ಬಣ್ಣಗಳೆಲ್ಲ ಪತಾಕೆಗಳಾಗಿ ಹಾರುತ್ತಿವೆಯೋ ಎನ್ನುವಂತಿದ್ದ ತಾಣದಲ್ಲಿ ಈ ವರ್ಷದ ಹೋಳಿಹುಣ್ಣಿಮೆಯ ದಿನ ಕಳೆದೆವು. ಒಂದೆಡೆ ಪಶ್ಚಿಮ ದಿಗಂತದಲ್ಲಿ ಸೂರ್ಯ ಕೆಳಗಿಳಿಯುತ್ತಿದ್ದ ಹಾಗೆ ಪೂರ್ವದಲ್ಲಿ ಚಂದಿರ ನಾ ಬಂದೆನೆಂದು ತೋರಿಸಿಕೊಳ್ಳಲು ಹವಣಿಸುತ್ತಿತ್ತು. ಮಹಾಬೋಧಿ ದೇವಾಲಯದ ಆವರಣವು ಭಿಕ್ಕುಗಳಿಂದ, ದೇಶ ವಿದೇಶಗಳ ಉಪಾಸಕ, ಉಪಾಸಿಕೆಯರಿಂದ, ಪ್ರವಾಸಿಗಳಿಂದ ತುಂಬಿ ತುಳುಕುತ್ತಿತ್ತು. ಕೆಲವು ಭಿಕ್ಕುಗಳು ಹೊರಗಣ ಯಾವ ಗದ್ದಲವೂ ತಮ್ಮನ್ನು ತಾಗದಷ್ಟು ಆಳ ಧ್ಯಾನದಲ್ಲಿ ಮುಳುಗಿದ್ದರು. ಮತ್ತೆ ಕೆಲವರದು ಪಠಣ. ಇನ್ನು ಹಲವರು ಗುಂಪಾಗಿ ವ್ಯಾಯಾಮದಂತಹ ಚಲನೆಯ ಮೂಲಕ ನಮಸ್ಕರಿಸುತ್ತ ಏಳುತ್ತ ಇದ್ದರು. ಗಂಟೆ, ಜಾಗಟೆ ಮುಂತಾಗಿ ಯಾವ ಸದ್ದೂ ಇಲ್ಲದ ಮಹಾ ಮೌನ. ಸದ್ದಿಲ್ಲದೆ ನಡೆದು ದೇವಾಲಯದ ಆವರಣಕ್ಕೊಂದು ಸುತ್ತು ಹಾಕಿ ಬುದ್ಧನ ಮೂರ್ತಿಯೆದುರು ನಿಂತೆವು.
ನೆಲದ ಸಾಕ್ಷಿಯಾಗಿ ಲೋಕದರಿವು ಕಂಡುಕೊಂಡ ಗುರುವೇ, ಭೂಮಿ ಮೇಲಣ ಆಗುಹೋಗುಗಳ ಸಮ್ಮಾದಿಟ್ಟಿಯಲಿ ನೋಡುವ ಮಾರ್ಗ ತಿಳಿಸಿಕೊಡು, ವಂದನೆ.
ಬೋಧಗಯಾ. ಬುದ್ಧಾನುಯಾಯಿಗಳು ನೋಡಲೇಬೇಕೆಂದು ಬಯಸುವ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದು. ಕ್ರಿ.ಪೂ. ೬೨೩ರ ಸುಮಾರು ನೇರಂಜಾರ ನದಿಯ ದಡದಲ್ಲಿ ಬೋಧಿ ವೃಕ್ಷ(ಅರಳಿ ಮರ)ದಡಿ ಶಾಕ್ಯಮುನಿ ಗೌತಮನು ಜ್ಞಾನೋದಯ ಹೊಂದಿದ್ದು; ಪರಿವ್ರಾಜಕನಾದ ಆರು ವರ್ಷಗಳ ಬಳಿಕ ಲೋಕವನ್ನು ಅದಿರುವಂತೆ ಅರಿಯಲು ಪ್ರಜ್ಞಾ, ಕರುಣಾ, ಮೈತ್ರಿ ಭಾವಗಳಿಂದ ಜೀವರೆಲ್ಲ ನೆಮ್ಮದಿಯಿಂದ ಬಾಳಬಹುದಾದ ಮಾರ್ಗವನ್ನು ಕಂಡುಕೊಂಡು ಬುದ್ಧನಾದದ್ದು ಅಲ್ಲಿಯೇ. ಬುದ್ಧ ಕುಳಿತ ತಾಣವೆಂದು ಗುರುತಿಸಲಾದ ಒಂದು ವೃಕ್ಷ, ಆಸನ ಅಲ್ಲಿದೆ. ಭೂಮಿಸ್ಪರ್ಶ ಮುದ್ರೆಯ ಬುದ್ಧನ ಮೂರ್ತಿಯಿರುವ ಮಹಾಬೋಧಿ ದೇವಾಲಯವಿದೆ.
ಜ್ಞಾನೋದಯದ ಬಳಿಕ ಬುದ್ಧ ಅಲ್ಲಿ ಏಳು ವಾರ ಕಳೆದನೆಂದು ಬೌದ್ಧ ಗ್ರಂಥಗಳಲ್ಲಿ ದಾಖಲಿಸಲಾಗಿದೆ. ಬೋಧಿ ಮರದ ಕೆಳಗೆ ಕುಳಿತು ಮೊದಲ ವಾರ ಕಳೆದ. ಅನತಿ ದೂರದಲ್ಲಿ ಅನಿಮೇಷಲೋಚನನಾಗಿ (ಕಣ್ರೆಪ್ಪೆ ಮಿಟುಕಿಸದೆ) ಬೋಧಿವೃಕ್ಷ ನೋಡುತ್ತ ಎರಡನೆಯ ವಾರ ನಿಂತ. ಅಲ್ಲಿ ಅನಿಮೇಷಲೋಚನ ಬುದ್ಧ ಶಿಲ್ಪವಿದೆ. ಬೋಧಿವೃಕ್ಷದ ಒಂದು ಪಕ್ಕ ಹಿಂದೆಮುಂದೆ ನಡೆಯುತ್ತ (ಚಂಕಮಾನ) ಮನನ, ಧ್ಯಾನ ಮಾಡುತ್ತ ಮೂರನೆಯ ವಾರ ಕಳೆದ. ಅದನ್ನು ಪ್ರತಿನಿಧಿಸುವಂತೆ ಎತ್ತರದ ಕಟ್ಟೆಯ ಮೇಲೆ ಹದಿನೆಂಟು ಪದ್ಮಶಿಲ್ಪಗಳಿವೆ. (ಇದು ಒಂದನೆಯ ಶತಮಾನದಲ್ಲಿ ನಿರ್ಮಾಣವಾಗಿದೆ.) ನಾಲ್ಕನೆಯ ವಾರ ಆಳಧ್ಯಾನದಲ್ಲಿ ನಿರತನಾದ ಅವನ ಮೈಯಿಂದ ಏಳು ಬಣ್ಣಗಳು ಹೊರಬಿದ್ದುವೆಂದು ‘ರತ್ನಘರ ಚೈತ್ಯ’ ನಿರ್ಮಿಸಿದ್ದಾರೆ. ಸೂರಿಲ್ಲದ ಪುಟ್ಟ ಗುಡಿ ಅಲ್ಲಿದೆ. ಐದನೆಯ ವಾರ ಕುರಿಗಾಹಿಗಳು ಬಂದು ತಂಗುತ್ತಿದ್ದ ಆಲದ ಮರ ‘ಅಜಪಾಲ ನಿಗ್ರೋಧ’ದ ಅಡಿ ಕಳೆದ. ಅಲ್ಲಿಯೇ ಒಬ್ಬ ಬ್ರಾಹ್ಮಣನಿಗೆ, ‘ಜನ್ಮದಿಂದ ಯಾರೂ ಬ್ರಾಹ್ಮಣರಾಗಲು ಸಾಧ್ಯವಿಲ್ಲ; ಕ್ರಿಯೆಯಿಂದ ಆಗಬಹುದು’ ಎಂದು ಹೇಳಿದ. ಈಗ ಮರವಿದ್ದ ತಾಣದಲ್ಲಿ ಒಂದು ಸ್ತಂಭವಿದೆ. ಆರನೆಯ ವಾರ ಭಾರೀ ಬಿರುಗಾಳಿ ಮಳೆ ಶುರುವಾದರೂ ಗಮನಿಸದೆ ಒಂದೆಡೆ ಕುಳಿತ ಬುದ್ಧನಿಗೆ ಸರ್ಪರಾಜ ಮುಚುಲಿಂದ ಆಶ್ರಯ ನೀಡಿದನೆಂದು ಗುರುತಿಸುವ ತಾಣವಿದೆ. ರಾಜ ಅಶೋಕನ ಕಾಲದಲ್ಲಿ ನಿರ್ಮಾಣವಾದ ಒಂದು ಕೊಳ ಅಲ್ಲಿದೆ. ಏಳನೆಯ ವಾರ ರಾಜಾಯತನ ಮರದ ಬಳಿಯಿರುವಾಗ ಬರ್ಮಾದ ವ್ಯಾಪಾರಿಗಳಾದ ತಪುಸ್ಸ ಮತ್ತು ಭಲ್ಲಿಕಾ ಬುದ್ಧನನ್ನು ಕಂಡು ನುಚ್ಚನ್ನ ಮತ್ತು ಜೇನುತುಪ್ಪಗಳನ್ನು ಬೆರೆಸಿ ಮಾಡಿದ ಆಹಾರ ನೀಡಿದರು. ಬುದ್ಧನ ನಡೆಗೆ, ನುಡಿಗೆ ಮಾರು ಹೋಗಿ ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ ಎಂದರು. ಮುಂದೆ ಅದೇ ಧಮ್ಮವನ್ನು ಸ್ವೀಕರಿಸಿದ ಕುರುಹಾಗಿ ಹೇಳುವ ಉದ್ಘೋಷವಾಯಿತು. ಅವರು ಹಿಂತಿರುಗುವಾಗ ಬುದ್ಧನ ತಲೆಗೂದಲನ್ನು ತಮ್ಮ ದೇಶಕ್ಕೆ ಒಯ್ದರು. ಯಾಂಗೂನಿನ ಶ್ವೆದಗನ್ ಪಗೋಡದಲ್ಲಿರುವುದು ಅದೇ ಕೂದಲು ಎಂದು ನಂಬಲಾಗಿದೆ.
Buddha Statue
Chankamana
Maha Bodhi Tree
ಸಾಮ್ರಾಟ ಅಶೋಕನ ಮಕ್ಕಳಾದ ಮಹಿಂದ ಮತ್ತು ಸಂಘಮಿತ್ರೆ ಧರ್ಮ ಪ್ರಚಾರಕ್ಕೆ ಶ್ರೀಲಂಕೆಗೆ ಹೋಗುವಾಗ ಗಯಾದ ಬೋಧಿವೃಕ್ಷದ ಸಸಿ ಒಯ್ದಿದ್ದರು. ಮೂಲ ವೃಕ್ಷದ ಐದನೆಯ ತಲೆಮಾರಿನ ಸಸಿಯನ್ನು ಶ್ರೀಲಂಕಾದ ಅನುರಾಧಪುರದಿಂದ ಮತ್ತೆ ತಂದು ಬೋಧಗಯಾದಲ್ಲಿ ನೆಡಲಾಯಿತು. ಅದೀಗ ವೃಕ್ಷವಾಗಿ ಬೆಳೆದು ನಿಂತಿದೆ.
ಮಹಾಬೋಧಿ ವಿಹಾರದಲ್ಲಿ ಐದು ಅಡಿ ಎತ್ತರದ ಭೂಮಿಸ್ಪರ್ಶ ಮುದ್ರೆಯಲ್ಲಿ ಕುಳಿತ ಬುದ್ಧ ಮೂರ್ತಿಯಿದೆ. ಅದಕ್ಕೆ ಬಂಗಾರದ ಕವಚ ಹೊದಿಸಲಾಗಿದೆ. ಹೊರಾವರಣದಲ್ಲಿ ಅಶೋಕ ಸ್ತಂಭವಿದೆ. ಮುಖ್ಯ ವಿಹಾರದ ಸುತ್ತಮುತ್ತ ಬೇರೆಬೇರೆ ಕಾಲಮಾನದಲ್ಲಿ ಬೇರೆಬೇರೆಯವರು ನಿರ್ಮಿಸಿದ ನೂರಾರು ಸಣ್ಣಪುಟ್ಟ ಸ್ತೂಪಗಳೂ, ಬುದ್ಧ ಶಿಲ್ಪಗಳೂ ಇವೆ. ಶ್ರೀಲಂಕಾ, ವಿಯೆಟ್ನಾಂ, ಥೈಲ್ಯಾಂಡ್, ಬಾಂಗ್ಲಾ, ಬರ್ಮಾ, ಕಾಂಬೋಡಿಯಾ, ಭೂತಾನ್, ನೇಪಾಳ, ಚೀನಾ ಮುಂತಾಗಿ ವಿಶ್ವದ ಬಹುತೇಕ ಬೌದ್ಧ ದೇಶಗಳ ವಿಹಾರಗಳು ಮಹಾಬೋಧಿ ದೇವಾಲಯದ ಸುತ್ತಮುತ್ತ ಇವೆ.
ಈಗ ಮಹಾಬೋಧಿ ವಿಹಾರದಲ್ಲಿ ನಾವು ನೋಡುವುದು ಇಷ್ಟು. ಇಲ್ಲಿ ದೊರೆತ ಹಲವು ವಸ್ತುಗಳನ್ನು ಜತನದಿಂದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಷ್ಟನ್ನು ಹೀಗೆ ನೋಡಲು ಹಲವರ ಶ್ರಮ, ಬದ್ಧತೆ, ಹೋರಾಟ, ಇತಿಹಾಸದ ಅರಿವು ಕಾರಣವಾಗಿದೆ.
ಬುದ್ಧನ ಮಹಾಪರಿನಿರ್ವಾಣದ ೨೧೮ ವರ್ಷಗಳ ಬಳಿಕ ಜ್ಞಾನೋದಯವಾದ ತಾಣವನ್ನು ಮೊದಲು ಗುರುತಿಸಿದ ಸಾಮ್ರಾಟ ಅಶೋಕನು ತುದಿಯಲ್ಲಿ ನಿಂತ ಆನೆಯಿರುವ ಸ್ತಂಭವನ್ನು ನಿಲ್ಲಿಸಿದ. ಬೋಧಿವೃಕ್ಷದ ಸುತ್ತಲೂ ಕೆಂಪುಕಲ್ಲಿನ ಆವಾರ ನಿರ್ಮಿಸಿದ. ಬುದ್ಧ ಕುಳಿತ ತಾಣದ ಕಲ್ಲುಹಾಸನ್ನಲಂಕರಿಸಿ, ‘ವಜ್ರಾಸನ’ವೆಂದು ಗುರುತಿಸಿ, ಅದು ‘ಭೂಮಿಯ ನಾಭಿ’ ಎಂದು ಕರೆದ. ಒಂದರಿಂದ ಆರನೆಯ ಶತಮಾನದ ಒಳಗೆ ಮಹಾಬೋಧಿ ದೇವಾಲಯ ನಿರ್ಮಾಣವಾಯಿತು. ಬುದ್ಧ ಮೂರ್ತಿಯನ್ನು ೧೧ನೆಯ ಶತಮಾನದ ಪಾಲ ವಂಶಸ್ಥರು ನಿರ್ಮಿಸಿದರು. ವಿಶ್ವದ ಬಹುದೇಶಗಳ ಉಪಾಸಕರು, ರಾಜರು ದೇವಾಲಯಕ್ಕೆ ತಮ್ಮ ಸಂಪತ್ತು, ದಾನ ಧಾರೆಯೆರೆದರು.
ಹುಟ್ಟಿದ ನೆಲದಲ್ಲಿ ವೈದಿಕ ಧರ್ಮದ ಪುರೋಹಿತಶಾಹಿಗಳಿಂದ, ೬೨ ‘ಅನ್ಯ ತೀರ್ಥೀಯ’ ಪರಂಪರೆಗಳಿಂದ ಬೌದ್ಧ ಧಮ್ಮವು ಸಂಚು-ಸ್ಪರ್ಧೆ ಎದುರಿಸಿತು. ಪರಕೀಯರ ಆಕ್ರಮಣ, ಸ್ವಮತ ರಕ್ಷಣೆ-ಅನ್ಯಮತ ನಾಶದ ಉನ್ಮಾದವೇ ಮೊದಲಾದ ಕಾರಣಗಳಿಂದ ಏಳುಬೀಳುಗಳನ್ನು ಕಂಡಿತು. ೧೯ನೆಯ ಶತಮಾನದ ವೇಳೆಗೆ ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞರ ಆಸಕ್ತಿ, ಕೆಲಸಗಳಿಂದ ಬೌದ್ಧತಾಣಗಳು ಮರುಜೀವ ಪಡೆದವು. ಇಂದಿನ ಭಾರತ, ಪಾಕಿಸ್ತಾನ, ಆಫ್ಘನಿಸ್ತಾನ, ಬರ್ಮಾ, ಶ್ರೀಲಂಕಾಗಳ ಬೌದ್ಧ ತಾಣಗಳ ಸಂರಕ್ಷಣೆ, ದುರಸ್ತಿ ಮತ್ತು ಪುನರುಜ್ಜೀವನಕ್ಕೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಮತ್ತವರಂತಹ ಅಧಿಕಾರಿಗಳ ಕೊಡುಗೆ ಸ್ಮರಣೀಯವಾದುದು. ೨೦೧೩ರಲ್ಲಿ ಥೈಲ್ಯಾಂಡಿನ ರಾಜಪ್ರಭುತ್ವ ಮತ್ತು ಪ್ರಜೆಗಳು ಬುದ್ಧ ಜಯಂತಿಯ ೨೬೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಹಾಬೋಧಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿದ್ದಾರೆ. ಬೌದ್ಧ ಉಪಾಸಕರ ಮನೆಮನೆಗಳಿಂದ ಚಿನ್ನ ಸಂಗ್ರಹಿಸಿ, ಕರಗಿಸಿ ೨೮೯ ಕೆಜಿ ಚಿನ್ನದ ರೇಕನ್ನು ಭಾರತಕ್ಕೆ ತಂದು ಮಹಾಬೋಧಿ ದೇವಾಲಯ ಗೋಪುರದ ತುತ್ತತುದಿಗೆ, ಎರಡು ಮೀಟರ್ ಅಗಲ ನಾಲ್ಕೂವರೆ ಮೀಟರ್ ಎತ್ತರದ ಚಿನ್ನದ ಕಲಶ ಹೊದಿಸಿದ್ದಾರೆ.
ಬುದ್ಧ ಭಾರತದ ಏಳುಬೀಳಿನ ಕತೆ
ಬೌದ್ಧ ಜೀವನಕ್ರಮದಲ್ಲಿ ಯಾವುದೇ ಆಚರಣೆಗಳಿರಲಿಲ್ಲ. ಪುರೋಹಿತರಿಗೆ ಸ್ಥಾನವೇ ಇರಲಿಲ್ಲ. ಬೌದ್ಧ ಸಾಮ್ರಾಟರಾಗಿದ್ದ ಮೌರ್ಯರ ನಂತರ ಬಂದ ಶುಂಗರು ಬ್ರಾಹ್ಮಣಧರ್ಮವನ್ನು ಲಿಖಿತ ಶಾಸ್ತ್ರವಾಗಿಸಿದರು. ವರ್ಣಾಶ್ರಮವನ್ನು ಜಾತಿಪದ್ಧತಿಯಾಗಿ ಗಟ್ಟಿಗೊಳಿಸಿ ಭಾರತೀಯ ಸಮಾಜವನ್ನು ಖಾಯಂ ಶ್ರೇಣೀಕರಣಕ್ಕೊಳಪಡಿಸಿದ ಮನುಸ್ಮೃತಿ ಬಂದದ್ದು ಪುಷ್ಯಮಿತ್ರ ಶುಂಗನ ಕಾಲದಲ್ಲಿ. ಶ್ರೇಣಿಯ ಅಗ್ರಸ್ಥಾನದಲ್ಲಿದ್ದ ಬ್ರಾಹ್ಮಣರು ಸಕಲ ಸವಲತ್ತುಗಳನ್ನು ಅನುಭವಿಸುತ್ತ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ದಾನದಕ್ಷಿಣೆಮನ್ನಣೆ ಪಡೆಯುತ್ತಾ, ಸ್ಥಳೀಯ ಉತ್ಪಾದನೆ, ವಿತರಣೆಯ ಮೇಲೆ ಅಲಿಖಿತ ಹಿಡಿತ ಸಾಧಿಸಿದ್ದೇ ಅಲ್ಲದೆ ದೇವರ ಜೊತೆ ನೇರ ಸಂವಾದ ಸಾಧ್ಯವೆಂಬ ಭ್ರಮೆ ಸೃಷ್ಟಿಸಿದರು. ಯಜ್ಞಯಾಗ, ಬಲಿ, ಭಜನೆಗಳಲ್ಲಿ ಜನಸಾಮಾನ್ಯರು ಆಚರಣೆಯೇ ಧರ್ಮವೆಂದು ಬಗೆದರು.
ಅದೇವೇಳೆಗೆ ಐದರಿಂದ ಎಂಟನೇ ಶತಮಾನದ ಅವಧಿಯಲ್ಲಿ ಮಧ್ಯ ಏಷ್ಯಾ ಕಡೆಯಿಂದ ಆಕ್ರಮಣ ಮಾಡಿದ ಅಲೆಮಾರಿ ಬಿಳಿಯ ಹೂಣರು ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಭಾರತದ ಗುಪ್ತ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಕೊಟ್ಟರು. ಭಾರತದ ವಾಯವ್ಯ ಹೆಬ್ಬಾಗಿಲನ್ನು ಆಕ್ರಮಿಸಿ, ರೋಮನ್ನರೊಡನೆ ವ್ಯಾಪಾರ ನಿಲ್ಲಿಸಿ, ಚೀನಾ ಮತ್ತು ಅರಬ್ಬರ ವ್ಯಾಪಾರಕ್ಕೆ ಬಾಗಿಲು ತೆರೆದರು. ಹೂಣರು ಹಿಂದೂ ಶೈವರಾದ ಬಳಿಕ ಬೌದ್ಧ ಸ್ಮಾರಕ, ಮಠಗಳನ್ನು ನಾಶಮಾಡಿದರು. ಅನ್ಯಮತದ ಆಳ್ವಿಕರು, ಸ್ಥಳೀಯ ಪುರೋಹಿತಶಾಹಿಗಳ ಕೈಗೆ ಸಿಲುಕಿ ಬೌದ್ಧ ಧರ್ಮದ ಸಾಂಸ್ಥಿಕ ಚಹರೆಗಳು ವಿರೂಪಗೊಂಡವು, ನಾಶವಾಗತೊಡಗಿದವು.
ಭಾರತಕ್ಕೆ ಬಂದ ಅಲ್ ಬೈರೂನಿ, ಫಾಹೀನ್, ಹ್ಯೂಯೆನ್ ತ್ಸಾಂಗರಂತಹ ವಿದೇಶಿ ಯಾತ್ರಿಕ ಪ್ರವಾಸಿಗಳು ಕುಂದುತ್ತಿರುವ, ನಾಶವಾಗುತ್ತಿರುವ ಬೌದ್ಧಸಂಘಗಳ ಬಗೆಗೆ ಬರೆದಿದ್ದಾರೆ. ಬೌದ್ಧಶಾಸ್ತ್ರ ಗ್ರಂಥಗಳನ್ನು ಅದರ ಮೂಲಸ್ವರೂಪದಲ್ಲಿ ಹುಡುಕುತ್ತ ಹದಿನೇಳು ವರ್ಷ ಭಾರತದಲ್ಲಿ ಅಲೆದಾಡಿದ ಭಿಕ್ಕು ಹ್ಯೂಯೆನ್ ತ್ಸಾಂಗ್, ವಾಯವ್ಯ ಭಾರತದ ಲಕ್ಷಾಂತರ ಬೌದ್ಧಮಠಗಳು ನಾಶವಾದವು ಎಂದು ದಾಖಲಿಸಿದ್ದಾನೆ. ಅವ ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೌದ್ಧಧರ್ಮವು ತನ್ನ ವೈಭವದ ದಿನಗಳನ್ನು ಕಳೆದುಕೊಂಡಿತ್ತು. ಸಂಘ, ವಿಹಾರ, ಸ್ತೂಪಗಳನ್ನು ನಡೆಸಲು ನಂಬಿದ್ದ ಧನಮೂಲಗಳು ಕ್ಷೀಣಗೊಳ್ಳತೊಡಗಿದ್ದವು. ಅರಬ್ ವ್ಯಾಪಾರಸ್ಥರ ಪ್ರಭಾವ ಹೆಚ್ಚುತ್ತ ಹೋದಂತೆ ಇಸ್ಲಾಂ ಮತ್ತು ಹಿಂದೂ ವ್ಯಾಪಾರಸ್ಥರನ್ನು ಬೌದ್ಧಸಂಘಗಳು ನೆಚ್ಚಬೇಕಾದ ಪರಿಸ್ಥಿತಿಯಿತ್ತು. ಮೊದಲ ಸಹಸ್ರಮಾನದ ಕೊನೆಯ ವೇಳೆಗೆ ಬ್ರಾಹ್ಮಣ ಧರ್ಮ ಹಾಗೂ ಸ್ಥಳೀಯ ಕುಲ/ಮತಗಳು ಮೇಲುಗೈ ಪಡೆಯುತ್ತ ಹೋದಂತೆ ದಕ್ಷಿಣೋತ್ತರ ಭಾರತದಲ್ಲಿ ಬೌದ್ಧ ಧರ್ಮ ಕ್ಷೀಣವಾಯಿತು. ಹನ್ನೆರಡನೆಯ ಶತಮಾನದಲ್ಲಿ ಬೌದ್ಧ ಪಾಲ ವಂಶವು ಹಿಂದೂ ಸೇನಾ ವಂಶಕ್ಕೆ ಸೋತಿತು. ಆಕ್ರಮಣಕಾರಿ ಮುಸ್ಲಿಂ ರಾಜರ ಆಳ್ವಿಕೆ ಶುರುವಾಯಿತು. ಅದು ಬೌದ್ಧ ಧರ್ಮ ಸಂಪೂರ್ಣ ಹಿನ್ನೆಲೆಗೆ ಸರಿದ ಅವಧಿ. ಕ್ರಿ.ಶ.೧೨೩೦ರ ಹೊತ್ತಿಗೆ ಮಹಾಬೋಧಿ ದೇವಾಲಯವು ಶೈವ ಆರಾಧನಾ ಸ್ಥಳವಾಗಿ ಮಾರ್ಪಟ್ಟಿತು. ಆದರೂ ಅಲ್ಲಿ ಹದಿನಾರನೆಯ ಶತಮಾನದವರೆಗೂ ಧ್ಯಾನ, ಪಠಣಗಳಂತಹ ಬೌದ್ಧ ಆಚರಣೆಗಳು ಯಾತ್ರಾರ್ಥಿಗಳ ದಾನದಿಂದ ನಡೆಯುತ್ತಿದ್ದವು. ಭಾರತ, ಭೂತಾನ್, ಬರ್ಮಾ, ನೇಪಾಳ, ಶ್ರೀಲಂಕಾ, ಟಿಬೆಟ್ ಮುಂತಾದ ದೇಶಗಳಿಂದ ಯಾತ್ರಿಕರು ಬರುತ್ತಿದ್ದರು. ೧೯ನೆಯ ಶತಮಾನವು ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಗೊಳ್ಳಲು ಪೂರಕವಾದ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ೧೮೭೪ರಲ್ಲಿ ಬರ್ಮಾದ ಆಳ್ವಿಕರು ಮಹಾಬೋಧಿ ದೇವಾಲಯದ ದುಃಸ್ಥಿತಿಗೆ ಮರುಗಿ ದುರಸ್ತಿ ಕಾರ್ಯ ನಡೆಸಿದರು. ೧೮೮೪ರ ವೇಳೆಗೆ ಸರ್ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ ಉತ್ಖನನ ಕಾರ್ಯ ಕೈಗೊಂಡು ದೇವಾಲಯಕ್ಕೆ ಈಗಿರುವ ರೂಪ ಕೊಟ್ಟನು.
ಹಿಂದೂ ದೇವರನ್ನಿಟ್ಟು ಪೂಜಿಸುತ್ತಿದ್ದ ಮಹಾಂತರು ತಮ್ಮದೆಂದು ಸಾಧಿಸುತ್ತಿದ್ದ ಮಹಾಬೋಧಿ ದೇವಾಲಯವು ಬೌದ್ಧರಿಗೆ ಸೇರಬೇಕೆಂದು ೧೮೯೧ರಲ್ಲಿ ಕಾನೂನು ಹೋರಾಟ ಶುರು ಮಾಡಿದವರು ಶ್ರೀಲಂಕಾದ ಭಿಕ್ಕು ಅನಾಗಾರಿಕ ಧರ್ಮಪಾಲ. ಅದಕ್ಕೆ ಭಾಗಶಃ ಜಯ ಸಿಕ್ಕಿದ್ದು ಅವರ ಮರಣದ ೧೬ ವರ್ಷಗಳ ನಂತರ ೧೯೪೯ರಲ್ಲಿ. ಮಹಾಬೋಧಿ ದೇವಸ್ಥಾನ ಕಾಯ್ದೆ ಜಾರಿಯಾಯಿತು. ಅದುವರೆಗೆ ಕೇವಲ ಹಿಂದೂಗಳೇ ಇದ್ದ ಸಮಿತಿಯಲ್ಲಿ ಬೌದ್ಧರಿಗೂ ಸ್ಥಾನ ದೊರೆಯಿತು. ವಿವಾದ ಶಮನಗೊಳಿಸಲು ತಾತ್ಕಾಲಿಕವಾಗಿ ಬೋಧಗಯಾ ಟೆಂಪಲ್ ಆಕ್ಟ್-೧೯೪೯ ಜಾರಿಯಾಯಿತು.
ಆ ಕಾಯ್ದೆಯ ಪ್ರಕಾರ ಬಿಹಾರ ರಾಜ್ಯ ಸರ್ಕಾರ ರಚಿಸುವ ‘ಮಹಾಬೋಧಿ ದೇವಾಲಯದ ಆಡಳಿತ ಮತ್ತು ಆಸ್ತಿ ನಿರ್ವಹಣಾ ಸಮಿತಿ’ಯು ಅದರ ಮೇಲ್ವಿಚಾರಣೆ ವಹಿಸಿಕೊಳ್ಳುವುದು. ರಾಜ್ಯಸರ್ಕಾರವು ಸಮಿತಿಗೆ ನೇಮಿಸುವ ಎಂಟು ಸದಸ್ಯರಲ್ಲಿ ನಾಲ್ಕು ಜನ ಹಿಂದೂಗಳಿರಬೇಕು. ಮೂರು ವರ್ಷದ ಅವಧಿಯ ಒಂಭತ್ತು ಜನರ ಆಡಳಿತ ಮಂಡಳಿಯಲ್ಲಿ ಬಿಹಾರ ಸರ್ಕಾರದ ಪರವಾಗಿ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಎಕ್ಸ್ ಅಫಿಶಿಯೊ ಅಧ್ಯಕ್ಷರು. ಅವರು ಹಿಂದೂ ಅಲ್ಲದಿದ್ದರೆ ರಾಜ್ಯ ಸರ್ಕಾರ ಹಿಂದೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿಕೊಳ್ಳುತ್ತದೆ. ಅಲ್ಲಿಯ ಶಂಕರಾಚಾರ್ಯ ಮಠದ ಸ್ವಾಮಿ ಸಹ ಮತ್ತೊಬ್ಬ ಎಕ್ಸ್ ಅಫಿಶಿಯೊ ಸದಸ್ಯರು. ಆದರೆ ಹಳೆಯ ಕಾಯ್ದೆ ಹಾಗೆಯೇ ಮುಂದುವರೆಯಿತೇ ಹೊರತು ಬೌದ್ಧರಿಗೆ ನ್ಯಾಯಯುತ ಪ್ರಾತಿನಿಧ್ಯ, ಹಕ್ಕುಗಳು ದಶಕಗಳು ಕಳೆದರೂ ದೊರೆಯಲಿಲ್ಲ. ಸಾಕಷ್ಟು ಸಂಘರ್ಷದ ಬಳಿಕ ೨೦೧೩ರಲ್ಲಿ ಹಿಂದೂಯೇತರರು ಅಧ್ಯಕ್ಷರಾಗಬಹುದೆಂದು ಕಾನೂನು ಬದಲಾಯಿತು. ಆದರೆ ಅದೇ ೨೦೧೩ರಲ್ಲಿ ಮಹಾಬೋಧಿ ದೇವಸ್ಥಾನದ ಮೇಲೆ ಬಾಂಬ್ ದಾಳಿಯಾಯಿತು. ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದೀನ್‌ಗಳೇ ಹೊತ್ತುಕೊಂಡರೆಂಬ ವರದಿ ಬಂತು. ಬುದ್ಧ ಕುಳಿತು ಸಾಕ್ಷಾತ್ಕಾರ ಪಡೆದ ವೃಕ್ಷದ ಟೊಂಗೆಗಳನ್ನು ಅಕ್ರಮವಾಗಿ ಕಡಿದು ವಿದೇಶೀ ಬೌದ್ಧರಿಗೆ ಮಾರಿ ಹಣ ಗಳಿಸಿದ ಆರೋಪವಿರುವ ಇನ್ನೂ ಒಂದು ವಿವಾದ ತಲೆದೋರಿತು. ಅಲ್ಲಿನ ಮುಖ್ಯ ಅರ್ಚಕರನ್ನು ಬಂಧಿಸಲಾಯಿತು.
ಮಹಾಬೋಧಿ ದೇವಾಲಯ ಆಡಳಿತ ಸಮಿತಿ ಕುರಿತ ನ್ಯಾಯಾಲಯದ ವ್ಯಾಜ್ಯ ರಾಮಜನ್ಮಭೂಮಿ ವಿವಾದದಷ್ಟೇ ಹಳೆಯದು. ಆದರೆ ಭಾರತದಲ್ಲಿ ಪುರಾಣದ ಕತೆಗಳಿಗೆ ಐತಿಹಾಸಿಕ ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯ ಕೊಡುವಷ್ಟು ಸುಲಭವಾಗಿ ಕಣ್ಣೆದುರು ರಾಚುವ ಐತಿಹಾಸಿಕ ವಾಸ್ತವಗಳಿಗೆ ನ್ಯಾಯ ಸಿಗಲಾರದು. ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಹಚ್ಚಿ ನಿಲ್ಲಿsಸಿರುವುದರಿಂದಲೇ ೨೦೦೨ರಲ್ಲಿ ಯುನೆಸ್ಕೊದಿಂದ ‘ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಲ್ಪಟ್ಟ ಮಹಾಬೋಧಿ ದೇವಾಲಯವು ೨೦೨೫ನೆಯ ಇಸವಿಯಲ್ಲೂ ಬೌದ್ಧರ ನಿಯಂತ್ರಣಕ್ಕೆ ಸಿಗದಂತೆ ಆಗಿದೆ. ದೇಶಭಾಷೆ ಮರೆತು ಬೌದ್ಧರೆಲ್ಲ ಸೇರಿ ನಡೆಸುತ್ತಿರುವ ಹೋರಾಟವು ಹಿಂದುತ್ವವನ್ನು ಎಲ್ಲರ ಮೇಲೆ ಹೇರುತ್ತಿರುವ ಆಳ್ವಿಕರಿಂದ ದಮನಕ್ಕೊಳಗಾಗಿದೆ.
‘ಮೂಲನಿವಾಸಿ’ಗಳ ಮಾತು
ಬೇಸಿಗೆ ಕಾಲಿಡದ ಮಾರ್ಚ್ ತಿಂಗಳ ತಂಪು ಮುಂಜಾನೆ. ಬೆಳಿಗ್ಗೆ ಆರಕ್ಕಾಗಲೇ ಬೋಧಗಯಾದ ಬೀದಿಗಳಲ್ಲಿ ರಿಕ್ಷಾಗಳು ಓಡಾಡುತ್ತಿದ್ದವು. ತಂತಮ್ಮ ದೇಶದ ಸಂಘಾರಾಮಗಳಲ್ಲಿ ಭಿಕ್ಕುಗಳು ಚಟುವಟಿಕೆ ಆರಂಭಿಸಿದ್ದರು. ಹೊರಡುವ ಮುನ್ನ ಮತ್ತೆ ಸ್ವಲ್ಪ ತಿರುಗಿ ಬರೋಣವೆಂದು ಅಂದು ಬೇಗನೆದ್ದು ಸರ್ಕೀಟ್ ಹೊರಟೆವು. ಒಂದಷ್ಟು ದೂರ ನಡೆದೇ ತಿರುಗಿದೆವು. ಬಳಿಕ ಸ್ಥಳೀಯರೊಡನೆ ಸಂಪರ್ಕ ಆದಂತಾಗುವುದೆಂದು ಸೈಕಲ್ ಆಟೋ ಹುಡುಕಿದೆವು. ಅಲ್ಲೆಲ್ಲ ಮೂರು ಚಕ್ರದ, ಸೌರ ಶಕ್ತಿ ಬಳಸುವ ತೆರೆದ ಆಟೋಗಳಿರುತ್ತವೆ. ತ್ರಿಚಕ್ರದ ಬೈಕಿಗೆ ಬಾಡಿ ಕಟ್ಟಿದಂತಿದ್ದು ಅಗಲ ಕಡಿಮೆಯಿರುವುದರಿಂದ ಸಣ್ಣಗಲ್ಲಿಗಳಲ್ಲೂ ಆರೇಳು ಜನರನ್ನು ಒಯ್ಯಬಲ್ಲವು. ಒಬ್ಬ ಆಟೋ ಅಣ್ಣನನ್ನು ಹಿಡಿದೆವು. ಅವರು ವಿನಯ್. ಲೋಕಾಭಿರಾಮ ಮಾತಿಗೆಳೆದಾಗ ನಡುನಡುವೆ ‘ಮೂಲ್‌ನಿವಾಸಿ’ ಪದವನ್ನು ಒಂದೆರೆಡು ಸಲ ಬಳಸಿದರು. ನನ್ನ ಊಹೆ ಸರಿಯಾಗಿತ್ತು, ಅವರು ಬಾಮ್ಸೆಫ್‌ನವರು. ಹೌದಾ ಎಂದು ಕೇಳಿದ ಒಂದು ಪ್ರಶ್ನೆ ನಮ್ಮನ್ನು ಎಷ್ಟು ಆಪ್ತವಾಗಿಸಿತೆಂದರೆ ಸಾಕುಸಾಕೆಂದರೂ ಬಿಡದೇ ಎಲ್ಲೆಲ್ಲೋ ಒಯ್ದು ಎಲ್ಲವನ್ನು ತೋರಿಸಿ ಕರೆತಂದರು.
ಕೆಲವು ಮೊನಾಸ್ಟರಿಗಳು ಇನ್ನೂ ಬಾಗಿಲು ತೆರೆದಿರಲಿಲ್ಲ. ಜಪಾನಿನದು ಮಾತ್ರ ತೆರೆದಿತ್ತು. ಮೆಟ್ಟಿಲುಗಳ ಹತ್ತಿ ವಿಶಾಲ ಆವರಣ ಪ್ರವೇಶಿಸಿದರೆ ಸೂಜಿಮೊನೆ ಬಿದ್ದರೂ ಕೇಳುವಂತಹ ನಿಶ್ಶಬ್ದ. ಒಬ್ಬ ಉಪಾಸಕರು ಧ್ಯಾನದಲ್ಲಿ ತೊಡಗಿದ್ದರು. ಅಲ್ಲಿಂದ ನೇರಂಜಾರ ನದಿ ದಂಡೆಗೆ ಹೋದೆವು. ಇದೇನಾ ಸುಜಾತ ಘನಪಾಯಸ ನೀಡಿದ, ಉರುವೆಲ-ಗಯೆ-ನದಿ ಎಂಬ ಕಶ್ಯಪ ಸೋದರರ ಭೇಟಿಯಾದ, ಘನಪಾಯಸ ಸೇವಿಸಿದ ಬಳಿಕ ಶಕ್ತನಾಗಿ ಗೌತಮನು ದಾಟಿದ ನದಿ? ಸಂಪೂರ್ಣ ಒಣಗಿ ನಿಂತಿದ್ದ ನದಿಯ ತಳದ ಮರಳ ಬಯಲು, ಅತಿಕ್ರಮಣಕ್ಕೆ ಒಳಗಾಗಿ ಹೋಟೆಲು, ರೆಸಾರ್ಟು, ರಸ್ತೆಗಳಿಗೆ ಜಾಗ ಮಾಡಿಕೊಟ್ಟಿರುವ ನದಿಯ ಹರಹು ವಿಷಾದ ಹುಟ್ಟಿಸಿತು. ಅಲ್ಲಿ ಹೆಚ್ಚು ನಿಲ್ಲಲಾಗದೇ ಹೊರಟು ಬಿಳಿಯ ಬುದ್ಧನ ಕಂಡೆವು. ಮಲಗಿದ ಬುದ್ಧನ ನೋಡಿದೆವು. ಥೈಲ್ಯಾಂಡಿನವರು ನಿರ್ಮಿಸಿದ ಎಂಬತ್ತು ಅಡಿ ಎತ್ತರದ ಬುದ್ಧ ಪ್ರತಿಮೆಯ ಬಳಿಗೆ ಹೋದೆವು. ದೂರದಿಂದಲೇ ಭವ್ಯ ಮೂರ್ತಿ ಕಾಣಿಸುತ್ತಿತ್ತು. ಒಬ್ಬ ವ್ಯಕ್ತಿ ಇಬ್ಬರು ಮಕ್ಕಳೊಂದಿಗೆ ಮೂರ್ತಿಯೆದುರು ಕುಳಿತಿದ್ದರು. ಮಕ್ಕಳು ಪ್ರಶ್ನೆ ಕೇಳುತ್ತ ಅವರ ತಲೆಮೇಲೆ, ತೊಡೆ ಮೇಲೆ ಹತ್ತಿಳಿಯುತ್ತಿದ್ದವು. ಅವರು ಸಾವಧಾನವಾಗಿ ಆನಂದನ ಕತೆ ಹೇಳುತ್ತಿದ್ದರು. ಅವರು ಸುರೇಂದರ್. ಮಾತನಾಡಿಸಿದಾಗ ಅವರೂ ಬಾಮ್ಸೆಫ್‌ನವರು ಎಂದು ತಿಳಿದುಬಂತು. ಚಾಮರಾಜನಗರದ ಬಿಎಸ್ಪಿ ಬಳಗದಲ್ಲಿ ಅವರಿಗೆ ಪರಿಚಿತರಿದ್ದರು. ಹೊರಗೆ ನಿಂತಿದ್ದ ಆಟೋ ಅಣ್ಣ ವಿನಯ್ ಅವರ ಪರಿಚಯಸ್ಥರು. ಸಿಕ್ಕ ಕೆಲವೇ ಸಮಯದಲ್ಲಿ ಚುರುಕಾದ ಮಾತುಕತೆಯಾಯಿತು. ಮಹಾಬೋಧಿ ದೇವಾಲಯವನ್ನು ಸಂಪೂರ್ಣವಾಗಿ ಬೌದ್ಧರ ನಿಯಂತ್ರಣಕ್ಕೆ ಕೊಡಬೇಕು ಎಂದು ಭಂತೇಜಿಗಳು, ಉಪಾಸಕರು ಸರದಿ ಉಪವಾಸ ಕುಳಿತಿರುವ ಬಗೆಗೆ ಮಾತು ಹರಿಯಿತು. ದೇಶದ ಎಲ್ಲ ಕಡೆಯಿಂದ ಬೌದ್ಧ ಜನ ಬೆಂಬಲಿಸಿ ಬರುತ್ತಿದ್ದಾರೆ; ಆದರೆ ಭಂತೇಜಿಗಳನ್ನು ದೇವಾಲಯದ ಆವರಣದಿಂದ ಮೂರೂವರೆ ಕಿಲೋಮೀಟರ್ ದೂರದ ಸ್ಥಳಕ್ಕೆ ಕಳಿಸಲಾಗಿದೆ ಎಂದು ಆರೋಪಿಸಿದರು. ಬೀಳ್ಕೊಂಡ ಬಳಿಕವೂ ಭೂತಾನ್, ಕಾಂಬೋಡಿಯಾ ವಿಹಾರಗಳ ನೋಡಿ ಹೊರಬರುವಾಗ ಮತ್ತೆ ಸಿಕ್ಕರು. ಅವರೊಂದಿಗೆ, ಮಕ್ಕಳೊಂದಿಗೆ ಪಟ ತೆಗೆಸಿಕೊಂಡದ್ದಾಯಿತು. ಇಬ್ಬರು ಬೌದ್ಧಾನುಯಾಯಿಗಳನ್ನು ಭೇಟಿ ಮಾಡಿ ಬೋಧಗಯಾದ ಪ್ರಯಾಣ ಸಫಲವಾಯಿತೆನಿಸಿತು. ಅವರಿಬ್ಬರೊಡನೆ ನಡೆಸಿದ ಮಾತುಕತೆಯ ಸಾರಾಂಶವಿದು:
‘ತಮ್ಮ ಪೂಜಾ ಸ್ಥಾನಗಳಲ್ಲಿ ಸರ್ವಾಧಿಕಾರ ಚಲಾಯಿಸುತ್ತ ಬೇರೆ ಧರ್ಮದವರು ಬರಬೇಡಿ; ಮಹಿಳೆಯರು ಬರಬೇಡಿ; ಇಂತಿಂಥ ಜಾತಿಯವರು ಇಂತಿಂಥಲ್ಲಿ ಇರಿ ಎಂದು ಬೋರ್ಡು ಹಾಕುವಷ್ಟು ಅಸಾಂವಿಧಾನಿಕ ನೀತಿನಿಯಮ ರೂಪಿಸಿಕೊಂಡ ಹಿಂದೂಗಳು ಅಲ್ಪಸಂಖ್ಯಾತ ಬೌದ್ಧ ಧರ್ಮದ ಮೇಲೆ ದಬ್ಬಾಳಿಕೆ ಹೇರುತ್ತಿದ್ದಾರೆ.’
‘ಪ್ರಪಂಚದಲ್ಲಿ ಯಾವ ಧಾರ್ಮಿಕ ಸ್ಥಳವೂ ಅನ್ಯ ಧರ್ಮದವರ ಆಡಳಿತದಲ್ಲಿಲ್ಲ. ಆದರೆ ಭಾರತ ಮಾತ್ರ ಬುದ್ಧನ, ಬೌದ್ಧರ ವಿಷಯದಲ್ಲಿ ಹೀಗೆ ನಡೆದುಕೊಂಡು ಬಂದಿದೆ. ಈಗ ಅದೇ ಮುಂದುವರೆಯುತ್ತಿದೆ. ವ್ಯಾಟಿಕನ್ ಅನ್ನು ಕ್ರಿಶ್ಚಿಯನ್ನರು, ಮೆಕ್ಕಾವನ್ನು ಮುಸ್ಲಿಮರು, ಗ್ರಂಥ ಸಾಹೀಬ್ ಅನ್ನು ಸಿಖ್ಖರು, ಕಾಶಿ-ತಿರುಪತಿಗಳಂತಹ ಅಸಂಖ್ಯ ಕ್ಷೇತ್ರಗಳನ್ನು ಹಿಂದೂಗಳು ನಿರ್ವಹಿಸುವರಾದರೆ ಮಹಾಬೋಧಿ ದೇವಾಲಯವನ್ನು ಬೌದ್ಧರಲ್ಲದೆ ಬ್ರಾಹ್ಮಣರೇಕೆ ನಿರ್ವಹಿಸಬೇಕು?’
‘ಬೌದ್ಧರು ಶಾಂತಿಪ್ರಿಯರು. ನಾವು ಯಾವುದೇ ಧರ್ಮದ ವಿರುದ್ಧ ಮಾತನಾಡುತ್ತಿಲ್ಲ. ಯಾವುದು ನಮ್ಮದೋ ಅದು ನಮಗೆ ಸಿಗಬೇಕು ಅಷ್ಟೇ.’
‘ಭಾರತದ ಎಷ್ಟೋ ಗುಡಿಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ. ಬುದ್ಧನ ಮೂರ್ತಿಗೆ ಬಟ್ಟೆ, ಬಂಗಾರಗಳಿಂದ ಅಲಂಕಾರ ಮಾಡಿ ಹಿಂದೂ ದೇವರುಗಳ ಹೆಸರಿಡಲಾಗಿದೆ. ಅವೆಲ್ಲವನ್ನು ನಮಗೆ ಕೊಡಿ ಎಂದು ನ್ಯಾಯದ ಜಗಳಕ್ಕಿಳಿದರೆ ದೇಶದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ ನಾವೇನೂ ಹಾಗೆ ಕೇಳುತ್ತಿಲ್ಲ. ಮಹಾಬೋಧಿಯಂತಹ ಬೌದ್ಧರ ಪವಿತ್ರ ತಾಣದ ಮೇಲ್ವಿಚಾರಣೆ, ಆಡಳಿತಗಳನ್ನು ಬೌದ್ಧರಿಗೇ ಕೊಡಿ ಎನ್ನುತ್ತಿದ್ದೇವೆ. ಇದು ನ್ಯಾಯಯುತವಾದದ್ದು, ಆಗಲೇಬೇಕಾದದ್ದು.’
‘ಬುದ್ಧ ಮತ್ತು ಧಮ್ಮ ಲೋಕಕ್ಕೇ ಸೇರಿದ್ದು ನಿಜ. ಅದನ್ನು ಓದಲು, ತಿಳಿಯಲು, ಅನುಸರಿಸಲು ಜಾತಿ, ವರ್ಣ, ವರ್ಗ ಮುಂತಾಗಿ ಯಾವುದೇ ಭೇದವಿಲ್ಲ. ಆದರೆ ಧಮ್ಮದ ಅನುಯಾಯಿಗಳಿಗೆ ಮಹಾಬೋಧಿ ವೃಕ್ಷ, ದೇವಾಲಯ ಅತ್ಯಂತ ಪವಿತ್ರವಾದವು. ಅವು ಬೌದ್ಧಾನುಯಾಯಿಗಳ ಸುಪರ್ದಿನಲ್ಲೇ ಇರಬೇಕು. ನೋಡಿ, ಮಹಾಬೋಧಿ ದೇವಾಲಯದ ಪಕ್ಕದಲ್ಲೇ ಹಿಂದೂ ದೇವರ ಗುಡಿ ಮಾಡಿದ್ದಾರೆ. ರಾಮ, ಲಕ್ಷ್ಮಣ, ಹನುಮನನ್ನಿಟ್ಟಿದ್ದಾರೆ. ಹೀಗೇ ಮುಂದುವರೆದರೆ ಬೌದ್ಧ ಧರ್ಮವನ್ನು ಒಡೆದು ಸ್ವರ್ಗನರಕ, ಪುನರ್ಜನ್ಮಗಳ ತುರುಕಿ ಬುದ್ಧನನ್ನು ಅವತಾರ ಪುರುಷನೆಂದು ಮಾಡಿದ ವೈದಿಕ ಪುರೋಹಿತಶಾಹಿಗಳು ಸದ್ಯವೇ ಬುದ್ಧನ ಹೆಸರಿನಲ್ಲಿ ಕುಂಕುಮಾರ್ಚನೆ, ಹಣ್ಣುಕಾಯಿ, ಹೋಮಹವನಗಳನ್ನು ಮಹಾಬೋಧಿ ಗುಡಿಯ ಆವರಣದಲ್ಲಿ ಆರಂಭಿಸುತ್ತಾರೆ.’
‘ವಿಶ್ವದ ಎಲ್ಲಾ ಬೌದ್ಧ ದೇಶದವರು ಕಟ್ಟಿರೋ ಮೊನಾಸ್ಟರಿ ಇಲ್ಲಿದಾವೆ. ಅವುಗಳ ಆಚೀಚೆ ನೋಡಿ. ಕಸ, ಗಲೀಜು ರಾಶಿ. ಇಂಟರ್‌ನ್ಯಾಷನಲ್ ಟೂರಿಸ್ಟ್ ಬರೋ ಜಾಗದ ತರಹ ಇದೆಯಾ ಇದು? ಇದನ್ನು ಹಾಳುಗೆಡವಬೇಕಂತನೇ ಹೀಗಿಟ್ಟಿರೋದು.’
‘೨೦೧೩ರಲ್ಲಿ ಒಂದು ಬಾಂಬ್ ಸ್ಫೋಟ ಆಯ್ತು. ಈಗ ಯಾರೂ ಫೋಟೋ ತೆಗೆಯುವಂತಿಲ್ಲ. ಸಮಾಜದೆದುರು ಸಾಕ್ಷ್ಯ ಸಮೇತ ಹೇಳಲು ಆಗುತ್ತಿಲ್ಲ. ವಿದೇಶಗಳಿಂದ ಬರುವ ಯಾತ್ರಿಕರಿಗೆ, ಪ್ರವಾಸಿಗಳಿಗೆ ಗೈಡ್‌ಗಳು ಮತ್ತು ವ್ಯಾಪಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬುದ್ಧನ ಜೊತೆಗೆ ಅದು ರಾಮನ, ಪಂಚಪಾಂಡವರ ತಾಣ; ಬುದ್ಧನು ವಿಷ್ಣುವಿನ ಅವತಾರ; ಪಂಚವರ್ಗೀಯ ಭಿಕ್ಕುಗಳೆಂದರೆ ಪಂಚ ಪಾಂಡವರು ಅಂತೆಲ್ಲ ಸುಳ್ಳು ಕತೆ ಹೇಳುತ್ತಿದ್ದಾರೆ. ಉದುರಿದ ಅರಳಿ ಮರದೆಲೆಗಳನ್ನು ಇಟ್ಟುಕೊಂಡು ಇಲ್ಲಿಯ ಬೋಧಿ ವೃಕ್ಷದ್ದೆಂದು ವ್ಯಾಪಾರ ಮಾಡುತ್ತಾರೆ. ಅದಕ್ಕೆಲ್ಲ ಸಮಿತಿಯವರು ಆಸ್ಪದ ನೀಡಿದ್ದಾರೆ. ಸಮಿತಿಯೊಳಗಿರುವ ಬ್ರಾಹ್ಮಣ ಪುರೋಹಿತರು ಹಿಂದೂ ಆಚರಣೆಗಳನ್ನು ಬೌದ್ಧ ದೇವಾಲಯದೊಳಗೆ ತುರುಕುತ್ತಿದ್ದಾರೆ’
ಅವರು ಹೇಳಿದ್ದು ನಿಜ. ಹಿಂದಿನ ದಿನ ಮಹಾಬೋಧಿ ದೇವಾಲಯದ ಆವರಣದಲ್ಲಿ ಸುತ್ತಾಡುವಾಗ ನಾವದನ್ನು ಗಮನಿಸಿದ್ದೆವು. ಸಹಿಷ್ಣುತೆ, ಮೈತ್ರಿ ಭಾವವನ್ನು ಹೀಗೆ ದುರುಪಯೋಗಪಡಿಸಿಕೊಳ್ಳಬಹುದೇ ಎಂದು ದಿಗ್ಭ್ರಮೆಗೊಳ್ಳುವಷ್ಟು ಹಿಂದೂಗಳು (ಅದರಲ್ಲೂ ಬ್ರಾಹ್ಮಣರು) ಅಲ್ಲಿ ಮೂಗು ತೂರಿಸಿದ್ದಾರೆ. ಇದಕ್ಕೆ ಶತಮಾನಗಳಿಂದಲೂ ವಿರೋಧ ಬಂದಿದೆ. ಅನಾಗಾರಿಕ ಧಮ್ಮಪಾಲ ೧೮೯೧ರಲ್ಲಿ ಈ ಬಗೆಗೆ ದನಿಯೆತ್ತಿದ್ದರು. ೧೯೯೨ರಲ್ಲಿ ಒಮ್ಮೆ, ನಂತರ ೨೦೦೨-೦೩ರಲ್ಲೂ ಇದು ಮುನ್ನೆಲೆಗೆ ಬಂದಿತ್ತು. ೨೦೦೭ರಲ್ಲಿ ಜಪಾನಿನ ಭಿಕ್ಕು ಭದಂತ ನಾಗಾರ್ಜುನ ಸಹಾ ಹೋರಾಡಿದ್ದರು. ೨೦೧೭ರಲ್ಲಿ ಅಖಿಲ ಭಾರತ ಭಿಕ್ಕು ಮಹಾಸಂಘದ ಅಧ್ಯಕ್ಷರೂ, ಬೋಧಗಯಾ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷರೂ ಆಗಿದ್ದ ಭಂತೆ ಆನಂದ ಮತ್ತೆ ಅಖಿಲ ಭಾರತ ಮಟ್ಟದಲ್ಲಿ ಅದನ್ನೊಂದು ಮುಖ್ಯ ವಿಷಯವನ್ನಾಗಿಸಿ ಹೋರಾಟ ರೂಪಿಸಿದ್ದರು. ದಲೈ ಲಾಮಾ ಈ ವಿಷಯದ ಬಗೆಗೆ ವಹಿಸಿದ ಮೌನವನ್ನು ಪ್ರಶ್ನಿಸಿದ್ದ ಭಂತೆ ಆನಂದ, ಅವರು ಬೌದ್ಧರ ನಾಯಕರಲ್ಲ ಎಂಬ ಕಟು ವಿಮರ್ಶೆಗೂ ಮುಂದಾಗಿದ್ದರು. ಈಗ ಅಖಿಲ ಭಾರತ ಬೌದ್ಧ ಭಿಕ್ಕುಗಳ ಸಮಿತಿಯು ೧೯೪೯ರ ಕಾಯ್ದೆಯ ಬಗೆಗೇ ತಕರಾರು ಎತ್ತಿದೆ. ಅದು ರದ್ದಾಗಿ ಹೊಸ ಕಾಯ್ದೆ ಬರಬೇಕೆಂದು ಹೇಳುತ್ತಿದೆ. ಹಳೆಯ ಕಾಯ್ದೆ ಬದಲಿಸದಿರುವುದರಲ್ಲಿ ಪುರೋಹಿತಶಾಹಿ ಹುನ್ನಾರವಿದೆ ಎಂದು ವಂಚಿತ್ ಬಹುಜನ್ ಅಘಾಡಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮೊದಲಾದ ಸಂಘಟನೆಗಳು ಆರೋಪಿಸುತ್ತಿವೆ. ಶಾಂತಿಯುತವಾಗಿ ಉಪವಾಸ ಕುಳಿತಿದ್ದ ಭಿಕ್ಕುಗಳನ್ನು ಪೊಲೀಸರು ಎಳೆದಾಡಿ, ಅವರನ್ನು ದೇವಾಲಯದ ಆವರಣದಿಂದ ದೂರದ ತಾಣಕ್ಕೆ ಸ್ಥಳಾಂತರಿಸಿದ ದೌರ್ಜನ್ಯದ ಬಗೆಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.
ಭಾರತ ಬಹುತ್ವದ, ವೈವಿಧ್ಯತೆಯ ದೇಶವಾಗಬೇಕು ನಿಜ. ಆದರೆ ಐತಿಹಾಸಿಕವಾಗಿ ಧೃಢಪಟ್ಟಿರುವಂತೆ ಧಾರ್ಮಿಕ ಕ್ಷೇತ್ರವೊಂದು ಆಡಳಿತಾತ್ಮಕವಾಗಿ ಆಯಾ ಧರ್ಮದ ಉಪಾಸಕ, ಉಪಾಸಕಿಯರ ಮೇಲ್ವಿಚಾರಣೆಯಲ್ಲೇ ಇರಬೇಕು. ಇತಿಹಾಸ, ಪುರಾತತ್ವ, ವಿದೇಶಿ ಯಾತ್ರಿಕರ ನೆನಪು, ಸಾಹಿತ್ಯಿಕ ಗ್ರಂಥಗಳ ಉಲ್ಲೇಖ, ವಿದೇಶಕ್ಕೆ ಹೋದ ಬೌದ್ಧ ಧರ್ಮದ ಪಠ್ಯಗಳ ದಾಖಲೆಗಳನ್ನೆಲ್ಲ ನೋಡಿದರೆ ಮಹಾಬೋಧಿ ದೇವಾಲಯವು ಬುದ್ಧ ಸಾಕ್ಷಾತ್ಕಾರ ಹೊಂದಿದ ತಾಣವೆನ್ನುವುದು ಖಚಿತವಾಗಿದೆ. ಅದು ಬೌದ್ಧರ ನಿಯಂತ್ರಣಕ್ಕೆ, ಆಡಳಿತಕ್ಕೆ ಒಳಪಡಬೇಕೆನ್ನುವುದು ನ್ಯಾಯವೇ ಆಗಿದೆ.
ಹೊರಡುವ ದಿನ ಬೆಳಿಗ್ಗೆ..
ದೂರದಲ್ಲಿ ಮಹಾಬೋಧಿ ದೇವಾಲಯದ ಚಿನ್ನದ ಕಳಶ ಹೊಳೆಯುತ್ತಿತ್ತು. ಎಲೆ ಉದುರಿಸಿ ಬೋಳಾದ ಅರಳಿಮರಗಳ ಗೆಲ್ಲುಗೆಲ್ಲುಗಳಲ್ಲಿ ಜ್ವಾಲೆಯಂತೆ ಕಾಣುವ ಕೆಂದಳಿರು ಮೇಲೇಳುತ್ತಿದ್ದವು. ಗಲ್ಲಿಮೂಲೆ, ಚರಂಡಿ, ಕೊಳ, ನದಿ, ಸಂದಿಗೊಂದಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್, ಕಸ ಚೆಲ್ಲಾಡಿ ಬಿದ್ದಿತ್ತು. ಬೌದ್ಧ ತಾಣಗಳಲ್ಲೇ ಅತಿ ಪವಿತ್ರ ಎನಿಸಿಕೊಂಡ ತಾಣದಲ್ಲಿ ನದಿ ಒಣಗಿ, ನೆಲದ ಮೇಲೆಲ್ಲ ಕಸಕೊಳೆಗಳೇ ಎದ್ದು ಕಾಣುತ್ತಿದ್ದವು. ಮಹಾಬೋಧಿ ದೇವಾಲಯದ ಹೊರಾವರಣದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಹಿರಿಯ ಜೀವಗಳನ್ನು ಒಂದೆಡೆ ಸೇರಿಸಿ ಒಬ್ಬ ಭಿಕ್ಕುಣಿ ಏನೋ ಹೇಳಿಕೊಡುತ್ತಿದ್ದರು. ನಿನ್ನೆ ಸಂಜೆ ದೇವಾಲಯದಿಂದ ಹೊರಬೀಳುವ ದ್ವಾರದಲ್ಲಿ ನಮ್ಮನ್ನು ಬೀಳ್ಕೊಡುವವರಂತೆ ಸಾಲಾಗಿ ಭಿಕ್ಷೆ ಕೇಳುತ್ತ, ಸಂಕಟ ಹುಟ್ಟಿಸುವಂತೆ ಯಾಚನೆಯ ನೋಟ ಬೀರುತ್ತ ಕುಳಿತವರು ಇವರೇನೇ?
ಬದಲಾವಣೆಯ ಚಕ್ರ ಒಳಿತಿನೆಡೆಗೆ ಉರುಳುವಂತೆ ಹರಸು ಬೋಧಿಯೇ.
ಡಾ. ಎಚ್. ಎಸ್. ಅನುಪಮಾ
No comments:
Post a Comment