೫೯ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂಭ್ರಮದ ಹೊತ್ತು ಕೆಲ ಆತಂಕಗಳನ್ನು ಹಂಚಿಕೊಳ್ಳಲು ಸೂಕ್ತ ಸಮಯವೆಂದು ಭಾವಿಸುವೆ.
೫೮ ವರ್ಷ ಕೆಳಗೆ ನಾನಾ ಪ್ರಾಂತ್ಯ, ಆಡಳಿತಾತ್ಮಕ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಜನರನ್ನು ಕನ್ನಡ ಎಂಬ ಭಾಷಿಕ ಅಸ್ಮಿತೆಯು ಒಂದುಗೂಡಿಸಿತ್ತು. ಹಲವಾರು ವಿರೋಧಗಳ ನಡುವೆಯೂ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದಾಗಿ ಕರ್ನಾಟಕ ರೂಪುಗೊಂಡಿತು. ಆದರೆ ಐದು ದಶಕಗಳಿಗಿಂತ ಮಿಗಿಲಾಗಿ ಕಾಲ ಸರಿದರೂ ಅಂದಿನ ಆತಂಕವೇನೂ ಕಡಿಮೆಯಾಗಿಲ್ಲ. ಗಡಿ ಸಮಸ್ಯೆಯಿಂದ ಹಿಡಿದು ಶೈಕ್ಷಣಿಕ ಭಾಷೆ ಯಾವುದಿರಬೇಕೆನ್ನುವವರೆಗೆ ಎಲ್ಲ ಗೊಂದಲಗಳೂ ಹಾಗೇ ಮುಂದುವರೆದಿವೆ.
ಗಡಿ ತಂಟೆಯಂತೂ ಆಗೀಗ ಚಿಗುರುತ್ತಲೇ ಇದೆ. ಮಹಾರಾಷ್ಟ್ರದ ಗಡಿ ತಂಟೆ ನಿರಂತರ ಕಿರುಕುಳವಾಗಿ ಮುಂದುವರೆಯುತ್ತಿದೆ. ಭಾಷೆ ಮತ್ತು ಕ್ರೀಡೆ ಧರ್ಮ-ಜಾತಿಯ ಹಂಗಿಲ್ಲದೇ ಜನರನ್ನು ಒಂದುಗೂಡಿಸಬಲ್ಲ ಶಕ್ತಿಗಳು. ಆದರೆ ಈಗ ಭಾಷೆಯೂ ರಾಜಕಾರಣದ ದಾಳವಾಗಿ ಭಾಷಿಕ ಮೂಲಭೂತವಾದಕ್ಕೆ, ಭಯೋತ್ಪಾದನೆಗೆ ಬಳಕೆಯಾಗುತ್ತಿರುವುದಕ್ಕೆ ನಮ್ಮ ನೆರೆಯ ರಾಜ್ಯಗಳು ಸಾಕ್ಷಿಯಾಗಿವೆ. ಅದರಲ್ಲೂ ಮಹಾರಾಷ್ಟ್ರವು ಭಾಷೆ ಮತ್ತು ಧರ್ಮವನ್ನು ಒಟ್ಟೊಟ್ಟಿಗೆ ನೋಡುವ ರಾಜಕಾರಣಕ್ಕೆ ಕೆಟ್ಟ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಗಡಿಯಲ್ಲಿ ಬದುಕುವವರಿಗೆ ಭಾಷೆಯ ತೊಂದರೆ ಇದೆಯೋ ಇಲ್ಲವೋ, ಆದರೆ ನಮ್ಮನ್ನು ಆಳುವ ಜನನಾಯಕರಿಗೆ ಅದು ಜೀವನ್ಮರಣದ ಪ್ರಶ್ನೆಗಿಂತ ಹೆಚ್ಚಾಗಿದೆ. ಗಡಿ ತಕರಾರು ಜ್ವಲಂತವಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಸಂಚಿನ ರಾಜಕಾರಣದ ಹುನ್ನಾರಕ್ಕೆ ಜನಸಾಮಾನ್ಯ ಬಲಿಯಾಗಬಾರದು ಹಾಗೂ ಭಾಷಾ ಸೌಹಾರ್ದ ಕಳೆದುಕೊಳ್ಳಬಾರದು. ಏಕೆಂದರೆ ಈಗ ಜಾಗತಿಕ ಭಾಷೆಯ ಎದುರಿಗೆ ಎಲ್ಲ ದೇಶಭಾಷೆಗಳೂ ಆತಂಕ ಎದುರಿಸುತ್ತಿರುವಾಗ ನಮ್ಮನಮ್ಮಲ್ಲೇ ನಡೆವ ಕಚ್ಚಾಟ ಪರಸ್ಪರರಿಗೆ ಮುಳುವಾಗದೇ ಬೇರಾವ ಸಾಧನೆಯನ್ನೂ ಮಾಡಲಾರದು.
ಕರ್ನಾಟಕಕ್ಕೆ ಇತ್ತೀಚೆಗೆ ಇನ್ನೊಂದು ಆತಂಕ ಎದುರಾಗಿದೆ. ಅದು ರಾಜ್ಯವನ್ನು ಒಡೆಯುವ ಆತಂಕ. ಕೆಲವೊಮ್ಮೆ ನಮ್ಮ ಜನನಾಯಕರೂ ಇದ್ದಕ್ಕಿದ್ದಂತೆ ಉತ್ತರ ಕರ್ನಾಟಕ ಹಿಂದುಳಿದಿದೆ, ಕರ್ನಾಟಕ ಒಡೆಯಬೇಕು, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಅದೊಂದೇ ದಾರಿ ಎಂದು ಕೂಗು ಹಾಕತೊಡಗುತ್ತಾರೆ.
ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಸೂರ್ಯ ಸ್ಪಷ್ಟ. ಆದರೆ ಅದಕ್ಕಾಗಿ ಅದು ಪಡೆಯುತ್ತಿರುವ ಅನುದಾನ, ಕಾಳಜಿ ಕಡಿಮೆಯದಲ್ಲ. ಏಕೀಕರಣ ನಂತರ ಬಂದ ದೊಡ್ಡ ನೀರಾವರಿ, ವಿದ್ಯುಚ್ಛಕ್ತಿ ಯೋಜನೆಗಳು ಉತ್ತರ ಕರ್ನಾಟಕಕ್ಕೇ ಬಂದಿವೆ. ಗಡಿ ತಾಲೂಕು, ಹಿಂದುಳಿದ ತಾಲೂಕು, ಬರಪೀಡಿತ ತಾಲೂಕು - ಹೀಗೇ ನಾನಾ ಶೀರ್ಷಿಕೆಗಳಡಿ ಕಾಮಗಾರಿ, ಸಹಾಯಧನ ಹರಿದುಬಂದಿದೆ. ೨೦೧೦ರಲ್ಲಿ ಒಂದೇ ವರ್ಷ ಬಿಜೆಪಿ ಸರ್ಕಾರ ನಾಲ್ಕೂವರೆ ಸಾವಿರ ಕೋಟಿಯನ್ನು ೫೫ ಯೋಜನೆಗಳಿಗೆ ಕೊಟ್ಟಿದೆ. ಅವನ್ನು ತಲುಪಬೇಕಾದವರಿಗೆ ತಲುಪುವಂತೆ ಮಾಡಲು ಆ ಭಾಗದ ಜನನಾಯಕರು ಸಂಪೂರ್ಣ ಸೋತಿದ್ದಾರೆ. ಪ್ರತಿ ವರ್ಷ ನೆರೆ ಅಥವಾ ಬರ - ಎರಡರಲ್ಲಿ ಒಂದು ಘೋಷಣೆಯಾಗುವಂತೆ ನೋಡಿಕೊಂಡು, ಬಂದ ಪರಿಹಾರ ಹಣವನ್ನು ತಮ್ಮ ಹಿಂಬಾಲಕರಿಗೆ-ಚಮಚಾಗಳಿಗೆ ಲಾಭವಾಗುವಂತೆ ಹಂಚುತ್ತ ಎಲ್ಲ ಹಣ ಅಪವ್ಯಯವಾಗಿದೆ. ಉತ್ತರ ಕರ್ನಾಟಕದ ಜನ ಮಂತ್ರಿಯಾಗಿದ್ದಾರೆ, ಸಂಸದರಾಗಿದ್ದಾರೆ, ಮುಖ್ಯ ಮಂತ್ರಿಯಾಗಿದ್ದಾರೆ, ಉಪ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಲು ಅವರಿಗೆ ಯಾವುದು ಅಡ್ಡಿಯಾಗಿದೆ? ಭೂಮಿ ಮತ್ತು ಸಂಪನ್ಮೂಲವನ್ನು ಉದ್ದುದ್ದ, ಅಡ್ಡಡ್ಡ ಸೀಳಿ ಹಂಚಿಕೊಂಡ ನಾಯಕರಿಂದಲೇ ಅದು ಹಲವು ಮಿನಿ ರಿಪಬ್ಲಿಕ್‌ಗಳಂತೆ ಕಾರ್ಯ ನಿರ್ವಹಿಸುತ್ತ ಅಸಹಾಯಕ ಜನರು ಕೆಲಸ ಹುಡುಕುತ್ತ ಗುಳೆ ಹೋಗುವಂತಹ, ಅಪೌಷ್ಟಿಕತೆ-ಅನೀಮಿಯಾದಲ್ಲಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕರ್ನಾಟಕ ಮುಂದುವರೆದಿರುವುದು ಹೌದು. ಹಾಗೆ ಕಾಣುವುದೂ ಹೌದು. ಅದು ಮೊದಲಿನಿಂದಲೂ ಹಾಗೆಯೇ ಇದೆ. ಮಾದರಿ ರಾಜ್ಯವಾದ ಮೈಸೂರು ಏಕೀಕರಣಕ್ಕಿಂತ ಮೊದಲಿನಿಂದ ಹೀಗೇ ಇದೆ. ಆರೂಕಾಲು ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಬೆಂಗಳೂರು ಒಂದರಲ್ಲೇ ೮೭ ಲಕ್ಷ ಜನರಿದ್ದಾರೆ. ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ನಾನಾ ಮೂಲಗಳಿಂದ ಅರ್ಧಕ್ಕಿಂತ ಹೆಚ್ಚು ವರಮಾನ ಬೆಂಗಳೂರಿನಲ್ಲೇ ಹುಟ್ಟುತ್ತದೆ. ಬೆಂಗಳೂರು ಹಣ ಕೊಡುತ್ತದೆ, ಹಣ ಬಳಸಿಕೊಳ್ಳುತ್ತದೆ. ದೂರದ ಶಹರಗಳಿಗೆ ಅಷ್ಟು ಸಾಧ್ಯವಿಲ್ಲ - ಗಳಿಕೆಯಲ್ಲೂ, ಬಳಕೆಯಲ್ಲೂ. ಡಾ. ಡಿ. ಎಂ. ನಂಜುಂಡಪ್ಪ ವರದಿ ಗುರುತಿಸಿರುವಂತೆ ೧೧೪ ಹಿಂದುಳಿದ ತಾಲೂಕುಗಳಲ್ಲಿ ೫೯ ಉತ್ತರ ಕರ್ನಾಟಕದಲ್ಲಿದ್ದರೆ ೫೫ ದಕ್ಷಿಣ ಕರ್ನಾಟಕದಲ್ಲಿವೆ. ಹಿಂದುಳಿದ ತಾಲೂಕುಗಳ ಜನಪ್ರತಿನಿಧಿಗಳೇ ಮುಖ್ಯಮಂತ್ರಿಯಾದರೂ, ಮಂತ್ರಿಯಾದರೂ ಅವು ಹಿಂದುಳಿದ ಸ್ಥಿತಿಯಲ್ಲೇ ಉಳಿದವು. ಎಂದರೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಷ್ಟೆಲ್ಲ ವರ್ಷಗಳ ಯೋಜನೆಯ ನಂತರ ಕರ್ನಾಟಕದ ಚಿತ್ರಣವೇ ಬದಲಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಎಂದೇ ಉತ್ತರ ಕರ್ನಾಟಕ ಇಷ್ಟೆಲ್ಲ ಯೋಜನೆ, ಅನುದಾನ, ವಿಶೇಷ ಪ್ರಾಶಸ್ತ್ಯಗಳ ಹೊರತಾಗಿಯೂ ಹಿಂದುಳಿದಿದ್ದರೆ ಅಲ್ಲಿನ ಮುಕ್ಕೋಟಿ ಕನ್ನಡಿಗರ ಕ್ಷಮೆ ಕೇಳಬೇಕಾದವರು ಆಳಿ ಹೋದ ಜನನಾಯಕರು. ಅವರ ನಾಯಕತ್ವ ಪ್ರಶ್ನಿಸುವಂತಹ ಜನ ಜಾಗೃತಿ ಅಲ್ಲಿ ಹುಟ್ಟಬೇಕು. ಹೋರಾಟದಿಂದ ಸಮರ್ಥ ನಾಯಕತ್ವ ದೊರೆಯಬೇಕು. ಆಗ ರಾಜ್ಯ ಒಡೆಯುವ ಮಾತಿಗೆ ಒಂದು ಅರ್ಥವಿದೆ.
ಈಗಾಗಲೇ ಒಡೆದು ಹುಟ್ಟಿಕೊಂಡ ರಾಜ್ಯಗಳು ನಮ್ಮೆದುರಿವೆ. ಅಲ್ಲಿನ ಅವ್ಯವಸ್ಥೆ, ಭ್ರಷ್ಟ ನಾಯಕತ್ವ, ಸ್ವಾರ್ಥ ಜನನಾಯಕರನ್ನು ನಾವು ನೋಡುತ್ತಿದ್ದೇವೆ. ಹಾಗಿರುವಾಗ ಪೂರ್ವ ತಯಾರಿಯಿಲ್ಲದೇ ತಮ್ಮ ಹಿತಾಸಕ್ತಿಗಾಗಿ ರಾಜ್ಯ ಒಡೆಯುವ ಮಾತು ಹೇಳುತ್ತ ಜನರನ್ನು ಕೆರಳಿಸುವುದು ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಸರಿಯಾದ ನಡೆಯಲ್ಲ.
ಉತ್ತರ ಕರ್ನಾಟಕದ ಜನತೆ ತಮ್ಮೊಳಗೊಬ್ಬ ಸಮರ್ಥ ನಾಯಕನನ್ನು ತಾವೇ ಕಂಡುಕೊಳ್ಳುವ ಮೊದಲು ವೈಯಕ್ತಿಕ ಹಿತಾಸಕ್ತಿಯ ಜನಪ್ರತಿನಿಧಿಗಳ ಮಾತುಗಳಿಗೆ ಮರುಳಾಗಬಾರದು. ಆಳ್ವಿಕರ ಇಂಥ ದುಷ್ಟ ಹುನ್ನಾರಗಳ ವಿರುದ್ಧ ಜನ ಜಾಗೃತಗೊಳ್ಳಲಿ.
ಇವತ್ತು ಕನ್ನಡ ಹಿಂದೆಂದಿಗಿಂತ ಹೆಚ್ಚು ಆತಂಕ ಎದುರಿಸುತ್ತಿದೆ. ಪರಭಾಷಿಕರು ಈ ನೆಲವನ್ನು ಆಳುವ ಕಾಲದಲ್ಲೂ ಇಲ್ಲದ ಆತಂಕ ಸ್ವತಂತ್ರ ಭಾರತದಲ್ಲಿ ಕನ್ನಡ ಭಾಷೆಗೆ ಎದುರಾಗಿದೆ. ಅದು ಜಾಗತಿಕ ಭಾಷೆಯಾದ ಇಂಗ್ಲಿಷ್‌ನಿಂದ ಬಂದಿರುವ ಸವಾಲು. ಜಾಗತೀಕರಣದ ಭರಾಟೆಯಲ್ಲಿ ಬೇರೆ ದೇಶದ ಜನರು ತಮ್ಮ ವ್ಯಾಪಾರ, ವಹಿವಾಟು, ಭಾಷೆಯನಷ್ಟೇ ಇಲ್ಲಿ ಹೇರುವುದಿಲ್ಲ; ಸ್ಥಳೀಯವಾದದ್ದನ್ನು ನಗಣ್ಯಗೊಳಿಸುವ ಜ್ಞಾನದ ಯಜಮಾನಿಕೆಯ ಹೇರಿಕೆಯೂ ನಡೆಯುತ್ತಿದೆ. ಇಂಗ್ಲಿಷ್ ಮೋಹ ಎಲ್ಲೆಡೆ ಆವರಿಸಿದೆ. ಎಷ್ಟರಮಟ್ಟಿಗೆಂದರೆ ಕನ್ನಡ ಮಾಧ್ಯಮದ ಶಾಲೆಗಳನ್ನು ಕೇಳುವವರೇ ಇಲ್ಲವಾಗಿದೆ. ಈಗ ಶುರುವಾಗುವ ಎಲ್ಲ ಖಾಸಗಿ ಶಾಲೆಗಳೂ ಇಂಗಿಷ್ ಮಾಧ್ಯಮದವೇ. ರಾಜ್ಯ ಸರಕಾರ ಹೊಸ ಇಂಗ್ಲಿಷ್ ಶಾಲೆ ತೆರೆಯಲು ಅನುಮತಿ ನೀಡುವುದಿಲ್ಲವೆಂದ ತಕ್ಷಣ ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರಿ ಬೇರೆಬೇರೆ ಸಿಲಬಸ್ ನೆಪದಲ್ಲಿ ಇಂಗ್ಲಿಷ್ ಶಾಲೆ ತರತೊಡಗಿದ್ದಾರೆ. ಖಾಸಗಿ ಶಾಲೆಗಳು ಕನ್ನಡದಲ್ಲಿ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವಷ್ಟು ಇಂಗ್ಲಿಷ್ ಮೇನಿಯಾ ಬೆಳೆಸಿಕೊಂಡಿದ್ದು ಅದು ಪಾಲಕರಲ್ಲೂ, ಒಟ್ಟಾರೆ ಸಮಾಜದಲ್ಲೂ ತುಂಬಿಕೊಂಡಿದೆ.
ನಿಜ, ಇಂಗ್ಲಿಷ್ ಇವತ್ತು ಬೇಕು. ಅದು ಅನ್ನ ನೀಡುವ ಭಾಷೆಯಾಗಿದೆ. ಆದರೆ ಮಾತೃಭಾಷೆಯನ್ನು ಮೊದಲು ಕಲಿಯೋಣ. ಬೆಳೆಯುವ ಮಗುವಿನ ಮನಸ್ಸಿನಲ್ಲಿ ನಡೆಯುವ ಸೃಜನಶೀಲ ಕ್ರಿಯೆಗೆ ಮಾತೃಭಾಷೆಯ ಸಂವೇದನೆಯ ಅಗತ್ಯ ತುಂಬಾ ಇದೆ. ಮಗು ಒಂದೇ ಬಾರಿ ಮೂರ‍್ನಾಲ್ಕು ಭಾಷೆಯನ್ನು ಸುಲಲಿತವಾಗಿ ಕಲಿಯಬಲ್ಲುದಾದರೂ ಮನೆಯಲ್ಲಿ ವ್ಯವಹರಿಸುವ ಭಾಷೆ ಅದಕ್ಕೊಂದು ಆಪ್ತತೆಯನ್ನೂ, ಸಂವೇದನೆಯನ್ನೂ ಹುಟ್ಟಿಸುತ್ತದೆ. ನನ್ನದೆನ್ನುವ ಸಂವೇದನೆ ಹುಟ್ಟಿಸುವ ಭಾಷೆ ನನ್ನವರ ನೆನಪುಗಳೊಂದಿಗೂ ತಳುಕು ಹಾಕಿಕೊಂಡಿರುತ್ತದೆ.
ಕನ್ನಡ ೨೦೦೦ ವರ್ಷಗಳಷ್ಟು ಹಳೆಯ ಭಾಷೆ. ಈ ಐದಾರು ಶತಮಾನಗಳೀಚೆ ಹುಟ್ಟಿದ ಇಂಗ್ಲಿಷ್ ಪಿಳಿಪಿಳಿ ಕಣ್ಬಿಡುವ ಹೊತ್ತಿಗೆ ಕನ್ನಡದ ಮಹಾಕಾವ್ಯಗಳೆಲ್ಲ ಬಂದುಹೋಗಿದ್ದವು. ಆಚೀಚಿನ ಸೋದರ ಭಾಷೆಗಳೊಂದಿಗೆ ಕೊಡುಕೊಳು ಇಟ್ಟುಕೊಂಡು ಎಲ್ಲ ಭಾಷೆಗಳೂ ಬೆಳೆದಿದ್ದವು. ಗಮನಿಸಿ: ಕನ್ನಡ ಆಳುವ ಭಾಷೆಯಾಗಿದ್ದಾಗಲೂ, ಲಿಪಿಯಿಲ್ಲದ ಕೊಂಕಣಿ, ತುಳು, ಕೊಡವ, ಬ್ಯಾರಿ, ನವಾಯತಿ ಭಾಷೆಗಳು ಇಲ್ಲಿ ಉಳಿದುಬಂದವೇ ಹೊರತು ಅಳಿವಿನ ಭಯ ಅವನ್ನು ಕಾಡಲಿಲ್ಲ. ಆದರೆ ಈಗ ಜಾಗತಿಕ ಭಾಷೆಯಾಗಿ ಇಂಗ್ಲಿಷ್ ಎದುರಿಗೆ ಸ್ಥಳೀಯ ಉಪಭಾಷೆಗಳೂ, ಸಣ್ಣಪುಟ್ಟ ಭಾಷೆಗಳೂ ಅವನತಿಯ ಭಯವನ್ನೆದುರಿಸುತ್ತಿವೆ.
ಇವತ್ತು ಪ್ರಪಂಚದಲ್ಲಿ ೭೦೦೦ದಷ್ಟು ಭಾಷೆಗಳಿವೆ. ಅದರಲ್ಲಿ ೪೦೦೦ ಭಾಷೆಯನ್ನು ಕೇವಲ ಆದಿವಾಸಿಗಳು ಆಡುತ್ತಾರೆ. ಪ್ರತಿ ೧೫ ದಿನಕ್ಕೊಂದು ಭಾಷೆ ಅವನತಿಯತ್ತ ಸಾಗುತ್ತಿದೆ. ಅದರಲ್ಲಿ ನಮ್ಮ ಪಾಳಿ ಯಾವಾಗ ಬಂದೀತೋ ಎಂದು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಗಳು ಆತಂಕವನ್ನೆದುರಿಸುತ್ತಿವೆ.
ಕಳೆದ ವರ್ಷ ಅಂಡಮಾನಿನ ಬುಡಕಟ್ಟು ಜನರಲ್ಲಿ ಒಬ್ಬ ಮುದುಕಿ ಸತ್ತುಹೋದಳು. ಅವಳ ಸಾವು ಕೇವಲ ಮನುಷ್ಯ ಜೀವವೊಂದರ ಸಾವಿನಂತಲ್ಲ. ಅವಳು ಬೊವಾ ಎಂಬ ಆದಿವಾಸಿ ಭಾಷೆಯನ್ನಾಡುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದಳು. ಅವಳ ಸಾವಿನೊಂದಿಗೆ ಅವಳಾಡುತ್ತಿದ್ದ ಭಾಷೆಯೂ ಶಾಶ್ವತವಾಗಿ ಕಣ್ಮರೆಯಾಯಿತು.
ಭಾಷೆಯೊಂದರ ಸಾವು ಎಂದರೆ ಕೇವಲ ವರ್ಣಮಾಲೆಯ ಅಕ್ಷರಗಳ, ಕೆಲವು ಶಬ್ದ-ವಾಕ್ಯಗಳ ಕಣ್ಮರೆ ಅಲ್ಲ. ಭಾಷೆಯೆಂದರೆ ಅದನ್ನಾಡುವ ಜನರ ಸಾವಿರಾರು ವರ್ಷಗಳ ನೋವುನಲಿವು, ಸಂಸ್ಕೃತಿ, ಇತಿಹಾಸ ಎಲ್ಲವೂ. ಒಂದು ಭಾಷೆಯ ಸಾವಿನೊಡನೆ ಒಂದಿಡೀ ಜನಾಂಗದ ವಿಶಿಷ್ಟ ಮತ್ತು ಅನನ್ಯ ಸ್ಮೃತಿಕೋಶವೂ, ಪರಂಪರೆಯೂ ನಾಶವಾಗುತ್ತದೆ.
ಇದು ಬದುಕಿಗೆ, ಜೀವ ಜಗತ್ತಿಗೆ ಅತಿ ದೊಡ್ಡ ಅಪಾಯ. ಏಕೆಂದರೆ ಸ್ಮೃತಿ ಕಳೆದುಕೊಂಡ ಮನುಷ್ಯ ಅಥವಾ ಸಮಾಜ ಪ್ರಾಣವಿಲ್ಲದ ದೇಹದಂತೆ. ಒಳಗೆ ಕಾಳಿಲ್ಲದ ಹೊರ ಸಿಪ್ಪೆಯಂತೆ. ಅದಕ್ಕೆ ಯಾವ ಮೌಲ್ಯವೂ ಇಲ್ಲ.
ಎಂದೇ..
- ಭಾಷೆ ಉಳಿಯಬೇಕಾದರೆ ಅದನ್ನು ಬಳಸಬೇಕು. ಆಗಷ್ಟೇ ಆ ಭಾಷಿಕ ಸಮಾಜದ ಅನನ್ಯತೆಯೂ ಉಳಿಯುತ್ತದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಧಾಟಿ, ಶೈಲಿ, ನುಡಿಗಟ್ಟು, ಪದಕೋಶ ಇರುತ್ತದೆ. ಅವನ್ನು ಜನಬಳಕೆಯ ರೂಪಗಳಲ್ಲಿ ಬಳಸಬೇಕು. ನಾವೀಗ ನಿತ್ಯ ಆಡುವ ಮಾತಿನಲ್ಲಿ ಕೆಲವೇ ಕೆಲವು ಪದ ಬಳಸುತ್ತೇವೆ. ಸಾವಿರಾರು ಪದಗಳು ಮುಟ್ಟುವವರಿಲ್ಲದೆ, ಆಡುವವರಿಲ್ಲದೆ ಮರೆವಿಗೆ ಸರಿಯುತ್ತಿವೆ. ಹೊಸಹೊಸ ಪದ ಬಳಸಬೇಕು, ನುಡಿಗಟ್ಟು-ಗಾದೆಗಳ ನೆನಪಿಡಬೇಕು. ಅದೇಅದೇ ಪದ ಬಳಸಿ ಹೊಗಳುವುದನ್ನೂ, ತೆಗಳುವುದನ್ನೂ ಮಾಡುವ ದಿವಾಳಿತನ ಕೈಬಿಡಬೇಕು.
- ಒಂದು ಭಾಷೆಯ ಉಳಿವು ಇನ್ನೊಂದರ ಅಳಿವಾಗಬಾರದು. ಅದು ಆತ್ಯಂತಿಕ ದುಷ್ಟತನ. ಸಹಬಾಳ್ವೆ ವಿವಿಧ ಜಾತಿ-ಧರ್ಮದ ಜನರ ನಡುವೆ ಹೇಗೆ ಅವಶ್ಯವೋ ಹಾಗೇ ವಿವಿಧ ಭಾಷೆಗಳ ನಡುವೆಯೂ ಅವಶ್ಯ. ಎಂದೇ ಇವತ್ತು ಕನ್ನಡ ಉಳಿಯಬೇಕಾದರೆ ಕೊಂಕಣಿಯೂ ಉಳಿಯಬೇಕು, ಬ್ಯಾರಿ-ನವಾಯತಿ-ತುಳು-ಕೊಡವ-ಉರ್ದು ಹೀಗೇ ಇನ್ನಿತರ ಸಣ್ಣ ಸಮುದಾಯಗಳು ಆಡುವ ನುಡಿಗಳೂ ಉಳಿಯಬೇಕು. ಅವುಗಳ ಉಳಿವಿಗೆ ಕಾರಣವಾಗುತ್ತಲೇ ಕನ್ನಡವೂ ತಾನು ಬೆಳೆಯಬೇಕು. ಆಗ ಮಾತ್ರ ಜಾಗತಿಕ ಭಾಷೆಯ ಬಿರುಗಾಳಿಯೆದುರು ನೆಲಕಚ್ಚಿ ನಿಂತ ದೇಶೀ ಭಾಷೆಗಳೆಂಬ ಗರಿಕೆ ಹುಲ್ಲು ಗಟ್ಟಿ ನಿಲ್ಲಬಲ್ಲವಾಗುತ್ತವೆ.
- ಕನ್ನಡ ಉಳಿಸುವವರು ಅದನ್ನು ಕಲಿತು ಓದಿ ಬರೆಯುವವರಷ್ಟೇ ಅಲ್ಲ. ಹಾಗೆ ನೋಡಿದರೆ ಕನ್ನಡವು ಇವತ್ತು ತಾಜಾ ಹಾಗೂ ಗ್ರಾಮ್ಯ ರೂಪದಲ್ಲೇನಾದರೂ ಉಳಿದುಕೊಂಡಿದ್ದರೆ ಅದು ನಿರಕ್ಷರಿಗಳಾದ ಅಥವಾ ಹೆಚ್ಚೇನೂ ವಿದ್ಯಾವಂತರಲ್ಲದ, ಇಂಗ್ಲಿಷ್ ಬಾರದ ಹಳ್ಳಿಗರಿಂದಲೇ. ನಿರಕ್ಷರಿಗಳಾದರೂ ಸ್ಥಳೀಯ ಭಾಷೆಗಳ ಜೊತೆಯೇ ಕನ್ನಡವನ್ನೂ ಆಡಬಲ್ಲ ಅವರು ಇವತ್ತು ಬಹುತ್ವ ಉಳಿಸಬಲ್ಲ ರಕ್ಷಕರೆಂದು ನಾವು ಮನಗಾಣಬೇಕಿದೆ.
- ಹಳ್ಳಿಗಳ ಕಟ್ಟೆ, ಚಾವಡಿಗಳ ಮಾತುಗಳ ಸುಮ್ಮನೇ ಕೇಳಿಸಿಕೊಳ್ಳಿ: ಅಲ್ಲಿ ಜೀವಂತ ಭಾಷೆ ಉಸಿರಾಡುತ್ತಿರುವ ಅರಿವಾಗುತ್ತದೆ. ಎಂದೇ ಸಾಹಿತಿಗಳಲ್ಲದ ಅಂಥ ಭಾಷಾ ಸಂರಕ್ಷಣಕಾರರನ್ನು - ಭಾಷಾ ಬ್ಯಾಂಕುಗಳನ್ನೂ- ನಾವು ಗೌರವಿಸಬೇಕು.
- ಮುಖ್ಯವಾಗಿ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗುವುದು ಕಡ್ಡಾಯವಾಗಬೇಕು. ಎಳೆಯ ಮಕ್ಕಳ ನಾಲಿಗೆಯ ಮೇಲೆ ಉಳಿದರಷ್ಟೇ ಭಾಷೆಗಳು ಬಹುಕಾಲ ಜೀವಂತವಾಗಿರಬಲ್ಲವು.
ಒಟ್ಟಾರೆ ಹೇಳಬೇಕೆಂದರೆ ಜನ ಸಮುದಾಯಗಳ ನಡುವೆ ಭಾಷೆ ಗೋಡೆಯಾಗದಂತೆ, ಬದಲಾಗಿ ಸೇತುವೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ಇಷ್ಟನ್ನು ಗಮನದಲ್ಲಿಟ್ಟುಕೊಂಡು ಆಚರಿಸಿದರೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೂ ಒಂದು ಅರ್ಥ ಬರುತ್ತದೆ.
No comments:
Post a Comment