Saturday, 28 March 2015

ಇರೋಮ್ ಶರ್ಮಿಳಾ ಆಗಿರುವುದು ಸುಲಭವಲ್ಲ..
ವಿಶ್ವದಲ್ಲೇ ಅತಿ ದೀರ್ಘಕಾಲ ಉಪವಾಸ ಸತ್ಯಾಗ್ರಹ ನಡೆಸಿದ ವ್ಯಕ್ತಿ ಇರೋಂ ಶರ್ಮಿಳಾ. ಆಕೆ ಧೈರ್ಯಕ್ಕೆ, ಬದುಕುಳಿವ ಛಲಕ್ಕೆ, ಹೋರಾಟದ ಗುಣಕ್ಕೆ ಇನ್ನೊಂದು ಹೆಸರು. ಮಣಿಪುರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತು ಸಮಾಜದ ಗಮನ ಸೆಳೆದು ಅದನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತಂದಿದ್ದು ಇರೋಂ ಶರ್ಮಿಳಾ ಉಪವಾಸ. ಈ ಕಾರಣಕ್ಕಾಗಿಯೇ ಅವರಿಗೆ ಹಲವು ಪ್ರಶಸ್ತಿ-ಮನ್ನಣೆಗಳು ಸಂದಿವೆ.

ಆಕೆ ಉಪವಾಸ ಶುರುಮಾಡಿ ೧೫ ವರ್ಷಗಳಾದವು. ಅದು ನವೆಂಬರ್ ೨, ೨೦೦೦ನೇ ಇಸವಿ. ಮಣಿಪುರದ ಇಂಫಾಲ ಕಣಿವೆಯ ಒಂದು ಹಳ್ಳಿ ಮಾಲೋಮ್‌ನ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಯ ಯೋಧರು ಗುಂಡು ಹಾರಿಸಿ ಕೊಂದರು. ಸತ್ತವರಲ್ಲಿ ೬೨ ವರ್ಷದ ಲಿಸಾಂಗ್ಬಮ್‌ನಿಂದ ಹಿಡಿದು ೧೯೮೮ರಲ್ಲಿ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ಪಡೆದ ಸಿನಮ್ ಚಂದ್ರಮಣಿ ಕೂಡಾ ಸೇರಿದ್ದರು. ೨೮ ವರ್ಷ ವಯಸ್ಸಿನ, ಪಶುವೈದ್ಯ ಇಲಾಖೆಯ ನೌಕರರ ಮಗಳಾದ ಇರೋಂ ಶರ್ಮಿಳಾ ಚಾನು ಪ್ರತಿ ಗುರುವಾರದಂತೆ ಅಂದೂ ಉಪವಾಸವಿದ್ದಳು. ಆಕೆ ಲಂಗುಲಗಾಮಿಲ್ಲದ ಸೇನೆಯ ಅಟಾಟೋಪಗಳ ಕುರಿತು ಕೇಳಿದ್ದಳು. ಮೆಯಿರಾ ಪೈಬಿ ಮಹಿಳಾಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಳು. ಈ ಹತ್ಯಾಕಾಂಡದ ನಂತರ ಎಷ್ಟು ನೊಂದುಕೊಂಡಳೆಂದರೆ ಸೈನ್ಯ ಮತ್ತು ಅರೆಸೇನಾಪಡೆಗಳಿಗೆ ವಿಶೇಷಾಧಿಕಾರ ನೀಡಿ, ಮನಬಂದಂತೆ ಕೊಲ್ಲುವ ಅವಕಾಶ ಕೊಟ್ಟ ಎಎಫ್‌ಎಸ್‌ಪಿಎ ಕಾಯ್ದೆ ವಾಪಸು ತೆಗೆದುಕೊಳ್ಳುವವರೆಗೆ ಉಪವಾಸ ಮಾಡುವುದಾಗಿ ಘೋಷಿಸಿದಳು.

ಉಪವಾಸ ಕುಳಿತ ಮೂರನೇ ದಿನಕ್ಕೆ ದೇಹಸ್ಥಿತಿ ಗಂಭೀರವಾಯಿತು. ಪೊಲೀಸರು ಆತ್ಮಹತ್ಯೆ ಪ್ರಯತ್ನವೆಂದು ಐಪಿಸಿ ಸೆ. ೩೦೯ರ ಅಡಿಯಲ್ಲಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬದುಕುಳಿಯಲೆಂದು ಆಕೆಯ ಮೂಗಿಗೆ ಒತ್ತಾಯವಾಗಿ ಆಹಾರ ನಳಿಕೆ (ರೈಲ್ಸ್ ಟ್ಯೂಬ್) ಏರಿಸಲಾಯಿತು. ಅಂದಿನಿಂದ ಆಹಾರ ಮತ್ತು ನೀರು ಎರಡೂ ನಳಿಕೆ ಮೂಲಕ ಆಕೆಯ ದೇಹ ಸೇರುತ್ತಿವೆ. ಆತ್ಮಹತ್ಯೆ ಪ್ರಯತ್ನಕ್ಕಾಗಿ ಗರಿಷ್ಠ ಒಂದು ವರ್ಷ ಕಾಲ ಮಾತ್ರ ಜೈಲು ಶಿಕ್ಷೆ ನೀಡಬಹುದು. ಆದ್ದರಿಂದ ಕಳೆದ ೧೫ ವರ್ಷಗಳಿಂದ ಪ್ರತಿ ವರ್ಷ ಶರ್ಮಿಳಾ ಬಿಡುಗಡೆಯಾಗುವುದು, ಆತ್ಮಹತ್ಯೆ ಪ್ರಯತ್ನವೆಂದು ಮತ್ತೆ ಮರುದಿನ ಬಂಧಿಸುವುದು, ಒಂದು ವರ್ಷದ ಬಳಿಕ ಮತ್ತೆ ಬಿಡುಗಡೆಯಾಗುವುದು ಮುಂದುವರೆದಿದೆ. ಬಂಧನದಲ್ಲಿರುವಾಗ ಪ್ರತಿ ೧೫ ದಿನಕ್ಕೊಮ್ಮೆ ಆಸ್ಪತ್ರೆಯಿಂದ ಕಮ್ಯಾಂಡೋಗಳ ರಕ್ಷಣೆಯಲ್ಲಿ ಕೋರ್ಟಿಗೆ ಹೋಗುವುದು; ಸೌಖ್ಯವೇ? ಉಪವಾಸ ನಿಲ್ಲಿಸುವೆಯಾ? ಎಂಬ ಪ್ರಶ್ನೆಗಳು ನ್ಯಾಯಾಧೀಶರಿಂದ ಬಂದಾಗ ಮಾಮೂಲಿಯಾಗಿ ನಿರಾಕರಿಸುವುದು ಪ್ರಹಸನದಂತೆ ನಡೆಯುತ್ತಲೇ ಇದೆ.

ಶರ್ಮಿಳಾ ಎಂಬ ಕೃಶದೇಹಿ ಮಣಿಪುರದ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ ಶರ್ಮಿಳಾ ಆಗುವುದು, ಆಗಿರುವುದು ಸುಲಭವಲ್ಲ.ಜಗಿಯುವ ಕ್ರಿಯೆ ಮನಸ್ಸನ್ನು ಪ್ರಫುಲ್ಲವಾಗಿಡುವ ಒಂದು ಮಾರ್ಗ. ಉಂಡ, ಚ್ಯೂಯಿಂಗ್ ಗಂ/ಕವಳ ಜಗಿದ ವ್ಯಕ್ತಿ ಫ್ರೆಷ್‌ನೆಸ್ ಅನುಭವಿಸುವುದು ಜಗಿಯುವಿಕೆಯಿಂದಲೇ. ಜಗಿಯುವುದನ್ನೇ ಮರೆತು ಬದುಕುವುದು, ನಾಲಿಗೆಯ ರುಚಿಯ ಸೆಳೆತವನ್ನು ನಿರಾಕರಿಸುವುದು, ಪೊಲೀಸು-ಆಸ್ಪತ್ರೆ ಸಿಬ್ಬಂದಿ-ಪತ್ರಕರ್ತರು-ಆಕ್ಟಿವಿಸ್ಟರ ನಡುವೆ ಆಸ್ಪತ್ರೆ ಕಂ ಜೈಲಿನಲ್ಲಿ ೧೫ ವರ್ಷ ಬದುಕುವುದು ಸುಲಭವಲ್ಲ. ಯಾರೊಡನೆಯೂ ಖಾಸಗಿ ಮಾತುಕತೆಯಿಲ್ಲದೆ ಬರೀ ಓದಿ, ಟಿವಿ ನೋಡಿ, ಪತ್ರ-ಚಿತ್ರ ಬರೆದು, ಸಂದರ್ಶನ ನೀಡುತ್ತ, ಕೋರ್ಟಿಗೆ ಹೋಗಿಬರುತ್ತ ಇರುವುದು ಭಾವಜೀವಿಗೆ ಇನ್ನೂ ಕಷ್ಟ. ಆದರೂ ತಾನು ಹಾಗೆ ಬದುಕಲೇಬೇಕಾಗಿದೆ ಎಂದು ಈ ಎಲ್ಲ ವರ್ಷಗಳಲ್ಲಿ ಶರ್ಮಿಳಾ ಮನಸ್ಸನ್ನು ಗಟ್ಟಿ ಮಾಡಿಕೊಂಡು ಬದುಕಿದ್ದರು.

ಅಥವಾ ನಾವು ಹಾಗಂದುಕೊಂಡಿದ್ದೆವು. ಈಗ ಉಪವಾಸ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಅವರಿಗೆ ಉಪವಾಸ ಸಾಕೆನಿಸುತ್ತಿದೆ. ತಾನು ಗೆದ್ದು, ಸರ್ಕಾರ ಆ ಕಾಯ್ದೆ ವಾಪಸು ಪಡೆದು, ಎಲ್ಲರೊಡನೆ ಊಟಮಾಡಬೇಕೆನಿಸತೊಡಗಿದೆ. ಕಳೆದ ೧೫ ವರ್ಷದಿಂದ ಊಟದ ರುಚಿಯನ್ನೇ ನೋಡದ ಬಾಯಿಗೆ ರುಚಿಯೇ ಮರೆತುಹೋಗಿದೆ. ಏನೇನನ್ನೋ ತಿನ್ನುವ ಬಯಕೆ. ಎಲ್ಲವನ್ನು ಬಾಯಿಗೆ ಹಾಕಿ ತಮ್ಮ ಕಳೆದುಕೊಂಡ ರುಚಿಯ ಸಂವೇದನೆಯನ್ನು ಮರಳಿ ಪಡೆಯುವ ಬಯಕೆ. ಅವರ ಬಳಿ ನಿಮ್ಮಿಷ್ಟದ ತಿನಿಸು ಯಾವುದು ಎಂದರೆ ಎಲ್ಲವನ್ನೂ ಕಣ್ಣೆದುರು ತಂದುಕೊಂಡು ಎಲ್ಲರೊಡನೆ ಎಲ್ಲವನ್ನೂ ತಿನ್ನಬೇಕೆನಿಸಿದೆ ಎನ್ನುತ್ತ ಸಂಭ್ರಮಿಸುತ್ತಾರೆ.

ಇದರ ಜೊತೆಗೆ ಸದ್ಯದಲ್ಲೇ ಐಪಿಸಿಯ ಸೆಕ್ಷನ್ ೩೦೯ ರದ್ದಾಗಿ ಆತ್ಮಹತ್ಯೆ ಕ್ರಿಮಿನಲ್ ಅಪರಾಧವಲ್ಲ ಎಂಬ ತೀರ್ಮಾನವಾಗಲಿದೆ. ಹಾಗಾದಲ್ಲಿ ಶರ್ಮಿಳಾ ಜೈಲಾಗಿ ಪರಿವರ್ತನೆಗೊಂಡ ಆಸ್ಪತ್ರೆಯ ರೂಮಿನಿಂದ ಬಿಡುಗಡೆಯಾಗುತ್ತಾರೆ. ಆಗ ಅವರ ರೈಲ್ಸ್ ಟ್ಯೂಬ್ ತೆಗೆದು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗುತ್ತದೆ. ಆದರೆ ದಿನಕ್ಕೆ ೩ ಬಾರಿ ನಾಳದಲ್ಲಿ ಆಹಾರ ಒಳಹೋಗಿ ಹೋಗಿ ಶರ್ಮಿಳಾ ಊಟ ಮಾಡುವುದನ್ನು ಮರೆತಿದ್ದಾರೆ. ಅವರ ಬಾಯಿ ಜಗಿಯುವುದನ್ನು ಮರೆತಿದೆ, ಹಲ್ಲು ನಾಲಿಗೆ ತಂತಮ್ಮ ಕೆಲಸ ಮರೆತಿವೆ; ಅನ್ನನಾಳ, ಲಾಲಾಗ್ರಂಥಿಗಳು ಸ್ರವಿಸುವುದನ್ನು ಮರೆತಿವೆ. ತೂಕ ೬೫ ಕೆಜಿಯಿಂದ ೪೦ಕ್ಕೆ ಇಳಿದಿದೆ. ಅವರಿಗೆ ಬಿಪಿ, ಡಯಾಬಿಟೀಸ್ ಶುರುವಾಗಿದೆ. ಹೀಗೇ ಉಪವಾಸ ಮುಂದುವರೆಸಿದರೆ ಶ್ವಾಸಕೋಶದ ಸೋಂಕು ತಗಲುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ನರವ್ಯೂಹದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಶರ್ಮಿಳಾರನ್ನು ಇಷ್ಟು ದೀರ್ಘಕಾಲದ ಉಪವಾಸದ ಬಳಿಕವೂ ಜೀವಂತವಾಗಿ, ಆರೋಗ್ಯವಾಗಿ ಇಡಲು ಸರ್ಕಾರಕ್ಕೆ ಪ್ರತಿದಿನ ೧೦ ಸಾವಿರ ರೂ. ಖರ್ಚಾಗುತ್ತಲಿದೆ. ಆದರೆ ಬಿಡುಗಡೆಯಾದನಂತರ ಇಷ್ಟೆಲ್ಲ ಖರ್ಚುವೆಚ್ಚಗಳ ಶರ್ಮಿಳಾ ಭರಿಸಲಾರರು.ಎಲ್ಲಕ್ಕಿಂತ ಮಿಗಿಲಾದ ಬದಲಾವಣೆಯೊಂದು ಸಂಭವಿಸಿದೆ, ಶರ್ಮಿಳಾಗೆ ಉಳಿದೆಲ್ಲರಂತೆ ತನಗೂ ಮದುವೆಯಾಗಿ, ಸಂಸಾರ ನಡೆಸುವ ಆಸೆ ಬಂದಿದೆ. ಅವರೀಗ ಪ್ರೇಮಿಯಾಗಿದ್ದಾರೆ! ಗೋವಾ ಸಂಜಾತ ಬ್ರಿಟಿಷ್ ಪ್ರಜೆ, ಕಲಾವಿದ, ಆಕ್ಟಿವಿಸ್ಟ್, ಡೆಸ್ಮಂಡ್ ಕುಟಿನೊ ಅವರ ಪ್ರೇಮಿ. ಅಂಥ ಗಂಡಸನ್ನು ತಾನು ಇದುವರೆಗೆ ಭೇಟಿಯೇ ಆಗಿಲ್ಲ ಎನ್ನುವ ಶರ್ಮಿಳಾ ಆತನನ್ನು ಮದುವೆಯಾಗಬಯಸುತ್ತಾರೆ. ಆತ ಶರ್ಮಿಳಾಗೆ ಲೆಕ್ಕವಿಲ್ಲದಷ್ಟು ಪುಸ್ತಕಗಳನ್ನೂ, ಗೊಂಬೆಗಳನ್ನೂ, ರಮ್ಯ ಕನಸುಗಳನ್ನೂ ನೀಡಿದ್ದಾನೆ. ಈಗ ಶರ್ಮಿಳಾ ಜಗವೆಲ್ಲ ಡೆಸ್ಮಂಡ್ ಮಯ. ಆತ ಕೋರ್ಟಿನಲ್ಲಿ ತಾನೇ ವಾದಿಸಲು ಶರ್ಮಿಳಾಗೆ ಹೇಳಿ ಲಾಯರನ್ನು ನಿರಾಕರಿಸುವಂತೆ ಮನವೊಲಿಸಿದ್ದಾನೆ.


ಆದರೆ ಈ ಬೆಳವಣಿಗೆ ಯಾರಿಗೂ ಇಷ್ಟವಿಲ್ಲ! ಆಕೆ ಉಪವಾಸ ಬಿಡುವುದೂ ಇಷ್ಟವಿಲ್ಲ, ಮದುವೆಯಾಗುವುದೂ ಇಷ್ಟವಿಲ್ಲ!! ಡೆಸ್ಮಂಡ್ ಪದೇಪದೇ ಆಸ್ಪತ್ರೆಗೆ ಬಂದು ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಶರ್ಮಿಳಾ ಭೇಟಿ ನಿರಾಕರಿಸಲಾಗಿದೆ.


ಶರ್ಮಿಳಾ ಅವರ ತಾಯಿ ಸಖೀದೇವಿ ತಮ್ಮ ಮಗಳನ್ನು ಹೆತ್ತು ಮಣಿಪುರದ ಸಮಾಜಕ್ಕಾಗಿ ತ್ಯಾಗ ಮಾಡಿರುವುದಾಗಿಯೂ, ತಮ್ಮ ಕುಟುಂಬವೆಂದೂ ಅವಳ ಹಾಗೂ ಅವಳ ಹೋರಾಟದ ಮಧ್ಯ ನಿಂತಿರಲಿಲ್ಲವೆಂದೂ ಹೇಳುತ್ತ, ಅವಳು ಎಎಫ್‌ಎಸ್‌ಪಿಎ ಹಿಂದೆಗೆದುಕೊಳ್ಳುವವರೆಗೆ ಉಪವಾಸ ಮುಂದುವರೆಸಬೇಕು; ಸರ್ಕಾರಕ್ಕೆ ಒತ್ತಡ ಹಾಕಬೇಕು; ಇಲ್ಲದಿದ್ದರೆ ಅವಳ ಬದುಕೇ ವ್ಯರ್ಥ ಎನ್ನುತ್ತಾರೆ. ಗಂಡಸರ ದರ್ಪ, ದೌರ್ಜನ್ಯಗಳ ಗಮನಿಸಿ ತಾನೆಂದೂ ಜೀವಮಾನದಲ್ಲಿ ಮದುವೆಯಾಗುವುದಿಲ್ಲ ಎನ್ನುತ್ತಿದ್ದ ತಮ್ಮ ಮಗಳು ಈಗ ಯಾರೋ ದುಷ್ಟನ ಪ್ರಭಾವಕ್ಕೊಳಗಾಗಿ ಮದುವೆಯ ಮಾತನಾಡುತ್ತಿದ್ದಾಳೆಂದೂ; ಆ ಕಾಯ್ದೆ ರದ್ದಾದನಂತರ ಉಪವಾಸ ನಿಲಿಸಿದರಷ್ಟೇ ತಾವು ಮಗಳನ್ನು ನೋಡಬಯಸುವುದಾಗಿಯೂ ಹೇಳುತ್ತಾರೆ. ಶರ್ಮಿಳಾ ಸೋದರನದೂ ಹೆಚ್ಚುಕಮ್ಮಿ ಇದೇ ಅಭಿಪ್ರಾಯ.

ಶರ್ಮಿಳಾ ಉಪವಾಸ ಕುಳಿತ ನಂತರ ೨೦೦೩ರಲ್ಲಿ ತಂಗ್ಜಂ ಮನೋರಮಾ ಹತ್ಯೆ ಖಂಡಿಸಿ ನಗ್ನ ಪ್ರತಿಭಟನೆ ನಡೆಸಿದ ತಾಯಂದಿರ ಮುಖಂಡೆ ಸೋಯ್ಬಾಮ್ ಕೂಡಾ ಶರ್ಮಿಳಾ ಉಪವಾಸ ನಿಲ್ಲಿಸುವುದನ್ನು ಖಂಡತುಂಡ ವಿರೋಧಿಸುತ್ತಾರೆ. ಮಹಿಳೆಗೆ ರಸ್ತೆಯಲ್ಲಿ ಬೆತ್ತಲಾಗುವುದೂ ಒಂದೇ, ಸಾಯುವುದೂ ಒಂದೇ. ಹಾಗಿರುತ್ತ ಬೆತ್ತಲಾದರೂ ಸರಿ ಎಂದು ತಾವೆಲ್ಲ ನಗ್ನರಾಗಿ ಇಂಫಾಲದ ಬೀದಿಗಳಲ್ಲಿ ನಡೆದು ಹೋರಾಟ ಮುಂದುವರೆಸಿದ್ದೆವು; ಈಗ ಶರ್ಮಿಳಾ ಉಪವಾಸ ಮುಂದುವರೆಸಲು ಏನಡ್ಡಿ ಎಂದು ಕೇಳುತ್ತಾರೆ!

ಶರ್ಮಿಳಾ ಉಪವಾಸ ಮಣಿಪುರಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿ ಕೊಟ್ಟಿದೆ. ಅವರ ಹೆಸರಿನಲ್ಲಿ ರಾಜ್ಯಕ್ಕೆ ಮಿಲಿಯನ್ನುಗಟ್ಟಲೆ ಡಾಲರ್ ಹರಿದುಬಂದಿದೆ. ಕನಿಷ್ಠ ೪೦ ಎನ್‌ಜಿಒಗಳು ಕಳೆದ ಐದು ವರ್ಷಗಳಲ್ಲಿ ಅವರ ಬೆಂಬಲಕ್ಕೆಂದು ಶುರುವಾಗಿವೆ. ಅವು ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಜನರ ರಕ್ಷಣೆಯ ಸಲುವಾಗಿ ಕೆಲಸ ಮಾಡುತ್ತವೆ. ಸ್ವತಃ ಶರ್ಮಿಳಾ ಅವರದೂ ‘ಜಸ್ಟ್ ಪೀಸ್ ಫೌಂಡೇಷನ್’ ಎಂಬ ಎನ್‌ಜಿಒ ಇದೆ. ಅದಕ್ಕೆ ಹೊರಗಿನ ಧನಸಹಾಯ ಪಡೆಯುವುದಿಲ್ಲ, ಅವರಿಗೆ ಬಂದ-ಬರುವ ಹಣವೆಲ್ಲ ಅವರ ಎನ್‌ಜಿಒಗೆ ಹೋಗುತ್ತದೆ. ‘ಹಣ ಚಳುವಳಿಯನ್ನು ಕೊಲ್ಲುತ್ತದೆ. ನನಗೆ ಹಣ ಬೇಡ, ಜನರ ಬೆಂಬಲ ಬೇಕು’ ಎಂದು ಎಂದಿನಿಂದ ಶರ್ಮಿಳಾ ಹೇಳಿದ್ದಾರೆ. ಹೀಗೆ ಇಷ್ಟು ದೀರ್ಘಕಾಲ ಹೋರಾಡಿದಾಕೆ ಈಗ ನಡುಮಧ್ಯ ಉಪವಾಸ ನಿಲ್ಲಿಸಬಾರದು ಎನ್ನುವುದು ಸೋಯ್ಬಾಮ್, ವಿಧವೆಯರ ಸಂಘಟನೆಯ ಅಧ್ಯಕ್ಷೆ ರೇಣು ತಾಕೆಲ್ಲಂಬಂ ಹಾಗೂ ಇನ್ನಿತರರ ಅಭಿಮತ.

ಆದರೆ ಬಂಧುಗಳೂ, ಮಿತ್ರರೂ ಸರ್ಕಾರದ ಜೊತೆ ಕೈಜೋಡಿಸಿ ತನ್ನ ಬಿಡುಗಡೆಯಾಗದಂತೆ ನೋಡಿಕೊಂಡಿದ್ದಾರೆ; ತಾನು ಬಿಡುಗಡೆಯಾಗದೇ ಹೋರಾಡುತ್ತಲೇ ಇರಲಿ ಎನ್ನುವುದು ಅವರ ಆಸೆ ಎಂದು ಶರ್ಮಿಳಾ ಆಪಾದಿಸುತ್ತಾರೆ. ಉಳಿದಂತೆ ಇಡೀ ಮಣಿಪುರ ಯಾವ ಚಳುವಳಿ, ಹೋರಾಟವೂ ಇಲ್ಲದೆ ಬೆಚ್ಚಗೆ ಮನೆಯಲ್ಲಿ ಕುಳಿತಿರುವಾಗ ಕಳೆದ ೧೫ ವರ್ಷಗಳಿಂದ ಉಪವಾಸದ ಹೆಸರಿನಲ್ಲಿ ತನ್ನ ಯೌವನ, ಆರೋಗ್ಯ, ಸಮಯ ಎಲ್ಲವನ್ನೂ ಕಳೆದಾಗಿದೆ. ಇನ್ನೆಷ್ಟು ಕಾಲ ತಾನು ಮಾತ್ರ ಹೋರಾಡಬೇಕೆನ್ನುವುದು ಶರ್ಮಿಳಾ ಪ್ರಶ್ನೆ. ಎಂಟು ವರ್ಷದ ಕೆಳಗಿನ ಸಂದರ್ಶನದಲ್ಲಿ ‘ನನ್ನ ಹೋರಾಟದ ದಾರಿಯನ್ನು ನಾನೊಬ್ಬಳೇ ತುಳಿಯಬೇಕಾಗಿದೆ. ನನಗೆ ಯಾವ ರಾಜಕಾರಣಿ, ಆಕ್ಟಿವಿಸ್ಟರ ಬೆಂಬಲವೂ ಬೇಡ’ ಎಂದಾಕೆ ಇವತ್ತು ಮಣಿಪುರದ ಜನತೆ ತನ್ನನ್ನು ಬದುಕಲೂ ಬಿಡದೆ, ಸಾಯಲೂ ಬಿಡದೆ, ತನ್ನನ್ನು ಮಾತ್ರ ಚಳುವಳಿಯ ಹೆಸರಿನ ಮೂರ್ತಿಯಾಗಿಸಿ ತಾವು ಸುಖವಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ‘ಮಣಿಪುರದ ಜನತೆ ಹೀಗೇ ನಿಶ್ಚೇಷ್ಟಿತರಾಗೇ ಉಳಿದರೆ ಎಎಫ್‌ಎಸ್‌ಪಿಎ ಯಾವತ್ತೂ ರದ್ದಾಗುವುದಿಲ್ಲ ಬಹುಶಃ ಆಗ ಸಾವೇ ನನ್ನ ಹೋರಾಟದ ಕೊನೆಯಾಗಬಹುದು. ಸ್ತಬ್ಧವಾಗಿರುವ ಈ ಪೀಳಿಗೆಯಲ್ಲದಿದ್ದರೂ ಬರಲಿರುವ ಪೀಳಿಗೆಗಳಾದರೂ ನನ್ನ ಹೆಜ್ಜೆ ಗುರುತಿನಲ್ಲಿ ಸಾಗಬಹುದು’ ಎಂದು ವಿಷಾದದಿಂದ ಹೇಳುತ್ತಾರೆ.

ಸರಿಯುತ್ತಿರುವ ಯೌವನ; ಬಾಧಿಸುತ್ತಿರುವ ಕಾಯಿಲೆ; ಕೇವಲ ತನ್ನ ಉಪವಾಸವೊಂದನ್ನೇ ಹೋರಾಟವಾಗಿಸಿ ಉಳಿದಂತೆ ನಿಷ್ಕ್ರಿಯವಾಗಿರುವ ಜನತೆ; ಹಾರಾಡಬೇಕೆಂಬ ಮನಸು ೧೫ ವರ್ಷದಿಂದ ಮಲಗಿದಲ್ಲೇ ಮಲಗಿ, ಇದ್ದಲ್ಲೇ ಇದ್ದು ಹುಟ್ಟಿರುವ ಏಕತಾನತೆ; ಅದರ ನಡುವೆ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸಿದಾತನ ಒಂದು ಹಿಡಿ ಪ್ರೀತಿ ಪಡೆಯಲು ಸಮಾಜ ತೋರುತ್ತಿರುವ ವಿರೋಧ - ಇವೆಲ್ಲ ಶರ್ಮಿಳಾಗೆ ಹೀಗೆನಿಸುವಂತೆ ಮಾಡಿರಬಹುದು. ಅದು ಏನೂ ತಪ್ಪಲ್ಲ.


ಶರ್ಮಿಳಾ ಹೇಳಿದಂತೆ ಮಣಿಪುರದಲ್ಲಿ ತಾಯಂದಿರು ಬೆತ್ತಲಾದ ಹೋರಾಟದ ನಂತರ ಬೇರೆ ಯಾವ ಸಂಘಟಿತ ಹೋರಾಟವೂ ನಡೆಯಲಿಲ್ಲ. ಅಲ್ಲಿರುವ ಅಸಂಖ್ಯ ಬಂಡುಕೋರ ಗುಂಪುಗಳ ಕಾರಣದಿಂದ ಸೇನೆ ಸದ್ಯ ವಾಪಸು ಹೋಗುವ ಲಕ್ಷಣವೂ ಇಲ್ಲ. ಅಂತಾರಾಷ್ಟ್ರೀಯವಾಗಿ ಭಾರತದ ನೆರೆಹೊರೆ ಸಂಬಂಧಗಳು; ಬಾಂಗ್ಲಾದೇಶೀಯರ ಒಳನುಸುಳುವಿಕೆ; ಈಶಾನ್ಯ ರಾಜ್ಯಗಳ ಪರಸ್ಪರ ಕಾದಾಟ; ಮಾದಕ ದ್ರವ್ಯದ ಕಾಳಸಂತೆ ಜಾಲ - ಇವೆಲ್ಲದರಿಂದ ಆ ಪ್ರದೇಶ ಶಾಂತಿಯುತವಾಗಿರಬೇಕಾದರೆ ಅಲ್ಲಿ ಸೇನೆ ಇರಬೇಕೆಂದು ಜನರೇ ಭಾವಿಸುತ್ತಾರೆ. ಬೀದಿ, ಮಾಲ್, ಪಾರ್ಕಿಂಗ್ ಲಾಟ್ ಎಲ್ಲವನ್ನು ಹಫ್ತಾ ವಸೂಲಿಗೆಂದು ಹಂಚಿಕೊಂಡ; ಸರ್ಕಾರಿ ನೌಕರರನ್ನೂ ಹೆದರಿಸಿ ಅವರಿಂದ ಒಂದು ಪಾಲು ಸಂಬಳವನ್ನು ಹಫ್ತಾ ಆಗಿ ಪಡೆಯುವ ಬಂಡುಕೋರ ಗುಂಪುಗಳ ಪರಸ್ಪರ ಕಾದಾಟ ಸೇನೆಯಿಲ್ಲದಿದ್ದರೆ ಸಿವಿಲ್ ವಾರಿನಲ್ಲಿ ಕೊನೆಗೊಳ್ಳುತ್ತದೆ ಎಂದು ಚಿತ್ರಾ ಅಹೆಂತೆಮ್ ಎಂಬ ಮಣಿಪರದ ಪತ್ರಕರ್ತೆ, ಆಕ್ಟಿವಿಸ್ಟ್ ಅಭಿಪ್ರಾಯಪಡುತ್ತಾರೆ.

ಶರ್ಮಿಳಾ ದೀರ್ಘಕಾಲ ಬದುಕಬೇಕೆಂದರೆ ಉಪವಾಸ ಕೊನೆಯಾಗಬೇಕು, ಆಕೆ ಸಹಜವಾಗಿ ಆಹಾರ ತೆಗೆದುಕೊಳ್ಳುವಂತಾಗಬೇಕು. ಆಕೆ ಊಟಮಾಡಬೇಕೆಂದರೆ ಸೇನಾ ಕಾಯ್ದೆ ರದ್ದಾಗಬೇಕು. ಅದು ರದ್ದಾಗಬೇಕೆಂದರೆ ಮಣಿಪುರದ ಬಂಡುಕೋರ ಗುಂಪುಗಳು ತಣ್ಣಗಾಗಿ ಸಮಾಜದಲ್ಲಿ ಶಾಂತಿ ನೆಲೆಸಬೇಕು. ಆ ಕಾಲ ಬರುವುದು ಎಂದು? ಉರಿವ ಒಲೆಯ ಮೇಲಿನ ಬಾಣಲೆಯಲ್ಲಿ ಶರ್ಮಿಳಾ ಇನ್ನೆಷ್ಟು ಕಾಲ ಕಾಯುವುದು? ಉಪವಾಸ ಪ್ರತಿಭಟನೆಯ ಒಂದು ಮಾದರಿ ಅಷ್ಟೇ. ಮಾದರಿ ಪೂರಾ ಸಾಂಕೇತಿಕವಾದರೆ; ಒಂದಿಡೀ ರಾಜ್ಯದ ಚಳುವಳಿ ಒಬ್ಬ ವ್ಯಕ್ತಿಯ ಹೋರಾಟವನ್ನೇ ಕೇಂದ್ರೀಕರಿಸಿ ನಿಂತುಬಿಟ್ಟರೆ ಆಗುವ ಅಪಾಯ ಇದು.

ಈಗ ಅಲ್ಲಿನ ಪ್ರಜ್ಞಾವಂತರು ತುರ್ತಾಗಿ ಯೋಚಿಸಬೇಕು; ಹೋರಾಟದ ಗುರಿ-ರೂಪುರೇಷೆಗಳನ್ನು ಬದಲಿಸಿಕೊಳ್ಳಬೇಕು; ಇವತ್ತಿಗೆ ಅಲ್ಲಿ ಬೇಕಿರುವುದೇನು ಎಂದರಿತು ಬೇಡಿಕೆಯನ್ನು ಮರುಪರಿಶೀಲಿಸಬೇಕು. ಸೇನೆ ವಾಪಸಾತಿಗಿಂತ ಅದನ್ನು ಮಾನವೀಯಗೊಳಿಸುವ ಕುರಿತು, ಅದಕ್ಕೆ ನಾಗರಿಕ ಉತ್ತರದಾಯಿತ್ವ ಹೊರಿಸುವ ಕುರಿತು ಹೋರಾಡಬಹುದೇ ಎಂದು ಗಮನ ಹರಿಸಬೇಕು.

ಆಗ ಮಾತ್ರ ಶರ್ಮಿಳಾ ಆಧುನಿಕ ಗಾಂಧಾರಿಯಾಗುವ ಸಂಭವ ತಪ್ಪಬಹುದು.
No comments:

Post a Comment