Wednesday 12 September 2018

`ಪ್ರೀತಿಯ ನಲವತ್ತು ನಿಯಮಗಳು’ - ಎಲ್ಲೋ ಜೋಗಪ್ಪ ನಿನ್ನರಮನೆ..?






ಫ್ರಾನ್ಸ್ ಸಂಜಾತೆ ಟರ್ಕಿಶ್ ಲೇಖಕಿ ಎಲಿಫ್ ಶಫಾಕ್ ಬರೆದ ಕಾದಂಬರಿ ‘ಫಾರ್ಟಿ ರೂಲ್ಸ್ ಆಫ್ ಲವ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿದೆ. ಅದನ್ನು ಕನ್ನಡದ ಹಿರಿಯ ಕವಿ ಮಮತಾ ಸಾಗರ್ ‘ಪ್ರೀತಿಯ ನಲವತ್ತು ನಿಯಮಗಳು’ ಎಂದು ಕನ್ನಡಕ್ಕೆ ತಂದಿದ್ದಾರೆ. ಪುರಾತನ ತತ್ವಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ಪ್ರೀತಿಯ ನಲವತ್ತು ನಿಯಮಗಳನ್ನು ಈ ಕಾದಂಬರಿ ಎರಡು ಬದುಕುಗಳ ಪರಿವರ್ತನೆಯ ಕಥನದ ಮೂಲಕ ಸಾದರಪಡಿಸುತ್ತದೆ. ‘ಪ್ರತಿಯೊಬ್ಬರಲ್ಲೂ ಪ್ರೇಮವಿದೆ; ಮತಧರ್ಮಗಳಾಚೆ ಪ್ರೇಮವೇ ಮನುಷ್ಯರನ್ನು ಬೆಸೆಯುತ್ತದೆ; ಪ್ರೇಮವೇ ದೇವರು-ಧರ್ಮವಾಗಿದೆ; ಮತ್ತೆಲ್ಲಿ ಕಾಣದಿದ್ದರೂ ಪ್ರೇಮಿಯ ಹೃದಯಲ್ಲಿ ದೇವರನ್ನು ಕಾಣಬಹುದಾಗಿದೆ’ ಎಂದು ಪ್ರೀತಿಯ ನಿಯಮಗಳು ಪ್ರತಿಪಾದಿಸುತ್ತವೆ.

ಇಂದು ಬರಗಾಲ ಇರುವುದು ಹೌದಾದಲ್ಲಿ ಅದು ನೀರಿಗಾಗಿ ಅಲ್ಲ, ಅನ್ನಕ್ಕಾಗಿ, ನೆಲಕ್ಕಾಗಿ, ಹಣಕ್ಕಾಗಿ ಅಲ್ಲ. ಒಂದು ಬೊಗಸೆ ಪ್ರೀತಿಗಾಗಿ ಬರಗಾಲವಿದೆ. ಹೌದು. ಒಂದು ಹಿಡಿ ನಿರ್ದುಷ್ಟ, ನಿಷ್ಕಾರಣ, ನಿಷ್ಕಳಂಕ ಪ್ರೇಮಕ್ಕೆ ವಿಶ್ವದೆಲ್ಲೆಡೆ ಹಾಹಾಕಾರ ಇದೆ. ಜನರ ಭಾವುಕ ಅಗತ್ಯಗಳನ್ನು ಪೂರೈಸಲೆಂದೇ ಹುಟ್ಟಿಕೊಂಡ ಮತಧರ್ಮಗಳು ಜನರನ್ನು ಬೆಸೆಯುವ ಬದಲು ಅವರ ನಡುವಿನ ಗೋಡೆ, ಕಂದಕಗಳಾಗಿರುವುದು; ಕೌಟುಂಬಿಕ ಸಂಬಂಧದ ಮಾಧುರ್ಯವನ್ನು ಜವಾಬ್ದಾರಿ-ನಿರೀಕ್ಷೆಗಳು ಹೊಸಕಿ ಹಾಕಿರುವುದು ಇದಕ್ಕೆ ಕಾರಣ. ಎಂದೇ ಪ್ರೇಮದ ನಿಯಮಗಳನ್ನು ತಿಳಿಯಪಡಿಸುವ ಈ ಕಾದಂಬರಿಯ ಪ್ರಸ್ತುತತೆ ಇವತ್ತು ಹೆಚ್ಚಿದೆ.

‘ಪ್ರೀತಿಯ ನಲವತ್ತು ನಿಯಮಗಳು’ ಪುಸ್ತಕದಲ್ಲಿ ಒಂದರೊಳಗೊಂದು ಎರಡು ಕಾದಂಬರಿಗಳು ಹೆಣೆದುಕೊಂಡಿವೆ. ೨೧ನೇ ಶತಮಾನದ ಯೆಲ್ಲಾ ಎಂಬ ಗೃಹಿಣಿಯ ಕತೆಯೂ, 13ನೇ ಶತಮಾನದ ಪ್ರಖ್ಯಾತ ಇಸ್ಲಾಮಿಕ್ ಚಿಂತಕ ಜಲಾಲುದ್ದೀನ್ ರೂಮಿಯು ಸೂಫಿ ಕವಿಯಾದ ಬಗೆಗೂ ಕಾದಂಬರಿ ಹೇಳುತ್ತದೆ. ಎರಡೂ ಕಥಾನಕದ ಸುರುಳಿಗಳು ಒಂದಾದಮೇಲೊಂದು ಅನಾವರಣಗೊಳ್ಳುತ್ತ ಕೊನೆಗೆ ೧೩ನೇ ಶತಮಾನದ ರೂಮಿಯ ಪ್ರೇಮ ಸಂಬಂಧ ೨೧ನೇ ಶತಮಾನದ ಯೂರೋಪಿನ ಯೆಲ್ಲಾ ಎಂಬ ಗೃಹಿಣಿಯ ಬದುಕಿನ ತನಕ ಸಾತತ್ಯವನ್ನು ಪಡೆಯುತ್ತದೆ. ಅಷ್ಟೇ ಏಕೆ ಓದುವ ಪ್ರತಿಯೊಂದು ಮನಸಿನೊಳಗೂ ಒಂದು ದಿವ್ಯಪ್ರೇಮದ ಹಂಬಲವನ್ನು ಸೃಷ್ಟಿಸುತ್ತದೆ.


ಕಾದಂಬರಿಯ ಆರಂಭಿಕ ಕಥಾ ಹಂದರ ಯೆಲ್ಲಾಳದು. ನಲವತ್ತರಂಚು ತಲುಪಿದ, ಮಸಾಚುಸೆಟ್ಸ್‌ನಲ್ಲಿ ದಂತವೈದ್ಯನ ಹೆಂಡತಿಯಾಗಿ ಮೂರು ಮಕ್ಕಳ ತಾಯಾಗಿರುವ, ಆಸ್ತಿ-ಅಂತಸ್ತು ವಗೈರೆ ಸಮಾಜದ ಕಣ್ಣಿನಲ್ಲಿ ಸಂತೃಪ್ತ ಕುಟುಂಬಕ್ಕೆ ಬೇಕಾಗಿರುವ ಎಲ್ಲವನ್ನೂ ಪಡೆದ ಗೃಹಿಣಿ ಯೆಲ್ಲಾ ರೂಬೆನ್‌ಸ್ಟೈನ್. ‘ಕಲಿನರಿ ಆರ್ಟ್ ಮೇಡ್ ಈಸಿ’, ‘ಫ್ಯುಷನ್ ಕುಕಿಂಗ್ ಕ್ಲಾಸಿ’ನ ಪಾಠಗಳಂತೆ ಹೊಸಹೊಸ ಅಡುಗೆ ತಯಾರಿಸಿ, ಮೇಜಿನ ಮೇಲೆ ಕಲಾತ್ಮಕವಾಗಿ ಊಟ ಜೋಡಿಸುವುದರಲ್ಲಿಯೇ ತನ್ನ ಕ್ರಿಯಾಶೀಲತೆಯನ್ನು ಸಂತೃಪ್ತಗೊಳಿಸಿಕೊಳ್ಳುತ್ತಿದ್ದ ಗೃಹಿಣಿ ಅವಳು. ಆದರೆ ನಲವತ್ತರ ಹೊತ್ತಿಗೆ ಬದುಕು ನಿಂತ ನೀರಹಾಗೆ. ಎಲ್ಲ ನಿರೀಕ್ಷಿತ, ಎಲ್ಲ ಊಹಿಸಬಹುದಾದ್ದು. ಪ್ರತಿ ತಿಂಗಳ ಆ ಶನಿವಾರ ಪ್ರವಾಸ, ಈ ಶನಿವಾರ ಡಿನ್ನರ್. ರವಿವಾರ ಅದು. ಶುಕ್ರವಾರ ಇದು. ಅತಿ ಪರಿಚಿತತೆ ಹುಟ್ಟಿಸುವ ನಿರ್ವಾತದಲ್ಲಿ ಹೊಸದೇನನ್ನೂ ಉಕ್ಕಿಸದ ಮನದ ಕಡಲು. ಹೀಗೆ ಎಲ್ಲವೂ ಅತಿ ಯಾಂತ್ರಿಕವಾಗಿರುವಾಗ ಒಳಗೊಂದು ಶೋಧ ಶುರುವಾಗುತ್ತದೆ. ಇಪ್ಪತ್ತು ವರ್ಷ ಮನೆಯೊಡತಿಯ ಪಾತ್ರದಲ್ಲಿ ತಾನು ಸಾಧಿಸಿರುವುದಾದರೂ ಏನು? ಬೆಳೆಯುತ್ತಿರುವ ಮಕ್ಕಳ ಭವಿಷ್ಯದ ಆತಂಕ, ಗಂಡನ ಹೆಮ್ಮೆ-ಬಯಕೆಗಳ ಕಾಪಿಡುವುದರಲ್ಲೇ ಕಳೆದುಹೋದೆನೆ? ಈ ಬದುಕು ತನ್ನ ಆಯ್ಕೆಯಾಗಿತ್ತೆ? ಮುಂತಾಗಿ ಹತ್ತುಹಲವು ಪ್ರಶ್ನೆಗಳು ಕಾಡತೊಡಗುತ್ತವೆ. ಇಂಥ ಹಳವಂಡ ಹುಟ್ಟಿದ ಒಂದು ಅಬ್ಜ ಘಳಿಗೆ ಮಹಾಜಿಗಿತ ಸಾಧಿಸಿಕೊಳ್ಳುವ ಹಲಗೆಯಾಗುತ್ತದೆ. ಬದುಕನ್ನು ನವೀಕರಿಸಿಕೊಳ್ಳಲು ಯತ್ನಿಸುತ್ತಾಳೆ.

ಯೆಲ್ಲಾ ಪ್ರಕಾಶನ ಸಂಸ್ಥೆಯಲ್ಲಿ ಪ್ರಕಟಣೆಗೆ ಬರುವ ಹಸ್ತಪ್ರತಿಗಳು ಪ್ರಕಟಿಸಲು ಅರ್ಹವೋ ಅಲ್ಲವೋ ಎಂದು ಶಿಫಾರ್ಸು ಮಾಡುವ ಕೆಲಸಕ್ಕೆ ಸೇರುತ್ತಾಳೆ. ಹಾಗೆ ಅವಳಿಗೆ ಬಂದ ಮೊದಲ ಹಸ್ತಪ್ರತಿ ಅಪರಿಚಿತ ಬರಹಗಾರ ಅಜೀಜ್ ಜಡ್. ಜಹಾರನ ಕಾದಂಬರಿ ‘ಮಧುರ ಧರ್ಮದ್ರೋಹ’ (ಸ್ವೀಟ್ ಬ್ಲಾಸ್ಫೆಮಿ). ಮೊದಮೊದಲು ತನಗಿಂತ ಭಿನ್ನ ಕಾಲದೇಶದ ಬರಹಗಾರನ ಕಾದಂಬರಿಯೊಂದನ್ನು ಓದಿ, ಟಿಪ್ಪಣಿ ಬರೆಯಲು ಅವಳಿಗೇನೂ ಆಸಕ್ತಿಯಿರುವುದಿಲ್ಲ. 13ನೇ ಶತಮಾನದಲ್ಲಿ ಬದುಕಿದ್ದ  ಮೌಲಾನಾ ಜಲಾಲುದ್ದೀನ್ ರೂಮಿಯನ್ನು ಕವಿಯಾಗಿ ಬದಲಿಸಿದ; ವಿದ್ವಾಂಸ ರೂಮಿಯ ಖ್ಯಾತಿ, ಪ್ರೌಢಿಮೆ, ಸ್ಥಾನಮಾನಗಳನ್ನೆಲ್ಲ ಕಳಚಿ ಕವಿ ರೂಮಿಯ ಹುಟ್ಟಿಗೆ ಕಾರಣವಾದ ಅಪರೂಪದ ಸಾಂಗತ್ಯ ಕುರಿತು ಆ ಕಾದಂಬರಿ ಇರುತ್ತದೆ. ಆದರೆ ಮಧುರ ಧರ್ಮದ್ರೋಹ ಕಾದಂಬರಿ ಓದುತ್ತ ಓದುತ್ತ ಯೆಲ್ಲಾಗೆ ತನ್ನ ಬದುಕಿನಲ್ಲಿ ಉದ್ಭವಿಸುತ್ತಿರುವ ಎಷ್ಟೋ ಸಂಕಟಮಯ ಸನ್ನಿವೇಶಗಳಿಗೆ, ಕೌಟುಂಬಿಕ ಅಲ್ಲೋಲಕಲ್ಲೋಲಗಳಿಗೆ ಆ ಕಾದಂಬರಿಯ ಪಾತ್ರಗಳಲ್ಲಿ ಉತ್ತರ ಇರುವಂತೆನಿಸತೊಡಗುತ್ತದೆ. ಕಾದಂಬರಿ ಮತ್ತು ಕಾದಂಬರಿಕಾರನ ಬಗೆಗೆ ಆಕರ್ಷಣೆಯುಂಟಾಗಿ ಅಜೀಜ್ ಜಹಾರನ ಜೊತೆ ಈಮೇಲ್ ಸಂಪರ್ಕ ಸಾಧಿಸುತ್ತಾಳೆ. ಸೂಫಿಯಾಗಿ ತನ್ನನ್ನು ತಾನು ಮಾರ್ಪಡಿಸಿಕೊಂಡ ಯೂರೋಪಿಯನ್ ವ್ಯಕ್ತಿ, ಕಾದಂಬರಿಕಾರ ಅಜೀಜ್ ಜಹಾರಾ ತನ್ನ ಪಾಲಿನ ಶಂಸನೆಂಬಂತೆ ಭಾಸವಾಗುತ್ತದೆ. ನಿಜ ಪ್ರೇಮದ ಹುಡುಕಾಟ ಶುರುವಾಗುತ್ತದೆ.

ಅಜೀಜನ ಕಾದಂಬರಿ ಓದುತ್ತ ತನ್ನ ಬದುಕಿನ ಚಲನೆಯ ದಿಕ್ಕನ್ನು ಬದಲಿಸಿಕೊಳ್ಳುವ ಗೃಹಿಣಿ ಯೆಲ್ಲಾ ಪ್ರೇಮದಲ್ಲಿ ತನ್ನ ತಾ ಕಳೆದುಕೊಳ್ಳುತ್ತಾಳೆ. ಪ್ರೇಮದಲ್ಲಿ ಹೊಸತೇ ಆಗಬಯಸುತ್ತಾಳೆ.

ಪ್ರೇಮ ಹುಡುಕಿಕೊಂಡು ಬರುವ ಒಂದು ಮಧುರ ಅನುಭವ. ಅದು ಹೀಗೆ ಬಂದು ಹಾಗೆ ಹೋಗುವ ಮಾಧುರ್ಯ. ಪ್ರೇಮಿಸಿದವನನ್ನೆಂದಿಗೂ ಹೆಂಗಸರು ಮದುವೆಯಾಗಲಾರರು ಎನಿಸತೊಡಗುತ್ತದೆ. ಅದುವರೆಗೆ ತಾನೇ ಕಟ್ಟಿಕೊಂಡ ಗೂಡಿನ ಸೂರೊಡೆದು ನೀಲಿಗೆ ಜಿಗಿಯುತ್ತಾಳೆ. ಭವಿಷ್ಯ, ಸುರಕ್ಷೆ, ರೂಢಿ, ನಿಯಮಗಳ ಮುರಿದು; ಅಭಿಪ್ರಾಯ ಆರೋಪಗಳ ಲೆಕ್ಕಿಸದೆ; ಘನತೆಯ ಸ್ವತಂತ್ರ ಬದುಕಿಗೆ ಹಂಬಲಿಸುತ್ತ; ಸಂಸಾರ-ಗಂಡನ ತೊರೆದರೆ ತೆರಬೇಕಾದ ಬೆಲೆಯನ್ನು ಅರಿತು ‘ಎಲ್ಲೋ ಜೋಗಪ್ಪ ನಿನ್ನರಮನೆ’ ಎಂದು ಸೂಫಿಯ ಸಾಂಗತ್ಯದಲ್ಲಿ ಹೊರಟುಬಿಡುತ್ತಾಳೆ.

ಈ ಬಟ್ಟೆ ಕಳಚಿ ಆ ಬಟ್ಟೆ ತೊಟ್ಟಷ್ಟು ಸಲೀಸಾಗಿ ಹೆಣ್ಣು ಒಂದು ವೈವಾಹಿಕ ಸಂಬಂಧದಿಂದ ಮತ್ತೊಂದಕ್ಕೆ ಪಲ್ಲಟಗೊಳ್ಳುವುದೇ!? ಇದು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಂಗತಿಯಾಗಿದ್ದರೂ ಹೊಸತಲ್ಲ. ಬುದ್ಧನಿಂದ ಬಸವಣ್ಣ-ಕನಕನವರೆಗೆ ಸಾಮಾಜಿಕ ಮೌಲ್ಯಗಳನ್ನೆತ್ತಿಹಿಡಿದ ಹಲವರು ‘ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ಎಂದು ಹೇಳುತ್ತಲೇ ಬಂದಿರುವುದು ನೋಡಿದರೆ ಇದು ಇವತ್ತು ನಿನ್ನೆಯ ಅನ್ನಾ ಕರೆನಿನಾಗಳ ಕತೆಯಲ್ಲ. ಇಂದು ನಿನ್ನೆಯ ಬಿರುಗಾಳಿಯಲ್ಲ. ಕಠೋರ ಶಿಕ್ಷೆ, ಧರ್ಮಬೋಧೆ, ಅಪಮಾನ ಎಲ್ಲದರ ಹೊರತಾಗಿ ನಡೆಯುತ್ತಲೇ ಬಂದ ಉಲ್ಲಂಘನೆ. ಪರಿಪೂರ್ಣ ಸಂಗಾತಿಗೆ, ಅರ್ಥಪೂರ್ಣ ಸಾಂಗತ್ಯಕ್ಕೆ ನಿರಂತರ ಹಂಬಲಿಸಿದ ಮನುಷ್ಯ ಮನದ ಒಳತುಡಿತ. ನೀತಿನಿಯಮ-ಕಟ್ಟಳೆಗಳು ಹತ್ತಿಕ್ಕಿದರೂ ಮತ್ತೆಮತ್ತೆ ಸಂಭವಿಸುತ್ತಲೇ ಇರುವ ಪ್ರವಾಹ. ಚೌಕಟ್ಟುಗಳ ಮುರಿಯುತ್ತಲೇ ಇರುವ ಮನುಷ್ಯ ಮನಸಿನ ಮಾಯಕ.

ಯೆಲ್ಲಾಳ ಬಾಳಕಥನ ಒಂದುಎಳೆಯಾದರೆ, ಆ ಕಾದಂಬರಿಯೊಳಗಣ ಇನ್ನೊಂದು ಕಾದಂಬರಿ ಮಧುರ ಧರ್ಮದ್ರೋಹ. ಅದು ಜಲಾಲುದ್ದೀನ್ ರೂಮಿ ಮತ್ತು ತಬ್ರೀಜಿನ ದರವೇಶಿ ಶಂಸ್ ನಡುವಿನ ಚಾರಿತ್ರಿಕ ಸಂಬಂಧದ ಒಳಸುಳಿಗಳನ್ನು ತೆರೆದಿಡುತ್ತದೆ. ಅದು 13ನೇ ಶತಮಾನದ ಬಾಗ್ದಾದ್, ಸಮರ್ಕಂಡ್, ಟರ್ಕಿಯ ಸಮಾಜ ಕುರಿತು ತಿಳಿಸುತ್ತದೆ. ಹಲವು ವ್ಯಕ್ತಿಚಿತ್ರ, ಭಾವಚಿತ್ರಗಳ ಮೂಲಕ ಆ ಕಾಲದ ರಾಜಕೀಯ-ಧಾರ್ಮಿಕ-ಸಾಮಾಜಿಕ ಪರಿಸರ, ಸಂಘರ್ಷ, ಸಂಬಂಧದ ಸ್ವರೂಪಗಳನ್ನು ವಿವರವಾಗಿ ಕಟ್ಟಿಕೊಡಲಾಗಿದೆ. ರೂಮಿಯ ಬದುಕಿನ ಹಲವು ಮಗ್ಗುಲುಗಳನ್ನು, ಅವನ ಮನೋಲೋಕ-ಭಾವಲೋಕದಲ್ಲಾದ ಬದಲಾವಣೆಗೆ ಪೂರಕವಾದ ಸಂಗತಿಗಳನ್ನು ಹಲವು ನೆಲೆಯಿಂದ ಹಲವರ ಮಾತುಗಳಲ್ಲಿ ಮೂಡಿಸಲು ಯತ್ನಿಸಲಾಗಿದೆ.

ಕಿರಿಯ ವಯಸ್ಸಿನಲ್ಲೇ ಅಪಾರ ಖ್ಯಾತಿ, ಸ್ಥಾನಮಾನ, ಸಂಪತ್ತು ಪಡೆದ ರೂಮಿ ಆಧ್ಯಾತ್ಮಿಕ ಗುರು ಎನಿಸಿಕೊಂಡಿರುತ್ತಾನೆ. ಅವನ ಧರ್ಮ ಪ್ರವಚನಗಳಿಗೆ ಸಾವಿರಾರು ಜನ ಸೇರುತ್ತಿರುತ್ತಾರೆ. ಆದರೂ ಸುಪ್ರಸಿದ್ಧ ಮೌಲಾನಾ ರೂಮಿಗೆ ಏನೋ ಒಂಟಿತನ, ಎಲ್ಲ ಇದ್ದೂ ಒಂದು ಶೂನ್ಯ. ಅದು ಸರಿಸಮ ಸಂಗಾತಿಯ ಹಂಬಲದಿಂದ ಹುಟ್ಟಿದ ಶೂನ್ಯ.



ಅದೇವೇಳೆಗೆ ಇಸ್ಲಾಮಿಕ್ ಮೌಲ್ಯಗಳನ್ನು ವಾಸ್ತವ ಬದುಕಾಗಿ ವ್ಯಾಖ್ಯಾನಿಸುವ, ನೇರಮಾತಿನ, ತಬ್ರೀಜಿನ ಸಂತ ಶಂಸ್ ಕೂಡ ಗುರುವೂ ಅಲ್ಲದ, ಶಿಷ್ಯನೂ ಅಲ್ಲದ ಸಂಗಾತಿಯ ಹುಡುಕಾಟದಲ್ಲಿರುತ್ತಾನೆ. ತನ್ನಲ್ಲಿರುವ ಎಲ್ಲ ಶಬ್ದಗಳನ್ನು, ಕತೆಗಳನ್ನು, ಜ್ಞಾನವನ್ನು, ಅರಿವನ್ನು ಹೀರಿಕೊಳ್ಳಬಲ್ಲ, ತಾನು ಆರಂಭಿಸಿದುದನ್ನು ಮುಂದುವರೆಸುವ ಸಂಗಾತಿಯ ಹುಡುಕುತ್ತಿರುತ್ತಾನೆ. ಶಂಸನ ಪ್ರೇಮವ್ಯಾಖ್ಯಾನದ, ಧರ್ಮದ ಸರಳ ವಿಶ್ಲೇಷಣೆಯ ಸೆಳವಿಗೆ ಸಿಕ್ಕಿದವರೆಲ್ಲ ಯಾರ‍್ಯಾರು? ಒಬ್ಬ ಭಿಕ್ಷುಕ, ಸುಲೇಮಾನ್ ಎಂಬ ಕುಡುಕ, ಗಡಂಗಿನ ವ್ಯಾಪಾರಿ, ವೇಶ್ಯಾವಾಟಿಕೆಗೆ ಮಾರಲ್ಪಟ್ಟ ಅನಾಥ ಹುಡುಗಿ, ಹೀಗೇ. ಸ್ವರ್ಗದಲ್ಲಿ ಮದಿರೆಯನ್ನು ಬಹುಮಾನವಾಗಿ ನೀಡುವುದಾದರೆ ಅದು ಭೂಮಿ ಮೇಲೇಕೆ ನಿಷಿದ್ಧ ಎಂದು ಕೇಳುವ ಮೂಲಕ ಲೋಕದ ಕಣ್ಣಲ್ಲಿ ಪಾಪಿ ಎನಿಸಿಕೊಂಡವರಿಗೂ ಶಂಸ್ ಪಾಪನಾಶ ಮಾಡುವವನಾಗಿರುತ್ತಾನೆ. ಕೊನೆಗಂತೂ ರೂಮಿ-ಶಂಸರ ಭೇಟಿಯಾಗುತ್ತದೆ. ಶಂಸ್ ಒಡನಾಟದಿಂದ ರೂಮಿಯ ಆಂತರಿಕ ವ್ಯಕ್ತಿತ್ವ ಅರಳತೊಡಗುತ್ತದೆ. ಅವರಿಬ್ಬರದು ಪರಸ್ಪರರನ್ನು ಪ್ರತಿಫಲಿಸುವ ಕನ್ನಡಿಯಂಥ ಸಾಂಗತ್ಯವಾಗುತ್ತದೆ.

ದೇವರನ್ನೂ, ಪ್ರೇಮಿಯನ್ನೂ ಹೃದಯ ಒಂದೇ ರೀತಿಯಲ್ಲಿ ಸ್ವೀಕರಿಸುತ್ತದೆ. ಎಂದೇ ಭಕ್ತಿ ಮತ್ತು ಪ್ರೇಮ ಈ ಎರಡರ ಪರಾಕಾಷ್ಠೆ ಒಂದೇ ಆಗಿದೆ ಎಂದು ನಂಬಿದವರು ಸೂಫಿಗಳು. ಸೂಫಿ ದರವೇಶಿ ಶಂಸನ ಭೇಟಿ ಅತಿಧಾರ್ಮಿಕ ರೂಮಿಯನ್ನು ಮಹತ್ತರವಾಗಿ ಬದಲಾಯಿಸುತ್ತದೆ. ಅದು ಅಂತಿಂಥ ಬದಲಾವಣೆಯಲ್ಲ. ಮೊದಲಿದ್ದ ರೂಮಿ ಅಕ್ಷರಶಃ ಇಲ್ಲವಾಗುತ್ತಾನೆ. ವಿಶ್ವದ ಸಕಲ ವ್ಯಾಪಾರಗಳೂ ಗೌಣವೆನಿಸಿ ಶಂಸ್ ಹೊರತಾಗಿ ಮತ್ತೇನೂ ಅವನನ್ನು ಸೆಳೆಯದಾಗುತ್ತದೆ. ಎರಡು ಮದುವೆಯಾಗಿ ಹೆಂಡತಿ ಮಕ್ಕಳಿದ್ದ; ಧಾರ್ಮಿಕ ಪಂಡಿತನಾಗಿ ವಿದ್ವಾಂಸನೆಂಬ ಹೆಸರು ಗಳಿಸಿದ್ದ; ಅರಸೊತ್ತಿಗೆಯ ಸಮೀಪವಿದ್ದು ಧನಕನಕ ಗಳಿಸಿದ್ದ ರೂಮಿ ಎಲ್ಲವನ್ನೂ ತೊರೆದು ಕೇವಲ ಶಂಸ್‌ಗಾಗಿ ಹಾತೊರೆಯುತ್ತಾನೆ. ರೂಮಿಯ ಬದುಕು ಈ ಸಂಬಂಧದಿಂದ ತೀವ್ರ ಸಂಘರ್ಷಕ್ಕೀಡಾಗುತ್ತದೆ. ದರವೇಶಿಯೊಬ್ಬನ ಸಂಗದಲ್ಲಿ ಮೌಲಾನಾ ತನ್ನ ಜವಾಬ್ದಾರಿ ಮರೆತು ತಿರುಗಾಡತೊಡಗಿದ್ದು ಕುಟುಂಬಕ್ಕೆ, ಅನುಯಾಯಿಗಳಿಗೆ ಸಹಿಸಲಾರದ ಆಘಾತ ನೀಡುತ್ತದೆ.




ವ್ಯಕ್ತಿಗತ ಉನ್ನತೀಕರಣಕ್ಕೆ ಎರಡು ಮಜಲುಗಳಿವೆ: ಒಂದು ಲೌಕಿಕ ನೆಲೆಯ ಅಧಿಕಾರ, ಆಸ್ತಿ, ಅಂತಸ್ತು ವಗೈರೆ ಹೊಂದುವುದು. ಮತ್ತೊಂದು ಆಧ್ಯಾತ್ಮಿಕ ನೆಲೆಯದು. ಇಲ್ಲಿ ರೂಮಿ ಮತ್ತು ಯೆಲ್ಲಾ ಸಾಧಿಸಿದ್ದು ಎರಡನೆಯ ನೆಲೆಯ ಉನ್ನತೀಕರಣ. ಯೆಲ್ಲ-ರೂಮಿ ಲೋಕರೂಢಿಗೆ ವಿರುದ್ಧವಾಗಿ ಆಯ್ದುಕೊಂಡ ಹಾದಿಯನ್ನು ಅರ್ಥಸಂಬಂಧಿಯಾಗಿ ನೋಡಿದರೆ ಹಿಂಚಲನೆ. ಅದೇ ಅಂತರಾಳದ ಶೀಲಸಂಬಂಧಿಯಾಗಿ ನೋಡಿದರೆ ಸ್ವಾತಂತ್ರ್ಯ, ಸ್ವಾಯತ್ತತೆ, ಆಂತರಿಕ ಚಲನೆ.

ನದಿಗೆ ಕಲ್ಲೆಸೆದರೆ, ಏನಾಗುತ್ತದೆ? ಫಳ್ ಎಂದು ಅಷ್ಟು ನೀರು ಹಾರುತ್ತದೆ. ತನ್ನೊಳಗಿನ ಹಲವು ಗೊಂದಲಗಳಲ್ಲಿ ಇದೂ ಒಂದೆಂದು ನದಿ ಮುಂದೆ ಸಾಗುತ್ತದೆ. ಆದರೆ ಅದೇ ನಿಂತ ಕೊಳಕ್ಕೆ ಕಲ್ಲೆಸೆದರೆ? ಅಲೆಅಲೆಯಾಗಿ ಒಂದರ ಹಿಂದೊಂದು ತರಂಗಗಳೆದ್ದು, ಎದ್ದ ಅಲೆಗಳು ದಡ ಮುಟ್ಟುವವರೆಗೂ ಕೊಳ ಮೊದಲಿನಂತಿರುವುದಿಲ್ಲ. ಮೇಲ್ನೋಟಕ್ಕೆ ಶಾಂತವೆಂಬಂತೆ ಕಾಣುವ ಯೆಲ್ಲ ಮತ್ತು ರೂಮಿಯೆಂಬ ಎರಡು ಕೊಳದೊಳಗೆ ಬಿದ್ದ ಪ್ರೇಮದ ಕಲ್ಲು ಅವರನ್ನು ಆತ್ಯಂತ ಬದಲಿಸಿ ಮೊದಲಿರುವುದಕ್ಕಿಂತ ಬೇರೆಯೇ ಆದ ವ್ಯಕ್ತಿತ್ವಗಳು ಉದಿಸುತ್ತವೆ. ಅದುವೇ ಪ್ರೇಮದ ಶಕ್ತಿ. ಅದನ್ನು ಇವೆರೆಡು ಕಥಾನಕಗಳ ಮೂಲಕ ‘ಪ್ರೀತಿಯ ನಲವತ್ತು ನಿಯಮಗಳು’ ಕಾದಂಬರಿ ತಿಳಿಸುತ್ತದೆ.



ಹೊಸಬದುಕಿನ ಹಂಬಲ?

ಇದು ಟಾಲ್‌ಸ್ಟಾಯ್ ಅವರ ಅನ್ನಾ ಕರೆನಿನಾ ಕಾದಂಬರಿಯನ್ನು ನೆನಪಿಸುವ ಕಾದಂಬರಿ. ಪ್ರೇಮವೆಂಬ ಬಿರುಗಾಳಿಗೆ ಸಿಲುಕಿದ ನಡುವಯಸ್ಸಿನ ಹೆಣ್ಣಿನ ಕತೆ. ಒಬ್ಬ ಸಾಮಾನ್ಯ ಹೆಣ್ಣುಮಗಳಾಗಿದ್ದ ಯೆಲ್ಲ, ಅಥವಾ ಅನ್ನಾಳ ಬದುಕಿನ ತಿರುವುಗಳು ಹಲವು ಪ್ರಶ್ನೆಗಳನ್ನು ಎತ್ತುತ್ತವೆ.

ಇರುವುದೆಲ್ಲವ ಬಿಟ್ಟು ಅನ್ನಾ ಆಗಲೀ, ಯೆಲ್ಲಾ ಆಗಲೀ ನಡೆದುಬಿಟ್ಟದ್ದೇಕೆ? ಇದೇನು ಪ್ರೇಮದ ಹುಡುಕಾಟವೋ? ಶುದ್ಧ ಸಾಂಗತ್ಯದ ಹಂಬಲವೋ? ತನ್ನ ತಾ ಒರೆಗೆ ಹಚ್ಚಿಕೊಳ್ಳುವ ಯತ್ನವೋ? ನೈತಿಕ-ಅನೈತಿಕಗಳಾಚೆ, ಸರಿತಪ್ಪುಗಳಾಚೆ ಸಂಭವಿಸುವ ಯಾವ ಮಾಯಕ ಅವರೊಳಗನ್ನು ಆ ಪರಿ ಅಲುಗಿಸಲು ಕಾರಣವಾಯಿತು? ಮದುವೆ ಎಂಬ ಸಂಸ್ಥೆಯ ಒಳಗಿನ ಅಗೋಚರ ಹಿಂಸೆ ಇದಕ್ಕೆ ಕಾರಣವೇ? ಕುಟುಂಬ, ಕೌಟುಂಬಿಕ ಜವಾಬ್ದಾರಿಗಳು ಹೆಣ್ಣಿನ ಅಂತಸ್ಸತ್ವವನ್ನು, ಕ್ರಿಯಾಶೀಲತೆಯನ್ನು ನಿರಂತರ ದಮನಿಸುವ ಕಾರಣ ಹೀಗಾಗುವುದೇ? ತಾಳಿಕೊಂಡಷ್ಟು ತಡೆದು ನಂತರ ಸಿಡಿಯುವ ಒಳಬಂಡಾಯವೇ ಇದು? ಏಕಸಂಗಾತಿ ಸಂಬಂಧ ಎನ್ನುವುದೇ ಹುಸಿ ಮೌಲ್ಯವೇ? ಯಾಕಾದರೂ ‘ನಿಷ್ಠೆ’ಯ ಆಚೆ ಮನಸ್ಸು ಚಲಿಸುತ್ತದೆ? ದಾಂಪತ್ಯ ಕುರಿತ ಅನಾದರ ವಿವಾಹೇತರ ಸಂಬಂಧಗಳಿಗೆ ಕಾರಣವೇ? ಕೊನೆಗೂ ಬೇಕಿರುವುದು ಸುರಕ್ಷತೆ, ಖಚಿತ ಆವರಣವೋ ಅಥವಾ ಸ್ವಾತಂತ್ರ್ಯವೋ?

ಬಹುಶಃ ದಾಂಪತ್ಯದ ಬಂಧ ಹೊಸನೆಲೆಗಳಲ್ಲಿ ನವೀಕರಣಗೊಳ್ಳದೆ ಸವಕಲಾಗುವುದು ಇಂಥ ತಿರುವುಗಳಿಗೊಂದು ಕಾರಣವಿರಬಹುದು. ವಿವಾಹದ ನಂತರ ಇದ್ದಕ್ಕಿದ್ದಂತೆ ಬದಲಾಗುವ ಹೆಣ್ಣಿನ ಸ್ಥಾನಮಾನ, ಜವಾಬ್ದಾರಿಗಳು ಒಂದಷ್ಟು ಕಾಲ ಅವಳಿಗೆ ಬೆಚ್ಚನೆಯ ಅನುಭವ ನೀಡಬಹುದು. ಆದರೆ ತಾಯ್ತನ ಸಂಭ್ರಮವಷ್ಟೆ ಅಲ್ಲ, ಉದ್ದಕ್ಕೂ ಆತಂಕ ಹುಟ್ಟಿಸುವ ಸಂಗತಿಯೂ ಹೌದು. ಹೆಂಡತಿ ಪಾತ್ರವೂ ಅಷ್ಟೆ. ದಂಪತಿಗಳ ನಡುವಿನ ಆಕರ್ಷಣೆ, ಲೈಂಗಿಕತೆ ಕೆಲಕಾಲ ಬೆಳಕಾಗಬಲ್ಲದು. ನಂತರ ಆ ದೀಪ ಮಬ್ಬಾಗತೊಡಗುತ್ತದೆ. ಹೊಸಬೆಳಕಿಗಾಗಿ ಇಬ್ಬರೂ ತೈಲವಾಗಬೇಕು. ಹಾಗಾಗದಿದ್ದರೆ ಯಾಂತ್ರಿಕಗೊಳ್ಳತೊಡಗಿದ ಬದುಕಿನಲ್ಲಿ ಆಚೆ ತೀರದ ಏನನ್ನೋ ಹುಡುಕುವ ಹಂಬಲ, ಮತ್ತೇನನ್ನೋ ಅರಸುವ ಉಮೇದು ಹುಟ್ಟಿಕೊಳ್ಳುತ್ತದೆ. ಸಿದ್ಧ ಮಾದರಿ ಸೂಕ್ತ ಮಾದರಿ ಇರಲಿಕ್ಕಿಲ್ಲ ಎನಿಸುತ್ತದೆ.

ಸಾಮಾನ್ಯವಾಗಿ ನಡು ವಯಸ್ಸು ತಲುಪುತ್ತಿದ್ದಂತೆ ಸ್ತ್ರೀಪುರುಷರ ಲೈಂಗಿಕತೆ ಮತ್ತು ಅಂತರಾಳದ ಚಲನೆ ವಿರುದ್ಧ ದಿಕ್ಕುಗಳಲ್ಲಿ ಸಂಭವಿಸುತ್ತದೆ. ಮನೆ-ಮಕ್ಕಳು-ಗಂಡನೆಂದು ಮೊದಮೊದಲು ಕೌಟುಂಬಿಕ ಜವಾಬ್ದಾರಿಗೆ ಹೆಚ್ಚು ತೆತ್ತುಕೊಂಡು ಮುದುರಿಕೊಂಡ ಹೆಣ್ಣುಮಕ್ಕಳು ೪೦ರ ನಂತರ ವ್ಯಕ್ತಿಗತವಾಗಿ ಬಹಿರ್ಮುಖ ಚಲನೆಗೊಳಗಾಗಿ ಅರಳಿಕೊಳ್ಳತೊಡಗುತ್ತಾರೆ. ಇದು ಕೌಟುಂಬಿಕ ಹೆಣ್ಣು ಸಾಮಾಜಿಕ ಹೆಣ್ಣಾಗಹೊರಡುವ ಸೂಚನೆ. ಆದರೆ ಮೊದಲು ಹರಡಿಕೊಂಡಿದ್ದರೂ ಗಂಡಸು ವಯಸ್ಸು ಕಳೆಯುತ್ತ ಹೋದಹಾಗೆ ಹೆಚ್ಚೆಚ್ಚು ಮನೆಗೆ, ಕುಟುಂಬಕ್ಕೆ ಅಂಟಿಕೊಳ್ಳತೊಡಗುತ್ತಾನೆ. ಸಾಮಾಜಿಕವಾಗಿದ್ದವರು ವೈಯಕ್ತಿಕವಾಗತೊಡಗುತ್ತಾರೆ. ಇದು ಒಳಚಲನೆ. ಆಳದೆಡೆ ಚಲನೆ. ಒಂದೇ ಕಾಲಮಾನದಲ್ಲಿ ಹೆಣ್ಣುಗಂಡಿನ ಬದುಕಿನಲ್ಲಿ ಸಂಭವಿಸುವ ವಿರುದ್ಧ ದಿಕ್ಕಿನ ಚಲನೆಗಳು ಯಾವುದೋ ಒಂದು ಮಧ್ಯ ಬಿಂದುವಿನಲ್ಲಿ ಸಂಧಿಸಬೇಕು. ಅದಕ್ಕೆ ಇಬ್ಬರೂ ಪರಸ್ಪರರ ಕಡೆಗೆ ಚಲಿಸಬೇಕು. ಇದಕ್ಕೆ ಸುಲಲಿತ ಸಂವಹನ ಇರಲೇಬೇಕು. ಅದಿಲ್ಲದಿದ್ದರೆ ಗಾಢಮೌನದಲ್ಲಿ ಸಮಾಧಿಯಾದ ಸಂಬಂಧಗಳು ಯೆಲ್ಲಳ, ಅನ್ನಾಳ ಬದುಕುಗಳಿಗೆ ಇಂಥ ತಿರುವು ನೀಡುತ್ತವೆ.



ಸುಪಾರಿ ಕೊಲೆ

13ನೇ ಶತಮಾನದಲ್ಲಿ ಶಂಸನ ಕೊಲೆಗೆ ಸುಪಾರಿ ಕೊಡಲಾಗುತ್ತದೆ. ಕುರಾನ್‌ನ ಆನ್ವಯಿಕ ಜ್ಞಾನವನ್ನು ಆದ್ಯಂತ ಹೊಂದಿದ ಸೂಫಿ ಶಂಸನ ಬಗೆಗೆ ಸಂಪ್ರದಾಯವಾದಿಗಳು ವಿಪರೀತ ಸಿಟ್ಟಾಗಿರುತ್ತಾರೆ. ಷರಿಯದ ಪ್ರಕಾರವೇ ಎಲ್ಲ ನಡೆಯಬೇಕೆಂದು ನ್ಯಾಯಾಸ್ಥಾನದಲ್ಲಿ ನ್ಯಾಯಾಧೀಶರು ಹೇಳುತ್ತಿರುವಾಗಲೇ, ‘ಷರಿಯವೆಂದರೆ ದೀಪವಿದ್ದ ಹಾಗೆ, ಅದೇ ಮಾರ್ಗವಲ್ಲ. ಅದರ ಬೆಳಕಿನಲ್ಲಿ ನಿನ್ನ ದಾರಿ ನೀನೆ ಹುಡುಕಿಕೊ’ ಎಂದು ಭಿನ್ನವಾಗಿ ವ್ಯಾಖ್ಯಾನಿಸುವ ಶಂಸನನ್ನು ಕಂಡರೆ ಸಂಪ್ರದಾಯವಾದಿಗಳಿಗೆ ನಡುಕ. ಎಲ್ಲ ಕಾಲದಲ್ಲಿಯೂ ಧರ್ಮರಕ್ಷಕರು ಬಯಸುವುದು ದಾಸರನ್ನೇ ಹೊರತು ಪ್ರಶ್ನಿಸುವವರನ್ನಲ್ಲ. ಪ್ರಶ್ನಿಸುವವರ ಕುರಿತು ಸಾಂಸ್ಥಿಕ ಧರ್ಮಕ್ಕೂ, ಆಳುವ ವ್ಯವಸ್ಥೆಗೂ ತೀವ್ರ ಅಸಹನೆ ಇರುತ್ತದೆ. ಹಾಗಾಗಿಯೇ ಅಂಥವರ ಬಾಯ್ಮುಚ್ಚಿಸುವ ಕೆಲಸ ನಿರಂತರ ಸಾಗಿದೆ. ಅಂದು ಶಂಸನ ಕೊಲೆಗೆ ಯಾವುದು ಕಾರಣವಾಯಿತೋ ಇವತ್ತು ನಡೆಯುತ್ತಿರುವ ವಿಚಾರವಾದಿಗಳ ಹತ್ಯೆಗೂ ಅದೇ ಕಾರಣವಾಗಿದೆ!

ಆಸ್ತಿ, ಅಧಿಕಾರಗಳಿರದ ಒಬ್ಬ ದರವೇಶಿ, ಸನ್ಯಾಸಿ, ವಿಚಾರವಾದಿ ಸಾಂಸ್ಥಿಕ ವ್ಯವಸ್ಥೆಗೆ ಅಪಾಯಕಾರಿ ಎನಿಸುವುದಾದರೂ ಯಾಕೆ?

ನಮ್ಮಲ್ಲಿ ಅಧಿಕಾರದ ಸ್ವರೂಪ, ಆಳ್ವಿಕೆಯ ಸ್ವರೂಪ ಕುರಿತು ಹಲವು ಸಿದ್ಧಾಂತ, ಪ್ರತಿಪಾದನೆಗಳಿವೆ. ದಾರಿಗಳಿವೆ. ಆದರೆ ಅಧಿಕಾರ ಅನೈತಿಕಗೊಳ್ಳದಿರಲು, ಪಿಪಾಸುತನದಲ್ಲಿ ಕೊನೆಯಾಗದಿರಲು ಮನಶ್ಶಾಸ್ತ್ರೀಯ ಪರಿಕಲ್ಪನೆಗಳನ್ನು ಮತಧರ್ಮಗಳು ಒದಗಿಸುತ್ತವೆ. ಅಧಿಕಾರವು ಹಿಂಸೆ ಸೃಜಿಸದ ಹಾಗೆ, ಸಮಾಜ-ವ್ಯಕ್ತಿತ್ವ ಛಿದ್ರಗೊಳ್ಳದ ಹಾಗೆ ನೋಡಿಕೊಳ್ಳುವ ತಾಳ್ಮೆಯ ಗುಣವನ್ನು ಆಧ್ಯಾತ್ಮ ನೀಡುತ್ತದೆ. ಮನುಷ್ಯನಿಗೆ ಬರಿಯ ಲೌಕಿಕ, ಭೌತಿಕ ಅಸ್ತಿತ್ವವೊಂದೇ ಅಲ್ಲ, ಆಧ್ಯಾತ್ಮಿಕ, ಆದಿಭೌತಿಕ, ಧಾರ್ಮಿಕ ವ್ಯಕ್ತಿತ್ವವೂ ಇರುತ್ತದೆ. ಶಂಸನಂಥ ಆಧ್ಯಾತ್ಮವಾದಿಗಳು ಅಧಿಕಾರದೆದುರು ಸಂಯಮಿಯಾಗಿಯೂ, ಸಂದೇಹಿಯಾಗೂ ಇರಬಲ್ಲದು. ಅವರು ಪ್ರಶ್ನಿಸಿ ಒಪ್ಪುವವರು. ಎಂದೇ ಒಳಬಂಡಾಯಗಾರ(ಕ್ರಿಟಿಕಲ್ ಇನ್‌ಸೈಡರ್) ಆಗಬಲ್ಲರು. ಬುದ್ಧ, ಸಾಕ್ರೆಟೀಸ್, ಬಸವ, ಕನಕ, ಶರೀಫ, ಕಬೀರ, ವಿವೇಕಾನಂದ, ನಿಡುಮಾಮಿಡಿ, ಸ್ವಾಮಿ ಅಗ್ನಿವೇಶ್ ಮೊದಲಾದವರು ಒಳಗಿನಿಂದಲೇ ಬುಡಮಟ್ಟದ ಪ್ರಶ್ನೆಗಳನ್ನೆತ್ತುವವರು. ಎಂದೇ ಸಾಂಸ್ಥಿಕ ಧರ್ಮಕ್ಕೂ, ಆಳುವ ವ್ಯವಸ್ಥೆಗೂ ಒಳಬಂಡಾಯಗಾರರಾಗಿ ಕೆಂಗಣ್ಣಿಗೆ ಗುರಿಯಾದರು.

ಎಲ್ಲ ಸಹಸ್ರಮಾನಗಳಲ್ಲೂ ಅಸಹಿಷ್ಣುತೆ ಇತ್ತು ನಿಜ. ಆದರೆ ಪ್ರಜಾಪ್ರಭುತ್ವ ಯುಗದಲ್ಲೂ, ಸ್ವಾತಂತ್ರ್ಯದ ಕಾಲದಲ್ಲೂ ಇದು ಮುಂದುವರೆದು, ಹೆಚ್ಚೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.

***

ದೇವಳದಲ್ಲಿ ಮಗು ಕೊಲೆಗೀಡಾಗುವುದು, ಚರ್ಚಿನ ಪಾದ್ರಿ-ಮಠದ ಸ್ವಾಮಿಯೇ ಅತ್ಯಾಚಾರ ಮಾಡುವುದು, ಜಿಹಾದಿಗಳು ಹೆಣ್ಮಕ್ಕಳನ್ನು ಲೈಂಗಿಕ ಗುಲಾಮರಂತೆ ಬಳಸಿ ಹಿಂಸಿಸುವುದು, ಶಾಲೆಯಲ್ಲಿ ಎಳೆಬಾಲೆ ಮಗು ಹೆರುವುದೇ ಮೊದಲಾದ ಭೀಭತ್ಸಗಳಿಗೆ ಕಾಲ ಒಗ್ಗಿಹೋಗಿದೆ. ಟೋಪಿ, ಪತಾಕೆ, ಗಡ್ಡ, ನಮಾಜು, ಉಪವಾಸ, ಚರ್ಚು, ಶಿಲುಬೆ, ಕಿರ್ಪಾಣ್, ಕೇಶ್, ಕಂಗನ್, ನಾಮಪಟ್ಟೆಗಳೆಂಬ ಬಾಹ್ಯದ ಚಹರೆಗಳನ್ನು ಧರ್ಮದ ಕುರುಹುಗಳೆಂದುಕೊಂಡಿದ್ದೇವೆ. ಕುರುಹುಗಳಾಚೆಗಿನ ನಿಜಧರ್ಮದ ಗುರುತು ಮರೆತೇಬಿಟ್ಟಿದ್ದೇವೆ.

ಹೀಗಿರುತ್ತ ‘ಮರಣದ ಬಳಿಕ ಗೋರಿಯೇಕೆ? ಮಾನವ ಹೃದಯವೇ ನನ್ನ ನೆಲೆ’ ಎಂದ ರೂಮಿಯನ್ನು ಮಹಾಕವಿಯಾಗಿ ರೂಪಿಸಿದ ಬದುಕಿನ ಕುರಿತ ಕಾದಂಬರಿ ‘ಪ್ರೀತಿಯ ನಲವತ್ತು ನಿಯಮಗಳು’ ಓದಲೇಬೇಕಾದ ಕೃತಿಯಾಗಿದೆ. ಇಡಿಯ ಕಾದಂಬರಿಯ ಭಾಷೆ ಕಾವ್ಯದ್ದು. ಅದನ್ನೊಂದು ಕವಿತೆಯಂತೆ ಓದಬಹುದು. ಕಾಗುಣಿತದ ತಪ್ಪುಗಳು, ಅನುವಾದದ ಕೆಲ ಕಿರಿಕಿರಿಗಳ ಹೊರತಾಗಿಯೂ ಕಾದಂಬರಿ ಕೆಳಗಿಟ್ಟ ಬಳಿಕ ಬಹುಕಾಲ ಓದಿನ ಸುಖ, ಕಾವ್ಯದ ಅಮಲು ಆವರಿಸುತ್ತದೆ. ಕಾವ್ಯಾಸಕ್ತಿ ಇಲ್ಲದವರಿಗೆ ಅನುವಾದದಲ್ಲಿ ಬಳಸಿರುವ ಕರ್ಮಣಿ ಪ್ರಯೋಗ ಕೊಂಚ ರಗಳೆಯೆನಿಸಲೂಬಹುದು. ಆದರೆ ಮಮತಾ ಮೇಡಂ ಅದನ್ನು ಅನುವಾದಿಸುವಾಗ, ಕೊನೆಯ ಸ್ವರೂಪ ಕೊಡುವಾಗ, ಚಿತ್ರಗಳ ಬರೆಸುವಾಗ ಅಪಾರ ಶ್ರಮ ಪಟ್ಟಿದ್ದಾರೆ. ೪೩೦ ಪುಟಗಳ ಬೃಹತ್ ಕಾದಂಬರಿ ಅನುವಾದಿಸಲು ದೇಶ ಸುತ್ತಿ, ಕೋಶ ಓದಿ, ಇನ್ನಿಲ್ಲದಷ್ಟು ಶ್ರಮಪಟ್ಟ ಕವಿ, ಅಕ್ಕ ಮಮತಾ ಸಾಗರ ಅವರಿಗೆ ಕನ್ನಡ ಓದುಗರ ಪರವಾಗಿ ಧನ್ಯವಾದಗಳು.


‘ಪ್ರೀತಿಯ ನಲವತ್ತು ನಿಯಮಗಳು’:
ಇಂಗ್ಲಿಷ್ ಮೂಲ: ಎಲಿಫ್ ಶಫಾಕ್
ಕನ್ನಡಕ್ಕೆ: ಮಮತಾ ಸಾಗರ
 ಪ್ರಕಾಶಕರು: ದೇಸಿ ಪುಸ್ತಕ. ಪುಟ: 444, ಬೆಲೆ: 400

(all images courtesy: Internet)

1 comment: