Friday, 12 June 2026

ಬೇಗಂ ರೊಖಿಯಾ ಸಖಾವತ್ ಹುಸೇನ್ Begum Rokeya akhavat Hussain ಬಂಗಾಳದ ಅಕ್ಷರ ದೀಪ

 


ಚಳಿ ಇನ್ನೇನು ಆರಂಭವಾಗಬೇಕು ಎನ್ನುವುದರಲ್ಲಿತ್ತು. ಹಗಲಿರುಳುಗಳನ್ನು ಮಬ್ಬುಗೊಳಿಸಲು ಹೊಗೆ ಮತ್ತು ಮಂಜು ಸೇರಿದ ಶರತ್ಕಾಲದ ಹೊಂಜು ಸಜ್ಜಾಗಿತ್ತು. ಆಗ ನಾವು ಮೂರು ದಿವಸ ಕಲಕತ್ತೆಗೆ ಹೋಗಿಬಂದೆವು. ನಮ್ಮ ಬಾಯಲ್ಲಿನ್ನೂ ಕಲಕತ್ತೆಯೇ ಆಗುಳಿದಿರುವ ಈಗಿನ ಕೋಲ್ಕತಾದಲ್ಲಿ ನೀವು ಊಹಿಸಿದ ತಾಣಗಳಂತೂ ಸರಿಯೇ, ಮತ್ತೂ ಒಂದು ಅತಿ ವಿಶಿಷ್ಟ ವ್ಯಕ್ತಿಯ ನೆನಪು ಉಕ್ಕಿಸುವ ಕರ್ಮಭೂಮಿಗೆ ಭೇಟಿ ನೀಡಿ ಬಂದೆವು. 

ರವೀಂದ್ರ ಸದನ್ ಬಳಿ ಮೆಟ್ರೋ ಇಳಿದು, ಲಾರ್ಡ್ ಸಿನ್ಹಾ ರಸ್ತೆಯಲ್ಲಿ ಸಾಗಿದರೆ ಬಿರ್ಲಾ ಹೈಸ್ಕೂಲ್, ಶ್ರೀನಿಕೇತನ, ಸೇಂಟ್ ಸೇವಿಯರ‍್ಸ್, ಲಾ ಮಾರ್ಟಿನಿಯರ್ ಮುಂತಾದ ದುಬಾರಿ ಖಾಸಗಿ ಶಾಲೆಗಳ ನಡುವೆ ಶತಮಾನಕ್ಕೂ ಹಿಂದೆ ಆರಂಭವಾದ ಸಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಸಿಗುತ್ತದೆ. ಶಿಕ್ಷಣವೇ ವಿಮೋಚನೆಯ ದಾರಿ ಎಂಬ ಸದಾಶಯದಿಂದ ಕಲಕತ್ತೆಯ ಹೃದಯ ಭಾಗದಲ್ಲಿ ಹುಡುಗಿಯರ ಸರ್ಕಾರಿ ಪ್ರೌಢಶಾಲೆಯನ್ನು ೧೯೧೧ರಲ್ಲಿ ಆರಂಭಿಸಿದವರು ಬೇಗಂ ರೊಖಿಯಾ ಸಖಾವತ್ ಹುಸೇನ್ (೧೮೮೦-೧೯೩೨).

ಸಾಹಿತ್ಯ, ಕಲೆ, ಜಾನಪದ, ಸಂಗೀತ, ಸಿನಿಮಾ, ಆಟ ಎಲ್ಲದರಲ್ಲೂ ಬಂಗಾಳಿಗಳದ್ದು ಎತ್ತಿದ ಕೈ. ಅವರ ಅಕ್ಷರ ಪ್ರೇಮ ಎಷ್ಟೆಂದರೆ ಕಲಕತ್ತೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೂರಿನ ಮೇಲೆಲ್ಲ ಬಂಗಾಳಿ ಅಕ್ಷರಗಳನ್ನೇ ಚಿತ್ರದಂತೆ ಬರೆದು ತುಂಬಿಸಿದ್ದಾರೆ. ಅಂತಹ ಅಕ್ಷರಪ್ರೇಮಿ ಬಂಗಾಳದ ಅಕ್ಷರ ದೀಪ ಬೇಗಂ ರೊಖಿಯಾ ಸಖಾವತ್ ಹುಸೇನ್. ಮಹಿಳೆಯರು ಎದುರಿಸುವ ಅಪರಿಹಾರ್ಯ ಸಮಸ್ಯೆಗಳ ಮೂಲ ‘ಮನೋಸಿಕ್ ದಾಸತ್ವೊ’ (ಮಾನಸಿಕ ದಾಸ್ಯ) ಎಂದು ಭಾವಿಸಿ ಶಿಕ್ಷಣ, ಬರಹ, ಸಂಘಟನೆಗಳ ಮೂಲಕ ಸ್ವಾಯತ್ತ, ಚಿಂತನಾಶೀಲ ಮಹಿಳೆಯರನ್ನು ರೂಪಿಸುವ ಕನಸು ಹೊತ್ತ ಚೇತನ ಅವರು. ಭಾರತ ಉಪಖಂಡದ ಪಶ್ಚಿಮ ಗಡಿಯಲ್ಲಿ ಸಾವಿತ್ರಿಬಾಯಿ ಮಾಡಿದ ಕೆಲಸವನ್ನು ಪೂರ್ವ ಗಡಿ ಬಂಗಾಳದಲ್ಲಿ ರೊಖಿಯಾ ಮಾಡಿದರು. ಹಲವು ಸವಾಲುಗಳ ನಡುವೆ ಶಾಲೆ ತೆರೆದ ಅವರು ಜ್ಞಾನದಾಸೋಹ ಪರಂಪರೆಯ ಕೊಂಡಿಯಾದರು. ಇಪ್ಪತ್ತನೆಯ ಶತಮಾನದ ಅವಿಭಜಿತ ಬಂಗಾಳದ ಪ್ರಮುಖ ಲೇಖಕಿಯಾಗಿ ಹೊಮ್ಮಿದರು. ಬದುಕಿಡೀ ಲೋಕಸಂಸಾರಕ್ಕಾಗಿ, ಅದರೊಳಗಿನ ವಂಚಿತ ಮಹಿಳೆಯರಿಗಾಗಿ ದುಡಿದರು. ಸಮಾಜ ಜಾಗೃತಿಗಾಗಿ ಕತೆ, ಕವಿತೆ, ಕಾದಂಬರಿ, ಲೇಖನ ಬರೆದರು. ಭಾಷಣ ಮಾಡಿದರು. ಮುಸ್ಲಿಂ ಮಹಿಳೆಯರನ್ನು ಸಂಘಟಿಸಿದರು. ಬಂಗಾಳದ ಅಕ್ಷರ ಮಾತೆ ಎನಿಸಿಕೊಂಡರು. 

ಕಲಕತ್ತೆಯಲ್ಲಿ ಅವರು ಆರಂಭಿಸಿದ ಶಾಲೆ ಇವತ್ತಿಗೂ ನಡೆಯುತ್ತಿದೆ. ಎಷ್ಟೇ ಭಿನ್ನಮತಗಳಿದ್ದರೂ ತನ್ನ ಸಮುದಾಯದೊಡನೆ  ಸಂಪರ್ಕ ಇಟ್ಟುಕೊಂಡು ಅದರ ಆಂತರಿಕ ವಿಮರ್ಶಕಿಯಾಗಿ ಸುಧಾರಣೆಯ ಕೆಲಸ ಮಾಡಿದ ಅವರ ಬದುಕಿನ ವಿವರಗಳು ಸ್ಫೂರ್ತಿದಾಯಕವಾಗಿವೆ.


ಬಂಗಾಳದ ಅಕ್ಷರದೀಪ





ಇಂದಿನ ಬಾಂಗ್ಲಾದೇಶದ ರಂಗಾಪುರ ಜಿಲ್ಲೆಯ ಪೈರಾಬೊಂದ್ ಹಳ್ಳಿಯ ಸಾಂಪ್ರದಾಯಿಕ ಮುಸ್ಲಿಂ ಕೂಡು ಕುಟುಂಬದಲ್ಲಿ ೧೮೮೦ರಲ್ಲಿ ರೊಖಿಯಾ ಹುಟ್ಟಿದರು. ತಂದೆ ಜಹೀರುದ್ದೀನ್ ಮುಹಮದ್ ಅಬು ಅಲಿ ಸಬೇರ್. ಜಮೀನ್ದಾರರು, ಬಹುಭಾಷಾ ವಿದ್ವಾಂಸರು. ಅಮ್ಮ ರಾಹತುನ್ನೀಸಾ ಚೌಧುರಿ. ಮುಘಲರ ಸೇನೆಯಲ್ಲಿ, ನ್ಯಾಯಾಲಯಗಳಲ್ಲಿ ಉದ್ಯೋಗ ಮಾಡಿದ ಅಧಿಕಾರಸ್ಥರ ಮನೆತನದ ಮಹಿಳೆ. ಪರ್ದಾ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದ ಮನೆಯಲ್ಲಿ ರೊಖಿಯಾರ ತಂದೆ ಮಹಿಳಾ ಶಿಕ್ಷಣಕ್ಕೆ ವಿರುದ್ಧವಾಗಿದ್ದರು. ಮಗಂದಿರನ್ನು ಬಂಗಾಳಿ, ಇಂಗ್ಲಿಷ್ ಶಾಲೆಗೆ ಕಳಿಸಿದ್ದರೂ ಹೆಣ್ಣುಮಕ್ಕಳು ಶಾಲೆಗೆ ಹೋಗಿ ಕಲಿಯುವ ಅವಶ್ಯಕತೆಯಿಲ್ಲ; ಕುರಾನ್ ಓದಲು ಸಾಧ್ಯ ಮಾಡುವ ಉರ್ದು, ಅರೇಬಿಕ್‌ಗಳನ್ನು ಮನೆಯಲ್ಲೇ ಕಲಿತರೆ ಸಾಕೆಂಬ ಧೋರಣೆ ಹೊಂದಿದ್ದರು. ಬಂಗಾಳಿ, ಇಂಗ್ಲಿಷ್ ಕಲಿತರೆ ಹೆಣ್ಣುಗಳು ನಡತೆಗೆಡುತ್ತಾರೆ ಎನ್ನುವ ಮನೆಯಲ್ಲಿ ಹುಡುಗರಾದರೋ ತಮ್ಮ ಅಕ್ಕತಂಗಿಯರಿಗೆ ಕದ್ದುಮುಚ್ಚಿ ನಡುರಾತ್ರಿಯ ವೇಳೆ ಬಂಗಾಳಿ ಮತ್ತು ಇಂಗ್ಲಿಷ್ ಹೇಳಿಕೊಡುತ್ತಿದ್ದರು. ರೊಖಿಯಾಳ ಅಕ್ಕ ಕರೀಮುನ್ನೀಸ ಬಂಗಾಳಿಯನ್ನು ಓದಿ, ಬರೆಯುವಷ್ಟು ಕಲಿತಿದ್ದಳು. ಅಕ್ಕನ ನೋಡುತ್ತ, ಅಣ್ಣ ಇಬ್ರಾಹಿಂ ಸಬೇರ ಕೊಟ್ಟ ಸಚಿತ್ರ ಇಂಗ್ಲಿಷ್ ಪುಸ್ತಕ ಓದುತ್ತ ಪುಟ್ಟ ರೊಖಿಯಾಗೆ ಓದುವ, ಬರೆಯುವ ಕನಸು ಹರಳುಗಟ್ಟಿತು. 


ಕರೀಮುನ್ನಿಸಾ ೧೪ ವರ್ಷಕ್ಕೆ ಮದುವೆಯಾಗಿ, ಸಂಸಾರ, ಮಕ್ಕಳ ಜಂಜಾಟದಲ್ಲಿ ಓದಿ ಬರೆಯುವ ಕನಸುಗಳೆಲ್ಲ ನುಚ್ಚುನೂರಾದಂತವಳಾದದ್ದು ಕಂಡ ರೊಖಿಯಾ ಮದುವೆ ಎಂದರೆ ಕೆಂಡವಾಗುತ್ತಿದ್ದಳು. ಎಲ್ಲಕ್ಕೂ ಬಂಡೇಳುತ್ತಿದ್ದಳು. ೧೮ ವರ್ಷ ಕಳೆಯುವವರೆಗೆ ಮದುವೆಯ ಮಾತೆತ್ತಿದರೆ ಕೋಪಗೊಳ್ಳುತ್ತಿದ್ದಳು. ಕೊನೆಗೆ ಇಂದಿನ ಬಿಹಾರದ ಭಾಗಲ್ಪುರದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಖಾನ್ ಬಹಾದುರ್ ಸಖಾವತ್ ಹುಸೇನ್ ಎಂಬ ನಲವತ್ತರ ಅಂಚಿನ ವಿಧುರರೊಂದಿಗೆ ಮದುವೆ ನಿಶ್ಚಯವಾಯಿತು. ರೊಖಿಯಾ ಬದುಕಿಗೆ ಪತಿ ಸಖಾವತ್ ತಿರುವು ನೀಡಿದರು. ತಮ್ಮ ಪತ್ನಿ ಬುರ್ಖಾ ತೊಡುವುದು ಬೇಡವೆಂದರು. ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದರು. ಬರೆಯಲು ಪ್ರೋತ್ಸಾಹಿಸಿದರು. ಎಲ್ಲರಿಗೂ ಅರ್ಥವಾಗುವಂತೆ ಬಂಗಾಳಿಯಲ್ಲೇ ಬರೆ ಎಂದರು. ಮದುವೆಯು ರೊಖಿಯಾಗೆ ಬಂಧನವಾಗದೇ ಬಿಡುಗಡೆಯ ಹೊಸಹಾದಿಯಾಗಿ ತೆರೆದುಕೊಂಡಿತು. ತಂದೆಯ ಬಳಿ ಸೆಣಸಿ ಗಳಿಸಿಕೊಳ್ಳಲಾಗದ ಸ್ವಾತಂತ್ರ್ಯ, ಅವಕಾಶಗಳನ್ನು ಬಾಳಸಂಗಾತಿಯ ಬಳಿ ಪಡೆದುಕೊಂಡರು.


೧೯೦೨ರಲ್ಲಿ ರೊಖಿಯಾ ಬರೆದ ಮೊದಲ ಬಂಗಾಳಿ ಬರಹ ಪಿಪಾಸಾ ಪ್ರಕಟವಾಯಿತು. ನಂತರ ಅವರ ಪೆನ್ನು ವಿಶ್ರಾಂತಿ ಪಡೆಯಲೇ ಇಲ್ಲ. ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದರು. ಮೋತಿಚೂರ್ (೧೯೦೫), ಸುಲ್ತಾನಾಸ್ ಡ್ರೀಂ (೧೯೦೫) ಎಂಬ ಇಂಗ್ಲಿಷ್ ಕೃತಿ, ಪದ್ಮರಾಗ (೧೯೨೪) ಎಂಬ ಕಾದಂಬರಿ, ಗಾಡ್ ಗಿವ್ಸ್, ಮೆನ್ ರಾಬ್ಸ್ (೧೯೨೭) ಮತ್ತು ಅಬರೋಧ ಭಾಷಿಣಿ (೧೯೩೧) ಎಂಬ ಲೇಖನ ಸಂಗ್ರಹಗಳು ಪ್ರಕಟವಾದವು. 


ಮದುವೆಯಾಗಿ ಹತ್ತು ವರ್ಷಗಳಾದಾಗ ಸಖಾವತ್ ಹಠಾತ್ತನೆ ೧೯೦೯ರಲ್ಲಿ ತೀರಿಕೊಂಡರು. ಹೆಣ್ಣುಮಕ್ಕಳ ಶಾಲೆ ತೆರೆಯುವ ಪತ್ನಿಯ ಕನಸು ನನಸಾಗಲೆಂದು ಹತ್ತು ಸಾವಿರ ರೂಪಾಯಿಗಳನ್ನು ಬಿಟ್ಟು ಹೋಗಿದ್ದರು. ಅವರು ತೀರಿಕೊಂಡ ಐದು ತಿಂಗಳಿಗೇ ರೊಖಿಯಾ ಭಾಗಲ್ಪುರದಲ್ಲಿ ಮುಸ್ಲಿಂ ಹುಡುಗಿಯರ ಪ್ರಾಥಮಿಕ ಶಾಲೆ ತೆರೆದರು. ಮೊದಲು ಐವರು ವಿದ್ಯಾರ್ಥಿನಿಯರಷ್ಟೇ ಬಂದರು. ಪತಿಯ ಮನೆಯಲ್ಲಿ ಆಸ್ತಿಯ ಜಗಳ ಕಾವೇರಿದಾಗ ಬೇಸತ್ತು ಕಲಕತ್ತೆಗೆ ಶಾಲೆಯನ್ನು ಸ್ಥಳಾಂತರಿಸಿದರು. ೧೯೧೧, ಮಾರ್ಚಿಯಲ್ಲಿ ಸಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಆರಂಭ ಮಾಡಿದರು. ಮೊದಲು ಯಾವ ಹುಡುಗಿಯರೂ ಶಾಲೆ ಸೇರಲು ಒಪ್ಪಲಿಲ್ಲ. ರೊಖಿಯಾ ಮನೆಮನೆಗೆ ಹೋಗಿ ಹೆಣ್ಣುಮಕ್ಕಳು ಶಾಲೆ ಕಲಿಯುವ ಅವಶ್ಯಕತೆ ಕುರಿತು ತಿಳಿಸಿ ಹೇಳಿ ಕರೆತಂದರು. ಹುಡುಗಿಯರು ಅಕ್ಷರ ಕಲಿಯುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಲ್ಲ ಎಂದು ಆಧಾರ ಸಮೇತ ವಿವರಿಸಿದರು. ಎಂಟು ವಿದ್ಯಾರ್ಥಿನಿಯರೊಡನೆ ಬಾಡಿಗೆ ಮನೆಯಲ್ಲಿ ಶಾಲೆ ಆರಂಭವಾಯಿತು. ತೀವ್ರ ಟೀಕೆ, ಕಟಕಿ, ಕಾಲೆಳೆಯುವವರ ನಡುವೆಯೇ ಶಾಲೆ ನಡೆಸಿದರು. ಪಠ್ಯಕ್ರಮ ತಾವೇ ತಯಾರು ಮಾಡಿದರು. ಬೋಧನಾ ಸಿಬ್ಬಂದಿಗಳಿಗೆ ಸ್ವತಃ ನಿರ್ದೇಶನ, ತರಬೇತಿ ನೀಡಿದರು. ಕರಕುಶಲ ತರಬೇತಿ, ಗೃಹವಿಜ್ಞಾನ, ತೋಟಗಾರಿಕೆ, ಅಡುಗೆ, ಸಂಗೀತ, ಪ್ರಥಮ ಚಿಕಿತ್ಸೆ, ದೈಹಿಕ ಕಸರತ್ತುಗಳೆಲ್ಲವೂ ಶಿಕ್ಷಣದ ಭಾಗವಾಗಿದ್ದವು. ಇದು ವಿದ್ಯಾರ್ಥಿನಿಯರನ್ನು ಶಿಸ್ತುಬದ್ಧಗೊಳಿಸಿ ಮನೆಯವರಿಂದ ಮೆಚ್ಚುಗೆ ಗಳಿಸಿತು. ಶಾಲೆಗೆ ಬರುವವರ ಸಂಖ್ಯೆ ಏರುತ್ತ ಹೋಯಿತು. ವಿದ್ಯಾರ್ಥಿನಿಯರ ಸಂಖ್ಯೆ ೨೭ ಆದಾಗ ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಿದರು. ೧೯೧೫ರಲ್ಲಿ ಐದನೆಯ ತರಗತಿ ಆರಂಭವಾಗಿ ಪ್ರಾಥಮಿಕ ಶಾಲೆ ಆಯಿತು. ೧೯೧೬ರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ೧೦೦ ದಾಟಿ ಆರನೆಯ ತರಗತಿ ಆರಂಭವಾಗಿ ಇಂಗ್ಲಿಷ್ ಮಾಧ್ಯಮಿಕ ಶಾಲೆ ಆಯಿತು. ೧೯೨೭ರಲ್ಲಿ ಏಳನೆಯ ತರಗತಿ ಆರಂಭವಾಗಿ ಇಂಗ್ಲಿಷ್ ಹೈಯರ್ ಸ್ಕೂಲ್ ಆಯಿತು. ೧೯೩೦ರಲ್ಲಿ ಹತ್ತನೆಯ ತರಗತಿ ಆರಂಭವಾಗಿ ಗರ್ಲ್ಸ್ ಹೈಸ್ಕೂಲ್ ಆಯಿತು. ೧೯೩೧ರಲ್ಲಿ ಮೂವರು ಮೆಟ್ರಿಕ್ ಪರೀಕ್ಷೆ ಬರೆದರು. ೧೯೩೨ರಲ್ಲಿ ೭೫% ವಿದ್ಯಾರ್ಥಿನಿಯರು ಮೆಟ್ರಿಕ್ ಪಾಸು ಮಾಡಿದರು.


ಅದೇನೂ ಆ ಕಾಲದ ಮೊದಲ ಮಹಿಳಾ ಶಾಲೆಯಾಗಿರಲಿಲ್ಲ. ಅವರಿಗಿಂತ ಮುನ್ನ ವಿಕ್ಟೋರಿಯಾ ರಾಣಿಯಿಂದ ನವಾಬ್ ಬಿರುದನ್ನು ಪಡೆದ ಮೊದಲ ಮಹಿಳೆ ಫೈಜುನ್ನಿಸಾ ಚೌಧುರಿ (೧೮೩೪ ಜನನ) ಮುಸ್ಲಿಂ ಮಹಿಳಾ ಶಿಕ್ಷಣದ ಸಲುವಾಗಿ ಕೆಲಸ ಮಾಡಿದ್ದರು. ರೊಖಿಯಾ ಅದನ್ನು ಮುಂದುವರೆಸಿದರು. ಆದರೆ ಸವಾಲುಗಳು ಕಡಿಮೆಯಿರಲಿಲ್ಲ. ಪರ್ದಾ ಇಲ್ಲದೆ ಕಲಿಸುವುದು ಸಾಧ್ಯವಾಗಲಿಲ್ಲ. ಪುರುಷರ ಸಂಪರ್ಕಕ್ಕೆ ಬರದಂತೆ ಹುಡುಗಿಯರನ್ನು ಕಟ್ಟುನಿಟ್ಟಾಗಿ ದೂರವೇ ಇಡಬೇಕಾಯಿತು. ಶಾಲೆಗೆ ಕರೆತರಲು ಪರದೆ ಇಳಿಬಿಟ್ಟ ಕುದುರೆಗಾಡಿ ಕಳಿಸಬೇಕಾಯಿತು. ಬುರ್ಖಾ ಬದಲು ತಲೆಮೇಲೆ ಹೊದೆವಸ್ತ್ರ ಹೊದೆಯುವಂತೆ ಮಕ್ಕಳನ್ನು, ಅವರ ಪಾಲಕರನ್ನು ಮನವೊಲಿಸಲು ಕಷ್ಟಪಡಬೇಕಾಯಿತು. ಎಲ್ಲ ಸವಾಲುಗಳ ನಡುವೆಯೇ ೨೪ ವರ್ಷಗಳ ಕಾಲ ಯಶಸ್ವಿಯಾಗಿ ಶಾಲೆ ನಡೆಯಿತು. ನೂರಾರು ಹುಡುಗಿಯರು ಅಕ್ಷರದ ಬೆಳಕು ಕಂಡು ವಿಚಾರಗಳಿಗೆ ತೆರೆದುಕೊಂಡರು. 


‘ಗಾಡ್ ಗಿವ್ಸ್, ಮೆನ್ ರಾಬ್ಸ್’


ಪತಿಯ ಮರಣಾನಂತರ ಶೋಕಿಸುತ್ತ ಕೂರದೇ ಅರ್ಥಪೂರ್ಣವಾಗಿ ಅವರ ನೆನಪಿನಲ್ಲಿ ಶಾಲೆ ತೆರೆದ ರೊಖಿಯಾ ಅವರ ಮಾತು, ಚಿಂತನೆಗಳು ಸ್ವಾಯತ್ತ ಬದುಕನ್ನು ಪ್ರತಿಪಾದಿಸುತ್ತಿದ್ದವು. ಶಾಲೆ ನಡೆಸುತ್ತ, ಬರವಣಿಗೆ ಮಾಡುತ್ತ ‘ಅಂಜುಮನ್-ಇ-ಖವಾತೀನ್-ಇ-ಇಸ್ಲಾಂ’ ಮಹಿಳಾ ಸಂಘಟನೆ ಆರಂಭಿಸಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪರಿಸ್ಥಿತಿಯ ಕುರಿತು ಚರ್ಚೆ, ಸಮ್ಮೇಳನ, ಸಂವಾದ ಏರ್ಪಡಿಸಿದರು. ಬ್ರಿಟಿಷ್ ಭಾರತದಲ್ಲಿ ಅತಿ ಸಾಂಪ್ರದಾಯಿಕತೆ ಮತ್ತು ಅತಿ ಧಾರ್ಮಿಕ ನಿಷ್ಠೆಯೇ ಮುಸ್ಲಿಂ ಸಮಾಜವು ಉಳಿದೆಲ್ಲ ಸಮಾಜಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದರು. ಒಮ್ಮೆ ಮಾತನಾಡುತ್ತ, ‘ಹೆಣ್ಣು ತಲೆಯೆತ್ತಿದರೆ ಸಾಕು, ಧರ್ಮ ಶಾಸ್ತ್ರ ಪುರಾಣಗಳ ಹೆಸರಿನ ಶಸ್ತ್ರಾಸ್ತ್ರಗಳು ಅವಳ ತಲೆಯ ಮೇಲೆ ಹೊಡೆಯುತ್ತವೆ. ಗಂಡಸರು ಶಾಸ್ತ್ರ ಪುರಾಣಗಳನ್ನು ದೇವರ ಆಜ್ಞೆಯೋ ಎನ್ನುವಂತೆ ಪ್ರಚಾರ ಮಾಡಿ ನಮ್ಮನ್ನು ಕತ್ತಲಲ್ಲಿಟ್ಟು ಆಳಲು ಬಳಸಿಕೊಳ್ಳುತ್ತಾರೆ. ಶಾಸ್ತ್ರ ಪುರಾಣಗಳನ್ನು ಸೃಷ್ಟಿ ಮಾಡಿದವರು ಗಂಡಸರೇ. ಸಂತರು ಹೇಳುವ ಉದಾತ್ತ ಬೋಧನೆಗಳನ್ನು ಕೇಳುತ್ತೇವಲ್ಲ, ನಿಜವಾಗಿ ಅವೆಲ್ಲ ಮಹಿಳಾ ಸಂತರ ವಿಚಾರಗಳು. ಗಂಡಸರು ಸೃಷ್ಟಿಸಿದ ಧರ್ಮಗಳು ಹೆಣ್ಣಿನ ಬದುಕಿನ ಸುತ್ತ ಸೇವೆಯ ಉರುಳನ್ನು ಬಿಗಿಗೊಳಿಸಿವೆ ಮತ್ತು ಪುರುಷರು ಮಹಿಳೆಯ ಮೇಲೆ ಅಧಿಕಾರ ಹೇರುವುದನ್ನು ಸಮರ್ಥಿಸುತ್ತವೆ’ ಎಂದು ಹೇಳಿದರು. ಅವರ ಇಂತಹ ದಿಟ್ಟ ಮಾತುಗಳನ್ನು ಕೇಳಿ ಸಾಂಪ್ರದಾಯಿಕ ಸಮಾಜ ವಿದ್ಯುದಾಘಾತವಾದವರಂತೆ ಬೆಚ್ಚಿಬೀಳುತ್ತಿದ್ದರೆ, ಮಹಿಳೆಯರು ಜಾಗೃತಗೊಳ್ಳುತ್ತಿದ್ದರು, ಎಚ್ಚೆತ್ತುಕೊಳ್ಳುತ್ತಿದ್ದರು. 


ರೊಖಿಯಾ ಆಧುನಿಕ ಬಂಗಾಳಿ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಲೇಖಕಿಯಾಗಿ ಹೊರಹೊಮ್ಮಿದರು. ತಮಾಷೆ, ವ್ಯಂಗ್ಯ, ವಿಡಂಬನೆಗಳ ಮೂಲಕ ತಮ್ಮ ಬರಹಗಳಲ್ಲಿ ಬಂಗಾಳಿ ಮುಸ್ಲಿಂ ಮಹಿಳೆಯರು ಅನುಭವಿಸುವ ಕಷ್ಟಗಳನ್ನು ವಿವರಿಸಿದರು. ರೈಲಿನಡಿ ಸಿಕ್ಕಿಕೊಂಡರೂ ಅನ್ಯಪುರುಷರನ್ನು ಸಹಾಯ ಮಾಡಿರೆಂದು ಕೂಗಿ ಕರೆಯಲಾಗದೇ ಪರ್ದಾ ಆಚರಿಸುತ್ತಿದ್ದ ಅವರ ಚಿಕ್ಕಮ್ಮ ಹಳಿಯ ಮೇಲೆ ಅಸು ನೀಗಿದ್ದರು. ಅದನ್ನು ರೊಖಿಯಾ ನೋಡಿದ್ದರು. ಆ ಅನುಭವದ ಹಿನ್ನೆಲೆಯಲ್ಲೋ ಏನೋ, ತಮ್ಮ ಬರವಣಿಗೆಗಳಲ್ಲಿ ಹಾಗೂ ವೈಯಕ್ತಿಕವಾಗಿ ಪರ್ದಾ ಪದ್ಧತಿಯನ್ನು ಕಟುನುಡಿಗಳಲ್ಲಿ ವಿರೋಧಿಸುತ್ತಿದ್ದರು. ಅಬರೋಧ ಭಾಷಿಣಿ ಎಂಬ ಹೊತ್ತಗೆಯಲ್ಲಿ ಪರ್ದಾ ಪದ್ಧತಿಯು ಮಹಿಳೆಯರ ಆತ್ಮಗೌರವ ಮತ್ತು ಬದುಕನ್ನೇ ನಾಶ ಮಾಡಿದೆ ಎಂದು ಕುಟುಕಿದರು. ಅರ್ಧಾಂಗಿ, ಬುರ್ಖಾ, ಗೃಹ ಮೊದಲಾದ ಪ್ರಬಂಧಗಳಲ್ಲಿ ಗಂಡಸರ ಪ್ರತಿಷ್ಠೆ ಮತ್ತು ಅನುಕೂಲಕ್ಕೆ ತಕ್ಕಂತೆ ಪರ್ದಾ ಒಳಗೆ ಹೆಣ್ಣನ್ನು ಬಂಧಿಸಲಾಗಿದೆ; ಆರ್ಥಿಕ ಸ್ವಾವಲಂಬನೆ ಸಾಧಿಸದಿರುವುದು ಮಹಿಳೆಯರು ಮುಂದುವರೆಯದಂತೆ ತೊಡಕಾಗಿದೆ ಎಂದು ಘೋಷಿಸಿದರು. ಸುಗೃಹಿಣಿ ಪ್ರಬಂಧದಲ್ಲಿ ಬುರ್ಖಾ ಧಾರಣೆ ಮತ್ತು ಪುರುಷರಿಂದ ಬೇರ್ಪಡಿಸುವಿಕೆ ಕುರಾನಿನಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಹಾಗೂ ಷರಿಯಾದಲ್ಲಿ ಹೇಳಿಲ್ಲ; ಲಿಂಗಾಧಾರಿತ ಬೇರ್ಪಡಿಸುವಿಕೆ ಮಾಯದ ಗಾಯದಂತಲ್ಲ; ಅದು ನಿಧಾನ ಕೊಲ್ಲುವ ಕಾರ್ಬನ್ ಮೊನಾಕ್ಸೈಡ್ ವಿಷದಂತೆ ಎಂದು ಬರೆದರು. ಶಿಕ್ಷಣ ನೀಡಿದರೆ ಮಹಿಳೆಯರು ಕೆಟ್ಟುಹೋಗುತ್ತಾರೆ ಎಂಬ ವಾದ ಆಗ ಚಾಲ್ತಿಯಲ್ಲಿತ್ತು. ‘ಕುರಾನಿನಲ್ಲಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ; ಇವತ್ತಿನ ಇಸ್ಲಾಂ ವಿರೂಪಗೊಂಡಿರುವುದಷ್ಟೇ ಅಲ್ಲ, ಭ್ರಷ್ಟಗೊಂಡಿದೆ. ಶಿಕ್ಷಣ ನೀಡಿದರೆ ಮಹಿಳೆಯರು ತಮ್ಮ ಪಾತ್ರವನ್ನು ಜ್ಞಾನದಿಂದಲೂ, ವೃತ್ತಿಪರವಾಗಿಯೂ ನಿಭಾಯಿಸಲು ಸಾಧ್ಯವಾಗಿ ದೇಶ ಅಭಿವೃದ್ಧಿಯಾಗುತ್ತದೆ; ಗಂಡಸರ ಸಮಸಮ ಹೆಜ್ಜೆಹಾಕಲು ಸಹಾಯವಾಗುತ್ತದೆ. ಮಹಿಳೆಯರು ಓದಿದರೆ ಕೆಟ್ಟುಹೋಗುತ್ತಾರೆನ್ನುವುದು ಸುಳ್ಳು. ತಮ್ಮನ್ನು ಮುಸ್ಲಿಂ ಎಂದು ಕರೆದುಕೊಳ್ಳುವ ಗಂಡಸರು ಮಹಿಳೆಯರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದ ಇಸ್ಲಾಮಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದು ಗಂಡಸು ಹಾಳಾಗಿಹೋಗುವುದಿಲ್ಲ ಎಂದಾದರೆ ಹೆಣ್ಣೇಕೆ ಹಾಳಾಗುತ್ತಾಳೆ?’ ಎಂದು ಗಾಡ್ ಗಿವ್ಸ್, ಮೆನ್ ರಾಬ್ಸ್ ಎಂಬ ಪುಸ್ತಕದಲ್ಲಿ (೧೯೨೭) ಪ್ರಶ್ನಿಸಿದರು.


ತಾವು ಸಮಾಜದಲ್ಲಿ ಬರಲೆಂದು ಆಶಿಸುವ ವಿಚಾರಗಳನ್ನು ಬರಹದಲ್ಲಿ ರೊಖಿಯಾ ಕಾಣಿಸುತ್ತಿದ್ದರು. ಅವರ ಪದ್ಮರಾಗ (೧೯೨೪) ಕಾದಂಬರಿಯು ಜಾತಿ, ವರ್ಗ, ಧರ್ಮವನ್ನು ಪರಿಗಣಿಸದೆ ಎಲ್ಲ ಹುಡುಗಿಯರಿಗೂ ಸಮಾನ ಶಿಕ್ಷಣದ ಅವಕಾಶ ನೀಡುವ ಶಾಲೆಯ ಕತೆಯಾಗಿದೆ. ಕ್ರಾಂತಿಕಾರಕ ಜಾತ್ಯತೀತ ವಿಚಾರಗಳ ಮಹಿಳೆಯರೇ ಸಿಬ್ಬಂದಿಗಳಾಗಿರುವ ತಾರಿಣಿ ಭವನದ ಕಥನವಾಗಿದೆ. ‘ಸುಲ್ತಾನಾಳ ಕನಸು’ ಎಂಬ ನೀಳ್ಗತೆಯು ಮಹಿಳಾ ರಾಜ್ಯವು ಹೇಗೆ ಯುದ್ಧವಿರದ, ಅಪರಾಧವಿರದ, ವೈಜ್ಞಾನಿಕ ಚಿಂತನೆಗಳ, ಎಲ್ಲರೂ ನೆಮ್ಮದಿಯಿಂದ ಬದುಕುವಂತಹ ಆಡಳಿತವಿರುವ ರಾಜ್ಯವಾಗಬಹುದು ಎಂಬ ಸ್ತ್ರೀವಾದಿ ಯುಟೋಪಿಯಾವನ್ನು ಕನಸುತ್ತದೆ. ಕೊನೆಗೂ ಸ್ತ್ರೀವಾದ ಬಯಸುವುದೇನು ಎಂದು ಯೋಚಿಸುವ ಜಗತ್ತಿನ ಮಹಿಳಾವಾದಿಗಳನ್ನು ಆ ಬರಹ ಸೆಳೆದಿದೆ.


ಹೀಗೆ ನೇರವಾಗಿ ಮತ್ತು ದಿಟ್ಟವಾಗಿ ಬರೆದ ರೊಖಿಯಾರ ಸ್ವಾಯತ್ತ ಮಹಿಳಾ ಧ್ವನಿ ತನ್ನ ಕಾಲದಲ್ಲಿ ಜನಪ್ರಿಯವಾಗಲಿಲ್ಲ. ಕ್ರೈಸ್ತಪರ, ಪಶ್ಚಿಮ ಪ್ರೇಮಿ, ಯೂರೋಪಿ ಮನಸ್ಥಿತಿ, ಪಾಶ್ಚಾತ್ಯ ಜೀವನ ಶೈಲಿಯ ಸಿರಿವಂತೆ ಎಂದೆಲ್ಲ ಅವರನ್ನು ಹೀಯಾಳಿಸಿದರು. ಆದರೆ ರೊಖಿಯಾ ಯಾವ ಹಿಂಜಗ್ಗುವಿಕೆಗೂ ಮಣಿಯಲಿಲ್ಲ. ಹಿಂದೆಳೆದಷ್ಟೂ ಹೆಚ್ಚೆಚ್ಚು ಬಲದಿಂದ ಮುನ್ನಡೆದರು. ಬರಹ, ಸಂಘಟನೆ, ಶಾಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ವೈಚಾರಿಕತೆ ಎಂಬ ಬೆಳಕಿನ ಬೀಜ ಬಿತ್ತುತ್ತಲೇ ಐವತ್ತೆರಡನೆಯ ವಯಸ್ಸಿನಲ್ಲಿ ಹುಟ್ಟಿದ ದಿನಾಂಕದಂದು ಕೊನೆಯುಸಿರೆಳೆದರು. 


ಅವರ ಮರಣಾನಂತರ ಶಾಲೆಯನ್ನು ೧೯೩೫ರಲ್ಲಿ ಬ್ರಿಟಿಷ್ ಸರ್ಕಾರ ವಹಿಸಿಕೊಂಡಿತು. ಸ್ವಾತಂತ್ರ್ಯಾನಂತರ ದೇಶ ವಿಭಜನೆಯಾದಾಗ ಶಾಲೆಯ ಎಲ್ಲ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಂಡ ಬಾಂಗ್ಲಾದೇಶಕ್ಕೆ ಹೋದರು. ಬಳಿಕ ರಾಜ್ಯಸರ್ಕಾರ ಶಾಲೆಗೆ ಹೊಸ ಬೋಧಕ ಸಿಬ್ಬಂದಿಯನ್ನು ನೇಮಿಸಿತು. ಅದೇ ಹೆಸರಿನಲ್ಲಿ ಶಾಲೆ ನಡೆಯತೊಡಗಿತು. ಆ ಶಾಲೆಯು ಇವತ್ತು ಕಲಕತ್ತೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಯೆಂದು ಪ್ರಸಿದ್ಧವಾಗಿದೆ. ರೊಖಿಯಾ ಅವರು ಕಂಡ ಮಹಿಳೆಯರ ಶಿಕ್ಷಣದ ಕನಸು ಎಲ್ಲ ವರ್ಗದವರಿಗೆ ಕೈಗೆಟುಕುತ್ತ ಸಾಕಾರವಾಗುತ್ತಿದೆ.


***


ಶಾಲಾ ಅವಧಿಯಲ್ಲಿ ಹೋಗುವುದೋ ಬೇಡವೋ ಎಂದು ಯೋಚಿಸುತ್ತ ನಾವು ಶುಕ್ತವಾರ ಸಂಜೆ ಸಖಾವತ್ ಮೆಮೊರಿಯಲ್ ಗರ್ಲ್ಸ್ ಹೈಸ್ಕೂಲಿಗೆ ಹೋದೆವು. ಶಾಲೆ ಆಗ ತಾನೇ ಬಿಟ್ಟಿತ್ತು. ಹೊರಗಡೆ ಶಿಕ್ಷಕಿಯರ ಗುಂಪು ನಿಂತು ಚರ್ಚಿಸುತ್ತಿತ್ತು. ಹೊರಗಿನಿಂದಲೇ ಪಟ ತೆಗೆದುಕೊಂಡೆವು. ಒಳಹೋಗಿ ನಮ್ಮನ್ನು ಪರಿಚಯಿಸಿಕೊಂಡೆವು. ಸಿಬ್ಬಂದಿ ನಮ್ಮನ್ನು ಪ್ರಿನ್ಸಿಪಾಲರ ಬಳಿಗೆ ಕರೆದೊಯ್ದರು. ಕಚೇರಿಯಲ್ಲೊಬ್ಬ ಹಿರಿಯ ಮಹಿಳೆ, ಮಾಜಿ ಪ್ರಾಂಶುಪಾಲರು ಕಾರ್ಯನಿಮಿತ್ತ ಬಂದಿದ್ದರು. ಅವರಿಗೆ ರೊಖಿಯಾ ಬಗೆಗೆ ತಿಳಿದಿತ್ತು. ತಮ್ಮ ಶಾಲೆಯ ಬಗೆಗೆ, ಅದರ ಸಂಸ್ಥಾಪಕರಾದ ರೊಖಿಯಾ ಬಗೆಗೆ ತಿಳಿಯಲು ದೂರದಿಂದ ನಾವು ಬಂದಿದ್ದೆವೆನ್ನುವುದು ಅವರಿಗೆಲ್ಲ ಸಂತಸ ತಂದಿತು. 


೧೯೩೨, ಡಿಸೆಂಬರ್ ಎಂಟನೆಯ ತಾರೀಖು ರಾತ್ರಿ ಹನ್ನೊಂದರವರೆಗೆ ರೊಖಿಯಾ ಬರೆಯುತ್ತ ಇದ್ದರಂತೆ. ‘ನಾರೀರ್ ಅಧಿಕಾರ್’ (ಮಹಿಳಾ ಹಕ್ಕುಗಳು) ಎಂಬ ಅಪೂರ್ಣ ಬರಹ ಅವರ ಬರೆಯುವ ಮೇಜಿನ ಮೇಲಿತ್ತು. ಆದರೆ ಅದನ್ನು ಪೂರ್ಣಗೊಳಿಸಲು ಮರುಬೆಳಿಗ್ಗೆ ಒಂಬತ್ತರಂದು ಅವರು ಏಳಲೇ ಇಲ್ಲವಂತೆ. ಅಪೂರ್ಣಗೊಂಡದ್ದನ್ನು ಪೂರ್ಣಗೊಳಿಸುವ ಹೊಣೆಂiನ್ನು ನಮಗೆ ವರ್ಗಾಯಿಸಿ ರೊಖಿಯಾ ಆ ಶಾಲಾವರಣದಲ್ಲಿ ನಿಂತು ನೋಡುತ್ತಿರುವರು ಎಂದ ಪ್ರಾಂಶುಪಾಲರು ಒಳಗೆ ಕರೆದೊಯ್ದು ರೊಖಿಯಾರ ಭಾರೀ ವಿಗ್ರಹ, ಹಳೆಯ ಫೋಟೋಗಳನ್ನು ತೋರಿಸಿದರು.


ಅವರು ಹಂಚಿಕೊಂಡ ಮಾಹಿತಿಯಂತೆ ಅಲ್ಲಿ ಬಂಗಾಳಿ, ಉರ್ದು, ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತವೆ. ಪೂರ್ವ ಪ್ರಾಥಮಿಕ ಹಂತದಿಂದ ಹನ್ನೆರೆಡನೆಯ ತರಗತಿಯವರೆಗೆ ಕಲಿಸುತ್ತಾರೆ. ಒಂದು ತರಗತಿಯಲ್ಲಿ ಸರಾಸರಿ ೪೦ ವಿದ್ಯಾರ್ಥಿನಿಯರಿದ್ದಾರೆ. ತಿಂಗಳಿಗೆ ೨೫೦ ರೂಪಾಯಿ ಶುಲ್ಕ ಪ್ರಾಥಮಿಕ ವಿಭಾಗಕ್ಕೆ, ರೂ. ೨೯೦ ಪ್ರೌಢಶಾಲಾ ವಿಭಾಗಕ್ಕೆ ವಿಧಿಸುತ್ತಾರೆ. ೫೫ ಬೋಧನಾ ಸಿಬ್ಬಂದಿಯಿದ್ದು ಒಟ್ಟು ೧೪೫೦ ವಿದ್ಯಾರ್ಥಿನಿಯರಿದ್ದಾರೆ.


ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಐದನೆಯ ತರಗತಿಯ ತನಕ ಶಾಲೆ ಬೆಳಿಗ್ಗೆ ಹತ್ತೂವರೆಗೇ ಮುಗಿದು ಹೋಗುತ್ತದೆ! ಬೆಳಿಗ್ಗೆ ಬೆ. ೭.೨೦ರಿಂದ ೧೦.೩೦ ತನಕ ತರಗತಿಗಳು ನಡೆಯುತ್ತವೆ. ಶನಿವಾರ ಎರಡೇ ತಾಸು ಶಾಲೆ, ೮-೧೦ ಗಂಟೆಯವರೆಗೆ. ಆದರೆ ಆರರಿಂದ ಹನ್ನೆರಡನೆಯ ತರಗತಿಯವರಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆ. ೧೦.೪೦ - ಮ. ೪.೨೦, ಶನಿವಾರ ಬೆ.೧೦.೪೦ - ಮ.೧.೩೦ರ ತನಕ ಶಾಲೆ ನಡೆಯುತ್ತದೆ.


ಅಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವಿದೆ. ಕಂಪ್ಯೂಟರ್ ಲ್ಯಾಬ್ ಇದೆ. ಮೊದಲಿನಿಂದ ಬಿಸಿಯೂಟ ವ್ಯವಸ್ಥೆಯಿದೆ. ಅಲ್ಲಿನ ಬೋಧನಾ ವಿಧಾನ (ಟೀಚಿಂಗ್ ಮೆಥಡಾಲಜಿ) ರೊಖಿಯಾ ಕಾಲದ ಕೆಲವಂಶಗಳನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಶಾಲಾ ಅವಧಿಯ ವೈಶಿಷ್ಟ್ಯತೆ, ಬದುಕಿಗೆ ಅಗತ್ಯವಿರುವ ಸಂಗತಿಗಳನ್ನೂ ಶಿಕ್ಷಣದ ಜೊತೆಜೊತೆಗೆ ಕಲಿಸುವ ವಿಧಾನವು ಮೆಚ್ಚುಗೆ ಗಳಿಸಿದೆ.


ಗಟ್ಟಿಯಾಗಬೇಕು ಹೆಣ್ಣು ದನಿ


ದೀಪಗಳನ್ನೇ ಸೇಡಿನ ಜ್ವಾಲೆಯಾಗಿಸುತ್ತಿರುವ ಇವತ್ತಿನ ಧಾರ್ಮಿಕ ಮೂಲಭೂತವಾದವು ವಿಶ್ವದೆಲ್ಲೆಡೆ ಅಸಹಿಷ್ಣುತೆಯ ಹೊಗೆ ಹಬ್ಬಿಸಿ ಉಸಿರು ಕಟ್ಟಿಸುತ್ತಿದೆ. ಸಾವಿತ್ರಿಬಾಯಿ ಫುಲೆ, ರೊಕಿಯಾ ಸಖಾವತ್ ಹುಸೇನರಂತಹ ಅಕ್ಷರಪ್ರೇಮಿ ಮಹಿಳೆಯರು ಶಿಕ್ಷಣದಿಂದ ಜನರು ವಿವೇಕವಂತರಾಗುತ್ತಾರೆ ಎಂದು ಇಟ್ಟುಕೊಂಡ ಭರವಸೆ ಹುಸಿಯಾಗುವಂತೆ ಪ್ರಸಕ್ತ ಕಾಲಮಾನದ ತಲ್ಲಣಗಳು ಕಣ್ಣೆದುರಿಗಿವೆ. ದುರಾಸೆಯ ಬಂಡವಾಳಿಗರು, ಬೇಜವಾಬ್ದಾರಿಯ ಆಳುವವರ್ಗ, ಅಸಹಿಷ್ಣುತೆಯನ್ನು ಹಬ್ಬಿಸುತ್ತಿರುವ ಧಾರ್ಮಿಕ ಮೂಲಭೂತವಾದ, ಹಣದಾಸೆಗೆ ಬಿದ್ದ ಮಾಧ್ಯಮಗಳು ಸಮತೆ, ಕರುಣೆ, ಮೈತ್ರಿಗಳೆಲ್ಲ ಅಪ್ರಸ್ತುತ ಥಿಯರಿಗಳೆನ್ನುವಂತೆ ಬಿಂಬಿಸುತ್ತಿವೆ. ಹೀಗಿರುತ್ತ ಸುತ್ತ ಕತ್ತಲೆಂದು ಗೊಣಗದೆ, ಕತ್ತಲಲ್ಲಿರುವವರ ಕೈಗೊಂದು ವಿವೇಕದ ದೀಪವನ್ನಾದರೂ ಇಡುವ ಕೆಲಸ ಆಗಬೇಕಿದೆ. ತನ್ನ ಕಾಲಕ್ಕೆ ಅಗತ್ಯವಿರುವ ಶಾಲಾ ಪಠ್ಯವನ್ನು ತಾನೇ ಸಿದ್ಧಪಡಿಸಿಕೊಂಡು ಮಕ್ಕಳ ಬಳಿ ತೆರಳಿದ; ಶಿಕ್ಷಣ, ಬರಹ, ಸಂಘಟನೆ, ಮಾದರಿ ಬದುಕಿನ ಮೂಲಕ ಹೊಸ ತಲೆಮಾರನ್ನು ರೂಪಿಸಲು ಯತ್ನಿಸಿದ ರೊಖಿಯಾರಂತಹ ಚೇತನಗಳು ನಮಗೆ ಸ್ಫೂರ್ತಿಯಾಗಬೇಕಿದೆ. ನ್ಯಾಯಯುತ ಸಮಾಜ ನೆಲೆಯಾಗಲು ಹೆಣ್ಣು ದನಿ ಗಟ್ಟಿಯಾಗಬೇಕಿದೆ.



ಡಾ. ಎಚ್. ಎಸ್ ಅನುಪಮಾ


No comments:

Post a Comment