Wednesday, 29 June 2016

ಅರ್ಜೆಂಟೀನಾ ನೆಲದಲ್ಲಿ ಚೆ ಹುಡುಕುತ್ತಾ..ಜೂನ್ ೧೪ ಅರ್ಜೆಂಟೀನಾದ ಕ್ರಾಂತಿಕಾರಿ ಅರ್ನೆಸ್ಟೊ ಚೆ ಗೆವಾರ ಹುಟ್ಟಿದ ದಿನ. ವೈದ್ಯಕೀಯ ಕಲಿತು ಕ್ರಾಂತಿಕಾರಿಯಾದ, ಕಾವ್ಯಪ್ರೇಮಿಯಾಗಿದ್ದ ಚೆ ಬದಲಾವಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದವ. ಅವನ ಬದ್ಧತೆ, ವಿಸ್ತೃತ ಓದು ಮತ್ತು ಸೈದ್ಧಾಂತಿಕ ಸ್ಪಷ್ಟತೆ ಕ್ರಾಂತಿಕಾರಿಗಳಲ್ಲೂ ಅಪರೂಪದ ಗುಣಗಳಾಗಿವೆ. ‘ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ’ ಎಂದ ಚೆಗೆವಾರ ಸಮಾನತೆಗಾಗಿ ತುಡಿವ ಹೋರಾಟಗಾರರ ಕಣ್ಮಣಿ. ಕೇವಲ ೩೯ ವರ್ಷ ಬದುಕಿದ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮೀರಿದ್ದ ಆ ತರುಣನನ್ನು ಜಗತ್ತಿನ ಹಲವು ದೇಶಗಳು ‘ಇವ ನಮ್ಮವ’ ಅಂದುಕೊಂಡಿವೆ. ಭಾಷೆ, ದೇಶ ಗಡಿ ದಾಟಿ ಅವನು ಚಿರಂತನನಾಗಿದ್ದಾನೆ. ಅವ ಕ್ಯೂಬಾದಲ್ಲಿ ಮನೆ ಮಾತು. ಆ ದೇಶದ ಜನಪದ ಹೀರೋ. ನಾವೂ ಅಷ್ಟೇ, ಚೆಗೆವಾರನನ್ನು ನಮ್ಮವನನ್ನಾಗಿಸಿಕೊಂಡುಬಿಟ್ಟಿದ್ದೇವೆ.

ಇಂಥ ಕ್ರಾಂತಿಕಾರಿಯ ನೆಲದಲ್ಲಿ ಇವತ್ತು ಅವನ, ಅವನು ಪ್ರತಿನಿಧಿಸುತ್ತಿದ್ದ ಕಮ್ಯುನಿಸಮ್ಮಿನ ಪ್ರಭಾವ ಎಂಥದು? ಅವರು ಅವನನ್ನೂ, ಅವನಂಥ ಇತರ ದೇಶದ ಕ್ರಾಂತಿಕಾರಿಗಳನ್ನೂ ಹೇಗೆ ಅರಗಿಸಿಕೊಂಡಿದ್ದಾರೆ ಎಂಬ ಕುತೂಹಲವಿತ್ತು. ಮೂರು ತಿಂಗಳ ಹಿಂದೆ ದಕ್ಷಿಣ ಅಮೆರಿಕಾಗೆ ಪ್ರವಾಸ ಹೋಗಿ ಬರಲು ಅದೂ ಒಂದು ಕಾರಣವಾಗಿತ್ತು. ಚೆ ಹುಟ್ಟಿದ ನೆಲ ನೋಡಬೇಕೆಂದು, ಅವನ ನೆಲದಲ್ಲಿ ಅವನ ಕಾಣಬೇಕೆಂದು ಹೋಗಿಬಂದದ್ದು ವಿಶಿಷ್ಟ ಅನುಭವ.

ಅರ್ಜೆಂಟೀನಾಗೆ ಹೋಗಬೇಕೆಂದಾಗ ಕೇಳಿಬಂದ ಮೊದಲ ಪ್ರಶ್ನೆ, ‘ನಿಮ್ಮ ಬಳಿ ಉತ್ತರ ಅಮೆರಿಕದ ವೀಸಾ ಇದೆಯೆ?’. ಇಲ್ಲ, ನಮ್ಮ ಬಳಿ ಇರಲಿಲ್ಲ. ‘ಉತ್ತರ ಅಮೆರಿಕದಲ್ಲಿ ಬಂಧುಗಳಿದ್ದರೆ ಅಲ್ಲಿಂದ ಹೋಗಬಹುದು. ಇಲ್ಲವಾದರೆ ಯಾರ‍್ಯಾರು ಹೋಗುತ್ತಿರುವಿರೋ ಅವರೆಲ್ಲ ಒಟ್ಟಿಗೆ ದೆಹಲಿಗೆ ಹೋಗಿ ವೈಯಕ್ತಿಕ ಸಂದರ್ಶನ ಎದುರಿಸಿ ವೀಸಾ ಪಡೆಯಬೇಕು’ ಎಂಬ ಸೂಚನೆ ಟ್ರಾವೆಲ್ ಏಜೆಂಟ್ ಕಡೆಯಿಂದ ಬಂತು. ಯಾವ ಅಮೆರಿಕವನ್ನು ಚೆ ಎದುರು ಹಾಕಿಕೊಂಡನೋ, ಯಾವ ಅಮೆರಿಕದ ಹುನ್ನಾರದ ಫಲವಾಗಿ ಚೆ ಹತ್ಯೆಯಾಯಿತೊ, ಯಾವ ಅಮೆರಿಕ ಚೆ ನಂಬಿದ ಸಮಾಜವಾದವನ್ನು ಬುಡಮೇಲು ಮಾಡುವ ಜಾಗತೀಕರಣವನ್ನು ಪ್ರತಿಪಾದಿಸುತ್ತಿದೆಯೊ - ಅಂಥ ಅಮೆರಿಕದ ವೀಸಾ ಇದ್ದರೆ ಚೆ ದೇಶಕ್ಕೆ ವೀಸಾವೇ ಬೇಡ!

ಕಾಲಚಕ್ರ ಹೀಗೆ, ಇಷ್ಟು ಉಲ್ಟಾ ತಿರುಗಬಹುದೆ?


ಜನವರಿ ಮೊದಲ ವಾರ. ಒಂದು ಬುಧವಾರ ಮಧ್ಯಾಹ್ನ ಮೂರಕ್ಕೆ ನಮ್ಮ ದಾಖಲೆ ಪರಿಶೀಲಿಸಿದ ಅವರು ದೆಹಲಿಯಿಂದ ಫೋನ್ ಕರೆ ಮಾಡಿ ಸಂದರ್ಶನಕ್ಕೆ ಬನ್ನಿ ಎಂದರು. ವೀಸಾ ಉಚಿತ, ಆದರೆ ಸಂದರ್ಶನಕ್ಕೆ ಖುದ್ದು ಹೋಗಿಬರಲೇಬೇಕು.  ಯಾವತ್ತು ಬರುವುದು ಎಂದರೆ ನಾಳೆ ಅಥವಾ ನಾಳಿದ್ದು ಬನ್ನಿ ಎಂಬ ಉತ್ತರ ಸಿಕ್ಕಿತು. ಅಯ್ಯೋ, ಅದಾಗಲೇ ಮಧ್ಯಾಹ್ನ ಮೂರು ಗಂಟೆ ಆಗಿದೆ. ಕರ್ನಾಟಕದ ಪಶ್ಚಿಮ ಕರಾವಳಿ ಹಳ್ಳಿಯಿಂದ ಇಬ್ಬರು, ಬೆಳಗಾವಿಯಿಂದ ಇಬ್ಬರು ಕೂಡಲೇ ಹೊರಟು ನಾಳೆ ಬೆಳಿಗ್ಗೆ ೧೦.೩೦ರ ಒಳಗೆ ದೆಹಲಿ ತಲುಪುವುದು ಹೇಗೆ? ನಮ್ಮ ಹಾಗೂ ಮಕ್ಕಳ ಪರೀಕ್ಷೆ ಷೆಡ್ಯೂಲು ಎಂಬಿತ್ಯಾದಿ ಅನಾನುಕೂಲಗಳ ಹೇಳಿಕೊಂಡು ಅಪಾಯಿಂಟ್‌ಮೆಂಟ್ ನಾಳೆಗೆ ಫಿಕ್ಸ್ ಮಾಡಿಬಿಡಿ, ಬರುವುದು ಐದ್ಹತ್ತು ನಿಮಿಷ ಹಿಂದೆ ಮುಂದೆ ಆದರೂ ಖಂಡಿತಾ ಬರುತ್ತೇವೆ ಎಂದೆವು. ಸಂದರ್ಶನದ ವೇಳೆ ೧೦.೩೦ರಿಂದ ೧೧.೩೦. ಒಂದು ನಿಮಿಷ ತಡವಾದರೂ ಸಂದರ್ಶನ ಮರುದಿನಕ್ಕೆ ಮುಂದೆ ಹೋಗುತ್ತದೆ. ಬೆಳಿಗ್ಗೆ ಸರಿಯಾಗಿ ೧೦.೩೦ಕ್ಕೆ ಅಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟು ಜನರ ಸಂದರ್ಶನ ಮಾತ್ರ. ಅದೂ ಒಂದು ತಾಸು ಮಾತ್ರ ಎಂದರು. ಎಲ ಎಲಾ, ನಮ್ಮ ಅರಾಜಕ ಚೆ ಇಷ್ಟು ಶಿಸ್ತುಗಾರ ದೇಶದವನೆ?

ಏನು ಮಾಡುವುದು? ಧಡಧಡ ಹೊರಟೆವು. ರಾತ್ರೋರಾತ್ರಿ ಪಯಣಿಸಿ, ಬೆಳ್ಳಂಬೆಳಗ್ಗೆ ಬೆಂಗಳೂರು ಮುಟ್ಟಿ, ಮುಖತೊಳೆಯದೆ ಏರ್‌ಪೋರ್ಟ್ ತಲುಪಿ, ಅಲ್ಲಿಂದ ನವದೆಹಲಿ ತಲುಪಿ, ವಿಮಾನ ನಿಲ್ದಾಣದಿಂದ ಓಡೋಡಿ ಹೋಗುವ ಹೊತ್ತಿಗೆ ಸಮಯ ೧೨.೩೦ ಆಗೇಬಿಟ್ಟಿತು! ಅವತ್ತು ಗುರುವಾರ, ವೀಸಾ ಆಗದು. ಮರುದಿನ ಶುಕ್ರವಾರ ಬೆಳಿಗ್ಗೆ ೧೦.೩೦ರ ಒಳಗೇ ಹೋಗಿ, ಕಾದು ಪಡೆಯಲೇಬೇಕು. ಇಲ್ಲದಿದ್ದರೆ ಮತ್ತೆರೆಡು ದಿನ ಕಾಯಬೇಕು, ಏಕೆಂದರೆ ಅವರಿಗೆ ವಾರದಲ್ಲಿ ಐದೇ ದಿನ ಇರುವುದು!

ಈ ಧಾವಂತದಲ್ಲೇ ಒಂದು ದಿನ ದೆಹಲಿಯಲ್ಲಿ ತಂಗಬೇಕಾದ ಅನಿವಾರ್ಯತೆಗೆ ಮತ್ತೊಮ್ಮೆ ಮಿನಾರು-ಕೋಟೆ-ಚೌಕ-ಭವನ-ಸ್ಮಾರಕಗಳನ್ನೆಲ್ಲ ಸುತ್ತಿ ಬಂದದ್ದಾಯಿತು. ನಮ್ಮಲ್ಲೆ ನೋಡುವುದು ಎಷ್ಟೆಲ್ಲ ಬಾಕಿಯಿದೆ, ವೀಸಾಗೇ ಇಷ್ಟು ಕಷ್ಟಪಟ್ಟು ಅಷ್ಟು ದೂರ ಹೋಗಬೇಕೆ ಎಂಬ ಭಾವವೂ ಸುಳಿದುಹೋಯಿತು.

ಮರುದಿನ ಬೆಳಿಗ್ಗೆ ದೆಹಲಿಯ ಚಳಿ ಲೆಕ್ಕಿಸದೆ ಮುಂಚೆಯೇ ಹೋಗಿ ಕಾನ್ಸುಲೇಟ್ ಎದುರು ನಿಂತೆವು. ಸಂದರ್ಶನ ೧೦.೩೦ಕ್ಕೆ ಶುರು. ಮೊದಲೇ ಹೋಗಿದ್ದರೇನು, ಗೇಟಿನ ಹೊರಗೇ ಕಾಯಿರಿ ಎಂದರು. ಚಳಿಯ ಬೆಳಿಗ್ಗೆ ಗೋಡೆಯಾಚೆ ಕಾಯುತ್ತಾ ನಿಂತೆವು. ನಮ್ಮಂತೆಯೇ ಹಿಂದಿನ ದಿನ ಬಂದು ಹೋದ ಬೇರೆಯವರೂ ಇದ್ದರು. ಅಲ್ಲಿ ಗೇಟ್ ಕೀಪರನಾಗಿದ್ದ ಭಾರತೀಯ ವ್ಯಕ್ತಿ ಅರ್ಜೆಂಟೀನಾದವರ ಶಿಸ್ತು, ಸಮಯಪಾಲನೆಗಳೆಲ್ಲ ತನ್ನ ಮೈಮೇಲೆ ಬಂದವರಂತೆ ಆಡುತ್ತಿದ್ದ. ಚಣಕ್ಕೊಮ್ಮೆ ವಾಚು ನೋಡಿಕೊಳ್ಳುತ್ತ ಸರಿಯಾಗಿ ೧೦.೨೯ಕ್ಕೆ ಲಾಗ್ ಬುಕ್ ತೆರೆದ. ೧೦.೩೦ಕ್ಕೆ ಬರೆಯಲು ಹಚ್ಚಿದ. ೧೦.೩೧ಕ್ಕೆ ಒಳಬಿಟ್ಟ. ಅವರು ಎಷ್ಟು ಸ್ಟ್ರಿಕ್ಟ್ ಎಂಬ ಬಗೆಗೆ ಹಲವಾರು ಕತೆಗಳ ಹೇಳಿದ. ಒಂದು ನಿಮಿಷ ಮೊದಲು ಅಥವಾ ತಡೆದು ಬಿಟ್ಟರೂ ಅವನ ಕೆಲಸ ಹೋಗುವುದಂತೆ!

ಕೊನೆಗಂತೂ ನಮ್ಮ ಸರದಿ ಬಂತು. ನಂನಮ್ಮ ಫೈಲುಗಳನ್ನಾಗಲೇ ಇಟ್ಟುಕೊಂಡು ಕೂತಿರಬಹುದಾದ ರಾಯಭಾರಿ ಏನೇನು ಪ್ರಶ್ನೆ ಕೇಳುವರೋ ಎಂಬ ಆತಂಕದಲ್ಲಿ ವಿಧೇಯ ವಿದ್ಯಾರ್ಥಿಗಳಂತೆ ಒಳಹೋದೆವು.

ಅರೆ, ಈಕೆ! ನಾವಲ್ಲಿ ಲಾಂಜಿನಲ್ಲಿ ಕುಳಿತು ಕಾಯುವಾಗ ಒಂದಡಿ ಎತ್ತರದ ಹೈಹೀಲ್ಸ್ ಚಪ್ಪಲಿ ಹಾಕಿದ ತರುಣಿ ಸ್ಕರ್ಟ್ ಕುಣಿಸುತ್ತ ಹತ್ತಾರು ಸಲ ಆಚೀಚೆ ಓಡಾಡಿದ್ದಳು. ಗಾಳಿ ಬಂದರೆ ಹಾರಿಹೋಗುವಷ್ಟು ಕೃಶವಾಗಿದ್ದ, ಹಾಲುಬಿಳಿ ಬಣ್ಣದ, ಪ್ಲಾಸ್ಟಿಕ್ ಹೂ ಮುಡಿದ ತರುಣಿ. ಅರ್ಜೆಂಟೀನಾ ರಾಯಭಾರ ಅಧಿಕಾರಿಯೇ ಈಕೆ?!

ನಾವಿಬ್ಬರು ಆಕೆಯೆದುರು ಕುಳಿತೆವು. ನಮ್ಮ ಫೈಲ್ ನೋಡಿದಳು. ಅಬ್ಬಬ್ಬಾ ಎಂದರೂ ಹತ್ತಿಪ್ಪತ್ತು ಗ್ರಾಂ ಮಾಂಸವಿರದ ಮೊಗದಲ್ಲಿ ನಗು ತುಂಬಿ ಹರಿಯಿತು. ಕುತ್ತಿಗೆ ವಾರೆ ಮಾಡಿ, ಹುಬ್ಬು ಎತ್ತರಿಸಿ, ಕಣ್ಣರಳಿಸಿ, ಕೈಗಳೆರಡನೂ ಅಗಲಿಸಿ ಅವಳ ದೇಶಕ್ಕೆ ನಾವು ಹೋಗುತ್ತಿರುವುದಕ್ಕೆ ಸ್ವಾಗತಿಸುತ್ತ ವಂದನೆ, ಅಭಿನಂದನೆ ಎರಡನ್ನೂ ತಿಳಿಸಿದಳು.

‘ಯಾಕೆ ಹೋಗುತ್ತಿದ್ದೀರಿ ದಕ್ಷಿಣ ಅಮೆರಿಕಾಗೆ? ಅರ್ಜೆಂಟೀನಾಗೆ? ಯಾರು ಸ್ಪಾನ್ಸರ್ ಮಾಡುತ್ತಿರುವವರು?’

‘ಸ್ಪಾನ್ಸರ್?! ದಕ್ಷಿಣ ಅಮೆರಿಕಕ್ಕೆ ಹೋಗುವ ಯೋಜನೆಗೆ ಎಷ್ಟು ದಿನದಿಂದ ಕಾಸು ಕೂಡಿಡುತ್ತಿದ್ದೇವೆ ಗೊತ್ತ? ಡ್ರಗ್ ಕಂಪನಿಗಳು ಡಾಕ್ಟರುಗಳನ್ನು ಪುಕ್ಕಟೆ ಕಳಿಸುವೆವೆಂಬ ಆಮಿಷ ಒಡ್ಡುವುದು ನಿಜ. ಆದರೆ ನಾವವರನ್ನೆಲ್ಲ ಎಂದೋ ದೂರ ಓಡಿಸಿದ್ದೇವೆ..’ ಎಂದು ಮನದಲ್ಲೇ ಅಂದುಕೊಂಡೆವು.

ಹೋಗಲು ನಮಗಿದ್ದ ಕಾರಣ ಹೇಳಿದೆವು. ಅವು ಮೂರೇ: ಚೆ, ನೆರೂಡ ಮತ್ತು ಮಚುಪಿಚು. ಚೆ ಹೆಸರು ಕೇಳಿ ಅವಳ ಪುಟ್ಟ ಕಣ್ಣು ಅರಳಿದರೂ ಅವನ ಬಗೆಗೆ ತಾನು ಹೆಚ್ಚು ತಿಳಿದಿಲ್ಲ ಎಂದಳು! ಅವನ ಪುಸ್ತಕವನ್ನು ನಾನು ನನ್ನ ಭಾಷೆಗೆ ಅನುವಾದಿಸಿರುವೆ ಎಂದು ಮೋಟಾರ್ ಸೈಕಲ್ ಡೈರೀಸ್ ಪುಸ್ತಕ ತೋರಿಸಿದಾಗ ಅವಳಿಗೆ ಪರಮಾಶ್ಚರ್ಯವಾಯಿತು. ಆಪ್ತವಾಗಿ ಮಾತನಾಡುತ್ತ ತನ್ನ ದೇಶದಲ್ಲಿ ಇನ್ನೂ ಒಂದು ದಿನ ಹೆಚ್ಚು ಕಳೆಯಿರಿ; ಬ್ಯೂನಸ್ ಐರಿಸ್ ನಗರದ ಬೀದಿಗಳಲ್ಲಿ ಅಡ್ಡಾಡಿರಿ; ಅಲ್ಲಿನ ನೈಟ್‌ಲೈಫ್ ಅದ್ಭುತ, ಒಳ್ಳೆಯ ಚರ್ಮದ ಸಾಮಾನು ಸಿಗುತ್ತವೆ ಎಂದಳು. ಇಗ್ವಾಸು ಜಲಪಾತದಲ್ಲಿ ನಿಮ್ಮ ಮೂರು ದಿನ ಹೋಗುತ್ತದೆ. ಅಲ್ಲಿ ಅಷ್ಟೇಕೆ ಸಮಯ? ಅದಕ್ಕಿಂತ ಬ್ಯೂನಸ್ ಐರಿಸ್‌ನಲ್ಲಿಯೇ ಇನ್ನೊಂದು ದಿನ ಹೆಚ್ಚು ಕಳೆಯಲು ಏರ್ಪಾಟು ಮಾಡಿಕೊಳ್ಳಿ ಎಂದಳು. ತನ್ನ ದೇಶದಲ್ಲಿ ಅಲ್ಲಿಯ ಕರೆನ್ಸಿ ಮಾತ್ರ ನಡೆಯುವುದು, ಹಾಗಾಗಿ ಒಳ್ಳೆಯ ದರಕ್ಕೆ ಏರ್‌ಪೋರ್ಟಿನಲ್ಲೇ ಎಕ್ಸ್‌ಚೇಂಜ್ ಮಾಡಿಕೊಂಡುಬಿಡಿ ಎಂದಳು.

ನಾವು ಹ್ಞಾಂ ಹ್ಞೂಂ ಎನ್ನುವುದರಲ್ಲಿ ನಮ್ಮ ಸಂದರ್ಶನ ಮುಗಿಯಿತು. ಈ ಸಂದರ್ಶನ ಯಾಕೆ ಆನ್‌ಲೈನ್ ಮಾಡಬಾರದು ಎಂಬ ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೇಳೇಬಿಟ್ಟೆವು. ‘ನಾವು ವೀಸಾ ಉಚಿತವಾಗಿ ನೀಡುತ್ತೇವೆ. ಆದರೆ ನಮ್ಮ ದೇಶಕ್ಕೆ ಹೋಗಿ ಬರುವವರೊಂದಿಗೆ ಮುಖತಃ ಪರಿಚಯ-ಬಾಂಧವ್ಯ ಹೊಂದಬಯಸುತ್ತೇವೆ. ಅದಕ್ಕೇ ಸಂದರ್ಶನ. ಈಗ ನೋಡಿ: ನೌ ಐ ನೋ ಎ ವಂಡರ್‌ಫುಲ್ ಫ್ಯಾಮಿಲಿ ಇನ್ ಇಂಡಿಯಾ. ಒಳ್ಳೆಯದಲ್ಲವೆ?’ ಎಂದು ಹುಬ್ಬು ಹಾರಿಸಿದಳು.

ನಂತರ ಮಕ್ಕಳ ಸಂದರ್ಶನ ಪ್ರತ್ಯೇಕವಾಗಿತ್ತು. ಅವರಿಗೂ ಅದೇ ಸಲಹೆ. ಅವರು ವೈದ್ಯ ವಿದ್ಯಾರ್ಥಿಗಳೆಂದು ತಿಳಿದು ಮತ್ತಷ್ಟು ಆಸಕ್ತಳಾಗಿ ಎಲ್ಲೆಲ್ಲಿ ಏನೇನು ನೋಡಬೇಕು, ಯಾವ ವಸ್ತು ಎಲ್ಲಿ ಖರೀದಿಸಬೇಕು ಎಂಬ ಯಾದಿಯನ್ನೇ ಬರೆದು ಕಳಿಸಿದಳು.

ಬೆಣ್ಣೆಯಿಂದ ಕೂದಲು ತೆಗೆದಿಟ್ಟಷ್ಟು ಸುಲಭವಾಗಿ ಉಚಿತ ವೀಸಾ ಸಿಕ್ಕಿತು. ಹತ್ತೇಹತ್ತು ನಿಮಿಷದ ಕೆಲಸ. ಇಷ್ಟಕ್ಕೆ ಮೂರು ದಿನಗಳ ತತ್‌ಕ್ಷಣ ರಜೆ, ಅವಸರದ ಏರ್ ಟಿಕೆಟ್, ಧಾವಂತ..

ವಿಚಿತ್ರ, ಆದರೆ ವಾಸ್ತವ. ಏಕೆಂದರೆ ಅದು ಅರ್ಜೆಂಟೀನಾ!


ನನ್ನ ಮಟ್ಟಿಗೆ ಅರ್ಜೆಂಟೀನಾ ಎಂದರೆ ಚೆ ಹೊರತಾದ ಕಲ್ಪನೆ ಗರಿಗೆದರುವುದೇ ಇಲ್ಲ. ಅಲ್ಲಿ ಅವನ ನೆನಪು ಇವತ್ತು ಹೇಗಿದೆಯೋ ಎಂಬ ಕುತೂಹಲ ಬಹಳವಿತ್ತು. ಭಾರತದಲ್ಲಿ ಗಾಂಧಿ, ನೆಹರು, ಭಗತ್, ಅಂಬೇಡ್ಕರ್ ಇದ್ದಂತೆ ಅಲ್ಲಿಯೂ ಅವನ ಹೆಸರಿನ ಸರ್ಕಲ್ಲು, ಸ್ಕ್ವೇರು, ಅಂಗಡಿ, ಥಿಯೇಟರು, ಇನ್ನೂ ಏನೇನೋ ಇರಬಹುದು. ಎಲ್ಲರ ತೋಳು, ಟೀ ಶರ್ಟ್, ಚಹಾ ಕಪ್ಪಿನ ಮೇಲೆ ಚೆ ಇರಬಹುದು.. ಎಂದೆಲ್ಲ ಊಹಿಸಿದ್ದೆ.

ಬ್ಯೂನಸ್ ಐರಿಸ್ ತಿರುಗಲು ಹೊರಟಾಗ ಸುಂದರ ಕಟ್ಟಡಗಳು, ಸ್ಕ್ವೇರ್‌ಗಳು, ಮೆಮೊರಿಯಲ್‌ಗಳು ಹಾದು ಹೋದವು. ಅರ್ಜೆಂಟೀನಾವನ್ನು ಸ್ವಾತಂತ್ರ್ಯಗೊಳಿಸಿದ ಸ್ಯಾನ್ ಮಾರ್ಟಿನ್, ರಾಷ್ಟ್ರಾಧ್ಯಕ್ಷರು-ನಗರ ನಿರ್ಮಾತೃಗಳು-ಸೇನಾಧಿಕಾರಿಗಳು ಮತ್ತಿತರರ ನೆನಪಿನ ಚೌಕ, ಪ್ರತಿಮೆಗಳಿದ್ದವು. ಎಲ್ಲಾದರೂ ಕಂಡಾನೇ ಚೆಗೆವಾರ ಎನ್ನುವುದು ನನ್ನ ನಿರೀಕ್ಷೆ. ಆದರೆ ಒಂದಿಡೀ ದಿನ ಬ್ಯೂನಸ್ ಐರಿಸ್ ಸುತ್ತಿದರೂ ಅವನ ಸುಳಿವಿಲ್ಲ! ಎಲ್ಲ ದೇಶಗಳೂ ತಮ್ಮ ಖ್ಯಾತನಾಮರನ್ನು ಒಂದೇರೀತಿ ನಡೆಸಿಕೊಳ್ಳಲಾರರು ಅಂದುಕೊಂಡರೂ ಈಗ ಅಮೆರಿಕದ ಹೆಗಲ ಮೇಲೆ ಕೈಯಿಕ್ಕಿಕೊಂಡಿರುವ ಅರ್ಜೆಂಟೀನಾ ತನ್ನ ಅಮೆರಿಕ ವಿರೋಧಿ ಮಗನನ್ನು ಮರೆಯಬಯಸುತ್ತಿದೆಯೆ? ಗಡಿ ಮರೆತು ವಿಶ್ವವೇ ನನ್ನದೆಂದವನನ್ನು ಅವನದೇ ದೇಶ ಮರೆತೇಬಿಟ್ಟಿತೆ? ಎಂಬ ಅನುಮಾನ ಕಾಡಿತು.

ಇಡೀ ದಕ್ಷಿಣ ಅಮೆರಿಕದ ಇತಿಹಾಸ, ರಾಷ್ಟ್ರಗಳ ಉದಯ-ಸ್ವತಂತ್ರ ಮುಂತಾದ ವಿಷಯಗಳ ಬಗೆಗೆ ಉರು ಹೊಡೆದುಬಂದದ್ದನ್ನು ಗೈಡ್ ಒಪ್ಪಿಸುತ್ತಿದ್ದಳು. ವಿಶ್ವದ ಅತಿದೊಡ್ಡ ಫುಟ್ಪಾತ್ ಮಾರ್ಕೆಟ್ ಎನಿಸಿಕೊಂಡಿರುವ ಫ್ಲೋರಿಡಾ ಸ್ಟ್ರೀಟ್‌ನಲ್ಲಿ ಪಾದಗಳು ಬಿಸಿಯೇರುತ್ತಿದ್ದವು. ರಾಯಭಾರ ಕಚೇರಿಯ ಕೃಶಾಂಗಿಯ ಮಾತಿಗೆ ವಿರುದ್ಧವಾಗಿ ವ್ಯಾಪಾರಿಗಳೆಲ್ಲರೂ ಅಮೆರಿಕನ್ ಡಾಲರ್ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ‘ಒಳ್ಳೆಯ ರೇಟು ಕೊಡುತ್ತೇವೆ, ಎಕ್ಸ್‌ಚೇಂಜ್ ಬೇಕಾ?’ ಎಂದು ಹೆಜ್ಜೆಹೆಜ್ಜೆಗೂ ಏಜೆಂಟುಗಳು ದುಂಬಾಲು ಬಿದ್ದು ಹಿಂಬಾಲಿಸುತ್ತಿದ್ದರು. ಚರ್ಮದ ವಸ್ತುಗಳ ಬೃಹತ್ ಮಳಿಗೆಗಳ ಸಾಲೇ ಇದ್ದ ಒಂದು ಕೂಡುರಸ್ತೆಯಲ್ಲಿ ಕೇಸರಿ ವಸ್ತ್ರ ತೊಟ್ಟ ಒಂದಷ್ಟು ಜನ ಸಾಲಾಗಿ ಪೋಸ್ಟರ್ ಹಿಡಿದು ನಿಂತಿದ್ದರು. ಸ್ಪ್ಯಾನಿಶ್‌ನ ಆ ಪೋಸ್ಟರಿನಲ್ಲಿ ಪ್ರಾಣಿಹಿಂಸೆಯಿಂದ ತಯಾರಾಗುವ ಚರ್ಮದ ವಸ್ತುಗಳನ್ನು ಕೊಳ್ಳಬಾರದೆಂಬ ಮನವಿ ಇತ್ತು!

ಹೀಗೆ ಬ್ಯೂನಸ್ ಐರಿಸ್ ನಗರವನ್ನು ಉಸಿರಲ್ಲಿ ತುಂಬಿಕೊಳ್ಳುತ್ತ ನಡೆಯುತ್ತಿರುವಾಗ ಒಂದು ಸೊವೆನಿರ್ ಶಾಪಿನ ಪೋಸ್ಟ್ ಕಾರ್ಡಿನಲ್ಲಿ ಚೆಗೆವಾರನ ಮುಖ ಕಾಣಿಸಿಯೇ ಬಿಟ್ಟಿತು. ಗೈಡ್‌ಗೆ ಅದನ್ನು ತೋರಿಸಿ ಚೆಗೆವಾರ ಎಂಬ ದೇಶಬಾಂಧವನ ಕುರಿತ ಅವಳ ಅಭಿಪ್ರಾಯ ಏನೆಂದು ಕೇಳಿದೆ. ಅವನ ಬಗೆಗೆ ತನಗೆ ಹೆಚ್ಚು ತಿಳಿದಿಲ್ಲ ಎಂದಳು. ಅವ ಮೋಟಾರ್ ಸೈಕಲ್ ಡೈರೀಸ್ ಎಂಬ ಪುಸ್ತಕ ಬರೆದಿರುವನೆಂದು, ಅದು ಸಿನಿಮಾ ಆಗಿದೆಯೆಂದು ಅವಳಿಗೆ ಗೊತ್ತಿರಲಿಲ್ಲ. ಚೆ ಎಂದರೆ ಒಂದು ಕಾಲದಲ್ಲಿ ತನ್ನ ದೇಶದಲ್ಲಿ ಬದುಕಿದ ಒಬ್ಬ, ಇವರು ಅವನ ಭಯಂಕರ ಫ್ಯಾನುಗಳು ಎನ್ನುವಂತೆ ಕೆಲ ವಿಷಯ ಹೇಳಿದಳು. ಚೆ ಮಗ ಕ್ಯಾಮಿಲೊ ಗೆವಾರಾ ಮತ್ತು ಕುಟುಂಬ ಈಗ ಕ್ಯೂಬಾದಲ್ಲಿದ್ದಾರೆ. ಕಾರ್ಡೋಬಾದ ಅಲ್ಟಾಗ್ರಾಸಿಯಾದ ಅವನ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಅಲ್ಲಿ ಅವನ ಬಾಲ್ಯ ಕಾಲದ ಪತ್ರ, ಫೊಟೋ, ವಸ್ತುಗಳಿವೆ ಎಂದು ಅಸ್ಪಷ್ಟವಾಗಿ ತಿಳಿಸಿದಳು. ಎಲ್ಲೊ ಕೆಲ ಪ್ರವಾಸಿಗಳಷ್ಟೇ ಕಾರ್ಡೋಬಾಗೆ ಹೋಗುತ್ತಾರೆಂದು ಹೇಳುತ್ತ, ‘ಐ ನೋ ಹಿ ವಾಸ್ ಎ ರೆವಲ್ಯೂಷನರಿ ಅಂಡ್ ಗ್ರೇಟ್, ಬಟ್ ದಟ್ಸ್ ಇಟ್. ಇಟ್ ವಾಸ್ ಅಟ್ ದಟ್ ಟೈಂ. ಇಟ್ ವಾಸ್ ಫಾರ್ ಹಿಸ್ ಟೈಂ. ಈ ಹ್ಯಾವ್ ನೋ ಮೋರ್ ಟು ಸೆ ಅಬೌಟ್ ಹಿಮ್ ನೌ’ ಎಂದುಬಿಟ್ಟಳು.

ಅವಳೆಂದಂತೆ ಚೆ ಅಲ್ಲೀಗ ದೂರದ ನೆನಪು..ಅವಳು ಹೀಗೆ ಹೇಳುತ್ತಿರುವಾಗಲೇ ಮದರ‍್ಸ್ ಸ್ಕ್ವೇರ್ - ಪ್ಲಾಜಾ ಡಿ ಮೇಯೊ ಬಂತು. ಅರ್ಜೆಂಟೀನಾದಲ್ಲಿ ಮಿಲಿಟರಿ ಆಡಳಿತವಿದ್ದಾಗ ಆಳುವವರಿಂದ ಅಪಹರಿಸಲ್ಪಟ್ಟು ಹತ್ಯೆಯಾದ, ‘ನಾಪತ್ತೆ’ಯಾದ ೩೦ ಸಾವಿರ ತರುಣ-ತರುಣಿಯರ ಅಮ್ಮಂದಿರು ಪ್ರತಿ ಗುರುವಾರ ಅಲ್ಲಿ ಸೇರಿ ತಮ್ಮ ಮಕ್ಕಳಿಗೇನಾಯಿತೆಂದು ಪ್ರಶ್ನಿಸಿದ ಜಾಗ ಅದು. ಇವತ್ತಿಗೂ ಆ ಸ್ಥಳ ವಿಶ್ವದ ಎಲ್ಲ ಕಡೆ ನಡೆಯುವ ಮಾನವ ಹಕ್ಕು ದಮನವನ್ನು ವಿರೋಧಿಸುವ ಪ್ರತಿಭಟನಾ ಸ್ಥಳವಾಗಿದೆ. ಅಲ್ಲಿಳಿದ ಕೂಡಲೇ ಚೆ ಇರುವ ಒಂದು ದೊಡ್ಡ ಪೋಸ್ಟರ್ ಕಾಣಿಸಿತು. ಅದು ಟುಪಾಕ್ ಅಮಾರು ಸಂಘಟನೆಯ ಬ್ಯಾನರ್. ಅವರಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲೇ ಆಚೆ ಕ್ಯಾಮರಾಮನ್ ಜೊತೆ ಒಂದಷ್ಟು ಜನ ಮಾತಾಡುತ್ತಿದ್ದರು. ಕರಪತ್ರ, ಬ್ಯಾನರುಗಳಿದ್ದವು. ಪ್ರತಿಭಟನಾ ನಿರತರ ಮುಖ್ಯ ಬೇಡಿಕೆ ತಮ್ಮ ಸಂಘಟನೆಯ ಮಹಿಳೆ ಮಿಲಾಗ್ರೊ ಸಾಲಾ ಅವರನ್ನು ಬಿಡುಗಡೆ ಮಾಡಬೇಕೆನ್ನುವುದು.

ಯಾರು ಮಿಲಾಗ್ರೊ ಸಾಲಾ?

ಆಕೆ ಅರ್ಜೆಂಟೀನಾದ ಫೂಲನ್ ದೇವಿ. ಟುಪಾಕ್ ಅಮಾರು ಸಂಘಟನೆಯ ಮುಂದಾಳು. ಟುಪಾಕ್ ಅಮಾರು ಎನ್ನುವವ ಬಂಡುಕೋರ ಇಂಕಾ ನಾಯಕ. ಅವನು, ಚೆಗೆವಾರ ಹಾಗೂ ಅರ್ಜೆಂಟೀನಾ ರಾಜಕಾರಣಿ ಇವಾ ಪೆರೋನ್ ಟುಪಾಕ್ ಅಮಾರು ನೇಬರ್‌ಹುಡ್ ಆರ್ಗನೈಸೇಷನ್‌ನ ಆದರ್ಶಗಳು!

ಈ ಆದಿವಾಸಿ ಮಹಿಳೆ ಜೊಜೊಯ್ ಕಾರ್ಮಿಕ ಸಂಘದ ಒಡನಾಡಿ. ೫೧ ವರ್ಷ ವಯಸ್ಸಿನ ಈ ನಾಯಕಿಯ ಸಂಘಟನೆ ಒಂದು ಸರ್ಕಾರೇತರ ಸಂಸ್ಥೆ. ಅದು ವಾರ್ಷಿಕ ೨೦೦ ಮಿಲಿಯನ್ ಪೆಸೊ (೫೦ ಮಿಲಿಯನ್ ಅಮೆರಿಕನ್ ಡಾಲರ್) ಬಜೆಟು ನಿರ್ವಹಿಸುತ್ತದೆ. ೪೦ ವಾಹನಗಳನ್ನು ಹೊಂದಿದ್ದು ಪ್ರತಿ ತಿಂಗಳು ೧.೯ ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಸರ್ಕಾರದಿಂದ ಬಡವರ ವಸತಿ ಯೋಜನೆಗೆಂದು ಪಡೆಯುತ್ತದೆ. ಸಂಘಟನೆ ನಡೆಸುವ ಕಟ್ಟಡ ಸಾಮಗ್ರಿ, ಡೈ, ಉಪಕರಣಗಳ ತಯಾರಿಸುವ ಕಾರ್ಖಾನೆಯಿದ್ದು ಅದರಲ್ಲಿ ಐದು ಸಾವಿರ ಕಾರ್ಮಿಕರು ದುಡಿಯುತ್ತಾರೆ. ಸಂಘಟನೆಯ ಎರಡು ಶಾಲೆಗಳಿವೆ. ಎಂಆರ್‌ಐ ಸ್ಕ್ಯಾನರ್ ಮತ್ತಿತರ ಸೌಲಭ್ಯಗಳಿರುವ ಆಸ್ಪತ್ರೆಯನ್ನೂ ಅದು ನಡೆಸುತ್ತದೆ.

ಸಂಘಟನೆಯ ಜನಪ್ರಿಯತೆ ಸಹಿಸಲಾರದೆ ಮೂಲನಿವಾಸಿ ಸಮುದಾಯದ ತಮ್ಮ ನಾಯಕಿಯ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಬಂಧಿಸಿದ್ದಾರೆ ಎಂದು ಬಿಡುಗಡೆಗಾಗಿ ಒತ್ತಾಯಿಸುವವರು ಡ್ರಂ ಬಡಿದು ಕೂಗಿ ಹೇಳುತ್ತಿದ್ದರು.

ಪ್ರತಿಭಟನಾ ನಿರತರ ತಾರಕದ ಘೋಷಣೆಗಳಲ್ಲಿ, ಪ್ರತಿಭಟನೆಯ ತಾಣವೇ ಆಗಿಬಿಟ್ಟಿರುವ ಆ ಸರ್ಕಲಿನಲ್ಲಿ ಚೆಯ ಚದುರಿದ ನೆರಳು ಕಾಣಿಸಿದಂತಾಯಿತು..

***

ಅರ್ಜೆಂಟೀನಾದಲ್ಲಿ ಎಡಪಂಥೀಯ ಹಾಗೂ ಸಾಂಪ್ರದಾಯಿಕ ಶಕ್ತಿಗಳ ನಡುವೆ, ಟ್ರೇಡ್ ಯೂನಿಯನ್ ಹಾಗೂ ಎಡಪಂಥೀಯ ಗೆರಿಲ್ಲಾಗಳ ನಡುವೆ ಸಂಘರ್ಷದ ದೀರ್ಘ ಚರಿತ್ರೆಯೇ ಇದೆ. ಪೆರೋನ್ ಎಂಬ ಜನಪ್ರಿಯ ನಾಯಕನ ಆಳ್ವಿಕೆ, ಟ್ರೇಡ್ ಯೂನಿಯನ್-ಗೆರಿಲ್ಲಾ ಸಂಘಟನೆಗಳ ನಡುವಿನ ಕದನ, ಮಿಲಿಟರಿ ಆಡಳಿತ, ಪೆರೋನ್ ಹೆಂಡತಿಯ ಎಡಬಿಡಂಗಿ ಸಮಯಸಾಧಕ ರಾಜಕಾರಣ, ೧೯೭೩ರ ಆಂಟಿ ಕಮ್ಯುನಿಸ್ಟ್ ಅಲಿಯನ್ಸ್ - ಹೀಗೇ ಅಲ್ಲಿ ಎಡ-ಅತಿ ಎಡ-ಮಿಲಿಟರಿಗಳ ನಡುವಿನ ದೀರ್ಘ ಜಟಾಪಟಿ ನಡೆದಿದೆ. ಕೊನೆಗೆ ೨೦೧೫ರಲ್ಲಿ ಜನರು ಕ್ರಿಶ್ಚಿಯನ್ ಡೆಮೋಕ್ರೆಟಿಕ್ ಪಕ್ಷದ ಮಾರಿಶಿಯೊ ಮಾಕ್ರಿ ಅವರನ್ನು ಅಧ್ಯಕ್ಷರಾಗಿ ಚುನಾಯಿಸಿದ್ದಾರೆ. ಇಲ್ಲಿ ಭಗತನ ನೆಲ ಭಾರತದಲ್ಲಿ ಹಿಂದೂತ್ವ ರಾಜಕಾರಣ ವಿಜೃಂಭಿಸುತ್ತಿರುವಂತೆ ಅಲ್ಲಿ ಚೆಗೆವಾರನ ದೇಶದಲ್ಲಿ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ಆಳ್ವಿಕೆ ಬಂದಿದೆ. ಕ್ಯಾಥೊಲಿಕ್ ಚರ್ಚಿನ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಬ್ಯೂನಸ್ ಐರಿಸ್‌ನವರೆ ಆಗಿದ್ದಾರೆ. ಒಂದು ಶತಮಾನ ಎಡಪಂಥೀಯ ಚಳುವಳಿ, ದಂಗೆ, ಯುದ್ಧ ನಡೆದ ದೇಶವಿಂದು ಬಲಪಂಥೀಯ ಆಳ್ವಿಕೆಗೊಳಪಟ್ಟಿದೆ. ೧೯೧೬ರ ನಂತರ ಆಯ್ಕೆಯಾದ ಮೊದಲ ಎಡ ಅಲ್ಲದ, ಪೆರೋನಿಸ್ಟ್ ಅಲ್ಲದ ಅಧ್ಯಕ್ಷರು ಇವರು.

ಅಂದಹಾಗೆ ನಮ್ಮ ಗೈಡ್ ಸೇರಿದಂತೆ ಭೇಟಿಯಾದ ಬಹುಪಾಲು ಸಾಮಾನ್ಯ ಜನರು ಇವತ್ತಿನ ಅಧ್ಯಕ್ಷರ ಪಕ್ಷದ ಬೆಂಬಲಿಗರೇ ಆಗಿದ್ದರು. ಅವರು ಬಂದಮೇಲೆ ನಿರುದ್ಯೋಗ ಪ್ರಮಾಣ ಇಳಿದಿದೆಯೆಂದೂ, ‘ಅಭಿವೃದ್ಧಿ’ ಆಗುತ್ತಿದೆಯೆಂದೂ, ಹೊಸ ಬೃಹತ್ ಉದ್ಯಮ-ಕಾರ್ಖಾನೆಗಳು ಶುರುವಾಗುತ್ತಿವೆಯೆಂದೂ ಹೇಳಿದರು.

ಭೂಗ್ರಹದ ಮೇಲ್ಮೈ ಲಕ್ಷಣವೇ ಹಾಗಿದೆ, ಋತುಗಳು ಬದಲಾಗುತ್ತಲೇ ಇರುತ್ತವೆ. ಆಯಾ ಋತುವಿಗೆ ತಕ್ಕ ಹಾಗೆ ಮನುಷ್ಯರೂ ಒಗ್ಗಿಕೊಳ್ಳತೊಡಗುತ್ತಾರೆ..


ಬ್ಯೂನಸ್ ಐರಿಸ್‌ನಲ್ಲೊಂದು ಆಧುನಿಕ ಇಂಜಿನಿಯರಿಂಗ್ ವಿಸ್ಮಯಯವಿದೆ. ಅದೊಂದು ವಿದ್ಯುತ್ ಉಪಕರಣ. ೨೦೦೨ರಲ್ಲಿ ನಿಲಿಸಿದ ಲೋಹದ ಹೂವು. ಎಡ್ವರ್ಡೊ ಕೆಟಲಾನೊ ಎಂಬ ಅರ್ಜೆಂಟೀನಾದ ವಾಸ್ತುಶಿಲ್ಪಿ ವಿನ್ಯಾಸ ಮಾಡಿರುವ ಅಲ್ಯುಮಿನಿಯಂ ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟ ಆರು ದಳ ಇರುವ ೨೩ ಅಡಿ ಎತ್ತರದ ಹೂವು. ವಾರೆಯಾಗಿ ಕೂರಿಸಲಾಗಿದ್ದು ಆಗಸ ನೋಡುವಂತೆ ನಿಂತಿದೆ. ಬೆಳಿಗ್ಗೆ ಸರಿಯಾಗಿ ಎಂಟಕ್ಕೆ ಅರಳತೊಡಗುತ್ತದೆ. ಸೂರ್ಯ ಮುಳುಗುವ ಹೊತ್ತಿಗೆ ಮತ್ತೆ ಮುಚ್ಚಿಕೊಳ್ಳುತ್ತದೆ. ಬಲವಾದ ಗಾಳಿ ಬೀಸಿದರೂ ಮುದುಡುತ್ತದೆ. ರಾತ್ರಿ ಅದರ ಮಧ್ಯದಿಂದ ಕೆಂಪು ಪ್ರಭೆ ಹೊರಡುತ್ತದೆ. ರಾಷ್ಟ್ರೀಯ ದಿನಾಚರಣೆಗಳಾದ ಮೇ ೨೫, ಸೆಪ್ಟೆಂಬರ್ ೨೧, ಡಿಸೆಂಬರ್ ೨೪, ಡಿಸೆಂಬರ್ ೩೧ರ ರಾತ್ರಿ ಅದರ ದಳ ಮುಚ್ಚುವುದಿಲ್ಲ. ಅರ್ಜೆಂಟೀನಾದ ಲಾಕ್ ಹೀಡ್ ಮಾರ್ಟಿನ್ ಎಂಬ ವಿಮಾನ ತಯಾರಿಕಾ ಕಂಪನಿ ಅದನ್ನು ತಯಾರಿಸಿದ್ದು ೨೫ ವರ್ಷ ಗ್ಯಾರಂಟಿ ನೀಡಿದೆ.

ಇತ್ತೀಚಿನ ದಶಕಗಳಲ್ಲಿ ದಕ್ಷಿಣ ಅಮೆರಿಕಾದಲ್ಲಿ ತಲೆಯೆತ್ತುವ ಕಮ್ಯುನಿಸಂ ಮತ್ತು ಧಾರ್ಮಿಕ ಮೂಲಭೂತವಾದಿ ರಾಜಕಾರಣಗಳ ಜುಗಲಬಂದಿ ನೋಡಿದರೆ ಪ್ಯಾನ್ ಅಮೆರಿಕಾನಿಸಂ ಕಲ್ಪನೆ ಮತ್ತದನ್ನು ಹುಟ್ಟಿಸಿದ ಕಮ್ಯುನಿಸಂ ಸಿದ್ಧಾಂತವೂ ಸಹಾ ಈ ಲೋಹದ ಹೂವಿನ ಹಾಗೆಯೇ ಇರಬಹುದೆ ಎನಿಸುತ್ತದೆ.

ಅರಳುತ್ತದೆ, ಮುಚ್ಚುತ್ತದೆ. ಅರಳುತ್ತದೆ, ಮುಚ್ಚುತ್ತದೆ. ಆದರೆ ಮುಚ್ಚಿಕೊಂಡಿರುವಾಗಲೂ ಕೆಂಪುಪ್ರಭೆಯಿಂದ ದೀಪ್ತವಾಗಿರುತ್ತದೆ..No comments:

Post a Comment