Thursday, 12 March 2015

ರಾಜಸ್ಥಾನದ ರಾಣಿಯರು: ಯು ಕೆನ್ ಸೀ, ಬಟ್ ಕೆನಾಟ್ ಬಿ ಸೀನ್
ಅಂತಃಪುರದ ಅಳಲು

ಇಡೀ ಭಾರತವೇ ನೂರಾರು ಸಾವಿರಾರು ರಾಜಮಹಾರಾಜರು ಆಳಿ, ಮೆರೆದು, ಕಾದಾಡಿ, ಅಳಿದ ಭೂಮಿ. ಹೀಗಿರುತ್ತ ಆ ರಾಜ್ಯಕ್ಕೆ ಮಾತ್ರ ರಾಜಸ್ಥಾನವೆಂಬ ಹೆಸರು ಏಕೆ ಬಂತೋ?! ಈಗ ಭಾರತ ಗಣರಾಜ್ಯದ ಒಂದು ರಾಜ್ಯವಾಗಿರುವ ರಾಜಸ್ಥಾನದಲ್ಲಿ ಮೊದಲು ಹಲವು ರಾಜ ಮನೆತನಗಳು ಯುದ್ಧ, ವೀರಾವೇಶಗಳಿಂದ ಮೆರೆದದ್ದಕ್ಕೆ ಆ ಹೆಸರು ಬಂದಿರಬಹುದೇ? ಹಾಗೆ ನೋಡಿದರೆ ರಾಜಸ್ಥಾನವನ್ನು ರಾಣೀಸ್ಥಾನವೆಂದು ಕರೆಯುವುದು ಸೂಕ್ತ. ಅಲ್ಲಿ ಎಷ್ಟು ರಾಜರು ಆಳಿ ಹೋದರೋ ಅಷ್ಟೇ ಸಂಖ್ಯೆಯ ಪಟ್ಟದ ರಾಣಿಯರು, ಅದರ ಹತ್ತಿಪ್ಪತ್ತು ಪಟ್ಟು ಹಿರಿಯ ರಾಣಿಯರು, ನೂರುಪಟ್ಟು ಕಿರಿಯ ರಾಣಿಯರು, ಲೆಕ್ಕವಿಲ್ಲದಷ್ಟು ಜನಾನಾದ ಮನೋಸಾಮ್ರಾಜ್ಞಿಯರು ಆಗಿಹೋಗಿದ್ದಾರೆ. ರಾಣಿಸ್ಥಾನದ ಹೆಣ್ಣುಗಳ ಒಳಕತೆಗಳೋ, ಎಲ್ಲ ಬಣ್ಣಗಳನ್ನೂ ಒಡಲೊಳಗಿಟ್ಟುಕೊಂಡ ಮಳೆಹನಿ ಆವಾಗೀವಾಗೊಮ್ಮೆ ಫಳಾರನೆ ಕಾಮನಬಿಲ್ಲನ್ನು ಹೊರಹಾಕುವಂತೆ, ಕಂಡುಕೇಳಿ ಮರೆಯಾಗುತ್ತವೆ.

ಎಂದಿನಂತೆ, ಇಲ್ಲೂ ಇತಿಹಾಸವು ರಾಜರನ್ನು ನೆನಪಿಟ್ಟುಕೊಂಡಂತೆ ರಾಣಿಯರ ನೆನಪಿಟ್ಟುಕೊಂಡಿಲ್ಲ. ಅದಕ್ಕೆ ಇಂದಿನ ಉದಯಪುರ, ಜೋಧಪುರ, ಜೈಪುರ, ಜೈಸಲ್ಮೇರದ ಜನದಟ್ಟಣೆಯ ರಸ್ತೆ, ಚೌಕಗಳೇ ಸಾಕ್ಷಿ. ಆ ಸ್ಥಳಗಳು ಕೆನೆಯುವ ಕುದುರೆ ಮೇಲೆ ಕುಳಿತು ಖಡ್ಗ ಹಿರಿದ ಧೀರ ನಿಲುವಿನ ತಂತಮ್ಮ ರಾಜರ ಮೂರ್ತಿಗಳನ್ನು ಹೊಂದಿವೆಯೇ ಹೊರತು ರಾಣಿಯರ ಮೂರ್ತಿಗಳನ್ನಲ್ಲ. ಅರಮನೆ-ಮ್ಯೂಸಿಯಂಗಳಲ್ಲೂ ಅಷ್ಟೇ, ರಾಜರ ಆಳೆತ್ತರದ ಭಾವಚಿತ್ರ, ವರ್ಣಚಿತ್ರ, ಫೋಟೋಗಳು ಕಂಡಾವೇ ಹೊರತು ರಾಣಿಯರ ಚಿತ್ರಗಳು ಕಾಣುವುದಿಲ್ಲ. ಯಾರಿಗಾಗಿ ರಾಜಸ್ಥಾನದ ಖ್ಯಾತ ಕ್ಷತ್ರಿಯ ಮನೆತನವೊಂದು ಅಲ್ಲಾವುದ್ದೀನ್ ಖಿಲ್ಜಿಯ ಕಣ್ಣಿಗೆ ಬಿದ್ದು ನಾಶವಾಗಬೇಕಾಯಿತೆಂದು ಜನರಾಡಿಕೊಳ್ಳುತ್ತಾರೋ ಆ ಸುರಸುಂದರಿ, ಉದಯಪುರ (ಮೇವಾರ)ದ ಸೌಂದರ್ಯದ ಖನಿ, ರಾಣಿ ಪದ್ಮಿನಿಯ ಒಂದೂ ಚಿತ್ರ ಕಾಣಲಿಲ್ಲ.ಅರಮನೆ, ಕೋಟೆ, ಮಹಲು, ಅಂತಃಪುರ ಎಲ್ಲೇ ನೋಡಿದರೂ ವಿವಿಧ ಆಕಾರ, ಸೂಕ್ಷ್ಮ ಕುಸುರಿ ಕೆತ್ತನೆಯ ಜಾಲಂಧ್ರಗಳು ಮನ ಸೆಳೆದವು. ಅದರಲ್ಲೂ ರಾಣಿವಾಸಕ್ಕೆ ಕಿಟಕಿಗಳಿಲ್ಲ, ಬರೀ ಜಾಲಂಧ್ರಗಳಿರುವ ಗೋಡೆಗಳಿವೆ. ಜೈಪುರದ ಹವಾ ಮಹಲು ಪೂರಾ ಹೀಗೇ ಇದೆ. ನಮ್ಮೊಡನೆ ತಾನೂ ಬಿಸಿಲ ದಾರಿ ಸವೆಸುತ್ತಿದ್ದ ಗೈಡ್ ಪ್ರಕಾರ ಜಾಲಂಧ್ರವೆಂಬ ಗೋಡೆಯನ್ನು ರಾಣೀವಾಸಕ್ಕೂ, ನೋಡುಗರ ನಡುವೆಯೂ ಇಡುವ ಉದ್ದೇಶ - ನೋಡಬಹುದು ಆದರೆ ಕಾಣಬಾರದು. (‘ಯು ಕೆನ್ ಸೀ, ಬಟ್ ಕೆನಾಟ್ ಬಿ ಸೀನ್’). ಅಲ್ಲಿಯ ಹೆಂಗಸರು ಇಡೀ ಮುಖ ಮುಚ್ಚುವಂತೆ ಸೆರಗೆಳೆದುಕೊಳ್ಳುವುದರ ಉದ್ದೇಶವೂ ಇದೇ.

ಎಲ ಎಲಾ, ಎಷ್ಟು ಸುಲಭವಾಗಿ ಹೇಳಿಬಿಟ್ಟ! ಎಂಥ ಪುರುಷ ಜಾಣ್ಮೆ!! ಅವಳು ನೋಡಬಹುದು, ಆದರೆ ಅವಳನ್ನು ಯಾರೂ ನೋಡಬಾರದು; ಕಾಣಬಹುದು, ಆದರೆ ಕಾಣಿಸಿಕೊಳ್ಳಬಾರದು. ಇರುವುದಾದರೆ ಇರು, ಇದ್ದೂ ಇಲ್ಲದಂತೆ. ಕೊಡುವುದಾದರೆ ಕೊಡು, ಗುರುತುಳಿಯದಂತೆ. ಬುರ್ಖಾ, ಜಾಲಂಧ್ರ, ಪರ್ದಾಗಳ ಹಿಂದೆ ಅವಳು ಅಡಗಿದರೂ ದಂಗೆಯೇಳದಂತೆ ಸುಮ್ಮನಾಗಿರುವುದಕ್ಕೆ, ಇದ್ದೂ ಇಲ್ಲದಂತಿರುವ ಅಸ್ತಿತ್ವವನ್ನು ಒಪ್ಪಿಕೊಂಡು ಬಂದಿರುವುದಕ್ಕೆ ಕಾರಣವಾಗಿರುವುದು ಇದೇ ಅಲ್ಲವೇ?

ರಾಣಿಯರ ಅಂಗವಿಕಲತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಗೈಡ್ ಪ್ರಕಾರ ‘ಕ್ವೀನ್ಸ್ ವರ್ ಆಲ್ವೇಸ್ ಹ್ಯಾಂಡಿಕ್ಯಾಪಡ್’.

ಜೈಪುರದ ಅಮೇರಿ ಕೋಟೆಯ ದರ್ಬಾರ್ ಹಾಲ್‌ಗೆ ಹೋಗುವಾಗ ಒಂದು ಕಿರಿದಾದ ಏರುದಿಬ್ಬದಂತಹ ಪ್ಯಾಸೇಜ್ ಮೂಲಕ ಹೋದೆವು. ಅದು ಮೆಟ್ಟಿಲುಗಳಿಲ್ಲದ ಸ್ಲೋಪ್. ರಾಣಿಯರು ಹೋಗಿ ಬರುವ ದಾರಿ ಎಂದ ಗೈಡ್. ಎಷ್ಟು ಕಿರಿದಾಗಿದೆ ಎಂದರೆ ಪಲ್ಲಕ್ಕಿ, ಮೇನೆಗಳನ್ನು ಹೊತ್ತು ತರುವುದೂ ಸಾಧ್ಯವಿಲ್ಲ. ರಾಣಿಯರಿಗೇಕೆ ಇಂತಹ ಮೆಟ್ಟಿಲುಗಳಿಲ್ಲದ ಇಳಿಜಾರು ದಾರಿ? ನಾವು ಆಶ್ಚರ್ಯಪಡುವಾಗಲೇ ಗೈಡ್ ಸಣ್ಣ ನಕ್ಕು ಒಳ ಕರೆದುಕೊಂಡು ಹೋದಾಗ ಪ್ರದರ್ಶನಕ್ಕಿಟ್ಟ ರಾಣಿಯರ ಉಡುಪುಗಳ ಎದುರು ನಿಂತಿದ್ದೆವು. ದರ್ಬಾರಿನಲ್ಲಿ, ಅರಮನೆಯ ಸಂಭ್ರಮಾಚರಣೆಗಳಲ್ಲಿ ಕಾಣಿಸಿಕೊಳ್ಳುವಾಗ ರಾಣಿಯರು ಧರಿಸುತ್ತಿದ್ದ ವಸ್ತ್ರಗಳು ಅಲ್ಲಿದ್ದವು. ರೇಶಿಮೆಯ ಮೇಲೆ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹದ ತಂತಿಗಳಿಂದ ಮಾಡಿದ ಕಸೂತಿಯಿಂದ ಆ ಬಟ್ಟೆಗಳು ಅತಿಭಾರವಾಗಿದ್ದವು. ರಾಜಸ್ಥಾನದ ಶೈಲಿಯಂತೆ ಲಂಗದ ಮೇಲೆ ಲಂಗ, ಅದರ ಮೇಲೆ ಚೋಲಿ, ಚುನರಿ, ಅವಕುಂಠನ, ಕೊನೆಗೆ ಮೈಮೇಲೆ ರಾಜಮನೆತನದ ಆಭರಣ - ಎಲ್ಲವೂ ಸೇರಿ ಕನಿಷ್ಠ ೧೫೦ ಕೆಜಿ ಭಾರದ ಉಡುಪನ್ನು ರಾಣಿಯರು ಧರಿಸಬೇಕಿತ್ತು! ಎಂದೇ ಅಂತಃಪುರದ ಸಖೀವೃಂದವು ಮೆಟ್ಟಿಲು ಹತ್ತಿಳಿಯಲು ಸಾಧ್ಯವಿಲ್ಲದ ರಾಣಿಯರನ್ನು ವೀಲ್‌ಚೇರುಗಳಲ್ಲಿ ದೂಡಿಕೊಂಡು ಕರೆತರುತ್ತಿದ್ದರು!

ಆಸೆಯೆಂದು, ಅಪ್ಪಣೆಯೆಂದು, ಅನಿವಾರ್ಯವೆಂದು ಹೊರಲಾರದಷ್ಟು ಭಾರದ ವಸ್ತುಒಡವೆ ಹೇರಿಕೊಂಡರೆ ಹೀಗೇ. ಅಂಗವೈಕಲ್ಯ ತಾನಾಗಿ ಅಮರಿಕೊಳ್ಳುತ್ತದೆ.

ಅಂಗಾಲು ಉರುದಾವೆ, ಅಂಗೈ ಉರುದಾವೆ, ಉಂಗುರದ ಬಟ್ಟು ಉರುದಾವೆ..ಅವರದನ್ನು ಇತಿಹಾಸ ಪುಸ್ತಕ ಓದಿ ತಿಳಿದಿರಲಿಕ್ಕಿಲ್ಲ, ಆದರೆ ಉದಯಪುರದಲ್ಲಿ ಹೆಜ್ಜೆಹೆಜ್ಜೆಗೆ ಖಿಲ್ಜಿ ಹಾಗೂ ರಾಣಿ ಪದ್ಮಿನಿಯ ಪ್ರಸಂಗವನ್ನು ಬಣ್ಣಿಸುತ್ತಾರೆ. ಸೂಫಿಸಂತ ಮಾಲಿಕ್ ಮುಹಮದ್ ಜಯಸಿ ತನ್ನ ಪದ್ಮಾವತ್ ಕಥನ ಕಾವ್ಯದಲ್ಲಿ ಈ ಕುರಿತು ಬರೆದಿರುವನೆಂದು ನಂತರ ತಿಳಿಯಿತು.

೭೦೦ ವರ್ಷ ಕೆಳಗೆ ಮೇವಾರ, ಚಿತ್ತೂರಿನ ರಾವಲ್ ರತನ್‌ಸಿಂಗ್ ಅಥವಾ ಮಹಾರಾಣಾ ಸಂಗ ಸಿಂಹಳದ ರಾಜಕುಮಾರಿಯನ್ನು ಸ್ವಯಂವರದಲ್ಲಿ ಗೆದ್ದು ತಂದು ಎರಡನೆಯ ಹೆಂಡತಿಯಾಗಿ ಸ್ವೀಕರಿಸಿದ. ಅವಳೇ ರಾಣಿ ಪದ್ಮಿನಿ. ಅಪ್ರತಿಮ ಸುಂದರಿ. ಅರಮನೆಯ ಮಾತನಾಡುವ ಗಿಳಿಗಳೂ ತಮ್ಮ ರಾಣಿಯ ಸೌದರ್ಯವನ್ನು ಬಣ್ಣಿಸುತ್ತಿದ್ದವು. ಆಗ ಖಿಲ್ಜಿಗಳು ದೆಹಲಿಯನ್ನಾಳುತ್ತ, ಸಾಮ್ರಾಜ್ಯ ವಿಸ್ತರಣೆಯ ಯುದ್ಧಗಳಲ್ಲಿ ತೊಡಗಿದ್ದರು. ಮೇವಾರದ ರಾಣಾ ರಾಜ್ಯದ ಒಬ್ಬ ಹಾಡುಗಾರ ಮಾಟಗಾರ ಎಂದು ಗಡೀಪಾರಾಗುತ್ತಾನೆ. ಆತ ಅಲ್ಲಾವುದ್ದೀನ್ ಖಿಲ್ಜಿ ಹೊರಸಂಚಾರ ಬರುವ ಸಮಯ ಸಾಧಿಸಿ ಅವನಿಗೆ ಕೇಳುವ ಹಾಗೆ ಕೊಳಲು ಬಾರಿಸಿ ಗಮನ ಸೆಳೆಯುತ್ತಾನೆ. ನಿನ್ನಂತಹ ಕಲಾವಿದ ದೆಹಲಿಯಲ್ಲಿರಬೇಕು, ಕಾಡಿನಲ್ಲಲ್ಲ ಎಂದು ಖಿಲ್ಜಿ ಕರೆದಾಗ ಕಲಾವಿದ ನಸುನಕ್ಕು  ತನ್ನಂತಹ ಸಾಮಾನ್ಯನನ್ನು ದೆಹಲಿ ಆಸ್ಥಾನಕ್ಕೆ ಕರೆಯುವುದಾದರೆ, ಮೇವಾರದಲ್ಲಿ ಇದಕ್ಕಿಂಥ ಶ್ರೇಷ್ಠವಾದವು ಎಷ್ಟಿವೆ ಗೊತ್ತೇ ಎಂದು ಪಟ್ಟಿಮಾಡುತ್ತಾನೆ. ಮೇವಾರ ರಾಜ್ಯದ ಸಂಪತ್ತಿನ ಬಗೆಗೆ, ಎಲ್ಲಕ್ಕಿಂತ ಮಿಗಿಲಾಗಿ ರಾಣಿ ಪದ್ಮಿನಿಯ ಸೌಂದರ್ಯದ ಬಗೆಗೆ ಉತ್ಪ್ರೇಕ್ಷೆಯ ಮಾತುಗಳಲ್ಲಿ ವರ್ಣಿಸುತ್ತಾನೆ. ಅದನ್ನು ಕೇಳಿದ ಖಿಲ್ಜಿ ಹೇಗಾದರೂ ಪದ್ಮಿನಿ ತನ್ನ ಅಂತಃಪುರ ಸೇರಬೇಕೆಂದು ದಂಡೆತ್ತಿ ಹೋಗುತ್ತಾನೆ. ಮೇವಾರ ಕೋಟೆಯ ವಶಕ್ಕಾಗಿ ಘನಘೋರ ಯುದ್ಧ ನಡೆಯುತ್ತದೆ. ದೊಡ್ಡ ಸೈನ್ಯದೆದುರು ರಾಣಾನ ಸೈನ್ಯ ವೀರಾವೇಶದಿಂದ ಹೋರಾಡಿದರೂ ಎಲ್ಲವೂ ಖಿಲ್ಜಿಯ ವಶವಾಗುತ್ತದೆ. ಆಗ ಖಿಲ್ಜಿಯು ರಾಣಿ ಪದ್ಮಿನಿ ತನ್ನ ಸೋದರಿಯಂತೆ. ಅವಳನ್ನು ತೋರಿಸಿದರೆ ತಾನು ವಾಪಸು ಹೋಗುವುದಾಗಿ ಹೇಳಿಕಳಿಸುತ್ತಾನೆ. ರಜಪೂತ ರಾಣಿಯೊಬ್ಬಳು ಅವಕುಂಠನ ಸರಿಸಿ ವೈರಿಗೆ ಮುಖ ತೋರಿಸುವುದಕ್ಕಿಂತ ಅವಮಾನ ಬೇರೆಯಿಲ್ಲ. ಆದರೂ ಬೇರೆದಾರಿಯಿಲ್ಲದೆ ಪದ್ಮಿನಿ ಕನ್ನಡಿಯಲ್ಲಿ ಮುಖ ತೋರಿಸುತ್ತಾಳೆ.

ಆದರೆ ನಂತರ ಮತ್ತೆ ದಂಡೆತ್ತಿ ಬಂದ ಖಿಲ್ಜಿ ಮೋಸದಿಂದ ರಾಣಾನನ್ನು ಸೆರೆಹಿಡಿಯುತ್ತಾನೆ. ಬಿಡುಗಡೆ ಮಾಡಬೇಕಾದರೆ ಪದ್ಮಿನಿಯನ್ನು ಕೊಡಬೇಕೆಂಬ ಷರತ್ತು ವಿಧಿಸುತ್ತಾನೆ. ಮರುದಿನ ಪದ್ಮಿನಿ ೧೫೦ ಸಖಿಯರೊಡನೆ ಖಿಲ್ಜಿಯ ಬಳಿ ಹೋಗುವುದೆಂದು ಒಪ್ಪಂದವಾಗುತ್ತದೆ. ಆದರೆ ೧೫೦ ಸೈನಿಕರು ಪಲ್ಲಕ್ಕಿಯಲ್ಲಿ ಹೋಗಿ ತಮ್ಮ ರಾಜನನ್ನು ಬಿಡಿಸಿಕೊಂಡು ಬರುತ್ತಾರೆ. ಖಿಲ್ಜಿ ಕೋಪಗೊಂಡು ಕೋಟೆ ಸುತ್ತುವರೆಯುತ್ತಾನೆ. ಕೋಟೆಯೊಳಗೆ ಆಹಾರದ ದಾಸ್ತಾನು ಮುಗಿಯತೊಡಗುತ್ತದೆ. ದೆಹಲಿಯ ದೊಡ್ಡ ಸೈನ್ಯದೆದುರು ಹೋರಾಡುವುದೆಂದರೆ ಸಾವು, ಸೋಲು ಖಚಿತ. ಆದರೂ ಅಳಿದುಳಿದ ರಜಪೂತ ಸೈನ್ಯ ಜೀವನ್ಮರಣದ ಹೋರಾಟಕ್ಕೆ ಸಜ್ಜಾಗುತ್ತದೆ.

ಅದಕ್ಕೂ ಮೊದಲು ರಾಣಿ ಪದ್ಮಿನಿಯೂ ಸೇರಿದಂತೆ ಕೋಟೆಯೊಳಗಿನ ಹೆಣ್ಣುಮಕ್ಕಳು ಜೌಹರ್‌ಗೆ ಸಿದ್ಧರಾಗಿ ಉರಿವ ಚಿತೆಯನ್ನು ಪ್ರವೇಶಿಸುತ್ತಾರೆ. ಮೇವಾರದ ಸೇನೆ ಹತವಾಗುತ್ತದೆ. ಗೆದ್ದ ಖಿಲ್ಜಿ ಸೇನೆಯನ್ನು ಉರಿದ ಚಿತೆ, ಬೂದಿಯಲ್ಲಿದ್ದ ಹೆಂಗಸರ ಮೂಳೆಗಳು ಎದುರುಗೊಳ್ಳುತ್ತವೆ.

ಖಿಲ್ಜಿ ಮತ್ತವನ ಸೇನೆಯ ಹೆಣ್ಣುಬಾಕತನ, ಅವನು ಗೆದ್ದೆಡೆಯಲ್ಲೆಲ್ಲ ಸ್ವಾಗತಿಸಿದ ಜೌಹರ್ ಬೂದಿ - ಇವೆಲ್ಲ ಎಷ್ಟು ನಿಜವೋ? ಎಷ್ಟು ಊಹೆಯೋ? ಅಂತೂ ಈ ಜೌಹರ್ ಪ್ರಸಂಗವನ್ನು ಹಾಡು, ಲಾವಣಿ, ಗೀತೆ, ನರ್ತನ ಎಲ್ಲದರಲ್ಲಿಯೂ ಅಳವಡಿಸಿಕೊಂಡು ಜನ ರಾಗವಾಗಿ ತಮ್ಮ ರಾಣಿವಾಸದವರು ಚಿತೆಯೇರಿದ್ದನ್ನು ಬಣ್ಣಿಸಿ, ಕಣ್ಣೀರಿಡುತ್ತಾರೆ.

ಕರ್ನಾಟಕದ ಅಸಂಖ್ಯ ವೀರಸೈನಿಕರು ಮಡಿದಾಗ ಅವರ ಮಡದಿಯರು ತಾವೂ ಚಿತೆಯೇರಿ ಮಹಾಸತಿಯರಾಗಿದ್ದಾರೆ. ಆದರೆ ಇಲ್ಲಿನ ಖ್ಯಾತ ರಾಣಿಯರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡಿದರೇ ವಿನಹ ಸತಿಯಾದಂತಿಲ್ಲ ಅಲ್ಲವೇ? ಇಲ್ಲಿನ ಕೆಲವು ಮಹಾಸತಿ ಕಥನಗೀತೆಗಳೂ ಭಿನ್ನವಾಗಿ ಮಾತನಾಡುತ್ತವೆ.

ತಾಡಿನಾಗಮ್ಮನ ಕಥನಗೀತೆಯು (ಈ ಪ್ಯಾರಾದ ಶೀರ್ಷಿಕೆಯೂ ಅದರದೆ) ಹೀಗೆ ಹೇಳುತ್ತದೆ:

`ಅಂಬಾರದುದ್ದಾಕೆ ಉರಿಯೆದ್ದೇಳುತಾವೆ
ನಾನೆಂಗೋಗಲಿ ಸಿವಸಿವನೆ
ನಾನೆಂಗೋಗಲಿ ಸಿವಸಿವನೆ ಏ ಸಿವನೆ
ರಾಯರ ಪ್ರಾಣವ ತಿರುವಯ್ಯಾ'


ಮಹಾಸತಿ ತಂಗ್ಯವ್ವನ ಕಥನ ಗೀತೆಯು,


`ಅಂಗಿಯ ವಲಸ್ಯಾಳು ಕಂದಮ್ಮಗಾಕ್ಯಾಳು
ಅತ್ತತ್ತ ವೋಗಿ ತಿರಿಗ್ಯಾಳು
ಅತ್ತತ್ತ ವೋಗಿ ತಿರಿಗ್ಯಾಳು / ಏನಂದಾಳು
ಕಂದಾಗು ನನಗು ರುಣವಿಲ್ಲ'

ಎನ್ನುತ್ತದೆ. ಜೌಹರ್‌ಗಾಗಿ ಉರಿಯುವ ಚಿತೆಯನ್ನು ಜೀವಂತ ಪ್ರವೇಶಿಸಿದ ರಾಣಿಯರ ಮನಸ್ಥಿತಿ ಹೇಗಿತ್ತು? ತನ್ನನ್ನು, ತನ್ನ ಮೈಸಿರಿಯನ್ನು, ಕರುಳನ್ನು, ಕರುಳ ಬಳ್ಳಿಯನ್ನು ಜೀವಂತವಿರುವಾಗಲೇ ಸುಟ್ಟುಕೊಂಡದ್ದು ಅಸಹಾಯಕತೆಯ ಆತ್ಮಾಹುತಿಯೇ? ಅಥವಾ ವಿಧವೆಯ ದುರ್ಗತಿಗೆ ಈಡುಮಾಡುವ ವ್ಯವಸ್ಥೆಯನ್ನು ಅನಿವಾರ್ಯ ಸಾವಿನಿಂದ ಧಿಕ್ಕರಿಸಿದ ಪ್ರತಿರೋಧವೇ?

ಪದ್ಮಿನಿ, ಎಲ್ಟಿಟಿಇ ಧನು, ವಫಾ ಇದ್ರಿಸ್ - ಬೇರೆಬೇರೆ ಕಾರಣಗಳಿಗೆ ತಮ್ಮನ್ನು ತಾವು ಸಮೂಹಕ್ಕೆ, ಸಾವಿಗೆ ತೆತ್ತುಕೊಂಡವರ ಒಳತುಡಿತಗಳಿಗೆ ಯಾವ ಪುರಾವೆಯಿದೆ? ಪುಡಿಯಾಗಿ ಹಾರುವ ಬೂದಿ ಸಾಕ್ಷಿ ಹೇಳುವುದೇ, ಬೆಂಕಿ ಸೇರಿದ ಕಣ್ಣಹನಿಗಳಿಗೆ?


ಪ್ರತಿ ಕಂಪನವೂ ಲಯಕಾರಕ

ರಾಜಸ್ಥಾನ ಪ್ರವಾಸೋದ್ಯಮ ಇಲಾಖೆ ಪ್ರತಿದಿನ ನಡೆಸುವ ಜನಪದ ಕಲಾಪ್ರಕಾರಗಳ ಪ್ರದರ್ಶನದಲ್ಲಿ ವಿವಿಧ ರೀತಿಯ ಕಲಾಪ್ರದರ್ಶನಗಳು, ನೃತ್ಯಗಳು ಗಮನ ಸೆಳೆದವು. ಅದರಲ್ಲೂ ಹೆಣ್ಣುಮಕ್ಕಳ ಕೆಲ ನೃತ್ಯ ಪ್ರಕಾರಗಳು ವಿಶೇಷವಾಗಿವೆ.


ತೇರಾತಾಲ್ ಎಂಬ ಕಲಾಪ್ರಕಾರದಲ್ಲಿ ಕಲಾವಿದೆ ತನ್ನ ದೇಹದ ಕನಿಷ್ಠ ೧೩ ಕಡೆ ಮುಂಜೀರ್ (ತಾಳ) ಕಟ್ಟಿಕೊಂಡಿರುತ್ತಾಳೆ. ಮೊಣಕೈ, ಮುಂಗೈ, ಭುಜ, ಕುತ್ತಿಗೆ, ಹಣೆ, ತಲೆ, ಬೆನ್ನು, ಸೊಂಟ, ಮೊಣಕಾಲು, ಪಾದ ಹೀಗೇ ನಾನಾ ಕಡೆಗಳಲ್ಲಿ ತೆರೆದ ತಾಳವನ್ನು ಕಟ್ಟಲಾಗಿರುತ್ತದೆ. ತನ್ನ ಎರಡೂ ಕೈಗಳಲ್ಲಿ ಬೀಸುವ ತಾಳ ಹಿಡಿದಿರುತ್ತಾಳೆ. ಕೂತು, ಎದ್ದು, ನಿಂತು, ಮಲಗಿ ಕಟ್ಟಿಕೊಂಡ ತಾಳಕ್ಕೆ ತನ್ನ ಕೈತಾಳ ಸೇರಿಸಿ ಲಯಬದ್ಧವಾಗಿ ಹಾಡುತ್ತ ನರ್ತಿಸುವುದೇ ಆ ನರ್ತನಕಲೆಯ ವಿಶೇಷ. ಅವರು ಕೂತರೂ ಲಯ, ನಿಂತರೂ ಲಯ, ಸೆಟೆದರೂ ಲಯ, ಮಣಿದರೂ ಲಯ. ಪ್ರತಿ ಕಂಪನವೂ ಲಯಕಾರಕವೇ.
ಚಾರಿ ಎಂಬ ಇನ್ನೊಂದು ಪ್ರಕಾರವು ನೀರು ಹುಡುಕುತ್ತ ಹೊರಟವರು ನೀರು ಸಿಕ್ಕ ಖುಷಿಗೆ ಮಾಡುವ ನರ್ತನ. ಮದುವೆ, ನಾಮಕರಣದಂತಹ ಶುಭ ಸಂದರ್ಭಕ್ಕೆ ಮಾಡುವ ನೃತ್ಯ. ಅದರಲ್ಲಿ ಹುಡುಗಿಯರು ನರ್ತಿಸುತ್ತಲೇ ಒಂದಾದಮೇಲೊಂದು ಕೊಡಗಳ ತಲೆಮೇಲೆ ಪೇರಿಸುತ್ತ ಹೋಗುತ್ತಾರೆ. ಕೊನೆಯ ಬಿಂದಿಗೆಯ ಮೇಲೆ ಅಥವಾ ಕೈಯಲ್ಲಿ ಹತ್ತಿಕಾಳೆಣ್ಣೆಯಿಂದ ಉರಿಯುವ ದೀಪವಿರುತ್ತದೆ. ನಾವು ನೋಡಿದಾಗ ಆಕೆ ದೊಡ್ಡ ಸೈಜಿನ ಬಿಂದಿಗೆಯಿಂದ ಶುರುಮಾಡಿ ಒಂದರಮೇಲೊಂದು ೨೩ ಕೊಡ ಇಟ್ಟುಕೊಂಡಳು. ಅವಳ ಎತ್ತರ ಎಷ್ಟೋ ಅದರ ಎರಡು ಪಟ್ಟು ಎತ್ತರದ ಗೋಪುರ ರೂಪುಗೊಂಡಿತು. ಕೊನೆಯದರ ಮೇಲೆ ಉರಿವ ದೀಪ. ನರ್ತಿಸಬೇಕು, ಜನರನ್ನು ರಂಜಿಸಬೇಕು. ಕೊಡಗಳು ಬೀಳಬಾರದು, ದೀಪ ಆರಬಾರದು. ಕೊನೆಗೆ ತಲೆ ಮೇಲೆ ಬಿಂದಿಗೆ ಹೊತ್ತವರು ಕತ್ತಿ ತುದಿಯ ಮೇಲೆ ನಿಂತು, ಗಾಜಿನ ಮೇಲೆ ನಿಂತು, ಕಂಚಿನ ಗಂಗಾಳದ ಮೇಲೆ ನಿಂತೂ ನರ್ತಿಸಿದರು!


ಒಟ್ಟಾರೆ ನೋಡುಗರು ಬಾಯಿ ತೆರೆದು ಒಂದಾದಮೇಲೊಂದರಂತೆ ಬರಲಿರುವ ಅಚ್ಚರಿಯನ್ನು ನೋಡುತ್ತ ಉದ್ಗರಿಸುವುದೇ ಕೆಲಸ. ಬರಬರುತ್ತ ಯಾವುದೂ ಅಚ್ಚರಿಯೇ ಅಲ್ಲ, ಅವರಿಗೆ ಎಲ್ಲವೂ ಸಲೀಸು, ಸಹಜ ಅನಿಸಿ ಕಣ್ಣರುಳುವುದೂ ನಿಂತುಹೋಗುತ್ತದೆ..

ಸಮತೋಲನ ಮತ್ತು ಕಸರತ್ತು ನಿರಂತರ ಬದುಕೇ ಆದವರ ಕುರಿತು ಆಗುವುದೂ ಹೀಗೇ ಅಲ್ಲವೇ? ಅವರಿಗೆ ಎಲ್ಲವೂ ಸಲೀಸು, ಸಹಜವಾಗಿ ಆಗುತ್ತಿರುವಂತೆ ಭಾಸವಾಗಿ ಗಮನ ಹರಿಯದೇ ಹೋಗುತ್ತದೆ.

ಹಗ್ಗದ ಮೇಲೆ ನಡೆವವಳು ಬಾಯ್ಬಿಟ್ಟರಷ್ಟೇ ಒಳಹೂರಣದ ರುಚಿ ತಿಳಿಯುತ್ತದೆ!
No comments:

Post a Comment