Thursday 25 July 2019

`ನೇಪಾಳದ ಕುಮಾರಿ': ಹಿಮ ಕಣಿವೆಯ ಶೀತಲ ರಹಸ್ಯಗಳು





ಜಗತ್ತಿನ ಅತಿ ಎತ್ತರದ ಶಿಖರಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡ, ೨೦೦ ಇಂಟು ೮೦೦ ಕಿಲೋಮೀಟರ್ ವಿಸ್ತಾರದ, ಭಾರತದ ಕೊರಳ ಬುಡದ ತಗ್ಗು ತುಂಬುವಂತೆ ಭೂಪಟದಲ್ಲಿ ಕಾಣುವ ದೇಶ ನೇಪಾಳ. ಆಸ್ತಿಕರಿಗೆ ದೇವಭೂಮಿಯಂತೆ, ಚಾರಣಪ್ರಿಯರಿಗೆ ಸವಾಲೆಸೆದು ಆಹ್ವಾನಿಸುವ ಶಿಖರಗಳ ತವರಿನಂತೆ, ಪ್ರಕೃತಿಪ್ರಿಯರಿಗೆ ಅತಿಸುಂದರ ಭೂದೃಶ್ಯಗಳ ತಪ್ಪಲಿನಂತೆ, ಹಿಂದೂ ರಾಷ್ಟ್ರಾಭಿಮಾನಿಗಳಿಗೆ ವಿಸ್ತರಿಸಬೇಕಾದ ವಸಾಹತುವಿನಂತೆ, ಬೌದ್ಧರಿಗೆ ಶಾಕ್ಯಮುನಿ ಬುದ್ಧನ ಜನ್ಮಭೂಮಿಯಂತೆ, ಕಳ್ಳಕಾಕರಿಗೆ, ವ್ಯಸನಿಗಳಿಗೆ ಶಿಕ್ಷೆ ತಪ್ಪಿಸಿಕೊಳ್ಳುವ ಅಡ್ಡದಾರಿಯಂತೆ - ಅವರವರ ಭಾವಭಕುತಿಗೆ ತಕ್ಕಂತೆ ವಿಭಿನ್ನ ಯೋಚನೆಗಳನ್ನು ಸ್ಫುರಿಸುವ ಶಕ್ತಿ ಆ ನೆಲಕ್ಕಿದೆ. ಹಿಮವತ್ಪರ್ವತಗಳಲ್ಲಿ ಹುಟ್ಟಿ ವರ್ಷಪೂರ್ತಿ ಹರಿಯುವ ನದಿಗಳು, ಅವು ನಿರ್ಮಿಸಿರುವ ಬೃಹತ್ ಕಮರಿಗಳು, ಭೋರಿಟ್ಟು ಹರಿಯುವಾಗ ಹೊತ್ತು ತರುವ ಸಾಲಿಗ್ರಾಮವೆಂಬ ನಯಸು ಅಗ್ನಿಶಿಲೆಯ ಪಳೆಯುಳಿಕೆ, ಸಹಜವಾಗಿ ಬೆಳೆಯುವ ರುದ್ರಾಕ್ಷಿ ಗಿಡ, ಎಲ್ಲೆಲ್ಲೂ ರಕ್ತಕೆಂಪು ಬಣ್ಣದ ಬಟ್ಟೆ ಧರಿಸಿರುವ ಸುಂದರಿಯರು, ಶಾಕ್ತ-ಶೈವ-ವಜ್ರಯಾನ-ನಾಥವೇ ಮೊದಲಾದ ಹಿಂದೂ-ಬೌದ್ಧ-ಜೈನ ಧರ್ಮದ ಪಂಥಗಳ ಕೂಡು ಬಾಳುವಿಕೆ ಮುಂತಾದ ಅನೇಕ ಕುತೂಹಲಕರ ಸಂಗತಿಗಳ ತವರು ನೇಪಾಳ. ನಾಲಕ್ಕೂ ದಿಕ್ಕುಗಳಿಂದ ಪರ್ವತಗಳು ಸುತ್ತುವರೆದ ಈ ಭೂಬಂಧಿತ (ಲ್ಯಾಂಡ್ ಲಾಕ್ಡ್) ದೇಶದ ವ್ಯಾಪಾರ ವಹಿವಾಟುಗಳಲ್ಲಿ ತಮ್ಮ ಕೈಮೇಲಾಗಲೆಂದು ನೆರೆಯ ದೇಶಗಳು ಸದಾ ಹಸ್ತಕ್ಷೇಪ ನಡೆಸುತ್ತ ಅಸ್ಥಿರಗೊಳಿಸಿರುವ ರಾಷ್ಟ್ರವೂ ಹೌದು.

ಅಂತಹ ನೇಪಾಳಕ್ಕೆ ಇತ್ತೀಚೆಗೆ ಹೋಗಿದ್ದೆವು. ‘ಹಿಮಪರ್ವತಯಾನ’ದ ರೋಮಾಂಚನದ ಜೊತೆಗೇ ಮನಕಲಕುವ ಕೆಲ ಸಂಗತಿಗಳನ್ನೂ ಎದುರುಗೊಂಡೆವು. ಅವುಗಳಲ್ಲಿ ತುಂಬ ಕಸಿವಿಸಿ ಹುಟ್ಟಿಸಿದ್ದು ಎಳೆ ಹುಡುಗಿಯರನ್ನು ದುರ್ಗೆಯ (‘ತೆಲೆಜು’) ಅಂಶ ಹೊಂದಿದ ‘ಕುಮಾರಿ’ ದೇವರಾಗಿಸಿ ಪೂಜಿಸುವ ಪದ್ಧತಿ. ಕುಮಾರಿ ಎಂದರೆ ‘ಜೀವಂತ ದೇವತೆ’. ವೃತ್ತಿಯಿಂದ ಚಿನ್ನಬೆಳ್ಳಿ ಕೆಲಸ ಮಾಡುವ ನೇವಾರಿಗಳು ನೇಪಾಳದ ಮೂಲ ನಿವಾಸಿಗಳು. ಅವರಿಂದಲೇ ದೇಶಕ್ಕೆ ಆ ಹೆಸರು ಬಂದದ್ದು. ಕುಮಾರಿ ಆರಾಧನೆ ಕಠ್ಮಂಡು ಕಣಿವೆಯ ನೇವಾರರ ಸಂಸ್ಕೃತಿಯಂತೆ.

ಹೆಣ್ಣಿನ ಕೌಮಾರ್ಯವನ್ನು, ಕನ್ಯತ್ವವನ್ನು ದೈವೀಕರಿಸಿ ಸೃಷ್ಟಿಯಾದ ದೈವ ಕುಮಾರಿ. ಐದು ವರ್ಷದೊಳಗಿನ ಆಯ್ದ ಹೆಣ್ಣುಮಗುವಿನಲ್ಲಿ ದೈವತ್ವ ಗುರುತಿಸಿ, ತಾಯ್ತಂದೆ-ಬಳಗ-ಸಮಾಜದಿಂದ ದೂರವಿಟ್ಟು ‘ಕುಮಾರಿ ಘರ್’ನಲ್ಲಿ ಬೆಳೆಸಲಾಗುತ್ತದೆ. ಜನರಿಗೆ ‘ದರ್ಶನ’ ಕೊಡುವುದೇ ಅವಳ ಕೆಲಸ. ಋತುಮತಿಯಾಗುವವರೆಗೆ ಅವಳು ದೇವತೆ, ದೇಹದಿಂದ ರಕ್ತ ಹೊರಹರಿದ ಕೂಡಲೇ ದುರ್ಗೆ ಅವಳನ್ನು ಬಿಟ್ಟು ಹೋಗುವಳಂತೆ! ನಂತರ ತಾಯ್ತಂದೆಯರ ಬಳಿ ಹೋಗುತ್ತಾಳೆ. ನೇಪಾಳದ ವಿವಿಧ ಕಡೆಗಳಲ್ಲಿ ಇಂತಹ ಹನ್ನೆರೆಡು ‘ಕುಮಾರಿ’ಯರಿದ್ದು ಮೂವರು ಕಠ್ಮಂಡುವಿನಲ್ಲಿದ್ದಾರೆ. ಅವರಲ್ಲಿ ದರ್ಬಾರ್ ಚೌಕದಲ್ಲಿರುವವಳು ರಾಜರ ‘ಕುಮಾರಿ.’ ಹೆಚ್ಚು ಪ್ರಮುಖಳು, ಪ್ರಸಿದ್ಧಳು.

೨೦೦೮ರಲ್ಲಿ ರಾಜಶಾಹಿ ಕೊನೆಗೊಳ್ಳುವ ಮೊದಲು ರಾಜರಾಣಿ ಪರಿವಾರದವರು ವರ್ಷದ ನಿಗದಿತ ದಿನಗಳಲ್ಲಿ ಕುಮಾರಿಯನ್ನು ಪೂಜಿಸುತ್ತಿದ್ದರು. ತಲೆಬಾಗಿ ನಮಿಸಿ, ಕಾಣಿಕೆಯಿತ್ತು ಆಶೀರ್ವಾದ ಪಡೆಯುತ್ತಿದ್ದರು. ಈಗಲ್ಲಿ ಜಾತ್ಯತೀತ ಜನತಂತ್ರ ಸ್ಥಾಪನೆಯಾದ ಬಳಿಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯುತ್ತಾರೆ.

ಈಗಿನ ರಾಜ‘ಕುಮಾರಿ’ಯ ಹೆಸರು ತೃಷ್ಣಾ ಶಾಕ್ಯ ಕುಮಾರಿ. ಆಕೆಗೀಗ ಐದು ವರ್ಷ. ಕುಮಾರಿಯಾದಾಗ ಮೂರು ವರ್ಷ. ಆಕೆಗಿಂತ ಹಿಂದೆ ಇದ್ದದ್ದು ಕುಮಾರಿ ಮತೀನಾ ಶಾಕ್ಯ. ಮತೀನಾ ಈಗ ತಾಯ್ತಂದೆಯರ ಬಳಿ ಇದ್ದು ಶಾಲೆಗೆ ಹೋಗತೊಡಗಿದ್ದಾಳೆ. ೨೦೧೫ರ ಭೂಕಂಪದಲ್ಲಿ ಕಠ್ಮಂಡುವಿನ ದರ್ಬಾರ್ ಚೌಕದ ಸಾಕಷ್ಟು ಪುರಾತನ ರಚನೆ, ಸ್ಮಾರಕಗಳು ನೆಲಸಮವಾದವು. ಆದರೆ ‘ಕುಮಾರಿ ಘರ್’ಗೆ ಏನೂ ಆಗಲಿಲ್ಲ. ಕುಮಾರಿಯರ ಪಾವಿತ್ರ್ಯ, ಸಚ್ಚಾರಿತ್ರ್ಯ, ಅವರ ಮೇಲೆ ಜನರಿಟ್ಟ ಶ್ರದ್ಧೆಗೆ ಅದು ಸಾಕ್ಷಿಯೆಂದು ಜನ ನಂಬಿದ್ದಾರಂತೆ!

ನೆಲ ಸೋಕದ ಕುಮಾರಿ ಪಾದ 








ಕಠ್ಮಂಡುವಿನ ಹೃದಯ ಭಾಗದಲ್ಲಿ ಪಾರಂಪರಿಕ ತಾಣಗಳಿರುವ ಜಾಗ ದರ್ಬಾರ್ ಚೌಕವಿದೆ. ದುರ್ಗಾ ದೇವಾಲಯ, ಕಾಷ್ಠ ಮಂಟಪ, ಹನುಮಾನ್ ಧೋಕಾ, ಕಾಲಭೈರವನೇ ಮೊದಲಾದ ಹಳೆಯ, ಸುಂದರ, ಅರೆ ಶಿಥಿಲ ಕಟ್ಟಡಗಳ ನಡುವೆ ಚಂದದ ಉಪ್ಪರಿಗೆ ಮನೆ ‘ಕುಮಾರಿ ಘರ್’ ಇದೆ. ವಿಸ್ತೃತ ಕುಸುರಿ ಕೆಲಸವಿರುವ ಬಾಗಿಲು, ದಾರಂದ, ಕಿಟಕಿಗಳ ಆ ಉಪ್ಪರಿಗೆ ಮನೆ ಕುಮಾರಿಯರನ್ನಿಟ್ಟು, ಬೆಳೆಸುವ ಸ್ಥಳ. ಇಡೀ ಮನೆಯ ಆಗುಹೋಗು ಕುಮಾರಿಯ ಸುತ್ತ ನಿಂತಿದೆ. ಕುಮಾರಿಯ ಊಟತಿಂಡಿ, ಪಾಠ, ಭಜನೆ, ದರ್ಶನ, ಪೂಜೆ, ಕಾವಲಿಗೆಂದು ಪ್ರತ್ಯೇಕ ತಂಡವೇ ಇದೆ. ಅವಳಿಗೆ ಮಾಡುವ ಅಡಿಗೆ ಬೇರೆಯೇ. ರಾಜರ ‘ಕುಮಾರಿ’ಯನ್ನು ಈಗ ನೋಡಿಕೊಳ್ಳುತ್ತಿರುವವರು ಗೌತಮ್ ಶಾಕ್ಯ. ಅವರ ಕುಟುಂಬ ಹನ್ನೊಂದು ತಲೆಮಾರುಗಳಿಂದ ಆ ಕೆಲಸದಲ್ಲಿ ತೊಡಗಿದೆ. ಉಳಿದಂತೆ ಕುಮಾರಿಯ ದಿನಚರಿ, ಕೆಲಸಗಾರರು ಯಾರು, ಹೇಗೆ, ಏಕೆ ಎನ್ನುವುದೆಲ್ಲ ಹೊರಜಗತ್ತಿಗೆ ತಿಳಿಯದ ರಹಸ್ಯಗಳು.





ಮನೆಯ ಉಪ್ಪರಿಗೆಯಲ್ಲಿ ಕುಸುರಿಕೆತ್ತನೆಯ ಮೂರು ಗವಾಕ್ಷಿಗಳಿವೆ. ಕೆಳಗೆ ನಿಂತ ಜನರು ಮೇಲೆ ನೋಡುತ್ತ ಕುಮಾರಿ ಈಗ ಮುಖದರ್ಶನ ನೀಡಬಹುದು, ಇನ್ನೊಂದು ಘಳಿಗೆಗೆ ನೀಡಬಹುದೆಂದು ಕಾದು ನಿಲ್ಲುತ್ತಾರೆ. ಹಣೆಗೆ ಹಚ್ಚಿದ ರಕ್ತ ಕೆಂಪು ಬಣ್ಣ, ನಡುವೆ ಮೂರನೆಯ ಕಣ್ಣಿನಂತೆ ಕಾಣುವ ಅಗ್ನಿ ಚಕ್ಷು, ಎದ್ದು ಕಾಣಿಸುವಂತೆ ತಿದ್ದಿದ ಕಣ್ಣು, ಹುಬ್ಬುಗಳು. ಸದಾ ಕೆಂಪು ದಿರಿಸಿನಲ್ಲಿರುವ ಕುಮಾರಿ ಕಂಡರೆ ಸಾಕು, ಧನ್ಯರಾದೆವೆಂದು ಜನ ತಲೆಬಾಗುತ್ತಾರೆ.




ಕುಮಾರಿಯರ ನಡವಳಿಕೆಗಳು ಖಚಿತ ನಿರ್ದೇಶನಕ್ಕೊಳಪಟ್ಟಿವೆ. ತಾಯ್ತಂದೆಯರ ಜೊತೆ ಇರುವ ಹಾಗಿಲ್ಲ. ಆಯ್ದ ನೇವಾರಿ ಮಕ್ಕಳೊಂದಿಗೆ, ಅದರಲ್ಲೂ ನೋಡಿಕೊಳ್ಳುವವರ ಮಕ್ಕಳೊಂದಿಗೆ ಮಾತ್ರ ಆಡಬಹುದು. ಕೆಂಪು ಬಟ್ಟೆಯನ್ನೇ ಧರಿಸಬೇಕು. ಮುಖ ಹೊರತೋರಿಸುವಾಗ ಹಣೆಮೇಲೆ ಅಗ್ನಿ ಚಕ್ಷು ಬರೆದಿರಬೇಕು. ತಲೆಗೂದಲು ಮೇಲೆತ್ತಿ ತುರುಬು ಕಟ್ಟಿರಬೇಕು. ರಾಜನಿರಲಿ, ಪ್ರಧಾನಿ-ರಾಷ್ಟ್ರಪತಿಯಿರಲಿ, ಬಂದವರೆಲ್ಲ ನಮಿಸಿ, ಕಾಲಿಗೆ ಮುತ್ತಿಡುವುದರಿಂದ ಅವರಿಗೆ ಅನುವಾಗುವಂತೆ ಕಾಲು ಚಾಚಿಯೇ ಕೂರಬೇಕು. ಬಜಾರಿನಲ್ಲಿ, ಊರಿನಲ್ಲಿ ಬೇಕಾದಂತೆ ಓಡಾಡುವಂತಿಲ್ಲ. ಚಪ್ಪಲಿ ಹಾಕುವಂತಿಲ್ಲ. ಕಾಲು ನೆಲಕ್ಕೆ ತಗಲುವಂತಿಲ್ಲ. ಮನೆಯಿಂದ ಹೊರಗೆ ಆಯ್ದ ದಿನಗಳಲ್ಲಿ ವರ್ಷಕ್ಕೆ ಹದಿಮೂರು ಸಲ ಮಾತ್ರ ಬರಬಹುದು. ಆಗವಳನ್ನು ಹೊತ್ತು ತರಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಕುಮಾರಿ ಉತ್ಸವದಂದು ಸಾವಿರಾರು ಜನ ದರ್ಶನ ಪಡೆಯಲು ಹಾತೊರೆದು ಮುತ್ತುವಾಗ ಮೌನವಾಗಿ, ಗಂಭೀರವಾಗಿ, ಶಾಂತವಾಗಿ ರಥದಲ್ಲಿ ಕೂತಿರಬೇಕು.

ಕುಮಾರಿಯ ಪ್ರತಿ ನಡವಳಿಕೆಗೂ ಅರ್ಥವಿದೆ. ಬಂದವರೆದುರು ನಕ್ಕರೆ ಅಥವಾ ಅತ್ತರೆ ಗಂಭೀರ ಖಾಯಿಲೆ ಅಥವಾ ಸಾವನ್ನು ಸೂಚಿಸುತ್ತದೆ. ಕಣ್ಣುಜ್ಜಿದರೆ ಸದ್ಯದಲ್ಲೇ ಯಾರದೋ ಸಾವು; ಹರಕೆಯೊಪ್ಪಿಸಿದ ತಿನಿಸನ್ನು ಹೆಕ್ಕಿದರೆ ವ್ಯವಹಾರ ನಷ್ಟ; ಚಪ್ಪಾಳೆ ತಟ್ಟಿದರೆ ರಾಜನ ಭಯ ಎಂದರ್ಥ.

ಅಂದು ಮಧ್ಯಾಹ್ನ ನಾವಲ್ಲಿದ್ದೆವು. ಕುಮಾರಿಯ ಫೋಟೋ ತೆಗೆಯಲೇಬಾರದು ಎಂಬ ನಿಖರ ಸೂಚನೆಯಿತ್ತು. ಯಾರಾದರೂ ಬಂದು ಕರೆದರೆ ಕಿಟಕಿಗೆ ಬರುವುದಿದೆಯಂತೆ. ನಮ್ಮ ಗೈಡ್ ಕಟಕ್ ಲಾಮಾ ಕೆಳಗಿನಿಂದ ಕರೆದರು: ‘ಬುವಾ, ದಯವಿಟ್ಟು ದರ್ಶನ ನೀಡುವಿರಾ?’.

ಐದು ವರ್ಷದ ಮಗು ಊಟ ಮಾಡುತ್ತಿತ್ತು. ಸಂಜೆ ನಾಲ್ಕರ ನಂತರ ಬರಬೇಕೆಂದು ಮೇಲಿನಿಂದ ಉತ್ತರ ಬಂತು.



‘ಬತ್ತೀಸ’ ಗುಣ 

ನೇಪಾಳದಲ್ಲಿ ಶಾಕ್ತ ಆರಾಧಕರು ಹೆಚ್ಚಿದ್ದಾರೆ. ಅವರ ಮುಖ್ಯಗ್ರಂಥ ದೇವಿಪುರಾಣ. ಅದರಲ್ಲಿ ದೇವಿಯು ತಾನು ಅಂಶರೂಪವಾಗಿ ಎಲ್ಲ ಹೆಣ್ಣುಗಳಲ್ಲೂ ಇರುವುದಾಗಿ ಹೇಳಿದ ಆಧಾರದ ಮೇಲೆ ಕುಮಾರಿ ಪೂಜೆ ನಡೆಯುತ್ತದೆ. ಜೊತೆಗೆ ಹಲವಾರು ಐತಿಹ್ಯಗಳೂ ಚಾಲ್ತಿಯಲ್ಲಿವೆ. ಒಂದು ಐತಿಹ್ಯದಂತೆ: ಮಲ್ಲ ರಾಜನೊಬ್ಬ ದುರ್ಗಾದೇವಿಯ (ತಲೆಜು) ಪರಮಭಕ್ತನಾಗಿದ್ದ. ಅವಳು ಪ್ರತಿದಿನ ರಾತ್ರಿ ಪ್ರತ್ಯಕ್ಷವಾಗಿ ಅವನೊಡನೆ ಪಗಡೆ ಆಡುತ್ತಿದ್ದಳು. ಆದರೆ ಅದನ್ನು ಯಾರಿಗೂ ತಿಳಿಸಬಾರದೆಂಬ ಷರತ್ತು ಹಾಕಿದ್ದಳು. (ದೇವರಿಗೂ ಮನುಷ್ಯರೊಡನೆ ಒಡನಾಡುವ ಮೋಹ!) ಒಮ್ಮೆ ರಾಣಿಗೆ ರಾಜನ ಮೇಲೆ ಅನುಮಾನ ಬಂದು ಹಿಂಬಾಲಿಸಿ ದೇವಿಯನ್ನು ನೋಡಿಬಿಟ್ಟಳು. ದೇವಿ ಕೋಪಬಂದು ಹೊರಟುನಿಂತಳು. ಬಿಟ್ಟು ಹೋಗದಂತೆ ಪರಿಪರಿಯಾಗಿ ರಾಜ ಬೇಡಿಕೊಂಡಾಗ ಇನ್ನುಮುಂದೆ ಶಾಕ್ಯ-ಬಜ್ರಾಚಾರ್ಯ ಕುಲದ ಕುಮಾರಿಯ ದೇಹದಲ್ಲಿ ತಾನು ನೆಲೆಸುವುದಾಗಿಯೂ, ಅವಳನ್ನು ಹುಡುಕಿ ತಂದು ಪೂಜಿಸಬೇಕೆಂದೂ ತಿಳಿಸುತ್ತಾಳೆ.


(ಸಜನಿ ಶಾಕ್ಯ)
ದೇವಿ ನೆಲೆಸಬಹುದಾದ ಕುಮಾರಿಯನ್ನು ಆರಿಸುವುದೊಂದು ದೀರ್ಘ ಪ್ರಕ್ರಿಯೆ. ನೇವಾರಿ ಕುಲದ ಶಾಕ್ಯ ಅಥವಾ ಬಜ್ರಾಚಾರ್ಯ ಹೆಣ್ಣುಮಕ್ಕಳಷ್ಟೇ ಅದಕ್ಕೆ ಆಯ್ಕೆಯಾಗುವವರು. ಶಾಕ್ಯರು ಬೌದ್ಧರು, ಅದು ಬುದ್ಧನ ಜನ್ಮಕುಲ. ಕುಮಾರಿಯಾಗಿ ಆಯ್ಕೆಯಾಗುವುದು ಬಲು ಹೆಮ್ಮೆಯ, ಪವಿತ್ರ ವಿಷಯ. ಹಾಗಾಗಿ ತಮ್ಮ ಮಗಳನ್ನು ಕುಮಾರಿಯನ್ನಾಗಿಸಲು ತಂದೆತಾಯಿಯರು ಪೈಪೋಟಿ ನಡೆಸುತ್ತಾರೆ. ಕುಮಾರಿಯ ಹುಡುಕಾಟ ಶುರುವಾಗಿದೆಯೆಂದು ತಿಳಿದದ್ದೇ ಪಾಲಕರು ತಮ್ಮ ಹೆಣ್ಣುಮಕ್ಕಳ ಜಾತಕ ಸಲ್ಲಿಸುತ್ತಾರೆ. ಈ ಮೊದಲೇ ಆಗಿಹೋದ ಕುಮಾರಿ ಕುಟುಂಬಗಳಲ್ಲಿ ಹುಡುಗಿಯರಿದ್ದರೆ ಜಾತಕ ಕೇಳಿ ಪಡೆಯುವುದೂ ಇದೆ. ಕನಸಿನಲ್ಲಿ ಕೆಂಪು ಸರ್ಪ ಕಂಡ ಶಾಕ್ಯ-ಬಜ್ರಾಚಾರ್ಯ ಬಸುರಿ ಹೆಂಗಸಿಗೆ ಹುಟ್ಟುವ ಮಗು ಕುಮಾರಿ ಆಗಲು ಯೋಗ್ಯವೆಂಬ ನಂಬಿಕೆಯೂ ಇದೆ. ರಾಜರ ಕುಮಾರಿಯಾಗಲು ಮೊದಲೆಲ್ಲ ರಾಜರ ಜಾತಕದೊಂದಿಗೆ ಅವಳದೂ ತಾಳೆಯಾಗುವುದು ಅವಶ್ಯವಿತ್ತು. ಅವಳ ಮನೆಯವರೂ ರಾಜನಿಷ್ಠರಾಗಿರಬೇಕಿತ್ತು. ಕುಮಾರಿಯರ ಆಯ್ಕೆಯನ್ನು ಐದು ಬಜ್ರಾಚಾರ್ಯ ಬೌದ್ಧ ಭಿಕ್ಕುಗಳು, ರಾಜಪುರೋಹಿತರು, ದುರ್ಗಾದೇವಿಯ ಮುಖ್ಯ ಪುರೋಹಿತರು ಮಾಡುತ್ತಿದ್ದರು. ರಾಣಿ ಮತ್ತು ಅಂತಃಪುರ ಪರಿವಾರದವರು ಹುಡುಗಿಯ ಪರೀಕ್ಷೆ ಮಾಡುತ್ತಿದ್ದರು. ಈಗ ಮುಖ್ಯ ಪುರೋಹಿತರ ಪತ್ನಿ ಮತ್ತಿತರರು ಪರೀಕ್ಷಿಸುತ್ತಾರೆ.

ಆಯ್ಕೆಯು ಇಪ್ಪತ್ತೊಂದು ದಿನದ ಪ್ರಕ್ರಿಯೆ. ಮೂವರು ಅಂತಿಮ ಹಂತಕ್ಕೆ ಆಯ್ಕೆಯಾಗುತ್ತಾರೆ. ಕುಮಾರಿಯಾಗಲು ಮೂವತ್ತೆರಡು ಗುಣ ಕೂಡಿ ಬರಬೇಕು. ಹುಡುಗಿಯರ ಮೈಮೇಲೆ ಒಂದೂ ಕಲೆಯಿರಬಾರದು. ಎಲ್ಲ ಹಲ್ಲೂ ಇರಬೇಕು. ಉತ್ತಮ ಆರೋಗ್ಯವಿರಬೇಕು. ಶಂಖದಂತಹ ಕುತ್ತಿಗೆ, ಆಲದ ಮರದಂತೆ ದೇಹ, ಗೋವಿನಂತೆ ಕಣ್ಣುರೆಪ್ಪೆ, ಬಾತುವಿನಂತೆ ಮೃದುವಾದ ಆದರೆ ಸ್ಪಷ್ಟವಾದ ಧ್ವನಿಯಿರಬೇಕು. ಕೂದಲು ಮತ್ತು ಕಣ್ರೆಪ್ಪೆ ಕಪ್ಪಾಗಿರಬೇಕು. ಕೋಮಲ ಹಸ್ತಗಳಿರಬೇಕು. ಅವಳ ಧೈರ್ಯ ಪರೀಕ್ಷಿಸಲು ಕೈಯಲ್ಲಿ ಧಾನ್ಯ ಹಿಡಿದು ನಿಲ್ಲಲು ಹೇಳಿದಾಗ ಅಳದೆ, ಚೆಲ್ಲದೆ, ಬೇಸರಿಸದೆ ನಿಲ್ಲಬೇಕು, ಮುಖ ಕೆಂಪಾಗಬೇಕು. ಕೊನೆಗೆ ದುರ್ಗಾಪೂಜೆಯ ಕಾಳರಾತ್ರಿಯ ದಿನ, ದೇವಿಗೆ ಕಡಿದ ನೂರಾಎಂಟು ಎಮ್ಮೆ, ಕುರಿಗಳ ತಲೆಯ ನಡುವೆ, ವೇಷದ ಮುಖವಾಡಗಳ ನಡುವೆ ಹೆದರದೆ ಇರಬೇಕು! ಅಲ್ಲೇ ಒಂದು ರಾತ್ರಿ ನಿದ್ರಿಸಿ ಕಳೆಯಬೇಕು! ಇಷ್ಟೆಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಒಬ್ಬಳು ಕುಮಾರಿಯಾಗಿ ಆಯ್ಕೆಯಾಗುತ್ತಾಳೆ. ಪ್ರಾರ್ಥನೆ, ಪೂಜೆ, ತಾಂತ್ರಿಕ ಆಚರಣೆಗಳ ಬಳಿಕ ದೇವಿ ಆವಾಹನೆಯಾಗುವಳೆಂಬ ನಂಬಿಕೆಯಿದೆ.

ಋತುಮತಿಯಾಗುವವರೆಗೆ ಅವಳು ದೇವಿಯ ವೇಷ ಧರಿಸಬೇಕು. ನಂತರ ಬ್ರಹ್ಮಚಾರಿಣಿಯಾಗಿ ಪವಿತ್ರ ಜೀವನ ನಡೆಸಬೇಕು. ಪ್ರತಿಯಾಗಿ ಸರ್ಕಾರ ಸಣ್ಣ ಮೊತ್ತದ ಮಾಸಿಕ ಗೌರವಧನ ಕೊಡುತ್ತದೆ.

ಮಿಕ್ಕು ಮೀರಿ ಹೋದವರು

ಕುಮಾರಿಯನ್ನು ಆರಾಧಿಸುವ ಲಕ್ಷಾಂತರ ಜನರಿರುವಂತೆ ವಿರೋಧಿಸುವವರೂ ಇದ್ದಾರೆ. ನೇಪಾಳಿ ಮಹಿಳಾ ಪುನರ್ವಸತಿ ಕೇಂದ್ರದ ಕಾರ್ಯಕರ್ತೆಯರು ಈ ಪದ್ಧತಿಯನ್ನು ವಿರೋಧಿಸಿದರು. ನೇಪಾಳವು ಪ್ರಜಾಪ್ರಭುತ್ವ ದೇಶವಾದ ಮೇಲೂ ಅದು ಮುಂದುವರೆಯುವುದು ಸಲ್ಲದೆಂದು ಅವರ ವಾದ. ಆದರೆ ಮಾಜಿ ಕುಮಾರಿ ಮತೀನಾ ಶಾಕ್ಯಳ ತಂದೆಯೂ ಸೇರಿದಂತೆ ಹಲವರು, ‘ಅದು ನೇಪಾಳದ ಸಾಂಸ್ಕೃತಿಕ ಅಸ್ಮಿತೆ. ಸರ್ಕಾರಗಳು ಮುಂದುವರೆಸಬೇಕು’ ಎಂದು ಪಟ್ಟು ಹಿಡಿದರು. ಪ್ರಕರಣ ನೇಪಾಳದ ಸರ್ವೋಚ್ಛ ನ್ಯಾಯಾಲಯದವರೆಗೂ ಹೋಯಿತು. ಕುಮಾರಿಯರ ನೇಮಕವು ‘ಬಾಲಕಾರ್ಮಿಕ’ ಪದ್ಧತಿಯಾಗುವುದಿಲ್ಲ; ಅದು ಹುಡುಗಿಯ ಸ್ವಾತಂತ್ರ್ಯಕ್ಕೆ ಅಡ್ಡಿ ತರುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಕುಮಾರಿಯರ ಶಿಕ್ಷಣ ಹಕ್ಕು ಆಧಾರದ ಮೇಲೆ ಸಂಘಸಂಸ್ಥೆಗಳು ನ್ಯಾಯಾಲಯಕ್ಕೆ ಹೋದವು. ಕುಮಾರಿಯರಿಗೆ ಕಡ್ಡಾಯ ಶಿಕ್ಷಣ ಕೊಡಬೇಕು ಎಂದು  ನ್ಯಾಯಾಲಯದ ನಿರ್ದೇಶನ ಬಂತು. ಈಗ ಕುಮಾರಿ ಘರ್‌ಗೇ ಶಿಕ್ಷಕರು ಬಂದು ಪಾಠ ಹೇಳುತ್ತಾರೆ, ಅಲ್ಲಿಯೇ ಪರೀಕ್ಷೆ ಬರೆಸುತ್ತಾರೆ.

1980ರಲ್ಲಿ ಹುಟ್ಟಿದ ರಶ್ಮಿಲಾ ಶಾಕ್ಯ ನಾಲ್ಕು ವರ್ಷದವಳಿದ್ದಾಗ ರಾಜರ ಕುಮಾರಿಯಾದಳು. ಹನ್ನೊಂದು ವರ್ಷ ತುಂಬಿದಾಗ ದೊಡ್ಡವಳಾಗಿ ಮನೆಗೆ ಬಂದಳು. ನಂತರ ವಿದ್ಯಾಭ್ಯಾಸ ಮುಂದುವರೆಸಿ ಈಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾಳೆ. ಮಾಜಿ ಕುಮಾರಿಯ ಬದುಕನ್ನು ವರ್ಣಿಸುವ ‘ಫ್ರಂ ಗಾಡೆಸ್ ಟು ಮಾರ್ಟಲ್, ದ ಟ್ರೂ ಲೈಫ್ ಸ್ಟೋರಿ ಆಫ್ ಎ ರಾಯಲ್ ಕುಮಾರಿ’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ. ಪ್ರಸ್ತುತ ‘ಚೈಲ್ಡ್ ವರ್ಕರ‍್ಸ್ ಇನ್ ನೇಪಾಳ್’ನ ಯೋಜನಾ ನಿರ್ದೇಶಕಿಯಾಗಿದ್ದಾಳೆ. ಕಟ್ಟುಪಾಡುಗಳನ್ನು ಮುರಿದು ಮದುವೆಯಾಗಿದ್ದಾಳೆ. ಕುಮಾರಿಯರ ಬದುಕಿನ ಸುತ್ತಮುತ್ತ ಇರುವ ನಿಗೂಢ ಕತೆಗಳನ್ನು ದೂರಪಡಿಸುವಂತೆ ತನ್ನ ನಿಜಾನುಭವಗಳನ್ನು ಬಿಚ್ಚಿಟ್ಟಿದ್ದಾಳೆ. ಶಿಕ್ಷಣ ಸಿಗದ ಬಗೆಗೆ, ಕುಮಾರಿಯಾದ ನಂತರ ಸಾಮಾನ್ಯ ಬದುಕಿಗೆ ಒಗ್ಗಿಕೊಳ್ಳುವ ಕಷ್ಟದ ಬಗೆಗೆ ಬರೆದಿದ್ದಾಳೆ. ಆದರೂ ‘ಕುಮಾರಿ’ ಸಂಪ್ರದಾಯ ನೇಪಾಳಿ ಸಂಸ್ಕೃತಿಯ ಭಾಗವೆಂದು, ಅದು ಮುಂದುವರೆಯಬೇಕೆಂದು ಆಕೆ ಭಾವಿಸಿದ್ದಾಳೆ!

ಭಕ್ತಾಪುರದ ಕುಮಾರಿಯಾಗಿದ್ದ ಸಜನಿ ಶಾಕ್ಯ ಎರಡು ವರ್ಷದವಳಿರುವಾಗ ಕುಮಾರಿಯಾದಳು. ಕುಮಾರಿ ಘರ್‌ನಲ್ಲಿ ತನ್ನ ತಾಯ್ತಂದೆಯರೊಂದಿಗೇ ಇದ್ದಳು. 2007ರಲ್ಲಿ 39 ದಿನ ಅಮೆರಿಕಕ್ಕೆ ಹೋಗಿಬಂದಳು. ಅಲ್ಲಿನ ಒಂದು ಶಾಲೆಯ ವಿದ್ಯಾರ್ಥಿಗಳೊಂದಿಗೆ ದುಭಾಷಿಗಳ ಸಹಾಯದಿಂದ ಸಂವಾದ ನಡೆಸಿದಳು. ಮಕ್ಕಳ ಪ್ರಶ್ನೆ, ಅವಳ ಉತ್ತರಗಳು ಹೀಗಿವೆ:

‘ನೀವು ಚಿಕನ್, ಮೊಟ್ಟೆ, ಮಾಂಸ ತಿನ್ನಬಹುದೇ?’,
‘ತಿನ್ನುವಂತಿಲ್ಲ’
‘ಮೀನು?’
‘ತಿನ್ನಬಹುದು’
‘ಹುಡುಗರು ಕುಮಾರಿ ಆಗಬಹುದೇ?’
‘ಇಲ್ಲ’.
‘ನಮ್ಮಂತೆ ವೀಡಿಯೋ ಗೇಮ್ ಆಡಬೇಕೆನಿಸುವುದಿಲ್ಲವೆ?’
‘ನಾನೂ ಆಡುತ್ತೇನಲ್ಲ, ನನಗೆ ಗ್ಯಾಜೆಟ್ಟುಗಳೆಂದರೆ ಇಷ್ಟ. ಕ್ಯಾಮೆರಾ ಇದೆ ನನ್ನ ಬಳಿ’.
‘ನಿಮಗೆ ದೇವರಾಗುವುದು ಇಷ್ಟವಾ?’
‘ಹ್ಞಾಂ, ಹೌದು..’

ಹೀಗೇ ಪ್ರಶ್ನೋತ್ತರ ನಡೆಯಿತು. ದೇವತೆಯೇ ಬರುವಳೆಂದು ಕುತೂಹಲಿಗಳಾಗಿದ್ದ ಮಕ್ಕಳಿಗೆ ಅವಳೂ ತಮ್ಮಂತೇ ಮನುಷ್ಯಳಂತಿರುವುದು ನೋಡಿ ನಿರಾಸೆಯಾಯಿತಂತೆ. ಸಜನಿಗೆ ವಿವಿಧ ಬಣ್ಣ, ಭಾಷೆಗಳ ಹುಡುಗ ಹುಡುಗಿಯರನ್ನು ಶಾಲೆಯಲ್ಲಿ ನೋಡಿ, ಅವರ ಭಾಷೆ ಕೇಳಿದ್ದು ಹೊಸ ಅನುಭವವಾಯಿತಂತೆ. ಆದರೆ ಸಜನಿ ಅಮೆರಿಕಕ್ಕೆ ಹೋದದ್ದು ಹಿರಿಯರಿಗೆ ಸರಿಬರಲಿಲ್ಲ. ಕುಮಾರಿ ಸ್ಥಾನದಿಂದ ಅವಳನ್ನು ತೆಗೆದುಹಾಕಿದ್ದರು. ನಂತರ ಶುದ್ಧೀಕರಣಕ್ಕೊಳಗಾಗಲು ಒಪ್ಪಿದ ಮೇಲೆ ಮತ್ತೆ ‘ದೇವತೆ’ಯಾದಳು.



ವಾಪಸಾಗುವ ದಿನ ಬೆಳಿಗ್ಗೆ ಮತ್ತೆ ಕುಮಾರಿ ಘರ್‌ನಲ್ಲಿದ್ದೆವು. ಯಾಕೆ ಹೋದೆವೋ?! ತಾಯ್ತಂದೆಯರಿಂದ ದೂರವಿದ್ದು ‘ದೇವತೆ’ಯಾಗಿ, ಮ್ಲಾನವಾಗಿ ಕುಳಿತ ಆ ಎಳಸುಮುಖದ ಚಿತ್ರ ನೋಡಿದ್ದೆವು. ಬಹುಶಃ ನಮ್ಮೊಳಗನ್ನು ಅಲ್ಲಾಡಿಸಿದ ಮುಖವನ್ನು, ಮಗುವನ್ನು ಹತ್ತಿರದಿಂದ ನೋಡಬೇಕೆಂದು ಹೋದೆವೇನೋ!? ನಾವಲ್ಲಿ ನಿಂತಾಗ ತಮ್ಮ ಮಗುವಿನೊಂದಿಗೆ ಒಂದು ಜೋಡಿ ಬಂತು. ಅವರ ಬಳಿ ಫೈವ್‌ಸ್ಟಾರ್ ಚಾಕೊಲೇಟ್ ಬಾರ್‌ಗಳಿದ್ದವು. ಕುಮಾರಿಗೆ ನೈವೇದ್ಯ, ಕಾಣಿಕೆಯಾಗಿ ಚಾಕೊಲೇಟ್ ಕೊಡುವರಂತೆ. ಪರವಾಗಿಲ್ಲ, ನಮ್ಮದೇ ಸೃಷ್ಟಿಯಾದ ದೇವರನ್ನು ನಮ್ಮಂತೆಯೇ ಭಾವಿಸಿದ್ದೇವೆ! ‘ನೀವು ಭಾರತದವರೇ? ಹಿಂದೂಗಳಲ್ಲವೇ? ಬನ್ನಿ ನಮ್ಮೊಡನೆ, ಕುಮಾರಿಯನ್ನು ನೋಡುವಿರಂತೆ’ ಎಂದು ಎಳೆದೇ ಬಿಟ್ಟರು. ಉಪ್ಪರಿಗೆಯ ಮೆಟ್ಟಿಲು ಹತ್ತುತ್ತಿದ್ದರೂ ಮನದಲ್ಲಿ ವಿಪರೀತ ಗೊಂದಲ. ಅಯ್ಯೋ, ಆ ಮಗುವನ್ನು ದೇವರಂತೆ ನೋಡಲು ಹೋಗುತ್ತಿರುವವರಲ್ಲ ನಾವು, ಬರಿಯ ಕುತೂಹಲಿಗಳು ಮಾತ್ರ. ಕೈಲಿ ಚಾಕಲೇಟಿಲ್ಲ, ಮಗುವಿಗೆ ಕೊಡಬೇಕಾದಂಥದೇನೂ ಇಲ್ಲ, ಕಾಲ ಬಳಿ ಹಣವಿಟ್ಟು ನಮಸ್ಕರಿಸಲು ಮನಸ್ಸಿಲ್ಲ. ಏನು ಮಾಡುವುದು?

ಏನೂ ಮಾಡಬೇಕಾಗಲಿಲ್ಲ. ಕುಮಾರಿ ಇನ್ನೂ ತಯಾರಾಗಿಲ್ಲ ಎಂಬ ಸೂಚನೆ ಬಂದು ಎಲ್ಲರೂ ಕೆಳಗಿಳಿದೆವು.

ಮೊದಲು ಸೂರ್ಯಚಂದ್ರ, ಗಾಳಿ, ಮಳೆ, ಬೆಂಕಿ, ಭೂಮಿ, ನೀರಿನಲ್ಲಿ ನಾವು ದೇವರನ್ನು ಕಂಡೆವು. ಗಿಡ, ಮರ, ಬೆಟ್ಟಗಳಲ್ಲಿ ದೇವರನ್ನು ಕಂಡೆವು. ಪ್ರಾಣಿ, ಪಕ್ಷಿಗಳ ರೂಪದಲ್ಲಿ ದೇವರನ್ನು ಕಂಡೆವು. ಕಲ್ಲು, ಮಣ್ಣಿನಲ್ಲಿ ದೇವರ ಆಕಾರ ಮಾಡಿಟ್ಟು ತೃಪ್ತಿ ಹೊಂದಿದೆವು. ಅಷ್ಟಕ್ಕೆ ತೃಪ್ತವಾಗದ ನೋಟದ ಹಸಿವು, ದೈವದ ಹಸಿವು ಮನುಷ್ಯರನ್ನೇ ದೈವವಾಗಿಸಿ ಕಂಡಿತು, ಆರಾಧಿಸಿತು. ಈ ಆಧುನಿಕ ಯುಗದಲ್ಲಿ ಯಂತ್ರಗಳ ಬಳಕೆ ಹೆಚ್ಚೆಚ್ಚು ಆದಷ್ಟೂ, ಆರಾಮವಿರಾಮಗಳ ವ್ಯಾಖ್ಯಾನ ಬದಲಾದಷ್ಟೂ ಮನುಷ್ಯಜೀವಿಗಳ ಆಧ್ಯಾತ್ಮಿಕ ಹಸಿವೆ ಹೆಚ್ಚುತ್ತಿರುವಂತಿದೆ. ಕಣ್ಣೆದುರಿನ ಆಯ್ದ ಮನುಷ್ಯರನ್ನು ದೇವರಂತೆ ನಂಬಿಬಿಡುತ್ತಿದ್ದೇವೆ. ಭಕ್ತಜನರು ಕಲ್ಲು, ಮರಗಳಂತೆ ಮನುಷ್ಯರನ್ನೂ ದೇವರಾಗಿಸಿ ನೆಮ್ಮದಿ ಪಡೆದುಬಿಡಬಹುದು. ಆದರೆ ದೇವರಾದ ಹುಲುಮಾನವಜೀವಿಯ ಗತಿ ಏನು? ಬುದ್ಧ ಹುಟ್ಟಿದ ನಾಡಿನಲ್ಲೂ ಭಕ್ತಿಯ ಅಭಿವ್ಯಕ್ತಿ ಒಳಚಲನೆಯಾಗದೇ ಹೊರ ಆಡಂಬರವಾಗುತ್ತಿರುವುದು ಏಕೆ? ಇದು ಮನುಷ್ಯ ಮನದ ದೌರ್ಬಲ್ಯವೋ, ಧರ್ಮಗಳ ಸೋಲೋ? ಇಂಥವೇ ಮೊದಲಾದ ಸಂಕಟದ ಪ್ರಶ್ನೆಗಳ ಹೊತ್ತು ಕುಮಾರಿ ಮನೆಯಿಂದ ಹೊರಬಂದೆವು.

ಹಿಮಕಣಿವೆಯೊಳಗೆ, ಭೂಮಿಯ ಆಳ ಕಮರಿಗಳೊಳಗೆ, ಪರ್ವತಾಗ್ರಗಳ ಮೇಲೆ, ಇನ್ನೂ ಲೋಕವರಿಯದ ಎಷ್ಟೆಷ್ಟು ಹಸಿ, ಬಿಸಿ ಸಂಕಟಗಳು ತುಂಬಿಕೊಂಡಿವೆಯೋ?!

ಓ ಗೌರೀಶಂಕರವೇ, ನೀನೇ ಹೇಳಬೇಕು..




3 comments:

  1. ಅಕ್ಕ, ಸುಧಾ ತೆಗೆದುಕೊಂಡು ಓದುತ್ತೇನೆ. ನೀವು ಮಂಡ್ಯದಲ್ಲಿ ಹೇಳುವಾಗಲೇ ನನಗೆ ಕುತೂಹಲ ಹುಟ್ಟಿತ್ತು. ಯಾವಾಗ ಭೂಮಿ ಬಳಗಕ್ಕೆ ಅಕ್ಕ ಬರಹ ಕಳುಹಿಸುತ್ತಾರೆ ಎಂದು. ಮಂಜುಳ

    ReplyDelete
  2. Very well researched article. While it is sad that such a practice still continues, it is no surprise at all. You raise some questions towards the end of the article. But you seem to have left the more pertinent one for our times: practices as identities. Now a days, many of these kinds of regressive practices are being followed not because of any spiritual yearning or as symbols of devotion. Often times, these are just (hopefully losing) battles for maintaining their identities.

    ReplyDelete
  3. ನೇಪಾಳದ ಕುಮಾರಿಯರ ಬಗ್ಗೆ ಡಾ.ಎಚ್ ಎಸ್ ಅನುಪಮಾ ಅವರು ತಮ್ಮ ‘ಭೂಮಿಬಳಗ’ ಬ್ಲಾಗ್, ನಲ್ಲಿ ಪ್ರಕಟಿಸಿರುವ ಲೇಖನವು, ಮೌಢ್ಯದ ಬಿತ್ತನೆ-ಪೋಷಣೆಗಳು ಎಲ್ಲಿ , ಹೇಗೆ ನಡೆಯುತ್ತಿವೆ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಅವರು ನೇಪಾಳದಲ್ಲಿ ಕುಮಾರಿ ದೇವಿಯನ್ನು ನೋಡಲು ಹೋದಾಗ ದೇವಿಯೆಂದು ಪೂಜಿಸಲ್ಪಡುವ ಆ ಹುಡುಗಿಯನ್ನು ಭೇಟಿಮಾಡಲು ಸಾಧ್ಯವಾಗಲಿಲ್ಲವೆಂದು ಹೇಳಿದ್ದಾರೆ. ಹಾಗಿದ್ದರೂ ಆ ಮಗುವಿನ ತಾಯಿ-ತಂದೆಯರನ್ನು ಸಂಪರ್ಕಿಸಿ ಅವರ ವಯಸ್ಸು, ವಿದ್ಯಾಭ್ಯಾಸ ಮಟ್ಟ, ಕುಟುಂಬದ ಆರ್ಥಿಕ ಸ್ಥಿತಿಗತಿ, ಮತ್ತು ಹಿನ್ನೆಲೆಯ ಮಾಹಿತಿಯನ್ನು ಸಂಗ್ರಹಿಸಿದ್ದರೆ ತುಂಬಾ ಉಪಯೋಗವಾಗುತ್ತಿತ್ತು.
    ನೇಪಾಳದ ಕುಮಾರಿಯರನ್ನು ಪೂಜಿಸುವಂಥ, ಜನಸಮುದಾಯದ ನಡುವೆ ಆಳವಾಗಿ ಬೇರೂರಿರುವ ಇಂಥ ಪದ್ಧತಿಗಳನ್ನು ಮಾನವಶಾಸ್ತ್ರೀಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯ. ಜೊತೆಗೆ, ಅವರ ಆವರಣವನ್ನು (ಅಂದರೆ ಕುಟುಂಬ-ಸಮಾಜವನ್ನು) ಮತ್ತು ತಾಯಿಯ ಗರ್ಭದಲ್ಲಿರುವಾಗಲೇ ಮೆದುಳಿನ ಬೆಳವಣಿಗೆಯಲ್ಲಿ ಸೇರಿಕೊಂಡು, ಭಾವನೆ-ನಂಬಿಕೆ-ಆಲೋಚನೆಗಳು ನಮ್ಮ ಅಸ್ತಿತ್ಚದ ಭಾಗವಾಗುವ ಸಾಮಾಜಿಕ ವಿದ್ಯಮಾನವನ್ನು ಕೂಡಿಸಿಕೊಂಡು ನೋಡಬೇಕಾದ್ದು ಇನ್ನೂ ಅಗತ್ಯ.
    ಭಯ, ನಂಬಿಕೆ, ಮೌಢ್ಯಾಚರಣೆ, ಎಲ್ಲವನ್ನೂ ‘ಸಂಸ್ಕೃತಿ’ಯ ಹೆಸರಿನಲ್ಲಿ ಧರ್ಮೋದ್ಯಮವನ್ನಾಗಿ ಮಾಡಿಕೊಂಡು ಲಾಭಪಡೆಯುವವರು ‘ನಮ್ಮ ಸಂಸ್ಕೃತಿ ನಮ್ಮ ಮಹಿಳೆಯರಲ್ಲಿ ಭದ್ರವಾಗಿದೆ’ ಎಂದು ಹೇಳುವ ಮಾತುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಈ ಮಾತುಗಳಲ್ಲಿ, ಅವಿಚಾರ, ನಂಬಿಕೆ, ಮೌಢ್ಯಗಳ ಬಿತ್ತನೆ ಮತ್ತು ಪೋಷಣೆ ಎಲ್ಲಿ ಆಗುತ್ತದೆ ಎಂಬ ಸ್ಪಷ್ಟತೆ ಇದೆ. ಅಂದರೆ, ಸಾಮಾಜಿಕ ಆವರಣದಲ್ಲಿರುವ ಕುಟುಂಬಗಳೊಳಗೆ ತಾಯಿ-ತಂದೆಯರಿಂದ, ಗುರು-ಹಿರಿಯರಿಂದ ಈ ಸಂಸ್ಕೃತಿಯ ‘ಬಿತ್ತನೆ-ಪೋಷಣೆ’ ಆಗುತ್ತದೆ. ಹುಟ್ಟುವ ಮಗು ಹುಟ್ಟುವಾಗಲೇ ನಿರ್ದಿಷ್ಟ ನಂಬಿಕೆ, ಮೌಲ್ಯ, ವಿಚಾರ-ಅವಿಚಾರ- ಮೌಢ್ಯಗಳ ಆವರಣದೊಳಗೆ ಹುಟ್ಟುತ್ತದೆ. ನಿರ್ವಾತದಲ್ಲಿ, ಶೂನ್ಯದಲ್ಲಿ ಹುಟ್ಟುವುದಿಲ್ಲ. ಬೆಳೆಯುತ್ತಾ ಹೋದಂತೆ ಆವರಣದಲ್ಲಿರುವ ‘ಸಂಸ್ಕೃತಿ’ಯು ಇದಕ್ಕೆ ಪೂರಕವಾಗಿದ್ದಾಗಲಂತೂ ಇವುಗಳ ಬಲವರ್ಧನೆ ಚೆನ್ನಾಗಿಯೇ ಆಗುತ್ತದೆ. ಈ ಕಾರಣಕ್ಕಾಗಿಯೇ ಧರ್ಮೋದ್ಯಮದ ವ್ಯಾಪಾರಿಗಳು ಶಿಶುವಿಹಾರ ಮತ್ತು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವುದಕ್ಕೆ ತುಂಬಾ ಮಹತ್ವಕೊಡುತ್ತಾರೆ. ಜೊತೆಗೆ ಸಮಾಜಸೇವೆಯ ಹೆಸರಿನಲ್ಲಿ ಧಾರ್ಮಿಕ ಸಂಸ್ಥೆಗಳು ನಡೆಸುವ ಶಿಕ್ಷಣಸಂಸ್ಥೆಗಳ ಸಹಯೋಗವನ್ನು ಏರ್ಪಡಿಸಿಕೊಳ್ಳುತ್ತಾರೆ. ಆಳುವ ವರ್ಗಗಳಾಗಿ ಅಲ್ಲದೆ ಆಳುವ ಪಕ್ಷ-ಸರ್ಕಾರಗಳ ಮೂಲಕ ರಾಜಕೀಯ ಶಕ್ತಿಯನ್ನು ಪಡೆದಿದ್ದಾಗಲಂತೂ ಇದನ್ನು ಮಾಡುವುದು ಇನ್ನೂ ಸುಲಭ. ಪಠ್ಯಪುಸ್ತಕಗಳ ರಚನೆ, ಶಿಕ್ಷಣನೀತಿ, ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲದರಮೇಲೂ ತಮ್ಮ ನಿಯಂತ್ರಣವನ್ನು ಸಾಧಿಸುತ್ತಾರೆ. ಸಮಾಜದ ವೈಷಮ್ಯಗಳಿಂದಾಗಿ ನರಳುವ ಜನಸಾಮಾನ್ಯರು ಅವರ ದಿನನಿತ್ಯದ ಸಂಕಷ್ಟಗಳಿಗೆ ಪರಿಹಾರಗಳನ್ನು ಬಾಹ್ಯಪ್ರಪಂಚದ ರಾಜಕೀಯ ಪರ್ಯಾಯಗಳಲ್ಲಿ ಹುಡುಕುವ ಬದಲು ತಮ್ಮ ವ್ಯಕ್ತಿತ್ವದೊಳಗೇ ಹುಡುಕಿಕೊಳ್ಳಬೇಕೆಂದು ಸಲಹೆ ಮಾಡುವ ಆಪ್ತಸಮಾಲೋಚಕರು, ಅಧ್ಯಾತ್ಮವಾದಿಗಳು, ದೇವಮಾನವರು, ಸದ್ಗುರುಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಇಂಥ ಆವರಣದಲ್ಲಿ ಸಿಲುಕಿರುವ ಜನರ ಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಜನರು ವಿಚಾರವಂತರಾಗಬೇಕೆಂದು, ಮೌಢ್ಯವನ್ನು ಬಿಡಬೇಕೆಂದು ವಾದಿಸುವ ಜನರ ಮಾತನ್ನು ಆಲಿಸಿಯೂ ಬಹುತೇಕಜನರು ಅವಿಚಾರವನ್ನೇ , ಮೌಢ್ಯವನ್ನೇ ಆರಿಸಿಕೊಳ್ಳುವುದಕ್ಕೆ ಕಾರಣ ಅವರಲ್ಲಿ ಚಿಕ್ಕಂದಿನಲ್ಲೇ ಬಿತ್ತನೆಯಾಗಿ, ಪೋಷಣೆಗೊಂಡಿರುವ ಭದ್ರ ಅಡಿಪಾಯ.

    ReplyDelete