Friday, 28 November 2014

ನಾವೆಯೊಳಗೊಂದು ನಾವೆಒಂದು ಪ್ರಶ್ನೋತ್ತರ:

ರಕ್ತದ ಒತ್ತಡ ಎಂದರೇನು?

ಬದುಕಿರುವವರಿಗೆಲ್ಲ ರಕ್ತ ಒತ್ತಡದಿಂದ ಹರಿಯುತ್ತದೆ. ಆ ಒತ್ತಡವೇ ರಕ್ತ ಚಲನಶೀಲವಾಗಿರುವಂತೆ, ದೇಹದ ಮೂಲೆಮೂಲೆಯ ಅಣುಕಣಗಳನ್ನು ತಲುಪುವಂತೆ ಮಾಡಿದೆ. ರಕ್ತದ ಒತ್ತಡವನ್ನು ಸೃಷ್ಟಿಸುವುದು ಹೃದಯ ಮತ್ತು ಕೆಲ ಮಟ್ಟಿಗೆ ಪೆಡಸುಗೊಂಡ ರಕ್ತನಾಳದ ಗೋಡೆಗಳು. ಹೃದಯ ಪಂಪ್‌ಸೆಟ್ಟಿನ ಕೆಲಸ ಮಾಡುತ್ತದೆ. ಹೇಗೆ ಪಂಪಸೆಟ್ ನೀರನ್ನು ಹೊರದಬ್ಬಿ ಮೇಲೂ, ಕೆಳಗೂ ಹರಿಯುವ ಹಾಗೆ ಮಾಡುವುದೋ ಹಾಗೆ ಹೃದಯ ರಕ್ತದೊತ್ತಡ ಸೃಷ್ಟಿಸಿ ಸುಲಲಿತ ಹರಿವು ಸಾಧ್ಯವಾಗುವಂತೆ ಮಾಡುತ್ತದೆ.


ರಕ್ತನಾಳದ ಗೋಡೆಗಳ ಮೇಲೆ ಒತ್ತಡ ಹೆಚ್ಚಾದರೆ? ರಕ್ತನಾಳ ಕಿರಿದಾದರೆ? 

ಅದು ಪ್ರಾಣಕ್ಕೆ ಅಪಾಯ ತರಬಲ್ಲ ಸಾಧ್ಯತೆಯಿದೆ.


ರಕ್ತದೊತ್ತಡ ಹೆಚ್ಚಾದರೆ ಏನು ಮಾಡಬೇಕು? 

ಅದನ್ನು ಸುರಕ್ಷಿತವಾಗಿ ಇಳಿಸುವ ಮಾತ್ರೆಗಳನ್ನು ಬಳಸಬೇಕು. ಹೃದಯ, ರಕ್ತನಾಳಗಳು ಯರ್ರಾಬಿರ್ರಿ ವರ್ತಿಸದಂತೆ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು.


ರಕ್ತದೊತ್ತಡ ಸರಿಯಿರುವವರೂ ಅಕಸ್ಮಾತ್ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದರೆ?

ಒಂದೆರೆಡು ತಿಂದರೆ ಏನೂ ಆಗುವುದಿಲ್ಲ. ಪ್ರಾಯ ಕಳೆದವರು ಕೆಲವನ್ನು ತಿಂದರೂ ಏನಾಗುವುದಿಲ್ಲ. ಆದರೆ ಮೊದಲೇ ರಕ್ತದೊತ್ತಡ ಕಡಿಮೆಯಿರುವ ಎಳಸು ಜೀವಗಳು ಹತ್ತಾರು ಮಾತ್ರೆ ತಿಂದರೆ ರಕ್ತದೊತ್ತಡ ತೀರಾ ಕಡಿಮೆಯಾಗಬಹುದು. ಹೃದಯಸ್ಥಂಭನವಾಗಿ ಕೊನೆಗೆ ಎದೆಬಡಿತ ನಿಂತೇ ಹೋಗಬಹುದು. ಸಾವೂ ಸಂಭವಿಸಬಹುದು.


ಏರು ರಕ್ತದೊತ್ತಡದ ಮಾತ್ರೆ ತಿಂದದ್ದು ಅಕಸ್ಮಾತ್ ಹುಡುಗಿಯಾಗಿದ್ದರೆ; ಅದೂ ಹಿಂದೂ ಹುಡುಗಿಯಾಗಿದ್ದರೆ; ಮುಸ್ಲಿಂ ಹುಡುಗನನ್ನು ಪ್ರೀತಿಸಿ ಅದಕ್ಕೆ ಕುಟುಂಬದ ವಿರೋಧವಿದ್ದರೆ; ಧರ್ಮಾಧಾರಿತ ರಾಜಕಾರಣವು ಮಧ್ಯೆ ಪ್ರವೇಶಿಸಿದರೆ..?

ಆಗ ನಂದಿತಾ ಎಂಬ ತೀರ್ಥಹಳ್ಳಿಯ ಹದಿನಾಲ್ಕರ ಬಾಲೆಗೆ ಏನಾಯಿತೋ ಅದು; ಸಮಾಜವಾದಿಗಳ ನೆಲೆಯಾಗಿದ್ದ ಮಲೆನಾಡಿನ ತಾಲೂಕಿಗೆ ಏನಾಯಿತೋ ಅದು; ರಾಜಕಾರಣಿಗಳಿಗೆ, ಮಾಧ್ಯಮದವರಿಗೆ ಹೇಗೆ ಗರ ಬಡಿಯಿತೋ ಅದು ಆಗುತ್ತದೆ. ಐದು ಮಿಲಿಗ್ರಾಂ ತೂಕದ ಕೆಲವೇ ಕೆಲವು ಆಮ್ಲೋಡೆಪಿನ್ ಮಾತ್ರೆಗಳು, ಎಲ್ಲ ಒಟ್ಟು ಸೇರಿಸಿದರೆ ಅಬ್ಬಬ್ಬಾ ಎಂದರೂ ನೂರಿನ್ನೂರು ಮಿಲಿಗ್ರಾಂ ಭಾರದ್ದು, ಹೆಚ್ಚೆಂದರೆ ನೂರು ರೂಪಾಯಿ ಬೆಲೆಯಾಗುವಂಥದ್ದು - ಜೀವವುಳಿಸುವ ಬದಲು ಜೀವ ತೆಗೆಯುತ್ತದೆ. ಇಡೀ ಸಮಾಜವೇ ಸುಮ್ಮಸುಮ್ಮನೆ ರೊಚ್ಚಿಗೆದ್ದು, ಮೈ ಕೊಡವಿ, ಕಾಲು ಕೆರೆಯುವಂತೆಯೂ ಮಾಡುತ್ತದೆ.


ಸಹಜ-ಅಸಹಜ


ತೀರ್ಥಹಳ್ಳಿಯ ಹದಿನಾಲ್ಕರ ಬಾಲೆ ಎಷ್ಟೋ ಹದಿವಯದ ಹುಡುಗರಿಗಾಗುವಂತೆ ತನ್ನ ಸಹಪಾಠಿಯೊಬ್ಬನತ್ತ ಸೆಳೆಯಲ್ಪಟ್ಟಳು. ಸೆಳೆತವು ಧರ್ಮ, ಜಾತಿ, ವಯಸ್ಸು ಇದಾವುದನ್ನೂ ಅರಿಯದು. ಆದರೆ ವರ್ತಮಾನ ಅಷ್ಟು ಅಮಾಯಕವಾಗಿಲ್ಲ. ಅದರಲ್ಲೂ ಅನ್ಯಧರ್ಮದ ಇಬ್ಬರು ಎಳೆಯರ ನಡುವಿನ ಸ್ನೇಹವನ್ನು ಸಹಿಸುವಷ್ಟು ಅದು ಉದಾರವಾಗಿಲ್ಲ. ಮನೆಯವರಿಗೆ ಓದುವ ವಯಸ್ಸಿನ ಎಳೆ ಹುಡುಗಿಯ ಪ್ರೇಮ ಪ್ರಕರಣ ಭಯಗೊಳಿಸುತ್ತದೆ.

ಅದು ಸಹಜವೇ.

ರಜೆ ಮುಗಿದು ಶಾಲೆ ಶುರುವಾದ ದಿನ, ಅಕ್ಟೋಬರ್ ೨೯. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅಂಕ ತೆಗೆದದ್ದು ಕಡಿಮೆಯಾಯಿತೆಂದು ನೊಂದಿದ್ದಳೋ; ಗೆಳೆಯನೊಟ್ಟಿಗೆ ಮಾತಾಡಲೆಂದು ಬೆಟ್ಟ ಹತ್ತಿದಳೋ ಅಂತೂ ಶಾಲೆ ಬಿಟ್ಟು ತೀರ್ಥಹಳ್ಳಿ ಹೊರವಲಯದ ಬೆಟ್ಟ ಏರಿದ್ದಾಳೆ. ಒಬ್ಬಳೇ ಆಗಿ ಭಯಗೊಂಡು ಕೂಗಿದಾಗ ಒಬ್ಬ ಮಹಿಳೆ ನೋಡಿ, ಕರೆತಂದು ಅವಳ ಮನೆ ತಲುಪಿಸಿದ್ದಾರೆ. ಮನೆಯವರಿಗೆ ಗಾಬರಿಯಾಗಿ ಗದರಿರಬಹುದು. ಕೊಂಚ ಚಕಮಕಿಯಾಗಿರಬಹುದು. ಹುಡುಗಿ ಮುನಿಸಿಕೊಂಡಿರಬಹುದು.

ಅದೂ ಸಹಜವೇ. ಆದರೆ ಇಲ್ಲಿಂದ ಮುಂದಿನದು ಅಸಹಜವಷ್ಟೇ ಅಲ್ಲ, ದುರ್ದೈವ ಮತ್ತು ಅನ್ಯಾಯ.

ಒಂದೆಡೆ ಇಂಗ್ಲಿಷ್ ಮೀಡಿಯಂ ಶಾಲೆಯ ಅರ್ಥವಾಗದ ಪಾಠಗಳ ಒತ್ತಡ, ಮತ್ತೊಂದೆಡೆ ಎಳೆಯ ಹೃದಯದ ಪ್ರೇಮವೆಂಬ ಸೆಳೆತ; ಮನೆಯವರ ಪ್ರತಿರೋಧಕ್ಕೆ ಎದುರಾಡಲೂ ಆಗದೇ; ಅದನ್ನು ಒಪ್ಪಿಕೊಳ್ಳಲೂ ಆಗದೇ ಹುಡುಗಿಗೆ ಬದುಕೇ ಸಾಕೆನಿಸಿದೆ. ತಂಗಿಗೆ ಹಾಗೂ ಗೆಳೆಯನಿಗೆ ಪತ್ರ ಬರೆದಿಟ್ಟು, ಮೆಸೇಜು ಮಾಡಿ ಮನೆಯಲ್ಲಿದ್ದ ಅಜ್ಜಿಯ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದು ಮಲಗಿದ್ದಾಳೆ. ಅಸ್ವಸ್ಥಳಾದಾಗ ತಾಯ್ತಂದೆಯರು ಆಸ್ಪತ್ರೆಗೊಯ್ದಿದ್ದಾರೆ. ಅಪರ ರಾತ್ರಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಶಿವಮೊಗ್ಗ, ಮಣಿಪಾಲ ಎಂದೆಲ್ಲ ತಿರುಗಿದ್ದಾರೆ. ಕೊನೆಗೆ ಪುಟ್ಟ ಹೃದಯ ಇಷ್ಟು ಪೆಟ್ಟು ತಾಳಲಾರೆನೆಂದು ನಿಂತೇ ಹೋಯಿತು.

ಅವಳು ಕನ್ಯೆಯಾಗಿಯೇ ತೀರಿಕೊಂಡಿದ್ದಳು. ಅತ್ಯಾಚಾರವೂ ಆಗಿರಲಿಲ್ಲ, ಕೊಲೆಯೂ ಆಗಿರಲಿಲ್ಲ. ಆದರೆ ಪಾಲಕರು ಹಾಗೆ ಭಾವಿಸಿದರು. ಆ ಒಂದೆರೆಡು ವಾರ ಎಲ್ಲರೂ ಸಂಯಮ ಕಳೆದುಕೊಂಡಂತೆ ಕಂಡುಬಂದರು. ಪ್ರೇಮಿಗಳ ಧರ್ಮ-ಜಾತಿ ಹುಡುಹುಡುಕಿ ಬಿಂಬಿಸಿ ಧರ್ಮವಾದಿಗಳು ಬೊಬ್ಬೆ ಹೊಡೆದರು. ತೀರ್ಥಹಳ್ಳಿ ಕರ್ಫ್ಯೂನಿಂದ ಮಲಗಿತು. ಎಲ್ಲೆಲ್ಲಿಂದಲೋ ಮಹಿಳೆಯರ ಕರೆತಂದು ‘ಅಪರಾಧಿಗಳನ್ನು ಬಂಧಿಸಿ’ ಎಂದು ಕೂಗಲಾಯಿತು. ಮಾಧ್ಯಮಗಳು ದಿನಪೂರ್ತಿ, ವಾರ ಪೂರ್ತಿ ಪುಂಖಾನುಪುಂಖವಾಗಿ ಸುಳ್ಳು ಊಹೆಗಳ ಹರಿಬಿಟ್ಟವು. ಅನುಮಾನದ ಮುಳ್ಳನ್ನು ಅನ್ಯಧರ್ಮೀಯರ ಮೇಲೆ ಹರಿಸಿ ಅತ್ಯಾಚಾರ, ಕೊಲೆ, ಲವ್ ಜಿಹಾದ್ ಎಂದೆಲ್ಲ ಬಿಂಬಿಸಲಾಯಿತು. ಮೊದಲಿನಿಂದ ಸಾರ್ವಜನಿಕ ಅಭಿಪ್ರಾಯದ ಹಾದಿ ತಪ್ಪಿಸಲಾಯಿತು. ತೀರ್ಥಹಳ್ಳಿ ಕರ್ಫ್ಯೂ ಹೊದ್ದು ಮಲಗಲು ಕೋಮು ರಾಜಕಾರಣಿಗಳದ್ದು ಎಷ್ಟೋ ಅಷ್ಟೇ ಮಾಧ್ಯಮಗಳ ಪಾಲೂ ಇದೆ. ಗಾಯಕಿಯೊಬ್ಬರು ಮಠಾಧಿಪತಿ ತನ್ನಮೇಲೆ ಅತ್ಯಾಚಾರ ನಡೆಸಿದರೆಂದು ದೂರು ನೀಡಿದಾಗಲೂ ಬಾಯಿ ಮುಚ್ಚಿಕೊಂಡಿದ್ದ ಮಾಧ್ಯಮಗಳು ಈಗ ತಾವೇ ತನಿಖಾಧಿಕಾರಿಗಳ, ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ತೀರ್ಪು ಕೊಡತೊಡಗಿದರು. ನಿಜವಾಗಿ ಎರಡು ಹೃದಯಗಳ ನಡುವೆ ನಡೆದಿದ್ದನ್ನು ಪಾಲಕರ ಸಮೇತ ಎಲ್ಲರೂ ಮುಚ್ಚಿಹಾಕಿದರು.

ತೀರ್ಥಹಳ್ಳಿ ಪ್ರಕರಣದ ಎರಡು ಅನಾಹುತಗಳೆಂದರೆ ಹುಡುಗಿಯ ಪಾಲಕರು ತಪ್ಪು ಮಾಹಿತಿಯ ದೂರು ಮತ್ತು ಹೇಳಿಕೆ ಕೊಡುತ್ತ ರಾಜಕಾರಣದ ದಾಳವಾಗಿ ತಮ್ಮನ್ನು ಬಳಸಿಕೊಳ್ಳಲು ಬಿಟ್ಟದ್ದು ಹಾಗೂ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಒಡೆದು ಸಂಘಟಿಸಿದ್ದು. ಎಬಿವಿಪಿ ಕೇವಲ ಹಿಂದೂ ವಿದ್ಯಾರ್ಥಿಗಳನ್ನು ಸಂಘಟಿಸಿದರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಂ ಹುಡುಗರನ್ನು ಸಂಘಟಿಸಿತು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದ ಎಲ್ಲೆಡೆ ಯುವಜನತೆ ಬೀದಿಗಿಳಿದು ಹೋರಾಡಿದಾಗ ಅಲ್ಲಿ ಜಾತಿ-ಧರ್ಮ ಪ್ರಜ್ಞೆ ನುಸುಳಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ನಡೆದದ್ದು ಅಸಲಿಗೆ ಅತ್ಯಾಚಾರವೇ ಅಲ್ಲವಾದರೂ ಹುಸಿ ಸಾರ್ವಜನಿಕ ಆಕ್ರೋಶ ಹುಟ್ಟಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಲಾಯಿತು. ರಾಜಕಾರಣದಿಂದ ದೂರವಿರುವ ಆಕ್ಟಿವಿಸ್ಟರೂ ಸಹಾ ವ್ಯವಧಾನ ಕಳೆದುಕೊಂಡು ಅಪರಾಧಿಯನ್ನು ಬಂಧಿಸುವಂತೆ ಒತ್ತಾಯಿಸತೊಡಗಿದರು.

ಈಗ ನಮ್ಮ ದೇಶದಲ್ಲಿ ಅತ್ಯಾಚಾರ, ಅದರಲ್ಲೂ ಶಾಲಾ ಮಕ್ಕಳ ಮೇಲೆ ನಡೆಯುವುದು ಹೆಚ್ಚುತ್ತಿದೆ. ಹೆಚ್ಚೆಚ್ಚು ವರದಿಯಾಗುತ್ತಿದೆ. ಅದರ ಸುದ್ದಿ ಎತ್ತಿದರೆ ಸಾರ್ವಜನಿಕರ ಆಕ್ರೋಶ ಕೆರಳಿಸಬಹುದೆಂದು ಎಲ್ಲರಿಗೂ ಗೊತ್ತಾಗಿದೆ. ದೆಹಲಿಯಲ್ಲಿ ಕಳೆದ ವರ್ಷ ದೂರು ದಾಖಲಿಸಲಾದ ಅತ್ಯಾಚಾರ ಪ್ರಕರಣಗಳಲ್ಲಿ ೭೨% ‘ಮದುವೆಯಾಗಲು ನಿರಾಕರಿಸಿದ’ ಪ್ರೇಮಿಯ ಮೇಲೆ ಕೊಟ್ಟ ದೂರೇ ಆಗಿದೆ. ಎಂದರೆ ಕಾನೂನು, ಜನಾಭಿಪ್ರಾಯವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಕರಣವೇ ಅಲ್ಲದ ಪ್ರಕರಣಗಳನ್ನು ಸಾರ್ವಜನಿಕ ಚರ್ಚೆಗೆ ಮುನ್ನೆಲೆಗೆ ತರುವ ಪರಿಪಾಠ ಅವಕಾಶವಾದಿ ರಾಜಕಾರಣಿಗಳಲ್ಲಿ, ಮಾಧ್ಯಮದವರಲ್ಲಿ ಹೇಗೋ ಹಾಗೆ ಜನಸಾಮಾನ್ಯರಲ್ಲಿಯೂ ಕಾಣಿಸುತ್ತಿದೆ. ಇದು ಅತ್ಯಾಚಾರದಷ್ಟೇ ಅಪಾಯಕಾರಿ ಬೆಳವಣಿಗೆಯಾಗಿದೆ.

ತಕ್ಷಣದ ಪ್ರತಿಕ್ರಿಯೆ ನೀಡುವ ಗರಜು ಎಷ್ಟು ಹೆಚ್ಚಿದೆಯೆಂದರೆ ಸಂಯಮವೆಂಬ ಪದ ಮಾಯವಾಗಿದೆ. ಕೆಲವಕ್ಷರ ಕಲಿತ ಕೂಡಲೇ, ಕಂಪ್ಯೂಟರಿನ ಮುಂದೆ ಕುಳಿತ ಕೂಡಲೇ ನಾವು ಜಿಜ್ಞಾಸುಗಳಾಗಿಬಿಡುವುದಿಲ್ಲ. ಪ್ರತಿಕ್ರಿಯೆ ನೀಡುವ ಮುನ್ನ ಅದು ಭಾವಾವೇಶದ ಪ್ರತಿಕ್ರಿಯೆಯಾಗದಂತೆ ಚಣನಿಂತು ಎಡಬಲ ಯೋಚಿಸಬೇಕು. ಅವಸರದ ಕ್ರಿಯೆಗಳು, ಪ್ರತಿಕ್ರಿಯೆಗಳು ಕೇಸನ್ನು, ತನಿಖೆಯನ್ನು ‘ಗಟ್ಟಿ’ ಮಾಡುವ ಬದಲು ದುರ್ಬಲಗೊಳಿಸುತ್ತವೆ. ಈ ಸೂಕ್ಷ್ಮವನ್ನು ಬಾಧಿತರೂ, ಹೋರಾಟಗಾರರೂ ಅರಿಯಬೇಕು.

ಜೊತೆಗೆ ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮತ್ತು ಸಿಒಡಿ ಇಲ್ಲಿಯವರೆಗೆ ಪರಸ್ಪರ ಪೂರಕವಾಗಿ, ವಿವೇಕಯುತವಾಗಿ ವರ್ತಿಸಿ ಉತ್ತಮ ಕೆಲಸ ಮಾಡಿವೆ. ಸಂಭವಿಸಬಹುದಾದ ಕೋಮುಗಲಭೆ ತಪ್ಪಿದೆ. ಅವರನ್ನು ಅಭಿನಂದಿಸಬೇಕು.

ಪಾಲಕತನ


ಒಬ್ಬ ಸ್ನೇಹಿತರು ಹೇಳುತ್ತಿದ್ದರು: ‘ಮಕ್ಕಳು ಒಂಥರಾ ಬೆಕ್ಕಿನ ಮರಿ ಹಾಗೆ. ಹೊಸಿಲ ಮೇಲೆ ಕೂತಿರುತ್ತದೆ. ನೀವು ಮುದ್ದಿಸಿ ಮೈಸವರಲು ಕೈ ನೀಡಿದ್ದರೂ ತನ್ನನ್ನು ಬುಟ್ಟಿಯಡಿ ಕವುಚಿ ಹಾಕಲಿಕ್ಕೇ ಬಂದರೇನೋ ಎಂದು ಭಾವಿಸಿ ಟಣ್ಣನೆ ದೂರ ಜಿಗಿಯುತ್ತದೆ. ಹತ್ತಿರ ಹೋದರೆ ಹಿಸ್ಸ್ ಎಂದು ಹೆದರಿಸುತ್ತದೆ. ಅವುಕ್ಕೆ ನಾವು ಅರ್ಥವೇ ಆಗಲ್ಲ.’ ನಿಜ. ನಾವು ಏನೆಂದು, ಬದುಕಿನ ನಾವೆ ಎತ್ತ ಹೊರಟಿದೆಯೆಂದು ತಿಳಿಯುವ ಮೊದಲೇ ನಮ್ಮ ನಾವೆಯೊಳಗೆ ಇನ್ನೊಂದು ಪುಟ್ಟ ನಾವೆ ಹುಟ್ಟಿ ಚಲಿಸಲು ಆರಂಭಿಸಿರುತ್ತದೆ. ಪುಟ್ಟ ನಾವೆಗೋ ಸದಾ ಹೊರ ಜಿಗಿಯುವ ತುಡಿತ, ತವಕ. ಆದರೆ ತಾನು ಸುರಕ್ಷಿತವೆಂದು ನಂಬಿಕೊಂಡ ದೊಡ್ಡ ನಾವೆಗೋ ಪುಟ್ಟ ನಾವೆಗೆ ಎದುರಾಗಲಿರುವ ಬಿರುಗಾಳಿ, ಚಂಡಮಾರುತಗಳ ಕಲ್ಪಿತ ಆತಂಕ. ತೊದಲು ಹೆಜ್ಜೆಗಳನ್ನಿಡಲು ಕಲಿಯುವುದರಲ್ಲಿ ಎದ್ದೆನೋ ಬಿದ್ದೇನೋ ಎಂದು ಕಾಲಡಿ ಗಮನಿಸದೇ ಮುಂದೋಡುವ ಎಳೆಯ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳುವ ಬಗ್ಗೆಯೇ ಪಾಲಕರಿಗೆ ಸದಾ ಚಿಂತೆ. ಆದರೆ ಈ ಸುರಕ್ಷೆಯ ಚಿಂತೆಯಿಂದ ನಮ್ಮಿಂದ ಶರವೇಗದಲ್ಲಿ ಓಡಿ ದೂರವಾಗುತ್ತಿರುವ ಮಕ್ಕಳ ವಾಸ್ತವ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

ಈ ಅವಸರದ ಯುಗದಲ್ಲಿ ಉಳಿದೆಲ್ಲ ಕೌಟುಂಬಿಕ ಸಂಬಂಧಗಳ ಹಾಗೇ ಪಾಲಕತನ ಎನ್ನುವುದು ಮೊದಲಿಗಿಂತ ಹೆಚ್ಚೆಚ್ಚು ಸಂಕೀರ್ಣವಾಗುತ್ತ ನಡೆದಿದೆ. ಆಧುನಿಕ ಬದುಕಿನ ಅವಶ್ಯಕತೆಗಳು, ವಿದ್ಯೆ, ನೌಕರಿ, ಉದ್ಯೋಗ, ಸಾಧನೆ ಇವನ್ನೆಲ್ಲ ಎಳೆಯ ಮನಸುಗಳಲ್ಲಿ ತುಂಬುತ್ತ, ಸಫಲತೆ, ವಿಫಲತೆಗಳ ಚೌಕಟ್ಟು ನಿರೂಪಿಸುತ್ತ, ಅದೇ ಪರಿಧಿಯಲ್ಲಿ ಯಶಸ್ಸು ಪಡೆಯುವಂತೆ ಶ್ರಮಿಸುವುದೇ ಪಾಲಕತನ ಎಂದುಕೊಂಡಿದ್ದೇವೆ. ಮಕ್ಕಳ ವ್ಯಕ್ತಿತ್ವ, ಭವಿಷ್ಯ ಹಾಳಾದರೆ ಅದರ ಹೊಣೆ ಪಾಲಕರ ಮೇಲೆ ಬರುತ್ತದೆ; ಹಾಗೆಂದು ನಮಗಿಷ್ಟ ಬಂದಂತೆ ರೂಪಿಸಹೊರಟರೆ ನಿರ್ಬಂಧ ಎನಿಸಿಕೊಳ್ಳುತ್ತದೆ. ಹೀಗಿರುತ್ತ ನಿರ್ಬಂಧ ಮತ್ತು ಶಿಸ್ತಿನ ನಡುವಿನ ಗೆರೆ ತೆಳುವಾಗುತ್ತ; ಸ್ವಾತಂತ್ರ್ಯ-ಸ್ವೇಚ್ಛೆಯ ಅರ್ಥ ವ್ಯಾಪ್ತಿ ಪರಸ್ಪರ ಅಲುಗಾಡುತ್ತ ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಸರಿಯೋ? ಅವರ ಮೇಲೊಂದು ಕಣ್ಣಿಟ್ಟು ನಿಯಂತ್ರಿಸುವುದು ಸರಿಯೋ? ಎಂಬ ಗೊಂದಲ ಪಾಲಕರಲ್ಲಿದೆ. ಅತಿ ಸಂಪರ್ಕಯುಗದಲ್ಲಿ ಪ್ರೀತಿ ಪ್ರೇಮದ ಕುರಿತು ಕೊಂಚ ಸಾವಧಾನವಾಗಿರುವುದು; ಕಾಮ ಕುರಿತು ಭಯಮೌಢ್ಯವಿರದ ಆರೋಗ್ಯಕರ ಅಭಿಪ್ರಾಯವನ್ನು ಮಕ್ಕಳು ಹೊಂದುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ.

ಮಕ್ಕಳ ಹೊಟ್ಟೆಬಟ್ಟೆ ನಿಭಾಯಿಸುವುದಷ್ಟೇ ಪಾಲಕತನವಲ್ಲ. ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಾವು ವಹಿಸುವ ಪಾತ್ರ ಮತ್ತು ಮಾದರಿ ತುಂಬ ಮುಖ್ಯ. ನಮ್ಮ ಪ್ರತಿ ಚಹರೆಯನ್ನೂ, ಸುಳ್ಳನ್ನೂ, ಮೂರ್ಖತನವನ್ನೂ, ಸಫಲತೆ-ವಿಫಲತೆಯನ್ನೂ, ಇಬ್ಬಗೆಯನ್ನೂ ಬಹುಸೂಕ್ಷ್ಮವಾಗಿ ಎಳೆಯ ಮನಸುಗಳು ವಿಶ್ಲೇಷಿಸುತ್ತಿರುತ್ತವೆ. ಹೀಗಿರುವಾಗ ಅವರಿಗೊಂದು ಮಾದರಿಯಾಗಿ ಬದುಕುವುದು; ಮಕ್ಕಳನ್ನು ಆಮಿಷವಾಗಿ ಸೆಳೆಯಬಲ್ಲದರ ವಿರುದ್ಧ ಅವರಲ್ಲೇ ಅಭಿಪ್ರಾಯ ರೂಪಿಸುವುದು ತುಂಬ ಮುಖ್ಯವಾಗಿದೆ. ಮಕ್ಕಳ ರಕ್ಷಿಸಿಕೊಳ್ಳುವ ಸಕಲ ಹೊಣೆಯೂ ಅವರಿಗಿಂತ ಹೆಚ್ಚು ನಮ್ಮ ಮೇಲೇ ಇದೆ; ಮಕ್ಕಳೆಂದರೆ ನಮ್ಮ ಉಪದೇಶ ಕೇಳುತ್ತ ಇರಬೇಕಾಗಿರುವ ಶ್ರೋತೃವರ್ಗ ಎಂಬ ಭಾವನೆಯಿದೆ. ‘ಮಕ್ಕಳಿಗೇನು ತಿಳಿಯುತ್ತದೆ?’ ಎಂಬ ಧೋರಣೆಯಿಂದ ಅವರ ಮಾತು ಕೇಳಿಸಿಕೊಳ್ಳುವುದೂ ಕಡಿಮೆ. ಆದರೆ ನಮ್ಮ, ಅವರ ನಡುವೆ ತಲೆಮಾರುಗಳ ಕಂದರ ಅಗಲವಾಗುತ್ತ ಹೋಗಲು ಈ ಧೋರಣೆಯೇ ಕಾರಣವಾಗಿದೆ.

ತೀರ್ಥಹಳ್ಳಿ ಬಾಲಕಿಯ ಪಾಲಕರ ಈ ಎಲ್ಲ ಆತಂಕಗಳನ್ನು ಯಾರೂ ಅರ್ಥಮಾಡಿಕೊಳ್ಳಬಹುದು. ಆದರೆ ಪಾಲಕತನದ ಜವಾಬ್ದಾರಿ, ಆತಂಕಗಳ ನಡುವೆ ರಾಜಕೀಯವೂ ನುಸುಳಿದರೆ ಏನು ಅನಾಹುತವಾಗಬಹುದೋ ಅದು ಅಲ್ಲಿ ಆಯಿತು. ಅವರು ಅವಳದು ಕೊಲೆಯೇ ಎನ್ನುತ್ತಾರೆ, ಹಾಗಾದರೆ ಕೊಲೆಗಾರ ಯಾರು? ಎಳೆಯ ಮನಸಿನಲ್ಲಿ ಸಾಯುವಷ್ಟು ಧೈರ್ಯ ತುಂಬಿದ ಹುಂಬ ಪ್ರೇಮವೇ? ಎಳೆಯರ ಪ್ರೇಮವನ್ನು ತಮ್ಮ ಪಾಲಕತನದ ವೈಫಲ್ಯವೆಂದು ಭಾವಿಸಿ ಅದನ್ನು ಮುಚ್ಚಿಟ್ಟುಕೊಳ್ಳಬಯಸುವ ಪಾಲಕರ ಮನಸ್ಥಿತಿಯೇ? ಎಳಸು ಜೀವಗಳು ಬದುಕು ಕೊನೆಗೊಳಿಸಲು ಕಾರಣವಾದ ಸಾಮಾಜಿಕ ಮೌಲ್ಯ ವ್ಯವಸ್ಥೆಯೇ? ಎಲ್ಲದರಲ್ಲೂ ಮೂಗು ತೂರಿಸುವ ಲಾಭನಷ್ಟ ಲೆಕ್ಕಾಚಾರದ, ಒಳ ಹಿಕಮತ್ತುಗಳ ರಾಜಕಾರಣವೇ?

ನಮಗೆ ಕ್ಷುಲ್ಲಕ ಎನಿಸುವ ವಿಷಯ ಮಕ್ಕಳಿಗೆ ಜೀವನ್ಮರಣದ ಪ್ರಶ್ನೆಯಾಗುವುದು ಹೆಚ್ಚುತ್ತಿದೆ. ಇಂಥದ್ದು ಮರುಕಳಿಸದಂತೆ ನೋಡಿಕೊಳ್ಳಬೇಕೆಂದರೆ ಪಾಲಕರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿಮಗೆ ಅನುಮಾನಗಳಿದ್ದರೂ, ‘ನನಗೆ ನಿನ್ನ ಮೇಲೆ, ನಿನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ, ನಿನ್ನ ತೀರ್ಮಾನದ ಮೇಲೆ ಗೌರವವಿದೆ’ ಎಂದೇ ಹೇಳಬೇಕು. ಅಷ್ಟಾದರೆ ಸಾಕು, ಅವರು ತಮ್ಮ ಅಳಲು, ಆತಂಕಗಳ ಬಿಚ್ಚಿಡುತ್ತಾರೆ. ಇಲ್ಲದಿದ್ದರೆ ಎಲ್ಲವನ್ನು ಬಚ್ಚಿಡುತ್ತಾರೆ. ಅವರೊಡನೆ ನಡೆಯುತ್ತ, ಎದ್ದಲ್ಲಿ ನಾವೂ ಏಳುತ್ತ, ಬಿದ್ದಲ್ಲಿ ನಾವೂ ಬೀಳುತ್ತ ಹಿಡಿಯುತ್ತ, ಅವರ ಜೊತೆಜೊತೆಗೆ ಸಾಗುವುದೊಂದೇ ಸೂಕ್ತ ಮಾರ್ಗ.

ನೆನಪಿಡುವ: ಮಕ್ಕಳೂ ಯೋಚಿಸುತ್ತಾರೆ, ಅವರ ಕಾಲ ಒತ್ತಡ ಪರಿಸ್ಥಿತಿಗೆ ತಕ್ಕ ಹಾಗೆ. ಅವರು ಗೊಂದಲಗೊಳ್ಳುತ್ತಾರೆ, ತಮ್ಮ ತಿಳುವಳಿಕೆಗೆ ತಕ್ಕ ಹಾಗೆ. ಪಾಲಕರು ನಿಧಾನವಾಗಿ ಅವರ ಲೋಕದ ತೊಡಕುಗಳ ಜಿಗ್ಗಿನೊಳಗೆ ಬಿಡಿಸಿಕೊಂಡು ಒಳಪ್ರವೇಶಿಸಬೇಕು. ಹಾಗಾದರೆ ಮಾತ್ರ ಇಬ್ಬರೂ ಪಾರು. ಇಲ್ಲದಿದ್ದರೆ ಒಬ್ಬರಲ್ಲ ಒಬ್ಬರಿಗೆ ಗಾಯ.


No comments:

Post a Comment