ಇತ್ತೀಚೆಗೆ ಅಕ್ಟೋಬರ್ ೧೬ಕ್ಕೆ ಮತ್ತೊಂದು ವಿಶ್ವ ಆಹಾರ ದಿನ ಸರಿದು ಹೋಯಿತು. ಆಹಾರ, ಆಹಾರ ಸುರಕ್ಷೆ ಎಂಬ ಮಾತುಗಳೆಲ್ಲ ಮತ್ತೆ ಕೇಳಿಬಂದವು. ಆದರೆ ಕೆಲ ಪ್ರಶ್ನೆ ಕೇಳಿಕೊಳ್ಳದೇ ಆಹಾರ ದಿನವನ್ನು ದಾಟಲಾಗುವುದಿಲ್ಲ.
ಹಸಿರು ಕ್ರಾಂತಿಯಾಗಿರುವ, ಆಧುನಿಕ ಹಾಗೂ ಸುಧಾರಿತ ಕೃಷಿ ಪದ್ಧತಿಯಿಂದ ಅಪಾರ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆಯುತ್ತಿರುವ ಇವತ್ತಿನ ಪ್ರಪಂಚದಲ್ಲಿ ಎಲ್ಲ ಜೀವಗಳಿಗೆ ಹೊಟ್ಟೆತುಂಬ ಮೂರು ಹೊತ್ತು ಕೂಳು ಸಿಗುವ ಗ್ಯಾರಂಟಿ ಇಲ್ಲದಿರುವುದು ಏಕೆ? ದೇಶದ ಆಹಾರ ಸುರಕ್ಷೆಗಾಗಿ ಗೋದಾಮುಗಳಲ್ಲಿ ಸಂಗ್ರಹಿಸಲಾದ ಟನ್ನುಗಟ್ಟಲೆ ಆಹಾರ ಧಾನ್ಯಗಳು ಇಲಿ ಹೆಗ್ಗಣಗಳ ಪಾಲಾದರೂ ದೇಶದಲ್ಲಿ ಪ್ರತಿದಿನ ೩೦೦೦ ಮಕ್ಕಳು ಹಸಿವಿನಿಂದ ಸಾಯುವಂತಾಗಿರುವುದು ಏಕೆ? ಸೂಪರ್ ಪವರ್ ಆಗಲು ಇನ್ನೊಂದೇ ಮೆಟ್ಟಿಲು ಹತ್ತಬೇಕಿರುವ ಭಾರತದ ಕೊನೆಯ ಮೆಟ್ಟಿಲು ಯಾವುದು - ಹಸಿರು ಕ್ರಾಂತಿ ಅಥವಾ ಹಸಿದವರ ಕ್ರಾಂತಿ?
ಹೀಗಾದರೂ ಹೇಳಿ, ಹಾಗಾದರೂ ಹೇಳಿ, ವಾಸ್ತವವೆಂದರೆ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಹಸಿದವರಿರುವ ರಾಷ್ಟ್ರ. ಇದು ರಾಷ್ಟ್ರೀಯ ಅವಮಾನ. ಅದರ ವಿಪರ್ಯಾಸ ಹೀಗಿದೆ:
೨೦೧೨ರ ಏಪ್ರಿಲ್‌ನಲ್ಲಿ ಭಾರತೀಯ ಆಹಾರ ನಿಗಮ ಸರ್ಕಾರಕ್ಕೆ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ನೀಡುವ ಆಹಾರ ಹೆಚ್ಚಿಸದಿದ್ದರೆ ಸಂಗ್ರಹಾಗಾರದ ಧಾನ್ಯ ಹುಳಿತು ಹಾಳಾಗುತ್ತವೆ ಎಂದು ಎಚ್ಚರಿಸಿತು. ಆ ವರ್ಷ ದಾಖಲೆಯೆಂಬಷ್ಟು ೭೫೦ ಲಕ್ಷ ಟನ್ ಆಹಾರದ ದಾಸ್ತಾನು ಕೇಂದ್ರ ಮಳಿಗೆಗಳಲ್ಲೇ ಆಗಿತ್ತು. ಅದು ಹಿಂದಿನ ವರ್ಷಕ್ಕಿಂತ ಒಂದು ಲಕ್ಷ ಟನ್ ಹೆಚ್ಚು. ಅದರಲ್ಲೂ ಪಂಜಾಬ್, ಹರ‍್ಯಾನಾ, ಮಧ್ಯಪ್ರದೇಶಗಳಲ್ಲಿ ಸಂಗ್ರಹಿಸಿಡಲು ಜಾಗವಿಲ್ಲದೆ ಗೋಧಿಯನ್ನು ತೆರೆದ ಬಯಲಿನಲ್ಲಿ ಟಾರ್ಪಾಲಿನಡಿ ಇಡಲಾಯಿತು. ಜೂನ್ ತಿಂಗಳ ಮಾನ್ಸೂನ್ ಬಂದರೆ ತೆರೆದ ಬಯಲಿನ ೨೩೧.೮ ಲಕ್ಷ ಟನ್ ಆಹಾರ ಮಳೆಗೆ ಆಹುತಿಯಾಗಬಹುದು. ಎಂದೇ ಆ ಭಾರೀ ದಾಸ್ತಾನನ್ನು ಪಿಡಿಎಸ್ ಮೂಲಕ ರಾಜ್ಯಗಳಿಗೆ ಹಂಚಿಬಿಡಿ ಎಂದು ನಿಗಮ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ ತಾನೇ ರೂಪಿಸಿದ ಆಹಾರ ನೀತಿನಿಯಮಾವಳಿಯ ತೊಡಕಿಗೆ ಸಿಲುಕಿದ ಸರ್ಕಾರ ಬಾಸ್ಮತಿಯಲ್ಲದ ಅಕ್ಕಿಯ ರಫ್ತಿಗಷ್ಟೇ ಅನುಮತಿ ನೀಡಿತು. ಉಳಿದ ಲಕ್ಷಾಂತರ ಟನ್ ಆಹಾರ ಏನಾಯಿತು? ದೇವರಿಗೂ ಗೊತ್ತಾಗದೇ ಹೋಯಿತು.
ಅದೇ ವರ್ಷ ಭಾರತದ ಜನಸಂಖ್ಯೆಯ ೨೩ ಕೋಟಿ ಜನ, ಇಡೀ ಜಗತ್ತಿನ ಹಸಿದವರಲ್ಲಿ ಮೂರನೇ ಒಂದು ಭಾಗ ಅರೆಹೊಟ್ಟೆಯಲ್ಲಿ ಬದುಕಿದರು. ಹುಟ್ಟಿದ ಮಕ್ಕಳಲ್ಲಿ ೩೦% ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದವು. ೫೬% ಮಹಿಳೆಯರು ರಕ್ತಹೀನತೆಯಿಂದ ನರಳಿದರು. ಭಾರತದ ಪರಿಸ್ಥಿತಿ ನೇಪಾಳ, ಪಾಕಿಸ್ತಾನ, ಸೂಡಾನಿಗಿಂತ ಹೀನಾಯವಾಗಿತ್ತು. ವಿಶ್ವದ ಅಗ್ರಗಣ್ಯ ೮೦ ಹಸಿದ ದೇಶಗಳಲ್ಲಿ ಭಾರತ ೬೮ನೇ ಸ್ಥಾನದಲ್ಲಿತ್ತು.
ಇದು ಸೂಪರ್ ಪವರ್ ಆಗಹೊರಟ ಭಾರತದ ವಿಪರ್ಯಾಸ.
ಆಚಾರವಿಲ್ಲದ ನಾಲಿಗೆ
ಇತ್ತೀಚೆಗೆ ಒಂದು ಮದುವೆಗೆ ಹೋಗಿ ಬಂದ ಬಂಧುವೊಬ್ಬರು ಅವತ್ತಿನ ಊಟೋಪಚಾರಗಳ ವೈಭವ ವರ್ಣಿಸುತ್ತ ‘ಬಹುಶಃ ಹುಡುಗಿ ಅಪ್ಪ ಅಡಿಗೆಯವರ ಹತ್ರ ನಿಮ್ಗೆ ಏನೇನ್ ಮಾಡ್ಲಿಕ್ಕೆ ಬರುತ್ತೋ ಅದನೆಲ್ಲ ಮಾಡ್ಬಿಡಿ ಅಂದಿರಬೇಕು’ ಎಂದರು. ಅಷ್ಟು ಥರಹೇವಾರಿ ತಿನಿಸುಗಳಿದ್ದುವಂತೆ. ಅರೆವಾಸಿ ಬಡಿಸಿದ್ದನ್ನು ಅಲ್ಲಲ್ಲೇ ಒತ್ತರಿಸಿ, ಮತ್ತೆ ಬಂದದ್ದನ್ನೆಲ್ಲ ಚೂರುಚೂರೇ ರುಚಿ ನೋಡಿ, ಉಂಡೆದ್ದರೂ ತುಂಬಿಕೊಂಡಿದ್ದ ಎಲೆಗಳನ್ನು ಅವರು ಬಣ್ಣಿಸುತ್ತಿದ್ದರು. ಉಂಡಷ್ಟೇ ಹೊರಚೆಲ್ಲಿರಬಹುದು, ನಾಯಿಹಂದಿಗಳು ಕಚ್ಚಾಡದೇ ಹೊಟ್ಟೆ ತುಂಬ ಉಣ್ಣುವಷ್ಟು ಬಿಸಾಡಿರಬಹುದೆಂದು ಅವರ ಮಾತಿನಿಂದ ಊಹಿಸಿದೆವು.
ಇದು ವಿಪರ್ಯಾಸಗಳ ಭಾರತ. ಒಂದು ಕಡೆ ಉಂಡು ತಿಂದು ಸುಖವಾಗಿರುವವರಿಗೆ ತಿನ್ನಲಾಗದಷ್ಟು ಬಡಿಸಿ ಚೆಲ್ಲುವುದು; ಮತ್ತೊಂದೆಡೆ ಅದೇ ಛತ್ರಕ್ಕೆ ಬಂದು, ಹೊಟ್ಟೆಗಿಲ್ಲದವರು ಸಿಲವಾರು ತಾಟು ಹಿಡಿದು ಬೇಡತೊಡಗಿದರೆ ಅವರನ್ನು ಓಡಿಸುವುದು. ಸಿರಿವಂತರ ಖಯಾಲಿ ಒಂದುಕಡೆಯಾದರೆ, ಕೆಳಮಧ್ಯಮ ವರ್ಗದವರು ಸಾಲ ಮಾಡಿಯಾದರೂ ಮದುವೆಯೆಂದರೆ ತಮ್ಮ ‘ಶಕ್ತಿಮೀರಿ’ ಖರ್ಚು ಮಾಡುವುದನ್ನು ನೋಡಬಹುದು. ಖರ್ಚಿನ ಬಹುಪಾಲು ವರದಕ್ಷಿಣೆ-ಬಂಗಾರಕ್ಕೆ ಹೋದರೆ, ಮಿಕ್ಕದ್ದು ಊಟೋಪಚಾರಕ್ಕೆ. ‘ಯಾರ‍್ಯಾರೋ ಬಂದು ಊಟ ಮಾಡಿ ಹೋದರೆ’ ಎಂಬ ಭಯದಲ್ಲಿ ಊಟ ಹಾಕುವವರು ಚಡಪಡಿಸುತ್ತಿರುತ್ತಾರೆ. ಯಾರ‍್ಯಾರೋ ಎಂದರೆ ಯಾರು? ‘ನಮ್ಮವರಲ್ಲ’ದವರು. ಅನ್ಯ ಜಾತಿ/ಭಾಷೆ/ಊರು/ಧರ್ಮ/ವರ್ಗದ ಅಪರಿಚಿತರು. ಆದರೆ ಯಾರು ತಿಂದರೂ, ಯಾರು ಮಾಡಿದ್ದು ತಿಂದರೂ ಅದು ಜೀರ್ಣವಾಗಿ ರಕ್ತಕ್ಕೆ ಶಕ್ತಿಯಾಗಿ ಸೇರುವುದೊಂದು ವಿಸ್ಮಯವಲ್ಲವೇ?
ಬೆಂಗಳೂರು ನಗರ ಒಂದರಲ್ಲೇ ೫೦೦ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ. ವರ್ಷದಲ್ಲಿ ೧೨೦-೧೫೦ ದಿನ ಅಲ್ಲಿ ಏನಾದರೂ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಸಮೀಕ್ಷಾ ವರದಿ ಪ್ರಕಟವಾಯಿತು. ಅದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ೨೦೧೨ರಲ್ಲಿ ನಡೆಸಿದ ಸಮೀಕ್ಷೆ. ಅದರ ಪ್ರಕಾರ ಆ ವರ್ಷ ಕಲ್ಯಾಣ ಮಂಟಪಗಳ ತಟ್ಟೆಯಲ್ಲಿ ಚೆಲ್ಲಿ ಹಾಳಾದ ಆಹಾರ ೯೪೦ ಟನ್. ಇಷ್ಟು ಆಹಾರ ೨.೬ ಕೋಟಿ ಭಾರತೀಯರ ಹೊಟ್ಟೆ ತುಂಬಿಸಲು ಸಾಕು. ಇದು ಬರೀ ಕಲ್ಯಾಣ ಮಂಟಪಗಳ ಅಂಕಿಅಂಶ. ಮದುವೆಯಲ್ಲದೆ ನಡೆಸುವ ಎಷ್ಟೆಷ್ಟೋ ಸಮಾರಂಭಗಳು, ಕಾರ್ಯಕ್ರಮಗಳು, ಹೋಟೆಲುಗಳಲ್ಲಿ ಪ್ರತಿನಿತ್ಯ ಪೋಲಾಗುವ ಆಹಾರ ಇನ್ನೆಷ್ಟೋ? ಭಾರತದ ಎಲ್ಲ ನಗರಗಳಲ್ಲಿ ಸೇರಿದರೆ ಹಸಿದವರೆಷ್ಟಿದ್ದಾರೋ ಅದರ ಎರಡು ಪಟ್ಟು ಜನರಿಗಾಗುವಷ್ಟು ಆಹಾರವನ್ನು ನಾವು ಪೋಲು ಮಾಡುತ್ತಿರಬಹುದು.
ವಿಶ್ವದ ಪ್ರತಿ ಮೂರನೆಯ ಅಪೌಷ್ಟಿಕ ಮಗು ಭಾರತೀಯ. ೯೦%ಗಿಂತ ಹೆಚ್ಚು ಆದಿವಾಸಿಗಳು ಎರಡು ಹೊತ್ತು ಹೊಟ್ಟೆಯ ತುಂಬ ಉಣ್ಣದೇ ಬದುಕು ಕಳೆಯುತ್ತಾರೆ. ಹಣದುಬ್ಬರ ತೀವ್ರವಾಗಿ ಏರುತ್ತಿದೆ. ದಿನಬಳಕೆಯ ಎಲ್ಲ ಪದಾರ್ಥಗಳ ಹಾಗೇ ಆಹಾರ ದಿನಸಿಗಳ ಬೆಲೆಯೂ ಏರುತ್ತಿದೆ. ಅದು ನೇರವಾಗಿ ತಟ್ಟುವುದು ಬಡವರನ್ನು. ಈಗ ಬಡತನ ರೇಖೆ ಎಂಬ ಪಾರಿಭಾಷಿಕ ಪದವನ್ನು ಹಸಿವಿನ ರೇಖೆ ಎಂದು ಬದಲಿಸಿಕೊಳ್ಳಬೇಕಿದೆ. ಏಕೆಂದರೆ ಬಡವರಿಗಿಂತ ಹೆಚ್ಚು ಹಸಿದವರಿರುವ ದೇಶವಿದು. ಇಲ್ಲಿ ಸರ್ಕಾರದ ಇಚ್ಛೆಗನುಗುಣವಾಗಿ ಬಡತನ ರೇಖೆ ಮೇಲೆ ಕೆಳಗೆ ಹತ್ತಿಳಿಯುತ್ತಿರುತ್ತದೆ.
ಹೀಗಿರುವಾಗ ಯಾವುದೇ ರೂಪದಲ್ಲಿ ಆಹಾರ ಪೋಲು ಹಸಿದವರ ನಾಡಿನಲ್ಲಿ ಅಪರಾಧ. ಹೊಟ್ಟೆ ಉಂಡು ಬಿರಿಯುವಷ್ಟಾಗಿ ಚೆಲ್ಲುವುದು ಆಚಾರವಿಲ್ಲದ ನಾಲಿಗೆಯ ಸೂಚಕ. ಹೊಟ್ಟೆ ತುಂಬಿದ ಮೇಲೂ ತಿನ್ನುವ ಎರಡು ತುತ್ತು ಮತ್ಯಾರದೋ ಎರಡು ತುತ್ತನ್ನು ಕಸಿಯುವುದಿಲ್ಲವೆ? ಬಿರಿಯುವಷ್ಟು ಉಣ್ಣುವುದನ್ನು, ಚೆಲ್ಲುವಷ್ಟು ಬಡಿಸುವುದನ್ನು ನಿಲ್ಲಿಸಿದರೆ ದೇಶದ ಆರೋಗ್ಯ ಸುಧಾರಿಸಬಹುದಲ್ಲವೆ?
ಕೆ. ವಿ. ಥಾಮಸ್ ಕೇಂದ್ರ ಆಹಾರ ಸಚಿವರಾಗಿದ್ದಾಗ ಮದುವೆಯ ಅತಿಥಿಗಳು ಹಾಗೂ ಆಹಾರ ತಯಾರಿ ಪಟ್ಟಿ ಮೇಲೆ ಮಿತಿ ಹೇರುವ ಕುರಿತು ಚಿಂತಿಸಿದ್ದರು. ಅದು ಕಾರ್ಯಗತವಾಗಲಿಲ್ಲ. ಆದರೆ ಇದು ಕಾನೂನಿನಿಂದ ತಿದ್ದಬಹುದಾದ ಕ್ರಿಯೆಯಲ್ಲ. ಆಹಾರ ಪೋಲು ಅಪರಾಧ ಎಂಬ ಅರಿವು ತಿನ್ನುವವನಲ್ಲಿ ಮೂಡಬೇಕು. ಅನ್ನದಾನ ಎಂದರೆ ಸ್ವಜಾತಿ/ವರ್ಗದವರಿಗೆ ಉಣಿಸುವ ಭೂರಿಭೋಜನ ಎಂಬ ಕಾನ್ಸೆಪ್ಟ್ ಮರೆಯಾಗಬೇಕು. ನಮ್ಮ ಆಧ್ಯಾತ್ಮ ಗುರುಗಳು ಇತ್ತ ಚಿತ್ತ ಹಾಯಿಸಬೇಕು.
ಎಲ್ಲಾ ಧರ್ಮಗಳೂ ದಾನದ ಕುರಿತು ಹೇಳುತ್ತವೆ. ವಿದೇಶಗಳಲ್ಲಿ ಈ ಪದ್ಧತಿಯಿದೆಯೋ ಇಲ್ಲವೋ, ಆದರೆ ನಮ್ಮ ನೆಲದಲ್ಲಿ ದಾಸೋಹ, ಅನ್ನದಾನ ಕಲ್ಪನೆಯನ್ನು ಪೋಷಿಸಿಕೊಂಡುಬಂದವು ಧರ್ಮಗಳು. ಬಹಳಷ್ಟು ದೇವಳ, ಮಠಗಳು ನಿತ್ಯ ದಾಸೋಹ ನಡೆಸಿಕೊಂಡು ಬಂದಿವೆ. ಆದರೆ ಅಲ್ಲೂ ಮನುಷ್ಯ ಮನಸ್ಸಿನ ದುಷ್ಟತನವಾದ ಪಂಕ್ತಿಭೇದ ಜಾರಿಯಲ್ಲಿದೆ. ಆಧುನಿಕ ಧರ್ಮಗುರುಗಳಾದರೋ ತುಂಬ ಶ್ರೀಮಂತರು. ಎಸಿ ಕಾರಿನಲ್ಲಿ ಪರಿವಾರದ ಬೆಂಗಾವಲಿನೊಡನೆ ಓಡಾಡುವರು. ಲೆಕ್ಕಕ್ಕೆ ಸಿಗದ ಭಕ್ತರ ಹಣವೆಲ್ಲ ಅವರ ಪಾದಕ್ಕೇ ಬಂದು ಸುರಿಯುವುದರಿಂದ ಅವರು ಸುಗ್ಗಿ ಕಾಲದಲ್ಲಿ ರೈತರ ಹೊಲಗಳಿಗೆ ತಿರುಗಬೇಕಿಲ್ಲ. ಆದರೆ ಅವರಿಗೆ ‘ವಿಶ್ವಬಂಧುತ್ವ’ದ ಕನಸು ಸದ್ಯ ಬೀಳುವಂತೆ ಕಾಣುತ್ತಿಲ್ಲ.
ಇದಕ್ಕೆ ವಿರುದ್ಧವಾದ ಉದಾತ್ತ ಪರಂಪರೆಯೂ ನಮ್ಮ ನಡುವಿದೆ. ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಹಲವಾರು ಮಠಮಂದಿರಗಳು ನಿತ್ಯ ದಾಸೋಹ ನಡೆಸುತ್ತಿವೆ. ನಿತ್ಯ ದಾಸೋಹವನ್ನು ವ್ರತದಂತೆ ನಡೆಸಿಕೊಂಡು ಬರುತ್ತಿರುವ ಎಷ್ಟೋ ಚರಮೂರ್ತಿಗಳಿದ್ದಾರೆ. ಚಕ್ಕಡಿ, ಜೀಪುಗಳಲ್ಲಿ ಸುಗ್ಗಿ ಕಾಲ ಬಂದಾಗ ಕಣದಿಂದ ಕಣಕ್ಕೆ ತಿರುಗಿ, ಕೊಟ್ಟಷ್ಟು ದವಸ ಧಾನ್ಯದ ಭಿಕ್ಷೆ ಸ್ವೀಕರಿಸಿ, ಮಠದ ಅಂಗಳದಲ್ಲಿ ನಿತ್ಯ ದಾಸೋಹ ನಡೆಯುವಂತೆ ನೋಡಿಕೊಂಡಿದ್ದಾರೆ. ಮಠ/ದೇವಳಕ್ಕೆ ಬರುವವರು ಕಾಣಿಕೆ ಹಾಕದಿದ್ದರೂ ಪರವಾಗಿಲ್ಲ, ಒಂದು ಮುಷ್ಟಿ ದವಸವನ್ನಾದರೂ ನೀಡಬೇಕು ಎಂದು ಪ್ರವಚನದಲ್ಲಿ ಬೋಧಿಸುವ ಗುರುಗಳಿದ್ದಾರೆ.
***
ಭೂಮಿ ಬೆಳೆಯುವ ಆಹಾರ ಎಲ್ಲರಿಗೂ ಸೇರಿದ್ದು ಎನ್ನುವ ನ್ಯಾಯ ವಾಸ್ತವವಾಗಿದ್ದರೆ ಹಸಿವೆ ಎಂಬ ಪದವೇ ಇರುತ್ತಿರಲಿಲ್ಲ. ಆದರೆ ಹಸಿವಿಗೆ ಕಾರಣ ಹಸಿದ ರಾಜಕಾರಣಿಗಳು ಮತ್ತು ಹಸಿದ ಅಧಿಕಾರಿಗಳೇ ಹೊರತು ಬೇರೇನಲ್ಲ. ಅವರ ಹಸಿವಿನ ರೀತಿ ಬೇರೆಯದು ಅಷ್ಟೇ. ಭೂಮಿಯ ಒಡೆತನ ಹಾಗೂ ಅದು ಬೆಳೆಯುವ ಆಹಾರ ಧಾನ್ಯಗಳ ಮೇಲಿನ ಒಡೆತನ ಅನಾದಿಯಿಂದ ಎಲ್ಲ ಅಧಿಕಾರ ಸಂಬಂಧಗಳ ವ್ಯಾಖ್ಯಾನಿಸಿದೆ. ಯಾರ ಕೈಯಲ್ಲಿ ರೊಟ್ಟಿ ಇದೆಯೋ ಅವರ ಮಾತನ್ನು ಹಸಿದ ಮನುಷ್ಯ ಕೇಳುತ್ತಾರೆಂಬ ಗುಟ್ಟು ಭೂಮಾಲೀಕರಿಗೆ, ಆಳುವವರಿಗೆ ಗೊತ್ತಾಗಿಬಿಟ್ಟಿದೆ. ಎಂದೇ ಆಹಾರ ಆಳುವ ಒಂದು ಸಾಧನವಾಗಿ ಬಳಕೆಯಾಗಿದೆ. ಮೊದಲು ಕೇವಲ ಭೂಮಿಯ ಒಡೆಯರು ತಮ್ಮ ಸೀಮಿತ ಪ್ರದೇಶಗಳಲ್ಲಿ ಮಾಡುತ್ತಿದ್ದ ಆಹಾರ ರಾಜಕಾರಣ ಇಂದು ವಿಶ್ವವ್ಯಾಪಿಯಾಗಿದ್ದು ಅದು ರಾಷ್ಟ್ರಗಳ ಶಸ್ತ್ರಾಗಾರದ ಒಂದು ಆಯುಧವಾಗಿದೆ.
ಅಂತರರಾಷ್ಟ್ರೀಯ ಕಂಪನಿಗಳು ಆಹಾರೋತ್ಪಾದನೆಯ ಮೂಲವಾದ ಬಿತ್ತನೆ ಬೀಜಕ್ಕೇ ಕೈ ಹಾಕಿರುವುದು ಇದಕ್ಕೆ ಸಾಕ್ಷಿ. ಅವರು ಕೊಡುವ ಅಧಿಕ ಇಳುವರಿ ಬೀಜ ಮರು ಉತ್ಪಾದನೆಯ ಸಾಮರ್ಥ್ಯವಿಲ್ಲದ ಗೊಡ್ಡು ಬೀಜ. ಎಂದೇ ಪ್ರತಿಸಲವೂ ಬಿತ್ತನೆ ಸಮಯದಲ್ಲಿ ರೈತ ಅವರ ಬಳಿಯೇ ಹೋಗಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಬೀಜ ಪೂರೈಕೆಯ ನೆಪದಿಂದ ಸಮಗ್ರ ಆಹಾರ ಸರಬರಾಜು ವ್ಯವಸ್ಥೆ ಕೇವಲ ಬೆರಳೆಣಿಕೆಯಷ್ಟು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತದಲ್ಲಿ ಕೇಂದ್ರೀಕೃತವಾಗಿದೆ. ಇಡೀ ಪ್ರಪಂಚದಲ್ಲಿ ಕೇವಲ ಹತ್ತರಿಂದ ಹನ್ನೆರಡು ಕಂಪೆನಿಗಳು ಪ್ರಪಂಚದ ಆಹಾರ ಸರಬರಾಜು ವಹಿವಾಟನ್ನು ನಿಯಂತ್ರಿಸುತ್ತಿವೆ. ಅಕ್ಕಿ, ಗೋಧಿಯಿಂದ ಹಿಡಿದು ಕಾಳುಕಡ್ಡಿ ಮತ್ತು ಓಟ್‌ವರೆಗೆ; ಮಾಂಸದಿಂದ ಹಿಡಿದು ಸಾಂಬಾರ ಪದಾರ್ಥಗಳವರೆಗೆ; ಹಾಲು, ಹಣ್ಣು, ತರಕಾರಿಯಿಂದ ಸಕ್ಕರೆಯವರೆಗೆ ಪ್ರಪಂಚದ ಎಲ್ಲಾ ಬಗೆಯ, ಎಲ್ಲ ಆಹಾರ ಸಾiಗ್ರಿಗಳನ್ನು ಅವು ಬೀಜ, ಗೊಬ್ಬರ, ಮಾರುಕಟ್ಟೆ ಹೆಸರಿನಲ್ಲಿ ತಮ್ಮ ಹಿಡಿತದಲ್ಲಿರಿಸಿಕೊಂಡಿವೆ. ಆಹಾರ ಸುರಕ್ಷತೆ ಸಾಧಿಸಲು ನೀವೇ ಆಹಾರ ದವಸಧಾನ್ಯ ಬೆಳೆದುಕೊಳ್ಳುವ ಬದಲು, ಈ ಸಂಸ್ಥೆಗಳಿಂದ ಅಲ್ಪಬೆಲೆಯ ಆಹಾರವನ್ನು ಆಮದು ಮಾಡಿಕೊಳ್ಳುವುದು ಜಾಣತನವೆಂದು ಅವು ಬಡರಾಷ್ಟ್ರಗಳಿಗೆ ನಯವಂಚನೆಯ ತಿಳಿವಳಿಕೆ ನೀಡುತ್ತಿವೆ.
ಇದೂ ಒಂದು ತರಹದ ಸಮೂಹನಾಶಕ ಅಸ್ತ್ರ. ಈ ಹೊಸ ಅಸ್ತ್ರದ ಬಳಕೆ, ಅಂದರೆ ಜೀವಂತ ಬೀಜಗಳು ಮತ್ತು ಜೀವಕಣ ಸಂಪನ್ಮೂಲಗಳನ್ನು ನಾಶಪಡಿಸಿ, ಭೂಮಿಯನ್ನು ಬಂಜರು ನೆಲವನ್ನಾಗಿಸುವ ವಿನಾಶಕಾರಿ ಅಸ್ತ್ರದ ವಿರುದ್ಧ ನಾವು ನಿಗಾ ವಹಿಸಬೇಕಿದೆ.
ಈ ಬರಹ ಓದಿ ನೀವು ಮಲಗುವ ರಾತ್ರಿ ೨೩ ಕೋಟಿ ಜನ ಊಟಮಾಡದೇ ಮಲಗುತ್ತಾರೆ. ದುಂದು ಮಾಡುವವರು ಯಾರೋ? ಬೆಲೆ ತೆರಬೇಕಾದವರು ಯಾರೋ?! ನಮ್ಮಲ್ಲಿ ಉತ್ಪಾದನೆ ಸಾಕಷ್ಟಿದೆ. ಅದನ್ನು ಜನರಿಗೆ ದಾನವಾಗಿ ನಿತ್ಯ ನೀಡುತ್ತ ಅವರ ಆತ್ಮನಾಶ ಮಾಡಬೇಕೆಂದು ಹೇಳುತ್ತಿಲ್ಲ, ಬದಲಾಗಿ ನಿರಂತರ ತನ್ನ ಅನ್ನ ತಾನು ಗಳಿಸಿಕೊಳ್ಳುವ ಶಕ್ತಿಯನ್ನು, ಕೈಗೆಟುಕುವ ಬೆಲೆಯಲ್ಲಿ ಧಾನ್ಯಗಳನ್ನು ಜನರಿಗೆ ಕೊಡಬೇಕಿದೆ.
ಹಸಿರುಕ್ರಾಂತಿ, ಜೈವಿಕ ತಂತ್ರಜ್ಞಾನ, ಡಿಸೈನರ್ ಬೆಳೆ ಬೆಳೆಯಬಹುದಾದ ಈ ಕಾಲದಲ್ಲಿ ಎರಡು ಹೊತ್ತು ಅನ್ನ, ನೀರು ಎಲ್ಲರಿಗೂ ದೊರೆಯುವಂತೆ ಮಾಡುವುದು ಕಷ್ಟವೇನಲ್ಲ. ಅದು ಸಾಧ್ಯವಾಗಲು ಬೇಕಿರುವುದು ಒಂದು ಮುನ್ನೋಟವುಳ್ಳ ದೂರದೃಷ್ಟಿ ನಾಯಕತ್ವ ಹಾಗೂ ‘ಮಿಕ್ಕುವುದೆಲ್ಲ ವಿಷವೇ..’ ಎಂಬ ಬುದ್ಧಗುರುವಿನ ತತ್ವ.
No comments:
Post a Comment