Sunday 12 June 2016

ಶ್ರೀಲಂಕಾದ ಎರಡು ಕವಿತೆಗಳು



(ಜೂನ್ 1, 1981. ಶ್ರೀಲಂಕಾದ ತಮಿಳು ಪ್ರಾಬಲ್ಯದ ಪ್ರದೇಶ ಜಾಫ್ನಾದಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಿತ್ತು. ಬಿಗಿ ಬಂದೋಬಸ್ತು, ರಕ್ಷಣೆಯ ಹೆಸರಲ್ಲಿ ಮಫ್ತಿಯಲ್ಲಿದ್ದ ಸಿಂಹಳ ಪೊಲೀಸರು ಜಾಫ್ನಾದ ಪಬ್ಲಿಕ್ ಲೈಬ್ರರಿಯನ್ನು ಸುಟ್ಟುಹಾಕಿದರು. ಅಂದು ನಡೆದ ಹಿಂಸಾಚಾರದಲ್ಲಿ ತಮಿಳರ ಜೀವಗಳೂ ಬಲಿಯಾದವು. 1930ರಲ್ಲಿ ಸ್ಥಾಪಿಸಲಾದ ಆ ಲೈಬ್ರರಿಯಲ್ಲಿ 90,000ಕ್ಕಿಂತ ಹೆಚ್ಚು ತಮಿಳು ಪುಸ್ತಕಗಳಿದ್ದವು. ಅಪರೂಪದ ಓಲೆಗರಿಯ ಹಸ್ತಪ್ರತಿಗಳಿದ್ದವು. ಜೀವ ನಾಶವಷ್ಟೇ ಅಲ್ಲ, ಗ್ರಂಥಾಲಯ ಸುಡುವಿಕೆ ತಮ್ಮ ಬೌದ್ಧಿಕ ಅಸ್ಮಿತೆಯ ನಾಶ ಎಂದೇ ಶ್ರೀಲಂಕಾದ ತಮಿಳರ ಮನದಲ್ಲಿ ದಾಖಲಾಯಿತು. ಅಷ್ಟೇ ಅಲ್ಲ, ಜನಾಂಗೀಯ ಕಲಹ ಸಶಸ್ತ್ರ ಹೋರಾಟವಾಗಿ ಉಲ್ಬಣಗೊಳ್ಳಲು ಕಾರಣವಾಯಿತು.

ಈ ಘಟನೆ ಕುರಿತು ಶ್ರೀಲಂಕಾದ ಖ್ಯಾತ ತಮಿಳು ಕವಿಗಳಾದ ರುದ್ರಮೂರ್ತಿ ಚೇರನ್ ಬರೆದ ‘ಎರಡನೆಯ ಸೂರ್ಯೋದಯ’ ಹಾಗೂ ಅವರ ತಂದೆಯ ಗೆಳೆಯರಾಗಿದ್ದ ಎಂ. ಎ. ನುಹ್ಮನ್ ಬರೆದ ಪ್ರಸಿದ್ಧ ಕವಿತೆ ‘ಬುದ್ಧನ ಕೊಲೆ’ ಇಲ್ಲಿವೆ.)

 ಎರಡನೆಯ ಸೂರ್ಯೋದಯ


(ಜಾನ್ ವೈಟ್ ಅವರ ಕಲಾಕೃತಿ)

ಅಂದು ಎಂದಿನಂತೆ ಗಾಳಿ ಬೀಸಲಿಲ್ಲ

ಕಡಲಲೆಗಳ ಏರಿಳಿತವಿರಲಿಲ್ಲ

ಸತ್ತಂತೆ ಬಿದ್ದುಕೊಂಡ ಸಮುದ್ರ

 

ಕಡಲ ದಂಡೆಯಲಿ ನಡೆವಾಗ ಏಕೋ

ಮರಳ ಆಳಾಳಕ್ಕೆ ಕುಸಿದವು ಪಾದಗಳು

ಅರೆರೆ, ಇಂದು ಮತ್ತೊಂದು ಸೂರ್ಯೋದಯವೇ!

ಬಾರಿ ಅಲ್ಲಿ, ತೆಂಕಣ ದಿಕ್ಕಿನಲ್ಲಿ!

 

ಏನಾಗಿತ್ತು ಅಲ್ಲಿ ದಕ್ಷಿಣದಲ್ಲಿ?

 

ನನ್ನೂರು ಹೊತ್ತುರಿಯುತ್ತಿತ್ತು

ನನ್ನವರು ಮುಖ ಕಳೆದುಕೊಂಡಿದ್ದರು

ನೆಲ ನಮ್ಮದು, ನಾಡು ನಮ್ಮದೇ

ನೆಲದ ಮೇಲೆ ಬೀಸುವ ಗಾಳಿಗೆ

ಬೇಕಂತೆ ಪರಕೀಯರ ಮೊಹರು, ಅಪ್ಪಣೆ

 

ಯಾರಿಗಾಗಿ ಕಾಯುತ್ತಿರುವೆ ಗೆಳೆಯ?

ನಿನ್ನ ಕೈ ಕಟ್ಟಿರುವುದೇಕೆ ಬೆನ್ನ ಹಿಂದೆ?

ಹಾರುವ ಮೋಡಗಳ ಮೇಲೆ ಬೆಂಕಿಯ ನಾಲಗೆ

ತನ್ನ ಸಂದೇಶ ಬರೆಯುತ್ತಿದೆ

ಈಗಲೂ ಇನ್ನೂ ಕಾಯುವುದೇ?

ಎದ್ದೇಳು,

ಬೀದಿಯ ಇಕ್ಕೆಲಗಳಲ್ಲೂ

ಬೂದಿರಾಶಿಯೊಳಗಿಂದ ಹೊಗೆಯೇಳುತ್ತಿದೆ

ದಾಟು ದಿಟ್ಟವಾಗಿ, ಮುನ್ನುಗ್ಗು ಸಂಗಾತಿಯೇ.




ರುದ್ರಮೂರ್ತಿ ಚೇರನ್
ಅನುಡಾಎಚ್ಎಸ್ಅನುಪಮಾ

ಬುದ್ಧನ ಕೊಲೆ


(Art by Krishna GiLiyar)

ಕಳೆದ ರಾತ್ರಿ, ನನ್ನ ಕನಸಲ್ಲಿ

ಬುದ್ಧಗುರುವನ್ನು ಕೊಲ್ಲಲಾಯಿತು

ಮಫ್ತಿಯ ಪೊಲೀಸರು

ಬುದ್ಧನನು ಗುಂಡಿಟ್ಟು ಕೊಂದರು.

ಜಾಫ್ನಾ ಲೈಬ್ರರಿಯ ಮೆಟ್ಟಿಲುಗಳ ಮೇಲೆ

ರಕ್ತದ ಮಡುವಿನಲ್ಲಿ ಮುಳುಗಿ

ಅಂಗಾತ ಬಿದ್ದ ಬುದ್ಧನ ದೇಹ..

 

ರಾತ್ರಿಯ ಕಗ್ಗತ್ತಲಿನಲ್ಲೇ ಓಡೋಡಿ ಬಂದ

ಮಂತ್ರಿ ಕಂಡದ್ದೇ ಕೆಂಡಾಮಂಡಲ,

ಅವನ ಹೆಸರು ನಮ್ಮ ಯಾದಿಯಲ್ಲಿರಲಿಲ್ಲ,

ಯಾಕೆ ಯಾಕೆ? ಕೊಂದಿದ್ದು ಯಾಕೆ?’

 

ಇಲ್ಲ, ಇಲ್ಲ,’ ಪೊಲೀಸರೆಂದರು,

ಪ್ರಮಾದವೇನೂ ಆಗಿಲ್ಲ ಮಹೋದಯರೇ,

ಅವನ ಬುದ್ಧನ ಕೊಲ್ಲದೇ ಹೋಗಿದ್ದರೆ

ಒಂದೇ ಒಂದು ನೊಣವನ್ನೂ

ಕೊಲ್ಲಲಾಗುತ್ತಿರಲಿಲ್ಲ ನಮಗೆ.

ಎಂದೇ..’


ಆಯಿತು, ಆಯಿತು ನಿಲ್ಲಿಸಿ.

ಕೂಡಲೇ ಮಾಡಿ ಶವ ವಿಲೇವಾರಿ

ಕರಗಿ ಹೋದರು ಗುಡುಗಿದ ಮಂತ್ರಿ..

 

ಮಫ್ತಿಯ ಪೊಲೀಸರು

ಶವವನ್ನು ಒಳಗೆಳೆದು

ಬುದ್ಧನ ದೇಹವನ್ನು

ತೊಂಭತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು.

ಸಿಕಲೋಕವಾದ ಸುತ್ತದಿಂದ ಬೆಂಕಿಯಿಟ್ಟರು

 

ಬುದ್ಧಗುರುವಿನ ದೇಹ ಬೂದಿಯಾಯ್ತು

ಅಂತೆಯೇ ಧಮ್ಮಪದವೂ..





- ಎಂ. ಎ. ನುಹ್ಮನ್

ಅನುಡಾಎಚ್ಎಸ್ಅನುಪಮಾ

6 comments:

  1. /ನನ್ನ ಜನ ಮುಖ ಕಳಕೊಂಡರು/(ಎರ್ಡನೆಯ ಸೂರ್ಯೋದಯ)
    ಬುದ್ದನ ದೇಹವನ್ನು /
    ತೊಂಬತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು/ (ಬುದ್ದನ ಕೊಲೆ)
    ಎರಡೂ ಪದ್ಯಗಳಲ್ಲಿದ್ದ ಜೀವಲೋಕದ ಮಿಡಿತಗಳು ಸಹೃದಯರನ್ನು ಅಲ್ಲಾಡಿಸುವಂತಿವೆ.

    ReplyDelete
  2. The intense phase of human tragedy getting echoed hauntingly....the shattered image of Buddha in the most violent form ...poetry at its powerful best....classy translation melts our heart...

    ReplyDelete
  3. ಎರಡೂ ಪದ್ಯಗಳು ಹೃದಯಸ್ಪರ್ಶಿಯಾಗಿವೆ ....ಅವನ ಕೊಲ್ಲದೇ ಹೋಗಿದ್ದರೆ
    ಒಂದೇ ಒಂದು ನೊಣವನ್ನೂ
    ಕೊಲ್ಲಲಾಗುತ್ತಿರಲಿಲ್ಲ.
    ಎಂದೇ..’......ಚುಚ್ಚುತ್ತಲೇ ಇದೆ...

    ReplyDelete
  4. ಈ ಕವನಗಳನ್ನೋದಿದಾಗ, "The Great Library of Alexandria" ಮತ್ತು "The Great Library of Nalanda" (ನಳಂದ "ಮಹಾವಿಹಾರ"ದ "ರತ್ನಸಾಗರ") ಎಂಬ ಎರಡು ಬೃಹತ್ ಗ್ರಂಥಭಂಡಾರಗಳಿಗೆ ಕಿಚ್ಚು ಹಚ್ಚಿದ, ಮತ್ತು "The Buddhas of Bamiyan" ಎಂಬ ಐತಿಹಾಸಿಕ ಪ್ರತಿಮಾಶ್ರೇಣಿಯನ್ನು ಚಚ್ಚಿ-ಕೆತ್ತಿ ಧೂಳಿಪಟ ಮಾಡಿದ ಘೋರದುರಂತಗಳ ನೆನಪಾಗಿ, ಒಡಲಿಗೆ ಕೊಳ್ಳಿಯಿಕ್ಕಿದಂತಾಯಿತು. ಈಚೆಗೆ ಪ್ರಬಲವಾಗುತ್ತಿರುವ "cancel culture" ಎಂಬುದಕ್ಕೂ ಇದು "ಜ್ವಲಂತ"
    ದೃಷ್ಟಾಂತವಾಗಿದೆ. ಜನಕೋಟಿಗಳ ಒಡಲಿನಾಳದಲ್ಲಿ ಇಂದಿನ ಕ್ಷುದ್ರ ಜನನಾಯಕರು ಬೇಕೆಂದೇ ಉರಿಸುತ್ತಿರುವ "ಸಾಂಸ್ಕೃತಿಕ ಮತ್ತು ಜನಾಂಗೀಯ" ದ್ವೇಷಾಗ್ನಿಯ ಫಲವೇ ಇದೆಂಬುದು ಸುವಿದಿತ.

    ReplyDelete