Sunday 27 December 2015

ಸುಲ್ತಾನಾಳ ಕನಸು - ಬೇಗಂ ರುಖಿಯಾ ಶೇಖಾವತ್ ಹುಸೇನ್

 

(ಚಿತ್ರ: ಪ್ಯಾಬ್ಲೋ ಪಿಕಾಸೋ)

ಒಂದು ಸಂಜೆ ನಮ್ಮ ಬೆಡ್‌ರೂಮಿನ ಆರಾಮ ಕುರ್ಚಿಯಲ್ಲಿ ಕೂತು ಭಾರತದ ಹೆಣ್ತನದ ಸ್ಥಿತಿಗತಿ ಕುರಿತು ಸೋಂಬೇರಿಯಂತೆ ಯೋಚಿಸುತ್ತ ಇದ್ದೆ. ನಾನು ತೂಕಡಿಸಿದೆನೋ ಇಲ್ಲವೋ ಸರಿಯಾಗಿ ಗೊತ್ತಿಲ್ಲ. ಆದರೆ ನನಗೆ ನೆನಪಿರುವ ಮಟ್ಟಿಗೆ ಎಚ್ಚರಾಗಿಯೇ ಇದ್ದೆ. ಬೆಳದಿಂಗಳ ಆಗಸದಲ್ಲಿ ಸಾವಿರಾರು ಚಿಕ್ಕೆಗಳು ವಜ್ರದಂತೆ ಸ್ಪಷ್ಟವಾಗಿ ಹೊಳೆಯುತ್ತಿದ್ದವು.

ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ನನ್ನೆದುರು ನಿಂತಳು; ಅವಳು ಒಳಗೆ ಹೇಗೆ ಬಂದಳೋ ಗೊತ್ತಿಲ್ಲ. ಅವಳು ನನ್ನ ಗೆಳತಿ ಸಿಸ್ಟರ್ ಸಾರಾ.

‘ಶುಭ ಮುಂಜಾವು’ ಎಂದಳು ಸಾರಾ. ಅದು ಬೆಳಿಗ್ಗೆಯಲ್ಲ, ನಕ್ಷತ್ರಭರಿತ ರಾತ್ರಿ. ನಾನು ಒಳಗೊಳಗೇ ನಕ್ಕೆ. ಆದರೂ ‘ಹೇಗಿದೀ?’ ಎಂದೆ.

‘ನಾನು ಆರಾಮ. ಹೊರಬಂದು ನಮ್ಮ ಕೈದೋಟವನ್ನೊಮ್ಮೆ ನೋಡುತ್ತೀಯಾ?’ ಎಂದಳು.

ಅಷ್ಟೊತ್ತಿನಲ್ಲಿ ಹೊರ ಹೋಗಲು ಕಷ್ಟವೇನೂ ಇರಲಿಲ್ಲ, ಆದರೂ ಕಿಟಕಿಯಿಂದ ಹೊರಗೆ ಚಂದ್ರನತ್ತ ನೋಡಿದೆ. ಹೇಗಿದ್ದರೂ ಪುರುಷ ಸೇವಕರು ಗಾಢ ನಿದ್ದೆಯಲ್ಲಿರುತ್ತಾರೆ, ಸಿಸ್ಟರ್ ಸಾರಾ ಜೊತೆ ಆರಾಮಾಗಿ ಅಡ್ಡಾಡಿಬರಬಹುದು ಎನಿಸಿತು.

ನಾವು ಡಾರ್ಜಿಲಿಂಗಿನಲ್ಲಿದ್ದಾಗ ಹೀಗೇ ಒಟ್ಟೊಟ್ಟಿಗೆ ವಾಕಿಂಗಿಗೆ ಹೋಗುತ್ತಿದ್ದೆವು. ಅಲ್ಲಿನ ಬೊಟಾನಿಕಲ್ ಗಾರ್ಡನಿನಲ್ಲಿ ಕೈಕೈ ಹಿಡಿದು ಗಟ್ಟಿಯಾಗಿ ಏನೇನೋ ಹರಟುತ್ತ ನಡೆದದ್ದು ನೆನಪಾಯಿತು. ನನ್ನನ್ನು ಅಂಥ ಎಲ್ಲಿಗೋ ಕರೆದೊಯ್ಯಲೆಂದೇ ಇವಳು ಹೀಗೆ ಕೇಳುತ್ತಿರಬಹುದು ಎನಿಸಿ ಅವಳ ಬೇಡಿಕೆಗೆ ಒಪ್ಪಿಕೊಂಡೆ.

ನಡೆಯುವಾಗ ನೋಡುತ್ತೇನೆ, ಆಗಲೇ ಬೆಳಗಾಗಿದೆ! ಶಹರ ಎಚ್ಚೆತ್ತಿದೆ, ಬೀದಿಗಳು ಗಿಜಿಗಿಜಿಯೆಂದು ಜನರಿಂದ ತುಂಬಿ ತುಳುಕುತ್ತಿವೆ. ನನಗೆ ಸಿಕ್ಕಾಪಟ್ಟೆ ಸಂಕೋಚವಾಯಿತು, ಏಕೆಂದರೆ ಪರ್ದಾ ಇಲ್ಲದೆ ಹಾಡಹಗಲೇ ಬೀದಿಯಲ್ಲಿ ನಡೆಯುತ್ತಿದ್ದೇನೆ. ಆದರೆ ಸದ್ಯ, ಒಬ್ಬೇಒಬ್ಬ ಪುರುಷನೂ ಎದುರು ಸಿಗಲಿಲ್ಲ. 

ದಾರಿಹೋಕರು ಕೆಲವರು ನನಗೆ ತಮಾಷೆ ಮಾಡಿದರು. ಅವರ ಭಾಷೆ ನನಗರ್ಥವಾಗುತ್ತಿರಲಿಲ್ಲ. ಆದರೂ ಅವರು ತಮಾಷೆ ಮಾಡುತ್ತಿದ್ದಾರೆಂದು ಮಾತ್ರ ಅರ್ಥವಾಯಿತು. ಅವರೇನು ಹೇಳುತ್ತಿರುವುದೆಂದು ಗೆಳತಿಯ ಬಳಿ ಕೇಳಿದೆ:

‘ನೀನು ತುಂಬ ಗಂಡುಬೀರಿಯಂತೆ ಕಾಣುವಿ ಎಂದು ಹೆಂಗಸರು ಹೇಳುತ್ತಿದ್ದಾರೆ.’ 

‘ಗಂಡುಬೀರಿ? ಹಾಗೆಂದರೇನು?’

‘ಎಂದರೆ ನೀನು ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳಂತೆ ಕಾಣುತ್ತೀ ಎನ್ನುತ್ತಿದ್ದಾರೆ.’ 

‘ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳೇ?’ ಅವಳೆಡೆ ತಿರುಗಿ ನೋಡಿದರೆ ಜೊತೆಯಿದ್ದವಳು ಸಾರಾ ಆಗಿರದೇ ಬೇರಿನ್ನಾರೋ ಒಬ್ಬಳು ಅಪರಿಚಿತೆ ಆಗಿರುವುದು ನೋಡಿ ನನಗೆ ತುಂಬ ಭಯವಾಯಿತು. ಎಂಥ ಮೂರ್ಖಳು ನಾನು, ಈ ಹೆಂಗಸನ್ನು ನನ್ನ ಹಳೆಯ ದಿನಗಳ ಪ್ರಿಯಗೆಳತಿ ಸಾರಾ ಎಂದು ತಪ್ಪಾಗಿ ಗುರ್ತಿಸಿದೆನಲ್ಲ?

ನಾವಿಬ್ಬರೂ ಕೈಕೈ ಹಿಡಿದು ನಡೆಯುತ್ತಿದ್ದುದರಿಂದ ಹೆದರಿ ನನ್ನ ಕೈ ನಡುಗುವುದನ್ನು ಅವಳು ಗುರುತಿಸಿದಳು. ‘ಯಾಕೆ ಏನಾಯಿತು ಗೆಳತಿ?’ ಪ್ರೀತಿಯಿಂದ ಕೇಳಿದಳು. ‘ಒಂದು ರೀತಿ ವಿಲಕ್ಷಣ ಎನಿಸುತ್ತಿದೆ’, ತಪ್ಪೊಪ್ಪಿಕೊಳ್ಳುವವರಂತೆ ಹೇಳಿದೆ: ‘ನನಗೆ ಪರ್ದಾನಶೀನ್ ರೂಢಿ, ಹೀಗೆ ಬೀದಿಯಲ್ಲಿ ಬುರ್ಖಾ ಇಲ್ಲದೇ ನಡೆಯುವುದು ರೂಢಿಯಿಲ್ಲ.’

‘ಯಾರಾದರೂ ಗಂಡಸರು ಎದುರು ಬಂದಾರೆಂದು ನೀನು ಭಯಪಡಬೇಕಿಲ್ಲ. ಇದು ಮಹಿಳಾ ರಾಜ್ಯ. ದುಷ್ಟತನ ಮತ್ತು ಪಾಪ ಮುಕ್ತ ರಾಜ್ಯ. ನೀತಿಯೇ ಇಲ್ಲಿ ರಾಜ್ಯವಾಳುತ್ತದೆ.’

ಅಂದಹಾಗೆ ಸುತ್ತಮುತ್ತಿನ ದೃಶ್ಯ ನನಗೆ ಬಹಳ ಖುಷಿ ಕೊಡುತ್ತಿದ್ದವು. ನಿಜಕ್ಕೂ ತುಂಬ ಸುಂದರವಾಗಿತ್ತು. ಹಸಿರು ಹುಲ್ಲನ್ನು ನಾನು ವೆಲ್ವೆಟ್ ನೆಲಹಾಸೆಂದು ಭಾವಿಸಿದೆ. ಯಾವುದೋ ಮೆತ್ತನೆ ರತ್ನಗಂಬಳಿ ಮೇಲೆ ನಡೆಯುತ್ತಿರುವಂತೆನಿಸಿ ಬಗ್ಗಿ ನೋಡಿದೆ, ಹಾದಿ ಮೇಲೆ ಪಾಚಿ ಮತ್ತು ಹೂಗಳು ಹರಡಿದ್ದವು.

‘ಎಷ್ಟು ಚೆನ್ನಾಗಿದೆ ಅಲ್ವಾ ಇದು?’ ಎಂದೆ.

‘ನಿನಗಿಷ್ಟವಾಯಿತೆ?’ ಎಂದಳು ಸಿಸ್ಟರ್ ಸಾರಾ. ನಾನವಳನ್ನು ಸಿಸ್ಟರ್ ಸಾರಾ ಅನ್ನುತ್ತಲೇ ಇದ್ದೆ, ಅವಳು ನನಗೆ ನನ್ನ ಹೆಸರು ಹಿಡಿದೇ ಕರೆಯುತ್ತಿದ್ದಳು.

‘ಹೌದು, ತುಂಬ ಇಷ್ಟವಾಯಿತು. ಆದರೆ ನನಗೆ ಮೃದುವಾದ ಸವಿಯಾದ ಹೂಗಳ ಮೇಲೆ ನಡೆಯುವುದು ಇಷ್ಟವಿಲ್ಲ.’

‘ಯೋಚನೆ ಮಾಡಬೇಡ ಪ್ರಿಯ ಸುಲ್ತಾನಾ, ನೀನು ನಡೆಯುವುದರಿಂದ ಆ ಹೂವುಗಳಿಗೆ ಹಾನಿಯಾಗುವುದಿಲ್ಲ. ಅವು ಬೀದಿಯ ಹೂಗಳು.’

‘ಇಡೀ ಊರು ತೋಟದಂತೆ ಕಾಣುತ್ತಿದೆ. ತುಂಬ ಕೌಶಲಪೂರ್ಣವಾಗಿ ಗಿಡಮರಗಳನ್ನು ನೆಟ್ಟಿದ್ದೀರಿ.’

‘ನಿಮ್ಮ ಕಲಕತ್ತಾ ಇದಕ್ಕಿಂತ ಒಳ್ಳೆಯ ತೋಟವಾಗಬಹುದು, ನಿಮ್ಮ ದೇಶಬಾಂಧವರು ಹಾಗಾಗಬೇಕೆಂದು ಬಯಸಿದ್ದೇ ಆದರೆ.’

‘ಅವರಿಗೆ ಚಿಂತನೆ ನಡೆಸಲು ಬೇಕಾದಷ್ಟು ವಿಷಯ ಇರುವಾಗ ಕೈತೋಟ ಕುರಿತು ಯೋಚಿಸುವುದು ಕಾಲಹರಣವೆಂದೇ ಅವರು ಭಾವಿಸುತ್ತಾರೆ.’

‘ಅವರಿಗೆ ಅದಕ್ಕಿಂತ ದೊಡ್ಡ ನೆಪ ಸಿಗುವುದಿಲ್ಲವಲ್ಲ, ಅದಕ್ಕೆ’ ಎಂದು ನಗುತ್ತ ಹೇಳಿದಳು.

ಗಂಡಸರೆಲ್ಲ ಎಲ್ಲಿದ್ದಾರೊ ಎಂದು ತುಂಬ ಕುತೂಹಲವಾಯಿತು. ನಡೆಯುವಾಗ ನೂರಕ್ಕೂ ಮಿಕ್ಕಿ ಮಹಿಳೆಯರನ್ನು ಭೇಟಿಯಾದೆ, ಆದರೆ ಒಬ್ಬ ಗಂಡಸೂ ಕಂಡಿರಲಿಲ್ಲ.

‘ಗಂಡಸರೆಲ್ಲ ಎಲ್ಲಿದ್ದಾರೆ?’ ಎಂದೆ.

‘ಎಲ್ಲಿರಬೇಕೋ ಅಲ್ಲಿ, ಅವರವರಿಗೆ ಸೂಕ್ತ ಜಾಗದಲ್ಲಿ.’

‘ಅವರವರ ಜಾಗದಲ್ಲಿ ಎಂದರೆ ಎಲ್ಲಿ ಎಂದು ದಯವಿಟ್ಟು ಹೇಳು.’

‘ಓ, ನಂದೇ ತಪ್ಪು. ನೀನಿಲ್ಲಿಗೆ ಎಂದೂ ಬಂದವಳಲ್ಲವಾದ್ದರಿಂದ ನಿನಗೆ ನಮ್ಮ ಪದ್ಧತಿ ಅರ್ಥವಾಗಲ್ಲ. ನಾವು ನಮ್ಮ ಗಂಡಸರನ್ನು ಮನೆಯೊಳಗೆ ಕೂಡಿ ಹಾಕಿದ್ದೇವೆ.’

‘ನಮ್ಮನ್ನು ಜೆನಾನಾದಲ್ಲಿ ಇಟ್ಟ ಹಾಗೆಯೇ?’

‘ಹಾಂ, ಸರಿಯಾಗಿ ಹಾಗೆಯೇ.’

‘ಏನು ತಮಾಷೆ ಅಲ್ವ?’ ನನಗೆ ತಡೆಯಲಾಗದ ನಗು ಬಂತು. ಸಿಸ್ಟರ್ ಸಾರಾ ಕೂಡಾ ನಕ್ಕಳು. 

‘ಆದರೆ ಪ್ರಿಯ ಸುಲ್ತಾನಾ, ನಿರಪಾಯಕಾರಿ ಹೆಂಗಸರನ್ನು ಕೂಡಿಹಾಕಿ ಗಂಡಸರನ್ನು ಹೊರಬಿಡುವುದು ಎಷ್ಟೊಂದು ಅನ್ಯಾಯ ಅಲ್ಲವೆ?’

‘ಯಾಕೆ? ಜೆನಾನಾದ ಹೊರಗೆ ಬರುವುದು ಹೆಂಗಸರಿಗೆ ಅಷ್ಟು ಸುರಕ್ಷಿತವಲ್ಲ, ಯಾಕೆಂದರೆ ನಾವು ಹುಟ್ಟಾ ಅಬಲೆಯರು.’

‘ಹೌದು, ಎಲ್ಲಿಯವರೆಗೆ ಬೀದಿಗಳಲ್ಲಿ ಗಂಡಸರಿರುತ್ತಾರೋ ಅಲ್ಲಿಯವರೆಗೆ ಅದು ಸುರಕ್ಷಿತವಲ್ಲ, ಸಂತೆಗೆ ಕಾಡುಪ್ರಾಣಿ ನುಗ್ಗಿದರೂ ಸುರಕ್ಷಿತವಲ್ಲ.’

‘ಹೌದೌದು, ಸುರಕ್ಷಿತವಲ್ಲ.’

‘ಒಂದುವೇಳೆ ಒಬ್ಬ ಹುಚ್ಚ ಹುಚ್ಚರ ಆಶ್ರಮದಿಂದ ತಪ್ಪಿಸಿಕೊಂಡು ಬಂದು ಮನುಷ್ಯರಿಗೆ, ಕುದುರೆಗಳಿಗೆ, ಉಳಿದ ಜೀವಿಗಳಿಗೆ ತೊಂದರೆ ಕೊಡುತ್ತಿದ್ದ ಎಂದಿಟ್ಟುಕೊ. ಆಗ ನಿನ್ನ ದೇಶವಾಸಿಗಳು ಏನು ಮಾಡುತ್ತಾರೆ?’

‘ಅವರನ್ನು ಹಿಡಿಯಲು ಪ್ರಯತ್ನಿಸಿ ಅವರ ಆಶ್ರಮಕ್ಕೇ ಒಯ್ದು ಬಿಟ್ಟುಬರುತ್ತಾರೆ.’

‘ಧನ್ಯವಾದ. ಹುಚ್ಚರಲ್ಲದವರನ್ನು ಆಶ್ರಮದಲ್ಲಿಟ್ಟು, ಹುಚ್ಚರನ್ನು ಬೀದಿಯಲ್ಲಿ ತಿರುಗಲು ಬಿಡುವುದು ಜಾಣತನ ಅಲ್ಲ ಅಲ್ಲವೆ?’

‘ಖಂಡಿತ, ಅಲ್ಲ’ ನಾನು ನಸು ನಗುತ್ತ ಹೇಳಿದೆ.

‘ಹ್ಞಾಂ, ವಾಸ್ತವವಾಗಿ ನಿನ್ನ ದೇಶದಲ್ಲಿ ಇದೇ ಆಗುತ್ತಿರುವುದು. ಒಂದಲ್ಲ ಒಂದು ತರಲೆ ಮಾಡುವ ಅಥವಾ ಅಂತಹ ತರಲೆಗಳ ನಿಲ್ಲಿಸಲಾರದ ಗಂಡಸರನ್ನು ಸ್ವೇಚ್ಛೆಯಾಗಿ ತಿರುಗಲು ಬಿಡಲಾಗಿದೆ. ಮುಗ್ಧ ಹೆಣ್ಣುಮಕ್ಕಳನ್ನು ಜೆನಾನಾದಲ್ಲಿ ಕೂಡಿಹಾಕಲಾಗಿದೆ. ಮುಕ್ತವಾಗಿ ಹೊರಗಿರಲು ತರಬೇತಿಯೇ ಇಲ್ಲದ ಗಂಡಸರನ್ನು ನಂಬುವುದಾದರೂ ಹೇಗೆ?’

‘ನಮ್ಮ ಸಮಾಜದ ಆಗುಹೋಗುಗಳಲ್ಲಿ ಕೈಹಾಕಲು ನಮಗೆ ಯಾವ ಅವಕಾಶವೂ ಇಲ್ಲ. ಭಾರತದಲ್ಲಿ ಪುರುಷನೇ ದೇವರು ಮತ್ತು ಯಜಮಾನ. ಅವ ಎಲ್ಲ ಅವಕಾಶ, ಅಧಿಕಾರವನ್ನು ತಾನೇ ತೆಗೆದುಕೊಂಡು ಹೆಂಗಸರನ್ನು ಜೆನಾನಾದಲ್ಲಿ ಕೂಡಿಹಾಕಿದ್ದಾನೆ.’

ಅಷ್ಟೊತ್ತಿಗೆ ಸಿಸ್ಟರ್ ಸಾರಾ ಮನೆಯನ್ನು ಮುಟ್ಟಿದೆವು. ಅದು ಹೃದಯ ಆಕಾರದ ಕೈದೋಟದಲ್ಲಿತ್ತು. ಅದು ಕಬ್ಬಿಣದ ಛಾವಣಿಯಿಂದ ಕಟ್ಟಿದ ಬಂಗಲೆ. ಉಳಿದ ಸಿರಿವಂತರ ಬಂಗಲೆಗಳಿಗಿಂತ ಚೆನ್ನಾಗಿ, ತಂಪಾಗಿ ಇತ್ತು. ಅದು ಎಷ್ಟು ನೀಟಾಗಿ, ಚಂದವಾಗಿ, ಪೀಠೋಪಕರಣಗಳಿಂದ ಎಷ್ಟು ಅಲಂಕೃತವಾಗಿ ಇತ್ತೆಂದು ವರ್ಣಿಸಲೇ ಆಗುವುದಿಲ್ಲ.

ಪಕ್ಕಪಕ್ಕ ಕುಳಿತೆವು. ಒಳಗಿನಿಂದ ಎಂಬ್ರಾಯಿಡರಿ ಕೆಲಸದ ಒಂದು ಬಟ್ಟೆ ತಂದು ಹೊಸ ವಿನ್ಯಾಸ ಮೂಡಿಸಿ ಎಂಬ್ರಾಯಿಡರಿ ಮಾಡತೊಡಗಿದಳು.

‘ನಿನಗೆ ಹೆಣಿಗೆ ಮತ್ತು ಹೊಲಿಗೆ ಬರುತ್ತದೆಯೆ ಸುಲ್ತಾನಾ?’

‘ಹೌದು, ನಮಗೆ ಜೆನಾನಾದಲ್ಲಿ ಮಾಡಲು ಅದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ.’

‘ಆದರೆ ನಮ್ಮ ಜೆನಾನಾದವರು ಎಂಬ್ರಾಯಿಡರಿ ಮಾಡುವರೆನ್ನುವ ಯಾವುದೇ ಭರವಸೆಯಿಲ್ಲ ನಮಗೆ!’ ಜೋರಾಗಿ ನಗುತ್ತ ಹೇಳಿದಳು. ‘ಗಂಡಸರಿಗೆ ಸೂಜಿಕಣ್ಣಿನಲ್ಲಿ ದಾರ ತೂರಿಸುವಷ್ಟೂ ಸಹನೆಯೇ ಇಲ್ಲ!’

ಅಲ್ಲಿ ಟೀಪಾಯಿಯ ಮೇಲೆ ಹರಡಿದ್ದ ಹಲವು ಎಂಬ್ರಾಯಿಡರಿ ಬಟ್ಟೆಗಳತ್ತ ತೋರಿಸಿ, ‘ಇವನ್ನೆಲ್ಲ ನೀನೇ ಮಾಡಿದೆಯಾ?’ ಎಂದು ಕೇಳಿದೆ.

‘ಹೌದು.’

‘ಇವನ್ನೆಲ್ಲ ಮಾಡಲು ನಿನಗೆ ಸಮಯವಾದರೂ ಹೇಗೆ ಸಿಕ್ಕಿತು? ನೀನು ಕಚೇರಿ ಕೆಲಸವನ್ನೂ ಮಾಡುತ್ತಿರುವೆ, ಅಲ್ಲವೆ?’

‘ಹೌದು. ಆದರೆ ನಾನು ಇಡಿಯ ದಿನ ಕಚೇರಿಗೆ ಅಂಟಿ ಕೂತಿರುವುದಿಲ್ಲ. ನನ್ನ ಕೆಲಸವನ್ನು ಚಕಚಕ ಎರಡೇ ಗಂಟೆಗಳಲ್ಲಿ ಮುಗಿಸಿಬಿಡುವೆ.’

‘ಎರಡೇ ಗಂಟೆ! ಅದು ಹೇಗೆ ಮುಗಿಸುವೆ? ನಮ್ಮ ದೇಶದಲ್ಲಿ ಎಲ್ಲ ಆಫೀಸರರೂ, ಉದಾಹರಣೆಗೆ ಮ್ಯಾಜಿಸ್ಟ್ರೇಟರೂ ಸಹಾ, ಏಳು ಗಂಟೆ ಕಾಲ ಕಚೇರಿ ಕೆಲಸ ಮಾಡಬೇಕು.’

‘ಅವರಲ್ಲಿ ಕೆಲವರು ಕೆಲಸ ಮಾಡುವುದು ನೋಡಿದ್ದೇನೆ. ಅವರು ಏಳುಗಂಟೆ ಕೆಲಸ ಮಾಡುತ್ತಾರೆ ಎಂದು ಅನಿಸಿದೆಯೆ ನಿನಗೆ?’

‘ಹೌದು, ಖಂಡಿತ ಮಾಡುತ್ತಾರೆ.’

‘ಇಲ್ಲ ಸುಲ್ತಾನಾ. ಅವರು ಮಾಡುವುದಿಲ್ಲ. ಚೊರೂಟು ಸೇದುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಕೆಲವರಂತೂ ಕಚೇರಿ ಸಮಯದಲ್ಲೇ ೨-೩ ಚೊರೂಟು ಎಳೆಯುತ್ತಾರೆ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚು ಮಾತಾಡುತ್ತಾರೆ, ಕಡಿಮೆ ಮಾಡುತ್ತಾರೆ. ಒಂದು ಚೊರೂಟು ಸೇದಲು ಅರ್ಧ ಗಂಟೆ ಬೇಕು. ಅವರು ದಿನಕ್ಕೆ ಹನ್ನೆರೆಡು ಚೊರೂಟು ಸೇದುವವರು ಅಂತಿಟ್ಟುಕೊ, ಎಷ್ಟಾಯಿತು? ನೋಡು, ಆರು ತಾಸು ಬರಿಯ ಸೇದುವುದಕ್ಕೆ ವ್ಯರ್ಥವಾಯಿತು.’

ಹೀಗೇ ನಾವು ಅನೇಕ ವಿಷಯಗಳ ಕುರಿತು ಮಾತಾಡಿದೆವು. ಅಲ್ಲಿ ಸಾಂಕ್ರಾಮಿಕ ಕಾಯಿಲೆಗಳಿರಲಿಲ್ಲ, ಸೊಳ್ಳೆಗಳು ಕಚ್ಚುವುದಿಲ್ಲ ಎಂದು ಗೊತ್ತಾಯಿತು. ಅಲ್ಲಿಲ್ಲಿ ಅಪಘಾತಗಳಲ್ಲಿ ಬಿಟ್ಟರೆ ಮಹಿಳಾರಾಜ್ಯದಲ್ಲಿ ಯಾರೂ ತಾರುಣ್ಯದಲ್ಲೇ ಅಕಾಲ ಮರಣಕ್ಕೀಡಾಗುವುದಿಲ್ಲ ಎಂದು ತಿಳಿದು ತುಂಬ ಆಶ್ಚರ್ಯವಾಯಿತು.

‘ನಮ್ಮ ಅಡಿಗೆಮನೆ ನೋಡುತ್ತೀಯೇನು?’ ಕೇಳಿದಳು.

‘ಖುಷಿಯಿಂದ’ ಎಂದೆ, ನೋಡಲು ಹೋದೆವು. ನಾನಲ್ಲಿಗೆ ಹೋದಾಗ ಗಂಡಸರು ಎಲ್ಲ ತೊಳೆದು ಸ್ವಚ್ಛಗೊಳಿಸುತ್ತಿದ್ದರು. ಒಂದು ಸುಂದರ ತರಕಾರಿ ತೋಟದಲ್ಲಿ ಅಡಿಗೆ ಮನೆಯಿತ್ತು. ಪ್ರತಿ ಬಳ್ಳಿ, ಪ್ರತಿ ಟೊಮ್ಯಾಟೊ ಗಿಡವೂ ತಮಗೆ ತಾವೇ ಆಭರಣದಂತಿದ್ದವು. ಹೊಗೆ, ಕರಿಮಸಿ ಯಾವುದೂ ಅಡಿಗೆ ಮನೆಯಲ್ಲಿ ಕಾಣಲಿಲ್ಲ. ಅದು ಶುಭ್ರವಾಗಿ, ಪ್ರಕಾಶಮಾನವಾಗಿ ಇತ್ತು. ಕಿಟಕಿಗಳು ಹೂಬಳ್ಳಿಗಳಿಂದ ಸುತ್ತುವರೆಯಲ್ಪಟ್ಟಿದ್ದವು. ಹೊಗೆ, ಬೆಂಕಿಯ ಯಾವ ಸುಳುಹೂ ಕಾಣಲಿಲ್ಲ.

‘ನೀವು ಅಡುಗೆ ಹೇಗೆ ಮಾಡುತ್ತೀರಿ?’ ಕೇಳಿದೆ.

‘ಸೂರ್ಯನ ಶಾಖದಿಂದ.’ ಎಂದಳು. ಅದೇವೇಳೆ ಸೂರ್ಯನ ಸಾಂದ್ರಗೊಳಿಸಲ್ಪಟ್ಟ ಶಾಖ ಹಾಯುವ ಪೈಪನ್ನು ತೋರಿಸಿದಳು. ತೋರಿಸುತ್ತ ಅಲ್ಲೇ ಸರಸರ ಏನನ್ನೋ ತಯಾರಿಸಿದಳು.

‘ಸೂರ್ಯನ ಶಾಖ ಒಗ್ಗೂಡಿಸಿ ಸಂಗ್ರಹಿಸಲು ಏನು ಮಾಡುತ್ತೀರಿ?’ ತುಂಬ ಆಶ್ಚರ್ಯದಿಂದ ಕೇಳಿದೆ.

‘ಹಾಗಾದರೆ ನಮ್ಮ ಪೂರ್ವೇತಿಹಾಸವನ್ನೂ ನಿನಗೆ ಸ್ವಲ್ಪ ಹೇಳಲೇಬೇಕು. ೩೦ ವರ್ಷ ಕೆಳಗೆ, ನಮ್ಮ ಇವತ್ತಿನ ರಾಣಿ ೧೩ ವರ್ಷದವಳಾದಾಗ ಸಿಂಹಾಸನಕ್ಕೆ ಅಧಿಪತಿಯಾದಳು. ಅವಳು ಹೆಸರಿಗಷ್ಟೆ ರಾಣಿ. ಪ್ರಧಾನಮಂತ್ರಿಯೇ ರಾಜ್ಯ ಆಳುತ್ತಿದ್ದ. ನಮ್ಮ ಒಳ್ಳೆಯ ರಾಣಿ ವಿಜ್ಞಾನವನ್ನು ಬಹು ಇಷ್ಟಪಡುತ್ತಿದ್ದಳು. ತನ್ನ ದೇಶದ ಎಲ್ಲ ಹೆಣ್ಮಕ್ಕಳೂ ಶಿಕ್ಷಣ ಕಲಿಯಬೇಕೆಂದು ಸುತ್ತೋಲೆ ಹೊರಡಿಸಿದಳು. ಹಲವು ಹುಡುಗಿಯರ ಶಾಲೆ ತೆರೆಯಲ್ಪಟ್ಟು, ಅವಳ ಸಹಾಯದಿಂದ ನಡೆಯತೊಡಗಿದವು. ಹೆಣ್ಮಕ್ಕಳಲ್ಲಿ ಶಿಕ್ಷಣ ಹಬ್ಬತೊಡಗಿತು. ಬಾಲ್ಯವಿವಾಹ ನಿಂತುಹೋಯಿತು. ೨೧ ವರ್ಷದ ಒಳಗೆ ಯಾವ ಹುಡುಗಿಯೂ ಮದುವೆಯಾಗುವಂತಿಲ್ಲ ಎಂಬ ಕಾನೂನು ಬಂತು. ನಿನಗೆ ಹೇಳಬೇಕೆಂದರೆ ಈ ಎಲ್ಲ ಬದಲಾವಣೆ ಬರುವ ಮುಂಚೆ ನಾವೂ ಕಟ್ಟುನಿಟ್ಟಾಗಿ ಪರ್ದಾ ಆಚರಿಸುತ್ತಿದ್ದೆವು.’

‘ಎಲ್ಲ ಹೇಗೆ ಬದಲಾಗಿಹೋಯಿತು?’ ನಗುತ್ತ ಪ್ರಶ್ನೆ ಕೇಳಿ ಅವಳನ್ನು ತಡೆದೆ.

‘ಬೇರ್ಪಡಿಸುವಿಕೆ ಹಾಗೇ ಇದೆ. ಕೆಲವೇ ವರ್ಷಗಳಲ್ಲಿ ಹುಡುಗಿಯರಿಗೆ ಪ್ರತ್ಯೇಕ ಯೂನಿವರ್ಸಿಟಿ ಶುರುವಾದವು. ಅಲ್ಲಿ ಗಂಡಸರನ್ನು ಸೇರಿಸಿಕೊಳ್ಳಲಿಲ್ಲ. ರಾಣಿ ವಾಸಿಸುವ ರಾಜಧಾನಿಯಲ್ಲಿ ಅಂಥ ಎರಡು ಯೂನಿವರ್ಸಿಟಿಗಳಿವೆ. ಒಂದು ಯೂನಿವರ್ಸಿಟಿ ಹಲವು ಪೈಪುಗಳ ಜೋಡಿಸಲ್ಪಟ್ಟ ವಿಶಿಷ್ಟ ಬಲೂನನ್ನು ಕಂಡುಹಿಡಿಯಿತು. ಅದು ಮೋಡದ ನಾಡಿಗಿಂತ ಮೇಲೆ ತೇಲುವಂತೆ ಮಾಡಿದರು. ಮೋಡಗಳಿಂದ ಬಲೂನು ನಮಗೆಷ್ಟು ನೀರು ಬೇಕೋ ಅಷ್ಟನ್ನು ಹೀರಿಕೊಂಡು ಸಂಗ್ರಹಿಸುತ್ತದೆ. ಹೆಚ್ಚೆಚ್ಚು ನೀರು ಬಳಸಿದಂತೆ ಹೆಚ್ಚೆಚ್ಚು ಮೋಡಗಳು ಖಾಲಿಯಾಗಿ ಯೂನಿವರ್ಸಿಟಿ ಪ್ರದೇಶದಲ್ಲಿ ಬಿರುಗಾಳಿ, ಮಳೆ ಬರುವುದನ್ನು ನಮ್ಮ ಲೇಡಿ ಪ್ರಿನ್ಸಿಪಾಲ್ ತಡೆಗಟ್ಟಿದರು.’

‘ಹೌದಾ! ಇಲ್ಲಿ ಕೆಸರೇ ಇಲ್ಲ ಏಕೆ ಎಂದು ಈಗ ನಂಗೆ ಅರ್ಥವಾಗ್ತ ಇದೆ’ ಎಂದೆ. ಆದರೆ ನೀರನ್ನು ಪೈಪುಗಳಲ್ಲಿ ಹಿಡಿದಿಡುವುದು ಹೇಗೆಂದು ನನಗೆ ತಿಳಿಯಲಿಲ್ಲ. ಅವಳು ನನಗೆ ಹಂತಹಂತವಾಗಿ ವಿವರಿಸಿದಳಾದರೂ ನನಗೆ ಅರ್ಥವಾಗಲಿಲ್ಲ, ಏಕೆಂದರೆ ವಿಜ್ಞಾನ ಕುರಿತ ನನ್ನ ತಿಳುವಳಿಕೆ ಏನೂ ಇಲ್ಲವೆನ್ನುವಷ್ಟು ಕಡಿಮೆ. ಅವಳು ಮುಂದುವರೆಸಿದಳು: 

‘ಬೇರೆ ಮಹಿಳಾ ಯೂನಿವರ್ಸಿಟಿಗಳಿಗೆ ಇದರಿಂದ ಹೊಟ್ಟೆಕಿಚ್ಚಾಯಿತು. ಅವರು ಪೈಪೋಟಿಯಿಂದ ನಮಗಿಂತ ಬೇರೇನಾದರೂ ವಿಶೇಷವಾದದ್ದು ಮಾಡಬೇಕೆಂದು ಪಣತೊಟ್ಟರು. ಕೊನೆಗೆ ಸೂರ್ಯನ ಶಾಖವನ್ನು ತಮಗೆಷ್ಟು ಬೇಕೋ ಅಷ್ಟು ಹಿಡಿದಿಡುವ ಯಂತ್ರವೊಂದನ್ನು ಕಂಡುಹಿಡಿದರು. ಹಾಗೆ ಸಂಗ್ರಹಿಸಿದ ಶಾಖವನ್ನು ಬೇಕಾದಾಗ, ಬೇಕಾದವರಿಗೆ ಕೊಟ್ಟು ಬಳಸುವ ವಿಧಾನ ಅಭಿವೃದ್ಧಿಪಡಿಸಿದರು. 

‘ಹೆಣ್ಣುಮಕ್ಕಳು ಹೀಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿದದಾಗ ಗಂಡಸರು ಸೈನ್ಯಶಕ್ತಿ ಹೆಚ್ಚಿಸುವ ಕೆಲಸದಲ್ಲಿ ಮಗ್ನರಾಗಿಹೋದರು. ಮಹಿಳಾ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮೋಡದಿಂದ ನೀರನ್ನೂ, ಸೂರ್ಯನಿಂದ ಶಾಖವನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಸಿದ್ದಾರೆ ಎಂದು ಗೊತ್ತಾದಾಗ ಅವರ ನಕ್ಕು ಅತ್ತ ಸರಿಸಿಬಿಟ್ಟರು. ಇಡೀ ಪ್ರಯತ್ನವೇ ‘ಅತಿಭಾವುಕ ಕನಸು’ ಎಂದು ಕರೆದರು.’

‘ನಿಮ್ಮ ಸಾಧನೆಗಳು ನಿಜಕ್ಕೂ ಅದ್ಭುತವಾಗಿವೆ. ಆದರೆ ಗಂಡಸರನ್ನು ಜೆನಾನಾದಲ್ಲಿ ತುಂಬಲು ಹೇಗೆ ಸಾಧ್ಯವಾಯಿತು ಅಂತ ಹೇಳು. ಅವರನ್ನು ಮೊದಲು ಹಿಡಿದಿರಾ?’

‘ಇಲ್ಲ’

‘ಆದರೆ ಅವರು ತಮ್ಮ ಮುಕ್ತ ವಾತಾವರಣದ ಸ್ವಚ್ಛಂದ ಬದುಕನ್ನು ತಾವೇ ಬಿಟ್ಟುಕೊಟ್ಟು ಶರಣಾಗಿ ನಾಲ್ಕು ಗೋಡೆಗಳ ನಡುವಿನ ಜೆನಾನಾದಲ್ಲಿರಲು ಒಪ್ಪಿರುವುದು ಅಸಾಧ್ಯ. ಬಹುಶಃ ಅವರಿಗಿಂತ ಹೆಚ್ಚು ಬಲ ಪ್ರಯೋಗಿಸಿ ಈ ಕೆಲಸ ಮಾಡಿಕೊಂಡಿರಬೇಕು.’

‘ಹೌದು, ಅವರನ್ನು ಬಲವನ್ನು ಹಿಂದಿಕ್ಕಲಾಯಿತು.’

‘ಯಾರಿಂದ? ಸ್ತ್ರೀಯೋಧರಿಂದ ಇರಬೇಕಲ್ಲವೆ?’

‘ಇಲ್ಲ, ಶಸ್ತ್ರಾಸ್ತ್ರಗಳಿಂದಲ್ಲ.’

‘ಹೌದು, ಸಾಧ್ಯವಿರಲಾರದು. ಗಂಡಸರ ಶಸ್ತ್ರಾಸ್ತ್ರಗಳು ಹೆಂಗಸರದಕ್ಕಿಂತ ಬಲವಾದವು. ಹಾಗಾದರೆ ಏನು ಮಾಡಿದಿರಿ?’

‘ಬುದ್ಧಿಯಿಂದ’

‘ಆದರೆ ಅವರ ಮಿದುಳೂ ಹೆಂಗಸರದಕ್ಕಿಂತ ಭಾರ ಮತ್ತು ದೊಡ್ಡ ಇರುವಂಥದು, ಅಲ್ಲವೆ?’

‘ಹೌದು, ಆದರೇನು? ಆನೆಗೆ ಮನುಷ್ಯನದಕ್ಕಿಂದ ದೊಡ್ಡ, ಭಾರವಾದ ಮಿದುಳಿದೆ. ಆದರೆ ಮನುಷ್ಯ ಆನೆಯನ್ನು ಸರಪಳಿಯಿಂದ ಬಂಧಿಸಿ ತನಗಿಷ್ಟ ಬಂದ ಕೆಲಸ ಮಾಡಿಸುವುದಿಲ್ಲವೆ?’

‘ಸರಿಯಾಗಿ ಹೇಳಿದೆ, ಆದರೆ ದಯವಿಟ್ಟು ಹೇಳು, ಇದೆಲ್ಲ ಹೇಗೆ ಸಾಧ್ಯವಾಯಿತು? ನನಗೆ ಅದನ್ನು ತಿಳಿಯಲು ತಡೆಯಲಾರದ ಕುತೂಹಲ.’

‘ಹೆಣ್ಣುಮಕ್ಕಳ ಮಿದುಳು ಗಂಡಸರದಕ್ಕಿಂತ ಚುರುಕಾಗಿ ಓಡುತ್ತದೆ. ೧೦ ವರ್ಷ ಕೆಳಗೆ ಸೈನ್ಯಾಧಿಕಾರಿಗಳು ನಮ್ಮ ಆವಿಷ್ಕಾರಗಳನ್ನು ಅತಿಭಾವುಕ ಕನಸು ಎಂದು ಕರೆದಮೇಲೆ ಕೆಲವು ತರುಣಿಯರಿಗೆ ಅವರಿಗೆ ಸರಿಯಾಗಿ ತಿರುಗಿ ಹೇಳಬೇಕೆಂಬ ತುಡಿತ ಹುಟ್ಟಿತು. ಆದರೆ ಎರಡೂ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲರು ಅವರಿಗೆ ಉತ್ತರವನ್ನು ಪದಗಳಿಂದ ಅಲ್ಲ, ಅವಕಾಶ ಸಿಕ್ಕಾಗ  ಕ್ರಿಯೆಯಿಂದ ತೋರಿಸಬೇಕು ಎಂದರು. ಅಂತಹ ಅವಕಾಶಕ್ಕೆ ಅವರು ಹೆಚ್ಚು ಕಾಯಬೇಕಾಗಲಿಲ್ಲ.’

‘ಎಂಥ ಆಶ್ಚರ್ಯ?’ ನಾನು ಮನದುಂಬಿ ಚಪ್ಪಾಳೆ ತಟ್ಟಿದೆ. ‘ಈಗ ಹೆಮ್ಮೆಯ ಗಣ್ಯರು ಭಾವುಕ ಕನಸುಗಳನ್ನು ತಾವೇ ಕಾಣುತ್ತಿದ್ದಾರೆ.’

‘ಕೇಳು ಸುಲ್ತಾನಾ, ಪಕ್ಕದ ದೇಶದಿಂದ ಕೆಲವು ಜನ ನಮ್ಮ ದೇಶಕ್ಕೆ ಬಂದು ಆಶ್ರಯ ಪಡೆದರು. ಅವರು ಎಂಥದೋ ರಾಜಕೀಯ ಅಪರಾಧದ ಕಾರಣವಾಗಿ ತೊಂದರೆಯಲ್ಲಿ ಸಿಲುಕಿದ್ದರು. ಒಳ್ಳೆಯ ಆಡಳಿತಕ್ಕಿಂತ ಅಧಿಕಾರಕ್ಕೇ ಹಂಬಲಿಸುತ್ತಿದ್ದ ಅಲ್ಲಿನ ರಾಜ ದಯಾಳುವಾದ ನಮ್ಮ ರಾಣಿಯ ಬಳಿ ಅವರನ್ನು ವಾಪಸು ಕೊಡಲು ಹೇಳಿದ. ಆದರೆ ರಾಣಿ ಆಶ್ರಯ ಕೇಳಿ ಬಂದ ನಿರಾಶ್ರಿತರಿಗೆ ಸಹಾಯ ನಿರಾಕರಿಸುವುದು ತನ್ನ ತತ್ವಕ್ಕೆ ವಿರುದ್ಧವೆಂದು ನಿರಾಕರಿಸಿದಳು. ಅದಕ್ಕೆ ಸಿಟ್ಟಾದ ಆ ದೇಶದ ರಾಜ ನಮ್ಮ ಮೇಲೆ ಯುದ್ಧ ಸಾರಿದ. ನಮ್ಮ ಸೈನ್ಯಾಧಿಕಾರಿಗಳು ತುದಿಗಾಲಲ್ಲಿ ಸಿದ್ಧರಾಗಿ ಯುದ್ಧಭೂಮಿಯಲ್ಲಿ ಶತ್ರುವನ್ನು ಎದುರುಗೊಳ್ಳಲು ಹೋದರು. ಆದರೆ ಶತ್ರು ತುಂಬ ಬಲಶಾಲಿಯಾಗಿದ್ದ. ನಮ್ಮ ಸೈನಿಕರು ವೀರಾವೇಶದಿಂದ ಕಾದಾಡಿದದೇನೋ ನಿಜ, ಆದರೆ ಅವರ ಪ್ರಯತ್ನಗಳ ಹೊರತಾಗಿ ವಿದೇಶೀ ಸೈನ್ಯ ನಮ್ಮ ಪ್ರಾಂತ್ಯವನ್ನು ಆಕ್ರಮಿಸುತ್ತಾ ಒಂದೊಂದೇ ಹೆಜ್ಜೆ ಮುಂದೆ ಬಂತು.

ಹೆಚ್ಚುಕಮ್ಮಿ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ೧೬ ವರ್ಷದ ಹುಡುಗರವರೆಗೆ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ಬಹಳಷ್ಟು ಸೈನಿಕರನ್ನು ಕೊಲ್ಲಲಾಯಿತು. ಕೆಲವರನ್ನು ಓಡಿಸಲಾಯಿತು. ಶತ್ರುಸೈನಿಕರು ರಾಜಧಾನಿಯಿಂದ ೨೫ ಮೈಲು ಪ್ರದೇಶ ದೂರದವರೆಗೆ ಬಂದೇ ಬಿಟ್ಟರು. 

ಜ್ಞಾನಿ, ಹಿರಿಯ ಮಹಿಳೆಯರೆಲ್ಲ ರಾಣಿಯ ಅರಮನೆಯಲ್ಲಿ ಸೇರಿ ನಮ್ಮ ನೆಲವನ್ನು ಉಳಿಸಿಕೊಳ್ಳಲು ಮುಂದೇನು ಮಾಡುವುದೆಂಬ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಕೆಲವರು ನಾವೂ ಯೋಧರಂತೆ ಯುದ್ಧ ಮಾಡಬೇಕೆಂದರು. ಮತ್ತೆ ಕೆಲವರು ತಕರಾರೆತ್ತಿ ಹೆಂಗಸರು ಕತ್ತಿ, ಕೋವಿಗಳೊಂದಿಗೆ ಯುದ್ಧ ಮಾಡುವ ತರಬೇತಿ ಪಡೆದವರಲ್ಲ; ಮತ್ತಿನ್ಯಾವುದೇ ಶಸ್ತ್ರಾಸ್ತ್ರದೊಂದಿಗೆ ಹೋರಾಡಿ ಅಭ್ಯಾಸವಿಲ್ಲ ಎಂದರು. ಉಳಿದವರು ತಮ್ಮ ದೇಹ ದುರ್ಬಲವಾಗಿದೆ ಎಂದು ಖೇದಗೊಂಡರು.

‘ದೇಹಬಲದಿಂದ ದೇಶ ಉಳಿಸಲಾರಿರಾದರೆ ಬುದ್ಧಿಬಲದಿಂದ ಉಳಿಸಿ’ ಎಂದಳು ರಾಣಿ. ಕೆಲ ಸಮಯ ಸ್ಮಶಾನ ಮೌನ. ಕೊನೆಗೆ ಮಹಾರಾಣಿ ಹೇಳಿದಳು: ‘ನನ್ನ ನೆಲ ಮತ್ತು ಮರ್ಯಾದೆ ಎರಡೂ ಕಳೆದು ಹೋಗುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದ ದಾರಿ.’ ಆಗ ಅದುವರೆಗು ಮಾತನಾಡದೆ ಯೋಚಿಸುತ್ತ ಕುಳಿತಿದ್ದ ಸೂರ್ಯನ ಶಾಖ ಸಂಗ್ರಹಿಸಿರುವ ಎರಡನೆ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲ್ ಎದ್ದು ನಿಂತು, ‘ನಾವು ಹೆಚ್ಚುಕಮ್ಮಿ ಎಲ್ಲ ಕಳೆದುಕೊಂಡಿದ್ದೇವೆ, ನಮಗೆ ತುಂಬ ಕಡಿಮೆ ಭರವಸೆ ಉಳಿದಿದೆ. ಆದರೂ ಒಂದು ಮಾರ್ಗವಿದೆ, ಬೇಕಾದರೆ ಪ್ರಯತ್ನಿಸಬಹುದು, ನನಗೆ ತಿಳಿದಂತೆ ಅದು ಏಕೈಕ ಮತ್ತು ಕೊನೆಯ ದಾರಿ’ ಎಂದು ಹೇಳಿದಳು. ಅದರಲ್ಲಿ ಸೋತರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದಳು. ಅಲ್ಲಿ ಸೇರಿದ ಎಲ್ಲರೂ ಸಾವು ಬೇಕಾದರೂ ಬರಲಿ, ಅಡಿಯಾಳಾಗಿ ಮಾತ್ರ ಬದುಕಲಾರೆವು ಎಂದು ಪ್ರತಿಜ್ಞೆಗೈದರು.

ರಾಣಿ ಎಲ್ಲರಿಗೂ ವಂದಿಸಿ ಮಹಿಳಾ ಪ್ರಿನ್ಸಿಪಾಲರಿಗೆ ಅವರ ಪ್ರಯತ್ನ ನಡೆಸಲು ಹೇಳಿದರು. ಆಗ ಆಕೆ ಎದ್ದುನಿಂತು, ‘ನಾವು ಹೊರಗೆ ಹೋಗುವ ಮೊದಲು ನಮ್ಮ ಗಂಡಸರು ಜೆನಾನಾದೊಳಗೆ ಬರಬೇಕು. ಪರ್ದಾ ಆಚರಣೆಯ ಸಲುವಾಗಿ ನಾನು ಈ ಬೇಡಿಕೆ ಇಡುತ್ತಿದ್ದೇನೆ.’ ರಾಣಿ ಅದು ಹೌದು ಎಂದು ಒಪ್ಪಿದಳು.

‘ಮರುದಿನ ರಾಣಿ ಎಲ್ಲ ಗಂಡಸರನ್ನು ಕರೆದು ಗೌರವ ಮತ್ತು ಸ್ವಾತಂತ್ರ್ಯದ ಉಳಿವಿನ ಸಲುವಾಗಿ ಎಲ್ಲರೂ ಜೆನಾನಾಗೆ ತೆರಳಬೇಕೆಂದು ಕೇಳಿಕೊಂಡಳು. ಗಾಯಗೊಂಡು ದಣಿದ ಅವರು ಈ ಆಜ್ಞೆಯನ್ನು ವರವೆಂದು ಸ್ವೀಕರಿಸಿದರು. ವಿರೋಧದ ಒಂದು ಮಾತೂ ಹೇಳದೆ ತಲೆಬಾಗಿಸಿ ಎಲ್ಲರೂ ಜೆನಾನಾದೊಳಗೆ ಹೋದರು. ಈ ದೇಶಕ್ಕೆ ಯಾವುದೇ ಭರವಸೆ ಇಲ್ಲವೆಂಬ ಬಗ್ಗೆ ಅವರಿಗೆ ಖಚಿತವಿತ್ತು. ಆಗ ಮಹಿಳಾ ಪ್ರಿನ್ಸಿಪಾಲ್ ತನ್ನ ಎರಡು ಸಾವಿರ ವಿದ್ಯಾರ್ಥಿಗಳೊಂದಿಗೆ ರಣರಂಗಕ್ಕೆ ಹೋದರು. ಶೇಖರಿಸಿಟ್ಟ ಸೂರ್ಯನ ಎಲ್ಲ ಶಾಖ ಮತ್ತು ಕಿರಣಗಳನ್ನು ಶತ್ರುಗಳ ಮೇಲೆ ಹರಿಯಬಿಟ್ಟರು. ಆ ಬೆಳಕು ಮತ್ತು ಶಾಖ ಮನುಷ್ಯರು ತಡೆಯಲಾರದಷ್ಟು ಇತ್ತು. ಕಂಗಾಲಾಗಿ ಅವರೆಲ್ಲ ಓಡತೊಡಗಿದರು. ಆ ಗಲಿಬಿಲಿಯಲ್ಲಿ ಅದನ್ನು ಎದುರಿಸುವುದು ಹೇಗೆಂದೇ ಅವರಿಗೆ ತಿಳಿಯಲಿಲ್ಲ. ತಮ್ಮ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಅವರು ಅಲ್ಲಲ್ಲೇ ಬಿಟ್ಟು ಹೋದಾಗ ಅವನ್ನೂ ಸೂರ್ಯನ ಶಾಖದಿಂದ ಸುಟ್ಟು ನಾಶಗೊಳಿಸಲಾಯಿತು. ಆಗಿನಿಂದ ನಮ್ಮ ದೇಶವನ್ನು ಆಕ್ರಮಿಸಲು ಯಾರೂ ಪ್ರಯತ್ನಿಸಿಲ್ಲ.’

‘ಆಗಿನಿಂದ ನಿಮ್ಮ ಗಂಡಸರು ಜೆನಾನಾದಿಂದ ಹೊರಬರಲು ಪ್ರಯತ್ನಿಸಲೇ ಇಲ್ಲವೆ?’

‘ಹೌದು, ಅವರಿಗೆ ಸ್ವತಂತ್ರವಾಗಬೇಕೆನಿಸಿತು. ಕೆಲವು ಪೊಲೀಸ್ ಕಮಿಷನರುಗಳು ಮತ್ತು ಜಿಲ್ಲಾ ನ್ಯಾಯಾಧೀಶರು ಯುದ್ಧ ವೈಫಲ್ಯಕ್ಕೆ ಮಿಲಿಟರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಜೈಲಿಗಟ್ಟಲು ಅರ್ಹರಾದರೂ ಅವರು ನಿರ್ಲಕ್ಷ್ಯ ತೋರದೆ ಕಾದಾಡಿರುವುದರಿಂದ ಶಿಕ್ಷಿಸಬಾರದು ಹಾಗೂ ಎಲ್ಲರನ್ನು ಮತ್ತೆ ಅವರವರ ಅಧಿಕಾರದಲ್ಲಿ ಮುಂದುವರೆಸಬೇಕು ಎಂದು ಕೋರಿ ರಾಣಿಗೆ ಪತ್ರ ಕಳಿಸಿದರು. ಆಗ ರಾಣಿಯು ಸುತ್ತೋಲೆಯೊಂದನ್ನು ಕಳಿಸಿ ಅವರ ಸೇವೆ ಅವಶ್ಯವಿರುವಾಗ ಕರೆಸಿಕೊಳ್ಳಲಾಗುವುದೆಂದೂ, ಅಲ್ಲಿಯವರೆಗೆ ಎಲ್ಲರೂ ಅವರವರ ಜಾಗಗಳಲ್ಲಿರಬೇಕೆಂದೂ ತಿಳಿಸಿದಳು. ಅವರಿಗೀಗ ಪರ್ದಾ ಪದ್ಧತಿ ರೂಢಿಯಾಗಿ ಗೊಣಗುಡುವುದು ನಿಲಿಸಿ ಅಲ್ಲಿಗೇ ಹೊಂದಿಕೊಂಡಿರುವುದರಿಂದ ನಾವು ಅವರನ್ನು ಮರ್ದಾನಾ ಎನ್ನುವುದಿಲ್ಲ, ಜೆನಾನಾ ಎನ್ನುತ್ತೇವೆ.’

‘ಆದರೆ ಕಳ್ಳತನ, ಕೊಲೆ ಪ್ರಕರಣಗಳಲ್ಲಿ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟರಿಲ್ಲದೆ ಹೇಗೆ ನಿಭಾಯಿಸುವಿರಿ?’

‘ಮರ್ದಾನಾ ಪದ್ಧತಿ ಇರುವುದರಿಂದ ಅಪರಾಧ ಅಥವಾ ತಪ್ಪಿತಸ್ಥರ ಪ್ರಕರಣಗಳೇ ಇಲ್ಲ. ಆದ್ದರಿಂದ ಅಪರಾಧಿಯನ್ನು ಕಂಡುಹಿಡಿಯಲು ನಮಗೆ ಪೊಲೀಸರೇ ಬೇಡ. ಅಥವಾ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟರೇ ಬೇಡ.’

‘ಅದು ನಿಜವಾಗಿ ತುಂಬ ಒಳ್ಳೆಯದು. ಅಕಸ್ಮಾತ್ ಯಾರಾದರೂ ಅಪ್ರಾಮಾಣಿಕ ವ್ಯಕ್ತಿಯಿದ್ದರೂ ಅವರನ್ನು ಸುಲಭವಾಗಿ ಸರಿ ಮಾಡಬಹುದು. ಒಂದು ಹನಿ ರಕ್ತ ಸುರಿಸದೆ ನಿರ್ಧಾರಕ ಗೆಲುವನ್ನು ನಿಮಗೆ ತಂದುಕೊಡಲು ಸಾಧ್ಯವಾದರೆ, ಕಷ್ಟವಿಲ್ಲದೆ ಅಪರಾಧವನ್ನೂ ಅಪರಾಧಿಗಳನ್ನೂ ತಡೆಯಬಹುದು.’

‘ಈಗ ಸುಲ್ತಾನಾ, ನೀನು ಇಲ್ಲೆ ಕೂತಿರುವೆಯೋ ಅಥವಾ ನನ್ನ ಜೊತೆ ಹಜಾರಕ್ಕೆ ಬರುತ್ತೀಯೋ?’ ಸಾರಾ ಕೇಳಿದಳು.

‘ನಿನ್ನ ಅಡುಗೆಮನೆ ಅಂತಃಪುರದ ಭೋಜನಾಲಯಕ್ಕಿಂತ ಕಡಿಮೆಯಿಲ್ಲ’ ನಗುತ್ತ ಹೇಳಿದೆ. ‘ಆದರೆ ನಾವೀಗ ಈ ಜಾಗ ಬಿಡಲೇಬೇಕು. ಗಂಡಸರು ಅಡಿಗೆಮನೆಯ ಕೆಲಸದಿಂದ ಇಷ್ಟು ಹೊತ್ತು ಅವರನ್ನು ದೂರವಿಟ್ಟಿದ್ದಕ್ಕೆ ನಮ್ಮನ್ನು ಶಪಿಸುತ್ತಿರಬಹುದು.’ ನಾವಿಬ್ಬರೂ ಮನಸಾರೆ ನಕ್ಕೆವು.

‘ನಾನು ಮನೆಗೆ ವಾಪಸು ಹೋದ ನಂತರ ನನ್ನ ಗೆಳತಿಯರಿಗೆ ದೂರದ ಮಹಿಳಾ ರಾಜ್ಯದ ಬಗ್ಗೆ, ಅಲ್ಲಿ ಹೆಂಗಸರೇ ರಾಜ್ಯವಾಳುತ್ತ ಎಲ್ಲವನ್ನೂ ನಿಯಂತ್ರಿಸುತ್ತಿರುವ ಬಗ್ಗೆ, ಮರ್ದಾನದಲ್ಲಿ ಗಂಡಸರನ್ನಿಟ್ಟು ಅಡಿಗೆ, ಮನೆಕೆಲಸ, ಮಕ್ಕಳನ್ನು ನೋಡಿಕೊಳ್ಳುವಂತೆ ಮಾಡಿರುವ ಬಗ್ಗೆ, ಅಡಿಗೆಯನ್ನು ಅದು ಸಂತೋಷಕೊಡುವಷ್ಟು ಸರಳಗೊಳಿಸಿರುವ ಬಗ್ಗೆ ಏನಾದರೂ ಹೇಳಿದರೆ ಎಲ್ಲ ತುಂಬ ಆಶ್ಚರ್ಯಪಡುತ್ತಾರೆ.’

‘ಹೌದು, ನೀನಿಲ್ಲಿ ನೋಡಿದ ಎಲ್ಲದರ ಬಗೆಗೆ ಅವರಿಗೆ ಹೇಳು.’

‘ದಯವಿಟ್ಟು ನನಗೆ ಉಳುಮೆಯನ್ನು ಹೇಗೆ ಮಾಡುತ್ತೀರಿ? ಕೃಷಿ ಮತ್ತಿತರ ಕಠಿಣ ದುಡಿಮೆಯ ಕೆಲಸ ಹೇಗೆ ಮಾಡುತ್ತೀರಿ ಅಂತ ಹೇಳು.’

‘ನಮ್ಮ ಹೊಲಗಳನ್ನು ವಿದ್ಯುತ್ತಿನ ಸಹಾಯದಿಂದ ಉಳುತ್ತೇವೆ. ಉಳಿದ ಕಠಿಣ ಕೆಲಸಗಳಿಗೂ ಅದೇ ಶಕ್ತಿ ಒದಗಿಸುತ್ತದೆ. ಅದನ್ನೇ ವಾಯುಯಾನದ ಓಡಾಟಕ್ಕೂ ಕೂಡಾ ಬಳಸುತ್ತೇವೆ. ನಮಗೆ ಯಾವುದೇ ರೈಲು ರಸ್ತೆಯಿಲ್ಲ, ಅಥವಾ ಟಾರು ಹಾಕಿದ ರಸ್ತೆಗಳಿಲ್ಲ.’

‘ಓ, ಅದಕ್ಕೇ ರಸ್ತೆ, ರೈಲು ಅಪಘಾತ ಸಂಭವಿಸುವುದೇ ಇಲ್ಲ ಇಲ್ಲಿ. ನಿಮಗೆ ಯಾವಾಗಲಾದರೂ ಮಳೆನೀರಿನ ಕೊರತೆ ಬಂದಿದೆಯೆ?’

‘ನೀರಿನ ಬಲೂನನ್ನು ಸ್ಥಾಪಿಸಿದ ಮೇಲೆ ಹಾಗಾಗಿಲ್ಲ. ನೀನು ದೊಡ್ಡ ಬಲೂನುಗಳು ಮತ್ತು ಅವಕ್ಕೆ ಅಂಟಿಸಿದ ಪೈಪುಗಳನ್ನು ನೋಡಿರಬಹುದು. ಅವುಗಳ ಸಹಾಯದಿಂದ ನಾವು ಎಷ್ಟು ಬೇಕೋ ಅಷ್ಟು ಮಳೆನೀರನ್ನು ಪಡೆಯಬಹುದು. ಅದರಿಂದ ನಮಗೆ ಪ್ರವಾಹ ಮತ್ತು ಗುಡುಗು ಸಿಡಿಲಿನ ಭಯವಿಲ್ಲ. ಪ್ರಕೃತಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಫಸಲು ಕೊಡುವಂತೆ ಮಾಡಲು ನಾವೆಲ್ಲ ನಿರತರಾಗಿರುತ್ತೇವೆ. ನಾವು ಸುಮ್ಮನೆ ಕೂರುವುದೇ ಇಲ್ಲವಾದ್ದರಿಂದ ನಮ್ಮ ನಡುವೆ ಜಗಳಗಳೇ ಇಲ್ಲ. ನಮ್ಮ ರಾಣಿಗೆ ಸಸ್ಯಶಾಸ್ತ್ರ ಎಂದರೆ ಬಲುಪ್ರೀತಿ; ಇಡೀ ದೇಶವನ್ನೇ ಒಂದು ಉದ್ಯಾನವನವನ್ನಾಗಿ ಮಾಡುವ ಮಹದಾಸೆ ಅವಳದು.’

‘ಅತ್ಯುತ್ತಮ ಯೋಚನೆ. ನಿಮ್ಮ ಮುಖ್ಯ ಆಹಾರ ಯಾವುದು?’

‘ಹಣ್ಣು’

‘ಬೇಸಿಗೆಯಲ್ಲಿ ನಿಮ್ಮ ದೇಶವನ್ನು ಹೇಗೆ ತಂಪಾಗಿಡುತ್ತೀರಿ? ನಾವು ನಮ್ಮ ದೇಶದಲ್ಲಿ ಮಳೆಯನ್ನು ದೇವಲೋಕದ ವರವೆಂದೇ ಭಾವಿಸುತ್ತೇವೆ.’

‘ತಡೆಯಲಾರದಷ್ಟು ಸೆಖೆಯಾದಾಗ ಕಾರಂಜಿಗಳ ನೀರನ್ನು ಸಿಂಪಡಿಸುತ್ತೇವೆ. ಚಳಿಗಾಲದಲ್ಲಿ ಸೂರ್ಯನ ಶಾಖದಿಂದ ನಮ್ಮ ಕೋಣೆಗಳನ್ನು ಬೆಚ್ಚಗಿಡುತ್ತೇವೆ.’

ಅವಳು ಸ್ನಾನದಮನೆ ತೋರಿಸಿದಳು. ಅದರ ಛಾವಣಿ ತೆಗೆಯಬಲ್ಲಂಥದು. ಅವಳಿಗೆ ಬೇಕಾದಾಗ ಶವರ್ ಸ್ನಾನ ಮಾಡಲು ಡಬ್ಬಿಯ ಮುಚ್ಚಳ ತೆಗೆದಂತೆ ಸ್ನಾನದಮನೆಯ ಛಾವಣಿ ತೆಗೆದು ಶವರಿನ ನಲ್ಲಿ ತಿರುಗಿಸಿದರಾಯಿತು. 

‘ನೀವು ಅದೃಷ್ಟವಂತರು’ ಹೇಳಿದೆ, ‘ನಿಮಗೆ ಬೇಕೆನ್ನುವುದೇ ಏನೂ ಉಳಿದಿಲ್ಲ. ಅಂದಹಾಗೆ ನಿಮ್ಮ ಧರ್ಮ ಯಾವುದು?’

‘ನಮ್ಮ ಧರ್ಮ ಪ್ರೀತಿ ಮತ್ತು ಸತ್ಯದ ಮೇಲೆ ನಿಂತಿರುವಂಥದು. ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸಂಪೂರ್ಣ ಸತ್ಯವಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯ. ಯಾರೇ ಆಗಲಿ, ಅವನು ಅವಳು, ಸುಳ್ಳು ಹೇಳಿದರೆ..’

‘ಮರಣದಂಡನೆ ಶಿಕ್ಷೆ?’

‘ಇಲ್ಲ, ಮರಣದಂಡನೆ ಶಿಕ್ಷೆಯಲ್ಲ. ನಾವು ದೇವರ ಸೃಷ್ಟಿಯನ್ನು ಕೊಲ್ಲುವುದರಲ್ಲಿ ಸಂತೋಷ ಕಾಣುವವರಲ್ಲ. ಸುಳ್ಳು ಹೇಳುವವರಿಗೆ ಮತ್ತಿನ್ಯಾವತ್ತೂ ವಾಪಸು ಬರದಂತೆ ಈ ನೆಲ ಬಿಟ್ಟು ಹೋಗು ಎನ್ನುತ್ತೇವೆ.’

‘ಎಂದರೆ ಅಪರಾಧಿಗೆ ಕ್ಷಮೆಯೇ ಇಲ್ಲವೇ?’

‘ಇದೆ, ಅವರು ಪ್ರಾಮಾಣಿಕವಾಗಿ ಪ್ರಾಯಶ್ಚಿತ್ತ ಮಾಡಿಕೊಂಡರೆ.’

‘ನಿಮ್ಮ ಸಂಬಂಧಿಗಳನ್ನು ಬಿಟ್ಟರೆ ಬೇರೆ ಗಂಡಸರನ್ನು ನೀವು ನೋಡುವುದೇ ಇಲ್ಲವೆ?’

‘ಪವಿತ್ರ ಸಂಬಂಧಗಳನ್ನು ಬಿಟ್ಟು ಬೇರಾರನ್ನೂ ನೋಡುವುದಿಲ್ಲ.’

‘ನಮ್ಮಲ್ಲಿ ಪವಿತ್ರ ಸಂಬಂಧದ ವಿಸ್ತಾರ ಸಣ್ಣದು. ಕಸಿನ್ನುಗಳು ಕೂಡಾ ಪವಿತ್ರವಲ್ಲ.’

‘ಆದರೆ ನಮ್ಮದು ತುಂಬ ವಿಸ್ತೃತ ವರ್ತುಲ. ದೂರದ ಸಂಬಂಧಿಗಳೂ ಸೋದರರಷ್ಟೇ ಪವಿತ್ರರು.’

‘ಅದು ತುಂಬ ಒಳ್ಳೆಯದು. ನಿಮ್ಮ ರಾಜ್ಯದಲ್ಲಿ ಬರೀ ಶುದ್ಧತೆಯೇ ತುಂಬಿಕೊಂಡಿದೆ. ನನಗೆ ನಿಮ್ಮ ರಾಣಿಯನ್ನು ನೋಡಬೇಕೆನಿಸುತ್ತಿದೆ. ಅವಳೇ ತಾನೇ ತನ್ನ ದೂರದೃಷ್ಟಿ ಮತ್ತು ಚಾತುರ್ಯದಿಂದ ಇದನ್ನೆಲ್ಲ ಆಗಮಾಡಿದ್ದು.’

‘ಆಯಿತು’ ಎಂದಳು ಸಾರಾ.

ಒಂದು ಚಚ್ಚೌಕ ಮರದ ತುಂಡಿಗೆ ಸ್ಕ್ರೂವಿನಿಂದ ಎರಡು ಸೀಟು ಕೂರಿಸಿದಳು. ಅದಕ್ಕೆ ಎರಡು ನಯಸಾದ, ಪಾಲಿಶ್ ಆದ ಬಾಲುಗಳ ಕೂಡಿಸಿದಳು. ಅದೇನೆಂದು ಕೇಳಿದಾಗ ಅದು ಹೈಡ್ರೋಜನ್ ಬಾಲ್ ಎಂದೂ, ಗುರುತ್ವಾಕರ್ಷಣೆ ಮೀರಿ ಹೋಗಲು ಅದು ಸಹಾಯ ಮಾಡುವುದೆಂದೂ ಅವಳು ಹೇಳಿದಳು. ಬೇರೆಬೇರೆ ಭಾರ ಹೊತ್ತೊಯ್ಯಲು ಬೇರೆಬೇರೆ ಗಾತ್ರದ ಬಾಲ್‌ಗಳನ್ನು ಬಳಸುವುದಾಗಿ ಹೇಳಿದಳು. ನಂತರ ಆ ಏರ್ ಕಾರಿಗೆ ಎರಡು ರೆಕ್ಕೆಗಳ ತರಹದ ರಚನೆಗಳ ಅಂಟಿಸಿದಳು. ಅವು ವಿದ್ಯುತ್ತಿನ ಸಹಾಯದಿಂದ ನಡೆಯುತ್ತವೆ ಎನ್ನುತ್ತ ನಾವು ಸರಿಯಾಗಿ ಕೂತ ನಂತರ ಒಂದು ಬಟನನ್ನು ಒತ್ತಿದಳು. ಆ ರೆಕ್ಕೆಗಳು ತಿರುಗತೊಡಗಿದವು. ನಾವು ವೇಗವೇಗವಾಗಿ ಚಲಿಸತೊಡಗಿದೆವು. ನಾವು ಆರೇಳು ಅಡಿ ಮೇಲೇರಿದೊಡನೆ ಸೀದಾ ಹೋಗತೊಡಗಿದೆವು. ನಮ್ಮ ಚಲನೆ ನನ್ನ ಅನುಭವಕ್ಕೆ ಬರುವ ಹೊತ್ತಿಗೆ ರಾಣಿಯ ಉದ್ಯಾನ ಕಣ್ಣಿಗೆ ಬಿತ್ತು. 

ನನ್ನ ಗೆಳತಿ ಮೊದಲು ಮಾಡಿದ್ದನ್ನೆಲ್ಲ ಮತ್ತೆ ತಿರುವುಮುರುವಾಗಿ ಮಾಡಿ ವಾಹನ ಕೆಳಗಿಳಿಸಿದಳು. ನೆಲಕ್ಕೆ ತಾಗಿದ ಕೂಡಲೇ ಅದು ನಿಂತಿತು. 

ನಾನು ಹಾರಿ ಬರುವಾಗ ರಾಣಿ ತನ್ನ ನಾಲ್ಕು ವರ್ಷದ ಮಗಳೊಡನೆ, ಅವಳನ್ನು ನೋಡಿಕೊಳ್ಳುವ ಮಹಿಳೆಯೊಡನೆ ನಡೆದು ಬರುತ್ತ ಇದ್ದಳು. 

‘ಹಲ್ಲೊ, ನೀನಿಲ್ಲಿ?’ ರಾಣಿ ಸಾರಾಳನ್ನು ನೋಡಿ ಕೂಗಿದಳು. ನನ್ನನ್ನು ರಾಣಿಗೆ ಪರಿಚಯಿಸಲಾಯಿತು, ಅವಳು ನನ್ನನ್ನು ಆದರದಿಂದ ಬರಮಾಡಿಕೊಂಡಳು.

ನನಗೆ ಅವಳೊಡನೆ ಗೆಳೆತನ ಮಾಡಲು ತುಂಬ ಖುಷಿಯಾಯಿತು. ಮಾತಾಡುತ್ತ ಆಡುತ್ತ ರಾಣಿ ತನ್ನ ರಾಜ್ಯದವರು ಬೇರೆಯವರೊಡನೆ ವ್ಯಾಪಾರ ನಡೆಸಲು ತನ್ನದೇನೂ ಅಭ್ಯಂತರವಿಲ್ಲ ಎಂದಳು. ‘ಆದರೆ, ಎಲ್ಲಿ ಹೆಂಗಸರನ್ನು ಜೆನಾನಾದಲ್ಲಿಟ್ಟಿದ್ದಾರೋ ಆ ದೇಶಗಳ ಜೊತೆಗೆ ಯಾವ ವ್ಯವಹಾರವೂ ಸಾಧ್ಯವಾಗುವುದಿಲ್ಲ. ನಾವು ಬೇರೆಯವರ ನೆಲ ಆಕ್ರಮಿಸಲಾರೆವು; ಕೊಹಿನೂರ್ ವಜ್ರಕ್ಕಿಂತ ಸಾವಿರ ಪಟ್ಟು ಹೊಳೆಯುವ ವಜ್ರವಿದ್ದರೂ ಅದಕ್ಕಾಗಿ ಹೋರಾಡಲಾರೆವು. ಅಥವಾ ಮಯೂರ ಸಿಂಹಾಸನದಿಂದ ಯಾವ ಆಡಳಿತಗಾರನನ್ನೂ ಕೆಳದೂಡಲಾರೆವು. ನಾವು ಜ್ಞಾನದ ಆಳ ಸಮುದ್ರಕ್ಕೆ ಜಿಗಿಯುತ್ತೇವೆ. ಪ್ರಕೃತಿಯು ನಮಗಾಗೇ ಅಲ್ಲಿಟ್ಟಿರುವ ರತ್ನಗಳಿಗಾಗಿ ಹುಡುಕುತ್ತೇವೆ. ನಿಸರ್ಗದತ್ತ ಕಾಣಿಕೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂತಸದಿಂದ ಅನುಭವಿಸುತ್ತೇವೆ’ ಎಂದಳು. 

ರಾಣಿಯಿಂದ ಬೀಳ್ಕೊಂಡ ಮೇಲೆ ನಾವು ಪ್ರಸಿದ್ಧ ಯೂನಿವರ್ಸಿಟಿಗಳನ್ನು ನೋಡಹೋದೆವು. ಅವರ ಕೆಲವು ಉತ್ಪಾದನಾ ಘಟಕ, ಪ್ರಯೋಗಾಲಯ, ವೀಕ್ಷಣಾಲಯಗಳನ್ನು ನೋಡಿದೆ. ಅವನ್ನೆಲ್ಲ ನೋಡಿದ ಮೇಲೆ ಮತ್ತೆ ಏರ್ ಕಾರ್ ಹತ್ತಿ ಕೂತೆವು. ಆದರೆ ಅದು ಹೊರಟಕೂಡಲೇ ಅದು ಹೇಗೋ ನಾನು ಜಾರಿ ಬಿದ್ದೆ. ಜಾರುವಿಕೆ ನನ್ನನ್ನು ಕನಸಿನಿಂದ ಎಳೆತಂದಿತು. ಕಣ್ತೆರೆದಾಗ ನನ್ನ ಮಲಗುವ ಕೋಣೆಯ ಈಸಿಚೇರಿನಲ್ಲಿ ಒರಗಿ ತೂಕಡಿಸುತ್ತ ಇದ್ದೆ!

(ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಈ ಬರಹ ಮೊದಲು ೧೯೦೫ರಲ್ಲಿ ಮದ್ರಾಸಿನ ‘ಇಂಡಿಯನ್ ಲೇಡೀಸ್ ಮ್ಯಾಗಜೀನ್’ನಲ್ಲಿ ಪ್ರಕಟವಾಯಿತು.)

ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ.
***

(ಬೇಗಂ ರುಖಿಯಾ ಶೆಖಾವತ್ ಹುಸೇನ್ (೧೮೮೦-೧೯೩೨) ೨೦ನೇ ಶತಮಾನದ ಅವಿಭಜಿತ ಬಂಗಾಳದ ಪ್ರಮುಖ ಲೇಖಕಿ. ರಂಗಾಪುರ ಜಿಲ್ಲೆಯ ಪೈರಾಬೊಂದ್‌ನಲ್ಲಿ ಹುಟ್ಟಿದ ರುಖಿಯಾಗೆ ೧೬ ವರ್ಷವಾದಾಗ ಮದುವೆಯಾಯಿತು. ಆಕೆಯನ್ನು ಮದುವೆಯಾದವರು ಖಾನ್ ಬಹಾದುರ್ ಶೆಖಾವತ್ ಹುಸೇನ್ ಎಂಬ ೩೬ ವರ್ಷದ ವಿಧುರರು. ಇಂದಿನ ಬಿಹಾರದ ಭಾಗಲ್ಪುರದ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಅವರು ಉದಾರ ಮನಸಿನವರು. ತಮ್ಮ ಪತ್ನಿ ಬುರ್ಖಾ ತೊಡುವುದು ಬೇಡವೆಂದು ಹೇಳಿ ಇಂಗ್ಲಿಷ್ ಮತ್ತು ಬಂಗಾಳಿಯನ್ನು ಕಲಿಸುವ ವ್ಯವಸ್ಥೆ ಮಾಡಿದ ಶೆಖಾವತ್ ರುಖಿಯಾಗೆ ಬರೆಯಲು, ಅದರಲ್ಲೂ ಬಂಗಾಳಿಯಲ್ಲೇ ಬರೆಯಲು ಪ್ರೋತ್ಸಾಹಿಸಿದರು. ಹೀಗೆ ಗಂಡನ ಒತ್ತಾಸೆಯಿಂದ ೧೯೦೨ರಲ್ಲಿ ರುಖಿಯಾ ಬರೆದ ಮೊದಲ ಬಂಗಾಳಿ ಬರಹ ಪಿಪಾಸಾ ಪ್ರಕಟವಾಯಿತು. ನಂತರ ಅವರ ಪೆನ್ನು ವಿಶ್ರಾಂತಿ ಪಡೆಯಲೇ ಇಲ್ಲ. ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದರು. ೧೯೦೫ರಲ್ಲಿ ಮೋತಿಚೂರ್, ೧೯೦೮ರಲ್ಲಿ ಸುಲ್ತಾನಾಸ್ ಡ್ರೀಂ ಎಂಬ ಇಂಗ್ಲಿಷ್ ಕೃತಿ, ಪದ್ಮರಾಗ ಎಂಬ ಕಾದಂಬರಿ ಪ್ರಕಟವಾದವು. 

೧೯೦೯ರಲ್ಲಿ ಪತಿ ತೀರಿಕೊಂಡಾಗ ಅವರಿಚ್ಛೆಯಂತೆ ಭಾಗಲ್ಪುರದಲ್ಲಿ ಮುಸ್ಲಿಂ ಹುಡುಗಿಯರ ಪ್ರಾಥಮಿಕ ಶಾಲೆ ತೆರೆದರು. ತಮ್ಮ ಬರವಣಿಗೆಗಳಲ್ಲಿ ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಅವರು ಪರ್ದಾ ಪದ್ಧತಿಯನ್ನು ಟೀಕಿಸಿದರು. ತಮಾಷೆ, ವ್ಯಂಗ್ಯ, ವಿಡಂಬನೆಗಳ ಮೂಲಕ ಬಂಗಾಳಿ ಮುಸ್ಲಿಂ ಹೆಣ್ಮಕ್ಕಳು ಅನುಭವಿಸುವ ತಾರತಮ್ಯ ವಿವರಿಸಿದರು. ಪತ್ರಿಕೆಗಳಲ್ಲಿ ಕತೆ, ಕವಿತೆ, ಕಾದಂಬರಿ, ಲೇಖನ ಬರೆದರು. ಮುಸ್ಲಿಂ ಮಹಿಳೆಯರ ಸಂಘಟನೆ ಶುರುಮಾಡಿದರು. ತೀವ್ರ ನಿರ್ಬಂಧ, ಪ್ರತಿಕೂಲ ಪರಿಸ್ಥಿತಿಗಳ ನಡುವೆ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು, ದಿಟ್ಟವಾಗಿ ಬರೆದರು, ಮಹಿಳೆಯರ ಸಂಘಟಿಸಿದರು. ಇವತ್ತಿನ ಇಸ್ಲಾಂ ವಿರೂಪಗೊಂಡಿರುವುದಷ್ಟೇ ಅಲ್ಲ, ಭ್ರಷ್ಟಗೊಂಡಿದೆ ಎಂದು ಅವರಿಗೆ ಅನಿಸಿತು. ‘ಹೆಣ್ಣುಮಕ್ಕಳು ಓದಿದರೆ ಕೆಟ್ಟುಹೋಗುತ್ತಾರೆನ್ನುವುದು ಸುಳ್ಳು. ತಮ್ಮನ್ನು ಮುಸ್ಲಿಂ ಎಂದು ಕರೆದುಕೊಳ್ಳುವ ಗಂಡಸರು ಮಹಿಳೆಯರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದ ಇಸ್ಲಾಮಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದ ಗಂಡಸು ಹಾಳಾಗಿಹೋಗುವುದಿಲ್ಲ ಎಂದಾದರೆ ಹೆಣ್ಣೇಕೆ ಹಾಳಾಗುತ್ತಾಳೆ?’ ಎಂದು ಪ್ರಶ್ನಿಸಿದರು. ಗಾಡ್ ಗಿವ್ಸ್, ಮೆನ್ ರಾಬ್ಸ್ ಎಂಬ ಪುಸ್ತಕ (೧೯೨೭) ಬರೆದರು.

ಶಾಲೆ ನಡೆಸುತ್ತ, ಬರವಣಿಗೆ ಮಾಡುತ್ತಲೇ ಇಸ್ಲಾಮಿಕ್ ಮಹಿಳಾ ಸಂಘಟನೆಯಾದ ‘ಅಂಜುಮನ್-ಇ-ಖವಾತೀನ್-ಇ-ಇಸ್ಲಾಂ’ ಶುರುಮಾಡಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪರಿಸ್ಥಿತಿಯ ಕುರಿತು ಚರ್ಚೆ, ಸಮ್ಮೇಳನ, ಸಂವಾದ ಏರ್ಪಡಿಸಿದರು. ಬ್ರಿಟಿಷ್ ಭಾರತದಲ್ಲಿ ಅತಿಸಾಂಪ್ರದಾಯಿಕತೆ ಮತ್ತು ಅತಿ ಧಾರ್ಮಿಕ ನಿಷ್ಠೆಯೇ ಮುಸ್ಲಿಂ ಸಮಾಜವು ಉಳಿದೆಲ್ಲ ಸಮಾಜಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ ಅವರು ತಮ್ಮ ಹುಟ್ಟುಹಬ್ಬದ ದಿನವೇ ೫೨ನೇ ವಯಸ್ಸಿಗೆ ತೀರಿಕೊಂಡರು. ಈಗಲೂ ಬಂಗ್ಲಾದಲ್ಲಿ ಡಿಸೆಂಬರ್ ೫ ‘ರುಖಿಯಾ ಡೇ’ ಎಂದು ಆಚರಿಸಲ್ಪಡುತ್ತದೆ.) 

2 comments:

  1. abdhuta kalpaneya aapa mattu gaadhavennisuva vishya vastuvina kathe tumba istavayitu...huccharannu beediyalli tirugalu biduvudu jaanathana alla allave sakaalika mattu saavtrikavaada prashne

    ReplyDelete
  2. abdhuta kalpaneya aapa mattu gaadhavennisuva vishya vastuvina kathe tumba istavayitu...huccharannu beediyalli tirugalu biduvudu jaanathana alla allave sakaalika mattu saavtrikavaada prashne

    ReplyDelete