Friday, 20 February 2015

H1N1 - ಹಂದಿಜ್ವರವೆಂಬ ಗುಮ್ಮ...




‘ಮಾನವನಿಗೆ ಮೂವರು ಮಹಾನ್ ಶತ್ರುಗಳು
ಜ್ವರ(ಫ್ಲು), ಬರ ಹಾಗೂ ಯುದ್ಧ..
ಮೂರರಲ್ಲಿ ಅತಿ ಘೋರ, ಭಯಂಕರ
ಫ್ಲೂ ಜ್ವರ.. ’
- ವಿಲಿಯಂ ಓಸ್ಲರ್


ಯಾವ ದಿನಪತ್ರಿಕೆ ತೆಗೆಯಲಿ, ಸುದ್ದಿವಾಹಿನಿಯ ವಾರ್ತಾಪ್ರಸಾರ ನೋಡಲಿ, ಎಲ್ಲೆಲ್ಲೂ ಮುಖಕವಚ (ಮಾಸ್ಕ್) ತೊಟ್ಟ ಜನರೇ ಶೋಭಿಸುತ್ತಿದ್ದಾರೆ. ನಾಲ್ಕಾರು ಜನ ಗುಂಪಾಗಿರುವಲ್ಲೆಲ್ಲ ಸದ್ಯ ಬಂದೆರಗಿದ ಭಯಾನಕ ಪಿಡುಗಿನ ಬಗೆಗೇ ಮಾತು. ಇನ್ನೇನು ಪ್ರಪಂಚವೆಲ್ಲ ಈ ಕಾಯಿಲೆಗೆ ಖಾಲಿಯಾಗೇಬಿಡುತ್ತದೇನೋ ಎಂಬಂಥ ಮಾತುಗಳು, ಅಲ್ಲೆಲ್ಲೋ ಎಷ್ಟೋ ಸಾವಿರ ಸಾವು ಎಂಬ ಗಾಳಿಸುದ್ದಿ, ಅದಕ್ಕೆ ಯಾವುದೋ ಬೇರಿನ ಕಷಾಯ ರಾಮಬಾಣವಂತೆ ಎಂಬ ಗುಸುಗುಸು, ಪ್ರಖ್ಯಾತ ನಕಲಿ ವೈದ್ಯನೊಬ್ಬ ತನ್ನ ಬುದ್ಧಿವಂತಿಕೆಯನ್ನೆಲ್ಲ ಬಳಸಿ ನಾನು ಮಾತ್ರ ಅದಕ್ಕೆ ಔಷಧ ಕೊಡಬಲ್ಲೆ ಎಂದು ಕ್ಯಾಮೆರಾಗಳ ಮುಂದೆ ಸುಳ್ಳೇ ಬೀಗುವುದು...

ಇವೆಲ್ಲ ಈಚೆಗೆ ಹಂದಿಜ್ವರ ಎಚ್೧ಎನ್೧ ಶುರುವಾದಾಗ ಕಂಡುಬಂದ ಕೆಲ ಚಿತ್ರಣಗಳು.

ಏನಿದು ‘ಹಂದಿಯ ಜ್ವರ?’

‘ಹಂದಿಜ್ವರ’ವೆಂಬ ಹೆಸರು ಹೊತ್ತ ಕಾಯಿಲೆ, ಹಾಗೂ ಅದರ ಭಯ ವಿಶ್ವಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿದೆ. ಇದುವರೆಗೆ ೧೬೮ ದೇಶಗಳ, ಒಂದೂವರೆ ಲಕ್ಷದಷ್ಟು ಜನ ಸೋಂಕಿಗೊಳಗಾಗಿದ್ದರೆ, ೧೧೫೦ ಜನ ಸಾವನ್ನಪ್ಪಿದ್ದಾರೆ. ಕಳೆದ ಶತಮಾನದಲ್ಲಿ ಕಾಲರಾ, ಪ್ಲೇಗು, ಮೈಲಿಬೇನೆಯಂತಹ ವ್ಯಾಧಿಗಳು ಹುಟ್ಟಿಸುತ್ತಿದ್ದ ಆತಂಕವನ್ನೇ ಇದೂ ಈಗ ಸೃಷ್ಟಿಸುತ್ತಿದೆ ಎನ್ನಬಹುದು. ಪ್ರಪಂಚವೇ ಒಂದು ಹಳ್ಳಿಯಂತಾಗಿರುವ ಇಂದಿನ ದಿನಗಳಲ್ಲಿ ಯಾವುದೋ ದೇಶದಲ್ಲಿ ಶುರುವಾದ ಸಾಂಕ್ರಾಮಿಕ ಪಿಡುಗೊಂದು ದೂರ ದೇಶಗಳಿಗೆಲ್ಲ ವ್ಯಾಪಿಸುವುದು ಕಷ್ಟವೇನಲ್ಲ. ಈ ಕಾಯಿಲೆ ನಮ್ಮ ದೇಶಕ್ಕಿನ್ನೂ ಬಂದಿಲ್ಲವೆಂದು ನಿಶ್ಚಿಂತರಾಗಿ ಉಳಿಯುವ ದಿನಗಳು ದೂರ ಉಳಿದವು. ಈಗ ಇಲ್ಲೂ ದಿನದಿನವೂ ಹೊಸಹೊಸ ಹಂದಿಜ್ವರದ ಪ್ರಕರಣಗಳು ಪತ್ತೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ನಿಧಾನ ಗತಿಯಲ್ಲಿ ಏರುತ್ತಿದೆ. ಇಷ್ಟೊಂದು ಜನನಿಬಿಡ ದೇಶವಾದ ಭಾರತದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹಬ್ಬಲು ತಕ್ಕ ವಾತಾವರಣವಿದ್ದು ಎಲ್ಲರೂ ಈ ಕಾಯಿಲೆಯ ಬಗ್ಗೆ ಕೆಲ ಮಾಹಿತಿ ಅರಿತುಕೊಳ್ಳುವುದು ಒಳ್ಳೆಯದು. ಅದೇ ವೇಳೆಗೆ ಅನಗತ್ಯ ಭಯಕ್ಕೊಳಗಾಗದೇ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕಾದ್ದೂ ಅಗತ್ಯ.



‘ಫ್ಲು’ ಎಂದು ಕರೆಯಲಾಗುವ ಇನ್‌ಫ್ಲುಯೆಂಜಾ ಒಂದು ವೈರಸ್ ಕಾಯಿಲೆ. ‘ಇನ್‌ಫ್ಲುಯೆನ್ಸ್’ ಎಂಬ ಇಟಾಲಿಕ್ ಪದದಿಂದ ಆ ಹೆಸರು ಬಂದಿದೆ. ಇದು ‘ಆರ್ಥೋಮಿಕ್ಸೋವೈರಸ್’ ಎಂಬ ರೋಗಾಣುವಿನಿಂದ ಬರುತ್ತದೆ ಹಾಗೂ ತುಂಬ ಸಾಂಕ್ರಾಮಿಕವಾದ ಕಾಯಿಲೆಯಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದಿನ ಹಿಪ್ಪೋಕ್ರೆಟೀಸನ ಬರಹಗಳಲ್ಲೂ ಈ ಕಾಯಿಲೆಯ ಉಲ್ಲೇಖಗಳಿವೆ. ಅಲ್ಲಿಂದೀಚೆಗೆ ಕಾಲಕಾಲಕ್ಕೆ ಮನುಕುಲವನ್ನು ಕಾಡಿಸುತ್ತಾ ಬಂದಿರುವ ಈ ಕಾಯಿಲೆ ಹದಿನೆಂಟನೇ ಶತಮಾನದಿಂದೀಚೆಗೆ ವಿಶ್ವ ಪಿಡುಗಾಗಿ (ಪ್ಯಾಂಡೆಮಿಕ್) ಹಲವು ಲಕ್ಷ ಜನರ ಜೀವ ಹಾನಿ ಮಾಡಿದೆ ಎನ್ನಬಹುದು. ೧೮೮೯-೯೦ರಲ್ಲಿ ‘ಏಶಿಯಾಟಿಕ್ ಫ್ಲು’ ಅಥವಾ ‘ರಶಿಯನ್ ಫ್ಲು’ ಎಂದು ಕರೆಸಿಕೊಂಡ ಇದು ಒಂದು ಮಿಲಿಯ ಜನರ ಸಾವಿಗೆ ಕಾರಣವಾಗಿತ್ತು. ನಂತರ ದೊಡ್ಡ ಪ್ರಮಾಣದ ಪಿಡುಗಾಗಿ ೧೯೧೮-೧೯ರಲ್ಲಿ ಸ್ಪಾನಿಶ್ ಫ್ಲು ಎಂದು ಕರೆಸಿಕೊಂಡಿತು. ಪ್ಲೇಗಿನ ಕಪ್ಪು ಸಾವು ಬಿಟ್ಟರೆ ಅತಿ ದೊಡ್ಡ ವೈದ್ಯಕೀಯ ದುರಂತವೆಂದರೆ ಸ್ಪಾನಿಶ್ ಫ್ಲು ಎಂದೇ ಪರಿಗಣಿಸಲಾಗಿದೆ. ಎಷ್ಟು ಜನ ಸತ್ತರೆಂಬ ಅಂದಾಜೇ ಇಲ್ಲವಾದರೂ ಕನಿಷ್ಠ ೨೦-೧೦೦ ಮಿಲಿಯ ಜನ ಸತ್ತಿರಬಹುದೆಂದು ಶಂಕಿಸಲಾಗಿದೆ. ಆಗ ಅದು ನಿಜಾರ್ಥದಲ್ಲಿ ವಿಶ್ವದ ಪಿಡುಗೇ ಆಗಿತ್ತು. ದೂರದ ಪೆಸಿಫಿಕ್ ದ್ವೀಪಗಳು ಹಾಗೂ ಆರ್ಕ್ಟಿಕ್‌ನಲ್ಲೂ ಇದು ಹರಡಿತ್ತೆಂದರೆ ಇದರ ಸಾಂಕ್ರಾಮಿಕತೆಯನ್ನು ಅಂದಾಜಿಸಬಹುದು. ನಂತರ ೧೯೫೭ರಲ್ಲಿ ಬಂದ ಏಶಿಯನ್ ಫ್ಲುನಲ್ಲಿ ೧-೧.೫ ಮಿಲಿಯ ಜನ ಸತ್ತರೆ, ೧೯೬೮ರ ಹಾಂಗ್‌ಕಾಂಗ್ ಫ್ಲುನಲ್ಲಿ ೧ ಮಿಲಿಯ ಜನ ಸತ್ತಿರಬಹುದು. ಉತ್ತರ ಅಮೇರಿಕದ ದೇಶಗಳಲ್ಲಿ ಈಗಲೂ ಪ್ರತಿವರ್ಷ ಸಾವುನೋವನ್ನುಂಟುಮಾಡುವ ಇದು ಭಾರತದಲ್ಲಿ ಸೌಮ್ಯವೆಂದೇ ಹೇಳಬಹುದು. ಇಲ್ಲಿಯ ಹವಾಮಾನವೂ ಅದಕ್ಕೊಂದು ಕಾರಣ.

ಹೀಗೆ ಜನರ ನಡುವೆ ವರ್ಷವರ್ಷವೂ ಇದ್ದು ಮಳೆ-ಚಳಿಗಾಲದ ದಿನಗಳಲ್ಲಿ ಬಾಧಿಸುತ್ತಿದ್ದ, ಸುಮಾರು ಐದು ಲಕ್ಷದಷ್ಟು ಜನರನ್ನು ವರ್ಷವೂ ಬಲಿ ತೆಗೆದುಕೊಳ್ಳುತ್ತಿದ್ದ ಈ ಫ್ಲು, ನಡುನಡುವೆ ಭಯಂಕರ ರೋಗಕಾರಕವಾಗುವುದಿದೆ. ಕಾಲಕಾಲಕ್ಕೆ ಪ್ರಾಣಿ ಅಥವಾ ಪಕ್ಷಿಗಳ ವೈರಸ್ಸಿನೊಂದಿಗೆ ಸಂಯೋಗ ಹೊಂದಿ ಹೊಸತಳಿಯ ರೋಗಾಣು ಉತ್ಪತ್ತಿಯಾಗುತ್ತದೆ. ಅಥವಾ ಪ್ರಾಣಿ ಪಕ್ಷಿಗಳ ವೈರಸ್ಸೇ ಮನುಷ್ಯರಿಗೆ ಕಾಯಿಲೆ ಉಂಟುಮಾಡುತ್ತದೆ. ಹೀಗೆ ಉತ್ಪತ್ತಿಯಾದ ಹೊಸತಳಿಯ ವೈರಸ್ಸುಗಳು ಸಮುದಾಯದಲ್ಲಿ ನಿರೋಧಕ ಶಕ್ತಿಯನ್ನುಂಟುಮಾಡುತ್ತ ಬರುತ್ತವೆ ಹಾಗೂ ಅದೇ ವೈರಸ್ ನಂತರದ ವರ್ಷಗಳಲ್ಲಿ ಬರಿಯ ಶೀತಜ್ವರವನ್ನಷ್ಟೇ ಉಂಟುಮಾಡುತ್ತಾ ತೀವ್ರತೆಯನ್ನು ಕಳೆದುಕೊಳ್ಳುತ್ತದೆ.

ಇದರಿಂದ ಒಂದು ಅಂಶ ತಿಳಿಯುತ್ತದೆ, ಅದೇನೆಂದರೆ ಇದು ಹೊಸ ಕಾಯಿಲೆಯಲ್ಲ, ವರ್ಷ ವರ್ಷವೂ ನಮ್ಮನ್ನು ಬಾಧಿಸುತ್ತಾ ಏನೋ ಅಷ್ಟಿಷ್ಟು ಚಿಕಿತ್ಸೆಯಲ್ಲಿ ಕಮ್ಮಿಯಾಗಿಬಿಡುತ್ತಿದ್ದ ಕಾಯಿಲೆ.


ಈ ಸಲ ಕಾಯಿಲೆ ಉಂಟುಮಾಡಿರುವ ವೈರಸ್ ಮೊದಲು ಹಂದಿಗಳಲ್ಲಿದ್ದಿದ್ದು ನಂತರ ಮನುಷ್ಯನಿಗೆ ವರ್ಗಾವಣೆಯಾಗಿ ಬಂದಿರಬಹುದೆಂದು ಶಂಕಿಸಿ ಇದನ್ನು ‘ಹಂದಿಜ್ವರ’ವೆಂದು ಹೆಸರಿಸಲಾಗಿದೆ. ಈಗ ಅದರ ಹರಡುವಿಕೆ ಮಾನವನಿಂದ ಮಾನವನಿಗೇ ಹೊರತಾಗಿ ಹಂದಿಯಿಂದ ಮಾನವನಿಗೆ ಬರುವುದಿಲ್ಲ. ಈ ವೈರಸ್ಸನ್ನು ಎಚ್೧ ಎನ್೧ ಎಂದು ಹೆಸರಿಸಲಾಗಿದೆ. ಎಚ್೧ಎನ್೧ ಎಂಬವು ವೈರಸ್ಸಿನ ಜೀವಕೋಶದ ಮೇಲ್ಪದರದಲ್ಲಿರುವ ಆಂಟಿಜೆನ್ನುಗಳು. ಇದೇ ವೈರಸ್ ೧೯೧೮ರಲ್ಲೂ ಸ್ಪಾನಿಶ್ ಫ್ಲುಗೆ ಕಾರಣವಾಗಿತ್ತು. ೧೯೫೭ರ ಏಶಿಯನ್ ಫ್ಲುನಲ್ಲಿ ಎಚ್೨ ಎನ್೨, ೧೯೬೮ರ ಹಾಂಗ್‌ಕಾಂಗ್ ಫ್ಲುನಲ್ಲಿ ಎಚ್೩ ಎನ್೨, ಹಾಗೂ ೧೯೯೦ರಲ್ಲಿ ಎಚ್೫ ಎನ್೧ ವೈರಸ್ಸುಗಳು ವಿಶ್ವಪಿಡುಗನ್ನುಂಟುಮಾಡಿದ್ದವು. ಈಗ ಚಾಲ್ತಿಯಲ್ಲಿರುವ ವೈರಸ್, ಎಚ್೧ಎನ್೧, ೧೯೧೮ರಲ್ಲಿ ಕೇವಲ ೨೫ ವಾರದಲ್ಲಿ ೨೫ ಮಿಲಿಯ ಜನರನ್ನು - ಪ್ರಪಂಚದ ಜನಸಂಖ್ಯೆಯ ೨.೫-೫% ಜನರನ್ನು - ಹಾಗೂ ಭಾರತವೊಂದರಲ್ಲೇ ಆರು ಮಿಲಿಯ ಜನರನ್ನು ಸಾವಿಗೀಡುಮಾಡಿತ್ತು. ಈ ಇಪ್ಪತ್ತೈದು ವರ್ಷಗಳಲ್ಲಿ ಏಡ್ಸ್ ಕಾಯಿಲೆಯು ಇಪ್ಪತ್ತೈದು ಮಿಲಿಯ ಜನರ ಸಾವುಂಟುಮಾಡಿದೆಯೆಂದರೆ, ಆ ಫ್ಲು ಜ್ವರದ ಹರಡುವಿಕೆಯ ತೀವ್ರಗತಿ ಎಷ್ಟಿತ್ತೆಂದು ತಿಳಿಯುತ್ತದೆ. ಈ ಸಲದ ಸೋಂಕನ್ನು ‘ವಿಶ್ವ ಪಿಡುಗು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಜೂನ್ ತಿಂಗಳಲ್ಲಿ ಘೋಷಿಸಿದ್ದು ಎಲ್ಲ ದೇಶಗಳೂ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

ರೋಗಲಕ್ಷಣಗಳು

ಬರಿಯ ಶೀತಜ್ವರಕ್ಕಿಂತ ಈ ಕಾಯಿಲೆ ತುಂಬ ತೀವ್ರವಾಗಿರುವುದರಿಂದ ಭಿನ್ನವಾಗಿದೆ. ಇದರ ತೀವ್ರತೆಯಿಂದಲೇ ಇದನ್ನು ಪತ್ತೆ ಹಚ್ಚುವುದು ಸಾಧ್ಯ. ಸಾಧಾರಣ ಫ್ಲು ಒಂದೆರೆಡು ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಇದಕ್ಕೆ ವಿಶೇಷ ಚಿಕಿತ್ಸೆಯೇನೂ ಬೇಕಾಗುವುದಿಲ್ಲ. ಕಾಯಿಲೆಯಾದವರು ಮನೆಯಲ್ಲೇ ಉಳಿದು ಚಿಕಿತ್ಸೆ ತೆಗೆದುಕೊಳ್ಳಬೇಕು. ಆದರೆ ತೀವ್ರತರದ ಫ್ಲು ಮಾತ್ರ ವಿಶೇಷ ಪರಿಣಿತ ಚಿಕಿತ್ಸೆಯನ್ನೇ ಬಯಸುತ್ತದೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಈ ಜ್ವರದಲ್ಲಿ ಮೊದಲು ಚಳಿ, ಜ್ವರ, ಸಿಕ್ಕಾಪಟ್ಟೆ ಮೈಕೈನೋವು, ಗಂಟಲುರಿ, ತಲೆನೋವು, ನಿಶ್ಶಕ್ತಿ, ಕೆಮ್ಮು ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ, ವಾಕರಿಕೆಗಳೂ ತೋರಬಹುದು. ಮಕ್ಕಳು, ಮುದುಕರು, ಈಗಾಗಲೇ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ನ್ಯುಮೋನಿಯಾ ತರಹದ ತೀವ್ರತರ ಕಾಯಿಲೆ ಕಾಣಿಸಿಕೊಳ್ಳಬಹುದು. ತೀವ್ರ ಕಾಯಿಲೆಯಲ್ಲಿ ಸಾವಿನ ಪ್ರಮಾಣ ೨-೨೦% ದಷ್ಟಾಗಬಹುದು.

ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ. ರೋಗಿಗಳಿಂದ ಬೇರೆ ಆರೋಗ್ಯವಂತ ಮನುಷ್ಯರಿಗೆ ಇದು ಹರಡುತ್ತದೆ. ಹರಡುವಿಕೆಯು ಸೀನು, ಕೆಮ್ಮಿನ ಮುಖಾಂತರ ನೇರ ಸಂಪರ್ಕದಿಂದಾಗಿರಬಹುದು. ಸೀನುವಾಗ, ಕೆಮ್ಮುವಾಗ ಎಂಜಲು ಹಾಗೂ ಸಿಂಬಳವು ವಾತಾವರಣದಲ್ಲಿ ಹರಡಿಕೊಂಡು ಆ ಪರಿಸರದಲ್ಲಿರುವ ಇತರರಿಗೆ ಉಸಿರಾಟದ ಮೂಲಕ ಹರಡುತ್ತದೆ. ಅಥವಾ ಸೋಂಕುಳ್ಳ ವಸ್ತುವಿನ ಸಂಪರ್ಕಕ್ಕೆ ಬಂದದ್ದರಿಂದಲೂ ಮತ್ತೊಬ್ಬರಿಗೆ ಹರಡಬಹುದು.


ಮುನ್ನೆಚ್ಚರಿಕೆಗಳು

ಈ ರೋಗ ಬರದಂತೆ ಲಸಿಕೆಯಿದೆ. ಈ ಲಸಿಕೆಯನ್ನು ಸದ್ಯ ಸರ್ವರಿಗೂ ನೀಡುತ್ತಿಲ್ಲ. ಲಸಿಕೆಯನ್ನು ೨-೩ ತಿಂಗಳು ಮೊದಲೇ ಅಥವಾ ಪಿಡುಗು ಶುರುವಾದ ಕನಿಷ್ಠ ವಾರದ ಮೊದಲು ತೆಗೆದುಕೊಂಡಿದ್ದರಷ್ಟೇ ಉಪಯೋಗಕ್ಕೆ ಬರುತ್ತದೆ. ತತಕ್ಷಣ ಶುರುವಾಗಿಬಿಡುವ ಈ ಪಿಡುಗಿಗೆ ಮೊದಲೇ ಲಸಿಕೆ ತಯಾರಿಸಿಟ್ಟುಕೊಳ್ಳುವುದು ಅಸಾಧ್ಯ ಹಾಗೂ ಲಸಿಕೆಯಿಂದಲೇ ಕೆಲವು ಅಡ್ಡಪರಿಣಾಮಗಳಾಗುವ ಸಾಧ್ಯತೆಯಿರುವುದರಿಂದ ದೊಡ್ಡ ಪ್ರಮಾಣದ ಪಿಡುಗುಂಟಾಗದೇ ಸುಮ್ಮನೇ ಲಸಿಕೆ ತೆಗೆದುಕೊಳ್ಳುವುದೂ ಸರಿಯಲ್ಲ.  ವರ್ಷ ವರ್ಷವೂ ತಳಿಬದಲಾವಣೆ ಮಾಡಿಕೊಳ್ಳುವ ಈ ವೈರಸ್ಸಿಗೆ ಪ್ರತಿವರ್ಷವೂ ಹೊಸ ಲಸಿಕೆಯನ್ನೇ ತಯಾರಿಸಬೇಕಾಗುತ್ತದೆ. ಈ ರೋಗಕ್ಕೊಳಗಾಗುವ ಅಪಾಯದಲ್ಲಿರುವವರು - ವೈದ್ಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ, ಪ್ರಯೋಗಶಾಲೆಯ ಸಿಬ್ಬಂದಿ, ಮುದುಕರು, ದೀರ್ಘಕಾಲೀನ ಕಾಯಿಲೆಯಿಂದ ನರಳುತ್ತಿರುವವರು - ಇಂತಹವರಿಗಷ್ಟೇ ಲಸಿಕೆಯನ್ನು ನೀಡಲಾಗುತ್ತದೆ.

ಈ ಕಾಯಿಲೆಗೆ ನೀಡಲಾಗುತ್ತಿರುವ ಔಷಧ - ಟಾಮಿಫ್ಲು ಎಂಬ ವೈರಸ್ ನಿರೋಧಿ - ಕೂಡ ಎಲ್ಲೆಡೆ ಮುಕ್ತವಾಗಿ ಲಭ್ಯವಿಲ್ಲ. ಇದರ ಬಗೆಗೆ ಹಲವರ ತಕರಾರು ಇದೆ. ಆದರೆ ಆ ಔಷಧದ ಉಪಯೋಗದ ಬಗ್ಗೆಯೇ ಇನ್ನೂ ಹಲವು ಅನುಮಾನಗಳಿರುವಾಗ, ಅದನ್ನು ರೋಗಿಗಳಿಗೆ ಹಾಗೇ ಸುಮ್ಮನೆ ಪ್ರಯೋಗಿಸುವುದೂ ಅಪಾಯಕಾರಿ. ರೋಗ ನಿರ್ಧಾರವಾಗದೇ ಜ್ವರಬಂದ ಎಲ್ಲರಿಗೂ ಟಾಮಿಫ್ಲು ನೀಡುತ್ತ ಹೋಗುವುದು ಸರಿಯಲ್ಲ. ಆದ್ದರಿಂದ ರಕ್ತತಪಾಸಣೆಯ ಮೂಲಕ ಹಂದಿಜ್ವರವೆಂದು ಧೃಢಪಟ್ಟ ಕೇಸುಗಳಿಗೆ ಮಾತ್ರ ಈ ಔಷಧದ ಸಂಪೂರ್ಣ ಕೋರ್ಸ್ ನೀಡಲಾಗುತ್ತದೆ. ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ವೈಫಲ್ಯದಿಂದ ಈ ಕಾಯಿಲೆ ಬಂತೆಂಬುದಾಗಲೀ, ಅಥವಾ ತಕ್ಕ ಔಷಧವಿಲ್ಲದೇ ಹರಡಿ ಜೀವನಾಶ ಮಾಡಿತೆಂಬುದಾಗಲೀ ಅಷ್ಟು ಸರಿಯಲ್ಲ. ಇಂತಹ ಸಮಯದಲ್ಲಿ ಜನರು ಆತಂಕಕ್ಕೊಳಕಾಗದೇ ಇರುವುದು ಬಹು ಮುಖ್ಯ. ಮೂರರಿಂದ ನಾಲ್ಕು ವಾರಗಳ ತನಕ ಉಳಿಯಬಹುದಾದ ಈ ಪಿಡುಗು ಒಮ್ಮೆ ಶುರುವಾದರೆ ಬಹುಪಾಲು ಜನರನ್ನು ಸೋಂಕಿಗೊಳಪಡಿಸುವ ಸಾಮರ್ಥ್ಯ ಹೊಂದಿರುವುದು ಹೌದಾದರೂ ಸೋಂಕಿಗೊಳಗಾದವರೆಲ್ಲ ಸಾಯುವುದಿಲ್ಲವೆಂಬ ಮಾತನ್ನು ಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಸಮುದಾಯದಲ್ಲಿ ಈ ರೋಗ ಹರಡದಂತೆ ತಡೆಯಲು ಕೆಲವು ಸರಳ ಉಪಾಯಗಳಿದ್ದು ಅದನ್ನು ಅವಶ್ಯವಾಗಿ ಎಲ್ಲರೂ ತಿಳಿದು ಪಾಲಿಸಬೇಕಾಗಿದೆ.





      ೧. ಕೆಮ್ಮುವಾಗ ಸೀನುವಾಗ ಕರವಸ್ತ್ರವನ್ನು, ಅಥವಾ ಸೀರೆ ಧೋತ್ರವಾದರೂ ಸರಿ ಏನಾದರೂ ವಸ್ತ್ರವನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯುವುದು ಒಳ್ಳೆಯದು.

      ೨. ಹೊರಗೆ ಸಿಕ್ಕಲ್ಲೆಲ್ಲ ಉಗುಳುವ ಅಭ್ಯಾಸ ಒಳ್ಳೆಯದಲ್ಲ.

      ೩. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮುಖ ಮುಚ್ಚಿಕೊಳ್ಳುವಂತಹ ವಸ್ತ್ರ ಧರಿಸುವುದು ಒಳ್ಳೆಯದು. ಸಾಧ್ಯವಿದ್ದಲ್ಲಿ ತೆರೆದ ಬಯಲು ಪ್ರದೇಶಗಳಲ್ಲಿ ಇರುವುದು ಒಳ್ಳೆಯದು. ಕಿಕ್ಕಿರಿದ ಸ್ಥಳಗಳಲ್ಲಿರುವಾಗ, ಮುಚ್ಚಿದ ಕೋಣೆಗಳಲ್ಲಿರುವಾಗ (ಎಸಿ ಬಸ್, ಆಫೀಸ್ ಕೋಣೆ, ಹೋಟೆಲು ಇತ್ಯಾದಿ) ಮುಖಕ್ಕೊಂದು ಮಾಸ್ಕ್ ಹಾಕಿಕೊಳ್ಳುವುದು ಒಳಿತು. ಮಾಸ್ಕನ್ನು ದಿನವೂ ಬದಲಾಯಿಸುತ್ತ ಇರಬೇಕು. ಅದರ ಉಪಯೋಗಗಳ ಬಗ್ಗೆ ಅನುಮಾನವಿದ್ದರೂ ಕಾಯಿಲೆ ಹದ್ದುಬಸ್ತಿನಲ್ಲಿಡಲು ತಾನೇನೋ ಕ್ರಮ ಕೈಗೊಂಡಿದ್ದೇನೆಂಬ ಸಮಾಧಾನವೇ ಕೆಲವರಿಗೆ ಮನೋಬಲ ತಂದುಕೊಡಬಹುದಾದ್ದರಿಂದ ಬಟ್ಟೆ ಕಟ್ಟಿಕೊಳ್ಳುವುದು ಉತ್ತಮವೆಂದೇ ನಮ್ಮ ಭಾವನೆ.

      ೪. ಸ್ವಚ್ಛವಾಗಿ ಸೋಪಿನಲ್ಲಿ ಪದೇ ಪದೇ ಕೈ ತೊಳೆಯಬೇಕು. ಇದರಿಂದ ಕೈಗೆ ಹತ್ತಿರಬಹುದಾದ ರೋಗಾಣುಗಳನ್ನು ನಾಶಪಡಿಸಿದಂತಾಗುತ್ತದೆ.

      ೫. ಸಾಧಾರಣ ಜ್ವರವಾಗಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಗೆ ದಾಖಲಾಗಲು ಅವಸರ ತೋರಬೇಡಿ. ಮನೆಯ ಒಂದು ಕೋಣೆಯಲ್ಲಿ ಉಳಿದು ಆರಾಮ ತೆಗೆದುಕೊಳ್ಳಿರಿ.

     ೬. ದೂರ ಪ್ರಯಾಣವನ್ನು, ಸಭೆಸಮಾರಂಭಗಳಲ್ಲಿ ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಈ ಮುಂಜಾಗರೂಕತೆ ಈ ವರ್ಷಕ್ಕೆ ಮಾತ್ರವಲ್ಲ, ಪ್ರತಿ ವರ್ಷವೂ ಫ್ಲು ಶುರುವಾದಾಗ ಸೋಂಕು ಹರಡದಂತೆ ಅನುಸರಿಸಬೇಕಾದ ಕ್ರಮಗಳೇ ಆಗಿವೆ. ಆದ್ದರಿಂದ ಈಗ ಬಹುಮುಖ್ಯವಾಗಿ ಬೇಕಾದ ಔಷಧವೆಂದರೆ ‘ಧೈರ್ಯ’ ವೆಂಬ ಟಾನಿಕ್ಕೇ ಆಗಿದೆ!

***
                                                                                                                 
ಈ ಬರಹವನ್ನು ೨೦೦೯ ರಲ್ಲಿ ಎಚ್೧ಎನ್೧ ಪಿಡುಗು ತೀವ್ರ ಭಯ ಹುಟ್ಟಿಸಿದ ದಿನಗಳಲ್ಲಿ ಬರೆದದ್ದು. ಆ ವರ್ಷ ಇದನ್ನು ಎಪಿಡೆಮಿಕ್ ಎಂದು ಸಾರಲಾಗಿತ್ತು. ಎಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ತೀವ್ರಗತಿಯ ಕಾಯಿಲೆ ಹಲವರನ್ನು ಏಕಕಾಲದಲ್ಲಿ ಬಾಧಿಸಿದರೆ ಅದು ಎಪಿಡೆಮಿಕ್. ಅಷ್ಟೇ ಅಲ್ಲ, ಮೆಕ್ಸಿಕೋದಲ್ಲಿ ಎಪಿಡೆಮಿಕ್ ಆದ ಅದು ವಿಶ್ವದ ಎಲ್ಲ ಖಂಡಗಳ )ಅಂಟಾರ್ಕ್ಟಿಕಾ ಹೊರತುಪಡಿಸಿ) ೨೦೦ ದೇಶಗಳ ಜನರಲ್ಲಿ ಕಾಣಿಸಿಕೊಂಡಾಗ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಪಿಡುಗು - ಪ್ಯಾಂಡೆಮಿಕ್ - ಎಂದು ಘೋಷಿಸಿತು. ಅಮೆರಿಕಾ ದೇಶವೊಂದರಲ್ಲಿಯೇ ೨೦೦೯ ಏಪ್ರಿಲ್‌ನಿಂದ ೨೦೧೦ ಏಪ್ರಿಲ್ ಅವಧಿಯಲ್ಲಿ ೬.೮ ಕೋಟಿ ಪ್ರಕರಣ ಪತ್ತೆಯಾಯಿತು. ೨,೭೪,೩೦೪ ಜನ ಆಸ್ಪತ್ರೆಗೆ ದಾಖಲಾದರು. ೧೨,೪೬೯ ಸಾವು ಸಂಭವಿಸಿತು. ಆದರೆ ಬರಬರುತ್ತ ಅದರ ತೀವ್ರತೆ ಕಡಿಮೆಯಾಯಿತು.

ಈ ವರ್ಷವಿಡೀ, ಮಳೆಗಾಲದಿಂದಲೂ ನಾವು ನೋಡುತ್ತಿರುವುದು ಎಚ್೧ಎನ್೧ ಕೇಸುಗಳೇ ಎನ್ನುವುದು ಎಲ್ಲ ವೈದ್ಯರಿಗೆ ಗೊತ್ತಿದೆ. ಹಂದಿಜ್ವರವನ್ನು ಸಾಮಾನ್ಯ ಥಂಡಿ ಜ್ವರದಿಂದ ಪ್ರತ್ಯೇಕಿಸಿ ನೋಡುವುದು ಕಷ್ಟವಾಗುತ್ತಿದೆ. ಅದರಲ್ಲಿ ೯೦-೯೫% ರೋಗಿಗಳು ಸಾಧಾರಣ ಚಿಕಿತ್ಸೆಗೆ ಸ್ಪಂದಿಸಿ ಗುಣವಾಗಿದ್ದಾರೆ. ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದುವರೆಗೆ (ಫೆ ೧೯) ೧೧,೦೦೦ ಪ್ರಕರಣ ಪತ್ತೆಯಾಗಿವೆ, ೭೦೩ ಜನ ಪ್ರಾಣ ಕಳೆದುಕೊಂಡಿದ್ದಾರೆ. ಗರ್ಭಿಣಿಯರು, ಮಕ್ಕಳು, ಹಿರಿಯರು, ಆಗಲೇ ಚಿಕಿತ್ಸೆ ಮೇಲಿರುವ ರೋಗಿಗಳನ್ನು ಅದು ಹೆಚ್ಚು ಬಾಧಿಸಿದೆ. ಲಸಿಕೆಯಿದೆ, ಕೆಲವೆಡೆ ನೀಡಲಾಗುತ್ತಿದೆ. ಆಂಟಿವೈರಸ್ ಮಾತ್ರೆಗಳನ್ನೂ ನೀಡಲಾಗುತ್ತಿದೆ. ಆದರೆ ಆ ಎರಡರ ಉಪಯುಕ್ತತೆ ಇನ್ನೂ ಖಚಿತವಿಲ್ಲ.

ಹೀಗಿರುತ್ತ ಬಂಧುಗಳೇ, ಮನವಿ ಇಷ್ಟೆ:

ಆದಷ್ಟು ಮುಂಜಾರೂಕತೆ ತೆಗೆದುಕೊಳ್ಳಿ. ಸಾವು ಬರಲು ಹಂದಿಜ್ವರವಷ್ಟೇ ಅಲ್ಲ, ರಸ್ತೆ ಅಪಘಾತವೂ ಸೇರಿದಂತೆ ಹತ್ತು ಹಲವು ಕಾರಣಗಳಿರುವಾಗ ಕೇವಲ ಹಂದಿಜ್ವರಕ್ಕೆ ಹೆದರಬೇಡಿ. ಬರುವ ಯಾವ ವಿಪತ್ತೂ ನಮಗೊಬ್ಬರಿಗೇ ಬರುವುದಿಲ್ಲ, ಪರಿಹಾರವೂ ನಮಗೊಬ್ಬರಿಗೇ ಇರುವುದಿಲ್ಲ. ಎಲ್ಲರಿಗೂ ಆದಂತೆ ನನಗೂ; ಎಲ್ಲರಿಗೂ ಇರುವಷ್ಟು ಬದುಕುವ ಅವಕಾಶ ನನಗೂ ಎಂದು ಧೈರ್ಯ ತಂದುಕೊಳ್ಳಿ. ಈ ಇತ್ಯಾತ್ಮಕ ಧೋರಣೆಯೊಂದೇ ಸಾಕು, ಸಾವನ್ನೂ, ಸಾವಿನ ಭಯವನ್ನೂ ನಿಮ್ಮಿಂದ ಗಾವುದ ದೂರದಲ್ಲಿ ನಿಲಿಸಿ ಪೊರೆಯುತ್ತದೆ.



No comments:

Post a Comment