Wednesday, 10 December 2014

ವಿಮೆನ್ ಇನ್ ಬ್ಲಾಕ್ - ಬೀದಿಯ ಪರ್ಯಾಯ ಶಕ್ತಿ




ಯುದ್ಧ ಕಾಲವೋ, ಶಾಂತಿ ಕಾಲವೋ, ಎಲ್ಲ ಕಾಲದಲ್ಲಿ ಯುದ್ಧಹಿಂಸೆ ಜನರನ್ನು ಬಾಧಿಸಿದೆ. ಅದರ ಸ್ವರೂಪ, ಸ್ಥಳ, ತೀವ್ರತೆ ಏನೇ ಆಗಿರಲಿ, ಯುದ್ಧ ಕೊನೆಗೂ ಬಾಧಿಸುವುದು ಹೆಣ್ಣನ್ನೇ. ಯಾರು ಗೆದ್ದರೂ, ಯಾರು ಸೋತರೂ ವಿಧವೆಯರು, ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರು, ಸೋದರರನ್ನು ಕಳೆದುಕೊಂಡ ಸೋದರಿಯರು ಸೃಷ್ಟಿಯಾಗುತ್ತಾರೆ. ಸೈನ್ಯದಿಂದ ಹೆಣ್ಣು ಬರ್ಬರ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ. ವೀರರ ಮರಣಗಳು ಸಾವಿರಾರು ಕುಟುಂಬಗಳ ಸಮತೋಲನ ಮತ್ತು ಜೀವಿತವನ್ನೇ ಏರುಪೇರು ಮಾಡುತ್ತವೆ. ಈಗ ದೇಶದೇಶಗಳ ನಡುವೆ ನೇರಾನೇರ ಯುದ್ಧ ನಡೆಯದೇ ಇರಬಹುದು. ಆದರೆ ಗಡಿ, ಉಗ್ರಗಾಮಿ, ರಕ್ಷಣೆಯ ನೆಪದಲ್ಲಿ ನಿರಂತರ ಯುದ್ಧ ಚಾಲ್ತಿಯಲ್ಲಿದೆ. ಅದಕ್ಕೆ ನೀರೆರೆಯಲು ರಾಷ್ಟ್ರೀಯತೆ, ದೇಶಭಕ್ತಿ, ಸುರಕ್ಷತೆ-ಸಮಗ್ರತೆ ಎಂಬಿತ್ಯಾದಿ ಭಾರವಾದ ಶೀರ್ಷಿಕೆಗಳಿವೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ಕಾರಣಕ್ಕಾಗಿ ನಮ್ಮದೇ ದೇಶಗಳ ನಮ್ಮದೇ ಸರ್ಕಾರಗಳು ರೂಪಿಸುವ ಯುದ್ಧನೀತಿ ನಮ್ಮ ಮನೆಗೇ ನಾವು ಬೆಂಕಿಯಿಟ್ಟುಕೊಳ್ಳುವಂತಿರುತ್ತವೆ. ಮಿಲಿಟರಿಯ ವಿಷಯ ಗುಪ್ತವಾಗಿರುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆಂದು ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮ ಅನುಭವಿಸಿದ ಮೇಲಷ್ಟೇ ಜನಸಾಮಾನ್ಯರಿಗೆ ತಿಳಿದುಬರುತ್ತದೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ ಎಂಬ ಉನ್ಮಾದದಿಂದ ಮಾಡುವ ಯುದ್ಧ ಮತ್ತು ತತ್ಸಂಬಂಧಿ ಹಿಂಸೆ ಸಮಾಜದ ನೈತಿಕತೆಯ ನೇಯ್ಗೆಯನ್ನೇ ಭ್ರಷ್ಟಗೊಳಿಸುತ್ತದೆ. ಅದು ನೂರಕ್ಕೆ ನೂರು ‘ಅತಿ ಪುರುಷ’ ಮನಸ್ಥಿತಿಯ ಸೃಷ್ಟಿ. ಎಂದೇ ಅದನ್ನು ಪ್ರತಿರೋಧಿಸುವುದು ತಾಯಿ ಮನಸುಗಳಿಗಲ್ಲದೇ ಬೇರೆಯವರಿಗೆ ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿ ಉಳಿಯಲು ಹಿಂಸೆಯನ್ನು ಪ್ರತಿರೋಧಿಸುವುದು ಗಡಿಗೆರೆಯಿರದ ತಾಯಂದಿರ ಪರಮ ಕರ್ತವ್ಯ ಎಂದು ಮಹಿಳೆ ಮರೆಯುವಂತಿಲ್ಲ.

ಅಂಥ ಒಂದು ಪ್ರಯತ್ನ ‘ವಿಮೆನ್ ಇನ್ ಬ್ಲಾಕ್’.

೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆ ಧರಿಸಿದ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಕಪ್ಪು ಬಣ್ಣ ದುಃಖ ಸೂಚಕ, ಮರಣ ಸೂಚಕ. ಆದರೆ ಒಂದು ನಿಷ್ಕ್ರಿಯ ಸಂಕೇತವನ್ನು ಹಿಂಸೆಯ ವಿರುದ್ಧ ಪ್ರತಿರೋಧದ ಮತ್ತು ದಿಟ್ಟತನದ ಸಂಕೇತವಾಗಿ ಬಳಸಿಕೊಂಡು ಹುಟ್ಟಿದ್ದು ವಿಮೆನ್ ಇನ್ ಬ್ಲಾಕ್. ಆಕ್ರೋಶವನ್ನು ಪದಗಳಿಲ್ಲದೆ ತೋರಿಸಬಹುದಾದ ಭಾಷೆಯ ಸಂಕೇತ ಮೌನ. ಅದನ್ನೂ ಸಾಂಕೇತಿಕವಾಗಿ ವಿಮೆನ್ ಇನ್ ಬ್ಲಾಕ್ ಬಳಸಿಕೊಂಡಿತು.

೧೯೮೭ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ ಆಕ್ರಮಿಸಿಕೊಂಡ ೨೦ ವರ್ಷದ ಬಳಿಕ ಮೊದಲ ಪ್ಯಾಲೆಸ್ಟೀನಿಯನ್ ಇಂತಿಫಾದಾ ಶುರುವಾಯಿತು. ಇಸ್ರೇಲಿ ಸೇನೆ ನಗರಗಳನ್ನಾವರಿಸಿಕೊಂಡಿತು. ಆಗ ಸಂಭವಿಸಿದ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಈ ಸಂಘಟನೆ ಹುಟ್ಟಿಕೊಂಡಿತು. ಆ ಮೊದಲು ದ. ಆಫ್ರಿಕಾ, ಅರ್ಜೆಂಟೀನಾದಲ್ಲಿ ಕಂಡುಬಂದ ಅಹಿಂಸಾತ್ಮಕ ಪ್ರತಿರೋಧದ ಸ್ವರೂಪದಿಂದ ಸ್ಫೂರ್ತಿ ಪಡೆದ ಕೆಲವು ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ನಡುಭಾಗದ ಹಗಾರ್ ಸ್ಕ್ವೇರ್ (ಅಥವಾ ಪ್ಯಾರಿಸ್ ಸ್ಕ್ವೇರ್)ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ಚಕಮಕಿಯಲ್ಲಿ ಮಡಿದವರ ಸಾವಿಗೆ ಶೋಕಿಸುತ್ತ ಕಪ್ಪು ಬಟ್ಟೆ ಧರಿಸಿ ಮೌನವಾಗಿ ನಿಂತರು. ಬಿಚ್ಚಿದ ಹಸ್ತದ ಕಪ್ಪು ಪ್ಲಕಾರ್ಡಿನಲ್ಲಿ ‘ಸ್ಟಾಪ್ ಆಕ್ಯುಪೇಷನ್’ ಎಂದು ಬರೆಯಲಾಗಿತ್ತು.

ಕೂಡಲೇ ಇದು ಇಸ್ರೇಲಿನ ಇತರ ನಗರಗಳಿಗೂ ಹರಡಿತು. ಇಸ್ರೇಲ್ ಪ್ರಜೆಗಳಾದ ಅರಬ್ ಪ್ಯಾಲಸ್ಟೀನಿಯನ್ನರು ಹೆಚ್ಚಿರುವ ಉತ್ತರ ಇಸ್ರೇಲಿನಲ್ಲಿ ಗಮನ ಸೆಳೆಯಿತು. ಎರಡೂ ದೇಶಗಳ ನಡುವೆ ಸಂಪರ್ಕವಿರಿಸಿಕೊಂಡ, ಗಡಿ ದಾಟಿ ಎರಡೂ ಕಡೆಯ ಜೈಲುಗಳಿಗೆ ಭೇಟಿ ನೀಡುವ ಸಪ್ಲೈ ಗುಂಪಿನೊಡನೆ ಸಂಪರ್ಕ ಸಾಧಿಸಿತು. ಚಳುವಳಿಯೋಪಾದಿಯಲ್ಲಿ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ಇದಕ್ಕೆ ಯಾವ ನಿರ್ದಿಷ್ಟ ಚೌಕಟ್ಟೂ ಇರಲಿಲ್ಲ. ಪ್ರತಿ ಊರಿನ ಮಹಿಳೆಯರೂ ಅಲ್ಲಲ್ಲಿನ ಸ್ವರೂಪ ನಿರ್ಧರಿಸಿದರು. ೧೯೯೩ರ ತನಕ ಪ್ರತಿವಾರ ಹೆಚ್ಚು ಕಡಿಮೆ ೪೦ ನಗರಗಳಲ್ಲಿ ಈ ಜಾಗೃತಿ ನಡೆಯುತ್ತಿತ್ತು. ೧೯೯೩ರ ಓಸ್ಲೋ ಒಪ್ಪಂದವಾದ ಬಳಿಕ ಮೌನಜಾಗೃತಿಯ ಸಂಖ್ಯೆ ಕಡಿಮೆಯಾದರೂ ಮತ್ತೆ ಹಿಂಸೆ ಶುರುವಾದಾಗ ಮೊದಲಿನಂತೇ ಮುಂದುವರೆಯಿತು.

ಇದು ನಿಧಾನವಾಗಿ ಬೇರೆಬೇರೆ ದೇಶಗಳಿಗೂ ಹಬ್ಬಿತು. ಜರ್ಮನಿ, ಯುಗೋಸ್ಲಾವಿಯಾ, ಭಾರತ, ನೇಪಾಳ, ಅಮೆರಿಕ, ಆಸ್ಟ್ರೇಲಿಯಾ, ಫಿಲಿಪೀನ್ಸ್, ಮಾಲಿ, ಕೆನಡ, ಇಂಗ್ಲೆಂಡ್, ಇಟಲಿ, ಸ್ವಿಜರ್ಲೆಂಡ್, ಜಪಾನ್, ಫ್ರಾನ್ಸ್, ಸ್ವೀಡನ್, ಟರ್ಕಿ, ನೈರೋಬಿ, ದ. ಆಫ್ರಿಕಾ, ಮೆಕ್ಸಿಕೋ, ನೆದರ್‌ಲೆಂಡ್, ಉತ್ತರ ಐರ‍್ಲೆಂಡ್, ಸ್ಪೇನ್ ಹೀಗೇ ಹಲವಾರು ದೇಶಗಳ ಮಹಿಳೆಯರನ್ನು ಸಕ್ರಿಯವಾಗಿಸಿತು. ಉಳಿದ ದೇಶಗಳ ಸಂಘಟನೆಗೆ ಇಸ್ರೇಲಿನ ಸಮಸ್ಯೆ ಜೊತೆಗೆ ಸಂಬಂಧವಿರಲಿಲ್ಲ. ಅವರೆಲ್ಲ ತಂತಮ್ಮನ್ನು ಬಾಧಿಸುತ್ತಿದ್ದ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಜನಾಂಗೀಯ ಕಲಹ, ಯುದ್ಧ, ಅಣ್ವಸ್ತ್ರ, ಶಸ್ತ್ರಾಸ್ತ್ರ ತಯಾರಿಕೆ, ಮಹಿಳಾ ದೌರ್ಜನ್ಯ ಇತ್ಯಾದಿ ಮಾನವ ಹೃದಯಗಳ ನಡುವೆ ಅಸಹನೆ, ದ್ವೇಷ ಬಿತ್ತುವ ಎಲ್ಲ ಪ್ರಯತ್ನಗಳನ್ನು ಈ ಸಂಘಟನೆಯ ಮಹಿಳೆಯರು ಪ್ರತಿಭಟಿಸಿದರು.



ಚಿಕ್ಕ ಆದರೆ ಹರಿತವಾದ ಸಂದೇಶವುಳ್ಳ ಸ್ಲೋಗನ್ನುಗಳನ್ನು ಆ ಮಹಿಳೆಯರು ಹಿಡಿದರು. ಕೆಲ ಸ್ಲೋಗನ್ನುಗಳನ್ನು ನೋಡಿ:
‘ಇನ್ನೂ ಸುರಕ್ಷಿತ ವಿಶ್ವ, ಮಹಿಳೆಯರಿಗಾಗಿ’
‘ಅಹಿಂಸಾತ್ಮಕ ನಾಳೆ, ಮಕ್ಕಳ ಹಕ್ಕು’
‘ಯುದ್ಧಕ್ಕೆ ಋತುಚಕ್ರದ ಮೇಲೆ ಹೊಟ್ಟೆಯುರಿ’
‘ಇನ್ನೂ ಕಾರುಣ್ಯಮಯ ವಿಶ್ವ ಕಲ್ಪಿಸಿಕೊಳ್ಳಿ’
‘ಬೇಕಿರುವುದು ನ್ಯಾಯ, ಪ್ರತೀಕಾರವಲ್ಲ’

ಈ ಸಂಘಟನೆಯು ಬೇರೆಬೇರೆ ಅಹಿಂಸಾ ಮಾರ್ಗಗಳನ್ನೂ ಅನುಸರಿಸಿತು - ಕಪ್ಪು ಬಟ್ಟೆ ಧರಿಸಿ ರಸ್ತೆ ತಡೆ ಮಾಡುವುದು; ಮಿಲಿಟರಿ ಬೇಸ್ ಮತ್ತಿತರ ನಿಷೇಧಿತ ಪ್ರದೇಶಗಳಿಗೆ ಹೋಗುವುದು; ಸಾಕ್ಷಿಗಳೆದುರು ಅಹಿಂಸಾತ್ಮಕವಾಗಿ ಕಾನೂನು ಭಂಗ ಮಾಡುವುದು ಇತ್ಯಾದಿ.

೧೯೯೦ರಲ್ಲಿ ಯುಗೋಸ್ಲಾವಿಯಾದ ಮಹಿಳೆಯರು ಅಲ್ಲಿ ತೀವ್ರಗೊಳ್ಳತೊಡಗಿದ್ದ ರಾಷ್ಟ್ರೀಯತೆ ಹಾಗೂ ಆ ನೆಪದ ಹಿಂಸೆಯನ್ನು ನೇರವಾಗಿ ಖಂಡಿಸಿದರು. ರಾಷ್ಟ್ರವಾದಿಗಳ ರಕ್ತಪಾತದ ರಾಜಕಾರಣವನ್ನು ಟೀಕಿಸಿದರು. ಆದರೆ ಅವರನ್ನು ದೇಶದ್ರೋಹಿಗಳೆಂದು ಜರಿದು ಹಿಂಸಾತ್ಮಕ ಆಕ್ರಮಣ ನಡೆದವು. ಆದರೂ ಮಹಿಳೆಯರು ಮೌನ ಪ್ರತಿಭಟನೆ ನಿಲ್ಲಿಸಲಿಲ್ಲ. ಇಸ್ರೇಲಿನಲ್ಲೂ ಈ ಸಂಘಟನೆಯ ಮಹಿಳೆಯರಿಗೆ ವಿರುದ್ಧವಾಗಿ ‘ಭವಿಷ್ಯದ ಇಸ್ರೇಲ್’ ಎಂಬ ಹಸಿರು ಟೋಪಿ ಧರಿಸಿದ ಮಹಿಳಾ ಸಂಘಟನೆ ಶುರುಮಾಡಲಾಯಿತು. ಇವರನ್ನು ಅರಬ್ ಏಜೆಂಟರಂತೆ ನೋಡಲಾಯಿತು. ದಾರಿಹೋಕರು ‘ಸೂಳೆಯರು’, ‘ದ್ರೋಹಿಗಳು’ ಎಂದು ಜರಿದರು. ಅದೆಲ್ಲವನ್ನು ಘನತೆಯಿಂದ ಸಹಿಸಿ ಮೌನ ಪ್ರದರ್ಶನ ಮುಂದುವರೆಯಿತು.

ಭಾರತದಲ್ಲಿ ಇದು ೧೯೯೨ರಲ್ಲಿ ಶುರುವಾಯಿತು. ಮೊತ್ತಮೊದಲು ಬೆಂಗಳೂರಿನಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡುವ ‘ವಿಮೋಚನಾ’ ಸಂಸ್ಥೆ ಮೌನಜಾಗೃತಿಯನ್ನು ಸಂಘಟಿಸಿತು. ಅಯೋಧ್ಯಾ ರಾಮಮಂದಿರ ಗಲಾಟೆ ಮತ್ತು ಬಾಬ್ರಿ ಮಸೀದಿ ಧ್ವಂಸದ ವಿರುದ್ಧ, ಹಿಂದೂ ರಾಷ್ಟ್ರೀಯತೆ ಹೆಸರಿನ ಹಿಂಸಾ ರಾಜಕಾರಣದ ವಿರುದ್ಧ ವಿಮೆನ್ ಇನ್ ಬ್ಲಾಕ್ ಅನ್ನು ಪ್ರತಿ ಗುರುವಾರ ಸಂಘಟಿಸಲಾಯಿತು. ಚೆನ್ನೈ, ಮುಂಬೈ, ಕೊಲ್ಲಾಪುರ, ದೆಹಲಿ ಇತ್ಯಾದಿ ದೇಶದ ನಾನಾ ಕಡೆ ಅಸಹನೆ ಮತ್ತು ದ್ವೇಷದ ರಾಜಕಾರಣ ಹಬ್ಬುವುದು ಬೇಡ ಎಂದು ಮಹಿಳೆಯರು ಮೌನವಾಗಿ ಬೀದಿಬೀದಿಗಳಲ್ಲಿ ನಿಂತರು. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಕಾನೂನುಬದ್ಧವಾಗಿಯೇ ನಡೆಯುತ್ತಿರುವ ಪ್ರಭುತ್ವದ ಹಿಂಸೆಯನ್ನು ಅದು ಪ್ರಶ್ನಿಸಿತು. ರಾಜಕೀಯ ವಿಷಯಗಳ ಜೊತೆಗೇ ಮಹಿಳಾ ದೌರ್ಜನ್ಯವನ್ನೂ ವಿರೋಧಿಸಲಾಯಿತು. ವರದಕ್ಷಿಣೆ, ವಧುದಹನ, ಸ್ತ್ರೀ ಭ್ರೂಣಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ನೀಲಿಚಿತ್ರ ಮುಂತಾದ ವಿಷಯಗಳತ್ತ ಪ್ಲಕಾರ್ಡುಗಳು ಗಮನ ಸೆಳೆದವು.

***

ಯಾವುದೇ ದೇಶದ, ಯಾವುದೇ ಗುಂಪಿನ ಮಹಿಳೆಯರು ಒಗ್ಗೂಡಿ ವಿಮೆನ್ ಇನ್ ಬ್ಲಾಕ್ ಸಂಘಟಿಸಬಹುದು. ಮೆರವಣಿಗೆಯಿಲ್ಲ, ಧಿಕ್ಕಾರ ಕೂಗಬೇಕಿಲ್ಲ. ಸುಭವಾಗಿ ಜನರನ್ನು ಸೇರಿಸಬಹುದು, ಮಕ್ಕಳನ್ನೂ ಕರೆತರಬಹುದು. ವಿಮೆನ್ ಇನ್ ಬ್ಲಾಕ್ ಸಂಘಟನೆಗೆ ಸಂವಿಧಾನ ಇಲ್ಲ. ಮ್ಯಾನಿಫೆಸ್ಟೋ ಇಲ್ಲ. ಕ್ರಿಯೆ ಮತ್ತು ಮಾತುಗಳಲ್ಲೇ ಅದರ ಆಶಯ ಸ್ಪಷ್ಟವಾಗಬೇಕು. ಒಂದು ಸ್ತ್ರೀವಾದಿ ತಿಳುವಳಿಕೆ ಗಟ್ಟಿಯಾಗಿ ಅದರ ಬೆನ್ನಿಗಿದೆ: ಯುದ್ಧಕಾಲದಲ್ಲಿ-ಶಾಂತಿ ಕಾಲದಲ್ಲಿ; ಆಂತರಿಕ ಅಥವಾ ಬಾಹ್ಯ ಸ್ವರೂಪಗಳಲ್ಲಿ ಪುರುಷ ಸಮಾಜ ಎಸಗುವ ದೌರ್ಜನ್ಯ ಅಂತರ್‌ಸಂಬಂಧ ಹೊಂದಿದೆ ಎನ್ನುವುದು. ಹಿಂಸೆ ದೊಡ್ಡ ಜನಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನವಾಗಿದೆ ಎಂಬ ಅರಿವೂ ಅದಕ್ಕಿದೆ. ಆದ್ದರಿಂದ ಅದು ಹಿಂಸೆಯನ್ನು ವಿರೋಧಿಸುತ್ತದೆ. ಹಿಂಸೆ ವಿರೋಧಿಸುವ ಪುರುಷರೂ ಈ ಸಂಘಟನೆಯ ಜೊತೆಗಿದ್ದಾರೆ.

ಇದಕ್ಕೀಗ ವಿಶ್ವಾದ್ಯಂತ ೧೦ ಸಾವಿರಕ್ಕಿಂತ ಅಧಿಕ ಕ್ರಿಯಾಶೀಲ ಮಹಿಳೆಯರು ಕಾರ್ಯಕರ್ತರಾಗಿದ್ದಾರೆನ್ನುವ ಅಂದಾಜಿದೆ. ಜೆರುಸಲೇಂ, ಬೀಜಿಂಗ್, ಸರ್ಬಿಯಾ, ಬ್ರಸೆಲ್ಸ್ ಸೇರಿದಂತೆ ಕೆಲವು ಕಡೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಿದೆ. ಎಲ್ಲ ದೇಶಗಳ ಸಂಘಟನೆಗಳ ಹೆಣ್ಣುಮಕ್ಕಳು ಇ ಮೇಲ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರೆ. ಮಿಲೆನಿಯಂ ಶಾಂತಿ ಪ್ರಶಸ್ತಿ ಲಭಿಸಿದೆ. ವರ್ಲ್ಡ್ ಸೋಶಿಯಲ್ ಫೋರಂನ ಸಹಸಂಘಟನೆಯಾಗಿ ಜಾಗತೀಕರಣ ಮತ್ತು ಸಾಮ್ರಾಜ್ಯಶಾಹಿಯ ಭಿನ್ನ ರೂಪಗಳನ್ನೂ ವಿರೋಧಿಸುತ್ತಿದೆ.

ಹೆಣ್ಣೇನೂ ಅಭಿಜಾತ ಅಹಿಂಸಾ ಪ್ರತಿಪಾದಕಳಲ್ಲ. ಆದರೆ ನ್ಯಾಯ ಮತ್ತು ದಮನ ಈ ಎರಡೂ ಏನು ಎನ್ನುವುದು ಒಂದಲ್ಲ ಒಂದು ಕಾರಣಕ್ಕಾಗಿ ದಮನಿತಳಾದ ಮಹಿಳೆಗೆ ಚೆನ್ನಾಗಿ ಗೊತ್ತು. ಎಂದೇ ಯುದ್ಧ, ಹಿಂಸೆಯ ಅನುಭವ ಗಂಡು ಮತ್ತು ಹೆಣ್ಣಿಗೆ ತುಂಬ ಭಿನ್ನವಾಗಿದೆ. ಹಿಂಸೆ ಕುರಿತ ಸ್ತ್ರೀವಾದಿ ವಿಶ್ಲೇಷಣೆ ಬೇರೆಯೇ ಇರುತ್ತದೆ. ಎಲ್ಲಿ ಹಿಂಸೆಯಿದೆಯೋ ಅಲ್ಲಿ ದೌರ್ಜನ್ಯ ಇದ್ದೇ ಇರುತ್ತದೆ. ಎಂದೇ ಹುತಾತ್ಮಳಾಗಬಯಸದೇ ತನ್ನ ಭಿನ್ನ ದೃಷ್ಟಿ ಹಾಗೂ ಶಕ್ತಿಯನ್ನು ತೋರಿಸುವುದು ಈ ಇಂಥ ಸಂಘಟನೆಗಳ ಹಿಂದಿನ ತಾತ್ವಿಕತೆಯಾಗಿದೆ.

***

ಆಳ್ವಿಕರಿಗೊಂದು ಅಧಿಕಾರವಿದ್ದಂತೆ ಬೀದಿಗೊಂದು ಅಧಿಕಾರವಿರುತ್ತದೆ. ಅಧಿಕಾರ ಒಂದೆಡೆ ಸಂಚಯವಾಗುವುದನ್ನು ತಡೆಗಟ್ಟಿ ವಿಕೇಂದ್ರೀಕರಿಸುವ ಒಂದು ಚಲನಶೀಲ ಸಮತೋಲನದ ಶಕ್ತಿ ಬೀದಿಗಿರುತ್ತದೆ. ಬೀದಿಗಿರುವ ಶಕ್ತಿ ಮತ್ತು ಅಧಿಕಾರ ಎರಡನ್ನೂ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸಮಾಜ ಸೋತಿರುವುದರಿಂದಲೇ ನಾಗರಿಕ ಸಮಾಜದಲ್ಲೂ ಅನಾಗರಿಕ ಕ್ರೌರ್ಯ ಅನಾಯಾಸವಾಗಿ ಪ್ರವೇಶ ಪಡೆದಿದೆ.

ಹಿಂಸೆಗೆಳಸದಂತೆ ಅತ್ಯಂತ ಸರಳವಾಗಿ ಜನರನ್ನು ತಲುಪುವ ಸಾಧ್ಯತೆ ಬೀದಿಗಿದೆ. ವಂಚಿತ ಮತ್ತು ಅಸಹಾಯಕ ವ್ಯಕ್ತಿ ಇಡೀ ಸಮಾಜದ ಅಂತಸ್ಸಾಕ್ಷಿ ಪ್ರಶ್ನಿಸಲು ಹಾಗೂ ತನ್ನೆದೆಯೊಳಗಿನ ಸಿಟ್ಟನ್ನು ನೈತಿಕ ಆಕ್ರೋಶವಾಗಿಸಲು ಬೀದಿಯನ್ನು ಬಳಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ದೌರ್ಜನ್ಯ ನಿಲ್ಲಿಸುವಂತೆ ಹಕ್ಕೊತ್ತಾಯ ತರಲು, ವಂಚಿಸಲ್ಪಟ್ಟ ರಾಜಕೀಯ ಅವಕಾಶವನ್ನು ಸಾಮುದಾಯಿಕವಾಗಿ ಕಂಡುಕೊಳ್ಳಲು ಹಾಗೂ ಸೋದರತೆ-ಮಾನವತೆಗಳನ್ನು ಹಂಚಲು ಈ ಸುಲಭ ವಿಧಾನ ಬಳಸಿಕೊಳ್ಳಲೇಬೇಕು.

ಮಾರ್ಚ್ ೭ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ೨೦೧೩ರಲ್ಲಿ ಮಂಗಳೂರಿನಲ್ಲಿ ‘ವಿಮೆನ್ ಇನ್ ಬ್ಲಾಕ್’ ಅನ್ನು ಸಂಘಟಿಸಿತು. ೨೦೧೪ರಲ್ಲಿ ಮೈಸೂರಿನಲ್ಲಿ ‘ವಿಮೋಚನಾ’ ಸಂಸ್ಥೆಯ ಸಹಯೋಗದೊಂದಿಗೆ ಮಾರ್ಚ್ ೭ರ ಸಂಜೆ ವಿಮೆನ್ ಇನ್ ಬ್ಲಾಕ್‌ನಲ್ಲಿ ೧೫೦೦ಕ್ಕೂ ಮಿಕ್ಕಿ ಮಹಿಳೆಯರು ಪಾಲ್ಗೊಂಡಿದ್ದರು.



ಸಂಗಾತಿಗಳೇ, ಕೇವಲ ಮಹಿಳಾ ದಿನಾಚರಣೆಯಷ್ಟೇ ಅಲ್ಲ, ಒಂದು ಊರಿನಲ್ಲಷ್ಟೇ ಅಲ್ಲ; ಎಲ್ಲೇ ಇರಿ, ಯಾವುದೇ ಅನ್ಯಾಯ ಕುರಿತು ಆಕ್ರೋಶ ಹೊಂದಿರಿ, ನಿಮ್ಮ ಮನದಲ್ಲಿರುವುದನ್ನು ಪ್ಲಕಾರ್ಡುಗಳಲ್ಲಿ ಹಿಡಿದು ಕಪ್ಪು ಉಡುಗೆ ಧರಿಸಿ ನಿಲ್ಲಿ. ನಿಮ್ಮ ಸಾತ್ವಿಕ ಸಿಟ್ಟು ಸಮಾಜದ ನೈತಿಕ ಧೈರ್ಯವಾಗಿ ಭಾಷಾಂತರಗೊಳ್ಳಬೇಕಾದರೆ ಒಂದು ಹೆಜ್ಜೆ ಮುಂದಿಡಬೇಕಾದ ಅನಿವಾರ್ಯತೆಯಿದೆ, ನೆನಪಿಡಿ.

ಅವಶ್ಯವೆನಿಸಿದಾಗಲೆಲ್ಲ ನಿಮ್ಮನಿಮ್ಮ ಊರುಗಳಲ್ಲಿ ಈ ಅಹಿಂಸಾತ್ಮಕ ಪ್ರಯೋಗ ಮಾಡಿ ನೋಡಿ.



No comments:

Post a Comment