ಎಳೆಯ ಭಿಕ್ಕುವಿನ
ದಟ್ಟಿ ಹರಿದು ಹೋಯಿತು
ಬುದ್ಧಗುರುವನು ಮುಟ್ಟಿತು ತಲ್ಲಣ
‘ಗುರುವೇ, ಹರಿದು ಹೋಯಿತು ದಟ್ಟಿ,
ಏನು ಮಾಡುವುದು?’
‘ಹರಿದರೇನು ಮಗೂ, ಹಾಸಿ ಮಲಗು.’
ದಿನ ಉರುಳಿದವು
ಹಾಸಿ ಹಾಸಿ ಮಲಗಿ
ದಟ್ಟಿ ಇನ್ನಷ್ಟು ಜೀರ್ಣ
‘ಗುರುವೇ, ಹಾಸಿಹಾಸಿ ದಟ್ಟಿ
ಮತ್ತೆಲ್ಲೆಲ್ಲೋ ಹಿಸಿಯಿತು..’
‘ಹಿಸಿದರೇನು ಮಗೂ, ನೆಲ ವರೆಸಲು ಬಳಸು..’
ದಿನ ಉರುಳಿದವು
ಕೊಳೆ ವರೆವರೆಸಿ
ದಟ್ಟಿ ಚಿಂದಿಚೂರು
ಕಳೆದುಕೊಳುವುದ ಅರಿಯದ
ಎಳಸು ದನಿ
ಕ್ಷೀಣವಾಗಿ ಹೇಳಿತು..
‘ಗುರುವೇ, ವರೆಸಿದ ದಟ್ಟಿ
ನೂರು ತುಕಡಾ ತುಂಡು..’
‘ತುಂಡು ಬಟ್ಟೆಯಾದರೇನು ಮಗೂ
ಕಾಲು ವರೆಸಲು ಹಾಕು..’
ದಿನ ಉರುಳಿದವು.
ಹೋಗಿ ಬರುವವರ ಪಾದಧೂಳಿ
ನೆತ್ತಿ ಮೇಲೆ ಹೊತ್ತೊತ್ತು
ದಟ್ಟಿ ಬಣ್ಣ ಸಮೇತ ಕರಗಿತು
ಅಂಗಾಲು ಶುಭ್ರ
ಕಾಷಾಯಕ್ಕೆ ಮಣ್ಣ ಬಣ್ಣ
ತಾನುಟ್ಟ ಮೊದಲ ವಸ್ತ್ರವಿಂದು
ಮಾಸಿದ ಹಿಂಜು ನೂಲಿನಗುಪ್ಪೆ
ಎಳೆ ಆತುಮದ ಮರುಕ
ಕಣ್ಣ ಪಸೆಯಾಗಿ ಇಂಗತೊಡಗಿತು
ಆ ಇರುಳು
ಕಗ್ಗತ್ತಲಿಗೆ ಬೆಚ್ಚುವ ಎಳೆಯ ಬಿಕ್ಕು
‘ದುಗುಡವೇಕೆ ಮಗೂ?
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು,
ಇಡಿಯ ಲೋಕವನ್ನ.
ಕೊನೆಗು ಕಾಷಾಯ ತೊಡಲೇಬೇಕು ಮಣ್ಣಬಣ್ಣ
ಬಟ್ಟೆ ಹರಿದರೂ ನೂಲ ಗಟ್ಟಿಯಿರಬಹುದಲ್ಲ?
ಎಳೆ ಹುಡುಕಿ ಹೊಸೆ ಬತ್ತಿ, ಬೆಳಗು ಹಣತೆಯನ್ನ..’
ಝಗ್ಗನೆ ಬೆಳಗಿತು ಆತುಮ ದೀಪ
ಕರಗಿತು ದಟ್ಟಿಯೋ ನೂಲೋ ಎಂಬ ಇರುಳ ತರ್ಕ
ಅನು, ತಿಳಿದೆಯೇನು ಬೆಳಕಿನರಿವನ್ನು?
ಅಳಿಸಲಾಗದು ರೂಹುವಜನಿಲ್ಲದುದನು.
No comments:
Post a Comment