆನಿಸಿಕೊಳುವುದಿಲ್ಲ. ಹಾಗೆ ಮಾಡಿದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂಬ ಹೊಸ ವ್ಯಾಖ್ಯಾನ ಶುರುವಾಗಿರುವುದನ್ನು ಇತ್ತೀಚೆಗೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ. ಇದಕ್ಕೆ ೨೦೧೩ರಲ್ಲಿ ಜೈಪುರ ಲಿಟರರಿ ಫೆಸ್ಟಿವಲ್‌ನಲ್ಲಿ ಆಶಿಶ್ ನಂದಿ ಆಡಿದ ಮಾತುಗಳು ಹಾಗೂ ನಂತರ ನಡೆದ ಪ್ರಕರಣವನ್ನು ಉಲ್ಲೇಖಿಸುತ್ತಾರೆ. ನಿಮ್ಮ ಪ್ರತಿಕ್ರಿಯೆ?

ಇದುವರೆಗೆ ಆ ಸೆಕ್ಷನ್ನಿನಡಿ ಎಷ್ಟು ಆಶಿಶ್ ನಂದಿಗಳನ್ನು ಶಿಕ್ಷಿಸಿದ್ದಾರೆ? ಇದು ಅತ್ಯಂತ ಸಾಮಾನ್ಯವಾಗಿರುವ ಜಾತಿ ಅಪರಾಧ. ನೀವು ಹೇಳಿರುವ ಸೆಕ್ಷನ್ ಅದನ್ನು ದಮನಿಸಲೆತ್ನಿಸುತ್ತದೆ. ಬೇಕೆಂದೇ ದಲಿತರನ್ನು ಅವಮಾನಿಸುವ ಉದ್ದೇಶ ಹೊಂದಿರದಿದ್ದರೆ ಈ ಕಾಯ್ದೆ ಅದು ಹೇಗೆ ದಲಿತೇತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತದೆ? ಒಬ್ಬ ವ್ಯಕ್ತಿಯನ್ನು ‘ಮಾದಿಗ ನನ ಮಗ’, ‘ಭಂಗಿ’, ‘ಧೇಡ್’ ಎಂದು ಕರೆಯುವುದು, ಖಾಸಗಿಯಾಗಿ ಅಂಥ ಪದ ಬಳಸುವುದು ಸವರ್ಣೀಯ ಶಬ್ದಕೋಶದಲ್ಲಿ ಸಾಮಾನ್ಯವಾಗಿದೆ. ಹೀಗಿರುತ್ತ ಮೇಲೆ ಹೇಳಿದ ಸೆಕ್ಷನ್ನನ್ನು ಕೈಬಿಟ್ಟರೆ ಸಾರ್ವಜನಿಕವಾಗಿ, ಸುಲಭವಾಗಿ ದಲಿತರನ್ನು ಹೀಯಾಳಿಸಲು ಸುಲಭ ಮಾಡಿಕೊಟ್ಟಂತಾಗುತ್ತದೆ.

ಇದನ್ನು ದಲಿತ ದೃಷ್ಟಿಯಿಂದ ನೋಡಬೇಕು. ಒಬ್ಬ ದಲಿತನನ್ನು ಅವನ ಜಾತಿ ಹಿಡಿದು ನಿಂದಿಸಿದಾಗ ಅವನಿಗೆ ಹೇಗನಿಸಿರಬಹುದು? ಅಂಥ ನಿಂದೆ ದಲಿತನ ಆತ್ಮಗೌರವವನ್ನು ಬದುಕಿರುವಾಗಲೇ ಕೊಂದುಹಾಕುತ್ತದೆ. ಅದು ದೈಹಿಕ ಹಲ್ಲೆಗಿಂತ ಕೆಟ್ಟದು. ಈ ಮೊದಲು ಅವರಿಗೆ ತಮ್ಮ ಮಾನವ ಹಕ್ಕು ತಿಳಿದಿರಲಿಲ್ಲ. ಸಮಾಜದ ಬ್ರಾಹ್ಮಣೀಯ ಶ್ರೇಣಿಯಲ್ಲಿ ತಮ್ಮ ಕೀಳು ಸ್ಥಾನವನ್ನು ಅನುಭವಿಸಿ ಒಪ್ಪಿಬಿಟ್ಟಿದ್ದರು. ಈಗ ತಮ್ಮ ಮಾನವ ಹಕ್ಕುಗಳ ಅರಿವು ಅವರಿಗೆ ಉಂಟಾಗಿರುವಾಗ ಪರಿಣಾಮ ಭಯಾನಕವಾಗಿದೆ.

ಈ ಅಪರಾಧ ಕುರಿತು ಏನು ಹೇಳುವುದು? ‘ದೌರ್ಜನ್ಯ ತಡೆ’ ಕಾಯ್ದೆಯಡಿ ದಾಖಲಾಗುವ ಎಲ್ಲ ಪ್ರಕರಣಗಳ ವಿಚಾರಣೆಯಲ್ಲೂ ಕೋರ್ಟು ‘ಉದ್ದೇಶಪೂರ್ವಕವಾಗಿ’ ಎಂಬ ಪದದ ಮೇಲೆ ವಿಶೇಷ ಒತ್ತು ಕೊಡುತ್ತಿತ್ತು. ಖೈರ್ಲಾಂಜಿಯಂತಹ ದೊಡ್ಡ ಅಪರಾಧದ ಬಗೆಗೆ ಹೇಳುವುದಾದರೆ, ಬಲಿಪಶುವಾಗಿರುವ ವ್ಯಕ್ತಿ ತನ್ನ ಜಾತಿ ಕಾರಣಕ್ಕಾಗಿ ಕಿರುಕುಳ ಅನುಭವಿಸಿದ ಇತಿಹಾಸ ಇರುವ ಪ್ರಕರಣದಲ್ಲಿ ಕೋರ್ಟು ಅಪರಾಧಿಗಳಿಗೆ ‘ಜಾತಿ ಸಂಬಂಧಿ ದುರುದ್ದೇಶ’ ಇದೆಯೆನ್ನುವುದನ್ನೇ ಅಲ್ಲಗಳೆಯುವುದಾದರೆ, ನ್ಯಾಯಾಧೀಶರು ಯಾವ ಅಪರಾಧವು ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಶಿಕ್ಷೆ ಪಡೆದೀತು ಎಂದು ಹೇಳಬೇಕು. ಇದೇ ತೆರನ ವಾದದಿಂದ ಎಷ್ಟೋ ಅತ್ಯಾಚಾರಿಗಳು ಈ ಕಾಯ್ದೆಯಡಿ ಖುಲಾಸೆಗೊಂಡಿದ್ದಾರೆ. ಅಪರಾಧಿಯ ಕಾಮದಿಂದಲೇ ಹೊರತು ಜಾತಿಕಾರಣಕ್ಕಾಗಿ ಅತ್ಯಾಚಾರ ನಡೆದಿದ್ದಲ್ಲವೆಂದು ಹೇಳಲಾಗುತ್ತದೆ. ನ್ಯಾಯವ್ಯವಸ್ಥೆಯೇ ಇಂಥ ಅತಾರ್ಕಿಕ, ಅಸಂಬದ್ಧ ನಿಲುವು ಹೊಂದಿದರೆ ನ್ಯಾಯ ಸಿಗುವ ಕುರಿತು ಭರವಸೆ ಇಟ್ಟುಕೊಳ್ಳುವುದಾದರೂ ಹೇಗೆ?

ಇಂಥ ನ್ಯಾಯ ತೀರ್ಮಾನಗಳಿಂದ ದಲಿತರನ್ನು ‘ರೂಢಿ’ಗತವಾಗಿ ಅವಮಾನಿಸಲು ದಲಿತೇತರರಿಗೆ ಮುಕ್ತ ಅವಕಾಶ ಸಿಗುವುದೆಂದು ಭಾವಿಸುವಿರಾ? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಸಾರ್ವಜನಿಕ ಸ್ಥಳದಲ್ಲಿ ದಲಿತರನ್ನು ಅವಮಾನಿಸಲು ಇರುವ ಸ್ವಾತಂತ್ರ್ಯವೆ? ಕಾನೂನು ಇದ್ದರೂ ಸಹ ನಗರ ಮತ್ತು ಗ್ರಾಮೀಣ ಭಾಗದ ದಲಿತರು ತಮ್ಮ ಜಾತಿ ಕಾರಣವಾಗಿ ಕಳಂಕ ಅನುಭವಿಸುತ್ತಿಲ್ಲವೆ? ದೈಹಿಕ ಹಿಂಸೆಯೆಡೆಗೆ ಮೊದಲ ಹೆಜ್ಜೆ ಮೌಖಿಕ ಹಿಂಸೆಯೆ? 

ಹೌದು. ಶ್ರೇಣೀಕೃತ ಸಮಾಜದಲ್ಲಿ - ಆ ಶ್ರೇಣಿ ಜಾತಿಯಿರಲಿ ಅಥವಾ ವರ್ಗವಿರಲಿ - ಸ್ವಾತಂತ್ರ್ಯ ಎನ್ನುವುದು ಎರಡಲಗಿನ ಕತ್ತಿ. ಅದರಲ್ಲೂ ಆ ವ್ಯಕ್ತಿ ತಳ ಸಮುದಾಯದವನಾಗಿದ್ದರೆ ಇನ್ನೊಬ್ಬ ವ್ಯಕ್ತಿಯಿಲ್ಲದೆ ಸ್ವಾತಂತ್ರ್ಯ ಸಂಪೂರ್ಣವಾಗದು. ಬಾಬಾಸಾಹೇಬ್ ಅಂಬೇಡ್ಕರ್ ಗಮನಿಸಿದಂತೆ ಈ ಸ್ವಾತಂತ್ರ್ಯವನ್ನು ಬಂಡವಾಳಿಗರು ತಮ್ಮ ಕಾರ್ಮಿಕರನ್ನು ಶೋಷಿಸಲು ದುರುಪಯೋಗಪಡಿಸಿಕೊಂಡರು.

ಜಾತಿಪದ್ಧತಿ ವಿಷಯಕ್ಕೆ ಬಂದರೆ, ಸಮಾಜದ ಪೂರ್ವಗ್ರಹಕ್ಕೆ ಸಿಕ್ಕಿ ನಲುಗುವ ದಲಿತರನ್ನು ಅವಮಾನಿಸಲು ದಲಿತೇತರರಿಗೆ ಈ ಸ್ವಾತಂತ್ರ್ಯ ಅನುಮತಿ ನೀಡುತ್ತದೆ. ಮೊದಲು ದೌರ್ಜನ್ಯ ಕುರಿತ ಗ್ರಹಿಕೆಗೆ ಯಾವ ಅವಕಾಶವಿರಲಿಲ್ಲ. ಏಕೆಂದರೆ ಅಸ್ಪೃಶ್ಯರು ತಮಗಾದ ದೌರ್ಜನ್ಯ, ಅಪಮಾನಗಳ ಬಗೆಗೆ ದೂರು ಹೇಳಿಕೊಳ್ಳಲು ಅವಕಾಶವೇ ಇರಲಿಲ್ಲ. ಆದರೆ ಈಗ ದಲಿತರಿಗೆ ತಮ್ಮ ಮಾನವ ಹಕ್ಕುಗಳ ಅರಿವಾಗಿ ಕಾನೂನಿನ ಬೆಂಬಲದೊಂದಿಗೆ ಅದನ್ನು ಗಟ್ಟಿಯಾಗಿ ಹೇಳುತ್ತಿರುವಾಗ ಕಾಯ್ದೆ ನೀಡಿದ ಸುರಕ್ಷೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂತೆಗೆದುಕೊಂಡರೆ ದಲಿತರನ್ನು ಹಿಂಸಿಸಲು ಜಾತೀಯ ಮನಸುಗಳಿಗೆ ಮುಕ್ತ ಅವಕಾಶ ಕಲ್ಪಿಸಿದಂತಾಗುವುದು.

ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ ಏನೇನೂ ತೃಪ್ತಿಕರವಾಗಿಲ್ಲದಿದ್ದರೂ ದೇಶಾದ್ಯಂತ ಹಲವು ರಾಜಕೀಯ ಪಕ್ಷಗಳು ಅದನ್ನು ಆರಂಭದಿಂದಲೇ ವಿರೋಧಿಸುತ್ತ ಬಂದಿವೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪಕ್ಷವಿದ್ದಾಗ ಬಾಳ್ ಠಾಕ್ರೆ ಮತ್ತು ಶಿವಸೇನಾ ಈ ಕಾಯ್ದೆಯನ್ನು ವಿರೋಧಿಸಿದ್ದವು. ಆಗ ಪವಾರರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಯಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಒಂದು ಗುಂಪಿಗೆ ಸೇರಿದ ರಾಮದಾಸ ಅಠವಳೆ ಇದ್ದರು. ಅವರು ಶಿವಸೇನಾ ಮೇಲಿದ್ದ ೧೧೦೦ ದೌರ್ಜನ್ಯ ಕೇಸುಗಳನ್ನು ಒಂದೇ ಬಾರಿಗೆ ಹಿಂತೆಗೆದುಕೊಂಡರು. ಇತ್ತೀಚೆಗೆ ಮೂವರು ಕುಡಿದ ದಲಿತ ಯುವಕರಿಂದ ಅಪ್ರಾಪ್ತ ವಯಸ್ಸಿನ ಮರಾಠಾ ಸಮುದಾಯದ ಹುಡುಗಿ ಅತ್ಯಾಚಾರಕ್ಕೊಳಗಾದಳು. ಆ ಪ್ರಕರಣದ ಬೆನ್ನತ್ತಿರುವ ಮರಾಠರು ಈಗ ದೌರ್ಜನ್ಯ ಕಾಯ್ದೆಯನ್ನೇ ವಾಪಸು ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಖೈರ್ಲಾಂಜಿ ಕುರಿತ ನನ್ನ ಪುಸ್ತಕದಲ್ಲಿ ಹೇಗೆ ನ್ಯಾಯ ವ್ಯವಸ್ಥೆಯ ಪ್ರತಿ ಹಂತದಲ್ಲಿ ದೌರ್ಜನ್ಯ ತಡೆ ಕಾಯ್ದೆಯ ಹಲ್ಲು ಉಗುರುಗಳನ್ನು ಕತ್ತರಿಸಲಾಗಿದೆ ಎಂದು ತಿಳಿಸಿದ್ದೇನೆ. ಅದರ ದುರ್ಬಳಕೆಯಾಗುತ್ತಿದೆ ಎಂಬ ಕೂಗು ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಸುವ ಮಧ್ಯಮ ಜಾತಿಗಳಿಂದಲೇ ಕೇಳಿಬರುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಸೇರಿದಂತೆ ರಾಜಕಾರಣಿಗಳು ಅದರ ದುರ್ಬಳಕೆ ಆಗುತ್ತಿದೆ ಎಂದು ಒಪ್ಪಿಕೊಂಡಿರುವುದು ಕುತೂಹಲಕರವಾಗಿದೆ. ಎಲ್ಲರಿಗೂ ದಲಿತರಿಗೆ ಅವರ ಸ್ಥಾನ ಯಾವುದೆಂದು ತೋರಿಸುವ ಬಯಕೆ ಇದ್ದಂತಿದೆ.

ಜಾತಿದೌರ್ಜನ್ಯದ ಬಲಿಪಶುವಿಗೆ ನ್ಯಾಯ ಕೊಡಿಸುವ ಕುರಿತು ಸಾಮಾಜಿಕ ಮತ್ತು ರಾಜಕೀಯ ಇಚ್ಛಾಶಕ್ತಿಯಿಲ್ಲದಿರುವಿಕೆಗೆ ಯಾವುದು ನ್ಯಾಯಯುತ ಮತ್ತು ವ್ಯಾವಹಾರಿಕ ಪರಿಹಾರ ಎನಿಸುತ್ತದೆ? ದಲಿತರು ತಮ್ಮ ಕೈಗೆ ಕಾನೂನನ್ನು ಎತ್ತಿಕೊಂಡಾಗಲೇ ನ್ಯಾಯ ಸಾಧ್ಯವಾಗಿದೆಯೆನಿಸುತ್ತದೆ. ಆದರೆ ಸಂವಿಧಾನ ರಚನೆಯ ಮೇಲುಸ್ತುವಾರಿ ನಡೆಸಿದ ಬಾಬಾಸಾಹೇಬ್ ಅಂಬೇಡ್ಕರ್ ಕಾನೂನಾತ್ಮಕ ಹೋರಾಟದ ಪರವಾಗಿದ್ದರು. ಆದರೆ ದಲಿತ ಚಳುವಳಿ ಪ್ರಜಾಸತ್ತಾತ್ಮಕ ದಾರಿಗಂಟಿಕೊಂಡಿದ್ದರೂ ಕಾನೂನು ಯಾವಾಗಲೂ ಅವರ ಕೈಬಿಟ್ಟಿದೆ. ಹಾಗಾದರೆ ಹೊರದಾರಿ ಯಾವುದು?

ನೀವು ಹೇಳಿದಂತೆ ಕಳೆದ ಏಳು ದಶಕಗಳ ಅನುಭವದಲ್ಲಿ ಎಲ್ಲಾ ಸಾಂಸ್ಥಿಕ ರಚನೆಗಳೂ ದಲಿತರಿಗೆ ನ್ಯಾಯ ಕೊಡಿಸುವುದರಲ್ಲಿ ಸೋತಿರುವುದು ನಿಜ. ಅತಿ ಕಡಿಮೆಯಿರುವ ಶಿಕ್ಷಾಪ್ರಮಾಣ ಇದಕ್ಕೊಂದು ಸೂಚ್ಯಂಕವಾಗಬಲ್ಲದು. ಆದರೆ ಅದು ಅನ್ಯಾಯದ ತೀವ್ರತೆಯನ್ನು ಬಿಂಬಿಸಲು ಸಾಲದು. ಶಿಕ್ಷಾ ಪ್ರಮಾಣ ಒಂದಂಕಿಯಿಂದ ಎರಡಂಕಿ ದಾಟಿರುವುದು ಒಂದು ಸಣ್ಣ ಏರಿಕೆಯಷ್ಟೇ. ಅದು ವಾರ್ಷಿಕ ಸಂಭವಿಸುತ್ತಲೇ ಹೋಗುತ್ತಿರುವ ೪೭,೦೦೦ ದೌರ್ಜನ್ಯಗಳ ಒಟ್ಟು ಮೊತ್ತದ ಸರಾಸರಿ ಶಿಕ್ಷಾ ಪ್ರಮಾಣವಷ್ಟೇ. ಅಪರಾಧಿಯು ದೌರ್ಜನ್ಯಕ್ಕೊಳಗಾದವನ ವರ್ಗದವನೇ ಆಗಿದ್ದರೆ ಶಿಕ್ಷೆ ಆರು ತಿಂಗಳು ಇರಬಹುದು. ಆದರೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆದು ನಡೆಸಲಾಗುವ ಕೊಲೆ, ಅತ್ಯಾಚಾರಗಳಂತಹ ಘನ ಅಪರಾಧಗಳ ನೋಡಿದರೆ ಅವು ಶಿಕ್ಷೆಯಲ್ಲಿ ಕೊನೆಗೊಳ್ಳುತ್ತಿಲ್ಲ. ಖೈರ್ಲಾಂಜಿಯಂತಹ ಬಹಳ ಪ್ರಚಾರ ಪಡೆದ ಪ್ರಕರಣಗಳಲ್ಲಿ ಶಿಕ್ಷೆ ನೀಡಲ್ಪಟ್ಟಿದ್ದರೂ, ನಿಜವಾದ ಅಪರಾಧಿಗಳು ಶಿಕ್ಷೆಗೊಳಗಾಗಿಲ್ಲ ಎಂದು ಖಂಡಿತವಾಗಿ ಹೇಳಬಹುದು. ಸಾಮಾನ್ಯವಾಗಿ ಪ್ರಭಾವಿ ಮಾಸ್ಟರ್ ಮೈಂಡುಗಳ ಶಿಕ್ಷೆಯನ್ನು ಬಡ ಡಮ್ಮಿಗಳಿಗೆ ನೀಡಿ ಅವರನ್ನು ಬಲಿಪಶುವನ್ನಾಗಿಸಲಾಗುತ್ತದೆ.



ಅಂಬೇಡ್ಕರರಿಗೆ ಧಾರ್ಮಿಕ ಹಿನ್ನೆಲೆಯ ಕುಟುಂಬ ಹಾಗೂ ಅಮೆರಿಕ ಮತ್ತು ಇಂಗ್ಲೆಂಡುಗಳಲ್ಲಿ ವಿಶ್ವವಿದ್ಯಾಲಯದ ಕಲಿಕೆಯ ಸಂದರ್ಭದಲ್ಲಿ ಸಿಕ್ಕ ಮುಕ್ತ ಶಿಕ್ಷಣದ ಫಲವಾಗಿ ಅವರು ಸಂಸದೀಯ ಪ್ರಜಾಪ್ರಭುತ್ವದ ಬಗೆಗೆ ಆಳ ನಂಬಿಕೆ ಬೆಳೆಸಿಕೊಂಡಿದ್ದರು. ಮುಕ್ತ ಚಿಂತನೆಯ, ಫೇಬಿಯನ್ ಸಮಾಜವಾದಿಗಳು, ವಾಸ್ತವವಾದಿಗಳೂ ಆಗಿದ್ದ ಜಾನ್ ಡೆವಿ, ಜೇಮ್ಸ್ ಶಾಟ್ವೆಲ್, ಎಡ್ವಿನ್ ಸೆಲಿಗ್ಮನ್, ಜೇಮ್ಸ್ ಹಾರ್ವೆ ರಾಬಿನ್ಸನ್, ಫ್ರಾಂಕ್ಲಿನ್ ಗಿಡ್ಡಿಂಗ್ಸ್ ಮತ್ತು ಅವರಂತಹ ಶಿಕ್ಷಕ ವೃಂದ ಅವರ ಯೋಚನಾ ಕ್ರಮದ ಮೇಲೆ ಅಪಾರ ಪ್ರಭಾವ ಬೀರಿದರು. ಬೂರ್ಷ್ವಾ ಮತ್ತು ಶೋಷಿತರ ನಡುವಿನ ವರ್ಗಸಂಘರ್ಷದ ಮೂಲಕ ಕ್ರಾಂತಿ ಉಂಟುಮಾಡಬಹುದೆಂಬ ಮಾರ್ಕ್ಸಿಸ್ಟ್ ನಂಬಿಕೆಯನ್ನು ಇವರೆಲ್ಲ ವಿರೋಧಿಸುತ್ತಿದ್ದರು. ಅಂಬೇಡ್ಕರ್ ಈ ಚಿಂತನೆಯನ್ನು ಪೂರ್ಣ ಅಳವಡಿಸಿಕೊಂಡಂತೆ ಕಾಣುತ್ತದೆ.

ನಂತರ ಭಾರತ ಸಂವಿಧಾನದ ಕರಡು ಸಿದ್ಧ ಮಾಡಿದ ಮೇಲೆ ಎಲ್ಲಕಡೆಯಿಂದ ಪ್ರಶಂಸೆಯ ಸುರಿಮಳೆ ಬಂದಾಗ, ಒಂದು ಕ್ಷಣದ ಮೈಮರೆವಿನಲ್ಲಿ ದಲಿತರಿಗೆ ಇನ್ನು ಮುಂದೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದ ದಾರಿ ನೆಚ್ಚಿಕೊಳ್ಳುವುದಕ್ಕಿಂತ ಸಾಂವಿಧಾನಿಕ ಮಾರ್ಗ ಹಿಡಿಯುವಂತೆ ಸಲಹೆ ಕೊಟ್ಟರು. ಅವರು ಬೌದ್ಧಧರ್ಮವನ್ನು ಸ್ವೀಕಾರ ಮಾಡಿದಾಗ ಅಹಿಂಸೆಯ ಉತ್ತುಂಗವು ಒಂದು ನಂಬಿಕೆಯಾಗಿ ಬೇರೂರಿತು. ಬೌದ್ಧಧರ್ಮದಲ್ಲಿ ಅಹಿಂಸೆ ಎನ್ನುವುದು ಸಾಪೇಕ್ಷ. ಅದನ್ನು ಅವರೇ ತಮ್ಮ ಪುಸ್ತಕ ‘ಬುದ್ಧ ಅಂಡ್ ಹಿಸ್ ಧಮ್ಮ’ದಲ್ಲಿ ಹೇಳಿದ್ದಾರೆ. ಆದರೆ ತಮ್ಮ ಸಾವಿಗಿಂತ ಒಂದು ತಿಂಗಳು ಮುಂಚೆ ಖಟ್ಮಂಡುವಿನ ಸರ್ವಧರ್ಮ ಸಮ್ಮೇಳನದಲ್ಲಿ ‘ಬುದ್ಧ ಅಂಡ್ ಕಾರ್ಲ್ ಮಾರ್ಕ್ಸ್’ ಎಂಬ ಭಾಷಣ ಮಾಡಿದಾಗ, ಅವರು ಸಂಪೂರ್ಣ ಅಹಿಂಸೆಯನ್ನು ವೈಭವೀಕರಿಸಿರುವಂತೆ ಕಾಣುತ್ತಾರೆ. ಬಹುಶಃ ಅದು ಅವರ ವರ್ಗ ಸ್ಥಾನದ ಕಾರಣವಾಗಿಯೂ ಬಂದ ಯೋಚನೆಯಿರಬಹುದು. ಅದು ಅವರನ್ನು ವರ್ಗ ಸಂಘರ್ಷ ಮತ್ತು ಹಿಂಸೆಯನ್ನು ಪರಿಗಣಿಸದಂತೆ ಮಆಡಿರಬಹುದು.

ಬರ್ನಾರ್ಡ್ ಷಾನ ಫೇಬಿಯನ್ ದಾರಿಯಲ್ಲಿ ವಿವೇಚಿಸಲ್ಪಟ್ಟಂತೆ, ವರ್ಗ ಸಂಘರ್ಷವು ಮಧ್ಯಮ ವರ್ಗವನ್ನು ಸೆಳೆಯಲಾರದು. ಹಿಂಸೆಯನ್ನು ತಡೆಗಟ್ಟುವ ಅಂಬೇಡ್ಕರರ ಧೋರಣೆಯು ಅವರ ಮೊದಲ ಹೋರಾಟ - ಕೊಲಾಬಾ ಡಿಪ್ರೆಸ್ಡ್ ಕ್ಲಾಸ್ ಕಾನ್ಫರೆನ್ಸ್ ನಡೆದ ದಿನಗಳಿಂದಲೇ ಇತ್ತು. ಚವಡಾರ್ ಕೆರೆಯ ನೀರು ಕುಡಿದು ದಲಿತ ಮುಖಂಡರು ಮಾರ್ಚಿ ೧೯ರಂದು ವಾಪಸಾಗುತ್ತಿದ್ದಾಗ ಮಹಾಡಿನ ಸವರ್ಣೀಯ ಹಿಂದೂ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿದರು.



ಅದರಲ್ಲಿ ಭಾಗವಹಿಸಿದ್ದ ೩೦೦೦ಕ್ಕೂ ಅಧಿಕ ಕಾರ್ಯಕರ್ತರಲ್ಲಿ ಬಹುಪಾಲು ಜನರು ವಿಶ್ವಯುದ್ಧ-೧ರಲ್ಲಿ ಭಾಗವಹಿಸಿ ಮರಳಿದ್ದ ಮಾಜಿ ಸೈನಿಕರು. ಹಿಂದೂಗಳ ಆಕ್ರಮಣಕ್ಕೆ ಪ್ರತ್ಯುತ್ತರ ಕೊಡಲು ಅಂಬೇಡ್ಕರರ ಒಂದು ಸಣ್ಣ ಸಮ್ಮತಿಯನ್ನಷ್ಟೇ ಅವರು ಎದುರು ನೋಡುತ್ತಿದ್ದರು. ಆದರೆ ಅಂಬೇಡ್ಕರ್ ಅದನ್ನು ತಡೆದರು. ಇದೇ ತರ್ಕವನ್ನು ಮಹಾಡ್ ಸತ್ಯಾಗ್ರಹದ ವೇಳೆಯೂ ಡಿಸೆಂಬರ್ ೧೯೨೭ರಲ್ಲಿ ಮುಂದುವರೆಸಿದರು. ಅದು ಮೊದಲ ಸಮ್ಮೇಳನದಲ್ಲಿ ನಡೆದ ಘಟನೆಗಳ ಸುತ್ತಮುತ್ತ ಅತ್ಯಂತ ಜಾಗರೂಕವಾಗಿ ಸಂಘಟಿಸಲ್ಪಟ್ಟ ಸಮಾವೇಶ. ಭಾಗವಹಿಸಿದ ಎಲ್ಲ ಪ್ರತಿನಿಧಿಗಳ ಇಚ್ಛೆಗೆ ವಿರುದ್ಧವಾಗಿ ಅಂಬೇಡ್ಕರ್ ಪ್ರಭುತ್ವದೊಂದಿಗೆ ಕಾನೂನಾತ್ಮಕ ಚಕಮಕಿ ಬೇಡವೆಂದು ಚಳುವಳಿಯನ್ನು ನಿಲ್ಲಿಸಿದರು.

ಪ್ರಜ್ಞಾಪೂರ್ವಕ ಹಿಂಸೆಯನ್ನು ತಡೆಗಟ್ಟಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಿಂಸೆಯು ನಿಮ್ಮ ಬದುಕಿನ ಆಂತರಿಕ ಭಾಗವೇ ಆಗಿರುವಾಗ, ಅಹಿಂಸೆ ಎನ್ನುವುದು ಮೀರಬಾರದ ತತ್ವ ಎಂದು ಎತ್ತಿಹಿಡಿಯುವುದು ನೈತಿಕವಾಗಿ ಸಮಸ್ಯಾತ್ಮಕ ಮತ್ತು ವ್ಯಾವಹಾರಿಕವಾಗಿ ತಪ್ಪಾಗುತ್ತದೆ. ನಾನು ಈ ವಿಷಯ ಕುರಿತು ನನ್ನ ‘ಮಹಾಡ್: ದ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ನಲ್ಲಿ ತಿಳಿಸಿದ್ದೇನೆ. ಮಹಾಡದ ಸಮಾವೇಶದ ಪ್ರತಿನಿಧಿಗಳಿಗೆ ಸವರ್ಣೀಯ ಗೂಂಡಾಗಳ ದಾಳಿಯನ್ನು ಎದುರಿಸಿಬಿಡುವಂತೆ ಅಂಬೇಡ್ಕರ್ ಅವರೇನಾದರೂ ಅಂದು ಹೇಳಿದ್ದಿದ್ದರೆ, ದಲಿತ ಚಳುವಳಿಗೆ ಅದು ಹೊಸದೊಂದೇ ಆಯಾಮ ಕೊಡುತ್ತಿತ್ತು.

ಅಕ್ಕಪಕ್ಕದ ಹಳ್ಳಿಗರು ಸವರ್ಣೀಯರಿಂದ ತೊಂದರೆ ಅನುಭವಿಸುವಂತಾಗುತ್ತಿತ್ತು ಎಂಬ ನೆಪ ಸಮರ್ಥನೀಯವಲ್ಲ. ಏಕೆಂದರೆ ಪ್ರತಿ ಹಿಂಸೆ ತೋರಿಸದೆಯೂ ಎಷ್ಟೋ ಕಡೆಗಳಲ್ಲಿ ಅವರು ಹೊಡೆತ ತಿನ್ನುತ್ತಲೇ ಇದ್ದಾರೆ. ದಲಿತರು ಸವರ್ಣೀಯರ ಮೇಲೆ ಕೈಯೆತ್ತಿದರು ಎಂಬ ಒಂದೇಒಂದು ಸುದ್ದಿ ಇಡೀ ಜಾತಿಗ್ರಸ್ತ ಸಮಾಜಕ್ಕೆ ಶಾಕ್ ಟ್ರೀಟ್ಮೆಂಟ್ ಕೊಡುತ್ತಿತ್ತು. ಅದು ನಿಜವಾದ ದಂಗೆಯಾಗುತ್ತಿತ್ತು, ಪಶ್ಚಾತ್ತಾಪವಿಲ್ಲದ ದರ್ಪದ ಹಿಂದೂ ಸವರ್ಣೀಯರೆದುರು ಸಾವಿರ ಸತ್ಯಾಗ್ರಹಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಆಳದಲ್ಲಿ ಬೇರುಬಿಟ್ಟಿರುವ ಜಾತಿ ವಿಷಕ್ಕೆ ಒಂದು ಬಲಿಷ್ಠ ಪ್ರತಿವಿಷವೇ ಬೇಕಾಗಿದೆ, ಮತ್ತು ಅದು ಹಿಂಸೆಗೆ ಪ್ರತಿ ಹಿಂಸೆಯ ಉತ್ತರದಿಂದಲಷ್ಟೇ ಸಾಧ್ಯವಾಗುತ್ತದೆ.

ಜಾತಿ ದೌರ್ಜನ್ಯಗಳು ನಡೆದಾಗಲೂ ಅಷ್ಟೇ, ದುಃಖಿಸುತ್ತ ಕೂರುವ ಬದಲು - ಇಡೀ ದಲಿತ ಪ್ರಜ್ಞೆಯೇ ದುಃಖಿಸುವಂತೆ ಕಾಣುತ್ತ ಮನಕಲಕುವ ಕವಿತೆ, ಆತ್ಮಕತೆ ಬರೆಯುವ ಬದಲು - ಪ್ರತಿಕ್ರಿಯಾತ್ಮಕ ನಡೆಯ ಕುರಿತು ದಲಿತರು ಯೋಚಿಸಿದ್ದೇ ಹೌದಾದಲ್ಲಿ ಶೋಷಕರು ಅಷ್ಟು ನಿರ್ಭಯವಾಗಿ ವರ್ತಿಸಲು ಸಾಧ್ಯವಿಲ್ಲ. ಒಂದು ಕಡೆ ಬಾಬಾಸಾಹೇಬ್ ಅಂಬೇಡ್ಕರರು ದಲಿತರಿಗೆ ೧೦೦ ವರ್ಷ ಆಡುಕುರಿಯಂತೆ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಮೇಲು ಎಂದು ಹೇಳಿದರೆ; ಮತ್ತೊಂದು ಕಡೆ ಅವರು ದಲಿತರಿಗೆ ಅವಶ್ಯವಿರುವಾಗ ಹಿಂಸೆಯ ಕುರಿತು ಯೋಚಿಸಲೂ ಬಿಡುವುದಿಲ್ಲ.

ಹೌದು. ಹಿಂಸೆ ಪ್ರತಿಹಿಂಸೆಗೆ ದಾರಿ ಮಾಡಿಕೊಡುತ್ತದೆ. ೧೯೯೨ರಲ್ಲಿ ಬಿಹಾರದ ಬಾರಾ ಹತ್ಯಾಕಾಂಡದಲ್ಲಿ ಅದೇ ಆಗಿದೆ. ಆದರೆ ಅದೊಂದು ಯುದ್ಧದಂತಹ ಸನ್ನಿವೇಶವಾಗಿತ್ತು. ಅದು ಯಾವಾಗಲೂ ಸಂಭವಿಸುವುದಿಲ್ಲ. ಹಾಗೆ ಆದರೂ ಅದು ಉತ್ತಮ ಭವಿಷ್ಯಕ್ಕಾಗಿ ತೆರಲು ತಕ್ಕುನಾದ ಬೆಲೆ. ಒಟ್ಟಾರೆ ಯಾವುದೇ ತರಹದ ಪ್ರಾಣಹಾನಿಯೂ ಅನಪೇಕ್ಷಿತ. ಆದರೂ ಕ್ರಾಂತಿಕಾರಿ ಹಿಂಸೆಯ ಹಿನ್ನೆಯಲ್ಲಿ ನೋಡಿದಾಗ ಹರ್ಬರ್ಟ್ ಮರ್ಕ್ಯೂಸನ ‘ಕ್ಯಾಲುಕ್ಲಸ್ ಆಫ್ ಪ್ರೋಗ್ರೆಸ್’ ಗಮನಿಸಬೇಕು. ಕ್ರಾಂತಿಯ ವೇಳೆ ಮತ್ತು ನಂತರ ಕೊಲ್ಲಲ್ಪಡುವ ಜನರ ಸಂಖ್ಯೆ ಹಾಗೂ ಕ್ರಾಂತಿ ಸಂಭವಿಸದೆ ಯಥಾಸ್ಥಿತಿಯಿದ್ದರೆ ಸಂಭವಿಸುವ ಸಾವುಗಳ ತುಲನೆ ಅದು. ಅಮೆರಿಕದ ಸಮಾಜಶಾಸ್ತ್ರಜ್ಞ ಬ್ಯಾರಿಂಗ್ಟನ್ ಮೂರ್ ಇಂತಹ ತುಲನಾತ್ಮಕ ವಿಶ್ಲೇಷಣೆಯಂತೆ ಚೀನಾದೊಡನೆ ಭಾರತವನ್ನು ಹೋಲಿಸುವುದು, ಟೆಡ್ ಹೊನ್ರಿಚ್‌ನ ಪ್ರಜಾತಾಂತ್ರಿಕ ಹಿಂಸೆಯ ವ್ಯಾಖ್ಯಾನಗಳು ಇಂತಹ ಪರಿಣಾಮ ಲೆಕ್ಕಾಚಾರ ಹೊಂದಿದ ಇತ್ತೀಚಿನ ವಿಶ್ಲೇಷಣೆಗಳ ಕೆಲವು ಉದಾಹರಣೆಗಳು. ಜಾತಿ ವಿನಾಶ ಎನ್ನುವುದು ಯಾವುದೇ ಕ್ರಾಂತಿಗಿಂತ ಕಡಿಮೆಯದಲ್ಲ.

ಕೊನೆಯದಾಗಿ, ಭಾರತದ ಮೇಲ್ವರ್ಗದ ಜನ ಮತ್ತು ಕಾರ್ಪೋರೇಟ್ ಮೀಡಿಯಾ ಜಾತಿ ಕುರಿತು ಕೇವಲ ಮೂರು ವಿಷಯ ಮಾತನಾಡುತ್ತಾರೆ: ಮೀಸಲಾತಿ, ಜಾತಿ ದೌರ್ಜನ್ಯ ಮತ್ತು ಚುನಾವಣಾ ರಾಜಕಾರಣ. ಅವರೆಂದೂ ತಮ್ಮ ದೃಷ್ಟಿಯನ್ನು ಒಳ ತಿರುಗಿಸಿ ಹೇಗೆ ಜಾತಿಯು ತಮ್ಮ ಬದುಕಿನ ಪ್ರತಿ ಸ್ತರವನ್ನು ಆವರಿಸಿಕೊಂಡಿದೆ ಎಂದು ನೋಡಲಾರರು. ವಾಸ್ತವ ಹೀಗಿರುವಾಗ ನಾವು ಹೇಗೆ ಮತ್ತು ಯಾವಾಗ ಅಂಬೇಡ್ಕರರ ಕನಸಾಗಿರುವ ಜಾತಿವಿನಾಶದ ಗುರಿಯನ್ನು ತಲುಪಬಲ್ಲೆವು?

ನಿಜವಾಗಿ ಮೀಸಲಾತಿ ಮತ್ತು ಚುನಾವಣಾ ರಾಜಕಾರಣಗಳು ಜಾತಿವ್ಯವಸ್ಥೆಯ ಸಂಕೇತಗಳಾಗಿವೆ. ಜಾತಿ ದೌರ್ಜನ್ಯ ಅದರ ಸಾಂದ್ರ ಅಭಿವ್ಯಕ್ತಿಯಾಗಿದೆ. ಅದು ಜಾತಿ ವ್ಯವಸ್ಥೆಯ ವಿಚಿತ್ರ ಮತ್ತು ಕಹಿ ಫಲ. ಮಧ್ಯಮ ಮತ್ತು ಮೇಲ್ವರ್ಗದ ಜನರು ಈ ಭಾಷೆಯಲ್ಲಿ ಮಾತನಾಡಿದರೆ ಅದು ಅವರ ತಪ್ಪೆನ್ನುವುದಿಲ್ಲ. ಆದರೆ ಕಾರ್ಯಕಾರಣಗಳನ್ನು ಸಮಗ್ರವಾಗಿ ಗ್ರಹಿಸಿ ಅವರು ಮಾತನಾಡುವುದಿಲ್ಲ ಎನ್ನುವುದು ದೋಷವಾಗಿದೆ.

ಅವರು ಮೀಸಲಾತಿ ಕುರಿತು ಮಾತನಾಡುವಾಗ ಅದನ್ನು ಮೆರಿಟ್ ಕುರಿತ ಮೂರ್ಖತನದ ಡಿಬೇಟಿಗೆ ಇಳಿಸಿಬಿಡುತ್ತಾರೆ. ಚುನಾವಣಾ ರಾಜಕಾರಣದ ಬಗೆಗೆ ಮಾತನಾಡುವಾಗ ರಾಜಕಾರಣಿ ವರ್ಗದ ಅವಕಾಶವಾದಿತನವನ್ನು ಮುಂದು ಮಾಡಿ ಹೇಳುತ್ತಾರೆ. ಕೊನೆಗದು ಈ ಅಥವಾ ಆ ಪಕ್ಷದ ಪರ ವಿರೋಧದ ಮಾತುಗಳಲ್ಲಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ ಜಾತಿ ದೌರ್ಜನ್ಯ ಕುರಿತು ಚರ್ಚೆ ಆಗುವುದೇ ಇಲ್ಲ. ಅದೂ ಹಾಗಾದರೆ ಅದೊಂದು ‘ದುರಾದೃಷ್ಟಕರ ಘಟನೆ’ ಎನಿಸಿಕೊಂಡು, ಅವು ದಲಿತರ ತೀವ್ರ ಪ್ರತಿಭಟನೆಗೆ ಕಾರಣವಾದರೆ ಅವರ ಅತಿ ಪ್ರತಿಕ್ರಿಯೆಯಂತೆ ಕಾಣಲ್ಪಡುತ್ತವೆ.

ಊನಾ ಘಟನೆ ನಂತರ ದಲಿತರ ಪ್ರತಿಭಟನೆಯ ಕಾವು ಹೆಚ್ಚಿದಾಗ ಮಾಧ್ಯಮಗಳು ಮಾಡಿದ್ದೇನೆಂದರೆ ಅದರಿಂದ ದಲಿತರ ಮತಬ್ಯಾಂಕ್ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು. ಅನ್ಯಾಯ ಮತ್ತು ಅಮಾನವೀಯ ಹಿಂಸೆ ಎಲ್ಲ ಹಿಂದೆ ಸರಿದುಬಿಟ್ಟವು. ಒಂದುವೇಳೆ ದೌರ್ಜನ್ಯ ಮತ್ತು ಮಿಸಲಾತಿಯನ್ನು ಸರಿಯಾಗಿ, ಅರ್ಥಪೂರ್ಣವಾಗಿ ಚರ್ಚಿಸಿದಲ್ಲಿ, ಆಳುವ ವರ್ಗದ ಎಲ್ಲ ಒಳಸುಳಿಗಳೂ ಬಯಲಾಗುತ್ತವೆ.

ನಿಜವಾಗಿ, ಜಾತಿಗಾಗಿ ಸಂವಿಧಾನದಲ್ಲಿ ಒಂದು ಸ್ಥಾನ ಮುಡಿಪಾಗಿಡದಿದ್ದಲ್ಲಿ ಬಹುಹಿಂದೆಯೇ ಅದು ಮರಣಶಯ್ಯೆ ತಲುಪಿ ಈ ವೇಳೆಗೆ ಶಕ್ತಿಹೀನವಾಗಿ ಸತ್ತೇ ಹೋಗಿರುತ್ತಿತ್ತು. ಆಳುವವರ್ಗ ಬಹು ಚಾಕಚಕ್ಯತೆಯಿಂದ ಅದನ್ನು ಉಳಿಸಿಕೊಂಡು ಬಂತು. ಅದೂ ದಲಿತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನೆಪ ಹೇಳಿ ಉಳಿಸಿತು. ಸಾಮಾಜಿಕ ನ್ಯಾಯ ಹೇಗೆ ಕೊಡುವುದು? ಮೀಸಲಾತಿ ಕೊಡಿ..

ಮೀಸಲಾತಿ ನೀತಿಯು ಇಂದು ಶುರುವಾದದ್ದಲ್ಲ. ವಸಾಹತುಶಾಹಿ ಆಳ್ವಿಕರು ೧೯೩೫ರಷ್ಟು ಹಿಂದೆಯೇ ರಾಜಕೀಯ ಮೀಸಲಾತಿಯನ್ನು ಕೊಟ್ಟರು. ಅದು ೧೯೪೩ರ ಹೊತ್ತಿಗೆ ಇವತ್ತಿನ ಕೋಟಾ ಸಿಸ್ಟೆಮ್ ಆಗಿ ಜಾರಿಯಾಯಿತು. ಅಸಾಮಾನ್ಯ ಜನರಿಗಾಗಿ ಅಸಾಮಾನ್ಯ ನೀತಿಯಾಗಿ ಜಾರಿಗೆ ಬಂತು. ಆದರೆ ಸ್ವಾತಂತ್ರ್ಯಾ ನಂತರ ಈ ಉದಾತ್ತ ತತ್ವವು ವಾಸ್ತವದ ಉಪಕರಣವಾಗಿ ಬಳಕೆಗೆ ಬಂತು. ಮೀಸಲಾತಿಯನ್ನು ಪರಿಶಿಷ್ಟ ಜಾತಿಗಳಿಗೆ ಹೇಗೋ ಹಾಗೆ ಪರಿಶಿಷ್ಟ ವರ್ಗಗಳಿಗೂ ಮುಂದುವರೆಸಿದರು.

ಈಗಾಗಲೇ ಇರುವ ಷೆಡ್ಯೂಲಿನಲ್ಲಿ ಪರಿಶಿಷ್ಟ ಜಾತಿ ಜೊತೆಗೆ ಪರಿಶಿಷ್ಟ ವರ್ಗದವರನ್ನೂ ಸೇರಿಸಿಕೊಂಡಿದ್ದರೆ ಈಗಿರುವುದಕ್ಕಿಂತ ಉತ್ತಮವಾಗಿ ಅದನ್ನು ಜಾರಿ ಮಾಡಬಹುದಿತ್ತು. ಅದು ಅಸ್ಪೃಶ್ಯರಾದ ಪರಿಶಿಷ್ಟ ಜಾತಿಗಳನ್ನು ಒಂದು ಕಳಂಕದಿಂದ ದೂರ ಮಾಡಿದಂತೆಯೂ ಆಗುತ್ತಿತ್ತು. ಏಕೆಂದರೆ ಪರಿಶಿಷ್ಟ ವರ್ಗಗಳು ಅಸ್ಪೃಶ್ಯರಲ್ಲ. ಆದರೆ ಪ್ರಭುತ್ವವು ಬರಿಯ ಹೆಸರನ್ನಷ್ಟೆ ಪ. ಜಾತಿ ಇದ್ದಲ್ಲಿ ಪ. ವರ್ಗ ಎಂದು ಬದಲಾಯಿಸಿ, ಒಂದು ಬೇರೆಯ ಷೆಡ್ಯೂಲನ್ನೇ ಸೃಷ್ಟಿಸಿ, ಪರಿಶಿಷ್ಟ ಜಾತಿಗಳಿಗೆ ನೀಡಿದ ಎಲ್ಲ ಅವಕಾಶಗಳ ನೀಡಿತು. ಅದರ ಜೊತೆಗೆ ಅಂಥ ಇನ್ನಷ್ಟು ವರ್ಗಗಳಿದ್ದಲ್ಲಿ ಪ್ರಭುತ್ವವು ಅವರನ್ನೂ ಗುರುತಿಸಿ ಸೇರಿಸುವುದೆಂದೂ, ಅವರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವುದೆಂದೂ ಹೇಳಿತು.

ಹೀಗೆ ಅವರು ಒಂದು ಕ್ಯಾನ್ ತುಂಬ ಜಾತಿಹುಳ ತಯಾರು ಮಾಡಿದರು. ಯಾವಾಗ ಲಾಭವೋ ಆಗದರ ಮುಚ್ಚಳ ತೆಗೆಯಬಹುದು ಹಾಗೆ. ಈ ಮುಚ್ಚಳವನ್ನು ನಾವೆಲ್ಲ ಬಲ್ಲಂತೆ ವಿ.ಪಿ.ಸಿಂಗ್ ತೆರೆದು ಸಮಾಜದಲ್ಲಿ ಜಾತೀಯತೆಯನ್ನು ಹರಡಿದರು.

ಹಿಂದುಳಿದ ದೇಶದಲ್ಲಿ ಹಿಂದುಳಿದಿರುವಿಕೆಯೇ ಮೀಸಲಾತಿ ಕೊಡಲು ಕಾರಣವಾಗಬಾರದು. ವಸಾಹತುಶಾಹಿ ಆಳ್ವಿಕರು ದಲಿತರಿಗೆ ಪ್ರಾತಿನಿಧ್ಯ ಮೀಸಲಾತಿಯನ್ನು ಅವರು ‘ಹಿಂದುಳಿದವರೆಂದಷ್ಟೆ’ ಕೊಟ್ಟದ್ದಲ್ಲ. ಅವರ ಸಾಮಾಜಿಕ ಏಣಿಶ್ರೇಣಿಯು ಯಾವ ಅಭಿವೃದ್ಧಿಯೂ ಅವರ ಬಳಿ ಬರಲು ಬಿಡುವುದಿಲ್ಲ ಎಂದು ಮೀಸಲಾತಿ ನೀಡಿದರು. ಮೀಸಲಾತಿ ಎನ್ನುವುದು ಹಿಂದುಳಿದಿರುವಿಕೆಗೆ ಮದ್ದು ಎಂದು ಭಾವಿಸುವುದು ಅತ್ಯಂತ ಮೂರ್ಖತನವಾಗುತ್ತದೆ.

ಪ್ರಜಾಪ್ರಭುತ್ವ ಗಣರಾಜ್ಯ ಎಂದು ತನ್ನನ್ನು ಕರೆದುಕೊಂಡ ದೇಶವು ತನ್ನ ಪ್ರಜೆಗಳಿಗೆ ಸಮಾನ ಅಭಿವೃದ್ಧಿ ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊತ್ತುಕೊಂಡಿರುತ್ತದೆ. ತಾರ್ಕಿಕವಾಗಿ ಮೂಲಭೂತ ಸವಲತ್ತುಗಳಾದ ಆರೋಗ್ಯ, ಶಿಕ್ಷಣ, ಕನಿಷ್ಠ ಜೀವನಾವಶ್ಯಕತೆಗಳ ಲಭ್ಯತೆ ಇರುವಂತೆ ನೋಡಿಕೊಳ್ಳುವುದು ಈ ಜವಾಬ್ದಾರಿ ನಿಭಾಯಿಸುವ ದಾರಿಯಾಗಿದೆ. ಆದರೆ ಈ ಎಲ್ಲದರಲ್ಲೂ ಭಾರತೀಯ ಪ್ರಭುತ್ವವು ದಯನೀಯವಾಗಿ ಸೋತಿದೆ. ಇವೆಲ್ಲವನ್ನು ಖಾಸಗಿಯವರಿಗೆ ಕೊಟ್ಟು ಆಗಲೇ ಶೋಷಿತರಾದವರು ಇನ್ನಷ್ಟು ಸುಲಿಗೆಗೊಳಗಾಗುವಂತೆ ಮಾಡಿದೆ.

ಆಳುವವರ್ಗಗಳ ಮೋಸವನ್ನು ಅರೆಬರೆ ಭೂಸುಧಾರಣೆ ಜಾರಿ, ಹಸಿರು ಕ್ರಾಂತಿ, ಮತ್ತಿತರ ತಥಾಕಥಿತ ಅಭಿವೃದ್ಧಿ ನೀತಿಗಳಲ್ಲಿ ನೋಡಬಹುದು. ಇದು ಗ್ರಾಮೀಣ ಭಾರತದಲ್ಲಿ ಸಿರಿವಂತ ಶೂದ್ರ ರೈತರನ್ನು ಸೃಷ್ಟಿಸಿತು. ಅವರು ಆಳುವವರ ಜೊತೆ ಕೈಜೋಡಿಸಿಯೇ ಉಳಿದರು. ಇವೆಲ್ಲ ನಡೆಯುವಾಗ ದಲಿತರು ರೈತಕೂಲಿಗಳಾಗಿ, ತಮ್ಮ ಜೀವಿತಕ್ಕೆ ಶೂದ್ರ ರೈತರ ಮೇಲೆ ತೀವ್ರ ಅವಲಂಬಿತರಾಗಿ ಉಳಿದರು.

ಜಾತಿಯ ಮುಖ್ಯ ವ್ಯಕ್ತರೂಪ ಚುನಾವಣಾ ರಾಜಕಾರಣ. ಮೂಲಭೂತವಾಗಿ ಇದರ ಒಳಸಂಚು ‘ಫಸ್ಟ್ ಪಾಸ್ಟ್ ದ ಪೋಸ್ಟ್’ವ್ಯವಸ್ಥೆ, ಎಂದರೆ ಅತಿ ಹೆಚ್ಚು ಮತ ಪಡೆದ ಒಬ್ಬ ವ್ಯಕ್ತಿಯನ್ನು ಆರಿಸಿ ಕಳಿಸುವುದು. ಆದರೆ ಈ ವಿಧಾನ ಭಾರತದಂತಹ ಬಹುಮತಗಳ, ಬಹುಭಾಷೆಗಳ, ಬಹುಸಂಸ್ಕೃತಿಯ, ಬಹುಜನಾಂಗೀಯ, ಬಹುಪ್ರಾಂತೀಯ ದೇಶಕ್ಕೆ ಸರಿ ಹೊಂದುವುದಿಲ್ಲ. ಅದಕ್ಕೇ ಅಂಬೇಡ್ಕರ್ ಈ ದೇಶ ಹಲವು ಸಮುದಾಯಗಳ ಮಿಶ್ರಣ ಎಂದು ಕರೆದದ್ದು. ಆದರೆ ಈ ವ್ಯವಸ್ಥೆಯಿಂದ ಲಾಭ ಸಿಗುವುದು ಮಾತ್ರ ಆಳುವವರಿಗೆ, ಕೊನೆಯಿರದ ಆಳುವ ಅವಕಾಶವಾಗಿ.

ಜಗತ್ತಿನ ಬಹುಪಾಲು ಪ್ರಜಾಪ್ರಭುತ್ವ ದೇಶಗಳು ಅಳವಡಿಸಿಕೊಂಡು ಯಶಸ್ವಿ ಪ್ರಜಾಪ್ರಭುತ್ವಗಳೆನಿಸಿಕೊಳಲು ಕಾರಣವಾದ, ಪ್ರಸ್ತುತ ಜಾರಿಯಲ್ಲಿರುವ ಸಂಖ್ಯಾವಾರು ಪ್ರಾತಿನಿಧ್ಯದಿಂದ ಜಾತಿ/ಸಮುದಾಯಗಳ ಕೈವಾಡದಿಂದ ಆದ ಅನ್ಯಾಯ ಕಡಿಮೆ ಮಾಡಲು ಸಾಧ್ಯವಿತ್ತು. ಆದರೆ ಚುನಾವಣಾ ರಾಜಕಾರಣ ಹೆಚ್ಚೆಚ್ಚು ಸ್ಪರ್ಧಾತ್ಮಕವೂ ಅನಿಶ್ಚಿತವೂ ಆಗುತ್ತ ಹೋದಹಾಗೆ, ಪ್ರಾದೇಶಿಕ ಪಕ್ಷಗಳು ೧೯೭೦ರ ಆರಂಭದಿಂದ ಶುರುವಾದ ಹಾಗೆ, ನಾನು ಮೇಲೆ ಹೇಳಿದ್ದಕ್ಕೆ ಸಹಜ ಪ್ರತಿಕ್ರಿಯೆಯೋ ಎಂಬಂತೆ - ಎಂದರೆ ಹೊಸದಾಗಿ ಸೃಷ್ಟಿಯಾದ ಸಿರಿವಂತ ರೈತರಿಂದ ಮತಬ್ಯಾಂಕು ಅತಿಮೌಲ್ಯ ಪಡೆದುಕೊಂಡುಬಿಟ್ಟಿತು. ಜಾತಿ ಕುಲಗಳು ಮತ ಪೂರೈಸುವ ಬ್ಲಾಕುಗಳಾಗಿ ಅವರಿಗೆ ಒದಗಿಬಂದವು. ದಲಿತ ಚಳುವಳಿ ಹಿನ್ನೆಲೆಗೆ ಸರಿದ ಹೊತ್ತಿನಲ್ಲಿ ತುಂಬ ಸಂಖ್ಯೆಯ ದಲಿತರು ಲಭ್ಯರಾದರು. ದಲಿತರ ವೋಟಿನ ಬೆನ್ನುಹತ್ತಿ, ರಾಜಕೀಯ ಪಕ್ಷಗಳ ಆಶೋತ್ತರಗಳಿಗೆ ತಕ್ಕಂತೆ ಅಂಬೇಡ್ಕರರು ವಿರೂಪಗೊಳಿಸಲ್ಪಟ್ಟು ಒಂದು ಪ್ರಮುಖ ಸಂಕೇತವಾಗಿಬಿಟ್ಟರು.

ಇಂತಹ ವಿಷಮಯ ವಾತಾವರಣದಲ್ಲಿ ಅಂಬೇಡ್ಕರರ ಜಾತಿ ವಿನಾಶ ಕನಸು ಜ್ಯೋತಿರ್ವರ್ಷಗಳಷ್ಟು ದೂರ ಇರುವಂತೆ ತೋರುತ್ತಿದೆ. ಅಂಬೇಡ್ಕರರ ಹೆಸರನ್ನು ಮಂತ್ರದಂತೆ ಜಪಿಸುವವರು ಉಳಿದವರಿಗಿಂತ ಹೆಚ್ಚು ಜಾತಿವಾದಿಗಳಾಗಿ ಕಾಣಿಸುತ್ತಿದ್ದಾರೆ. ಜಾತಿಯ ನುಡಿಗಟ್ಟು ಜಾತಿಗಷ್ಟೇ ಸೀಮಿತಗೊಳ್ಳುವುದಿಲ್ಲ. ಇರುವುದಕ್ಕಿಂತ ಉತ್ತಮ ಶ್ರೇಣಿ ಬಯಸುವುದು ಮತ್ತು ಶ್ರೇಣಿ ಇರಬೇಕೆನ್ನುವುದು ಜಾತಿಯ ಪ್ರಮುಖ ಲಕ್ಷಣವಾಗಿದೆ. ಅದು ಅಮೀಬಾದಂತೆ ಸಹಜವಾಗಿ ಸರಳವಾಗಿ ಉಪಜಾತಿಯಾಗಿ, ಇನ್ನಷ್ಟು ಉಪ ಉಪ ಜಾತಿಗಳಾಗಿ ಒಡೆಯುತ್ತ ಹೋಗುತ್ತದೆ. ಇದೇ ಕಾರಣಕ್ಕೆ ನಾನು ಯಾವಾಗಲೂ ಪ್ರತಿಪಾದಿಸುತ್ತ ಬಂದಿದ್ದೇನೆ, ಯಾವುದೇ ಕ್ರಾಂತಿಕಾರಕ ಚಳುವಳಿ ಜಾತಿ ಆಧರಿತವಾಗಿ ನಡೆಯಲು ಸಾಧ್ಯವಿಲ್ಲ. ಅಥವಾ ಅಸ್ಮಿತೆಯ ಪ್ರತಿಪಾದನೆಯ ಹೆಸರಲ್ಲಿಯೂ ಕ್ರಾಂತಿಕಾರಿ ಬದಲಾವಣೆ ಸಾಧ್ಯವಿಲ್ಲ. ದಲಿತರು ಇದನ್ನು ಬೇಗ ಅರ್ಥಮಾಡಿಕೊಂಡಷ್ಟೂ ಅವರಿಗೆ ಒಳ್ಳೆಯದು.



(ಸ್ಕ್ರೋಲ್.ಇನ್‌ನಲ್ಲಿ ಪ್ರಕಟವಾದ ಸಂದರ್ಶನ)


2 comments: