Thursday 14 March 2019

ಮಹಿಳಾ ಚಳವಳಿ ಎಲ್ಲಿದೆ?










ಭೂಮಿಗೆ ಕಣ್ಣು ತೆರೆದಾಗಿನಿಂದ ಒಳಗನ್ನು ಒತ್ತಿಟ್ಟುಕೊಂಡು ಮೂಕವಾಗಿರುವ ಹೆಣ್ಣುಗಳು ಮಾತಾಡುವುದು ಕಷ್ಟ, ಆಡಿದರೆ ಲೋಕಕ್ಕೆ ಅರಗಿಸಿಕೊಳ್ಳುವುದು ಇನ್ನೂ ಕಷ್ಟ. ಕಹಿಸತ್ಯ ಜೀರ್ಣಿಸಿಕೊಳ್ಳಲಾಗದ್ದಕ್ಕೋ, ಮಹಿಳಾ ಸಮಾನತೆ ಒಪ್ಪಿಕೊಂಡರೆ ತಾವನುಭವಿಸಬೇಕಾದ ಅನಾನುಕೂಲ, ಅಭದ್ರತೆಗೋ ಅಂತೂ ಎಷ್ಟೋ ಸಹವರ್ತಿಗಳು ಮಹಿಳಾ ಚಳವಳಿ ಬಗೆಗೆ ಹಗುರವಾಗಿ ಮಾತಾಡುತ್ತಾರೆ. ಅಂಥದೊಂದು ಸಂಭವಿಸುತ್ತಿದೆಯೆ ಎಂದು ಅನುಮಾನಿಸುತ್ತಾರೆ. ‘ದಿನನಿತ್ಯ ಅತ್ಯಾಚಾರ, ದೌರ್ಜನ್ಯಗಳು ಸಂಭವಿಸುತ್ತಿರುವುದೇ ಮಹಿಳಾ ಚಳವಳಿ ಇಲ್ಲವೆನ್ನಲು ಸಾಕ್ಷಿಯಾಗಿದೆ’ ಎಂದು ಕೆಲವರು ಷರಾ ಬರೆಯುತ್ತಾರೆ.

ಒಮ್ಮೆ ನನ್ನೊಡನೆ ವೇದಿಕೆ ಹಂಚಿಕೊಂಡ ಲೇಖಕರೊಬ್ಬರು, ‘ಮಹಿಳಾ ಚಳವಳಿ ಎನ್ನುವುದೆಲ್ಲ ಲಿಪ್‌ಸ್ಟಿಕ್, ಬಾಬ್‌ಕಟ್, ಬಿಂದಿಧಾರಿ ಮೇಲ್ವರ್ಗದ ಹೆಂಗಸರ ಅರ್ಬನ್ ಬಡಬಡಿಕೆಗಳು. ರೈತ ಚಳವಳಿಯ ಬ್ಯಾನರ್, ಬೋರ್ಡ್, ಹಸಿರು ಟವೆಲು ಅಲ್ಲಿಲ್ಲಿ ಕಾಣುತ್ತವೆ. ಅಂಬೇಡ್ಕರ್ ಫೋಟೋ, ನೀಲಿ ಬಾವುಟ, ದಲಿತ ಸಂಘಟನೆಯ ಬೋರ್ಡ್ ಎಲ್ಲೆಲ್ಲು ಕಾಣುತ್ತವೆ. ಹಲವೆಡೆಗಳಲ್ಲಿ ಕಾರ್ಮಿಕ ಸಂಘಟನೆಗಳ ಕೆಂಬಾವುಟ; ಕನ್ನಡಸಂಘಗಳ ಹಳದಿಕೆಂಪು ಬಾವುಟ ಕಾಣುತ್ತವೆ. ಅದೇ ಮಹಿಳಾ ಚಳವಳಿ-ಸಂಘಟನೆ ಇದೇಂತ ತೋರಿಸೋಕೆ ಏನಿರುತ್ತೆ?’ ಎಂದು ವ್ಯಂಗ್ಯವಾಡಿದರು.

ಹೌದು, ರೈತರಿಗೆ, ದಲಿತರಿಗೆ, ಕಾರ್ಮಿಕರಿಗೆ, ಕನ್ನಡಿಗರಿಗೆ ‘ಶತೃ’ ಎಂದು ಗುರುತಿಸಬಹುದಾದ ವಿರುದ್ಧ ಜನವರ್ಗ ಕಾಣಸಿಗುತ್ತದೆ. ಆದರೆ ಮಹಿಳೆಗೆ/ಮಹಿಳಾ ಚಳವಳಿಗೆ ತನ್ನ ಶತೃ ಅಂತ ತೋರಿಸಿಕೊಳ್ಳಲು ಏನಿದೆ? ತಾವನುಭವಿಸುವ ಎಲ್ಲ ದಮನಕ್ಕೂ ಕಾರಣವಾದ ಪಿತೃಪ್ರಾಧಾನ್ಯ ವ್ಯವಸ್ಥೆಯ ಸಾಕಾರರೂಪಿಗಳಾದ ಪುರುಷರನ್ನು ಶತೃಗಳೆನ್ನುವುದು ಹೇಗೆ? ಜನ್ಮಕೊಟ್ಟ ತಂದೆ; ಒಡನಾಡಿದ ಸೋದರರು; ಹೊತ್ತು, ಹೆತ್ತು, ತುತ್ತುಣಿಸಿ, ಸೆರಗಲ್ಲಿ ಅವುಚಿ, ಸಾಕಿ ಬೆಳೆಸಿದ ಮಗಂದಿರು; ನೆರೆದ, ಬೆರೆತ, ಗಂಡ; ಒಡನಾಡುವ ಬಂಧುಮಿತ್ರರು ನಮ್ಮ ಬದುಕಿನೊಳಗೊಂದಾಗಿ ಹೆಣೆದುಕೊಂಡು, ಬದುಕಿನ ಭಾಗವೇ ಆಗಿರುವಾಗ ಮಹಿಳೆಯರ ಹೋರಾಟ ಶತೃವಿಲ್ಲದ ಹೋರಾಟವೇ ಆಗಿದೆ. ಅದು ಅದೃಶ್ಯ ಶತೃವಿನ ವಿರುದ್ಧ ಒಳಬಂಡಾಯವಾಗಿದೆ.

ಆಯಿತು. ಮಹಿಳೆಯರಿಗೆ ಶತೃ ಎನ್ನುವುದು ಗುಂಪಿಗೆ ಸೇರದ ಪದ. ಮಹಿಳಾ ಚಳವಳಿಯು ಶತೃವನ್ನು ಎದುರೆದುರು ನಿಲ್ಲಿಸಿ ಹೋರಾಡುವ ಚಳುವಳಿ ಅಲ್ಲ ಎಂದುಕೊಳ್ಳೋಣ. ಆದರೆ ಮಹಿಳಾ ಚಳವಳಿಯೇ ಇಲ್ಲ ಎನ್ನುವರಲ್ಲ?

ಮಹಿಳಾ ಚಳವಳಿಯು ಪತಾಕೆ, ಬೋರ್ಡು, ಟವೆಲು, ಫೋಟೋಗಳೊಡನೆ ರಾರಾಜಿಸಲಾಗದ ಒಳಬಂಡಾಯವಾಗಿರುವುದರಿಂದ ಉಳಿದ ಚಳವಳಿಗಳ ಪರಿಭಾಷೆ, ವ್ಯಾಖ್ಯಾನ ಇಲ್ಲಿ ಅನ್ವಯಿಸುವುದಿಲ್ಲ. ಯಾವುದೇ ಚಳವಳಿಯ ಕಾರಣ, ಸ್ವರೂಪ, ನಡೆಗಳನ್ನು ಆಯಾ ಕಾಲದ ಸಮಾಜವೇ ನಿರ್ಧರಿಸುತ್ತದೆ. ಈ ಕಾಲದ ಹೆಣ್ಣಿಗೆ ಹಲವು ಶೋಷಿತ ಐಡೆಂಟಿಟಿಗಳಿವೆ. ದಮನದ ಹಲವು ನೆಲೆಗಳಿವೆ. ಪರಿಸರ ನಾಶ, ಯುದ್ಧ, ನೆರೆ, ಬರ, ಜಾಗತೀಕರಣ, ನಿರುದ್ಯೋಗ, ಗಣಿಗಾರಿಕೆ, ಅನಕ್ಷರತೆ, ಬಡತನ, ಕೃಷಿ ಬಿಕ್ಕಟ್ಟು, ವಲಸೆ ಮುಂತಾದ ಸಮಾಜದ ಸಕಲೆಂಟು ಸಮಸ್ಯೆಗಳು ಮಹಿಳಾ ಸಮಸ್ಯೆಗಳೂ ಆಗಿವೆ. ಇವೆಲ್ಲವನ್ನೂ ಒಂದು ಸಂಘಟನೆ, ಒಂದು ಹೋರಾಟ, ಒಂದು ಸಿದ್ಧಾಂತ ಬದಲಾಯಿಸಲು ಸಾಧ್ಯವಿಲ್ಲ. ಒಬ್ಬರ ಜೀವಮಾನ ಕಾಲದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.

ಎಂದೇ ಮಹಿಳೆಯರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಕಾರ್ಯಯೋಜನೆ ರೂಪಿಸುವ ಅನೇಕ ಸಂಘ, ಸಂಸ್ಥೆಗಳು ರೂಪುಗೊಂಡಿವೆ. ವರದಕ್ಷಿಣೆ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣಹತ್ಯೆ, ಮರ್ಯಾದಾ ಹತ್ಯೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ತಾಯಿಮರಣ, ವಿಧವಾ ಪದ್ಧತಿ, ಕೌಟುಂಬಿಕ ದೌರ್ಜನ್ಯ, ವೇತನ ತಾರತಮ್ಯ, ದೇವದಾಸಿ ಪದ್ಧತಿ ಮೊದಲಾದ ಹೆಣ್ಣು ಹೆಣ್ಣೆಂಬ ಕಾರಣಕ್ಕೇ ಅನುಭವಿಸುವ ಸಂಕಟಗಳ ವಿರುದ್ಧ ಕಳೆದೊಂದು ಶತಮಾನದಲ್ಲಿ ಕರ್ನಾಟಕದ ನಾಲ್ದೆಸೆಯಲ್ಲೂ ನಡೆದ ಸ್ಥಳೀಯ ಮಹಿಳಾ ಹೋರಾಟಗಳನ್ನು ಒಟ್ಟಾಗಿ ಗಮನಿಸಿದರೆ ಆಳದಲ್ಲಿ ಎಲ್ಲವೂ ಲಿಂಗತಾರತಮ್ಯ ಹಾಗೂ ಅದರ ಮೂಲವಾದ ಪಿತೃಪ್ರಾಧಾನ್ಯವನ್ನೇ ಪ್ರಶ್ನಿಸುತ್ತ ರೂಪುಗೊಂಡ ಪ್ರತಿರೋಧಗಳಾಗಿವೆ. ಆದರೆ ಒಂದು ನಾಯಕತ್ವದಡಿ ಬೃಹತ್ ಚಳುವಳಿಯಾಗಿ ರೂಪುಗೊಳ್ಳದೇ ಹೋಗಿರುವುದರಿಂದ ಮಹಿಳಾ ಹೋರಾಟ ಚದುರಿದಂತೆ ಕಾಣುತ್ತಿದೆ. ಆದರೆ ಬಹುನೆಲೆಯ ಸಂಘಟನೆ, ಹೋರಾಟಗಳ ಒಟ್ಟೂ ಪ್ರಯತ್ನವೇ ಮಹಿಳಾ ಚಳವಳಿ ಎನ್ನಬಹುದಾಗಿದೆ.

ಒಟ್ಟಾರೆ ಹೇಳುವುದಾದರೆ ದೀಪದ ಬತ್ತಿಯ ಹಾಗೆ ಪ್ರತಿನಿತ್ಯ ತನ್ನೊಳಗೆ ತಾನು ಸುಟ್ಟುಕೊಳ್ಳುತ್ತ, ಸುಡುತ್ತಿರುವುದೇನೆಂಬುದರ ಅರಿವು ಪಡೆದ ಹೆಣ್ಣುಜೀವಗಳ ಸಾಮೂಹಿಕ ಅನುಭವ, ಸ್ವಾಯತ್ತತೆಯ ನಿರಂತರ ಹುಡುಕಾಟವೇ ಮಹಿಳಾ ಚಳುವಳಿ. ಕಸ ಬೀಳುತ್ತಲೇ ಇರುತ್ತದೆ, ನಾವದನ್ನು ಗುಡಿಸಿ ಹೊರಗೆಸೆಯುತ್ತಲೇ ಇದ್ದೇವೆ, ಚಳುವಳಿ ಎಂಬ ತಲೆಬರಹವಿಲ್ಲದೆ..

ತೆರಣಿಯ ಹುಳದ ತಳಮಳ


ಚಳವಳಿಯ ಮಾತಿರಲಿ, ಬಹುಪಾಲು ಮಹಿಳೆಯರಿಗೆ ತಾರತಮ್ಯ ಇದೆಯೆಂದು, ತಾರತಮ್ಯದ ಮೂಲ ಯಾವುದಿರಬಹುದೆಂದು ಇನ್ನೂ ಅರ್ಥವಾಗಿಲ್ಲ. ದಮನದ ಬಲೆಯನ್ನು ಅತ್ಯಂತ ಜಾಗರೂಕವಾಗಿ, ನಾಜೂಕಾಗಿ, ಗಟ್ಟಿಯಾಗಿ ಹೆಣೆಯಲಾಗಿದೆ. ‘ತೆರಣಿಯ ಹುಳು’ ತನಗರಿವಿಲ್ಲದೆ ತಾನೇ ಬಲೆ ನೇಯ್ದು ಬಂಧಿಸಿಕೊಳ್ಳುವಂತೆ ಹೆಣ್ಣು ತನ್ನ ಸುತ್ತ ಬೇಲಿಯನ್ನು ತಾನೇ ಬಿಗಿದುಕೊಳ್ಳುವಂತೆ ಮಾಡಲಾಗಿದೆ. ಇದನ್ನು ದಾಟಿಬರಲು ಸ್ವ ಬಿಡುಗಡೆ ಮುಖ್ಯ ಘಟ್ಟ. ಬಿಡುಗಡೆ ಸಾಧ್ಯವಾಗಲು ಗುಂಪುಗೂಡಿ ಹಂಚಿಕೊಳ್ಳುವುದು, ಸಾಮೂಹಿಕ ಪ್ರಯತ್ನ ಅತಿಮುಖ್ಯ.

ಆದರೆ ಮಹಿಳೆಯರ ಸಂಘಟಿಸುವುದು ಸುಲಭವೇ? ಲಿಂಗತಾರತಮ್ಯವೆನ್ನುವುದು ಮನುಷ್ಯಲೋಕದ ಅತಿಪುರಾತನ ಮೌಢ್ಯವಾಗಿ ಹೆಣ್ಣುಗಳನ್ನು ಆವರಿಸಿರುವುದರಿಂದ ಮೊದಲ ಹೆಜ್ಜೆ ಎತ್ತಿಟ್ಟು ಹೊರಬರುವುದೂ ದೊಡ್ಡ ಸಾಹಸವೇ ಆಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಸಾಧ್ಯವಾದ ಸಂವಹನ, ಹುಸಿವೇಗಗಳು ಮಹಿಳೆಯ ಸ್ಥಿತಿಗತಿಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆಯೇನೋ ಎನ್ನುವ ಭ್ರಮಾತ್ಮಕ ವಾತಾವರಣ ಸೃಷ್ಟಿಸಿವೆ. ಆದರೆ ಕೌಟುಂಬಿಕ ಹಾಗೂ ನೈತಿಕ ಮೌಲ್ಯಗಳ ನೆಪದಲ್ಲಿ ಮಹಿಳೆಯ ಮೇಲೆ ಹೇರಲ್ಪಟ್ಟ ಆದರ್ಶಗಳ ಭಾರ ಏನೂ ಕಡಿಮೆಯಾಗಿಲ್ಲ. ಇವತ್ತಿಗೂ ವಿಧವಾ ವಿವಾಹ, ಮರುವಿವಾಹ, ವಿವಾಹ ವಿಚ್ಛೇದನ, ಒಂಟಿ ಪಾಲಕತನ, ಉದ್ಯೋಗ-ರಾಜಕೀಯ ರಂಗಗಳಲ್ಲಿ ಅತ್ಯುನ್ನತ ಸ್ಥಾನಗಳಿಗೇರುವುದು ಕಲ್ಲುಮುಳ್ಳಿನ ಬೆಂಕಿದಾರಿಯಾಗಿದೆ. ಎಂದೇ ಮಹಿಳಾ ಚಳವಳಿ, ಹೋರಾಟಗಳಿಂದ ಏನೂ ಬದಲಾಗುವುದಿಲ್ಲ ಎಂಬ ಅವಿಶ್ವಾಸ, ಸಿನಿಕತನ ಕೆಲವು ಮಹಿಳೆಯರಲ್ಲೂ ಮೂಡಿರುವುದು ದುರದೃಷ್ಟಕರವಾಗಿದೆ.

ಜಾತಿ-ಧರ್ಮಗಳೆಂಬ ಸಂಸ್ಥೆಗಳು ತಮ್ಮ ರಚನೆಯಲ್ಲಿಯೇ ಮಹಿಳಾ ವಿರೋಧಿಗಳೆಂದು ಹೆಣ್ಣುಜೀವಗಳಿಗೆ ಅರ್ಥ ಮಾಡಿಸುವುದು ಚಳವಳಿಯ ಎದುರಿಗಿರುವ ಮುಖ್ಯ ಸವಾಲಾಗಿದೆ. ಜೊತೆಗೆ ಸಮಾಜ ವ್ಯವಸ್ಥೆಯಲ್ಲಿ ಅಡಕವಾಗಿರುವ ಕೆಲ ವೈರುಧ್ಯಗಳು ದ್ವಂದ್ವ ಹುಟ್ಟಿಸುವಂತಿವೆ. ಯಾವ ಜಾತಿ/ಧರ್ಮವು ಹೆಣ್ಣನ್ನು ಸಂಕಲೆಯೊಳಗಿಟ್ಟಿದೆಯೊ ಅದನ್ನೆ ಅವರ ಸಂಸ್ಕೃತಿಯ ಮೂಲ ಎನ್ನಲಾಗುತ್ತದೆ. ಯಾವ ಜಾತಿ/ಧರ್ಮ/ಪಿತೃಪ್ರಾಧಾನ್ಯ ಅವರನ್ನು ಅಧಿಕಾರಹೀನರನ್ನಾಗಿಸಿದೆಯೊ ಅದೇ ಅವರ ಅಸ್ಮಿತೆಯಾಗಿದೆ. ಸಂವಿಧಾನವು ಒಬ್ಬ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ನೋಡಿದರೆ, ಧರ್ಮ ತನ್ನದೇ ಚೌಕಟ್ಟು ವಿಧಿಸಿ ಅವಳನ್ನು ಎರಡನೇ ದರ್ಜೆಯ ಪ್ರಜೆಯಾಗಿಸಿದೆ. ಜಾತಿ-ಧರ್ಮಗಳನ್ನು ಬಿಡಲಾಗದೆ, ಅವನ್ನಿಟ್ಟುಕೊಂಡು ಸಮಾನತೆ ಸಾಧಿಸಲಾಗದೆ ಚಳವಳಿಗಳ ತಾತ್ವಿಕ ಸಂಕಥನಗಳನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಮಹಿಳೆಯರಿಗೆ ಕಷ್ಟವಾಗಿದೆ. ಈ ನಿರ್ವಾತ ಬಳಸಿ ಕೋಮುವಾದವು ಮಹಿಳೆಯನ್ನು ತನ್ನ ದಾಳವಾಗಿ ಪಳಗಿಸಿಟ್ಟುಕೊಂಡಿದೆ.

ಸುವರ್ಣಯುಗ ಎನ್ನುವುದೊಂದು ಇರಲು ಸಾಧ್ಯವಿಲ್ಲ. ಹೆಣ್ಣುಜೀವದ ಮಟ್ಟಿಗಂತೂ ಅದು ಬಂದೇ ಇಲ್ಲ. ಹೀಗಿರುವಾಗ ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ ಎನ್ನುವುದು ಹೆಣ್ಣುಜೀವಗಳ ಘೋಷವಾಕ್ಯವಾಗಬೇಕು. ಜನಚಳುವಳಿಗಳು ಭಾರತೀಯ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಲಿಂಗಸೂಕ್ಷ್ಮ ಬದಲಾವಣೆ ತರುವತ್ತ ಗಮನ ಹರಿಸಬೇಕು. ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು ಹಾಗೂ ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು.

ಇದುವೇ ಮಹಿಳಾ ಸಬಲೀಕರಣದ ದಾರಿ. ಇದಾಗಲಿ ಜನಚಳುವಳಿಗಳ ಅಂತಿಮ ಗುರಿ.



(Image Courtesy: Internet)

No comments:

Post a Comment