(ಇತ್ತೀಚೆಗೆ ಮೇ ೧೭, ೧೮ರಂದು ಸಿಂಧನೂರಿನ ಸತ್ಯಾ ಗಾರ್ಡನ್ನಿನಲ್ಲಿ ನಡೆದ ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯ ಆಶಯ ಮಾತುಗಳನ್ನಾಡಲು ಡಾರ್ಜಿಲಿಂಗಿನ ಕವಿ ಮನೋಜ ಬೊಗಾಟಿ ಬಂದಿದ್ದರು. ಎದೆಯ ದನಿಯನ್ನು ಮಾತಾಗಿಸುವ ಕವಿಯನ್ನು ೨೨೬೦ ಕಿಲೋಮೀಟರ್ ದೂರದಿಂದ ಸಿಂಧನೂರಿಗೆ ಕರೆಸಿಕೊಂಡದ್ದೇ ಒಂದು ಕಥನವಾಗಬಲ್ಲದು. ಗಡಿಯಾರದ ಹಿಂದೋಡುವ ಗುಣವೇ ಇಲ್ಲದ ಈತ ಕಳಿಸಿದ್ದು ನೋಡಿರುವುದೂ ಇಲ್ಲ, ಮಾಹಿತಿ-ಸೂಚನೆ ಕೇಳಿರುವುದೂ ಇಲ್ಲ, ಕವಿಗೋಷ್ಟಿಯ ಆಶಯ ಎಂದು ದಿರಿಸಿನಲ್ಲಿ ತಯಾರಾಗುವುದೂ ಇಲ್ಲ. ಸದಾ ತನ್ನದೇ ಅಕ್ಷರ ಲೋಕದ ಸೃಷ್ಟಿಕ್ರಿಯೆಯ ಗುಂಗಿನಲ್ಲಿ ಮುಳುಗಿರುವಂತೆ ಕಾಣುವ ಬರಹಗಾರ ಮನೋಜ್, ಹೇಗಿದ್ದರೋ ಹಾಗೇ ಬಂದು ವೇದಿಕೆಯೇರಿದರು. ಸರಳ ವ್ಯಕ್ತಿತ್ವದ, ಬೆಟ್ಟ ಪ್ರದೇಶ ಡಾರ್ಜಿಲಿಂಗಿನ ಕೆಳವರ್ಗದಿಂದ ಬಂದ ಕವಿ ತಮ್ಮ ಸಾಂದ್ರ ಅನುಭವದ ಮಾತು, ಕವಿತೆ, ಕ್ರಾಂತಿಕಾರಿ ಹುಮ್ಮಸ್ಸಿನ ಮಾತುಗಳಿಂದ ನೆರೆದವರ ಗಮನ ಸೆಳೆದರು.
46 ವರ್ಷದ ಮನೋಜ್ ಡಾರ್ಜಿಲಿಂಗಿನ ಡಾಲ್ಗಾಂವ್ ಪ್ರಾಂತ್ಯದ ರೊಂಗೊದವರು. ಅವರು ಪಡೆದ ಔಪಚಾರಿಕ ಶಿಕ್ಷಣ ಕಡಿಮೆ. ಶೈಕ್ಷಣಿಕ, ಸಾಹಿತ್ಯಿಕ ಹಿನ್ನೆಲೆಯದಲ್ಲದ ಶ್ರಮಿಕ ಕುಟುಂಬದಿಂದ ಬಂದ ಅವರಿಗೆ ನಿಯತಕಾಲಿಕಗಳ ಓದು ಮತ್ತು ಒಡನಾಟದಿಂದ ಸಾಹಿತ್ಯದ ಒಲವು ಬೆಳೆಯಿತು. ಸೂಕ್ಷ್ಮ ಗ್ರಹಿಕೆ ಮತ್ತು ವಿಸ್ತೃತ ಓದು ಅವರನ್ನು ಕವಿ ಮತ್ತು ಪತ್ರಕರ್ತನನ್ನಾಗಿಸಿದವು. ಕ್ರಾಂತಿಕಾರಿ ಕವಿತೆ ಮತ್ತು ಬರಹಗಳಿಂದ ಕೆಳವರ್ಗದ ಜನರ ಧ್ವನಿಯಾದರು. ೨೦೦೮ರಲ್ಲಿ ‘ಬಿಂಬಗೋಷ್ಠಿ’ ಎಂಬ ಮೊದಲ ಕವನ ಸಂಕಲನ ಹೊರತಂದಿರುವ ಬೊಗಾಟಿ, ತಮ್ಮ ದೀರ್ಘ ಕವನಗಳ ಸಂಕಲನ ‘ಫೌಕ ರಂಗಾರು’ (‘ಬಣ್ಣಗಳ ಗಾಯಗಳು’)ವಿಗೆ 2012ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿದ್ದಾರೆ. ಆರು ಕವನ ಸಂಕಲನಗಳಲ್ಲದೆ ಒಂದು ಕಥಾ ಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಒಂದು ಕೃತಿಯನ್ನು ಹಿಂದಿಯಿಂದ ನೇಪಾಳಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಕಾಲಿಂಪಾಂಗ್‌ನಲ್ಲಿ ಬಾಳಸಂಗಾತಿ ಭಕ್ತಿ ರೈ ಅವರೊಡನೆ ನೆಲೆಸಿರುವ ಮನೋಜ್ ಬುದ್ಧಾನುಯಾಯಿ. ಸಿಂಧನೂರಿನಲ್ಲಿ ಭಾವಾಭಿನಯದ ಏರಿಳಿತದೊಂದಿಗೆ ಹಿಂದಿಯಲ್ಲಿ ಅವರು ಮಾಡಿದ ಭಾಷಣ, ಅವರೊಡನೆ ಆಡಿದ ಮಾತುಕತೆಯ ಸಾರ ಇಲ್ಲಿದೆ.)
‘ನಾನು ಭಾಷಣಕಾರ ಅಲ್ಲ. ಆಡುವುದನ್ನೆಲ್ಲ ಕವಿತೆಯಲ್ಲೇ ಆಡುವವನು. ಅಷ್ಟೆಲ್ಲ ಮಾತಾಡಲಿಕ್ಕೆ ಬರಲ್ಲ. ನನ್ನ ಮಾತೃಭಾಷೆ ನೇಪಾಳಿ. ಕನ್ನಡ ವಾತಾವರಣದ ನನಗಿಲ್ಲಿ ನಿಮ್ಮ ಭಾಷೆಯಲ್ಲಿ ಮಾತನಾಡುವಂತಿದ್ದರೆ ಅನಿಸಿದೆ. ಎಲ್ಲ ಅಪರಿಚಿತವೇ ಆದರೂ ಕುತೂಹಲ ಸೆಳೆಯುತ್ತಿದೆ. ನಿನ್ನೆಯ ಕವಿಗೋಷ್ಟಿ ಕೇಳಿಸಿಕೊಂಡೆ. ಅರೆ, ನಾವು ಬಳಸುವ ಎಷ್ಟೊಂದು ಪದಗಳನ್ನು ಇವರೂ ಬಳಸುವರಲ್ಲ ಎನಿಸಿತು. ಅರ್ಥವಾಗದಿದ್ದರೂ ಅವರ ಲಯ, ದೇಹದ ಭಾಷೆಯಿಂದ ಒಂದಷ್ಟು ಅರ್ಥವಾಯಿತು. ಕವಿತೆ ಎಂದರೆ ಹಾಗೇ, ಅಲ್ಲವೇ?
ಬಗದಾದಿನ ಕವಿ ಸಿನಾನ್ ಅಂತೋನ್ ಬರೆದ ಕವಿತೆ ಇದು:
‘ರಕ್ತದಲ್ಲದ್ದಿದ ಕುಂಚದಿಂದ
ಗೋಡೆಯ ಮೇಲೆ ಬರೆದೆ,
ಅಲ್ಲೊಂದು ಕಿಟಕಿ ಮೂಡಿತು.
ಕಂಡದ್ದು ಎರಡು ದೃಶ್ಯಗಳು:
ಯುದ್ಧ ಮತ್ತು ಅವ್ವ.
ಅವದವ ತನ್ನ ಗರ್ಭಸ್ಥ ಮಗುವಿನ
ಶವದ ಬಟ್ಟೆ ಅರಸುತ್ತಿದ್ದಳು..’
ಈಗ ನಮ್ಮ ದೇಶದಲ್ಲಿ, ಅಷ್ಟೇ ಅಲ್ಲ ಎಲ್ಲ ಕಡೆಯೂ ನಾವಂದುಕೊಂಡ ಹಾಗೆ ಏನೂ ಆಗದಂತೆ ಆಗಿದೆ. ನಾವು ಒಂದು ತರಹ ಯಂತ್ರಗಳಂತಾಗಿದೇವಾ ಅನಿಸುತ್ತಿದೆ. ನಮ್ಮಲ್ಲೂ ಯುದ್ಧ ಶುರು ಆಗೇ ಬಿಡ್ತು ಅಂದರು. ಆಮೇಲೆ ಈಗೇನೋ ವ್ಯಾಪಾರದ ಧಮಕಿ ಹಾಕಿ ಯುದ್ಧ ನಿಲ್ಲಿಸಿದೀವಿ ಅಂತಿದ್ದಾರೆ. ಎಲ್ಲರಲ್ಲೂ ಯಾರೋ ನಮ್ಮನ್ನು ನಿಯಂತ್ರಿಸುತ್ತಿರುವ ಭಾವನೆ ಇದೆ.
ಈಗ ಮನುಷ್ಯರು ಕಣ್ಣಿನಿಂದ, ಮನಸ್ಸಿನಿಂದ ನೋಡುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಕೇಳುವುದನ್ನು ನಿಲಿಸಿದ್ದಾರೆ. ಈಗ ಮನುಷ್ಯರು ಕಣ್ಣಿನಿಂದ, ಮನದಿಂದ ಯೋಚಿಸುವುದನ್ನು ನಿಲಿಸಿದ್ದಾರೆ. ತಮ್ಮ ಕಣ್ಣಿನಿಂದ ಕಣ್ಣೀರು ಸುರಿಸಿ ಅಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಮನುಷ್ಯರು ಯಂತ್ರ, ರೊಬಾಟ್ ಆಗಿದಾರೆ. ಯಾಕೆ ಹೀಗಾಯ್ತು? ಏನು ಮಾಡುವುದು? ಈ ಸಮಯದಲ್ಲಿ ನಾನೇನು ಮಾಡಲಿ? ದೋಸ್ತೋ, ಈ ಸಂಕಟದ ಸಮಯದಲ್ಲಿ ನಾನು ಕವಿತೆಯ ಜೊತೆ ಇರಲು ಇಷ್ಟಪಡುತ್ತೇನೆ.
ಸಂಕಟದಲ್ಲಿ ನಮ್ಮ ಜೊತೆ ಇರುವುದು ಕವಿತೆ. ನಮ್ಮ ಚೇತನಕ್ಕೆ ಅವಿನಾಭಾವ ಅಂತ ಜೊತೆಯಿರುವುದು ಕವಿತೆ ಮಾತ್ರವೇ. ಜೀವನದಿಂದ ವಿಮುಖರಾದಾಗ ಮತ್ತೆ ಬದುಕಿನ ವಿವೇಕ ಮರಳುವಂತೆ ಮಾಡುವುದು ಕವಿತೆ. ಕುರುಡು ಕಣ್ಣಿಗೆ ದಿಟ್ಟಿ ಮರಳಿಸುವುದು ಕವಿತೆ. ಇದೆಲ್ಲ ಕವಿತೆಗೆ ಮಾತ್ರ ಸಾಧ್ಯವಿದೆ. ಅದಕ್ಕೇ ಕವಿಯಾಗುವುದು, ಕವಿತೆ ಬರೆಯುವುದು ಎಂದರೆ ಸುಮ್ಮನಲ್ಲ, ಅದು ದೊಡ್ಡ ಜವಾಬ್ದಾರಿ.
ನನಗೀಗ ನಲವತ್ತಾರು ವರ್ಷ. ಈ ಲೋಕವನ್ನು ನೋಡುವುದು ಹೇಗೆ ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರಕೃತಿ-ಮನುಷ್ಯರು, ಮನುಷ್ಯ ಮನುಷ್ಯರ ನಡುವಿನ ಸಂಬಂಧ ಏನು ಎನ್ನುವುದನ್ನು ಕವಿತೆಯೇ ಕಲಿಸಿತು. ಪ್ರೇಮ ಎಂದರೇನು ಎನ್ನುವುದನ್ನು ಕವಿತೆಯೇ ಕಲಿಸಿತು. ನನ್ನ ನಾನು ನೋಡಿಕೊಳ್ಳುವುದನ್ನೂ ಕವಿತೆಯೇ ಕಲಿಸಿತು. ಅದಕ್ಕೇ ಇವತ್ತು ಯಾವುದೋ ದೂರದ ಗುಡ್ಡಗಾಡಿನ ಮೂಲೆಯ ನಾನು ಇಲ್ಲಿ ನಿಮ್ಮ ನಡುವೆ ಬಂದು ನಿಂತಿದ್ದೇನೆ.
ನಾನು ಯಾರು? ಎಲ್ಲಿಂದ ಬಂದಿದೀನಿ? ನಮ್ಮ ಪ್ರದೇಶ, ಗುರುತುಗಳು ಸಂಕಟಗಳು ಏನು ಅಂತ 99% ಜನರಿಗೆ ಗೊತ್ತಿಲ್ಲ. ಭಾರತೀಯರಿಗಂತೂ ಗೊತ್ತೇ ಇಲ್ಲ. ನಮ್ಮ ಬಗೆಗೆ ದೇಶ ಏನಂದುಕೊಂಡಿದೆ? ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣೆಕ್ ಶಾ ಅವರ ಒಂದು ಹೇಳಿಕೆ ಇದೆ: ‘ಯಾರಾದರೂ ನನಗೆ ಸಾಯಕ್ಕೆ ಭಯ ಇಲ್ಲ ಅಂದ್ರೆ ಒಂದೋ ಅವರು ಸುಳ್ಳು ಹೇಳ್ತಿದಾರೆ ಅಥವಾ ಅವರು ಗೂರ್ಖಾ ಆಗಿದಾರೆ ಅಂತ ಅರ್ಥ.’ ನೋಡಿದಿರಾ ಡಾರ್ಜಿಲಿಂಗಿನ ಗೂರ್ಖಾಗಳ ಬಗೆಗಿನ ತಿಳುವಳಿಕೆ? ಇಲ್ಲ, ಯುದ್ಧ ಎಂದರೆ ಧೈರ್ಯದಿಂದ ಎದೆ ಕೊಟ್ಟು ನಿಲ್ಲುವ ನಮಗೂ ಉಳಿದ ಮನುಷ್ಯರಂತೆ ಹೆದರಿಕೆಯಿದೆ, ಸಂಕಟಗಳಿವೆ. ಅಂದರೆ ಮಾಣೆಕ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದೇ? ಇದರರ್ಥ ಏನು? ಇದರರ್ಥ ಯಾರಿಗೂ ಗೂರ್ಖಾಗಳ ಪರಿಸ್ಥಿತಿ, ಸಂಕಟ ಗೊತ್ತಿಲ್ಲ ಅಂತ. ಅದಕ್ಕೇ ನನ್ನ ನೆಲ ಡಾರ್ಜಿಲಿಂಗ್, ಜಾತಿ ಗೂರ್ಖಾ, ಭಾಷೆ ನೇಪಾಳಿ, ಅಲ್ಲಿಯ ಅಸಮಾನತೆ ಸಂಕಟಗಳ ಬಗೆಗೇ ಮಾತನಾಡಲು ಬಯಸುತ್ತೇನೆ.
ಈ ತಿಂಗಳ 25ಕ್ಕೆ ನಮ್ಮೂರಿನಲ್ಲಿ ಒಂದು ಕವಿಗೋಷ್ಟಿ ಇದೆ. ಅಲ್ಲಿ ಹೇಳುತ್ತಾರೆ, ಅಯ್ಯೋ, ಕವಿಗೋಷ್ಟಿಗೆ ಜನರೇ ಬರಲ್ಲ ಅಂತ. ತುಂಬ ಅಭಿವೃದ್ಧಿ ಆದ ಊರು ಅದು. ಆದರೆ ಕವಿಗೋಷ್ಟಿಗಳೇ ಆಗುತ್ತಿಲ್ಲ. ಆದರೂ ಕಷ್ಟಪಟ್ಟು ನನ್ನ ಗೆಳೆಯರು ಕವಿಗೋಷ್ಟಿ ಆಯೋಜನೆ ಮಾಡಿದ್ದಾರೆ. ಅವತ್ತು ನಾನು ‘ಸಾಹೇಬರಿಗೆ ಜೀವಂತ ಮನುಷ್ಯರೆಂದರೆ ಇಷ್ಟವಿಲ್ಲ’ (ಸಾಹೇಬ್ ಕೊ ಜಿಂದಾ ಇನ್ಸಾನ್ ಪಸಂದ್ ನಹೀಂ) ಎಂಬ ಕವಿತೆ ಓದಲಿದ್ದೇನೆ. ಈ ಕವಿತೆ ಓದದಂತೆ ಸಾಹೇಬ್ ನನ್ನನ್ನು ಹೆದರಿಸಬಹುದು. ಆದರೆ ಅದನ್ನೇ ಓದುತ್ತೇನೆ ಮತ್ತು ಕವಿತೆ ಕೇಳಲು ನೀವು ಮುದ್ದಾಂ ಬರಲೇಬೇಕು.
ಆಯೋಜಕರು ನನಗೆ ಫೋನ್ ಮಾಡಿ ಹೇಳಿದರು: ನಿಮ್ಮ ಮಾತು, ಕವಿತೆಗಳಲ್ಲಿ ಸ್ವಲ್ಪ ಪಾಲಿಟಿಕ್ಸ್ ಇದೆಯಲ್ಲ? ಕವಿತೆಗೇಕೆ ರಾಜಕಾರಣ? ಅದನ್ನೆಲ್ಲ ತೆಗೆದುಬಿಡಬಹುದಲ್ಲ? ಕಾರ್ಯಕ್ರಮದಲ್ಲಿ ಕವಿತೆ ಬಗ್ಗೆ ಮಾತ್ರ ಮಾತಾಡಿ ಎಂದರು. ಆಯೋಜಕರ ಪರಿಸ್ಥಿತಿ ನನಗರ್ಥವಾಗುತ್ತದೆ. ಆದರೂ ಕೇಳಿದೆ: ಅರೆ ಭಾಯ್, ಕವಿಗೆ ರಾಜಕಾರಣ ಗೊತ್ತಿಲ್ಲ ಅಂದರೆ ಸಮಾಜಕ್ಕೆ ಸರಿಯಾದ ದಿಕ್ಕು ದಾರಿ ತೋರಿಸುವುದಾದರೂ ಹೇಗೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಆಡಳಿತ ಎಲ್ಲ ಸೇರಿ ಡಾರ್ಜಿಲಿಂಗನ್ನು ನಾಶ ಮಾಡಿದರು. ಆದರೂ ಕವಿ ರಾಜಕಾರಣದ ಮಾತಾಡಬಾರದೇ? ಕೇಂದ್ರ ಸರ್ಕಾರ ರಾಜಕಾರಣ ಮಾಡಿದರೆ ಅದು ಸರಿ ಎನ್ನುವಿರಿ. ರಾಜ್ಯ ಸರ್ಕಾರ ರಾಜಕಾರಣ ಮಾಡಿದರೆ ಅದೂ ಸರಿ ಎನ್ನುವಿರಿ. ಸ್ಥಳೀಯ ಆಡಳಿತ ರಾಜಕಾರಣ ಮಾಡಿದರೂ ಸರಿ ಎನ್ನುವಿರಿ. ಎಲ್ಲರೂ ಪಾಲಿಟಿಕ್ಸ್ ಮಾಡಬಹುದಂತೆ. ಕವಿ ಮಾತ್ರ ಮಾಡಬಾರದು ಅಂದ್ರೆ ಹೇಗೆ? ಯಾರು ಹೇಳಿದ್ದು ಹಾಗೆ? ಸಂವಿಧಾನದಲ್ಲಿ ಹಾಗಂತ ಬರೆದಿದಾರಾ? ಕವಿತೆಗೆ ಪಾಲಿಟಿಕ್ಸ್ ಗೊತ್ತಿಲ್ಲ ಅಂದ್ರೆ ಮತ್ಯಾರಿಗೆ ಗೊತ್ತಿದೆ? ಮತ್ತೇನು ಗೊತ್ತಿದೆ?
ಹೀಗೆ ಆಳುವವರು ಮತ್ತು ಸಮಾಜ ಕವಿಯನ್ನು ಭಯಪಡಿಸುತ್ತಾರೆ. ಕವಿತೆಯನ್ನು ಭಯಪಡಿಸುತ್ತಾರೆ. ಡಾರ್ಜಿಲಿಂಗಿನಲ್ಲಿ ಈಗ ಲೋಕತಂತ್ರದ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಾಧಾರಣ ಕಾರ್ಯಕ್ರಮವನ್ನೂ ನಮ್ಮಿಷ್ಟದಂತೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಕೇಳುವ ನಾವಂತೂ ಏನನ್ನೂ ಮಾಡಲು ಸುಲಭವಿಲ್ಲ. ಅಧಿಕಾರಿಗಳು ಎಲ್ಲಿ, ಯಾವಾಗ, ಏನು ಅಪ್ಪಣೆ ಮಾಡುತ್ತಾರೋ ಎನ್ನುವ ಭಯದಲ್ಲೇ ಮಾಡಬೇಕು, ಪರಿಸ್ಥಿತಿ ಹಾಗಿದೆ.
ಆದರೆ ಗೆಳೆಯರೇ ನೆನಪಿಡಿ, ಭಯಗ್ರಸ್ತ ಕವಿಗಳು ಸಮಾಜವನ್ನು ಪುಕ್ಕಲು ಮಾಡುತ್ತಾರೆ. ತಾವು ಪುಕ್ಕಲರಾಗಿ ಕ್ರಾಂತಿಕಾರಿ ಕವಿತೆ ಬರೆದರೆ ಅಂತಹ ಕವಿ ಪಾಖಂಡಿ, ವಂಚಕರಾಗಬಹುದೇ ಹೊರತು ಕವಿ ಆಗಲಾರರು. ಅಂತಹ ಕವಿ ತನ್ನನ್ನು ತಾನು ಕೊಂದುಕೊಳ್ಳುವುದಷ್ಟೇ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ, ಸಂಘಟನಾತ್ಮಕವಾದ ಎಲ್ಲವನ್ನೂ ಕೊಲ್ಲುತ್ತಾರೆ. ಆದರೆ ಯಾವ ಕವಿತೆಯ ಮೇಲೆ ವಿಶ್ವಾಸ ಇಟ್ಟಿರುವಿರೋ ಅದನ್ನು ಬರೆದ ಕವಿ ಪಾಖಂಡಿಯಾಗಿದ್ದರೆ? ಪಾಖಂಡಿ ಕವಿಯ ಕವಿತೆ ಏನಾಗುವುದು? ನಾನು ಕವಿತೆಯ ಮೇಲೆ ವಿಶ್ವಾಸ ಇಡುತ್ತೇನೆ. ಕವಿ ತಾನು ಹೆದರಿದ್ದರೂ ಕವಿತೆ ಹೆದರಬೇಡಿ ಎನ್ನುತ್ತಿರುತ್ತದೆ. ಅದು ಪಾಖಂಡಿ ಆಗಲಾರದು. ಕವಿತೆ ಹೇಗಾದರೂ ಕವಿಯ ಪಾಖಂಡಿತನವನ್ನು ತಿಳಿಸಿಬಿಡುವುದು. ಹೀಗೆ ಸಮಾಜ ನಾಶವಾಗುವುದನ್ನು ತಪ್ಪಿಸುವುದು ಕವಿತೆಯೇ ಆಗಿದೆ. ಅದಕ್ಕೇ ಪ್ರಪಂಚದಲ್ಲಿ ಎಲ್ಲರೂ ಕವಿತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
ನಾನು ೧೯೯೬ರಿಂದ ಮೂವತ್ತು ವರ್ಷಗಳಿಂದ ಬರೆಯುತ್ತ ಇದ್ದೇನೆ. ಸಾವಿರಾರು ಕಷ್ಟಗಳ ಜೊತೆ, ಕನಸುಗಳ ಜೊತೆ, ದುಃಖದ ಜೊತೆ ನನ್ನ ಸಮುದಾಯದ ಕತೆ ಬರೆಯುತ್ತ ಇದ್ದೇನೆ. ಕವಿತೆ ಅಂದರೆ ಬರಿಯ ಟೈಂ ಪಾಸ್, ಮನರಂಜನೆ ಅಲ್ಲ. ಈ ದೇಶ ನಮ್ಮಂತಹ ಸಣ್ಣ ಸಮುದಾಯಗಳಿಗೆ, ಆದಿವಾಸಿಗಳಿಗೆ, ಮಹಿಳೆಯರಿಗೆ ಅಸುರಕ್ಷಿತ. ಅದಕ್ಕೇ ನಾವು ಕವಿತೆ ಬರೆಯಬೇಕಿದೆ, ಹೋರಾಡಬೇಕಿದೆ. ಯಾರೋ ಅರ್ನೆಸ್ಟ್ ಹೆಮಿಂಗ್ವೇ ಹತ್ತಿರ ಬಂದು ಕೇಳಿದರಂತೆ: ‘ನಾನೂ ನಿಮ್ಮಂತೆ ಬರೆಯಬೇಕಲ್ಲ, ಹೇಗೆ?’ ಎಂದು. ಹೆಮಿಂಗ್ವೆ ಅದಕ್ಕೆ, ‘ನಿನ್ನ ಹತ್ರ ಗಾಯ ಇವೆಯಾ? ಇದ್ದರೆ ನೀನು ಬರೆಯಬಲ್ಲೆ.’ ಎಂದರು. ಕವಿಗೆ ಒಳಗಿನಿಂದ ಏನೋ ಆಗಬೇಕು, ಕುದಿಯಬೇಕು, ಉರಿಯಬೇಕು, ಭಾವನೆಗಳು ಹುಟ್ಟಬೇಕು. ಆಗ ಕವಿತೆ ಹುಟ್ಟುತ್ತದೆ.
ನಾನು ಮೊದಲು ‘ಸಪನ’ ಎಂಬ ಕತೆ ಬರೆದೆ, ಪ್ರಕಟವಾಯಿತು. ಬಳಿಕ ನನ್ನ ಮೊದಲ ಕವಿತೆ ‘ಘರ್ ಫರ್ಕನಲೈ’ (ಮನೆಗೆ ಮರಳಲು) ಪ್ರಕಟವಾಯಿತು. ಆಗ ಭೂತಾನಿನಲ್ಲಿ ಒಂದು ರಾಷ್ಟ್ರ, ಒಂದು ನೀತಿ ತತ್ವದಡಿ ಒಂದು ಲಕ್ಷ ಎಂಟು ಸಾವಿರ ನೇಪಾಳಿ ಮಾತಾಡುವ ಗೂರ್ಖಾ ಜನರನ್ನು ಹೊರಹಾಕಿದ್ದರು. ಯಾಕೆ? ಅವರು ಕೇಳಿದ್ದೇನು? ತಮ್ಮ ಭಾಷೆಗೆ ಮಾನ್ಯತೆ ಸಿಗಲಿ, ತಮ್ಮ ಸಾಂಸ್ಕೃತಿಕ ಅಸ್ಮಿತೆ ಉಳಿಯಲಿ ಎಂದು. ಆದದ್ದೇನು? ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಯುಎನ್‌ಎಚ್‌ಆರ್‌ಸಿ ಮಧ್ಯ ಪ್ರವೇಶಿಸಿ ಭೂತಾನ್ ಹೊರದಬ್ಬಿದ ನೇಪಾಳಿ ಭಾಷಿಕ ಗೂರ್ಖಾಗಳನ್ನು ಅಮೆರಿಕ, ಕೆನಡ, ಡೆನ್ಮಾರ್ಕ್, ನಾರ್ವೆ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾಗಿ ಎಲ್ಲೆಲ್ಲಿಗೋ ಕಳಿಸಿದರು. ಯಾವ ಜನ ತಮ್ಮ ಭಾಷೆ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡುತ್ತಿದ್ದರೋ ಅವರು ಹೋದಲ್ಲೆಲ್ಲ ಅಲ್ಲಲ್ಲೆ ಕಳೆದು ಹೋದರು. ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡರು. ನೆದರ್ಲೆಂಡಿನಲ್ಲಿ ನೇಪಾಳಿ ನಡೆಯುತ್ತಾ? ಅಮೆರಿಕದಲ್ಲಿ ನೇಪಾಳಿ ನಡೆಯುತ್ತಾ? ವಿದೇಶದಲ್ಲಿ ನಿಮ್ಮ ಮಾತೃಭಾಷೆ ನಡೆಯುತ್ತಾ? ಇಲ್ಲ. ಅವರು ಹೋರಾಡಿದ್ದು ತಮ್ಮ ಭಾಷೆಗಾಗಿ, ಸಂಸ್ಕೃತಿಗಾಗಿ. ಎಲ್ಲ ಸತ್ವನಾಶವಾಯಿತು. ಹಾಗೆ ಹೋದವರಲ್ಲಿ ನನ್ನ ಆಪ್ತ ಬಳಗದವರೂ ಕೆಲವರಿದ್ದರು. ಅವರ ಸಂಕಟ ಕೇಳಿ ನನ್ನ ಮೊದಲ ಕವಿತೆ ‘ಮನೆಗೆ ಹಿಂತಿರುಗಲು..’ ಬರೆದೆ. ಅವರಿನ್ನೂ ಹಿಂತಿರುಗಿಲ್ಲ. ಲಡಾಯಿ ಜಾರಿಯಲ್ಲಿದೆ.
ಈ ದೇಶದಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ನೆಲೆಯಾಗಲು ಕಷ್ಟವಿದೆ. ಇದು ನಿಮಗೂ ಗೊತ್ತು, ನನಗೂ ಗೊತ್ತು. ನಮ್ಮ ಮುಖಚಹರೆ ಬೇರೆಯಿದೆ. ನಮ್ಮನ್ನು ನೋಡಿದರೆ ಸಾಕು, ಚಿಂಗಿ, ಮಿಂಗಿ, ಮೊಮೊ, ಕೊರೊನಾ ಮುಂತಾಗಿ ಏನೇನೋ ಕರೆಯುತ್ತಾರೆ. ಗೂರ್ಖಾಗಳನ್ನು ನೇಪಾಳದಿಂದ ಬಂದ ವಲಸಿಗರು, ಆತಂಕವಾದಿಗಳು, ನುಸುಳುಕೋರರು ಎಂದು ಭಾವಿಸುತ್ತಾರೆ. ಯಾಕೆಂದರೆ ನಾವು ನೇಪಾಳಿ ಭಾಷೆ ಮಾತಾಡುತ್ತೇವೆ. ಬಂಗಾಳಿ ಭಾಷೆಯನ್ನು ಬಾಂಗ್ಲಾ ದೇಶದಲ್ಲೂ, ಪಶ್ಚಿಮ ಬಂಗಾಳದಲ್ಲೂ ಮಾತಾಡ್ತಾರೆ. ಬಂಗಾಳಿ ಭಾಷಿಕರನ್ನು ಬಾಂಗ್ಲಾ ದೇಶೀಯರು ಎನ್ನುವುದಿಲ್ಲ. ಆದರೆ ನೇಪಾಳಿ ಭಾಷೆಯನ್ನು ಮಾತನಾಡುವ ಭಾರತೀಯ ಗೂರ್ಖಾಗಳನ್ನು ಮಾತ್ರ ನೇಪಾಳದ ನುಸುಳುಕೋರರು ಎಂದೇ ಭಾವಿಸುತ್ತಾರೆ. ಇದೆಷ್ಟು ಸರಿ? ನನ್ನನ್ನು ಪರಿಚಯಿಸುವಾಗ ಹಲವರು ನೇಪಾಳಿ ಕವಿ ಎನ್ನುತ್ತಾರೆ. ನಾನು ನೇಪಾಳಿ ಭಾಷೆಯ ಭಾರತೀಯ ಗೂರ್ಖಾ ಕವಿ. ನಮ್ಮ ನೆಲವನ್ನು ಭಾರತ, ನೇಪಾಳ, ಭೂತಾನ, ಚೀನಾ ಎಲ್ಲ ದೇಶಗಳೂ ಕಬಳಿಸಿವೆ. ಭಾರತ ಸ್ವತಂತ್ರವಾದರೂ ನಾವು ಸ್ವತಂತ್ರ ದೇಶದೊಳಗಣ ಮೂಲೆಯ ಸಮುದಾಯವಾಗಿಯೇ ಉಳಿದಿದ್ದೇವೆ. ಇಂಥ ಹತ್ತು ಹಲವು ತಪ್ಪು ಕಲ್ಪನೆಗಳು, ಐಡೆಂಟಿಟಿಯ ಸಂಕಟಗಳು ನಮ್ಮನ್ನು ಅಂಚಿಗೆ ತಳ್ಳಿವೆ. ನೀವು ಅಂಚಿಗೆ ದೂಡಲ್ಪಟ್ಟಾಗ ಸಭ್ಯತೆಯ ಸೋಗು ಹಾಕಲಾರಿರಿ, ಆಕ್ರಮಣಕಾರಿಯಾಗಿಯೇ ಇರಬೇಕಾಗುತ್ತದೆ. ನಿಮ್ಮ ಸಮಾಜವನ್ನು ಅಂಚಿಗೆ ದೂಡಿದಾಗ ಅದು ಸಭ್ಯವಾಗಿರುವುದಿಲ್ಲ, ಉದ್ರೇಕಕಾರಿಯಾಗಿರುತ್ತದೆ. ಎಂದೇ ನನ್ನ ಬರಹ ಆವೇಗ, ಉದ್ವೇಗದಿಂದ ತುಂಬಿದೆ. ಅದು ನಮಗೆ ಸಹಜವಾಗಿಬಿಟ್ಟಿದೆ.
ಡಾರ್ಜಿಲಿಂಗ್ ಈಗ ಪಶ್ಚಿಮ ಬಂಗಾಳದಲ್ಲಿದೆ. ನಮ್ಮ ರಾಜ್ಯ ಭಾಷೆ ಬಂಗಾಳಿ. ನಾವು ಮಾತನಾಡುವುದು ನೇಪಾಳಿ. ಆದರೆ ನಮ್ಮ ಊರಿನಲ್ಲಿ ನಮ್ಮನ್ನು ಆಳುವವರಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಅದರ ಬದಲು ನಾವು ಬಂಗಾಳಿ, ಹಿಂದಿ, ಇಂಗ್ಲಿಷ್ ತ್ರಿಭಾಷೆ ಕಲಿತು ನಮ್ಮ ಭಾಷೆ ಮರೆಯುವಂತಾಗಿದೆ. ಇದು ದಬ್ಬಾಳಿಕೆಯ ಆಳ್ವಿಕೆಗೆ ಕಾರಣವಾಗಿದೆ. ನಮಗಾಗಿ ಮಾಡುವ ಕಾನೂನು, ಯೋಜನೆಗಳು ನಮಗರ್ಥವಾಗದೇ ಹೋಗಿವೆ. ಈ ಭಾಷೆಯ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಗಿಂತ ಹಳೆಯದು. ಸದ್ಯ ನಮ್ಮ ಹೋರಾಟಕ್ಕೆ ಒಂದು ಜಯ ಸಂದಿದೆ. ಮೊದಲು ಬಂಗಾಳಿಯನ್ನೇ ಕಲಿಯಬೇಕಿತ್ತು. ಆದರೆ ಸಾಂವಿಧಾನಿಕ ಭಾಷೆಯಾಗಿ ನೇಪಾಳಿ ಇರುವಾಗ ಅದನ್ನೇ ಮೊದಲ ಭಾಷೆಯಾಗಿ ಮಾಡಬೇಕೆಂದು ಪಟ್ಟುಹಿಡಿದು ವಿಜಯಿಗಳಾಗಿದ್ದೇವೆ. ಆದರೆ ಹೋರಾಟ ಚಾಲ್ತಿಯಲ್ಲಿದೆ. ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಅದಕ್ಕೆ ಆಕ್ರೋಶದ ದನಿ ಕೇಳಿ ಬರುತ್ತದೆ. ಅಲ್ಲಿ ನಾನೊಬ್ಬನೇ ಅಲ್ಲ, ನೀವು ಯಾರನ್ನು ಮಾತನಾಡಿಸಿದರೂ ಹೀಗೇ ಮಾತಾಡುತ್ತ್ತಾರೆ. ಅಂಚಿಗೆ ನಿಂತವರ ದನಿ ಗಡುಸಾಗಿಯೇ ಕೇಳುತ್ತದೆ.
200 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಮ್ಮ ಹಿರೀಕರು ಡಾರ್ಜಿಲಿಂಗಿನಲ್ಲಿದ್ದಾರೆ. ಬ್ರಿಟಿಷರು ಬಂದರು. ಆಡಳಿತದ ಅನುಕೂಲಕ್ಕಾಗಿ ನಮ್ಮನ್ನು ಬಂಗಾಳದಲ್ಲಿ ಸೇರಿಸಿದರು. ಹೋದರು. ಅವರು ಹೋದರೂ ನಾವಿನ್ನೂ ಇಲ್ಲಿಯೇ, ಮೊದಲಿದ್ದ ಹಾಗೆಯೇ ಯಾರವರೂ ಅಲ್ಲದೇ ಉಳಿದಿದ್ದೇವೆ. ಮೊದಲಿನಿಂದ ಇದು ಸಂಕೀರ್ಣ ಸಮಸ್ಯೆಗಳನ್ನುಳ್ಳ ಪ್ರದೇಶ. ೧೯೫೪ರಲ್ಲೇ ಅದನ್ನೊಂದು ಪ್ರತ್ಯೇಕ ಪ್ರದೇಶವಾಗಿ ಕಾಯಿದೆ ತಂದರು. ಆದರೆ ಈಗಲೂ ಅದು ಸಂಕೀರ್ಣ ಸಮಸ್ಯೆಗಳ ಪ್ರದೇಶವಾಗಿಯೇ ಮುಂದುವರೆದಿದೆ. ಹೋರಾಟ ತೀವ್ರವಾದಾಗ ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾಡಿದರು. ಪ್ರಾಧಿಕರಣ ಮಾಡ್ತೀವಿ, ರಾಜ್ಯ ಕೊಡಕ್ಕೆ ಆಗಲ್ಲ ಅಂದರು. ನಾಲ್ಕು ದೇಶಗಳು ಸುತ್ತುವರೆದ ಆಯಕಟ್ಟಿನ ಭೂಭಾಗ ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮನ್ನು ಸದಾ ಬಡವರನ್ನಾಗಿಟ್ಟು ಆಳಲು ನೋಡುತ್ತಿದ್ದಾರೆ. ಅಲ್ಲಿನ 70% ಜನ ಕೂಲಿ ಕಾರ್ಮಿಕರು. ಪ್ರತಿ ದಿನ 250 ರೂಪಾಯಿ ಕೂಲಿಗೆ ಕೆಲಸ ಮಾಡುತ್ತಾರೆ. ಅವರು ದುಡಿದಿದ್ದು ದಿನಕ್ಕೆ ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುವಾಗಿದ್ದರೂ ಅವರಿಗೆ ದೊರೆಯುವುದು ಬರೀ ಇನ್ನೂರೈವತ್ತು ರೂಪಾಯಿ. ಪ್ರಪಂಚದಲ್ಲಿ ಎಂಟು ಔಷಧೀಯ ಸಸ್ಯಗಳ ಪ್ರಮುಖ ತಾಣಗಳಿವೆ. ಅದರಲ್ಲಿ ಡಾರ್ಜಿಲಿಂಗ್ ಅರಣ್ಯ ಪ್ರದೇಶವೂ ಒಂದು. ಅಲ್ಲಿನ ಚಹಾ, ಔಷಧೀಯ ಸಸ್ಯ, ಮರಮುಟ್ಟುಗಳು ತುಂಬ ದುಡ್ಡು ತಂದುಕೊಡುವ ಸಂಪನ್ಮೂಲಗಳು. ಅಲ್ಲಿನ ನದಿ, ಕಾಡು, ಬೆಟ್ಟ, ಮಣ್ಣು, ಮರ ಎಲ್ಲವೂ ಭಾರೀ ಸಂಪನ್ಮೂಲಗಳು. ಒಂದು ಪ್ರತ್ಯೇಕ ರಾಜ್ಯವಾದರೂ ನಮ್ಮನ್ನು ಸುಸ್ಥಿರವಾಗಿಡಬಲ್ಲ ಸಂಪನ್ಮೂಲಗಳು ಅಲ್ಲಿವೆ. ಆದರೆ ಯಾವುದೂ ಸಂಪನ್ಮೂಲವಾಗಿ ನಮಗೆ ಸಿಗದಂತಾಗಿದೆ. ಯಾಕೆ ಈ ತರಹದ ಆರ್ಥಿಕ ದಮನ ಮಾಡುತ್ತಿದ್ದಾರೆ? ಚೀನಾ, ಭೂತಾನ, ಬಾಂಗ್ಲಾ, ನೇಪಾಳ ಎಂಬ ನಾಲ್ಕು ದೇಶಗಳಿಂದ ಸುತ್ತುವರೆದ ಅಪಾಯಕರ ಪ್ರದೇಶದಲ್ಲಿ ನಾವಿದ್ದೇವೆ. ಏನಾದರೂ ಚಕಮಕಿ ಆದರೆ ಹೋರಾಡಲು ಸಾವಿಗೆ ಹೆದರದ ಗೂರ್ಖಾ ಜನರು ಬೇಕಾಗಿದ್ದೇವೆ.
ಇವೆಲ್ಲ ಇಷ್ಯೂ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಬೇಕೆಂಬ ಹೋರಾಟ ರೂಪಿಸಿದೆವು. ಅದನ್ನು ದಮನಿಸಲು ಎಲ್ಲಾ ಪ್ರಯತ್ನ ನಡೆಯಿತು. ಸಂಘಟನೆಗಳನ್ನು ಒಡೆಯಲಾಯಿತು. ಸಂಘಟನೆಯ ಕೆಲವು ವ್ಯಕ್ತಿಗಳಿಗೆ ಆಮಿಷವೊಡ್ಡಲಾಯಿತು. ಬಂಧನ, ಪ್ರಕರಣ, ಕೋರ್ಟು, ಅಲೆದಾಟ, ಎಲ್ಲ ಆಯಿತು ಆಗುತ್ತಲೇ ಇದೆ. ಹೋರಾಟ ಚಾಲ್ತಿಯಲ್ಲಿದೆ. ಕೊನೆಗೆ ಪ್ರತಿಯೊಬ್ಬರಿಗೂ ಐದು ಡೆಸಿಮಲ್ ಭೂಮಿ ಕೊಡೋದು ಅಂತ ಆಯಿತು. ಹೊರಗಿನಿಂದ ಬಂದು ನೆಲೆಸಿದ ಭಾರೀ ಪ್ಲಾಂಟರುಗಳಿಗೆ ಸಾವಿರಾರು ಎಕರೆ ಜಮೀನು. ಅಲ್ಲಿನವರೇ ಆದ ನಮಗೆ ಐದು ಡೆಸಿಮಲ್ ಜಮೀನು. ಇದು ತಂದಿಡುವ ಡೆಮಾಗ್ರಫಿಕ್, ಎಕನಾಮಿಕಲ್ ಬದಲಾವಣೆಯನ್ನು ಊಹಿಸಿ. ಇದರ ವಿರುದ್ಧ ಹೋರಾಡದೇ ಇರುವುದಾದರೂ ಹೇಗೆ? ಕವಿ ಆಗಿ ಇದನ್ನು ನೋಡಿ ಹೇಗೆ ಸುಮ್ಮನಿರಲಿ? ನನ್ನ ನೆಲ, ನನ್ನ ಜಮೀನು, ನನ್ನ ಪರ್ವತ ಪ್ರದೇಶದ ಕಾಡು, ಬೆಟ್ಟಗುಡ್ಡ, ನದಿಗಳೆಲ್ಲ ಸಿರಿವಂತರ ಎಸ್ಟೇಟುಗಳಾಗಿ, ರೆಸಾರ್ಟುಗಳಾಗಿ, ವಿಹಾರಧಾಮಗಳಾಗಿರುವಾಗ ನಾನು ಮಾತ್ರ ಐದು ಡೆಸಿಮಲ್ ಜಾಗಕ್ಕೆ ತೃಪ್ತಿ ಹೊಂದಬೇಕೇ?
ನಾನು ಇದುವರೆಗೆ ಆರು ಕವನ ಸಂಕಲನ ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಸಣ್ಣ ಊರಿನ ಪತ್ರಕರ್ತನಾಗಿ ಖಬರ್ ಮತ್ತು ಕಾಂತಿಪುರ ಎಂಬ ಎರಡು ಪತ್ರಿಕೆ ನಡೆಸುತ್ತಿರುವೆ. ಅದರಲ್ಲಿ ನನ್ನ ಜನರ ಸಂಕಟ ಕುರಿತೇ ಬರೆಯುತ್ತೇನೆ. ೨೦೨೩ರಲ್ಲಿ ಸಿಕ್ಕಿಂನಲ್ಲಿ ತೀಸ್ತಾ ಡ್ಯಾಂ ಒಡೆಯಿತು. ಸಾವಿರಾರು ಜನ ಬಾಧೆಗೊಳಗಾದರು. ಜಮೀನು ಮುಳುಗಿತು. ಊರು ಮನೆ ಮುಳುಗಿದವು. ಪುನರ್ವಸತಿ ಆಗಬೇಕಲ್ಲ. ಈ ವಿಚಾರವಾಗಿ ಬರೆದೆ. ಆದರೆ ಅದು ಪ್ರಾಕೃತಿಕ ವಿಪತ್ತು ಎಂದು ಪರಿಗಣಿತವಾಗಲೇ ಇಲ್ಲ. ರಾಷ್ಟ್ರೀಯ ವಿಕೋಪ ಎಂದೂ ಪರಿಗಣನೆಗೆ ಬರಲಿಲ್ಲ. ಎಂದೇ ಯಾವ ಸಹಾಯ, ಹಣವೂ ಬರಲಿಲ್ಲ. ಅದರ ವಿರುದ್ಧ ಬರೆದೆ, ದನಿಯೆತ್ತಿದೆ. ನನ್ನ ಮೇಲೆ ಆಕ್ರಮಣವಾಯಿತು. ಪ್ರಾಣಾಪಾಯ ಆಗುವಷ್ಟು ಗೂಂಡಾಗಳಿಂದ ಹಲ್ಲೆ ಆಯಿತು.
ಪಶ್ಚಿಮ ಬಂಗಾಳದಲ್ಲಿ ೨೩ ಜಿಲ್ಲೆಗಳಿವೆ. ಅದರ ೩೦% ರೆವಿನ್ಯೂ ಡಾರ್ಜಿಲಿಂಗಿನಿಂದ ಬರುತ್ತಿದೆ. ಅಲ್ಲಿ ಏನಿಲ್ಲ? ಎಲ್ಲ ಇದೆ. ಆದರೆ ನನ್ನ ಜನರಿಗೆ ಏನು ಸಿಕ್ಕಿದೆ? ಏನೂ ಇಲ್ಲ. ಇದನ್ನು ಕೇಳಿದರೆ ನನ್ನ ಮೇಲೆ ಆಕ್ರಮಣವಾಗುತ್ತದೆ. ಕೇಸು ಹಾಕುತ್ತಾರೆ. ಇದುವರೆಗೆ ನನ್ನ ಮೇಲೆ 17 ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಡ ಕವಿ, ಪತ್ರಕರ್ತ ಏನು ಮಾಡಬಹುದು? ಒಂದು ಪ್ರಕರಣಕ್ಕೆ ಎಷ್ಟು ಖರ್ಚಾಗುತ್ತದೆ ನಿಮಗೆ ಗೊತ್ತು. ಬಾಯಿ ಮುಚ್ಚಲಿ ಎಂದು ಪ್ರಕರಣದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಡಾರ್ಜಿಲಿಂಗಿನಲ್ಲಿ ಇರುವವರು ಜೀವಂತ ಇದ್ದಾರೆ. ನನ್ನ ಜನ ನನಗಾಗಿ ಕೆಲಸ ಮಾಡುತ್ತಾರೆ. ನೀವು ಭಯಪಡದೆ ದನಿಯೆತ್ತುವವರಾಗಿದ್ದರೆ ನಿಮ್ಮ ಪರವಾಗಿ ನಿಲ್ಲುವವರು ಇದ್ದೇ ಇರುತ್ತಾರೆ. ಜನ ನಿಮಗಾಗಿ ಬರುತ್ತಾರೆ. ಅದಕ್ಕೇ ಹೇಳಬೇಕಾದ್ದನ್ನು ಭಯವಿಲ್ಲದೆ ಹೇಳಬೇಕು, ಬರೆಯಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತ ಹೋಗಬಹುದು, ಹೋಗಲಿ. ಅದರಿಂದಲೇ ಈ ನಾನು ಆಗಿದೀನಿ ಅಲ್ವಾ? ನನಗೆ ನಾನೇ ರೂಪುಗೊಳ್ಳಲು ಸಾಧ್ಯವಿಲ್ಲ, ನನ್ನ ಭಾಷೆಯಿಂದ, ಜನರಿಂದ ನಾನಾಗಿದ್ದೇನೆ. ನಾನು ನನಗಾಗಿ ಬದುಕುವೆನೋ ಜನರಿಗಾಗಿ ಬದುಕುವೆನೋ? ಎಂದು ನಿರ್ಧರಿಸುವುದು ನನ್ನ ಕೈಯಲ್ಲೇ ಇದೆ. ಬಹಳಷ್ಟು ಜನ ಸುರಕ್ಷತೆ, ಸಂಸಾರ ಸುಖ ಎಲ್ಲ ಸಿಗುತ್ತದೆ ಅಂತ ತಮಗಾಗಿ ಮಾತ್ರ ಬದುಕುತ್ತಾರೆ. ನಾನು ನನ್ನ ಬದುಕು ಸಮಾಜಕ್ಕೆ, ಜನರಿಗೆ ಅಂತ ನಿರ್ಧರಿಸಿದ್ದೇನೆ.
ನಿಮಗನಿಸಬಹುದು, ಇವ ಕವಿ. ಕವಿತೆ ಬಿಟ್ಟು ಇದೇನು ಮಾತಾಡ್ತಿದಾನೆ ಅಂತ. ಇದೇನು ಪಾಲಿಟಿಕ್ಸ್ ಮಾತಾಡುತ್ತಿದಾನಲ್ಲ ಅಂತ. ನಾನು ಅಂಟುನಂಟು ಹೊಂದಿರುವ ನನ್ನ ನೆಲ ನನ್ನದಲ್ಲದಿದ್ದರೆ ಕವಿತೆ ಹೇಗೆ ಬರೆಯಲಿ? ನನ್ನ ಜನರ ಕಷ್ಟ ಅರ್ಥವಾಗದಿದ್ದರೆ ಕವಿತೆ ಯಾಕೆ ಬರೆಯಲಿ? ನಾವು ಏನೋ ಅದನ್ನೇ ಕವಿತೆಯಾಗಿ ಬರೆಯಬೇಕು. ನಮಗೇನಾಗುತ್ತಿದೆಯೋ ಅದನ್ನೇ ಬರೆಯಬೇಕು. ಆದ್ದರಿಂದ ನಾನು ಈ ತರಹದ ಕವಿತೆ ಬರೆಯುತ್ತಿದ್ದೇನೆ. ಅದರಿಂದ ಹೊರಬರಲಾರದವನಾಗಿದ್ದೇನೆ. ಯಾಕೆಂದರೆ ನನಗೆ ಕಾಲ್ಪನಿಕವಾದದ್ದು ಬರೆಯಲು ಗೊತ್ತಿಲ್ಲ. ನನಗೆ ನನ್ನದು ಗೊತ್ತು. ನನ್ನ ಸುತ್ತಮುತ್ತಿನದು ಗೊತ್ತು. ಮತ್ತು ನಾನು ಅದನ್ನೇ ಬರೆಯುವವನು. ಕಾಲ್ಪನಿಕವಾದದ್ದನ್ನು ಬರೆದರೆ ನನ್ನ ಜನರಿಗೇನು ಸಿಗುತ್ತದೆ? ನನಗೇನು ಸಿಗುತ್ತದೆ? ಕವಿಯೂ ಒಂದು ಮನುಷ್ಯ ಜೀವಿ. ಅವರಿಗೆ ಸಂವೇದನೆ ಇರಬೇಕು. ಸುತ್ತ ನಡೆಯುವುದು ಏನೂ ಕಾಣುತ್ತಿಲ್ಲ ಅಂದರೆ ಅಂತಹವರು ಸತ್ತ ಮನುಷ್ಯರು. ಮಿಡಿಯುವ ಹೃದಯ ಇಲ್ಲದಿದ್ದರೆ ಜೀವವಿಲ್ಲದ ಶವದಂತೆ ಆ ಬದುಕು. ಕವಿಗಳಿಗಿದು ಗೊತ್ತಿರಬೇಕು: ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾಜವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಆಗ ನಮ್ಮನ್ನು ಜೀವಂತವಾಗಿಡಲು ಕೇವಲ ಕವಿತೆ ಸಾಕು. ಜಿಂದಾ ರಖನೆ ಕೇ ಲಿಯೆ ಪೊಯೆಟ್ರಿ ಕಾಫೀ ಹೈ. ನಾನು ಇದನ್ನೇ ಮಾಡುತ್ತಿದ್ದೇನೆ.
ಧನ್ಯವಾದ. ನಿಮ್ಮ ಪ್ರೀತಿ ನನ್ನಲ್ಲಿ ಕಣ್ಣೀರು ತುಂಬಿಸುತ್ತಿದೆ. ನಮಸ್ಕಾರ.
No comments:
Post a Comment