Friday, 12 June 2026

ಕನ್ಹೇರಿ Kanheri Caves - ‘ಸದಾ ಸ್ವಸ್ಥವಾಗಿರುವ ಬುದ್ಧನಿದ್ದಾನೆ..’

 



ಒಂದು ಚದರ ಕಿಲೋಮೀಟರಿಗೆ ಇಪ್ಪತ್ತೈದು ಸಾವಿರ ಜನರು ವಾಸಿಸುವ ಮಹಾನಗರವೊಂದರಲ್ಲಿ ೧೦೩ ಚದರ ಕಿಲೋಮೀಟರ್ ವಿಸ್ತೀರ್ಣದ ರಕ್ಷಿತಾರಣ್ಯ ಇರುವುದು ಸಾಮಾನ್ಯ ಸಂಗತಿಯಲ್ಲ. ಅದರೊಳಗೆ ಎರಡು ಸಾವಿರ ವರ್ಷ ಹಳೆಯ ಗುಹೆಗಳಿರುವುದು, ಸಾವಿರ ವರ್ಷಗಳ ಕಾಲ ಬೌದ್ಧ ಭಿಕ್ಕುಗಳು ಅಲ್ಲಿ ವಾಸಿಸಿದ್ದರೆನ್ನುವುದಂತೂ ಇನ್ನೂ ಅಸಾಮಾನ್ಯ ಸಂಗತಿಯೇ. ಮುಂಬಯಿಯ ಬೊರಿವಿಲಿಯಿಂದ ೩೦ ಕಿಲೋಮೀಟರ್ ದೂರದ ಸಾಲ್ಸೆಟ್ ದ್ವೀಪದಲ್ಲಿರುವ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕನ್ಹೇರಿ ಅಂತಹ ವಿಶಿಷ್ಟ ತಾಣವಾಗಿದೆ. 


ಸುತ್ತ ಎತ್ತೆತ್ತ ನೋಡಿದರತ್ತ ಕರಿ ಹೆಬ್ಬಂಡೆಗಳ ತೋರಿಸುತ್ತ ನಿಂತ ಪರ್ವತ ಸಾಲು; ಚಿಗುರಲು ಅಣಿಯಾಗಿರುವ ಉದುರೆಲೆ ಹಾಸಿಕೊಂಡ ನೆಲದ ದಟ್ಟ ಕಾಡು; ಮುದಿತ ಹಕ್ಕಿಗಳ ಕೂಗು; ಕೀಚುಕೀಚೆನ್ನುತ್ತ ಬಂಡೆಯಿಂದ ಬಂಡೆಗೆ ಹಾರುತ್ತ ತಾಯ ಮೊಲೆ ಚೊಟ್ಟನ್ನು ಕಚ್ಚಿ ಹಿಡಿದು ಜೋತಾಡುತ್ತ ಹೇನು ಹೆಕ್ಕಿಸಿಕೊಳ್ಳುವ ಸುಖದಲ್ಲಿ ಮೈಮರೆತ ಮಂಗಗಳು; ಮಹಾನಗರದ ಗದ್ದಲ, ಗಡಿಬಿಡಿಗಳ ಸೋಂಕೇ ಇಲ್ಲದೆ ಕಾಲವು ಕಾಲು ಮುರಿದುಕೊಂಡು ಬಿದ್ದಂತೆ, ಯಾವುದೋ ಆದಿಮ ಯುಗಕ್ಕೆ ಬಂದೆವೋ ಎನಿಸುವಂತೆ ತಣ್ಣಗಿರುವ ಗುಹೆಗಳು - ಇದು ಹೋದವರನ್ನೆಲ್ಲ ಪ್ರಕೃತಿಯ ಮಡಿಲಿಗೊಪ್ಪಿಸುವ ಕನ್ಹೇರಿ. ಮರಗಳು ಎಲೆಯುದುರಿಸಿ ಬೋಳು ನಿಂತು ಚಿಗುರು ಹೊಮ್ಮಿಸಲು ಸಿದ್ಧವಾಗಿದ್ದ ಚೈತ್ರ ಕಾಲದಲ್ಲಿ ನಾವಲ್ಲಿದ್ದೆವು. ಉರಿಬಿಸಿಲಿನಲ್ಲಿ ರಣರಣ ಎನ್ನುವ ಬೆಟ್ಟದ ಮೇಲೆ ಓಡಾಡಿದರೂ ಕತ್ತಲು-ನಿಶ್ಶಬ್ದ ಆವರಿಸಿರುವ ಗುಹೆಗಳು ಆಯಾಸ ಕಾಣದಂತೆ ಮಾಡಿದವು. 


ಕನ್ಹೇರಿ




ಭಾರತದ ೧೨೦೦ ಬೌದ್ಧ ಗುಹಾಲಯಗಳಲ್ಲಿ ಸಾವಿರಕ್ಕೂ ಹೆಚ್ಚು ಮಹಾರಾಷ್ಟ್ರದಲ್ಲಿವೆ. ಸಾಮ್ರಾಟ ಅಶೋಕನು ಎಂಟು ದಿಕ್ಕಿಗೆ ಧಮ್ಮ ಪ್ರಚಾರಕ ಭಿಕ್ಕುಗಳನ್ನು ಕಳುಹಿಸಿದಾಗ ಮಹಾ ಧಮ್ಮರಖ್ಖಿತನನ್ನು ಮಹಾರಾಷ್ಟ್ರಕ್ಕೆ ಕಳಿಸಿದ. ಕರಾವಳಿಯಲ್ಲಿ ನೆಲೆನಿಂತು ದಕ್ಷಿಣದಲ್ಲೆಲ್ಲ ಧಮ್ಮ ವಿಸ್ತಾರವಾಗಿ ಹರಡಿಕೊಂಡಿತು. ಭಿಕ್ಕುಗಳು ಗಾಂಧಾರದಿಂದ ಶ್ರೀಲಂಕೆಯವರೆಗೆ ನಿರಂತರವಾಗಿ ಸಂಚರಿಸಿದ್ದರಿಂದ ಬೌದ್ಧ ಗುಹಾಲಯಗಳು ಕರಾವಳಿಯ ಬೆಟ್ಟಸಾಲುಗಳಲ್ಲಿ ರೂಪುಗೊಂಡವು. ಅಜಂತಾದಿಂದ ಕೊಂಕಣದವರೆಗೆ ೮೦ ತಾಣಗಳಲ್ಲಿ ೧೨೦೦ ಗುಹೆಗಳು ನಿರ್ಮಾಣವಾದವು. ಮಹಾರಾಷ್ಟ್ರದ ನಾಲಾ ಸೋಪಾರ, ಕನ್ಹೇರಿ, ಅಜಂತಾ ಎಲ್ಲೋರ, ಎಲಿಫೆಂಟಾ, ಮಹಾಕಾಳಿ, ಕೊಂಡನ, ಬೇಡ್ಸೆ, ಕಾರ್ಲಾ, ಖೇಡ್, ನಾಸಿಕ್, ಔರಂಗಾಬಾದ್, ಶಿವನೇರಿ, ಶಿರವಾಳ, ಲೇಣ್ಯಾದ್ರಿ ಮೊದಲಾದ ವಿಹಾರ, ವರ್ಷಾವಾಸ ಕೇಂದ್ರಗಳು ಮೈದಳೆದವು. ದಖ್ಖನ್ ಪ್ರಸ್ಥಭೂಮಿಯ ಹಗುರ ಮತ್ತು ಮೃದುವಾದ ಬಸಾಲ್ಟ್ ಅಗ್ನಿಶಿಲೆ ಕೆತ್ತನೆಗೆ ಸೂಕ್ತ ಎಂದು ಗುರುತಿಸಿ ಗುಹೆಗಳ ಕೊರೆಯಲಾಗಿದೆ. ಬಂಡೆಯಲ್ಲಿ ಗುಹೆಯನ್ನು, ಸೂಕ್ಷ್ಮ ಕೆತ್ತನೆಯ ವಿಗ್ರಹಗಳನ್ನು ಕಲ್ಪಿಸಿಕೊಂಡು ಗುಹಾಲಯ ರೂಪಿಸಿರುವುದರ ಹಿಂದೆ ಅಪಾರ ಕೌಶಲ್ಯವಿದೆ.


೧೦೯ ಗುಹೆಗಳಿರುವ ಕನ್ಹೇರಿ ಭಾರತದ ಅತಿ ದೊಡ್ಡ ಬೌದ್ಧ ಪುರಾತತ್ವ ತಾಣಗಳಲ್ಲಿ ಒಂದಾಗಿದೆ. ಭಿಕ್ಕುಗಳ ವರ್ಷಾವಾಸವಾಗಿ, ಆರಾಮ-ವಿಹಾರವಾಗಿ, ಚೈತ್ಯವಾಗಿ, ಶೈಕ್ಷಣಿಕ ಕೇಂದ್ರವಾಗಿ ಒಂದು ಸಾವಿರ ವರ್ಷ ಬಳಕೆಯಲ್ಲಿದ್ದ ಕನ್ಹೇರಿ ಗುಹೆಗಳು ದಕ್ಷಿಣ, ಪಶ್ಚಿಮ ಭಾರತದಲ್ಲಿ ಬೌದ್ಧ ಧಮ್ಮ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಿಕ್ಕುಗಳ ಸಂಘ, ಬದುಕು, ಗುಹೆಯ ವಾಸ್ತುಶಿಲ್ಪ, ಆ ಕಾಲದ ಇತಿಹಾಸಗಳ ಬಗೆಗೆ ಬೆಳಕು ಚೆಲ್ಲುವುದಲ್ಲದೇ ಬೌದ್ಧ ಧಮ್ಮದ ಸ್ಥಿತ್ಯಂತರವನ್ನು ಅಭ್ಯಸಿಸುವ ದೃಷ್ಟಿಯಿಂದಲೂ ಗುಹೆಗಳು ಮುಖ್ಯವಾಗಿವೆ. 


ಮುಂಬಯಿಯ ಶತಶಷ್ಠಿ ದ್ವೀಪವು (ಬ್ರಿಟಿಷರ ಬಾಯಲ್ಲಿ ‘ಸಾಲ್ಸೆಟ್ ಐಲ್ಯಾಂಡ್’) ಸಾವಿರಾರು ವರ್ಷಗಳಿಂದ ವ್ಯಾಪಾರ, ವಾಣಿಜ್ಯ ಕೇಂದ್ರವಾಗಿದ್ದ ಸ್ಥಳ. ದ್ವೀಪದ ಪರ್ವತ ಶ್ರೇಣಿಯು ಕಪ್ಪು ಅಗ್ನಿಶಿಲೆಯ ಭಾರೀ ಬಂಡೆಗಳನ್ನೂ, ದಟ್ಟ ಅರಣ್ಯವನ್ನೂ ಹೊಂದಿದ ಕೃಷ್ಣಗಿರಿ, ಅಥವಾ ಬಾಯಿ ಮಾತಿನಲ್ಲಿ ಕನ್ಹೇರಿ. ಶಾತವಾಹನ ದೊರೆ ವಾಶತಿಪುತ್ರ ಪುಲುಮಾವಿಯ ಪ್ರಾಕೃತ ಶಾಸನ(ನಾಸಿಕ್)ದಲ್ಲಿ ಆ ತಾಣವನ್ನು ಕನ್ಹಗಿರಿ ಎಂದು ವರ್ಣಿಸಿದ್ದರೆ ಸಂಸ್ಕೃತದಲ್ಲಿ ಕೃಷ್ಣಗಿರಿ ಎಂದು ಕರೆಯಲಾಗಿದೆ. ಒಂಬತ್ತನೆಯ ಶತಮಾನದ ಬೌದ್ಧ ಭಿಕ್ಕು ಬುದ್ಧ ಗ್ಯಾನಪಾದನ ಆತ್ಮಚರಿತ್ರೆಯಲ್ಲಿ ಕನ್ಹೇರಿಯನ್ನು, ‘ಕನೋಜಿನಿಂದ ಮುನ್ನೂರು ಯೋಜನ (೧೨೦೦ ಮೈಲಿ) ದೂರದಲ್ಲಿ ಪಶ್ಚಿಮ ದಿಕ್ಕಿಗೆ ಕೊಂಕಣ ದೇಶವಿದೆ. ಕೊಂಕಣದಲ್ಲಿ ಖನ್ಹೇರಿ ಎಂಬ ತಾಣವಿದೆ. ಆ ಗುಹೆಗಳು ಆಗಸ(ಖ)ಕ್ಕೆ ಹಬ್ಬಿದ ಬೇರು ಇಲ್ಲದ ಬಳ್ಳಿ (ಅನ್ಹೇರಿ)ಯ ಹಾಗೆ ಇವೆ’ ಎಂದು ವರ್ಣಿಸಲಾಗಿದೆ. ನೇಪಾಳದ ಕಠ್ಮಂಡು ಕಣಿವೆಯ ಹನ್ನೊಂದನೆಯ ಶತಮಾನದ ‘ಅಷ್ಟಸಹಸ್ರಿಕ ಪ್ರಜ್ಞಾಪಾರಮಿತ’ ಎಂಬ ತಾಳೆಗರಿ ಬರಹದಲ್ಲಿ ‘ಕನ್ಹ (ಕಪ್ಪು) ಶಿಲೆಯಿಂದ ರೂಪುಗೊಂಡ ಗಿರಿ ಗುಹೆ’ ಎಂದು ಕನ್ಹೇರಿಯನ್ನು ಚಿತ್ರಿಸಲಾಗಿದೆ.


ಕನ್ಹೇರಿ ಗುಹೆಗಳು ಹಲವು ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ. 


ದಾನಶಾಸನ


ಪ್ರತಿ ಗುಹೆಯ ಹೊರಭಾಗದಲ್ಲೂ ದಾನಶಾಸನವಿದೆ. ಒಟ್ಟು ೧೦೦ಕ್ಕಿಂತ ಹೆಚ್ಚು ಶಾಸನಗಳಿವೆ. ಒಂದು ಗುಹೆಯಲ್ಲಿ ಪಹ್ಲವಿ (ಅರಬ್) ಮತ್ತು ಜಪಾನೀ ಭಾಷೆಯ ಬರಹಗಳಿವೆ. ಗುಹೆಗಳನ್ನು ಕೊರೆಯಲು ಮತ್ತು ನೀರಿನ ತೊಟ್ಟಿ, ಮೆಟ್ಟಿಲು, ಸ್ತಂಭ, ಅಡ್ಡಣಿಗೆ, ಕೋಣೆ, ದಾರಿ, ಗೋಡೆಗಳನ್ನು ರೂಪಿಸಲು ದಾನ ನೀಡಿದವರ ವಿವರಗಳನ್ನು ಗಮನಿಸಿದರೆ ದಕ್ಷಿಣ ಮತ್ತು ವಾಯವ್ಯ ಭಾರತದಲ್ಲಿ ಬೌದ್ಧ ಧಮ್ಮ ಹರಡಲು ರಾಜಾಶ್ರಯದಷ್ಟೇ ವ್ಯಾಪಾರಿಗಳು, ಅಕ್ಕಸಾಲಿಗಳಂತಹ ಕುಶಲಕರ್ಮಿಗಳ ಒಕ್ಕೂಟಗಳು, ಭೂಮಾಲೀಕರು, ಅಧಿಕಾರಿಗಳ ಆರ್ಥಿಕ ಬೆಂಬಲ ಕಾರಣವಾಗಿದ್ದುದು ತಿಳಿದುಬರುತ್ತದೆ. ಕನ್ಹೇರಿಯು ಮಹಾರಾಷ್ಟ್ರದ ಪ್ರಮುಖ ಬಂದರು ಪಟ್ಟಣಗಳಾಗಿದ್ದ ಸೊಪಾರಾ, ಚೆಮುಲ (ಇಂದಿನ ಟ್ರಾಂಬೆ), ಕಲ್ಯಾಣ, ವಾಸೈ, ಥಾಣೆ, ಘೋಡಬಂದರಗಳಿಗೆ ಹತ್ತಿರ ಇದ್ದದ್ದು ವರ್ತಕರ ಸಂಪರ್ಕಕ್ಕೆ ಬರಲು ಕಾರಣವಿರಬಹುದೆನಿಸುತ್ತದೆ.


ಮಳೆನೀರು ನಿರ್ವಹಣೆ

ಕನ್ಹೇರಿ ಗುಹೆಗಳಿರುವುದು ಮಳೆ ಬೀಳುವ ಕರಾವಳಿ ತೀರದಲ್ಲಿ. ಸೂಕ್ತ ಮಳೆನೀರು ನಿರ್ವಹಣೆ ಮಾಡದಿದ್ದರೆ ಗುಹೆಗಳೆಲ್ಲ ಕೊಳಗಳಾಗುವುದು ಖಚಿತ. ಅದನ್ನು ಮುಂದಾಲೋಚಿಸಿ ಪ್ರತಿ ಗುಹೆಯ ನೀರಿನೋಟಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಕಿರುಕಾಲುವೆಗಳನ್ನು ಕೊರೆದು ಮೇಲಿಂದ ಹರಿದು ಬಂದ ನೀರು ಗುಹೆಯ ಬಾಯಿಯ ಬಳಿ ತೋಡಿದ ಭಾರೀ ತೊಟ್ಟಿಗೆ ತುಂಬುವಂತೆ, ಹೆಚ್ಚಾದದ್ದು ಆಚೀಚಿನ ತೊಟ್ಟಿಗಳ ತುಂಬಿಸುವಂತೆ, ಅಷ್ಟಾಗಿಯೂ ಮಿಕ್ಕಿದ್ದು ಬೆಟ್ಟದ ಮೇಲಿನಿಂದ ಇಳಿದು ಬರುವ ಅಬ್ಬಿಯನ್ನು ಸೇರಿಕೊಳ್ಳುವಂತೆ ಯೋಜಿಸಲಾಗಿದೆ. ಹಳ್ಳಕ್ಕೆ ಕಟ್ಟೆ, ಅಣೆಕಟ್ಟೆ ಕಟ್ಟಿದ ಕುರುಹು, ದಾಖಲೆಗಳಿವೆ.  


ಸಂವಹನ 


ಕೆಲವು ಗುಹೆಗಳ ಹೊರಭಾಗದಲ್ಲಿ ನಿಂತು ಕೂಗು ಹಾಕಿದರೆ ಎಲ್ಲ ಗುಹೆಗಳಿಗೂ ಕೇಳಿಸುತ್ತದೆ. ವಿವಿಧ ಹಂತಗಳಲ್ಲಿರುವ ಕಾವಲಿನವರು ಇವತ್ತಿಗೂ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಕ್ಕಿಂತ ಮೇಲಿರುವ ಗುಹೆಯಲ್ಲಿ ಮೊದಲು ಬೆಂಕಿ ಉರಿಸುತ್ತಿದ್ದರಂತೆ. ದೂರದಿಂದ ಬರುವವರಿಗೂ ಯಾವ ಬೆಟ್ಟದಲ್ಲಿ ಗುಹೆ ಇದೆಯೆಂದು ತಿಳಿಯಲು ಹಾಗೆ ಮಾಡುತ್ತಿದ್ದರು. ಹಲವು ಗುಹೆಗಳು ಪ್ರತಿಧ್ವನಿಸುವ ಸಾಮರ್ಥ್ಯ ಹೊಂದಿವೆ. ಗುಹೆಯೊಳಗೆ ಆಡಿದ ಮಾತು ಪ್ರತಿಧ್ವನಿಸಿ ಮೈಕ್ ಪರಿಣಾಮ ಕೊಡುತ್ತದೆ. ಗುರುಹಿರಿಯರು ಆಡಿದ್ದು ಭಿಕ್ಕುಗಣಕ್ಕೆ, ಉಪಾಸಕರಿಗೆ ಕೇಳಿಸುವಂತಾಗಲು ಈ ವ್ಯವಸ್ಥೆ ಮಾಡಿದಂತಿದೆ.


ಶಿಲ್ಪ ಸಮೃದ್ಧಿ


ಕೆಲವು ಗುಹೆಗಳು ಪ್ರಾರ್ಥನೆ ಸಲ್ಲಿಸುವ ಚೈತ್ಯಗಳಾದರೆ ಮತ್ತೆ ಕೆಲವು ವಿಹಾರಗಳು. ಎಲ್ಲಿ ಒಳಗೆ ಬುದ್ಧನ ಮೂರ್ತಿ ಅಥವಾ ಸ್ತೂಪ ಇದೆಯೋ ಆ ಗುಹೆಯ ಹೊರಗಿನ ಮೆಟ್ಟಿಲು ಅರ್ಧ ವೃತ್ತಾಕಾರದಲ್ಲಿ ಇದೆ (ಚಂದ್ರಶಿಲೆ). ಬುದ್ಧನ ಜನ್ಮ ವೃತ್ತಾಂತ, ಜಾತಕ ಕಥೆಗಳು, ಬುದ್ಧನ ಅನುಯಾಯಿಗಳು, ಶಿಷ್ಯರು, ಬೌದ್ಧ ಪಂಥಗಳ ದೇವಾನುದೇವತೆಗಳನ್ನು ತೋರಿಸುವ ಶಿಲ್ಪಗಳಿವೆ. ಅಭಯ ಮುದ್ರೆ, ಧರ್ಮಚಕ್ರ ಪ್ರವರ್ತನ ಮುದ್ರೆ, ಧ್ಯಾನ ಮುದ್ರೆ, ಭೂಮಿಸ್ಪರ್ಶ ಮುದ್ರೆ, ವರದ ಮುದ್ರ, ವಿತರ್ಕ ಮುದ್ರೆಯೇ ಮೊದಲಾದ ಹಸ್ತ ಮುದ್ರೆಗಳ ವಿವಿಧ ಭಂಗಿಗಳ ಸಾವಿರಾರು ಬುದ್ಧ ಶಿಲ್ಪಗಳಿವೆ. ಭೂಮಿಸ್ಪರ್ಶ ಮುದ್ರೆಯಲ್ಲಿ ಅಂಗೈ ಮುಂದೆ ಮಾಡಿ ಕಿರುಬೆರಳನ್ನು ನೆಲಕ್ಕೆ ತಾಗಿಸುತ್ತಿರುವ ಬುದ್ಧ; ಕೆಲವೆಡೆ ಶಿಲ್ಪ-ಗೋಡೆಗಳ ಮೇಲೆ ಉಳಿದುಕೊಂಡಿರುವ ಅಂದಿನ ಬಣ್ಣ; ಪೀಠದ ಮೇಲೆ ಕಾಲಿಳಿಬಿಟ್ಟುಕೊಂಡು ಬೋಧನಾ ಶೈಲಿಯಲ್ಲಿ ಕುಳಿತ ಅಸಂಖ್ಯ ಬುದ್ಧ ಶಿಲ್ಪಗಳು; ಅವಲೋಕಿತೇಶ್ವರರ, ದೀಪಂಕರ ಬುದ್ಧರ, ಮುಚಲಿಂದ ನಾಗರ, ಧ್ಯಾನಿಬುದ್ಧರ ಶಿಲ್ಪಗಳು; ೨೩ ಅಡಿಯ ಎರಡು ಭಾರೀ ಬುದ್ಧ ಮೂರ್ತಿಗಳು; ಸಣ್ಣ ಗುಹೆಯಲ್ಲಿ ಸಣ್ಣದಾಗಿ ಕೆತ್ತಿದ ನೂರಾರು ಬುದ್ಧ ಮೂರ್ತಿಗಳು; ವಜ್ರಯಾನದ ಹನ್ನೊಂದು ತಲೆಗಳ ಏಕಾದಶ ಬುದ್ಧ, ಮೈತ್ರೇಯ ಬುದ್ಧರು, ತಾರಾ, ಭ್ರಕುಟಿ, ನಿಂತ ಕುಳಿತ ಬೋಧಿಸತ್ವರು, ಪಶುಪಕ್ಷಿ ತರುಲತೆಗಳ ಶಿಲ್ಪಗಳು ವಿಶೇಷವೆನಿಸಿದವು. 


ಪರಿವರ್ತನೆಯ ಕಾಲದ ಸಾಕ್ಷಿ







ಹೀನಾಯಾನ ಕಾಲದಲ್ಲಿ ರೂಪುಗೊಂಡ ಕೆಲವು ಚೈತ್ಯ ಗುಹೆಗಳು ಮಹಾಯಾನ ಕಾಲದಲ್ಲಿ ಅಲಂಕೃತಗೊಂಡಿವೆ. ಮೊದಲು ಬುದ್ಧನನ್ನು ಸ್ತೂಪ, ಪಾದ, ಅರಳಿಮರ, ಬೆಳ್ಗೊಡೆಯ ಮೂಲಕ ಚಿತ್ರಿಸಿದ್ದರೆ, ನಂತರ ಬುದ್ಧನ ಮೂರ್ತಿಗಳನ್ನು ಕೆತ್ತಲಾಗಿದೆ. ವಜ್ರಯಾನದ ಸಂಕೇತ, ದೇವತೆ, ಮೂರ್ತಿಗಳಂತೂ ವಿಪುಲವಾಗಿವೆ. ಕಾಲಕ್ರಮೇಣ ಬೌದ್ಧ ಧಮ್ಮವು ತನ್ನ ಸ್ವರೂಪ, ಆಚರಣೆಯಲ್ಲಿ ಮಾಡಿಕೊಂಡ ಬದಲಾವಣೆಯನ್ನು ಗುಹೆಗಳು ಸೂಚಿಸುತ್ತವೆ.


ಕೆಲವು ಗುಹೆಗಳ ವಿವರ:


ಒಂದು ಹಳ್ಳದ ಆಚೀಚೆ ಅರ್ಧ ಕಿಲೋಮೀಟರ್ ಉದ್ದದ ಬಂಡೆಯೊಳಗೆ ಒಟ್ಟಾರೆ ಮೂರು ಹಂತಗಳಲ್ಲಿ ೧೦೯ ಗುಹೆಗಳು ಹರಡಿಕೊಂಡಿವೆ. ಒಂದರ ಪಕ್ಕ ಒಂದು ಇವೆಯೆಂದು ಅಲ್ಲ, ಹೇಗೆ ಪತ್ತೆಯಾದವೋ ಹಾಗೆ ೧, ೨, ೩, ೪ ಸಂಖ್ಯೆ ನೀಡಲಾಗಿದೆ. ೪೨ರ ಪಕ್ಕ ೭೨ ಇದೆ. ಕೆಲ ಗುಹೆಗಳು ಚೈತ್ಯಗಳು. ಚೈತ್ಯದೊಳಗೆ ಗರ್ಭಗುಡಿ, ನಂತರ ಹಜಾರ ಹಾಗೂ ಹೊರಗೆ ಅಂಗಳವಿರುತ್ತದೆ. ಹತ್ತಿಬರುವ ಮೆಟ್ಟಿಲುಗಳ ಆಚೀಚೆ ನೀರುಕಾಲುವೆಗಳು ತೋಡಲ್ಪಟ್ಟಿವೆ. ವಿಹಾರಗಳಲ್ಲಿ ಪುಟ್ಟ ಕೋಣೆಗಳಿವೆ. ಹೊರಗೆ ಕಂಬಗಳ ಹಜಾರವಿದೆ. ಮತ್ತೂ ಹೊರಗೆ ಅಂಗಳವಿದ್ದು ಕೂರಲು ಅಡ್ಡಣಿಗೆಗಳಿವೆ. 


ಕೆಳಹಂತದಲ್ಲಿ ನಾಲ್ಕು ಗುಹೆಗಳಿವೆ. ಗುಹೆ-೧ರ ನಿರ್ಮಾಣ ಪೂರ್ತಿಯಾದಂತಿಲ್ಲ. ನಂತರದ ಗುಹೆ-೨ರಲ್ಲಿ ಮೂರು ಸ್ತೂಪಗಳಿವೆ. ಬುದ್ಧನ ಕೆತ್ತನೆಯಿದೆ. ನೀರು ಸಂಗ್ರಹಿಸುವ ಕಾಲುವೆಯ ಬಳಿಯ ದಾನ ಶಾಸನವಿದೆ. ನಿರ್ಮಾಣ ಕಾರ್ಯಕ್ಕೆ ನಾಸಿಕದ ನಕನಾಕ, ಜಲಸಂಗ್ರಹಣೆಗೆ ಕಲ್ಯಾಣದ ಸ್ವಾಮಿದತ್ತ ಎಂಬ ಅಕ್ಕಸಾಲಿ ಕೊಟ್ಟ ಕೊಡುಗೆಯನ್ನು ಅಲ್ಲಿರುವ ಐದು ಶಾಸನಗಳು ತಿಳಿಸುತ್ತವೆ. 


ಗುಹೆ-೩ ಎರಡಂತಸ್ತಿನ ಭಾರೀ ಚೈತ್ಯ ಗೃಹ. ಮೆಟ್ಟಿಲು ಹತ್ತಿದರೆ ಇಕ್ಕೆಲದಲ್ಲಿ ದ್ವಾರಪಾಲಕರು ಸ್ವಾಗತಿಸುತ್ತಾರೆ. ಒಳಗೆ ಅಂಗಳದ ಎರಡು ತುದಿಗಳಲ್ಲಿ ಭಾರೀ ಸ್ತಂಭಗಳಿವೆ. ಬಲಬದಿಯ ಸ್ತಂಭವು ಹೀನಾಯಾನ ಮಹಾಯಾನಗಳ ಸಂಕ್ರಮಣ ಕಾಲದ ಸಾಕ್ಷಿಯಂತಿದೆ. ಗೋಡೆಯ ಮೇಲೆ ಬುದ್ಧನನ್ನು ಸಂಕೇತಿಸುವ ಸ್ತೂಪದ ಕೆತ್ತನೆಯಿದ್ದರೆ ಪಕ್ಕ ಇರುವ ಸ್ತಂಭದ ಕೆಳಭಾಗದಲ್ಲಿ  ಚೀವರ ತೊಟ್ಟ, ತಲೆ ಹಿಂದೆ ಪ್ರಭಾವಳಿಯಿರುವ ಬುದ್ಧನಿದ್ದಾನೆ. ಇದು ಬುದ್ಧನನ್ನು ಮೂರ್ತೀಕರಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಅದೇ ಸ್ತಂಭದ ತುದಿಭಾಗದಲ್ಲಿ ಒಡೆದ ಸಿಂಹ ಮೂರ್ತಿಗಳು ಅಳಿದುಳಿದ ಸ್ಥಿತಿಯಲ್ಲಿವೆ. ಸ್ತಂಭಗಳ ದಾಟಿ ಒಳಹೋದರೆ ದೊಡ್ಡ ಪ್ರಾಂಗಣವಿದೆ. ಅದರ ಎರಡೂ ಕೊನೆಗಳಲ್ಲಿ ಭಾರೀ ಬುದ್ಧ ಮೂರ್ತಿಗಳಿವೆ. ಸೊಂಟದ ಬಳಿ ಸ್ವಲ್ಪವೇ ವಾಲಿದಂತೆ ನಿಂತ ಐದು-ಆರನೆಯ ಶತಮಾನದ ಗುಪ್ತರ ಕಾಲದ ಮೂರ್ತಿಗಳವು. ಒಳಗೆ ಹೋಗುವವರೆಗೂ ಕಾಣದಂತಹ ಸ್ಥಾನದಲ್ಲಿರುವ ಏಳು ಮೀಟರ್ (೨೩ ಅಡಿ) ಎತ್ತರದ ಭವ್ಯ ಮೂರ್ತಿಗಳು ರೋಮಾಂಚನಗೊಳಿಸುತ್ತವೆ. ಯಾವ ದಿಕ್ಕಿನಿಂದ ಪಟ ತೆಗೆದರೂ ಸಾಲದೆನಿಸುವಷ್ಟು ಚಂದದ, ಶಾಂತ, ಪ್ರಸನ್ನ ಮುಖಮುದ್ರೆಯ ಭಾರೀ ಮೂರ್ತಿಗಳವು. ಮುಖ್ಯದ್ವಾರದ ಇಕ್ಕೆಲಗಳಲ್ಲಿ ದಾನಿ ದಂಪತಿಗಳ ಶಿಲ್ಪಗಳಿವೆ. ಶಾಸನವು ಸೂಚಿಸುವಂತೆ ಕ್ರಿ. ಶ. ೧೮೦ರ ಆಸುಪಾಸು ಶಾತವಾಹನ ರಾಜ ಯಜ್ಞ ಸಾತಕರ್ಣಿಯ ಕಾಲದಲ್ಲಿ ಗಜಸೇನ ಮತ್ತು ಗಜಮಿತ್ರ ಎಂಬ ವ್ಯಾಪಾರಿ ಸೋದರರ ದಾನದಿಂದ ಚೈತ್ಯ ಸಿದ್ಧವಾಗಿದೆ. ೯೦ ಅಡಿ (೨೬ ಮೀ.) ಉದ್ದ, ೫೦ ಅಡಿ (೧೫ ಮೀ.) ಎತ್ತರ, ೪೦ ಅಡಿ (೧೨ ಮೀ.) ಅಗಲದ ಗುಹೆಯ ಒಳಾವರಣದಲ್ಲಿ ಐದಡಿ ಎತ್ತರದ ದೊಡ್ಡ ಸ್ತೂಪವಿದೆ. ೩೪ ಸ್ತಂಭಗಳಿವೆ. ಕೆಲವು ಅಲಂಕೃತವಾಗಿದ್ದರೆ ಕೆಲವು ಸಾದಾ ಇವೆ. ಸ್ತಂಭಗಳ ಮೇಲ್ಭಾಗದಲ್ಲಿರುವ ರಂಧ್ರಗಳನ್ನು ಗಮನಿಸಿದರೆ ಮೊದಲು ಮರದ ಮುಚ್ಚಿಗೆಯಿದ್ದಿರಬಹುದು ಅನಿಸುತ್ತದೆ. 






ಗುಹೆ-೪ ಮಹಾಚೈತ್ಯದ ಪಕ್ಕವಿರುವ ಒಬ್ಬರು ಹೊಗಬಹುದಾದ ಸಣ್ಣ ಚೈತ್ಯ. ಇಡೀ ಗುಹೆಯ ಒಳಗನ್ನು ಒಂದು ಸ್ತೂಪವು ತುಂಬಿದೆ. ಗೋಡೆಗಳ ಮೇಲೆ ಬೋಧನಾ ಮುದ್ರೆಯ ಬುದ್ಧ ಶಿಲ್ಪಗಳಿವೆ. ಅಕ್ಕಸಾಲಿಯಾಗಿದ್ದ ಧರ್ಮನಾಕನ ಪತ್ನಿ ಶಿವಪಾಲಿತಳು ಭಿಕ್ಕು ಧಮ್ಮಪಾಲನ ಪರಿನಿರ್ವಾಣದ ಗೌರವಾರ್ಥ ಗುಹಾ ದಾನ ನೀಡಿದ್ದನ್ನು ಶಾಸನವು ತಿಳಿಸುತ್ತದೆ. 


ಗುಹೆ-೭ ಒಂದು ವಿಹಾರ. ಒಳಗೆ ವಿರಮಿಸುವ ಸಣ್ಣ ಕೋಣೆಗಳು, ಹೊರಗೆ ಕೂರಲು ಅಡ್ಡಣಿಗೆ(ಬೆಂಚು)ಗಳು ಇವೆ. ರೋಹಿಣಿ ಮಿತ್ರ ಎಂಬ ಚೆಮುಲಿನ ಅಕ್ಕಸಾಲಿಯ ಮಗ ಸುಲಸದತ್ತನು ಗುಹೆಯ ನಿರ್ಮಾಣ ಕಾರ್ಯಕ್ಕೆ ಧನಸಹಾಯ ಮಾಡಿದನೆಂದು ನೀರಿನ ಸಂಗ್ರಹಾಗಾರದ ಬಳಿಯ ಎರಡನೆಯ ಶತಮಾನದ ಶಾಸನ ಹೇಳುತ್ತದೆ. ಮತ್ತೊಂದು ಶಾಸನವು ನೀರಿನ ತೊಟ್ಟಿಯನ್ನು ಸೊಪಾರಾದ ವರ್ತಕ ಉಪಾಸಕ ಸಮಿಕನು ತೋಡಿಸಿದ ಎಂದು ಹೇಳುತ್ತದೆ. 


ಈ ನಾಲ್ಕನ್ನು ನೋಡಿದ ಬಳಿಕ ಕಟೆದ ಮೆಟ್ಟಿಲುಗಳ ಹತ್ತಿ ಮತ್ತೊಂದು ಹಂತದ ಗುಹೆಗಳನ್ನು ನೋಡಬಹುದು. 


ಗುಹೆ-೧೧ ಒಂಬತ್ತನೆಯ ಶತಮಾನದ ಭಾರೀ ವಿಹಾರ. ಪ್ರಾಂಗಣದಲ್ಲಿ ಎಂಟು ದೊಡ್ಡ ಅಷ್ಟಭುಜಾಕೃತಿಯ ಸ್ತಂಭಗಳು ಆಕರ್ಷಿಸುತ್ತವೆ. ಒಳಗೆ ೩೦೦-೪೦೦ ಜನ ಕೂರಬಹುದಾದಷ್ಟು ದೊಡ್ಡ ‘ದರ್ಬಾರ್ ಹಾಲ್’ ಇದೆ. ಬಾಗಿಲಿಗೆದುರಾಗಿ ಕಟ್ಟೆಯ ಮೇಲೆ ಧರ್ಮಚಕ್ರ ಪ್ರವರ್ತನ ಮುದ್ರೆಯ ಬುದ್ಧ ಮೂರ್ತಿಯಿದೆ. ದರ್ಬಾರ್ ಹಾಲ್‌ಗೆ ಹನ್ನೆರೆಡು ವಿಶ್ರಾಂತಿ ಕೋಣೆಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅವು ಹಿರಿಯ ಭಿಕ್ಕುಗಳು, ಥೇರರು ತಂಗುವ ಕೋಣೆಗಳು. ಕೆಳಗೆ ನೆಲದಲ್ಲಿ ರೈಲು ಹಳಿಗಳಂತೆ ಸಮಾನಾಂತರವಾಗಿ ಕಡೆದಿಟ್ಟ ಮಣೆಗಟ್ಟೆಗಳಿವೆ. ಭಿಕ್ಕುಗಳು ಸಾಲಾಗಿ ಕೂರಲು, ಉಣ್ಣಲು ಮಾಡಿರಬಹುದು. ಹಜಾರದ ಬಲಪಕ್ಕದಲ್ಲಿ ವ್ಯಾಖ್ಯಾನ ಮುದ್ರೆಯ ಮೂರು ಬುದ್ಧ ಮೂರ್ತಿಗಳಿವೆ. ಹೊರಗೆ ನೀರಿನ ತೊಟ್ಟಿಯ ಮೇಲಿನ ಶಾಸನವು ಶಿಲಾಹಾರ ದೊರೆ ಮೂರನೇ ಕಪರ್ದಿನ್ (ಕ್ರಿ.ಶ.೮೫೦-೮೮೦) ಕಾಲದಲ್ಲಿ ಗೌಡ ದೇಶದ (ಬಂಗಾಳ) ಸುಗತಾನುಯಾಯಿ ಅವಿಘ್ನಕಾರನು ಕೃಷ್ಣಗಿರಿಯ ಮಹಾರಾಜ ಮಹಾವಿಹಾರ ಧ್ಯಾನ ಕೇಂದ್ರ ನಡೆಸುವುದಕ್ಕೆ ಮತ್ತು ಭಿಕ್ಕುಗಳ ವಸ್ತ್ರಕ್ಕೆ ನೂರು ದ್ರಮಾಸುಗಳ ಖಾಯಂ ದೇಣಿಗೆ ನೀಡಿದನೆಂದು ಹೇಳುತ್ತದೆ. 



ಗುಹೆ-೨೧ ಶಾತವಾಹನ ದೊರೆ ಗೌತಮಿಪುತ್ರ ಸಾತಕರ್ಣಿಯ ಕಾಲದ್ದು. ಕಲ್ಯಾಣದ ವ್ಯಾಪಾರಿ ಉಪಾಸಕ ಅಪಪಪೆನು ಎನ್ನುವವನ ಪತ್ನಿ ಜುವರಿನಿಕ ಮತ್ತು ತಾಯಿ ಧರ್ಮದೇವಿ ಗುಹಾನಿರ್ಮಾಣಕ್ಕಾಗಿ ದಾನ ನೀಡಿದರು ಎಂದು ತಿಳಿಸುತ್ತದೆ.


ಗುಹೆ-೨೨ ಭಿಕ್ಕುಣಿಯ ದಾನದಿಂದ ನಿರ್ಮಾಣವಾದ ಸಣ್ಣ ಗುಹೆಯಾಗಿದೆ.


ಗುಹೆ-೩೨ ಸಣ್ಣದಾದರೂ ನಿರ್ಮಾಣ ಸಂಪೂರ್ಣವಾದ ವಿಹಾರ. ದಾನಶಾಸನವು ನಾಲ್ಕನೆಯ ಶತಮಾನದಲ್ಲಿ ಕಲ್ಯಾಣದ ವರ್ತಕ ಧರ್ಮ ಎಂಬವನು ಕಟ್ಟಿಸಿ, ಭಿಕ್ಕುಗಳ ವಸ್ತ್ರ ಮತ್ತು ಪಾದರಕ್ಷೆಯ ಶಾಶ್ವತ ವ್ಯವಸ್ಥೆಗಾಗಿ ದಾನ ನೀಡಿದ ಎಂದು ತಿಳಿಸುತ್ತದೆ. ಗುಹೆಯ ಮುಂದಿನ ಅಂಗಳದ ಎರಡೂ ಕಡೆ ಹತ್ತಾರು ಜನ ಕೂರಬಹುದಾದಷ್ಟು ಉದ್ದನೆಯ ಕಲ್ಲಿನ ಅಡ್ಡಣಿಗೆಗಳಿವೆ. ಸೂರಿನ ತುದಿಭಾಗವು ರಂಧ್ರಗಳನ್ನು ಹೊಂದಿದ್ದು ಅಂಗಳಕ್ಕೆ ಮರಮುಟ್ಟುಗಳ ಚಾವಣಿ ಇದ್ದಿರಬಹುದೆಂದು ಸೂಚಿಸುತ್ತದೆ. ಎದುರಿನ ಗೋಡೆಯಲ್ಲಿ ಜಾಲಂಧ್ರಗಳಿವೆ. ಈ ಗುಹೆಯಲ್ಲಿ ಮರದ ತಾರಾ ಮೂರ್ತಿ ದೊರಕಿದೆ. 

ಗುಹೆ-೩೪ ಹೊರಗಿನಿಂದ ಸಾಧಾರಣ ಗುಹೆಯಂತೆ ಕಾಣುತ್ತದೆ. ಒಳಹೊಕ್ಕು ಕತ್ತೆತ್ತಿ ನೋಡಿದರೆ ಅರ್ಧಂಬರ್ಧ ಬಿಡಿಸಿದ ಬುದ್ಧನ ಚಿತ್ರ ಕಾಣಿಸುತ್ತದೆ. ಕನ್ಹೇರಿ ಗುಹೆಗಳಲ್ಲಿ ವರ್ಣಚಿತ್ರ ಇರುವುದು ಇಲ್ಲಿ ಮಾತ್ರ. ಅಜಂತಾದಲ್ಲಿ ಚಿತ್ರ ತೆಗೆಸಿದ ವಾಕಟಕರ ನಂತರದ ಕಾಲದ್ದಿದು. ಬುದ್ಧನ ಆಳೆತ್ತರದ ಸುಂದರ ಶಿಲ್ಪಗಳಿವೆ. 


ಗುಹೆ-೩೬ ಸ್ತೂಪವೇ ತುಂಬಿಕೊಂಡಿರುವ ಒಂದು ಸಣ್ಣ ಗುಹೆ. ಸೂರಿನಲ್ಲಿ ಬಣ್ಣದ ಅವಶೇಷ ಈಗಲೂ ಕಾಣಿಸುತ್ತದೆ.


ಗುಹೆ-೪೧ ಸಂಪೂರ್ಣ ಕತ್ತಲ ಲೋಕ. ಒಳ ಹೊಕ್ಕ ಬಳಿಕ ಕಣ್ಣು ಮಂದಬೆಳಕಿಗೆ ಹೊಂದಿಕೊಂಡ ಮೇಲೆ ಅದ್ಭುತವೆನಿಸುವಷ್ಟು ಬುದ್ಧ ಮೂರ್ತಿಗಳಿವೆ. ಅತಿ ಸುಂದರವಾದ ಏಕಾದಶಮುಖ ಬುದ್ಧ (ಲೋಕೇಶ್ವರ) ಮೂರ್ತಿ ಈ ಗುಹೆಯ ವಿಶೇಷ. ಭಾರತದಲ್ಲಿ ಇಲ್ಲಿ ಮಾತ್ರ ಈ ಮೂರ್ತಿಯಿರುವುದು. ದಾನಶಾಸನವು ಸೊಪಾರಾದ ಪುನ್ನಾಕನು ಎರಡು ಗೋಡೆಗಳಿರುವ ಕಟ್ಟೆ ಕಟ್ಟಿಸಿ ಮಳೆನೀರನ್ನು ತಡೆದು ನೀರು ಪೂರೈಕೆಗೆ ನೆರವಾದನೆಂದು ತಿಳಿಸುತ್ತದೆ.

ಗುಹೆ-೬೭ ಒಂದು ವಿಹಾರ, ಚಿತ್ರಶಾಲೆ. ದ್ವಾರದ ಹೊರಗಡೆ ನಾಲ್ಕು ಅಷ್ಟಭುಜಾಕೃತಿಯ ಸ್ತಂಭಗಳಿವೆ. ಒಳಹೊಕ್ಕರೆ ನಾಲ್ಕೂ ಸುತ್ತಿನ ಗೋಡೆಯನ್ನು ನೂರಾರು ಶಿಲ್ಪಗಳು ತುಂಬಿಸಿವೆ. ಎಡಬಲಗಳಲ್ಲಿ ಎರಡೆರಡು ಕೋಣೆಗಳಿವೆ. ಕೆಲವಕ್ಕೆ ಬಣ್ಣ ಹಚ್ಚಿದ ಕುರುಹುಗಳಿವೆ. ಪ್ರಲಂಬ ಪಾದಾಸನದ ಬುದ್ಧ, ಧರ್ಮಚಕ್ರ ಪ್ರವರ್ತನ ಮುದ್ರೆಯ ಬುದ್ಧ, ಮಾನುಷಿ ಬುದ್ಧರು, ಮೈತ್ರೇಯ ಬುದ್ಧರು, ನಿಂತ ಕುಳಿತ ಬುದ್ಧರ ಶಿಲ್ಪಗಳು ನೋಡಿದಷ್ಟೂ ಕಡಿಮೆಯೆನಿಸುವಷ್ಟು ಸುಂದರವಾಗಿದ್ದು ಮುದ ನೀಡುತ್ತವೆ.



ಗುಹೆ ೮೪ ಮತ್ತು ೮೭ರ ಹೊರಗೆ ಒಂದರಿಂದ ಎರಡು ಮೀಟರ್ ವ್ಯಾಸವಿರುವ ಅರವತ್ತು ಇಟ್ಟಿಗೆಯ ಕರಂಡಕಗಳಂತಹ ಸ್ತೂಪಗಳಿವೆ. ಅದು ಅಂತ್ಯಸಂಸ್ಕಾರ ನಡೆಸುವ ತಾಣವಿರಬಹುದೆಂದು ಶಂಕಿಸಲಾಗಿತ್ತು. ಆದರೆ ಕೆಲವನ್ನು ಒಡೆದು ನೋಡಿದಾಗ ಅಂತಹ ಅವಶೇಷಗಳು ಸಿಗಲಿಲ್ಲ. ಇವೆರೆಡು ಗುಹೆಗಳ ಆಸುಪಾಸು ೪೪ ಸಣ್ಣಪುಟ್ಟ ಶಾಸನಗಳಿದ್ದು ವಿವಿಧ ಪ್ರದೇಶದ ಭಿಕ್ಕುಗಳು ಬೌದ್ಧ ಮಾರ್ಗದಲ್ಲಿ ತಲುಪಿದ ಅಧ್ಯಾತ್ಮಿಕ ಹಂತವನ್ನು ತಿಳಿಸುತ್ತವೆ. ಐದು-ಆರನೇ ಶತಮಾನದ ವೇಳೆಗೆ ಕನ್ಹೇರಿಯು ಧಮ್ಮ ಅನುಸಂಧಾನ ನಡೆಸುವ ತಾಣವಾಗಿತ್ತು ಎಂದು ಇದು ಸೂಚಿಸುತ್ತದೆ.


ಗುಹೆ-೮೯ ಸಣ್ಣದು. ಅದರಲ್ಲಿ ಬುದ್ಧನ ತಲೆಯ ಮೇಲೆ ಮಾವಿನ ಟೊಂಗೆಯಿರುವ ಒಂದು ಶಿಲ್ಪವಿದೆ. ಸಣ್ಣ ಅವಕಾಶದಲ್ಲೇ ಮಾವಿನಹಣ್ಣು ತಿನ್ನುವ ಗಿಳಿ, ಮಾವಿನ ಹಣ್ಣು ಚೀಪುವ ಮಂಗವನ್ನೂ ಕೆತ್ತಿದ್ದಾರೆ. ಪದ್ಮಪೀಠದಲ್ಲಿ ಕುಳಿತ ಬುದ್ಧ; ನಾಗ ಮುಚುಲಿಂದರು ಎತ್ತಿ ಹಿಡಿದ ಪದ್ಮದ ದಂಟು; ಬುದ್ಧನ ಎರಡೂ ಕಡೆಗಳಲ್ಲಿ ಪದ್ಮಪಾಣಿ ಮತ್ತು ಬೋಧಿಸತ್ವರು ನಿಂತ ಹಲವಾರು ಶಿಲ್ಪಗಳಿವೆ. ಎತ್ತೆತ್ತ ತಿರುಗಿದರತ್ತತ್ತ ಬುದ್ಧ ಸುಗತ! ನೋಡುತ್ತ ಹೋದಂತೆ ಸಮ್ಮೋಹಿತರಾದ ಅನುಭವವಾಗುತ್ತದೆ.    


ಗುಹೆ-೯೦ ಬಹಳ ಸಣ್ಣದು. ಒಳಗೆ ಅಷ್ಟೇನೂ ಬೆಳಕಿಲ್ಲದ ಗುಹೆಯೊಳಗೆ ಹೊಕ್ಕರೆ ಗವ್ಗತ್ತಲು ಎದುರಾಗುವುದು. ಕಣ್ಣು ಮಂದಬೆಳಕಿಗೆ ಹೊಂದಿಕೊಂಡದ್ದೇ ನೂರಾರು ಬುದ್ಧಶಿಲ್ಪಗಳು ಗೋಚರಿಸಿದವು. ನಿಂತ, ಕುಳಿತ, ಬೋಧಿಸುವ, ಚರ್ಚಿಸುವ, ಧ್ಯಾನಿಸುವ ಬುದ್ಧರು, ತಾರಾ ಮತ್ತು ಭ್ರಕುಟಿಯರು ಆಚೀಚೆ ಇರುವ, ಅಷ್ಟ ಮಹಾ ಭಯಗಳಿಂದ ಲೋಕವನ್ನು ಕಾಪಾಡುವನೆಂದು ಹೇಳಲ್ಪಡುವ ಅವಲೋಕಿತೇಶ್ವರರ ಮೂರ್ತಿಗಳಿವೆ, ಒಂದೇ ತರಹದ ಶಿಲ್ಪಗಳ ಚೌಕಟ್ಟುಗಳು ಒಂದಾದ ಮೇಲೊಂದು ಇದ್ದು ಅದು ಧ್ಯಾನದ ಸಲುವಾಗಿ ಬಳಸುವ ಮಂಡಲ ರಚನೆಯೆನ್ನುವುದು ಕೆಲವು ಬೌದ್ಧ ವಿದ್ವಾಂಸರ ಅಭಿಮತವಾಗಿದೆ. ಗುಹೆಯ ಹೊರಗಿನ ಪಹ್ಲವಿ ಭಾಷೆಯ ಶಾಸನವು ಪರ್ಷಿಯನ್ ವಲಸೆಕಾರರಿಂದ ಪಡೆದ ದಾನದ ಬಗೆಗೆ ಉಲ್ಲೇಖಿಸುತ್ತದೆ. 


ಗುಹೆ-೯೩ ಸಣ್ಣ, ಶಿಲ್ಪಭರಿತ ಗುಹೆ. ಕೆಲವೆಡೆ ಬಣ್ಣಗಾರಿಕೆಯ ಕುರುಹುಗಳಿವೆ. 


ಗುಹೆ-೯೯ ಮಿತಭೂತಿಯು ನೀಡಿದ ಕೊಡುಗೆ. ಅವನನ್ನು ಸಾಗರ ಪಲೋಗನಂ (ಸಮುದ್ರ ಗಮನಿಸುವವ) ಎಂದು ವರ್ಣಿಸಲಾಗಿದೆ. ಬಹುಶಃ ನಾವಿಕನಿರಬಹುದು.


ಎರಡನೆಯ ಹಂತದ ಗುಹೆಗಳ ನೋಡಿ ಮೇಲೇರಿದರೆ ಬೃಹತ್ ಬಂಡೆಯ ನೆತ್ತಿ ತಲುಪುತ್ತೇವೆ. ಅದು ನೂರಾರು ಜನ ಕೂರಬಹುದಾದ ದೊಡ್ಡ ಆವರಣ. ಧ್ಯಾನಿಬುದ್ಧ ಮೂರ್ತಿಯನ್ನಿಡಲು ಪೀಠವೂ, ಭಿಕ್ಕುಗಳು ಕುಳಿತುಕೊಳ್ಳಲು ಮೆಟ್ಟಿಲಿನಂತಹ ಆಸನಗಳಿರುವ ಗ್ಯಾಲರಿಯೂ, ಕಾಲು ತೊಳೆಯಲು ನೀರಿನ ಬಾನಿಯೂ ಇವೆ. ಅಲ್ಲಿ ನಿಂತು ನೋಡಿದರೆ ಕನ್ಹೇರಿಯ ಪಕ್ಷಿನೋಟ ದೊರೆಯುತ್ತದೆ. ಪಶ್ಚಿಮದಲ್ಲಿ ಕಡಲು ಕಾಣದಂತೆ ಮುಂಬಯಿಯ ಗಗನಚುಂಬಿ ಕಟ್ಟಡಗಳು ಮರೆಮಾಡಿವೆ.

ಈ ಗುಹೆಗಳನ್ನು ಕೆತ್ತಿದವರು ಭಿಕ್ಕುಗಳೋ, ಶಿಲ್ಪಿಗಳೋ ಸ್ಪಷ್ಟವಿಲ್ಲ. ಕನ್ಹೇರಿಯ ಪ್ರತಿ ರಚನೆಗೂ ದಾನಿಗಳಿರುವುದು ನೋಡಿದರೆ ಕೆತ್ತಿದವರು ಶಿಲ್ಪಿಗಳೇ ಇರಬೇಕು. ಆದರೆ ದಾನಿಗಳ ಹೆಸರು ಅಜರಾಮರವಾದಂತೆ ಕೆತ್ತಿದವರ ಹೆಸರು ಎಲ್ಲೂ ದಾಖಲಾಗಿಲ್ಲ. 


ಗುಹೆಗಳನ್ನು ನೋಡಿ ಇಳಿಯುವಾಗ ಕೆಲವು ಪ್ರಶ್ನೆಗಳು ಮೂಡುತ್ತವೆ. ಭಾರತದ ಮಿಕ್ಕ ಬೌದ್ಧ ಗುಹಾಲಯ/ತಾಣಗಳಷ್ಟು ಕನ್ಹೇರಿ ಪ್ರಸಿದ್ಧವಾಗದಂತೆ ಮಾಡಿರುವುದು ಯಾವುದು? ಅಜಂತಾ-ಎಲ್ಲೋರಾ-ಕಾರ್ಲಾ ಗುಹೆಗಳಲ್ಲಿ ಇರುವ ಸೂಕ್ಷ್ಮ ಮುಗಿತಾಯ (ಫಿನಿಶಿಂಗ್) ಇಲ್ಲಿಲ್ಲವಲ್ಲ, ಏಕೆ? ಈ ಗುಹೆಗಳಲ್ಲಿ ಬಣ್ಣ, ಚಿತ್ರ, ಹೊಳಪು, ಕುಸುರಿಗೆ ಅಗತ್ಯವಾದ ನೆರವು ಸಿಗಲಿಲ್ಲವೆ ಅಥವಾ ಈ ಶಿಲೆಯಲ್ಲಿ ಇಷ್ಟು ಮಾತ್ರ ಸಾಧ್ಯ ಎಂದು ಬಿಟ್ಟರೇ? ಕೆಲ ಗುಹಾಲಯಗಳು ಅರೆಬರೆಯಾದದ್ದು ನೋಡಿದರೆ ವ್ಯಾಪಾರಿಗಳಿಂದ ಬರುತ್ತಿದ್ದ ನೆರವು ಇದ್ದಕ್ಕಿದ್ದಂತೆ ನಿಂತು ಹೋಯಿತೇ? ಏರತೊಡಗಿದ ಜೈನ, ಶೈವ, ವೈಷ್ಣವ ಸಂಪ್ರದಾಯಗಳ ಪ್ರಭಾವ ಬೌದ್ಧ ಮತದ ಬೆಂಬಲಿಗರ ಸಂಖ್ಯೆಯನ್ನು ಕಡಿಮೆ ಮಾಡಿತೇ? ಅಷ್ಟಕ್ಕೂ ನಾವಿಕರು, ಅಕ್ಕಸಾಲಿಗರು, ವರ್ತಕರು ಬೌದ್ಧ ಮತವನ್ನು ಭಿಕ್ಕುಗಳನ್ನು ಬೆಂಬಲಿಸಿದ್ದು ಏಕೆ? ನಂತರ ಬೆಂಬಲ ನಿಂತಿದ್ದು ಏಕೆ?


ಬೋಧಿವೃಕ್ಷದ ಟಿಸಿಲು, ಕಸಿ 


ಮೊದಲ ಸಹಸ್ರಮಾನದ ಮೊದಲನೆಯ ಭಾಗದಲ್ಲಿ ಬೌದ್ಧ ಧರ್ಮ ವಿಸ್ತಾರಗೊಳ್ಳುತ್ತ ಹೋದಹಾಗೆ ಹೀನಯಾನ, ಮಹಾಯಾನ ಎಂಬ ಕೊಂಬೆಗಳು ಬೋಧಿವೃಕ್ಷದಲ್ಲಿ ಟಿಸಿಲೊಡೆದವು. ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ವಿಭಾಗೀಕರಣದ ನೆರಳು ಬಿದ್ದಿತು. ಮಥುರಾ, ಸಾರಾನಾಥಗಳಲ್ಲಿ ಬುದ್ಧನ ಮೂರ್ತಿಗಳು ಕಾಣಿಸಿಕೊಂಡವು. ಕಥನ, ಚಿತ್ರ, ಶಿಲ್ಪಗಳಲ್ಲಿ ಬೋಧಿಸತ್ವರು ಕಾಣಿಸಿಕೊಂಡರು. ಭಾರತೀಯರ ಅಧ್ಯಾತ್ಮಿಕ ಹಸಿವೆಯನ್ನು ತೀರಿಸಲು ಬೌದ್ಧ ಆಚರಣೆ, ವಿಚಾರಗಳಲ್ಲಿ ಬದಲಾವಣೆಗಳು ನುಸುಳಿದವು. ಮಂಡಲ, ಬೋಧಿಸತ್ವ, ಅವಲೋಕಿತೇಶ್ವರ, ಧ್ಯಾನಿಬುದ್ಧರೇ ಮೊದಲಾದ ಹೊಸಹೊಸ ಸಂಗತಿಗಳನ್ನು ಸೇರಿಸಿಕೊಂಡು ಮಹಾಯಾನ ಬೆಳೆದು, ತಂತ್ರ ರೂಪ ಪಡೆದು ವಜ್ರಯಾನ ಜನಪ್ರಿಯವಾಯಿತು. ಧಮ್ಮವು ಜನಸಾಮಾನ್ಯರ, ಆಳುವವರ ಭಾರೀ ಬೆಂಬಲ ಪಡೆದುಕೊಂಡಿತು. 


ಧಮ್ಮವು ಹೀನಾಯಾನ, ಮಹಾಯಾನ, ವಜ್ರಯಾನದೆಡೆಗೆ ಚಲಿಸಿದುದನ್ನು ಇಲ್ಲಿನ ಶಿಲ್ಪಗಳು ಧ್ವನಿಸುತ್ತವೆ. ಬಂಗಾಳ, ಬಿಹಾರ, ಒಡಿಶಾ, ಕಾಶ್ಮೀರಗಳಲ್ಲಿ ಎಂಟನೆಯ ಶತಮಾನದ ಬಳಿಕ ಮಂಡಲ ರಚನೆಗಳು ಕಲೆಯಲ್ಲಿ ಕಂಡುಬಂದರೆ ಕನ್ಹೇರಿಯಲ್ಲಿ ಅದಕ್ಕಿಂತ ಮೊದಲೇ ಬಂದಿವೆ. ಆರನೆಯ ಶತಮಾನದ ಬಳಿಕ ಮಹಾಯಾನವು ವಜ್ರಯಾನವಾಗಿ ತಂತ್ರವಾಗಿ ಹೇಗೆ, ಏಕೆ, ಎಲ್ಲಿ ರೂಪುಗೊಂಡಿತು ಎಂಬ ಇನ್ನೂ ಅಸ್ಪಷ್ಟವಾಗಿರುವ ವಿಷಯದ ಬಗೆಗೆ ಸಂಶೋಧನೆಗಳು ನಡೆಯಲು ಇಲ್ಲಿ ಸಾಕ್ಷ್ಯಗಳಿವೆ. ವಜ್ರಯಾನದ ವಿವಿಧ ಪಂಥಗಳಾದ ಮಹಾಸಾಂಘಿಕ, ಚೇತಿಯಾ, ಅಪರಸೆಲಿಯಾ, ಭದ್ರವಣಿಯಾ, ಧರ್ಮೋತ್ತರೀಯ, ಸದ್ಧರ್ಮ ಪುಂಡರೀಕಗಳು ಸಮಕಾಲೀನವಾಗಿ ಒಡನಾಡಿವೆ ಎನ್ನಲು ಕನ್ಹೇರಿಯಲ್ಲಿ ಪುರಾವೆಗಳಿವೆಯೆಂದು ವಿದ್ವಾಂಸರು ಗುರುತಿಸಿದ್ದಾರೆ.


ವಜ್ರಯಾನದ ತಂತ್ರ ಸಾಧಕರಾದ ಮಗಧದ ಬುದ್ಧಗ್ಯಾನಪಾದ (ಒಂಬತ್ತನೆಯ ಶತಮಾನ), ಬಂಗಾಳದ ದೀಪಂಕರ ಅತಿಷ (ಹನ್ನೊಂದನೆಯ ಶತಮಾನ) ಇಲ್ಲಿಗೆ ಬಂದಿದ್ದರು. ವಿಕ್ರಮಶಿಲಾ ಮಹಾವಿಹಾರ ಮುನ್ನಡೆಸಿದ ಮೊದಲ ಅಧ್ಯಕ್ಷ ‘ಗುಹ್ಯಸಮಾಜ ತಂತ್ರ’ದ ಲೇಖಕ ಬುದ್ಧ ಗ್ಯಾನಪಾದ. ಅವನ ಶಿಷ್ಯ ಪರಂಪರೆ ಇವತ್ತಿಗೂ ಟಿಬೆಟಿನಲ್ಲಿ ಮುಂದುವರೆದಿದೆ. ಗ್ಯಾನಪಾದನ ಗ್ರಂಥಗಳನ್ನು ಟಿಬೆಟಿನವರೇ ಕಾಪಾಡಿಕೊಂಡು ಬಂದಿದ್ದಾರೆ. ಸಾಕಷ್ಟು ಬರೆದ, ತಿರುಗಾಟ ಮಾಡಿದ ಭಿಕ್ಕು ಗ್ಯಾನಪಾದನು ಸಿದ್ಧ ಆಚಾರ್ಯ ರಕ್ಷಪಾದನ ಜೊತೆ ಅಧ್ಯಯನ ನಡೆಸಲು ಕೃಷ್ಣಗಿರಿಗೆ ಬಂದುದಾಗಿ, ಒಂಭತ್ತು ವರ್ಷಗಳ ಕಾಲ ಇದ್ದುದಾಗಿ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾನೆ. 


ಹನ್ನೊಂದನೆಯ ಶತಮಾನದಲ್ಲಿ ತಂತ್ರಗುರು ರಾಹುಲಗುಪ್ತನಿಂದ ಸಾಧನೆಯ ಉಪದೇಶ ಪಡೆಯಲು ದೀಪಂಕರ ಅತಿಷನು ಬಂಗಾಳದಿಂದ ಕೃಷ್ಣಗಿರಿಗೆ ಬಂದನು. ಮೂರು ತಿಂಗಳು ಸಾಧನೆ ಮಾಡಿದ ಬಳಿಕ ಗುಹ್ಯ ಗ್ಯಾನವಜ್ರ ಎಂಬ ಹೆಸರು ಪಡೆದನು. ಕನ್ಹೇರಿಯ ಕೆಲವು ಗುಹೆಗಳಲ್ಲಿ ದ್ವಾರದೆದುರಿನ ಆಸನಗಳು ಖಾಲಿ ಇವೆ. ಅವು ವಜ್ರಯಾನದ ರಹಸ್ಯ ಬೋಧನೆ, ಉಪದೇಶಗಳು ಗುರುವಿನಿಂದ ಶಿಷ್ಯರಿಗೆ ತಲುಪುತ್ತಿದ್ದ ಸ್ಥಳವಾಗಿವೆ. ಒಂದು ಗುಹೆಯಲ್ಲಿ ತೆಗೆದೊಯ್ಯಬಹುದಾದಂತಹ ಬುದ್ಧ ಶಿಲ್ಪವಿದೆ. ವಿಶೇಷ ದಿನ, ಸಂದರ್ಭಗಳಲ್ಲಿ ಆ ಉತ್ಸವಮೂರ್ತಿಯ ಮೆರವಣಿಗೆ ನಡೆದು ಮೇಲಕ್ಕೆ ಹೊತ್ತೊಯ್ಯುತ್ತಿದ್ದರು. ಈ ಆರಾಧನಾ ಕ್ರಮ ವಜ್ರಯಾನದ ಲಕ್ಷಣವಾಗಿದೆ. 


ಹೀಗೆ ಹೀನಾಯಾನದಿಂದ ಮಹಾಯಾನ, ವಜ್ರಯಾನದವರೆಗೆ ಬೆಳೆದ, ನಂತರ ಹಿನ್ನಡೆ ಕಂಡ ಧಮ್ಮದ ಚಲನೆಯನ್ನು ಅಭ್ಯಸಿಸಲು ಕನ್ಹೇರಿ ಸೂಕ್ತ ತಾಣವಾಗಿದೆ. ಇಂತಹ ವ್ಯವಸ್ಥಿತ, ಪ್ರಾಚೀನ ಬೌದ್ಧ ತಾಣ ಏಳೆಂಟು ನೂರು ವರ್ಷ ಕಾಡಿನಲ್ಲಿ ಹೂತು ಹೋಗಲು ಕಾರಣಗಳನ್ನು ಕೆದಕುತ್ತ ಹೋದರೆ ಬುದ್ಧ ಭಾರತ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. 


ಬುದ್ಧ ಮಾರ್ಗಿಗಳಿಗೆ, ಸ್ಥಳೀಯರಿಗೆ ಗುಹೆ, ಶಿಲ್ಪಗಳ ಮಾಹಿತಿಯಿತ್ತು. ಕ್ರಮೇಣ ಬೌದ್ಧೇತರ ಪಂಥಗಳ ಸಾಧುಸನ್ಯಾಸಿಗಳ ಆವಾಸ ಸ್ಥಾನವೂ ಆಗಿತ್ತು. ಮೇಲುಗಡೆ ಒಂದು ಶಿವನ ಗುಡಿಯೆದ್ದು ಶೈವ ಸಾಧುಗಳು ವಾಸಿಸತೊಡಗಿದ್ದರು. ಆದರೆ ೧೮ನೆಯ ಶತಮಾನದಲ್ಲಿ ಬ್ರಿಟಿಷ್ ಸಂಶೋಧನಾಕಾರರ ಕಣ್ಣಿಗೆ ಬಿದ್ದು, ಪುರಾತತ್ವ ಶೋಧಕ್ಕೆ ಒಳಗಾಗಿ, ಶಾಸನಗಳನ್ನು ಅರ್ಥೈಸಿದ ಮೇಲೆ ಕನ್ಹೇರಿ ಮತ್ತೆ ಪ್ರಾಮುಖ್ಯತೆ ಪಡೆದುಕೊಂಡಿತು. ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋ ಗುರುತಿಸಿತು. 


ಆದರೆ ಅಲ್ಲಿಗೆ ಬರುವ ಮುಕ್ಕಾಲು ಮೂರುವೀಸ ಜನರಿಗೆ ವಿಶ್ವಪರಂಪರೆ ಎಂದರೇನೆಂದು ತಿಳಿದಿಲ್ಲ. ಗುಹೆಗಳ ಇತಿಹಾಸ, ಬೌದ್ಧ ಧಮ್ಮದ ಬಗೆಗೆ ಏನೇನೂ ಗೊತ್ತಿಲ್ಲ. ಕೇವಲ ಪಿಕ್ನಿಕ್, ಫೋಟೋ, ಚಾರಣಕ್ಕಾಗಿ ಬಂದು ಎಲ್ಲೆಲ್ಲೋ ಹತ್ತಿಳಿದು  ರೇಜಿಗೆಯಾಗುವಷ್ಟು ಗದ್ದಲ ಎಬ್ಬಿಸುತ್ತಾರೆ. ತಾಣದ ಘನತೆಯನ್ನು ಹಾಳುಗೆಡವುತ್ತಿದ್ದಾರೆ. ಅದರ ನಡುವೆಯೇ ಅಪರೂಪಕ್ಕೊಬ್ಬರು ಪುಸ್ತಕದ ಪುಟ ತಿರುಗಿಸುತ್ತ, ಬ್ರಾಹ್ಮಿ ಲಿಪಿಯ ಶಾಸನವನ್ನು ಪರೀಕ್ಷಿಸುತ್ತ, ಗೈಡ್ ಹೇಳುವುದನ್ನು ಕಣ್ಣರಳಿಸಿ ಕೇಳುತ್ತ ಓಡಾಡುವುದು ಕಂಡುಬರುತ್ತದೆ. 


ಬೇಕಿದ್ದು ಬೇಡದಿದ್ದುದು ಎಲ್ಲವೂ ಒಟ್ಟೊಟ್ಟಿಗೇ ಇರುತ್ತವೆ. ಅಗೋ ಅಲ್ಲಿ ದೂರದಲ್ಲಿ ಬೆಟ್ಟಸಾಲುಗಳ ಮೇಲೆ ಜೋಡಿಸಿಟ್ಟ ಹಾಗೆ ಮುಂಬಯಿಯ ಗಗನಚುಂಬಿ ಕಟ್ಟಡಗಳು ಕಡಲನ್ನು ಮರೆ ಮಾಡಿರುವಾಗ ಇಲ್ಲಿ ಬೆಟ್ಟ ಕೊರೆದು ಮಾಡಿದ ಗುಹೆಗಳು ಸಾವಿರಾರು ವರ್ಷಗಳಿಂದ ಮುಗುಮ್ಮಾಗಿ ಹಾಸಿಕೊಂಡಿವೆ. ನೆತ್ತಿ ಸುಡುವ ಬಿಸಿಲು ಚರ್ಮ ಕಂದಾಗಿಸುತ್ತಿದ್ದರೆ ಇತ್ತ ಕತ್ತಲನ್ನು ಸೀಳಿ ಮಾಡಿದ ಗುಹೆಗಳು ಚೂರುಚೂರೇ ಬೆಳಕು, ಬಿಸಿಯನ್ನು ಒಳಗೆ ಬಿಟ್ಟುಕೊಂಡು ತಣ್ಣಗಿವೆ. ಇದೆ ಇಲ್ಲಗಳ ಬೆಳಕಿನಲ್ಲಿ ನಮಗೆ ಬೇಕಿರುವುದನ್ನಷ್ಟೇ ಸ್ವೀಕರಿಸಲು ಕಲಿಯಬೇಕು ಅಷ್ಟೇ. 


ಇಡಿಯ ವಿಶ್ವವೇ ಯುದ್ಧೋನ್ಮಾದದಲ್ಲಿ ಸ್ವವಿನಾಶದತ್ತ ತೆರಳುತ್ತಿರುವಾಗ, ಬುದ್ಧ ಬೇಕಾಗಿದ್ದಾನೆ, ಧಮ್ಮ ಬೇಕಾಗಿದೆ, ಮೈತ್ರಿ-ಕರುಣೆಗಳ ಸಂಘ ಸಹಬಾಳುವೆಯ ಸತ್ವ ಮನುಷ್ಯರಿಗೆ ಅಗತ್ಯವಾಗಿದೆ. ಭಾರತದ ಮಿದುಳಿನ ತುಂಬ ಸ್ತೂಪಗಳೇ ಇವೆ. ಅದನ್ನೊಡೆದು ಮನಸ್ಸೊಡೆಯುವ ದೈವಗಳ ಪ್ರತಿಷ್ಠಾಪಿಸಲಾಗಿದೆ. ಬುದ್ಧ ಭಾರತ ಎಲೆಯುದುರಿದ ಕಾಡಿನಂತಾಗಿದೆ. ಆದರೆ ಚೈತ್ರ ಕಾಲ ಬಂದಿದೆ. ವೈದಿಕ-ಸಮಣ-ಶೂದ್ರ ಮತಧರ್ಮಗಳ ತತ್ವನಿಬಿಡ ಭಾರತದಲ್ಲಿ ಬೌದ್ಧ ಸತ್ವವನ್ನು ಗುರುತಿಸಿ ಅಪ್ಪಿಕೊಳ್ಳುವ ಕಾಲ ಆರಂಭವಾಗಿದೆ.


ಮತ್ತೆ ವೈಶಾಖ ಪೂರ್ಣಿಮೆಯನ್ನು ಇಳೆಯ ಜೀವರಾಶಿಗಳೆಲ್ಲ ಕಂಡೇ ಕಾಣುತ್ತವೆ.


ಡಾ. ಎಚ್. ಎಸ್. ಅನುಪಮಾ


ಬೇಗಂ ರೊಖಿಯಾ ಸಖಾವತ್ ಹುಸೇನ್ Begum Rokeya akhavat Hussain ಬಂಗಾಳದ ಅಕ್ಷರ ದೀಪ

 


ಚಳಿ ಇನ್ನೇನು ಆರಂಭವಾಗಬೇಕು ಎನ್ನುವುದರಲ್ಲಿತ್ತು. ಹಗಲಿರುಳುಗಳನ್ನು ಮಬ್ಬುಗೊಳಿಸಲು ಹೊಗೆ ಮತ್ತು ಮಂಜು ಸೇರಿದ ಶರತ್ಕಾಲದ ಹೊಂಜು ಸಜ್ಜಾಗಿತ್ತು. ಆಗ ನಾವು ಮೂರು ದಿವಸ ಕಲಕತ್ತೆಗೆ ಹೋಗಿಬಂದೆವು. ನಮ್ಮ ಬಾಯಲ್ಲಿನ್ನೂ ಕಲಕತ್ತೆಯೇ ಆಗುಳಿದಿರುವ ಈಗಿನ ಕೋಲ್ಕತಾದಲ್ಲಿ ನೀವು ಊಹಿಸಿದ ತಾಣಗಳಂತೂ ಸರಿಯೇ, ಮತ್ತೂ ಒಂದು ಅತಿ ವಿಶಿಷ್ಟ ವ್ಯಕ್ತಿಯ ನೆನಪು ಉಕ್ಕಿಸುವ ಕರ್ಮಭೂಮಿಗೆ ಭೇಟಿ ನೀಡಿ ಬಂದೆವು. 

ರವೀಂದ್ರ ಸದನ್ ಬಳಿ ಮೆಟ್ರೋ ಇಳಿದು, ಲಾರ್ಡ್ ಸಿನ್ಹಾ ರಸ್ತೆಯಲ್ಲಿ ಸಾಗಿದರೆ ಬಿರ್ಲಾ ಹೈಸ್ಕೂಲ್, ಶ್ರೀನಿಕೇತನ, ಸೇಂಟ್ ಸೇವಿಯರ‍್ಸ್, ಲಾ ಮಾರ್ಟಿನಿಯರ್ ಮುಂತಾದ ದುಬಾರಿ ಖಾಸಗಿ ಶಾಲೆಗಳ ನಡುವೆ ಶತಮಾನಕ್ಕೂ ಹಿಂದೆ ಆರಂಭವಾದ ಸಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಸಿಗುತ್ತದೆ. ಶಿಕ್ಷಣವೇ ವಿಮೋಚನೆಯ ದಾರಿ ಎಂಬ ಸದಾಶಯದಿಂದ ಕಲಕತ್ತೆಯ ಹೃದಯ ಭಾಗದಲ್ಲಿ ಹುಡುಗಿಯರ ಸರ್ಕಾರಿ ಪ್ರೌಢಶಾಲೆಯನ್ನು ೧೯೧೧ರಲ್ಲಿ ಆರಂಭಿಸಿದವರು ಬೇಗಂ ರೊಖಿಯಾ ಸಖಾವತ್ ಹುಸೇನ್ (೧೮೮೦-೧೯೩೨).

ಸಾಹಿತ್ಯ, ಕಲೆ, ಜಾನಪದ, ಸಂಗೀತ, ಸಿನಿಮಾ, ಆಟ ಎಲ್ಲದರಲ್ಲೂ ಬಂಗಾಳಿಗಳದ್ದು ಎತ್ತಿದ ಕೈ. ಅವರ ಅಕ್ಷರ ಪ್ರೇಮ ಎಷ್ಟೆಂದರೆ ಕಲಕತ್ತೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೂರಿನ ಮೇಲೆಲ್ಲ ಬಂಗಾಳಿ ಅಕ್ಷರಗಳನ್ನೇ ಚಿತ್ರದಂತೆ ಬರೆದು ತುಂಬಿಸಿದ್ದಾರೆ. ಅಂತಹ ಅಕ್ಷರಪ್ರೇಮಿ ಬಂಗಾಳದ ಅಕ್ಷರ ದೀಪ ಬೇಗಂ ರೊಖಿಯಾ ಸಖಾವತ್ ಹುಸೇನ್. ಮಹಿಳೆಯರು ಎದುರಿಸುವ ಅಪರಿಹಾರ್ಯ ಸಮಸ್ಯೆಗಳ ಮೂಲ ‘ಮನೋಸಿಕ್ ದಾಸತ್ವೊ’ (ಮಾನಸಿಕ ದಾಸ್ಯ) ಎಂದು ಭಾವಿಸಿ ಶಿಕ್ಷಣ, ಬರಹ, ಸಂಘಟನೆಗಳ ಮೂಲಕ ಸ್ವಾಯತ್ತ, ಚಿಂತನಾಶೀಲ ಮಹಿಳೆಯರನ್ನು ರೂಪಿಸುವ ಕನಸು ಹೊತ್ತ ಚೇತನ ಅವರು. ಭಾರತ ಉಪಖಂಡದ ಪಶ್ಚಿಮ ಗಡಿಯಲ್ಲಿ ಸಾವಿತ್ರಿಬಾಯಿ ಮಾಡಿದ ಕೆಲಸವನ್ನು ಪೂರ್ವ ಗಡಿ ಬಂಗಾಳದಲ್ಲಿ ರೊಖಿಯಾ ಮಾಡಿದರು. ಹಲವು ಸವಾಲುಗಳ ನಡುವೆ ಶಾಲೆ ತೆರೆದ ಅವರು ಜ್ಞಾನದಾಸೋಹ ಪರಂಪರೆಯ ಕೊಂಡಿಯಾದರು. ಇಪ್ಪತ್ತನೆಯ ಶತಮಾನದ ಅವಿಭಜಿತ ಬಂಗಾಳದ ಪ್ರಮುಖ ಲೇಖಕಿಯಾಗಿ ಹೊಮ್ಮಿದರು. ಬದುಕಿಡೀ ಲೋಕಸಂಸಾರಕ್ಕಾಗಿ, ಅದರೊಳಗಿನ ವಂಚಿತ ಮಹಿಳೆಯರಿಗಾಗಿ ದುಡಿದರು. ಸಮಾಜ ಜಾಗೃತಿಗಾಗಿ ಕತೆ, ಕವಿತೆ, ಕಾದಂಬರಿ, ಲೇಖನ ಬರೆದರು. ಭಾಷಣ ಮಾಡಿದರು. ಮುಸ್ಲಿಂ ಮಹಿಳೆಯರನ್ನು ಸಂಘಟಿಸಿದರು. ಬಂಗಾಳದ ಅಕ್ಷರ ಮಾತೆ ಎನಿಸಿಕೊಂಡರು. 

ಕಲಕತ್ತೆಯಲ್ಲಿ ಅವರು ಆರಂಭಿಸಿದ ಶಾಲೆ ಇವತ್ತಿಗೂ ನಡೆಯುತ್ತಿದೆ. ಎಷ್ಟೇ ಭಿನ್ನಮತಗಳಿದ್ದರೂ ತನ್ನ ಸಮುದಾಯದೊಡನೆ  ಸಂಪರ್ಕ ಇಟ್ಟುಕೊಂಡು ಅದರ ಆಂತರಿಕ ವಿಮರ್ಶಕಿಯಾಗಿ ಸುಧಾರಣೆಯ ಕೆಲಸ ಮಾಡಿದ ಅವರ ಬದುಕಿನ ವಿವರಗಳು ಸ್ಫೂರ್ತಿದಾಯಕವಾಗಿವೆ.


ಬಂಗಾಳದ ಅಕ್ಷರದೀಪ





ಇಂದಿನ ಬಾಂಗ್ಲಾದೇಶದ ರಂಗಾಪುರ ಜಿಲ್ಲೆಯ ಪೈರಾಬೊಂದ್ ಹಳ್ಳಿಯ ಸಾಂಪ್ರದಾಯಿಕ ಮುಸ್ಲಿಂ ಕೂಡು ಕುಟುಂಬದಲ್ಲಿ ೧೮೮೦ರಲ್ಲಿ ರೊಖಿಯಾ ಹುಟ್ಟಿದರು. ತಂದೆ ಜಹೀರುದ್ದೀನ್ ಮುಹಮದ್ ಅಬು ಅಲಿ ಸಬೇರ್. ಜಮೀನ್ದಾರರು, ಬಹುಭಾಷಾ ವಿದ್ವಾಂಸರು. ಅಮ್ಮ ರಾಹತುನ್ನೀಸಾ ಚೌಧುರಿ. ಮುಘಲರ ಸೇನೆಯಲ್ಲಿ, ನ್ಯಾಯಾಲಯಗಳಲ್ಲಿ ಉದ್ಯೋಗ ಮಾಡಿದ ಅಧಿಕಾರಸ್ಥರ ಮನೆತನದ ಮಹಿಳೆ. ಪರ್ದಾ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದ ಮನೆಯಲ್ಲಿ ರೊಖಿಯಾರ ತಂದೆ ಮಹಿಳಾ ಶಿಕ್ಷಣಕ್ಕೆ ವಿರುದ್ಧವಾಗಿದ್ದರು. ಮಗಂದಿರನ್ನು ಬಂಗಾಳಿ, ಇಂಗ್ಲಿಷ್ ಶಾಲೆಗೆ ಕಳಿಸಿದ್ದರೂ ಹೆಣ್ಣುಮಕ್ಕಳು ಶಾಲೆಗೆ ಹೋಗಿ ಕಲಿಯುವ ಅವಶ್ಯಕತೆಯಿಲ್ಲ; ಕುರಾನ್ ಓದಲು ಸಾಧ್ಯ ಮಾಡುವ ಉರ್ದು, ಅರೇಬಿಕ್‌ಗಳನ್ನು ಮನೆಯಲ್ಲೇ ಕಲಿತರೆ ಸಾಕೆಂಬ ಧೋರಣೆ ಹೊಂದಿದ್ದರು. ಬಂಗಾಳಿ, ಇಂಗ್ಲಿಷ್ ಕಲಿತರೆ ಹೆಣ್ಣುಗಳು ನಡತೆಗೆಡುತ್ತಾರೆ ಎನ್ನುವ ಮನೆಯಲ್ಲಿ ಹುಡುಗರಾದರೋ ತಮ್ಮ ಅಕ್ಕತಂಗಿಯರಿಗೆ ಕದ್ದುಮುಚ್ಚಿ ನಡುರಾತ್ರಿಯ ವೇಳೆ ಬಂಗಾಳಿ ಮತ್ತು ಇಂಗ್ಲಿಷ್ ಹೇಳಿಕೊಡುತ್ತಿದ್ದರು. ರೊಖಿಯಾಳ ಅಕ್ಕ ಕರೀಮುನ್ನೀಸ ಬಂಗಾಳಿಯನ್ನು ಓದಿ, ಬರೆಯುವಷ್ಟು ಕಲಿತಿದ್ದಳು. ಅಕ್ಕನ ನೋಡುತ್ತ, ಅಣ್ಣ ಇಬ್ರಾಹಿಂ ಸಬೇರ ಕೊಟ್ಟ ಸಚಿತ್ರ ಇಂಗ್ಲಿಷ್ ಪುಸ್ತಕ ಓದುತ್ತ ಪುಟ್ಟ ರೊಖಿಯಾಗೆ ಓದುವ, ಬರೆಯುವ ಕನಸು ಹರಳುಗಟ್ಟಿತು. 


ಕರೀಮುನ್ನಿಸಾ ೧೪ ವರ್ಷಕ್ಕೆ ಮದುವೆಯಾಗಿ, ಸಂಸಾರ, ಮಕ್ಕಳ ಜಂಜಾಟದಲ್ಲಿ ಓದಿ ಬರೆಯುವ ಕನಸುಗಳೆಲ್ಲ ನುಚ್ಚುನೂರಾದಂತವಳಾದದ್ದು ಕಂಡ ರೊಖಿಯಾ ಮದುವೆ ಎಂದರೆ ಕೆಂಡವಾಗುತ್ತಿದ್ದಳು. ಎಲ್ಲಕ್ಕೂ ಬಂಡೇಳುತ್ತಿದ್ದಳು. ೧೮ ವರ್ಷ ಕಳೆಯುವವರೆಗೆ ಮದುವೆಯ ಮಾತೆತ್ತಿದರೆ ಕೋಪಗೊಳ್ಳುತ್ತಿದ್ದಳು. ಕೊನೆಗೆ ಇಂದಿನ ಬಿಹಾರದ ಭಾಗಲ್ಪುರದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಖಾನ್ ಬಹಾದುರ್ ಸಖಾವತ್ ಹುಸೇನ್ ಎಂಬ ನಲವತ್ತರ ಅಂಚಿನ ವಿಧುರರೊಂದಿಗೆ ಮದುವೆ ನಿಶ್ಚಯವಾಯಿತು. ರೊಖಿಯಾ ಬದುಕಿಗೆ ಪತಿ ಸಖಾವತ್ ತಿರುವು ನೀಡಿದರು. ತಮ್ಮ ಪತ್ನಿ ಬುರ್ಖಾ ತೊಡುವುದು ಬೇಡವೆಂದರು. ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದರು. ಬರೆಯಲು ಪ್ರೋತ್ಸಾಹಿಸಿದರು. ಎಲ್ಲರಿಗೂ ಅರ್ಥವಾಗುವಂತೆ ಬಂಗಾಳಿಯಲ್ಲೇ ಬರೆ ಎಂದರು. ಮದುವೆಯು ರೊಖಿಯಾಗೆ ಬಂಧನವಾಗದೇ ಬಿಡುಗಡೆಯ ಹೊಸಹಾದಿಯಾಗಿ ತೆರೆದುಕೊಂಡಿತು. ತಂದೆಯ ಬಳಿ ಸೆಣಸಿ ಗಳಿಸಿಕೊಳ್ಳಲಾಗದ ಸ್ವಾತಂತ್ರ್ಯ, ಅವಕಾಶಗಳನ್ನು ಬಾಳಸಂಗಾತಿಯ ಬಳಿ ಪಡೆದುಕೊಂಡರು.


೧೯೦೨ರಲ್ಲಿ ರೊಖಿಯಾ ಬರೆದ ಮೊದಲ ಬಂಗಾಳಿ ಬರಹ ಪಿಪಾಸಾ ಪ್ರಕಟವಾಯಿತು. ನಂತರ ಅವರ ಪೆನ್ನು ವಿಶ್ರಾಂತಿ ಪಡೆಯಲೇ ಇಲ್ಲ. ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದರು. ಮೋತಿಚೂರ್ (೧೯೦೫), ಸುಲ್ತಾನಾಸ್ ಡ್ರೀಂ (೧೯೦೫) ಎಂಬ ಇಂಗ್ಲಿಷ್ ಕೃತಿ, ಪದ್ಮರಾಗ (೧೯೨೪) ಎಂಬ ಕಾದಂಬರಿ, ಗಾಡ್ ಗಿವ್ಸ್, ಮೆನ್ ರಾಬ್ಸ್ (೧೯೨೭) ಮತ್ತು ಅಬರೋಧ ಭಾಷಿಣಿ (೧೯೩೧) ಎಂಬ ಲೇಖನ ಸಂಗ್ರಹಗಳು ಪ್ರಕಟವಾದವು. 


ಮದುವೆಯಾಗಿ ಹತ್ತು ವರ್ಷಗಳಾದಾಗ ಸಖಾವತ್ ಹಠಾತ್ತನೆ ೧೯೦೯ರಲ್ಲಿ ತೀರಿಕೊಂಡರು. ಹೆಣ್ಣುಮಕ್ಕಳ ಶಾಲೆ ತೆರೆಯುವ ಪತ್ನಿಯ ಕನಸು ನನಸಾಗಲೆಂದು ಹತ್ತು ಸಾವಿರ ರೂಪಾಯಿಗಳನ್ನು ಬಿಟ್ಟು ಹೋಗಿದ್ದರು. ಅವರು ತೀರಿಕೊಂಡ ಐದು ತಿಂಗಳಿಗೇ ರೊಖಿಯಾ ಭಾಗಲ್ಪುರದಲ್ಲಿ ಮುಸ್ಲಿಂ ಹುಡುಗಿಯರ ಪ್ರಾಥಮಿಕ ಶಾಲೆ ತೆರೆದರು. ಮೊದಲು ಐವರು ವಿದ್ಯಾರ್ಥಿನಿಯರಷ್ಟೇ ಬಂದರು. ಪತಿಯ ಮನೆಯಲ್ಲಿ ಆಸ್ತಿಯ ಜಗಳ ಕಾವೇರಿದಾಗ ಬೇಸತ್ತು ಕಲಕತ್ತೆಗೆ ಶಾಲೆಯನ್ನು ಸ್ಥಳಾಂತರಿಸಿದರು. ೧೯೧೧, ಮಾರ್ಚಿಯಲ್ಲಿ ಸಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಆರಂಭ ಮಾಡಿದರು. ಮೊದಲು ಯಾವ ಹುಡುಗಿಯರೂ ಶಾಲೆ ಸೇರಲು ಒಪ್ಪಲಿಲ್ಲ. ರೊಖಿಯಾ ಮನೆಮನೆಗೆ ಹೋಗಿ ಹೆಣ್ಣುಮಕ್ಕಳು ಶಾಲೆ ಕಲಿಯುವ ಅವಶ್ಯಕತೆ ಕುರಿತು ತಿಳಿಸಿ ಹೇಳಿ ಕರೆತಂದರು. ಹುಡುಗಿಯರು ಅಕ್ಷರ ಕಲಿಯುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಲ್ಲ ಎಂದು ಆಧಾರ ಸಮೇತ ವಿವರಿಸಿದರು. ಎಂಟು ವಿದ್ಯಾರ್ಥಿನಿಯರೊಡನೆ ಬಾಡಿಗೆ ಮನೆಯಲ್ಲಿ ಶಾಲೆ ಆರಂಭವಾಯಿತು. ತೀವ್ರ ಟೀಕೆ, ಕಟಕಿ, ಕಾಲೆಳೆಯುವವರ ನಡುವೆಯೇ ಶಾಲೆ ನಡೆಸಿದರು. ಪಠ್ಯಕ್ರಮ ತಾವೇ ತಯಾರು ಮಾಡಿದರು. ಬೋಧನಾ ಸಿಬ್ಬಂದಿಗಳಿಗೆ ಸ್ವತಃ ನಿರ್ದೇಶನ, ತರಬೇತಿ ನೀಡಿದರು. ಕರಕುಶಲ ತರಬೇತಿ, ಗೃಹವಿಜ್ಞಾನ, ತೋಟಗಾರಿಕೆ, ಅಡುಗೆ, ಸಂಗೀತ, ಪ್ರಥಮ ಚಿಕಿತ್ಸೆ, ದೈಹಿಕ ಕಸರತ್ತುಗಳೆಲ್ಲವೂ ಶಿಕ್ಷಣದ ಭಾಗವಾಗಿದ್ದವು. ಇದು ವಿದ್ಯಾರ್ಥಿನಿಯರನ್ನು ಶಿಸ್ತುಬದ್ಧಗೊಳಿಸಿ ಮನೆಯವರಿಂದ ಮೆಚ್ಚುಗೆ ಗಳಿಸಿತು. ಶಾಲೆಗೆ ಬರುವವರ ಸಂಖ್ಯೆ ಏರುತ್ತ ಹೋಯಿತು. ವಿದ್ಯಾರ್ಥಿನಿಯರ ಸಂಖ್ಯೆ ೨೭ ಆದಾಗ ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಿದರು. ೧೯೧೫ರಲ್ಲಿ ಐದನೆಯ ತರಗತಿ ಆರಂಭವಾಗಿ ಪ್ರಾಥಮಿಕ ಶಾಲೆ ಆಯಿತು. ೧೯೧೬ರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ೧೦೦ ದಾಟಿ ಆರನೆಯ ತರಗತಿ ಆರಂಭವಾಗಿ ಇಂಗ್ಲಿಷ್ ಮಾಧ್ಯಮಿಕ ಶಾಲೆ ಆಯಿತು. ೧೯೨೭ರಲ್ಲಿ ಏಳನೆಯ ತರಗತಿ ಆರಂಭವಾಗಿ ಇಂಗ್ಲಿಷ್ ಹೈಯರ್ ಸ್ಕೂಲ್ ಆಯಿತು. ೧೯೩೦ರಲ್ಲಿ ಹತ್ತನೆಯ ತರಗತಿ ಆರಂಭವಾಗಿ ಗರ್ಲ್ಸ್ ಹೈಸ್ಕೂಲ್ ಆಯಿತು. ೧೯೩೧ರಲ್ಲಿ ಮೂವರು ಮೆಟ್ರಿಕ್ ಪರೀಕ್ಷೆ ಬರೆದರು. ೧೯೩೨ರಲ್ಲಿ ೭೫% ವಿದ್ಯಾರ್ಥಿನಿಯರು ಮೆಟ್ರಿಕ್ ಪಾಸು ಮಾಡಿದರು.


ಅದೇನೂ ಆ ಕಾಲದ ಮೊದಲ ಮಹಿಳಾ ಶಾಲೆಯಾಗಿರಲಿಲ್ಲ. ಅವರಿಗಿಂತ ಮುನ್ನ ವಿಕ್ಟೋರಿಯಾ ರಾಣಿಯಿಂದ ನವಾಬ್ ಬಿರುದನ್ನು ಪಡೆದ ಮೊದಲ ಮಹಿಳೆ ಫೈಜುನ್ನಿಸಾ ಚೌಧುರಿ (೧೮೩೪ ಜನನ) ಮುಸ್ಲಿಂ ಮಹಿಳಾ ಶಿಕ್ಷಣದ ಸಲುವಾಗಿ ಕೆಲಸ ಮಾಡಿದ್ದರು. ರೊಖಿಯಾ ಅದನ್ನು ಮುಂದುವರೆಸಿದರು. ಆದರೆ ಸವಾಲುಗಳು ಕಡಿಮೆಯಿರಲಿಲ್ಲ. ಪರ್ದಾ ಇಲ್ಲದೆ ಕಲಿಸುವುದು ಸಾಧ್ಯವಾಗಲಿಲ್ಲ. ಪುರುಷರ ಸಂಪರ್ಕಕ್ಕೆ ಬರದಂತೆ ಹುಡುಗಿಯರನ್ನು ಕಟ್ಟುನಿಟ್ಟಾಗಿ ದೂರವೇ ಇಡಬೇಕಾಯಿತು. ಶಾಲೆಗೆ ಕರೆತರಲು ಪರದೆ ಇಳಿಬಿಟ್ಟ ಕುದುರೆಗಾಡಿ ಕಳಿಸಬೇಕಾಯಿತು. ಬುರ್ಖಾ ಬದಲು ತಲೆಮೇಲೆ ಹೊದೆವಸ್ತ್ರ ಹೊದೆಯುವಂತೆ ಮಕ್ಕಳನ್ನು, ಅವರ ಪಾಲಕರನ್ನು ಮನವೊಲಿಸಲು ಕಷ್ಟಪಡಬೇಕಾಯಿತು. ಎಲ್ಲ ಸವಾಲುಗಳ ನಡುವೆಯೇ ೨೪ ವರ್ಷಗಳ ಕಾಲ ಯಶಸ್ವಿಯಾಗಿ ಶಾಲೆ ನಡೆಯಿತು. ನೂರಾರು ಹುಡುಗಿಯರು ಅಕ್ಷರದ ಬೆಳಕು ಕಂಡು ವಿಚಾರಗಳಿಗೆ ತೆರೆದುಕೊಂಡರು. 


‘ಗಾಡ್ ಗಿವ್ಸ್, ಮೆನ್ ರಾಬ್ಸ್’


ಪತಿಯ ಮರಣಾನಂತರ ಶೋಕಿಸುತ್ತ ಕೂರದೇ ಅರ್ಥಪೂರ್ಣವಾಗಿ ಅವರ ನೆನಪಿನಲ್ಲಿ ಶಾಲೆ ತೆರೆದ ರೊಖಿಯಾ ಅವರ ಮಾತು, ಚಿಂತನೆಗಳು ಸ್ವಾಯತ್ತ ಬದುಕನ್ನು ಪ್ರತಿಪಾದಿಸುತ್ತಿದ್ದವು. ಶಾಲೆ ನಡೆಸುತ್ತ, ಬರವಣಿಗೆ ಮಾಡುತ್ತ ‘ಅಂಜುಮನ್-ಇ-ಖವಾತೀನ್-ಇ-ಇಸ್ಲಾಂ’ ಮಹಿಳಾ ಸಂಘಟನೆ ಆರಂಭಿಸಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪರಿಸ್ಥಿತಿಯ ಕುರಿತು ಚರ್ಚೆ, ಸಮ್ಮೇಳನ, ಸಂವಾದ ಏರ್ಪಡಿಸಿದರು. ಬ್ರಿಟಿಷ್ ಭಾರತದಲ್ಲಿ ಅತಿ ಸಾಂಪ್ರದಾಯಿಕತೆ ಮತ್ತು ಅತಿ ಧಾರ್ಮಿಕ ನಿಷ್ಠೆಯೇ ಮುಸ್ಲಿಂ ಸಮಾಜವು ಉಳಿದೆಲ್ಲ ಸಮಾಜಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದರು. ಒಮ್ಮೆ ಮಾತನಾಡುತ್ತ, ‘ಹೆಣ್ಣು ತಲೆಯೆತ್ತಿದರೆ ಸಾಕು, ಧರ್ಮ ಶಾಸ್ತ್ರ ಪುರಾಣಗಳ ಹೆಸರಿನ ಶಸ್ತ್ರಾಸ್ತ್ರಗಳು ಅವಳ ತಲೆಯ ಮೇಲೆ ಹೊಡೆಯುತ್ತವೆ. ಗಂಡಸರು ಶಾಸ್ತ್ರ ಪುರಾಣಗಳನ್ನು ದೇವರ ಆಜ್ಞೆಯೋ ಎನ್ನುವಂತೆ ಪ್ರಚಾರ ಮಾಡಿ ನಮ್ಮನ್ನು ಕತ್ತಲಲ್ಲಿಟ್ಟು ಆಳಲು ಬಳಸಿಕೊಳ್ಳುತ್ತಾರೆ. ಶಾಸ್ತ್ರ ಪುರಾಣಗಳನ್ನು ಸೃಷ್ಟಿ ಮಾಡಿದವರು ಗಂಡಸರೇ. ಸಂತರು ಹೇಳುವ ಉದಾತ್ತ ಬೋಧನೆಗಳನ್ನು ಕೇಳುತ್ತೇವಲ್ಲ, ನಿಜವಾಗಿ ಅವೆಲ್ಲ ಮಹಿಳಾ ಸಂತರ ವಿಚಾರಗಳು. ಗಂಡಸರು ಸೃಷ್ಟಿಸಿದ ಧರ್ಮಗಳು ಹೆಣ್ಣಿನ ಬದುಕಿನ ಸುತ್ತ ಸೇವೆಯ ಉರುಳನ್ನು ಬಿಗಿಗೊಳಿಸಿವೆ ಮತ್ತು ಪುರುಷರು ಮಹಿಳೆಯ ಮೇಲೆ ಅಧಿಕಾರ ಹೇರುವುದನ್ನು ಸಮರ್ಥಿಸುತ್ತವೆ’ ಎಂದು ಹೇಳಿದರು. ಅವರ ಇಂತಹ ದಿಟ್ಟ ಮಾತುಗಳನ್ನು ಕೇಳಿ ಸಾಂಪ್ರದಾಯಿಕ ಸಮಾಜ ವಿದ್ಯುದಾಘಾತವಾದವರಂತೆ ಬೆಚ್ಚಿಬೀಳುತ್ತಿದ್ದರೆ, ಮಹಿಳೆಯರು ಜಾಗೃತಗೊಳ್ಳುತ್ತಿದ್ದರು, ಎಚ್ಚೆತ್ತುಕೊಳ್ಳುತ್ತಿದ್ದರು. 


ರೊಖಿಯಾ ಆಧುನಿಕ ಬಂಗಾಳಿ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಲೇಖಕಿಯಾಗಿ ಹೊರಹೊಮ್ಮಿದರು. ತಮಾಷೆ, ವ್ಯಂಗ್ಯ, ವಿಡಂಬನೆಗಳ ಮೂಲಕ ತಮ್ಮ ಬರಹಗಳಲ್ಲಿ ಬಂಗಾಳಿ ಮುಸ್ಲಿಂ ಮಹಿಳೆಯರು ಅನುಭವಿಸುವ ಕಷ್ಟಗಳನ್ನು ವಿವರಿಸಿದರು. ರೈಲಿನಡಿ ಸಿಕ್ಕಿಕೊಂಡರೂ ಅನ್ಯಪುರುಷರನ್ನು ಸಹಾಯ ಮಾಡಿರೆಂದು ಕೂಗಿ ಕರೆಯಲಾಗದೇ ಪರ್ದಾ ಆಚರಿಸುತ್ತಿದ್ದ ಅವರ ಚಿಕ್ಕಮ್ಮ ಹಳಿಯ ಮೇಲೆ ಅಸು ನೀಗಿದ್ದರು. ಅದನ್ನು ರೊಖಿಯಾ ನೋಡಿದ್ದರು. ಆ ಅನುಭವದ ಹಿನ್ನೆಲೆಯಲ್ಲೋ ಏನೋ, ತಮ್ಮ ಬರವಣಿಗೆಗಳಲ್ಲಿ ಹಾಗೂ ವೈಯಕ್ತಿಕವಾಗಿ ಪರ್ದಾ ಪದ್ಧತಿಯನ್ನು ಕಟುನುಡಿಗಳಲ್ಲಿ ವಿರೋಧಿಸುತ್ತಿದ್ದರು. ಅಬರೋಧ ಭಾಷಿಣಿ ಎಂಬ ಹೊತ್ತಗೆಯಲ್ಲಿ ಪರ್ದಾ ಪದ್ಧತಿಯು ಮಹಿಳೆಯರ ಆತ್ಮಗೌರವ ಮತ್ತು ಬದುಕನ್ನೇ ನಾಶ ಮಾಡಿದೆ ಎಂದು ಕುಟುಕಿದರು. ಅರ್ಧಾಂಗಿ, ಬುರ್ಖಾ, ಗೃಹ ಮೊದಲಾದ ಪ್ರಬಂಧಗಳಲ್ಲಿ ಗಂಡಸರ ಪ್ರತಿಷ್ಠೆ ಮತ್ತು ಅನುಕೂಲಕ್ಕೆ ತಕ್ಕಂತೆ ಪರ್ದಾ ಒಳಗೆ ಹೆಣ್ಣನ್ನು ಬಂಧಿಸಲಾಗಿದೆ; ಆರ್ಥಿಕ ಸ್ವಾವಲಂಬನೆ ಸಾಧಿಸದಿರುವುದು ಮಹಿಳೆಯರು ಮುಂದುವರೆಯದಂತೆ ತೊಡಕಾಗಿದೆ ಎಂದು ಘೋಷಿಸಿದರು. ಸುಗೃಹಿಣಿ ಪ್ರಬಂಧದಲ್ಲಿ ಬುರ್ಖಾ ಧಾರಣೆ ಮತ್ತು ಪುರುಷರಿಂದ ಬೇರ್ಪಡಿಸುವಿಕೆ ಕುರಾನಿನಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಹಾಗೂ ಷರಿಯಾದಲ್ಲಿ ಹೇಳಿಲ್ಲ; ಲಿಂಗಾಧಾರಿತ ಬೇರ್ಪಡಿಸುವಿಕೆ ಮಾಯದ ಗಾಯದಂತಲ್ಲ; ಅದು ನಿಧಾನ ಕೊಲ್ಲುವ ಕಾರ್ಬನ್ ಮೊನಾಕ್ಸೈಡ್ ವಿಷದಂತೆ ಎಂದು ಬರೆದರು. ಶಿಕ್ಷಣ ನೀಡಿದರೆ ಮಹಿಳೆಯರು ಕೆಟ್ಟುಹೋಗುತ್ತಾರೆ ಎಂಬ ವಾದ ಆಗ ಚಾಲ್ತಿಯಲ್ಲಿತ್ತು. ‘ಕುರಾನಿನಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ; ಇವತ್ತಿನ ಇಸ್ಲಾಂ ವಿರೂಪಗೊಂಡಿರುವುದಷ್ಟೇ ಅಲ್ಲ, ಭ್ರಷ್ಟಗೊಂಡಿದೆ. ಶಿಕ್ಷಣ ನೀಡಿದರೆ ಮಹಿಳೆಯರು ತಮ್ಮ ಪಾತ್ರವನ್ನು ಜ್ಞಾನದಿಂದಲೂ, ವೃತ್ತಿಪರವಾಗಿಯೂ ನಿಭಾಯಿಸಲು ಸಾಧ್ಯವಾಗಿ ದೇಶ ಅಭಿವೃದ್ಧಿಯಾಗುತ್ತದೆ; ಗಂಡಸರ ಸಮಸಮ ಹೆಜ್ಜೆಹಾಕಲು ಸಹಾಯವಾಗುತ್ತದೆ. ಮಹಿಳೆಯರು ಓದಿದರೆ ಕೆಟ್ಟುಹೋಗುತ್ತಾರೆನ್ನುವುದು ಸುಳ್ಳು. ತಮ್ಮನ್ನು ಮುಸ್ಲಿಂ ಎಂದು ಕರೆದುಕೊಳ್ಳುವ ಗಂಡಸರು ಮಹಿಳೆಯರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದ ಇಸ್ಲಾಮಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದು ಗಂಡಸು ಹಾಳಾಗಿಹೋಗುವುದಿಲ್ಲ ಎಂದಾದರೆ ಹೆಣ್ಣೇಕೆ ಹಾಳಾಗುತ್ತಾಳೆ?’ ಎಂದು ಗಾಡ್ ಗಿವ್ಸ್, ಮೆನ್ ರಾಬ್ಸ್ ಎಂಬ ಪುಸ್ತಕದಲ್ಲಿ (೧೯೨೭) ಪ್ರಶ್ನಿಸಿದರು.


ತಾವು ಸಮಾಜದಲ್ಲಿ ಬರಲೆಂದು ಆಶಿಸುವ ವಿಚಾರಗಳನ್ನು ಬರಹದಲ್ಲಿ ರೊಖಿಯಾ ಕಾಣಿಸುತ್ತಿದ್ದರು. ಅವರ ಪದ್ಮರಾಗ (೧೯೨೪) ಕಾದಂಬರಿಯು ಜಾತಿ, ವರ್ಗ, ಧರ್ಮವನ್ನು ಪರಿಗಣಿಸದೆ ಎಲ್ಲ ಹುಡುಗಿಯರಿಗೂ ಸಮಾನ ಶಿಕ್ಷಣದ ಅವಕಾಶ ನೀಡುವ ಶಾಲೆಯ ಕತೆಯಾಗಿದೆ. ಕ್ರಾಂತಿಕಾರಕ ಜಾತ್ಯತೀತ ವಿಚಾರಗಳ ಮಹಿಳೆಯರೇ ಸಿಬ್ಬಂದಿಗಳಾಗಿರುವ ತಾರಿಣಿ ಭವನದ ಕಥನವಾಗಿದೆ. ‘ಸುಲ್ತಾನಾಳ ಕನಸು’ ಎಂಬ ನೀಳ್ಗತೆಯು ಮಹಿಳಾ ರಾಜ್ಯವು ಹೇಗೆ ಯುದ್ಧವಿರದ, ಅಪರಾಧವಿರದ, ವೈಜ್ಞಾನಿಕ ಚಿಂತನೆಗಳ, ಎಲ್ಲರೂ ನೆಮ್ಮದಿಯಿಂದ ಬದುಕುವಂತಹ ಆಡಳಿತವಿರುವ ರಾಜ್ಯವಾಗಬಹುದು ಎಂಬ ಸ್ತ್ರೀವಾದಿ ಯುಟೋಪಿಯಾವನ್ನು ಕನಸುತ್ತದೆ. ಕೊನೆಗೂ ಸ್ತ್ರೀವಾದ ಬಯಸುವುದೇನು ಎಂದು ಯೋಚಿಸುವ ಜಗತ್ತಿನ ಮಹಿಳಾವಾದಿಗಳನ್ನು ಆ ಬರಹ ಸೆಳೆದಿದೆ.


ಹೀಗೆ ನೇರವಾಗಿ ಮತ್ತು ದಿಟ್ಟವಾಗಿ ಬರೆದ ರೊಖಿಯಾರ ಸ್ವಾಯತ್ತ ಮಹಿಳಾ ಧ್ವನಿ ತನ್ನ ಕಾಲದಲ್ಲಿ ಜನಪ್ರಿಯವಾಗಲಿಲ್ಲ. ಕ್ರೈಸ್ತಪರ, ಪಶ್ಚಿಮ ಪ್ರೇಮಿ, ಯೂರೋಪಿ ಮನಸ್ಥಿತಿ, ಪಾಶ್ಚಾತ್ಯ ಜೀವನ ಶೈಲಿಯ ಸಿರಿವಂತೆ ಎಂದೆಲ್ಲ ಅವರನ್ನು ಹೀಯಾಳಿಸಿದರು. ಆದರೆ ರೊಖಿಯಾ ಯಾವ ಹಿಂಜಗ್ಗುವಿಕೆಗೂ ಮಣಿಯಲಿಲ್ಲ. ಹಿಂದೆಳೆದಷ್ಟೂ ಹೆಚ್ಚೆಚ್ಚು ಬಲದಿಂದ ಮುನ್ನಡೆದರು. ಬರಹ, ಸಂಘಟನೆ, ಶಾಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ವೈಚಾರಿಕತೆ ಎಂಬ ಬೆಳಕಿನ ಬೀಜ ಬಿತ್ತುತ್ತಲೇ ಐವತ್ತೆರಡನೆಯ ವಯಸ್ಸಿನಲ್ಲಿ ಹುಟ್ಟಿದ ದಿನಾಂಕದಂದು ಕೊನೆಯುಸಿರೆಳೆದರು. 


ಅವರ ಮರಣಾನಂತರ ಶಾಲೆಯನ್ನು ೧೯೩೫ರಲ್ಲಿ ಬ್ರಿಟಿಷ್ ಸರ್ಕಾರ ವಹಿಸಿಕೊಂಡಿತು. ಸ್ವಾತಂತ್ರ್ಯಾನಂತರ ದೇಶ ವಿಭಜನೆಯಾದಾಗ ಶಾಲೆಯ ಎಲ್ಲ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಂಡ ಬಾಂಗ್ಲಾದೇಶಕ್ಕೆ ಹೋದರು. ಬಳಿಕ ರಾಜ್ಯಸರ್ಕಾರ ಶಾಲೆಗೆ ಹೊಸ ಬೋಧಕ ಸಿಬ್ಬಂದಿಯನ್ನು ನೇಮಿಸಿತು. ಅದೇ ಹೆಸರಿನಲ್ಲಿ ಶಾಲೆ ನಡೆಯತೊಡಗಿತು. ಆ ಶಾಲೆಯು ಇವತ್ತು ಕಲಕತ್ತೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂದು ಪ್ರಸಿದ್ಧವಾಗಿದೆ. ರೊಖಿಯಾ ಅವರು ಕಂಡ ಮಹಿಳೆಯರ ಶಿಕ್ಷಣದ ಕನಸು ಎಲ್ಲ ವರ್ಗದವರಿಗೆ ಕೈಗೆಟುಕುತ್ತ ಸಾಕಾರವಾಗುತ್ತಿದೆ.


***


ಶಾಲಾ ಅವಧಿಯಲ್ಲಿ ಹೋಗುವುದೋ ಬೇಡವೋ ಎಂದು ಯೋಚಿಸುತ್ತ ನಾವು ಶುಕ್ತವಾರ ಸಂಜೆ ಸಖಾವತ್ ಮೆಮೊರಿಯಲ್ ಗರ್ಲ್ಸ್ ಹೈಸ್ಕೂಲಿಗೆ ಹೋದೆವು. ಶಾಲೆ ಆಗ ತಾನೇ ಬಿಟ್ಟಿತ್ತು. ಹೊರಗಡೆ ಶಿಕ್ಷಕಿಯರ ಗುಂಪು ನಿಂತು ಚರ್ಚಿಸುತ್ತಿತ್ತು. ಹೊರಗಿನಿಂದಲೇ ಪಟ ತೆಗೆದುಕೊಂಡೆವು. ಒಳಹೋಗಿ ನಮ್ಮನ್ನು ಪರಿಚಯಿಸಿಕೊಂಡೆವು. ಸಿಬ್ಬಂದಿ ನಮ್ಮನ್ನು ಪ್ರಿನ್ಸಿಪಾಲರ ಬಳಿಗೆ ಕರೆದೊಯ್ದರು. ಕಚೇರಿಯಲ್ಲೊಬ್ಬ ಹಿರಿಯ ಮಹಿಳೆ, ಮಾಜಿ ಪ್ರಾಂಶುಪಾಲರು ಕಾರ್ಯನಿಮಿತ್ತ ಬಂದಿದ್ದರು. ಅವರಿಗೆ ರೊಖಿಯಾ ಬಗೆಗೆ ತಿಳಿದಿತ್ತು. ತಮ್ಮ ಶಾಲೆಯ ಬಗೆಗೆ, ಅದರ ಸಂಸ್ಥಾಪಕರಾದ ರೊಖಿಯಾ ಬಗೆಗೆ ತಿಳಿಯಲು ದೂರದಿಂದ ನಾವು ಬಂದಿದ್ದೆವೆನ್ನುವುದು ಅವರಿಗೆಲ್ಲ ಸಂತಸ ತಂದಿತು. 


೧೯೩೨, ಡಿಸೆಂಬರ್ ಎಂಟನೆಯ ತಾರೀಖು ರಾತ್ರಿ ಹನ್ನೊಂದರವರೆಗೆ ರೊಖಿಯಾ ಬರೆಯುತ್ತ ಇದ್ದರಂತೆ. ‘ನಾರೀರ್ ಅಧಿಕಾರ್’ (ಮಹಿಳಾ ಹಕ್ಕುಗಳು) ಎಂಬ ಅಪೂರ್ಣ ಬರಹ ಅವರ ಬರೆಯುವ ಮೇಜಿನ ಮೇಲಿತ್ತು. ಆದರೆ ಅದನ್ನು ಪೂರ್ಣಗೊಳಿಸಲು ಮರುಬೆಳಿಗ್ಗೆ ಒಂಬತ್ತರಂದು ಅವರು ಏಳಲೇ ಇಲ್ಲವಂತೆ. ಅಪೂರ್ಣಗೊಂಡದ್ದನ್ನು ಪೂರ್ಣಗೊಳಿಸುವ ಹೊಣೆಂiನ್ನು ನಮಗೆ ವರ್ಗಾಯಿಸಿ ರೊಖಿಯಾ ಆ ಶಾಲಾವರಣದಲ್ಲಿ ನಿಂತು ನೋಡುತ್ತಿರುವರು ಎಂದ ಪ್ರಾಂಶುಪಾಲರು ಒಳಗೆ ಕರೆದೊಯ್ದು ರೊಖಿಯಾರ ಭಾರೀ ವಿಗ್ರಹ, ಹಳೆಯ ಫೋಟೋಗಳನ್ನು ತೋರಿಸಿದರು.


ಅವರು ಹಂಚಿಕೊಂಡ ಮಾಹಿತಿಯಂತೆ ಅಲ್ಲಿ ಬಂಗಾಳಿ, ಉರ್ದು, ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತವೆ. ಪೂರ್ವ ಪ್ರಾಥಮಿಕ ಹಂತದಿಂದ ಹನ್ನೆರೆಡನೆಯ ತರಗತಿಯವರೆಗೆ ಕಲಿಸುತ್ತಾರೆ. ಒಂದು ತರಗತಿಯಲ್ಲಿ ಸರಾಸರಿ ೪೦ ವಿದ್ಯಾರ್ಥಿನಿಯರಿದ್ದಾರೆ. ತಿಂಗಳಿಗೆ ೨೫೦ ರೂಪಾಯಿ ಶುಲ್ಕ ಪ್ರಾಥಮಿಕ ವಿಭಾಗಕ್ಕೆ, ರೂ. ೨೯೦ ಪ್ರೌಢಶಾಲಾ ವಿಭಾಗಕ್ಕೆ ವಿಧಿಸುತ್ತಾರೆ. ೫೫ ಬೋಧನಾ ಸಿಬ್ಬಂದಿಯಿದ್ದು ಒಟ್ಟು ೧೪೫೦ ವಿದ್ಯಾರ್ಥಿನಿಯರಿದ್ದಾರೆ.


ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಐದನೆಯ ತರಗತಿಯ ತನಕ ಶಾಲೆ ಬೆಳಿಗ್ಗೆ ಹತ್ತೂವರೆಗೇ ಮುಗಿದು ಹೋಗುತ್ತದೆ! ಬೆಳಿಗ್ಗೆ ಬೆ. ೭.೨೦ರಿಂದ ೧೦.೩೦ ತನಕ ತರಗತಿಗಳು ನಡೆಯುತ್ತವೆ. ಶನಿವಾರ ಎರಡೇ ತಾಸು ಶಾಲೆ, ೮-೧೦ ಗಂಟೆಯವರೆಗೆ. ಆದರೆ ಆರರಿಂದ ಹನ್ನೆರಡನೆಯ ತರಗತಿಯವರಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆ. ೧೦.೪೦ - ಮ. ೪.೨೦, ಶನಿವಾರ ಬೆ.೧೦.೪೦ - ಮ.೧.೩೦ರ ತನಕ ಶಾಲೆ ನಡೆಯುತ್ತದೆ.


ಅಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವಿದೆ. ಕಂಪ್ಯೂಟರ್ ಲ್ಯಾಬ್ ಇದೆ. ಮೊದಲಿನಿಂದ ಬಿಸಿಯೂಟ ವ್ಯವಸ್ಥೆಯಿದೆ. ಅಲ್ಲಿನ ಬೋಧನಾ ವಿಧಾನ (ಟೀಚಿಂಗ್ ಮೆಥಡಾಲಜಿ) ರೊಖಿಯಾ ಕಾಲದ ಕೆಲವಂಶಗಳನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಶಾಲಾ ಅವಧಿಯ ವೈಶಿಷ್ಟ್ಯತೆ, ಬದುಕಿಗೆ ಅಗತ್ಯವಿರುವ ಸಂಗತಿಗಳನ್ನೂ ಶಿಕ್ಷಣದ ಜೊತೆಜೊತೆಗೆ ಕಲಿಸುವ ವಿಧಾನವು ಮೆಚ್ಚುಗೆ ಗಳಿಸಿದೆ.


ಗಟ್ಟಿಯಾಗಬೇಕು ಹೆಣ್ಣು ದನಿ


ದೀಪಗಳನ್ನೇ ಸೇಡಿನ ಜ್ವಾಲೆಯಾಗಿಸುತ್ತಿರುವ ಇವತ್ತಿನ ಧಾರ್ಮಿಕ ಮೂಲಭೂತವಾದವು ವಿಶ್ವದೆಲ್ಲೆಡೆ ಅಸಹಿಷ್ಣುತೆಯ ಹೊಗೆ ಹಬ್ಬಿಸಿ ಉಸಿರು ಕಟ್ಟಿಸುತ್ತಿದೆ. ಸಾವಿತ್ರಿಬಾಯಿ ಫುಲೆ, ರೊಕಿಯಾ ಸಖಾವತ್ ಹುಸೇನರಂತಹ ಅಕ್ಷರಪ್ರೇಮಿ ಮಹಿಳೆಯರು ಶಿಕ್ಷಣದಿಂದ ಜನರು ವಿವೇಕವಂತರಾಗುತ್ತಾರೆ ಎಂದು ಇಟ್ಟುಕೊಂಡ ಭರವಸೆ ಹುಸಿಯಾಗುವಂತೆ ಪ್ರಸಕ್ತ ಕಾಲಮಾನದ ತಲ್ಲಣಗಳು ಕಣ್ಣೆದುರಿಗಿವೆ. ದುರಾಸೆಯ ಬಂಡವಾಳಿಗರು, ಬೇಜವಾಬ್ದಾರಿಯ ಆಳುವವರ್ಗ, ಅಸಹಿಷ್ಣುತೆಯನ್ನು ಹಬ್ಬಿಸುತ್ತಿರುವ ಧಾರ್ಮಿಕ ಮೂಲಭೂತವಾದ, ಹಣದಾಸೆಗೆ ಬಿದ್ದ ಮಾಧ್ಯಮಗಳು ಸಮತೆ, ಕರುಣೆ, ಮೈತ್ರಿಗಳೆಲ್ಲ ಅಪ್ರಸ್ತುತ ಥಿಯರಿಗಳೆನ್ನುವಂತೆ ಬಿಂಬಿಸುತ್ತಿವೆ. ಹೀಗಿರುತ್ತ ಸುತ್ತ ಕತ್ತಲೆಂದು ಗೊಣಗದೆ, ಕತ್ತಲಲ್ಲಿರುವವರ ಕೈಗೊಂದು ವಿವೇಕದ ದೀಪವನ್ನಾದರೂ ಇಡುವ ಕೆಲಸ ಆಗಬೇಕಿದೆ. ತನ್ನ ಕಾಲಕ್ಕೆ ಅಗತ್ಯವಿರುವ ಶಾಲಾ ಪಠ್ಯವನ್ನು ತಾನೇ ಸಿದ್ಧಪಡಿಸಿಕೊಂಡು ಮಕ್ಕಳ ಬಳಿ ತೆರಳಿದ; ಶಿಕ್ಷಣ, ಬರಹ, ಸಂಘಟನೆ, ಮಾದರಿ ಬದುಕಿನ ಮೂಲಕ ಹೊಸ ತಲೆಮಾರನ್ನು ರೂಪಿಸಲು ಯತ್ನಿಸಿದ ರೊಖಿಯಾರಂತಹ ಚೇತನಗಳು ನಮಗೆ ಸ್ಫೂರ್ತಿಯಾಗಬೇಕಿದೆ. ನ್ಯಾಯಯುತ ಸಮಾಜ ನೆಲೆಯಾಗಲು ಹೆಣ್ಣು ದನಿ ಗಟ್ಟಿಯಾಗಬೇಕಿದೆ.



ಡಾ. ಎಚ್. ಎಸ್ ಅನುಪಮಾ


ಸಿಎಸ್ಸೆಂಟಿ, ಮುಂಬಯಿ: CSMT Mumbai ಹೆಸರು ಬದಲಾದರೇನು, ಕಟ್ಟಡ ಬದಲಾಗುವುದೇ?




ಬೆಂಗಳೂರು, ಮುಂಬಯಿ, ಕಲಕತ್ತಾ, ದೆಹಲಿ, ಚೆನ್ನೈ ಮುಂತಾಗಿ ಭಾರತದ ಯಾವ ನಗರಕ್ಕೆ ಹೋದರೂ ವಸಾಹತುಶಾಹಿ ಕಾಲದ ಪಳೆಯುಳಿಕೆಯಾಗಿ ಕೆಲವು ರಚನೆಗಳು ಕಾಣಿಸುತ್ತವೆ. ಕಾಲೇಜು, ಕಚೇರಿ, ವಿಶ್ವವಿದ್ಯಾಲಯ, ನ್ಯಾಯಾಲಯ, ಆಸ್ಪತ್ರೆ, ಸ್ಮಾರಕ, ಸೇತುವೆಯೇ ಮೊದಲಾಗಿ ಲೋಕೋಪಯೋಗಕ್ಕಾಗಿ ಕಟ್ಟಿದ ಕಟ್ಟಡಗಳು ನೂರಾರು ವರ್ಷಗಳ ಬಳಿಕವೂ ಗಟ್ಟಿಮುಟ್ಟಾಗಿದ್ದು ಮನಸೆಳೆಯುವಂತಿವೆ. ತಮ್ಮ ಹೆಮ್ಮೆಗೋ, ಮೇಲರಿಮೆಗೋ, ವಿಶೇಷ ಬಳಕೆಯ ದೌಲತ್ತಿಗೋ, ಐಷಾರಾಮಕ್ಕೋ ಅಂತೂ ವಸಾಹತುಶಾಹಿ ಆಡಳಿತ ಅದನ್ನು ಯಾತಕ್ಕೇ ಕಟ್ಟಿರಲಿ - ಬೇಡವೆಂದರೂ ಈಗ ನಿರ್ಮಾಣವಾಗುತ್ತಿರುವ ಸರ್ಕಾರಿ ಕಚೇರಿಗಳ ಅಭಿರುಚಿಯ ಬಡತನವನ್ನು ಅವು ನೆನಪಿಗೆ ತರುತ್ತವೆ. ಅಂದಿನ ವಾಸ್ತುಶಿಲ್ಪಿಗಳ ಶ್ರೀಮಂತ ಕಲ್ಪನಾ ವಿಲಾಸ, ಸೃಜನಶೀಲತೆ, ಅದನ್ನು ಆಗ ಮಾಡುವ ಬದ್ಧತೆ, ಸಾಮರ್ಥ್ಯಗಳ ಆಳುವವರ್ಗ ಈಗೇಕಿಲ್ಲ ಎಂಬ ಹೋಲಿಕೆಯು ಬೇಸರವನ್ನು ಮುಂದೊತ್ತುತ್ತದೆ. 


ಮುಂಬಯಿಯ ಟೈಮ್ಸ್ ಸ್ಕ್ವೇರ್ ಹಲವು ಐತಿಹಾಸಿಕ ಕಟ್ಟಡಗಳನ್ನು ಹೊಂದಿರುವ ತಾಣ. ಅಲ್ಲಿ ನಿಂತರೆ ಸುತ್ತಮುತ್ತ ಕಾಣುವ ಕಟ್ಟಡ, ಮೂರ್ತಿಗಳು ಯಾವುದೋ ಕಾಲಕ್ಕೆ, ಯಾವುದೋ ನೆಲಕ್ಕೆ ಹೋದ ಭಾಸ ಹುಟ್ಟಿಸುತ್ತವೆ. ಟೈಮ್ಸ್ ಸ್ಕ್ವೇರ್‌ನಲ್ಲಿರುವ ಫಿರೋಜ್ ಶಾ ಮೆಹ್ತಾ ಮೂರ್ತಿಯ ಆಚೀಚೆ ವಿಕ್ಟೋರಿಯನ್ ಗೊಥಿಕ್ ಶೈಲಿ ಮತ್ತು ಇಂಡೋಸರಾಸೆನಿಕ್ ಶೈಲಿಗಳು ಸೇರಿ ಆದ ಇಂಡೋಗೋಥಿಕ್ ರಚನೆಗಳು ಸಾಕಷ್ಟಿವೆ. ಟೈಮ್ಸ್ ಸ್ಕ್ವೇರ್‌ನ ಒಂದು ಪಕ್ಕ ಬೃಹನ್ಮುಂಬಯಿ ಮಹಾನಗರಪಾಲಿಕೆ(ಬಿಎಂಸಿ)ಯ ಆಕರ್ಷಕ ಕಟ್ಟಡವಿದ್ದರೆ ಅದರ ಎದುರಿಗೆ ಕಣ್ತುಂಬುವಂತೆ ಭಾರತೀಯ ರೈಲ್ವೇಯ ಸೆಂಟ್ರಲ್ ವಿಭಾಗದ ಕೇಂದ್ರ ಕಚೇರಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್ಸೆಂಟಿ) ಅಥವಾ ಒಂದು ಕಾಲದ ವಿಕ್ಟೋರಿಯಾ ಟರ್ಮಿನಸ್ (ವಿಟಿ) ಕಟ್ಟಡ ಕಂಗೊಳಿಸುತ್ತದೆ. 


ಭಾರತದ ಅತ್ಯಂತ ಜನನಿಬಿಡ, ದಟ್ಟಣೆಯ ರೈಲುನಿಲ್ದಾಣಗಳಲ್ಲಿ ಹದಿನೆಂಟು ಪ್ಲಾಟ್‌ಫಾರ್ಮುಗಳಿರುವ ಮುಂಬಯಿಯ ಸಿಎಸ್ಸೆಂಟಿಯೂ ಒಂದು. ೧೯೯೬ರಲ್ಲಿ ವಿಕ್ಟೋರಿಯಾ ಟರ್ಮಿನಸ್ ಇದ್ದದ್ದು ಛತ್ರಪತಿ ಶಿವಾಜಿ ಟರ್ಮಿನಸ್ (ವಿಟಿ ಬದಲಿ ಸಿಎಸ್ಟಿ) ಆಗಿ, ೨೦೧೭ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಸೆಂಟಿ) ಆಗಿ ಹೆಸರು ಬದಲಾಗುತ್ತ ಹೋದರೂ, ಹಳೆಯ ಕಟ್ಟಡವು ಮನಮೋಹಕವಾಗಿ ನಗರಮಧ್ಯದಲ್ಲಿ ನಿಂತಿದೆ. ಒಂದೂವರೆ ಶತಮಾನದಷ್ಟು ಹಳೆಯ ವಿಟಿ ಕಟ್ಟಡದ ಒಂದು ಭಾಗ ಕಚೇರಿಯಾಗಿ, ರೈಲು ನಿಲ್ದಾಣವಾಗಿ ಈಗಲೂ ಬಳಕೆಯಲ್ಲಿದ್ದರೆ ಮತ್ತೊಂದು ಭಾಗವು ರೈಲ್ವೆ ವಸ್ತುಸಂಗ್ರಹಾಲಯವಾಗಿದೆ. ಗತದ ಹೆಸರು, ನೆನಪುಗಳನ್ನು ಅಳಿಸಿ ಹೊಸ ಸಂಕೇತಗಳನ್ನು ಸ್ಥಾಪಿಸುವ ಭರದ ನಾಯಕತ್ವವು ವಿಶ್ವವನ್ನೇ ಯುದ್ಧ ವಿನಾಶದ ಭೀತಿಗೆ ದೂಡಿರುವ ಹೊತ್ತಿನಲ್ಲಿ ಇದುವರೆಗೆ ಸಾರ್ವಜನಿಕರಿಗೆ ಪ್ರವೇಶವಿರದ ಒಳಭಾಗಗಳಿಗೆ ಗೈಡೆಡ್ ಟೂರ್ ಮೂಲಕ ಹೋಗಿ ಬಂದ ಅನುಭವ ಇಲ್ಲಿದೆ.


‘ಬಂಬಾಯಿ’ಯ ಜಿಐಪಿಆರ್




ಬಂಬಯಿಯು ಬಾಂಬೆ ಆಗಿ ಇವತ್ತಿನ ಮುಂಬೈ ಆಗಿರುವುದರ ಹಿಂದೆ ವಾಣಿಜ್ಯ, ರಾಜಕಾರಣ, ಜನ ವಲಸೆ, ಉತ್ಸಾಹ, ಈರ್ಷ್ಯೆ, ಮಹತ್ವಾಕಾಂಕ್ಷೆ, ಮಾದಕ ವಸ್ತು ಸಾಗಣೆಗಳ ಸುದೀರ್ಘ ಚರಿತ್ರೆಯಿದೆ. ವಸಾಹತುಶಾಹಿ ಉನ್ಮಾದದ ಪೋರ್ಚುಗೀಸರು ಮೊದಲು ಮುಂಬಯಿ ದ್ವೀಪ ಸಮೂಹಗಳ ಒಡೆತನ ತಮ್ಮದೆಂದು ಘೋಷಿಸಿಕೊಂಡರು. ಪೋರ್ಚುಗೀಸ್ ರಾಜಕುಮಾರಿ ಕ್ಯಾಥರಿನ್ ಬ್ರಗಾಂಝಳು ಇಂಗ್ಲೆಂಡಿನ ರಾಜಕುಮಾರ ಎರಡನೆಯ ಚಾರ್ಲ್ಸ್‌ನನ್ನು ಮದುವೆಯಾದಾಗ ವರದಕ್ಷಿಣೆಯಾಗಿ ಏಳು ದ್ವೀಪಗಳ ಸಮೂಹವು ಅಳಿಯನಾಗಲಿದ್ದ ಚಾರ್ಲ್ಸ್‌ನಿಗೆ ವರ್ಗಾವಣೆಯಾಯಿತು. ಮುಂಬಾ ಆಯಿಯ ಒಕ್ಕಲಾದ ಕೋಳಿ ಜನಾಂಗವು ಮುಖ್ಯವಾಗಿ ವಾಸಿಸುತ್ತಿದ್ದ ದ್ವೀಪ ಸಮೂಹದ ಪ್ರಾಮುಖ್ಯತೆ, ಸಾಧ್ಯತೆಗಳು ಪೋರ್ಚುಗೀಸರಿಗೆ ಮೊದಲು ಹೊಳೆದಿರಲಿಲ್ಲ. ಬ್ರಿಟಿಷರಿಗೂ ಎಷ್ಟೋ ಕಾಲ ಅದರ ಪ್ರಾಮುಖ್ಯತೆಯ ಅರಿವಾಗಲಿಲ್ಲ. ೧೬೬೮ರಲ್ಲಿ ಬ್ರಿಟನ್ ರಾಜಸತ್ತೆಯು ಏಳು ದ್ವೀಪಗಳನ್ನು ವರ್ಷಕ್ಕೆ ಹತ್ತು ಪೌಂಡ್ ಬಾಡಿಗೆಗೆ ಈಸ್ಟ್ ಇಂಡಿಯಾ ಕಂಪನಿಗೆ ನೀಡಿತು. ಲಾಭನಷ್ಟಗಳ ಲೆಕ್ಕಾಚಾರದ ಕಂಪನಿಯ ವ್ಯಾಪಾರಿ ಮಿದುಳಿಗೆ ವಿಧವಿಧದ ಸಾಧ್ಯತೆಗಳು ಹೊಳೆದವು. ಕಂಪನಿಯು ೧೭೮೨ರಲ್ಲಿ ಹಾರ್ನ್‌ಬಿ ವೆಲ್ಲಾರ್ಡ್ ಯೋಜನೆಯ ಮೂಲಕ ಸಮುದ್ರದ ಕೆಲಭಾಗ ತುಂಬಿಸಿ, ಭೂಭಾಗವನ್ನು ಹೆಚ್ಚಿಸಿ, ಏಳು ದ್ವೀಪಗಳನ್ನು ಸೇರಿಸಿ ಬಂಬಯಿಯನ್ನು ಬಂದರು ನಗರವಾಗಿ ಬೆಳೆಸಿತು. ಚಿಕ್ಕ ಊರು ಇದ್ದದ್ದು ದೊಡ್ಡ ಊರಾಗಿ, ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಳೆದೇ ಬೆಳೆಯಿತು. ಅದುವರೆಗೆ ಅಲ್ಲಿ ಅಗ್ರಿ (ಉಪ್ಪು ತೆಗೆಯುವವರು), ಕೋಳಿ (ಬೆಸ್ತರು) ಮತ್ತು ಭಂಡಾರಿ (ಸೇಂದಿ ಇಳಿಸುವವರು) ಎಂಬ ಮೂರು ಸಮುದಾಯದವರು ವಾಸಿಸುತ್ತಿದ್ದರು. ಪಟ್ಟಣವಾದ ಹೊತ್ತಿನಲ್ಲಿ ಮಹಾವಲಸೆ ಆರಂಭವಾಯಿತು. ಅದು ಇವತ್ತಿಗೂ ಮುಂದುವರೆದಿದೆ. ವಿಶ್ವದೆಲ್ಲೆಡೆಯ, ದೇಶದೆಲ್ಲೆಡೆಯ ಜನರು ಮುಂಬಯಿಗೆ ವಲಸೆ ಬರುತ್ತಲೇ ಇದ್ದು ಆಲ್ಫಾ ಸಿಟಿ ಎನಿಸಿಕೊಂಡಿದೆ. 


೧೯ನೆಯ ಶತಮಾನದ ವೇಳೆಗೆ ಬೊಂಬಾಯಿಯಲ್ಲಿ ಬೋರಿ ಬಂದರ್ ಅತಿ ದೊಡ್ಡ ವಾಣಿಜ್ಯ ಬಂದರಾಗಿತ್ತು. ದೇಶಿ ಸರಕುಗಳಾದ ಹತ್ತಿ, ಭತ್ತ, ಸಕ್ಕರೆ, ಅಫೀಮು, ಮಸಾಲೆ ಪದಾರ್ಥ, ರೇಶ್ಮೆಗಳನ್ನು ಒಳನಾಡಿನ ವಿವಿಧ ಭಾಗಗಳಿಂದ ಬಂದರಕ್ಕೆ ತರಬೇಕಿತ್ತು. ವಿದೇಶಗಳಿಂದ ಬಂದರಿಗೆ ಬಂದದ್ದನ್ನು ಒಳನಾಡಿಗೆ ಸಾಗಿಸಲು ಉತ್ತಮ ಸಂಪರ್ಕ ಜಾಲ ಅಗತ್ಯವಾಗಿತ್ತು. ರಸ್ತೆ, ರೈಲು, ಜಲಸಾರಿಗೆ ಮಾರ್ಗಗಳೆಲ್ಲ ರೂಪುಗೊಂಡವು. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಾಗಾಣಿಕೆ ಸಾಧ್ಯ ಮಾಡುವ ರೈಲು ಸಂಪರ್ಕವನ್ನು ಅಭಿವೃದ್ಧಿಪಡಿಸಲು ‘ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆ’ಯನ್ನು (ಜಿಐಪಿಆರ್) ಆರಂಭಿಸಲಾಯಿತು. ಮುಂಬಯಿಯನ್ನು ಕೇಂದ್ರವಾಗಿರಿಸಿಕೊಂಡು ೧೮೪೯ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಜಿಐಪಿಆರ್ ಅನ್ನು ಅಭಿವೃದ್ಧಿಗೊಳಿಸಿತು. 


ಜಿಐಪಿಆರ್ ನಿರ್ದೇಶಕ ಮಂಡಳಿಯಲ್ಲಿ ಹನ್ನೆರಡು ಜನರಿದ್ದರು. ಅವರಲ್ಲಿ ಜಮ್ಷೆಡ್ ಭಾಯಿ ಜೀಜೀಭಾಯಿ ಹಾಗೂ ಜಗನ್ನಾಥ ಶಂಕರ ಶೇಟ್ ಎಂಬ ಮುಂಬಯಿ ಮೂಲದ ಇಬ್ಬರು ಭಾರತೀಯ ವ್ಯಾಪಾರಿಗಳಿದ್ದರು. ಕೇಂದ್ರ ಕಚೇರಿ ಲಂಡನ್ನಿನಲ್ಲಿತ್ತು. ಮೊದಲ ರೈಲು ಬೈಕುಲಾ ಮತ್ತು ಪರೇಲಿನ ನಡುವೆ ಗಂಟೆಗೆ ೨೪ ಕಿಲೋಮೀಟರು ವೇಗದಲ್ಲಿ ಎರಡು ಮೈಲುಗಳಷ್ಟು ಚಲಿಸಿದಾಗ ‘ಆಗ್ ಬೋಟ್’ (ಬೆಂಕಿ ದೋಣಿ) ನೋಡಲು ಸಾವಿರಾರು ಜನರು ಇಕ್ಕೆಲದಲ್ಲಿ ನೆರೆದರು. ಚಲಿಸುವ ಅದರ ಹಿಂದೆಯೇ ಓಡಿದರು. ಸುರಕ್ಷೆಗಾಗಿ ಪೊಲೀಸರನ್ನು ನೇಮಿಸಬೇಕಾಯಿತು. ಬರಬರುತ್ತ ರೈಲು ಪಯಣ ಸುಧಾರಿಸುತ್ತ ಹೋಯಿತು. ೫೬ ಕಿಮೀ ಉದ್ದದ, ಬಾಂಬೆ, ಖಾಂದೇಶ್-ಬೇರಾರ್‌ಗಳನ್ನು ಸಂಪಕಿಸುವ ರೈಲು ಸಂಪರ್ಕ ಆರಂಭಗೊಂಡಿತು. ಬಳಿಕ ೨೧೦೦ ಕಿಲೋಮೀಟರುಗಳ ರೈಲು ರಸ್ತೆ ನಿರ್ಮಾಣವಾಗಿ ಒಳನಾಡು ಮತ್ತು ಮದರಾಸುಗಳಿಗೆ ಸಂಪರ್ಕ ಕಲ್ಪಿಸಿತು. ಯೋಜನೆ ವಿಸ್ತರಿಸುತ್ತ ಹೋದಂತೆ ಕೇಂದ್ರ ಕಚೇರಿ ಲಂಡನ್ನಿನಿಂದ ಮುಂಬಯಿಗೆ ಬಂತು. ಸುಂದರ ವಾಸ್ತುವಿನ್ಯಾಸದ ಕಟ್ಟಡವನ್ನು ಕೇಂದ್ರ ಕಚೇರಿಯಾಗಿ ಕಟ್ಟಲು ನಕಾಶೆ ಸಿದ್ಧವಾಯಿತು. 


ಕಲೆಯ ನೆಲೆಯಾಗಿ ಅರಳಿದ ಶಿಲೆಯ ಕಟ್ಟಡ 


ಹೊಸ ಕಟ್ಟಡಕ್ಕೆ ವಾಸ್ತು ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಎಫ್. ಡಬ್ಲ್ಯು. ವಿಲಿಯಮ್ಸ್ ಸಲ್ಲಿಸಿದ ಪ್ರಸ್ತಾವ ಅನುಮೋದನೆ ಪಡೆದುಕೊಂಡಿತು. ೧೮೭೮ರಲ್ಲಿ ಬೋರಿ ಬಂದರಿನಲ್ಲಿ ಕಚೇರಿಯ ನಿರ್ಮಾಣ ಕಾರ್ಯ ಆರಂಭವಾದದ್ದು ಆಮೆಗತಿಯಲ್ಲಿ ಮುಂದುವರೆಯಿತು. ಹತ್ತು ವರ್ಷ ತೆಗೆದುಕೊಂಡ ಕಾಮಗಾರಿಯು ೧೬.೧೪ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ೧೮೮೭ರಲ್ಲಿ ವಿಕ್ಟೋರಿಯಾಳು ರಾಣಿಯಾದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪೂರ್ಣವಾಯಿತು. 


ಕಟ್ಟಡಕ್ಕೆ ಆಕರ್ಷಕವಾದ ಭಾರೀ ಗೋಪುರವಿದೆ. ಅದರ ತುತ್ತತುದಿಯಲ್ಲಿ ಒಂದು ಕೈಯಲ್ಲಿ ಚಕ್ರವನ್ನೂ ಮತ್ತೊಂದರಲ್ಲಿ ದೀಪವನ್ನೂ ಹಿಡಿದ ಸ್ಟಾಚ್ಯೂ ಆಫ್ ಪ್ರೋಗ್ರೆಸ್ ನಿಲ್ಲಿಸಲಾಯಿತು. ಅದು ಈಗಲೂ ಇದೆ. ಒಮ್ಮೆ ಮಿಂಚು ಹೊಡೆದು ವಿಗ್ರಹಕ್ಕೆ ಕುಂದುಂಟಾದ ಬಳಿಕ ಎತ್ತಿದ ಕೈಯಲ್ಲಿ ಮಿಂಚು ನಿರೋಧಕವನ್ನು ಕೊಡಲಾಗಿದೆ. ಗೋಪುರದಲ್ಲಿ ಈಗಲೂ ಸರಿಯಾದ ಸಮಯ ತೋರಿಸುವ ಗಡಿಯಾರವಿದೆ. ಮೊದಲು ಗಡಿಯಾರದ ಕೆಳಗೆ ವಿಕ್ಟೋರಿಯಾ ರಾಣಿಯ ಮೂರ್ತಿಯಿತ್ತು. ಸ್ವಾತಂತ್ರ್ಯಾನಂತರ ೧೯೫೦ರ ಹೊತ್ತಿಗೆ ವಸಾಹತುಶಾಹಿ ಕುರುಹುಗಳನ್ನೆಲ್ಲ ಅಳಿಸಿಬಿಡುವ ಭರದಲ್ಲಿ ಮೂರ್ತಿಯನ್ನು ತೆಗೆಯಲಾಯಿತು. ಮಳೆಗಾಳಿಗೆ ತೆರೆದುಕೊಂಡು ವಿಕ್ಟೋರಿಯಾ ಸಂಗ್ರಹಾಲಯದ ಬಯಲಲ್ಲಿ ಬಿದ್ದುಕೊಂಡ ಅದು ನಂತರ ಕಾಣೆಯಾಯಿತು. (ಇವತ್ತಿಗೂ ಎಲ್ಲಿದೆಯೋ ಪತ್ತೆಯಾಗಿಲ್ಲ.)



ಕಟ್ಟಡದ ಮುಖ್ಯ ದ್ವಾರದ ಎರಡೂ ಕಡೆಗಳಲ್ಲಿ ಸಿಂಹ ಮತ್ತು ಹುಲಿಯ ಮೂರ್ತಿಗಳು ಜನರನ್ನು ಘನತೆಯಿಂದ ಸ್ವಾಗತಿಸುವಂತೆ ಕುಳಿತಿವೆ. ಒಳಹೊಕ್ಕ ಕೂಡಲೇ ತ್ರೀಡಿ ಫೋಟೋದಷ್ಟು ಖಚಿತ ಚಹರೆಯ ಹಲವು ಶಿಲಾಮುಖಗಳು ಕಟ್ಟಡದ ಗೋಡೆಯ ಮೇಲೆ ಕಾಣುತ್ತವೆ. ಅವು ಹನ್ನೆರಡು ಜನ ಬೋರ್ಡ್ ಆಫ್ ಡೈರೆಕ್ಟರುಗಳವು. ಅಲ್ಲದೇ ಆ ಕಾಲದಲ್ಲಿ ಮುಂಬಯಿಯಲ್ಲಿ ವಾಸವಿದ್ದ ಜನಸಮುದಾಯಗಳನ್ನು ಆಯಾ ಸಮುದಾಯಗಳ ಸಾಂಪ್ರದಾಯಿಕ ಉಡುಪುಗಳೊಡನೆ ಸುಂದರವಾಗಿ ಕೆತ್ತಿದ್ದಾರೆ. ಅವು ಕುಂದಿಲ್ಲದೆ ಇವತ್ತಿಗೂ ಇವೆ. (ಈ ಮುಖಶಿಲ್ಪಗಳಲ್ಲಿ ಒಬ್ಬ ಮಹಿಳೆಯ ಮುಖವೂ ಇಲ್ಲದಿರುವುದು ಥಟ್ಟನೆ ಗಮನ ಸೆಳೆಯುತ್ತದೆ.) ಹೊರಗಣ ಗೋಡೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಜಿಐಪಿಆರ್‌ನ ಲಾಂಛನಗಳನ್ನು (ಕೋಟ್ ಆಫ್ ಆರ್ಮ್ಸ್) ಕೆತ್ತಲಾಗಿದೆ. ಮುಂಬಯಿಯ ಜನಬದುಕನ್ನು, ಸಂಸ್ಕೃತಿ-ವಾಣಿಜ್ಯವನ್ನು ಬಿಂಬಿಸುವಂತೆ ಸಾಕಷ್ಟು ಗೋಡೆಶಿಲ್ಪಗಳಿವೆ. ಬರ್ಮಾದ ತೇಗದ ಮರಗಳಿಂದ ಮಾಡಿದ ಕುಸುರಿ ಕೆತ್ತನೆಯ ಭಾರೀ ಬಾಗಿಲು ದಾಟಿ ಒಳಗೆ ಹೋದರೆ ರೈಲ್ವೇ ವಸ್ತು ಸಂಗ್ರಹಾಲಯವಿದೆ. ಕಟ್ಟಡದ ಇಂಚಿಂಚೂ ವಾಸ್ತು ಸೌಂದರ್ಯವನ್ನು ಸೂರೆಗೊಳಿಸುವಂತೆ ವಿಶಿಷ್ಟವಾಗಿದೆ.  

ಚಂದದ ಕಲ್ಲು ಕಟ್ಟಡವನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲೆಡೆ ಪ್ರಾಣಿ, ಪಕ್ಷಿ, ಕೀಟಗಳ ಶಿಲ್ಪಲೋಕ ಅರಳಿಕೊಂಡಿರುವುದು ಎದ್ದು ಕಾಣುತ್ತದೆ. ಪ್ರತಿ ಕಂಬ, ಬೋದಿಗೆ, ತೊಲೆ, ಕಮಾನು, ಜಾಲಂಧ್ರವೂ ಗಿಡಮರಬಳ್ಳಿಗಳನ್ನೂ, ನಾನಾ ಪ್ರಾಣಿಗಳ ಶಿಲ್ಪವನ್ನೂ ಹೊಂದಿವೆ. ಬಿದ್ದ ಮಳೆ ನೀರು ಹೊರಬರಲು ಇರುವ ಕೊಳವೆಯೂ ಹುಲಿ, ಸಿಂಹ, ಚಿರತೆ, ಕುರಿ, ಹಲ್ಲಿ, ಮಂಗ, ಹಂದಿ ಮುಂತಾದ ಪ್ರಾಣಿಗಳ ಮುಖವಾಗಿದೆ. ಹಾವು ಹಿಡಿಯುತ್ತಿರುವ ಮುಂಗುಸಿ, ಇಲಿ ಹಿಡಿಯುತ್ತಿರುವ ಬೆಕ್ಕು, ಹಾರುತ್ತಿರುವ ನವಿಲು, ನೇತುಬಿದ್ದ ಮಂಗ, ಫೂತ್ಕರಿಸುವ ಚಿರತೆ ಇತ್ಯಾದಿ ಪ್ರತಿ ಜೀವಿಯೂ ಯಾವುದೋ ಚಟುವಟಿಕೆಯಲ್ಲಿರುವಂತೆ ಕೆತ್ತಲಾಗಿದೆ. ಸಣ್ಣದೇ ಇರಲಿ, ದೊಡ್ಡದೇ ಇರಲಿ, ಜೀವಿಗಳ ರಾಚನಿಕ ಚಹರೆ ಖಚಿತವಾಗಿದೆ. 




ಈ ಕಟ್ಟಡವು ಇಷ್ಟೊಂದು ವನ್ಯ ಜೀವಿ ಶಿಲ್ಪಗಳನ್ನು ಹೊಂದಿರಲು ಜಾನ್ ಲಾಕ್ವುಡ್ ಕಿಪ್ಲಿಂಗ್ ಕಾರಣರಾಗಿದ್ದಾರೆ. ಆತ ಆಗಷ್ಟೆ ಮುಂಬಯಿಯಲ್ಲಿ ಆರಂಭವಾಗಿದ್ದ ಜೆ. ಜೆ. ಸ್ಕೂಲ್ ಆಫ್ ಆರ್ಟ್‌ನ ಪ್ರೊಫೆಸರ್ ಆಗಿದ್ದರು. ನಂತರ ಪ್ರಿನ್ಸಿಪಾಲ್ ಆದರು. ಪರಿಸರಪ್ರಿಯ ಶಿಲ್ಪಿ, ವಿನ್ಯಾಸಕಾರ ಲಾಕ್ವುಡ್ ಕಿಪ್ಲಿಂಗ್, ‘ಜಂಗಲ್ ಬುಕ್’ನಂತಹ ಹತ್ತಾರು ಜನಪ್ರಿಯ ಪುಸ್ತಕಗಳನ್ನು ಬರೆದ ರುಡ್ಯಾರ್ಡ್ ಕಿಪ್ಲಿಂಗ್ ಅವರ ತಂದೆ. ಮಗ ರುಡ್ಯಾರ್ಡ್‌ನ ಬಹಳಷ್ಟು ಪುಸ್ತಕಗಳಿಗೆ ತಂದೆಯೇ ಚಿತ್ರ ಬರೆದರು. ಭಾಯಿ ರಾಮಸಿಂಗ್‌ರಂತಹ ಸ್ಥಳೀಯ ಕಲಾವಿದರನ್ನು ತಯಾರು ಮಾಡಿದರು. ಮುಂಬಯಿಯ ಕ್ರಾಫರ್ಡ್ ಮಾರುಕಟ್ಟೆ, ಲಾಹೋರಿನ ವಸ್ತುಸಂಗ್ರಹಾಲಯ, ಲಂಡನ್ನಿನ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂಗಳನ್ನು ಚಂದಗೊಳಿಸಿದ ವಿನ್ಯಾಸಕಾರ ಅವರು. 


ಕತೆಯಂತೆ ಇತಿಹಾಸ ತಿಳಿಸಿದ ಶ್ರಾವಣಿ











ಈ ಎಲ್ಲ ಕತೆ ಕೇಳುತ್ತ, ಕಣ್ಣರಳಿಸಿ ನೋಡುತ್ತ ಎರಡೂವರೆ ತಾಸು ಕಳೆದದ್ದೇ ತಿಳಿಯಲಿಲ್ಲ. ಮುಂಬಯಿಯ ಮೂರ್ನಾಲ್ಕು ಶತಮಾನಗಳ ಆಧುನಿಕ ಇತಿಹಾಸವನ್ನು ಗೈಡ್ ಆಗಿ ಜೊತೆಯಾದ ಲವಲವಿಕೆಯ ಯುವತಿ ಶ್ರಾವಣಿ ತಿಳಿಸಿಕೊಟ್ಟಳು. ನಮಗೆ ಪ್ರಶ್ನೆಗಳನ್ನು ಕೇಳುತ್ತ, ನಾವು ಕೊಟ್ಟ ಊಹೆಯ ಉತ್ತರಗಳನ್ನು ವಿಶ್ಲೇಷಿಸುತ್ತ ಮುಂಬಯಿ ಎಂಬ ನಗರವು ಇಂದಿನ ನಗರವಾದ ಚರಿತ್ರೆಯನ್ನು ಆಕರ್ಷಕವಾಗಿ ವಿವರಿಸಿದಳು. ರೈಲು ತನ್ನ ಆದಿಮ ಚಕ್ಕಡಿ ಸ್ವರೂಪದಿಂದ ಇಂದಿನ ಬುಲೆಟ್‌ತನದವರೆಗೆ ಹಾದು ಬಂದದ್ದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದಳು. ರೈಲ್ವೆಯವರು ಬಳಸುತ್ತಿದ್ದ ದುಡ್ಡು ಸಂಗ್ರಹಿಸುವ ಭಾರೀ ಕಬ್ಬಿಣದ ಪೆಟ್ಟಿಗೆಗಳು; ಕಟ್ಟಡದ ಯೋಜನಾ ನಕಾಶೆ; ಅಂದಿನ ರೈಲು ಟಿಕೆಟ್; ಬೆಂಕಿ ನಂದಿಸಲು ಇದ್ದ ನೀರು-ಮರಳು ತುಂಬಿದ ಗಾಡಿಗಳು; ಹದಿನೈದು ದಿನಕ್ಕೊಮ್ಮೆ ಚಾವಿ ಕೊಟ್ಟು ತಿರುಗಿಸುವ, ಈಗಲೂ ನಡೆಯುತ್ತಿರುವ ಮಾನವ ಚಾಲಿತ ಗಡಿಯಾರ; ಭಾರೀ ಎತ್ತರದ ಸೂರು; ಅದು ನಕ್ಷತ್ರ ಭರಿತ ಇರುಳ ಆಗಸದಂತೆ ಕಾಣಲು ಬಳಿದ ಮುತ್ತಿನಂತಹ ಬಿಳಿಯ ಬಣ್ಣ; ಅದಕ್ಕೆ ಅಂಟಿಸಿದ ಬಂಗಾರ ಬಣ್ಣದ ಲೋಹದ ನಕ್ಷತ್ರಗಳು; ತೂಗುದೀಪ ನೇತು ಹಾಕಲು ಇರುವ ಕೊಕ್ಕೆಗಳು; ಸ್ಟೀಮ್ ಎಂಜಿನ್ನುಗಳಿಗೆ ನೀರು ತುಂಬಿಸುವ ಬೃಹತ್ ಪೈಪುಗಳು; ಭಾರೀ ರೆಕ್ಕೆಗಳಿರುವ ವಿಶಿಷ್ಟ ಪಂಖಗಳೇ ಮೊದಲಾದ ಅಪರೂಪದ ವಸ್ತುಗಳನ್ನು ಕರೆದು, ಕರೆದು ಎಲ್ಲರಿಗೂ ತೋರಿಸಿದಳು. ರಾತ್ರಿ ಹೊತ್ತು ತೂಗುದೀಪದ ಬೆಳಕಿನಲ್ಲಿ ಕಟ್ಟಡದ ಒಳಛಾವಣಿಯು ನಕ್ಷತ್ರ ಮಿನುಗುವ ಇರುಳಾಗಸದಂತೆ ಕಾಣುತ್ತಿತ್ತು ಎಂದವಳು ಹೇಳುವಾಗ ಕಲ್ಪನೆಯಲ್ಲಿ ನಮ್ಮ ಕಣ್ಣುಗಳು ಹೊಳೆದವು. ಒಂದು ದೊಡ್ಡ ಬಾಗಿಲು ದಾಟಿ ಭಾರೀ ಹಜಾರ ಪ್ರವೇಶಿಸುವಾಗ, ‘ಎಲ್ಲರೂ ನೆಲ ನೋಡುತ್ತಿರಬೇಕು; ನಾನು ಹೇಳಿದಾಗ ಮಾತ್ರ ತಲೆಯೆತ್ತಬೇಕು, ನೋ ಚೀಟಿಂಗ್ ಪ್ಲೀಸ್’ ಎಂದು ವಿನಂತಿಸಿದಳು. ತಲೆತಗ್ಗಿಸಿ ಹಜಾರದೊಳಗೆ ಹೋಗಿ ಬಳಿಕ ತಲೆಯೆತ್ತಿ ಎಂದಾಗ ಮೇಲೆ ನೋಡಿದರೆ ಕಂಡದ್ದು ಸಿಎಸ್ಸೆಂಟಿಯ ೩೦೦ ಅಡಿ ಎತ್ತರದ ಗುಮ್ಮಟದ ಅಡಿ ಭಾಗ! ಸುರುಳಿಸುರುಳಿಯಾಗಿ ವೃತ್ತಾಕಾರದಲ್ಲಿ ಮೇಲೆ ಹೋಗುವ ಮೆಟ್ಟಿಲುಗಳಡಿ ನಾವು ನಿಂತಿದ್ದೆವು! 


ಇತಿಹಾಸವನ್ನು ತಿರುಚಿ ಹೇಳುವ ಕಾಲದಲ್ಲಿ ಅದರ ನಿಜಸ್ವರೂಪವನ್ನು ರೋಚಕವಾಗಿ ಹೇಳುವುದು ಒಂದು ಕಲೆ. ಅದು ಜಾಣೆ ಶ್ರಾವಣಿಗೆ ಇದೆ. ಯುವಜನರು ಇಂತಹ ಹೊಸಹೊಸ ಉದ್ಯೋಗಗಳನ್ನು ಕಂಡುಕೊಳ್ಳುವಂತಾಗಲಿ; ಇತಿಹಾಸವನ್ನು ಅರಿಯುವ, ಅರಗಿಸಿಕೊಳ್ಳುವ ಆಸಕ್ತಿ, ಶ್ರದ್ಧೆಗಳು ಬೆಳೆದು ಸತ್ಯ ಮೆರೆಯಲಿ ಎಂದು ಹಾರೈಸಿ ಹೊರಬಂದೆವು. ಬಂದ ಬಳಿಕವೂ ಸಿಎಸ್ಸೆಂಟಿಯ ಇತಿಹಾಸ, ಚೆಲುವು ಮತ್ತು ಶ್ರಾವಣಿ ನೆನಪಾಗಿ ಸುಳಿಯುತ್ತಲೇ ಇರುವರು.


ಮುಂಬಯಿಗೆ ಹೋದರೆ ಹೇಗಾದರೂ ಸಮಯ ಹೊಂದಿಸಿಕೊಂಡು ನೋಡದಿರುವ ಇಂತಹ ರಚನೆಗಳನ್ನು ನೀವೂ ನೋಡಲೇಬೇಕು.


ಡಾ. ಎಚ್. ಎಸ್. ಅನುಪಮಾ