Friday 30 November 2018

ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ: ಉಸಿರು ಕಟ್ಟಿಸುವ ಹೊಗೆ








2018ರ ನವೆಂಬರ್ ಕೊನೆಯ ವಾರ ಭಾರತಕ್ಕೆ ಬಂದಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸಿ ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ನಾಶವಾಗಲಿ’ (ಸ್ಮಾಷ್ ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ) ಎಂಬ ಪೋಸ್ಟರನ್ನು ಕೈಲಿ ಹಿಡಿದು ಕೆಲವು ಭಾರತೀಯ ಪತ್ರಕರ್ತೆಯರ ಜೊತೆ ಫೋಟೋಗೆ ನಿಂತರು. ಈ ನೆಲದ ಎಲ್ಲ ವಿಕಾರ-ವಿಪರ್ಯಾಸಗಳ ಮೂಲಕಾರಣವಾಗಿರುವ, ವಿಶ್ವದ ಯಾವ ಸಮಾಜವೂ ಕೇಳರಿಯದಷ್ಟು ಅನಿರ್ಬಂಧಿತ, ಏಕಮುಖಿ ಅಧಿಕಾರ-ಸುಖಸವಲತ್ತನ್ನು ಬ್ರಾಹ್ಮಣರಿಗೆ, ಎಲ್ಲ ಪುರುಷರಿಗೆ ನೀಡಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕುರಿತು ಜಾಕ್‌ಗೆ ಗೊತ್ತಿತ್ತೋ ಇಲ್ಲವೋ, ಆದರೆ ಪೋಸ್ಟರ್ ಹಿಡಿದು ನಿಂತ ಫೋಟೋ ನೋಡಿದ್ದೇ ತಡ, ದಾರವಂತರು ಕೆರಳಿಹೋದರು. ಅಂಕಣಕಾರ್ತಿ ಸ್ಮಿತಾ ಬರೂವಾ, ಮಣಿಪಾಲ ಸಮೂಹಸಂಸ್ಥೆಗಳ ಮೋಹನದಾಸ ಪೈ, ಬಾಲಿವುಡ್ ಚಿತ್ರಕತೆಗಾರರಾದ ಅದ್ವೈತ್ ಕಲಾ, ರಿಪಬ್ಲಿಕ್ ಟಿವಿಯ ಚಿತ್ರಾ ಸುಬ್ರಹ್ಮಣಿಯನ್, ಲೇಖಕ ಹಿಂದೋಳ್ ಸೇನ್‌ಗುಪ್ತ ಮೊದಲಾದವರು ಈ ಘಟನೆಯನ್ನು ‘ಜನಾಂಗ ದ್ವೇಷ’, ‘ಜಾತಿ ನಿಂದನೆ’ ಎನ್ನುವಂತೆ ಬಿಂಬಿಸಿದರು. ಭಾರತೀಯ ಪತ್ರಿಕೋದ್ಯಮದ 49% ಉಚ್ಛ ಸ್ಥಾನಗಳನ್ನು ತುಂಬಿರುವ ‘ಅಲ್ಪಸಂಖ್ಯಾತ’ ಬ್ರಾಹ್ಮಣರು ಹಾಗೂ ಅನಿವಾಸಿ ಜಾಲಿಗ ಬ್ರಾಹ್ಮಣರು ಟ್ವಿಟರಿನಲ್ಲಿ ಧೂಳೆಬ್ಬಿಸಿ, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎನ್ನುವುದೆಲ್ಲ ಸ್ತ್ರೀವಾದಿಗಳ ಕುತರ್ಕ, ಎಲ್ಲಿದೆ ಅವೆಲ್ಲ? ಎಂದು ಬೊಬ್ಬೆ ಹಾಕಿದರು.

‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆಯೆ! ಅಹಹ, ಹೊಗೆ ದೆಹಲಿಯನ್ನು ಆವರಿಸಿರುವಂತೆ ಈ ದೇಶದ ಜೀವಜಂತುಗಳ ಉಸಿರುಕಟ್ಟಿಸಿರುವುದೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಮತ್ತೇನೂ ಬೇಡ, ತಮ್ಮದೇ ಜಾತಿಯ ನಿಷ್ಪಾಪಿ ವಿಧವೆಯರು, ಪರಿತ್ಯಕ್ತೆಯರು, ಅಡುಗೆ ಕೋಣೆಯಲ್ಲಿ ಬೇಯುವ ತಾಯಂದಿರನ್ನು ನೆನಪಿಸಿಕೊಂಡಿದ್ದರೂ ಸಾಕಿತ್ತು, ‘ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ’ ಎಲ್ಲಿದೆ ಎಂದು ಗೊತ್ತಾಗುತ್ತಿತ್ತು. ಆದರೆ ಜಾತಿ ಅಭಿಮಾನ ಅವರನ್ನು ಎಷ್ಟು ಕುರುಡಾಗಿಸಿತು ಎಂದರೆ ತಮ್ಮ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವ ಒಂದು ಕೇಡನ್ನು ಕಣ್ಣು ತೆರೆದು ನೋಡುವುದೂ ಅಸಾಧ್ಯವಾಯಿತು.

ಏನಿದು ಬ್ರಾಹ್ಮಣೀಯ ಪಿತೃಪ್ರಧಾನತೆ?

ಜೈವಿಕವಾಗಿ ಗಂಡುಹೆಣ್ಣುಗಳ ನಡುವೆ ಕೆಲವು ಭಿನ್ನತೆಗಳಿವೆ, ಹಾಗೆಯೇ ಅನನ್ಯತೆಗಳಿವೆ. ದೈಹಿಕ ಭಿನ್ನತೆಯನ್ನೇ ಮುಂದಿಟ್ಟುಕೊಂಡು ಸಮಾನತೆ, ಸ್ವಾತಂತ್ರ್ಯ, ಪೌರ ಹಕ್ಕುಗಳಿಂದ ಹೆಣ್ಣನ್ನು ವಂಚಿಸುವ ವ್ಯವಸ್ಥೆ ಪಿತೃಪ್ರಾಧಾನ್ಯತೆ. ಹೊಸ ಜೀವವನ್ನು ಹೆರುವ ಶಕ್ತಿಯಿರುವ, ಜೀವ ಪೊರೆವ ಆಹಾರವಾಗಿ ಮೊಲೆಹಾಲು ಸ್ರವಿಸಬಲ್ಲ ಹೆಣ್ಣೆಂಬ ಅದ್ಭುತವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಯತ್ನಿಸದ ಗಂಡು ಸಮುದಾಯವೇ ಇಲ್ಲ. ಹೆಣ್ಣನ್ನು ಅಂಕೆಯಲ್ಲಿಟ್ಟುಕೊಳ್ಳುವ ಪ್ರಯತ್ನಗಳಿಗೆ ಮನ್ನಣೆ ಪಡೆಯುವ ಸಲುವಾಗಿ, ಅದಕ್ಕೆ ಧಾರ್ಮಿಕ ಸಮ್ಮತಿ ಇದೆ ಎಂಬಂತೆ ಬಿಂಬಿಸುವ ಹುನ್ನಾರವಾಗಿ ಮೊದಲು ಅವಳ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಅದಕ್ಕಾಗಿ ಪುರಾಣ, ಕಟ್ಟುಕತೆ, ಐತಿಹ್ಯಗಳ ಸೃಷ್ಟಿಸಲಾಯಿತು. ನಂತರ ಸಾಮಾಜಿಕ, ರಾಜಕೀಯ ಅವಕಾಶಗಳನ್ನು ಕಡಿತಗೊಳಿಸಲಾಯ್ತು. ಕಾಲಕಾಲಕ್ಕೆ ಹೊಸಪ್ರಶ್ನೆಗಳು ಏಳತೊಡಗಿದಾಗ ಅವುಗಳನ್ನು ಹತ್ತಿಕ್ಕಲು ಹೊಸಹೊಸ ಆಚರಣೆಗಳ ಜಾರಿಗೊಳಿಸಲಾಯ್ತು.

ಇದುವೆ ಪಿತೃಪ್ರಾಧಾನ್ಯ ಅಥವಾ ಗಂಡು ಮೇಲರಿಮೆ. ಪಿತೃಪ್ರಾಧಾನ್ಯ ವಿಶ್ವದ ಬಹುತೇಕ ಸಮಾಜಗಳಲ್ಲಿ ಚಾಲ್ತಿಯಲ್ಲಿದೆ. ಇದು ಜಾಕ್ ಪ್ರತಿನಿಧಿಸುವ ಸಮಾಜಕ್ಕೂ, ಅವರು ಪ್ರತಿನಿಧಿಸುವ ಸಂಸ್ಥೆಗೂ ಅನ್ವಯಿಸುತ್ತದೆ. ಮುಂದುವರಿದ ಪಾಶ್ಚಾತ್ಯ ಸಮಾಜಗಳಲ್ಲೂ ನಾನಾ ಲಿಂಗಾಧಾರಿತ ತಾರತಮ್ಯಗಳು ಇವತ್ತಿಗೂ ಚಾಲ್ತಿಯಲ್ಲಿವೆ. ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಲಿಂಗಾಧಾರಿತ ಉದ್ಯೋಗ ತಾರತಮ್ಯ, ವೇತನ ತಾರತಮ್ಯ ಮುಂದುವರೆದಿದೆ. ಹಾಗಾಗಿ ಜಾಕ್ ಆ ಪೋಸ್ಟರ್ ಹಿಡಿಯುವ ಮೂಲಕ ತಮ್ಮ ಸಮಾಜ-ಕಂಪನಿಯ ಪಿತೃಪ್ರಾಧಾನ್ಯ ಕೊನೆಗೊಳಿಸಲು ಮುಂದಾಗುವ ಇಚ್ಛೆ ಹೊಂದಿದ್ದಲ್ಲಿ ಅದು ಸ್ವಾಗತಾರ್ಹ ಎನ್ನಬಹುದು.

ಆದರೆ ಅವರ ಪೋಸ್ಟರು ಕೆಲವು ಭಾರತೀಯರನ್ನು ಕೆರಳಿಸಲು ಕಾರಣ ಅದರಲ್ಲಿದ್ದ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎಂಬ ಪದ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ, ಒಂದು ಶೋಷಕ ಮನಸ್ಥಿತಿಯ ಪ್ರತೀಕವಾದ ಪದದ ಮೊದಲೆರೆಡು ಅಕ್ಷರಗಳನ್ನು ತಮ್ಮ ಜಾತಿಯ ಹೆಸರಲ್ಲಿಟ್ಟುಕೊಂಡವರು ತಮ್ಮನ್ನೇ ನಿಂದಿಸಿದಂತೆ ಕೆರಳಿದರು. ಆ ಬ್ರಹ್ಮಜ್ಞಾನಿಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನುವುದು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರನ್ನು ಬೈಯಲು ರೂಪಿಸಿದ ಪದವಲ್ಲ, ಬದಲಾಗಿ ಅದೊಂದು ಮನಸ್ಥಿತಿ; ಈ ದೇಶದ ಹೆಣ್ಣುಗಳನ್ನು, ಅಧಿಕಾರಹೀನರನ್ನು ತುಳಿಯಲು ಮಾಡಿಕೊಂಡ ಒಂದು ದುಷ್ಟ ಚೌಕಟ್ಟು ಎಂದು ಅರ್ಥವೇ ಆಗಲಿಲ್ಲ. ದಾರವಂತರು ತಿಳಿಯಲಿ: ಜಾತಿ-ಲಿಂಗದ ಕಾರಣವಾಗಿ ಮನುಷ್ಯರನ್ನು ಕೀಳಾಗಿ ನಡೆಸಿಕೊಳ್ಳುವುದು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ನಿರಾಕರಿಸುವುದು, ತಾನು ಶ್ರೇಷ್ಠ ಎಂಬ ಜಾತಿ/ಲಿಂಗ ಮೇಲರಿಮೆಯನ್ನು ಉಳಿದವರ ಮೇಲೆ ಹೇರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯ. ಅದು ಈ ನೆಲದ, ಸಂವಿಧಾನದ ಆಶಯಗಳಿಗೆ ವಿರುದ್ಧ. ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆಯ ನಾಶ ಎಂದರೆ ಬ್ರಾಹ್ಮಣರ ನಾಶವಲ್ಲ; ಜಾತಿ ಮೇಲರಿಮೆಯ ನಾಶ.



ಭಾರತದ ಪಿತೃಪ್ರಾಧಾನ್ಯತೆಯನ್ನು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನ್ನಲು ಕಾರಣಗಳಿವೆ. ಪಿತೃಪ್ರಾಧಾನ್ಯವನ್ನು ಭಾರತದಲ್ಲಿ ಮತ್ತಷ್ಟು ಅಸಹನೀಯಗೊಳಿಸಿರುವುದು ಮತ್ತು ದುಷ್ಟಗೊಳಿಸಿರುವುದು ಇಲ್ಲಿನ ಜಾತಿವ್ಯವಸ್ಥೆ. ಅದು ಎರಡಲಗಿನ ಕತ್ತಿಯಾಗಿ ಈ ದೇಶದ ಹೆಣ್ಣುಗಳ ಘನತೆಯ ಬದುಕಿಗೆ ಎರವಾಗಿದೆ. ಭಾರತದ ಜಾತಿಪದ್ಧತಿಯು ನಡತೆ, ವ್ಯಕ್ತಿತ್ವ, ಸಾಧನೆ, ಉದಾತ್ತತೆ ಮುಂತಾದ ಗುಣಗಳಿಂದ ಅಲ್ಲ; ಹುಟ್ಟಿನಿಂದ ಬ್ರಾಹ್ಮಣರನ್ನು ಶ್ರೇಷ್ಠರೆಂದು ವರ್ಗೀಕರಿಸಿದೆ. ಅವರಿಗೆ ಎಲ್ಲ ವಿಶೇಷ ಸವಲತ್ತು, ಮೀಸಲಾತಿಗಳನ್ನು ಪ್ರಶ್ನಾತೀತವಾಗಿ ಕೊಟ್ಟಿದೆ. ಹುಟ್ಟಿನಿಂದಲೇ ಯಾವುದಾದರೂ ಮೇಲು ಅಥವಾ ಕೀಳೆಂದು ನಿರ್ಧಾರ ಮಾಡುವುದು ಪ್ರಕೃತಿ ವಿರೋಧಿ ತತ್ವ. ಆದರೆ ಜಾತಿಹೆಮ್ಮೆ, ಜಾತಿಪ್ರಜ್ಞೆ, ಜಾತಿ ಶ್ರೇಷ್ಠತೆಯ ವ್ಯಸನಗಳು ಬ್ರಾಹ್ಮಣರ ನಂತರದವೆಂದು ಗುರುತಿಸಲ್ಪಟ್ಟ ಸಾವಿರಾರು ಜಾತಿಗಳಿಗೂ ಹಾಗೇ ಸೋಸಿಕೊಂಡು ಇಳಿಯಿತು. ಅಂಬೇಡ್ಕರ್ ಮನೋಜ್ಞವಾಗಿ ವಿಶ್ಲೇಷಿಸಿರುವಂತೆ ಭಾರತದ ಪ್ರತಿಜಾತಿಯೂ ತಾನು ಮತ್ತೊಂದು ಜಾತಿಗಿಂದ ಶ್ರೇಷ್ಠ ಎಂಬ ಹಿರಿಮೆಯಲ್ಲಿ ಕೆಳಗಿನ ಜಾತಿಯನ್ನು ತುಳಿಯುವುದರಲ್ಲಿ ಮೇಲಿನ ಜಾತಿಯ ತುಳಿತವನ್ನು ಮರೆಯುತ್ತದೆ. ಹೀಗೆ ಬ್ರಾಹ್ಮಣ್ಯವು - ಎಂದರೆ ಅಸಮಾನತೆಯ ಉತ್ಸಾಹ, ಜಾತಿ ಮೇಲರಿಮೆ, ಜನ್ಮಜಾತ ಜಾತಿಅಸ್ಮಿತೆಗಳು - ಪ್ರತಿಜಾತಿಗೂ ಸೋಸಿಕೊಂಡು ಇಳಿದಿವೆ. ಬ್ರಾಹ್ಮಣ್ಯ ಮತ್ತು ಪಿತೃಪ್ರಾಧಾನ್ಯ ಸೇರಿ ಪ್ರತಿ ಜಾತಿಯ ಹೆಣ್ಣುಗಳನ್ನೂ ಬಾಧಿಸುತ್ತಿರುವುದು ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಎನಿಸಿಕೊಂಡಿದೆ. ಭಾರತದ ಪ್ರತಿಜಾತಿಯಲ್ಲೂ, ಪ್ರತಿಧರ್ಮದಲ್ಲೂ ಪಿತೃಪ್ರಾಧಾನ್ಯವಿದೆ; ಪಿತೃಪ್ರಾಧಾನ್ಯತೆ ಅಷ್ಟೇ ಅಲ್ಲ, ಬ್ರಾಹ್ಮಣೀಯ ಪಿತೃಪ್ರಾಧಾನ್ಯವಿದೆ.

ಈಗ ಸಂಭವಿಸುತ್ತಿರುವ ಎಷ್ಟೊಂದು ಆಗುಹೋಗುಗಳಿಗೆ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ ಕಾರಣವಾಗಿದೆ ಗಮನಿಸಿ:




  • ದೇವಳದಲ್ಲಿ, ಚರ್ಚಿನಲ್ಲಿ; ಶಾಲೆಯಲ್ಲಿ, ಮನೆಯಲ್ಲಿ; ರಸ್ತೆಯಲ್ಲಿ, ಬಸ್ಸಿನಲ್ಲಿ; ಲಿಫ್ಟಿನಲ್ಲಿ, ಕಚೇರಿಯಲ್ಲಿ; ಆಚೆಈಚೆ ಹಿಂದೆಮುಂದೆ ಎಲ್ಲೆಲ್ಲು, ಯಾವಾಗ ಬೇಕಾದರೂ ಅತ್ಯಾಚಾರ ನಡೆಯುತ್ತದೆ. ಬುದ್ಧಿ ಕಲಿಸಲೆಂದೇ ಹೆಣ್ಣುಗಳ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ದುಷ್ಕೃತ್ಯ ಎಸಗಿದವರಲ್ಲ, ನಿಷ್ಪಾಪಿ ಹೆಣ್ಣಿನದೇ ‘ಮಾನ’ ಹೋಯಿತೆನ್ನಲಾಗುತ್ತದೆ. ಧರ್ಮದ ಹೆಸರಿನಲ್ಲಿಯೇ ಭಾರತದ ಹೆಣ್ಣುಗಳ ದೇಹ ರಣಾಂಗಣವಾಗಿದೆ. ಇದಕ್ಕೆಲ್ಲ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಶಬರಿಮಲೆಗೆ ಹೋಗಬಾರದೆಂದು ಯಾವ ಶಾಸ್ತ್ರ ವಿಧಿಸದಿದ್ದರೂ, ಹೋಗಬಹುದು ಎಂದು ಈ ದೇಶದ ಅತ್ಯುಚ್ಛ ನ್ಯಾಯಾಲಯವೇ ಹೇಳಿದ್ದರೂ, ದೇಗುಲದ ಬಾಗಿಲ ಬಳಿ ಹೆಣ್ಣುಗಳ ತಡೆಯಲು ತಲವಾರು ಹಿಡಿದವರು ಕಾಯುತ್ತಿರುವುದಕ್ಕೆ; ದೇವಾಲಯದೊಳಗೆ ಹೋಗುವುದು ಬೇಡ, ‘ನಾವು ಕಾಯುತ್ತೇವೆ’ ಎಂದು ಮಹಿಳೆಯರೇ ಹೇಳುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಶಿಕ್ಷಿತೆ, ಉದ್ಯೋಗಸ್ಥೆ, ಅಧಿಕಾರಸ್ಥೆಯೇ ಆದರೂ ಹೆಣ್ಣು ಬಾಯ್ಬಿಡದಂತೆ ಅವಳ ತುಟಿ ಹೊಲಿಯುವ ಕೆಲಸ ನಿರಂತರ ಚಾಲ್ತಿಯಲ್ಲಿದ್ದರೆ, ಅದನ್ನು ಮೀರಲು ‘ಮೀಟೂ’ ಸಂಭವಿಸಿದ್ದರೆ, ಮಹಿಳಾ ವಿರೋಧಿ ನಾಯಕನಟ ಕಂ ರಾಜಕಾರಣಿಯೊಬ್ಬ ಇತ್ತೀಚೆಗೆ ತೀರಿಕೊಂಡಾಗ ಅವರ ‘ಮತ್ತೊಂದು ಮುಖ’ದ ಬಗ್ಗೆ ಒಂದು ಮಾತನ್ನೂ ತೊಂದರೆಗೊಳಗಾದವರು ನೆನಪಿಸಿಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ಸೇಲಮ್ಮಿನಲ್ಲಿ ಪಕ್ಕದ ಮನೆಯವನ ಕಾಮತೃಷೆ ತಣಿಸಲು ತನ್ನ ಎಳೆಯ ಮಗಳನ್ನು ದಲಿತ ತಾಯಿ ಕಳಿಸಲಿಲ್ಲವೆಂದು ಕ್ರುದ್ಧನಾದ ಕೊಂಚ ‘ಮೇಲಿನ’ ಜಾತಿಯ ಗಂಡಸು, ತಾಯಿಯೆದುರೇ ಕತ್ತಿ ಹಿರಿದು ಬಾಲೆಯ ತಲೆ ಕಡಿದು ಬಿಸಾಡಿದ. ಪ್ರತಿ ಜಾತಿಯ ಹೆಣ್ಣುಗಳನ್ನು ಅನುಭವಿಸಲು ಅವರಿಗಿಂತ ಮೇಲಿನ ಜಾತಿಯ ಗಂಡುಗಳಿಗೆ ಮನುವು ಕೊಟ್ಟ ಎನ್‌ಒಸಿಯೇ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ತೆಲಂಗಾಣದ ಮಿರ‍್ಯಾಲಗುಡದಲ್ಲಿ ಅಮೃತವರ್ಷಿಣಿ ಎಂಬ ವೈಶ್ಯ ಬಾಲೆ ಪ್ರಣಯ್ ಎಂಬ ದಲಿತ ಹುಡುಗನನ್ನು ಮದುವೆಯಾದಳು. ಕೋಪಗೊಂಡ ಹುಡುಗಿಯ ಅಪ್ಪ ಪ್ರಣಯ್‌ನನ್ನು ಹಾಡುಹಗಲೇ ಕೊಂದ. ಮಂಡ್ಯದ ಬಳಿ ಅಂತರ್ಜಾತಿ ವಿವಾಹವಾದಳೆಂದು ಅಪ್ಪ ಮಗಳನ್ನು ಕೊಂದ. ತಮಿಳುನಾಡಿನ ಒಬ್ಬ ಅಪ್ಪ ಅಂತರ್ಜಾತಿ ವಿವಾಹವಾದ ಮಗಳು-ಅಳಿಯನನ್ನು ಶಿವನಸಮುದ್ರದ ಬಳಿ ಕರೆತಂದು, ಕೊಂದು ಕತ್ತರಿಸಿ ಚೀಲದಲ್ಲಿ ತುಂಬಿ ಬಿಸಾಡಿದ. ಈ ಎಲ್ಲ ಅಪ್ಪಂದಿರು ‘ಮಗಳು ಮುಖ್ಯವಲ್ಲ, ಜಾತಿಯೇ ನಮಗೆ ಹೆಚ್ಚು’ ಎಂದು ಹೇಳಿರುವುದಕ್ಕೆ, ಇವತ್ತಿಗೂ ಭಾರತದ ೯೫% ಮದುವೆಗಳು ಜಾತಿ ಚೌಕಟ್ಟು ಮೀರಲಾಗದೆ ನಡೆಯುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ವರದಕ್ಷಿಣೆ ನಿಷೇಧ ಕಾಯ್ದೆ ಬಂತು. ತಿದ್ದುಪಡಿ ಆಗಿ ಬಿಗಿಯೂ ಆಯಿತು. ಆದರೂ ವರದಕ್ಷಿಣೆ ಕೊಡಲಾಗದ ಬಡವರ ಮನೆಯ ಹೆಣ್ಣುಗಳು ಜೀವಂತ ಸುಡಲ್ಪಡುತ್ತಿದ್ದರೆ, ಮದುವೆಯ ಮಾರ್ಕೆಟ್ಟಿನಲ್ಲಿ ಆಯ್ದುಕೊಳ್ಳಬಯಸುವ ಸರಕಾಗಲು ಹೆಣ್ಣುಗಳು ಕೊನೆಮೊದಲಿಲ್ಲದ ಕಸರತ್ತು ನಡೆಸುತ್ತಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಆಗಸ್ಟ್ 15ರಂದು ಕೊಪ್ಪಳದ ಬಳಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮಗು ಹೆತ್ತಳು. ಈಗಲೂ ರಾಜ್ಯದ 21% ಮದುವೆಗಳು ಬಾಲ್ಯವಿವಾಹವಾಗಿದ್ದರೆ, ಹೆಣ್ಣುಮಗು ಲೋಕಕ್ಕೆ ಕಣ್ಬಿಡುವ ಮೊದಲೇ ಗಂಡನ ಅಧೀನಕ್ಕೊಳಪಡುತ್ತಿದ್ದರೆ, ಸಂಗಾತಿಯ ಆಯ್ಕೆಯ ಅವಕಾಶಗಳೇ ಹೆಣ್ಣಿಗಿಲ್ಲದಿದ್ದರೆ ಅದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಸಂವಿಧಾನಬದ್ಧವಾಗಿ ಜನಪ್ರತಿನಿಧಿಯಾದ ಕೆಲವು ಜನನಾಯಕರು ಸಂವಿಧಾನ ಓದದೇ ಅದನ್ನು ಸುಡುವ, ಹೊಸ ಸಂವಿಧಾನ ಬರೆವ ಮಾತನಾಡುತ್ತಿದ್ದಾರೆ. ಈ ದುರಹಂಕಾರಕ್ಕೆ ಕಾರಣ ಅವರ ಕನಸು, ಮನಸು, ಎದೆಗಳನ್ನೆಲ್ಲ ತುಂಬಿಕೊಂಡ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. ಅಂಬೇಡ್ಕರರು ಆಶಿಸಿದ ಸಂವಿಧಾನ ಜಾರಿಯಾಗದಿರಲು ಕಾರಣ ಈ ನೆಲವನ್ನು ಅದೃಶ್ಯವಾಗಿ ಆಳುತ್ತಿರುವ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಜನರಿಗೆ ಕನಿಷ್ಠ ಅಗತ್ಯವಾದ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗಗಳನ್ನು ಒದಗಿಸುವ ತಮ್ಮ ಜವಾಬ್ದಾರಿಯಿಂದ ಆಳುವವರು ದೂರ ಸರಿಯುತ್ತ, ಧರ್ಮದ ಅಮಲನ್ನು ಪ್ರಜೆಗಳ ತಲೆಗೇರಿಸಿ ತಲವಾರು ಕೊಡುತ್ತಿರುವುದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ.
  • ಎರಡು ವಿಭಿನ್ನ ಜಾತಿಗಳಿಗೆ ಸೇರಿದ ಹಿಂದೂಗಳ ನಡುವೆ, ಭಿನ್ನಧರ್ಮೀಯರ ನಡುವೆ ಅನೂಹ್ಯ ಅಂತರ ತಂತಾನೇ ಸೃಷ್ಟಿಯಾಗಿದ್ದಕ್ಕೆ ಕಾರಣ ಬ್ರಾಹ್ಮಣೀಯ ಪಿತೃಪ್ರಾಧಾನ್ಯತೆ. 
  • ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್ ತನ್ನ ಉದ್ಯೋಗಿ ಜಾಕ್ ನಿಲುವಿಗಿಂತ ತಾನು ಭಿನ್ನ ಎಂದು ಅಂತರ ಕಾಯ್ದುಕೊಳ್ಳಬೇಕಾದ ಭಯ ಸೃಷ್ಟಿಸಿದ್ದು ಬ್ರಾಹ್ಮಣೀಯ ಪಿತೃಪ್ರಧಾನತೆ.



ಅಂಬೇಡ್ಕರರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಜಿಐಪಿ ರೈಲ್ವೇ ವರ್ಕ್‌ಮೆನ್ಸ್ ಕಾನ್ಫರೆನ್ಸ್‌ನಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಅಧ್ಯಕ್ಷರಾಗಿ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಮಾತನಾಡುತ್ತ ೧೯೩೮ರಲ್ಲಿ ಮನೋಜ್ಞವಾಗಿ ಹೇಳಿದ್ದು ಗಮನಾರ್ಹವಾಗಿದೆ:

‘ಬ್ರಾಹ್ಮಣಿಕೆಯು ಪರಿಗಣಿಸಲೇಬೇಕಾದ ಶತ್ರು’ ಎಂಬ ನನ್ನ ಹೇಳಿಕೆ ಅಪಾರ್ಥಕ್ಕೊಳಗಾಗುವುದು ನನಗಿಷ್ಟವಿಲ್ಲ. ಬ್ರಾಹ್ಮಣಿಕೆಯೆಂದರೆ ಒಂದು ಸಮುದಾಯವಾಗಿ ಬ್ರಾಹ್ಮಣರ ಶಕ್ತಿ, ಅಧಿಕಾರ, ಅವಕಾಶ, ಆಸಕ್ತಿಯೆಂದಷ್ಟೇ ನಾನು ತಿಳಿಯುವುದಿಲ್ಲ. ಬ್ರಾಹ್ಮಣಿಕೆಯೆಂದರೆ ಸ್ವಾತಂತ್ರ್ಯ, ಸೋದರತೆ, ಸಮಾನತೆಯನ್ನು ನಾಶ ಮಾಡುವ ಶಕ್ತಿ. ಈ ಅರ್ಥದಲ್ಲಿ ಎಲ್ಲ ಜಾತಿ-ವರ್ಗಗಳಲ್ಲೂ ಬ್ರಾಹ್ಮಣಿಕೆಯಿದೆ ಮತ್ತು ಇದನ್ನು ಹುಟ್ಟುಹಾಕಿದವರು ಬ್ರಾಹ್ಮಣರಾದರೂ ಅವರಿಗಷ್ಟೇ ಇದು ಸೀಮಿತವಾಗಿಲ್ಲ. ಎಲ್ಲ ಕಡೆ ಕಾಣುವ, ಎಲ್ಲರ ಯೋಚನೆ-ಕ್ರಿಯೆಯನ್ನು ಹಿಡಿತದಲ್ಲಿಟ್ಟುಕೊಂಡಿರುವುದು ಇದೇ ಬ್ರಾಹ್ಮಣಿಕೆಯೆಂಬುದು ಅವಿವಾದಿತ ಸತ್ಯ. ಇದು ಕೆಲವರಿಗಷ್ಟೇ ಹೆಚ್ಚು ಅವಕಾಶ ಮಾಡಿಕೊಡುತ್ತದೆಂಬುದೂ ವಿವಾದಾತೀತ ಸಂಗತಿ. ಕೆಲ ವರ್ಗಗಳಿಗೆ ಇದು ಅವಕಾಶಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತದೆ. ಬ್ರಾಹ್ಮಣಿಕೆಯು ಅಂತರ್ಜಾತಿ ಭೋಜನ, ಅಂತರ್ಜಾತಿ ವಿವಾಹಗಳಂಥ ಸಾಮಾಜಿಕ ಹಕ್ಕುಗಳನ್ನು ತಡೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಪೌರ ಹಕ್ಕುಗಳಿಗೂ ವಿಸ್ತರಿಸುತ್ತದೆ. .. ಕೋಟಿಗಟ್ಟಲೆ ಜನರಿಗೆ ಪೌರ ಹಕ್ಕುಗಳನ್ನು ನಿರಾಕರಿಸಲಾಗಿದೆ. ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ, ಈಗಲೂ ಉರಿಯುವ ಕೊಳ್ಳಿಯಂತೆ ಜೀವಂತವಾಗಿರುವ ಬ್ರಾಹ್ಮಣಿಕೆಯೇ ಇಂದಿನ ಸಮಸ್ಯೆಗಳಿಗೆ ಕಾರಣವೆಂಬುದನ್ನು ಯಾರಾದರೂ ಸಂಶಯಿಸಲು ಸಾಧ್ಯವೆ? 

ಬ್ರಾಹ್ಮಣಿಕೆ ಎಂದರೆ ಅಸಮಾನತೆಯ ಉತ್ಸಾಹ.. ಬ್ರಾಹ್ಮಣ್ಯವು ಜೀವಂತ ಶಕ್ತಿಯಾಗಿರುವ ತನಕ, ಅದು ಕೊಡುವ ಸವಲತ್ತಿಗಾಗಿ ಕೆಲವರು ಬ್ರಾಹ್ಮಣ್ಯಕ್ಕೆ ಅಂಟಿಕೊಂಡಿರುವ ತನಕ ಅದರಿಂದ ತೊಂದರೆಗೊಳಗಾದವರು ಸಂಘಟಿತರಾಗಲೇಬೇಕಾಗಿದೆ. ಹಾಗೆ ಅದರ ವಿರುದ್ಧ ಸಂಘಟಿತರಾಗುವುದರಲ್ಲಿ ತಪ್ಪೇನಿದೆ?’


ಎಂಭತ್ತು ವರ್ಷಗಳ ಕೆಳಗೆ ಅಂಬೇಡ್ಕರ್ ಹೇಳಿದ್ದು ಇವತ್ತಿಗೂ ಎಷ್ಟು ಸರಿಯಾಗಿದೆಯಲ್ಲವೆ? ಬ್ರಾಹ್ಮಣರಲ್ಲಿ ಮೊದಲುಗೊಂಡು ಎಲ್ಲ ಜಾತಿ ಜನರಲ್ಲಿರುವ ಬ್ರಾಹ್ಮಣಿಕೆ, ಬ್ರಾಹ್ಮಣೀಯ ಪಿತೃಪ್ರಾಧಾನ್ಯ ಭಾರತೀಯ ಸಮಾಜಕ್ಕೊಂದು ಕಪ್ಪುಚುಕ್ಕೆ. ನಾಶವಾಗಲೇಬೇಕಾದ ಕೇಡು. ಆ ವಿಷಮ ಮನಸ್ಥಿತಿಯಿಂದ ಬಿಡಿಸಿಕೊಳ್ಳಲು ಪ್ರತಿ ಭಾರತೀಯ ಪುರುಷನೂ, ಮಹಿಳೆಯೂ ಹೋರಾಡುವುದು ಅವಶ್ಯವಾಗಿದೆ. ಆಗಷ್ಟೆ ಈ ನೆಲದ ಜೀವಗಳು, ಅದರಲ್ಲೂ ಮಹಿಳೆಯರು ಸ್ವಾಯತ್ತವಾಗಿ, ಘನತೆಯ ಬದುಕನ್ನು ಬದುಕಲು ಸಾಧ್ಯವಾಗುತ್ತದೆ.

(Image courtesy: Internet)


2 comments:

  1. Please see this video https://youtu.be/immsW2Wo5Lw

    ReplyDelete
  2. ಕಟು ವಾಸ್ತವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಲೇಖನ. ಶಿಕ್ಷಣದ ಮೂಲಕ ಅರಿವು,ಜಾಗೃತಿ ಮೂಡಿಸುವುದೊಂದೇ ಇದರ ನಿವಾರಣೆಯ ಹಾದಿ.

    ಈ ಬೆಳಗು ಸಾರ್ಥಕವಾಯ್ತು. ಅಭಿನಂದನೆ ಹಾಗೂ ಧನ್ಯವಾದ. ಸದಾ ನಿಮ್ಮೊಂದಿಗೆ.

    ReplyDelete