Friday 17 June 2016

ದಕ್ಷಿಣ ಅಮೆರಿಕಾ: ಅಳಿದ ಕುಲಗಳ ನಾಡು






(ಇತ್ತೀಚೆಗೆ ನಾವು ಅಲೆದಾಡಿ ಬಂದ ದಕ್ಷಿಣ ಅಮೆರಿಕ ಕುರಿತು ಬರೆವ ಒತ್ತಡದ ಫಲ ಈ ಬರಹ. ಅಲ್ಲಿ ನನ್ನ ಸೆಳೆದ, ಕಲಕಿದ ಕೆಲ ವಿಷಯಗಳಲ್ಲಿ ಆ ಖಂಡದ ಅಳಿದ, ಅಳಿಯುತ್ತಿರುವ, ಅಪಾಯದಂಚಿನಲ್ಲಿರುವ ಕುಲಗಳ ಕತೆಯೂ ಸೇರಿದೆ. ಅಂಥ ಮೂರು ಕುಲಗಳು ಕ್ರಮವಾಗಿ ಮೊಚೆ, ಗ್ವರಾನಿ ಹಾಗೂ ಮಾಪುಚೆ. ಗ್ವರಾನಿಗಳ ಕುರಿತ ಬರಹ ಇದು.)


ದಕ್ಷಿಣ ಅಮೆರಿಕವನ್ನು ಹಲವು ದೃಷ್ಟಿಗಳಿಂದ ಉಳಿದ ಜಗತ್ತು ಇವತ್ತು ನೋಡುತ್ತಿದೆ. ಸಮೃದ್ಧ ನೈಸರ್ಗಿಕ ಸಂಪತ್ತಿರುವ ನೆಲವಾಗಿ; ಜಾಗತೀಕರಣದ ದುಷ್ಪರಿಣಾಮಗಳನ್ನು ಮೊದಲು ಅನುಭವಿಸಿ, ಹೋರಾಟ ಕಟ್ಟಿದ ನಾಡಾಗಿ; ಕಮ್ಯುನಿಸಂ ಸರ್ಕಾರಗಳನ್ನು ಹೊಂದಿರುವ ದೇಶಗಳ ಖಂಡವಾಗಿ; ಉತ್ತರ ಅಮೆರಿಕದ ಪಕ್ಕದಲ್ಲೆ ಇದ್ದರೂ ಅದರ ಏಕಸ್ವಾಮ್ಯಕ್ಕೆ ಸಡ್ಡು ಹೊಡೆದ ಪುಟ್ಟ ದೇಶಗಳ ಆತ್ಮಾಭಿಮಾನದ ನೆಲವಾಗಿ - ಹೀಗೇ ಹಲವು ನೆಲೆಗಳಲ್ಲಿ ಅದರ ಸ್ವರೂಪವನ್ನು ಗ್ರಹಿಸಬಹುದು. ಇವು ವರ್ತಮಾನದ ವ್ಯಾಖ್ಯಾನಗಳಾದರೆ ಐತಿಹಾಸಿಕವಾಗಿ ದಕ್ಷಿಣ ಅಮೆರಿಕ ಹಲವು ವಿಶಿಷ್ಟ ಕುಲ-ನೆಲೆ-ದೇಶ-ನಾಗರಿಕತೆಗಳು ರೂಪುಗೊಂಡ ಸಂಸ್ಕೃತಿ ಪಾಕಶಾಲೆಯೂ ಹೌದು. ಇವೆಲ್ಲದರ ಜೊತೆಗೇ ಅಥವಾ ಇವೆಲ್ಲಕ್ಕಿಂತ ಮುಖ್ಯವಾಗಿ ಅದು ಅಳಿದುಹೋದ, ಅಳಿಯುತ್ತಿರುವ ಸಾವಿರಾರು ಭಾಷೆಗಳ ನಾಡೂ ಆಗಿದೆ.

ಅಪಾಯದಂಚಿನಲ್ಲಿರುವ ಅಂಥ ಒಂದು ಭಾಷೆಯ, ಅದನಾಡುವ ಜನರ ಮುಖಾಮುಖಿ ಅಚ್ಚರಿದಾಯಕವಾಗಿ ಆಯಿತು..

ದ. ಅಮೆರಿಕದ ಅರ್ಜೆಂಟೀನಾ, ಬ್ರೆಜಿಲ್ ಮತ್ತು ಪರಗ್ವೆ ದೇಶಗಳ ಗಡಿಯಲ್ಲಿ ರುದ್ರರಮಣೀಯ ಇಗ್ವಾಸು ಜಲಪಾತವಿದೆ. ಕಾಸಿಗೆ ಕಾಸು ಸೇರಿಸಿ, ಹತ್ತಾರು ಸಾವಿರ ಮೈಲಿ ಕ್ರಮಿಸಿ, ದುಬಾರಿ ಪ್ರವೇಶ ಶುಲ್ಕ ತೆತ್ತು ನೋಡಿಬಂದರೂ ಪರವಾಗಿಲ್ಲ, ಕಣ್ಣಿದ್ದು ಸಾರ್ಥಕವಾಯಿತು ಎನಿಸುವಂತೆ ಮಾಡುವ ಪ್ರಕೃತಿ ವಿಸ್ಮಯ ಇಗ್ವಾಸು. ಜಲಪಾತದ ನೋಟ, ಶಬ್ದ, ರಮಣೀಯತೆ ನಮ್ಮ ಒಳಹೊರಗನೆಲ್ಲ ತುಂಬಿಕೊಂಡು ಅದನ್ನರಗಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕೋ ಅನಿಸುತ್ತಿರುವಾಗ, ಇಗ್ವಾಸು ನ್ಯಾಷನಲ್ ಪಾರ್ಕಿನ ಕಾಡಿನಲ್ಲಿ ಪಂಚತಾರಾ ಹೋಟೆಲ್ ಶೆರಟನ್ ಕಾಣಿಸಿತು! ಅದರ ಆವಾರ ದಾಟಿದರೆ ಅಲ್ಲಲ್ಲಿ ತಿನ್ನಲು, ಕುಡಿಯಲು, ವಿದೇಶೀ ವಿನಿಮಯ ಮಾಡಿಕೊಳಲು, ವ್ಯಾಪಾರ ಮಾಡಲು ಅವಕಾಶವಿರುವ ಸ್ಥಳಗಳು ಕಂಡವು. ನಮ್ಮೊಡನಿದ್ದ ಇನ್ನೊಂದು ಗುಂಪು ಬರುವವರೆಗೆ ಎರಡು ತಾಸು ಕಾಯಲೇಬೇಕಿತ್ತು. ಕಣ್ಣು ತುಂಬಿಕೊಂಡದ್ದನ್ನು ಮೆಲುಕು ಹಾಕುತ್ತ, ಆಕಾಶ ನೋಡುತ್ತ, ಒಂದೊಳ್ಳೆ ಊಟ ಸಿಕ್ಕಿದ್ದರೆ ತಿರುಗಿಬಂದ ಸುಸ್ತೆಲ್ಲ ಮಾಯವಾಗುತ್ತಿತ್ತೋ ಏನೋ ಎಂದು ಹಂಬಲಿಸುವಾಗ ದೂರದಲ್ಲೆಲ್ಲೋ ಸುಶ್ರಾವ್ಯ ಸಮೂಹ ಗಾಯನ ಕೇಳಿಬಂತು.

ಕಿವಿಗೊಟ್ಟು ಕೇಳಲು ದನಿ ಬಂದ ದಿಕ್ಕು ತಿಳಿಯಿತು, ಲಯ ಮತ್ತು ನಾದ ಥಟ್ಟನೆ ಮನ ಸೆಳೆದವು..



ಎತ್ತರದ ಮರಗಳ ನಡುವೆ ಒಂದು ಬದಿಯಲ್ಲಿ ಶೃತಿಬದ್ಧ, ಲಯಬದ್ಧ ಮಧುರ ಹಾಡು ಹಾಡುತ್ತ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ನಿಂತಲ್ಲೆ ನರ್ತಿಸುತ್ತಿದ್ದ ತಂಡ ಕಾಣಿಸಿತು. ತಲೆಗೆ ಹಕ್ಕಿಗರಿ ಸಿಗಿಸಿಕೊಂಡ ಅಪ್ಪ (?), ಅವನೊಡನೆ ಆರು ಮಕ್ಕಳು - ನಾಲ್ವರು ಪುಟ್ಟವರು, ಇಬ್ಬರು ಹದಿವಯದ ಹುಡುಗರು ಹಾಡುತ್ತಿದ್ದರು. ಒಬ್ಬೊಬ್ಬರ ಕೈಲಿ ಒಂದೊಂದು ವಾದ್ಯ. ಅಪ್ಪ ನಾಲ್ಕಾರು ಬಿದಿರ ಕೊಳವೆಗಳ ತರಹದ್ದನ್ನು ಜೋಡಿಸಿ ತುಟಿಗಿಟ್ಟು ಸ್ವರ ಹೊರಡಿಸುತ್ತ, ನಡುನಡುವೆ ಹಾಡುತ್ತ ಇದ್ದರೆ; ಹುಡುಗನೊಬ್ಬ ಡೋಲು ಬಾರಿಸುತ್ತಿದ್ದ. ಮತ್ತೊಬ್ಬ ಕಂಜರ ತಿರುಗಿಸುತ್ತಿದ್ದ. ಎಳಸು ಚೆಲುವೆಯರು ಚಪ್ಪಾಳೆ ತಟ್ಟುತ್ತ ತಾರಕ ಶೃತಿಯಲ್ಲಿ ಮಧುರ ಸ್ವರ ಹೊರಡಿಸುತ್ತಿದ್ದರು. ಹಾಡಿನ ಭಾಷೆ ಅರ್ಥವಾಗದಿದ್ದರೂ ಹಾದು ಹೋಗುವವರನ್ನು ಚಣಕಾಲ ನಿಲಿಸುವಷ್ಟು ಇಂಪಾದ ಹಾಡು..

ಅವರಿಂದ ಅಷ್ಟು ದೂರ, ಮರದ ಕೆಳಗಿನ ಕಟ್ಟೆ ಮೇಲೆ ಅಡ್ಡಾದೆವು..

ಒಂದು ಗುಂಪು ದೂರದಲ್ಲಿ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಮಕ್ಕಳು ಹೆಜ್ಜೆ ಹಾಕುತ್ತ ಹಾಡು ಶುರು ಮಾಡುತ್ತಿದ್ದವು. ಅವರೆದುರಿಗಿನ ವಿಶಿಷ್ಟ ಆಕಾರದ ಬಿದಿರ ಬುಟ್ಟಿಯಲ್ಲಿ ಯೂರೋ, ಡಾಲರ್, ಪೆಸೊ, ರಿಯಲ್‌ಗಳು ಬೀಳುತ್ತಿದ್ದವು. ಜನರ ಗುಂಪು ಮರೆಯಾದದ್ದೇ ಎಳೆಯರು ಹಾಡು ನಿಲಿಸಿ ನಗುತ್ತ, ಸಿಟ್ಟುಗೊಳ್ಳುತ್ತ, ತಿವಿಯುತ್ತ, ಓಡಿ ತಿನಿಸು ಕೊಂಡುತಂದು ತಿನ್ನುತ್ತ ಗಲಾಟೆ ಹಾಕುತ್ತಿದ್ದವು. ಇನ್ನೊಂದು ಗುಂಪು ಕಂಡಾಗಲೇ ಮತ್ತೆ ಹಾಡು ಶುರುವಾಗುವುದು. ವಾದ್ಯ ನುಡಿಸುತ್ತ, ಎದುರಿದ್ದ ಬಿದಿರ ಬುಟ್ಟಿಯನ್ನು ಅರೆಗಣ್ಣಲ್ಲಿ ವಾರೆಯಾಗಿ ಗಮನಿಸುತ್ತ ನಿಂತಿದ್ದ ಅಪ್ಪ ಯಾವುದೋ ಸಮಾಧಿಯಲ್ಲಿದ್ದಂತಿದ್ದ.


ಅಲ್ಲೇ ಆಚೆ ಆದಿವಾಸಿ ಹೆಣ್ಮಕ್ಕಳು ಮತ್ತು ಗಂಡಸರು ಬಿಲ್ಲುಬಾಣ, ತೆರತೆರನ ವಾದ್ಯಗಳು, ಮರದ ಸಾಮಾನು, ಬುಟ್ಟಿ, ಚಾಪೆ, ಚೀಲ ಹೆಣೆಯುತ್ತ ಮಾರುತ್ತ ಕೂತಿದ್ದರು. ಅದು ಅವರ ವರ್ಕ್‌ಶಾಪ್ ಹಾಗೂ ಮಾರಾಟ ಮಳಿಗೆಯಂತೆ. ತರುಣಿಯೊಬ್ಬಳು ಫೆವಿಕ್ವಿಕ್ ಮತ್ತು ಬಣ್ಣ ಇಟ್ಟುಕೊಂಡು ಮರದ ಹಕ್ಕಿ ಮಾಡುತ್ತ ಕೂತಿದ್ದಳು.



ನೋಡನೋಡುತ್ತಿದ್ದಂತೆ ಅಗಲ ಮುಖದ ಅಪ್ಪ, ಮರಕ್ಕೆ ನೇತುಬಿಟ್ಟ ಪ್ಲಾಸ್ಟಿಕ್ ಚೀಲದಲ್ಲಿ ಏನನ್ನೋ ತುಂಬಿ ಬಂದ. ಬನ್ನುಗಳ ತರಹ ಉರೂಟು ಇರುವ ತಿನಿಸು ಗೋಣಿಚೀಲದಷ್ಟು ದೊಡ್ಡ ಚೀಲದಲ್ಲಿ ಅರ್ಧದಷ್ಟಿದೆ. ಎರಡು ಮೂರು ಸಲ ಎಲ್ಲಿಂದಲೋ ತಂದು ಅದರಲ್ಲಿ ಹಾಕಿಬಂದದ್ದು ನೋಡಿದೆವು. ಏನದು? ಎಲ್ಲಿಂದ ತಂದ? ತಿಂದು ಬಿಟ್ಟಿದ್ದು ಹೆಕ್ಕಿದನೋ? ಬೇಡಿ ಪಡೆದನೋ? ಗಳಿಕೆಯ ದುಡಿಮೆಯಿಂದ ಕೊಂಡು ತಂದನೋ? ಅಷ್ಟೊಂದು ಏಕೆ? ಏನೇನೋ ಊಹೆಗಳು.

ಸೂಕ್ಷ್ಮವಾಗಿರು ಎಂದು ಮಗು ಎಚ್ಚರಿಸಿತು..

ನನಗರಿವಿಲ್ಲದೆ ಅವರೆದುರು ನಿಂತಿದ್ದೆ. ಮಾಸಿದ ಬಿಳಿಯ ಮುಖ. ಅಷ್ಟೇನೂ ಒಪ್ಪವಾಗಿರದ ವೇಷ. ಆ ಮುಖಗಳಲ್ಲಿ ಬೇಸರ, ಬಳಲಿಕೆಯಿತ್ತೇ ವಿನಹ ನಗು ಇರಲಿಲ್ಲ. ಪ್ರತಿನಿತ್ಯ ಬರುವ ಪ್ರವಾಸಿಗರಿಗೆ, ಅಪರಿಚಿತರ ಎದುರು ಲವಲವಿಕೆಯಿಂದ ಹಾಡಬೇಕಾದ ಅನಿವಾರ್ಯತೆಗೆ ಅವರೆಷ್ಟು ಒಗ್ಗಿಕೊಂಡಿದ್ದಾರೆಂದರೆ ಆಪ್ತತೆ, ಸಹಜ ನಗುವಿನ ಒಂದೆಳೆಯೂ ಕಾಣದ ಯಾವುದೋ ಬಿಗು. ಅವರಲ್ಲೆಲ್ಲ ಸಣ್ಣ ಹುಡುಗಿ ತದೇಕವಾಗಿ ಅಕ್ಕನ ಸಂದಿಯಿಂದ ಮಗಳು ತೊಟ್ಟ ಟೋಪಿಯನ್ನೇ ನೋಡುತ್ತಿತ್ತು. ಯಾಕೋ ಆ ಗರಿಗರಿ ಪ್ಲಾಸ್ಟಿಕ್ ನೋಟುಗಳ ನಡುವೆ ಇರಲು ನಮ್ಮ ಕಾಗದದ ಗಾಂಧಿ ತಾತನಿಗೆ ಸಾಧ್ಯವಿಲ್ಲ ಎನಿಸಿತು. ಹುಡುಗರ ಬಳಿ ನಿಮ್ಮ ಶಾಲೆ ಎಲ್ಲಿದೆ ಎಂದು ಕನ್ನಡದಲ್ಲಿ ಕೇಳಿದೆವು. ಹೌದು, ಕನ್ನಡದಲ್ಲೇ ಅಲ್ಲಿ ಮಾತಾಡುತ್ತಿದ್ದೆವು. ಯಾಕೆಂದರೆ ಅಲ್ಲಿನವರಿಗೆ ಬರುವುದು ನಮಗೆ ಬರದ ಪೋರ್ಚುಗೀಸ್, ಸ್ಪ್ಯಾನಿಶ್ ಮಾತ್ರವಾದ್ದರಿಂದ ಅಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲ ಭಾಷೆಗಳೂ ಒಂದೇ. ಅವು ಕೆಂಪೇರಿ ತಂತಮ್ಮಲ್ಲೆ ಕಚಪಚ ಮಾತಾಡಿಕೊಂಡು ಏನೋ ಉತ್ತರ ಹೇಳಿದವು. ಅದು ಯಾವ ಭಾಷೆಯೋ ತಿಳಿಯಲಿಲ್ಲ. ಉಳಿದವರಾಡುವ ನುಡಿಗಿಂತ ಭಿನ್ನ ಎಂದಷ್ಟೆ ಗೊತ್ತಾಯಿತು.

ಅವರ ತಲೆ ಮೇಲೆ ಒಂದು ಬೋರ್ಡು ನೇತಾಡುತ್ತಿತ್ತು: ‘ಇದು ಗ್ವರಾನಿ ಕಾರ್ನರ್. ಇಲ್ಲಿ ಇನ್ನು ಮುಂದೆ ಪ್ರತಿದಿನ ಗ್ವರಾನಿ ಬುಡಕಟ್ಟಿನ ಮಕ್ಕಳು ಹಾಡಲಿದ್ದಾರೆ. ಅವರ ಇರುವಿಕೆ ಹಾಗೂ ಗಾಯನ ಇಗ್ವಾಸು ನ್ಯಾಷನಲ್ ಪಾರ್ಕಿಗೆ ರಂಗನ್ನು ತಂದುಕೊಡಲಿದೆ ಎಂಬ ಭರವಸೆಯಿದೆ’ ಎಂದು ಬರೆಯಲಾಗಿತ್ತು.

ಓ, ಗ್ವರಾನಿಗಳೇ ಇವರು?! ಒಂದು ಕಾಲದಲ್ಲಿ ಈ ನೆಲದ ಬಹುಸಂಖ್ಯಾತ, ಸಮೃದ್ಧ ಕುಲವಾಗಿದ್ದವರಿಗೆ ಇವತ್ತು ಬುಟ್ಟಿಯನಿಟ್ಟು ಭಕ್ಷೀಸು ಕೇಳುವ ಪರಿಸ್ಥಿತಿ ಬಂದಿತೆ? ಅವರ ಹಿಂದೆ ಅನತಿ ದೂರದಲ್ಲಿ ಕಾಣುತ್ತಿದ್ದ ಶೆರಟನ್ ಹೋಟೆಲಿನ ಬೃಹತ್ ಇಮಾರತು ಬೀದಿಗೆ ಬಂದು ಬಿದ್ದ ಮೂಲನಿವಾಸಿಗಳ ಅಣಕಿಸುತ್ತಿಲ್ಲವಷ್ಟೆ?


ಅಭಿವೃದ್ಧಿಗೆ ಬೆಲೆ ತೆತ್ತ ಕುಲ: ಗ್ವರಾನಿ 


ದೂರದ ನಾಡಿಗೆ ಹೋಗಿ, ರಟ್ಟೆ-ಶಸ್ತ್ರ ಬಲದಿಂದ ಅಲ್ಲಿದ್ದವರನ್ನು ಹೆದರಿಸಿ, ಅವರ ಜಾಗ ಒತ್ತರಿಸಿ, ತನ್ನದೆಂದು ಒಕ್ಕಲೆಬ್ಬಿಸಿ, ಆಕ್ರಮಿಸಿದವರು ಉತ್ತರೋತ್ತರ ಅಭಿವೃದ್ಧಿ ಹೊಂದಬಹುದು. ಅಷ್ಟೇ ಅಲ್ಲ, ‘ಆ ಕಾಡು ಮನುಷ್ಯರು ಹೋದಮೇಲೆ ಎಂಥ ರಸ್ತೆ, ಮಹಲು, ಅಣೆಕಟ್ಟು, ಕಾರ್ಖಾನೆಗಳ ಕಟ್ಟಿ ಅಭಿವೃದ್ಧಿ ಮಾಡಿದ್ದೇವೆ ನೋಡಿ’ ಎಂದು ಬೀಗಲೂಬಹುದು. ಆದರೆ ಈ ಅಭಿವೃದ್ಧಿಗೆ ಬೆಲೆ ತೆತ್ತವರು ಯಾರು? ಎಷ್ಟು? ಜಗತ್ತಿನೆಲ್ಲೆಡೆಯ ಆದಿವಾಸಿ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳಲ್ಲಿ ಈ ಪ್ರಶ್ನೆಯ ಮೂಲವಿದೆ. ಸಮೃದ್ಧ ಗಣಿ, ತೈಲ, ಕಾಡುಗಳಿದ್ದ ಪ್ರದೇಶದಲ್ಲಿ ವಾಸಿಸುತ್ತಿದ್ದ ದ. ಅಮೆರಿಕದ ಗ್ವರಾನಿ ಬುಡಕಟ್ಟು ಸಮುದಾಯದ ಐದು ಶತಮಾನಗಳ ಏಳುಬೀಳಿನ ಕತೆ ಈ ಪ್ರಶ್ನೆಗೆ ಉತ್ತರವಾಗುತ್ತದೆ. ಅವರ ಇಂದಿನ ದುಃಸ್ಥಿತಿ ಆಧುನಿಕ ಸಮಾಜದ ಆಕ್ರಮಣಶೀಲತೆ ಪ್ರಾಚೀನ ಬುಡಕಟ್ಟುಗಳನ್ನು ಅಸಹಾಯಕ ದುಸ್ತರ ಬದುಕಿಗೆ ತಂದೊಡ್ಡಿ ನಿಲಿಸಿರುವ ದುರಂತಕ್ಕೆ ಸಾಕ್ಷಿಯಾಗಿದೆ.

ಗ್ವರಾನಿ ದಕ್ಷಿಣ ಅಮೆರಿಕದ ಅತಿ ಹಳೆಯ ಬುಡಕಟ್ಟುಗಳಲ್ಲೊಂದು. ಈ ಹೆಸರು ಅವರಿಟ್ಟುಕೊಂಡದ್ದಲ್ಲ. ಅವರ ಹೆಸರು ‘ಅಬಾ’, ಅಂದರೆ ಜನ. ಜೆಸೂಟ್ ಪಾದ್ರಿಗಳು ಅವರನ್ನು ಕಯುವ (ಕಾಡುಜನ) ಕಂಯ್ಞುವಾ (ನಿರಾಕರಿಸುವವರು) ಎಂದು ಕರೆದರು. ಕೊನೆಗೆ ಕ್ವ-ರಾನಿ ಆಗಿ, ನಂತರ ಗ್ವ-ರಾನಿ ಆಯಿತೆನ್ನುವುದು ಒಂದು ವಿವರಣೆ.

೫೦೦ ವರ್ಷ ಕೆಳಗೆ ವಸಾಹತುಶಾಹಿ ಯೂರೋಪಿಯನ್ನರು ಮೊದಲು ಈ ನೆಲಕ್ಕೆ ಬಂದಿಳಿದಾಗ ಅವರ ಸಂಖ್ಯೆ ನಾಲ್ಕು ಲಕ್ಷದಷ್ಟಿತ್ತು. ಶಿಕಾರಿ, ಜೇನು ಕೀಳುವುದು, ಮೆಕ್ಕೆಜೋಳ ಬೆಳೆಯುವುದು, ಪಶುಸಂಗೋಪನೆಯೇ ಮೊದಲಾದ ಚಟುವಟಿಕೆಗಳಿಂದ ಶಾಂತ ಜೀವನ ನಡೆಸಿದ್ದ ಅರೆ ಅಲೆಮಾರಿ ಸಮುದಾಯ ಅವರದು. ಕ್ರಿ. ಶ. ೧೫೩೭ರಲ್ಲಿ ಗೊಂಜಾಲೊ ಮೆಂಡೋನ್ಸಾ ಮೊತ್ತ ಮೊದಲ ಬಾರಿಗೆ ಈಗಿನ ಪರಗ್ವೆ ಪ್ರದೇಶಕ್ಕೆ ಬಂದಿಳಿದು ಗ್ವರಾನಿ ಜನರಿಗೆ ಮುಖಾಮುಖಿಯಾದ. ಅಲೆಮಾರಿಗಳಿಗೊಂದು ನೆಲೆಯೆಂದು ಅಸುನ್ಸಿಯಾ ಪಟ್ಟಣ ಕಟ್ಟಿದ. ನಂತರ ಅದು ಪರಗ್ವೆ ಪ್ರಾಂತ್ಯದ ರಾಜಧಾನಿಯಾಯಿತು. ಯೂರೋಪಿಯನ್ ಮತ್ತು ಗ್ವರಾನಿ ಮಹಿಳೆಯರ ಸಂಪರ್ಕದಿಂದ ಮಿಶ್ರಕುಲದ ಮೆಸ್ಟಿಜೊಗಳು ಹುಟ್ಟಿದರು.

ಹೀಗೆ ಒಂದೆಡೆ ನೆಲೆಯಾದ ಗ್ವರಾನಿಗಳನ್ನು ಗುಲಾಮಿ ವ್ಯಾಪಾರ ನಡೆಸುತ್ತಿದ್ದ ಕಡಲ್ಗಳ್ಳರು ಹಾಗೂ ಜೆಸ್ಯೂಟ್ ಪಾದ್ರಿಗಳು ಸಮೀಪಿಸಿದರು. ಕ್ರೌರ್ಯವೇ ಮೈವೆತ್ತಂತಿದ್ದ ಕಡಲ್ಗಳ್ಳರಿಗೆ ಅವರನ್ನು ಹಿಡಿದು ಗುಲಾಮ ವ್ಯಾಪಾರ ಮಾಡುವ ಲಾಭದ ಲೆಕ್ಕಾಚಾರವಷ್ಟೆ ಇದ್ದರೆ, ಪಾದ್ರಿಗಳಿಗೆ ಗ್ವರಾನಿಗಳ ಮತಾಂತರದ ಜೊತೆಗೆ ಕಾಡುಮನುಷ್ಯರನ್ನು ನಾಗರಿಕರನ್ನಾಗಿಸುವ ಹಂಬಲವೂ ಇತ್ತು. ಬ್ರೆಜಿಲಿನ ಸಾವೋ ಪೋಲೋ ಪಟ್ಟಣ ಆಗ ಪೋರ್ಚುಗೀಸ್ ಮತ್ತು ಡಚ್ ಕಡಲ್ಗಳ್ಳರ ಗುಲಾಮಿ ವ್ಯಾಪಾರದ ಮೂಲ ನೆಲೆಯಾಗಿತ್ತು. ಕಡಲ್ಗಳ್ಳರು ಸ್ಥಳೀಯ ಇಂಡಿಯನ್ ಮತ್ತು ಆಫ್ರಿಕನ್ ಹೆಂಗಸರೊಡನೆ ಸಂಪರ್ಕ ಸಾಧಿಸಿ ಗಂಡಸರು ಹೆಂಗಸರೆನ್ನದೆ ಅವರ ಹಿಡಿದು ಗುಲಾಮರ ಸಂತೆಯಲ್ಲಿ ಮಾರಿದರು.


ಈ ಆಕ್ರಮಣ, ಅತಿಕ್ರಮಣದ ವಿರುದ್ಧ ಗ್ವರಾನಿಗಳ ಬಳಿ ಇದ್ದ ಅಸ್ತ್ರವಾದರೂ ಯಾವುದು? ಬಿಲ್ಲು-ಬಾಣ! ಅಂಥ ಅಸಹಾಯಕ ಪರಿಸ್ಥಿತಿಯಲ್ಲಿ ಸ್ಪೇನಿನ ಮಿಶನರಿಗಳು ಬಂದರು. ಅದರಲ್ಲಿಯೂ ಜೆಸ್ಯೂಟ್ ಪಾದ್ರಿಗಳು ಗುಲಾಮ ವ್ಯಾಪಾರವನ್ನು ವಿರೋಧಿಸಿದರು. ಯಾವುದೋ ಸ್ಪೇನಿನ ರಾಜನಿಂದ ಕಳಿಸಲ್ಪಟ್ಟು ತಮ್ಮ ಬೆಂಬಲಕ್ಕೆ ನಿಂತ, ತಮ್ಮ ಆರೋಗ್ಯ-ಆಹಾರ ಕುರಿತು ಚಿಂತಿಸಿದ ಮಿಶನರಿಗಳು ಗ್ವರಾನಿ ಜನರಿಗೆ ರಕ್ಷಕ ದೇವತೆಗಳಂತೆ ಕಾಣಿಸಿದರು. ಆದರೂ ಚರ್ಚ್ ಮತ್ತು ಕಡಲ್ಗಳ್ಳರ ನಡುವೆ, ಹಲವು ಬುಡಕಟ್ಟುಗಳ ನಡುವೆ, ಗ್ವರಾನಿ ಮತ್ತು ಜೆಸ್ಯೂಟ್ ಮಿಶನರಿಗಳ ನಡುವೆ ಸಂಘರ್ಷ ನಡೆಯುತ್ತಲೆ ಇತ್ತು. ಪ್ರತಿ ಭಾನುವಾರ ಚರ್ಚಿನ ಬಳಿ ಪ್ರಾರ್ಥನೆಗಾಗಿ ನೆರೆಯುತ್ತಿದ್ದ ಬುಡಕಟ್ಟುಗಳನ್ನು ಹೊತ್ತೊಯ್ಯಲು ಕಡಲ್ಗಳ್ಳರು ದಾಳಿಯಿಡುತ್ತಿದ್ದರು. ಕ್ರಿ. ಶ. ೧೬೩೦ರ ಸುಮಾರಿಗೆ ಹೀಗೆ ಭಾನುವಾರದ ಪ್ರಾರ್ಥನೆ ಸಮಯದಲ್ಲಿ ಅಪಹೃತರಾಗಿ ಗುಲಾಮರಾದವರ ಸಂಖ್ಯೆ ೬೦ ಸಾವಿರ ತಲುಪಿತು! ಶಸ್ತ್ರಸಜ್ಜಿತ ಲೂಟಿಯೆದುರು ಪಾದ್ರಿಗಳೂ ನಿಸ್ಸಹಾಯಕರಾಗಿದ್ದರು. ಪರಿಣಾಮ ನಾಲ್ಕು ಲಕ್ಷ ಗ್ವರಾನಿಗಳಲ್ಲಿ ಕೆಲವೇ ಸಾವಿರ ಜನ ಉಳಿದರು. ಪಾದ್ರಿಗಳು ಚರ್ಚಿನ ಪೋಪರಲ್ಲಿ, ಸ್ಪೇನಿನ ರಾಜನಲ್ಲಿ ವಿನಂತಿಸಿ, ವಾದಿಸಿ ಗುಲಾಮಗಿರಿ ನಿಲಿಸುವಂತೆ ಹಾಗೂ ಇನ್ನಷ್ಟು ಮಿಶನ್ನುಗಳ ಕಳಿಸುವಂತೆ ಮನವೊಲಿಸಿದರು. ೧೦ ಸಾವಿರ ದನಕರುಗಳನ್ನು ಬುಡಕಟ್ಟು ಜನರಿಗೆ ಹಂಚಲಾಯಿತು. ನಾನಾ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು.

ಇದರ ಪರಿಣಾಮವಾಗಿ ೧೭೩೨ರ ವೇಳೆಗೆ ಎರಡು ಸಲ ಬಂದೆರಗಿದ ಸಿಡುಬು ಮಾರಿಗೆ ೪೨ ಸಾವಿರ ಜನ ಸತ್ತರೂ ಸಹಾ ಜನಸಂಖ್ಯೆಯಲ್ಲಿ ಏರಿಕೆ ಕಂಡಿತು. ೧೦೦ ವರ್ಷಗಳಲ್ಲಿ ಅವರ ಸಂಖ್ಯೆ ೧.೪ ಲಕ್ಷವಾಯಿತು.

ನಂತರ ಸ್ಪ್ಯಾನಿಶ್, ಪೋರ್ಚುಗೀಸ್ ಘರ್ಷಣೆ ಶುರುವಾಯಿತು. ಅವರು ತಂತಮ್ಮಲ್ಲಿ ಭೂಪ್ರದೇಶ ಹಂಚಿಕೊಳ್ಳುವಾಗ ಆಯಾ ಭೂಭಾಗದ ಮತಾಂತರಗೊಂಡ ಆದಿವಾಸಿ ಕುಲಗಳನ್ನೂ ಹಂಚಿಕೊಂಡರು. ಆದರೆ ಒಂದು ಆಳ್ವಿಕೆಯಿಂದ ಮತ್ತೊಂದಕ್ಕೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ, ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹೋಗಲು ಗ್ವರಾನಿಗಳು ಹಾಗೂ ಮತ್ತಿತರ ಸಣ್ಣಪುಟ್ಟ ಬುಡಕಟ್ಟುಗಳು ಒಪ್ಪಲಿಲ್ಲ. ಘರ್ಷಣೆ, ಒತ್ತಾಯದ ಒಕ್ಕಲೆಬ್ಬಿಸುವಿಕೆ ಶುರುವಾಯಿತು. ಆದಿವಾಸಿಗಳ ಒಳಬಂಡಾಯ, ನರಬಲಿಯಂತಹ ಮೌಢ್ಯಾಚರಣೆಗಳು, ಜೆಸ್ಯೂಟ್‌ಗಳ ಕೊಲೆ, ದಂಗೆ, ಸಿಡುಬು-ದಡಾರ-ಕ್ಷಯ-ಫ್ಲು ಮೊದಲಾದ ಯೂರೋಪಿಯನ್ ಕಾಯಿಲೆಗಳ ಸೋಂಕು, ಗುಲಾಮಿ ವ್ಯಾಪಾರಿಗಳ ಅಂತರ್ಯುದ್ಧ ಮುಂತಾದ ಸಾಮಾಜಿಕ ಕ್ಷೋಭೆಗಳು ಹಲವು ಸ್ಥಳೀಯ ಬುಡಕಟ್ಟುಗಳನ್ನು ಸಂಪೂರ್ಣ ನಾಶದಂಚಿಗೆ ತಳ್ಳಿದವು. ಅಸಹಾಯಕತೆ ಹುಟ್ಟಿಸಿದ ಸ್ಪರ್ಧೆಗೆ ಪರಸ್ಪರರನ್ನು ನಾಶ ಮಾಡಲು ಆ ಕುಲಗಳು ಸಿಡುಬು ಪೀಡಿತರ ಬಟ್ಟೆಯನ್ನು ಶತ್ರುಕುಲಕ್ಕೆ ದಾನ ನೀಡುವ ತಂತ್ರವನ್ನೂ ಬಳಸಿಕೊಂಡವು!

ಹೀಗೇ ಕೊನೆಮೊದಲಿರದ ನಾಶ ಪರಂಪರೆ ಮುಂದುವರೆದು ಇನ್ನೊಂದು ಶತಮಾನ ಕಳೆವ ಹೊತ್ತಿಗೆ, ೧೮೧೪ರ ವೇಳೆಗೆ ಎಷ್ಟೋ ಸಣ್ಣಪುಟ್ಟ ಸಮುದಾಯಗಳು ಸಂಪೂರ್ಣ ನಾಶವಾದವು. ಬರೀ ೮,೦೦೦ ಗ್ವರಾನಿಗಳು ಮಾತ್ರ ಉಳಿದಿದ್ದರು. ಅವರ ಮನೆ, ದನ, ಹೊಲ, ಭಾಷೆ, ಸಮಾಜ ಎಲ್ಲ ನಾಶವಾಗಿತ್ತು. ಹಾಗೆ ಬದುಕಿ ಉಳಿದ ಕೆಲವರು ೧೮೪೮ರ ವೇಳೆಗೆ ‘ಪೌರ’ ಎಂಬ ಹಣೆಪಟ್ಟಿ ಪಡೆದು ನಗರಕ್ಕೆ ಹೋಗಿ ನೆಲೆಯಾದರು. ನಗರದಲ್ಲಿ ಸಂಪತ್ತು ಗಳಿಸಿ ತಮ್ಮ ಮೂಲ ನೆಲೆ, ಭಾಷೆ, ಸಂಸ್ಕೃತಿ, ಸಂಘರ್ಷದ ಕತೆ ಮರೆತರು. ಹಲವರು ನಾಗರಿಕ ಜಗತ್ತಿಗೆ ಹೇಸಿ ಹಳೆಯ ನೆಲೆಗಳಲ್ಲಿ ದೂರವೇ ವಾಸಿಸಿದರು.

ಹೀಗೆ ಅರಣ್ಯವಾಸಿಗಳಾಗಿದ್ದ ಬ್ರೆಜಿಲ್‌ನ ಗ್ವರಾನಿಗಳು ಈಗ ೫೧,೦೦೦ ಜನರಿದ್ದಾರೆ. ಆ ದೇಶದ ದೊಡ್ಡ ಬುಡಕಟ್ಟು ಇದೇ. ಉಳಿದಂತೆ ಪರಗ್ವೆ, ಅರ್ಜೆಂಟೀನಾಗಳಲ್ಲಿ ಅವರು ಕೆಲವು ಸಾವಿರದಷ್ಟಿದ್ದಾರೆ.


ಆದರೆ, ಬ್ರೆಜಿಲಿನ ಎಲ್ಲ ಗ್ವರಾನಿಗಳನ್ನೂ ಅವರ ಪಾರಂಪರಿಕ ನೆಲದಿಂದ ‘ಅಭಿವೃದ್ಧಿ’ಯ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿದೆ. ಅಲ್ಲೆಲ್ಲ ಗಣಿ ಕಂಪನಿ, ವಿದ್ಯುದಾಗಾರಗಳು, ವಿಸ್ತಾರ ಕೃಷಿ ಪ್ರದೇಶಗಳು ತಲೆಯೆತ್ತಿ ಅವರ ನೆಲೆ ನಾಶವಾಗಿದೆ. ೧೯೯೩ರಲ್ಲೇ ಅವರಿಗೆ ಬೇರೆ ನೆಲ ಕೊಡುವುದಾಗಿ ಸರ್ಕಾರ ಘೋಷಿಸಿದ್ದರೂ ಅದು ಇನ್ನೂ ನೆರವೇರಿಲ್ಲ. ಹೆಚ್ಚಿನವರು ಹೆದ್ದಾರಿಗಳ ಪಕ್ಕ, ನಗರದ ಚೌಕ-ಫ್ಲೈ ಓವರುಗಳ ಕೆಳಗೆ, ನಗರದ ಹೊರಗೆ ಸ್ಲಮ್ಮುಗಳಾಚೆಯ ಸ್ಲಮ್ಮುಗಳಲ್ಲಿ ತಾತ್ಕಾಲಿಕ ಷೆಡ್ಡುಗಳಲ್ಲಿ ಬದುಕುತ್ತಿದ್ದಾರೆ. ಶಿಕ್ಷಿತರಲ್ಲದ; ಶಿಕಾರಿ-ಕೃಷಿ ಬಿಟ್ಟು ಮತ್ತೇನೂ ಗೊತ್ತಿಲ್ಲದ ಅವರು ದಶಕಗಳಿಂದ ಷೆಡ್ಡುಗಳಲ್ಲಿದ್ದಾರೆ. ನೈಸರ್ಗಿಕ ಆಹಾರ-ನೀರಿನ ಮೂಲವಿಲ್ಲದೆ; ರಕ್ಷಣೆ-ಆರೋಗ್ಯ-ಶಿಕ್ಷಣ-ಮನರಂಜನೆ ಮೊದಲಾದ ಯಾವ ನಾಗರಿಕ ವ್ಯವಸ್ಥೆಯೂ ಇಲ್ಲದೆ ಆತ್ಮಗೌರವ ಕಳೆದುಕೊಂಡ ಬದುಕಬೇಕಾದ ಅನಿವಾರ್ಯತೆ ಬಂಡಾಯವನ್ನೇನೋ ಸೃಷ್ಟಿಸಿತು. ಆದರೆ ಅದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು. ಅವರ ಅನೇಕ ಮುಖಂಡರು ಹತ್ಯೆಯಾದರು. ಈಗ ತಾತ್ಕಾಲಿಕ ಷೆಡ್ಡುಗಳಲ್ಲಿ ಒಂದು ತಲೆಮಾರೇ ಹುಟ್ಟಿ ಬಿಟ್ಟಿದೆ. ಅವರ ಹಸುಗೂಸುಗಳು ಅಪೌಷ್ಟಿಕತೆಯಿಂದ ಸಾಯುತ್ತಿವೆ, ಆತ್ಮಹತ್ಯೆಯ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ೩೪ ಪಟ್ಟು ಹೆಚ್ಚಿದೆ. ಉದ್ಯೋಗವಿಲ್ಲದೆ, ಶಿಕ್ಷಣವಿಲ್ಲದೆ ದಿಕ್ಕೆಟ್ಟ ತರುಣರು ಯಾರೂ ಮಾಡದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಪಾರಂಪರಿಕ ಕೌಶಲ್ಯ, ಜ್ಞಾನಗಳು ಆಧುನಿಕತೆಯ ಎದುರು ಕಳಪೆಯಾಗಿಬಿಟ್ಟಿವೆ. ಅವರ ಮಾನವಹಕ್ಕು ಸಂರಕ್ಷಣೆಯನ್ನು ಆದ್ಯತೆಯ ಮೇರೆಗೆ ರಕ್ಷಿಸಬೇಕೆಂದು ವಿಶ್ವಸಂಸ್ಥೆ ಪದೇಪದೇ ಎಚ್ಚರಿಸುತ್ತಿರುವಾಗಲೂ, ಅವರ ಆಗಸದಲ್ಲಿ ಆಜಾದಿಯೆಂಬ ಸೂರ್ಯ ಇನ್ನೂ ಅಸ್ತಂಗತನಾಗಿಯೇ ಇದ್ದಾನೆ.

ಹೊಸ ಜಗತ್ತಿನ ಇಂಡಿಯನ್ನರು

ವಸಾಹತುಗಾರರು ತಾವು ಅನ್ವೇಷಿಸಿದ ‘ಹೊಸ ಜಗತ್ತಿನ’ ಸ್ಥಳೀಯರನ್ನೆಲ್ಲ ಇಂಡಿಯನ್ನರೆಂಬ ಒಂದೇ ಹೆಸರಿನಲ್ಲಿ ಕರೆದರೂ ಸಹ ದ. ಅಮೆರಿಕದಲ್ಲಿ ಇಂಥ ಸಾವಿರಾರು ಇಂಡಿಯನ್ ಕುಲಗಳಿದ್ದವು. ಯೂರೋಪಿನ ನಾವಿಕರು ಬಂದಿಳಿದಾಗ ಬ್ರೆಜಿಲ್ ಒಂದರಲ್ಲೇ ೨,೦೦೦ ಬುಡಕಟ್ಟು ಕುಲಗಳಿದ್ದವು. ಇವತ್ತಿಗೂ ಅತಿ ಹೆಚ್ಚು ಮನುಷ್ಯ ಸಂಪರ್ಕವಿರದ ಕುಲಗಳು (೬೭) ಬ್ರೆಜಿಲಿನಲ್ಲಿವೆ. ಅವರು ೧೮೮ ಸ್ಥಳೀಯ ಭಾಷೆಗಳನ್ನಾಡುತ್ತಾರೆ. ಅರ್ಜೆಂಟೀನಾದಲ್ಲಿ ಇಂಥ ೩೫ ಬುಡಕಟ್ಟುಗಳಿವೆ. ಬೊಲಿವಿಯಾದಲ್ಲಿ ಈ ಸಂಖ್ಯೆ ೩೬, ಎಂದರೆ ದೇಶದ ಜನಸಂಖ್ಯೆಯ ೬೨%. ಚಿಲಿಯಲ್ಲಿ ೪.೬% ಜನ ಬುಡಕಟ್ಟು ಎಂದು ಗುರುತಿಸಿಕೊಂಡವರು. ಪೆರುವಿನಲ್ಲಿ ೪೫% ಜನಸಂಖ್ಯೆ ‘ಇಂಡಿಯನ್ಸ್’ ಇದ್ದಾರೆ. ಕೊಲಂಬಿಯಾದಲ್ಲಿ ೩.೪% ಸ್ಥಳೀಯ ಕುಲಗಳಿವೆ. ವೆನಿಜುವೆಲಾದಲ್ಲಿ ೨೬ ಸ್ಥಳೀಯ ಕುಲಗಳಿವೆ.

ಇವರೆಲ್ಲ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು. ಶಿಕಾರಿ, ಮೀನುಗಾರಿಕೆ, ಕೃಷಿ, ಅರಣ್ಯೋತ್ಪನ್ನ ಸಂಗ್ರಹ ಅವರ ಜೀವನಾಧಾರ. ಮೆಕ್ಕೆಜೋಳ, ಕೆಸಾವಾ, ಸೇಂಗಾ ಹಲವರ ಮುಖ್ಯ ಆಹಾರ. ಈ ಸಮುದಾಯಗಳು ಬುಡಕಟ್ಟು ಜನರೆಂದು ನೋಡಿದ ಕೂಡಲೇ ಹೇಳಬಹುದು. ಅಂಥ ಏನೋ ಒಂದು ‘ತನ’ ಆ ಚಹರೆಗಳಲ್ಲಿದೆ. ಅವರ ಮೈಬಣ್ಣ ತಿಳಿಕಂದು. ನೋಡಲು ಎಲ್ಲರೂ ಹೆಚ್ಚು ಕಡಿಮೆ ಒಂದೇ ತೆರನಾಗಿ ನಮ್ಮ ಅಸ್ಸಾಮಿ, ಮಣಿಪುರಿ ರಾಜ್ಯದವರ ಚಹರೆ ಹೊಂದಿರುವಂತೆ ಕಾಣುತ್ತಾರೆ. ಅದಕ್ಕೆ ಕಾರಣವಿದೆ: ದಕ್ಷಿಣ ಅಮೆರಿಕದ ಬಹುತೇಕ ಎಲ್ಲ ಬುಡಕಟ್ಟುಗಳು ೨೩,೦೦೦ ವರ್ಷ ಕೆಳಗೆ ಪೂರ್ವ ಏಷಿಯಾದಿಂದ, ಅದರಲ್ಲೂ ಸೈಬೀರಿಯಾದಿಂದ ಮೂರು ಹಂತಗಳಲ್ಲಿ ವಲಸೆ ಬಂದವರು. ಅವರ ಭಾಷೆಗಳ ಅಧ್ಯಯನ, ವಂಶವಾಹಿ ಅಧ್ಯಯನ ಹಾಗೂ ಜನಾಂಗೀಯ ಅಧ್ಯಯನಗಳು ಇದನ್ನು ಧೃಢಪಡಿಸಿವೆ.

ಇವತ್ತು ಈ ಬುಡಕಟ್ಟು ಕುಲಗಳಿಗೆ ಬದುಕು ಕಟ್ಟಿಕೊಳ್ಳಲು ಎದುರಾದ ಸವಾಲಿನಷ್ಟೆ ದೊಡ್ಡದಾದ ಮತ್ತೊಂದು ಅಪಾಯದ ಕತ್ತಿ ತಲೆಮೇಲೆ ತೂಗುತ್ತಿದೆ: ಅದು ಭಾಷೆಯ ಅಳಿವಿನದು. ತಮ್ಮ ಭಾಷೆಯಲ್ಲಿ ದಿನಗಟ್ಟಲೆ ಹಾಡುತ್ತ, ನರ್ತಿಸುವ ಮೂಲಕ ದೇವರೊಡನೆ ಸಂಪರ್ಕ ಸಾಧಿಸಬಹುದು ಎಂದವರು ಭಾವಿಸಿದ್ದರು. ಈಗ ಅವರ ಪವಿತ್ರ ಭಾಷೆಗಳೂ ನಶಿಸುತ್ತ ಹೋಗಿವೆ. ಬರಬರುತ್ತ ಶಕ್ತಿಶಾಲಿಗಳ ಭಾಷೆಯೇ ಶಕ್ತಿಶಾಲಿ ಭಾಷೆಯಾಗಿ ಗ್ವರಾನಿಗಳು ಗ್ವರಾನಿ ಮರೆತು ಇಂಗ್ಲಿಷ್-ಸ್ಪ್ಯಾನಿಶ್-ಪೋರ್ಚುಗೀಸ್ ಕಲಿತರೆ, ಆಗದು ವಸಾಹತುಶಾಹಿಗಳ ನಿಜವಾದ ವಿಜಯವಾಗುತ್ತದೆ. ಒಮ್ಮೆ ‘ಆ’ ಭಾಷೆ ಹಿಡಿತ ಸಾಧಿಸಿದರೆ ಮುಗಿಯಿತು, ತಮ್ಮ ಮೌಖಿಕ ಜ್ಞಾನ, ಪರಂಪರೆಯ ಮೇಲಿನ ಗೌರವ, ಭರವಸೆ ಎಲ್ಲ ಅಳಿಸಿ ‘ಆ’ ಭಾಷೆಯಲ್ಲಿರುವುದಷ್ಟೆ ಜ್ಞಾನ ಎಂಬ ಭಾವ ಹೊಸದಾಗಿ ಕಲಿತವನನ್ನು ಆವರಿಸಿಬಿಡುತ್ತದೆ. ಬರೆದಿಟ್ಟಿದ್ದಷ್ಟೆ ಜ್ಞಾನ ಎನಿಸಿಕೊಳ್ಳುತ್ತದೆ.

ಹಾಗಾಗದಂತೆ ಈಗ ದ. ಅಮೆರಿಕಾದ ಸರ್ಕಾರ-ಸಮಾಜಗಳು ಬುಡಕಟ್ಟು ಅಧ್ಯಯನದಲ್ಲಿ ಆಸಕ್ತಿ ತೋರಿವೆ. ಮುಂಬ್ಯ ಗ್ವರಾನಿ, ಜೊಪಾರಾ ಗ್ವರಾನಿ, ತುಪಿ ಗ್ವರಾನಿ ಮೊದಲಾದ ಭಾಷೆಗಳ ಅಧ್ಯಯನ ನಡೆಯುತ್ತಿದೆ. ಸ್ಥಳೀಯ ಭಾಷೆಗಳ ಜನಪದ ಕಲೆ, ಸಾಹಿತ್ಯ ಸಂಗ್ರಹವಾಗುತ್ತಿದೆ. ಬೊಲಿವಿಯಾದಲ್ಲಿ ಗ್ವರಾನಿ ವಿಶ್ವವಿದ್ಯಾಲಯವಿದೆ. ಪರಗ್ವೆ ದೇಶದಲ್ಲಿ ಸ್ಪ್ಯಾನಿಶ್ ಹಾಗೂ ಗ್ವರಾನಿ ಅಧಿಕೃತ ಭಾಷೆಗಳಾಗಿದ್ದು ಶಾಲೆಗಳಲ್ಲಿ ಕಲಿಸಲಾಗುತ್ತದೆ ಹಾಗೂ ನೆರೆಹೊರೆಯವರೊಡನೆ ಮಾತನಾಡುವುದನ್ನು ಉತ್ತೇಜಿಸಲಾಗುತ್ತಿದೆ.



ಅವರಿಂದ ನಾವೂ ಕಲಿಯಬೇಕಾದ ಪಾಠಗಳಿವೆ. ಏಕೆಂದರೆ ನಮ್ಮ ನೆಲಕ್ಕೆ ಬ್ರಿಟಿಷರಿಗಿಂತ ಅವರ ಭಾಷೆ ಅಪಾಯಕಾರಿಯಾಯಿತು. ೧೯೬೧ರ ಸೆನ್ಸಸ್‌ನಲ್ಲಿ ಭಾರತದಲ್ಲಿ ೧,೬೫೧ ಭಾಷೆ ಇದ್ದರೆ ೧೯೭೧ರಲ್ಲಿ ಆ ಸಂಖ್ಯೆ ೧೦೮ಕ್ಕಿಳಿಯಿತು! ೧೦ ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುವ ಭಾಷೆಯಷ್ಟೆ ‘ಭಾಷೆ’ ಎಂದು ಕರೆಸಿಕೊಂಡಿತು. ೧೦೯ನೇ ಭಾಷೆ ಉಳಿದ ಎಲ್ಲ ಭಾಷೆಗಳು ಎಂದು ನಮೂದಾಯಿತು. ಈಗಲೂ ಭಾರತದ ಬಹುಪಾಲು ಭಾಷೆಗಳ ಹತ್ಯೆಗೆ ಇಂಗ್ಲಿಷ್ ಭಾಷೆ ಮೇಲಿನ ನಮ್ಮ ಮೋಹವೇ ಕಾರಣ ಎನ್ನುವುದು ನಿರ್ವಿವಾದವಾಗಿದೆ.

ಅಸಮ ಬಲದ ಯುದ್ಧಗಳು, ಕಾಯಿಲೆಗಳು, ಗುಲಾಮಗಿರಿ, ಮತಾಂತರ ಮೊದಲಾದ ದುಷ್ಟತನಗಳಿಗೆ ಸಂಪೂರ್ಣ ನಾಶವಾದ ಕುಲಗಳ, ಭಾಷೆಗಳ ಲೆಕ್ಕವಿಟ್ಟವರಾರು? ಆದರೆ ತಲೆತಲಾಂತರಗಳಿಂದ ಭಾಷೆ ಮೂಲಕ ಸಮಾಜವೊಂದು ಸಂಗ್ರಹಿಸಿಟ್ಟ ಜ್ಞಾನವು ನಾಶವಾದರೆ ಅಥವಾ ಜನಸಮುದಾಯ ತನ್ನ ಹಳೆಯ ಭಾಷೆ ಮರೆತು ಯಜಮಾನ ಭಾಷೆಗೆ ಒಗ್ಗಿಕೊಂಡುಬಿಟ್ಟರೆ ಆ ವಿಸ್ಮೃತಿ ಆ ಸಮುದಾಯದ ಬಹುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತದೆ. ೨೦೧೨ರ ಏಪ್ರಿಲಿನಲ್ಲಿ ಅಂಡಮಾನಿನ ಬೊವಾ ವೃದ್ಧೆಯೊಬ್ಬಳು ತೀರಿಕೊಂಡಳು. ಆದರೆ ಇಷ್ಟೇ ಹೇಳಿದರೆ ಏನೂ ಹೇಳಿದಂತಾಗಲಿಲ್ಲ, ಅವಳೊಡನೆ ಒಂದು ಭಾಷೆಯೂ ಸಾವಿಗೀಡಾಯಿತು. ಬೊವಾ ಭಾಷೆ ಬಲ್ಲ ಏಕೈಕ ಮಹಿಳೆ ಅವಳಾಗಿದ್ದಳು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಮಾತನಾಡಲು ಯಾರೂ ಸಿಗದೆ ಹಕ್ಕಿಗಳೊಡನೆ ಬೊವಾ ಭಾಷೆಯಲ್ಲಿ ಅವಳು ಸಂಭಾಷಿಸುತ್ತಿದ್ದಳಂತೆ. ಅವಳೊಡನೆ ಆ ಭಾಷೆ, ತಲೆತಲಾಂತರದ ಅದರ ಜ್ಞಾನ ಎಲ್ಲವೂ ನಾಶವಾಯಿತು.

ಭಾಷಾಶಾಸ್ತ್ರಜ್ಞ, ಚಿಂತಕ ಜಿ. ಎನ್. ದೇವಿಯವರ ಪ್ರಕಾರ, ‘ಭಾಷೆಯ ಮೂಲಕ ನಮ್ಮದೇ ಆದ ಲೋಕವನ್ನೇ ಕಟ್ಟಿಕೊಳ್ಳಲು ಸಾಧ್ಯವಿದೆ. ಅಲ್ಲಲ್ಲಿನ ಹವಾಮಾನ, ವಿದ್ಯಮಾನ, ಬದುಕಿಗೆ ತಕ್ಕ ಹಾಗೆ ಭಾಷೆಯೂ ನುಡಿಗಟ್ಟೂ ಅದರ ಪದಕೋಶವೂ ರೂಪುಗೊಂಡಿರುತ್ತದೆ. ಸಂಸ್ಕೃತಿಯ ಬಹುಮುಖ್ಯ ಭಾಗ ಭಾಷೆಯೇ ಆಗಿರುತ್ತದೆ. ಇಂದಿನ ಜೊತೆಗೆ ನಿನ್ನೆ ನಾಳೆಯನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಆದರೆ ಭಾಷೆಯೇ ಕಳೆದುಹೋದರೆ? ಭಾಷೆ ನಾಶವಾಗುವುದರೊಡನೆ ಆ ಭಾಷೆಯಲ್ಲಿದ್ದ ತಲೆತಲಾಂತರಗಳ ಜ್ಞಾನವೂ ಇಲ್ಲವಾಗುತ್ತದೆ. ಭಾಷೆ ಮನುಷ್ಯರಂತೆ ಹುಟ್ಟುತ್ತದೆ ಮತ್ತು ಸಾಯುತ್ತದೆ ಎನ್ನಲಾಗುತ್ತದೆ. ಆದರೆ ಭಾಷೆ ಹುಟ್ಟಬಹುದು, ಸಾಯಲಾರದು. ಅದನ್ನು ಕೊಲ್ಲಬಹುದು ಅಷ್ಟೆ..’


ಪಾರ್ಕಿನಿಂದ ಈಚೆ ಬಂದರೂ, ಅವರ ದೇಶ ಬಿಟ್ಟು ಬಂದರೂ ಆ ಮಕ್ಕಳ ತಾರಕ ಶ್ರುತಿಯ ಜೀವ ತುಂಬಿದ ಸುಶ್ರಾವ್ಯ ಹಾಡು, ಕರಾರುವಾಕ್ ಲಯದ ಪಾದ ಚಲನೆ, ತಂತಿವಾದ್ಯದ ಗುಂಗು ಕಿವಿಯಲ್ಲಿನ್ನೂ ರಿಂಗಣಿಸುತ್ತಲೆ ಇದೆ. ಜೊತೆಗೆ ಅವರದೆ ನೆಲದಲ್ಲಿ ಅವರನ್ನೊಂದು ಪ್ರದರ್ಶನದ, ಜನರ ಸೆಳೆಯುವ ಐಟಂ ಆಗಿಸಿದ ನಮ್ಮ ಅತಿಕ್ರಮಣಶೀಲತೆ, ಅವರ ದಿಕ್ಕೇಡಿತನಕ್ಕೆ ಕಾರಣವಲ್ಲವೆ ಎಂಬ ಪಾಪಪ್ರಜ್ಞೆಯೂ ಮುತ್ತುತ್ತಿದೆ. ಹೀಗಿರುತ್ತ ನಮ್ಮ ನಡುವೆಯೇ ಇರುವ ಇನ್ನೆಷ್ಟೋ ಬೊವಾಗಳು, ಗ್ವರಾನಿಗಳು ಲಯಗೊಳ್ಳದಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಲ್ಲವೆ?




No comments:

Post a Comment