ನ್ಯೂಜಿಲ್ಯಾಂಡ್ ದೇಶವನ್ನು, ಅದರಲ್ಲೂ ಮಿಲ್‌ಫೋರ್ಡ್ ಸೌಂಡನ್ನು ನೋಡಿದ ಮೇಲೆ ಬೇರೇನನ್ನಾದರೂ ನೋಡಬೇಕು ಎಂಬ ಹಂಬಲವೇ ಮರೆಯಾಗಿಹೋಯಿತು. ಅಷ್ಟು ಗಾಢವಾಗಿ ಕಣ್ಮನಗಳನ್ನು ತುಂಬಿಕೊಂಡಿರುವ ತಾವು ಅದು. ರುಡ್ಯಾರ್ಡ್ ಕಿಪ್ಲಿಂಗ್ ಎಂಟನೆಯ ಅದ್ಭುತ ಎಂದು ಕರೆದ ಈ ತಾಣವು ನ್ಯೂಜಿಲೆಂಡಿನ ದಕ್ಷಿಣ ದ್ವೀಪದ ನೈರುತ್ಯ ತೀರದಗುಂಟ ಹರಡಿಕೊಂಡಿದೆ. ಉನ್ನತವಾದ ದಕ್ಷಿಣ ಆಲ್ಪ್ಸ್ ಪರ್ವತ ಶ್ರೇಣಿಯ ಶಿಖರಗಳಿಂದ ಟಾಸ್ಮನ್ ಕಡಲನ್ನು ಸೇರುತ್ತಿದ್ದ ಹಿಮನದಿಗಳು ಕೋಟಿಗಟ್ಟಲೆ ವರ್ಷ ಚಲಿಸಿ ಆಳವಾದ, ವಿಸ್ತಾರವಾದ ಕಣಿವೆಗಳನ್ನು ರೂಪಿಸಿದವು. ಹಿಮಯುಗದ ಕೊನೆಗೆ ಕಣಿವೆಗಳಲ್ಲಿ ಕಡಲ ನೀರು ಒಳನುಗ್ಗಿ ‘ಫೋರ್ಡ್‌ಲ್ಯಾಂಡ್ ರೂಪುಗೊಂಡಿತು. ನ್ಯೂಜಿಲ್ಯಾಂಡ್ ದೇಶ ಅದನ್ನು ‘ಫೋರ್ಡ್‌ಲ್ಯಾಂಡ್ ನ್ಯಾಷನಲ್ ಪಾರ್ಕ್ ಎಂದು ಕರೆದಿದೆ. ಮನುಷ್ಯರೇ ಇರದ ರಮ್ಯ, ನಿರ್ಜನ ತಾಣದ ಹೃದಯ ಭಾಗದಲ್ಲಿರುವುದು ಮಿಲ್‌ಫೋರ್ಡ್ ಸೌಂಡ್. ಹೋಗಿಬಂದು ವರ್ಷಗಳೇ ಕಳೆದರೂ ಈಗಲೂ ಕಣ್ಮುಚ್ಚಿ ನೆನೆದರೆ ಅಲ್ಲಿನ ರಮ್ಯ ಪ್ರಕೃತಿ, ತಾಜಾ ಹವೆಯ ಆಹ್ಲಾದ, ಮೈ ಕೊರೆಯುವ ಹಿಮ, ಬಿರುಮಳೆ, ದುರ್ಗಮ ಕಾಡು, ಭಾರೀ ಪರ್ವತ ಸಾಲು, ಜಲಪಾತಗಳು ಮನಸ್ಸನ್ನು ಆವರಿಸಿ ಹಿತಾನುಭವ ನೀಡುತ್ತವೆ.
ವಿಸ್ತಾರವಾದ ಫೋರ್ಡ್‌ಲ್ಯಾಂಡ್ ಪ್ರದೇಶದಲ್ಲಿ ರಸ್ತೆಯ ಮೂಲಕ ಮನುಷ್ಯರು ತಲುಪಲು ಸಾಧ್ಯವಿರುವ ಏಕೈಕ ತಾಣ ಮಿಲ್‌ಫೋರ್ಡ್ ಸೌಂಡ್. ೨೫ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಅದು ನಿಜವಾಗಿ ಸೌಂಡ್ ಅಲ್ಲ. ನದಿ ಕಣಿವೆಯಲ್ಲಿ ಕಡಲ ನೀರು ನುಗ್ಗಿ ಆವರಿಸಿರುವುದು ಸೌಂಡ್. ಹಿಮನದಿ (ಗ್ಲೇಸಿಯರ್) ಕೊರೆದು ಮಾಡಿದ ಆಳ ಕಣಿವೆಗಳಲ್ಲಿ ಕಡಲ ನೀರು ಹೊಕ್ಕು ರೂಪುಗೊಂಡಿರುವುದು ಫೋರ್ಡ್. ೧೮೨೩ರಲ್ಲಿ ಮೊದಲು ಇಲ್ಲಿಗೆ ಬಂದವನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿದ್ದ ಸಮುದ್ರಯಾನ ಸಾಹಸಿ ಜಾನ್ ಗ್ರೋನೋ. ಇಂಗ್ಲೆಂಡಿನ ವೇಲ್ಸ್‌ನಲ್ಲಿರುವ ಪ್ರಾಕೃತಿಕ ಬಂದರು ಮಿಲ್‌ಫೋರ್ಡ್ ಹೆಸರನ್ನೇ ಇದಕ್ಕೂ ಇಟ್ಟು ಸೌಂಡ್ ಎಂದು ಅವನು ಕರೆದದ್ದು ಹಾಗೆಯೇ ಮುಂದುವರೆದಿದೆ.
ಮಾವೊರಿ ಭಾಷೆಯಲ್ಲಿ ಇರುವ ಕತೆಯೊಂದರ ಪ್ರಕಾರ ಮನುಷ್ಯ ಕುಲಕ್ಕೆ ಅಮರತ್ವ ದೊರಕಿಸಿಕೊಡಲು ಮೌಯಿ ಎಂಬ ಅವರ ಕುಲದ ವೀರನು ಈ ಪ್ರದೇಶಕ್ಕೆ ಏಕಾಂಗಿಯಾಗಿ ಬಂದ. ಆದರೆ ಹಿಂತಿರುಗಲಿಲ್ಲ. ಅವನ ಮರಣವನ್ನು ದುಃಖಿಸುತ್ತ ಪಿಯೊಪಿಯೊ ಹೆಸರಿನ ಹಕ್ಕಿ ಇಲ್ಲಿಗೆ ಹಾರಿ ಬಂದಿತಂತೆ. (ನ್ಯೂಜಿಲ್ಯಾಂಡಿನಲ್ಲಿ ಈಗ ಅದು ಅಳಿದ ಪಕ್ಷಿ.) ‘ಒಂದು ಪಿಯೊಪಿಯೊ ಎನ್ನುವ ಅರ್ಥದ ಪಿಯೊಪಿಯೊತಾಹಿ ಹೆಸರನ್ನೇ ಈ ತಾವಿಗೂ ಇಟ್ಟಿದ್ದಾರೆ. ಮೂಲನಿವಾಸಿ ಮಾವೊರಿಗಳಿಗೂ, ವಸಾಹತುಶಾಹಿ ಬ್ರಿಟಿಷರಿಗೂ ಈ ತಾವಿನ ಅಧಿಪತ್ಯಕ್ಕಾಗಿ ದೀರ್ಘ ಸಂಘರ್ಷ ನಡೆದಿದೆ. ೧೯೯೮ರಲ್ಲಿ ಆದ ವೈತಂಗಿ ಒಪ್ಪಂದದ ಬಳಿಕ ಹೆಸರನ್ನು ಮಿಲ್‌ಫೋರ್ಡ್ ಸೌಂಡ್ ಪಿಯೊಪಿಯೊತಾಹಿ ಎಂದು ಬದಲಿಸಲಾಗಿದೆ. ಅವು ಎರಡು ಹೆಸರುಗಳಲ್ಲ. ಅದಲುಬದಲು ಮಾಡಬಹುದಾದ ಹೆಸರುಗಳಲ್ಲ. ಪರ್ಯಾಯ ಹೆಸರುಗಳೂ ಅಲ್ಲ. ಅವೆರೆಡೂ ಸೇರಿ ಒಂದೇ ಹೆಸರಾಗಿದೆ.
ಎರಡು ಕಿಲೋಮೀಟರ್ ಅಗಲ, ೧೫ ಕಿಲೋಮೀಟರ್ ಉದ್ದ, ಸಾವಿರಾರು ಅಡಿ ಆಳದ ಕಣಿವೆ ತುಂಬಿದ ಜಲರಾಶಿ ಪಿಯೊಪಿಯೊತಾಹಿ. ೨೦ ಲಕ್ಷ ವರ್ಷ ಕಾಲ ಕಿಲೋಮೀಟರುಗಟ್ಟಲೆ ಅಗಲದ ಹಿಮನದಿಗಳು ದಕ್ಷಿಣ ಆಲ್ಪ್ಸ್ ಪರ್ವತಗಳಿಂದ ಕಡಲ ಕಡೆಗೆ ನಡೆದವು. ಭೂ ತಾಪಮಾನ ಏರುತ್ತ ಹೋದಂತೆ ಹಿಮ ಕರಗಿ ನಿಂತು ಭಾರೀ ಸರೋವರಗಳನ್ನೂ, ಫೋರ್ಡ್‌ಗಳನ್ನೂ ಸೃಷ್ಟಿಸಿತು. ಪರ್ವತಗಳಿಂದ ಇಳಿಯುತ್ತ ಹಿಮನದಿ ಹೊತ್ತು ತಂದ ಭಾರದ ಕಲ್ಲು-ಬಂಡೆಗಳ ರಾಶಿಯು ಟಾಸ್ಮನ್ ಕಡಲನ್ನು ಹಿಮನದಿಯು ಸೇರುವ ‘ಬಾಯಿಯ ಬಳಿ ಗುಡ್ಡೆ ಹಾಕಿತು. ಹಾಗಾಗಿ ಅಲ್ಲಿ ಸೌಂಡಿನ ಆಳ ೨೯ ಮೀಟರ್ ಇದ್ದರೆ ಉಳಿದೆಡೆ ೩೦೦, ೪೦೦ ಮೀಟರು (೧೩೧೨ ಅಡಿ)ಗಳವರೆಗೂ ಇದೆ. ಎಂದೇ ಕಡಲಿನೊಡನೆ ಸಂಪರ್ಕ ಹೊಂದಿದ್ದರೂ ಭರತ ಇಳಿತ ಸೌಂಡ್ ಅನ್ನು ಬಾಧಿಸುವುದಿಲ್ಲ. ನೀರು ಹೊಯ್ದಾಡುವುದಿಲ್ಲ.
ವರ್ಷವಿಡೀ ಬೀಳುವ ಮಳೆನೀರು ಹಾಗೂ ಫೋರ್ಡನ್ನು ಸೇರುವ ನದಿಗಳ ನೀರು ಮೇಲ್ಮೈನಿಂದ ಆರು ಮೀಟರ್ ಆಳದವರೆಗೆ ನೀರು ಸಿಹಿಯಿರುವಂತೆ ಮಾಡಿವೆ. ಕೆಳಗೆ ಕಡಲ ಉಪ್ಪು ನೀರು ಇದೆ. ಪರ್ವತ, ದಟ್ಟಕಾಡುಗಳನ್ನು ದಾಟಿ ಬರುವ ನೀರಿನಲ್ಲಿ ಟ್ಯಾನಿನ್ ಇದ್ದು ಫೋರ್ಡಿಗೆ ಕಪ್ಪು ಬಣ್ಣ ತಂದು ಕೊಟ್ಟಿದೆ.
ವರ್ಷಕ್ಕೆ ೬೪೧೨ ಮಿಮೀ (೨೫೨ ಇಂಚು) ಮಳೆ ಬೀಳುವ ಪಿಯೊಪಿಯೊತಾಹಿ ಅತಿ ಹೆಚ್ಚು ಮಳೆ ಬೀಳುವ ಮನುಷ್ಯರ ವಾಸಸ್ಥಳಗಳಲ್ಲಿ ಒಂದು. ಇದು ಕರಾವಳಿಯ ಮಳೆಯೂರು ನಮ್ಮ ಹೊನ್ನಾವರದಲ್ಲಿ ಆಗುವ ಮಳೆಗಿಂತ ಎರಡು ಪಟ್ಟು ಹೆಚ್ಚು. ಕೆಲವೊಮ್ಮೆ ಒಂದೇ ದಿನ ೨೫೦ ಮಿ.ಮೀ. (೧೦ ಇಂಚು) ಮಳೆ ಬೀಳುತ್ತದೆ. ಸೆಪ್ಟೆಂಬರಿನಿಂದ ಡಿಸೆಂಬರ್‌ವರೆಗೆ ಅತ್ಯಧಿಕ ಮಳೆಯಾಗುತ್ತದೆ. ವರ್ಷದ ಎಲ್ಲ ತಿಂಗಳಿನಲ್ಲೂ, ಸರಾಸರಿ ೧೮೨ ದಿನ ಮಳೆ ಬೀಳುತ್ತದೆ. ಈ ಮಳೆಯು ಕೋಡುಗಲ್ಲುಗಳ ತುದಿಯಿಂದ ಧುಮ್ಮಿಕ್ಕುವ ಅಸಂಖ್ಯ ಜಲಪಾತಗಳನ್ನು ಸೃಷ್ಟಿಸಿದೆ. ಸಣ್ಣಪುಟ್ಟ ನೀರಧಾರೆಗಳು ತಳ ಮುಟ್ಟದೇ ಗಾಳಿಯಲ್ಲಿ ಹನಿಹನಿಗಳಾಗಿ ಚದುರಿ ಹೋಗುವುದೂ ಕಾಣುತ್ತದೆ. ಅತಿ ಮಳೆಯ ಕಾರಣದಿಂದ ಭೂ ಕುಸಿತ ಸರ್ವೇ ಸಾಮಾನ್ಯ. ಒಂದುವೇಳೆ ಭೂಕಂಪದಿಂದ ಇಬ್ಬದಿಯ ಪರ್ವತಗಳು ಕುಸಿದು ನೀರಿಗೆ ಬಿದ್ದರೆ ಸುನಾಮಿ ಪರಿಣಾಮವುಂಟಾಗುವ ಸಾಧ್ಯತೆಯಿದೆ. ಸನಿಹದಲ್ಲೇ ಇರುವ ವೈಟ್ ಐಲ್ಯಾಂಡಿನ ಜೀವಂತ ಜ್ವಾಲಾಮುಖಿಯ ಸ್ಫೋಟ, ಭೂಕಂಪ ಮುಂತಾದ ಪ್ರಕೃತಿ ವಿಕೋಪದ ಸಾಧ್ಯತೆಗಳು ದಟ್ಟವಾಗಿವೆ. ಆದರೂ ಪ್ರತಿ ವರ್ಷ ಹತ್ತು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಅವಿಸ್ಮರಣೀಯ ಪಯಣ
ಮಿಲ್‌ಫೋರ್ಡ್ ಸೌಂಡ್‌ಗೆ ಹೋಗಲು ಪ್ರಾಚೀನ ದಾರಿಗಳಾವುವೂ ಇಲ್ಲ. ಅನಾದಿಯಿಂದ ಅದು ನಿರ್ಜನ ಪ್ರದೇಶವಾಗಿತ್ತು. ಈಗಲೂ ಜನವಸತಿಯಾಗಲೀ, ಹಳ್ಳಿಪಟ್ಟಣಗಳಾಗಲೀ ಇಲ್ಲದ ದುರ್ಗಮ ಪ್ರದೇಶವೇ ಆಗಿದೆ. ಅಲ್ಲಿಗೆ ಹೋಗಲು ರಸ್ತೆ ಮಾಡಿದ್ದೇ ಒಂದು ಸಾಹಸಗಾಥೆ. ಕಡಿದಾದ ಬಂಡೆಗಳ ಒಡೆದು, ಸುರಂಗ ಕೊರೆದು, ನದಿಗಳಿಗೆ ಸೇತುವೆ ಕಟ್ಟಿ, ಸರೋವರಗಳ ಬಳಸಿ ಅತ್ಯಂತ ಶ್ರಮದಾಯಕವಾದ, ಅಪಾಯಕರ ಸನ್ನಿವೇಶದಲ್ಲಿ ರಸ್ತೆ ಮಾಡುತ್ತ ಹೋಗಬೇಕಿತ್ತು. ಕ್ವೀನ್ಸ್‌ಟೌನಿನಿಂದ ೭೦ ಕಿಲೋಮೀಟರ್ ದೂರ ಇರುವ ಸೌಂಡಿಗೆ ೨೭೦ ಕಿಲೊಮೀಟರಿನ ಸುತ್ತುಬಳಸು ರಸ್ತೆ ಮಾಡಬೇಕಾಯಿತು. (ಕ್ವೀನ್ಸ್‌ಟೌನಿನಿಂದ ಹೆಲಿಕಾಪ್ಟರ್‌ನಲ್ಲಿ ಮುಕ್ಕಾಲುಗಂಟೆಯಲ್ಲಿ ತಲುಪಬಹುದು.)
ನಾವು ಕ್ವೀನ್ಸ್‌ಟೌನಿನಲ್ಲಿ ತಂಗಿದ್ದೆವು. ದಕ್ಷಿಣ ಧ್ರುವ ಹತ್ತಿರ ಇರುವ ಕಾರಣವಾಗಿ ಇಡಿಯ ನ್ಯೂಜಿಲ್ಯಾಂಡ್ ತಂಪು ಹವೆ ಹೊಂದಿದೆ. ಕ್ವೀನ್ಸ್‌ಟೌನಿನಲ್ಲಿ ಮಳೆ ಮತ್ತು ಹಿಮ ಎರಡೂ ಸೇರಿ ಇನ್ನೂ ಹೆಚ್ಚು ಚಳಿ ಅನುಭವಕ್ಕೆ ಬರುತ್ತದೆ. ನಾವು ಹೋದ ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿ ಬೆಳಗಿನ ತಾಪಮಾನ ೨ ಡಿಗ್ರಿ ಸೆಂಟಿಗ್ರೇಡ್ ಇರುತ್ತಿತ್ತು! ವಾಕಾಟಿಪು ಎಂಬ ಭಾರೀ ಸರೋವರದ ದಂಡೆಯಲ್ಲಿರುವ, ಹಿಮಾಚ್ಛಾದಿತ ಆಲ್ಪ್ಸ್ ಸೆರಗಿನಲ್ಲಿರುವ, ಸಾಹಸ ಕ್ರೀಡೆ ಮತ್ತು ಪ್ರವಾಸೋದ್ಯಮವೇ ಮೈದುಂಬಿಕೊಂಡ ಪ್ರವಾಸಿಗರ ಸ್ವರ್ಗ ಕ್ವೀನ್ಸ್‌ಟೌನ್. ಇಂಗ್ಲಿಷಿನ ಝಡ್ ಅಕ್ಷರದ ಆಕಾರದಲ್ಲಿರುವ, ೮೦ ಕಿಲೋಮೀಟರ್ ಉದ್ದ, ೫ ಕಿಲೋಮೀಟರ್ ಅಗಲದ, ಕೆಲವೆಡೆ ಒಂದೂವರೆ ಸಾವಿರ ಅಡಿ ಆಳವಿರುವಂಥ ವಾಕಾಟಿಪು ಸರೋವರದ ದಂಡೆಯ ಒಂದು ಭಾಗದಲ್ಲಿ ಕ್ವೀನ್ಸ್‌ಟೌನ್ ನಗರ ಹರಡಿಕೊಂಡಿದೆ.
ಬಹಳಷ್ಟು ಪ್ರವಾಸಿಗರು ಕ್ವೀನ್ಸ್‌ಟೌನಿನಿಂದ ಮಿಲ್‌ಫೋರ್ಡ್ ಸೌಂಡಿಗೆ ಹೋಗುತ್ತಾರೆ. ಅದು ನ್ಯೂಜಿಲೆಂಡಿನ ಅತ್ಯಂತ ಸುಂದರ, ಅತ್ಯಂತ ಅಪಾಯಕರ ರಸ್ತೆ. ಪಯಣ ಅವಿಸ್ಮರಣೀಯ. ಹೆಚ್ಚಿನವರು ಟೂರಿಸ್ಟ್ ಬಸ್ಸುಗಳಲ್ಲಿ ಹೋಗುತ್ತಾರೆ. ಬೈಕ್, ಕಾರುಗಳನ್ನು ತಾವೇ ಚಲಾಯಿಸಿಕೊಂಡು ಹೋಗಿ ನೋಡುವವರು; ಟ್ರೆಕಿಂಗ್ ಟ್ರ್ಯಾಕುಗಳಲ್ಲಿ ತಂಡವಾಗಿ ಪರ್ವತಗಳ ಹಾಯುತ್ತ ನಡೆದು ತಲುಪುವವರು; ನಡುನಡುವೆ ಸರೋವರಗಳನ್ನು ದೋಣಿಯಲ್ಲಿ ದಾಟಿ ಮುಟ್ಟುವವರು; ಹೆಲಿಕಾಪ್ಟರ್/ವಿಮಾನದಲ್ಲಿ ಹೋಗಿ ನೋಡುವವರೂ ಇದ್ದಾರೆ.
ನಾವು ಬೆಳಕು ಹರಿಯುವ ಮೊದಲೇ ಹೊರಟೆವು. ಸಮಯಕ್ಕೆ ಸರಿಯಾಗಿ ಬಂದು ನಿಂತ ಬಸ್ಸಿನೊಳಗೆ ಎಪ್ಪತ್ತು ದಾಟಿದ ಭಾರೀ ಆಳ್ತನದ ಹಿರಿಯರೊಬ್ಬರು ಬರಮಾಡಿಕೊಂಡರು. ಗೈಡ್ ಆಗಿ ಜೊತೆಯಾದ ಅವರು ಇತಿಹಾಸ, ಮಾನವಶಾಸ್ತ್ರ, ಜಿಯಾಲಜಿ, ಬಾಟನಿಗಳಲ್ಲೆಲ್ಲ ಅಪಾರ ತಿಳುವಳಿಕೆಯಿರುವ ನಿವೃತ್ತ ಪ್ರೊಫೆಸರರು ಎಂದು ನಂತರ ತಿಳಿಯಿತು. ೨೭೦ ಕಿಲೋಮೀಟರ್ ದೂರವನ್ನು ನಾಲ್ಕೂವರೆಯಿಂದ ಐದು ತಾಸು ಕ್ರಮಿಸಬೇಕು. ನಡುನಡುವೆ ಕಾಡಿನೊಳಹೊಕ್ಕು ಓಡಾಡಲು, ನದಿ ಪಕ್ಕ ನಡೆಯಲು, ಸುರಂಗದ ಬಳಿ ಕಾಯಲು ಒಂದಷ್ಟು ನಿಲುದಾಣಗಳಿವೆ. ರಭಸದ ಮಳೆ ಪಯಣವನ್ನು ನಿಧಾನಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಅದಕ್ಕೆಂದು ಪ್ರವಾಸದ ಆಯೋಜಕರು ೧೦-೧೫% ಹೆಚ್ಚುವರಿ ಸಮಯ ಇಟ್ಟಿರುತ್ತಾರೆ ಎಂದು ಗೈಡ್ ಹೇಳಿದರು.
ಕ್ವೀನ್ಸ್‌ಟೌನ್ ಬಿಟ್ಟು ಹೆಚ್ಚುಕಡಿಮೆ ಒಂದು ತಾಸು ಕಳೆಯುವವರೆಗೆ ವಾಕಾಟಿಪು ಸರೋವರ ನಮ್ಮೊಡನಿತ್ತು. ಒಂದೆಡೆ ಸರೋವರ, ಮತ್ತೊಂದೆಡೆ ಹಿಮಾಚ್ಛಾದಿತ ಆಲ್ಪ್ಸ್. ನಿಸರ್ಗದ ಸೊಬಗು ತುಂಬಿಕೊಳ್ಳಲು ಎರಡು ಕಣ್ಣು ಸಾಲವು. ಬಳಿಕ ಒಂದಲ್ಲ ಒಂದು ಸರೋವರ ಅಥವಾ ನದಿ ನಮ್ಮ ಜೊತೆಯಿದ್ದವು. ನೀರತಳ ಕಾಣುವ ಪಾರದರ್ಶಕ ಹರಿವು ನೋಡುತ್ತ ಆಹ್ಲಾದಕರ ಪಯಣ ಸಾಗಿತು.
ಒಂದಷ್ಟು ದೂರ ಕ್ರಮಿಸಿದ ಬಳಿಕ ಮಿರರ್ ಲೇಕ್ಸ್ ಇರುವ ತಾಣದಲ್ಲಿ ವಾಹನ ನಿಂತಿತು. ರಸ್ತೆಯ ಪಕ್ಕದಿಂದ ಹತ್ತು ನಿಮಿಷ ನಡೆದರೆ ಸರೋವರ ಕಾಣುತ್ತದೆ. ಅಲ್ಲಿ ಅಂತಹ ಹಲವು ಸರೋವರಗಳಿವೆ. ಅಲ್ಲಿನ ನೀರು ಎಷ್ಟು ತಿಳಿ, ನಿಶ್ಚಲ ಮತ್ತು ಶುದ್ಧ ಎಂದರೆ ಪರ್ವತ, ಆಗಸಗಳ ಪ್ರತಿಬಿಂಬ ಸ್ಪಷ್ಟವಾಗಿ ನೀರಿನಲ್ಲಿ ಕಾಣಿಸುತ್ತದೆ.
ನಮ್ಮ ಗೈಡ್ ತನ್ನ ದೇಶದ ವಿಶಿಷ್ಟ ವಸ್ತುವೊಂದರ ಬಗೆಗೆ ಗಮನ ಸೆಳೆದರು. ಅದು ಮನೂಕ ಜೇನು. ಮನೂಕ ಎಂಬ ಮಾವೊರಿ ಹೆಸರಿನ ಪೊದೆಗಿಡದ ಹೂವಿನಿಂದ ಜೇನುಹುಳುಗಳು ತಯಾರಿಸುವ ಜೇನು ವಿಶ್ವ ಪ್ರಸಿದ್ಧವಂತೆ. ಅದು ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮಾತ್ರ ತಯಾರಾಗುವ ಜೇನಂತೆ. ಜೋನಿಬೆಲ್ಲದಷ್ಟು ದಪ್ಪಗಿರುವ, ಮಣ್ಣಿನ ಪರಿಮಳವನ್ನೂ, ವನಸ್ಪತಿಯ ತಿಳಿ ಘಾಟನ್ನೂ ಹೊಂದಿರುವ ಅದು ಭಾರೀ ಬೇಡಿಕೆಯ ವಸ್ತುವಂತೆ. ಅದಕ್ಕಿರುವ ಔಷಧೀಯ ಗುಣಗಳು, ಸೌಂದರ್ಯವರ್ಧಕವಾಗಿ ಬಳಕೆ, ಮಾರುಕಟ್ಟೆ ಸೃಷ್ಟಿಸಿದ ಹಗೆತನ, ಸ್ಪರ್ಧೆ, ಶುದ್ಧತೆ ನೋಡಲು ರೂಪಿಸಿರುವ ಐದು ಮಾನದಂಡಗಳು, ಆದರೂ ನಡೆಯುವ ಕಲಬೆರಕೆಗಳ ಬಗೆಗೆ ಗೈಡ್ ವಿವರವಾಗಿ ಹೇಳಿದರು. ನಾವು ಹೋದದ್ದು ಮನೂಕ ಹೂ ಋತುವಲ್ಲ. ಅದಾಗಲೇ ಜನವರಿಗೇ ಮುಗಿದು ಹೋಗಿತ್ತು. ಗಾಳಿ ಬೀಸಿದ ದಿಕ್ಕಿಗೆ ಸರಿಯಾಗಿ ತಮ್ಮ ಇಡಿಯ ಕಾಂಡವನ್ನು ವಾಲಿಸಿ ನಿಂತ ಮನೂಕ ಗಿಡಗಳನ್ನಷ್ಟೇ ನೋಡಲು ಸಾಧ್ಯವಾಯಿತು. ಅವು ಬಳ್ಳಾರಿ ಜಾಲಿಯನ್ನು ನೆನಪಿಸಿದವು.
ಅರ್ಧ ದಾರಿ ಸವೆಸಿದಾಗ ಟೆ ಆನಾ ಊರು, ಅದೇ ಹೆಸರಿನ ಸರೋವರ ಬಂದವು. ಊರು ದಾಟಿದ ಮೇಲೆ ನಮ್ಮ ಬಸ್ಸು ಶುಭ್ರ ನೀರಿನ ನದಿಯ ಪಕ್ಕ ಸರಿದು ಹೋಗತೊಡಗಿತು. ಅದು ವಾಕಾಟಿಪು ಕಾ ಟುಕಾ ಅಥವಾ ಹಾಲಿಫೋರ್ಡ್ ನದಿ.
ಕಡಿದಾದ ಪರ್ವತಗಳ ಸೆರಗಿನಲ್ಲಿ ಹಾವಿನಂತೆ ಹರಿದು ಹೋಗುವ ರಸ್ತೆಯಲ್ಲಿ ಹತ್ತಿಳಿಯುತ್ತಿದ್ದೆವು. ಕಡಿದಾದ ಪರ್ವತ ಶ್ರೇಣಿಗಳು ಎದುರು ಹಾದವು. ಸೌಂಡಿಗೆ ತಲುಪುವ ಈ ಕೊನೆಯ ಭಾಗದ ಮಾರ್ಗ ನಿರ್ಮಾಣ ಎಂತಹ ಸವಾಲಿನದಾಗಿತ್ತು ಎಂದು ಗೈಡ್ ಶತಮಾನ ಹಿಂದಿನ ಕತೆ ಹೇಳತೊಡಗಿದರು. ಸಾವಿರಾರು ಅಡಿ ಎತ್ತರದ ಪರ್ವತಗಳು ಅಡ್ಡಗೋಡೆಯಂತೆ ನಿಂತ ಕಾರಣ ಮಿಲ್‌ಫೋರ್ಡನ್ನು ತಲುಪುವುದೇ ಅಸಾಧ್ಯವೆನ್ನುವಂತಾಗಿತ್ತು. ೧೮೮೯ರಲ್ಲಿ ವಿಲಿಯಂ ಹೋಮರ್ ಎಂಬಾತನಿಗೆ ಲಾಳಾಕಾರದ ಪರ್ವತದ ಕಣಿವೆಯಿರುವಲ್ಲಿ ಸುರಂಗ ಕೊರೆದರೆ ಹ್ಯಾಲಿಫೋರ್ಡ್ ನದಿ ಕಣಿವೆಯಿಂದ ಕ್ಲೆಡ್ಡಾ ನದಿ ಕಣಿವೆ ತಲುಪಿ ಮಿಲ್‌ಫೋರ್ಡ್ ಸೌಂಡ್ ಮುಟ್ಟಬಹುದೆಂದು ಅಂದಾಜಾಯಿತು. ಅದು ಹತ್ತಿರದ, ನೇರ ಮಾರ್ಗವೇನೋ ಹೌದು, ಆದರೆ ಸುರಂಗ ಕೊರೆಯುವುದು ಹೇಗೆ? ವರ್ಷದ ಅರ್ಧ ದಿನಗಳಲ್ಲಿ ಸೂರ್ಯನ ಬೆಳಕೇ ಬೀಳದಷ್ಟು ಎತ್ತರೆತ್ತರದ ಪರ್ವತಗಳ ನಡುವಿನ ಪ್ರದೇಶದಲ್ಲಿ ಸುರಂಗ ಕೊರೆಯುವುದು, ರಸ್ತೆ ಮಾಡುವುದು ಸುಲಭವಿರಲಿಲ್ಲ. ಮೊದಲಿಗೆ ಟೆಂಟುಗಳಲ್ಲಿ ನೆಲೆಸಿ ಹಾರೆ ಪಿಕಾಸಿ ಡ್ರಿಲ್ಲುಗಳ ನೆರವಿನಿಂದ ಕೆಲಸ ಆರಂಭಿಸಿದರು. ಏಳುಬೀಳಿನೊಡನೆ ಕೆಲಸ ಸಾಗುತ್ತ ಹೋಯಿತು. ನಡೆಯಿತು, ನಿಂತಿತು, ಮತ್ತೆ ಆರಂಭವಾಯಿತು. ಬಂಡೆ ಒಡೆದ ಹಾಗೂ ಹಿಮ ಕರಗಿ ನೀರು ತುಂಬುತ್ತಿತ್ತು. ಕೊನೆಗೆ ಪಕ್ಕದಲ್ಲೇ ಹರಿವ ಹಾಲಿಫೋರ್ಡ್ ನದಿಗೆ ಸಣ್ಣ ಕಟ್ಟೆ ಕಟ್ಟಿ, ವಿದ್ಯುತ್ ತಯಾರಿಸಿ ಗಂಟೆಗೆ ನಲವತ್ತು ಸಾವಿರ ಲೀಟರ್ ನೀರು ಖಾಲಿ ಮಾಡುತ್ತ ಸುರಂಗ, ರಸ್ತೆಯ ಕೆಲಸ ನಡೆಸಿದರು. ಭೂ ಕುಸಿತಕ್ಕೆ ಕೆಲವರು ಬಲಿಯಾದರು. ಮತ್ತೊಂದು ಭೂಕುಸಿತದಲ್ಲಿ ತೋಡಿದ ಸುರಂಗ ಅರ್ಧಕ್ಕರ್ಧ ಮುಚ್ಚಿ ಹೋಯಿತು. ಅಂತೂ ೧೯ ವರ್ಷಗಳ ಬಳಿಕ ೧೯೪೦ರ ವೇಳೆಗೆ ಸುರಂಗ ಮತ್ತೊಂದು ತುದಿ ತಲುಪಿಯೇ ಬಿಟ್ಟಿತು. ಮಹಾಯುದ್ದದ ಕಾಲವಾಗಿದ್ದರಿಂದ ವಿಳಂಬಗೊಂಡು ೧೯೫೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ಇವತ್ತಿಗೂ ೧.೨ ಕಿಲೋಮೀಟರ್ ಉದ್ದದ ಆ ಹೋಮರ್ ಸುರಂಗದಲ್ಲಿಯೇ ಎಲ್ಲರೂ ಹಾದು ಹೋಗಬೇಕು.
ಸುರಂಗವು ಏಕಮುಖ ಸಂಚಾರ ಹೊಂದಿದೆ. ಎದುರುಬದುರಾದರೆ ಎರಡು ಕಾರುಗಳು ಚಲಿಸಬಹುದು, ಆದರೆ ಎರಡು ಬಸ್ಸುಗಳು ಚಲಿಸಲಾರವು. ಸಂಜೆ ಆರರಿಂದ ಬೆಳಿಗ್ಗೆ ಒಂಬತ್ತರವರೆಗೆ ಮುಚ್ಚಿರುತ್ತದೆ. ಈಗ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಏರುತ್ತಿರುವ ಪ್ರವಾಸಿಗರ ಕಾರಣವಾಗಿ ಸುರಂಗ ಅಗಲ ಮಾಡುವ ಪ್ರಯತ್ನಗಳು ನಡೆದರೂ ಅದು ಸುರಕ್ಷಿತವಲ್ಲ ಮತ್ತು ಅತ್ಯಂತ ಖರ್ಚಿನ ಬಾಬತ್ತು ಎಂದು ಕೈ ಬಿಟ್ಟಿದ್ದಾರೆ.
ನಮ್ಮ ಗೈಡ್ ಹೇಳುತ್ತಿದ್ದ ಸುರಂಗದ ಕತೆ ಕೇಳುತ್ತ ಕೇಳುತ್ತ ಅದರ ಬಾಯಿಯ ಬಳಿ ಬಸ್ಸು ನಿಂತಿತು. ಟ್ರಾಫಿಕ್ ಹೆಚ್ಚಿತ್ತು. ಈ ಕಡೆಯಿಂದ ಹೊರಟವರು ಆಚೆ ತಲುಪಿದ ಮೇಲೆಯೇ ಮತ್ತೊಂದು ತಂಡ ಆಚೆಯಿಂದ ಈಚೆ ಬರುತ್ತಿತ್ತು. ಏಕಮುಖ ಸಂಚಾರವನ್ನು ಸಿಗ್ನಲ್‌ಗಳೇ ನಿರ್ವಹಿಸುತ್ತಿದ್ದವು. ನಾವು ಹೆಚ್ಚುಕಡಿಮೆ ಒಂದು ಗಂಟೆ ಕಾಲ ಕಾದೆವು. ಆದರೂ ಬೋರೆನಿಸುವಂತೆಯೇ ಇಲ್ಲ, ಕಾರಣ ಹೊರಗಣದ ಸೌಂದರ್ಯ. ಕಿಟಕಿಯೊಳಗಿನಿಂದಲೇ ಕಣ್ತುಂಬಿಕೊಳ್ಳುತ್ತಿದ್ದೆವು. ಸಂಪೂರ್ಣ ತಲೆಯೆತ್ತಿ ನೋಡಿದರೂ ತುದಿ ಕಾಣದಷ್ಟು ಎತ್ತರದ ಪರ್ವತಗಳಿಂದ ಜಲಧಾರೆ ಬೀಳುತ್ತಿತ್ತು. ಮಳೆ ಒಂದೇಸಮ ಸುರಿಯುತ್ತಿತ್ತು. ಅಲ್ಲೇನಾದರೂ ಭೂ ಕುಸಿತ ಸಂಭವಿಸಿದರೆ, ಭಾರೀ ಹಿಮಪಾತವಾದರೆ ನಾವು ಇದ್ದಲ್ಲೇ ಇಲ್ಲವಾಗುತ್ತೇವೆ ಎಂದು ಗೈಡ್ ಹೇಳುವಾಗ ಕೆಲವರು ಹೌದೇ ಎಂದು ಭಯಪಟ್ಟರು.
ನನ್ನಾಳದಲ್ಲಿ ನೆಲೆಗೊಂಡಿದ್ದ ವಿಶಿಷ್ಟ ಶಾಂತಿಯು ಹಾಗಾಗುವುದಾದರೆ ಆಗಲಿ; ಇಂಥ ಪ್ರಕೃತಿಯಲ್ಲಿ ಲೀನವಾಗುವುದಕ್ಕಿಂತ ಹೆಚ್ಚಿನ ಸಂತಸ ಬೇರೆ ಇನ್ನೇನಿದೆ ಎಂದು ಹೇಳುತ್ತಿತ್ತು.
ಪಿಯೊಪಿಯೊ ತಾಹಿ
ಕೊನೆಗಂತೂ ಬಿಸಿಲುಮಳೆ ಬೀಳುತ್ತಿರುವ ಹೊತ್ತಿಗೆ ಪಿಯೊಪಿಯೊತಾಹಿ ತಲುಪಿದೆವು. ಅನುಭವದಿಂದ ಮಾತ್ರ ವೇದ್ಯವಾಗುವ ಆ ಅಪರಿಮಿತಾನಂದವನ್ನು ಏನೆಂದು ವರ್ಣಿಸುವುದು? ಹಿಂದೆಂದೂ ಕಾಣದಂತಹ ಚೆಲುವಿನ ಪ್ರಕೃತಿಯ ಮಡಿಲಿನಲ್ಲಿರುವ ಆನಂದವೋ, ಉದ್ವೇಗವೋ, ಚಳಿಯೋ ಅಂತೂ ಒಳಗಿನಿಂದ ನಗು ಮತ್ತು ನಡುಕ ಎದ್ದೆದ್ದು ಬಂದು ಗದಗುಡುವಂತಾಗುತ್ತಿತ್ತು. ಅದರ ನಡುವೆಯೇ ಟಿಕೆಟ್ ಪಡೆದೆವು. ಎಷ್ಟು ಗಂಟೆಯೊಳಗೆ ಎಲ್ಲಿ ಬಂದು ಬಸ್ ಹತ್ತಬೇಕು ಎಂದು ತಿಳಿಸಿ ಗೈಡ್ ಹಿಂದೆ ಉಳಿದರು. ಮೂರಂತಸ್ತಿನ ಯಾಂತ್ರಿಕ ದೋಣಿಯಲ್ಲಿ ಸುರಕ್ಷತೆಯ ದಿರಿಸು ಧರಿಸಿ ಪಯಣ ಆರಂಭಿಸಿದೆವು.
ಈಗ ಬಿಸಿಲು ಈಗ ಮೋಡ. ನಡುನಡುವೆ ಮಳೆ. ಮೋಡದ ನಾಡಿನ ಬಾಗಿಲಿಗೆ ಕಮಾನು ಕಟ್ಟಿದ ಕಾಮನಬಿಲ್ಲು!
ವಿಶಾಲ ಕಣಿವೆ ತುಂಬಿದ ಜಲರಾಶಿ, ಎರಡೂ ಕಡೆ ನೀರಿನಿಂದ ಲಂಬವಾಗಿ ಮೇಲೆದ್ದು ಆಗಸ ಸೀಳುವಂತೆ ಕಾಣುವ ನಾಲ್ಕೈದು ಸಾವಿರ ಅಡಿ ಎತ್ತರದ ಪರ್ವತಗಳು. ಹೆಬ್ಬಂಡೆಗಳನ್ನೂ, ಅದರ ನಡುವೆ ಸುರಿಯುತ್ತಿರುವ ಜಲಪಾತಗಳನ್ನೂ, ನೆತ್ತಿ ಮೇಲೇ ಹಾದು ಹೋಗುವ ಹಿಂಜಿದ ಹತ್ತಿಯಂತಹ ಬಿಳಿ ಮೋಡಗಳನ್ನೂ ನೋಡುತ್ತ ಸಾಗಿದೆವು. ಒಂದು ಭಾರೀ ಜಲಪಾತ ದೂರದಿಂದ ಕಾಣಿಸತೊಡಗಿತು, ಕೇಳಿಸತೊಡಗಿತು. ಅದು ಸ್ಟರ್ಲಿಂಗ್ ಜಲಪಾತ. ಹತ್ತಿರ ಹೋಗುತ್ತ ಹೋಗುತ್ತ ಅರೆರೆ! ಜಲಪಾತದ ನೀರಿನಡಿಯೇ ನಮ್ಮ ಬೋಟು ಹೀಗೆ ಹೋಗಿ ಹಾಗೆ ಹೊರಬಂತು!! ಕೆಲವರು ಒದ್ದೆಯಾಗಲೆಂದು ಕೊರೆವ ನೀರ ಧಾರೆಯಡಿ ನಿಂತು ಕೇಕೆ ಹಾಕಿದರು. ನಾವು ಒಳಗೆ ನಿಂತರೂ ಎರಚುವ ಹನಿಗಳು ತೋಯಿಸಿ ಗದಗುಡಿಸಿದವು. ರುದ್ರರಮಣೀಯತೆಯನ್ನು ಅನುಭವಿಸುವ ಚಪ್ಪಾಳೆ, ನಗು, ಕೂಗು, ಹಾಡು, ನರ್ತನ ದೋಣಿಯನ್ನು ತುಂಬಿಕೊಂಡಿತು.
ಒಂದಷ್ಟು ದೂರ ಹೋಗುವುದರಲ್ಲಿ ಅಗೋ ಅಲ್ಲಿ ದೂರದಲ್ಲಿ ಎವರೆಸ್ಟಿನಂತೆ ಕಾಣಿಸುವ ಹಿಮಾವೃತ ಭಾರೀ ಶಿಖರ ಕಣ್ಮುಂದೆ ಬಂತು. ಅದು ಮಿತ್ರೆ ಶಿಖರ. ೧೬೯೨ ಮೀಟರ್ ಎತ್ತರವಿದೆ. ಹಿಂಜಿದ ಮೋಡಗಳು ಶಿಖರದ ಸುತ್ತ ಕಣ್ಣುಮುಚ್ಚಾಲೆಯಾಡುತ್ತಿದ್ದವು. ‘ವಾವ್, ‘ಗ್ರೇಟ್, ‘ಕಾಂಟ್ ಬಿಲೀವ್, ‘ಇನ್‌ಕ್ರೆಡಿಬಲ್, ‘ಅಯ್ಯಬ್ಬಾಗಳ ನಡುವೆ ದೋಣಿ ಚಲಿಸತೊಡಗಿತ್ತು. ಎಲ್ಲರ ಕ್ಯಾಮೆರಾಗಳೂ ಪುರುಸೊತ್ತಿಲ್ಲದೆ ಕಂಡ ದೃಶ್ಯವನ್ನು ಚಿತ್ರವಾಗಿ ಒಳಗಿಳಿಸಿಕೊಳ್ಳಲು ಹೆಣಗುತ್ತಿದ್ದವು. ಅಷ್ಟು ದೂರ ಹೋಗುತ್ತಿದ್ದಂತೆ ಬಂಡೆಗಳ ಮೇಲೆ ಮೈ ಒಣಗಿಸಿಕೊಳ್ಳುತ್ತ ಮಲಗಿದ್ದ ಸೀಲ್‌ಗಳು ಕಂಡವು. ಒಂದು ಡಾಲ್ಫಿನ್ ಹಾರಿ ಎಲ್ಲರನ್ನು ರೋಮಾಂಚನಗೊಳಿಸಿ ಮರೆಯಾಯಿತು. ಮತ್ತೆ ಕಾದದ್ದೇ ಬಂತು, ಮೇಲೆ ಬರಲಿಲ್ಲ. ಅಲ್ಲಿಯ ಬಂಡೆಗಳ ಕಂಡು ಒಬ್ಬರು, ‘ಮಾವೊರಿಗಳು ಆಭರಣವಾಗಿ ಧರಿಸುವ ಪೌನಾಮು ಎಂಬ ಹಸಿರು ಮಣಿಯ ಕಲ್ಲುಗಳು ಈ ಬಂಡೆಗಳೇ ಅಂತೆ. ಇವು ಜೇಡ್ ಬಂಡೆಗಳೇ ಇರಬಹುದು ಎಂಬ ಭಾರೀ ಊಹೆಯನ್ನು ಹರಿಯಬಿಡುತ್ತಿದ್ದರು.
ಹೇಗೆ ಕಳೆಯಿತೋ ಕಾಲ! ಬೋಟ್ ರೈಡ್ ಮುಗಿದು ಹೋಯಿತು. ಎಷ್ಟು ಸಾಧ್ಯವೋ ಅಷ್ಟನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತ, ಚಣವೂ ವ್ಯರ್ಥವಾಗದಂತೆ ನೋಡಿದೆವು. ಮತ್ತೆಂದಾದರೂ ಈ ಚೆಲುವ ನಾಡಿಗೆ, ಶಾಂತಿ ಸೂಸುವ ಬೀಡಿಗೆ ಬರುವೆವೋ ಇಲ್ಲವೋ ಎಂಬ ಸಂಕಟದ ಮುಳ್ಳು ಆಡುತ್ತಿರಲು ಹಿಂತಿರುಗಿ ಹೊರಟೆವು.
ಎಲ್ಲವನ್ನು ಎಷ್ಟು ತುಂಬಿಕೊಂಡಿದ್ದೆವೆಂದರೆ ಹಿಂತಿರುಗಿ ಬರುವಾಗ ನಮ್ಮ ವಾಹನದೊಳಗೆ ಗಾಢ ನಿಶ್ಶಬ್ದ ಆವರಿಸಿತು. ಕಂಡದ್ದನ್ನು ಅರಗಿಸಿಕೊಳ್ಳಲು ಯತ್ನಿಸುತ್ತ ಸೀಟಿಗೊರಗಿ ಹೊರಗೆ ದಿಟ್ಟಿಸುತ್ತ ಪ್ರಶಾಂತವಾಗಿ ಕುಳಿತಿದ್ದೆವು. ನಮ್ಮ ಮಾರ್ಗದರ್ಶಿಯೂ ಮೌನಕ್ಕೆ ಜಾರಿದ್ದರು.
ಈಗಲೂ ಕಣ್ಣುಮುಚ್ಚಿ ನೆನೆದರೆ, ಪಿಯೊಪಿಯೊತಾಹಿ ಧುತ್ತನೆ ಎದುರು ಬಂದು ಆಹ್ಲಾದ ಸೃಷ್ಟಿಸುತ್ತದೆ. ಆ ತಾಣದ ಚೆಲುವು, ಗಾಂಭೀರ್ಯ, ರಮಣೀಯತೆ, ಪ್ರಶಾಂತತೆಯ ತರಂಗಗಳು ಇವತ್ತಿಗೂ ನಮ್ಮೆದೆಗಳನ್ನು ಮೀಟುತ್ತಲೇ ಇವೆ.
ಧನ್ಯರಾದೆವು ಹೇ ಬುವಿಯೇ, ಧನ್ಯವಾದ ನಿನಗೆ.
ಡಾ. ಎಚ್. ಎಸ್. ಅನುಪಮಾ
(ಸುಧಾ, ಸೆ. ೨೫, ೨೦೨೫ ಸಂಚಿಕೆ)