Wednesday 2 July 2014

ಕುಣಬಿ: ಕೊಂಕಣದ ಮಕ್ಕಳ ಕತೆ-ವ್ಯಥೆ



ಉತ್ತರಕನ್ನಡಕ್ಕೆ ೨೧ ವರ್ಷಗಳ ಕೆಳಗೆ ಬಂದಾಗ ಇಲ್ಲಿನ ಭಾಷಾ ಮತ್ತು ಜನಾಂಗ ವೈವಿಧ್ಯತೆ ಗಮನ ಸೆಳೆದಿದ್ದವು. ಅದರಲ್ಲೂ ಘಟ್ಟದಲ್ಲಿದ್ದ ಬೆಟ್ಟಗಳಲ್ಲಿದ್ದ, ದೂರದೂರದ ಊರಿನಿಂದ ಬರುತ್ತಿದ್ದ ಮರಾಠಿ ಮಿಶ್ರಿತ ಕೊಂಕಣಿ ಮಾತನಾಡುವವರು ವಿಶಿಷ್ಟವೆನಿಸಿದ್ದರು. ಅವರಲ್ಲಿ ಬಹುತೇಕರು ಅಶಿಕ್ಷಿತರು. ಆಧುನಿಕ, ವೈಜ್ಞಾನಿಕ ತಿಳುವಳಿಕೆ ಕಡಿಮೆಯಿದ್ದು ಎಲ್ಲಕ್ಕೂ ದೇವರನ್ನು, ದೆವ್ವವನ್ನು ನಂಬಿದವರು. ಹಿಂಡುಹಿಂಡಾಗಿ ಆಸ್ಪತ್ರೆಗೆ ಬರುತ್ತಿದ್ದರು. ಅವರು ಬಡವರಾಗಿರಲಿಲ್ಲ. ಆದರೆ ಅತಿ ಪಥ್ಯ, ವ್ರತನೇಮ ಉಪವಾಸಗಳು, ಆಹಾರ ಕುರಿತ ತಪ್ಪು ತಿಳುವಳಿಕೆಗಳು ಅಪೌಷ್ಟಿಕತೆಗೆ ಕಾರಣವಾಗಿದ್ದವು. ಅಂಗಳದಲ್ಲಿ ಬೆಳೆದ ಅಬ್ಬಲಿಗೆ ಹೂವಿನಿಂದ ಹಿಡಿದು ಅನಾನಸು, ಬೆಲ್ಲ, ಜೇನು, ಪರಿಮಳದ ಅಕ್ಕಿ ಏನೇನನ್ನೋ ತಂದುಕೊಡುತ್ತಿದ್ದರು. ಒರಟು ಅಂಗೈ, ಜಡ್ಡುಹಿಡಿದ ಕಾಲು, ಕಂದು ಚರ್ಮ ಅವರೆಂಥ ಶ್ರಮಜೀವಿಗಳೆನ್ನುವುದನ್ನು ಹೇಳುತ್ತಿದ್ದವು. ಕಡಿಮೆ ಬಟ್ಟೆಯಲ್ಲಿರುತ್ತಿದ್ದ ಹಿರಿಯರು ಮತ್ತು ಎಳೆದು ಆಡುವ ಅವರ ಕನ್ನಡ ಎದ್ದು ಕಾಣುತ್ತಿತ್ತು. ಹೆರಿಗೆ ಮತ್ತಿತರ ಆಸ್ಪತ್ರೆಯಲ್ಲಿ ಉಳಿಯುವಂತಹ ಕಾಯಿಲೆ-ಸಂಕಟಗಳು ಬಂದಾಗ ಕುಟುಂಬಕ್ಕೆ ಕುಟುಂಬವೇ ಆಸ್ಪತ್ರೆಯಲ್ಲಿ ತಂಗುತ್ತಿತ್ತು. ಒಂದು ವಾಹನ ಮಾಡಿಕೊಂಡು ಪೇಶೆಂಟ್ ಕರೆತಂದರೆ ವಾಹನದ ತುಂಬ ಜನ ಬರುತ್ತಿದ್ದರು. ಹೆರಿಗೆಗಾಗಿ ಒಬ್ಬ ಮಹಿಳೆ ಬಂದರೆ ಅವಳ ಜೊತೆ ಹತ್ತಿಪ್ಪತ್ತು ಜನ ಬರುತ್ತಿದ್ದರು. ದಿನ ತುಂಬಿದ ಬಸುರಿಯನ್ನು ಹೇಗೆ ಕರೆತಂದಾರೋ ಎಂದು ನನಗೆ ಗಾಬರಿಯಾದರೆ ಅವರು ಏನಿಲ್ಲ, ‘ನೀವಿದೀರಲ್ರಾ ಅಮಾ. ದೇವ್ರು ನಡೆಸಿದಂಗೆ ಆಗ್ತೀತೆ’ ಎನ್ನುತ್ತ ಎಲ್ಲ ಭಾರ ತಮ್ಮ ಹೆಗಲಿಂದ ವರ್ಗಾಯಿಸಿಬಿಡುತ್ತಿದ್ದರು. ಅವರಿಗೆ ಪೇಟೆಯಲ್ಲಿ ಒಬ್ಬ ಸಂಬಂಧಿಯೂ ಇರಲಿಲ್ಲ. ನೆಂಟರಿಷ್ಟರು ಅವರಂತೆಯೇ ಗುಡ್ಡಗಾಡು ಪ್ರದೇಶಗಳಲ್ಲಿರುತ್ತಿದ್ದರು. ತುಂಬ ಸಂಕೋಚದ, ಲೆಕ್ಕಾಚಾರದ, ಪ್ರಾಕ್ಟಿಕಲ್ ಆದ ಜನ ಅವರು. ಕನ್ನಡ ಸರಿಯಾಗಿ ಬರದ, ಆಧುನಿಕ ವರಸೆಗಳೊಂದೂ ತಿಳಿಯದವರ ಬಳಿ ವ್ಯವಹರಿಸುವುದು ಸುಲಭವಲ್ಲ. ಪ್ರತಿ ಗುಂಪಿನೊಟ್ಟಿಗೂ ಒಬ್ಬ ಮುಖ್ಯಸ್ಥೆ ಯಾ ಹಿರಿಯ ಇರುತ್ತಿದ್ದು ಅವರ ಬಳಿ ಮೊದಲು ಮಾತುಕತೆಯಾಡಬೇಕಿತ್ತು. ಯಾವುದನ್ನೂ ಸುಲಭಕ್ಕೆ ನಂಬರು, ನಂಬಿದ ಮೇಲೆ ಮುಗಿಯಿತು, ಮತ್ತೆ ಅನುಮಾನ ಇಟ್ಟುಕೊಳ್ಳರು.

ಈ ಇಂಥ ನಮ್ಮವರು ಮರಾಠಿ ಮಾತಾಡುತ್ತಿದ್ದರು. ಇವರು ಯಾವಾಗ ಮತ್ತು ಹೇಗೆ ಕರ್ನಾಟಕದ ಉತ್ತರಕನ್ನಡದ ಗುಡ್ಡಬೆಟ್ಟಗಳ ಹತ್ತಿ ಕುಳಿತರು? ಯುದ್ಧ ಕಾರಣವಾಗಿ ಔರಂಗಜೇಬನ ಸೈನ್ಯ, ಪೇಶ್ವೆ ಸೈನ್ಯ ನಗರ ಸಂಸ್ಥಾನ, ಕೆಳದಿ, ಶಿವಮೊಗ್ಗೆಗೆಲ್ಲ ಬಂದಿತ್ತಂತೆ. ಗೊತ್ತಿಲ್ಲದೆ ಮಳೆಗಾಲದಲ್ಲಿ ಬಂದವರು ಕಾಡಿನಲ್ಲಿ ಇಂಬಳ ಕಚ್ಚಿಸಿಕೊಂಡು ತಡೆಯಲಾಗದೇ ಹಿಮ್ಮೆಟ್ಟಿದರಂತೆ. ಆಗೇನಾದರೂ ಮಳೆಗೆ ಹೆದರಿ ಗುಡ್ಡ ಹತ್ತಿ ಕುಳಿತವರೆ ಇವರು?

ಸ್ಪಷ್ಟ ಜನಾಂಗೀಯ ಜ್ಞಾನವಿಲ್ಲದ ನನ್ನ ಕಲ್ಪನಾವಿಲಾಸ ಆಗ ಇತಿಹಾಸದ ಯಾವ್ಯಾವುದೋ ಪುಟ ಸುತ್ತುತ್ತಿತ್ತು. ನಂತರ ತಿಳಿಯಿತು, ಅವರು ‘ಕುಮ್ರಿ ಮರಾಟಿ’ ಎಂದು ಕರೆಯಲ್ಪಡುವ ಸಮುದಾಯ ಎಂದು. ಅವರ ಹಿನ್ನೆಲೆ ಅರಸುತ್ತ ಹೋದಾಗ ಕೆಲ ಆಸಕ್ತಿ ಮೂಡಿಸುವ ವಿಷಯಗಳು ತಿಳಿದುಬಂದವು.

***



ಕುಂಡಲ.

ಮಳೆಗಾಲದ ನಾಲ್ಕು ತಿಂಗಳು ಹಿನ್ನೀರಿನಲ್ಲಿ ದ್ವೀಪವಾಗಿಬಿಡುವ ಊರು ಕುಂಡಲ. ಆದರೆ ಊರ ಜನ ದ್ವೀಪವಾಗಿ ಉಳಿಯಲು ಬಯಸದವರು. ಕುಂಡಲದ ಕಲಾತಂಡ ತಾಳ ಬಾರಿಸುತ್ತಾ, ಕೋಲು ಹಾಕುತ್ತಾ ಕೊಂಕಣಿ ಭಾಷೆಯಲ್ಲಿ ಹಾಡುತ್ತಾ ಹೆಜ್ಜೆ ಹಾಕುತ್ತಿತ್ತು. ಅವರ ವೇಷಭೂಷಣಗಳಲ್ಲಿ ಮರಾಠಿ ಪ್ರಭಾವ ಎದ್ದು ಕಾಣುತ್ತದೆ. ಹಾಡಿನಲ್ಲಿ ಆ ಭಾಗದ ಕಾಡಿನ ಮರಗಳ, ಹೂಗಳ, ನಾನಾ ಫಲಗಳ ಹೆಸರು ಸುಳಿಯುತ್ತಿದ್ದವು. ದೂರದಲ್ಲಿ ಹಿರಿಯ ಹೆಣ್ಮಕ್ಕಳು ಅವರ ಹಾಡು ಕುಣಿತವನ್ನು ಕೇಳುತ್ತ ಸುಮ್ಮನೆ ಕೂತಿದ್ದರು. ಎರಡೂ ಹೆಗಲು ಕಾಣುವಂತೆ ಸೀರೆಯುಡುವ ಆ ಮಹಿಳೆಯರು ನಾಗರಿಕರ ನಡುವೆ ‘ಶಿಷ್ಟ’ವಾಗಿ ಕಾಣಲು ಟವೆಲು ಹೊದ್ದುಕೊಂಡಿದ್ದರು!

ನಂತರ ಹೆಣ್ಮಕ್ಕಳ ಸರದಿ. ಡೋಲು ಹಿಡಿದು ಗುಂಪಿನಲ್ಲಿ ರೌಂಡಾಗಿ ತಿರುಗುತ್ತ ಎಲ್ಲ ಒಟ್ಟಿಗೆ ಹಾಡಿಕೊಳ್ಳತೊಡಗಿದರು. ಒಬ್ಬರಾದರೂ ಮೈಕ್ ಎದುರು ಬನ್ನಿ, ಆಗ ಹಾಡು ಎಲ್ಲರಿಗೆ ಕೇಳೀತು ಎಂದರೆ ಊಂಹ್ಞೂಂ, ಗುಂಪು ಬಿಟ್ಟರೆ, ಹೆಜ್ಜೆ ಹಾಕದಿದ್ದರೆ ಹಾಡು ಹೊರಡುವುದೇ ಇಲ್ಲ ಎಂದರು! ಹುಟ್ಟಾ ಕೃಷಿಕರಾದ ಅವರ ಹಾಡಿನ ತುಂಬ ಕೃಷಿಯ ವಿವರಗಳು. ನಿಂಬೆ ಗಿಡ ನೆಟ್ಟದ್ದು, ಮಣ್ಣು-ನೀರು-ಗೊಬ್ಬರ ಹಾಕಿದ್ದು; ಮೊದಲ ಎಲೆ ಚಿಗುರಿದ್ದು; ಎರಡೆಲೆ ಆಗಿದ್ದು; ನಾಲ್ಕೆಲೆ, ಎಂಟೆಲೆ ಹೀಗೇ ಚಿಗುರುತ್ತ ಹೋಗಿ ಕೊನೆಗೆ ಹೂವಾಗಿದ್ದು; ಫಲವಾಗಿ ‘ಹಳೂದಿ’ ನಿಂಬೆ ಹಣ್ಣಾಗಿದ್ದು ಎಲ್ಲವೂ ಹಾಡಿನಲ್ಲಿ ಸುಳಿದವು. ‘ಹಣ್ಣು ಕಿತ್ತು ಬುಟ್ಟಿಯಲಿಟ್ಟು ಸಂತೆಗೆಂದು ಜೋಯ್ಡಾಕ್ಕೆ ಒಯ್ದೆ, ನೂರಕ್ಕೆ ಮೂರು ರೂಪಾಯಿ ಎಂದರು. ದಾಂಡೇಲಿಗೆ ಒಯ್ದೆ - ಮೂರು ರೂಪಾಯಿ ಎಂದರು. ಲೋಂಡಾಕ್ಕೆ ಒಯ್ದೆ, ಅಲ್ಲೂ ಮೂರೇ ರೂಪಾಯಿ ಎಂದರು..’ ಎಂದು ಹಾಡು ಕೊನೆಯಾಗುತ್ತದೆ. ಎಂದರೆ ತಾವು ತಿಂಗಳುಗಟ್ಟಲೆ ಬೆಳೆಸಿದ್ದಕ್ಕೆ ಯಾವ ಪೇಟೆಗೆ ಹೋದರೂ ಸೂಕ್ತ ದರ ಸಿಗಲಿಲ್ಲ ಎಂಬುದು ಒಟ್ಟೂ ಹಾಡಿನ ತಾತ್ಪರ್ಯ.

ಬೆಳೆ ಬೆಳೆಯುವ; ಅದನ್ನು ವನ್ಯಪ್ರಾಣಿಗಳಿಂದ ರಕ್ಷಿಸಿ ಹೊತ್ತು ಮಾರುಕಟ್ಟೆಗೆ ತರುವ ಕೆಲಸ ಸೂಕ್ತ ದರ ಸಿಗದೇ ಹೋದರೆ ಶ್ರಮವೆನಿಸಿ ಹೇಗೆ ನಿರಾಸೆ ಆವರಿಸುತ್ತದೆ ಎನ್ನುವುದು ಅವರ ಸಾಲಿನಲ್ಲಿ ವ್ಯಕ್ತವಾಗುತ್ತಿತ್ತು.

ಈ ಹಾಡು, ಮೇಳದಿಂದ ದೂರದಲ್ಲಿ ಕೆಲವರು ಮಂಕಾಗಿ ಕೂತಿದ್ದರು. ಅವರ ಮ್ಲಾನಮುಖಗಳು ಎಷ್ಟೋ ಸಮಸ್ಯೆಗಳನ್ನು ಹೇಳುತ್ತಿದ್ದವು. ಅವರು ಆನೆ ತುಳಿತಕ್ಕೊಳಗಾಗಿ ತೀರಿಕೊಂಡಾತನ ಕುಟುಂಬದವರು. ಕಾಡಿನಂಚಿನಲ್ಲಿ ಸಾಗುವಳಿ ಮಾಡಿಕೊಂಡಿದ್ದ ಆ ಪುಟ್ಟ ಸಂಸಾರದ ಏಕಮಾತ್ರ ದುಡಿವ ವ್ಯಕ್ತಿ ಆನೆಯ ತುಳಿತಕ್ಕೆ ಒಳಗಾಗಿ ಪುಡಿಪುಡಿಯಾಗಿ ಹೋಗಿದ್ದ. ಅವನನ್ನೇ ನೆಚ್ಚಿದ್ದ ವಯಸ್ಸಾದ ತಾಯಿ, ಅಂಗವಿಕಲ ಹೆಂಡತಿ ಹಾಗೂ ಎರಡು ಪುಟ್ಟ ಮಕ್ಕಳ ಸಂಸಾರ ಅಕ್ಷರಶಃ ಅನಾಥವಾಗಿತ್ತು. ಆ ಜಮೀನನ್ನು ಅವರು ತಲೆತಲಾಂತರದಿಂದ ಮಾಡಿಕೊಂಡು ಬಂದಿದ್ದರೂ ಅಧಿಕೃತ ದಾಖಲೆ ಪ್ರಕಾರ ಅದು ಫಾರೆಸ್ಟ್ ಡಿಪಾರ್ಟ್‌ಮೆಂಟಿಗೆ ಸೇರಿತ್ತು. ಅದರ ದಾಖಲೆಗಳನ್ನು ಪಡೆದುಕೊಳ್ಳುವಷ್ಟು ಕಚೇರಿ/ಕನ್ನಡ ಜ್ಞಾನವೂ ಅವರಲ್ಲಿರಲಿಲ್ಲ. ಇನ್ನು ಪರಿಹಾರ ದೂರದ ಮಾತು. ಮನುಷ್ಯನಿಂದ ಆನೆಯೂ, ಆನೆಯಿಂದ ಮನುಷ್ಯರೂ ಪರಸ್ಪರ ಪೀಡಿತರಾಗಿದ್ದು ಕಾಲ ಅವರ ಬದುಕನ್ನು ದುರ್ಭರಗೊಳಿಸಿತ್ತು.

ಈ ಜನ ಕುಣಬಿಗಳು. ಗುಜರಾತ್, ಗೋವಾ, ಕರ್ನಾಟಕ, ಆಂಧ್ರ, ಕೇರಳಗಳಲ್ಲಿ ಮುಖ್ಯವಾಗಿ ಕಾಣುವ ಇವರು ಮಹಾರಾಷ್ಟ್ರ, ಗುಜರಾತ್, ಗೋವಾಗಳ ಮೂಲ ನಿವಾಸಿಗಳು. ವಲಸೆ ಬಂದ ಉತ್ತರದ ಮುಂಡಾರಿ ಸಮುದಾಯವೇ ನಂತರ ಕುಣಬಿ ಎಂದಾಯಿತು ಎಂದೂ ಕೆಲವರ ಅಭಿಪ್ರಾಯ. ದಕ್ಷಿಣದ ವಿಭಿನ್ನ ರಾಜ್ಯಗಳಲ್ಲಿ ಅವರು ಹಂಚಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ತಮ್ಮ ಸಂಖ್ಯೆಯಿಂದಲೂ, ಅಧಿಕಾರದ ಸನಿಹಕ್ಕೆ ಪಡೆದ ಮೇಲ್ಚಲನೆಯಿಂದಲೂ ಕುಣಬಿಗಳು ಅನುಕೂಲಕರ ಪರಿಸ್ಥಿತಿಯಲ್ಲಿದ್ದಾರೆ. ಪೇಶ್ವೆಗಳ ಕಾಲದಲ್ಲಿ ಪಾರಂಪರಿಕ ಕೃಷಿ ವೃತ್ತಿಯಿಂದ ಸೈನ್ಯ ಪ್ರವೇಶ ಪಡೆದ ಕುಣಬಿಗಳು ನಂತರ ಸಣ್ಣಪುಟ್ಟ ಪಾಳೆಯಪಟ್ಟುಗಳ ಆಡಳಿತಗಾರರಾಗುವ ತನಕ ಅಧಿಕಾರಸ್ಥರಾದರು. ತಮ್ಮನ್ನು ಮರಾಠ ಕುಣಬಿಗಳೆಂದು ದಾಖಲಿಸಿದರು. ಶಿಂಧೆ (ಸಿಂಧಿಯಾ), ಗಾಯಕ್ವಾಡ್ ಮುಂತಾದ ಆಳುವ ಮನೆತನಗಳು ಕುಣಬಿ ಮೂಲದವರೆಂದು ಹೇಳಲಾಗುತ್ತದೆ. ಕರ್ನಾಟಕ, ಕೇರಳದಲ್ಲಿ ಇವರು ವಲಸೆಬಂದ ಸಮುದಾಯಗಳು. ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಅತಿ ಹಿಂದುಳಿದ ಬುಡಕಟ್ಟು ಜನಾಂಗ. ಬುಡಕಟ್ಟು ಆದರೂ ಬುಡಕಟ್ಟು ಎನಿಸಿಕೊಳದೇ ‘ಹಿಂದುಳಿದ ಜಾತಿ’ಯಾಗಿ ಪರಿಗಣಿಸಲ್ಪಟ್ಟ ಜನಾಂಗ. ಇವರು ಉತ್ತರಕನ್ನಡದ ಇತರ ತಾಲೂಕುಗಳಲ್ಲಿ ಅಲ್ಲದೇ ಕರ್ನಾಟಕದ ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಬೆಳಗಾವಿ ಜಿಲ್ಲೆಗಳಲ್ಲೂ ಇದ್ದಾರೆ.

ಉಳಿದ ಜಿಲ್ಲೆಗಳ ಕುಣಬಿಗಳಿಗಿಂತ ಉತ್ತರ ಕನ್ನಡದವರು; ಉತ್ತರ ಕನ್ನಡದ ಕುಣಬಿಗಳಲ್ಲೇ ಜೋಯ್ಡಾ ತಾಲೂಕಿನವರು ಅತಿ ಹಿಂದುಳಿದಿದ್ದಾರೆ. ಈ ಲೇಖನವು ಜೋಯ್ಡಾ ಕುಣಬಿಗಳನ್ನು ಗಮನದಲ್ಲಿರಿಸಿಕೊಂಡಿದೆ. ಅವರ ಸಮಸ್ಯೆಗಳ ಕಾರಣ, ಪರಿಹಾರಗಳನ್ನು ಅವರ ಬಾಯಿಂದಲೇ ಕೇಳಿದಾಗ ದೊರೆತ ಅಭಿಪ್ರಾಯಗಳು ಇಲ್ಲಿವೆ:

ಪ್ರಕೃತಿಯ ಜೊತೆಗೆ ಬದುಕುವ, ಪ್ರಕೃತಿಯ ಆರಾಧಕರಾದ ಕುಣಬಿಗಳು ಹಲವು ವಿಪರ್ಯಾಸಗಳ ನಡುವೆ ಬದುಕು ಸಾಗಿಸಿದ್ದಾರೆ. ಅವರಿಗೆ ಪ್ರಕೃತಿ ಪೊರೆವ ತಾಯಿಯಾಗಿರುವಂತೆಯೇ ಸಮಸ್ಯೆಯ ಮೂಲವೂ ಆಗಿದೆ. ಯಾವ ಕಾಡು ಅವರಿಗೆ ಸಕಲ ಸಂಪತ್ತಾಗಿದೆಯೋ ಅದೇ ಕಾಡು ಉಳಿದ ಜಗತ್ತಿನೊಂದಿಗೆ ಸಂಪರ್ಕ ಕಡಿಯುವ ಗೋಡೆಯೂ ಆಗಿದೆ. ಯಾವ ನದಿ ಜೀವಜಲ ಉಣಿಸುವುದೋ ಅದೇ ನದಿ ಅವರ ಊರು-ಕೇರಿ-ಹಾಡಿಗಳನ್ನು ಮುಳುಗಿಸಿದೆ; ಅಥವಾ ಯೋಜನೆಗಳ ನೆಪದಲ್ಲಿ ಎತ್ತಂಗಡಿಗೆ ಕಾರಣವಾಗಿದೆ. ಯಾವ ಕಾಡುಪ್ರಾಣಿಗಳನ್ನು ಅವರು ಪೂಜಿಸುವರೋ ಅವೇ ತಂತಮ್ಮ ರಕ್ಷಣೆಯ ಹೆಸರಿನ ಯೋಜನೆಗಳ ಕಾರಣದಿಂದ ಮುಳುವಾಗಿವೆ. ಆನೆಯಂತೂ ಯೋಜನೆಯ ನೆಪದಲ್ಲಿ ಅಷ್ಟು; ಹೊಲಗದ್ದೆತೋಟಮನೆಗಳ ಮೇಲಿನ ದಾಳಿಯಿಂದ ಅಷ್ಟು; ಕೊನೆಗೆ ವಿದ್ಯುತ್ ತಂತಿ ಬೇಲಿ ಹಾಯ್ದು ಅದು ಯಾರ ಜಾಗದಲ್ಲಿ ಸತ್ತುಬಿದ್ದಿತೋ ಅವರನ್ನು ಜೈಲಿಗೆ ಕಳಿಸುವಷ್ಟು ಅವರಿಗೆ ತೊಂದರೆ ಒಡ್ಡಿದೆ.



ಅವರಿಗೆ ಈಗ ಆನೆ ಒಂದು ಸಮಸ್ಯೆ; ಕಾಡು ಒಂದು ಸಮಸ್ಯೆ; ಹುಲಿ ಒಂದು ಸಮಸ್ಯೆ; ಜಿಲ್ಲಾ ಕೇಂದ್ರದಿಂದಿರುವ ದೂರ ಒಂದು ಸಮಸ್ಯೆ. ಆಡುವ ಭಾಷೆ, ಆಡಳಿತ ಭಾಷೆ ಎರಡೂ ಸಮಸ್ಯೆಗಳೇ. ಕಡಿಮೆ ಜನಸಂಖ್ಯೆ ಒಂದು ಸಮಸ್ಯೆ, ಅಧಿಕಾರ ಕೇಂದ್ರದಿಂದ ದೂರ ಇರುವುದೇ ಮುಖ್ಯ ಸಮಸ್ಯೆ.

ಕುಣಬಿಗಳ ಹಿಂದುಳಿದಿರುವಿಕೆಯ ಒಂದು ಕಾರಣ ಅವರ ಸಮುದಾಯ ಆಧುನಿಕ ಶಿಕ್ಷಣ, ಉದ್ಯೋಗ ಪಡೆಯಲಾಗದೇ ಇರುವುದರಲ್ಲಿ ಇದೆ. ಜೊತೆಗೆ ಅವರು ವಾಸಿಸುವ ಜೋಯ್ಡಾ ಪ್ರದೇಶದ ಭೌಗೋಳಿಕ ಪರಿಸರವೂ ಕಾರಣವಾಗಿದೆ. ಏಕೆಂದರೆ ಉಳಿದೆಡೆಗಳಲ್ಲಿ ವಾಸಿಸುವವರಿಗಿಂತ ಜೋಯ್ಡಾದ ಜನಸಮುದಾಯ ಕೆಲವು ವಿಶೇಷ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಸ್ ಬರದ, ಕರೆಂಟ್ ಇರದ, ಆಸ್ಪತ್ರೆ-ಮೆಡಿಕಲ್ ಶಾಪುಗಳಿರದ, ಶಾಲೆಯಿರದ, ಯಾವುದೇ ಆಧುನಿಕ ಸಂಪರ್ಕ ವ್ಯವಸ್ಥೆ ಇಲ್ಲದ ಎಷ್ಟೋ ಹಳ್ಳಿಗಳು ಜೋಯ್ಡಾದ ಕಾಡುಗಳಲ್ಲಿವೆ. ಬಹುಪಾಲು ಮಹಿಳೆಯರು ಮನೆಯಲ್ಲೇ ಹೆರುತ್ತಾರೆ. ತಾಲೂಕಾ ಆಸ್ಪತ್ರೆಯಿದೆ, ತಜ್ಞ ವೈದ್ಯರಿದ್ದಾರೆ ಆದರೆ ಅಲ್ಲಿಗೆ ತಲುಪಲು ಸಾಧ್ಯವಿರದ, ೧೦೮ ಆಂಬುಲೆನ್ಸ್ ಮುಟ್ಟಲಾಗದ ಹಾಡಿಗಳಿವೆ. ಅಪೌಷ್ಟಿಕತೆಯ ಮಕ್ಕಳಿವೆ, ಅಶಿಕ್ಷಿತ ಮಕ್ಕಳಿವೆ, ತಮ್ಮ ಪಾರಂಪರಿಕ ನಂಬಿಕೆ-ಮೂಢನಂಬಿಕೆಗಳಲ್ಲಿ ಮುಳುಗಿ ಆಧುನಿಕತೆಗೆ, ರಾಜಕೀಯಕ್ಕೆ ಕೊಂಚವೂ ತೆರೆದುಕೊಳ್ಳದವರಿದ್ದಾರೆ.

ಅವರ ಭಾಷೆ ಕುಣಬಿ ಕೊಂಕಣಿ. ಜೋಯ್ಡಾದ ೬೫% ಜನ ಆಡುವ ಭಾಷೆ ಕೊಂಕಣಿ. ಆದರೆ ಭಾಷೆ ಅವರಿಗೆ ಹೇಗೆ ಅಸ್ಮಿತೆಯಾಗಿದೆಯೋ ಹಾಗೇ ತಡೆಗೋಡೆಯೂ ಆಗಿದೆ. ಆ ಸಮಾಜದ ಮುಖಂಡರು ಸಹಾ ತಮಗೆ ‘ಕನ್ನಡ್ ಅಷ್ಟ್ ಸರೀ ಬರೂದಿಲ್ಲ, ಹ್ಞಾಂವ್ ಕೊಂಕಣಿ ಉಲಯತಾ’ ಎನ್ನುತ್ತ ಕೊಂಕಣಿಯಲ್ಲೇ ಮಾತನಾಡುತ್ತಾರೆ. ಕುಣಬಿ ಮಕ್ಕಳು ಶಾಲೆಗೆ ಹೋದರೂ ಕನ್ನಡ ಅವರಿಗೆ ಇಂಗ್ಲೀಷಿನಷ್ಟೇ ಕಾಡುತ್ತದೆ. ಅವರು ಬೆಳೆದ ಪರಿಸರ ಪೂರ್ತಿ ಕೊಂಕಣಿಮಯವಾಗಿರುವುದರಿಂದ ಕನ್ನಡ ಅವರಿಗೆ ಪರಕೀಯ ಭಾಷೆ. ಅದರ ಜೊತೆಗೆ ಇಂಗ್ಲಿಷ್, ಹಿಂದಿ ಎಂಬ ಇನ್ನಷ್ಟು ಪರಕೀಯ ಭಾಷೆ ಸೇರಿದರಂತೂ ಮುಗಿಯಿತು, ಮಕ್ಕಳನ್ನು ಅಪರಿಚಿತ ಭಾಷೆಗಳೇ ಶಾಲೆಯಿಂದ ಹೊರತಳ್ಳುತ್ತವೆ.


೪೬ ಸಾವಿರ ಜನಸಂಖ್ಯೆಯ ಜೋಯ್ಡಾ ತಾಲೂಕಿನಲ್ಲಿ ೧೯ ಸಾವಿರ ಜನ ಕುಣಬಿಗಳಿದ್ದಾರೆ. ೧೯೬೦ರ ತನಕ ಕರ್ನಾಟಕದಲ್ಲಿ ಪ.ಪಂಗಡಕ್ಕೆ ಸೇರಿದ್ದ ಈ ಸಮುದಾಯ ಪ. ಪಂಗಡ ಪುನರ್‌ವಿಂಗಡಣೆಯಾದಾಗ ಹಿಂದುಳಿದ ಜಾತಿಯಾಗಿ ಗುರುತಿಸಲ್ಪಟ್ಟಿತು. ದಕ್ಷಿಣ ಭಾರತದ ಜನಸಮುದಾಯಗಳ ಅಧ್ಯಯನ ನಡೆಸಿ ೧೯೦೪ರಲ್ಲಿ ಪುಸ್ತಕ ಪ್ರಕಟಿಸಿದ ಎಡ್ಗರ್ ಥರ್ಸ್ಟನ್ ಈ ಸಮುದಾಯ ಹಲವು ಹೆಸರುಗಳಿಂದ ಕರೆಯಲ್ಪಡುವುದನ್ನು ಗುರುತಿಸಿದ್ದ. ಕುಣಬಿ, ಕುಮ್ರಿ, ಕುನಪಿ, ಕುಣ್ಬಿ, ಕುಡುಬಿ, ಕುಡುಂಬಿ, ಮರಾಠ ಕುಣಬಿ, ಕುಮ್ರಿ ಮರಾಠಿ ಎಂದೆಲ್ಲ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸಮುದಾಯ ಒಂದೇ ಎಂದು ಆತ ಗುರುತಿಸಿದ್ದ. ನೆರೆಯ ಗೋವಾ ರಾಜ್ಯದಲ್ಲಿ ಕುಣಬಿಗಳು ೨೦೦೨ರಿಂದ ಪ.ಪಂಗಡಕ್ಕೆ ಸೇರಿಸಲ್ಪಟ್ಟಿದ್ದಾರೆ. ಕೇರಳದಲ್ಲೂ ಅವರು ಪ. ಪಂಗಡಕ್ಕೆ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ಬುಡಕಟ್ಟು ಲಕ್ಷಣಗಳನ್ನು ಕಳೆದುಕೊಂಡು ಅದು ಒಂದು ಪ್ರಭಾವಿ ಹಿಂದುಳಿದ ಜಾತಿಯಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಳುವವರ ನಿರಂತರ ಅವಗಣನೆಗೆ ಒಳಗಾಗಿ ಸಮುದಾಯವು ಪ.ಪಂಗಡದಲ್ಲೂ ಗುರುತಿಸಲ್ಪಡಲಿಲ್ಲ, ಸಿಗಬೇಕಾದ ಹಕ್ಕು-ಸವಲತ್ತುಗಳೂ ತಲುಪಲಿಲ್ಲ.

ಜೋಯ್ಡಾ ದೊಡ್ಡ ತಾಲೂಕು. ೧೫ ಗ್ರಾಮ ಪಂಚಾಯ್ತಿಗಳಿದ್ದು ಕಾಡು ಜಾಸ್ತಿ ಹಾಗೂ ಜನ ಕಡಿಮೆ ಇರುವ ಕಾರಣ ಪಂಚಾಯ್ತಿಗಳು ಭೌಗೋಳಿಕವಾಗಿ ಅತಿ ದೊಡ್ಡದಿವೆ. ಕಾಳಿ, ಕದ್ರಾ, ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳು ಹಾಗೂ ಮುಳುಗಡೆಯ ಹಿನ್ನೀರು ಕೆಲವು ಪಂಚಾಯ್ತಿ ಕೇಂದ್ರ ತಲುಪಲು ಮೈಲುಗಟ್ಟಲೆ ಸುತ್ತಿಬಳಸುವಂತೆ ಮಾಡಿವೆ. ಕ್ಷೇತ್ರ ಪುನರ್‌ವಿಂಗಡಣೆ ಎಂದು ಶಾಸಕರ, ಸಂಸದರ ಕ್ಷೇತ್ರ ಪುನರ್ ವಿಂಗಡಣೆಯಾದಂತೆ ಗ್ರಾಮ ಪಂಚಾಯ್ತಿಗಳ ಕ್ಷೇತ್ರ ಪುನರ್‌ವಿಂಗಡಣೆ ಆಡಳಿತಾತ್ಮಕ ಅನುಕೂಲಕ್ಕಾಗಿ ಆಗಬೇಕು ಎನ್ನುವುದು ಅಲ್ಲಿನವರ ವಾದ.







ಜೊತೆಗೆ ಕೆಲವು ಅಭಿವೃದ್ಧಿ ಪರಿಕರಗಳು ಅಲ್ಲಿಯ ಯಾವ ಪ್ರದೇಶಕ್ಕೂ ಹೋಗಲು ಸಾಧ್ಯವಿಲ್ಲ. ಪರಿಸರ, ಪ್ರಾಣಿ, ಪಕ್ಷಿ, ಪ್ರಾದೇಶಿಕ ರಕ್ಷಣೆಗಾಗಿ ಇರುವ ಸರಿಸುಮಾರು ೧೭ ಕಾಯ್ದೆಗಳು ಸ್ಥಳೀಯರಿಗೆ ಮುಳುವಾಗಿವೆ. ಆನೆ ಯೋಜನೆ, ಹುಲಿ ಯೋಜನೆ, ಹಾರ‍್ನ್‌ಬಿಲ್ ಪಕ್ಷಿ ಯೋಜನೆ, ಪಶ್ಚಿಮ ಘಟ್ಟ ಉಳಿವಿಗಾಗಿ ಬಂದ ಯೋಜನೆ- ಕಾಯ್ದೆಗಳು, ಜಂಟಿ ಅರಣ್ಯ ಯೋಜನೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ - ಇಂಥ ಹಲವು ಯೋಜನೆ/ಕಾಯ್ದೆಗಳು ಜನರನ್ನು ಒಕ್ಕಲೆಬ್ಬಿಸುತ್ತ, ಜೋಯ್ಡಾವನ್ನು ಕೆಲಕಾಲದಲ್ಲೇ ನಿರ್ವಸಿತ ಪ್ರದೇಶವನ್ನಾಗಿ ಮಾಡುತ್ತವೆ ಎನ್ನುವುದು ಕೆಲವರ ಅಭಿಪ್ರಾಯ.

ತಮ್ಮ ಸಮಸ್ಯೆ ಕುರಿತು ಮಾತನಾಡುವಾಗ ಎಲ್ಲರಿಂದ ತಮ್ಮನ್ನು ಪ.ಪಂಗಡಕ್ಕೆ ಸೇರಿಸಿಲ್ಲವೆಂಬ ಒಂದೇ ಕೊರಗು ಕೇಳಿಬರುತ್ತದೆ. ಪ.ಪಂಗಡಕ್ಕೆ ಸೇರಿದರೆ ಅವರಿಗೆ ಉದ್ಯೋಗ, ಶಿಕ್ಷಣದ ಮೀಸಲಾತಿ; ರಾಜಕೀಯ ಅಧಿಕಾರದಲ್ಲಿ ಮೀಸಲಾತಿ; ಅರಣ್ಯ ಉತ್ಪನ್ನ ಬಳಕೆಯ ಹಕ್ಕು ದೊರೆಯುತ್ತದೆ. ವಿದ್ಯಾರ್ಥಿ ವೇತನ ಸಿಕ್ಕು ಕೆಲ ಮಕ್ಕಳಾದರೂ ಕಲಿಯಲು ಸಾಧ್ಯವಾಗುತ್ತದೆ. ನಿಜ, ಎಲ್ಲ ಅರ್ಹತೆಯಿದ್ದೂ ಮೀಸಲಾತಿ ಮತ್ತಿತರ ಸವಲತ್ತು ಸಿಗದಿರುವುದು ಅನ್ಯಾಯವೇ.

ಈಗ ಕುಣಬಿಗಳು ತಮಗಾದ ಅನ್ಯಾಯವನ್ನು ಗ್ರಹಿಸಿದ್ದಾರೆ. ಕುಣಬಿ ಜನರ ಮತ್ತು ಮುಖಂಡರ ಹೋರಾಟ ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವುದನ್ನೇ ಕೇಂದ್ರವಾಗಿರಿಸಿಕೊಂಡಿದೆ. ಆದರೆ ಪ.ಪಂಗಡ ಆಯಿತು ಎಂದ ಕೂಡಲೇ ಅವರ ಪಾಲಿನ ಸ್ವರ್ಗ ಮೇಲಿನಿಂದ ಇಳಿಯುವುದಿಲ್ಲ. ಈಗ ಭಾರತದ ೮.೬% ಜನ ಸಮುದಾಯ; ೭೪೪ ಆದಿವಾಸಿ ಕುಲಗಳು ಪರಿಶಿಷ್ಟ ಪಂಗಡ ಎಂದು ಗುರುತಿಸಲ್ಪಟ್ಟಿವೆ. ಆದರೆ ಬುಡಕಟ್ಟು ಸಮುದಾಯದ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿವೆ.


ಕರ್ನಾಟಕದ ೫೨ ಗಡಿ ತಾಲೂಕುಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕು ಜೋಯ್ಡಾ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಕವಾದ ನಂಜುಂಡಪ್ಪ ಸಮಿತಿಯ ಸಲಹೆಯಂತೆ ಈ ತಾಲೂಕಿಗೆ ವಿಶೇಷ ಅನುದಾನ ಬರುತ್ತದೆ. ಜೊತೆಗೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅನುದಾನ, ಜಿಲ್ಲಾ ಪಂಚಾಯ್ತಿಯ ವಾರ್ಷಿಕ ತಲಾನುದಾನವೂ ಬರುತ್ತದೆ. ೨೦೦೬ ಅಕ್ಟೋಬರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ ಒಂದು ವಿಶೇಷ ಕ್ರಿಯಾಯೋಜನೆಯನ್ನು ಈ ತಾಲೂಕಿಗಾಗಿಯೇ ರೂಪಿಸಿತು. ಉಳಿದ ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ಅನುದಾನದಲ್ಲಿ ೫೦ ಸಾವಿರ ಮೊತ್ತವನ್ನು ಜೋಯ್ಡಾಗೆ ಕೊಟ್ಟರು. ವಾರ್ಷಿಕವಾಗಿ ಬಂದ ಇಷ್ಟೆಲ್ಲ ಹಣದಿಂದ ಯಾವ ಅಭಿವೃದ್ಧಿಯಾಯಿತು? ಎಂದು ನೋಡಿದರೆ ಕೆಲ ರಸ್ತೆಗಳಷ್ಟೇ ಕಣ್ಣಿಗೆ ಬೀಳುತ್ತವೆ.

ಜೋಯ್ಡಾದ ಕುಣಬಿಗಳು ಕೊಂಕಣ-ಗೋವಾದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಭಾವನಾತ್ಮಕವಾಗಿ, ಭೌಗೋಳಿಕವಾಗಿ, ಭಾಷಿಕವಾಗಿ ಅವರಿಗೆ ಕರ್ನಾಟಕ-ಬೆಂಗಳೂರಿಗಿಂತ ಗೋವಾ-ಪಣಜಿ ತುಂಬ ಹತ್ತಿರ. ಜೋಯ್ಡಾದ ಕೆಲ ಊರುಗಳ ಹೆಸರು ನೋಡಿ: ದುಧಗಾಳಿ, ಕಾಟೋಳಿ, ಧೋಕ್ರಪಾ, ಲಾಂಡೆ, ಪಾಟ್ನಿ, ಬರಪಾಲಿ, ಬಾಡಪೋಲಿ, ಕಾಟೇಲಾ, ಗುಂಡಾಳಿ, ನಿಗುಂಡಿ.. ವಲಸೆ ಬಂದ ಸಮುದಾಯಗಳ ಕುಲದೇವತೆಗಳು ಗೋಮಾಂತಕದಲ್ಲಿದ್ದು ಜಾತ್ರೆ-ಮಹೋತ್ಸವಗಳ ಕಾಲದಲ್ಲಿ ಜನರನ್ನು ಸೆಳೆಯುತ್ತಾರೆ. ಆ ಸಮುದಾಯಗಳು ಇಂದಿಗೂ ಹಳೆಯ ಸರ್‌ನೇಮ್‌ಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ.

ಕುಣಬಿ ಮುಖಂಡರಲ್ಲೊಬ್ಬರಾದ ದಯಾನಂದ ಗಾವುಡಾ ಜೊಯ್ಡಾ ಮತ್ತು ಕಾರವಾರವನ್ನು ಗೋವಾಗೆ ಸೇರಿಸಿ ಎಂಬ ಹೋರಾಟ ಕಟ್ಟುವುದಾಗಿ ಒಮ್ಮೆ ಧಮಕಿ ಹಾಕಿದ್ದರು. ಸ್ಥಳೀಯ ಜನಪ್ರತಿನಿಧಿಗಳಿಗೆ ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವ ಬದ್ಧತೆ ಎಷ್ಟು ಕಡಿಮೆಯಿದೆ ಎಂಬ ಸತ್ಯ ಅರಿವಾಗಿ ಈ ಹೇಳಿಕೆ ಅವರಿಂದ ಬಂದಿತ್ತು. ಆದರೆ ಈಗಾಗಲೇ ಗೌಳಿ-ಸಿದ್ಧಿ ಜನಾಂಗದವರು ಪ.ಪಂಗಡವಾಗಿರುವ ಪ್ರದೇಶದಲ್ಲಿ ಕುಣಬಿಗಳೂ ಪ.ಪಂಗಡಕ್ಕೆ ಸೇರಿದರೆ ಆಗ ಅದು ಮೀಸಲು ಕ್ಷೇತ್ರವಾಗುತ್ತದೆ. ತಲೆತಲಾಂತರದಿಂದ ಅಧಿಕಾರ ಅನುಭವಿಸುತ್ತ ಬಂದವರು ಸ್ಥಾನ ಕಳೆದುಕೊಳ್ಳುತ್ತಾರೆ. ಉತ್ತರ ಕನ್ನಡದ ಇನ್ನೊಂದು ಬುಡಕಟ್ಟು ಹಾಲಕ್ಕಿ ಸಮುದಾಯವೂ ಸಹಾ ಎಷ್ಟೋ ಕಾಲದಿಂದ ಪ್ರಯತ್ನಿಸಿದರೂ ಪ.ಪಂಗಡಕ್ಕೆ ಸೇರಿಲ್ಲ. ಅವರೂ ಪ.ಪಂಗಡವೇ ಆದಲ್ಲಿ ಇಡೀ ಉ. ಕನ್ನಡ ಮೀಸಲು ಲೋಕಸಭಾ ಕ್ಷೇತ್ರವಾಗಬಹುದು. ಇದು ಜನನಾಯಕರಿಗೆ ಅಪಥ್ಯವಾದ ವಿಚಾರ. ರಾಜಕಾರಣದ ಇಂಥ ಲೆಕ್ಕಾಚಾರಗಳು ಕುಣಬಿ ಮತ್ತು ಹಾಲಕ್ಕಿಗಳಿಬ್ಬರಿಗೂ ಮುಳುವಾಗಿವೆ.

ಇಲ್ಲಿ ಇನ್ನೂ ಒಂದು ಸೂಕ್ಷ್ಮ ವಿಚಾರ ಕುರಿತು ಬರೆಯದಿದ್ದರೆ ಚರ್ಚೆ ಅಪೂರ್ಣವಾಗುತ್ತದೆ.

ಕುಣಬಿಗಳಂತೇ ಕೊಂಕಣಿ ಮಾತನಾಡುವ ಹಲವು ಸಮುದಾಯಗಳು ಉತ್ತರ ಕನ್ನಡಲ್ಲಿವೆ. ಅವರೆಲ್ಲ ಇಲ್ಲಿಗೆ ವಲಸೆ ಬಂದಿದ್ದು ಒಂದು ಚಾರಿತ್ರಿಕ ಅನಿವಾರ್ಯತೆಗಾಗಿ. ೧೫೧೦ರಲ್ಲಿ ಪೋರ್ಚುಗಲ್ ಜನರಲ್ ಆಲ್ಫಾನ್ಸೋ ಆಲ್ಬುಕರ್ಕ್ ಬಿಜಾಪುರದ ಆದಿಲ್‌ಶಾಹಿಗಳಿಂದ ಗೋವಾವನ್ನು ವಶಪಡಿಸಿಕೊಂಡ. ಆಗ ಪೋರ್ಚುಗಲ್‌ನ ಜಾನ್ - ೩ ಆಡಳಿತ ಶುರುವಾಯಿತು. ೧೫೪೫ರಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ಪೋರ್ಚುಗಲ್ ದೊರೆಗೆ ಬರೆದ ಪತ್ರದಲ್ಲಿ ಗೋವಾದಲ್ಲಿ ಒಂದು ‘ತನಿಖೆ’ ನಡೆಸುವ ಅವಶ್ಯಕತೆ ಇದೆಯೆಂದು ತಿಳಿಸಿದಾಗ ಕುಖ್ಯಾತ ‘ಗೋವಾ ಇನ್‌ಕ್ವಿಸಿಷನ್’ ಜಾರಿಗೆ ಬಂತು. ಅದಾದನಂತರ ಮದುವೆ ಆಚರಣೆಯೂ ಸೇರಿದಂತೆ ೪೨ ಹಿಂದೂ ಆಚರಣೆಗಳು ನಿಷೇಧಿಸಲ್ಪಟ್ಟವು, ತಪ್ಪಿದಲ್ಲಿ ಮರಣದಂಡನೆಯವರೆಗೆ ವಿವಿಧ ಶಿಕ್ಷೆಗಳು ಜಾರಿಯಾದವು.

ಕೊಂಕಣಿ ಭಾಷೆ ಆಡುವಂತಿಲ್ಲ. ಕೊಂಕಣಿ ಅಥವಾ ಇನ್ನಾವುದೇ ಭಾಷೆಯಲ್ಲಿ ಹಿಂದೂ ಧಾರ್ಮಿಕ ಸಂಕೇತಗಳನ್ನು ವ್ಯಕ್ತಪಡಿಸುವಂತಿಲ್ಲ. ಪೋರ್ಚುಗಲ್ ಹೊರತು ಇತರ ಭಾಷೆಗಳ ಪುಸ್ತಕಗಳನ್ನು ಸುಡಲಾಯಿತು. ಮೊದಲ ೧೦೦ ವರ್ಷಗಳಲ್ಲಿ ಗೋವನ್ ಇನ್‌ಕ್ವಿಸಿಷನ್ ೫೭ ಜನರನ್ನು ಜೀವಂತ ಸುಟ್ಟಿತು. ೬೪ ಜನರನ್ನು ಸತ್ತಮೇಲೆ ಸುಡಲಾಯಿತು. ೪೦೪೬ ಜನರನ್ನು ವಿವಿಧ ಶಿಕ್ಷೆಗೆ ಗುರಿಪಡಿಸಲಾಯಿತು. ಈ ಕಾಲದಲ್ಲೇ ಕುಣಬಿಗಳು, ಗೌಡ ಸಾರಸ್ವತ ಬ್ರಾಹ್ಮಣರು, ಚಿನ್ನದ ಕೆಲಸ ಮಾಡುವ ದೈವಜ್ಞ ಬ್ರಾಹ್ಮಣರು, ವೈಶ್ಯವಾಣಿ ಹಾಗೂ ಇನ್ನೂ ಕೆಲ ಸಮುದಾಯಗಳು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಬಿಟ್ಟುಕೊಡಲಾರದೇ ಸಮೂಹವಾಗಿ ಗೋವಾದಿಂದ ವಲಸೆ ಹೊರಟವು. ಅವು ಸಮುದ್ರ ಮಾರ್ಗವಾಗಿ ಚಲಿಸಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗಲ್ಲದೆ ಕೇರಳಕ್ಕೂ ವಲಸೆ ಹೋದರು. ಕುಡುಂಬಿ ಸಮುದಾಯ ಕೇರಳದ ಹಿನ್ನೀರಿನ ತಗ್ಗು ಪ್ರದೇಶಗಳಲ್ಲಿ ವಿಶೇಷವಾಗಿ ನೆಲೆನಿಂತು ಭತ್ತ ಬೆಳೆವ ಸಮುದಾಯವಾಯಿತು. ಉಳಿದವರು ಮೂಲನೆಲೆಯಲ್ಲಿ ಕೈಗೊಂಡ ಉದ್ಯೋಗವನ್ನೇ ಕೈಗೊಂಡರು. ಹೀಗಾಗಿ ಕರಾವಳಿಯುದ್ದಕ್ಕೂ ಮೀನುಹಿಡಿವ, ಮರಗೆಲಸ ಮಾಡುವ, ವ್ಯಾಪಾರವಹಿವಾಟು ನಡೆಸುವ, ಚಿನ್ನದ ಕೆಲಸ ಮಾಡುವ, ಕೃಷಿಕರಾದ ಕೊಂಕಣಿ ಮಾತನಾಡುವ ಸಮುದಾಯಗಳು ಕಾಣಸಿಗುತ್ತವೆ. ವಲಸೆ ಬಂದು ನಾಲ್ಕೈದು ಶತಮಾನ ಕಳೆದಮೇಲೂ ಅವರ ಕುಲದೇವರುಗಳು, ಆಚರಣೆಗಳು ಮೂಲನೆಲೆಯ ಸೊಗಡನ್ನು ಉಳಿಸಿಕೊಂಡಿವೆ. ಜಾತ್ರೆ, ಹಬ್ಬಹರಕೆಗಳಿಗಾಗಿ ಅವರು ಗೋವಾಕ್ಕೆ ಹೋಗಿಬರುತ್ತ ಇರುತ್ತಾರೆ.

ಇನ್‌ಕ್ವಿಸಿಷನ್, ಮತಾಂತರ, ವಲಸೆ ಸೃಷ್ಟಿಸಿದ ಅಭದ್ರತೆಯನ್ನು ಈಗ ಕೋಮುವಾದಿ ರಾಜಕಾರಣ ತನ್ನ ದಾಳಕ್ಕೆ ಬಳಸಿಕೊಳ್ಳುವ ಪ್ರಯತ್ನದಲ್ಲಿರುವುದು ಕಂಡುಬರುತ್ತದೆ. ವಲಸೆ ಬಂದವರಲ್ಲಿ ಕೆಲವು ಸಮುದಾಯಗಳು ಪ್ರಭಾವಿಯಾಗಿದ್ದು ಹಳೆಯ ನೆನಪುಗಳನ್ನು ಕಾದಿಟ್ಟುಕೊಂಡಿವೆ. ಮತಾಂತರ ತಪ್ಪಿಸಿಕೊಳ್ಳುವ ಸಲುವಾಗಿ ನಡೆದ ವಲಸೆ ಹಾಗೂ ಕರಾವಳಿಯ ಅತಿ ಧಾರ್ಮಿಕತೆ ಇವೆರೆಡೂ ಸೇರಿ ಕರಾವಳಿಯನ್ನು ಕೋಮುವಾದದ ನೆಲೆಯಾಗಿಸುತ್ತಿರುವಾಗ ಅಂಚಿನ ಸಮುದಾಯಗಳು ಆಮಿಷಕ್ಕೊಳಗಾಗದೇ ಇರುವುದು ದೊಡ್ಡ ಸವಾಲಾಗಿದೆ. ಕುಣಬಿ ಮನೆಮನೆಗಳಲ್ಲಿ ಸಂಘಪರಿವಾರದ ವನವಾಸಿ ಸಂಘಟನೆಯು ಹಿಂದೂ ದೇವಾನುದೇವತೆಗಳ ಫೋಟೋ, ಭಾರತ ಮಾತೆಯ ಸ್ತುತಿಯ ಸಾಲುಗಳಿರುವಂತೆ ನೋಡಿಕೊಂಡಿದೆ. ತಾವು ಆ ಕೆಲಸ ಮಾಡದಿದ್ದರೆ ಕ್ರೈಸ್ತರು ಬೈಬಲ್ ತಂದಿಡುತ್ತಾರೆ ಎಂದು ಅವರು ನೇರಾನೇರ ಆರೋಪಿಸುತ್ತಾರೆ.

ಖಾಸಗೀಕರಣ-ಜಾಗತೀಕರಣದ ಸಂದರ್ಭದಲ್ಲಿ ಅತಿ ಹೆಚ್ಚು ಬಾಧಿತರಾದವರು ಆದಿವಾಸಿಗಳು. ಅವರ ಒಕ್ಕಲೆಬ್ಬಿಸುವುದು ದಿನನಿತ್ಯದ ಸಂಗತಿಯಾಗಿದೆ. ಪ್ರಪಂಚದ ಯಾವ್ಯಾವುದೋ ಮೂಲೆಯ ಮಾಲೀಕರ ಕಾರ್ಖಾನೆಗಳು ಅವರ ಕಾಡನ್ನೇ ಗುಡಿಸಿ, ಅಂಗಳವಾಗಿಸಿ, ಅಲ್ಲಿ ತಳವೂರುತ್ತಿವೆ. ಮಾದೇವ ವೇಳೀಪ ಎಂಬ ಹಗಲುರಾತ್ರಿಯೆನ್ನದೆ ಕುಳಿತು ರಾಮಾಯಣ ಮಹಾಭಾರತ ಹಾಡಬಲ್ಲ ಕುಣಬಿ ಹಿರಿಯರು, ‘ಬಂದಬಂದವರಿಗೆಲ್ಲ ಕೈ ಮುಗ್ದು ಕೇಳೀದೇವು, ಆದ್ರೂ ಏನೂ ಆಗಲಿಲ್ಲ’ ಎಂದರು. ಈಗ ಕೈಮುಗಿದು ಕೇಳುವ ಕಾಲ ಹೋಗಿದೆ.

ವಿವಿಧ ಪಕ್ಷ-ಸಂಘಟನೆ-ಎನ್‌ಜಿಒಗಳಲ್ಲಿ ಬುಡಕಟ್ಟು ಹಿತಾಸಕ್ತಿ ಮತ್ತು ಒಗ್ಗಟ್ಟು ಕಳೆದುಹೋಗದಂತೆ ನೋಡಿಕೊಳ್ಳಬೇಕು. ಅವರಿಗೆ ವಂಚಿಸಲಾದ ಅಧಿಕಾರ, ಸಂಪನ್ಮೂಲ, ಹಕ್ಕುಗಳನ್ನು ಪಡೆಯಬೇಕು. ಸ್ಥಳೀಯರಿಗೆ ಅವರ ಜನಸಂಖ್ಯೆಗನುಗುಣವಾಗಿ ಉದ್ಯೋಗ, ಶಿಕ್ಷಣದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮಾಡಬೇಕು. ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಹೊರತಾಗಿ ಅವರ ಆರ್ಥಿಕ ಚಟುವಟಿಕೆ ವಿಸ್ತರಿಸುವಂತೆ ಮಾಡಬೇಕು. ಉಳಿದ ಸಮಾಜಕ್ಕೂ ಅವರ ನಡುವೆಯೂ ಇರುವ ಸಾಮಾಜಿಕ, ಆರ್ಥಿಕ ಅಂತರ ಕಡಿಮೆಯಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊಂಕಣಿ ಅಸ್ಮಿತೆ ಉಳಿಸಿಕೊಳ್ಳುತ್ತಲೇ ಬದುಕಿಗೆ ತೊಡಕಾಗದಂತೆ ಮುಖ್ಯವಾಹಿನಿಯ ಭಾಷೆಯನ್ನು ಬಳಸಲು ಕಲಿಯಬೇಕು. ಏಕೆಂದರೆ ಫಾರಂ ತುಂಬಲು ಬರದೆ ಆಶ್ರಯ ಮನೆ, ಭೂಮಿಯ ಪಟ್ಟಾ, ಸೋಲಾರ್-ಪಂಪ್‌ಸೆಟ್ ಯಾವುದೂ ಬಾರದು. ಎಂದೇ ಉಳಿದ ಸಮಾಜದೊಂದಿಗೆ ಭಾಷೆಯ ಮೂಲಕ ಗುರುತಿಸಿಕೊಂಡು ಜೊತೆಜೊತೆ ನಡೆಯಲು ಸಾಧ್ಯವಾಗಬೇಕು.

ಹೀಗೆ ಸಮುದಾಯ ಕೇಂದ್ರಿತ ಯೋಜನೆಗಳನ್ನು ರೂಪಿಸಿ ಜಾರಿಮಾಡಲು ಇಡೀ ಸಮಾಜವು ಶ್ರಮಿಸಿದರೆ ಮಾತ್ರ ಸಮುದಾಯವೊಂದರ ನಿಜವಾದ ‘ಅಭಿವೃದ್ಧಿ’ ಸಾಧ್ಯವಾದೀತು.

(ಕುಣಬಿ ಸಮುದಾಯದೊಂದಿಗೆ ಜೋಯ್ಡಾದಲ್ಲಿ ‘ಕಾವ್ಯಬೋಧಿ’ಯ ಅಡಿಯಲ್ಲಿ ೨೭-೦೪-೨೦೧೪ರಂದು ಸಂವಾದ ಕಾರ್ಯಕ್ರಮ ನಡೆಯಿತು. ಅಲ್ಲಿ ಸಮುದಾಯದ ಮುಖ್ಯ ಸಮಸ್ಯೆಗಳು; ಕಾರಣಗಳು; ಉಳಿದವರ ಸಮಸ್ಯೆಗಳಿಗಿಂತ ಅವರ ಸಮಸ್ಯೆಗಳು ಹೇಗೆ ಭಿನ್ನ? ರಾಜಕಾರಣದೊಂದಿಗಿನ ಸಂಬಂಧ; ಸಮುದಾಯದ ಸಂಘಟನೆ ಮತ್ತು ಅದಕ್ಕಿರುವ ಜನ ಬೆಂಬಲ; ಅವರ ದೃಷ್ಟಿಯಲ್ಲಿ ಪರಿಹಾರದ ಸ್ವರೂಪಗಳು ಮುಂತಾದ ವಿಷಯಗಳ ಕುರಿತು ಕುಣಬಿ ಸಮುದಾಯದ ಮಾದೇವ ವೇಳೀಪ, ರತ್ನಾಯ ವೇಳೀಪ, ದಯಾನಂದ ಗಾವುಡಾ, ಪ್ರೇಮಾನಂದ ವೇಳಿಪ ಮುಂತಾದವರು ತಮ್ಮ ಅನಿಸಿಕೆ ಹಂಚಿಕೊಂಡರು. ಜೊತೆಗೆ ಸ್ಥಳೀಯ ಸಮಸ್ಯೆ-ವಿಚಾರಗಳನ್ನು ಬಲ್ಲ ಯಮುನಾ ಗಾಂವ್ಕರ್, ವಿಠ್ಠಲ ಭಂಡಾರಿ, ಬಿ. ಎನ್. ವಾಸರೆ, ವಿಷ್ಣು ನಾಯ್ಕ, ಖತೀಬ್ ಸರ್, ಬಸವರಾಜ ಹೂಗಾರ, ಕೃಷ್ಣ ನಾಯ್ಕ ಹಿಚ್ಕಡ ಅವರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವನ್ನೆಲ್ಲ ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.)



No comments:

Post a Comment