Sunday, 22 February 2015

ಪ್ರತಿಧ್ವನಿಸಬೇಕಾದ ದನಿ - ಶಿರೀನ್ ದಳವಿಶಿರೀನ್ ದಳವಿ. ೪೬ ವರ್ಷ. ಒಬ್ಬ ಮಗ, ಮಗಳಿರುವ ಮುಂಬಯಿಯ ಹೆಣ್ಣುಮಗಳು. ಒಂದು ವರ್ಷದಿಂದೀಚೆಗೆ ಶುರುವಾದ ಮುಂಬಯಿ ಆವೃತ್ತಿಯ ಉರ್ದು ದಿನಪತ್ರಿಕೆ ಅವಧ್ ನಾಮಾ ಸಂಪಾದಕಿ. ಈ ದೇಶದ ಏಕೈಕ ಮುಸ್ಲಿಂ ಸಂಪಾದಕಿ. ಐಪಿಸಿ ಸೆಕ್ಷನ್ ೨೯೫(ಎ) ಪ್ರಕಾರ ಮುಂಬಯಿಯಲ್ಲಿ ಎರಡು, ಥಾಣೆಯಲ್ಲಿ ಎರಡು ಹಾಗೂ ಮಾಲೇಗಾಂವಿನಲ್ಲಿ ಒಂದು ಪ್ರಕರಣ ಎದುರಿಸುತ್ತಿರುವಾಕೆ. ‘ನಿನಗೆ ಎಂದೂ ಕ್ಷಮೆ ಸಿಗುವುದಿಲ್ಲ’ ಎಂಬರ್ಥದ ಮೆಸೇಜುಗಳಿಂದ ಆಕೆಯ ವಾಟ್ಸಪ್ ತುಂಬಿಹೋಗಿದೆ.

ಅಪರಾಧ: ಮಹಿಳೆಯಾಗಿರುವುದು, ಅದರಲ್ಲೂ ಮುಸ್ಲಿಂ ಮಹಿಳೆಯಾಗಿರುವುದು, ಅದರಲ್ಲೂ ಉರ್ದು ದಿನಪತ್ರಿಕೆಯ ಸಂಪಾದಕಿಯಾಗಿ ವೃತ್ತಿಯಲ್ಲಿ ಯಶ ಸಾಧಿಸಿರುವುದು.

ಇದು ಯಾವ ಕಾಲದ್ದೋ ಕತೆಯಲ್ಲ. ಭಾರತವೆಂಬ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ವಾಣಿಜ್ಯ ನಗರಿ ಮುಂಬಯಿ ಹೊರವಲಯದಲ್ಲಿರುವ ಮುಂಬ್ರಾದ ಮುಸ್ಲಿಂ ಮಹಿಳೆಯ ಸಂಕಟ.

ಜನವರಿ ೧೭. ಪ್ಯಾರಿಸ್‌ನ ಭಯೋತ್ಪಾದಕ ಕೃತ್ಯದಲ್ಲಿ ಚಾರ್ಲಿ ಹೆಬ್ಡೊ ಪತ್ರಿಕೆಯ ವ್ಯಂಗ್ಯಚಿತ್ರಕಾರರ ಕೊಲೆಯಾದ ಒಂದು ವಾರ ನಂತರ ಅದರ ಕುರಿತು ಲಕ್ನೋದಿಂದ ಹೊರಡುವ ಉರ್ದು ದಿನಪತ್ರಿಕೆ ‘ಅವಧ್ ನಾಮಾ’ದ ಮುಂಬಯಿ ಆವೃತ್ತಿಯಲ್ಲಿ ವರದಿ ಪ್ರಕಟವಾಯಿತು. ಪತ್ರಿಕೆಯ ಮುಖಪುಟದಲ್ಲಿ ವರದಿಗೆ ಪೂರಕವಾಗಿ ಚಾರ್ಲಿ ಹೆಬ್ಡೋದ ಕಾರ್ಟೂನ್ ಪೇಜ್ ಬಳಸಿಕೊಳ್ಳಲಾಗಿತ್ತು. ಅದರಲ್ಲಿ ಗಡ್ಡಧಾರಿಯಾದ ಪ್ರವಾದಿ ಮಹಮ್ಮದ್ ಮೂರ್ಖ ಹಿಂಬಾಲಕರು ತನ್ನನ್ನು ಪ್ರೀತಿಸುತ್ತಿದ್ದಾರಲ್ಲ ಎಂದು ದುಃಖಿಸುತ್ತಿರುವಂತೆ ಒಂದು ಕಾರ್ಟೂನು ಇತ್ತು. ದುಃಖಿಸುವ ಪ್ರವಾದಿಯ ಕೆಳಗೆ, ‘ಮುಹಮ್ಮದ್ ಮೂಲಭೂತವಾದಿಗಳಿಂದ ಸಂತುಷ್ಟ’ ಎಂಬ ಶೀರ್ಷಿಕೆಯಿತ್ತು. ಈ ವ್ಯಂಗ್ಯಚಿತ್ರ ಪ್ರಕಟವಾದ ದಿನ ಫ್ರೆಂಚ್ ಪತ್ರಿಕೆಯ ಅತ್ಯಧಿಕ ಪ್ರತಿಗಳು ಮಾರಾಟವಾದವು ಎಂಬ ಸಣ್ಣ ಟಿಪ್ಪಣಿ ಅದರೊಡನೆ ಇತ್ತು. ‘ಚಾರ್ಲಿ ಹೆಬ್ಡೊ ಅಸಭ್ಯ ಕಾರ್ಟೂನುಗಳನ್ನು ಪ್ರಕಟಿಸಿ ಮುಸ್ಲಿಮರನ್ನು ಕೆರಳಿಸುತ್ತ ತಪ್ಪು ಮಾಡುತ್ತಿದೆ. ಪತ್ರಕರ್ತರಿಗೆ ನಿಜವನ್ನು ಮುನ್ನೆಲೆಗೆ ತಂದು ಮುಕ್ತವಾಗಿ ಬರೆಯುವ ಛಾತಿ ಇರಬೇಕು ನಿಜ. ಆದರೆ ಅದು ಕಾನೂನಿನ ಮಿತಿಗೊಳಪಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರಬಾರದು’ ಎಂದು ಅವಧ್ ನಾಮಾ ಹೇಳಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಬಗೆಗೆ ಪೋಪರು ಹೇಳಿರುವುದನ್ನು ಉಲ್ಲೇಖಿಸಿ ಉದಾತ್ತ ಕೆಲಸ ಮತ್ತು ಪ್ರೀತಿಯಿಂದ ಇಸ್ಲಾಂ ಈ ಎಲ್ಲ ಸಹಸ್ರಮಾನಗಳಲ್ಲಿ ಹಬ್ಬಿ ಬೆಳೆದಿರುವುದನ್ನು ಸಂಪಾದಕರು ತಮ್ಮ ಓದುಗರಿಗೆ ನೆನಪಿಸಿದ್ದರು.ಚಾರ್ಲಿ ಹೆಬ್ಡೊ ಪತ್ರಿಕೆ ಭೀಕರ ದಾಳಿಯ ನಂತರವೂ ಕಂಗೆಡದೆ ಪ್ರಕಟಣೆ ಮುಂದುವರೆಸಿತು. ಅದರ ಪ್ರಸಾರ ಮೊದಲಿಗಿಂತ ಹೆಚ್ಚಾಯಿತು. ಆದರೆ ಈ ವರದಿ ಪ್ರಕಟಿಸಿದ ಉರ್ದು ದಿನಪತ್ರಿಕೆಗೆ, ಅದರ ಸಂಪಾದಕಿಗೆ ಬದುಕು ಸುಲಭವಾಗಲಿಲ್ಲ. ಹಲವು ದೂರುಗಳು, ಅಸಂಖ್ಯ ಆಕ್ರೋಶಭರಿತ ಬೆದರಿಕೆಗಳು, ಛೇಡಿಸುವ ಕರೆಗಳು ಬಂದವು. ಚಾರ್ಲಿ ಹೆಬ್ಡೊ ಚಿತ್ರವನ್ನು ಮುಖಪುಟಕ್ಕೆ ಹಾಕಿದರೆ ಜನ ರೊಚ್ಚಿಗೇಳುತ್ತಾರೆ ಎಂದು ಉಪಸಂಪಾದಕ ಹೇಳಿದರೂ, ‘ರೊಚ್ಚಿಗೆದ್ದವರು ಕೆಲ ನೂರು ಪ್ರತಿಗಳನ್ನು ಸುಟ್ಟಾರು. ಅದಕ್ಕೆಲ್ಲ ನಾವು ಧೈರ್ಯಗೆಡಬಾರದು’ ಎಂದು ಸಂಪಾದಕಿ ಪ್ರಕಟಿಸಿದರು ಎಂಬ ಸುದ್ದಿ ಹರಿದಾಡಿತು. ದೊಡ್ಡ ಪ್ರಮಾದವಾಗದಿರಲಿ ಎಂದು ಶಿರೀನ್ ಮರುದಿನ, ಜನವರಿ ೧೮ನೇ ತಾರೀಖಿನ ಮುಖಪುಟದಲ್ಲೇ ವಿಷಾದ ವ್ಯಕ್ತಪಡಿಸಿ ಕ್ಷಮಾಪಣೆ ಕೇಳಿದರು. ಸಂಪಾದಕೀಯದಲ್ಲಿ ಚಾರ್ಲಿ ಹೆಬ್ಡೊ ನಿಲುವುಗಳ ಖಂಡಿಸಿ ಬರೆದರು. ಪ್ರವಾದಿಯವರ ಚಿತ್ರ ಎಲ್ಲೂ ಲಭ್ಯವಿಲ್ಲದಿರುವಾಗ ವ್ಯಂಗ್ಯಚಿತ್ರಗಳನ್ನು ಪ್ರವಾದಿಯ ಚಿತ್ರವಾಗಿ ಭಾವಿಸಬಾರದೆಂದೂ; ಇಂಥ ಕೆರಳಿಸುವಿಕೆಯನ್ನು ಮುಸ್ಲಿಮರು ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಎದುರಿಸಬೇಕೇ ಹೊರತು ಹಿಂಸೆಯಿಂದಲ್ಲ ಎಂದೂ ಬರೆದರು.


ಅವರ ಈ ಮಾತುಗಳೇನೋ ಪ್ರಬುದ್ಧವಾಗಿವೆ. ಓದುಗರನ್ನು ಚಿಂತನಶೀಲರಾಗಿಸುವ ಹಾಗೂ ಸಮತೋಲನದಿಂದ ವಸ್ತುಸ್ಥಿತಿಯನ್ನು ವಿಶ್ಲೇಷಿಸುವ ಸಂಪಾದಕಿಯ ಸ್ವಭಾವವನ್ನೂ ಪರಿಚಯಿಸುತ್ತವೆ. ಆದರೆ ಕ್ಷಮಾಪಣೆ ಪ್ರಕಟವಾದ ಮೇಲೆ ಜಮಾತೆ ಉಲೇಮಾ ಹಿಂದ್, ರಾಜಾ ಅಕಾಡೆಮಿಯಂತಹ ಸಂಸ್ಥೆಗಳು ಸುಮ್ಮನಾದರೂ ಕೆಲವು ಧಾರ್ಮಿಕ ಸೋಗಿನ ಸಂಘಟನೆಗಳು ಅವರ ವಿರುದ್ಧ ನಿಂತವು. ರಾಷ್ಟ್ರೀಯ ಉಲೇಮಾ ಕೌನ್ಸಿಲ್‌ನ ಕೆಂಗಣ್ಣಿಗೆ ಗುರಿಯಾದರು. ಆಕೆಯ ಪತ್ರಿಕಾ ಸಹವರ್ತಿಗಳೇ ಪ್ರಸಾರ ಹೆಚ್ಚಿಸುವ ತಂತ್ರವಾಗಿ ಈ ಕೀಳು ಮಟ್ಟದ ನಡೆ ಅನುಸರಿಸಲಾಗಿದೆ ಎಂದು ಜರೆದರು. ಮುಂಬಯಿ ಮತ್ತು ಮಹಾರಾಷ್ಟ್ರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ದ್ವೇಷ ಸಂದೇಶಗಳಿಗೆ ಹೆದರಿ ಜ. ೧೯ರಿಂದ ಪತ್ರಿಕೆ ತನ್ನ ಮುಂಬೈ ಕಚೇರಿ ಮುಚ್ಚಿ, ಪ್ರಕಟಣೆ ನಿಲಿಸಿತು. ಆಕೆಯನ್ನು ಕೆಲಸದಿಂದ ತೆಗೆಯಿತು. ಆ ಕಚೇರಿಯಲ್ಲಿದ್ದ ೧೫ ಜನ ನೌಕರರು ಕೆಲಸ ಕಳೆದುಕೊಂಡರು. ಅವಧ್ ನಾಮಾದ ಆರು ಆವೃತ್ತಿಗಳಲ್ಲಿ ಐದು ಉತ್ತರಪ್ರದೇಶದಿಂದ ಪ್ರಕಟವಾಗುತ್ತವೆ; ಮುಂಬಯಿ ಆವೃತ್ತಿಯ ಪತ್ರಿಕೆ ಕೇವಲ ತನ್ನ ಹೆಸರನ್ನು ಮಾತ್ರ ಹೊಂದಿದ್ದು ಅದರ ಪ್ರಕಟಣೆ, ಮುದ್ರಣ, ಸಂಪಾದನೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ಅವಧ್ ನಾಮಾದ ಮಾಲಕಿ ತಕ್ದೀಸ್ ಫಾತಿಮಾ ತಮ್ಮ ವಕೀಲ ವಕಾರ್ ರಿಜ್ವಿ ಮೂಲಕ ಹೇಳಿದರು. ಶಿರೀನ್ ಮೇಲೆ ಐದು ಎಫ್‌ಐಆರ್ ದಾಖಲಾದವು. ೯ ದಿನಗಳ ನಂತರ ಥಾಣೆಯ ಮುಂಬ್ರಾದ ದೂರಿನನ್ವಯ ಆಕೆಯನ್ನು ಬಂಧಿಸಿ ನಂತರ ಬೇಲ್ ಮೇಲೆ ಬಿಡುಗಡೆ ಮಾಡಲಾಯಿತು.

ತೋಳ ಹೊಂಡಕ್ಕೆ ಬಿದ್ದರೆ..

ಆಕೆ ಮೊದಲಿನಿಂದ ಸಣ್ಣಪುಟ್ಟ ಆಕ್ರೋಶಗಳನ್ನೆದುರಿಸಿದವರು. ಅಂಜದೆ ಎದೆಗೊಟ್ಟವರು. ಮುಂಬ್ರಾ ಮುಂಬಯಿಯ ಅತ್ಯಂತ ಜನಭರಿತ, ಬಡ ಮುಸ್ಲಿಮರಿರುವ ಪ್ರದೇಶ. ಹೈಸ್ಕೂಲು ಮುಖ ನೋಡದ ಅಲ್ಲಿಯ ಹುಡುಗಿಯರ ನಡುವೆ ಶಿರೀನ್ ಕಾಲೇಜು ಮೆಟ್ಟಿಲೇರಿದರು. ಕೂಸಾ ಶಾಲೆಯಲ್ಲಿ ಓದುವಾಗ ಆಕೆ ಸದಾ ಮುಂದು. ಆಕೆಯ ಶಿಕ್ಷಕರು ಪಾಲಕರ ಬಳಿ ಹುಡುಗಿಗೆ ಉನ್ನತ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದ್ದರು. ಅವರ ಶಾಲೆಯಿಂದ ಆಕೆಯೊಬ್ಬಳೇ ೭ನೇ ತರಗತಿಗಿಂತ ಮುಂದೆ ಕಲಿತದ್ದು. ಎರಡನೆಯ ಪಿಯುಸಿ ಇರುವಾಗಲೇ ಬರವಣಿಗೆಯಲ್ಲಿ ತೊಡಗಿಕೊಂಡರು. ೨೧ ವರ್ಷದವರಾಗಿರುವಾಗ ತಮ್ಮ ಎರಡರಷ್ಟು ವಯಸ್ಸಿನ ವಿವಾಹಿತ ವ್ಯಕ್ತಿ ಅಬ್ದುಲ್ಲಾ ಕಮಾಲರನ್ನು ಮದುವೆಯಾದರು. ಅವರು ಬರೆಯುತ್ತಿದ್ದ ಪತ್ರಿಕೆಗೆ ಕಮಾಲ್ ಕೂಡಾ ಬರೆಯುತ್ತಿದ್ದರು. ಅವರು ಶಿರೀನರ ಗುರು, ಹಿತೈಷಿ ಎಲ್ಲವೂ ಆಗಿದ್ದರು. ಮದುವೆ ಸಂದರ್ಭದಲ್ಲಿ ಮುಂಬ್ರಾದಲ್ಲಿ ಆಕ್ರೋಶಭರಿತ ಗುಂಪುಗಳನ್ನು ಅವರು ಎದುರಿಸಬೇಕಾಯಿತು. ಪತ್ರಕರ್ತರಾಗಿದ್ದ ಕಮಾಲ್ ೨೦೧೦ರಲ್ಲಿ ತೀರಿಕೊಂಡಾಗ ಭಾರೀ ಶ್ರದ್ಧಾಂಜಲಿ ಸಭೆ ಏರ್ಪಾಡಾಯಿತು. ಆಗ ಮಾತನಾಡಿದ ಶಿರೀನ್, ‘ಯಾರು ಬದುಕಿದ್ದಾಗ ಕಮಾಲರ ದಿನಗಳನ್ನು ದುರ್ಭರಗೊಳಿಸಿದರೋ ಅವರೇ ಈಗ ಶ್ರದ್ಧಾಂಜಲಿ ಸಭೆ ಏರ್ಪಡಿಸುತ್ತಿರುವುದು ಒಂದು ವಿಪರ್ಯಾಸ’ ಎಂದು ಹೇಳಿ ನೆರೆದವರನ್ನು ತಬ್ಬಿಬ್ಬುಗೊಳಿಸಿದ್ದರು!

ಕಮಾಲರ ಸಲಹೆಯಂತೆ ಮೊದಲು ನಿರ್ಭಿಢೆಯಿಂದ ಬೇರೆಬೇರೆ ಹೆಸರುಗಳಲ್ಲಿ ಬರೆಯುತ್ತಿದ್ದರು. ನಂತರ ತಮ್ಮದೇ ಹೆಸರಿನಲ್ಲಿ ಬರೆಯತೊಡಗಿದರು. ಹಿಂದೂಸ್ತಾನ್ ಪತ್ರಿಕೆಯ ಸರ್ಫ್ರಾಜ್ ಆರ್ಜೂ, ಆಕೆ ಉಪಸಂಪಾದಕರಾಗಿ ದುಡಿದ ಸಹಾಫತ್ ಪತ್ರಿಕೆಯ ಸಾಜಿದ್ ರಷೀದ್ ಅವರಿಗೆ ಬೆಂಬಲ, ಧೈರ್ಯ ನೀಡುತ್ತಿದ್ದರು. ಮಹಿಳಾ ಹಕ್ಕುಗಳು ಹಾಗೂ ಮುಸ್ಲಿಮರ ಶಿಕ್ಷಣ ಕುರಿತು ಹೆಚ್ಚು ಬರೆದರು. ‘ನಿಮಗೆ ಒಂದು ಪುಸ್ತಕ ಸರಿಯಿಲ್ಲ ಎನಿಸಿದರೆ ಅದನ್ನು ಇನ್ನೊಂದು ಪುಸ್ತಕ ತರುವ ಮೂಲಕ ವಿರೋಧಿಸಬೇಕೇ ಹೊರತು ನಿಷೇಧಕ್ಕೆ ಆಗ್ರಹಿಸಬಾರದು’ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಸದಾ ಮುಸ್ಲಿಮರು ತಾವು ಬಲಿಪಶು ಎಂದು ಭಾವಿಸುವುದನ್ನು ಬಿಟ್ಟು ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸಲು ತಿಳಿಯಬೇಕು ಎಂದು ಕಿವಿಮಾತು ಹೇಳಿದರು.

ತಮ್ಮ ಮಾತು-ಬರಹ-ಕೃತಿಗಳಿಂದ ಬುರ್ಖಾ ತೊಡದ ಈ ಮುಸ್ಲಿಂ ಮಹಿಳೆ ಬಹುಜನರ ವಕ್ರದೃಷ್ಟಿಗೆ ಮೊದಲೇ ಗುರಿಯಾಗಿದ್ದರು. ತೋಳ ಹೊಂಡಕ್ಕೆ ಬಿದ್ದಾಗ ಜನ ಆಳಿಗೊಂದೊಂದು ಕಲ್ಲು ಒಗೆಯಲು ಸನ್ನದ್ಧರಾದರು.

ಈಗ ಶಿರೀನ್ ಕೆಲಸ ಕಳೆದುಕೊಂಡಿದ್ದಾರೆ. ಕ್ಷಮಾಪಣೆ ಕೇಳಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಸಹಕರಿಸಿದ್ದಾರೆ. ಆದರೂ ಅವರ ವಿರುದ್ಧ ದ್ವೇಷ ಸಂದೇಶಗಳು ಹರಿದಾಡುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವುದರ ವಿರುದ್ಧ ಕಾನೂನು ಇದೆ. ಆದರೆ ಆಕೆಗೆ ಮರಣಭಯ ಒಡ್ಡುತ್ತಿರುವುದರ ವಿರುದ್ಧ, ಬದುಕನ್ನು ದುರ್ಭರಗೊಳಿಸುವುದರ ವಿರುದ್ಧ ಕಾನೂನು ಇಲ್ಲ. ಅವರ ಪರ ಕೆಲವರಿಗೆ ಸಹಾನುಭೂತಿ ಇದರೂ ಹಾಗೆಂದು ಧೈರ್ಯವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಯಶಸ್ಸಿಗೆ ಹಲವು ತಂದೆಯರು; ಸೋಲಿಗೆ ಯಾವ ತಾಯಿಯೂ ಇಲ್ಲ..

ನ್ಯೂಸ್ ಲಾಂಡ್ರಿ ಎಂಬ ವೆಬ್‌ಸೈಟಿಗೆ ನೀಡಿದ ಸಂದರ್ಶನದಲ್ಲಿ ಶಿರೀನ್, ‘ಉರ್ದು ಪತ್ರಿಕೋದ್ಯಮದಲ್ಲಿ ತುಂಬ ಕಡಿಮೆ ಮಹಿಳೆಯರಿದ್ದಾರೆ. ತುಂಬ ಕಡಿಮೆ ಜನ ಉನ್ನತ ಸ್ಥಾನ ಪಡೆಯುತ್ತಾರೆ. ನಾನು ಈ ಸ್ಥಾನದಲ್ಲಿರುವುದು ಹಲವರಿಗೆ ಇಷ್ಟವಿಲ್ಲ. ಈಗ ನನ್ನ ವಿರುದ್ಧ ಬರೆಯುತ್ತಿರುವ ವ್ಯಕ್ತಿ ಒಮ್ಮೆ ಹೆಣ್ಣಿನ ನಾಯಕತ್ವದಡಿ ಗಂಡು ಕೆಲಸ ಮಾಡಬಾರದು ಎಂಬ ಹೇಳಿಕೆ ನೀಡಿದ್ದರು. ಜನವರಿ ೧೭ರ ನನ್ನ ಬರಹ ಒಂದು ಪಕ್ಕಾ ನ್ಯೂಸ್ ಸ್ಟೋರಿ. ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ನಡೆದ ದಾಳಿ ಕುರಿತು ವರದಿ ಮಾಡುವಾಗ ಅದರ ಒಂದು ಚಿತ್ರ ಪ್ರಕಟಿಸಬೇಡವೇ? ಕೇವಲ ಈ ಕಾರಣದಿಂದ ಚಿತ್ರ ಪ್ರಕಟಿಸಿದ್ದೆವು ಅಷ್ಟೇ. ಆಯ್ಕೆ ಮಾಡಿದ ಕಾರ್ಟೂನಿನ ಅಡಿ ಬರೆದದ್ದು ಫ್ರೆಂಚ್‌ನಲ್ಲಿದ್ದದ್ದರಿಂದ ಅದರ ಅರ್ಥ ನನಗೆ ತಿಳಿದಿರಲಿಲ್ಲ. ಭಾರತೀಯ ಮಾಧ್ಯಮಗಳಲ್ಲಿ ಅನೇಕರು ಅದೇ ಕಾರ್ಟೂನಿರುವ ಮುಖಪುಟ ಮುದ್ರಿಸಿದ್ದಾರೆ. ಆದರೆ ನನ್ನ ಮೇಲೆ ಮಾತ್ರ ಬೇಕೆಂದೇ ದಾಳಿ ನಡೆಯುತ್ತಿದೆ’ ಎಂದು ಹೇಳಿದರು.

ಅವರ ವೃತ್ತಿಬಾಂಧವರೂ ಈ ಪ್ರಕರಣದಲ್ಲಿ ಸೇರಿರುವುದು ಸ್ಪಷ್ಟವಾಗಿದೆ. ಜುಬೇರ್ ಅಜ್ಮಿ ಉರ್ದು ಸಾಹಿತ್ಯಿಕ ಸಮಾಜ ‘ಉರ್ದು ಮರ್ಕಜ್’ ಅಧ್ಯಕ್ಷರು. ಶಿರೀನ್ ವಿರುದ್ಧ ಮೊದಲ ದೂರು ದಾಖಲಿಸಿದ ಜುಬೇರ್ ಅಜ್ಮಿ ಪ್ರಕಾರ, ‘ಪ್ರವಾದಿ ಮುಹಮ್ಮದರ ಚಿತ್ರವನ್ನು ಪ್ರಕಟಿಸುವ ಧೈರ್ಯವನ್ನು ಇನ್ನಾರೂ ತೆಗೆದುಕೊಳ್ಳದಂತೆ ಆಕೆ ಒಂದು ಪಾಠವಾಗಬೇಕು.’ ನಿಹಾಲ್ ಸಗೀರ್ ಶಿರೀನ್ ಕೈಕೆಳಗೆ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಆಕೆ ಸಂಪಾದಕ ಸ್ಥಾನಕ್ಕೇರಿದಾಗ ನಿಹಾಲ್ ಸಗೀರ್ ಅವಧ್ ನಾಮಾ ಮಾಲೀಕರನ್ನು ‘ನಿಮಗೆ ಬೇರೆ ಯಾರೂ ಸಿಗಲಿಲ್ಲವೆ?’ ಎಂದು ಕೇಳಿದ್ದರು. ಇಜಾರ್ ಅಹ್ಮದ್ ಉರ್ದು ಪತ್ರಕಾರ್ ಸಂಘದ ಅಧ್ಯಕ್ಷರು. ಸಂಘದ ಸೂಚನೆಯ ಮೇರೆಗೆ ಐದು ದೂರು ದಾಖಲಾಗಿವೆ. ‘ಈ ದೇಶದಲ್ಲಿ ನೀವು ಏನನ್ನಾದರೂ ಬರೆಯಲು ಸ್ವತಂತ್ರರು. ಆದರೆ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಲು ಅಲ್ಲ’ ಎಂದು ಹೇಳುವ ನುಸ್ರತ್ ಅಲಿ ಎಂಬ ಉರ್ದು ಪತ್ರಿಕಾ ವರದಿಗಾರರು, ‘ಎಲ್ಲ ಕಡೆ ಅಶಾಂತಿ ಹುಟ್ಟಿಸಿರುವ ಕಾರ್ಟೂನನ್ನು ಆಕೆ ಇಲ್ಲೇಕೆ ಪ್ರಕಟಿಸಬೇಕಿತ್ತು? ಅಂತಹ ಕಾರ್ಟೂನು ನಮ್ಮ ದೇಶದ ಶಾಂತಿಗೆ ಭಂಗವಲ್ಲವೆ?’ ಎಂದು ಪ್ರಶ್ನಿಸಿದರು. ಅವರೂ ಒಂದು ದೂರು ದಾಖಲಿಸಿದರು.

ಶಿರೀನ್ ತಸ್ಲೀಮಾ ನಸ್ರೀನ್ ಅವರ ಅನುಯಾಯಿ ಎಂದು ಜರೆಯಲಾಯಿತು. ‘ತಾನು ತಸ್ಲೀಮಾ ಕುರಿತು ಏನೂ ಬರೆದಿಲ್ಲ. ಆದರೆ ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತರ ಹಿತ ಕಾಯಬೇಕೆನ್ನುವುದು ನನ್ನ ನಂಬಿಕೆಯಾಗಿದೆ. ತಸ್ಲೀಮಾ ಕಾದಂಬರಿ ಇದನ್ನೇ ಸೂಚಿಸುತ್ತದೆ’ ಎಂದು ಶಿರೀನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಯಿತು. ಈಗ ಆಕೆಯನ್ನು ಆರೆಸ್ಸೆಸ್ ಏಜೆಂಟ್ ಎಂದು ಬಿಂಬಿಸಿ ಧರ್ಮದ್ರೋಹವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಬೈನರಿ ಮನಸ್ಥಿತಿ ಹೇಗಿದೆಯೆಂದರೆ ಧಾರ್ಮಿಕ ಮುಸ್ಲಿಮರು ಕೆರಳುವಂತೆ ಯೋಚಿಸುವವರು ಆರೆಸ್ಸೆಸ್ಸಿನವರೇ ಆಗಿರಬೇಕು!

ಮಹಿಳೆಯಾದ ಕಾರಣಕ್ಕೇ ಶಿರೀನ್ ವಿರುದ್ಧ ಈ ಮಟ್ಟದ ವಿರೋಧ ಇದೆ. ಏಕೆಂದರೆ ಚಾರ್ಲಿ ಹೆಬ್ಡೊದ ಈ ಕಾರ್ಟೂನೂ ಸೇರಿದಂತೆ ಹಲವು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿವೆ. ಅದಕ್ಕೆ ಸರ್ಕಾರದ ಅಥವಾ ಇಸ್ಲಾಮಿಕ್ ಸಂಘಟನೆಗಳ ಅಭ್ಯಂತರವಿಲ್ಲ. ಆದರೆ ಅದನ್ನು ಶಿರೀನ್ ಪ್ರಕಟಿಸಿದರೆ ಆಕ್ಷೇಪಾರ್ಹವಾಗುತ್ತದೆ. ಅವರು ಆರೆಸ್ಸೆಸ್ ಹಿಂಬಾಲಕಿ ಎನ್ನುತ್ತ ಧರ್ಮದ್ರೋಹದ ತಪ್ಪು ಹುಡುಕಲಾಗುತ್ತಿದೆ. ಮುಸ್ಲಿಮರ ಬಹುಪತ್ನಿತ್ವ, ಹೆಚ್ಚು ಸಂಖ್ಯೆಯ ಮಕ್ಕಳು, ಖತ್ನ ಮತ್ತಿತರ ಸಂಗತಿಗಳ ಕುರಿತು ಕೋಮುವಾದಿ ಸಂಘಟನೆಗಳು, ಅದರ ಸಾಧುಸಂತರು ಕೀಳು ಅಭಿರುಚಿಯ ಮಾತುಗಳನ್ನು ಆಡಿದರೆ ಅದರಿಂದ ಧಾರ್ಮಿಕ ಭಾವನೆಗಳು ಧಕ್ಕೆಯಾಗುವುದಿಲ್ಲ. ದ್ವೇಷಭರಿತ ಮಾತುಗಳಿಂದ ಅಲ್ಪಸಂಖ್ಯಾತ ಸಮುದಾಯ ಅಭದ್ರ ಮನಸ್ಥಿತಿಯಲ್ಲಿ ದಿನ ಸವೆಸುವಂತೆ ಮಾಡುವವರ ವಿರುದ್ಧ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಸೆಕ್ಷನ್ ಬಳಕೆಯಾಗುವುದಿಲ್ಲ. ಸಂಘ ಪರಿವಾರದ ಪಕ್ಷ ಸೇರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮುಸ್ಲಿಂ ಜನನಾಯಕರ ವಿರುದ್ಧ; ಬಿಜೆಪಿ ಸೇರಿದ ಎಂ. ಜೆ. ಅಕ್ಬರರಂತಹ ಹಿರಿಯ ಪತ್ರಕರ್ತರ ವಿರುದ್ಧ ಇಸ್ಲಾಂ ಧಾರ್ಮಿಕ ಸಂಘಟನೆಗಳಿಗೆ ಆಕ್ರೋಶ ಇಲ್ಲ. ಅಲ್ಪಸಂಖ್ಯಾತರ ಪ್ರತಿನಿಧಿಗಳಾಗಿ ಮೀಸಲಾತಿ-ಸವಲತ್ತು ಪಡೆದು, ನಂತರ ಸಮುದಾಯ ಮರೆತ ಅಧಿಕಾರಸ್ಥರ ಕುರಿತೂ ಈ ಧಾರ್ಮಿಕ ಸಂಘಟನೆಗಳಿಗೆ ಆಕ್ರೋಶವಿಲ್ಲ. ತಮ್ಮದೇ ಸಮುದಾಯದ ಮಹಿಳೆ, ಪತ್ರಕರ್ತೆ, ಭಿನ್ನ ದನಿಯಲ್ಲಿ ಮಾತನಾಡಿದ ಕೂಡಲೇ ಅವರ ವಿರುದ್ಧ ೨೯೫ ಸೆಕ್ಷನ್ ಉಪಯೋಗವಾಗುತ್ತದೆ. ತಪ್ಪಾಯಿತು ಎಂದು ಕ್ಷಮೆ ಯಾಚಿಸಿದ ಮೇಲೂ ಆಕೆ ಧರ್ಮದ್ರೋಹಿಯಾಗಿಯೇ ಕಾಣುತ್ತಾಳೆ.

ಆಕೆಯ ವಿರುದ್ಧ ಇಷ್ಟೆಲ್ಲ ಅಪಪ್ರಚಾರ ಸಂಭವಿಸುವಾಗಲೂ ಪ್ರಜ್ಞಾವಂತ ಸಮುದಾಯದಿಂದ ಹೆಚ್ಚೇನೂ ಬೆಂಬಲ ವ್ಯಕ್ತವಾಗಿಲ್ಲ. ಒಂದು ತಿಂಗಳು ಕಳೆಯುತ್ತ ಬಂದರೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಸುದ್ದಿಯಾಗಿಲ್ಲ. ‘ಅದು ಮುಸ್ಲಿಮರ ಒಳಗಿನ ಸಂಘರ್ಷ, ಅವರೇ ಸರಿಮಾಡಿಕೊಳ್ಳಬೇಕು’ ಎಂದು ಲೆಕ್ಕಾಚಾರದಲ್ಲಿ ಸುಮ್ಮನಿರುವ ಪ್ರವೃತ್ತಿ ಪ್ರಗತಿಪರ ಮನಸುಗಳಲ್ಲೂ ಇರುವಂತಿದೆ. ಶಿರೀನ್ ಪರವಾಗಿ ಮುಸ್ಲಿಂ ಬೌದ್ಧಿಕ ವಲಯವೂ ನಿಲ್ಲುತ್ತಿಲ್ಲ; ಇತರರೂ ಬಹಿರಂಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳ ನಡೆಯನ್ನು ಖಂಡಿಸುತ್ತಿಲ್ಲ. ಇದು ಪ್ರಜಾಪ್ರಭುತ್ವವಾದಿ, ಸೆಕ್ಯುಲರ್ ಭಾರತದ ದೊಡ್ಡ ದುರಂತ ಎನ್ನದೇ ವಿಧಿಯಿಲ್ಲ. ಈ ಮೌನ ಮುಸ್ಲಿಂ ವಿರೋಧಿ ನಡೆಯೆಂದೇ ಹೇಳಬೇಕಾಗುತ್ತದೆ. ಮುಂಬಯಿಯ ‘ಹಂ ಆಜಾದಿಯೋಂಕೆ ಹಕ್ ಮೇ’ ಎಂಬ ಸಂಘಟನೆ ಮಾತ್ರ ಅವರ ಬೆಂಬಲಕ್ಕಿದೆ. ಆಕೆ ನೀಡಿರುವ ವಿವರಣೆಯನ್ನು ಒಪ್ಪಿಕೊಂಡು ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಹೇಳುತ್ತಿದೆ.

ಆಕೆ ಮುಂಬಯಿ ಹೈಕೋರ್ಟಿನಲ್ಲಿ ಎಲ್ಲ ಎಫ್‌ಐಆರ್ ಸೇರಿಸಿ ಒಂದೇ ಆಗಿ ಪರಿಗಣಿಸಬೇಕು; ತನ್ನ ವಿರುದ್ಧ ಇರುವ ಸುಳ್ಳು ಆರೋಪಗಳ ವಜಾ ಮಾಡಬೇಕು; ಬಲವಂತದ ಕ್ರಮಗಳನ್ನು ಜರುಗಿಸಬಾರದು ಎಂದು ಹಿರಿಯ ನ್ಯಾಯವಾದಿ ಮಿಹಿರ್ ದೇಸಾಯಿ ಮೂಲಕ ಕೇಳಿಕೊಂಡಾಗಲೂ ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ಮೊದಲು ಅದನ್ನು ವಿರೋಧಿಸಿದರು. ನಂತರ ಎಲ್ಲ ಪ್ರಕರಣಗಳನ್ನೂ ಸೇರಿಸಿ ವಿಚಾರಣೆ ನಡೆಸಲು ಹೈಕೋರ್ಟು ಆದೇಶಿಸಿತು.

ಈಗ ಪೊಲೀಸು ಠಾಣೆಯಿಂದ ಠಾಣೆಗೆ ಅಲೆದು, ಸುತ್ತಮುತ್ತಲವರ ಆಕ್ರೋಶಕ್ಕೆ ಹೆದರಿ ಆಕೆ ಮನೆ ತೊರೆದಿದ್ದಾರೆ. ಅವರ ಮಕ್ಕಳು ಬಂಧುಗಳ ಮನೆಯಲ್ಲಿ ಉಳಿದು ಶಾಲೆ ಕಾಲೇಜಿಗೆ ಹೋಗದೇ ಇವೆ. ಅವರಿಬ್ಬರನ್ನೂ ಶಿರೀನ್ ಜನವರಿ ೧೭ರ ಬಳಿಕ ಭೇಟಿಯಾಗಿಲ್ಲ. ಅವರೀಗ ಪ್ರಾಣಭಯವನ್ನು ಮುಸ್ಲಿಂ ಸಮುದಾಯದವರಿಂದಲೂ, ಬಂಧನವನ್ನು ಪೋಲೀಸರಿಂದಲೂ ನಿರೀಕ್ಷಿಸುತ್ತ ಭೂಗತರಾಗಿದ್ದಾರೆ. ಎಂದೆಂದೂ ಬುರ್ಖಾ ತೊಡದವರು ಬುರ್ಖಾ ತೊಟ್ಟು, ಗುರುತು ಮರೆಸಿ ಓಡಾಡಬೇಕಾಗಿದೆ.

ಈಗ ಶಿರೀನ್ ಮನಸ್ಥಿತಿ ಬಹುಸಂಕೀರ್ಣವಾಗಿರಬಹುದು. ಒಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಸಿಸ್, ತಾಲಿಬಾನ್, ಲಷ್ಕರೆ ತಯ್ಬಾನಂತಹ ಸಂಘಟನೆಗಳ ಹಿಂಸಾತ್ಮಕ ಕೃತ್ಯಗಳು ಇಸ್ಲಾಂ ಧರ್ಮವು ‘ಭಯೋತ್ಪಾದಕ’, ‘ಅತಿಧಾರ್ಮಿಕ’ ಎಂಬ ಏಕಾಕಾರದ ಇಮೇಜ್ ಪಡೆಯುವಂತೆ ಮಾಡುತ್ತಿದ್ದರೆ; ಇನ್ನೊಂದೆಡೆ ತಮ್ಮ ಪಾರಂಪರಿಕ ಬೌದ್ಧಿಕ ಚಿಂತನೆಗಳ ಮಾದರಿಯಿಂದ ಹೊರಬರಲಾರದ ಬಹುದೊಡ್ಡ ಮುಸ್ಲಿಂ ಸಮುದಾಯವಿದೆ. ತಮ್ಮ ಭಾನವಾತ್ಮಕ ಧಾರ್ಮಿಕತೆಯ ಚಿಪ್ಪಿನಿಂದ ಹೊರಬರಲಾರದ ಆತಂಕಿತ/ಹಿಂಜರಿಕೆಯ ಸಾಮಾನ್ಯ ಮುಸ್ಲಿಮರು ಒಂದೆಡೆಯಿದ್ದರೆ; ತಲೆಯೆತ್ತುತ್ತಿರುವ ಸ್ಥಳೀಯ ಉಗ್ರ ಧಾರ್ಮಿಕ ಮುಸ್ಲಿಂ ಸಂಘಟನೆ-ಸೈನ್ಯಗಳು ಮತ್ತೊಂದೆಡೆ ಇವೆ. ಇದರ ನಡುವೆ ಮುಸ್ಲಿಂ ಸಮುದಾಯದ ಬಗೆಗೆ ಪ್ರೀತಿ, ಕಾಳಜಿಯುಳ್ಳ ಮುಸ್ಲಿಮೇತರ ಪ್ರಗತಿಪರ ಮನಸುಗಳೂ ಕೂಡಾ ಭಯೋತ್ಪಾದನೆ, ಧಾರ್ಮಿಕ ನಿಷೇಧಗಳಂತಹ ಸಮುದಾಯದ ಆಂತರಿಕ ಬಿಕ್ಕಟ್ಟುಗಳ ಕುರಿತು ಎಚ್ಚರಿಸದೇ ಮೌನ ಬೆಂಬಲ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ.

ಹೀಗಿರುತ್ತ ಮುಸ್ಲಿಂ ಮಹಿಳೆಯ ಪರವಾಗಿ ಯಾರು ದನಿಯೆತ್ತುವವರು?

ಧಾರ್ಮಿಕ ಭಾವನೆ - ಕಲ್ಪನೆ ವರ್ಸಸ್ ವಾಸ್ತವ


‘ರಿಪೋರ್ಟರ‍್ಸ್ ವಿದೌಟ್ ಬಾರ್ಡರ‍್ಸ್’ ಎಂಬ ಸಂಸ್ಥೆಯ ಸರ್ವೇ ಪ್ರಕಾರ ‘ಜಾಗತಿಕ ಪ್ರೆಸ್ ಫ್ರೀಡಂ ಇಂಡೆಕ್ಸ್’ನಲ್ಲಿ ಭಾರತ ತುಂಬ ಕೆಳಗಿದೆ. ಸಟಾನಿಕ್ ವರ್ಸಸ್ ಅನ್ನು ಬೇರೆಲ್ಲ ದೇಶಗಳಿಗಿಂತ ಮೊದಲೇ ಭಾರತವು ನಿಷೇಧಿಸಿತು. ಕಳೆದ ವರ್ಷ ಹಿಂದೂ ಸಂಘಟನೆಯೊಬ್ಬರ ಭಯದಿಂದ ವೆಂಡಿ ಡೊನಿಗರ್ ಅವರ ‘ದ ಹಿಂದೂಸ್: ಅನ್ ಆಲ್ಟರ್ನೇಟಿವ್ ಹಿಸ್ಟರಿ’ ಪುಸ್ತಕವನ್ನು ಪೆಂಗ್ವಿನ್ ವಾಪಸು ಪಡೆದು ಪ್ರತಿಗಳನ್ನು ನಾಶಪಡಿಸಿತು. ಮೊನ್ನೆಮೊನ್ನೆ ಪೆರುಮಾಳ್ ಮುರುಗನ್ ಅವರ ‘ಒನ್ ಪಾರ್ಟ್ ವುಮನ್’ ಪುಸ್ತಕಕ್ಕೂ ನಿಷೇಧದ ಗತಿ ಒದಗಿತು. ಕರ್ನಾಟಕದಲ್ಲಂತೂ ಸಾಹಿತ್ಯ ಕೃತಿಗಳ ನಿಷೇಧಕ್ಕೆ ಆಗ್ರಹಿಸಿ ಧಾಂಧಲೆಯೆಬ್ಬಿಸುವುದು ಹಾಗೂ ಅದರ ಪರವಾಗಿ ಪ್ರಜ್ಞಾವಂತ ಸಮುದಾಯ ದನಿಯೆತ್ತುವುದು ಒಂದು ಪರಂಪರೆಯಂತೆ ಮುಂದುವರೆಯುತ್ತಲೇ ಇದೆ.

ಸರ್ಕಾರಗಳಿಗೆ ಧಾರ್ಮಿಕ ಗುಂಪುಗಳ ಭಾವನೆ ಮುಖ್ಯ. ವೈಯಕ್ತಿಕ ಹಕ್ಕು, ಅಭಿಪ್ರಾಯ ಅಲ್ಲ ಎಂದು ಮತ್ತೆಮತ್ತೆ ಸಾಬೀತಾಗುತ್ತಿದೆ. ಭಾರತ ಪ್ರಜಾಪ್ರಭುತ್ವವಲ್ಲವೇ? ಇಲ್ಲಿ ಬಹುಸಂಖ್ಯಾತ ಅಭಿಪ್ರಾಯದ ಪರವಾಗಿಯೇ ವ್ಯವಸ್ಥೆ ಸ್ಪಂದಿಸುತ್ತದೆ. ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಧಾರ್ಮಿಕ ಭಾವನೆಯೇ ಹೆಚ್ಚು ಮುಖ್ಯವೆನಿಸಿದೆ. ರಾಜಕೀಯ ಪ್ರಕ್ರಿಯೆಗಳು ಪ್ರಜಾಪ್ರಭುತ್ವವನ್ನು ಕಾಪಾಡುತ್ತಿವೆಯೋ ಇಲ್ಲವೋ ಎಂದು ಕಣ್ಣಿಡಬೇಕಾದವು ಪತ್ರಿಕೆಗಳು. ಆದರೆ ಈಗ ರಾಜಕೀಯವು ತನ್ನ ಲಾಭಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿರುವಾಗ ಎಲ್ಲರಿಗಿಂತ ಭಿನ್ನವಾಗಿ, ನೇರ ನಿಲುವನ್ನು ತಳೆದ ಪತ್ರಕರ್ತ ಸುಳ್ಳು ಆರೋಪಗಳಿಗೆ ಬಲಿಯಾಗಬೇಕಾದ; ಕೊಲೆಯಾಗಬೇಕಾದ; ಹಿಂಸೆಯನ್ನು ಎದುರಿಸಬೇಕಾದ ಸಂದರ್ಭ ಹುಟ್ಟಿಕೊಂಡಿದೆ. ಬಹುಧರ್ಮಗಳ ದೇಶದಲ್ಲಿ ಎಲ್ಲ ಧರ್ಮಗಳ ಜನ ಸೌಹಾರ್ದದಿಂದ ಬಾಳುವಂತಾಗಬೇಕೆಂದು ಸೃಷ್ಟಿಸಿದ ಕಾನೂನು ಅದರ ವಿರುದ್ಧ ಕಾರಣಗಳಿಗೆ ಉಪಯೋಗವಾಗುತ್ತಿದೆ. ಇದಕ್ಕೆ ಸೆಕ್ಷನ್ ೨೯೫ ಒಂದು ಉದಾಹರಣೆ ಎನ್ನಬಹುದೇ?

ಧಾರ್ಮಿಕ ಭಾವನೆ ಎಂಬ ಕಲ್ಪನಾತ್ಮಕ ವಸ್ತುವನ್ನು ವ್ಯಾಖ್ಯಾನಿಸಿ, ಅದನ್ನು ಕೆರಳಿಸಿ ಮನನೋಯಿಸಿದವರನ್ನು ಶಿಕ್ಷಿಸಲು ಐಪಿಸಿ ಕಲಮುಗಳಿವೆ. ಯಾವುದೇ ಮಾತು, ಬರಹ, ಸಂಜ್ಞೆ ಅಥವಾ ಇನ್ಯಾವುದೇ ವ್ಯಕ್ತ ರೂಪದಲ್ಲಿ, ಯಾವುದೇ ವರ್ಗದ ಪ್ರಜೆಯ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶಪೂರ್ವಕ ಅಥವಾ ದುರುದ್ದೇಶಪೂರಿತ ಕ್ರಿಯೆಯನ್ನು ೨೯೫ನೇ ಕಲಮು ಶಿಕ್ಷಾರ್ಹ ಎನ್ನುತ್ತದೆ. ಇದು ಧರ್ಮಶಾಸ್ತ್ರಗಳು ಹೇಳುವ ‘ಧರ್ಮದ್ರೋಹ’ ಎಂಬ ಪದಕ್ಕೆ ಹತ್ತಿರ ಇರುವ ವ್ಯಾಖ್ಯಾನವಾಗಿದೆ. ಈಗ ಒಂದು ಗುಂಪಿನಿಂದ ಸಣ್ಣಪುಟ್ಟ ವಿರೋಧ, ಗಲಾಟೆ, ದಂಗೆ ಎದ್ದಕೂಡಲೇ ಈ ಸೆಕ್ಷನ್ ಹಾಕಿ ಬಾಯಿಮುಚ್ಚಿಸುವ ಕೆಲಸ ನಡೆಯುತ್ತಿದೆ. ಹಲವು ಬಾರಿ ದುರ್ಬಳಕೆಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರಿತವಾಗಿ ಎಂಬ ಪದಗಳನ್ನು ಸಾಧಿಸಿ ತೋರಿಸುವುದು ಸುಲಭ. ಹಾಗಲ್ಲ ಎಂದು ಸಾಧಿಸುವುದು ಕಷ್ಟ. ಅದರಲ್ಲೂ ಒಂದು ಧಾರ್ಮಿಕ ಗುಂಪು ಒಬ್ಬ ವ್ಯಕ್ತಿಯ ವಿರುದ್ಧ ನಿಂತಾಗ ನ್ಯಾಯಾಲಯಗಳೂ ದುರುದ್ದೇಶಪೂರಿತ ಎನ್ನುವುದನ್ನು ಒಪ್ಪಿಬಿಡುತ್ತಿವೆ. ನ್ಯಾಯವ್ಯವಸ್ಥೆಯೂ ಧಾರ್ಮಿಕ ನಂಬಿಕೆಗಳು ಉಲ್ಲಂಘನಾರ್ಹವಲ್ಲ ಎಂದು ಪ್ರತಿಪಾದಿಸಿದಂತೆಯೇ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಕಾನೂನನ್ನು ಪ್ರಜ್ಞಾವಂತ ವರ್ಗ ಕೂಡಾ ಸೂಕ್ತವಾಗಿ ಉಪಯೋಗಿಸಿಕೊಳ್ಳಬಹುದೆಂಬ ಬಗೆಗೆ ನಮ್ಮ ಗಮನ ಹರಿಸಬೇಕಾಗಿದೆ.

ಕನ್ನಡದಲ್ಲಿ ೯೦ರ ದಶಕದಲ್ಲಿ ‘ಓ ದೇವರೇ ನೀನೇಕೆ ಹೆಣ್ಣಾಗಬಾರದು?’ ಎಂಬ ಕತೆ ಬರೆದು ಧಾರ್ಮಿಕ ಮುಖ್ಯಸ್ಥರ ಕೋಪಕ್ಕೆ ಬಲಿಯಾದ ಬಾನು ಮುಷ್ತಾಕ್ ನೆನಪಾಗುತ್ತಾರೆ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ಬೆದರಿಕೆಗಳು ಬಂದಾಗ ತಾವು ಕಳೆದ ಆತಂಕದ ವರ್ಷಗಳನ್ನು ಬಾನು ಆವಾಗೀವಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಏನನ್ನೂ ಬರೆಯಲಾಗದ, ಓದಲಾಗದ, ಹೊಸ ವಿಚಾರಗಳು ಹೊಳೆಯಲಾಗದ ಶೂನ್ಯ ತಮ್ಮನ್ನು ಆವರಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಒಂದುಕಡೆ ವೇಗವಾಗಿ ಬದಲಾಗುತ್ತಿರುವ; ಚಿಂತಿಸುತ್ತಿರುವ ಸುತ್ತಮುತ್ತಲ ಸಮಾಜ; ಇನ್ನೊಂದೆಡೆ ಧರ್ಮವನ್ನೂ, ಅದರ ಸ್ಮೃತಿಪುರಾಣಗಳನ್ನೂ ತನಗಿಷ್ಟ ಬಂದಂತೆ ವ್ಯಾಖ್ಯಾನಿಸಿ ನಿರ್ಬಂಧ ವಿಧಿಸುವ ಧರ್ಮದ ಸಾಂಸ್ಥಿಕ ವ್ಯವಸ್ಥೆಗಳು - ಇವೆರೆಡರ ನಡುವೆ ಸೂಕ್ಷ್ಮ ಮನಸ್ಸು ಸಮತೋಲ ಕಂಡುಕೊಂಡು ವೈಚಾರಿಕ ಸ್ಪಷ್ಟತೆ ಮತ್ತು ದಿಟ್ಟತನ ಪಡೆದುಕೊಂಡು ಬದುಕುವುದು ಸುಲಭವಲ್ಲ.

ಬಾನು ೩೦ ವರ್ಷದ ಕೆಳಗೆ ಅಂಥ ಭಯಗಳ ದಾಟಿದರು. ಮತ್ತೆ ಬರೆಯಲೇಬೇಕು ಎಂಬ ಅನಿವಾರ್ಯತೆ ಕಂಡುಕೊಂಡು ಬರೆದರು. ಸಾರಾ, ಬಾನು, ಷರೀಫಾ ಮತ್ತವರಂಥವರು ಸಮುದಾಯದ ದನಿಯಾದರು. ಅದು ಶಿರೀನ್‌ಗೆ ಸಾಧ್ಯವಾದೀತೇ?

ಸುಡುವ ಕಾಲವೇ ಉತ್ತರಿಸು.. 


  • ಇವತ್ತು ಪೆರುಮಾಳ್ ಮುರುಗನ್ ಎಂಬ ಸಾಹಿತಿ ತನ್ನ ಚರಮಗೀತೆಯನ್ನು ತಾನೇ ಬರೆದು ಹಾಡುತ್ತಿರುವಾಗ; ಪಿಕೆಯಂತಹ ಚಿತ್ರ ನಿಷೇಧ ಭಯ ಎದುರಿಸುವಂತಾದಾವಾಗ - ಶಿರೀನ್ ದಳವಿ ಎಂಬ ಪತ್ರಕರ್ತೆ ತನ್ನೆಲ್ಲ ಆತಂಕ, ಭಯಗಳ ದಾಟಿ ಮತ್ತೆ ಬರೆದಾಳೇ? ಮುಸ್ಲಿಂ ಅತ್ಯುಗ್ರ ಸಂಘಟನೆ ಐಸಿಸ್ ಜನರ ತಲೆಯನ್ನು ತರಕಾರಿಯಂತೆ ಕೊಚ್ಚಿ ಬಿಸಾಡುತ್ತ ಕ್ರೌರ್ಯದ ಉತ್ತುಂಗ ಮೆರೆಯುತ್ತಿರುವಾಗ ಆ ಮೂಲಭೂತವಾದದ ಹಿಂಸೆಯೆದುರು ಶಿರೀನಳಂತಹ ಮಹಿಳೆಯ ಅರಿವಿನ ಒಳದನಿ ಕೇಳಬಹುದೇ?
  • ಶಿರೀನ್ ಉರ್ದು ದಿನಪತ್ರಿಕೆಯ ಸಂಪಾದಕಿ. ಅವರೇನಾದರೂ ಮರಾಠಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದರೆ ಅವರ ಬೆಂಬಲ ಗುಂಪೂ, ಯೋಚನೆಗಳೂ ಭಿನ್ನವಾಗಿರುತ್ತಿದ್ದವೇ? ಉರ್ದು ಭಾಷಾ ಶಾಲೆಗಳು ಬಹುಪಾಲು ಮುಸ್ಲಿಂ ಮಕ್ಕಳಿಗೆ ಮಾತೃಭಾಷಾ ಶಿಕ್ಷಣದ ಅವಕಾಶ ನೀಡಿವೆಯಾದರೂ ಅದು ಒಂದೇ ಧರ್ಮದ ಜೊತೆಗೆ ಗುರುತಿಸಲ್ಪಡುವ ಭಾಷೆಯಾಗಿರುವುದರಿಂದ; ಬೋಧಿಸುವವರು, ಕಲಿಯುವವರೂ ಬಹುತೇಕ ಮುಸ್ಲಿಮರೇ ಆಗಿರುವುದರಿಂದ ಉಳಿದ ಸಮಾಜದೊಂದಿಗಿನ ಒಡನಾಟಕ್ಕೆ ಅದು ಅಡ್ಡಗೋಡೆಯಾಗಿಲ್ಲವೆ? ಅದರಲ್ಲೂ ಹೆಣ್ಮಕ್ಕಳನ್ನು ಉರ್ದು ಕಲಿಕೆ ನಂತರ ಅರೇಬಿಕ್ ಪಠಣದ ಶಾಲೆಗೆ ಕಳಿಸಿ ಮದುವೆ ಮಾಡಿಬಿಡುವುದರಿಂದ ಸಮಾಜದೊಂದಿಗಿನ ಕೊಡುಕೊಳೆಯಲ್ಲಿ ಬಹಳಷ್ಟನ್ನು ಮುಸ್ಲಿಮರೂ, ಮುಸ್ಲಿಮೇತರರೂ ಕಳೆದುಕೊಳ್ಳುತ್ತಿಲ್ಲವೇ? 
  • ದನಿಯಿಲ್ಲದವರಲ್ಲೇ ದನಿಯಿಲ್ಲದವಳು ಮುಸ್ಲಿಂ ಮಹಿಳೆ. ತನ್ನ ಕೌಟುಂಬಿಕ ತಲ್ಲಣವೋ, ವೈಯಕ್ತಿಕ ಅಭಿಪ್ರಾಯವೋ, ಯಾವುದನ್ನೂ ಮುಕ್ತವಾಗಿ ಮುಸ್ಲಿಮೇತರರೊಂದಿಗೆ ಹಂಚಿಕೊಂಡು ಬೆರೆಯುವ ಅವಕಾಶಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಭಿನ್ನವಾಗಿ ಯೋಚಿಸಿ, ಪ್ರಶ್ನಿಸಿ, ಕಾರ್ಯ ಪ್ರವೃತ್ತರಾಗುವ ಮಹಿಳೆಯರು ಬೆರಳೆಣಿಕೆಯಷ್ಟು ಮತ್ತು ಅವರೆಲ್ಲರೂ ದಾಳಿಗೊಳಗಾಗುತ್ತಿದ್ದಾರೆ. ಹೀಗಿರುವಾಗ ಸಂಪ್ರದಾಯನಿಷ್ಠ ಮನಸ್ಥಿತಿಯನ್ನು ಕೊಂಚ ಕಡಿಮೆ ಮಾಡಿಕೊಂಡು, ಆಧುನಿಕ ಶಿಕ್ಷಣ ಪಡೆದು, ಸಮಾಜದ ಆಗುಹೋಗುಗಳಲ್ಲಿ ಭಾಗವಹಿಸುವ ಮೂಲಕ; ಉಳಿದ ಮಹಿಳಾ ಸಮುದಾಯದೊಡನೆ ಬೆರೆಯುವ ಮೂಲಕ ಸಮುದಾಯಗಳ ಪರಸ್ಪರ ಅಪನಂಬಿಕೆ/ಸ್ನೇಹರಾಹಿತ್ಯಗಳನ್ನು ಕಡಿಮೆ ಮಾಡಲು ಮುಸ್ಲಿಂ ಮಹಿಳೆ ಸಾಧನವಾಗಲಾರಳೇ?


***


ವಿಮರ್ಶೆಯಿಲ್ಲದ ಯಾವ ವ್ಯವಸ್ಥೆಯೂ ಇರಬಾರದು. ಪ್ರತಿಯೊಂದು ವ್ಯಕ್ತಿ, ವ್ಯವಸ್ಥೆಗೂ ವಿಮರ್ಶೆ, ಆತ್ಮ ವಿಮರ್ಶೆ ಬೇಕು. ಅದರಲ್ಲೂ ಧರ್ಮದಂತಹ ‘ತೊಡೆಯಲಾಗದ ಲಿಪಿಯ’ ಬರೆಯಹೊರಡುವ ಪಟ್ಟಭದ್ರ ವ್ಯವಸ್ಥೆಗೆ ಕಾಲಕಾಲಕ್ಕೆ ವಿಮರ್ಶೆ ನಡೆಯಬೇಕು. ಹಾಗೆ ನೋಡಿದರೆ ಶಿರೀನ್ ತಮ್ಮ ಧರ್ಮ ಕುರಿತು ಅವಶ್ಯವಿರುವ ಯಾವ ವಿಮರ್ಶೆಯನ್ನೂ ಮಾಡಿರಲಿಲ್ಲ. ಕೇವಲ ಒಂದು ಕಾರ್ಟೂನಿನ ಚಿತ್ರ ಮರು ಮುದ್ರಿಸಿದರು ಅಷ್ಟೇ. ಅಷ್ಟಕ್ಕೇ ಎಚ್ಚೆತ್ತ ಧಾರ್ಮಿಕ ಹಿತಾಸಕ್ತಿಗಳು ಮುಂದೊಂದು ದಿನ ಏಳಲಿರುವ ಈ ದನಿಯನ್ನು ಇವತ್ತೇ ಗುರುತಿಸಿ, ಹತ್ತಿಕ್ಕಲು ಯತ್ನಿಸಿದ್ದಾರೆ. ಎಲ್ಲ ವ್ಯವಸ್ಥೆಗಳ ಬಾಧಿತಳು ಹೆಣ್ಣೇ ಆಗಿರುವುದರಿಂದ ಅಲ್ಲಿಂದ ಪ್ರತಿರೋಧ ಬಂದರೆ ಬಲವಾಗಿಯೇ ಇರುತ್ತದೆ ಎಂದು ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಯತ್ನಿಸಲಾಗಿದೆ.

ಆದರೆ ಶಿರೀನರ ಧ್ವನಿ ಗಟ್ಟಿಗೊಳ್ಳಬೇಕು ಮತ್ತು ಪ್ರತಿಧ್ವನಿಸಬೇಕು. ಇವತ್ತು ಧಾರ್ಮಿಕ ಮೂಲಭೂತವಾದ ತನ್ನೆಲ್ಲ ಸ್ವರೂಪಗಳಲ್ಲಿ ವಿಜೃಂಭಿಸುತ್ತಿದೆ. ಧರ್ಮಗಳು ಹಾಗೆಂದು ಬೋಧಿಸಿವೆಯೋ ಇಲ್ಲವೋ, ಪ್ರಪಂಚದ ಬಹುತೇಕ ಧರ್ಮಗಳ ರಕ್ಷಕರ ಹೆಸರಿನಲ್ಲಿ ಉಗ್ರಗಾಮಿ ಸಂಘಟನೆಗಳು ತಲೆಯೆತ್ತಿವೆ. ಅವರ ಧಾರ್ಮಿಕ ಮೂಲಭೂತವಾದವು ಅನೂಹ್ಯ ದಿಗಂತಗಳಿಗೂ ಆಚೆ ವಿಸ್ತರಿಸಿಕೊಳ್ಳುತ್ತಿದೆ. ಈ ಪರಿಸ್ಥಿತಿಯಲ್ಲಿ ಹಕ್ಕು ಸ್ವಾತಂತ್ರ್ಯ ಕಳೆದುಕೊಳ್ಳುವವರು ಅಧಿಕಾರಹೀನರು ಮತ್ತು ಅವಕಾಶ ವಂಚಿತರು. ಅದರಲ್ಲೂ ಹೆಣ್ಣು.

ಇದನ್ನರಿತು ಮಹಿಳೆ ಧಾರ್ಮಿಕ ಚೌಕಟ್ಟಿನಿಂದ ಹೊರಬರಲು ಯತ್ನಿಸಬೇಕು. ಅದು ಸಾಧ್ಯವಾಗದವರು, ಇಷ್ಟವಿಲ್ಲದವರು, ಧರ್ಮವನ್ನು ಆಚರಿಸಬಯಸುವವರು ಕೊನೆಯ ಪಕ್ಷ ತಂತಮ್ಮ ಧರ್ಮಗಳನ್ನು ಚಲನಶೀಲಗೊಳಿಸಬೇಕು. ಕಾಲದ ಅಗತ್ಯಕ್ಕೆ, ನೆಲದ ಅನಿವಾರ್ಯತೆಗೆ ತಕ್ಕಂತೆ ತನ್ನ ಧರ್ಮವನ್ನು ಪುನರ್ರೂಪಿಸಿಕೊಳ್ಳಬೇಕು. ಧಾರ್ಮಿಕ ಮೂಲಭೂತವಾದವನ್ನು, ಅದು ಹಿಂದೂ/ಮುಸ್ಲಿಂ/ಕ್ರೈಸ್ತ/ಜೈನ/ಸಿಖ್/ಯಹೂದಿ ಎಂಬಿತ್ಯಾದಿಯಾಗಿ ನೋಡದೇ ಏಕಪ್ರಕಾರವಾಗಿ ವಿರೋಧಿಸಬೇಕು. ಈ ಪ್ರಯತ್ನದಲ್ಲಿ ತಾವು ಹುಟ್ಟಿದ ಜಾತಿಧರ್ಮಗಳ ಮರೆತು ಒಂದುಗೂಡಬೇಕು. ಅದಕ್ಕೂ ಮುನ್ನ ಇದುವರೆಗೆ ಸ್ಥಾಪಿಸಲ್ಪಟ್ಟ, ಆಚರಣೆಯಲ್ಲಿರುವ ಎಲ್ಲ ಅಂದರೆ ಎಲ್ಲ ಧರ್ಮಗಳೂ ಪುರುಷ ನಿರ್ಮಿತಿಗಳು ಹಾಗೂ ಮಹಿಳಾ ವಿರೋಧಿಗಳು ಎಂದು ನೆನಪಿಡಬೇಕು. ಸ್ವಧರ್ಮದ ಮೇಲಿನ ಮೋಹ ತೊರೆಯಲು ಸಾಧ್ಯವಾದರೆ; ನನ್ನ ನೆಲೆಯನ್ನು ಮೊದಲು ವಿಮರ್ಶೆಗೊಳಪಡಿಸಿದರೆ ಆಗ ಇತರ ನೆಲೆಗಳ ಲೋಪ ಅರ್ಥವಾಗುತ್ತದೆ. ದ್ವೇಷವಿಲ್ಲದೆ ಎಲ್ಲ ಧರ್ಮದವರೂ ತಂತಮ್ಮ ಸುತ್ತಲ ಸಂಕಲೆ ಕಳಚಿ ಒಗ್ಗೂಡಲು ಸಾಧ್ಯವಾಗುತ್ತದೆ.

ವಿಶ್ವ ಸೋದರಿತ್ವ ಎಂದರೆ ಇದೇ. ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟರೂ ಸಾಕು, ಆಗ ಮಹಿಳಾ ದಿನಾಚರಣೆಗೂ, ಎಲ್ಲ ಸಾಂಕೇತಿಕ ಕ್ರಿಯೆಗಳಿಗೂ ಒಂದು ಅರ್ಥ ಬರುತ್ತದೆ.

ಪುಟ್ಟ ಪಾದಕೆ ದೊಡ್ಡದಾಯಿತೇ ಆಸೆ? ಇಲ್ಲ, ಎಲ್ಲ ದಾರಿಯೂ ಪುಟ್ಟ ಹೆಜ್ಜೆಯಿಡುವುದರಿಂದಲೇ ಕ್ರಮಿಸಲ್ಪಡುತ್ತದೆ.No comments:

Post a Comment