Thursday 14 March 2019

ವಿವಾಹಸಂಸ್ಥೆ: ತುಕ್ಕು ಹಿಡಿದ ಕನ್ನಡಿ




ಸಮಾಜದ ಸ್ವರೂಪ, ಮೌಲ್ಯವ್ಯವಸ್ಥೆಯಲ್ಲಿ ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆ ತಂದ ಬದಲಾವಣೆಯು ಮಹಿಳೆ ಮತ್ತು ವಿವಾಹಸಂಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳ ಕಾರಣವೆಂದು ತೋರಿದರೂ, ಕಷ್ಟಮೂಲದ ಕಣ್ಣು ಗಂಡರಿಮೆಯನ್ನು ಆವಾಹಿಸಿಕೊಂಡ ಆಧುನಿಕ ಸಮಾಜದಲ್ಲಿದೆ. ಸತಿಪತಿಯರು ದೈಹಿಕ, ಭಾವುಕ, ಸೃಜನಶೀಲ ಅಗತ್ಯಗಳಿಗೆ ಪೂರಕವಾಗಿ ಬದುಕುವಂತಿದ್ದರೆ ಅರ್ಥಪೂರ್ಣ ಸಂಬಂಧವಾಗಬಹುದಾಗಿದ್ದ ದಾಂಪತ್ಯವು ಹೆಣ್ಣಿಗೆ ಸ್ವಾತಂತ್ರ್ಯ-ಸಮಾನತೆ ನಿರಾಕರಿಸಿ ಬಿಕ್ಕಟ್ಟುಗಳನ್ನು ಮೇಲೆಳೆದುಕೊಂಡಿದೆ.

ಮದುವೆ ಸಂಸ್ಥೆಯೊಳಗಿನ ಅಗೋಚರ ಹಿಂಸೆ; ದಾಂಪತ್ಯ ನಿಷ್ಠೆಯನ್ನು ಸಾಬೀತುಗೊಳಿಸಬೇಕಾದ ಏಕಪಕ್ಷೀಯ ಹೊರೆ; ಕೊನೆಮೊದಲಿರದ ಕೌಟುಂಬಿಕ ಜವಾಬ್ದಾರಿಗಳು ಹೆಣ್ಣಿನ ಆತ್ಮಗೌರವವನ್ನು, ಕ್ರಿಯಾಶೀಲತೆಯನ್ನು ನಿರಂತರ ದಮನಿಸುತ್ತಿವೆ. ಏಂಗೆಲ್ಸ್ ಗುರುತಿಸಿರುವಂತೆ ಮಾನವ ಸಮಾಜದ ಮೊದಲ ಗುಲಾಮಳು ಹೆಣ್ಣು. ಅವಳ ಶ್ರಮ, ವಿರಾಮ ಮತ್ತು ಲೈಂಗಿಕತೆಗಳ ನಿಯಂತ್ರಣವೇ ಕುಟುಂಬ ವ್ಯವಸ್ಥೆಯ ಅಡಿಪಾಯ. ತಾಯಿ, ದಾಸಿ, ವೇಶ್ಯೆ, ಮಂತ್ರಿ ಮೊದಲಾಗಿ ಎಲ್ಲಕ್ಕೂ ಅವಳು ಒದಗಬೇಕು. ದಂಪತಿಗಳ ನಡುವಿನ ದೈಹಿಕ ಆಕರ್ಷಣೆ ಕೆಲಕಾಲ ಬೆಳಗಿದರೂ ಬರಬರುತ್ತ ದೀಪದ ಉಸಿರು ಕಟ್ಟುತ್ತದೆ. ದಾಂಪತ್ಯ ಹೊಸನೆಲೆಗಳಲ್ಲಿ ನವೀಕರಣಗೊಳ್ಳದೇ ಹೆಣ್ಣುಜೀವದ ಸ್ವಾಯತ್ತತೆಯ ಸಮಾಧಿ ಮೇಲೆ ಶಿಥಿಲವಾಗುತ್ತದೆ. ಇವತ್ತಿಗೂ ಮದುವೆಯೆಂದರೆ ನಿನ್ನೆನಾಳೆಗಳ ಮೇಲೆ ಸಂಪೂರ್ಣ ಹಕ್ಕುಸ್ವಾಮ್ಯದೊಂದಿಗೆ ಒಂದು ಹೆಣ್ಣನ್ನು ಗಂಡಿಗೆ ಹಸ್ತಾಂತರಿಸುವುದೇ ಆಗಿದೆ. ಕಾಲದ ಅವಶ್ಯಕತೆಗಳಿನುಗುಣವಾಗಿ ಅವಳ ದುಡಿಮೆ, ಜವಾಬ್ದಾರಿಗಳು ಹೆಚ್ಚಿದರೂ ಗಾಣದೆತ್ತಿನಂತಹ ಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಪರಿಧಿ ಹಿಗ್ಗಿದರೂ ಗೂಟ ಆಳಕ್ಕೆ ಹುಗಿದುಕೊಂಡಿದ್ದು, ಕಣ್ಣಿಹಗ್ಗ ಮತ್ತಷ್ಟು ಹುರಿಗೊಂಡಿದೆ.

ಕೊನೆಗೂ ಬೇಕಿರುವುದು ಸುರಕ್ಷಿತ ಆವರಣವೋ? ಸ್ವಾಯತ್ತ ಬದುಕೋ? ಎಂದು ಹುಡುಗಿಯರು ಕೇಳಿಕೊಳ್ಳತೊಡಗಿದ್ದಾರೆ. ಕುಟುಂಬವೆಂಬುದು ಪುಣ್ಯಕೋಟಿಯ ಕುತ್ತಿಗೆಗೆ ಕಟ್ಟಿದ ಕುಂಟೆ ಯಾಕಾಗಿದೆಯೆಂದು ಹೆಣ್ಣು ಪ್ರಶ್ನಿಸುತ್ತಿದ್ದಾರೆ. ಸಿದ್ಧ ಮಾದರಿ ನಿರಾಕರಣೆಗೊಳಗಾಗುತ್ತಿದೆ, ಸಂಬಂಧಗಳ ಹೊಸನೆಲೆಯ ಶೋಧ ಆರಂಭವಾಗಿದೆ.

ಹಾಗೆ ನೋಡಿದರೆ ಇವತ್ತಿನ ಸಂಕ್ರಮಣ ಕಾಲಘಟ್ಟದಲ್ಲಿ ಬೌದ್ಧಿಕ ಬಿಕ್ಕಟ್ಟು ಎದುರಿಸುತ್ತಿರುವವರು ಪುರುಷರು. ಯಾಕೆಂದರೆ ಹೆಣ್ಣು ಹೆಣ್ತನವನ್ನು ಮರುವ್ಯಾಖ್ಯಾನಿಸಿಕೊಂಡು ಗಡಿಗೆರೆ ವಿಸ್ತರಿಸಿಕೊಂಡಿದ್ದಾಳೆ. ಆದರೆ ಗಂಡಸರಲ್ಲ. ಗಂಡು ತನ್ನ ಗಂಡಸುತನವನ್ನು, ಹುಸಿ ಮೇಲರಿಮೆಯನ್ನು ಕಾಲದ ಕುಲುಮೆಯಲ್ಲಿ ಕಾಯಿಸಬೇಕು. ದಾಂಪತ್ಯ, ಸಮಾನತೆ, ಸ್ವಾಯತ್ತತೆಯೇ ಮೊದಲಾದ ಮೌಲ್ಯಗಳ ನಿಜಾರ್ಥ ಅರಿಯಬೇಕು. ಹೆಣ್ಣನ್ನು ಘನತೆಯಿಂದ, ಸಮಾನ ಗೌರವದಿಂದ ನಡೆಸಿಕೊಂಡು, ನೋವುನಲಿವುಶ್ರಮಗಳಲ್ಲಿ ಸಮಭಾಗಿಯಾಗಬೇಕು.

ಹಾಗಲ್ಲದಿದ್ದರೆ ವಿವಾಹಸಂಸ್ಥೆಯಂತೆ ಹೆಣ್ಣುಗಂಡು ಸಂಬಂಧದ ಎಲ್ಲ ನೆಲೆಗಳೂ ಗಾಢಮೌನದಲ್ಲಿ ಸಮಾಧಿಯಾಗುವ ಅಪಾಯವಿದೆ.

(Image Courtesy: Internet)

No comments:

Post a Comment