Tuesday 16 September 2014

ಅಕಟಕಟಾ! ಹರಿಹರಿ!!


[__--0000000000000000Guru-&-Cow.jpg]


ವಿವೇಕಾನಂದ ಚೇತನಗಳೇ ಮನ್ನಿಸಿ, ಕಾವಿ ಕಾಷಾಯ ವಸ್ತ್ರಗಳು ವಾಕರಿಕೆ ತರಿಸುತ್ತಿವೆ ಎಂದು ಹೇಳಲೇಬೇಕಾಗಿದೆ. 

ನಿತ್ಯಾನಂದ ಸ್ವಾಮಿಯ ಸಾಲುಸಾಲು ಹಗರಣಗಳು ಬಯಲಿಗೆ ಬಂದು ಬಿಡದಿ ಆಶ್ರಮ ರಾಸಲೀಲೆಯಿಂದ ಜಗದ್ವಿಖ್ಯಾತವಾಗಿದೆ. ಆಸಾರಾಮ ಬಾಪು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡನೆಂದು ಬಂಧಿಸಲಾಗಿದೆ. ನಿತ್ಯಾನಂದನ ಪುರುಷತ್ವ ಪರೀಕ್ಷೆ ಮಾಧ್ಯಮದ ಗಮನ ಸೆಳೆಯುತ್ತಿರುವಾಗ ಶ್ರೀರಾಮನ ಅಪರಾವತಾರವೆಂದೇ ಬಣ್ಣಿಸಲ್ಪಟ್ಟ ಗೋಸ್ವಾಮಿ ರಾಘವೇಶ್ವರ ಭಾರತಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಘಟನೆ ನಮ್ಮೆದುರಿಗಿದೆ. ಇದೇನು ಸನ್ಯಾಸಿಗಳ  ಚಾತುರ್ಮಾಸವೋ, ರಾಜಮಹಾರಾಜರ ದಂಡಯಾತ್ರೆಯೋ ಎಂದು ಅನುಮಾನವಾಗುವ ಹಾಗೆ ಎಲ್ಲ ಊರುಪಟ್ಟಣಗಳಲ್ಲೂ ನಸುನಗುವ ಕಾವಿಧಾರಿಗಳ ಫೋಟೋ ಹೊತ್ತು ಮಹಾನ್ ವ್ರತಾಚರಣೆಯ ಹೋರ್ಡಿಂಗುಗಳು ರಾರಾಜಿಸುತ್ತಿವೆ. ‘ಧರ್ಮ’ದ ಗುತ್ತಿಗೆ ಹಿಡಿದವರು ಮಾಡುತ್ತಿರುವುದಾದರೂ ಏನು ಎಂದು ಜನಸಾಮಾನ್ಯ ಅಚ್ಚರಿಗೊಳ್ಳಲೂ ಪುರುಸೊತ್ತಿಲ್ಲದಷ್ಟು ವೇಗವಾಗಿ ಬೆಳವಣಿಗೆಗಳು ಸಂಭವಿಸುತ್ತಿರುವಾಗ ಕಾಷಾಯ ಧರಿಸಿದವರ ಕುರಿತು ಎದೆಯ ನಿಜವ ನುಡಿಯಬೇಕಾದ ಕಾಲ ಸನ್ನಿಹಿತವಾಗಿದೆ.. 

ರಾಜ್ಯಾದ್ಯಂತ ಅಜಮಾಸು ಆರು ಲಕ್ಷದಷ್ಟಿರುವ ಬ್ರಾಹ್ಮಣ ಉಪಜಾತಿಯಾದ ಹವ್ಯಕ ಸಮುದಾಯ ಆತ್ಮಗೌರವದ, ನೆಲ ಪ್ರೀತಿಯ ಕೃಷಿಕ ಸಮುದಾಯ. ಬನವಾಸಿಯ ಕದಂಬ ರಾಜ ಮಯೂರವರ್ಮ ಉತ್ತರದ ಆಹಿಚ್ಛತ್ರದಿಂದ (ಈಗಿನ ಬರೇಲಿ) ಯಜ್ಞಯಾಗಾದಿಗಳನ್ನು ನಡೆಸಲು ೩೨ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ತನ್ನ ರಾಜ್ಯದಲ್ಲಿ ನೆಲೆಯಾಗಿಸಿದ; ಅವರೇ ಹವ್ಯಕರು ಎಂಬ ಪ್ರತೀತಿಯಿದೆ. ಹಾಗೆ ಬಂದವರು ಇಲ್ಲೇ ನೆಲೆಯಾಗಿ ವಿಶಿಷ್ಟ ಭಾಷೆ, ಸಂಸ್ಕೃತಿ ರೂಪುಗೊಂಡಿತು. ಉಳಿದ ಬ್ರಾಹ್ಮಣ ಉಪಜಾತಿಗಳಿಗೆ ಹೋಲಿಸಿದರೆ ಹವ್ಯಕರು ನೆಲವ ನಂಬಿದವರು. ಜೀವನೋಪಾಯಕ್ಕಾಗಿ ಪರಾನ್ನ ನೆಚ್ಚದೇ ತಮ್ಮ ಅನ್ನ ತಾವೇ ಬೆಳೆದುಕೊಂಡವರು. ಅವರಿಗೆ ರಾಮಚಂದ್ರಾಪುರ ಮತ್ತು ಸ್ವರ್ಣವಲ್ಲಿ ಎಂಬ ಎರಡು ಪುರಾತನ ಮಠಗಳಿವೆಯೆಂದು ಹೇಳಲಾಗುತ್ತಿದ್ದರೂ ಭೂಮಿಯೇ ಅವರ ಗುರು ಮತ್ತು ದೇವರು. ಹೀಗೆ ಸ್ವಾಭಿಮಾನಿಗಳಾಗಿ ಘನತೆಯಿಂದ ಬದುಕುತ್ತಿದ್ದ ಸ್ನೇಹಪರ ಸಮುದಾಯಕ್ಕೆ ಗುರುಮಠಗಳ ರಾಜಕಾರಣ ಸುತ್ತಿಕೊಂಡಿದ್ದು ಈಚಿನ ದಶಕಗಳಲ್ಲಿ. 

ಈಗ ಪ್ರೇಮಲತಾ ಅತ್ಯಾಚಾರ ಪ್ರಕರಣದಿಂದ ಸುದ್ದಿಯ ಕೇಂದ್ರವಾಗಿರುವ ರಾಮಚಂದ್ರಾಪುರ ಮಠ ಈ ಮೊದಲೂ ಯಾಗ, ಭೂಮಿ, ಗೋವು, ಗೋಕರ್ಣ, ಹುಂಡಿಕಳ್ಳತನ, ಅತ್ಯಾಚಾರ ಸೀಡಿ, ರಾಮಕತೆಯೆಂದು ನಾನಾ ಕಾರಣಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಸುಳಿದಾಡುತ್ತಿತ್ತು. ಹಸುವಿನ ಮಲಮೂತ್ರಾದಿಗಳಿಂದ ಹಿಡಿದು ಬೀಜ, ತಳಿಯವರೆಗೆ ಎಲ್ಲದರ ಬಗ್ಗೆಯೂ ಆ ಮಠ ಆಸಕ್ತ. ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ವಿರೋಧಪಕ್ಷ, ಆಡಳಿತಪಕ್ಷ, ಮಾಧ್ಯಮ, ಸಿನಿಮಾ, ಉದ್ಯಮ - ಹೀಗೆ ಎಲ್ಲ ಕ್ಷೇತ್ರಗಳಲ್ಲಿದ್ದ ತಮ್ಮ ಸಮುದಾಯದ ಪ್ರಮುಖರನ್ನು ಕರೆದು, ಅವರ ಸೆರಗಿಗೆ ಮಂತ್ರಾಕ್ಷತೆ ಹಾಕಿ, ಪ್ರಭಾವೀ ಅನುಯಾಯಿಗಳ ಪಡೆಯನ್ನೇ ಬೆಳೆಸಿಕೊಂಡರು. ಗೋತಳಿ ರಕ್ಷಣೆಗೆಂದು ಸರ್ಕಾರಿ ಭೂಮಿ ಪಡೆದಿದ್ದು ಹಾಗೂ ಗೋಕರ್ಣ ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸಬೇಕೆಂದು ವಾದ ಹೂಡಿ ಯಶಸ್ವಿಯಾಗಿದ್ದು ಭಾರೀ ವಿವಾದ ಸೃಷ್ಟಿಸಿತು. ನಂತರ ಅವರ ಪರಿಕಲ್ಪನೆಯ ಹಾಡು ನರ್ತನಗಳ ರಾಮಕತೆ ಈಗ್ಗೆ ಕೆಲ ವರ್ಷಗಳಿಂದ ಜನಪ್ರಿಯವಾಗಿತ್ತು. ಊರುಕೇರಿಗಳ ಹೆಂಗಳೆಯರು ರಾಮಕಥೆ ಕೇಳಲು ತಂಡೋಪತಂಡವಾಗಿ ಹೋಗಿ ಸೀತಾಮಾತೆಯ ದುಃಖಕ್ಕೆ ತಾವೂ ಕಣ್ಣೀರಾಗಿ ಬಂದರು. 

ರಾಮಕತೆಯಲ್ಲಿ ಹಾಡುತ್ತಿದ್ದ ಕಲಾವಿದೆಯರಲ್ಲಿ ಪ್ರೇಮಲತಾ ಎಂಬ ಮಹಿಳೆ ಹಾಗೂ ಆಕೆಯ ಪತಿ ದಿವಾಕರ ಶಾಸ್ತ್ರಿ ಮಠಕ್ಕೆ ತುಂಬ ಹತ್ತಿರವಿದ್ದವರು. ಪತಿ ದಿವಾಕರ ಶಾಸ್ತ್ರಿ ಮಠದ ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಪ್ರೇಮಲತಾ ಹಾಡು, ನರ್ತನಗಳಿಂದ ಖ್ಯಾತಳಾದ ಚೆಲುವೆ. ಹಣ, ಕೀರ್ತಿ, ಅನುಗ್ರಹ ಎಲ್ಲವೂ ದಿನಬೆಳಗಾಗುವುದರಲ್ಲಿ ಒದಗಿ ಶ್ರೀರಾಮನ ವರಪ್ರಸಾದ ಆ ಕುಟುಂಬಕ್ಕೆ ದೊರೆತದ್ದು ಗುಟ್ಟೇನೂ ಆಗಿರಲಿಲ್ಲ. 

ಆದರೆ ಅದೇ ಪ್ರೇಮಲತಾ ರಾಮಕಥೆಯ ಸಲುವಾಗಿ ಪ್ರವಾಸ ಮಾಡುವಾಗ ರಾಘವೇಶ್ವರರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ದೂರು ಕೊಟ್ಟರು. ದೇವರ ಹೆಸರಲ್ಲಿ ಆಣೆಪ್ರಮಾಣ ಮಾಡಿಸಿ, ರಾಮಪ್ರಸಾದವೆಂದು ಅಮಲುಕಾರಕ ವಸ್ತು ತಿನಿಸಿ ಲೈಂಗಿಕವಾಗಿ ತನ್ನನ್ನು ಬಳಸಿಕೊಳ್ಳಲಾಯಿತು; ತಾನು ನಿರಾಕರಿಸಿದಾಗಲೂ ಕೋಪಾವಿಷ್ಟರಾಗಿ ಬೆದರಿಸಿ ತನ್ನನ್ನು ಬಳಸಿಕೊಂಡರು; ಇದನ್ನು ಸಹಿಸಲೂ ಆಗದೇ, ಅದರಿಂದ ತಪ್ಪಿಸಿಕೊಳ್ಳಲೂ ಆಗದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೊನೆಗೆ ಗಂಡನ ಬಳಿ ಹೇಳಿದಾಗ ಅವರಿಗೂ ಶಾಕ್ ಆಗಿ ನಿಮ್ಹಾನ್ಸಿನಲ್ಲಿ ಚಿಕಿತ್ಸೆ ಪಡೆದರು ಎಂದು ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದರು. 

ಆದರೆ ಆಕೆ ಅತ್ತ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ೩೬ ಪ್ಯಾರಾಗಳ ದೂರು ಬರೆಯುತ್ತಿರುವಾಗಲೇ ಇತ್ತ ಹೊನ್ನಾವರದಲ್ಲಿ ಅವರ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ಮಠದ ಮ್ಯಾನೇಜರ್ ಚಂದ್ರಶೇಖರ್ ದೂರು ದಾಖಲಿಸಿದರು. ತಕ್ಷಣ ದಂಪತಿಗಳನ್ನು ಬಂಧಿಸಲಾಯ್ತು. ಬೆಂಗಳೂರಿನಲ್ಲಿ ಅವರ ಮಗಳು ಅಂಶುಮಾಲಿನಿ ತನ್ನ ತಾಯಿಯ ಮೇಲೆ ಮಠದವರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಹಾಗೂ ಈಗ ಅವರೇ ಜೀವಭಯ ಒಡ್ಡುತ್ತಿದ್ದಾರೆಂದು ಹೇಳಿ ರಕ್ಷಣೆ ಒದಗಿಸಬೇಕೆಂದು ಕೋರಿ ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿದಳು. ಎಫ್‌ಐಆರ್ ದಾಖಲಾಯಿತು. ಬಂಧನಕ್ಕೊಳಗಾಗಿದ್ದ ದಂಪತಿಗಳಿಗೆ ೧೯ ದಿನಗಳ ಬಳಿಕ ಜಾಮೀನು ದೊರೆತು ಬಿಡುಗಡೆಯಾದರು. ಇತ್ತ ರಾಘವೇಶ್ವರರ ಮೌನವ್ರತ, ಚಾತುರ್ಮಾಸ ಎಲ್ಲ ಮುಗಿದರೂ ಬಂಧನವಿರಲಿ, ವಿಚಾರಣೆ ಮಾಡಲೂ ಕೋರ್ಟ್ ತಡೆಯಾಜ್ಞೆ ನೀಡಿತು. ಅವರ ಕುರಿತು ಅವಹೇಳನಕಾರಿಯಾಗಿ ಬರೆಯಬಾರದು ಎಂದು ಮೊದಲೇ ಮಾಧ್ಯಮಗಳಿಗೆ ನೋಟೀಸ್ ಜಾರಿ ಮಾಡಲಾಯಿತು.

ಈ ಸಿನಿಮೀಯ ಪ್ರಕರಣದಲ್ಲಿ ಮೇಲ್ನೋಟಕ್ಕೇ ಎದ್ದು ಕಾಣುವ ವಿಚಿತ್ರ ಸಂಗತಿಯೆಂದರೆ ಅತ್ಯಾಚಾರಕ್ಕೊಳಗಾದೆ ಎಂದು ದೂರು ಕೊಡಹೋದ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳಿಸಿದರೆ; ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದ್ದರೂ ವಿಚಾರಣೆ, ಹೇಳಿಕೆ ಎಲ್ಲವನ್ನೂ ಸಾಕ್ಷಾತ್ ಹೈಕೋರ್ಟ್ ತಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾನೂನಿನೆದೆರು ಯಾರು ಎಷ್ಟು ಸಮಾನರು ಎಂದು ಇನ್ನೊಮ್ಮೆ ಸಾಬೀತಾಗಿದೆ. 

ಒಬ್ಬ ಹೆಂಗಸು ದೂರು ನೀಡಿದ ಕೂಡಲೇ ಅವಳು ಅಮಾಯಕಳೆಂದು ತೀರ್ಪಿತ್ತು, ಆರೋಪಿಯೆಂದು ಹೆಸರಿಸಿದವನಿಗೆ ಶಿಕ್ಷೆ ಕೊಟ್ಟುಬಿಡಿ ಎಂದು ಯಾರೂ ಹೇಳುತ್ತಿಲ್ಲ. ಅದು ಪ್ರೇಮವೋ, ವಶೀಕರಣವೋ; ಒಪ್ಪಿಗೆಯಿದ್ದು ನಡೆಯಿತೋ, ನಡೆಯಲೇ ಇಲ್ಲವೋ; ಮಠದ ಹೆಸರು ಕೆಡಿಸಲು ನಡೆಸಿದ ಸಂಚೋ, ರಕ್ತಮಾಂಸಗಳುಳ್ಳ ನರಮನುಷ್ಯನೊಬ್ಬನ ದೇಹ ಕಾವಿ ಧರಿಸಿ ಪಟ್ಟ ಸಂಕಟವೋ; ಆ ದಂಪತಿಗಳು ಆರ್ಥಿಕ ಫಲಾನುಭವಿಗಳೋ ಅಲ್ಲವೋ - ಇವೆಲ್ಲ ತನಿಖೆ ನಡೆದು ಸತ್ಯ ಹೊರಬೀಳಲಿ. ಆದರೆ ಆಕೆ ಯಾರನ್ನು ಆಪಾದಿತ ಎಂದು ಹೇಳಿದಳೋ ಅವರನ್ನು ಸಾಕ್ಷಾತ್ ಹೈಕೋರ್ಟು, ಜನಪ್ರತಿನಿಧಿಗಳು, ಪ್ರಭಾವೀ ಜನರ ಪಡೆಯೇ ರಕ್ಷಿಸಹೊರಟಿರುವುದು ಪ್ರಜಾಪ್ರಭುತ್ವ ಹಾಗೂ ನ್ಯಾಯವ್ಯವಸ್ಥೆಯ ಅಣಕದಂತಿದೆ. ಧರ್ಮ ಪರಿಪಾಲನಾರ್ಥ ಚಾತುರ್ಮಾಸ ವ್ರತ ಹಿಡಿದ ವಿರಕ್ತ ರಾಘವೇಶ್ವರರು ವ್ರತ ಕೊನೆಗೊಳಿಸಿ ಆಶೀರ್ವಚನ ನೀಡುತ್ತ, ‘ತಮಗೂ ಯುದ್ಧ ಮಾಡಲು ಗೊತ್ತಿದೆ, ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಲು ಬರುತ್ತದೆ, ಆದರೆ ಅದು ತಮ್ಮ ಜಾಯಮಾನವಲ್ಲ ಎಂದೇ ಸುಮ್ಮನಿದ್ದೇವೆ’ ಎಂದು ಸಾಕ್ಷಿಗಳನ್ನು ಹೆದರಿಸುವ, ನಾಶ ಮಾಡುವ ಹೇಳಿಕೆ ನೀಡಿರುವುದು ಅವರ ಬಟ್ಟೆಗೂ, ಅದರ ಬಣ್ಣಕ್ಕೂ, ಪೀಠಕ್ಕೂ ಶೋಭೆ ತರುವ ಮಾತು ಅಲ್ಲವಾಗಿದೆ. 

ನಾವೀಗ ಇರುವುದು ರಾಮರಾಜ್ಯದಲ್ಲೇ, ಅನುಮಾನವೇ ಇಲ್ಲ. ಏಕೆಂದರೆ ಮಹಿಳಾ ಸ್ನೇಹಿ, ಮಹಿಳಾಪರ, ಅತ್ಯಾಚಾರ ವಿರೋಧಿ ಬಿಗಿ ಕಾನೂನುಗಳನ್ನು ಹೊಂದಿರುವ ಭಾರತದಲ್ಲಿ ಒಬ್ಬ ನಡುವಯಸ್ಸಿನ ಹೆಣ್ಣು ಮಗಳು, ಒಳ್ಳೆಯ ಹಾಡುಗಾರ್ತಿ, ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳ ತಾಯಿ, ಅನುಕೂಲಸ್ಥೆ ತನ್ನ ಮೇಲೆ ದೇವಮಾನವನೊಬ್ಬ ದೌರ್ಜನ್ಯ ನಡೆಸಿದ್ದಾನೆಂದು ಹೇಳಿದ ಕೂಡಲೇ ಜೈಲಿಗೆ ಹೋಗುವುದೆಂದರೆ? ಆಕೆ ತಾನು ಎಲ್ಲೆಲ್ಲಿ ಯಾವಾಗ ಹೇಗೆ ಅತ್ಯಾಚಾರಕ್ಕೊಳಗಾದೆ ಎಂದು ವರುಷಗಟ್ಟಲೆಯ ವಿವರಗಳನ್ನು ದೂರಿನಲ್ಲಿ ಬರೆಯತೊಡಗಿದ ಕ್ಷಣದಲ್ಲಿ ಅವಳ ಮೇಲೇ ಆಪಾದನೆ ಹೊರಿಸಿ, ಬಂಧಿಸುವುದೆಂದರೆ? ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದೇ ಇಟ್ಟುಕೊಂಡರೂ ಮೂರು ವಾರ ಕಳೆದರೂ ಬೇಲ್ ಸಿಗಲಾರದಷ್ಟು ಘನಘೋರ ತಪ್ಪೇ ಅದು? ಕಟ್ಟಕಡೆಯ ಮನುಷ್ಯನಿಗೂ ನ್ಯಾಯ ಒದಗಿಸಬೇಕಾದ ನ್ಯಾಯವ್ಯವಸ್ಥೆ ಬಲಿತವರ ಪರ ಇಷ್ಟಬಂದಂತೆ ಮಣಿಯಬಹುದಾದರೆ ಈ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದೇಕೆ ಕರೆಯಬೇಕು? 

ಸಮುದಾಯವೊಂದನ್ನು ಅದರಲ್ಲೂ ಅದರಲ್ಲಿರುವ ಹೆಣ್ಣುಮಕ್ಕಳನ್ನು ಧರ್ಮ ಹೇಗೆ ಕುರುಡರನ್ನಾಗಿಯೂ, ಕಿವುಡರನ್ನಾಗಿಯೂ, ನ್ಯಾಯಸೂಕ್ಷ್ಮ ಕಳೆದುಕೊಳ್ಳುವಂತೆಯೂ ಮಾಡಬಹುದು ಎನ್ನುವುದಕ್ಕೆ ಈ ಪ್ರಕರಣಕ್ಕಿಂತ ಬೇರೆ ಉದಾಹರಣೆ ಬೇಡ. ಯಾರು ರಾಮಕಥೆ ಕೇಳಿ ಪುನೀತರಾಗಲೆಂದು ಪ್ರೇಮಲತಾ ಹಾಡಿದ್ದಳೋ ಆ ಸಮುದಾಯದ ಸಾವಿರಾರು ಹೆಣ್ಣುಮಕ್ಕಳು ಅವಳ ಕುರಿತಾಗಲೀ, ಪಾಲಕರು ಬಂಧನದಲ್ಲಿರುವಾಗ ಅವರ ಇಬ್ಬರು ಹೆಣ್ಮಕ್ಕಳು ಅನುಭವಿಸಿದ ತಲ್ಲಣದ ಕುರಿತಾಗಲೀ ಎಳ್ಳುಕಾಳಿನಷ್ಟೂ ಚಿಂತಿಸದೆ ದೇವಮಾನವನ ಪರ ತಮ್ಮ ಹೆಣ್ತನವನ್ನು ಒತ್ತೆಯಿಟ್ಟು ರಕ್ಷಣೆಗೆ ನಿಂತಿದ್ದಾರೆ. ‘ಗುರುಗಳು ಹೆತ್ತ ತಾಯಿಗಿಂತ ಶುದ್ಧರು. ಇದು ‘ಆ’ ಮಠದವರ ಕಿತಾಪತಿ. ಅಕಸ್ಮಾತ್ ಪ್ರೇಮಲತಾ ಹೇಳಿದ್ದು ನಿಜವೇ ಆಗಿದ್ದರೆ ಮೂರು ವರ್ಷ ಅದೇಕೆ ಸುಮ್ಮನಿದ್ದಳು? ಹತ್ತುಸಲ ಒಪ್ಪಿ ಸುಮ್ಮನೆ ಮಲಗಿದ್ದವಳು ಹನ್ನೊಂದನೇ ಸಲ ಏಕೆ ದೂರು ಕೊಟ್ಟಳು?’ ಎಂದು ಪ್ರೇಮಲತಾಳದಷ್ಟೇ ಅಪರಾಧವೆಂಬಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಅಕಸ್ಮಾತ್ ಆಕೆ ಹೇಳಿದ್ದು ನಿಜವಿರಬಹುದೆ ಎಂದೂ ಅವರು ಯೋಚಿಸಲಾರರು, ಏಕೆಂದರೆ ‘ಗುರು’ಗಳ ಬಗ್ಗೆ ಹಾಗೆ ಯೋಚಿಸುವುದು ಮಹಾಪಾಪ ಎಂದು ಅವರ ತಲೆಯಲ್ಲಿ ತುಂಬಲಾಗಿದೆ! 

ಮಠದ ಜೊತೆಗಿರುವವರ ಸಂಖ್ಯೆ, ಹಣ ಮತ್ತು ಅಧಿಕಾರ ಜನರನ್ನು ಹೇಗೆ ಕುಣಿಸಿ ಮಣಿಸುವುದೆಂದರೆ ಇಂಥ ಗಂಭೀರ ಆಪಾದನೆಯ ನಂತರವೂ ಜನಪ್ರತಿನಿಧಿಗಳು, ಅಧಿಕಾರಸ್ಥರು ಪೀಠದ ಭಕ್ತರಾಗಿ ಅದರ ಬೆನ್ನಿಗಿದ್ದಾರೆ. ಸಣ್ಣಪುಟ್ಟ ಪ್ರಕರಣಗಳಲ್ಲಿ ಕಣ್ಣೀರು ಹರಿಸುವವರೆದುರು ಮೈಕು ಹಿಡಿವ ಮಾಧ್ಯಮಗಳು ಮನಸ್ಸು ಮಾಡಿದರೆ ಈ ಇಡೀ ಪ್ರಕರಣದ ಒಳಹೂರಣವನ್ನು, ಧರ್ಮದ ಸ್ಥಳಗಳ ವಿವಿಧ ಮುಖಗಳ ಅವ್ಯವಹಾರವನ್ನು ಜನಸಾಮಾನ್ಯರೆದುರು ತೆರೆದಿಡಬಹುದಿತ್ತು. ಆದರೆ ನಿತ್ಯಾನಂದ ಸ್ವಾಮಿಯ ಪ್ರಕರಣಕ್ಕೆ ಚಿತ್ರವಿಚಿತ್ರ ಶೀರ್ಷಿಕೆ ಕೊಟ್ಟು ಶೌರ್ಯ ಮೆರೆವ ಮಾಧ್ಯಮಗಳು ಈ ಕುರಿತು ಯಾವ ಒತ್ತಡವೋ, ಭಯವೋ ಅಂತೂ ತಣ್ಣಗಿವೆ. ಮಠದ ಮಾನ ಕಳೆಯಲು ನಡೆಸಿದ ಸಂಚು ಎಂದು ಪ್ರೇಮಲತಾಳ ನಿಜವಾದ ನೋವು ಅಡಗಿಹೋಗುವ ಸಂಭವವಿದೆ. 

ಆಕೆಯ ಪರ ವಾದ ಮಾಡಲು ವಕೀಲರಿಗಾಗಿ ಹುಡುಕಾಟ ನಡೆಸಬೇಕಾಯಿತು. ಈ ಪ್ರಕರಣ ಕುರಿತು ಬರೆದರೆ, ಪ್ರತಿಭಟನೆ ನಡೆಸಿದರೆ ಎಲ್ಲಿ ತಮ್ಮ ಮೇಲೆ ಬಲವಾನರು ತಿರುಗಿ ಬಿದ್ದಾರೋ ಎಂದು ಜನಸಾಮಾನ್ಯರು/ಪತ್ರಕರ್ತರು/ಬರಹಗಾರರು/ಕಾರ್ಯಕರ್ತರು ಅನಿಸಿದ್ದನ್ನು ಹೇಳಲೂ ಹಿಂಜರಿಯುತ್ತ ನುಂಗಿಕೊಳ್ಳುತ್ತಿದ್ದಾರೆ. ‘ಏನಾದರೂ ಬರೆದೀರಿ ಜೋಕೆ. ಬರೆದರೆ ನಿಮ್ಮ ಮೇಲೆ ಎರಡು ಸುಳ್ಳು ಕೇಸು ಖಂಡಿತಾ ಸೃಷ್ಟಿಯಾಗುತ್ತವೆ, ಗೋಕರ್ಣದಲ್ಲಿ ನೋಡಿ, ಏನಾಗಿದೆ ಗೊತ್ತಲ್ಲ?’ ಎಂದು ಒಂದು ಹೆಜ್ಜೆ ಇಡುವ ಮೊದಲೇ ಅಂಜಿಕೆ ಹುಟ್ಟಿಸಲಾಗುತ್ತಿದೆ. ‘ಅವರ ಕುರಿತು ಅವಹೇಳನಕಾರಿಯಾಗಿ ಯಾರೂ ಮಾತನಾಡಬಾರದು. ಕೋರ್ಟಿನ ಆಜ್ಞೆ ಇದೆ, ನ್ಯಾಯಾಂಗ ನಿಂದನೆ ಆಗುತ್ತದೆ’ ಎನ್ನುತ್ತ ಮೌನ ಹಬ್ಬಿಸಲಾಗುತ್ತಿದೆ. 

ಬಾಂಬು ಸ್ಫೋಟವಷ್ಟೇ ಭಯೋತ್ಪಾದನೆ ಅಲ್ಲ. ಆಗಲಿರುವುದನ್ನು ಊಹಿಸಿ ಏನಾದೀತೋ ಎಂಬ ಊಹೆಗೇ ಭಯಪಡುವಂತೆ ಮಾಡುವುದು - ಇದೇ ಅಲ್ಲವೇ ಭಯೋತ್ಪಾದನೆಯೆಂದರೆ? 

***

ಈ ಮತ್ತು ಇಂಥ ಪ್ರಕರಣಗಳಿಂದ ಹಲವು ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ವೇಗದ ಆಧುನಿಕ ಕಾಲದ ತಲ್ಲಣಗಳಿಗೆ, ಬದಲಾಗುತ್ತಿರುವ ಮೌಲ್ಯ ವ್ಯವಸ್ಥೆಗೆ ಇಂದಿನ ತಲೆಮಾರು ಒಡ್ಡಿಕೊಳ್ಳುವಾಗ ಧರ್ಮ ಮತ್ತು ಗುರು-ಮಠಗಳ ಪಾತ್ರ ಏನಿರಬೇಕೆನ್ನುವುದು ಪ್ರಶ್ನಾರ್ಹವಾಗಿದೆ. ವೇಗಆವೇಗಗಳ ನಡುವೆ ಬದುಕಿನ ಕನಿಷ್ಟ ಅವಶ್ಯಕತೆಯತ್ತ ಮಾತ್ರ ಗಮನ ಹರಿಸುವ ಸರಳತೆ ಕಲಿಸಲು; ತನ್ನ ತಪ್ಪುಒಪ್ಪುಗಳ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಂಡು ಆತ್ಮಶುದ್ಧಿ ಹೊಂದಲು; ಮನುಷ್ಯನ ಆಧ್ಯಾತ್ಮಿಕ ಅಗತ್ಯ ಅರಿತು ಅವನ ಚೇತನವನ್ನು ಎಲ್ಲ ಸಂಕಲೆಗಳಿಂದ ಬಿಡಿಸಲು ಧಾರ್ಮಿಕತೆ ಸಹಾಯ ಮಾಡಬೇಕು.

ಆದರೆ ಕಾಲದ ದುರಾದೃಷ್ಟವೆಂದರೆ ಧರ್ಮದ ಸ್ಥಳಗಳೇ ಅಧರ್ಮದ ಕೂಪಗಳಾಗಿ, ಎಲ್ಲ ಪಾಪಕ್ಕೂ ಪ್ರಾಯಶ್ಚಿತ್ತವಿದೆ ಎಂಬ ಅನುಕೂಲಸಿಂಧು ಆಧ್ಯಾತ್ಮ ಬೋಧಿಸುವ ದುಷ್ಟ ಮಾದರಿಗಳಾಗಿ ಜನರ ಎದುರಿಗಿವೆ. ಯಾವುದೇ ಧರ್ಮ/ಜಾತಿಯ ಪೀಠವೂ ಇದರಿಂದ ಹೊರತಲ್ಲ - ಅವು ಪರಸ್ಪರ ಮೇಲ್ಮೆಯ ಪೈಪೋಟಿಗಿಳಿದು ಸಂಸಾರಿಗಳಿಗಿಂತ ಮಿಗಿಲಾಗಿ ಲೌಕಿಕದ ಸಿರಿ ಸಂಪತ್ತು, ಕೀರ್ತಿ ಜನಪ್ರಿಯತೆಯ ಪ್ರವಾಹದಲ್ಲಿ ಮುಳುಗಿಹೋಗಿವೆ. ೮೦ರ ದಶಕದಲ್ಲಿ ಸಂಭವಿಸಿದ ಕುದುರೆಮೋತಿ ಸ್ವಾಮಿಯ ಅತ್ಯಾಚಾರ ಪ್ರಕರಣದಂತಹ ಹತ್ತಾರು ಪ್ರಕರಣ ಈಗ ಸಂಭವಿಸುತ್ತಿದ್ದರೂ ಜಾಗೃತ ಹೋರಾಟ ರೂಪುಗೊಳ್ಳದಿರುವುದು ಬದಲಾದ ಮೌಲ್ಯವ್ಯವಸ್ಥೆಗೆ ಸಾಕ್ಷಿಯಾಗಿದೆ. 

ಧರ್ಮ, ಮಠ, ಸನ್ಯಾಸ, ಕೋರ್ಟು, ಕಾನೂನು ಎಲ್ಲವೂ ಪುರುಷ ನಿರ್ಮಿತಿಗಳು. ಪಡಬಾರದ ಕಷ್ಟ ಪಡುತ್ತ, ಅಷ್ಟೇ ಕಷ್ಟ ಕೊಡುತ್ತ ತನ್ನನ್ನು ತಾನು ಶ್ರೇಷ್ಠ ಎಂದು ಬಿಂಬಿಸಿಕೊಳ್ಳಲು ಜಾತಿ/ಧರ್ಮ/ದೇಶ/ವ್ಯಕ್ತಿ ನಡೆಸುವ ಬಲವಂತದ ಒದ್ದಾಟಗಳು ಅವು. ಭವಿಷ್ಯದಲ್ಲಿ ಇವುಗಳ ಪ್ರಸ್ತುತತೆ ಏನು, ಎಷ್ಟು ಎಂದು ಇವತ್ತಿನ ತಲೆಮಾರು ಎಚ್ಚರದಿಂದ ನಿರ್ಧರಿಸಬೇಕು. ರಾಜಕಾರಣಿಗಳ ಅಧಿಕಾರದ ಆಟದಲ್ಲಿ ಶಾಮೀಲಾಗಿ ಜನರ ಕಣ್ಣಿಗೆ ಮಣ್ಣೆರಚುವ ಜಾತಿಗ್ರಸ್ತ ಕಾವಿಧಾರಿಗಳ ಅಪಾಯವನ್ನು ಸಮಾಜಕ್ಕೆ ತೆರೆದು ತೋರಿಸಬೇಕು. ಧರ್ಮಗುರುಗಳು ಕ್ರಮಿಸುತ್ತಿರುವ ದಾರಿ ಅರಿವಿನ ಕ್ಷಿತಿಜದ ಕಡೆಗೆ ಕರೆದೊಯ್ಯುವ ಸಾಧ್ಯತೆಯಿಲ್ಲದಿರುವಾಗ ಹುಸಿ ಪಾಂಡಿತ್ಯದ ಸೋಗಿನ ಅವರನ್ನು ತಂತಮ್ಮ ಮನೋಪೀಠಗಳಿಂದ ಜನ ಮೊದಲು ಕೆಳಗಿಳಿಸಬೇಕು. ಧರ್ಮದ ದಲ್ಲಾಳಿಗಳ ಒಳಸಂಚನ್ನು ಅರಿತು ತನ್ನ ದಾರಿ ತಾನೇ ಕಂಡುಕೊಳ್ಳಬೇಕಾದ ಸವಾಲು ಎದುರಿಸಬೇಕು. 

ಡಿಜಿಟಲೈಸ್ ಆಗ ಹೊರಟ ಡೆಮಾಕ್ರೆಟಿಕ್ ಭಾರತವೇ, ಯಾವುದು ಜೀವದಾಯಕವೋ ಅದು ಜೀವಸಂಕಟವೂ ಆಗಬಹುದು; ಧರ್ಮ ಇದರಿಂದ ಹೊರತಲ್ಲ ಎಂದು ನೆನಪಿಡು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಜೆಯೇ, ‘ಶ್ರೇಷ್ಠರು ಶ್ರೇಷ್ಠರಾದದ್ದು ಏಕೆಂದರೆ ಅವರೆದುರು ನೀನು ಮೊಣಕಾಲೂರಿದ್ದೀಯೆ ಅದಕ್ಕೇ’ ಎಂಬ ಮಾತನ್ನು ನೆನಪಿಡು. ಇನ್ನೂ ಅಬಲೆಯೆಂದು ಬಣ್ಣಿಸಿಕೊಳುವ ಹೆಣ್ಣೇ, ಯಾವ ಧರ್ಮ/ಕಾನೂನು/ಪೀಠವೂ ಕುಳಿತಲ್ಲಿಗೇ ಬಂದು ನಿನ್ನ ಸಹಾಯಕ್ಕೆ ನಿಲ್ಲುವುದಿಲ್ಲ, ಪರಾಂಬರಿಸು.



1 comment:

  1. ಉತ್ತರ ಕನ್ನಡ ಮೌನವಾಗಿರುವಾಗ, ಮಹಿಳೆಯೊಬ್ಬರು ತೋರಿಸಿದ ಮೊದಲ ಪ್ರತಿಭಟನಾತ್ಮಕ ಬರಹ ಇದು. ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಸಮುದಾಯಗಳು ಮೌನವಾಗಿವೆ. ಈ ಜಿಲ್ಲೆಯಲ್ಲಿ ವೈಚಾರಿಕತೆ ನಾಶವಾಗಿದೆ. ಮಹಿಳಾ ಬರಹಗಾರರು ಯಾವುದಕ್ಕೆ ಪ್ರತಿಕ್ರಿಯಿಸಬೇಕಿತ್ತೋ ಅದಕ್ಕೆ ಜಾಣ ಮೌನವಹಿಸಿದ್ದಾರೆ. ಉತ್ತರ ಕನ್ನಡ ಸಾಹಿತ್ಯ ವಲಯ ಏನು ಗೊತ್ತಿಲ್ಲದಂತೆ , ಇಲ್ಲಿ ಏನು ನಡೆದಿಲ್ಲ ಎಂಬಂತೆ ಇದೆ. ಸಿಐಟಿಯು, ಸಿಪಿಐ(ಎಂ) ಜಿಲ್ಲೆಯಲ್ಲಿ ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ, ಮೌನವಾಗಿವೆ. ಸರ್ಕಾರಕ್ಕೆ , ಪೊಲೀಸರಿಗೆ ನೈತಿಕ ಬೆಂಬಲ ನೀಡುವವರೇ ಇಲ್ಲವಾಗಿದೆ. ಪ್ರಜ್ಞಾವಂತ ಸಮುದಾಯಗಳು ನವಬ್ರಾಹ್ಮಣ್ಯದ ಪರದೆಯ ಹಿಂದೆ ಅಡಗಿವೆ. ಎಲ್ಲ ಸಮುದಾಯಗಳಿಗೆ ಪುರೋಹಿತ ಶಾಹಿ ನಾಜೂಕುತನದ ಪೋಷಾಕು ಬೇಕಾಗಿದೆ. ಜಿಲ್ಲೆಯ ನಡೆ ಕಪ್ಪು ಹಾಸಿಗೆಯ ಮೇಲೆ ಕುಂಟು ಹೆಜ್ಜೆಗಳನ್ನಿಡುತ್ತಿದೆ....

    ReplyDelete