Sunday, 19 June 2016

ಮೊಚೆ - ಅಳಿದ ಕುಲದ ಕತೆ
ಪೆರು ಎಂದಕೂಡಲೆ ಇಂಕಾಗಳು ಕಣ್ಣೆದುರು ಬರುತ್ತಾರೆ. ತಪ್ಪೇನಲ್ಲ. ಸಣ್ಣಪುಟ್ಟ ಬುಡಕಟ್ಟು ರಾಜ್ಯಗಳನ್ನು ಗೆದ್ದು, ಆಂಡೀಸ್ ಸಾರಸಂಪತ್ತನ್ನೆಲ್ಲ ಹೀರಿ, ೧೨-೧೫ನೇ ಶತಮಾನದ ನಡುವೆ ಉತ್ತುಂಗ ತಲುಪಿದ ವಿಸ್ತಾರ ಸಾಮ್ರಾಜ್ಯ ಅವರದು. ಇಂಕಾಗಳು ಒಳ್ಳೆಯ ಆಡಳಿತಗಾರರು, ದಕ್ಷ ಕಾರ್ಯನಿರ್ವಾಹಕರಾದರೂ ಕಲೆ-ಕೃಷಿ-ಸಂಸ್ಕೃತಿ ಔನ್ನತ್ಯವನ್ನೆಲ್ಲ ನೂರಿನ್ನೂರು ವರ್ಷ ಅವಧಿಯಲ್ಲಿ ತಲುಪಿರಲಾರರು. ಇಂಕಾಪೂರ್ವ ಕಾಲದ ಹಲವು ಜನಾಂಗಗಳ ಜ್ಞಾನ ಆಂಡಿಯನ್ ಸಂಸ್ಕೃತಿಯನ್ನು ರೂಪಿಸಿದೆ.

ಆದರೆ ಹಾಗಂತ ನಿರೂಪಿಸುವುದು ಹೇಗೆ? ಯಾಕೆಂದರೆ ಹತ್ತು ಸಾವಿರ ವರ್ಷ ಹಿಂದಿನಿಂದ ಮನುಷ್ಯವಾಸದ ಸ್ಥಳವಾಗಿರುವ ಪೆರು ದೇಶದ ಲಿಖಿತ ಚರಿತ್ರೆ ಬರೀ ೫೦೦ ವರ್ಷ ಹಳೆಯದು. ಅದರ ಅಲಿಖಿತ ಚರಿತ್ರೆಯನ್ನು ಮೌಖಿಕ ಕಥನಗಳ ಆಧಾರದಲ್ಲಿಯೂ ತಿಳಿಯಲಾಗದು. ವಸಾಹತುಶಾಹಿ ಭಾಷೆಯ ಯಜಮಾನಿಕೆಗೆ ಸಾವಿರಾರು ಸ್ಥಳೀಯ ಭಾಷೆಗಳೂ, ಅವುಗಳ ತಿಳುವಳಿಕೆಯೂ ಮಾಯವಾದ ನೆಲ ಅದು. ಎಂದೇ ಇಂಕಾ ನಾಡು ಎಂದು ನಾವೀಗ ಕರೆಯುವ ಪೆರು ಹಲವು ಅಜ್ಞಾತ, ಅಳಿದುಹೋದ ಭಾಷೆ-ಕುಲಗಳ ಕೊಲಾಜ್ ಎನ್ನಬಹುದು.

ಪೆರುವಿನಲ್ಲಿ ಈಗ ಕೆಚುವಾ, ಉರಾರಿನಾ, ಮಾತ್ಸೆ, ಮಾಟಿ, ಕೊರುಬೊ, ಬೋರಾ, ಚಿಂಚಾ, ಹ್ವಾಂಬಿಟೊ, ಜಿಗಿಟಾ, ಜ಼ಪಾರೋ ಮೊದಲಾದ ನೂರಾರು ಸ್ಥಳೀಯ ಕುಲಗಳಿವೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಅಲೆಮಾರಿ ಬುಡಕಟ್ಟುಗಳಿದ್ದವು. ಸ್ಪ್ಯಾನಿಶ್ ಆಕ್ರಮಣದ ನಂತರ ೧೫೦೦ ಕುಲಗಳು ನಶಿಸಿಹೋದವು. ಕಲೆ, ವಿಜ್ಞಾನ, ನಿರ್ಮಾಣ, ಸಮಾಜರಚನೆಗಳಲ್ಲಿ ಉತ್ತುಂಗಹಂತ ತಲುಪಿದ್ದರೂ ರಂಗದಿಂದ ತನ್ನ ಪಾತ್ರಪೋಷಣೆ ಮುಗಿದ ನಟ ಹಠಾತ್ತಾಗಿ ನಿರ್ಗಮಿಸುವಂತೆ ಕೆಲ ಕುಲಗಳು ಇದ್ದಕ್ಕಿದ್ದಂತೆ ನಿರ್ಗಮಿಸಿ ಹೇಳಹೆಸರಿಲ್ಲದೆ ಹೋದವು.

ಮೊದಲ ಸಹಸ್ರಮಾನದಲ್ಲಿ ಆಗಿಹೋದ ಅಂತಹ ಒಂದು ಇಂಕಾಪೂರ್ವ ಕುಲ ಮೊಚೆ.


ಮೊಚೆಗಳು ಕ್ರಿ. ಶ. ೧೦೦-೮೦೦ ರ ಅವಧಿಯಲ್ಲಿ ಪೆರುವಿನ ಉತ್ತರ ಭಾಗದಲ್ಲಿ (ಈಗಿನ ಟ್ರುಜಿಲೊ) ೨೫೦ ಮೈಲು ಕಡಲತೀರ ಹಾಗೂ ೫೦ ಮೈಲು ಒಳನಾಡು ಪ್ರದೇಶವನ್ನು ನೆಲೆಯಾಗಿಸಿ ಬದುಕಿದ ಸಮುದಾಯ. ನೀರಾವರಿ, ಸ್ಮಾರಕನಿರ್ಮಾಣ, ಪಿಂಗಾಣಿ ಹಾಗೂ ಲೋಹಶಿಲ್ಪಕ್ಕೆ ಮೊಚೆ ಜನಾಂಗ ಹೆಸರುವಾಸಿ. ಕೊಂಚ ಭಿನ್ನವಾದ ಎರಡು ಭಾಷೆ, ಸಂಸ್ಕೃತಿಗಳನ್ನು ಹೊಂದಿದ್ದ, ತಮ್ಮದೇ ಅನನ್ಯ ಶಿಲ್ಪಕಲೆ, ಸಂಗೀತ, ಕೃಷಿ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದ ಕುಲ ಅದು.

ಮೊಚೆಗಳ ಕುರಿತು ತಿಳಿದುಬಂದದ್ದೇ ಒಂದು ಆಕಸ್ಮಿಕ. ಮಚುಪಿಚು ಪ್ರಸಿದ್ಧವಾಗಿ ಪೆರುವಿನ ಅಳಿದುಳಿದ ಪುರಾತತ್ವ ಅವಶೇಷಗಳ ಕುರಿತು ಅಂತಾರಾಷ್ಟ್ರೀಯ ಆಸಕ್ತಿ ಹೆಚ್ಚತೊಡಗಿದಾಗ ಟ್ರುಜಿಲೊ ಬಳಿ ಒಂದು ಮಣ್ಣುದಿಬ್ಬ ಉತ್ಖನನಕಾರರನ್ನು ಸೆಳೆಯಿತು. ಅದು ಮೊಚೆ ನದಿಯ ಪಾತ್ರ ಬದಲಾಯಿಸಿ ಸ್ಪ್ಯಾನಿಶ್ ಆಕ್ರಮಣಕಾರರು ಲೂಟಿಹೊಡೆದಿದ್ದ ಸೂರ್ಯದೇವಾಲಯ. ನೋಡಿದರೆ ೫೦ ಮೀಟರ್ ಎತ್ತರದ ನೈಸರ್ಗಿಕ ದಿಬ್ಬದಂತೆ ಕಾಣುತ್ತಿದ್ದ ಅದು ಮಿಲಿಯಗಟ್ಟಲೆ ಮಣ್ಣುಇಟ್ಟಿಗೆಗಳಿಂದ ಕಟ್ಟಿದ ಸೂರ್ಯದೇವಾಲಯ ಹ್ವಾಕಾ ಡೆಲ್ ಸೋಲ್ ಎಂದು ತಿಳಿದುಬಂತು. ಬಂಗಾರಕ್ಕಾಗಿ ಅಗೆದ ಲೂಟಿಕೋರರು ‘ಬೆಲೆಯಿರದ’ ವಸ್ತುವೆಂದು ಪಿಂಗಾಣಿ ಪಾತ್ರೆ, ಬಟ್ಟೆ, ವಸ್ತು, ಉಪಕರಣಗಳನ್ನು ಹೇರಳವಾಗಿ ಬಿಟ್ಟುಹೋಗಿದ್ದರು. ಅದರ ಪಕ್ಕದಲ್ಲೆ ಇದ್ದ ಮತ್ತೊಂದು ಪುಟ್ಟದಿಬ್ಬವೂ ಉತ್ಖನನಗೊಂಡಾಗ ಅದು ಚಂದ್ರದೇವಾಲಯ ಹ್ವಾಕಾ ಡಿ ಲ ಲುನ ಎಂದು ತಿಳಿಯಿತು. ಅದು ಸುರಕ್ಷಿತವಾಗಿತ್ತು.


(lady of cao bundle)


(lady of cao)

೧೯೮೭ರಲ್ಲಿ ಸಿಪನ್ ಎಂಬಲ್ಲಿ ರಾಜಗೋರಿಯೊಂದು ಪತ್ತೆಯಾಯಿತು. ಲೂಟಿಗೊಳಗಾಗಿದ್ದ ಕ್ರಿ.ಶ. ಮೊದಲನೆ ಶತಮಾನದ ಗೋರಿ ಅದು. ಆಸುಪಾಸಿನ ಹಳ್ಳಿಗಳಲ್ಲಿ ಅಂತಹ ಹಲವು ಗೋರಿಗಳು ಪತ್ತೆಯಾದವು. ಮಮ್ಮಿಗಳು, ಚಿನ್ನ-ಬೆಳ್ಳಿಯ ಆಭರಣ, ತೆಳು ಲೋಹಹಾಳೆ ಹೊದೆಸಿದ ಮುಖವಾಡ, ಪ್ರತಿಮೆ, ಉಪಕರಣ, ಪಾತ್ರೆ, ಮಣಿ ಮತ್ತಿತರ ವಸ್ತುಗಳು ಪತ್ತೆಯಾದವು. ೨೦೦೬ರಲ್ಲಿ ಲೇಡಿ ಆಫ್ ಕ್ಯಾವೊ ಎಂಬ ಮಹಿಳೆಯ ಅತಿ ಸುರಕ್ಷಿತ ಪಿರಮಿಡ್ ಸಿಕ್ಕಿತು. ಹೆರಿಗೆ ಅಥವಾ ತತ್ಸಂಬಂಧಿ ಕಾಲದಲ್ಲಿ ಅಸುನೀಗಿದ್ದ ಇಪ್ಪತ್ತರ ಆಸುಪಾಸಿನ ಕುಲೀನ ಮನೆತನದ ರಾಣಿ ಅವಳು. ಅವಳೊಡನೆ ಮತ್ತೂ ಆರು ಮಾನವರ, ಕೆಲ ಪ್ರಾಣಿಗಳ ಅವಶೇಷಗಳು ದೊರೆತವು. ೨೦೧೩ರಲ್ಲಿ ಮಹಿಳೆಯರ ಆರು ಪಿರಮಿಡ್ ಪತ್ತೆಯಾದವು. ಅದುವರೆಗೆ ಕೇವಲ ಪುರುಷರಿಗಷ್ಟೆ ಅಧಿಕಾರಸ್ಥಾನ ಹಾಗೂ ಪಿರಮಿಡ್ ರಚನೆ ಎಂಬ ಅಭಿಪ್ರಾಯ ಇದ್ದಿದ್ದು ಮಹಿಳೆಯರ ಸರಣಿ ಗೋರಿ ಪತ್ತೆಯಾದ ಬಳಿಕ ಬದಲಾಯಿತು. ಮೊಚೆಗಳು ಒಬ್ಬರಾದಮೇಲೊಬ್ಬರಂತೆ ಪುರೋಹಿತ-ರಾಣಿಯರಿಂದ ಆಳಲ್ಪಟ್ಟರು ಎಂದು ತಿಳಿದುಬಂತು.

ಬೆಸೆಯುವುದು, ತೆಳು ಲೋಹದ ಹಾಳೆಗಳ ಮಾಡುವುದು ತಿಳಿದಿದ್ದ ಕುಶಲಕರ್ಮಿಗಳು ನಾನಾ ವಿನ್ಯಾಸ ಹಾಗೂ ಉಪಯುಕ್ತತೆಯ ಬೆಳ್ಳಿ, ಬಂಗಾರ, ತಾಮ್ರಗಳ ಪಾತ್ರೆ, ಆಭರಣ ತಯಾರಿಸಿದ್ದರು. ಜೊತೆಗೆ ಬಟ್ಟೆ, ಚಾಕು, ಹೂಜಿ, ಲೋಹ, ವಿಕುನ ಮತ್ತು ಅಲ್ಪಾಕ ಪ್ರಾಣಿಗಳ ತುಪ್ಪಳದಿಂದ ನೇಯ್ದ ಬಟ್ಟೆತುಂಡು, ಮರ ಮತ್ತು ಪಿಂಗಾಣಿ ಪಾತ್ರೆಗಳೂ ಸಿಕ್ಕವು. ಪಿಂಗಾಣಿ ಪಾತ್ರೆಗಳಂತೂ ಅಮೂಲ್ಯ ನಿಧಿಯೇ ಸರಿ. ಸಂಗೀತಗಾರರು, ಬಂಧಿತರು, ಪುರೋಹಿತರ ಪ್ರತಿಕೃತಿಗಳು; ಹಾವು, ಕಪ್ಪೆ, ಹಕ್ಕಿ, ಮೀನು, ಏಡಿ, ಜಿಂಕೆ ಮೊದಲಾದ ಪ್ರಾಣಿಗಳ ಮೂರ್ತಿಗಳು; ಬೇಟೆ, ಯುದ್ಧ, ಯೋಧ, ಸೋಲು, ದಿನನಿತ್ಯದ ಜೀವನ, ಕೃಷಿ ಮುಂತಾದವು ಪಿಂಗಾಣಿ ಕಲೆಯಾಗಿ ಅರಳಿದ್ದವು.

ಬಟ್ಟೆ, ಮಡಕೆ ಮತ್ತು ಆಚೀಚಿನ ಗೋಡೆಗಳ ಮೇಲೆ ಇದ್ದ ಚಿತ್ರಗಳ ಪ್ರಕಾರ ಅವರ ಸೃಷ್ಟಿಕರ್ತ ಆಕಾಶ ದೇವತೆ. ಭಯಾನಕ ಶಕ್ತಿಶಾಲಿಯಾದ ಅವನನ್ನು ಸಂಪ್ರೀತಗೊಳ್ಳಲು ನರಬಲಿ ಕೊಡಬೇಕು. ಚಂದ್ರ ಹೆಣ್ಣುದೇವತೆ. ಮಳೆ, ಗಾಳಿ, ಋತುವಿನ ಅಧಿದೇವತೆ. ಅವಳು ಸೂರ್ಯನಿಗಿಂತ ಶಕ್ತಿಶಾಲಿ ಏಕೆಂದರೆ ಹಗಲು-ರಾತ್ರಿ ಎರಡೂ ಕಾಲಗಳಲ್ಲಿ ಕಾಣಬಲ್ಲಳು. ಮತ್ತೊಬ್ಬ ಶಿರಚ್ಛೇದನ ಮಾಡುವ ದೇವತೆ. ಒಂದು ಕೈಲಿ ದೊಡ್ಡ ಕೊಡಲಿ, ಮತ್ತೊಂದು ಕೈಯಲ್ಲಿ ಕಡಿದ ರುಂಡ ಇರುವ ಅರೆಮಾನವ ಅರೆ ಚಿರತೆ ದೇಹದ ದೇವ ಅವನು.

ದೇಹದೊಳಗಿನ ದ್ರವ ಪವಿತ್ರ ಎಂಬ ನಂಬಿಕೆ ಅವರದು. ನೀರಾವರಿಯೇ ಮೂಲವಾದ ಕುಲಕ್ಕೆ ಹರಿವು ಒಂದು ಮೌಲ್ಯ. ಎಂದೇ ತೊಟ್ಟುತೊಟ್ಟಾಗಿ ರಕ್ತದ ಹನಿಗಳನ್ನು ಬಲಿ ನೀಡುವ ರಕ್ತಬಲಿಯ ಚಿತ್ರಗಳು ಕಂಡುಬಂದವು. ಸೋಲು ಎಂದರೆ ಎಲ್ಲ ರಂಧ್ರಗಳಿಂದ ದ್ರವ ಸೋರಿಸುವುದು ಅಥವಾ ಪ್ರಾಣಿ, ಹಕ್ಕಿ ಅಥವಾ ಮನುಷ್ಯರಿಂದ ಕಣ್ಣು, ಗುಪ್ತಾಂಗ ಕೀಳಿಸಿಕೊಳ್ಳುವುದು. ಹಾಗೆ ಸೋತ ಯೋಧರ, ವಧಾಸ್ಥಾನಕ್ಕೆ ಮೆರವಣಿಗೆಯಲ್ಲಿ ಒಯ್ಯುತ್ತಿರುವವರ ಚಿತ್ರಗಳೂ ಅಲ್ಲಿ ಸಿಕ್ಕವು.ಸೆರೆಯಾಳುಗಳ ಹಾಗೂ ಹರಕೆಯ ನರಬಲಿ ಸಾಮಾನ್ಯವಾಗಿತ್ತು. ಬಲಿಗಿಂತ ಮೊದಲು ಅತಿಹಿಂಸೆ ನೀಡಿ ದುರ್ಬಲಗೊಳಿಸಲಾಗುತ್ತಿತ್ತು. ಅದರ ಭಾಗವಾಗಿ ನರಮಾಂಸ ಭಕ್ಷಣೆಯೂ ನಡೆಯುತ್ತಿತ್ತು. ಇದಕ್ಕೆ ಪುರಾವೆಯೊದಗಿಸುವ ಅನೇಕ ಚಿತ್ರಣಗಳು ಕಂಡುಬರುತ್ತವೆ. ಹ್ವಾಕಾ ಡೆಲ್ ಸೋಲ್ ಬುಡದಲ್ಲಿ ೩೦ ವರ್ಷಕ್ಕಿಂತ ಕಡಿಮೆ ವಯಸಿನ ೪೦ ತರುಣರ ಅಸ್ಥಿಪಂಜರಗಳು ಸಿಕ್ಕವು. ಕೀಲುಸಂದು ತಪ್ಪಿದ, ದವಡೆ ಎಲುಬು ಇಲ್ಲದ, ಎಲುಬು ಮುರಿದ ಅಸ್ಥಿಪಂಜರಗಳವು. ಅವರು ಹಿಂಸೆ ಅನುಭವಿಸಿ ಬಲಿಯಾದವರು.

ಹೀಗೆ ಇಂಕಾಪೂರ್ವ ಮೊಚೆಗಳ ಕತೆಯನ್ನು ಬಟ್ಟೆ, ಚಿತ್ರ, ಲೋಹವಸ್ತು, ಪಿಂಗಾಣಿಗಳೇ ತಿಳಿಸಿಬಿಟ್ಟವು.

ಲೈಂಗಿಕ ಅಭಿವ್ಯಕ್ತಿ 

ಲೀಮಾದ ಲಾರ್ಕೋ ಮ್ಯೂಸಿಯಂ ಹಾಗೂ ಇನ್ನೂ ಕೆಲ ಪುರಾತತ್ವ ಮ್ಯೂಸಿಯಂಗಳ ಮೊಚೆ ಕಾಲದ ಪಿಂಗಾಣಿ ವಸ್ತುಗಳು ಕೆಲವು ವಿಶೇಷಗಳಿಂದ ಥಟ್ಟನೆ ಗಮನ ಸೆಳೆಯುತ್ತವೆ.

ಒಂದೇ ಅಚ್ಚಿನಿಂದ ಎರಕ ಹೊಯ್ಯುವುದು ಅವರಿಗೆ ಗೊತ್ತಿತ್ತು. ಒಂದೇ ತರಹದ ಸಾವಿರಾರು ಪಿಂಗಾಣಿ ಪಾತ್ರೆಗಳು ಅಲ್ಲಿವೆ. ಕಂದು, ಕೆಂಪು, ಹಳದಿ ಬಣ್ಣಗಳು ಸಾಮಾನ್ಯವಾಗಿ ಬಳಕೆಯಾಗಿವೆ. ಮನುಷ್ಯರ ತದ್ರೂಪ ಮೂರ್ತಿಗಳು ಆ ಕಾಲದ ಯಾರದೊ ವ್ಯಕ್ತಿಯದಿರಬೇಕು, ಏಕೆಂದರೆ ಅವು ಪದೇಪದೇ ಕಾಣಿಸಿಕೊಂಡಿವೆ.

ಪಿಂಗಾಣಿ ಕಲೆಯ ಮತ್ತೊಂದು ವಿಶೇಷತೆಯೆಂದರೆ ಒಂದಲ್ಲ ಒಂದು ಕ್ರಿಯೆಯಲ್ಲಿ, ಚಲನೆಯಲ್ಲಿ ತೊಡಗಿರುವ ಮೂರ್ತಿ-ಚಿತ್ರಗಳನ್ನೇ ಅವು ಹೊಂದಿರುವುದು. ಇದುವರೆಗೆ ಸಿಕ್ಕ ೮೦,೦೦೦ಕ್ಕೂ ಮೀರಿದ ಪಿಂಗಾಣಿ ವಸ್ತುಗಳಲ್ಲಿ ಯುದ್ಧ, ಬೇಟೆ, ನೇಯುವಿಕೆ, ಲೈಂಗಿಕ ಕ್ರಿಯೆ ಹೀಗೆ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿದ ಮನುಷ್ಯರಿದ್ದಾರೆ. ಅದರಲ್ಲೂ ೫೦೦ಕ್ಕೂ ಮಿಕ್ಕಿದ ಪಿಂಗಾಣಿ ಮಾದರಿಗಳು ಢಾಳಾಗಿ ಲೈಂಗಿಕತೆಯನ್ನು, ಲೈಂಗಿಕ ಕ್ರಿಯೆಯನ್ನು ಪ್ರದರ್ಶಿಸುತ್ತವೆ! ಪುಟ್ಟ ಪಿಂಗಾಣಿ ಪಾತ್ರೆಗಳ ಲೈಂಗಿಕ ಶಿಲ್ಪಗಳನ್ನು ನೋಡುತ್ತಿದ್ದರೆ ಎರಡನೇ ಶತಮಾನದಲ್ಲಿ ವಾತ್ಸಾಯನ ಬರೆದ ಕಾಮಸೂತ್ರ, ಖಜುರಾಹೊ ದೇವಾಲಯಗಳ ಕಾಮಶಿಲ್ಪ ನೆನಪಾಗುತ್ತವೆ.ಲೈಂಗಿಕ ಚಿತ್ರಣವಿದ್ದ ಪಿಂಗಾಣಿ ಹೂಜಿ-ಪಾತ್ರೆಗಳೆಲ್ಲ ಬಳಕೆಯಲ್ಲಿದ್ದ, ಬಳಸಬಹುದಾದಂತಹ, ದ್ರವಪದಾರ್ಥವನ್ನು ಸುರಿಯಲು ಬಳಸುತ್ತಿದ್ದಂತಹ ಪಾತ್ರೆಗಳು. ಮಾನವ ದೇಹದ ರಂಧ್ರಗಳಿಂದ ದ್ರವ ಹೊರಹರಿಯುವಂತೆ ತೋರಿಸುವ ಆಕಾರಗಳಿವೆ. ಎರಡು ಶಿಶ್ನಗಳನ್ನು ದ್ರವ ಸುರಿವ ದಾರಿಯಾಗಿ ಆಚೀಚೆ ಹೊಂದಿರುವ ಪಾತ್ರೆಯಿದೆ. ಬಹುಪಾಲು ಪಿಂಗಾಣಿ ಪಾತ್ರೆಗಳಲ್ಲಿ ಗುದ ಸಂಭೋಗ ಹಾಗೂ ಮುಖಸಂಭೋಗಗಳು ಚಿತ್ರಿಸಲ್ಪಟ್ಟಿವೆ! ಮನುಷ್ಯರ ಲೈಂಗಿಕ ರಂಧ್ರಗಳನ್ನು, ಅಂಗಾಂಗಗಳನ್ನು ಸ್ಪಷ್ಟವಾಗಿ, ಕೊಂಚ ಉತ್ಪ್ರೇಕ್ಷಿಸಿ ಕೆತ್ತಲಾಗಿದೆ. ಗುದಸಂಭೋಗ ಗಂಡುಗಂಡುಗಳ ನಡುವೆ ಅಷ್ಟೇ ಅಲ್ಲ, ಗಂಡುಹೆಣ್ಣುಗಳ ನಡುವೆಯೂ ಇದೆ! ಯೋನಿ ಸಂಭೋಗ ಚಿತ್ರಣ ಇಲ್ಲವೆನ್ನುವಷ್ಟು ಕಡಿಮೆ. ಮಗು ಮೊಲೆ ಹಾಲು ಕುಡಿಯುತ್ತಿರುವಾಗ ದಂಪತಿಗಳು ಗುದ ಸಂಭೋಗದಲ್ಲಿ ತೊಡಗಿರುವ ಚಿತ್ರ, ಹೆರಿಗೆಯಾಗುತ್ತಿರುವ ಶಿಲ್ಪ, ಹಸ್ತಮೈಥುನದಲ್ಲಿ ತೊಡಗಿರುವ ಗಂಡು ಮತ್ತು ಅವನಿಗೆ ಸಹಕರಿಸುತ್ತಿರುವ ಹೆಣ್ಣು ಶಿಲ್ಪಗಳೂ ಇವೆ. ಅತಿಯಾಗಿ ತೆರೆದುಕೊಂಡ ಲೈಂಗಿಕ ರಂಧ್ರಗಳು ಹಾಗೂ ಅವುಗಳಿಂದ ಸೋರುವ ದ್ರವ ಇರುವವರು ಲೈಂಗಿಕ ಗುಲಾಮರು. ಕುರಿಜಾತಿಯ ಹೆಣ್ಣು ಇಲ್ಲಮಾ ಪ್ರಾಣಿಯನ್ನು ಕುರಿಗಾಹಿ ಸಂಭೋಗಿಸುತ್ತಿರುವ, ಮಹಿಳೆಯನ್ನು ಪಶು, ಮನುಷ್ಯ ಮಿಶ್ರಿತ ವಿಚಿತ್ರ ಜೀವಿಯೊಂದು ಸಂಭೋಗಿಸುತ್ತಿರುವ ದೃಶ್ಯವೂ ಇದೆ.

ಫ್ರೇ ಡೊಮಿಂಗೊ ಡಿ ಸ್ಯಾಂಟೊ ಟಾಮಾಸ್ ಎಂಬ ಸ್ಪೇನಿನ ಪಾದ್ರಿ ಕ್ರಿ. ಶ. ೧೫೬೦ರಲ್ಲಿ ಟ್ರುಜಿಲೊಗೆ ಬಂದಾಗ ಎಲ್ಲಿ ನೋಡಿದರಲ್ಲಿ ಕಾಣುವ ಸಲಿಂಗರತಿಯ ಶಿಲ್ಪಗಳು; ಹೆಣ್ಣಿನಂತೆ ಅಲಂಕರಿಸಿಕೊಂಡು ವರ್ತಿಸುವ ಗಂಡುಗಳ ನೋಡಿ ಹೇವರಿಕೆ ವ್ಯಕ್ತಪಡಿಸುತ್ತ ಅವರ ದೇಹದಲ್ಲಿ ಸೈತಾನ ನೆಲೆಸಿದ್ದಾನೆಂದು ಹೇಳಿದ್ದ. ಸಲಿಂಗಕಾಮ ಕೆಲ ಆಂಡಿಯನ್ ಸಮುದಾಯಗಳಲ್ಲಿ ಸಂಪೂರ್ಣ ಒಪ್ಪಿಗೆ ಪಡೆದಿದ್ದರೆ ಮತ್ತೆ ಕೆಲ ಸಮುದಾಯಗಳಲ್ಲಿ ಬಹಿಷ್ಕಾರಕ್ಕೀಡಾಗಿತ್ತು. ಮೊಚೆಗಳಂತೆ ಸಲಿಂಗಕಾಮ ಬಳಸುತ್ತಿದ್ದ ಬೇರೆ ಕುಲಗಳೂ ಅಲ್ಲಿದ್ದವು. ಸಲಿಂಗರತಿ ಇಂಕಾಗಳಿಂದ ನಿಷೇಧಕ್ಕೊಳಗಾಗಿತ್ತು. ಆದರೆ ಇಂಕಾಪೂರ್ವ ಚಿಂಚಾ ಕುಲ ಸಲಿಂಗಕಾಮ ಬಳಸುತ್ತಿತ್ತು. ಎಂದೇ ಇಂಕಾಗಳು ಯಾವುದೇ ಸಲಿಂಗರತಿಯ ಕುರುಹು-ನೆನಪು ತನ್ನ ಪ್ರಜೆಗಳಿಗೆ ಉಳಿಯಬಾರದೆಂದು ಚಿಂಚಾಗಳನ್ನು ಗೆದ್ದ ಕೂಡಲೇ ಅವರನ್ನು ಜೀವಂತ ಸುಟ್ಟು ಹಾಕಿದರು. ಅವರ ಮನೆ ಕೆಡವಿ; ಹೊಲಗದ್ದೆಗಳ ಗಿಡಮರಗಳನ್ನು ಬುಡಮೇಲಾಗಿಸಿ ಅತ್ಯಂತ ಕ್ರೂರವಾಗಿ ಸಮುದಾಯವನ್ನೇ ನಾಶಮಾಡಿದರು.

ಇವತ್ತಿಗೂ ಯೋನಿಯೇತರ ಸಂಭೋಗ ಹಾಗೂ ಸಲಿಂಗಕಾಮ ಅನೈಸರ್ಗಿಕ ಕ್ರಿಯೆ ಎಂದು ಬಹುಪಾಲು ಸಾಂಸ್ಥಿಕ ಧರ್ಮಗಳು, ದೇಶದ ಕಾನೂನುಗಳು ನಿಷೇಧ ಹೇರಿವೆ. ಅಂತಹ ಲೈಂಗಿಕತೆಯ ಫಲಿತಾಂಶವಾಗಿ ಸಂತಾನೋತ್ಪತ್ತಿ ಆಗದಿರುವುದರಿಂದ ಅದು ಅನೈಸರ್ಗಿಕ ಹಾಗೂ ನಿಷಿದ್ಧ ಎನ್ನುವುದು ಅವರ ವ್ಯಾಖ್ಯಾನ. ಹಾಗಾದರೆ ಮೊಚೆಗಳ ಲೈಂಗಿಕ ರೂಢಿ ಯಾಕೆ ಈ ರೀತಿ ಇತ್ತು? ಅವನ್ನು ಪಿಂಗಾಣಿ ಕಲೆಯಲ್ಲಿ ಏಕೆ ಸೃಷ್ಟಿಸಲಾಯಿತು ಎನ್ನುವುದು ಅಧ್ಯಯನಕ್ಕೊಳಗಾಯಿತು. ಮೆಲನೇಷಿಯಾ, ಟೊಬ್ರಿಯಾಂಡ್ ದ್ವೀಪ ವಾಸಿಗಳಲ್ಲಿ ಸಮಾಜಶಾಸ್ತ್ರಜ್ಞ ಮೆಲಿನೋವ್ಸ್ಕಿ ನಡೆಸಿದ ಅಧ್ಯಯನ, ಇವತ್ತಿಗೂ ಆ ದ್ವೀಪಗಳಲ್ಲಿರುವ ಕೆಲ ಆಚರಣೆ, ನಂಬಿಕೆಗಳನ್ನು ಇದರೊಟ್ಟಿಗೆ ಇಟ್ಟು ಅಧ್ಯಯನಗಳು ನಡೆದವು.ಸಲಿಂಗಕಾಮ ಒಪ್ಪಿತವಾಗಿದ್ದ ಆದಿಮ ಕುಲಗಳು ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಎರಡೂ ಬೇರೆಬೇರೆ ಎಂದು ನಂಬಿರಬಹುದು. ಸಂತಾನೋತ್ಪತ್ತಿ ಎಂದರೆ ಕೆಲ ಚಣಗಳಲ್ಲಿ ವೀರ್ಯವನ್ನು ಯೋನಿಯೊಳ ಸ್ರವಿಸಿ ಮುಗಿಸಿಬಿಡುವ ಸರಳ ಆಚರಣೆಯಲ್ಲ; ಗುದ, ಮುಖ ಸಂಭೋಗಗಳೂ ಲೈಂಗಿಕತೆಯ ಒಂದು ಭಾಗ ಎಂದು ಭಾವಿಸಿದ್ದಿರಬಹುದು.

ಮೆಲನೇಷಿಯ ಮತ್ತು ಟೊಬ್ರಿಯಾಂಡ್ ವಾಸಿಗಳಲ್ಲಿ ಪ್ರಚಲಿತವಿರುವ ನಂಬಿಕೆಯೆಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಹಿರಿಯ ಗಂಡಸು ಕಿರಿಯ ಗಂಡು-ಹೆಣ್ಣುಗಳಿಗೆ ತನ್ನ ವೀರ್ಯವನ್ನು ಅವರ ರಂಧ್ರಗಳಲ್ಲಿ ಸೇರಿಸುವ ಮೂಲಕ ಉದ್ದೀಪಿಸಬೇಕು. ಎಂದೇ ಹಿರಿಯ ಗಂಡಸು ಕಿರಿಯ ಗಂಡಿನೊಡನೆ, ಆ ಕಿರಿಯ ಗಂಡು ತನ್ನ ಹೆಣ್ಣಿನೊಡನೆ ಕೇವಲ ಯೋನಿ ಮೂಲಕ ಮಾತ್ರವಲ್ಲದೆ ಇತರ ದೇಹದ್ವಾರಗಳ ಮೂಲಕವೂ ಸಂಭೋಗ ಕ್ರಿಯೆಯಲ್ಲಿ ತೊಡಗಬೇಕು. ಹೆಣ್ಣಿನ ಮೊಲೆಹಾಲು ಮತ್ತು ಗಂಡಿನ ವೀರ್ಯ ಇವೆರೆಡೂ ಸಂತಾನೋತ್ಪತ್ತಿ ದ್ರವಗಳು ಹಾಗೂ ಅವು ಅಮರ ದ್ರವಗಳು ಎಂದೇ ಅವರು ಭಾವಿಸುತ್ತಾರೆ. ಗಂಡುಹೆಣ್ಣೆನ್ನದೆ ಎಲ್ಲ ಮಕ್ಕಳು ಮೊಲೆಹಾಲು ಸೇವಿಸುವಂತೆ ವೀರ್ಯಸೇವನೆ ಕೂಡ ಚಾಲ್ತಿಯಲ್ಲಿತ್ತು.

ಇಂಕಾಗಳ ಕಾಲದಲ್ಲಿ ಬಸುರಿಯೊಡನೆ ಹಾಗೂ ಎರಡು ವರ್ಷದೊಳಗಿನ ಎದೆಹಾಲು ಕುಡಿವ ಮಗುವಿನ ತಾಯಿಯೊಡನೆ ಯೋನಿಸಂಪರ್ಕ ಶಿಕ್ಷಾರ್ಹವಾಗಿದ್ದುದನ್ನು ಗಮನಸಿದರೆ ಯೋನಿಯೇತರ ಸಂಭೋಗ ಮತ್ತು ಸಲಿಂಗಕಾಮ ಕುಟುಂಬ ಯೋಜನಾ ವಿಧಾನವೂ ಆಗಿರಬಹುದು ಎನಿಸುತ್ತದೆ.

ಇಂತಹ ಲೈಂಗಿಕತೆಯನ್ನು ಕಲೆಯಲ್ಲಿ ಮೂಡಿಸಿದ ಉದ್ದೇಶ ಬಹುಶಃ ಮನರಂಜನೆ ಮತ್ತು ಲೈಂಗಿಕ ಶಿಕ್ಷಣ ಎರಡೂ ಆಗಿರಬಹುದು. ಅಥವಾ ಸೃಷ್ಟಿ, ಲೈಂಗಿಕತೆಯ ಆನಂದ, ರೀತಿನೀತಿಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಲಿಪಿಯಿರದ ಸಮುದಾಯ ಕಲೆಯ ಮಾರ್ಗ ಬಳಸಿರಬಹುದು.

ಈ ವಿವರಗಳನ್ನೆಲ್ಲ ಓದಿ ಶಿಷ್ಟ, ಮಡಿವಂತ ಮನಸುಗಳು ಮುಜುಗರ ಅನುಭವಿಸಬಹುದು. ವೀರ್ಯಶಕ್ತಿ ಕುರಿತು ಮೊಚೆಗಳಿಗೆ ಮೂಢನಂಬಿಕೆಯಿತ್ತು; ಅವರ ಲೈಂಗಿಕತೆ ವಿಕೃತವಾಗಿತ್ತು ಎಂದು ಒಂದೇ ಸಾಲಿನ ತೀರ್ಪು ನೀಡಬಹುದು. ಆದರೆ ವೈಜ್ಞಾನಿಕ ಆವಿಷ್ಕಾರಗಳಿರದ ಕಾಲದಲ್ಲಿ ಯುದ್ಧ, ಸೇನೆ, ಸಾವುಗಳ ನಡುವೆಯೇ ಮನರಂಜನೆ, ಕುಟುಂಬ ಯೋಜನೆ ಎರಡನ್ನೂ ತೂಗಿಸಿಕೊಳ್ಳಲು ಅವರಿಗೆ ಏನು ಅನಿವಾರ್ಯವಾಗಿತ್ತೋ ನಾವು ಹೇಗೆ ನಿರ್ಧರಿಸುವುದು? ಅದು ಸುಲಭವಲ್ಲ, ಸಾಧುವೂ ಅಲ್ಲ.

ಹಠಾತ್ ನಿರ್ಗಮನ

ಇಷ್ಟು ಸುಸಂಸ್ಕೃತ ಕುಲಕ್ಕೆ ಆಮೇಲೇನಾಯಿತು? ಏಕೆ ನಾಶವಾಯಿತು? ಇದು ವರ್ಷಗಟ್ಟಲೆ ದಕ್ಷಿಣ ಅಮೆರಿಕದ ಅತಿದೊಡ್ಡ ಪುರಾತತ್ವಶಾಸ್ತ್ರ ಒಗಟಾಗಿತ್ತು. ಈಗದಕ್ಕೆ ಉತ್ತರ ಸಿಗತೊಡಗಿದೆ.

ಕ್ರಿ. ಶ. ೫೩೬-೫೯೪ರ ಅವಧಿಯಲ್ಲಿ ಸಂಭವಿಸಿದ ಆಂಡೀಸ್ ‘ಸೂಪರ್ ಎಲ್‌ನಿನೊ ಫಿನಾಮೆನನ್’ ಅವರ ನಾಶಕ್ಕೆ ಕಾರಣವಾಯಿತು ಎನ್ನಲಾಗಿದೆ. ೩೦ ವರ್ಷ ಅತಿ ಮಳೆ, ನಂತರ ೩೦ ವರ್ಷ ಮಳೆಯೇ ಇಲ್ಲದ ಅತಿದುರ್ಭರ ಬರಗಾಲ ತಂದೊಡ್ಡಿದ ಮಹಾನ್ ವಾತಾವರಣ ಬದಲಾವಣೆಗೆ ಇಡೀ ಮೊಚೆ ಸಮಾಜ ಛಿದ್ರಗೊಂಡಿತು. ಎಷ್ಟು ಪ್ರಾಣಿಬಲಿ, ನರಬಲಿ ಕೊಟ್ಟರೂ ಕಡಿಮೆಯಾಗದ ನಿರಂತರ ಪ್ರವಾಹ, ದಶಕಗಟ್ಟಲೆ ಪ್ರತಿಕೂಲ ಕೃಷಿ ಪರಿಸ್ಥಿತಿಯಿಂದ ಆಹಾರ ಕೊರತೆ ಎದುರಾಯಿತು. ೩೦ ವರ್ಷ ಸುರಿದ ಮಳೆ ಕಡಿಮೆಯಾಯಿತು ಎನ್ನುವಾಗ ಭೀಕರ ಬರಗಾಲ ಶುರುವಾಗಿ ಸಮಾಜದಲ್ಲಿ ಕ್ಷೋಭೆ, ಅಶಾಂತಿ, ದಂಗೆ, ಲೂಟಿ ಮತ್ತಿತರ ಸಮಸ್ಯೆಗಳು ಉದ್ಭವಿಸಿದವು. ಸಂಪನ್ಮೂಲ, ಆಹಾರದ ಪೈಪೋಟಿಯಿಂದ ಸಂಭವಿಸಿದ ನಾಗರಿಕ ಯುದ್ಧದಲ್ಲಿ ಹಾಗೂ ಹಸಿವಿನಲ್ಲಿ ಬಹುಪಾಲು ಜನ ನಾಶವಾದರು. ಆದರೂ ಕ್ರಿ. ಶ. ೬೫೦ರವರೆಗೂ ಅವರ ಇರುವಿಕೆ ಇತ್ತೆಂದು ಅವಶೇಷಗಳು ತಿಳಿಸುತ್ತವೆ. ಬರಬರುತ್ತ ಗ್ರಾಮಗಳು ನಾಶವಾದವು. ಕೃಷಿ ನಾಶವಾಯಿತು. ಮೊಚೆ ಸಮುದಾಯ ನಗರೀಕರಣಗೊಂಡಿತು.

ಪ್ರಕೃತಿ ಅವರಿಗೆ ಸುಧಾರಿಸಿಕೊಳ್ಳಲಾಗದ ಹೊಡೆತ ಕೊಟ್ಟಿತು. ಇದರಿಂದ ಪ್ರಕೃತಿ ಆರಾಧಕರಾಗಿದ್ದ ಅವರ ನಂಬಿಕೆ ಛಿದ್ರವಾಯಿತು. ಬದುಕಿನ ಔನ್ನತ್ಯ ಕುರಿತ ಆಸಕ್ತಿ, ಕುತೂಹಲ, ಆಸೆ ಅಳಿಸಿಹೋಯಿತು. ಆಚೀಚಿನ ನಾಡುಗಳಿಗೆ ವಲಸೆ ಹೋದರು. ಆದರೆ ಹಾಗೆ ಹೋದಲ್ಲಿ ಆ ಮೊದಲೇ ನೆಲೆಯಾಗಿದ್ದ ಕುಲಗಳಿಂದ ಭೀಕರ ದಾಳಿಗೊಳಗಾಗಿ ಅಳಿದುಳಿದ ಜನರೂ ನಾಶವಾದರು. ಕೆಲವರು ಪಕ್ಕದ ವಿರು, ರೆಕ್ವಾಯ್‌ಗಳೊಂದಿಗೆ ಕಾದಾಡಿ ಆ ಕುಲಗಳೊಡನೆ ಲೀನವಾದರು.

ಮೊಚೆಗಳ ಮುನ್ನ ವಿರುಗಳಿದ್ದರು. ಮೊಚೆಗಳ ನಂತರ ಹ್ವಾರಿ, ಟಿವನಾಕು, ನಜಕಾ, ಲೀಮಾ ಸಂಸ್ಕೃತಿಗಳು ಬಾಳಿದವು. ಅವರ ನಂತರ ಚಿಮುಗಳು ಬಂದರು. ಆಮೇಲೆ ಅವರನ್ನೆಲ್ಲ ಸೋಲಿಸಿ ಇಂಕಾಗಳು ಬಂದರು. ಆಮೇಲೆ ಅವರನ್ನೂ ಸೋಲಿಸಿ ವಸಾಹತುಶಾಹಿ ಸ್ಪೇನ್ ಬಂತು. ಈಗ ಪೆರುವಿಗರ ತಲೆಮೇಲೆ ಜಾಗತಿಕ ದೊಡ್ಡಣ್ಣ ಕೂತಿದ್ದಾನೆ..

ಇದರಲ್ಲಿ ಯಾರು ಗೆದ್ದವರು? ಯಾರು ಸೋತವರು? ಯಾರು ಆಕ್ರಮಿಸಿದವರು? ಯಾರು ಆಕ್ರಮಿಸಲ್ಪಟ್ಟವರು? ಕೇಳಬಾರದ ಈ ಪ್ರಶ್ನೆಗಳ ವಿಶೇಷವೇನೆಂದರೆ ಅವಕ್ಕೆ ಉತ್ತರ ಇಲ್ಲವೆನ್ನುವುದು.


(ಚಿತ್ರಗಳು ಅಂತರ್ಜಾಲದಿಂದ)

No comments:

Post a Comment