Monday 12 August 2019

ನಲವತ್ತೇಳರ ಸ್ವಾತಂತ್ರ್ಯ - ಒಂದು ಪ್ರಶ್ನೋತ್ತರ








ಸ್ವಾತಂತ್ರ್ಯ ಪೂರ್ವಕಾಲದ ನಮ್ಮ ಹೋರಾಟಗಳು, ಆಶೋತ್ತರಗಳು, ಸ್ವಾತಂತ್ರ್ಯಾ ನಂತರದ ನಮ್ಮ ಸಂಘರ್ಷ, ನಿರೀಕ್ಷೆಗಳು, ಈ ಹೊತ್ತಿನ ವಾಸ್ತವತೆಯಲ್ಲಿ ಕಳೆದು ಹೋಗುತ್ತಿವೆ ಎಂಬ ತಲ್ಲಣ ಬಹುತೇಕರಲ್ಲಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕನಸಿನ ಭಾರತದ ನಿರ್ಮಾಣಕ್ಕೆ ನಮ್ಮ ಚಿಂತನೆಗಳನ್ನು ವಸ್ತುಸ್ಥಿತಿಯ ಒರೆಗಲ್ಲಿಗೆ ಹಚ್ಚಿ ಪುನರ್ ನಿರೂಪಿಸಿಕೊಳ್ಳುವ ಅಗತ್ಯ ಕಾಣುತ್ತಿಲ್ಲವೇ?

ಭಾರತ ಒಂದು ಸ್ವಾಯತ್ತ, ಸಮಾನ ನೆಲವಾಗಬೇಕೆಂದು ಕನಸಿದವರು, ಹೋರಾಡಿದವರು ಗೋರಿಯಲ್ಲಿ ಹೊರಳುತ್ತಿರಬಹುದು; ಜಾಗತಿಕ ತಾಪಮಾನಕ್ಕೆ ಧೃವದ ಹಿಮಗಡ್ಡೆಗಳು ಕರಗುತ್ತಿರುವಂತೆ ನಮ್ಮ ಕನಸುಗಳೂ ಕರಗುತ್ತಿವೆ. ಆದ್ದರಿಂದ ನಡೆದು ಬಂದ ದಾರಿಯ ಹಿನ್ನೋಟ, ಪರಿಶೀಲನೆ ಅಗತ್ಯವಾಗಿದೆ. ಅಂದು ನಾವು ಕನಸಿದ ಭಾರತ ಸಮಾನತೆ, ಸ್ವಾಯತ್ತತೆ, ಸ್ವಾವಲಂಬನೆಗಳ ಸ್ವರಾಜ್ಯವಾಗಿತ್ತು. ಜಾತಿ-ವರ್ಗ-ಲಿಂಗವೇ ಮೊದಲಾಗಿ ಯಾಜಮಾನ್ಯದ ರಚನೆಗಳಿರದ ಸಮಾಜ ನಿರ್ಮಾಣ ಗುರಿಯಾಗಿಸಿಕೊಂಡು ಕಲ್ಯಾಣ ರಾಜ್ಯದ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕಾಗಿ ಸಂವಿಧಾನದತ್ತವಾಗಿ ವಿಶೇಷ ಅವಕಾಶಗಳನ್ನೂ ಮಾಡಿಕೊಂಡಿದ್ದೆವು. ಉದಯಿಸುತ್ತಿರುವ ದೇಶದ ಹೊಸ ಸರ್ಕಾರಗಳು ದಿಟ್ಟ ಹೆಜ್ಜೆಗಳನ್ನೂ ಇಟ್ಟವು. ಆದರೆ ಬರಬರುತ್ತ ಜಡಗೊಂಡ ಆಡಳಿತ ವ್ಯವಸ್ಥೆ, ಕನಸುಗಳಿರದ ನಾಯಕತ್ವ, ರಾಜಕೀಯ ಪಕ್ಷಗಳ ಹೊಣೆಗೇಡಿತನ, ಭ್ರಷ್ಟತೆ, ಅದರ ಜೊತೆಗೇ ೧೯೯೧-೯೨ರಲ್ಲಿ ಸಂಭವಿಸಿದ ಜಾಗತೀಕರಣ ಮತ್ತು ಬಾಬ್ರಿ ಮಸೀದಿ ನಾಶವೆಂಬ ಎರಡು ಭಯಂಕರ ತಪ್ಪು ಹೆಜ್ಜೆಗಳು ಪ್ರಜಾಪ್ರಭುತ್ವದ ದಿಕ್ಕನ್ನೇ ಬದಲಿಸಿದವು.

೨೫ ವರ್ಷಗಳಾದವು. ಇಳಿಯುವುದು, ಹತ್ತುವುದು, ಇಳಿಯುವುದು, ಮತ್ತೆ ಹತ್ತುವುದು .. ಎಂಬ ನಿರಂತರ ವೇಗದ ಚಲನೆಯ ಭ್ರಮೆ ಹುಟ್ಟಿಸುವ ಜಾಗತೀಕರಣದ ಜಾರುಬಂಡೆಯ ಮೇಲೆ ಜಾರುತ್ತಿದ್ದೇವೆ. ಉದ್ವೇಗ, ಉದ್ಗಾರ, ಚೀತ್ಕಾರಗಳು ಗೆಲುವಿನ ವಾತಾವರಣ ಸೃಷ್ಟಿಸಿದ್ದರೂ ಚಲನೆ ಎಲ್ಲಿಗೂ ತಲುಪಿಸುತ್ತಿಲ್ಲ. ಕಣ್ಣಿಗೆ ಕಾಣುವ ಎಲ್ಲವನ್ನೂ ಅನುಭೋಗಿಸುವುದೇ ಸುಖ; ಇವತ್ತು, ಈ ಕ್ಷಣದ ತುರ್ತೇ ಮುಖ್ಯ ಎಂದು ಮಾರುಕಟ್ಟೆ ಬೋಧಿಸುತ್ತಿದೆ. ಕಾಣುವ ಜನರಿಗಿಂತ ಕಾಣದ ದೇಶ, ಭಾಷೆ, ಧರ್ಮಗಳೇ ಅಭಿಮಾನದ ವಸ್ತುಗಳಾಗಿ ನಮ್ಮ ಭಾವಲೋಕವನ್ನಾಳುತ್ತಿವೆ. ಪರಿಣಾಮವಾಗಿ ೭೩ರ ಹರೆಯದ ಪ್ರಜಾಪ್ರಭುತ್ವ ಭಾರತವು ಅಸಮಾನ, ಅಸಹಿಷ್ಣು ಭಾರತವಾಗಿ ಪ್ರಕಾಶಿಸುತ್ತಿದೆ.

ಇದರ ಜೊತೆಗೇ ನಮ್ಮ ಕನಸಿನ ಭಾರತ ಕಟ್ಟಬೇಕಿದೆ. ಗಮನಿಸಲೇಬೇಕಾದ ಒಂದು ಸಂಗತಿಯೆಂದರೆ: ೧೯೯೨ರ ನಂತರ ಹುಟ್ಟಿದ ಯುವಜನತೆಯ ಭವಿಷ್ಯದ ಕನಸುಗಳಿಗೂ, ಹಿರಿಯರ ಕನಸುಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಇಂದಿನ ಯುವಪೀಳಿಗೆ ಜಾಗತೀಕರಣ, ಕೋಮುವಾದ-ಕೋಮುಸಂಘರ್ಷ ಕಂಡ ಸಮಾಜದ ಕುಡಿಗಳು. ಸ್ವಾತಂತ್ರ್ಯ ಹೋರಾಟ ಅವರಿಗೆ ಇತಿಹಾಸ ಮಾತ್ರ. ಬಾಲ್ಯದಲ್ಲಿ ನಮ್ಮನ್ನು ಕಾಡಿದ, ಓದಿದ, ಅನುಕರಿಸಿದ ಆದರ್ಶ ಮಾದರಿಗಳ ಪಟ್ಟಿಯಲ್ಲಿ ಬಸವಣ್ಣ-ವಿವೇಕಾನಂದ-ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್-ಶರಣರೆಲ್ಲ ಇದ್ದರು. ಈಗಿನ ತರುಣ ತರುಣಿಯರ ಆದರ್ಶ ಮಾದರಿ, ಮೌಲ್ಯ, ಆದ್ಯತೆ, ಧೋರಣೆಗಳು ಬದಲಾಗಿವೆ. ಹೀಗಿರುವಾಗ ಈ ಮೊದಲು ಸಮತೆಯ ಹಾದಿಯಲಿ ಇಟ್ಟ ಹಿಂದಣ ಹೆಜ್ಜೆಗಳನ್ನು ಅದರೆಲ್ಲ ತಪ್ಪುಒಪ್ಪುಗಳೊಂದಿಗೆ ಮುಂದಣ ಹೆಜ್ಜೆಗಳಿಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯುವಜನರ ಕಣ್ಣೋಟದ ದಿಗಂತಗಳನ್ನು ನಾವು ತಲುಪಬೇಕಿದೆ.

ಭಾರತ ಅಳವಡಿಸಿಕೊಂಡ ಸಮಾಜವಾದಿ ರಾಷ್ಟ್ರದ ತಾತ್ವಿಕ ಬುನಾದಿಯು ಆಧುನಿಕ, ಪಾಶ್ಚಾತ್ಯ ಚಿಂತನೆಯ ಮೂಲದಲ್ಲಿದೆ; ಇದು ಎಲ್ಲಾ ಸಮಸ್ಯೆಗಳ ಮೂಲ ಎನ್ನುವ ವಾದಗಳನ್ನು ಮುಂದಿಡಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಪೂರ್ವದ್ದೋ, ಪಶ್ಚಿಮದ್ದೋ, ಎಲ್ಲ ದೇಶಕಾಲಗಳಿಗೂ ಸಮಾಜವಾದ ಒಂದು ಉದಾತ್ತ ಆಶಯ. ಬಹುಜನರ ಹಿತ ಚಿಂತನೆಯೇ ಸಮಾಜವಾದ. ಸಮಾನತೆಯೇ ಅದರ ಮೂಲ. ಭಾರತಕ್ಕೆ, ಇಲ್ಲಿನ ತಾತ್ತ್ವಿಕರಿಗೆ, ಆಳುವವರಿಗೆ ಸಮಾಜವಾದ ಹೊಸದಲ್ಲ. ಅದನ್ನು ಅಳವಡಿಸಿಕೊಳ್ಳಲು ಆಗಲಿಲ್ಲ ಅಷ್ಟೇ. ಬುದ್ಧ ಸಮಾಜವಾದಿಯಾಗಿದ್ದ. ಅಶೋಕ, ಬಸವಣ್ಣ, ನಾನಕ, ಕಬೀರ ಸಮಾಜವಾದಿಗಳಾಗಿದ್ದರು. ಅವರೆಲ್ಲ ವಿಭಿನ್ನ ನೆಲೆಯಲ್ಲಿ ಕಂಡದ್ದು ಸಮಸಮಾಜದ ಕನಸನ್ನೇ. ಅಂಥವರ ತತ್ತ್ವಾದರ್ಶಗಳು ಹಿನ್ನೆಲೆಗೆ ಸರಿಯುವಂತೆ ಮಾಡಿದವರ ಉತ್ತರಾಧಿಕಾರಿಗಳಿಂದು ದೇಶದ ಚುಕ್ಕಾಣಿ ಹಿಡಿದು ಸಮಾಜವಾದ ವಿದೇಶೀಯೆಂದೂ, ಅದು ತಿರಸ್ಕರಿಸಬೇಕಾದ ಪಶ್ಚಿಮದ ಮೌಲ್ಯವೆಂದೂ ಹೇಳುತ್ತಿದ್ದಾರೆ. ಸಮಾಜವಾದ ನಂಬುವ ನಾವು ಅದನ್ನು ಬದುಕಾಗಿ ಅಳವಡಿಸಿಕೊಳ್ಳಲು ವಿಫಲರಾಗಿರುವುದರಿಂದ ಭಾರತಕ್ಕೆ ಸೂಕ್ತವಲ್ಲವೆಂಬ ಭಾವನೆಯೂ ಬಂದಿರಬಹುದು.

ಅಷ್ಟಕ್ಕೂ ನಾವಿಂದು ಬಳಸುವ ಬಹುಪಾಲು ವಸ್ತು, ವಿಷಯ, ತಂತ್ರಜ್ಞಾನಗಳು ಪಶ್ಚಿಮದವು. ಉಪಗ್ರಹ, ಸೇತುವೆ-ವಿದ್ಯುತ್-ಅಣುಶಕ್ತಿ-ದೂರವಾಣಿ-ವಿಮಾನ-ರೈಲು-ಬಸ್ಸು-ಬೋರ್‌ವೆಲ್ ಮುಂತಾದ ಆವಿಷ್ಕಾರಗಳು; ಅನೇಕ ಹಣ್ಣು-ತರಕಾರಿಗಳು; ಮಾರುಕಟ್ಟೆ ಆರ್ಥಿಕತೆ; ಬೀಜ, ಗೊಬ್ಬರ, ಔಷಧ; ನಾವೀಗ ಹೆಚ್ಚೆಚ್ಚು ಮೋಹಿತರಾಗಿರುವ ಇಂಗ್ಲಿಷ್ ಭಾಷೆ, ಉಡುಪು-ಜೀವನ ಶೈಲಿ-ಆಹಾರ-ವಿರಾಮವೇ ಮೊದಲಾದ ನೂರಾರು ಸಂಗತಿಗಳು ಪಶ್ಚಿಮದಿಂದ ಬಂದವು. ಪಶ್ಚಿಮವನ್ನು ಈ ಪರಿ ಹಾಸಿಹೊದ್ದ ನಮಗೆ ಜೀವಪರ ತಾತ್ತ್ವಿಕತೆಯಾದ ಸಮಾಜವಾದ ಪಶ್ಚಿಮದ್ದಾದರೆ ಒಪ್ಪಿಕೊಳ್ಳುವುದು ಕಷ್ಟವೇಕೆ?

ಸಂಘ ಪರಿವಾರದ ಹಿಂದೂರಾಷ್ಟ್ರದ ನಿರ್ಮಾಣ ಮತ್ತು ದೇಶಪ್ರೇಮದ ಎರಡೇ ಅಜೆಂಡಾಗಳು ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟವೇ? ಇಲ್ಲ, ಇನ್ನೂ ಸಂಕೀರ್ಣವಾದ ಬೇರೆ ವಿಷಯಗಳು ಇಲ್ಲಿ ಕೆಲಸ ಮಾಡಿವೆಯೇ? ಈ ಹಿನ್ನೆಲೆಯಲ್ಲಿ ಭಾರತದ ಜನರ ನಿರೀಕ್ಷೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ಬಿಜೆಪಿ ಗೆಲುವಿಗೆ ಅವೆರಡೇ ಅಜೆಂಡಾಗಳು ಕಾರಣವಲ್ಲ. ಜಾಗತೀಕರಣದ ಜೊತೆಜೊತೆ ಕಮಲ ಪಕ್ಷ ಬೆಳೆದಿದೆ. ಅದನ್ನು ಬರಮಾಡಿಕೊಂಡದ್ದು ಕಾಂಗ್ರೆಸ್ಸೇ. ಅದುವರೆಗೆ ಆಳಿದವರ ವಿಫಲತೆಯ ಕಾರಣವಾಗಿ ಜನಮಾನಸದಲ್ಲಿ ಬೇರೂರಿದ್ದ ಅಭದ್ರತೆ, ಅಸಹಾಯಕತೆ ಮತ್ತು ದಿಕ್ಕೇಡಿ ಮನಸ್ಥಿತಿಯನ್ನು ಆ ಪಕ್ಷ ಚೆನ್ನಾಗಿ ಬಳಸಿಕೊಂಡಿತು. ಇದರಲ್ಲಿ ಉಳಿದವರ ಸೋಲಿನ ಪಾಲೂ ಇದೆ.

ಜಾಗತೀಕರಣದ ಮಾರುಕಟ್ಟೆಯು ದೇಶ, ಸಂಸ್ಕೃತಿ, ದೇವರು, ಭಕ್ತಿ ಮೊದಲಾದ ಭಾವುಕ ವಿಷಯಗಳನ್ನೆಲ್ಲ ಸರಕುಗಳಾಗಿ ಬಳಸಿಕೊಳ್ಳುತ್ತದೆ. ಆಧುನಿಕತೆ ಮತ್ತು ಬದುಕಿನ ವೇಗಗಳು ಹುಟ್ಟಿಸಿರುವ ಅತೃಪ್ತಿ, ಆತಂಕಗಳನ್ನು ತಣಿಸಲು ಈ ಸರಕುಗಳು ಲಾಭಕಾರಿಯೆಂದು ಅದಕ್ಕೆ ಗೊತ್ತಿದೆ. ಇವೆಲ್ಲಕ್ಕೆ ಪೂರಕವಾದ ರಾಜಕೀಯ ವಾತಾವರಣ ರೂಪುಗೊಳ್ಳುವುದು ಅವರಿಗೆ ಮುಖ್ಯವಾಗಿದೆ. ಆದ್ದರಿಂದ ವಿಶ್ವಾದ್ಯಂತ ಬಲಪಂಥೀಯ, ಬಂಡವಾಳಸ್ನೇಹಿ, ಸಮಾಜವಾದ ವಿರೋಧಿ ಸರ್ಕಾರಗಳು ಏಕಕಾಲದಲ್ಲಿ ತಲೆಯೆತ್ತಿರುವುದು ಕಾಕತಾಳೀಯವಲ್ಲ. ಅದರ ಹಿಂದೆ ಎಷ್ಟಾದರೂ ದುಡ್ಡು ಸುರಿದು ಅನುಕೂಲಕರ ಸನ್ನಿವೇಶ ಕಲ್ಪಿಸಿಕೊಳ್ಳಬಯಸುವ ಬಂಡವಾಳದ ಹಿತಾಸಕ್ತಿಯಿದೆ. ಎಂದೇ ಇದ್ದಕ್ಕಿದ್ದಂತೆ ಹಲವು ದುಷ್ಟರು ವಿಶ್ವದ ಅನೇಕ ದೇಶಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.

ಇಂತಹ ಸುವರ್ಣಾವಕಾಶಕ್ಕೆ ಕಾಯುತ್ತಿದ್ದ ಭಾರತದ ಬಲಪಂಥ ಈಗ ಮೆರೆಯುತ್ತಿದೆ.

ಭಾರತದಲ್ಲೀಗ ಜನರ ಕಣ್ಣೆದುರು ತ್ರಿಶೂಲ, ಗನ್ನು ಹಿಡಿದವರೇ ನಿಂತಿದ್ದಾರೆ. ಜನರ ತಲೆ, ಮುಖಗಳೆಲ್ಲ ಬಾವುಟಗಳಲ್ಲಿ ಮುಚ್ಚಿಕೊಂಡಿವೆ. ಕಿವಿತುಂಬ ದೇಶಭಕ್ತಿ, ಧರ್ಮಭಕ್ತಿಯ ಘೋಷಣೆಗಳು ತುಂಬಿಕೊಂಡಿವೆ. ಸತ್ಯದರ್ಶನ ಮಾಡಿಸಬೇಕಾದ ಪತ್ರಿಕೆ-ಮಾಧ್ಯಮ-ಆಧ್ಯಾತ್ಮಿಕ ವ್ಯಕ್ತಿಗಳು ಬಿಕರಿಯಾಗಿದ್ದಾರೆ. ಹಾಗಾಗಿ ಗಡಿಯ ದಾಳಿಯಿರಲಿ, ನೋಟು ಅಮಾನ್ಯೀಕರಣವಿರಲಿ - ಕಳೆದುಕೊಂಡದ್ದೇನು, ಪಡೆದದ್ದೆಷ್ಟು ಎಂಬ ಲೆಕ್ಕವೇ ಯಾರಿಗೂ ಸಿಕ್ಕಿಲ್ಲ. ಹಸಿದ ಅರೆಹೊಟ್ಟೆಯ ಭಾರತೀಯರು ದೇಶ ಕಾಯುವವರೆಂದು ಭರಪೂರ ಓಟು ಕೊಟ್ಟು ಕಳ್ಳಸುಳ್ಳರನ್ನು, ಸೋಮಾರಿಗಳನ್ನೆಲ್ಲ ಮಹಾರಾಜರನ್ನಾಗಿಸಿದ್ದಾರೆ. ತಮ್ಮ ಕಿವಿ ಮೇಲೆ ಪದೇಪದೇ ಬೀಳುವ ದೇಶ, ಗಡಿ, ಮಂದಿರ, ಅಖಂಡ ರಾಷ್ಟ್ರ ಮೊದಲಾದ ಪದಗಳಲ್ಲೇ ತಮ್ಮ ಭವಿಷ್ಯವಿದೆಯೆಂದು ಭಾವಿಸಿದ್ದಾರೆ.

ಹಿಂದೂರಾಷ್ಟ್ರದ ಸಿದ್ಧಾಂತಕ್ಕೆ ದೊರೆತಿರುವ ಗೆಲುವಿನ ಸಂದರ್ಭದಲ್ಲಿ ದಮನಕ್ಕೆ ಒಳಗಾಗುತ್ತಿರುವ ಸಮುದಾಯಗಳ ನಡೆ, ನುಡಿ ಮತ್ತು ಭವಿಷ್ಯತ್ತಿನ ಸ್ವರೂಪ ಏನಾಗಬೇಕು?

ಬೇರೇನೂ ಬೇಡ, ‘ಈ ಧರ್ಮ ನನಗೇನು ಮಾಡಿದೆ? ನಾನು ಯಾಕೆ ಹೀಗಿದ್ದೇನೆ?’ ಎಂಬ ಸತ್ಯದರ್ಶನ ಮಾಡುವ ಪ್ರಶ್ನೆಗಳನ್ನು ಪ್ರತಿಯೊಬ್ಬ ದಮನಿತ ವ್ಯಕ್ತಿಯೂ ಕೇಳಿಕೊಂಡರೆ ಸಾಕು, ಪರಿಣಾಮ ಭಿನ್ನವಾಗಲಿದೆ. ಜೊತೆಗೆ, ‘ಈ ಕಾರಣಕ್ಕೆ ಇದು ಬೇಡವಾದರೆ ಮತ್ತೇನು ಬೇಕು?’ ಎಂಬ ಪರ್ಯಾಯ ಹೊಳಹು ಮೂಡುವುದೂ ಅವಶ್ಯವಾಗಿದೆ.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತದ ಚರಿತ್ರೆಯಲ್ಲಿ ಸಂಘ ಪರಿವಾರ ಮತ್ತು ದಲಿತರು ಮಹಾತ್ಮಾ ಗಾಂಧಿಯವರ ಚಿಂತನೆಗಳನ್ನು ತೀವ್ರವಾಗಿ ವಿರೋಧಿಸಿದರು. ಈಗ ಬಲಪಂಥೀಯ ಶಕ್ತಿಗಳಂತೂ ಗಾಂಧಿಯನ್ನು ದಮನ ಮಾಡುವ ಹಠಕ್ಕೆ ಬಿದ್ದಿವೆ. ಪರಸ್ಪರ ವಿರೋಧಿ ನೆಲೆಯಲ್ಲಿರುವ ಈ ಎರಡೂ ಶಕ್ತಿಗಳ ಗಾಂಧೀ ವಿರೋಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಗಾಂಧಿ ಅಂದೂ, ಇಂದೂ ಬಲಪಂಥೀಯ ಕೋಮುವಾದಿಗಳಿಂದ, ಎಡಪಂಥೀಯ ಸಮಾಜವಾದಿಗಳಿಂದ, ಸಮಸಮಾಜದ ಕನಸಿನ ದಲಿತ ಚಳುವಳಿಯಿಂದ ವಿರೋಧ ಎದುರಿಸಿದ್ದಾರೆ. ಅದರಲ್ಲೂ ಹರಿಜನ ಪ್ರಜ್ಞೆಯ ಗಾಂಧಿ, ದಲಿತ ಪ್ರಜ್ಞೆಯ ಅಂಬೇಡ್ಕರ್ ಮತ್ತವರ ಅನುಯಾಯಿಗಳಿಂದ ತೀವ್ರ ಪ್ರಹಾರಕ್ಕೆ ಒಳಗಾಗಿದ್ದಾರೆ.

ಅಂದು ಅಂಬೇಡ್ಕರರು ಗಾಂಧಿ ವಿರೋಧ ಹೊಂದಿದ್ದು ಸಕಾರಣ. ಯಾಕೆಂದರೆ ಅಂಬೇಡ್ಕರ್ ಆಧುನಿಕರು. ವೈಚಾರಿಕ ಮನಸ್ಥಿತಿಯವರು. ಸಾಕ್ರೆಟೀಸ್ ಮತ್ತು ಬುದ್ಧನ ಚಿಂತನಾಕ್ರಮ ಅನುಸರಿಸಿದವರು. ಸಮಾಜವಾದಿ ಚಿಂತನೆಗಳಿಂದ, ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತರಾದವರು. ತರ್ಕದ ಸಮರ್ಪಕತೆಯಲ್ಲಿ, ಕಾರ್ಯಕಾರಣ ಸಂಬಂಧದಲ್ಲಿ ನಂಬಿಕೆ ಇಟ್ಟ ವಿಚಾರವಾದಿ ಅವರು. ಆದರೆ ಗಾಂಧಿ ಆಧುನಿಕತೆಯ ವಿರುದ್ಧ ಭಾರತೀಯ ಆಧ್ಯಾತ್ಮವನ್ನೂ, ಗ್ರಾಮೀಣ ಬದುಕಿನ ಸುಸ್ಥಿರತೆಯನ್ನೂ ನಂಬಿದ್ದವರು. ಕೈಗಾರಿಕೀಕರಣ ಮತ್ತು ಯಂತ್ರ ನಾಗರಿಕತೆಯನ್ನು ವಿರೋಧಿಸುವ, ನಿಸರ್ಗದೊಡನೆ ಹೊಂದಿ ಬಾಳಬೇಕೆನ್ನುವ ರೊಮ್ಯಾಂಟಿಸಿಸಂ ಅಥವಾ ಟ್ರಾನ್ಸ್‌ಡೆಂಟಾಲಿಸಂ ಪಂಥದ ಚಿಂತಕರು. ರಸ್ಕಿನ್, ಎಮರ್ಸನ್, ಥೋರೋ, ಟಾಲ್‌ಸ್ಟಾಯ್ ಅವರೆಲ್ಲ ಈ ಚಿಂತನೆಯವರು. ಗಾಂಧಿಯವರದು ಆಧುನಿಕ ಸಾಂಪ್ರದಾಯಿಕ ಮನಸ್ಸಾದರೆ ಅಂಬೇಡ್ಕರರದ್ದು ಆಧುನಿಕ ರ‍್ಯಾಷನಲ್ (ವಿಚಾರವಾದಿ) ಮನಸ್ಸು. ಒಬ್ಬರು ರಿಪೇರಿ ಮಾಡಬಯಸಿದರು, ಒಬ್ಬರು ಮುರಿದು ಹೊಸದು ಕಟ್ಟಬಯಸಿದರು. ಹೀಗೆ ಗಾಂಧಿ-ಅಂಬೇಡ್ಕರರಿಬ್ಬರೂ ಆಧುನಿಕ ಭಾರತವನ್ನು ರೂಪುಗೊಳಿಸಿದ ಎರಡು ಪ್ರಮುಖ ಆದರೆ ಪರಸ್ಪರ ವಿರುದ್ಧ ಚಿಂತನಾಧಾರೆಗಳನ್ನು ಪ್ರತಿನಿಧಿಸುತ್ತಾರೆ. ಇಂತಹ ವಿರುದ್ಧ ವ್ಯಕ್ತಿತ್ವಗಳು ಎಲ್ಲ ದೇಶಕಾಲಗಳಲ್ಲೂ ಸಮಕಾಲೀನರಾಗಿ ಇದ್ದೇ ಇರುತ್ತಾರೆ.

ಅಂದು ಚಾರಿತ್ರಿಕ ಕಾರಣಗಳಿಗಾಗಿ ಅಂಬೇಡ್ಕರರು ಗಾಂಧೀಜಿಯವರ ನಿಲುವಿಗೆ ವಿರುದ್ಧವಿದ್ದರು. ಕಾಂಗ್ರೆಸ್ಸಿನಿಂದ ಹೊರತಾದ, ರಾಷ್ಟ್ರೀಯ ಚಳುವಳಿಯ ಪ್ರಭಾವದಲ್ಲಿ ಕೊಚ್ಚಿಹೋಗದ ಆತ್ಮಸಮ್ಮಾನದ ದಲಿತ ಸಂಘಟನೆಯನ್ನು ಕಟ್ಟಲು ಅದು ಅತ್ಯಗತ್ಯವಾಗಿತ್ತು. ಆದರೆ ಗಾಂಧೀಜಿಯವರನ್ನು, ಕಾಂಗ್ರೆಸ್ಸನ್ನು ವಿರೋಧಿಸಿ ಅವರು ಚೌಕಾಸಿ ನಡೆಸಿದ್ದು ದೇಶಬಿಟ್ಟು ಹೋಗುವ ಸಿದ್ಧತೆಯಲ್ಲಿದ್ದ ವಸಾಹತುಶಾಹಿ ಬ್ರಿಟಿಷರ ಬಳಿಯೇ ಹೊರತು ದಲಿತರ ಶೋಷಕರಾಗಿದ್ದ ಸನಾತನವಾದಿಗಳ ಬಳಿಯಲ್ಲ. ಶತ್ರುವಿನ ಶತ್ರು ಮಿತ್ರ ಎಂದಾಗುವುದಾದರೆ ಅಂಬೇಡ್ಕರರು ಸನಾತನವಾದಿಗಳ ಮಿತ್ರರಾಗಬೇಕಿತ್ತು. ಅಂತಹ ಮೈತ್ರಿ ಅದೇಕೆ ಬೇಡ ಎಂಬ ಬಗೆಗೆ ಅಂಬೇಡ್ಕರ್ ಸ್ಪಷ್ಟವಾಗಿದ್ದರು. ಒಟ್ಟಾರೆ ಹೇಳುವುದಾದರೆ ಗಾಂಧಿ ಅಂಬೇಡ್ಕರರ ನಡುವಿನ ಸಂಘರ್ಷಗಳು ಅವರಿಬ್ಬರ ಜಾತಿ-ವರ್ಗ-ರಾಜಕೀಯ ಧೋರಣೆ-ಚಿಂತನಾಕ್ರಮದ ಭಿನ್ನತೆ, ಸಂಘಟನಾತ್ಮಕ ಸ್ಪರ್ಧೆಗಳ ಕಾರಣವಾಗಿಯೂ ಇರಬಹುದಾಗಿದೆ. ಆದರೆ ಈಗಿನ ಕೆಲವು ದಲಿತ ವ್ಯಕ್ತಿ-ಸಂಘಟನೆಗಳ ಗಾಂಧಿ ವಿರೋಧ ವಿಚಿತ್ರವಾಗಿದೆ. ಅಧಿಕಾರಕ್ಕಾಗಿ ಗೋಡ್ಸೆ ಸಂತತಿಯನ್ನು ತೆರೆದ ಬಾಹುಗಳಲ್ಲಿ ಅಪ್ಪಿಕೊಳ್ಳಲು ಹಿಂಜರಿಕೆಯಿಲ್ಲದವರು, ಬುದ್ಧನ ಮರೆತವರು, ಬಾಬಾರ ಜಾತಿವಿನಾಶ ಆಶಯಗಳನ್ನು ಮೂಲೆಗೆ ಸರಿಸಿದವರು, ಅವರು ಬರೆದ ಒಂದಕ್ಷರವನ್ನೂ ಓದದವರು ಕುರುಡು ಗಾಂಧಿ ದ್ವೇಷದಲ್ಲಿ ತಮ್ಮ ಅಂಬೇಡ್ಕರ್‌ತನವನ್ನು ಹುಡುಕಿಕೊಳ್ಳುತ್ತಿದ್ದಾರೆ. ಅಂಬೇಡ್ಕರರನ್ನು ಸಂಕೇತ ಮಾತ್ರವಾಗಿ, ಮೂರ್ತಿ ಮಾತ್ರವಾಗಿ, ಅಕ್ಷರಮಾತ್ರವಾಗಿ ಅರ್ಥ ಮಾಡಿಕೊಂಡವರಷ್ಟೆ ಹೀಗಿರಲು ಸಾಧ್ಯ. ಇಂತಹ ನಡೆಗಳು ದಲಿತ ಹಿತಾಸಕ್ತಿಗೆ ಮಾರಕ ಎನ್ನದೇ ವಿಧಿಯಿಲ್ಲ.

ಈ ದೇಶದ ಜನಸಂಖ್ಯೆಯಲ್ಲಿ ೧೬% ಇರುವ ದಲಿತ ಸಮುದಾಯವು ಸಮಾನತೆಯ ಹೋರಾಟ ಕಟ್ಟಲು, ಆತ್ಮಸಮ್ಮಾನದ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ಮತ್ತವರ ಚಿಂತನೆಗಳು ಸಮೃದ್ಧವಾಗಿ ಸಾಕು. ಆದರೆ ಈ ದೇಶದ ೮೪% ದಲಿತೇತರ ಮನಸುಗಳು ದಲಿತ ಹಿತಾಸಕ್ತಿಯ ಜೊತೆ ನಿಲ್ಲಲು, ದಲಿತರ ಏಳ್ಗೆಯನ್ನು ಸಹಿಸಿಕೊಳ್ಳುವಂತಾಗಲು, ಎಲ್ಲರಿಗೂ ತಮ್ಮ ಎದೆಯ ಬಾಗಿಲುಗಳ ಮುಕ್ತವಾಗಿ ತೆರೆದಿಟ್ಟುಕೊಳ್ಳಲು ಗಾಂಧಿ-ಲೋಹಿಯಾ-ಮಾರ್ಕ್ಸ್-ಪೆರಿಯಾರ್ ಎಲ್ಲರೂ ಬೇಕು. ಸಮುದಾಯವೊಂದನ್ನು ಅಖಂಡ ಸಮಾಜದ ಭಾಗವಾಗಿ ಗ್ರಹಿಸಿದರೆ ಮಾತ್ರ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಕಾಲದ ಅನಿವಾರ್ಯತೆ ಹೇಗಿದೆಯೆಂದರೆ ಜೀವಪರವಾಗಿ ಯೋಚಿಸಿದ ಯಾರನ್ನೂ, ಯಾವ ಸಿದ್ಧಾಂತವನ್ನೂ ನಾವಿಂದು ನಿರಾಕರಿಸುವಂತಿಲ್ಲ. ಎಲ್ಲ ಚಿಂತನೆಗಳ ಒಟ್ಟುಸಾರ ಹೀರಿಕೊಳ್ಳದಿದ್ದರೆ ಸೌಹಾರ್ದ, ಸಮಾನ ಭಾರತದ ಕನಸು ಕಾಣಲೂ ಸಾಧ್ಯವಿಲ್ಲ. ನಂನಮ್ಮ ಹೆಮ್ಮೆಯ ಬಾವುಟಗಳ ಕೆಳಗಿಳಿಸಿ ಈ ಕಟುವಾಸ್ತವ ಅರ್ಥಮಾಡಿಕೊಳ್ಳಬೇಕಿದೆ.




ಭಾರತದ ’ಪ್ರಜಾಪ್ರಭುತ್ವ’ವು ಅದರ ತತ್ವ ಮತ್ತು ಆಚರಣೆಯಲ್ಲಿ ದ್ವಂದ್ವಗಳನ್ನು ಒಳಗೊಂಡಿದೆಯೇ? ಸಾಮ್ರಾಜ್ಯಶಾಹಿ ಆರ್ಥಿಕತೆಯ ಹಿನ್ನೆಲೆಯಲ್ಲಿ ರಾಜಕೀಯ ಸಿದ್ಧಾಂತವಾಗಿ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳೇನು?

ಹೌದು. ಭಾರತದ ಪ್ರಜಾಪ್ರಭುತ್ವವು ತತ್ವ ಮತ್ತು ಆಚರಣೆಯಲ್ಲಿ ಅನೇಕ ದ್ವಂದ್ವ ಮತ್ತು ಗೊಂದಲಗಳನ್ನೆದುರಿಸುತ್ತಿದೆ.

ಪ್ರಜಾಪ್ರಭುತ್ವ ಎಲ್ಲ ಕಡೆ ಬೆಳೆಯುವ ಗಿಡವಲ್ಲ. ಅದಕ್ಕೆ ಸೂಕ್ತ ಭೂಮಿ, ಬಿಸಿಲು, ನೀರು ಬೇಕು. ಅವನ್ನೆಲ್ಲ ಹೊಂದಿಸಿಕೊಳ್ಳುವ ಮೊದಲೇ ಪ್ರಜಾಪ್ರಭುತ್ವದ ಗಿಡ ನೆಟ್ಟೆವು. ಜಾತಿ-ವರ್ಣ-ವರ್ಗ-ಲಿಂಗ ಅಸಮಾನತೆಯ ದುಷ್ಟ ನೆಲದಲ್ಲಿ ಈಗದು ವಿಕಾರವಾಗಿ ಬೆಳೆದು ಅನೂಹ್ಯ, ಅಪರಿಚಿತ, ಅಪಾಯಕಾರಿ ಫಲ ನೀಡುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರರು ಮೊದಲೇ ಊಹಿಸಿದ್ದು, ಅನುಮಾನಿಸಿದ್ದು ನಿಜವಾಗಿದೆ.

(೧) ಇಲ್ಲಿ ಸ್ವಾತಂತ್ರ್ಯ ಸಮಾನತೆಯನ್ನು ನುಂಗಿ ಹಾಕಿದೆ. ಎಲ್ಲರಿಗು ಸಮಾನ ಸ್ವಾತಂತ್ರ್ಯ. ಬಂಡವಾಳ ಹೂಡಲು, ಗುತ್ತಿಗೆ ಹಿಡಿಯಲು, ಗಣಿ ತೋಡಲು, ಭೂಸ್ವಾಧೀನ ಮಾಡಿಕೊಳ್ಳಲು, ಬೃಹತ್ ಉದ್ದಿಮೆಗಳ ತೆಗೆಯಲು, ಧರ್ಮ-ಸಂಸ್ಕೃತಿ ಮೊದಲಾದ ನಾನಾ ಹೆಸರುಗಳಲ್ಲಿ ತಮಗಿಷ್ಟ ಬಂದಂತೆ ಜನರ ಉದ್ರೇಕಗೊಳಿಸಲು, ಸ್ಪರ್ಧಿಸಲು ಎಲ್ಲರಿಗೂ ಸ್ವಾತಂತ್ರ್ಯ. ಸ್ಲಮ್ಮುವಾಸಿಗೂ, ಅದಾನಿ ಅಂಬಾನಿಗೂ ಸಮಾನ ಸ್ವಾತಂತ್ರ್ಯ. ಉಳ್ಳವರಿಗಿರುವ ಈ ಅಪರಿಮಿತ ಸ್ವಾತಂತ್ರ್ಯದ ಅವಕಾಶ ಇಲ್ಲದವರ ಸಂಪನ್ಮೂಲ ಕಬಳಿಸುತ್ತಿದೆ. ತಿಮಿಂಗಿಲಗಳದೇ ದರ್ಬಾರು. ಮೀಸಲಾತಿಯ ಹಳ್ಳದಲ್ಲಿ ಈಜಿ ಹೋಗುವ ಮೀನುಗಳು ಬದುಕುಳಿಯಲೂ ಹರಸಾಹಸ ಪಡಬೇಕಾಗಿದೆ.
 
(೨) ನಡೆಯುತ್ತಿರುವುದೆಲ್ಲವೂ ಪ್ರಜೆಗಳ ಹೆಸರಲ್ಲಿ, ಎಲ್ಲವೂ ಸಂವಿಧಾನಬದ್ದವಾಗಿ. ಎಲ್ಲ ಆಯ್ಕೆಯೂ ಚುನಾವಣೆ ಮೂಲಕವೇ. ದೇಶದ ಒಂದಲ್ಲ ಒಂದು ಕಡೆ ಪ್ರತಿ ನಿತ್ಯ ನಡೆಯುವ, ಅತಿಖರ್ಚಿನ ಚುನಾವಣೆ ಎಂಬ ಪ್ರಕ್ರಿಯೆಯು ಹಣಬಲ-ಜಾತಿಬಲ-ಕುಟುಂಬ ರಾಜಕಾರಣದ ಸೆಳವಿಗೆ ಸಿಲುಕಿ ವರ್ಷದಿಂದ ವರ್ಷಕ್ಕೆ ಪ್ರಜಾಪ್ರಭುತ್ವ ಮೌಲ್ಯ ಕುಸಿಯುವಂತೆ ಮಾಡಿದೆ. ನವಸಾಮ್ರಾಜ್ಯಶಾಹಿ ವ್ಯವಸ್ಥೆಯು ಪಕ್ಷ-ವ್ಯಕ್ತಿ-ಮಾಧ್ಯಮ ಸಂಸ್ಥೆಗಳನ್ನೇ ಇಡಿಯಾಗಿ ಖರೀದಿಸಿ ತಮಗಿಷ್ಟ ಬಂದ ಫಲಿತಾಂಶ ತಂದುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ.

(೩) ಕುಟುಂಬ ರಾಜಕಾರಣದ ದೆಸೆಯಿಂದ ಸ್ವಜನಪಕ್ಷಪಾತದ ಅತಿ ಹೇಯ ಸ್ಥಿತಿಯನ್ನು ಪ್ರಜಾಪ್ರಭುತ್ವ ಮುಟ್ಟಿದೆ. ಇವತ್ತು ಇಡಿಯ ಭಾರತದ ಅಧಿಕಾರ ಸ್ಥಾನಗಳಲ್ಲಿರುವವರನ್ನು ಪಟ್ಟಿ ಮಾಡಿದರೆ ೨೦೦-೩೦೦ ಕುಟುಂಬಗಳ ಕೈಯಲ್ಲಿ ಅದು ಕೇಂದ್ರೀಕೃತಗೊಂಡಿದೆ. ಖಾಯಮ್ಮಾಗಿ ಆಳುವವರು ಮತ್ತು ಖಾಯಮ್ಮಾಗಿ ಆಳಿಸಿಕೊಳ್ಳುವವರು ಎಂಬ ಎರಡು ವರ್ಗ ರೂಪುಗೊಂಡಿದೆ. ವಿಪುಲ ಜನಸಂಖ್ಯೆಯ ದೇಶದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಯಲು ಬಿಡದಂತೆ, ಹೊಸ ಪೀಳಿಗೆಗೆ, ಹೊಸಬರಿಗೆ ಅವಕಾಶ ನೀಡದಂತೆ ತಡೆದಿರುವುದು ಕುಟುಂಬ ರಾಜಕಾರಣವೇ ಆಗಿದೆ.

(೪) ಲಿಂಗಸಮಾನತೆಯು ಒಂದು ಮೌಲ್ಯವಾಗಿ ಕುಟುಂಬ-ಜಾತಿಯೊಳಗೆ ನೆಲೆಗೊಳ್ಳಲು ವಿಫಲವಾಗಿರುವುದು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಸಿಲುಕಲು ಮುಖ್ಯ ಕಾರಣ. ನ್ಯಾಯಾಲಯ, ಸೇನೆ, ಪೊಲೀಸ್, ಸರ್ಕಾರ ಎಲ್ಲವೂ ಗಂಡುಗಂಡಾಗಿದೆ. ಸಮಾಜವೇ ಗಂಡುಮಯವಾಗಿವೆ. ನಾಯಕತ್ವ ಮತ್ತು ನಾಯಕತ್ವದ ಭಾಷೆ ಪುರುಷ ಪ್ರಧಾನವಾಗಿದೆ. ಇವರ ನಡುವೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳು ಪಕ್ಷ ಹಿತಾಸಕ್ತಿಯಾಚೆಗೆ ಮಹಿಳಾ ಹಿತಾಸಕ್ತಿ ಕಾಯಲು ಸಾಧ್ಯವೇ?

(೫) ದಲಿತ, ಅಲ್ಪಸಂಖ್ಯಾತ ಸಮುದಾಯದವರಿಗೂ ಮೇಲಿನ ಮಾತುಗಳನ್ನು ಅನ್ವಯಿಸಬಹುದು. ಪ್ರಾತಿನಿಧ್ಯ ಸಾಂಕೇತಿಕವಾಗಿದೆಯೇ ಹೊರತು ಅರ್ಥಪೂರ್ಣ ಭಾಗವಹಿಸುವಿಕೆ ಅಸಾಧ್ಯವಾಗಿದೆ.

(೬) ಟೀಕೆ, ವಿರೋಧವೇ ಪ್ರಜಾಪ್ರಭುತ್ವದ ಬೆನ್ನೆಲುಬು. ಆದರೂ ವ್ಯವಸ್ಥಿತವಾಗಿ ಸಶಕ್ತ ವಿರೋಧ ಪಕ್ಷಗಳು, ಜವಾಬ್ದಾರಿಯುತ ಮಾಧ್ಯಮಗಳು ಹಾಗೂ ಪ್ರಶ್ನಿಸುವ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ‘ಒಂದು ದೇಶ ಒಂದು ಚುನಾವಣೆ’; ‘ಒಂದು ದೇಶ, ಒಂದು ಪಕ್ಷ’, ‘ಒಂದು ದೇಶ, ಒಂದು ಧರ್ಮ’ ಮುಂತಾದ ನಿರಂಕುಶ ಮನಸ್ಥಿತಿಯ ಘೋಷಣೆಗಳೆಲ್ಲ ಪ್ರಜಾಪ್ರಭುತ್ವ ವಿರೋಧಿಯಾಗಿವೆ.

(೭) ಭಾರತ ಸರ್ವಧರ್ಮ ಸಮಭಾವದ (ಸೆಕ್ಯುಲರ್‌ನ ಅರ್ಥ ಇದೇ ಆಗಿರಬಹುದೆ?) ರಾಷ್ಟ್ರ. ಇಲ್ಲಿ ಧರ್ಮಕ್ಕೆ ಸ್ವಾತಂತ್ರ್ಯವಿಲ್ಲ, ಆದರೆ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ, ಅವರ ಧಾರ್ಮಿಕ ಭಾವನೆಗಳಿಗೆ ಅದರ ತೋರಿಕೆಗೆ ಸ್ವಾತಂತ್ರ್ಯವಿದೆ. ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂಬ ಸಾಲು ಅದೆಷ್ಟೋ ಅನಾಹುತಗಳಿಗೂ ಕಾರಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮೂರೂ ಅಂಗಗಳು ಸೋತಿವೆ. ಜನರಿಗೆ ಬೇಕಾದ ಅಧ್ಯಾತ್ಮವನ್ನೂ ಮಠ, ಮಂದಿರ ಕಟ್ಟುವ ಕೆಡವುವ ಕೆಲಸವನ್ನೂ ಸರ್ಕಾರವೇ ಮಾಡುತ್ತಲಿದೆ!

ಹೀಗೆ ಜನತಂತ್ರದ ಕಿಬ್ಬದಿಯ ಕೀಲುಗಳನ್ನು ಜನರ ಕೈಯಿಂದಲೇ ಮುರಿಸುತ್ತಿರುವಾಗ ಮತದಾರರು ಜಾಗೃತರಾಗಿ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಛಾತಿ ಪಡೆದು, ಜನತಂತ್ರ ಸುಧಾರಣೆಯ ಪ್ರಯತ್ನ ಮಾಡುವವರೆಗೂ ಉತ್ತಮ ಭವಿಷ್ಯವೆಂಬ ಬೆಳ್ಳಿಚುಕ್ಕೆ ದಿಗಂತದಲ್ಲಿ ಮೂಡುವುದು ಅಸಾಧ್ಯವಾಗಿದೆ.

ನಮ್ಮ ಎಲ್ಲಾ ಜನಪರ ಚಳುವಳಿಗಳು ಅಲ್ಪಾಯುಗಳಾಗುತ್ತಿದ್ದು ಸಾರ್ವಕಾಲಿಕ ಜನಮನ್ನಣೆ ಹಾಗು ಬೆಂಬಲವನ್ನು ಪಡೆಯವುದರಲ್ಲಿ ಯಾಕೆ ಸೋತಿವೆ?

ಚಳುವಳಿಯೆಂದರೆ ಪ್ರಾಜೆಕ್ಟ್ (ಯೋಜನೆ) ಅಲ್ಲ. ಅದು ಅವತ್ತಿನ ಅನಿವಾರ್ಯತೆಗೆ ಅಂದಂದೇ ತೆರೆದುಕೊಳ್ಳುವ ದಾರಿ. ನಿಜಕ್ಕೂ ಚಳುವಳಿಗಳಿಗೆ ಇದು ಸಂಕ್ರಮಣ ಕಾಲ. ಜನಪರವಾಗಿ ಯೋಚಿಸುವವರನ್ನು ಜನರೇ ಅರ್ಥ ಮಾಡಿಕೊಳ್ಳುತ್ತಿಲ್ಲ.  ೧೫ ವರ್ಷಕಾಲ ತನ್ನ ರಾಜ್ಯದ ಜನರಿಗಾಗಿ ಉಪವಾಸ ಉಳಿದ ಇರೋಂ ಶರ್ಮಿಳಾ ಚುನಾವಣೆಯಲ್ಲಿ ಬರೀ ೯೦ ಮತ ಗಳಿಸಿದ್ದಾರೆ! ಅದೇ ಅತಿಭ್ರಷ್ಟರು, ಅತ್ಯಾಚಾರಿಗಳು, ವಂಚಕರು ಕಂಡುಕೇಳರಿಯದಷ್ಟು ಅಂತರದಿಂದ ಮತ್ತೆಮತ್ತೆ ಆರಿಸಿ ಬರುತ್ತಿದ್ದಾರೆ. ಜನರು ಚಳುವಳಿ ಬಗೆಗೆ ಭರವಸೆ ಕಳೆದುಕೊಂಡರೇ? ಚಳುವಳಿಗಾರರು, ಪ್ರಾಮಾಣಿಕರಿಗೆ ಬೆಲೆಯಿಲ್ಲ ಎಂದು ಭಾವಿಸಿದರೆ?

ಹೌದು ಮತ್ತು ಇಲ್ಲ. ಆದರೆ ಹೀಗೇಕಾಯಿತು?

ಇವತ್ತು ಚಳುವಳಿಯ ಭಾಷೆ, ಧೋರಣೆ, ಘೋಷಣೆ, ಯೋಜನೆಗಳನ್ನೆಲ್ಲ ಸರ್ಕಾರ ಕಸಿದುಕೊಂಡಿದೆ! ಹೆಣ್ಣುಮಕ್ಕಳ ಶಿಕ್ಷಣ, ಬೇಟಿಬಚಾವೊ, ಗ್ರಾಮ ಸ್ವಚ್ಛತೆ, ನದಿ ಜೋಡಣೆ, ಗಾಂಧಿ-೧೫೦ಗೆ ೧೫೦ ಕಿ.ಮೀ. ಪಾದಯಾತ್ರೆ .. ಇವೆಲ್ಲವನ್ನು ಸರ್ಕಾರವೇ ಯೋಜನೆ, ಕಾರ್ಯಕ್ರಮಗಳ ರೂಪದಲ್ಲಿ ಒಂದಾದಮೇಲೊಂದು ಘೋಷಿಸುತ್ತಿದೆ. ಚಳುವಳಿಗಳನ್ನು ಬುಡಮಟ್ಟ ಇಲ್ಲವಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಹೋರಾಟಗಾರರನ್ನು, ಚಳುವಳಿಕಾರರನ್ನು ಇಲ್ಲಸಲ್ಲದ ಆಪಾದನೆ ಹೊರಿಸಿ ಸಂಶಯಿಸಲಾಗುತ್ತಿದೆ. ಎಂದೇ ಪ್ರಾಮಾಣಿಕವಾಗಿರುವವರ ಭಾಷೆಯಲ್ಲಿ, ನಡೆಯಲ್ಲಿ ಪ್ರತಿಕ್ರಿಯೆ, ವಿರೋಧವಲ್ಲದೆ ತಮ್ಮ ಲಾಭವನ್ನು ಊಹಿಸಿಕೊಳ್ಳಲು ಜನರಿಗೆ ಕಷ್ಟವಾಗಿದೆ.

ಮನಶ್ಶಾಸ್ತ್ರಜ್ಞರೂ, ತತ್ವವೇತ್ತರೂ ಗುರುತಿಸುವಂತೆ ಮನುಷ್ಯ ಜೀವಿಯೊಳಗೆ ಒಂದು ಅಂತರ್ಮುಖ ವ್ಯಕ್ತಿತ್ವ, ಮತ್ತೊಂದು ಬಹಿರ್ಮುಖ ವ್ಯಕ್ತಿತ್ವ ಇರುತ್ತದೆ. ಪ್ರಜ್ಞೆಯ ಬಹಿರ್ಮುಖ ಅವಶ್ಯಕತೆಗಳಿಗೆ, ಚಲನೆಗೆ ಅಗತ್ಯವಿರುವ ಎಲ್ಲವೂ ಈಗ ಲಭ್ಯವಿವೆ. ಆದರೆ ಬದುಕೆಂದರೆ ಅದಷ್ಟೆ ಅಲ್ಲ. ಪ್ರತಿ ಮನುಷ್ಯ ಜೀವಿಯಲ್ಲೂ ಲೌಕಿಕ, ಅಲೌಕಿಕ ಪ್ರಶ್ನೆಗಳಿವೆ. ನಾವು ಲೌಕಿಕ ಪ್ರಶ್ನೆಗಳನ್ನು ಹೋರಾಟ, ಚಳುವಳಿ, ಕಾನೂನು, ಜಾಗೃತಿಗಳ ಮೂಲಕ ತಣಿಸುತ್ತಿದ್ದೇವೆ. ಆದರೆ ಜನರ ಭಾವಜಗತ್ತಿಗೆ ಸಂಬಂಧಿಸಿದ ಅಲೌಕಿಕ ಸಂಗತಿಗಳ ಬಗೆಗೆ ಮಾತನಾಡುತ್ತಿಲ್ಲ. ಅಥವಾ ನಮ್ಮ ವಿಚಾರವಾದ ಅದಕ್ಕೆ ಬಿಡುತ್ತಿಲ್ಲ. ಅಲೌಕಿಕವೆಂದರೆ ಮೂಢನಂಬಿಕೆಯಲ್ಲ. ಅದು ಆಧ್ಯಾತ್ಮಿಕ ಹಸಿವು. ಅದನ್ನು ತಣಿಸುವ ಅವಶ್ಯಕತೆಯೂ ಇದೆ.

ಪ್ರತಿ ಮನುಷ್ಯ, ಕುಟುಂಬ, ಜಾತಿ, ಧರ್ಮ, ಭಾಷೆ, ನೆಲಕ್ಕೂ ಗತದ ಸ್ಮೃತಿಗಳಿರುತ್ತವೆ. ಅದರೊಡನೆ ಒಂದು ಭಾವನಾತ್ಮಕ ಸಂಬಂಧವೂ ಇರುತ್ತದೆ. ಹೆಮ್ಮೆಯ ಮಾದರಿಗಳೂ, ನೋವಿನ ಬಿಕ್ಕಳಿಕೆಗಳೂ ಸ್ಮೃತಿಯಾಗಿ ಹೆಣೆದುಕೊಂಡಿರುತ್ತವೆ. ಅವನ್ನು ತೊಡೆದುಹಾಕುವುದು ಅಷ್ಟು ಸುಲಭವಿಲ್ಲ. ವಿಚಾರವಾದಿಗಳಾಗಿದ್ದ ಬುದ್ಧ, ಬಸವಣ್ಣ, ಕಬೀರ, ತತ್ವಪದಕಾರರು, ಕನಕ, ಫುಲೆ, ಗಾಂಧಿ, ಅಂಬೇಡ್ಕರ್ ಎಲ್ಲರಿಗು ಇದು ಗೊತ್ತಾಗಿತ್ತು. ಆದರೆ ಈಗಿನ ನಾವು ಈ ಒಳಹರಿವನ್ನು ಗುರುತಿಸಿ ಉದ್ದೇಶಿಸುವಲ್ಲಿ ವಿಫಲವಾಗಿದ್ದೇವೆ. ನಾವು ಭಜನೆ ಬೇಡ ಎಂದೆವು, ಪ್ರಾರ್ಥನೆಯನ್ನೂ ನಿರಾಕರಿಸಿದೆವು. ವ್ರತ-ಆಚರಣೆ ಬೇಡ ಎಂದೆವು, ಉಪವಾಸವನ್ನೂ ನಿರಾಕರಿಸಿದೆವು. ಮಂತ್ರ ಬೇಡ ಎಂದೆವು, ತತ್ತ್ವಪದಗಳನ್ನೂ ನಿರಾಕರಿಸಿದೆವು. ಜಪತಪ ಬೇಡ ಎಂದೆವು, ಧ್ಯಾನವನ್ನೂ ನಿರಾಕರಿಸಿದೆವು. ಭಕ್ತಿ ಬೇಡ ಎಂದೆವು, ಜನರ ಭಾವುಕ ಅಗತ್ಯಗಳನ್ನೂ ನಿರಾಕರಿಸಿದೆವು.

ಆದರೆ ನಾವು ಕಟ್ಟಿದ ಬೇಡಗಳ ಮಹಲು ಒಂದು ಪರ್ಯಾಯವಾಗಿ ಜನರನ್ನು ಸೆಳೆಯಲು ವಿಫಲವಾಗಿದೆ. ಧಾರ್ಮಿಕತೆ, ಭಕ್ತಿಯೆಂದ ಕೂಡಲೇ ಮೂಗು ಮುರಿವ ನಮ್ಮ ನಡವಳಿಕೆಯನ್ನು ಧರ್ಮರಾಜಕಾರಣ ಬಳಸಿಕೊಂಡಿದೆ. ಸನಾತನ ಸಾಂಪ್ರದಾಯಿಕ ಮನಸ್ಸುಗಳು ಚಳುವಳಿಕಾರರನ್ನು ದೈವ-ಧರ್ಮವಿರೋಧಿಗಳೆಂಬಂತೆ ಬಿಂಬಿಸುತ್ತಿವೆ. ಸೂಕ್ತ ಮಾರ್ಗದರ್ಶನವಿಲ್ಲದೆಯೇ ಜನರು ಮೌಢ್ಯಗಳಿಗೆ ಬಲಿಯಾಗುತ್ತಿದ್ದಾರೆ.

ಅಹಂ ನಿರಸನ ಸುಲಭವಲ್ಲ. ಜನಸಾಮಾನ್ಯರಲ್ಲೂ, ಆಳುವವರಲ್ಲೂ, ಪಂಡಿತರಲ್ಲೂ, ಅಧ್ಯಾತ್ಮ, ಅಹಿಂಸೆ, ತ್ಯಾಗಗಳ ಹಾದಿ ಹಿಡಿದವರಲ್ಲೂ ಅಹಂಕಾರವಿರುತ್ತದೆ. ಚಳುವಳಿಕಾರರಲ್ಲೂ ಅಹಮಿರುತ್ತದೆ. ಚಳುವಳಿಕಾರರ ಅಹಮು ಚಳುವಳಿಗೇ ಮುಳುವಾಗುವುದೂ ಇದೆ. ಆರೋಗ್ಯಕರ ಮನಸ್ಥಿತಿಗಾಗಿ, ಮನುಷ್ಯರೊಳಗಿನ ಅಹಂಕಾರ ನಿರಸನಗೊಳ್ಳುವುದಕ್ಕಾಗಿ ಪ್ರತಿಯೊಬ್ಬರೂ ಒಳಮುಖವಾಗಿ ಚಲಿಸಬೇಕಾಗುತ್ತದೆ. ಕವಿತೆ, ಪದ, ಧ್ಯಾನ, ಪ್ರಾರ್ಥನೆ ಮೊದಲಾದ ಸಂಗತಿಗಳು ಒಳ ವ್ಯಕ್ತಿತ್ವವನ್ನು ಜಾಗೃತವಾಗಿಡುತ್ತವೆ. ಇದು ಆರೋಗ್ಯಕರ ಧಾರ್ಮಿಕತೆ. ಜನಸಾಮಾನ್ಯರು ಆರೋಗ್ಯಕರ ಧಾರ್ಮಿಕತೆ ಬೆಳೆಸಿಕೊಂಡರೆ ನಾವು ಬಯಸುವ ಸೌಹಾರ್ದ, ಜಾಗೃತಿ ತಂತಾನೇ ಸಾಧ್ಯವಾಗುತ್ತವೆ. ಮೌಢ್ಯ ಕಡಿಮೆಯಾಗುತ್ತದೆ.

ಬಹುಶಃ ಇನ್ನುಮುಂದೆ ಚಳುವಳಿಗಳು ವಿಚಾರವಾದದ ಜೊತೆ ಆರೋಗ್ಯಕರ ಧಾರ್ಮಿಕತೆಯನ್ನು ಬೆಸೆಯಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಯೋಚಿಸಬೇಕು.

ಮೊದಲಿನಿಂದ ಭಾರತದ ನೆಲ ತುಂಬ ಫಲವತ್ತು. ಮಳೆ, ಚಳಿ, ಬಿಸಿಲುಗಳ ಹದ ಮಿಶ್ರಣದಿಂದ ಇಲ್ಲಿ ಬೀಜ ಬಿತ್ತದೆ ಎಲ್ಲ ತರಹದ ಕಳೆ, ಬೆಳೆ ಎರಡೂ ಬೆಳೆಯುತ್ತವೆ. ಈಗಷ್ಟೇ ಬಿತ್ತಿದರೂ ಹುಲುಸಾಗಿ ಬೆಳೆದಿರುವ ಕಳೆಯನ್ನು ಜನ ಬೆಳೆಯೆಂದು ಭ್ರಮಿಸಿದ್ದಾರೆ. ಬೆಳೆಗೂ ಕಳೆಗೂ ಅಂತರ ತಿಳಿಯದೇ ಹುಸಿ ಉನ್ಮಾದದಲ್ಲಿದ್ದಾರೆ. ಆದರೆ ಕೊನೆಗೂ ಉಪಯೋಗಿಯಾದದ್ದು ಬೆಳೆಯೇ ಹೊರತು ಕಳೆಯಲ್ಲ. ಅದು ಅವರಿಗೇ ತಿಳಿಯಬೇಕು. ತಮ್ಮೊಳಗೆ ಹುದುಗಿ ಮಲಗಿರುವ ಒಳ್ಳೆಯದನ್ನು ಎಚ್ಚರಿಸುವಂತಹ ಒಂದು ಒಳಗನ್ನಡಿ ತಾವೇ ರೂಪಿಸಿಕೊಳ್ಳುವಂತಾಗಬೇಕು. ಆಗ ಪ್ರಜಾಪ್ರಭುತ್ವದ ಮೇಲೆ ನೈತಿಕ ಒತ್ತಡ ತರುವ ಜನಾಭಿಪ್ರಾಯ ರೂಪುಗೊಳ್ಳುವುದು ಸಾಧ್ಯವಾದೀತು.



ರಾಜಕೀಯ ನಾಯಕರ ಮತ್ತು ಪಕ್ಷಗಳ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನವಿರೋಧಿ ನೀತಿಗಳನ್ನು ಪ್ರಶ್ನಿಸುವುದರಲ್ಲಿ, ಪ್ರತಿರೋಧಿಸುವುದರಲ್ಲಿ, ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವುದರಲ್ಲಿ ಪ್ರಗತಿಪರ ಚಿಂತಕರು, ಚಳವಳಿಗಾರರು ತಮ್ಮ ಒಲವಿನ ಪಕ್ಷ ಅಥವಾ ಸಂಘಟನೆಗಳ ಅಜೆಂಡಾಗಳಿಗೆ ಪೂರಕವಾದ ನಿಲುವನ್ನು ತೆಗೆದುಕೊಂಡು, ಪ್ರಾಮಾಣಿಕತೆ, ನಿಷ್ಠುರತೆ, ವಾಸ್ತವತೆಯನ್ನು ಪಕ್ಕಕ್ಕೆ ಸರಿಸಿದರೇ? ಜನಪರ ಚಿಂತನೆ ಮತ್ತು ಚಳವಳಿಗಳ ಆಶಯಗಳೂ ಸೀಮಿತವಾಗಿ ಬಿಟ್ಟವೇ? 

ಹೌದು. ಕಾಲದ ತುರ್ತು ಎಂಬ ಆಪದ್ಧರ್ಮವು ಕೆಲವು ತಪ್ಪುಗಳನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ, ಅರಿತೂ ಅರಿಯದವರಂತೆ ಇರುವ ಹಾಗೆ ಮಾಡಿತು. ಅದು ನಮ್ಮ ವಿಶ್ವಾಸಾರ್ಹತೆಯನ್ನೂ ಕಡಿಮೆ ಮಾಡಿದೆ.



ದುಷ್ಟರು, ಸಜ್ಜನರು ಆ ಕಾಲದಲ್ಲೂ ಇದ್ದರು, ಇವತ್ತಿಗೂ ಇದ್ದಾರೆ. ಚರ್ಚೆ, ಟೀಕೆ, ಪ್ರತಿಕ್ರಿಯೆಗಳೂ ಅಷ್ಟೆ, ಎಂದಿನಿಂದಲೂ ನಡೆದಿವೆ. ಪ್ರತಿ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಪರಸ್ಪರ ವಿರುದ್ಧ ಪ್ರವೃತ್ತಿಗಳಿರುತ್ತವೆ. ಅವೆರೆಡರಲ್ಲಿ ಯಾವುದು ಜಾಗೃತಗೊಳಿಸಲ್ಪಡುತ್ತದೆ ಎನ್ನುವುದು ಕಾಲಧರ್ಮದ ಮೇಲೆ ನಿಂತಿದೆ.

ಈ ಕಾಲದಲ್ಲಿ ಟೀಕೆ, ವಿಮರ್ಶೆ, ಪ್ರತಿಕ್ರಿಯೆಗಳೇ ಹೆಚ್ಚಾಗುತ್ತಿವೆ. ರಚನಾತ್ಮಕವಾದ ಕ್ರಿಯೆಯಿಲ್ಲದೆ ಬರಿಯ ಟೀಕೆಗಳಿಂದ ಸತ್ಯ ಹುಟ್ಟಲು ಸಾಧ್ಯವಿಲ್ಲ. ಕಟ್ಟಬೇಕು ನಿರಂತರವಾಗಿ, ಸಣ್ಣಗೆ, ತಣ್ಣಗೆ. ಅದಕ್ಕೆ ನೆಲದ ಕಡೆಗೆ, ನೆಲದೇವತೆಗಳ ಮೆಲುಮಾತಿನ ಕಡೆಗೆ ಕಿವಿಗೊಡಬೇಕು. ಮಾರ್ಕ್ಸ್-ಬಸವಣ್ಣ-ಕಬೀರರನ್ನೂ, ಗಾಂಧಿ-ಅಂಬೇಡ್ಕರ್-ಬುದ್ಧರನ್ನೂ, ಭಗತ-ಚೆಗೆವಾರ-ವಿವೇಕಾನಂದರನ್ನೂ, ಶರೀಫ-ಫುಲೆ-ಲೋಹಿಯಾರನ್ನೂ ಕಸಿಮಾಡಬೇಕು. ಅಂಥ ಹೊಸ ಹಾಡು ಬರೆಯುವ ಹೊಸ ಲಿಪಿಕಾರರು, ಹಾಡುವ ಹೊಚ್ಚಹೊಸ ದನಿಗಳು ಎದ್ದು ಬರಬೇಕು. ಹಾಗೆ ಹುಟ್ಟುವ ಹೊಸಹಾಡಿಗೆ ಮಾತ್ರ ಹೊಸ ವಿಸ್ತಾರ, ಹೊಸ ಅರ್ಥ-ಭಾವ ಸಾಧ್ಯತೆ, ಹೊಸ ನಿಲುಕುವಿಕೆಯ ಸಾಧ್ಯವಿದೆ.

ಈವರೆಗಿನ ಧಾಟಿಗಿಂತ ಭಿನ್ನವಾಗಿ ಜನರಿಗೆ ಸತ್ಯ ಅರುಹಬೇಕು ನೆಲದೇವತೆಗಳೇ, ನಮ್ಮ ಹರಸಿ..

(`ಸಂವಾದ' ಪತ್ರಿಕೆ ಆಗಸ್ಟ್ 2019ರಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ. ರೇಖಾಚಿತ್ರ: ಕೃಷ್ಣ ಗಿಳಿಯಾರ್)




No comments:

Post a Comment