Tuesday, 17 February 2015

ಜ್ಯೋತಿಷ್ಯ - ನೀರಿಲ್ಲದ ಬಾವಿ




(www.downtoearth.org)

೨೦೧೫, ಜನವರಿಯ ಮೊದಲ ವಾರದಲ್ಲಿ ಮುಂಬೈಯಲ್ಲಿ ೧೦೨ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧಿವೇಶನ ನಡೆಯಿತು. ಖಗೋಳಶಾಸ್ತ್ರ, ಭೌತ, ರಸಾಯನ ಶಾಸ್ತ್ರ ವಿಜ್ಞಾನ ಗೋಷ್ಠಿಗಳ ನಡುವೆಯೇ ಪ್ರಾಚೀನ ಭಾರತೀಯ ವಿಜ್ಞಾನ ಕುರಿತ ಗೋಷ್ಠಿಯೂ ನಡೆಯಿತು. ಭಾರತದ ಎಂಟು ಸಂಸ್ಕೃತ ಪಂಡಿತರು ಏಳು ಸಾವಿರ ವರ್ಷಗಳ ಹಿಂದೆಯೇ ಗ್ರಹಗಳಿಂದ ಗ್ರಹಗಳಿಗೆ ಭಾರೀ ಹಾರಾಟ ನಡೆಯುತ್ತಿತ್ತು; ಅದರ ಇಂಧನವಾಗಿ ಆನೆಯ ಮೂತ್ರ, ಹಂದಿಯ ನೆಣ ಮತ್ತಿತರ ವಸ್ತುಗಳನ್ನು ಬಳಸುತ್ತಿದ್ದರು ಎಂದು ಪ್ರಬಂಧ ಮಂಡಿಸಿದರು. ಅದೆಲ್ಲಕ್ಕೂ ಋಷಿಗಳ ಗ್ರಂಥದಲ್ಲಿ ಆಧಾರಗಳಿವೆ; ಪೈಥಾಗೊರಸನ ಪ್ರಮೇಯವನ್ನು ಗ್ರೀಕರಿಗಿಂತ ಮೊದಲೇ ನಾವು ಕಂಡುಹಿಡಿದಿದ್ದೆವು; ಅರಬರಿಗಿಂತ ಮೊದಲೇ ನಮಗೆ ಬೀಜಗಣಿತ ಗೊತ್ತಿತ್ತು ಇತ್ಯಾದಿಯಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದರು. ಅದೇವೇಳೆಗೆ ಉತ್ತರಾಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ರಮೇಶ್ ಪೋಕ್ರಿಯಾಲ್ ಪ್ರಪಂಚದಲ್ಲೇ ಅತ್ಯುನ್ನತ ವೈಜ್ಞಾನಿಕ ಜ್ಞಾನ ಎಂದರೆ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಎಂದು ಹೇಳಿದರು. ಅವರ ಪ್ರಕಾರ ಮಹರ್ಷಿ ಕಣಾದ ಎರಡನೇ ಶತಮಾನದಲ್ಲೇ ಅಣುವಿಜ್ಞಾನ ಕುರಿತು ಪರೀಕ್ಷೆ ಕೈಗೊಂಡಿದ್ದ. ಗಣೇಶ ಮತ್ತು ಕರ್ಣನ ಹುಟ್ಟು ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನೆಟಿಕ್ ಇಂಜಿನಿಯರಿಂಗ್ ಬಗ್ಗೆ ನಮ್ಮ ದೇಶದವರು ಆಗಲೇ ಎಂಥ ಸಾಧನೆ ಮಾಡಿದ್ದರು ಎನ್ನುವುದನ್ನು ತೋರಿಸುತ್ತದೆ ಎಂದು ಸಾಕ್ಷಾತ್ ಪ್ರಧಾನಿಯೇ ಹೇಳಿದರು.

ಶುದ್ಧ ವಿಜ್ಞಾನ ಕಲಿತು ಬೋಧಿಸುವ, ಸಂಶೋಧನೆ ನಡೆಸುವ ವಿಜ್ಞಾನಿಗಳಿಗೆ ಇಂತಹ ಪ್ರತಿಪಾದನೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಇರುಸುಮುರುಸಾಯಿತು. ಆದರೆ ಇದು ವಾಸ್ತವ. ನಾವು ಖಗೋಳ ವಿಜ್ಞಾನವನ್ನು ಭವಿಷ್ಯ ಹೇಳುವ ಜ್ಯೋತಿಷ್ಯ ಶಾಸ್ತ್ರವಾಗಿಸಿ ಸಹಸ್ರಮಾನಗಳೇ ಕಳೆದಿವೆ. ಪಾರಂಪರಿಕವಾದ ಎಲ್ಲವೂ ಜ್ಞಾನ-ವಿಜ್ಞಾನ-ಧಾರ್ಮಿಕತೆ ಎನಿಸಿಕೊಂಡು ಪ್ರಶ್ನಾತೀತವಾಗತೊಡಗಿವೆ. ಯಾವುದೇ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ ತೆಗೆದರೂ ಅದರಲ್ಲಿ ವಾರಭವಿಷ್ಯ, ದಿನ ಭವಿಷ್ಯ, ಮಾಸ ಭವಿಷ್ಯದ ಕಾಲಮ್ಮು ಇರುತ್ತದೆ. ಸುದ್ದಿಗೆ ಜಾಗವಿಲ್ಲದೆ ಇಡೀ ಮುಖಪುಟವನ್ನು ಜಾಹೀರಾತು ಆಕ್ರಮಿಸಿದರೂ ಭವಿಷ್ಯ ಪ್ರಕಟವಾಗುವ ಜಾಗವನ್ನು ಯಾರೂ ಆಕ್ರಮಿಸಲಾರರು. ಮನುಷ್ಯ ಚಂದ್ರನ ಮೇಲಿಳಿದು, ಮಂಗಳನ ಮೇಲಿಳಿವ ಕಾಲ ಬಂದರೂ ಚಂದ್ರನನ್ನೂ, ಮಂಗಳನನ್ನೂ ಗ್ರಹಗಳೆನ್ನುತ್ತ ಅವರ ಚಲನೆಯಿಂದ ಮನುಷ್ಯನ ದೈನಂದಿನ ಬದುಕಿನ ಮೇಲಾಗುವ ಪರಿಣಾಮವನ್ನು ಊಹಿಸುವ ಜ್ಯೋತಿಷಿ ಕಂ ಢೋಂಗಿ ಆಧ್ಯಾತ್ಮ ಗುರುಗಳು ಎಲ್ಲೆಲ್ಲೂ ಕಾಣತೊಡಗಿದ್ದಾರೆ. ಮಾರುಕಟ್ಟೆ ಆರ್ಥಿಕತೆಯ ಅನಿಶ್ಚಿತತೆ ಮತ್ತು ಆತಂಕಗಳು ವಾಸ್ತು ಹೇಳುವವರ, ಜ್ಯೋತಿಷಿಗಳ ವ್ಯಾಪಾರ ಹುಲುಸಾಗಿ ಬೆಳೆಯಲು ಕಾರಣವಾಗಿದೆ.

ಈಗ ಆತಂಕದ ಪಟ್ಟಿಯಲ್ಲಿ ಅತ್ಯಾಚಾರವೂ ಸೇರಿದೆ. ಟಿವಿ ಚಾನೆಲ್ಲುಗಳಲ್ಲಿ ಪ್ರತಿದಿನ ಬೆಳಗ್ಗೆ ತ್ರಿಕಾಲ ಜ್ಞಾನಿಗಳು ಪಾಮರರ ಹಣೆಬರಹ ಓದುತ್ತ, ಬರೆಯುತ್ತ, ಕೂಡಿ ಗುಣಿಸುವ ಲೆಕ್ಕ ಮಾಡಿ, ಯಾವಯಾವ ಗ್ರಹನಕ್ಷತ್ರದವರ ಮೇಲೆ ಯಾವಾಗ ಅತ್ಯಾಚಾರ ಆದೀತೆಂದು ಮೊದಲೇ ಹೇಳತೊಡಗಿದ್ದಾರೆ!

ಇದರ ಜೊತೆಗೆ ಪ್ರಜಾಪ್ರಭುತ್ವ ದೇಶದಲ್ಲಿ ಜನಪ್ರತಿನಿಧಿಗಳಿಗೆ, ಮಾಧ್ಯಮಗಳಿಗೆ ಪೂರಕವಾಗಿ ನ್ಯಾಯಾಲಯದ ನಡೆಗಳೂ ಇರುವುದು ಆತಂಕ ಹುಟ್ಟಿಸುವಂತಿದೆ. ೨೦೦೧ರಲ್ಲಿ ಆಂಧ್ರ ಹೈಕೋರ್ಟ್ ಜ್ಯೋತಿಷ್ಯ ಕುರಿತು ನೀಡಿದ ತೀರ್ಪಿನಲ್ಲಿ ಅದನ್ನೊಂದು ಜ್ಞಾನ ಎಂದು ಪರಿಗಣಿಸಿತು. ಆ ಮೇಲೆ ವಿಶ್ವವಿದ್ಯಾಲಯಗಳೂ ಅದನ್ನು ಕಲಿಸುವ ವಿಭಾಗಗಳನ್ನು ತೆರೆದವು. ಎನ್‌ಡಿಎ ಸರ್ಕಾರ ಬಂದಾಗ ಎಲ್ಲೆಲ್ಲೂ ಸಂಸ್ಕೃತ ವಿದ್ಯಾಲಯಗಳು ತೆರೆಯಲ್ಪಟ್ಟವು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಲಾಯಿತು. ಆದರೆ ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಕಲಿಸುವುದು ಹಿಮ್ಮುಖ ಹೆಜ್ಜೆಯಾಗಿದೆ ಎಂದು ಕೋರ್ಟು ಹೇಳಿದರೂ ಆ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ೨೦೦೪ರಲ್ಲಿ ಜ್ಯೋತಿಷ್ಯ ಕಲಿಸುವುದು ಧರ್ಮವನ್ನು ಪ್ರತಿಪಾದಿಸಿದಂತೆ ಅಲ್ಲ ಎಂದು ಮೇಲ್ಮನವಿಯೊಂದನ್ನು ರದ್ದು ಮಾಡಿತು. ೨೦೧೧ರಲ್ಲಿ ಮುಂಬೈ ಹೈಕೋರ್ಟು ಸಹಾ ಸುಪ್ರೀಂಕೋರ್ಟಿನ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿತು.


(ಸಾತ್ವಿಕ್ ಗಡೆ)
ಈಗಿನ ಯುವಪೀಳಿಗೆ ಶುದ್ಧವಿಜ್ಞಾನ, ಸಂಶೋಧನೆಗಿಂತ ಸುಲಭ ಗಳಿಕೆಯ ಮಾರ್ಗದತ್ತಲೇ ತಮ್ಮ ಚಿತ್ತ ನೆಟ್ಟಿರುವಾಗ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ; ಮೂಢನಂಬಿಕೆಗೆ ಅವರು ದಾಸರಾಗದಂತೆ ಮಾಡುವ ನಿಟ್ಟಿನಲ್ಲಿ ಜನನಾಯಕರು ಹೆಜ್ಜೆಯಿಡಬೇಕು. ಆದರೆ ಬರಬರುತ್ತ ಜ್ಯೋತಿಷ್ಯವು ಹೂಡಿಕೆಯ ಅವಶ್ಯಕತೆಯಿಲ್ಲದ ಲಾಭದಾಯಕ ಹೈಟೆಕ್ ಉದ್ಯಮವಾಗಿ ಬೆಳೆಯುತ್ತಿದೆ. ವಿದ್ಯಾವಂತರೂ, ವಿಜ್ಞಾನಿಗಳೂ, ಜನನಾಯಕರೂ ಕಾಣದ ಶಕ್ತಿಯ ಕುರಿತು ಭಯ ತಾಳುತ್ತ ಜ್ಯೋತಿಷಿಗಳ ಹಿಂದೆ ಬೀಳತೊಡಗಿದ್ದಾರೆ. ಪೂರಕ ಡೇಟಾ ಒದಗಿಸಿದರೆ ಭವಿಷ್ಯ ಹೇಳುವ ಸಾಫ್ಟ್‌ವೇರುಗಳು ಬಂದಿವೆ. ಇವತ್ತಿಗೂ ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಕಲಿಸಲ್ಪಡುತ್ತಿದೆ. ಜೊತೆಗೆ ಮಂತ್ರ, ತಂತ್ರ ಮತ್ತು ಯೋಗವನ್ನೂ ಸೇರಿಸಿ ವೇದಿಕ್ ವಿಶ್ವವಿದ್ಯಾಲಯ ತೆರೆಯುವ ಪ್ರಸ್ತಾಪವೂ ಇದೆ.

ಪುರಾಣವನ್ನು ಚರಿತ್ರೆಗೆ, ಕಲ್ಪನೆಯನ್ನು ವಿಜ್ಞಾನಕ್ಕೆ ಕಸಿಮಾಡಬಾರದು. ಪರಂಪರೆ, ಇತಿಹಾಸದ ಜ್ಞಾನವಿರಬೇಕು, ಅದು ಅಂಧಾಭಿಮಾನ ಹೆಚ್ಚಿಸುವ ಬೊಗಳೆಯಾಗಬಾರದು. ದೇವರನ್ನು, ಮನುಷ್ಯನ ಖಾಸಗಿ ನಂಬಿಕೆಗಳನ್ನು ರಾಜಕೀಯಕ್ಕೆ ಎಳತಂದರೆ; ಪಂಚತಂತ್ರ ಕತೆಗಳನ್ನು ಇತಿಹಾಸವೆಂದು ನಂಬಿದರೆ ಏನಾಗಬಹುದೋ ಅದೆಲ್ಲ ಈಗ ಆಗುತ್ತಿದೆ. ವೈಜ್ಞಾನಿಕ ಜ್ಞಾನ ಎಂದು ಪರಿಗಣಿಸಲ್ಪಟ್ಟ ಜ್ಯೋತಿಷ್ಯ ಭಾರತದ ಮಟ್ಟಿಗೆ ಜನರನ್ನು ಮೌಢ್ಯಕ್ಕೆ ಬಲಿಯಾಗುವಂತೆ, ವೈಜ್ಞಾನಿಕ ಮನೋಭಾವ ಬೆಳೆಯದಂತೆ ಮಾಡಿರುವ ಕೀರ್ತಿಯನ್ನೂ ಪಡೆದಿದೆ. ಜ್ಯೋತಿಷಿಗಳ ಮನೆಯವರ ಬದುಕು ನೋಡಿದರೆ ಆ ಜ್ಞಾನದ ನಿಖರತೆ ಎಷ್ಟು ಸುಳ್ಳೆನ್ನುವುದು ಬಯಲಾಗುತ್ತದೆ. ಆದರೆ ಲೋಪ ಮುಚ್ಚಿಕೊಳ್ಳಲು ವಿಧಿಲಿಖಿತ, ಕರ್ಮ ಸಿದ್ಧಾಂತಗಳ ಸೃಷ್ಟಿಸಿಕೊಳ್ಳಲಾಗಿದೆ. ತಾವು ಹೇಳುವುದರ ಮೇಲೆ ತಮಗೇ ನಂಬಿಕೆಯಿಲ್ಲದಿದ್ದರೂ ಇತರರು ಅದನ್ನು ನಂಬುವಂತೆ ಮಾಡಲು ನಡೆಸುವ ಹುನ್ನಾರಗಳಲ್ಲಿ ನಮ್ಮ ನೆಲದ ಖಗೋಳ ವಿಜ್ಞಾನ-ಗಣಿತ ಜ್ಞಾನ ಹಾಗೂ ವೈಜ್ಞಾನಿಕ ಮನೋಭಾವಗಳನ್ನು ಬಲಿಕೊಟ್ಟ ದುರಂತ ಅಡಗಿದೆ.


(www.antiserious.com)

ವೈದಿಕ ಆಚರಣೆಗಳ ಕುರಿತಾಗಿ ಹೇಳುವ ವೇದಾಂಗದ ಆರು ಭಾಗಗಳಲ್ಲಿ ಜ್ಯೋತಿಷ್ಯವೂ ಒಂದು. ಮೊದಮೊದಲು ಯಜ್ಞಯಾಗಾದಿಗಳಂತಹ ಬಲಿ ಆಚರಣೆಯನ್ನು ಎಂದು ಮಾಡಬೇಕೆಂದು ನಿರ್ಧರಿಸುವ ಕ್ಯಾಲೆಂಡರ್ ಆಗಿ ಭಾರತದ ಜ್ಯೋತಿಷ್ಯ ಶಾಸ್ತ್ರ ಅಸ್ತಿತ್ವದಲ್ಲಿತ್ತು. ಆಗ ಗ್ರಹಗಳ ಕುರಿತು, ಅವುಗಳ ಚಲನೆ ಕುರಿತು ಯಾವ ಮಾತೂ ಹೇಳಿರಲಿಲ್ಲ. ಮೊದಲಿನ ತಿಳುವಳಿಕೆಯಲ್ಲಿ ಗ್ರಹವೆಂದರೆ ಅಸುರ, ರಾಕ್ಷಸ. ೨ನೇ ಶತಮಾನದ ಯವನೇಶ್ವರ ಶಕರಾಜ ಮೊದಲನೇ ರುದ್ರದಮನನ ಆಸ್ಥಾನದಲ್ಲಿದ್ದ. ಆಗ ಯವನಜಾತಕ ಎಂಬ ಗ್ರೀಕ್ ಪುಸ್ತಕದ ಅನುವಾದ ಸಂಸ್ಕೃತದಲ್ಲಿ ಬರೆಯಲ್ಪಟ್ಟಿತು. ವಾರದ ಏಳು ದಿನಗಳಿಗೆ ಏಳು ಗ್ರಹಗಳನ್ನು ಕೂರಿಸಿ, ೧೨ ರಾಶಿಗಳ ಗುರುತಿಸುವುದನ್ನು ಭಾರತೀಯರು ಈ ಜ್ಞಾನದಿಂದಲೇ ಎರವಲು ಪಡೆದರು.

ಎಲ್ಲಿಂದ ಎರವಲು ಪಡೆಯಿತೋ, ಯಾವಾಗ ತನ್ನ ಸ್ವಂತ ಜ್ಞಾನ ಸಂಪಾದಿಸಿತೋ - ಈ ಎಲ್ಲ ಸಹಸ್ರಮಾನಗಳಲ್ಲಿ ಜ್ಯೋತಿಷ್ಯ ಭಾರತೀಯರ ದಿನಬದುಕಿನಲ್ಲಿ ಹಾಸುಹೊಕ್ಕಾಗಿ ಬೆಳೆಯಿತು. ಹುಟ್ಟಿದ ಗಳಿಗೆಯ ಆಧಾರದ ಮೇಲೆ ಬರಲಿರುವ ಕೇಡನ್ನು ಮೊದಲೇ ಊಹಿಸಿ ಅದರಿಂದ ಪಾರಾಗುವ ವಿಧಾನಗಳ ಹೇಳುವ ದಾರಿಯಾಗಿ ಜ್ಯೋತಿಷ್ಯ ರೂಪಾಂತರಗೊಂಡಿತು. ದೈನಂದಿನ ಬದುಕಿನಲ್ಲಿ ಇಡುವ ಪ್ರತಿ ಹೆಜ್ಜೆಗೂ ‘ಮುಹೂರ್ತ’ ನೋಡುವ ಪರಿಪಾಠ ಬೆಳೆಯುತ್ತ ಬಂತು. ಇವತ್ತಿನ ತಂತ್ರಜ್ಞಾನ, ಆಧುನಿಕತೆಯ ಕಾಲದಲ್ಲೂ ಸುಖದುಃಖಕೇಡುಗಳ ಸಹಜವಾಗಿ ಎದುರಿಸುವುದು, ಸ್ವಸಾಮರ್ಥ್ಯದಿಂದ ಬದುಕನ್ನು ಅದರ ಎಲ್ಲ ಏರಿಳಿತ, ಬಣ್ಣಗಳೊಡನೆ ಅರ್ಥಮಾಡಿಕೊಳ್ಳುವುದು ಅಸಾಧ್ಯ ಎನ್ನುವ ನಂಬಿಕೆ ಬಲವಾಗುತ್ತಿದೆ.

ಇದು ಕೇವಲ ಹಿಂದೂ ಧರ್ಮದ, ಭಾರತೀಯರ ನಂಬಿಕೆ ಮಾತ್ರವಲ್ಲ. ಗ್ರೀಕ್, ಈಜಿಪ್ಟ್, ಬ್ಯಾಬಿಲೋನಿಯಾ, ಚೀನಾ ಜ್ಯೋತಿಷ್ಯ ಭಾರತದ ಹಿಂದೂ ಜ್ಯೋತಿಷ್ಯಕ್ಕಿಂತ ಹಳೆಯವು. ಪಾಶ್ಚಿಮಾತ್ಯ ಜ್ಯೋತಿಷ್ಯ ವ್ಯಕ್ತಿಯೊಬ್ಬ ಹುಟ್ಟಿದಾಗಿನ ಸೂರ್ಯನ ಸ್ಥಾನವನ್ನನುಸರಿಸಿ ಭವಿಷ್ಯ ನಿರ್ಧರಿಸಿ ಹೇಳುವ ವಿಧಾನವಾಗಿದೆ. ಅಲ್ಲಿ ಒಂದು ತಿಂಗಳಿನಲ್ಲಿ ಹುಟ್ಟಿದ ಎಲ್ಲರ ಭವಿಷ್ಯವೂ ಒಂದೇ. ಜನ್ಮನಕ್ಷತ್ರಗಳ ಪರಿಗಣನೆಯಿಲ್ಲ. ಅದನ್ನು ಕ್ರಿ. ಶ. ೨ನೇ ಶತಮಾನದಲ್ಲಿ ಅಲೆಕ್ಸಾಂಡ್ರಿಯಾದ ಟಾಲೆಮಿ ಬರೆದ ‘ಟೆಟ್ರಾಬಿಬ್ಲೋಸ’ ಎಂಬ ಪಠ್ಯದ ಆಧಾರದ ಮೇಲೆ ಹೇಳಲಾಗುತ್ತದೆ. ಟಾಲೆಮಿಯ ಬರಹವು ಅದಕ್ಕಿಂತ ಪೂರ್ವದಲ್ಲಿದ್ದ ಬ್ಯಾಬಿಲೋನ್ ಹಾಗೂ ಹೆಲೆನಿಸ್ಟಿಕ್ ಪರಂಪರೆಯ ಆಧಾರದ ಮೇಲೆ ರಚಿತವಾಗಿದೆ. ಕ್ರಿ.ಪೂ ೨-೩ನೇ ಶತಮಾನದ ಸುಮಾರಿಗೆ ಮೆಡಿಟರೇನಿಯನ್ ಆಸುಪಾಸು, ಅದರಲ್ಲೂ ಮುಖ್ಯವಾಗಿ ಈಜಿಪ್ಟಿನಲ್ಲಿ ಚಾಲ್ತಿಗೆ ಬಂದ ಟಾಲೆಮಿಯ ಜ್ಯೋತಿಷ್ಯ ನಂತರ ಏಷ್ಯಾ, ಚೈನಾ, ಯೂರೋಪುಗಳಿಗೂ ಚಲಿಸಿ ಅಲ್ಲಿನ ಸ್ಥಳೀಯ ಜ್ಞಾನದ ಜೊತೆ ಬೆಳೆಯಿತು. ಜ್ಯೋತಿಷ್ಯ ಮತ್ತು ನಂಬಿಕೆಗಳು ಧರ್ಮ ಹಾಗೂ ದೇವರ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ ಎಂದು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮದ ಪಂಡಿತರು ಅದನ್ನು ವಿರೋಧಿಸಿದರೂ ಯೂರೋಪಿನಲ್ಲಿ ಭವಿಷ್ಯವಾಣಿ ಹೇಳುವವರು ಉದಯಿಸುತ್ತ ಬಂದರು.

ಸರ್ವೆ ಪ್ರಕಾರ ೨೫% ಅಮೆರಿಕನ್ನರು ಭವಿಷ್ಯ, ಭವಿಷ್ಯವಾಣಿಯನ್ನು ನಂಬುತ್ತಾರೆ. ಮಹಾಯುದ್ಧದ ಕಾಲದಲ್ಲಿ ವಾರದಿಂದ ವಾರಕ್ಕೆ ಹಿಟ್ಲರ್‌ಗೆ ಯಾರೋ ಭವಿಷ್ಯ ನುಡಿಯುತ್ತಿದ್ದು ಆದ್ದರಿಂದಲೇ ಆತ ಯಶಸ್ವಿಯಾಗುತ್ತಿದ್ದಾನೆನ್ನುವುದು ಬ್ರಿಟನ್ನಿನ ನಂಬಿಕೆಯಾಗಿತ್ತು. ಬ್ರಿಟಿಷ್ ಇಂಟೆಲಿಜೆನ್ಸ್ ಎಂಐ೫ ಲೂಯಿ ಡಿ ವೋಲ್ ಎಂಬ ಜ್ಯೋತಿಷಿಯನ್ನು ಮಹಾಯುದ್ಧದ ವೇಳೆಗೆ ನೇಮಿಸಿಕೊಂಡಿತ್ತು. ಆದರೆ ಲೂಯಿಯ ಭವಿಷ್ಯ ಸುಳ್ಳಾದಹಾಗೆ ಅವ ನಿಷ್ಪ್ರಯೋಜಕ ಎಂದು ಕೈಬಿಡಲಾಯಿತು. ರೊನಾಲ್ಡ್ ರೇಗನ್ ಮೇಲೆ ಕೊಲೆ ಯತ್ನ ಆದಾಗ ಅವರ ಪತ್ನಿ ನ್ಯಾನ್ಸಿ ರೇಗನ್ ಜೋನ್ ಕಿಗ್ಲೆ ಎಂಬ ಜ್ಯೋತಿಷಿಯನ್ನು ವೈಟ್‌ಹೌಸಿನ ಅಧಿಕೃತ ಜ್ಯೋತಿಷಿಯನ್ನಾಗಿ ನೇಮಿಸಿದ್ದರು. ಆದರೆ ಈ ನಡೆ ತೀವ್ರ ಟೀಕೆಗೊಳಗಾದಾಗ ಅವರನ್ನು ಕೈಬಿಡಲಾಯಿತು.

ತನ್ನ ಬದುಕು ಮಾತ್ರ ಏಕೆ ಹೀಗಿದೆ? ಇದರ ಆಗುಹೋಗುಗಳಿಗೆ ಕಾಣದ ಯಾವುದೋ ಶಕ್ತಿ ಕಾರಣವೇ? ಆ ಶಕ್ತಿ ಯಾವುದು? ಅದನ್ನು ಮುಂಚಿತ ತಿಳಿಯಬಹುದೇ? ಬರಲಿರುವ ವಿಪತ್ತನ್ನು ಸರಿಪಡಿಸಿಕೊಳ್ಳಬಹುದೇ? ಇದು ಎಲ್ಲರನ್ನು ನಿರಂತರ ಕಾಡುವ ವಿಷಯ. ಈ ಮನುಷ್ಯ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡು ನಾನಾ ಶಾಸ್ತ್ರಗಳು ಹುಟ್ಟಿಕೊಂಡವು. ಭಾರತ ಖಗೋಳಶಾಸ್ತ್ರ, ದೇಹವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಮೊದಲು ಉತ್ತಮ ಜ್ಞಾನ ಹೊಂದಿತ್ತು. ಆದರೆ ಕಾಲಾನಂತರದಲ್ಲಿ ನಾನಾ ಕಾರಣಗಳಿಂದ ವೈಜ್ಞಾನಿಕ ಮನೋಭಾವ ನಶಿಸಿಹೋಯಿತು. ಮೂಢನಂಬಿಕೆಗಳು ಬೆಳೆದವು. ಖಗೋಳಜ್ಞಾನ ಜ್ಯೋತಿಷಿಗಳ ಕೈಯ ಬಾಚುವ ಉಪಕರಣವಾಗಿ ಕೂತಿರುವುದೇ ಇದಕ್ಕೆ ಸಾಕ್ಷಿ. ಈಗ ಅಂತರಿಕ್ಷ-ಉಪಗ್ರಹ ವಿಜ್ಞಾನವೊಂದನ್ನು ಹೊರತುಪಡಿಸಿದರೆ ಭಾರತದ ವೈಜ್ಞಾನಿಕ ಸಂಶೋಧನೆ-ಸಾಧನೆ ಉಳಿದ ಕ್ಷೇತ್ರಗಳಲ್ಲಿ ತುಂಬ ಕಡಿಮೆ. ಉಂಡೆಲೆ ಮೇಲೆ ಉರುಳಿದರೆ ಚರ್ಮರೋಗ ಗುಣವಾಗುವುದೆನ್ನುವಂತಹ ನಮ್ಮ ನಂಬಿಕೆಗಳೇ ವಿಜ್ಞಾನ-ಸಂಶೋಧನೆಯಲ್ಲಿ ಭಾರತ ಯಾವ ಸ್ಥಾನದಲ್ಲಿವೆ ಎಂದು ಸ್ಪಷ್ಟವಾಗಿ ಹೇಳುತ್ತವೆ.



ಬದುಕು, ಸಾವು, ಸೃಷ್ಟಿಯ ಕುರಿತು ಎಷ್ಟೋ ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ಬಳಿಯಿವೆ. ಮಾನವ ಮನಸು ಅನೂಹ್ಯವಾದದ್ದನ್ನು ಊಹಿಸಿಕೊಂಡು, ಅದರಿಂದ ಸುರಕ್ಷಿತವಾಗಿರಲು ಏನೇನು ಸಾಧ್ಯವೋ ಅಂಥ ಎಲ್ಲ ಕ್ರಮ ಕೈಗೊಳ್ಳಲು ನೋಡುತ್ತದೆ.

ಆದರೆ ನಿರುತ್ತರರಾಗುಳಿವ ಅಮಾಯಕತೆ, ಮುಗ್ಧತೆ ಸುಳ್ಳನ್ನು ನಂಬುವಂತೆ ನಮ್ಮನ್ನು ಪ್ರೇರೇಪಿಸಬಾರದು. ನಮ್ಮೆಲ್ಲ ಹುಡುಕಾಟಗಳು ನೆಲದ ಬದುಕಿಗೆ ಮತ್ತು ಇಲ್ಲಿನ ವಾಸ್ತವಕ್ಕೆ ನಮ್ಮನ್ನು ಎಳೆದು ತರಬೇಕೇ ಹೊರತು ಅನೂಹ್ಯವಾದದ್ದನ್ನು ಬೆನ್ನುಹತ್ತಿ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗಬಾರದು. ಎಂದೇ ಧರ್ಮ, ನಂಬಿಕೆಗಳ ಚೌಕಟ್ಟಿನಾಚೆಗೆ ನಿಂತು ಜನಬದುಕನ್ನೂ, ಅದರ ಎಲ್ಲ ಮುಖಗಳನ್ನೂ ಗ್ರಹಿಸಬೇಕು. ವಿಜ್ಞಾನ ಮತ್ತು ಸಾಹಿತ್ಯ ಜನಸಾಮಾನ್ಯನಿಗೆ ಈ ಶಕ್ತಿ ನೀಡಬೇಕು.





2 comments:

  1. Hello Dr. Anupama,

    It was a very well written article. The promotion of superstition on television channels, newspapers and internet has grown alarmingly. I think, inculcation of scientific temper in our lives is more imperative now than ever before.

    Thanks,
    Shiva Acharya

    ReplyDelete
  2. Dr. Anupama Ji as your views is positively avceptable. Its indeed . ��

    ReplyDelete