Sunday, 23 November 2014

ಚಿವುಟಿದಷ್ಟೂ ಚಿಗುರು




ರೈಲು ಹತ್ತಿದ ಕ್ಷಣದಿಂದ ಕಾಮೆಂಟರಿ ಶುರುವಾಗಿತ್ತು, ಎಲ್ಲಿ ಹತ್ತಿದೆ? ಈಗ ಎಲ್ಲಿದ್ದೇನೆ? ನಿಲಿಸಿದಾಗ ಏನಾದರೂ ತಿಂದೆನೋ ಇಲ್ಲವೋ? ಹದಿನೆಂಟು ತಾಸಿನ ಪ್ರಯಾಣದಲ್ಲಿ ಏಳೆಂಟು ಕರೆ ಮಾಡಿ ವಿಚಾರಿಸಿದ್ದರು ಮಾವ. ಇಷ್ಟು ದಿನಗಳಿಂದ ಮಾತನಾಡದ ಅಪರಿಚಿತತೆಯ ಕಸಿವಿಸಿ ವಿಚಾರಣೆಯಲ್ಲಿ ಕರಗಿಹೋಯಿತು. ಆದರೆ ಅವರೇ ಕರೆಸಿಕೊಳ್ಳುವವರೆಗೂ ಬರದೇ ಉಳಿದೆನಲ್ಲ, ಅದಕ್ಕೆ ಕಾರಣ ನನ್ನ ಮರೆವೋ, ಬೌದ್ಧಿಕ ವಿಲಾಸವೋ ಅಥವಾ ಉದ್ದೇಶಪೂರ್ವಕ ಅಂತರ ಕಾಯ್ದುಕೊಳ್ಳುವಿಕೆಯೋ ಎಂಬ ಗೊಂದಲ, ಪಾಪಪ್ರಜ್ಞೆ ಕಾಡತೊಡಗಿತು.

ಅಂತೂ ಮುಂಬಯಿ ಬಂತು. ಮಾವ ಸ್ಟೇಷನ್ನಿಗೆ ಕಾರು ತಂದಿದ್ದರು. ಎಸಿ ಸೌಲಭ್ಯವಿಲ್ಲದ ಹಳೆಯ ಮಾರುತಿ ಕಾರು. ಅವರಿಗೆ ಪಿಂಚಣಿಯಾದಾಗ ಬಂದ ಹಣದಿಂದ ಕೊಂಡದ್ದಂತೆ. ಹಳೆಯದಾದರೂ ಭಾವನಾತ್ಮಕ ಸಂಬಂಧವೆಂದು ಇಟ್ಟುಕೊಂಡಿದ್ದರು. ‘ಕಿಟಕಿ ಬಾಗಿಲೆಲ್ಲ ತೆಗೆ, ಎಸಿಗಿಂತ ಒಳ್ಳೆ ತಂಪು ಗಾಳಿ ಬೀಸುತ್ತೆ. ಆದರೆ ಗಾಳಿ ಜೊತೆ ಧೂಳು ಉಚಿತ’ ಎಂದು ನಕ್ಕರು.

ಕಾರಿನ ಭರ್ರೋ ಶಬ್ದದ ನಡುವೆಯೇ ಡ್ರೈವರನಿಗೆ ಹೇಗೆ ಹೋದರೆ ಸುರಕ್ಷಿತ, ಹೇಗೆ ಹತ್ತಿರ ಎನ್ನುತ್ತ ಚಾಲನ ಮೀಮಾಂಸೆಯಲ್ಲಿ ಮುಳುಗಿದ್ದರು. ಇಡೀ ಮುಂಬಯಿಯನ್ನು ರೈಲು ಹಳಿ ಈಸ್ಟ್ ಮತ್ತು ವೆಸ್ಟ್ ಆಗಿ ಹೇಗೆ ಇಬ್ಭಾಗಿಸಿದೆ ಎಂದು ವಿವರಿಸುತ್ತಿದ್ದರು.

ಒಂದು ಹಳೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸಿನಲ್ಲಿ ಅವರ ಮನೆ. ಹಳೆಯತನ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಮಳೆನೀರು ಕರೆಗಟ್ಟಿ ಪಾಚಿ ಹಿಡಿದ ಕಂಪೌಂಡ್ ಗೋಡೆ, ಅಲ್ಲಲ್ಲಿ ಕಾಣುವ ಬಿರುಕು, ಬಿರುಕಿನಲ್ಲಿ ಅರಳಿ ಗಿಡ, ಖಾಯಂ ಮುಚ್ಚಿದಂತಿರುವ ಮನೆ ಕಿಟಕಿಗಳು, ಮುರಿದ ಗೇಟಿನ ಸರಳು ಇವೆಲ್ಲ ಕಟ್ಟಡಕ್ಕೊಂದು ಪ್ರಾಚೀನತೆಯನ್ನು ತಂದುಕೊಟ್ಟಿದ್ದವು. ಕಾರು ಬರುವುದಕ್ಕೂ, ಒಂದು ಕರಿನಾಯಿ ಕಂಪೌಂಡ್ ಹಾರಿ ಸರ್ರನೆ ಒಳಹೋಗುವುದಕ್ಕೂ ಸರಿಯಾಯಿತು. ಸದ್ಯ, ಅದರ ಮೈಮೇಲೆ ಕಾರು ಹರಿಯಲಿಲ್ಲ. ಕಳೆದ ಬಾರಿ ಬಂದಾಗಲೂ ಈ ನಾಯಿಯಿತ್ತೆ? ಅಮ್ಮನೊಡನೆ ಯಾವಾಗಲೋ ಒಮ್ಮೆ ಬಂದಿದ್ದೆನಲ್ಲ, ಎಷ್ಟು ವರ್ಷ ಕೆಳಗೆ?

‘ನಾಯಿ ಹತ್ತನ್ನೆರೆಡು ವರ್ಷ ಬದುಕುತ್ತೆ ಅಂತಾರೆ ಅರುಂಧತಿ. ಆದರೆ ಈ ನಾಯಿಗೆ ಅದೆಷ್ಟು ವರ್ಷವಾಯ್ತೋ ಏನೋ. ಪುಟ್ಟ ತಾನು ಸಣ್ಣವನಿದ್ದಾಗಿಂದ ಇದೂ ಇದೆ ಅಂತಾನೆ. ಒಮ್ಮೆ ಯಾರೋ ಕಾರು ಹರಿಸಿ ಅದರ ಬಾಲ ಮುರಿದು ತುಂಡಾಯಿತು. ಅಷ್ಟೇ ಅಲ್ಲ, ಅದಕ್ಕೀಗ ಕಣ್ಣು ಕಾಣಲ್ಲ. ಕ್ಯಾಟರಾಕ್ಟ್. ಆದರೂ ನಮ್ಮ ಗ್ರ್ಯಾಂಡ್ ಮಾರುತಿ ಸದ್ದಿಗೆ ನಾನು ಬಂದ ಗುರುತು ಹಿಡಿದು ಗೇಟಿಗೆ ಬಂದಿದೆ. ಇಷ್ಟೊತ್ತಿಗೆ ಅದಾಗಲೇ ಒಳಹೋಗಿ ಮೆಟ್ಟಿಲು ಹತ್ತಿ ನಮ್ಮನೆ ಬಾಗಿಲೆದುರು ಇರುತ್ತೆ..’

ಕಿರಗುಡುವ ಕಬ್ಬಿಣದ ಗ್ರಿಲ್ ಷಟರ್ ಎಳೆದು ಮೆಟ್ಟಿಲೇರತೊಡಗಿದೆವು. ಲಿಫ್ಟ್ ಇಲ್ಲದ ಅಪಾರ್ಟ್‌ಮೆಂಟ್. ಹತ್ತಿಳಿದು ಹತ್ತಿಳಿದು ಸವೆದು ಸಿಮೆಂಟು ಮೆಟ್ಟಿಲು ಫಳಫಳ ಹೊಳೆಯುತ್ತಿತ್ತು. ಇಡುವ ಹೆಜ್ಜೆಗಳ ಮೇಲೆ ಗಮನ ಕೇಂದ್ರೀಕರಿಸಿ ಮಾವ ನಿಧಾನ ಹತ್ತುತ್ತಿದ್ದರು. ಒಂದು ಕಾಲೆತ್ತಿ ಮೆಟ್ಟಿಲ ಮೇಲಿಟ್ಟು ಇನ್ನೊಂದು ಕಾಲೆಳೆದು ಅದರ ಜೊತೆ ಕೂಡಿಸಿ, ಸಮತೋಲನವನ್ನು ಆವಾಹಿಸುವವರಂತೆ ಚಣ ನಿಂತು ಮುಂದಿನ ಕಾಲಿಡುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆಗೆ ನಡಿಗೆಯ ಧೈರ್ಯ ಕಳೆದುಕೊಂಡು ಮಗುವಿನಂತೆ ತೆವಳುತ್ತಿದ್ದ ಅಮ್ಮನ ಕೊನೆಯ ದಿನಗಳ ನೆನಪಾಗಿ ಉಸಿರು ಸಿಕ್ಕಿಕೊಂಡಿತು. ಇವರಿಗೂ ಅದೇ ಇರಬೇಕು.

‘ನೀ ಮುಂದೆ ಹೋಗು, ನಾ ಸೆಕೆಂಡ್ ಫ್ಲೋರ್ ಹತ್ತುದ್ರೊಳಗೆ ನೀನು ಹತ್ತು ಸಲ ಹತ್ತಿಳಿತೀ’ ಎಂದು ಸರಿದು ನಿಂತರು. ನಾಲ್ಕು ಮೆಟ್ಟಿಲೇರುವುದರಲ್ಲಿ ಎದುರೇ ನಿಂತ ಅತ್ತೆ! ಅವರ ಪಕ್ಕ ತನ್ನ ಮುರಿದ ಬಾಲ ಅಲ್ಲಾಡಿಸುತ್ತಾ ನಿಂತ ಕುರುಡು ನಾಯಿ ನನ್ನ ಸುತ್ತಮುತ್ತ ಸುಳಿದು ಮೂಸತೊಡಗಿತು.

ಅತ್ತೆ ಕೈಹಿಡಿದು ಒಳ ಕರೆದರು. ಬೆಚ್ಚನೆಯ ಹಿಡಿತ. ಮತ್ತೆ ಅಮ್ಮನ ನೆನಪು. ರಾತ್ರಿಯಿಡೀ ಪ್ರಯಾಣ ಮಾಡಿ ಬಸ್ಸಿಳಿದು, ಬೆಳಬೆಳಿಗ್ಗೆ ಮೂರು ಮೈಲು ನಡೆದು, ಕೊರೆಯುವ ಕೈಕಾಲುಗಳಲ್ಲಿ ಮನೆ ಪ್ರವೇಶಿಸಿದಾಗ ಸ್ವಾಗತಿಸುತ್ತಿದ್ದ ಅವಳ ಆಪ್ಯಾಯಮಾನ ಬೆಚ್ಚನೆಯ ಸ್ಪರ್ಶ! ಯಾವ ಸುಖಸಂಭ್ರಮಗಳನ್ನೂ ಅನುಭವಿಸದೆ ಎಷ್ಟು ಬೇಗ ಸವೆದು ಹೋದಳಲ್ಲ!

ಮನೆಯೊಳಗೆ ರೆಡ್ ಆಕ್ಸೈಡ್ ನೆಲ ಹೊಳೆಯುತ್ತಿತ್ತು. ಅತ್ತೆಯ ಕೈಚಳಕವೋ, ಮನುಷ್ಯ ವಾಸದ ಲಕ್ಷಣವೋ, ಬಿಲ್ಡಿಂಗ್ ಹೊರಗಿನಿಂದ ಕಾಣುವಷ್ಟು ಹಳತಾಗಿ ಒಳಗಿನಿಂದ ಕಾಣಲಿಲ್ಲ.

ಮುಖ ತೊಳೆದು ಬರುವುದರಲ್ಲಿ ಅತ್ತೆ ಕಾಫಿ ತಂದರು. ‘ಪುಟ್ಟನೆಲ್ಲಿ?’ ಕೇಳಿದೆ. ಅವರಿಗೆ ಮದುವೆಯಾಗಿ ಎಷ್ಟೋ ವರ್ಷದ ನಂತರ ಹುಟ್ಟಿದ ಏಕಮಾತ್ರ ಸಂತಾನ ಪುಟ್ಟ. ಅವನ ಹೆಸರು ಸೂರ್ಯ, ಆದರೆ ಕರೆದ ರೂಢಿ, ಪುಟ್ಟನೆಂಬ ಹೆಸರೇ ನಾಲಿಗೆಗೆ ಬರುತ್ತದೆ. ‘ಅವರಾಗಲೇ ಹೋಗಿಯಾಯ್ತು’ ಎಂದರು ಅತ್ತೆ.




ಮಾವ ಬಾಲ್ಕನಿಯ ಬಿಸಿಲಿಗೆ ಮುಖವೊಡ್ಡಿ ನಿಂತಿದ್ದರು. ಎಣ್ಣೆಹಚ್ಚಿದ್ದ ವಿರಳ ಬಿಳಿಕೂದಲು ಮಿರಿಮಿರಿ ಮಿಂಚುತ್ತಿದ್ದವು. ಅವರ ದೃಷ್ಟಿ ಕಣ್ಣೆದುರಿನ ಕಟ್ಟಡ, ಮರಗಳಾಚೆ ಎಲ್ಲೋ ನೆಟ್ಟಿತ್ತು. ಈ ಮಾವನಿಗೆ ತಮ್ಮ ಏಕೈಕ ತಂಗಿಯ ಮಗಳು ಇದ್ದಕ್ಕಿದ್ದಂತೆ ನೆನಪಾಗಿದ್ದು ಏಕೆ? ಬಂದು ನೋಡಿಹೋಗುವಂತೆ ಮೇಲೆಮೇಲೆ ಪತ್ರ ಬರೆದು ನನ್ನ ಕರೆಸಿಕೊಂಡದ್ದೇಕೆ? ನಿಧಾನ ಬಾಲ್ಕನಿಗೆ ನಡೆದು ಅವರ ಪಕ್ಕ ನಿಂತೆ. ಮ್ಲಾನವೋ, ಶಾಂತವೋ ತಿಳಿಯದ ಮುಖದಲ್ಲಿ ಕಿರುನಗೆ ಸುಳಿಯಿತು.

ಬಾಲ್ಕನಿಯಲ್ಲಿ ಮಣ್ಣು ತುಂಬಿದ ದೊಡ್ಡ ಟ್ರೇ, ಕುಂಡಗಳಲ್ಲಿ ಸೊಂಪಾಗಿ ಬೆಳೆದ ಕೆಂಪು ಹರಿಗೆ ಸೊಪ್ಪು. ಅತ್ತೆ ಊರಿಗೆ ಹೋದಾಗ ಬೀಜ ತಂದಿದ್ದರಂತೆ. ‘ಇದರಿಂದ ಬಹಳಷ್ಟು ಪದಾರ್ಥ ಮಾಡಿ ಉಂಡೆವು, ಈ ಹರಿಗೆ ಚಿವುಟಿದಷ್ಟೂ ಬೆಳೆಯುತ್ತದೆ. ಚಿವುಟಿದರೆ ಸಾಕು ಚಿಗುರುತ್ತದೆ. ಈಗ ಬೀಜವಾಗಲಿ ಎಂದು ಬಿಟ್ಟಿದೇವೆ, ತೆನೆಯಾಗುತ್ತಿದೆ’ ಎಂದರು ಅಲ್ಲೇ ಸುಳಿಯುತ್ತಿದ್ದ ಅತ್ತೆ.

‘ಈ ಹರಿಗೆ ಹೇಗೋ ಹಾಗೇ ಮನುಷ್ಯನಿಗೂ ಬೆಳೆಯಲಿಕ್ಕೆ ಒಂದು ಗಾಯ ಅಥವಾ ನೋವು ಬೇಕು ಅರುಂಧತಿ. ಚಿವುಟಿದಷ್ಟೂ ಚಿಗುರು, ಚಿವುಟುವುದು ನಿಲಿಸಿದರೆ ಬೀಜದ ತೆನೆ. ವಿಪರ್ಯಾಸ, ಆದರೂ ಸತ್ಯ. ಗಾಯ ನಿನ್ನ ಬೆಳೆಸುತ್ತದೆ, ಸೋಲು ಗೆಲುವಿನ ಅರಿವು ಹುಟ್ಟಿಸುತ್ತದೆ, ನಷ್ಟವಾದಾಗ ಲಾಭದ ಕುರಿತು ಚಿಂತಿಸತೊಡಗುತ್ತೀ. ಕಹಿ, ಆದರೂ ಸತ್ಯ, ನೋವೇ ನಿನ್ನ ಮೊದಲ ಗುರು..’

ಗಾಯ ನಿನ್ನ ಬೆಳೆಸುತ್ತದೆ! ಮಾವ ಕವಿಯಂತೆ ಮಾತಾಡುತ್ತಿದ್ದಾರೆ. ಕಡೆಗಾಲದಲ್ಲಿ ಅಮ್ಮ ಮಾತನಾಡುತ್ತಿದ್ದದ್ದನ್ನೇ ಆಡುತ್ತಿದ್ದಾರೆ!

‘ಒಬ್ಬಳೇ ಇರಬೇಕೆಂದಿದ್ದವಳು ಅಂತೂ ಮದುವೆಯಾದಿ ಎಂದು ತಿಳಿಯಿತು. ಯಾವ ಮನುಷ್ಯನೂ ಒಂಟಿಯಾಗಿರಲಾರ. ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸತ್ತರೂ ಗುಂಪಲ್ಲೇ ಬಾಳುವವ. ಆ ಗುಂಪೇ ಸಂಸಾರ. ಸಂಸಾರವನ್ನು ಆಳದ ಕಡಲು ಎನ್ನುತ್ತಾರೆ. ನನಗೆ ಹಾಗೆನಿಸುವುದಿಲ್ಲ. ಅದು ತಳವೇ ಇರದ, ಎಲ್ಲೆಯೇ ಇರದ ಕಡಲು. ಆ ಕಡಲೊಳಗೆ ತೇಲುವ ಚೂರುಚೂರು ನೆಲದಂತೆ ನಾವು. ನಿನ್ನಮ್ಮ ತನ್ನ ಸಂಸಾರದ ಜೊತೆಜೊತೆಗೇ ಜಗದ ಸಂಸಾರ ಕಟ್ಟಿಕೊಂಡಳು. ನೀನು ಜಗದ ಸಂಸಾರವೇ ನಿನ್ನ ಸಂಸಾರ ಎಂದುಕೊಂಡವಳು. ಅದೆಲ್ಲ ಇರಲಿ, ನಿನ್ನ ಕ್ರಾಂತಿ ಎಲ್ಲಿಗೆ ಬಂತು?’

ಅರೆ, ಅಮ್ಮನ ಬಳಿ ಇವರು ಮಾತನಾಡಿದ್ದೇ ಕಡಿಮೆ. ನನ್ನ ನೋಡಿ ಎಷ್ಟೋ ಕಾಲವಾಗಿದೆ. ಆದರೂ ಹೇಗೆ ಎಲ್ಲ ತಿಳಿದುಕೊಂಡರು? ನನ್ನ ವಿಷಯ ಎಲ್ಲಿಂದ ಶುರುಮಾಡಲಿ ಎಂದು ಯೋಚಿಸುವಾಗ ‘ಸ್ನಾನ ಮಾಡಿ ತಿಂಡಿಯೋ, ತಿಂಡಿ ತಿಂದು ಸ್ನಾನವೋ?’ ಎಂಬ ಅತ್ತೆಯ ಕೂಗು ಒಳಕರೆಯಿತು.

ಮಾವ ಎಪ್ಪತ್ತರ ಆಸುಪಾಸಿನಲ್ಲಿದ್ದಾರೆ. ಅತ್ತೆ ಅವರಿಗಿಂತ ಹತ್ತು ವರ್ಷ ಕಿರಿಯರು. ಮಾವ ದೊಡ್ಡ ಆಡಳಿತಾತ್ಮಕ ಹುದ್ದೆ ನಿಭಾಯಿಸಿದವರು, ನಾನಾ ರಾಜ್ಯ ತಿರುಗಿದವರು, ನಾನಾ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರು. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಾಲ ಶಾಲು ಹೊದೆಸಿ ಸನ್ಮಾನಿಸಿ ನಿವೃತ್ತಿ ನೀಡುವ ಜೊತೆಗೆ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಅಸ್ತಮಾಗಳನ್ನೂ ಉಡುಗೊರೆಯಾಗಿ ಕೊಟ್ಟಿತು.

‘ಮೊದಲು ನನಗೆ ಯಾವ ಕಾಯಿಲೆಯೂ ಇರಲಿಲ್ಲ. ರಿಟೈರ್ ಆಗಿ ಕೂತಾಗ ಒಂದೊಂದೇ ಬಂದವು. ಅಪ್ಪ, ಅಬ್ಬೆಗಿದ್ದ ಕಾಯಿಲೆಗಳಲ್ಲಿ ನಿಮ್ಮಮ್ಮ ವನಜಂಗೆ ಕೆಲವು, ನನಗೆ ಕೆಲವು ಬಂದವು. ಅವಳು ಬೇಗ ನೆಲದ ಋಣ ಕಳೆದುಕೊಂಡಳು. ನಾನಿನ್ನೂ ಅನುಭವಿಸುತ್ತ ಇದ್ದೇನೆ. ದಿನಕ್ಕೆ ಕನಿಷ್ಠ ಒಂದು ಡಜನ್ ಮಾತ್ರೆ ನುಂಗುತ್ತೇನೆ. ಸರ್ವೀಸ್ ಪೂರಾ ತಿರುಗಿದ್ದೆ, ರಿಟೈರ್ ಆದ್ಮೇಲೆ ಒಂದಷ್ಟು ಓದು, ಚಾರಿಟಿ ಕೆಲಸ ಮಾಡ್ಬೇಕು ಅಂದ್ಕೊಂಡಿದ್ದೆ. ಆದರೀಗ ಹೀಗೆ. ಐ ಡೋಂಟ್ ಬ್ಲೇಮ್. ಬರೀ ಗುಲಾಬಿ ಬೇಕೆಂದರೆ ಹೇಗೆ? ಅದರ ಜೊತೆ ಉದುರೋ ಎಲೆಯೂ, ಮುಳ್ಳೂ, ಕಡ್ಡಿಯೂ ಇದ್ದೇ ಇರ‍್ತಾವೆ.’

ಮಾವ ನಿಧಾನವಾಗಿ ಜಗಿಯುತ್ತ ಮಾತನಾಡುತ್ತಿದ್ದರು. ಅವರ ಪ್ರತಿ ಮಾತೂ ಗಳಿಗೆ ಬಟ್ಟಲಿನ ಕಣ್ಣಿನಿಂದ ಹನಿ ಇಳಿಯುವಂತೆ ನನ್ನೊಳಗಿಳಿಯುತ್ತಿದ್ದವು. ಮಾವ ವೈಯಕ್ತಿಕ ಅನುಭವಗಳನ್ನು ತತ್ವವಾಗಿಸುತ್ತಿದ್ದರು. ಅಮ್ಮನ ಮಾತೂ ಹೀಗೇ ಇತ್ತು. ಕಾಯಿಲೆಯಂತೆ  ತಿಳುವಳಿಕೆಯೂ ವಂಶಪಾರಂಪರ್ಯವೇ?

ಯಾಂತ್ರಿಕವಾಗಿ ಬಾಯಿಗೆ ತಿಂಡಿ ತುರುಕುತ್ತಿದ್ದ ಅತ್ತೆಯ ಬಳಿ ಕುಳಿತೆ. ಅವರ ತಟ್ಟೆಯಲ್ಲಿ ಏನೇನೋ ಇದ್ದವು. ಅವೆಲ್ಲ ‘ಅವರು’ ನಿನ್ನೆ ರಾತ್ರಿ, ಇವತ್ತು ಬೆಳಿಗ್ಗೆ ಮಾಡಿಕೊಂಡು ಉಳಿಸಿ ಬಿಟ್ಟದ್ದು. ಅತ್ತೆ ಅವರ ಕುರಿತು ಹೇಳತೊಡಗಿದರು.

ಸೂರ್ಯ ಶಾಲಾದಿನಗಳ ತನ್ನ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾಗಿದ್ದ. ಜಾತಿ, ಭಾಷೆ ಎಲ್ಲ ಬೇರೆಯಾಗಿದ್ದರೂ ತಕರಾರಿರಲಿಲ್ಲ, ಆದರೆ ಇವರ ಗಮನಕ್ಕೇ ಬರದಂತೆ ರಿಜಿಸ್ಟರ್ ವಿವಾಹವಾಗಿದ್ದ. ಅವಳ ಮನೆಯವರಿಗೂ ಹೇಳಿರಲಿಲ್ಲ. ಕೊನೆಗೆ ಇವರೇ ಮುಂದೆನಿಂತು ಅವಳ ಮನೆಯವರ ಬಳಿ ಮಾತನಾಡಿ ಮನೆ ತುಂಬಿಸಿಕೊಂಡಿದ್ದರು. ಆದರೆ ಅಷ್ಟೆಲ್ಲ ಸಂಭಾಳಿಸಿದರೂ ರೈಲು ಹಳಿ ಇಲ್ಲದೇ ಮನೆ ಪೂರ್ವ-ಪಶ್ಚಿಮ ಎಂದು ಇಬ್ಭಾಗವಾಗಿತ್ತು. ಪಶ್ಚಿಮದ ಇಳಿಜಾರು ಮುದುಕರದು, ಪೂರ್ವದ ಏರು ಮಹಡಿ ಪುಟ್ಟನ ಜೋಡಿಯದು.

‘ನಾ ಮಾಡಿದ್ದು ಯಾವ್ದೂ ಸೇರಲ್ಲ ಅವ್ಳಿಗೆ, ಅದ್ಕೇ ಇವ್ನೂ ತಿನ್ನಲ್ಲ. ರಾತ್ರಿ ಹೋಟಲಲ್ಲಿ ತಿಂದು ಬರ‍್ತಾರೆ ಅಥವಾ ನಮ್ಮದು ಮುಗಿದ್ಮೇಲೆ ಒಳಬಂದು ಏನಾದ್ರೂ ಮಾಡ್ಕೋತಾರೆ. ಬೆಳಿಗ್ಗೆ ನಾ ಏಳುದ್ರಲ್ಲಿ ಇಬ್ಬರೂ ಮಾಡಿ, ತಿಂದು ಹೋಗಿರ‍್ತಾರೆ. ಏಳುವುದು ಲೇಟಾದ್ರೆ ಹಾಗೇ ಹೋಗ್ತಾರೆ ಹೊರ‍್ತು ನಾ ಮಾಡಿದ್ದು ತಿನ್ನುದಿಲ್ಲ. ಅವಳಿಲ್ಲದಾಗ ಮಾತ್ರ ಅವ ನಮ್ಮೊಟ್ಟಿಗೆ ತಿನ್ನುವುದು. ಅವಳು ಕೆಲಸಕ್ಕೂ ಹೋಗ್ತಿಲ್ಲ. ಬೆಳಿಗ್ಗೆ ಅವನ ಜೊತೆನೇ ತವರುಮನೆಗೆ ಹೋಗಿ ಸಂಜೆ ಅವ ಬರುವಾಗ ಅವನೊಟ್ಟಿಗೆ ಬರುತ್ತಾಳೆ. ವಾರಗಟ್ಟಲೆ ಮಾತಿಲ್ಲದೆ ಕಳೆದದ್ದಿದೆ.’

ಮೇಲೆ ಪುಟ್ಟನ ಕೋಣೆಯ ಬಾಗಿಲ ಮೇಲೆ ‘ಡೋಂಟ್ ಡಿಸ್ಟರ್ಬ್’ ಬೋರ್ಡು ನೇತಾಡುತ್ತಿತ್ತು. ಬಾಗಿಲ ಆಚೀಚಿನ ಗೋಡೆ ಮೇಲೆ ಅವಳ ನಾಲ್ಕಾರು ಪೇಂಟಿಂಗ್. ಚಿತ್ರಗಳಲ್ಲಿ ಎಳಸು ರೇಖೆ, ಅವಸರದ ಬೆರಳು ಎದ್ದು ಕಾಣುತ್ತಿತ್ತು. ಆದರೆ ಕಲಾಸಕ್ತ ಮನಸು ಅಲ್ಲಿತ್ತು.

‘ನೀವು ಬೇರೆ ಇರಿ ಎಂದು ಬಾಯ್ಬಿಟ್ಟು ಹೇಳಿದೆವು. ಮುಂಬಯಿಯಲ್ಲಿ ಬೇರೆ ಮನೆ ಮಾಡುವುದು, ಸಾಮಾನು-ಮನೆ-ಕೆಲಸದವರನ್ನು ನಿಭಾಯಿಸುವುದು, ಬಾಡಿಗೆ ಮನೆ ಸಿಕ್ಕುವುದು ಸುಲಭವಲ್ಲ. ಈ ಮನೆ ಅವನ ಆಫೀಸಿಗೆ, ಅವಳ ತವರಿಗೆ ಹತ್ತಿರ. ಪುಕ್ಕಟೆ ಮನೆ, ಪುಕ್ಕಟೆ ಕೆಲಸದವರು ಇದೀವಲ್ಲ, ಬೇರೆ ಹೋಗುವ ಮನಸಿಲ್ಲ. ‘ಮದುವೆಯಾದಮೇಲೆ ನಾನು ಆರಾಮ ಇರಬೇಕು, ಮಕ್ಕಳು ಬೇಡ’ ಎಂಬ ಷರತ್ತಿನೊಂದಿಗೆ ಮದುವೆಗೆ ಒಪ್ಪಿದ್ದಾಳಂತೆ! ಅವಳ ಮೈಂಡ್ ಫುಲ್ ಮ್ಯಾಚೂರ್ ಆದ್ಮೇಲೆ ಆ ಬಗ್ಗೆ ವಿಚಾರ ಮಾಡುವ ಎಂದಿದ್ದಾಳಂತೆ. ಷರತ್ತಿಗೆ ಒಪ್ಪಿಯೇ ಮದುವೆಯಾಗಿರುವುದರಿಂದ ಈಗ ಮಕ್ಕಳುಮರಿ ಎಂದು ಯಾವ ಮಾತೂ ಆಡುವಂತಿಲ್ಲ..’

ಆಡಿದ ಪ್ರತಿ ಶಬ್ದದಲ್ಲಿ ನೋವು ಜಿನುಗುತ್ತಿತ್ತು.



‘ಮಗು ಎಂದರೆ ಒಳಿತಿನ ಪ್ರತೀಕ. ನಾಳಿನ ಪ್ರತೀಕ. ಮಗುವನ್ನು ಬೆಳೆಸುವುದು ಎಂದರೆ ನಮ್ಮೊಳಗಿನ ಒಳಿತನ್ನು, ಮನುಷ್ಯತ್ವವನ್ನು ಬೆಳೆಸುವುದು. ಅದೇ ಬೇಡ ಎನ್ನುವವರಿಗೆ ಏನು ಹೇಳುವುದು?’

ಮಾವನ ದನಿ ಗದ್ಗದವಾಯಿತು. ಥಟ್ಟನೆ ಇವ ನೆನಪಾದ. ‘ನಮಗೊಂದು ಮಗು ಬೇಕು, ನನಗೊಂದು ಮಗು ಬೇಕು’ ಎಂದು ಆರ್ತವಾಗಿ ಕಿವಿಯಲ್ಲಿ ಪ್ರತಿಸಾರಿ ಉಸುರುತ್ತಾನೆ. ಎಲ್ಲಿ ಕರಗಿ ನೀರಾಗುವೆನೋ ಎಂದು ಕೂಡಲೇ ನಾವು ಮಾಡಬೇಕಾದ ಕೆಲಸಗಳ ಯಾದಿ ನೆನಪಿಸುತ್ತೇನೆ. ಮಕ್ಕಳ ಸುರಕ್ಷೆ ಆಟವಲ್ಲ ಎಂದು ನಮ್ಮ ಕೋರ್ಟುಕಟ್ಟೆ ಅಲೆದಾಟ ನೆನಪಿಸಿ ಸುಮ್ಮನಾಗಿಸುತ್ತೇನೆ. ನನ್ನತ್ತೆಗೂ ಹೀಗೇ ಅನಿಸುತ್ತಿದೆಯೆ? ಇವನೆದೆಯಲ್ಲೂ ಇಂಥದೇ ಕಂಪನವಿರಬಹುದೇ?

ಬ್ಯುಟಿಷಿಯನ್ ಕೋರ್ಸ್ ಮಾಡಿರುವ ಅವರ ಸೊಸೆ ಜುವೆಲ್ ಮತ್ತು ಷೂ ಡಿಸೈನರ್ ಅಂತೆ. ಹೊರಗೆ ಹಾಲ್‌ನ ರೇಕಿನಲ್ಲಿ ಅಡ್ಡಾದಿಡ್ಡಿ ಬಿದ್ದಿದ್ದ; ಮೇಲೆ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿಟ್ಟ ಲೆಕ್ಕವಿಲ್ಲದಷ್ಟು ಚಪ್ಪಲಿ, ಷೂಗಳನ್ನು ಮಾವ ತೋರಿಸಿದರು. ಒಳಬರುವಾಗ ನಾನೂ ಗಮನಿಸಿದ್ದೆ.

‘ನಾನು ಲೆಕ್ಕ ಮಾಡಿದಾಗ ಹತ್ರತ್ರ ನೂರು ಜೊತೆ ಇದ್ದವು, ಈಗ ಇನ್ನೆಷ್ಟಾಗಿದೆಯೋ? ಕೊಳ್ಳುವುದೇ ಒಂದು ಚಟ. ಈ ದುಂದು ನಮಗೆ ಸರಿ ಬರುವುದೇ ಇಲ್ಲ, ನೋಡು ಇಷ್ಟು ತಂದು ರಾಶಿ ಹಾಕಿದರೂ ಯಾವುದರಲ್ಲೂ ತೃಪ್ತಿ ಇಲ್ಲ. ಯಾವುದೂ ಎಕ್ಸೈಟ್ ಮಾಡುವುದಿಲ್ಲ. ಎಷ್ಟಿದ್ದರೂ ಇನ್ನೂ ಬೇಕು, ಮತ್ತೂ ಬೇಕು. ಬಯಸುವುದರಲ್ಲೇ ಬದುಕು ಮುಗಿಯುತ್ತದೆ. ಕೊಂಡದ್ದು ಬಳಸುವುದರೊಳಗೆ ಕಣ್ಣು ಇನ್ನೊಂದು ವಸ್ತುವಿನ ಮೇಲಿರುತ್ತದೆ. ಕೊಂಡು ರಾಶಿ ಹಾಕಿದ್ದನ್ನು ನೋಡುವಷ್ಟು, ಜೋಪಾನ ಇಟ್ಟುಕೊಳ್ಳುವಷ್ಟು ಪುರುಸೊತ್ತು ಇಲ್ಲ. ಆದರೂ ಮತ್ತೆಮತ್ತೆ ಕೊಳ್ಳುವುದು. ಈ ಅತೃಪ್ತಿ ಹುಟ್ಟಿಸುವ ಫ್ರಸ್ಟ್ರೇಷನ್‌ಗೆ ಮಾತಾಡುವುದರಲ್ಲಿ ಸಿಟ್ಟು, ಅಳು, ಮುಂಗೋಪ, ದುಡುಕು. ತಡೆಯಲಾರದೇ ಒಮ್ಮೆ ಹೇಳಿಯೇಬಿಟ್ಟೆ. ಅಷ್ಟೇ, ಅವಳಿಗೆ ಅವಮಾನವಾಯಿತಂತೆ. ಅತ್ತುಕರೆದು ಹೊರಳಿ ರಂಪಾಟ ಮಾಡಿ, ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಳು. ಒಂದು ಪತ್ರ ಬರೆದಳು. ಅವತ್ತೇ ಕೊನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ, ಎಷ್ಟೇ ಪತ್ರ ಬರಲಿ, ಏನೇ ಬರೆಯಲಿ, ಸುಮ್ಮನಿದ್ದೇನೆ.’

‘ಅವಳಿಗೆ ರಾತ್ರಿಯೆಲ್ಲ ಬಂದು ಸುಸ್ತಾಗಿದೆಯೋ ಏನೋ, ನೀವು ಏನೇನೆಲ್ಲ ಹೇಳಿ ತಲೆಬಿಸಿ ಮಾಡಬೇಡಿ. ಸ್ನಾನ ಮಾಡಿ ಒಂಚಣ ಮಲಗಲಿ, ಇವತ್ತಿಡೀ ಇರ‍್ತಾಳಲ್ಲ,’ ಏನನ್ನೋ ಹುರಿಯುತ್ತ ಅತ್ತೆ ಒಳಗಿಂದ ಕೂಗಿದರು.

‘ಇಲ್ಲ ಅತ್ತೆ, ನಾನು ಬಂದಿದ್ದೇ ನಿಮ್ಮತ್ರ ಮಾತಾಡಲು. ನನಗೆ ದಿನಕ್ಕೆ ಮೂರ್ನಾಲ್ಕು ತಾಸು ನಿದ್ರೆ ಆದರೆ ಸಾಕು. ನಿನ್ನೆ ಟ್ರೈನಲ್ಲಿ ನಿದ್ರೆ ಮಾಡಿದ್ದು ಹೆಚ್ಚಾಗಿದೆ, ಇಲ್ಕೊಡಿ, ನಾ ಹೆಚ್ಚುತ್ತೇನೆ. ನೀವು ಏನೇನೋ ಹಚ್ಕೋಬೇಡಿ, ಸಿಂಪಲ್ ಆಗಿ ಒಂದ್ ಚಿತ್ರಾನ್ನ ಮಾಡಿ ಸಾಕು. ಎಲ್ಲ ಕೂತು ಮಾತಾಡುವ ಸ್ವಲ್ಪ ಹೊತ್ತು..’ ಎಂದೆ.

‘ದಿನಾ ನಾವಿಬ್ರೇ, ಸಿಂಪಲ್ಲೇ ಮಾಡುದು. ನಿನ್ನ ಮಾವಂಗೆ ಶುಗರು, ಬಿಪಿ, ಅಸ್ತಮಾ ಅದೂ ಇದೂಂತ ಬರೀ ಪಥ್ಯದ ಊಟ. ಹಬ್ಬಹುಣ್ಣಿಮೆ ಸಂಭ್ರಮ ಯಾವ್ದೂ ಇಲ್ಲ ನಮಗೆ. ಯಾವ ಕಾಯ್ಲೆನೂ ಇಲ್ಲ, ನೀನು ಬೇರೆ ಮಾಡ್ಕೊ ಅಂತಾರೆ ನಂಗೆ. ಆದ್ರೆ ಅವ್ರನ್ನ ಬಿಟ್ ಒಬ್ರೇ ತಿನ್ನುದು ಹೆಂಗೆ? ಇವತ್ ನಿನ್ನ ನೆಪಕ್ಕೆ ಏನಾದ್ರೂ ಒಂಚೂರು..’

ಅವರ ಕಣ್ಣಲ್ಲಿ ನೀರು ತರಿಸಿದ್ದು ನಾನು ಹೆಚ್ಚುತ್ತಿರುವ ಈರುಳ್ಳಿ ಇರಲಿಕ್ಕಿಲ್ಲ. ಅತ್ತೆಯ ಗಮನವನ್ನು ಅವರ ಆರೋಗ್ಯದ ಗುಟ್ಟೇನು ಅಂತ ಕೇಳಿ ಬೇರೆಡೆ ಸೆಳೆಯಲೆತ್ನಿಸಿದೆ.

‘ಎಂಥ ಗುಟ್ಟೋ ಎಂಥ ಮಣ್ಣೋ. ನೀ ಹಿಂಗೆ ಕೇಳುವಾಗ ನೆನಪಾಗುತ್ತೆ: ನಮ್ಮಪ್ಪನ ಮನೇಲಿ ಪ್ರತಿ ದೀಪಾವಳಿ ಹಬ್ಬಕ್ಕೆ ಒಂದ್ ಉಂಡೆ ಮಾಡಿ ತಿನಿಸ್ತಿದ್ರು, ಅದು ನಿನ್ನಜ್ಜಿ ಮನೆ ಕಡೆನೂ ಇದ್ದಿಕ್ಕು. ಎಂತೆಂತದೋ ಚಕ್ಕೆ ಸೇರ‍್ಸಿ ಕಷಾಯ ಮಾಡ್ತಿದ್ರು. ಆ ಚಕ್ಕೆ ಸಂಗ್ರಹ ಮಾಡಕ್ಕೆ ಬೆಳಕು ಹರಿಯೋ ಮುಂಚೆ ಕತ್ತಲಲ್ಲಿ ಬೆತ್ತಲಾಗಿ ಖಾಲಿಹೊಟ್ಟೇಲಿ ಹೋಗ್ಬೇಕು. ಅದು ನೇಮ. ಕತ್ತಿ ಬಳಸೂ ಹಂಗಿಲ್ಲ, ಹಲ್ಲಿಂದ ಕಚ್ಚಿ ಮರದ ಚಕ್ಕೆ ಎಬ್ಬಿಸಿ ತರಬೇಕು. ಪಾಲೆದ ಮರದ ಚಕ್ಕೆ, ಗಜ್ಜುಗ, ಬೆಳ್ಳುಳ್ಳಿ, ಒಳ್ಳೆ ಮೆಣಸು ಎಲ್ಲ ಹಾಕಿ ಅಜ್ಜಿ ಬಾವಿಕಟ್ಟೆ ಮೇಲಿದ್ದ ಕಲ್ಲಲ್ಲಿ ನುಣ್ಣಗೆ ಅರೀತಿದ್ಲು. ತಿಂದ ಉಂಡೆ ಕಹಿಯೋ, ಒಗರೋ, ರುಚಿಹೀನವೋ ಅದು ಹೇಗಿದೆ ಎಂತ ವರ್ಣಿಸದೇ ಬೆಳಿಗ್ಗೆ ಎದ್ದು ಐದೈದು ಉಂಡೆ ಖಾಲಿ ಹೊಟ್ಟೇಲಿ ನುಂಗಿದರೆ ಇಡೀ ವರ್ಷ ಏನೂ ಕಾಯ್ಲೆ ಬರಲ್ಲ ಅಂತ ಹೇಳ್ತಿದ್ರು. ಅಜ್ಜಿ ಇರೋವಷ್ಟ್ ದಿನ ಈ ನೇಮ ನಡೀತಿತ್ತು. ಆ ದಿನಕ್ಕಾಗಿ - ನಮ್ಮನ್ನು ರೋಗರಹಿತರಾಗಿ ಮಾಡೋ ದಿವ್ಯೌಷಧ ತಗೊಳ್ಳೋ ದಿನಕ್ಕಾಗಿ ನಾವೆಲ್ಲ ಕಾದಿರತಿದ್ವಿ. ಅಜ್ಜಿ ಉಂಡೆನ ನಮ್ಮನೆ ಕೆಲ್ಸಕ್ಕೆ ಬರೋವ್ರಿಗೂ ಕೊಡ್ತಿದ್ರು, ಅದ್ರ ಗುಟ್ಟು ಮಾತ್ರ ಯಾರ‍್ಗೂ ಹೇಳ್ತಿರಲಿಲ್ಲ. ನೀವು ಸಾಯನ್ಸ್ ಓದುವವರು ಇದನ್ನೆಲ್ಲ ನಂಬಲ್ಲ. ಆದ್ರೆ ರೋಗ ತಡೀತಿತ್ತೋ ಇಲ್ವೋ ಅನ್ನೋದಕ್ಕಿಂತ ಏನೋ ಒಂದ್ ತಗಂಡ್ವಿ ಅನ್ನೋ ಧೈರ್ಯ ಹೊಟ್ಟೇಲಿರತಿತ್ತಲ್ಲ, ಅದೇ ಮುಖ್ಯ.’

‘ನಿಜ ಅತ್ತೆ, ಈಗ ನಾವು ಸಿಕ್ಕಿದ್ದೆಲ್ಲ ತಿನ್ನುವವರು. ನಮ್ ಹೊಟ್ಟೇಲಿ ಧೈರ್ಯ ಒಂದು ಬಿಟ್ಟು ಮತ್ತೆಲ್ಲ ಇರುತ್ತೆ..’

‘ನಮ್ಮನೇಲಿ ನೋಡ್ಬೇಕು ನೀನು, ಈ ಇಬ್ರ ಊಟ ತಿಂಡಿಗೆಲ್ಲ ಎಂತೆಂಥದಿರುತ್ತೆ ಅಂತ. ಮೊಳದುದ್ದ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಪಾನಿಪೂರಿ, ಪಾಸ್ತಾ ಇನ್ನೂ ಏನೇನೋ ತಿಂದು ಹೊಟ್ಟೆ ತುಂಬಿಸ್ಕತಾವೆ. ನಾಲಿಗೇನೇ ಮುಖ್ಯ, ಆರೋಗ್ಯ ಅಲ್ಲ ಅನ್ನೋರಿಗೆ ಏನ್ ಹೇಳುದು?’ ಅತ್ತೆ ಮೆಲ್ಲ ದನಿಯಲ್ಲಿ ಮಾತಾಡುತ್ತಿದ್ದರು, ಯಾರಿಗಾದರೂ ಕೇಳೀತೋ ಎಂಬಂತೆ. ಅಡಿಗೆಮನೆಯಲ್ಲಿ ನಿನ್ನೆ ರಾತ್ರಿ ತಿಂದು ಅರ್ಧಂಬರ್ಧ ಉಳಿಸಿ ಬಿಸಾಡಿದ ಪಾಸ್ಟ್ರಿ ತೋರಿಸಿದರು.

ಕುಕರ್ ಏರಿಸಿ ಮೇಲೆ ಹೊರಟವರು ಕಣ್ಸನ್ನೆಯಲ್ಲೇ ಕರೆದರು. ಮಗನ ಕೋಣೆ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಸಂತೆ ಮುಗಿದ ನಂತರ  ಸಂತೆಮಾಳ ಇರುವಂತೆ ಪುಟ್ಟನ ರೂಮಿತ್ತು. ವಿಶಾಲ ಕೋಣೆಯ  ನಟ್ಟನಡುವೆ ಸೊಳ್ಳೆಪರದೆ ಇಳಿಬಿಟ್ಟ ಡಬಲ್ ಕಾಟು. ಮೂಲೆ ಟೇಬಲಿನ ಮೇಲೆ ದೊಡ್ಡ ಟಿವಿ. ತೆರೆದಿಟ್ಟ ಕಂಪ್ಯೂಟರು. ಹಾಸಿಗೆ ಮೇಲೆ ತೆರೆದಿಟ್ಟ ಪುಸ್ತಕದಲ್ಲಿ ಒಡವೆ, ಚಪ್ಪಲಿಗಳ ನಾನಾ ಡಿಸೈನುಗಳ ಸ್ಕೆಚ್. ಅರೆಬರೆ ತಿಂದುಳಿದ ದೋಸೆ, ಚಿಪ್ಸ್. ತಟ್ಟೆ ಲೋಟಗಳು ಮಂಚದಡಿ ಇದ್ದವು. ಬಚ್ಚಲುಮನೆಯ ಬಾತ್ ಟಬ್ಬಿನೊಳಗೆ ಒಳಉಡುಪುಗಳು ತೋಯಿಸಿಕೊಂಡು ಬಿದ್ದಿದ್ದವು.

ತೊಳೆವ ಬಟ್ಟೆ, ತಟ್ಟೆಯನ್ನೆಲ್ಲ ಒಂದೆಡೆ ಎತ್ತಿಟ್ಟು ಅತ್ತೆ ಆ ಕೋಣೆಗೆ ಹೊಂದಿಕೊಂಡಂತಿದ್ದ ಹಜಾರದ ಬಾಗಿಲು ತೆರೆದರು. ಅದೊಂದು ಅಸ್ತವ್ಯಸ್ತ ಮಿನಿ ಗೋಡೌನು. ಮಕ್ಕಳಾಟಿಕೆಯ ಸಾಮಾನು, ಟೆಡ್ಡಿಬೇರ್‌ನಿಂದ ಹಿಡಿದು ಗಿಟಾರ್, ಹಾರ್ಮೋನಿಯಂ, ಟೆನಿಸ್ ರ‍್ಯಾಕೆಟ್ ತನಕ ತರಹೇವಾರಿ ವಸ್ತುಗಳು ಅಲ್ಲಿದ್ದವು. ‘ಬೋರ್ ಆಯಿತೆಂದರೆ ಶಾಪಿಂಗ್ ಹೋಗುವುದು; ಕಂಡದ್ದು ತರುವುದು; ಕೊನೆಗೆ ಇಲ್ಲಿ ತಂದು ಒಟ್ಟುವುದು’ ಎನ್ನುತ್ತ ಅತ್ತೆ ಜೋಡಿಸಿಡತೊಡಗಿದರು.

ಸಪೂರ ಮೈಯ ಚುರುಕು ಕಣ್ಣುಗಳ ಅತ್ತೆಯನ್ನು ಕೇಳಬೇಕೆನಿಸಿತು: ‘ನೀವು ಆಗ್ಲೆ ಪಿಯುಸಿ ಮಾಡಿದ್ರಂತೆ. ಮನಸ್ಸು ಮಾಡಿದ್ರೆ ಏನಾದ್ರೂ ಕೆಲಸಕ್ ಸೇರ‍್ಬೋದಿತ್ತು. ಮುಂದೆ ಓದ್ಬೋದಿತ್ತು. ಹೌಸ್‌ವೈಫ್ ಆಗೇ ಉಳಿದದ್ದು ಏಕೆ?’

‘ಗಂಡ ಹೆಂಡ್ತಿ ಮಧ್ಯ ಗೌರವ, ಅರ್ಥ ಮಾಡ್ಕೊಳೋದು ಇದ್ರೆ ಗಂಡ ಹೊರಗೆ ದುಡಿದು ತಂದು, ಹೆಂಡ್ತಿ ಅದನ್ನ ನಿಭಾಯಿಸುವ ಹೌಸ್‌ಮೇಕರ್ ಕೆಲಸ ಮಾಡೋದ್ರಲ್ಲಿ ಯಾವ ಕಷ್ಟನೂ ಕಾಣ್ಸಲ್ಲ ನಂಗೆ. ಯಾವ್ದು ಹೆಚ್ಚು? ಯಾವುದು ಕಮ್ಮಿ? ಹೊರಗೆ ದುಡಿಯುವಷ್ಟೇ ಮುಖ್ಯ ಮನೆ ಸುಧಾರಿಸೋದು. ನನಗೆ ಇದು ಯಾವತ್ತೂ ಕಮ್ಮಿ ಅನ್ಸಿಲ್ಲ. ಇದು ಬಿಟ್ಟು ಬೇರೆ ಇನ್ನೇನಾದರೂ ಮಾಡಬೇಕು ಅಂತ್ಲೂ ಅನಿಸಿಲ್ಲ. ಆದ್ರೆ ಅವನೇ ಸರ್ವಸ್ವ ಅಂತ ಒಬ್ಬ ಮಗನ್ನ ಬೆಳೆಸೋದ್ರಲ್ಲಿ ಅಷ್ಟು ಸಮಯ, ಶ್ರಮ ಹಾಕಿದ್ವಲ್ಲ, ಅದು ವ್ಯರ್ಥವಾಯ್ತಾ ಅಂತ ಇತ್ತೀಚೆಗೆ ಅನುಮಾನ ಬರ್ತಿದೆ. ನಿಮ್ಮಮ್ಮ ನಿಮ್ಮಪ್ಪನ್ನ ಮದುವೆಯಾದದ್ದು ಇವರ‍್ಯಾರಿಗೂ ಇಷ್ಟ ಇರಲಿಲ್ಲ. ಜಾತಿಯಲ್ಲ, ಕೆಲಸವಿಲ್ಲ, ಬರೀ ಪತ್ರಿಕೆ ನಡೆಸೋನು ಅಂತ ಸಸಾರ. ಆದ್ರೆ ನಿಮ್ಮಮ್ಮ ನಾಕು ಜನರಿಗಾಗಿ ಬಾಳಿ ಸಾಧನೆ ಮಾಡಿದಳು. ಇವತ್ತು ಅವ್ಳನ್ನ ನೂರಾರು ರೈತರು ನೆನಪು ಮಾಡ್ಕೋತಾರೆ. ನಿನ್ನನ್ನು ಹೀಗೆ ತಯಾರು ಮಾಡಿದಳು. ಆದ್ರೆ ನಾವಂದುಕೊಂಡ ಹಾಗೆ ಪುಟ್ಟನನ್ನ ರೂಪಿಸೋಕೆ ಆಗ್ಲಿಲ್ವಾ ಅನಿಸುತ್ತೆ. ಕೊನೆಗೆ ಹೀಗೂ ಅನ್ಸುತ್ತೆ, ನಾವಂದುಕೊಂಡ ದಾರೀಲೇ ಮಕ್ಕಳು ಯಾಕೆ ಇರಬೇಕು? ಅವ್ರಿಗೆ ಸರಿ ಕಂಡಂತೆ ಅವರು ಇರ‍್ತಾರೆ. ಪುಟ್ಟನಿಗೇನೂ ಅವಳ ಜೊತೆ ಸಮಸ್ಯೆಯಿಲ್ಲ ಅಂತಾದರೆ ಇರಲಿ ಅವರು, ಅವರಿಗೆ ಹೇಗೆ ಬೇಕೋ ಹಾಗೆ. ನಾವ್ಯಾಕೆ ನಮ್ಮ ಅಳತೆಪಟ್ಟಿ ಹಿಡಿದು ಅಳೆಯಬೇಕು? ನಿನ್ನ ಮಾವನ ಹತ್ರ ಇದ್ನೇ ಹೇಳ್ತಾ ಇರ್ತೀನಿ. ಆದರೆ ಅವರು ಸಮಾಧಾನನೇ ಮಾಡ್ಕಳಲ್ಲ.’

ಕಹಿಉಂಡೆಯನ್ನು ಅದರ ರುಚಿ ವರ್ಣಿಸದೇ ಹಾಗೇ ನುಂಗಿದರೆ ರೋಗ ಬರುವುದಿಲ್ಲ.. ಓಹೋ ಅತ್ತೆ, ನಿಮ್ಮ ಆರೋಗ್ಯದ ಗುಟ್ಟು ಗೊತ್ತಾಯಿತು.

‘ಮನುಷ್ಯನಿಗೆ ಬೇಕಾಗುವುದು ಒಂದು ಸೆನ್ಸ್ ಆಫ್ ಬಿಲಾಂಗಿಂಗ್ ಅರುಂಧತಿ. ನಾನು ಒಬ್ಬರಿಗೆ, ಒಂದು ಕುಟುಂಬಕ್ಕೆ, ಸಮಾಜಕ್ಕೆ ಸೇರಿದ ವ್ಯಕ್ತಿ ಎನ್ನುವುದು ಒಂದು ಭದ್ರತೆ ಹುಟ್ಟಿಸುತ್ತೆ. ಅದಕ್ಕೇ ಫ್ಯಾಮಿಲಿ ವ್ಯವಸ್ಥೆ ಉಳಕೊಂಡು ಬಂದಿರೋದು. ಯಾರಿಗೋ ಸೇರಿದವ ಎಂಬ ಕನಿಷ್ಟ ಬೆಚ್ಚನೆಯ ಭಾವನೆನೂ ಇಲ್ದಿದ್ರೆ ಮನುಷ್ಯ ಬದುಕೋಕಾಗಲ್ಲ. ಅವರವರ ಪಾತ್ರಗಳು ಕುಟುಂಬದಲ್ಲಿ ಏನೇ ಇರಲಿ, ಸೆನ್ಸ್ ಆಫ್ ಬಿಲಾಂಗಿಂಗ್ ಇದ್ರೆ ಅಲ್ಲಿ ವಂಚನೆ, ತಾರತಮ್ಯದ ಪ್ರಶ್ನೆ ಹುಟ್ಟಲ್ಲ. ಒಂದೇ ಮನೇಲಿದ್ದೂ ಈ ಭಾವನೆಯೇ ಇಲ್ಲ ಅಂದ್ರೆ ಬದುಕು ಬರೀ ನಾಟಕ. ಅದು ಹೆಚ್ಚು ದಿನ ನಡೆಯಲ್ಲ.’

ಮಾವ ಯಾವಾಗಲೋ ಮೇಲೆ ಬಂದು ನಿಂತಿದ್ದರೆಂದು ಅವರು ಉತ್ತರಿಸಿದಾಗಲೇ ಗೊತ್ತಾಗಿದ್ದು. ಕುಕರ್ ನಾಲ್ಕನೆಯ ಸೀಟಿ ಹೊಡೆಯಿತು. ಅತ್ತೆ ಅನಿವಾರ್ಯವಾಗಿ ಕೆಳಗಿಳಿದರು. ಅವರ ಹಿಂದೆ ನಾವು.



ಅಮ್ಮ ಮಾಡುತ್ತಿದ್ದ, ನಾನು ಮರೆತೇಬಿಟ್ಟ ಒಂದೆರೆಡು ಪದಾರ್ಥಗಳನ್ನು ಮಾಡುತ್ತಿದ್ದರು ಅತ್ತೆ. ಹೇಗೆ ಮಾಡುವುದು ಎಂದು ಕೇಳಿದ್ದೇ ಒತ್ತಾಯದಿಂದ ಪುಸ್ತಕ ಪೆನ್ನು ಕೊಟ್ಟು ರೆಸಿಪಿ ಬರೆಸಿದರು. ಅಂದು ಮಾಡದ ಕೆಲ ಪದಾರ್ಥಗಳ ರೆಸಿಪಿಯನ್ನೂ ‘ತುಂಬ ಸುಲಭ, ಮಾಡಿ ನೋಡು ಬೇಕಾದ್ರೆ, ಆಮೇಲೆ ಹೇಳಕ್ಕೆ ನೆನಪಾಗುತ್ತೋ ಇಲ್ವೋ’ ಎಂದು ನೆನಪು ಮಾಡಿಕೊಳ್ಳುತ್ತ ಹೇಳಿಹೇಳಿ ಬರೆಸಿದರು.

‘ಊಟ ಶುರುಮಾಡು ಅರುಂಧತಿ. ನೀ ಬಂದಿದಿ ಅಂತ ಇವತ್ತು ನಾನು ಪಾಯ್ಸ ಕುಡಿತಿನಿ. ನನಗೂ ಒಂದು ಲೋಟ ಪಾಯಸ ಕೊಡೇ. ಶುಗರ್ ಹೆಚ್ಚಾಗಿ ಮೈಗೆ ಗೊದ್ದ ಮುತ್ತಿದ್ರೆ ಮುತ್ತಲಿ..’

ಹೆಸರು ಬೇಳೆ ಪಾಯಸ ಕುಡಿದ ಖುಷಿಗೋ ಎಂಬಂತೆ ಇದ್ದಕ್ಕಿದ್ದಂತೆ ಒಂದು ಶಾಂತಭಾವ ಮಾವನ ಮುಖವನ್ನು ಆವರಿಸಿತು.

‘ಅರಳುವ ಹೂವನ್ನು ಪ್ರೀತಿಸುವುದು ಸುಲಭ. ಆದರೆ ಉದುರುವ ಎಲೆಯನ್ನು ಪ್ರೀತಿಸುವುದು ಕಷ್ಟ. ತನ್ನ ಮಾಗುವಿಕೆಯ ಕಾರಣವಾಗಿ ಗಿಡದಿಂದ ಬೇರಾದ ಎಲೆ ಪತನದ ದಾರಿ ಕಂಡುಕೊಂಡು ಬೇರು ಸೇರಿ ಗೊಬ್ಬರವಾಗಲೇಬೇಕು. ಮತ್ತೊಂದು ಎಲೆ ಚಿಗುರಲು ಅನುವು ಮಾಡಿಕೊಡಬೇಕು. ಇದು ಪ್ರಕೃತಿ ನಿಯಮ. ಉದುರುವ ಕಾಲದಲ್ಲಿ ಒಬ್ಬರಿಗೊಬ್ಬರು ಆಧಾರವಾಗಿದೀವಲ್ಲ, ಈ ನಮ್ಮ ಬದುಕು ನದಿಯ ಮೇಲೆ ಬಾಗಿದ ತೆಂಗಿನಮರವಿದ್ದ ಹಾಗೆ. ಒಂದೇ ಒಂದು ಬಲವಾದ ಗಾಳಿ ಬೀಸಿದರೆ ಬದುಕು ಒಂದೋ ನೆಲದ ಪಾಲು ಅಥವಾ ನದಿಯ ಪಾಲು. ಜೀವನ ಇಷ್ಟು ಸೂಕ್ಷ್ಮವಾಗಿರುವಾಗ ನಮಗಾಗಿ ನಾವು ಬದುಕುತ್ತೇವೆ, ನಮ್ಮಿಂದಲೇ ನಾವು ಬದುಕಿದೆವು ಅನ್ನುವುದು ತಪ್ಪು.

ನೋಡು. ಈ ಕಟ್ಟಡ ಅಳಿಯಲಿಕ್ಕೆ ಬಂತು. ಮುಂಬಯಿಯ ಎಷ್ಟೋ ಕಟ್ಟಡಗಳ ಹಾಗೆ ಇದೂ. ೩೫ ವರ್ಷ ಕೆಳಗೆ ತಗೊಂಡೆವು. ಅದೀಗ ಶಿಥಿಲವಾಗಿದೆ, ಅಳಿದು ಬೇರೆ ಕಟ್ಟಬೇಕು ಎನ್ನುತ್ತಾನೆ ಬಿಲ್ಡರ್. ಇರುವುದನ್ನು ಕಳಚಲು ಒಂದು ವರ್ಷ, ಮತ್ತೆ ಕಟ್ಟಲು ಮೂರ್ನಾಲ್ಕು ವರ್ಷ ಬೇಕು. ಈಗಿರುವುದಕ್ಕಿಂತ ಹೆಚ್ಚು ಅಂತಸ್ತಿಗೆ ಪರ್ಮಿಶನ್ ತಗೋತಾನೆ. ಫ್ಲೋರ್ ಏರಿಯಾ ಹೆಚ್ಚು ಮಾಡಿಸಿ ಕಟ್ಟುತ್ತಾನೆ. ಕಟ್ಟುವ ಕೆಲಸ ಮುಗಿಯುವವರೆಗೆ ಬೇರೆಡೆ ಉಳಿಯಲು ನಮಗೆ ಬಾಡಿಗೆ ಹಣ ಕೊಡುತ್ತಾನೆ. ಪೂರ್ತಿ ಮುಗಿದ ಮೇಲೆ ಒಂದು ರೂಮು ಹೆಚ್ಚಿಗೆಯೇ ಕೊಡ್ತಾನೆ. ಈಗಿರುವುದಕ್ಕಿಂತ ಹೆಚ್ಚು ಮಹಡಿ ಕಟ್ಟಿ, ಮಾರಿ ಲಾಭ ಮಾಡುತ್ತಾನೆ. ನಾವಿನ್ನೆಷ್ಟು ವರ್ಷ ಬದುಕಿಯೇವು, ನಮಗೆ ಅಳಿದು ಕಟ್ಟುವ ಅವಶ್ಯಕತೆಯಿಲ್ಲ ಎನ್ನುವಂತೇ ಇಲ್ಲ. ಇದನ್ನು ಕೆಡವಲು ಒಪ್ಪಲೇಬೇಕು. ಹಳೆಯ ಪಿಲ್ಲರ್, ಬೀಮ್ ಬದಲಾಯಿಸಿ ಕಟ್ಟಡ ನವೀಕರಣಗೊಳ್ಳಬೇಕು. ಎಂದರೆ ಶಿಥಿಲವಾದ ಹೆಗಲಿಂದ ಭಾರವನ್ನು ಸಮರ್ಥ ಹೆಗಲಿಗೆ ವರ್ಗಾಯಿಸಬೇಕು. ಮಕ್ಕಳೆಂದರೆ ಅಂಥ ಪಿಲ್ಲರ್, ಬೀಮ್, ಹೆಗಲೇ ತಾನೇ?

ಒಬ್ಬ ತತ್ವಜ್ಞಾನಿ - ಬೋರ್ಗ್ ಇರಬೇಕು - ಹೇಳ್ತಾನೆ: ನಾವು ಏನನ್ನು ಕಳಕೊಂಡಿದೀವೋ ಅದು ಮಾತ್ರ ನಮ್ಮದು ಅಂತ. ದೇರ್ ಆರ್ ನೋ ಪ್ಯಾರಾಡೈಸಸ್ ಅದರ್ ದ್ಯಾನ್ ದಿ ಲಾಸ್ಟ್ ಪ್ಯಾರಾಡೈಸಸ್. ಇದು ಅರಗಿಸ್ಕೋಬೇಕಾದ ಸತ್ಯ. ನಾವು ಸುಳ್ಳನ್ನು ನಮಗೆ ಪ್ರಿಯವಾಗಿದ್ದಾದರೆ ಗಟಗಟ ಕುಡಿತಿವಿ. ಆದರೆ ಕಹಿಯಾಗಿದ್ದನ್ನು ಗುಟುಕುಗುಟುಕಾಗಿ ಕುಡಿತಿವಿ. ಗುಟುಕಿನ ಕಹಿ ತಡಕೊಳ್ಳಲಿಕ್ಕೆ ಮಗು, ಅರುಂಧತಿ, ನಿನ್ನತ್ರ ಇಷ್ಟು ಮಾತಾಡಿದೆ. ನಮಗೀಗ ಹೆಚ್ಚು ಆಯ್ಕೆ ಇಲ್ಲ, ಕೇಳು, ನಮ್ಮ ಮಗನ ಜೊತೆಯ ಸಂಬಂಧದ ಕನ್ನಡಿ ಒಡೆದಿದೆ. ಕೂಡಿಸಲು ಸಾಧ್ಯವಿಲ್ಲದ ಹಾಗೆ. ಕೂಡಿಸಹೊರಟರೆ ಕೈ ಗಾಯವಾಗುತ್ತದೆ, ಬಿಂಬವೂ ಒಡಕಲಾಗೇ ಮೂಡುತ್ತದೆ. ಆದರೆ ಒಂದು ಆಸೆ, ಘನತೆಯಿಂದ ಬದುಕಿದೆವು, ಘನತೆಯಿಂದ ನೋವನುಭವಿಸಿದೆವು, ಘನತೆಯಿಂದ ಸಾಯಬೇಕು ಎಂದು. ಅದಕ್ಕೇ..’



ನದಿ ರಭಸದಿಂದ ಹರಿಯತೊಡಗಿತು..

‘ನಾವೊಂದು ವೃದ್ಧಾಶ್ರಮ ನೋಡಿದ್ದೇವೆ. ಒಂದಷ್ಟು ದುಡ್ಡು ಡೆಪಾಸಿಟ್ ಮಾಡಿದರೆ ಸಾಯುವ ತನಕ ನೋಡಿಕೊಳ್ಳುತ್ತಾರೆ. ಈ ಮನೆ ನಮಗೆ ಬೇಡವೆಂದರೆ ಬಿಲ್ಡರ್ ದುಡ್ಡು ಕೊಡುತ್ತಾನೆ. ಅದು ಎರಡು ಕೋಟಿ ಮೀರುತ್ತದೆ. ಆ ಹಣದಲ್ಲಿ ಒಂದು ಭಾಗ ನಾವು ನೋಡಿದ ವೃದ್ಧಾಶ್ರಮಕ್ಕೆ ಕೊಟ್ಟು ಇರುವತನಕ ಅಲ್ಲಿರುವುದು. ನಮ್ಮ ವ್ಯವಸ್ಥೆ ಆಯಿತು. ಇನ್ನು ಪುಟ್ಟನ ಜವಾಬ್ದಾರಿ? ಅದು ನಮ್ಮದಲ್ಲ, ಅವ ಸರ್ವ ಸ್ವತಂತ್ರ. ಆದರೆ ಇತ್ತೀಚೆಗೆ ವನಜ ಬಹಳ ನೆನಪಾಗುತ್ತಿದ್ದಾಳೆ. ಮನೆಬಿಟ್ಟು ಹೋದವಳಿಗೆ, ತಾಯ್ತಂದೆಯರ ಶ್ರಾದ್ಧದ ದಿನವಾದರೂ ಬರದವಳಿಗೆ ಏಕೆ ಪಾಲು ಕೊಡಬೇಕು ಎಂದು ಅಪ್ಪಅಬ್ಬೆ ಸತ್ತಾಗ ಅವಳ ಪಾಲನ್ನು ಗದ್ದೆ ಗೇಯುತ್ತಿದ್ದ ತುಕ್ರನಿಗೆ ಕೊಟ್ಟಿದ್ದೆ. ಆಗ ಹೇಳದೇ ಹೋದವಳು, ನಮ್ಮ ನೆನಪೂ ಆಗದವಳು ಎಂದು ಅಷ್ಟು ಸಿಟ್ಟಿತ್ತು. ಅವಳಷ್ಟು ವಿಚಾರ, ತಿಳುವಳಿಕೆ ನನಗಿರಲಿಲ್ಲವಾಗಿ ಅವಳು ಅರ್ಥವೇ ಆಗಲಿಲ್ಲ. ನಿನ್ನಪ್ಪ ಎನ್‌ಕೌಂಟರ್ ಹೆಸರಲ್ಲಿ ಸತ್ತು ಅವಳು ಏಕಾಂಗಿಯಾದಾಗ ಒಮ್ಮೆ ಬಂದಿದ್ದಳು. ಆಗಲೂ ಕಟುವಾಗಿಯೇ ಉಳಿದೆ. ಆದರೆ ಈಗ ವನಜನಿಗೆ ಕಾಲವೂ, ವ್ಯವಸ್ಥೆಯೂ, ಕುಟುಂಬವೂ ಒಟ್ಟಿಗೆ ಅನ್ಯಾಯ ಮಾಡಿದೆವು ಎಂಬ ಭಾವ ಬಲವಾಗುತ್ತಿದೆ. ಅದಕ್ಕೇ ಹೇಳುತ್ತಿರುವೆ ಕೇಳು: ನೀನು ಸ್ಲಂ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವುದು, ಅನಾಥ ಮಕ್ಕಳಿಗಾಗಿ ನಿಮ್ಮ ಸಂಘಟನೆ ಒಂದು ಹಾಸ್ಟೆಲು ನಡೆಸುತ್ತಿರುವುದು ಇತ್ಯಾದಿ ನಾನಿದ್ದ ಅಧಿಕಾರದ ಸ್ಥಾನದಿಂದ ಎಲ್ಲ ಮಾಹಿತಿ ನನಗೆ ತಿಳಿದಿದೆ. ನಿನ್ನ ಕೆಲಸದ ಜೊತೆಗೆ ನನಗೆ ಸಹಮತವಿದೆ. ಎಂದೇ ಇಲ್ಲಿ ಕೇಳು, ನಿನ್ನ ಸಂಘಟನೆಯ ಗೆಳೆಯರೊಂದಿಗೆ ಮಾತಾಡು. ವೃದ್ಧಾಶ್ರಮಕ್ಕೆ ಕೊಟ್ಟ ಮೇಲೂ ಬಹಳ ದುಡ್ಡು ಉಳಿಯುತ್ತದೆ. ಹೆಚ್ಚುವರಿಯಾದ ಹಣವನ್ನು ನಿಮ್ಮ ಸಂಘಟನೆಗೋ, ಬಡಮಕ್ಕಳ ವಿದ್ಯಾಭ್ಯಾಸಕ್ಕೋ ಬಳಸಿಕೊ ಅಥವಾ ನಿಮ್ಮಮ್ಮನ ಹೆಸರಿನ ಒಂದು ಟ್ರಸ್ಟ್ ಮಾಡು ಅಥವಾ..’

ಹೇಳಹೇಳುತ್ತ ಮಾವನ ದನಿ ಕ್ಷೀಣವಾಯಿತು. ಕೊನೆಯ ತುತ್ತು ತಿಂದು ಎದ್ದವರು ಹತ್ತಿರ ಬಂದು ಆಡುವ ಮಾತೆಲ್ಲ ಮುಗಿಯಿತೋ ಎಂಬಂತೆ ತಲೆ ನೇವರಿಸಿದರು. ‘ನಿಧಾನ ಊಟಮಾಡು’ ಎಂದೆನ್ನುತ್ತ ಕೈ ತೊಳೆಯಲು ಒಳಹೋದರು.

‘ಆದರೆ ಅರುಂಧತಿ, ಒಂದು ಮಾತು ಹೇಳಬೇಕೆನಿಸುತ್ತಿದೆ. ನನಗೆ ಮಗು ಬೇಡ, ಪ್ರಪಂಚದ ಎಲ್ಲ ಮಕ್ಕಳೂ ನಮ್ಮ ಮಕ್ಕಳು ಎಂದುಕೊಳ್ಳುವುದು ತುಂಬ ಉದಾತ್ತವೇ ಹೌದು. ಆದರೆ ನಿನ್ನ ಮಗುವಿದ್ದೂ ಲೋಕದ ಮಕ್ಕಳನ್ನು ನಿನ್ನದರಂತೆ ಪರಿಗಣಿಸುವುದು ಹೆಚ್ಚು ಅರ್ಥಪೂರ್ಣ. ನಿನಗಿನ್ನೂ ವಯಸ್ಸು ಮೀರಿಲ್ಲ, ಎಷ್ಟು ಮೂವತ್ತೆರಡಲ್ಲವೇ? ಒಂದು ಮಗುವಾಗಲಿ. ನಮ್ಮ ಮರಣ ಸಂಸ್ಕಾರಕ್ಕೆ ಮಕ್ಕಳು ಬೇಕೆಂದಲ್ಲ, ಐ ಡೋಂಟ್ ಬಿಲೀವ್ ಲೈಫ್ ಆಫ್ಟರ್ ಡೆತ್. ಆದರೆ ನಾವೇ ನೆಟ್ಟ ಸಸಿ ಮತ್ತೆ ಚಿಗುರೊಡೆಯಲಿಲ್ಲ ಎಂದು ನಾನು, ನಿಮ್ಮಮ್ಮ ಸತ್ತಮೇಲೂ ನರಳದಂತೆ ಆಗದಿರಲಿ, ಒಂದು ಮಗು, ಒಂದಾದರೂ ಮಗು, ನಿನ್ನಿಷ್ಟದಂತೆ ಬೆಳೆಸಬಲ್ಲ ಮಗು..’

ಮಾವನ ದನಿ ಗದ್ಗದವಾಯಿತು.

ಅಷ್ಟೊತ್ತಿಗೆ ನಮ್ಮ ಆಶ್ರಮದ ಮಹಾತಾಯಿಯಾದ ಇವನ ಫೋನು. ಆರ್ದ್ರ ದನಿಯ ಅವನ ಪ್ರತಿ ಶಬ್ದದಲ್ಲೂ ಪುಳಕ ಹೊರಹೊಮ್ಮುತ್ತಿತ್ತು. ‘ಅರು, ಮೂರು ದಿನದ ಮಗುವನ್ನು ನಿನ್ನೆ ಆಶ್ರಮಕ್ಕೆ ತಂದ್ರು. ಪ್ರೊಸೀಜರ‍್ಸ್ ನಡಿತಿದೆ. ಮಗು ಹೆಂಗಿದೆ ಗೊತ್ತಾ? ನೋಡಿದರೆ ಮುದ್ದಾಡ್ಬೇಕು ಅನ್ಸುತ್ತೆ ಕಣೆ. ಪೊಟ್ಟಿ ರಾಂಪುರ ಸ್ಲಂ ಹತ್ರ ಬಿಟ್ಟೋಗಿದ್ದು, ಅದಿರ‍್ಲಿ, ನೀ ಯಾವಾಗ್ಬರ‍್ತೀ..?’




No comments:

Post a Comment