ಕಡಲಾಳದ ನಡಿಗೆ
ಸುರಕ್ಷಿತ ದಂಡೆಗಳ ನಡುವೆ ಮಾತ್ರ ಚಲಿಸಿ ಗೊತ್ತಿರುವ ನಾವಿಕಳಾದದ್ದಕ್ಕೋ, ಆಳದಲ್ಲಿರುವ ಸಾವಿನ ಭಯವೋ, ಅಂತೂ ನನಗೆ ಸಾಹಸ ಅಷ್ಟೇನೂ ಪ್ರಿಯವಲ್ಲ. ಬೆಟ್ಟ, ಆಗಸ, ನದಿ, ಕಡಲುಗಳ ನೋಡುತ್ತ ಆಸ್ವಾದಿಸಿದರೂ ಅದರೊಳಗೇ ಹೊಕ್ಕು ಬಂದದ್ದು ಕಡಿಮೆ. ೨೦೧೮ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಿಗೆ ಪ್ರವಾಸ ಹೋದಾಗ ಪ್ರಕೃತಿಗೆ ಭೌತಿಕವಾಗಿ ಹತ್ತಿರವಾಗಿಸುವ ಹಲವು ಚಟುವಟಿಕೆಗಳನ್ನು ಮಾಡಿದೆವು. ಅದರಲ್ಲಿ ಆಸ್ಟ್ರೇಲಿಯಾದ ಕರಾವಳಿ ಪಟ್ಟಣ ಕೇರ್ನ್ಸ್‌ನಿಂದ ಹವಳ ದ್ವೀಪಕ್ಕೆ ಹೋಗಿಬಂದದ್ದು ಅವಿಸ್ಮರಣೀಯ ಅನುಭವಗಳಲ್ಲೊಂದು.
ಆಸ್ಟ್ರೇಲಿಯಾದ ಈಶಾನ್ಯ ತೀರದಗುಂಟ ೨,೩೦೦ ಕಿಲೋಮೀಟರ್ ಹಬ್ಬಿರುವ ಗ್ರೇಟ್ ಬ್ಯಾರಿಯರ್ ರೀಫ್ ಕೋಟ್ಯಂತರ ಹವಳ ಜೀವಿಗಳು ಅನಾದಿಯಿಂದ ರೂಪಿಸಿರುವ ಹವಳದಂಡೆ. ನಿಸರ್ಗದ ಪರಮ ಅದ್ಬುತ. ಯಾವುದೇ ಜೀವಿ ರೂಪಿಸಿದ ಅತಿ ದೊಡ್ಡ ರಚನೆ. ೨೯೦೦ ಹವಳ ದಿಬ್ಬಗಳು, ೯೦೦ ದ್ವೀಪಗಳ ರೀಫನ್ನು ಬಾಹ್ಯಾಕಾಶದಿಂದಲೂ ಕಾಣಬಹುದು. ೧೭೭೦ರಲ್ಲಿ ನಕಾಶೆ ತಯಾರಿಸಲು ಆಸ್ಟ್ರೇಲಿಯಾಗೆ ಬಂದ ಬ್ರಿಟಿಷ್ ನೌಕಾಧಿಕಾರಿ ಜೇಮ್ಸ್ ಕುಕ್‌ನ ಹಡಗು ತಳ ಒಡೆದು ನಿಂತುಕೊಂಡಿತು. ರಿಪೇರಿಗೆ ಏಳು ವಾರ ಹಿಡಿಯಿತು. ಸುತ್ತಮುತ್ತಲೂ ಕಡಲಾಳ ಕಡಿಮೆಯಿದ್ದು ಹವಳ ದಂಡೆಗಳೇ ಹಡಗು ಒಡೆದವೆನ್ನುವುದನ್ನು ಕುಕ್ ಪತ್ತೆಹಚ್ಚಿದ. ೧೮೦೨ರಲ್ಲಿ ಮ್ಯಾಥ್ಯೂ ಫ್ಲಿಂಡರ‍್ಸ್ ಹವಳ ದ್ವೀಪಗಳ ವಿಸ್ತಾರ ಗುರುತಿಸಿ ‘ದ ಗ್ರೇಟ್ ಬ್ಯಾರಿಯರ್ ರೀಫ್’ ಎಂದು ಕರೆದ. ಅಲ್ಲಿಂದಿಲ್ಲಿಯವರೆಗೂ ಹವಳದ ದಂಡೆಗಳು ಜನಪ್ರಿಯವಾಗುತ್ತ ವಿಶ್ವಪರಂಪರೆಯ ಪಟ್ಟಿಗೆ ಸೇರಿವೆ. ನೈಸರ್ಗಿಕ ಅದ್ಭುತಗಳಲ್ಲೊಂದು ಎಂದು ಬಣ್ಣಿಸಲ್ಪಟ್ಟಿವೆ. ಹವಾಮಾನ ಬದಲಾವಣೆ, ಸಾಗರ ಸೇರುತ್ತಿರುವ ಮಾಲಿನ್ಯಕಾರಕಗಳು, ಆಳಸಮುದ್ರ ಮೀನುಗಾರಿಕೆ, ಪ್ರವಾಸೋದ್ಯಮಗಳಿಂದ ಹವಳ ದ್ವೀಪಗಳು ಘಾಸಿಗೊಂಡು ಬಿಳಿಚಾಗುತ್ತಿವೆ. ಎಂದೇ ರೀಫ್‌ನ ಕೆಲ ಭಾಗಗಳಷ್ಟೇ ಪ್ರವಾಸಿಗಳಿಗೆ ತೆರೆದಿವೆ.
ಕೇರ್ನ್ಸ್‌ನಿಂದ ರೀಫ್ ಬಳಿಗೆ ಕರೆದೊಯ್ಯಲು ಮುಳುಗು ತಜ್ಞರಿರುವ ಪ್ರವಾಸಿ ಹಡಗುಗಳಿವೆ. ಸುಮಾರು ಒಂದೂವರೆ ತಾಸು ಪಯಣಿಸಿ ನಾವು ಬಿಗ್‌ಕ್ಯಾಟ್ ಗ್ರೀನ್ ಐಲ್ಯಾಂಡ್ ತಲುಪಿದೆವು. ಪ್ರಯಾಣದುದ್ದಕ್ಕೂ ಹಡಗಿನ ಸಿಬ್ಬಂದಿ ಇದುವರೆಗು ಆಗಿರದ ಅದ್ಭುತ ಅನುಭವಕ್ಕೆ ತೆರೆದುಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಆಳಸಮುದ್ರಕ್ಕೆ ಕರೆದೊಯ್ದು ಸುರಕ್ಷಿತವಾಗಿ ತಂದುಬಿಡುವೆವೆಂದು ಪ್ರಮಾಣ ಮಾಡುತ್ತಿದ್ದರು.
ಹಿಂದಿನ ದಿನವಿಡೀ ಕೇರ್ನ್ಸ್ ಬಳಿಯ ದಟ್ಟಕಾಡಿನಲ್ಲಿ, ಕಡಲ ದಂಡೆಯ ಪೆಲಿಕನ್ನುಗಳ ಮೆರವಣಿಗೆಯಲ್ಲಿ, ಅಬ್ಬರದ ಸಂಗೀತಸಂಜೆಯಲ್ಲಿ ಕಳೆದುಹೋಗಿದ್ದ ನಾವು ಮರುದಿನ ಬೆಳಿಗ್ಗೆ ರೀಫ್ ಕಡೆಗೆ ಹೊರಟೆವು. ಅರ್ಧ ತಾಸು ಕಳೆಯುವುದರಲ್ಲಿ ಮೋಡ ಮುಸುಕಿ ಧಾರಾಕಾರ ಮಳೆ ಶುರುವಾಯಿತು. ಚಟುವಟಿಕೆಗಳು ಅಸಾಧ್ಯವಾಗಬಹುದೇನೋ ಎಂದು ನಾವಂದುಕೊಂಡರೆ, ‘ನೋನೋನೋ, ಏನಾದರಾಗಲಿ ನಿಮ್ಮನ್ನು ಕಡಲೊಳಗೆ ಕರೆದೊಯ್ಯುವುದೇ’ ಎಂಬ ಉತ್ಸಾಹದ ಸಿಬ್ಬಂದಿ ಚಟುವಟಿಕೆಗಳ ಪಟ್ಟಿಯನ್ನೇ ಕೊಟ್ಟರು. ಮುಳುಗುತಜ್ಞ ವಾನ್ಸ್, ನಾವೆಲ್ಲೇ ಕಳೆದುಹೋದರೂ ಎಳೆತರುವೆನೆನ್ನುತ್ತ ಭಯ ಹೋಗಲಾಡಿಸುತ್ತಿದ್ದ. ಬಲುಬೇಗ ಯುವಜನರ ಅಚ್ಚುಮೆಚ್ಚಾದ.
ನನಗೆ ಕಡಲೊಳಗೆ ಇಳಿಯಲು ಭಯ, ಹಿಂಜರಿಕೆ. ಸಣ್ಣವಳಿರುವಾಗ ಗೋಕರ್ಣದ ಕಡಲಲೆಗಳು ಕಾಲೆಳೆದು ಮುಳುಗಿಸಿದ್ದವು. ಕಣ್ಣುಮೂಗುಬಾಯಿಯಲ್ಲೆಲ್ಲ ನೀರು ತುಂಬಿ ಕಕ್ಕರಮಕ್ಕರವಾದ ನೆನಪಿನ್ನೂ ಹಸಿರಾಗಿದೆ. ಅದಕ್ಕೋ ಏನೋ, ದಂಡೆಯಲ್ಲಿ ಕೂತು ಗಂಟೆಗಟ್ಟಲೆ ಕಳೆದೇನು, ಆದರೆ ಉಪ್ಪುಪ್ಪು ನೀರು ಮೈಗಂಟುವುದು, ನೀರಿಗಿಳಿಯುವುದು ಇಷ್ಟವಿಲ್ಲ. ಗ್ರೇಟ್ ಬ್ಯಾರಿಯರ್ ರೀಫ್ ಬಣ್ಣ ಕಳೆದುಕೊಳ್ಳುತ್ತಿರುವುದೂ ಮನದಲ್ಲಿದ್ದಿದ್ದರಿಂದ ಪಾಪಪ್ರಜ್ಞೆ ಕಾಡತೊಡಗಿತ್ತು.
ನನ್ನೆಲ್ಲ ಸಂಶಯಗಳಿಗೂ ವಾನ್ಸ್‌ನಿಂದ ಸಮಾಧಾನಕರ ಉತ್ತರ ಬಂತು. ಗುರುತಿಸಲ್ಪಟ್ಟ ಸ್ಥಳಕ್ಕೆ ಮಾತ್ರ ನಾವು ಹೋಗುತ್ತೇವೆ; ಚಟುವಟಿಕೆಗಳು ಪರಿಸರದೊಡನೆ ತಾದಾತ್ಮ್ಯ ಬೆಳೆಸುತ್ತವೆ; ವಿಕಾಸ ಚಕ್ರದಲ್ಲಿ ಇದೂ ಒಂದು ಹಂತವೆಂದು ಪರಿಗಣಿಸಬೇಕು; ಯಾರೂ ಜಲಚರಗಳ ಮುಟ್ಟಬಾರದು, ಹವಳ ದಂಡೆಗಳ ಮೇಲೆ ನಿಲ್ಲಬಾರದೆಂಬ ಕಟ್ಟುನಿಟ್ಟಾದ ನಿಯಮಗಳಿರುವ ಬಗೆಗೆ ತಿಳಿಸಿದ. ಕೊನೆಗೆ ನೀರಿಗಿಳಿಯಲು ಸಿದ್ಧಳಾದೆ.
ಕಡಲಾಳ ನೋಡಿಬರಲು ಹಲವು ಆಯ್ಕೆಗಳಿವೆ. ಪ್ರತಿ ಕಂಪನಿಯೂ ತಾತ್ಕಾಲಿಕ ತಂಗುದಾಣ (ಮರೈನ್ ವರ್ಲ್ಡ್ ಪೊಂಟೂನ್) ಪ್ಲಾಟ್‌ಫಾರ್ಮ್ ಮಾಡಿಕೊಂಡಿರುತ್ತದೆ. ಅಲ್ಲಿ ಹಡಗು ಲಂಗರು ಹಾಕುತ್ತದೆ. ಕೆಲವರು ತೇಲುತ್ತ ಕಡಲಾಳ ನೋಡುತ್ತಾರೆ. ಗಾಜಿನ ತಳದ ದೋಣಿಯಲ್ಲಿ ಕುಳಿತೂ ನೋಡಬಹುದು. ಕಡಲೊಳಗಿಳಿದು ಪ್ಲಾಟ್‌ಫಾರ್ಮಿನುದ್ದಕ್ಕು ನಡೆಯುತ್ತ ನೋಡಬಹುದು. ಸ್ಕೂಬಾ ಡೈವಿಂಗ್ ಮೂಲಕ ಜಿಗಿದು ಕಡಲಾಳ ತಿರುಗಬಹುದು. ಕಡಿಮೆ ಅಪಾಯ, ಕಡಿಮೆ ಅವಧಿಯ ‘ಸೀ ವಾಕಿಂಗ್’(ಕಡಲ ನಡಿಗೆ)ಯನ್ನು ನಾನು, ಕೃಷ್ಣ ಆಯ್ದುಕೊಂಡೆವು. ಮಕ್ಕಳು ಸ್ಕೂಬಾ ಡೈವಿಂಗಿಗೆ ಸನ್ನದ್ಧರಾದರು.
ನಮ್ಮೆಲ್ಲರನ್ನು ಒಂದೆಡೆ ಕೂರಿಸಿ ಕೈಪಿಡಿಗಳನ್ನು ಕೊಟ್ಟರು. ಏನು ಮಾಡಲಿದ್ದೇವೆ, ಏನು ತೊಂದರೆ ಎದುರಾಗಬಹುದು, ಆಗೇನು ಮಾಡಬೇಕೆಂದು ಸಚಿತ್ರವಾಗಿ ವಿವರಿಸಿದರು. ಟಿವಿ ಪರದೆಯಲ್ಲೂ ತೋರಿಸಿದರು. ಕೈಮೇಲೆ ಸಂಖ್ಯಾ ಕೋಡ್ ಬರೆದು, ನಿಗದಿತ ಸಮಯಕ್ಕೆ ಡೆಕ್‌ಗೆ ಬರಲು ತಿಳಿಸಿದರು.
ಊಟದ ಸಮಯವಾಯಿತು. ಶಾಖಾಹಾರಿಗಳಿಗೆ ಹಲವು ನಮೂನೆಯ ಅಡುಗೆಗಳಿದ್ದವು. ಬಹುಸಂಖ್ಯೆಯಲ್ಲಿದ್ದ ಚೀನೀ, ಜಪಾನೀ ಪ್ರವಾಸಿಗರು ಹುರಿದ ಸೀಗಡಿಗಳನ್ನು ತಟ್ಟೆ ತುಂಬ ತಂದು ತಿನ್ನುತ್ತಿದ್ದರು. ಸಸ್ಯಾಹಾರಕ್ಕೆ ಹೆಚ್ಚು ಆಯ್ಕೆಗಳಿರಲಿಲ್ಲ. ಏನೋ ಒಂದಷ್ಟು ಹೊಟ್ಟೆಗಿಳಿಸಿ, ಈಜುಡುಗೆ ಧರಿಸಿ ವಾನ್ಸ್ ಬಳಿ ಹೋದೆವು. ಕೈ ಮೇಲಿನ ಸಂಖ್ಯೆ ನೋಡಿ, ನಾವೇನು ಚಟುವಟಿಕೆ ಮಾಡಹೊರಟಿರುವವರೆಂದು ಖಾತ್ರಿಪಡಿಸಿ, ‘ವೆಲ್..’ ಎಂದು ನಗುನಗುತ್ತ ಕರೆದೊಯ್ದ. ಅವನಾಗಲೇ ಉದ್ದ ಬಿಳಿಕೂದಲ ಕಟ್ಟಿ, ಸ್ವಿಮ್ ಸೂಟಿನೊಳಗೆ ಭೀಮಕಾಯ ತುರುಕಿ ಸಿದ್ಧನಾಗಿದ್ದ. ಐದೂವರೆ ಮೀಟರ್ ಆಳದಲ್ಲಿ ತ್ರಾಸವಾಗಬಹುದು; ಕಿವಿಯಲ್ಲಿ ಭೋರ್ಗರೆಯಬಹುದು; ಉಸಿರು ಕಟ್ಟಿದಂತಾಗಬಹುದು; ಮೇಲೆ ಬರಬೇಕೆನಿಸಬಹುದು; ಆದರೆ ಗಲಿಬಿಲಿಗೊಳ್ಳಬೇಡಿ ಎನ್ನುತ್ತ ಮುನ್ನಡೆದ. ನೀರೊಳಗಷ್ಟೆ ಅಲ್ಲ, ನೆಲದ ಮೇಲೂ, ಆಕಾಶದಲ್ಲೂ ಅಪಾಯವಿದೆ. ಆತಂಕವು (ಪ್ಯಾನಿಕ್) ತಲುಪಿಸಬೇಕಾದ ಗುರಿಗಿಂತ ಬೇರೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಪ್ಯಾನಿಕ್ ಆಗಬೇಡಿ ಎಂದು ಮತ್ತೆಮತ್ತೆ ಹೇಳಿದ. ‘ಆಕ್ಸಿಜನ್ ಬರುವ ಮಾಸ್ಕ್‌ನ ಪೈಪು ತಪ್ಪಿತೇ, ಅಲ್ಲೇ ಕೈಯಾಡಿಸಿ, ಸೊಂಟದ ಬಳಿ ನೇತಾಡುತ್ತಿರುತ್ತದೆ. ಮುಳುಗುತ್ತಿದ್ದೀರಾ? ಲೈಫ್ ಜಾಕೆಟ್‌ಗೆ ಗಾಳಿ ತುಂಬಿ, ಮೂವತ್ತು ಸೆಕೆಂಡುಗಳಲ್ಲಿ ಮೇಲೆ ಬರುವಿರಿ. ಎಲ್ಲಿದ್ದರೂ ಸಹಾಯಕರನ್ನು ತಲುಪುವಿರಿ’ ಎಂದು ಧೈರ್ಯ ತುಂಬಿದ. ಮಕ್ಕಳಂತೂ ಕಿಂದರಿಜೋಗಿಯ ಹಿಂದೆ ಅತ್ಯುತ್ಸಾಹದಿಂದ ಸುತ್ತಾಡುತ್ತಿದ್ದರು.
ಮುಳುಗಲು ಸುಲಭವಾಗಲೆಂದು ಸೊಂಟಕ್ಕೆ ಒರಟು ಕಬ್ಬಿಣದ ಗುಂಡುಗಳ ಬಲುಭಾರದ ಬೆಲ್ಟ್ ಕಟ್ಟಿದರು. ನಮ್ಮ ಚಪ್ಪಲಿ ಕಳಚಿ ಅವರ ಬೂಟು ಹಾಕಿ ವಾನ್ಸ್ ಹಿಂದೆ ನಡೆದೆವು. ಕೆಳಗಿಳಿಯುವ ಕಬ್ಬಿಣದ ಮೆಟ್ಟಿಲುಗಳು ಕಂಡವು. ರೈಲಿಂಗ್ಸ್ ಹಿಡಿದು ನನ್ನ ಹಿಂದಿಳಿಯಿರಿ ಎಂದು ಸನ್ನೆ ಮಾಡಿ ನೀರಿಗಿಳಿದ. ನಾನೂ ಹಿಂಬಾಲಿಸಿದೆ.
ಅಯ್ಯೋ, ತಣ್ಣ ಕೊರೆವ ನೀರು! ಪಾದ ಮುಳುಗಿತು, ಮೊಣಕಾಲು ಮುಳುಗಿತು, ಮಂಡಿ ಮುಳುಗಿತು, ಸೊಂಟ ಮುಳುಗಿತು. ಕೊರೆವ ನೀರಿಗೆ ಉಸಿರು ಕಟ್ಟಿದಂತೆನಿಸುತ್ತಿದೆ.. ಹೊಟ್ಟೆ, ಎದೆ ಮುಳುಗಿ ಕುತ್ತಿಗೆ ತನಕ ಬಂದಾಗ ಎದ್ದೆದ್ದು ಬಿಕ್ಕಳಿಸಿದಂತೆ ದೊಡ್ಡುಸಿರು ಬರುತ್ತಿದೆ.. ಅಯ್ಯಪ್ಪ, ನಂಗಾಗಲ್ಲ ಎನಿಸುತ್ತಿದೆ. ಆಗಲೇ ಕೆಳಗಿಳಿದು ನಿಂತಿರುವ ಕೃಷ್ಣ ಏನಾಗಲ್ಲ, ಇನ್ನೊಂದೇ ಹೆಜ್ಜೆ ಕೆಳಗಿಡು, ಹೆಲ್ಮೆಟ್ ಹಾಕುತ್ತಾರೆನ್ನುತ್ತ ಸಂಜ್ಞೆ ಮಾಡುತ್ತಿದ್ದಾನೆ. ನೀರು ಗದ್ದ ತಾಕತೊಡಗಿದಾಗ ಮೇಲೇರಿದ ವಾನ್ಸ್ ತಲೆಮೇಲೊಂದು ೩೫ ಕೆಜಿ ಭಾರದ ಹೆಲ್ಮೆಟ್ ಗದುಮಿ ಕೆಳಗೆ ದೂಡಿದ. ಹೆಲ್ಮೆಟ್‌ನೊಳಗೆ ನಳಿಕೆ ಮೂಲಕ ಗಡಗಡ ಎಂದು ಗಾಳಿ ಒಳಬರುತ್ತಿತ್ತು. ಒಳಬರುವ ಗಾಳಿಯೊತ್ತಡ ಎಷ್ಟಿತ್ತೆಂದರೆ ಹೆಲ್ಮೆಟ್ ಒಳಗೆ ನೀರು ನುಗ್ಗಲು ಸಾಧ್ಯವಿಲ್ಲ. ನೀರೊಳಗಿದ್ದರೂ ಮುಖ ಮುಳುಗುವುದಿಲ್ಲ.
ಒಂದು ಮೆಟ್ಟಿಲಿಳಿದದ್ದೇ ಕಡಲೊಳಗಿದ್ದೆ. ನೀರಿನೊಳಗೆ ಹಗುರವಾಗಿದ್ದೆ. ಬೆರಳು, ಉಗುರು, ಬೆನ್ನು, ಕೈಕಾಲುಗಳೆಲ್ಲ ಇವೆಯೋ ಇಲ್ಲವೋ ಎನ್ನುವಷ್ಟು ಹಗುರ. ಆಚೀಚೆ ಕಂಬಿ ಹಿಡಿಯದಿದ್ದರೆ ತೇಲಿ ಹೋಗುವೆನೇನೋ ಎನಿಸುವಷ್ಟು ಹಗುರ. ಗಾಳಿಗೆ ರೆಕ್ಕೆಯ ಭಾರ ಕಳೆದುಕೊಳ್ಳುವ ಹಕ್ಕಿ, ಬೇರಿನಿಂದ ನೆಲಕ್ಕೆ ಭಾರ ಕಳಚಿಕೊಳ್ಳುವ ಮರ, ತಮ್ಮ ಆಕಾರದಿಂದ ನೀರಿಗೆ ಭಾರ ಕಳಚಿಕೊಳ್ಳುವ ಜಲಚರಗಳು ಹಗುರವಾಗುತ್ತವೆ. ಭಾರ ಕಳಚಿಕೊಳ್ಳಲು ಬಾರದ ಮನಭಾರದ ನಾನೂ ಹಗುರವಾಗಿಬಿಟ್ಟಿದ್ದೆ. ಆಹಾ, ಎಂಥ ನಿರಾಳ! ನಿರಾಳ ಮಾಡಿಕೊಂಡದ್ದು ನಾನಲ್ಲ, ನೀರು. ಮುಳುಗಿರುವ ವಸ್ತುವನ್ನು ಮೇಲೆತ್ತುವ ಶಕ್ತಿ ನೀರಿಗಷ್ಟೇ ಅಲ್ಲ, ಎಲ್ಲ ದ್ರವಗಳಿಗೂ ಇದೆ. ಮೇಲೆತ್ತುವಿಕೆಯಿಂದಲೇ ನೀರೊಳಗಿರುವಾಗ ನಮ್ಮ ಭಾರ ಕಡಿಮೆಯಾಗಿ ತೇಲುತ್ತಿರುವಂತೆನಿಸುತ್ತದೆ. ಅದೊಂದು ಅನನ್ಯ ಆನಂದಾನುಭವ.
ಚಳಿ ಮಾಯವಾಗಿ ಅದ್ಭುತ ಲೋಕ ಕಾಣಿಸತೊಡಗಿತ್ತು! ಆಳಾಳವೂ ಸ್ಪಷ್ಟವಾಗಿ ಕಾಣುವಷ್ಟು ಪಾರದರ್ಶಕ, ನೀಲಿ, ಶುಭ್ರ ನೀರಿನಲ್ಲಿ ಮೀನುಗಳ ಹಿಂಡು ಸರಿದು ಹೋಯಿತು. ಹುಲಿಪಟ್ಟೆ ಗೆರೆಯ ಮತ್ತೊಂದು ಗುಂಪು ಬಂತು. ವೆಲ್ವೆಟ್‌ನಂತಹ ಕೆಂಪು ಮೈಯ ನುಣುಪನ್ನು ಮುಟ್ಟುವಾಸೆಯಾಗುವಷ್ಟು ಹೊಳಪಿನದೊಂದು. ಹಾಡೊಂದರ ನಿರ್ದಿಷ್ಟ ಲಯಕ್ಕೆ ಚಲಿಸುತ್ತಿರುವಂತೆ ಒಂದರ ಹಿಂದೊಂದು, ಒಂದರ ಪಕ್ಕ ಇನ್ನೊಂದು ಸರಿದು ಹೋದವು. ಸೀದ ಬಂದು, ಸುಂಯ್ಕ ತಿರುಗಿ, ಅಗೋ ಅಷ್ಟು ದೂರ ತಲುಪಿ, ಮತ್ತೆ ತಿರುಗಿ ನಮ್ಮಿರವಿಗೆ ಕ್ಯಾರೇ ಅನ್ನದೆ ತಮ್ಮ ಪಾಡಿಗೆ ತಾವು ಸರಿದು ಹೋದವು.
ನನ್ನೆದುರು ಬಂದ ವಾನ್ಸ್ ಬೆರಳನ್ನು ಕೆಳಗೊತ್ತೊತ್ತಿ ತೋರಿಸಿದ. ಎದುರಷ್ಟೇ ಅಲ್ಲ, ಕೆಳಗೂ ನೋಡು ಎಂಬಂತೆ. ಕೆಳ ನೋಡಿದರೆ ಅರೆಅರೇ!! ವಿಮಾನದಿಂದ ನಗರವನ್ನು ನೋಡಿದಂತೆ ಕಾಣುತ್ತಿದೆ. ಬೃಹತ್ ಬಂಡೆಗಳು, ಅದರ ಮೇಲೆ ಹರಡಿಕೊಂಡ ನಾನಾ ಆಕಾರ, ಗಾತ್ರದ ಗಿಡಗಳು. ಅರಳಿ ನಿಂತ ಬಣ್ಣಬಣ್ಣದ ಕಲ್ಲುಹೂವುಗಳು. ಹಸಿರು, ನೀಲಿ, ಗುಲಾಬಿ ಛಾಯೆಗಳ ಭಾರೀ ಹೂಕೋಸಿನಂತಹ ರಚನೆಗಳು. ಅದರ ನಡುವೆ ಸರಿವ ಮೀನ ಹಿಂಡು..
ಹತ್ತಿಪ್ಪತ್ತಲ್ಲ, ನೂರು ಸಾವಿರವಲ್ಲ, ಅಗಣಿತ! ಎಣಿಕೆ ತಪ್ಪಿ ನೋಡುತ್ತಿರುವಾಗ ನಾವಿರುವುದು ಹವಳ ದ್ವೀಪದಲ್ಲಿ; ಕಾಣುತ್ತಿರುವುದು ಬಂಡೆಯ ಮೇಲಣ ಗಿಡವಲ್ಲ, ಹವಳ ಪ್ರಾಣಿ ಎಂದರಿವಾದದ್ದೇ ರೋಮಾಂಚನವಾಯಿತು. ಹವಳ ಸಸ್ಯವಲ್ಲ, ಪ್ರಾಣಿ ಎನ್ನಲು ಗ್ರೀಕ್ ವಿಜ್ಞಾನಿಗಳ ಕಾಲದಿಂದ ನಡೆದ ವಾದ-ವಿವಾದಗಳೆಲ್ಲ ನೆನಪಾದವು. ಸಪೂರ ಬೆರಳಿನಂತಿರುವ ರಚನೆಗಳು ಅಲೆಅಲೆಯಾಗಿ, ನಿಧಾನವಾಗಿ ಚಲಿಸುತ್ತಿದ್ದವು. ಬಂಡೆಗಂಟಿಕೊಂಡ ಹುಲ್ಲು ಜೊಂಡಿನಂತೆ, ಕಮಲದ ಡೇರೆಯ ಹೂವಿನಂತೆ, ಹೂಕೋಸಿನಂತಿರುವ ಅನಿಮೋನ್‌ರೂಪಿ ಹವಳ. ಕೆಂಪು, ಗುಲಾಬಿ, ನಸುಗೆಂಪು, ನೀಲಿ, ಹಸಿರು, ಬೆಳ್ಳಿ ಬಿಳಿ, ಹಳದಿ, ಕಿತ್ತಳೆ, ನೇರಿಳೆ ಬಣ್ಣಗಳ ಹವಳ. ಬೀಸುವ ಗಾಳಿಗೆ ಬೆಳೆದು ನಿಂತ ಪೈರು ಹೊಯ್ದಾಡುತ್ತ ತುಯ್ಯುವ ಹಾಗೆ ಸ್ಲೋಮೋಷನ್ನಿನಲ್ಲಿ ಚಲಿಸುವ ಹವಳ. ಕೆಲವು ರೇಡಿಯಂನಂತಹ ಹೊಳಪು ಮೈ ಹೊಂದಿದ್ದವು. ಹವಳಜೀವಿ ಸ್ರವಿಸುವ ಕ್ಯಾಲ್ಷಿಯಂ ಲವಣವೇ ಗಟ್ಟಿಯಾಗಿ, ಬುಡದ ಬಂಡೆಯಾಗಿ, ಅದರಿಂದಲೇ ಆಭರಣದ ಹವಳ ತಯಾರಿಸುವರೆಂಬ ಮಾಹಿತಿ ಮನದಲ್ಲಿ ಹಾದುಹೋಯಿತು.
ಅಷ್ಟರಲ್ಲಿ..
ಓಹ್, ಇದು ಅದೇ, ನೀಮೋ! ‘ಫೈಂಡಿಂಗ್ ನೀಮೋ’ ಸಿನಿಮಾದ ಕೆಂಪು, ಬಿಳಿ, ಕಪ್ಪು ಮಿಶ್ರಪಟ್ಟೆಗಳ ಕ್ಲೌನ್ ಫಿಶ್! ಸೀ ಅನಿಮೋನಿನ ಬೆರಳುಗಳ ನಡುವೆ ಕಣ್ಣಾಮುಚ್ಚಾಲೆಯಾಡುವ ತಿಕ್ಕಲಂತೆ, ಆಗಷ್ಟೇ ಈಯ್ದ ಕರು ಚಂಗಲು ಹಾರುವಂತೆ ಪಣ್‌ಪಣ್ ನೆಗೆಯುತ್ತ ಆಚೀಚೆ ಸುಳಿಯತೊಡಗಿತು. ಅನಿಮೋನಿಗೆ ಕಚಗುಳಿಯಿಟ್ಟಂತೆನಿಸಿರಬಹುದು, ಅಲೆಅಲೆಯಾಗಿ ತನ್ನ ಬೆರಳುಗಳ ಕುಣಿಸುತ್ತಿದೆ! ನಾವು ಕೆಮ್ಮೀನಿನ ಚಲನೆ, ಚಾಲಾಕಿತನ, ವಿಸ್ಮಯಗಳ ಕಣ್ಮನ ತುಂಬಿಕೊಳ್ಳುತ್ತಿರುವಾಗ ಚಂದದ ಕಡುನೀಲಿ ಮೀನು (ಡೋರಿ) ಎದುರೇ ಹಾಯಬೇಕೇ? ಸಿನಿಮಾದ ಪಾತ್ರಗಳೆಲ್ಲ ಕಡಲೊಳಗೆ ಹೀಗೆ ಕಣ್ಣೆದುರು ಬಂದಾವೆಂದು ಯಾರು ತಾನೇ ಊಹಿಸಿದ್ದರು?
‘ಏನಿದೇನಿದು ಮಾಟ, ನೋಡಲೆನಿತಿದಚ್ಚರಿ!? ಸೊಗವೆ ಸೂರೆ ಹೋದ ಬೇಟ ನೋಡಿದನಿತು ಅಚ್ಚರಿ’!
ಅನಿಮೋನ್ ಹವಳವು ಕ್ಲೌನ್ ಮೀನಿನ ನೆಲೆ, ಮನೆ, ಗೂಡು ಎಲ್ಲ ಹೌದು. ಹವಳ ಸ್ರವಿಸುವ ರಾಸಾಯನಿಕ ಎಷ್ಟು ವಿಷಯುಕ್ತವೆಂದರೆ ಮತ್ಯಾವ ಮೀನೂ ಅದರ ಬಳಿ ಸುಳಿಯದು. ಆದರೆ ಪುಟ್ಟ ಕೆಮ್ಮೀನಿಗೆ ಅನಿಮೋನಿನ ವಠಾರವೇ ಮನೆ. ಹವಳ ತಿನ್ನಲಾರದ ಎಷ್ಟೋ ಜಲಚರಗಳನ್ನು ತಿಂದು ಕೆಮ್ಮೀನು ಹಾಕುವ ಪಿಷ್ಟೆ ಹವಳಕ್ಕೆ ಆಹಾರವಾಗಿದೆ. ಕೆಮ್ಮೀನಿನ ತಿಕ್ಕಲುತನದ ಚಲನೆ ಹವಳದ ಬೆರಳುಗಳೊಳಗೆ, ನಡುವೆ ಕಡಲ ನೀರು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.
ಒಂದು ಪುಟ್ಟ ಮೀನು, ಕಡಲ ತಳಕ್ಕಂಟಿದ ಹವಳ ಸಹಬಾಳ್ವೆಯ ಮಾದರಿಯಾಗಿ ಬದುಕಿವೆಯಲ್ಲ! ನಮಗಿಲ್ಲದ ಅರಿವ ಈ ಜೀವಗಳಿಗೆ ತುಂಬಿದವರ‍್ಯಾರೆ?
ಚಲನೆಯೇ ಕಡಲಾಳದ ಪರಮಸತ್ಯ
ನಮ್ಮುಸಿರ ಹೊರತು ಮತ್ಯಾವ ಸದ್ದೂ ಕೇಳದ ಜಲನಿಶ್ಶಬ್ದದಲ್ಲಿ ಹೆಸರು ಗೊತ್ತಿರದ ಅಸಂಖ್ಯ ಜೀವಗಳು ಕಡಲಾಳದ ರಂಗಸ್ಥಳದಲ್ಲಿ ಚಲಿಸುತ್ತಿದ್ದವು. ಜೀಬ್ರಾ ಪಟ್ಟೆಗಳಿರುವ ಮೀನು, ಕೆಂಪು ರೆಕ್ಕೆಗಳ ಬೆಳ್ಳಿ ಮೀನು, ಹಸಿರು ನೀಲಿ ಮಿಶ್ರ ಮೀನು, ಪುಟ್ಟಮೀನು, ದೊಡ್ಡ ಮೀನು, ಉದ್ದನೆಯ, ಚಪ್ಪಟೆಯಿರುವ, ತಟ್ಟೆಯಂತಿರುವ, ಹಾವಿನಂತಿರುವ, ಚೀಲದಂತಿರುವ ಏನೇನೋ ಆಕಾರಗಳು ಸುಳಿಯುತ್ತಿದ್ದವು. ಪಣ್‌ಪಣ್ ಎಂದು ಕಣ್ಣೆದುರೇ ಕಡಲ್ಗುದುರೆ ಪಲ್ಟಿ ಹೊಡೆದು ಹೋಯಿತು. ಪ್ರತಿಯೊಂದೂ ನಿಧಾನವಾಗಿ, ನವಿರಾಗಿ, ಲಯಬದ್ಧವಾಗಿ ತುಯ್ಯುತ್ತಿವೆ. ನಿಶ್ಚಲ ನಿಂತಂತೆ ಕಾಣುವ ಕಡಲು ಒಳಗೊಳಗೆ ನಿರಂತರ ಪ್ರವಹಿಸುತ್ತಿದೆ.
ನಿರಂತರ ಚಲನೆಯೇ ಕಡಲಾಳದ ಪರಮಸತ್ಯ. ನಿರಂತರ ಚಲನೆಯೇ ಪ್ರಕೃತಿಯ ಪರಮ ಸತ್ಯ. ಸ್ಥಗಿತವಾದ ಯಾವುದೂ ಇಲ್ಲಿಲ್ಲ. ಚಲನೆಯಿಂದ ಹಗುರ, ಹಗುರಗೊಂಡು ಚಲನವಲನ! ನಾವು ನಿಂತವರು ನಿಂತೇ ಇದ್ದೆವು ಚಲಿಸುವವರ ನೋಡುತ್ತ.
ನತಮಸ್ತಕಳಾಗಿ ಪಾತಾಳ ವೈಭವಕ್ಕೆ ಬೆರಗುವಡೆದು ನಿಂತಿರುವಾಗ ಪಕ್ಕದಲ್ಲೊಂದು ಬೃಹತ್ ನೆರಳು ಸರಿದು ಹೋಯಿತು. ಬೆಕ್ಕು ಕಾಲು ಸವರಿ ಹೋಗುವಂತೆ ಹೆಗಲ ಸವರಿ ದೊಡ್ಡದೇನೋ ಒಂದು ಈಚೆಯಿಂದಾಚೆ ಹೋದಂತಾಯಿತು. ಕತ್ತು ಮೇಲೆತ್ತಲಾಗದೆ ಶಿರಸ್ತ್ರಾಣದಡಿಯಲ್ಲೇ ನೋಡಿದೆ. ವಿಷಾದಗ್ರಸ್ತ ಚಹರೆಯಂತೆ ಕಾಣುವ ತಗ್ಗಿದ ಬಾಯಿ, ಬೆರಗಿನಿಂದ ಅರಳಿಸಿ ಹೊರಸೂಸಿದಂತಿರುವ ಕಣ್ಣುಗಳು, ದಪ್ಪ ನೀಲಿ ತುಟಿ, ದೊಡ್ಡ ತಲೆ, ತೆರೆದುಕೊಂಡೇ ಇರುವ ಬಾಯಿಯ ಬೃಹತ್ ಕಾಯ ನನ್ನೆದುರು ಬಂತು. ಬುಲ್‌ಡಾಗ್ ನಾಯಿಯಂತೆ ಕಾಣುತ್ತಿದ್ದ ಅನಿಮಿಷ ಹತ್ತಿರ ಬರತೊಡಗಿ ಮೈಮೇಲೆರಗುವುದೋ ಎಂದು ನಾನಂಜುತ್ತಿರುವಾಗ ವಾನ್ಸ್ ಬಂದ. ಅವ ಕಂಡದ್ದೇ ಬಳಿಹೋಗಿ ಸವರತೊಡಗಿತು. ನೀರೊಳಗೆ ತೆಗೆವ ಕ್ಯಾಮೆರಾದಿಂದ ಫೋಟೋ ಸೆಷನ್ನೂ ನಡೆಯಿತು. ಮೈಸವರಿ ಮಾತನಾಡಿಸುವ ಆ ಮನುಷ್ಯ ಸ್ನೇಹಿ, ನಿರಪಾಯಕಾರಿ ಭಾರೀ ಮೀನು ಮಾವೋರಿ ರಾಸ್ಸೆ ಅಥವಾ ನೆಪೋಲಿಯನ್ ಫಿಶ್.
ಇಂತಿಪ್ಪ ಹವಳದ ವಿಸ್ಮಯಲೋಕದಲ್ಲಿ ಮುಳುಗಿರುವಾಗ ನಡೆದದ್ದು ಮುಗಿಯಿತೆಂಬಂತೆ ಮೆಟ್ಟಿಲು ಕೈಗೆ ತಾಗಿತು. ಕಡಲಜೀವಿಗಳಿಗೊಂದು ವಿದಾಯ ಹೇಳಿ ಒಂದೊಂದೇ ಹೆಜ್ಜೆ ಮೇಲಿಟ್ಟ ಹಾಗೆ ಕಿವಿ ಗುಂಯ್ಞ್ ಎನ್ನುತ್ತ ದಬ್ಬಾಕತೊಡಗಿತು. ಮೊದಲೇ ಕೊಟ್ಟ ಸೂಚನೆಯಂತೆ ತಲೆಯಲುಗಿಸುತ್ತ, ಉಗುಳು ನುಂಗಿದಾಗ ಸರಿಯಾಯಿತು. ಇನ್ನೇನು ತಲೆ ನೀರಿಂದ ಮೇಲೆ ಬಂತು ಅನ್ನುವಾಗ ಮೊದಲೇ ಮೇಲೆ ಬಂದಿದ್ದ ವಾನ್ಸ್ ದಡಕ್ಕನೆ ಹೆಲ್ಮೆಟ್ ಎಳೆದ. ಅಬ್ಬಾ! ತಲೆಯ ಭಾರ ಕಳೆಯಿತು. ನೀರಿನಿಂದ ಮೇಲೆ ಬಂದದ್ದೇ ಸೊಂಟ ಕಳಚಿ ಬೀಳುವಷ್ಟು ಭಾರವಾಯಿತು. ಭಾರವಾದದ್ದ ತೆಗೆದಿಟ್ಟು, ನೆನಪುಗಳ ಭಾರದೊಂದಿಗೆ ಡೆಕ್ಕಿಗೆ ಹೋದೆವು.
ಒಂದಿಷ್ಟೂ ಬೇಸರಿಸದೆ ದಿನನಿತ್ಯ ಹೇಳುವುದನ್ನೇ ಮತ್ತೆಮತ್ತೆ ಹೇಳುತ್ತ, ಅವೇಅವೇ ಪ್ರಶ್ನೆಗಳಿಗೆ ಉತ್ತರಿಸುತ್ತ, ನಗೆಮೊಗ ಹೊತ್ತ ಆರೂವರೆ ಅಡಿ ಎತ್ತರದ ಮನುಷ್ಯ ವಾನ್ಸ್. ಆಳಸಮುದ್ರ ಮುಳುಗುಗಾರ. ಯಾವ ಮಾಹಿತಿ ಕೇಳಿದರೂ ಥಟ್ಟನುತ್ತರಿಸುವ ಕಡಲ ಎನ್‌ಸೈಕ್ಲೋಪೀಡಿಯಾ. ಮೆಲ್ಬರ್ನಿನ ಆತ ಬಾಲ್ಯದಿಂದಲೇ ಡೈವಿಂಗ್ ಮಾಡುತ್ತಿದ್ದು ಈ ಕ್ರೂಸಿನಲ್ಲಿ ಇಪ್ಪತ್ತೆಂಟು ವರ್ಷಗಳಿಂದಿದ್ದಾನೆ. ನಡುನಡುವೆ ರಜೆ ಪಡೆದು ಹಾಡು ಕಲಿಯುತ್ತ, ಕಲಿಸುತ್ತ, ಕಚೇರಿ ಮಾಡುತ್ತಾನೆ.
ಅಂದಹಾಗೆ ಈ ತರುಣನ ವಯಸ್ಸೆಷ್ಟು ಎಂದು ಕೇಳಿದೆವು. ಅರವತ್ಮೂರು, ನಂಬಿ ಎಂದ! ಅರವತ್ತರ ಬಳಿಕವೂ ಇಷ್ಟು ಫಿಟ್ ಆಗಿ, ಉತ್ಸಾಹಿತನಾಗಿರುವುದರ ಗುಟ್ಟೇನೆಂದು ಕೇಳಿದಾಗ, ‘ನಾನೊಬ್ಬ ಟ್ರೂ ಆಸ್ಟ್ರೇಲಿಯನ್. ಬದುಕಿಬಿಡು ಎಂಬ ಆಸ್ಟ್ರೇಲಿಯನ್ ಸ್ಪಿರಿಟ್ ಮತ್ತು ಬಿಯರ್ ನನ್ನ ಉತ್ಸಾಹದ ಮೂಲ. ನಾನು ಬಿಯರ್ ಬಿಟ್ಟು ಮತ್ತೇನನ್ನೂ ಕುಡಿಯುವುದಿಲ್ಲ. ಪ್ರವಾಸ ಬರುವವರಿಗೆಲ್ಲ ಧೈರ್ಯ ತುಂಬಿ ಸುರಕ್ಷಿತವಾಗಿ ನೀರೊಳಗಿಳಿಸಿ ಆ ಇನ್ನೊಂದು ಲೋಕ ನೋಡುವಂತೆ ಪ್ರೇರೇಪಿಸುವುದು; ಕಡಲಿಗೆ ಇನ್ನಷ್ಟು ಹತ್ತಿರಾಗುವಂತೆ ಮಾಡುವುದು ನನಗೆ ಖುಷಿ ಕೊಡುತ್ತದೆ’ ಎಂದ.
ನಮ್ಮ ನೆಲದಿಂದ ಇಷ್ಟು ದೂರ ಬಂದು ನೆಲದಾಳ ನೋಡುವ ಅವಕಾಶವಿತ್ತ ಕಾಲವೇ, ನಿಸರ್ಗವೇ, ವಾನ್ಸ್ ಎಂಬ ಗೆಳೆಯನೇ, ನಿಮಗೆ ಶರಣು ಶರಣು.
ಡಾ. ಎಚ್. ಎಸ್. ಅನುಪಮಾ
(Images: Personal Collection and Internet)
೧
ಕೆಮ್ಮೀನು ‘ನೀಮೋ’ ಕುತೂಹಲಕಾರಿ ಜೀವಿ. ಅವು ಗುಂಪಿನಲ್ಲಿರುತ್ತವೆ. ದ್ವಿಲಿಂಗಿಗಳಾಗಿ ಹುಟ್ಟುತ್ತವೆ. ಗುಂಪಿನ ಅತಿದೊಡ್ಡ ಹಿರಿಯ ಮೀನು ಈಯುವ ಹೆಣ್ಣಾಗಿ ಪರಿವರ್ತನೆಯಾಗುತ್ತದೆ. ಗಂಡಿಗಿಂತ ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತದೆ. ಹೊಸ ತಲೆಮಾರಿನ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ಜೊತೆಯಾಗುತ್ತದೆ. ಕೂಡುವ, ಈಯುವ ಕೆಲಸ ಅವರಿಬ್ಬರೇ ಮಾಡಬೇಕು. ಉಳಿದವರು ಸುಮ್ಮನೆ ಇರುತ್ತಾರಷ್ಟೇ. ಅಕಸ್ಮಾತ್ ಈಯುವ ಹೆಣ್ಣು ಸತ್ತರೆ, ಕೂಡಲೇ ಅದರೊಂದಿಗೆ ಕೂಡುತ್ತಿದ್ದ ಗಂಡು ತಾನೇ ಸರಸರ ಬೆಳೆದು ಈಯುವ ಹೆಣ್ಣಾಗುತ್ತದೆ! ಮತ್ತೊಂದು ಹೊಸ ಯುವ ಬಲಿಷ್ಠ ಮೀನು ವೀರ್ಯದಾನ ಮಾಡುವ ಗಂಡಾಗಿ ರೂಪುಗೊಳ್ಳುತ್ತದೆ. ಹೀಗೆ ಒಂದು ಗುಂಪಿನ ಸಂತಾನೋತ್ಪತ್ತಿ ನಡೆಸುವ ಹೆಣ್ಣು, ಗಂಡಾಗಲು ಕಟ್ಟುನಿಟ್ಟಾದ ಶ್ರೇಣೀಕರಣವಿದೆ. ತುರ್ತು ಸಮಯದಲ್ಲಿ ಗಂಡು ಕೆಲವೇ ದಿನಗಳಲ್ಲಿ (ಕೆಲವೊಮ್ಮೆ ಗಂಟೆಗಳಲ್ಲಿ) ಹೆಣ್ಣಾಗಿ ಬೆಳೆಯುತ್ತದೆ!
೨
ಹೆಚ್ಚುಕಮ್ಮಿ ಎಲ್ಲ ಪ್ರವಾಸಿಗರಿಗೂ ಕಾಣಸಿಗುವ ಬ್ಯಾರಿಯರ್ ರೀಫಿನ ಸೂಪರ್ ಸ್ಟಾರ್ ಮಾವೋರಿ ರಾಸ್ಸೆ. ಅದಕ್ಕೆ ಇವರಿಟ್ಟ ಹೆಸರು ‘ವಾಲಿ’. ಎಣ್ಣೆ, ಗಾಳಿಯಿಂದ ತುಂಬಿದ ಅದರ ತಲೆಮೇಲಿರುವ ಗುಬಟು ಸುಲಲಿತವಾಗಿ ತೇಲಲು ಸಹಾಯ ಮಾಡುತ್ತದೆ. ಮೂವತ್ತು ವರ್ಷ ಬದುಕುವ, ೧೮೦ ಕೆಜಿ ತೂಗುವ ಅವು ಹುಟ್ಟುತ್ತ ದ್ವಿಲಿಂಗಿ. ನಾಲ್ಕಾರು ವರ್ಷಗಳಾದಮೇಲೆ ಪ್ರೌಢವಾಗಿ ಮೊದಲು ಹೆಣ್ಣು ನಂತರ ಗಂಡು ಆಗುತ್ತವೆ. ವಾಲಿ ಮೊದಲು ಹೆಣ್ಣಾಗಿ ಸಾರಾ ಆಗಿದ್ದ. ಒಂಬತ್ತು ವರ್ಷಗಳ ಬಳಿಕ ಗಂಡಾಗಿ ವಾಲಿ ಆದ. ವಯಸ್ಕ ಹಂತದವು ಒಬ್ಬಂಟಿಯಾಗಿರಬಯಸುತ್ತವೆ. ವಾಲಿಗಿಂತ ಹಿರಿಯವೇನಾದರೂ ಬಂದರೆ ಇದನ್ನೇ ಓಡಿಸಿ ತಾವು ಒಂಟಿಯಾಗಿರುತ್ತವಂತೆ. ಇದರಂತೆಯೇ ಇನ್ನೊಂದು ‘ರಿಕ್ಕಿ’ಯೂ ಬರುತ್ತಿದೆಯಂತೆ.
No comments:
Post a Comment